ದಾಸೋಹ ತತ್ವ
ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ. ಕಾಯಕಕ್ಕೆ ಹೇಗೆ ನಿಯಮಗಳಿವೆಯೋ ದಾಸೋಹಕ್ಕೂ ನಿಯಮಗಳಿವೆ. ಮೋಸಮಾಡಿ, ಕಳವುಮಾಡಿ ತಂದ ಧನವನ್ನು ದಾಸೋಹಕ್ಕೆ ಸ್ವೀಕರಿಸುವುದಿಲ್ಲ. ಶ್ರಮಪಟ್ಟು ದುಡಿದು, ಸದಾಚಾರದಿಂದ ಗಳಿಸಿ, ಅಹಂಕಾರ ತೊರೆದು ಸಮರ್ಪಣಾಭಾವದಿಂದ ಅರ್ಪಿಸಿದಾಗ ಮಾತ್ರ ಅಂತಹ ಧನ ದಾಸೋಹಕ್ಕೆ ವಿನಿಯೋಗವಾಗುತ್ತದೆ. ಅಲ್ಲಮಪ್ರಭು ದಾಸೋಹದ ವ್ಯಾಖ್ಯೆಯನ್ನು ಸೊಗಸಾಗಿ ಹೇಳಿದ್ದಾರೆ. “ಸೋಹಂ- ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ (ವ:75)” ಎಂದು ಹೇಳಿದ್ದಾರೆ. ಇದೇ ವಿಷಯದ ಬಗೆಗೆ ಸಿದ್ಧರಾಮಯ್ಯ ತಮ್ಮ ವಚನವೊಂದರಲ್ಲಿ ದಾಸೋಹದ ವ್ಯಾಖ್ಯೆಯನ್ನು ಇನ್ನೂ ಸ್ಪಷ್ಟಪಡಿಸಿದ್ದಾರೆ: ಸೋಹಂ-ಎಂಬುದು ಅಂತರಂಗದ ಮದ ಮತ್ತು `ಶಿವೋಹಂ’ ಎಂಬುದು ಬಹಿರಂಗದ ಮದ. “ಈ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯಾ” ಎಂದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೇಳಿಕೊಂಡಿದ್ದಾರೆ.
ದಾಸೋಹವೆಂದರೆ, ಅನ್ನದಾಸೋಹ ಮಾತ್ರವಲ್ಲ. ಬಸವಣ್ಣನವರು ತಮ್ಮ ವಚನಗಳಲ್ಲಿ ವಿವಿಧ ದಾಸೋಹಗಳ ಪರಿಚಯ ನೀಡಿದ್ದಾರೆ. ಭಕ್ತಶ್ರೇಷ್ಠನಾದವನು ಭಕ್ತಿದಾಸೋಹ ಮಾಡಬಹುದು, ಯುಕ್ತನಾದವನು ಯುಕ್ತಿ ದಾಸೋಹವ ಮಾಡಬಹುದು. ಐಕ್ಯಸ್ಥಲವ ಸಾಧಿಸಿದವನು ಮಮಕಾರ ದಾಸೋಹವ ಮಾಡಬಹುದು. ಎಲ್ಲ ವಿಷಯದಲ್ಲಿಯೂ ದಾಸೋಹವಿದೆಯೆಂದು ವಿವರಿಸಿದ್ದಾರೆ.
ತ್ರಿವಿಧ ದಾಸೋಹ
ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕೆಂಬುದು ಶರಣರ ತ್ರಿವಿಧ ದಾಸೋಹದ ಸಿದ್ಧಾಂತ. ತನು-ಮನ-ಧನಗಳನ್ನು ಕ್ರಮವಾಗಿ ಗುರು-ಲಿಂಗ-ಜಂಗಮಕ್ಕರ್ಪಿಸಬೇಕೆಂಬುದು ತ್ರಿವಿಧ ದಾಸೋಹದ ಮೊದಲ ಹಂತ. ಆದರೆ ಇಲ್ಲಿ ಗುರು-ಲಿಂಗ-ಜಂಗಮರೆಂದರೆ ಯಾರು? ಎಂದು ಪ್ರಶ್ನಿಸಿಕೊಂಡಾಗ ಶರಣರ ವಚನಗಳಲ್ಲಿಯೇ ಉತ್ತರಗಳಿವೆ. ಅರಿವೇ ಗುರು, ಆಚಾರವೇ ಲಿಂಗ ಮತ್ತು ಅನುಭಾವವೇ ಜಂಗಮ. ಮೂರ್ತರೂಪದ ಗುರು ಒಂದು ಕಡೆಯಿದ್ದರೆ ಅಮೂರ್ತರೂಪದ ಅರಿವು ಮತ್ತೊಂದು ಕಡೆಯಿದೆ. ಮೂರ್ತರೂಪದ ಇಷ್ಟಲಿಂಗ ಕಾಣಿಸಿದರೆ, ಅಮೂರ್ತರೂಪದ ಆಚಾರಲಿಂಗ ಕಾಣಿಸುವುದಿಲ್ಲ. ಅದೇ ರೀತಿ ಕಾವಿಧಾರಿ ಜಂಗಮ ಕಾಣಿಸಿಕೊಂಡರೆ, ಒಳಗಿರುವ ಅನುಭಾವದ ಜಂಗಮ ಕಾಣಿಸಿಕೊಳ್ಳುವುದಿಲ್ಲ.
ಶರಣರು ಈ ದಾಸೋಹ ತತ್ವದ ಮೂಲಕ ಬದುಕಿನ ಗೂಡಾರ್ಥವನ್ನು ಬಿಚ್ಚಿಟ್ಟಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ಸಮರ್ಪಿಸುವುದೆಂದರೆ ಅನೇಕ ಅರ್ಥಗಳಿವೆ. ಅರಿವೇ ಗುರುವಾಗುವುದು, ಆಚಾರವೇ ಲಿಂಗವಾಗುವುದು, ಅನುಭಾವವೇ ಜಂಗಮವಾಗುವುದು ನಿಜವಾದ ದಾಸೋಹವಾಗುತ್ತದೆ.
“ಅಂಗದ ಲಿಂಗವೇ ಮನದ ಲಿಂಗ, ಮನದ ಲಿಂಗವೇ ಭಾವದ ಲಿಂಗ, ಭಾವದ ಲಿಂಗವೇ ಜಂಗಮ ದಾಸೋಹ (ವ:707)” ಎಂದು ಹೇಳಿರುವ ಅಲ್ಲಮಪ್ರಭುಗಳ ಈ ವಚನದಲ್ಲಿ ದಾಸೋಹದ ನಿಜವಾದ ಅರ್ಥ ಕಾಣಿಸುತ್ತದೆ. ದಾಸೋಹವೆಂಬುದು ನಿರಂತರ ಸತ್ಯ. ಇಲ್ಲಿ ಕೇವಲ ಕೊಡುವುದು-ಪಡೆಯುವುದು ಮುಖ್ಯವಾಗುವುದಿಲ್ಲ. ತಿಳಿಯುವುದು-ಹೊಳೆಯುವುದು ಮುಖ್ಯವಾಗುತ್ತದೆ. ಅಂಗದಲ್ಲಿ ಅಳವಟ್ಟಿರುವ ಆಚಾರವನ್ನೇ ಲಿಂಗವೆಂದರಿತಾಗ ಒಳಗಡೆ ಬೆಳಗುತ್ತಿರುವ ಅನುಭಾವವೇ ಜಂಗಮವಾಗುತ್ತದೆ. ಇಂತಹ ಅರಿವಿನ ಅಗಾಧತೆಯೇ ನಿಜವಾದ ತ್ರಿವಿಧ ದಾಸೋಹ.
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು.
-ಅಲ್ಲಮಪ್ರಭು (ಸ.ವ.ಸಂ.2,ವ:1230)
ಈ ವಚನವು ದಾಸೋಹದ ಪರಿಕಲ್ಪನೆಯನ್ನು ಹೊಸರೀತಿಯಲ್ಲಿ ಕಟ್ಟಿಕೊಡುತ್ತದೆ. ವೈರಿಗಳನ್ನು ಗೆಲ್ಲಬಹುದು, ಸಾಮ್ರಾಜ್ಯವನ್ನು ಗೆಲ್ಲಬಹುದು. ಆದರೆ ತನು-ಮನ-ಧನಗಳನ್ನು ಗೆಲ್ಲುವುದು ಸುಲಭವಲ್ಲ. ಹೀಗೆ ಗೆದ್ದವರು ಬಸವಣ್ಣನವರು ಮಾತ್ರ, ಅವರಿಗೆ ನಮೋ ನಮೋ ಎಂದು ನಮಿಸಿದ್ದಾರೆ ಅಲ್ಲಮಪ್ರಭು. ದಾಸೋಹ ಮಾಡಲು ಧನವೇ ಬೇಕೆಂದೇನೂ ಇಲ್ಲ. ಸಮರ್ಪಣಾ ಭಾವದಿಂದ ತನುವನ್ನು ದಾಸೋಹಕ್ಕೆ ಸವೆಸುವುದು ಕೂಡಾ ನಿಜವಾದ ದಾಸೋಹವಾಗುತ್ತದೆ. ಅದೇರೀತಿ ಮನವನ್ನು ಲಿಂಗಧ್ಯಾನದಲ್ಲಿ, ಧನವನ್ನು ಜಂಗಮದಲ್ಲಿ ಸವೆಸುವುದು ದಾಸೋಹವಾಗುತ್ತದೆ.
ಚೆನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ತ್ರಿವಿಧ ದಾಸೋಹಕ್ಕೆ ಸಂಬಂಧಿಸಿದಂತೆ, ತನು-ಮನ-ಧನದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆದರೆ ತನುವನ್ನು ಗುರುವಿಗರ್ಪಿಸಬೇಕೆಂದು ಹೇಳುವುದಿಲ್ಲ. ಬದಲಾಗಿ ಸದಾಚಾರಕ್ಕರ್ಪಿಸಬೇಕೆಂದು ಹೇಳಿದ್ದಾರೆ. ಧನವನ್ನು ಜಂಗಮಕ್ಕರ್ಪಿಸಬೇಕೆಂದು ಹೇಳಿಲ್ಲ. ಬದಲಾಗಿ ಶರಣರ ದಾಸೋಹಕ್ಕೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ. ಹೀಗೆ ಮಾಡಿದರೆ ಭಕ್ತನ ತನು-ನಿರ್ಮಲವಾಗುತ್ತದೆ. ಮನ-ನಿಶ್ಚಿಂತವಾಗುತ್ತದೆ. ಮತ್ತು ಧನ-ನಿರ್ವಾಣವಾಗುತ್ತದೆಂದು ವಿವರಿಸಿದ್ದಾರೆ. ದಾಸೋಹಕ್ಕೆ ನೀಡುವಾಗ ಪೂರ್ಣಮನಸ್ಸಿನಿಂದ ನೀಡಬೇಕು. ದಾಸೋಹ ಮಾಡುವಾಗ ಸಮರ್ಪಣಾಭಾವದಿಂದ ಮಾಡಬೇಕೆಂದು ಶರಣರು ತಿಳಿಸಿದ್ದಾರೆ.
ದಾಸೋಹವೆಂದರೆ, ಅದು ತ್ರಿವಿಧ ದಾಸೋಹವೆಂದು ಹೇಳಿರುವ ಬಸವಣ್ಣನವರು ತನುವ ಕೊಟ್ಟು ಗುರುವನೊಲಿಸಬೇಕು, ಮನವ ಕೊಟ್ಟು ಲಿಂಗವನೊಲಿಸಬೇಕು, ಧನವ ಕೊಟ್ಟು ಜಂಗಮವನೊಲಿಸಬೇಕೆಂದು ತಿಳಿಸಿದ್ದಾರೆ. ತ್ರಿವಿಧ ದಾಸೋಹಕ್ಕೆ ದೇವರು ಒಲಿಯುತ್ತಾನೆಯೇ ಹೊರತು ಆಡುವುದರಿಂದ, ಹಾಡುವುದರಿಂದ, ಓದುವುದರಿಂದ ಒಲಿಯಲಾರ. ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ? ಎಂದು ಕೇಳುತ್ತ ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ ಎಂದು ಸ್ಪಷ್ಟಪಡಿಸಿದ್ದಾರೆ. ದಾಸೋಹದಿಂದ ಗುರು-ಲಿಂಗ-ಜಂಗಮರನ್ನು ಕಂಡೆನೆಂದು ಹೇಳಿದ್ದಾರೆ.
ಲಿಂಗಪೂಜೆ ಮತ್ತು ಜಂಗಮದಾಸೋಹಕ್ಕೆ ಪ್ರಾಮುಖ್ಯತೆ ನೀಡಿರುವ ಸಿದ್ಧರಾಮ, ಬಸವಣ್ಣನವರ ದಾಸೋಹ ತತ್ವವನ್ನು ಕಂಡು ಕೊಂಡಾಡಿದ್ದಾರೆ. ಬಸವಣ್ಣನವರು ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದರು, ಮನವಿಡಿದು ದಾಸೋಹವ ಮಾಡಿ ಲಿಂಗ ಪ್ರಸಾದಿಯಾದರು, ಧನವಿಡಿದು ದಾಸೋಹವ ಮಾಡಿ ಜಂಗಮಪ್ರಸಾದಿಯಾದರು. ಈ ತ್ರಿವಿಧ ದಾಸೋಹದಿಂದ ಬಸವಣ್ಣನವರು ಸ್ವಯಂ ಪ್ರಸಾದಿಯಾದರೆಂದು ಹೇಳಿದ್ದಾರೆ. ಇದೇ ಮಾತನ್ನು ಸದ್ಗುರು ಚೆನ್ನಮಲ್ಲಿಕಾರ್ಜುನನೆಂಬ ವಚನಕಾರರು ಹೇಳಿದ್ದಾರೆ. ಚೆನ್ನಮಲ್ಲಿಕಾರ್ಜುನಯ್ಯಾ ಎಂಬ ಅಂಕಿತದಲ್ಲಿ ಇವರ ಎರಡು ವಚನಗಳಿವೆ. ಸಿದ್ಧರಾಮ ಶಿವಯೋಗಿಗಳು ಹೇಳಿದ ವಿಚಾರವನ್ನೇ ಇವರೂ ಹೇಳಿದ್ದಾರೆ. ಹೀಗೆ ತ್ರಿವಿಧ ದಾಸೋಹ ಕುರಿತು ಅನೇಕ ವಚನಕಾರರು ಪ್ರಸ್ತಾಪಿಸಿದ್ದಾರೆ.
ತ್ರಿವಿಧ ದಾಸೋಹದ ಜತೆಗೆ ಶರಣರು ತ್ರಿಕಾಲ ದಾಸೋಹವನ್ನು ಮಾಡಿದರು. ಬೆಳಿಗ್ಗೆ-ಮಧ್ಯಾಹ್ನ-ರಾತ್ರಿ ಇವು ಒಂದು ದಿನದ ಮೂರು ಹಂತಗಳು. ಈ ಮೂರು ಹಂತಗಳಲ್ಲಿಯೂ ದಾಸೋಹ ನಿರಂತರವಾಗಿ ನಡೆಯುತಿತ್ತು. ಇದು ಶರಣರು ದಾಸೋಹಕ್ಕೆ ನೀಡಿದ ಪ್ರಾಮುಖ್ಯತೆ. ದಾನವನ್ನು ಮಾಡುವವರು ಯಾವಾಗಲೋ ಒಮ್ಮೆ ಮಾಡುತ್ತಾರೆ. ದಾಸೋಹ ಹಾಗಲ್ಲ, ಅದು ನಿತ್ಯ ನಿರಂತರ, ದಿನದ ಮೂರು ಹೊತ್ತು ದಾಸೋಹ ನಡೆಯಬೇಕೆಂಬುದು ಶರಣರ ಸಂಕಲ್ಪವಾಗಿತ್ತು. ಅವರು ಹಾಗೆ ದಾಸೋಹ ಮಾಡಿದರು, ನುಡಿದಂತೆ ನಡೆದರು.
ಸದ್ಭಾವ-ಸದಾಚಾರದ ದಾಸೋಹ
ದಾಸೋಹದಲ್ಲಿ ಸಮರ್ಪಣಾ ಭಾವವಿರುವಂತೆ ಸದ್ಭಾವ-ಸದಾಚಾರವಿರಬೇಕೆಂದು ಶರಣರು ಹೇಳಿದ್ದಾರೆ. ಯಾರದೋ ಸಂಪತ್ತನ್ನು ತಂದು ದಾಸೋಹ ಮಾಡುವಂತಿಲ್ಲ. ದಾಸೋಹಕ್ಕೆ ಧನವನರ್ಪಿಸಿದರೆ, ಅದು ಸತ್ಯಶುದ್ಧ ಕಾಯಕದಿಂದ ಬಂದುದಾಗಿರಬೇಕು. ತನು-ಮನ ಬಳಲಿಸಿ, ಶ್ರಮಪಟ್ಟು ಗಳಿಸಿದ ಧನಮಾತ್ರ ದಾಸೋಹಕ್ಕೆ ಸಲ್ಲುತ್ತದೆ, ಪರಧನ ಚೋರಕ, ಪಾಪಿಗಳ ಹಣ ಸಲ್ಲದೆನ್ನುತ್ತಾರೆ. ತನುಮನ ಬಳಲದೆ ಉದ್ದಂಡ ವೃತ್ತಿಯಲ್ಲಿ ಧನವಗಳಿಸಿ ತಂದು
ಗುರುಲಿಂಗಜಂಗಮಕ್ಕೆವೆಚ್ಚಿಸಿ, ದಾಸೋಹವ ಮಾಡಿ
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ…
-ಚೆನ್ನಬಸವಣ್ಣ (ಸ.ವ.ಸಂ.3, ವ:1296)
ದಾಸೋಹವೆಂಬುದು ಒಂದು ಸಮಾಜಸೇವೆಯೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದ್ದಾರೆ. ಇಂತಹ ದಾಸೋಹದಲ್ಲಿ ಸಿಗುವ ಆನಂದ ಕೈಲಾಸದಲ್ಲಿ ಸಿಗದೆಂದು ಈ ಶರಣೆ ತಿಳಿಸಿದ್ದಾರೆ. ಬಸವಣ್ಣನವರು ಭಕ್ತರಿಗೆ ಸದ್ಭಾವ-ಸದಾಚಾರವಿರಬೇಕೆಂದು ಹೇಳಿದರು. ಕಾಯಕ-ದಾಸೋಹದ ಮೂಲಕ ಹೊಸಹಾದಿ ತೋರಿಸಿದರೆಂದು ಅಕ್ಕನಾಗಮ್ಮ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ದಾಸೋಹದ ದಾರಿ ತೋರಿಸಿದ ಬಸವಣ್ಣನವರನ್ನು ಅನೇಕ ಶರಣರು ಪ್ರಶಂಸಿದ್ದಾರೆ. ಬೇಡಿ ತಂದು ದಾಸೋಹ ಮಾಡುವುದು ಸೂಕ್ತವಲ್ಲವೆಂದು ಆಯ್ದಕ್ಕಿ ಮಾರಯ್ಯ ತಿಳಿಸಿದ್ದಾರೆ. ಬೇಡಿ ತರುವುದು ಭಿಕ್ಷೆಯಾಗುತ್ತದೆ ಇಂತಹ ಭಿಕ್ಷೆಯ ಹಣ ದಾಸೋಹಕ್ಕೆ ಸಲ್ಲದು. ಸದ್ಭಾವ-ಸದಾಚಾರದಿಂದ ದುಡಿದ ಧನ ಮಾತ್ರ ದಾಸೋಹಕ್ಕೆ ಸಲ್ಲುತ್ತದೆಂದವರು ತಿಳಿಸಿದ್ದಾರೆ.
ದಾಸೋಹ ಮಾಡುವುದೇ ಶಿವಾಚಾರವೆಂದು ಮಡಿವಾಳ ಮಾಚಿದೇವರು ತಮ್ಮ ವಚನದಲ್ಲಿ (ವ:452) ವಿವರಿಸಿದ್ದಾರೆ. ಸದಾಚಾರ, ಶಿವಾಚಾರ ಇವು ಪಂಚಾಚಾರಗಳಲ್ಲಿ ಮುಖ್ಯವಾದವು. ದಾಸೋಹಕ್ಕೂ-ಪಂಚಾಚಾರಗಳಿಗೂ ಸಂಬಂಧವಿದೆ. ದುರಾಚಾರದಿಂದ, ದುಷ್ಟತನದಿಂದ, ದುರ್ಬುದ್ಧಿಯಿಂದ ಮಾಡುವ ದಾಸೋಹ, ದಾಸೋಹವೇ ಅಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ.
ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು
ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ
ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು,
ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲಿ ಗಾರುಡಿಸಿ,
ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ
ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ…..
– ಸೊಡ್ಡಳ ಬಾಚರಸ (ಸ.ವ.ಸಂ.9, ವ:807)
ಈ ವಚನದಲ್ಲಿ ಸೊಡ್ಡಳ ಬಾಚರಸರು ಕಾಯಕ ಮತ್ತು ದಾಸೋಹದಂತಹ ಮೌಲ್ಯಗಳ ಬಗೆಗೆ ಗಂಭೀರ ಚಿಂತನೆ ಮಾಡಿದ್ದಾರೆ. ಅವಗುಣಗಳಿಂದ ಮಾಡುವ ದಾಸೋಹವು ದಾಸೋಹವಾಗುವುದಿಲ್ಲ. ಭಕ್ತರಲ್ಲಿ ಸದ್ಭಾವ-ಸದಾಚಾರವಿರಬೇಕು. ಲೋಭ-ಮೋಹ-ಮದ-ಮತ್ಸರಗಳನ್ನಳಿದ ಭಕ್ತನಿಗೆ ಮಾತ್ರ ದಾಸೋಹ ಮಾಡಲು ಸಾಧ್ಯ. ಕರಣತ್ರಯಗಳ ಮಲತ್ರಯಗಳಿಚ್ಛೆಗೆ ಒಳಗಾಗದೆ, ಸದಾಚಾರದಿಂದ ಸಮರ್ಪಣಾ ಭಾವದಿಂದ ದಾಸೋಹ ಮಾಡಬೇಕು.
ಉರಿಲಿಂಗದೇವರು ದಾಸೋಹದ ಬಗೆಗೆ ಪ್ರಸ್ತಾಪಿಸುತ್ತ ತಮ್ಮ ವಚನವೊಂದರಲ್ಲಿ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಅರಿದೊಡೆ ಶರಣ, ಮರೆದೊಡೆ ಮಾನವ ಎಂದು ಹೇಳಿರುವ ಅವರು, ಹೊತ್ತಿಗೊಂದು ಸಲ ಗೋಸುಂಬೆಯಂತೆ ಬಣ್ಣ ಬದಲಿಸಬಾರದೆಂದು ಹೇಳಿದ್ದಾರೆ. ಶರಣರ ಕಂಡು ಉದಾಸೀನವ ಮಾಡಬಾರದೆಂದು ತಿಳಿಸಿರುವ ಅವರು “ದಾಸೋಹವರಿಯದ ದೂಷಕನು ನಾನಯ್ಯ” ಎಂದು ಆತ್ಮಶೋಧನೆ ಮಾಡಿಕೊಂಡಿದ್ದಾರೆ.
ಸ್ವಾನ ಮಡಕೆಯನಿಳುಹಿ ಬೋನವನುಂಡು
ಮಡಕೆಯನೇರಿಸಲರಿಯದಂತೆ
ನಾನು ಷಟ್ಸ್ಥಲವನೋದಿ ಏನು ಮಾಡುವೆನಯ್ಯಾ
ಅವಗುಣಂಗಳೆನ್ನ ಬೆನ್ನ ಬಿಡದನ್ನಕ್ಕರ?
ಕಾರ್ಯವುಳ್ಳ ಕರ್ತ ಜಂಗಮಲಿಂಗದಲ್ಲಿ
ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು,
ಕೂಡಲಸಂಗಮದೇವಾ.
-ಬಸವಣ್ಣ (ಸ.ವ.ಸಂ.1, ವ: 1375)
ಅಲ್ಲಮಪ್ರಭು “ತ್ರಿವಿಧ ದಾಸೋಹಿ ಬಸವಣ್ಣನೊಬ್ಬನೇ” ಎಂದು ಕೊಂಡಾಡಿದ್ದರೆ, ಬಸವಣ್ಣನವರು ಈ ವಚನದಲ್ಲಿ ಆತ್ಮಶೋಧನೆ ಮಾಡಿಕೊಂಡಿದ್ದಾರೆ. ಇದು ಅವರ ಆತ್ಮಶೋಧನೆ ಮಾತ್ರ ಆಗಿರದೆ ಎಲ್ಲರ ಆತ್ಮಶೋಧನೆಯೂ ಆಗಬೇಕಾಗಿದೆ. ಮನಸ್ಸಿನಲ್ಲಿ ಅವಗುಣಂಗಳನ್ನು ಇಟ್ಟುಕೊಂಡು ಷಟ್ಸ್ಥಲಗಳನ್ನೋದಿದರೇನು ಪ್ರಯೋಜನವೆಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. “ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು” ಎಂದು ಬಸವಣ್ಣನವರೇ ಹೇಳಿದ್ದಾರೆ. ಅಂದರೆ ದಾಸೋಹಕಾರ್ಯ, ದಾನದಷ್ಟು ಸುಲಭವಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಉಳ್ಳವರು, ಇಲ್ಲದವರಿಗೆ ದಾನ ಮಾಡುವುದು ಸುಲಭ. ಆದರೆ ದಾಸೋಹ ಮಾಡುವದು ಅಷ್ಟು ಸುಲಭವಾಗಿಲ್ಲ. ದಾಸೋಹ ಮಾಡುವವರು ಸದ್ಭಕ್ತರಾಗಿರಬೇಕು. ಸದಾಚಾರಿಗಳಾಗಿರಬೇಕು, ಅವಗುಣಂಗಳ ತೊರೆದವರಾಗಿರಬೇಕು. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಬಿಟ್ಟ ಸದಾಚಾರಿಗಳಾಗಿರಬೇಕು. ಆಗ ಮಾತ್ರ ಅದು ದಾಸೋಹವಾಗುತ್ತದೆ.
ಅಹಂಕಾರ ನಿರಸನ
ದಾಸೋಹಕ್ಕೂ ಅಹಂಕಾರ ನಿರಸನಕ್ಕೂ ಸಂಬಂಧವಿದೆ. ದಾನಕ್ಕೂ-ದಾಸೋಹಕ್ಕೂ ಇರುವ ವ್ಯತ್ಯಾಸ ಇದೇ. ದಾನಿಗಳಲ್ಲಿ ತಾನು ಕೊಟ್ಟದ್ದು ಎಂಬ ಅಹಂಭಾವವಿರುತ್ತದೆ. ಆದರೆ ದಾಸೋಹದಲ್ಲಿ ಹಾಗಲ್ಲ; ಅಹಂಭಾವ ಕಳೆದುಕೊಂಡಾಗಲೇ ಅವನು ದಾಸೋಹ ಮಾಡಲು ಅರ್ಹನಾಗುತ್ತಾನೆ. ನಾನು ಗಳಿಸಿದ್ದು, ನನ್ನ ಸಂಪತ್ತು ಎಂಬ ಅಹಂಕಾರ ನಿರಸನಗೊಳ್ಳಬೇಕಾದರೆ ದಾಸೋಹ ಕಡ್ಡಾಯವೆನ್ನುತ್ತಾರೆ ಶರಣರು.
ಮನುಷ್ಯನಿಗೆ ಬರುವ ಅಷ್ಟಮದಗಳನ್ನು ಕುರಿತು ಶರಣರು ವಿವರವಾಗಿ ಹೇಳಿದ್ದಾರೆ. ಯೌವನದ ಮದದಷ್ಟೇ ಹಣದ ಮದ ಅಪಾಯಕಾರಿ. ಅಹಂಕಾರ ಅಥವಾ ಮದ ಅಳಿಯಬೇಕಾದರೆ ದಾಸೋಹ ಮಾಡಬೇಕೆಂದು ಶರಣರು ಹೇಳಿದ್ದಾರೆ. ಹಿಂದೆ ಅರಸರು ತಾವು ಯಾರ್ಯಾರಿಗೆ ಎಷ್ಟೆಷ್ಟು ದಾನ ಮಾಡಿದ್ದರೆಂಬುದನ್ನು ಶಾಸನಗಳಲ್ಲಿ ಬರೆಸುತ್ತಿದ್ದರು. ದತ್ತಿ-ದಾನ ಶಾಸನಗಳ ಮೇಲೆ ಸೂರ್ಯ-ಚಂದ್ರರ ಚಿತ್ರಗಳಿವೆ. ಅಂದರೆ ತಾವು ಮಾಡಿದ ದಾನವು, ಸೂರ್ಯ-ಚಂದ್ರರಿರುವವರೆಗೂ ಇರುತ್ತದೆಂಬುದು ಅವರ ನಂಬಿಕೆಯಾಗಿತ್ತು. ಹಿಂದೆ ಅರಸರು ಮಾಡಿದ್ದನ್ನು ಇಂದಿನ ಆಳುವ ಸರಕಾರಗಳು ಮಾಡುತ್ತಲಿವೆ. ತಮ್ಮ ಅಧಿಕಾರವಧಿಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸಹಾಯಧನ ನೀಡಿದೆವು, ಯಾವ್ಯಾವ ಯೋಜನೆಗಳಿಗೆ ಎಷ್ಟೆಷ್ಟು ಹಣ ಖರ್ಚು ಮಾಡಿದೆವೆಂಬುದನ್ನು ವಿವರವಾಗಿ ಬೋರ್ಡಗಳಲ್ಲಿ ಬರೆಯಿಸಿ ಸಾರ್ವಜನಿಕರು ಓಡಾಡುವ ರಸ್ತೆಗಳ ಬದಿ ಹಾಕಿಸಿರುತ್ತಾರೆ. ಅರಸರು ನೀಡಿದ ದಾನದಲ್ಲಿ, ಕೆತ್ತಿನಿಲ್ಲಿಸಿದ ಶಾಸನಗಳಲ್ಲಿ ಅಹಂ ಕಾಣಿಸಿಕೊಂಡರೆ, ಆಳುವ ಸರಕಾರದ ಬೋರ್ಡಗಳಲ್ಲಿ ಪ್ರಚಾರ ಕಾಣಿಸುತ್ತದೆ.
ದಾನದ ಪರಂಪರೆ ಬಹುದೊಡ್ಡದು, ಹಿಂದಿನಿಂದಲೂ ಈ ದೇಶದಲ್ಲಿ ದಾನಪದ್ಧತಿ ಬೆಳೆದುಕೊಂಡು ಬಂದಿದೆ. ದಾನಧರ್ಮ ಮಾಡಬೇಕೆಂದು ಅನೇಕ ಧರ್ಮಗಳಲ್ಲಿ ಹೇಳಲಾಗಿದೆ. ಆದರೆ ದಾನವು ಅಹಂಕಾರಕ್ಕೆಡೆಮಾಡಿಕೊಡುವುದನ್ನು; ದಾನ ಪಡೆಯುವವನಲ್ಲಿ ಕೀಳರಿಮೆ ಉಂಟಾಗುವುದನ್ನು ಗಮನಿಸಿದ ಶರಣರು ದಾನಕ್ಕೆ ಬದಲಾಗಿ ದಾಸೋಹ ಸಂಸ್ಕೃತಿಯನ್ನು ಬೆಳೆಸಿದರು. ಇದು ಅಹಂಕಾರ ನಿರಸನ ಸಿದ್ಧಾಂತವಾಗಿದೆ.
ದೇಹ ನಿರ್ದೇಹವೆಂದೆನುತ್ತಿಪ್ಪರಯ್ಯಾ
ದೇಹ ನಿರ್ದೇಹ(ದ) ಮರ್ಮವನರಿಯರು
ಅಹಮ್ಮೆಂಬುದೆ ದೇಹ ನೋಡಾ,
ದಾಸೋಹವೆಂಬುದೆ ನಿರ್ದೇಹನೋಡಾ
ಅಹಂಭಾವವಳಿದುಳಿದು ದಾಸೋಹಿಯಾದ
ಕೂಡಲಚೆನ್ನಸಂಗಾ ನಿಮ್ಮ ಶರಣ…
– ಚೆನ್ನಬಸವಣ್ಣ (ಸ.ವ.ಸಂ.6,ವ:592)
ಇಲ್ಲಿ ಚೆನ್ನಬಸವಣ್ಣನವರು, ದೇಹ-ನಿರ್ದೇಹದ ಪರಿಕಲ್ಪನೆಯನ್ನು ಹೊಸ ರೀತಿ ಕಟ್ಟಿಕೊಟ್ಟಿದ್ದಾರೆ. ಅಹಂಕಾರ ನಿರಸನ ಮಾಡಿಕೊಳ್ಳುವುದೇ ನಿರ್ದೇಹ, ಇಂತಹ ನಿರ್ದೇಹ ದಾಸೋಹದಿಂದ ಸಾಧ್ಯವಾಗುತ್ತದೆ. ಅಹಂಭಾವ ಅಳಿದಾಗಲೇ ದಾಸೋಹಿಯಾಗಲು ಸಾಧ್ಯ.
ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ- “ದೇಹಭಾವದಹಂಕಾರ ದಾಸೋಹ ಭಾವದೊಳಗಲ್ಲದೆ ಅಳಿಯದು” ಎಂದಿದ್ದಾರೆ. ಮರುಳಶಂಕರದೇವರು ಮಹಾದಾಸೋಹಿಯಾಗಿದ್ದರೆಂಬುದನ್ನು ಇದೇ ವಚನದಲ್ಲಿ ಹೇಳಿದ್ದಾರೆ. (ವ:881). ಅಂತಹ ದಾಸೋಹಿಯನ್ನು ನಿಮ್ಮಿಂದ ಕಾಣುವಂತಾಯಿತೆಂದು ಬಸವಣ್ಣನವರಿಗೆ ಹೇಳುತ್ತಾ, ದಾಸೋಹದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಅಂಗವನ್ನು ಆಚಾರಕ್ಕರ್ಪಿಸಿದಾಗ ಆಚಾರಲಿಂಗ ಪ್ರಸಾದಿಯಾಗುತ್ತಾನೆ. ಪ್ರಾಣವನ್ನು ಲಿಂಗಕ್ಕರ್ಪಿಸಿ, ಆ ಲಿಂಗವನು ಪ್ರಾಣಕ್ಕರ್ಪಿಸಿದಾಗ ಪ್ರಾಣಲಿಂಗ ಪ್ರಸಾದಿಯಾಗುತ್ತಾನೆ. ಹೀಗೆ ಎಲ್ಲವನ್ನೂ ಸಮರ್ಪಣೆ ಮಾಡಿ ಕೊಳ್ಳುವುದೇ ದಾಸೋಹದ ಪರಮಗುರಿ. ದಾನದ ವಿಷಯದಲ್ಲಿ ಎಲ್ಲವನ್ನು ಸಮರ್ಪಿಸಿಕೊಳ್ಳುವುದಿಲ್ಲ. ಹೆಚ್ಚಾದುದನ್ನು ನೀಡಲಾಗುತ್ತದೆ. ಅನೇಕ ಸಲ ಪುಣ್ಯ ಬರುತ್ತದೆಂಬ ಕಾರಣಕ್ಕೆ ದಾನ ಮಾಡಲಾಗುತ್ತದೆ. ಆದರೆ ದಾಸೋಹದಲ್ಲಿ ಇಂತಹ ನಿರೀಕ್ಷೆಗಳಿಲ್ಲ. ಏನೋ ಸಿಗುತ್ತದೆಂಬ ಕಾರಣಕ್ಕೆ ಯಾವುದೋ ಆಗುತ್ತದೆಂಬ ಕಾರಣಕ್ಕೆ ದಾಸೋಹ ಮಾಡುವುದಿಲ್ಲ. ಹೀಗಾಗಿ ದಾನ ಮತ್ತು ದಾಸೋಹದ ಪರಿಕಲ್ಪನೆಗಳು ಬೇರೆ ಬೇರೆ. ಅಹಂಕಾರವನ್ನು ಕಳೆದುಕೊಳ್ಳುವಲ್ಲಿ ದಾಸೋಹದ ಪಾತ್ರ ದೊಡ್ಡದು.
ಹೊನ್ನು ಹೆಣ್ಣು ಮಣ್ಣು ನಿಮ್ಮ ಸೊಮ್ಮು
ತನುವೆನಗಿಲ್ಲ ತನುವಿನಲ್ಲಿ ನೀವೆಡೆಗೊಂಡಿಪ್ಪಿರಾಗಿ
ಮನವೆನಗಿಲ್ಲ ನೆನಹಿನ ಕೊನೆಯಲ್ಲಿ ಬೆಳಗುತಿರ್ಪಿರಾಗಿ
ನೀವೇ ಪ್ರಾಣವಾಗಿಪ್ಪಿರಾಗಿ
ಆನೆಂಬ ಭಾವಕ್ಕೆ ತೆರಹಿಲ್ಲದೆ ನಿರಹಂಕಾರದಿಂ
ಮಾಡುವ ನೀಡುವ ಸಂದಳಿ
ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ
ಸ್ವಾನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
– ಆದಯ್ಯ (ಸ.ವ.ಸಂ:6, ವ: 1162)
ದೇಹ-ನಿರ್ದೇಹವಾಗುವುದನ್ನು ಹಿಂದಿನ ವಚನದಲ್ಲಿ ಚೆನ್ನಬಸವಣ್ಣನವರು ಹೇಳಿದ್ದರೆ, ಇಲ್ಲಿಯ ಚಿಂತನೆ ಭಿನ್ನವಾಗಿದೆ. ದೇಹ ತನ್ನದೆಂದು ತಿಳಿದುಕೊಂಡಾಗ ನಿರ್ದೇಹವಾಗಬೇಕಾದ ಅನಿವಾರ್ಯತೆಯಿದೆ. ಯಾವಾಗ ತನುವೇ ತನ್ನದಲ್ಲವೆಂದು ತಿಳಿದಾಗ ಅಲ್ಲಿ ನಿರ್ದೇಹವಾಗುವ ಸಂದರ್ಭವೇ ಬರುವುದಿಲ್ಲ. ತನು ನನ್ನದಲ್ಲ, ಪ್ರಾಣ ನನ್ನದಲ್ಲ, ಮನವೆಂಬುದೆನಗಿಲ್ಲ ಎಂಬಂತಹ ಭಕ್ತಿಭಾವ ಬೆಳೆದು, ಭಕ್ತನು ಶರಣನ ಹಂತ ತಲುಪಿದ ಮೇಲೆ ಅಲ್ಲಿ ದೇಹವು ಸಹಜವಾಗಿಯೇ ನಿರ್ದೇಹವಾಗಿಬಿಡುತ್ತದೆ. ಆಗ ಸಹಜವಾಗಿಯೇ ದಾಸೋಹದಲ್ಲಿ ನಿರಹಂಕೃತಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಆದಯ್ಯನವರು “ಸ್ವಾನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ” ಎಂದು ಹೇಳಿದ್ದಾರೆ. ಪ್ರಾರಂಭದ ಹಂತದಲ್ಲಿದ್ದ ತಾನು, ತನ್ನದೆಂಬ ಭಾವವಳಿದು ಹೋದಾಗ ಭಕ್ತ ನಿರ್ದೇಹಿಯಾಗುತ್ತಾನೆ. ನಿಜವಾದ ದಾಸೋಹಿಯಾಗುತ್ತಾನೆ.
ದಾಸೋಹದ ಮಹತ್ವ
ಶರಣರ ಕಾಯಕತತ್ವಕ್ಕೆ ಪ್ರಾಮುಖ್ಯತೆ ಬಂದಂತೆ, ಅವರ ದಾಸೋಹ ತತ್ವಕ್ಕೂ ಮಹತ್ವಬಂತು. ಶರಣರ ದಾಸೋಹದ ಸುದ್ದಿ ಕಲ್ಯಾಣದ ಸುತ್ತಮುತ್ತ ಪಸರಿಸಿತು. ಅವರು ನಡೆಸುತ್ತಿದ್ದ ಅನ್ನ ದಾಸೋಹದಿಂದ ಅನೇಕ ಅಸಹಾಯಕರು, ಅಂಗವಿಕಲರು ಸ್ವಾಭಿಮಾನದಿಂದ ಬದುಕುವಂತಾಯಿತು. ಅನ್ನದಾಸೋಹದಿಂದ ಸಹಪಂಕ್ತಿ-ಸಹಭೋಜನ ಪ್ರಾರಂಭವಾಗಿ, ಎಲ್ಲರೂ ಒಂದೇಕಡೆ ಸಮಾನವಾಗಿ ಕುಳಿತು ಪ್ರಸಾದ ಸೇವಿಸುವಂತಾಯಿತು. ಕಾಯಕ ತತ್ವವು ಜಾತಿಯ ಅಹಂಭಾವ ಮತ್ತು ವೃತ್ತಿಯ ಕೀಳರಿಮೆಗಳನ್ನು ಏಕಕಾಲಕ್ಕೆ ನಿವಾರಣೆ ಮಾಡಿದರೆ, ದಾಸೋಹ ತತ್ವವು ಸಹಪಂಕ್ತಿ-ಸಹಭೋಜನದಿಂದ ಸಮಾನತೆಯನ್ನು ತಂದುಕೊಟ್ಟಿತು. ದಾಸೋಹದ ವಿವಿಧ ಆಯಾಮಗಳನ್ನು ಕುರಿತು ಅನೇಕ ವಚನಕಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ವೈಷ್ಣವಬ್ರಾಹ್ಮಣನಾಗಿದ್ದ ಗುಪ್ತಮಂಚಣ್ಣ ಹರಿಭಕ್ತರಾಗಿದ್ದರು. ಮಂಚಣ್ಣನವರ ತಂದೆ ದಾಮೋದರ ಹಾಗೂ ತಾಯಿ ಮಾಯವಾದಿ. ಈ ದಂಪತಿಗೆ ಬಹಳ ವರ್ಷಗಳಾದರೂ ಮಕ್ಕಳಾಗಲಿಲ್ಲ. ಬಸವಣ್ಣನವರ ಪ್ರಭಾವಕ್ಕೊಳಗಾದ ಈ ದಂಪತಿಗಳು ಗುಪ್ತವಾಗಿ ಶಿವನನ್ನು ಆರಾಧಿಸುತ್ತ, ಶಿವಶರಣರ ತತ್ವಾದರ್ಶಗಳಿಗೆ ಮಾರುಹೋದರು. ಶಿವನ ಆರಾಧನೆಯನ್ನು ಇವರು ಗುಪ್ತರೀತಿಯಿಂದ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಂಚಣ್ಣನವರ ಜನನವಾದುದರಿಂದ ಗುಪ್ತಮಂಚಣ್ಣನೆಂದು ಹೆಸರಿಟ್ಟರು. ಈ ಮಂಚಣ್ಣ ಮುಂದೆ ದೊಡ್ಡವರಾದ ಮೇಲೆ ವೈಷ್ಣವಮತ ತೊರೆದು ಶಿವಮತಕ್ಕೆ ಬರುತ್ತಾರೆ. ಶಿವಶರಣನಾಗಿ ಬಾಳುತ್ತಾರೆ. ಮಂಚಣ್ಣ ದಾಸೋಹತತ್ವವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ತಾನು ಹರಿಭಕ್ತನಾಗಿ ಬಂದುದನ್ನು ವಚನದಲ್ಲಿ ಹೇಳಿಕೊಂಡಿರುವ ಗುಪ್ತಮಂಚಣ್ಣ ದಾಸೋಹದ ಮಹತ್ವವನ್ನು ಕುರಿತು ವಿವರಿಸಿದ್ದಾರೆ. ಹಲವು ವೇಷಗಳಿಂದ, ಹಲವು ನಾಮ ಹಾಕಿಕೊಂಡು ಹುಸಿಬದುಕು ಬದುಕುತ್ತಿದ್ದ ತನಗೆ ಶರಣರ ದಾಸೋಹತತ್ವ ಹೊಸ ಬದುಕನ್ನು ಕೊಟ್ಟಿತೆಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ. ದಾಸೋಹವೆಂಬುದನ್ನರಿಯದೆ ತನ್ನ ವೇಷ ಹುಸಿಯಾಗಿತ್ತು, ಅರಿತ ಮೇಲೆ ದಾಸೋಹವೇ ತನಗೆ ಹೊಸ ದಾರಿಯನ್ನು ತೋರಿಸಿತೆಂದು ಹೇಳಿದ್ದಾರೆ:
ತೊಳಸಿಯ ಗಿಡವ ಮೆಲಲಾರದೆ ಕಿವಿಯೊಳಗಿಕ್ಕಿದೆ
ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ
ತಾವರೆಯಮಣಿಯ ತಾವಡಿಸೊದಕ್ಕೆ
ಠಾವಕಾಣದೆ ಡಾವರಿಸುತ್ತಿದೆ,
ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾ
ನಾರಾಯಣಪ್ರಿಯ ರಾಮನಾಥಾ.
-ಗುಪ್ತ ಮಂಚಣ್ಣ (ಸ.ವ.ಸಂ.7, ವ:341)
ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು
ಪೂಜೆ – ಪುಣ್ಯ ಮಹಾದೇವನ ಹಂಗು,
ಎನ್ನ ದಾಸೋಹ ಆರ ಹಂಗೂ ಅಲ್ಲ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ.
– ನುಲಿಯ ಚಂದಯ್ಯಾ (ಸ.ವ.ಸಂ.7, ವ: 1297)
ಕಾಯಕನಿಷ್ಠೆಯ ನುಲಿಯ ಚಂದಯ್ಯ, ಒಂದೊಂದಕ್ಕೆ ಒಂದೊಂದರ ಹಂಗು ಇದೆ. ಆದರೆ ದಾಸೋಹ ಯಾರ ಹಂಗೂ ಅಲ್ಲವೆಂದು ತಿಳಿಸಿದ್ದಾರೆ. ತನ್ನ ಚಂದೇಶ್ವರಲಿಂಗವಾದರೂ ಕಣ್ಣೆಯ ಕಾಯಕ ಮಾಡಿಯೇ ಬದುಕಬೇಕು. ಆದುದರಿಂದ ಚಂದಯ್ಯನವರು, ಚಂದೇಶ್ವರಲಿಂಗಕ್ಕೆ ತಂದೆಯೆಂದು ಗೌರವಕೊಡುತ್ತಲೇ ಕಾಯಕದ ಕಡ್ಡಾಯದ ವಿಷಯವನ್ನು ತಿಳಿಸುತ್ತಾರೆ. ಕಾಯಕದ ಬಗೆಗೆ ಇಷ್ಟೊಂದು ನಿಷ್ಠೆ ತೋರಿದ ಈ ಶರಣ ದಾಸೋಹದ ಬಗೆಗೂ ಹೊಸ ವಿಚಾರವನ್ನೇ ತಿಳಿಸಿದ್ದಾರೆ.
ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ
ಮುಂದೆ ನೋಡಲಾಗಿ ಅರುಹ ಕಂಡೆ,
ಆ ಅರುಹಿಂದ ಆಚಾರವ ಕಂಡೆ, ಆಚಾರದಿಂದ ಗುರುವಕಂಡೆ,
ಗುರುವಿಂದ ಲಿಂಗವ ಕಂಡೆ, ಲಿಂಗದಿಂದ ಜಂಗಮವ ಕಂಡೆ,
ಜಂಗಮದಿಂದ ಪ್ರಸಾದವ ಕಂಡೆ, ಪ್ರಸಾದದಿಂದ ಪರವ ಕಂಡೆ…
-ಹಡಪದ ಅಪ್ಪಣ್ಣ (ಸ.ವ.ಸಂ.9,ವ:1043)
ದಾಸೋಹವೆಂಬುದು ಹಡಪದ ಅಪ್ಪಣ್ಣನವರಿಗೆ ಅಂಜನವಾಗಿ ಕಾಣಿಸಿಕೊಂಡಿದೆ. ಅಂಜನ ಹಚ್ಚಿಕೊಂಡು ನೋಡಿದರೆ, ನೆಲದಲ್ಲಿರುವ ನಿಧಿ ಕಾಣಿಸುತ್ತದೆಂಬುದು ಅಂದಿನವರ ನಂಬಿಕೆಯಾಗಿತ್ತು. ಅಂಜನವೆಂದರೆ, ಇಲ್ಲಿ ಒಂದು ರೀತಿಯ ಬೆಳಕು. ಬೆಳಕಿದ್ದಾಗ ಮಾತ್ರ ಎದುರಿಗಿದ್ದದ್ದು ಕಾಣಿಸುತ್ತದೆ. ದಾಸೋಹವೆಂಬುದು ಅಪ್ಪಣ್ಣನಂತಹ ವಚನಕಾರರಿಗೆ ಬದುಕನ್ನೇ ಬೆಳಗುವ ಬೆಳಕಾಗಿ ಕಾಣಿಸಿಕೊಂಡಿದೆ. ಈ ಬೆಳಕಿನಿಂದಲೇ ಎಲ್ಲವೂ ಕಾಣತೊಡಗುತ್ತವೆ. ಈ ವಚನದಲ್ಲಿ ಒಂದಕ್ಕೊಂದು ಸಂಬಂಧವಿದೆ. ಮೊದಲು ಅರುಹು ಕಾಣಿಸುತ್ತದೆ. ಅರುಹಿನಿಂದ-ಆಚಾರ, ಆಚಾರದಿಂದ-ಗುರು, ಗುರುವಿನಿಂದ-ಲಿಂಗ, ಲಿಂಗದಿಂದ-ಜಂಗಮ, ಜಂಗಮದಿಂದ-ಪ್ರಸಾದ, ಪ್ರಸಾದದಿಂದ-ಪರದೈವ. ಹೀಗೆ ಈ ಕೊಂಡಿ ಬೆಳೆಯುತ್ತ ಹೋಗುತ್ತದೆ. ಇದೆಲ್ಲಾ ಸಾಧ್ಯವಾದದ್ದು ದಾಸೋಹದಿಂದ ಎಂಬ ಸತ್ಯ ಸ್ಪಷ್ಟವಾಗುತ್ತ ಹೋಗುತ್ತದೆ.
ಮಾದಾರ ಧೂಳಯ್ಯನವರು ವಚನವೊಂದರಲ್ಲಿ ತನ್ನ ಇಷ್ಟದೈವ ಧೂಳೇಶ್ವರ ಕಾಣಿಸುವುದು ದಾಸೋಹ ಮಾಡುವ ಸದ್ಭಕ್ತರಲ್ಲೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸತ್ಯಶುದ್ಧ ಕಾಯಕ ಮತ್ತು ನಿಚ್ಚಜಂಗಮ ದಾಸೋಹ ಇವೆರಡೂ ಶರಣರ ಹೃದಯದೊಳಗೆ ಅಚ್ಚೊತ್ತಿದ್ದವು ಎಂಬುದನ್ನು ಧೂಳಯ್ಯ ವಚನದಲ್ಲಿ ವಿವರಿಸಿದ್ದಾರೆ.
ಭಕ್ತಿದಾಸೋಹವ ಮಾಡುವವನೇ ನಿಜವಾದ ಲಿಂಗಾನುಭಾವಿಯೆಂದು ಹೇಳಿರುವ ಮಾಚಿದೇವರು, ನಿತ್ಯವೂ ಭಕ್ತಿದಾಸೋಹ ಮಾಡುವಾತ ಬಸವಣ್ಣನೆಂದು ತಿಳಿಸಿದ್ದಾರೆ. ಸಂಗಮೇಶ್ವರದ ಅಪ್ಪಣ್ಣನೆಂಬ ವಚನಕಾರ ನೀಲಲೋಚನೆಯೇ ನಿಜವಾದ ದಾಸೋಹಿಯೆನ್ನುತ್ತಾರೆ. ಒಬ್ಬೊಬ್ಬ ಶರಣನ ವಿಶಿಷ್ಟತೆಯನ್ನು ಗುರುತಿಸುತ್ತಾ ಹೋದ ಇವರು ತನ್ನ ವಚನದ (ವಚನ:337) ಕೊನೆಯಲ್ಲಿ “ಪರಮ ದಾಸೋಹವ ಮಾಡಿ, ಲಿಂಗದಲ್ಲಿ ನಿರವಯಲನೈದಿದರು ನೀಲಲೋಚನೆಯಮ್ಮನವರು” ಎಂದಿದ್ದಾರೆ. ಪ್ರಭುದೇವರು-ಮಾಯಾಕೋಲಾಹಲನಾದರೆ, ಸಿದ್ಧರಾಮ ಮಹಾಶಿವಯೋಗಿ, ಬಸವಣ್ಣ-ಭಂಡಾರಿಯಾದರೆ, ಚೆನ್ನಬಸವಣ್ಣ-ಷಟ್ಸ್ಥಲ ಚಕ್ರವರ್ತಿ, ಅಜಗಣ್ಣ-ಐಕ್ಯಸ್ಥಲವ ಸೂರೆಗೊಂಡರೆ, ಉರಿಲಿಂಗದೇವರು-ಶರಣಸತಿಲಿಂಗಪತಿಯಾದರು. ಬಿಬ್ಬಿಬಾಚಯ್ಯ-ಪ್ರಸಾದಿಸ್ಥಲವ ಸೂರೆಗೊಂಡರೆ, ಚಂದಿಮರಸ ಜ್ಞಾನವ ಸೂರೆಗೊಂಡರು. ಅಕ್ಕನಾಗಮ್ಮ ಪ್ರಸಾದಕ್ಕೆ ಸತಿಯಾದರೆ, ಮೋಳಿಗೆ ಮಹಾದೇವಿ ಬಟ್ಟಬಯಲಾದರು. ಹೀಗೆ ಒಬ್ಬೊಬ್ಬ ಶರಣನದೂ ಒಂದೊಂದು ವಿಶಿಷ್ಟತೆಯೆಂದು ಹೇಳಿದ ಸಂಗಮೇಶ್ವರ ಅಪ್ಪಣ್ಣನವರು, ನೀಲಲೋಚನೆಯಿಂದಲೆ ದಾಸೋಹ ಬೆಳೆದು, ಬಸವಕಲ್ಯಾಣದಲ್ಲಿ ಮಹಾದಾಸೋಹದ ಬೆಳಕು ಕಾಣಿಸಿಕೊಂಡಿತೆಂದು ಹೇಳಿದ್ದಾರೆ.
ಹೀಗೆ ಅನೇಕ ವಚನಕಾರರು ದಾಸೋಹದ ಮಹತ್ವವನ್ನು, ಅದರ ಅನಿವಾರ್ಯತೆಯನ್ನು ಹೇಳುತ್ತಲೇ ಮಹಾದಾಸೋಹಿಗಳ ಪರಿಚಯ ಮಾಡಿಕೊಟ್ಟಿದ್ದಾರೆ. ದಾಸೋಹವೆಂದರೆ, ಕೇವಲ ಉಣ್ಣವುದಲ್ಲ, ಉಣ್ಣಿಸುವುದಲ್ಲ; ಸತ್ಯ-ಶುದ್ಧ ಬದುಕನ್ನು ಬಾಳುವದಾಗಿತ್ತು. ಅದು ನಿತ್ಯ-ನಿರಂತರವಾಗಿತ್ತು. ದಾಸೋಹದ ಪರಿಕಲ್ಪನೆಯನ್ನು ಶರಣರು ತಮ್ಮ ಅನುಭವದ ಹಿನ್ನಲೆಯಲ್ಲಿ, ತಮ್ಮ ವೃತ್ತಿ ಪ್ರತಿಮೆಗಳ ಮೂಲಕ ವೈವಿಧ್ಯಮಯ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇತರ ವಿಚಾರಗಳು
ತನು-ಮನ-ಧನಗಳನ್ನರ್ಪಿಸಿ, ಮಾಡುವ ದಾಸೋಹ ಒಂದು ಮೌಲ್ಯವಾಗಿ ಬೆಳೆದಿದೆ. ತನುವನರ್ಪಿಸಿ ಮಾಡುವ ದಾಸೋಹವು ಸಂಪೂರ್ಣವಾಗಿರುತ್ತದೆ, ಅದೇ ನಿಜವಾದ ಮುಕ್ತಿಯೆಂದು ಉರಿಲಿಂಗಪೆದ್ದಿ ಹೇಳಿದ್ದಾರೆ. ಮನವನರ್ಪಿಸಿ ಮಾಡುವ ದಾಸೋಹವು ಮತ್ತು ಧನವನರ್ಪಿಸಿ ಮಾಡುವ ದಾಸೋಹವು ಸಂಪೂರ್ಣವಾಗಿರುತ್ತದೆ, ಅದೇ ನಿಜವಾದ ಭಕ್ತಿಯಾಗಿರುತ್ತದೆ, ಅದೇ ಮುಕ್ತಿಗೆ ದಾರಿಯಾಗುತ್ತದೆಂದು ಶರಣರು ಹೇಳಿದ್ದಾರೆ. ಅಂಗದ ಮೇಲೆ ಲಿಂಗವಿದ್ದಾಗ ಸಾಲೋಕ್ಯಮುಕ್ತಿಯ ಅಗತ್ಯವಿಲ್ಲ, ಗುರುಲಿಂಗಜಂಗಮದ ದಾಸೋಹದಲ್ಲಿದ್ದಾಗ ಸಾಮೀಪ್ಯ ಮುಕ್ತಿಯ ಅಗತ್ಯವಿಲ್ಲವೆಂದು ಉರಿಲಿಂಗಪೆದ್ದಿ ತಿಳಿಸಿದ್ದಾರೆ. ಶರಣರು ಕಾಯಕವನ್ನೇ ಕೈಲಾಸವೆಂದು, ದಾಸೋಹವನ್ನೇ ಮುಕ್ತಿಯೆಂದು ತಿಳಿದರು. ಹೀಗಾಗಿ ಕಾಯಕವೇ ಕೈಲಾಸವಾಯಿತು. ದಾಸೋಹವೇ ಮುಕ್ತಿಯಾಯಿತು.
ಆಯುಷ್ಯವೇ-ಲಿಂಗ, ಶ್ರೀಯೇ-ಜಂಗಮ, ನಿಧಾನವೇ-ಸುಜ್ಞಾನ, ವಿದ್ಯೆಯೇ -ಶಿವಮಂತ್ರ ಮತ್ತು ದೇಹವೇ-ದಾಸೋಹವೆಂದು ಅಜಗಣ್ಣತಂದೆ ಹೇಳಿದ್ದಾರೆ. ಎಲ್ಲಾ ತನ್ನೊಳಗೇ ಇದೆ, ಸಾಧನೆಯಿಂದ ಅದು ಪ್ರಕಟವಾಗುತ್ತದೆ. ಒಮ್ಮನದಿಂದ, ಭಕ್ತಿಯಿಂದ ಮಾಡುವುದು ಮಾತ್ರ ದಾಸೋಹವಾಗುತ್ತದೆ. ತನು-ಮನ ಕರಗದೆ, ಕಾಯವ ಬಳಲಿಸದೆ, ಕಾಯಕವ ಮಾಡದೆ ಕಾಡಿಬೇಡಿ ಮಾಡುವುದು ದಾಸೋಹ ಹೇಗಾಗುತ್ತದೆಂದು ಶಿವಲೆಂಕ ಮಂಚಣ್ಣನವರು ಕೇಳಿದ್ದಾರೆ.
ದಾಸೋಹವೆಂಬುದು ಸರಳವಾದದ್ದಲ್ಲ. ಧನ ನೀಡುವುದು ದಾಸೋಹವಲ್ಲ, ಸಂಪತ್ತು ಹಂಚುವುದು ದಾಸೋಹವಲ್ಲ. ದಾಸೋಹವೆಂಬುದು ಅಂತರಂಗದ ಭಕ್ತಿ ಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹ. ತನು-ಮನ-ಧನವನು, ಗುರು-ಲಿಂಗ-ಜಂಗಮರಿಗೆ ಅರ್ಪಿಸಿ ಮಾಡುವ ತ್ರಿವಿಧ ದಾಸೋಹದ ಬಗೆಗೆ ಶರಣರು ಹೇಳಿದ್ದಾರೆ. ಇದರೊಂದಿಗೆ ಅನ್ನದಾಸೋಹ ಮತ್ತು ಜ್ಞಾನದಾಸೋಹದಂತಹ ಮಹತ್ವದ ದಾಸೋಹಗಳಿವೆ. ಅನ್ನದಾಸೋಹಕ್ಕೆ ಶರಣರ ವಚನಗಳಲ್ಲಿ ಹೆಚ್ಚಿನ ವಿವರಗಳು ದೊರೆಯದಿದ್ದರೂ ಚೆನ್ನಬಸವಣ್ಣನವರ ಒಂದು ವಚನದಲ್ಲಿ ಇದರ ಪ್ರಸ್ತಾಪವಿದೆ. ಸಮ ಸಮಾಜ ಕಟ್ಟಬೇಕೆಂದು ಕನಸು ಕಂಡ ಶರಣರು ದೊಡ್ಡ ಚಳವಳಿಯನ್ನೆ ಪ್ರಾರಂಭಿಸಿದರು. ಶತಮಾನಗಳಿಂದ ಬೇರುಬಿಟ್ಟಿದ್ದ ಚಾತುರ್ವರ್ಣ ವ್ಯವಸ್ಥೆಯನ್ನು ಅಳಿಸಿಹಾಕಲು ಪ್ರಯತ್ನಿಸಿದರು. ಆದರೆ ಜನಸಾಮಾನ್ಯರು ಕಾಯಕ-ದಾಸೋಹಗಳನ್ನು ಒಪ್ಪಿಕೊಂಡಂತೆ, ಅಂತರ್ಜಾತಿ-ವಿವಾಹಗಳಿಗೆ ಸಿದ್ಧರಿರಲಿಲ್ಲ. ಇದನ್ನೇ ಚೆನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ.
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ, ಕೊಡುವಲ್ಲಿ ಕುಲವನರಸುವರು.
ಏನೆಂಬೆನಯ್ಯಾ ಒಬ್ಬೊಚ್ಚಿ ಭಕ್ತರ? ಏನೆಂಬೆನಯ್ಯ ಒಬ್ಬೊಚ್ಚಿ ಭವಿಗಳ?
ಇದು ಕಾರಣ ಕೂಡಲಚನ್ನಸಂಗಯ್ಯನಲ್ಲಿ
ಭಕ್ತಕಾಯ ಮಮಕಾಯವೆಂತೆಂಬರು?”
– ಚೆನ್ನಬಸವಣ್ಣ (ಸ.ವ.ಸಂ.3, ವ:167)
ಈ ವಚನದಲ್ಲಿ ಅಂದಿನ ವಾಸ್ತವಸ್ಥಿತಿ ಸ್ಪಷ್ಟವಾಗಿ ಕಾಣಿಸಿದೆ. ಶರಣರು ಅನ್ನದಾಸೋಹ ಪ್ರಾರಂಭಿಸಿದಾಗ, ಎಲ್ಲ ಜಾತಿಯ ಜನಾಂಗದವರು ಒಂದುಕಡೆ ಸೇರಿ, ಸಹಪಂಕ್ತಿಯಲ್ಲಿ ಕುಳಿತು ಸಹಭೋಜನ ಮಾಡಿದರು. ಮದುವೆ ಸಂದರ್ಭಗಳಲ್ಲಿ ಬೇರೆ ಜಾತಿಯವರ ಮದುವೆಗೆ ಹೋದಾಗ ಅವರು ನೀಡಿದ ಉಡುಗೊರೆ ಬಟ್ಟೆಬರೆಗಳನ್ನು ಸ್ವೀಕರಿಸಿದರು. ವಧು-ವರರಿಗೆ ತಾವು ಬಟ್ಟೆಬರೆಗಳನ್ನು ನೀಡಿದರು. ಇದು ಅವರಿಗೆ ಕಷ್ಟವೆನಿಸಲಿಲ್ಲ. ಆದರೆ ಬೇರೆ ಬೇರೆ ಜಾತಿಗಳೊಂದಿಗೆ ರಕ್ತಸಂಬಂಧ ಮಾಡಲು, ಹೆಣ್ಣ-ಗಂಡು ಕೊಡಲು ಸಿದ್ಧರಿರಲಿಲ್ಲ. ಇದನ್ನು ಗಮನಿಸಿದ ಚೆನ್ನಬಸವಣ್ಣನವರು ಅಂದಿನ ವಾಸ್ತವ ಚಿತ್ರಣವನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ.
ಉಂಬಲ್ಲಿ-ಉಡುವಲ್ಲಿ ಯಾವುದೇ ಜಾತಿಯಾದರೂ ನಡೆಯುತ್ತದೆ. ಆದರೆ ಕೊಂಬಲ್ಲಿ-ಕೊಡುವಲ್ಲಿ ಮಾತ್ರ ತಮ್ಮ ಕುಲದವರೇ ಆಗಬೇಕು. ಶತಮಾನಗಳಿಂದ ವರ್ಣವ್ಯವಸ್ಥೆಯಲ್ಲಿ ಬೆಳೆದುಕೊಂಡು ಬಂದಿದ್ದ ಸಾಮಾನ್ಯಜನರಿಗೆ ಶರಣರ ಜಾತಿನಿರಸನ ಸಿದ್ಧಾಂತವು ಅಷ್ಟಾಗಿ ಆಕರ್ಷಿಸಲಿಲ್ಲ. ಇವರ ಮನಸ್ಥಿತಿ ಕಂಡು ಚೆನ್ನಬಸವಣ್ಣನಂತಹವರಿಗೆ ಸಿಟ್ಟುಬರುತ್ತದೆ. ಅಂತೆಯೇ ಅವರು “ಏನೆಂಬೆನಯ್ಯ ಒಬ್ಬೊಚ್ಚಿಭಕ್ತರ?” ಎಂದು ಪ್ರಶ್ನಿಸಿದ್ದಾರೆ. ಒಂದನ್ನು ಒಪ್ಪಿ ಒಂದನ್ನು ಬಿಡುವ ಇಂತಹ ಭಕ್ತರನ್ನು ಒಬ್ಬೊಚ್ಚಿ ಭಕ್ತರೆಂದು ವಿಡಂಬಿಸಿದ್ದಾರೆ. ಈ ವಚನದಿಂದ ಅನ್ನದಾಸೋಹ ನಡೆಯುತ್ತಿತ್ತು. ಸಹಪಂಕ್ತಿ-ಸಹ ಭೋಜನಗಳು ದಾಸೋಹದಿಂದ ಸಾಧ್ಯವಾದವೆಂಬ ಸತ್ಯ ತಿಳಿದುಬರುತ್ತದೆ. ಆದರೆ “ಕೊಂಬಲ್ಲಿ ಕೊಡುವಲ್ಲಿ” ಅಷ್ಟು ಸರಳವಾಗಿರಲಿಲ್ಲ. ಅಂದಿನ ಅರಸೊತ್ತಿಗೆಗೆ ಕಾಯಕ-ದಾಸೋಹದಂತಹ ಸಿದ್ಧಾಂತಗಳು ಪೂರಕವಾಗಿ ಕಂಡವು. ಕಾಯಕದಲ್ಲಿ ಎಲ್ಲರೂ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಕಾರ್ಯಮಾಡುತ್ತಿದ್ದರು. ಹೀಗಾಗಿ ರಾಜ್ಯದ ಬೊಕ್ಕಸ ತುಂಬತೊಡಗಿತು. ಹೊರಗಿನಿಂದ ವ್ಯಾಪಾರಿಗಳು ಹೆಚ್ಚುಸಂಖ್ಯೆಯಲ್ಲಿ ಬರತೊಡಗಿದರು. ಇದರಿಂದ ತೆರಿಗೆಸಂಗ್ರಹ ಹೆಚ್ಚಾಯಿತು. ಯಾವಾಗ ಶರಣರು ‘ಕೊಂಬುವ-ಕೊಡುವ’ ಅಂತರ್ಜಾತಿ ವಿವಾಹಕ್ಕೆ ಕೈಹಾಕಿದರೋ ಆಗ ಆಳುವ ವ್ಯವಸ್ಥೆಗೆ ಅದನ್ನು ಸಹಿಸಿ ಕೊಳ್ಳಲಾಗಲಿಲ್ಲ. ಅವರಿಗೆ ಮರಣದಂಡನೆ ವಿಧಿಸಿದರು. ಆನೆಗಳಿಂದ ತುಳಿಸಿ ಉಗ್ರವಾದ ಮರಣಶಿಕ್ಷೆ ಕೊಟ್ಟರು. ಆಗ ಅನೇಕ ಶರಣರನ್ನು ಅಟ್ಟಿಸಿಕೊಂಡು ಹೋದಾಗ ಅವರು ಚೆಲ್ಲಾಪಿಲ್ಲಿಯಾಗಿ ಬಿಟ್ಟರು.
ಚೆನ್ನಬಸವಣ್ಣನವರ ಈ ವಚನ, ಮಹತ್ವದ ಸಂದೇಶದ ದಾಖಲೆಯಾಗಿದೆ. ಆಳುವ ವ್ಯವಸ್ಥೆ ಹೇಗೆ ಅಂತರ್ಜಾತಿ ವಿವಾಹಕ್ಕೆ ತೀವ್ರ ವಿರೋಧವನ್ನೊಡ್ಡಿತೋ, ಅದೇರೀತಿ ಜನಸಾಮಾನ್ಯರೂ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲಿಲ್ಲವೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಕಾಯಕ- ದಾಸೋಹದಂತಹ ಮೌಲ್ಯಗಳು ಎಲ್ಲರಿಗೂ ಇಷ್ಟವಾದವು, ಆಳುವ ವ್ಯವಸ್ಥೆಯೂ ಅಡ್ಡಿಬರಲಿಲ್ಲ. ಆದರೆ ಅಂತರ್ಜಾತಿ ಮದುವೆಯ ವಿಷಯ ಬಂದಾಗ ಯಾರೂ ಒಪ್ಪಿಕೊಳ್ಳಲಿಲ್ಲ. ಇದು ಶರಣರ ಕೊನೆಯ ಅಸ್ತ್ರವಾಗಿತ್ತು. ಆದರೆ ಆಳುವವ್ಯವಸ್ಥೆ ಅದಕ್ಕೆ ಅವಕಾಶ ನೀಡಲಿಲ್ಲವೆಂಬ ಸತ್ಯವು ಚರಿತ್ರೆಯಿಂದ ತಿಳಿದು ಬರುತ್ತದೆ.
ಅನ್ನದಾಸೋಹಕ್ಕೆ ಶರಣರು ಕಟ್ಟಿಸಿದ ದಾಸೋಹ ಮಂಟಪಗಳು ಕಾರಣವಾದರೆ; ಜ್ಞಾನದಾಸೋಹಕ್ಕೆ ಅನುಭವಮಂಟಪ ಕಾರಣವಾಯಿತು. ಅನುಭವಮಂಟಪವು ಜ್ಞಾನದಾಸೋಹದ ಕೇಂದ್ರವಾಗಿತ್ತು. ಇಂತಹ ಅನುಭವಮಂಟಪದಲ್ಲಿದ್ದ ಅತ್ಯಂತ ಸಾಮಾನ್ಯ ವ್ಯಕ್ತಿಕೂಡ ಜ್ಞಾನಿಯಾಗಿ ಬೆಳೆದುನಿಂತ, ಅನುಭಾವಿಯಾಗಿ ಕಾಣಿಸಿಕೊಂಡ. ಇದು ಶರಣರ ಜ್ಞಾನದಾಸೋಹದ ಬಹುದೊಡ್ಡ ಕೊಡುಗೆ.
ಶರಣರು ಒಂದೆಡೆ ಸೇರಿಕೊಂಡು ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಇಂತಹವುಗಳನ್ನೇ ಧರ್ಮ ಗೋಷ್ಠಿ, ಅನುಭಾವಗೋಷ್ಠಿ, ಗೀತಗೋಷ್ಠಿ, ಶಿವತತ್ವಗೋಷ್ಠಿಯೆಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಗೋಷ್ಠಿಗಳು ನಡೆಯುತ್ತಿದ್ದ ಸ್ಥಳವನ್ನೇ ಅನುಭವಮಂಟಪವೆಂದು ಕರೆಯಲಾಗಿದೆ. ನೀಲಮ್ಮನವರ ಒಂದು ವಚನದಲ್ಲಿ, ಅನುಭವಮಂಟಪದ ಹುಟ್ಟಿಗೆ ಬಸವಣ್ಣನೇ ಕಾರಣಕರ್ತನಾದನೆಂಬ ಸತ್ಯ ತಿಳಿದುಬರುತ್ತದೆ. ಹಡಪದಪ್ಪಣ್ಣನವರ ಕಾಲಜ್ಞಾನ ವಚನದಲ್ಲಿ ಕಲ್ಯಾಣದಲ್ಲಿದ್ದ ಚರಮಂಟಪ, ಆರಾಧ್ಯಮಂಟಪಗಳ ಪ್ರಸ್ತಾಪವಿದೆ. ಅವುಗಳಲ್ಲಿ ಅನುಭವಮಂಟಪವೂ ಒಂದಾಗಿದೆ.
ಆದಿಯಾಧಾರವಿಲ್ಲದಂದು ಕಳೆಮೊಳೆದೋರದಂದು
ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು…
ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು…
ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು.
ಆ ಅಕ್ಷರವ ರೂಪಮಾಡಿ,
ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು
ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು…
ಮತ್ರ್ಯಲೋಕವನೆ ಮಹಾಪ್ರಮಥರ ಬಿಡಾರವ
ಮಾಡಿದಾತ ನಮ್ಮ ಬಸವಯ್ಯನು…
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮಕ್ಕೆ
ಇಚ್ಛೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು…
ಮೂವತ್ತಾರು ಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ
ಅರ್ಪಿತ ಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು…
ಚೆನ್ನಬಸವನೆಂಬ ಪ್ರಸಾದಿಯ ಪಡೆದು
ಅನುಭವಮಂಟಪವನನು ಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ
ಏಳುನೂರೆಪ್ಪತ್ತು ಅಮರಗಣಂಗಳ
ಅನುಭವ ಮೂರ್ತಿಗಳನ್ನಾಗಿ ಮಾಡಿದಾತ ನಮ್ಮ ಬಸವಯ್ಯನು”
-ನೀಲಮ್ಮ (ಸ.ವ.ಸಂ.5, ವ:844)
ನೀಲಮ್ಮನವರ ಈ ವಚನ ಗಮನಿಸಿದಾಗ, ಬಸವಣ್ಣನವರೇ ಜ್ಞಾನದಾಸೋಹ ಸಂಸ್ಥಾಪಕರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅನುಭವಮಂಟಪವನ್ನು ಕಟ್ಟಿ, ಅಮರಗಣಂಗಳನ್ನು ಕರೆಸಿ ಅನುಭಾವ ಗೋಷ್ಠಿ ನಡೆಸುತ್ತಿದ್ದ ಬಸವಣ್ಣನವರು ಜ್ಞಾನದಾಸೋಹಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಲ್ಯಾಣವನ್ನು ಕೈಲಾಸಮಾಡಿದ ಬಸವಣ್ಣನವರು ಏಳುನೊರೆಪ್ಪತ್ತು ಅಮರಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು. ಈ ಅಮರಗಣಂಗಳು ಜ್ಞಾನದಾಸೋಹ ಮಾಡುತ್ತ, ಜನರಲ್ಲಿ ಅರಿವಿನ ಬೆಳಕು ಹಚ್ಚಿದರು. ಅನುಭವಮಂಟಪ ಕಲ್ಯಾಣದ ಜ್ಞಾನದಾಸೋಹ ಕೇಂದ್ರವಾಗಿದ್ದರೆ, ಏಳುನೂರೆಪ್ಪತ್ತು ಅಮರಗಣಂಗಳು ಈ ಜ್ಞಾನ ಪ್ರಸಾರದ ನಿಜವಾದ ಜಂಗಮರಾಗಿದ್ದರು. ಜ್ಞಾನದಾಸೋಹದಲ್ಲಿ 12ನೇ ಶತಮಾನದಲ್ಲಿಯೇ ಇಂತಹದೊಂದು ದೊಡ್ಡ ಕ್ರಾಂತಿ ನಡೆದದ್ದು ಬಹುಮುಖ್ಯ ಸಂಗತಿಯಾಗುತ್ತದೆ.
ಶರಣರ ನಂತರ ಬಂದ ಅನೇಕ ಕವಿಗಳು ಅನುಭವಮಂಟಪದ ಪ್ರಸ್ತಾಪ ಮಾಡಿದ್ದಾರೆ. ಸಿಂಗಿರಾಜ ಪುರಾಣದಲ್ಲಿ “ಮಹಾಮಂಟಪದ ಸ್ಥಳವ ಸ್ಥಳಗೊಳಿಸಿಪ್ಪನು” ಎಂಬ ನುಡಿಯಿದೆ. ಅನುಭವ ಮಂಟಪವನ್ನೇ ಇಲ್ಲಿ ಮಹಾಮಂಟಪಸ್ಥಲ, ಗಣಸಮೂಹ ಮಂಟಪವೆಂದು ಕರೆಯಲಾಗಿದೆ. ವಿರೂಪಾಕ್ಷ ಪಂಡಿತನ ‘ಚೆನ್ನಬಸವಪುರಾಣ’ದಲ್ಲಿ ಶಿವತತ್ವಗೋಷ್ಠಿಯ ಪ್ರಸ್ತಾಪವಿದೆ. ಹರಿಹರನ ಬಸವರಾಜದೇವರ ರಗಳೆಯಲ್ಲಿ ಬಸವಣ್ಣನವರು ದೂರ ದೂರದಿಂದ ಬಂದ ಮಾಹೇಶ್ವರರನ್ನು ಸ್ವಾಗತಿಸಿ, ಅವರಿಗೆ ಆದರಾತಿಥ್ಯವ ಮಾಡಿ ಸದ್ಗೋಷ್ಠಿಗಳನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ. ಬಸವಣ್ಣನವರ ಮಹಾಮನೆಯಲ್ಲಿ ಶಿವತತ್ವಗೋಷ್ಠಿಯ ನಿನದವೂ, ಸ್ವಾನುಭವ ಪ್ರಘೋಷಣವೂ ಕೇಳಿಬರುತ್ತಿದ್ದವೆಂದು ಭೀಮಕವಿಯ ಬಸವಪುರಾಣದಲ್ಲಿ ತಿಳಿಸಲಾಗಿದೆ. ಇದೇರೀತಿ `ಚೆನ್ನಬಸವಪುರಾಣ’,`ಪ್ರಭುದೇವರ ಪುರಾಣ’ಗಳಲ್ಲಿ ಅನುಭವಮಂಟಪವೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಅನೇಕ ವೀರಶೈವ ಪುರಾಣಗಳಲ್ಲಿ `ಮಹಾಮಂಟಪ ಸ್ಥಳ’,`ಗಣಸಮೂಹ ಮಂಟಪ’, `ಮಹಾಮನೆ’ `ಕೂಡಲಸಂಗಮೇಶ ಭವನಮಂಟಪ’, `ಒಡ್ಡೋಲಗ’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಅಬ್ಬಲೂರು ಶಾಸನದಲ್ಲಿ ಏಕಾಂತ ರಾಮಯ್ಯನ ಪ್ರಸ್ತಾಪವಿದ್ದು “ಒಂದು ದಿವಸಂ ಧರ್ಮಗೋಷ್ಠಿಯೊಳಿರ್ದು…” (ಕನ್ನಡ ಶಾಸನ ಸಂಪದ, ಪುಟ-90, 1974 ಸಂ. ಡಾ.ಆರ್.ಸಿ.ಹಿರೇಮಠ, ಡಾ.ಎಂ.ಎಂ.ಕಲಬುರಗಿ) ಎಂಬ ಮಾತು ಬರುತ್ತದೆ. ಇಂತಹ ಧರ್ಮಗೋಷ್ಠಿಯೇ ಅನುಭವ ಮಂಟಪವಾಗಿತ್ತು. ಇಂತಹ ಧರ್ಮಗೋಷ್ಠಿಗಳಲ್ಲಿ ಶರಣರು ಭಾಗವಹಿಸಿ ಜ್ಞಾನದಾಸೋಹ ಮಾಡುತ್ತಿದ್ದರು. ಏಕಾಂತದ ರಾಮಯ್ಯನವರ ಮೇಲೆ ಬಸವಣ್ಣನವರ ದಟ್ಟ ಪ್ರಭಾವವಾಗಿದೆ. ಅನುಭವಮಂಟಪವು ಸಾಮಾನ್ಯರ ವಿಶ್ವವಿದ್ಯಾಲಯವಾಗಿತ್ತು. 12ನೆ ಶತಮಾನದಲ್ಲಿ ಅನುಭವಮಂಟಪದ ಪ್ರಭಾವದಿಂದ ಇಂತಹ ಧರ್ಮಗೋಷ್ಠಿಗಳು ನಡೆದಿರಬಹುದಾಗಿದೆ. ಬೊಮ್ಮಯ್ಯ, ಜೇಡರದಾಸಿಮಯ್ಯ ಇವರೆಲ್ಲ ಶಿವಗೋಷ್ಠಿಗಳನ್ನು ನಡೆಸುತ್ತಿದ್ದರೆಂದು ಹರಿಹರ ಕವಿ ಹೇಳಿದ್ದಾನೆ.
ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ…..
ಕೂಡಲಸಂಗನ ಅನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ”
– ಬಸವಣ್ಣ (ಸ.ವ.ಸಂ.1, ವ: 842)
ಬಸವಣ್ಣನವರ ಈ ವಚನ ಜ್ಞಾನದಾಸೋಹಕ್ಕೆ ಒಳ್ಳೆಯ ಉದಾಹರಣೆ. ಅಜ್ಞಾನ ಅಳಿಯಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯವೆಂದು ಅನುಭವಮಂಟಪವನ್ನು ಕಟ್ಟಿದರು. ಅಲ್ಲಿ ಶರಣರ ಅನುಭಾವದಿಂದ ತಮ್ಮ ಭವನಾಶವಾಯಿತೆಂದು ಹೇಳುವಲ್ಲಿ ಅನ್ನದಾಸೋಹಕ್ಕಿಂತಲೂ ಜ್ಞಾನದಾಸೋಹ ದೊಡ್ಡದೆಂದು ತಿಳಿಸಲಾಗಿದೆ. ಅಜ್ಞಾನದ ಬದಲು-ಜ್ಞಾನ, ತಮಂಧದ ಬದಲು ಜ್ಯೋತಿ, ಅಸತ್ಯದ ಬದಲು-ಸತ್ಯ ಉಂಟಾಗಬೇಕಾದರೆ ಅನುಭವಮಂಟಪ ಅಗತ್ಯವೆಂದು ತಿಳಿದಿದ್ದ ಬಸವಣ್ಣನವರು ಶರಣರ ಸತ್ಸಂಗದ ಮೂಲಕ ಜ್ಞಾನದಾಸೋಹವನ್ನು ಪ್ರಾರಂಭಿಸಿದರು. “ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ” ಎನ್ನುವ ಜೇಡರ ದಾಸಿಮಯ್ಯನವರು “ನಿಮ್ಮ ಶರಣರ ಸೂಳ್ನುಡಿಯ ಅರಗಳಿಗೆಯಿತ್ತಡೆ ನಿಮ್ಮನೇ ಇತ್ತೆ ಕಾಣಾ ರಾಮನಾಥಾ” ಎಂದಿದ್ದಾರೆ. ಜ್ಞಾನದಾಸೋಹ ಶರಣರ ಬಹುಮಹತ್ವದ ಸಿದ್ಧಾಂತವಾಗಿತ್ತು.
“ಅನುಭಾವವಿಲ್ಲದವನ ಭಕ್ತಿ ತಲೆಕೆಳಗಪ್ಪುದಯ್ಯ”ಎಂದು ತಮ್ಮ ಇನ್ನೊಂದು ವಚನದಲ್ಲಿ ಹೇಳಿರುವ ಜೇಡರ ದಾಸಿಮಯ್ಯನವರು ಅನುಭಾವವೇ ಭಕ್ತಿಗಾಧಾರವೆಂದು ಸ್ಪಷ್ಟಪಡಿಸಿದ್ದಾರೆ. “ಭಕ್ತಿಗೆ ಅನುಭಾವವೇ ಬೀಜಕಾಣಿರೋ” ಎಂದ ಚೆನ್ನಬಸವಣ್ಣನವರು ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತೆನ್ನುತ್ತಾರೆ. ತಲೆ ಹೊಲಸಾದರೆ ಹೇಗೆ ಸ್ನಾನ ಮಾಡುತ್ತೇವೆಯೋ, ವಸ್ತ್ರ ಮಾಸಿದಡೆ ಹೇಗೆ ಸ್ವಚ್ಛಗೊಳಿಸುತ್ತೇವೆಯೋ ಹಾಗೆ ಮನಸ್ಸು ಮೈಲಿಗೆಯಾದರೆ, ಶರಣರ ಅನುಭಾವದಿಂದ ಅದು ಶುದ್ಧವಾಗುತ್ತದೆಂದು ಚೆನ್ನಬಸವಣ್ಣನವರು ಮತ್ತೊಂದು ವಚನದಲ್ಲಿ ವಿವರಿಸಿದ್ದಾರೆ. ಲಿಂಗ-ಜಂಗಮ-ಪ್ರಸಾದ ಇವೆಲ್ಲಾ ಅನುಭಾವದಿಂದಲೇ ಹುಟ್ಟಿವೆಯೆಂದು ಅಲ್ಲಮಪ್ರಭು ಹೇಳಿದರೆ, “ಅನುಭಾವಿಗಳ ಸಂಗದಿಂದ ತನು ಶುದ್ಧವಾಯಿತೆಂದು” ಅಕ್ಕ ಹೇಳಿದ್ದಾರೆ. “ಬಸವಣ್ಣ ನಿನ್ನ ಮಹಾನುಭಾವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು. ನಿನ್ನ ಸನ್ನಿಧಿಯಿಂದಾನು ಬದುಕಿದೆ ಕಾಣಾ ಬಸವಣ್ಣ” ಎಂದು ಪ್ರಭು ಬಸವಣ್ಣನವರನ್ನು ಕೊಂಡಾಡಿದ್ದಾರೆ.
ಅನ್ನವು ಹಸಿದ ಹೊಟ್ಟೆಯನ್ನು ತುಂಬಿಸಿದರೆ, ಜ್ಞಾನವು, ಅರಿವಿನ ಹಸಿವನ್ನು ಹಿಂಗಿಸುತ್ತದೆ. ಅಂತೆಯೇ ಶರಣರು ಅನ್ನದಾಸೋಹ ಮತ್ತು ಜ್ಞಾನದಾಸೋಹಕ್ಕೆ ಮಹತ್ವದ ಸ್ಥಾನ ನೀಡಿದ್ದಾರೆ. ಆನೆ, ಕುದುರೆ, ಸಾಮ್ರಾಜ್ಯ, ಸಂಪತ್ತು ಇವೆಲ್ಲಕ್ಕಿಂತ ತಿಳುವಳಿಕೆ ಮಾತು, ಶರಣರ ಸೂಳ್ನುಡಿ ಬಹಳ ಮುಖ್ಯವೆಂದು ಅವರು ನಂಬಿದ್ದರು. ಆ ಕಾರಣಕ್ಕೆ ಜ್ಞಾನಕ್ಕೆ-ಅನುಭಾವಕ್ಕೆ ಸೂಳ್ನುಡಿಗಳಿಗೆ ಅವರು ಪ್ರಾಮುಖ್ಯತೆ ನೀಡಿದ್ದಾರೆ. ಶರಣರ ದಾಸೋಹತತ್ವಕ್ಕೆ ಅನೇಕ ಆಯಾಮಗಳಿವೆ. ಕಾಯಕತತ್ವ ದಾಸೋಹತತ್ವದಿಂದ ಸಾಮಾಜಿಕ ಸಮಾನತೆಯನ್ನು ತರಲು ಮಾಡಿದ ಅವರ ಪ್ರಯತ್ನಗಳು ಗಮನಾರ್ಹವಾಗಿವೆ.
ಮುಖ್ಯಾಂಶಗಳು
1. ತನ-ಮನ-ಧನಗಳನ್ನು ಗುರು-ಲಿಂಗ-ಜಂಗಮಕ್ಕರ್ಪಿಸುವುದೇ ತ್ರಿವಿಧ ದಾಸೋಹ.
2. ಅನ್ನದಾಸೋಹದ ಜತೆಗೆ ಜ್ಞಾನದಾಸೋಹ, ಭಕ್ತಿದಾಸೋಹ, ಯುಕ್ತಿದಾಸೋಹ, ಮಮಕಾರ ದಾಸೋಹಗಳಿವೆ.
3. ದಾಸೋಹ ಸಾಮಾಜಿಕವಾದರೂ, ಅದಕ್ಕೆ ಧಾರ್ಮಿಕ ನೆಲೆಗಟ್ಟಿದೆ.
4. ದಾನಸಂಸ್ಕೃತಿಗೆ ಪರ್ಯಾಯವಾಗಿ ಬಂದದ್ದು ದಾಸೋಹ ಸಂಸ್ಕೃತಿ.
5. ಕಾಯಕ ಕಡ್ಡಾಯವಾದರೆ, ದಾಸೋಹ ನಿತ್ಯನಿರಂತರ.
6. ದಾಸೋಹಿ ಭಕ್ತನಾಗಿರಬೇಕು, ಸದಾಚಾರಿಯಾಗಿರಬೇಕು.
7. ಸತ್ಯ-ಪ್ರಾಮಾಣಿಕತೆ-ನಿಷ್ಠೆಗಳೇ ದಾಸೋಹದ ಜೀವಾಳ.
8. ಸತ್ಯಶುದ್ಧ ಕಾಯಕದಿಂದ ಬಂದ ಧನ ಮಾತ್ರ ದಾಸೋಹಕ್ಕೆ ಸಲ್ಲುತ್ತದೆ.
9. ದಾಸೋಹವೇ ನಿಜವಾದ ಶಿವಾಚಾರ.
10. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಗೆದ್ದವನೇ ನಿಜವಾದ ದಾಸೋಹಿ.
11. ದಾಸೋಹದಲ್ಲಿ ಸಮರ್ಪಣಾ ಭಾವವಿರಬೇಕು.
12. ಅಹಂಕಾರ ನಿರಸನದಿಂದ ಮಾತ್ರ ದಾಸೋಹ ಸಾಧ್ಯ.
13. ದಾಸೋಹ, ಸಹಪಂಕ್ತಿ-ಸಹಭೋಜನದ ಸಾಮರಸ್ಯ ಕೇಂದ್ರ.
14. ದಾಸೋಹ, ಸಮಾನತೆ ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ.
15. ಕಾಯಕವೇ ಕೈಲಾಸ-ದಾಸೋಹವೇ ಮುಕ್ತಿಯ ದಾರಿ.
16. ದಾಸೋಹವು ಸಮಾಜವನ್ನು ಕಾಣುವ ಅಂಜನ.
17. ದೇಹ-ನಿರ್ದೇಹವಾಗುವುದೇ ನಿಜವಾದ ದಾಸೋಹ.
18. ದಾಸೋಹದ ಸ್ಥಾಯಿಭಾವವೇ ನಿಸ್ವಾರ್ಥ.
19. ಮೇಲರಿಮೆ-ಕೀಳರಿಮೆಗಳಿಲ್ಲದ ಸಮಾನತೆಯ ಸಾಧನವೇ ದಾಸೋಹ.
20. ದಾಸೋಹವೆಂಬುದು ಒಂದು ಸಮಾಜಸೇವೆ.
Comments 10
Karibasappa hanchinamani
Jan 13, 2021ದಾಸೋಹ ತತ್ವವನ್ನು ಇವತ್ತಿನ ದಿನಮಾನಗಳಲ್ಲಿ ನಮ್ಮಂತಹ ಮಧ್ಯಮ ವರ್ಗದವರು ಅಳವಡಿಸಿಕೊಳ್ಳುವುದು ಸಾಧ್ಯವೇ? ಲೇಖಕರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.
Shivananda G
Jan 13, 2021ಕಾಯಕ ಮತ್ತು ದಾಸೋಹ ಶರಣರ ವಿಶೇಷ ಕೊಡುಗೆಗಳು. ದಾಸೋಹದ ಕುರಿತಾಗಿ ವಿಸ್ತೃತ ಲೇಖನವಿದೆ. ಶರಣರು ದಾಸೋಹವನ್ನು ಹೇಗೆ ನೋಡಿದ್ದಾರೆಂದು ಲೇಖಕರು ವಿವರಿಸಿದ್ದಾರೆ.
Veerabhadrappa, Bangalore
Jan 13, 2021ಯುಕ್ತನಾದವನು ಯುಕ್ತಿ ದಾಸೋಹವ ಮಾಡಬಹುದು. ಐಕ್ಯಸ್ಥಲವ ಸಾಧಿಸಿದವನು ಮಮಕಾರ ದಾಸೋಹವ ಮಾಡಬಹುದು…. ಹೇಗೆ? ಅನ್ನ ದಾಸೋಹ ಮತ್ತು ಜ್ಞಾನ ದಾಸೋಹಗಳ ಹೊರತಾಗಿ ಬೇರಾವ ದಾಸೋಹದ ಬಗೆಗೂ ಸ್ಪಷ್ಟತೆ ಸಿಗಲಿಲ್ಲ.
Lakshman Kollur
Jan 17, 2021ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕೆಂಬುದು ಶರಣರ ತ್ರಿವಿಧ ದಾಸೋಹದ ಸಿದ್ಧಾಂತ- ಇದುವರೆಗೆ ನನಗೆ ಈ ಶರಣ ವಾಕ್ಯವು ಅರ್ಥವಾಗಿಲ್ಲ. ಈ ಲೇಖನ ಓದಿದ ಬಳಿಕವೂ ಮನದಟ್ಟಾಗಲಿಲ್ಲ, ದಯವಿಟ್ಟು ಕ್ಷಮಿಸಿ.
Sharada A.M
Jan 17, 2021ಕಾಯಕ ಮತ್ತು ದಾಸೋಹ ಮನುಷ್ಯ ಕುಲ ಇರುವವರೆಗೆ ಅವಶ್ಯವಾಗಿ ಬೇಕಾದ ಎರಡು ತತ್ವಗಳು. ದಾಸೋಹ ಕುರಿತಾಗಿ ಶರಣರು ಏನೆಲ್ಲಾ ವಚನಗಳಲ್ಲಿ ಹೇಳಿದ್ದಾರೆಂಬುದನ್ನು ಲೇಖಕರು ಒಂದೆಡೆ ಕಲೆ ಹಾಕಿ ಕೊಟ್ಟಿದ್ದಾರೆ. ವಂದನೆಗಳು.
Sunanda
Jan 20, 2021ಬಯಲುನಲ್ಲಿ ಪ್ರಕಟವಾದ ಎಲ್ಲಾ ಲೇಖನಗಳನ್ನು ಓದಿದೆ… ತುಂಬಾ ಚನ್ನಾಗಿವೆ, ಥ್ಯಾಂಕ್ಯೂ.
ದೇವರಾಜ್ ಬಿ.ಎಸ್
Jan 21, 2021ತನು-ಮನ-ಧನಗಳನ್ನು ಗೆಲ್ಲುವುದು ಎಂದರೆ ಏನು ಮತ್ತು ಹೇಗೆ? ತ್ರಿವಿಧ ದಾಸೋಹವನ್ನು ಆಧುನಿಕ ಕಾಲಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು… ಸಮಕಾಲೀನತೆಯ ಸ್ಪರ್ಶ ಕೊಟ್ಟಿದ್ದರೆ ಲೇಖನಕ್ಕೆ ವಿಶಾಲತೆ ದಕ್ಕುತ್ತಿತ್ತು.
Indudhar
Jan 22, 2021ಅಹಂಕಾರ ನಿರಸನ ಮಾಡಲು ಶರಣರು ದಾಸೋಹಕ್ಕೆ ಒತ್ತು ಕೊಟ್ಟರು ಎನ್ನುವುದು ನಿಜ. ಸಾಮಾಜಿಕ ಹೊಣೆಗಾರಿಕೆಯ ಜೊತೆಗೆ ಅಹಂಕಾರವನ್ನು ಸಂಪೂರ್ಣ ನಿರ್ಮೂಲಗೊಳಿಸಲು ಇದಕ್ಕಿಂತ ಬೇರೆ ಉಪಾಯ ಮತ್ತೊಂದಿಲ್ಲ. ಶರಣರ ಪಾದಗಳಿಗೆ ನಮೋನಮೋ.
ಬಸವರಾಜ ಎಸ್ ಎಚ್
Oct 20, 2022ಕಾಯಕ ಮತ್ತು ದಾಸೋಹ ಮನುಷ್ಯ ಕುಲ ಇರುವವರೆಗೆ ಅವಶ್ಯವಾಗಿ ಬೇಕಾದ ಎರಡು ತತ್ವಗಳು. ದಾಸೋಹ ಕುರಿತಾಗಿ ಶರಣರು ಏನೆಲ್ಲಾ ವಚನಗಳಲ್ಲಿ ಹೇಳಿದ್ದಾರೆಂಬುದನ್ನು ಲೇಖಕರು ಒಂದೆಡೆ ಕಲೆ ಹಾಕಿ ಜನ ಮನಗಳಿಗೆ ಬಿತ್ತರಿಸುವ ಕಾರ್ಯ ಮಾಡಿ ಕೊಟ್ಟಿದ್ದಾರೆ. ಲೇಖಕರ ಪರಿಶ್ರಮಕ್ಕೆ ಭಕ್ತಿಯ ಶರಣು ಶರಣಾರ್ಥಿಗಳು
ಬಸವ ಪಾಟೀಲ
Sep 28, 2024ದಾಸೋಹದ ಪರಿಕಲ್ಪನೆ, ತಾತ್ಪರ್ಯ ಮತ್ತು ಆಚರಣೆಯ ಬಗ್ಗೆ ಮನ ಮುಟ್ಟುವಂತೆ, ಶೈಕ್ಷಣಿಕ ಬರಹ!
ಸಮಕಾಲಿನಲ್ಲಿ, ತೆರಿಗೆಯು ದಾಸೋಹಕ್ಕೆ ಸಮವಾ? ಅಥವಾ ರಾಜ್ಯ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆ ದಾಸೋಹಕ್ಕೆ ಸಮವಾ?
ದಾಸೋಹವನ್ನ ನಾವು “ಸದ್ಗುಣ” ಅನ್ನುವ ದೃಷ್ಟಿಯಲ್ಲಿ ವ್ಯಾಖ್ಯನಿಸುವದು, ಸಮಕಾಲಿನವಾ?