ತೋರಲಿಲ್ಲದ ಸಿಂಹಾಸನದ ಮೇಲೆ…
ಅಲ್ಲಮಪ್ರಭುದೇವರು `ಅನುಭವಮಂಟಪ’ದ ಅಧ್ಯಕ್ಷರಾಗಿದ್ದವರು. ಅವರು ನಿಂತಲ್ಲಿ ನಿಲ್ಲುವ, ಕೂತಲ್ಲಿ ಕೂರುವ ವ್ಯಕ್ತಿಯಲ್ಲ. ಜಂಗಮಸ್ವರೂಪಿ. ಅನುಭಾವಿ. ಅವಿರಳ ಜ್ಞಾನಿ. ಯಾವುದಕ್ಕೂ ಅಂಟಿಕೊಳ್ಳುವ ಸ್ವಭಾವ ಅವರದಲ್ಲ. ಅಂಥ ಪ್ರಭುದೇವರನ್ನು ಕೆಲವು ಕಾಲ ಶೂನ್ಯಸಿಂಹಾಸನದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾದವರು ಬಸವಣ್ಣನವರು. ಬಸವಣ್ಣನವರ ನಿರ್ಮಲ ಭಕ್ತಿ, ಸಾಮಾಜಿಕ ಕಳಕಳಿ, ಧಾರ್ಮಿಕ ಬದ್ಧತೆ, ಅಂತರಂಗ ಮತ್ತು ಬಹಿರಂಗ ಶುದ್ಧಿಯ ಬದುಕಿಗಾಗಿ ಬೆರಗಾದವರು ಪ್ರಭು. ಹಾಗಾಗಿ ಅವರಿಗೆ ಬಸವಣ್ಣನವರೆಂದರೆ ವಿಶೇಷ ಗೌರವ. ‘ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ ನಾನು ಸದ್ಭಕ್ತನಾದೆನಯ್ಯಾ’, `ಪೂರ್ವಾಚಾರಿ ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನು’. `ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು?’ ಎಂದು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದಾರೆ. ಅದರಂತೆ ಬಸವಣ್ಣನವರು ಸಹ ಪ್ರಭುದೇವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದಾರೆ. `ಜಂಗಮಮುಖಲಿಂಗವಾಗಿ ಬಂದು ಎನ್ನ ಶಿಕ್ಷಿಸಿ ರಕ್ಷಿಸಿ ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು’, `ಪ್ರಭುದೇವರ ಮೊರೆಯ ಹೊಕ್ಕು ಬದುಕಿದೆನು’, `ನಾನು ಪ್ರಭುದೇವರ ತೊತ್ತಿನ ಮಗನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ’, `ನಿಮ್ಮ ಶರಣ ಪ್ರಭುದೇವರು ಬಂದಡೆ ಉಬ್ಬಿ ಕೊಬ್ಬಿ ನಲಿನಲಿದಾಡುವೆ’ ಎಂದೆಲ್ಲ ಸ್ಮರಿಸಿಕೊಳ್ಳುವರು ಬಸವಣ್ಣನವರು. ಅವರು ಪ್ರಭುದೇವರನ್ನು ಕುರಿತು ಹೇಳಿದಂತಿರುವ ಒಂದು ವಚನದ ಚಿಂತನೆ ಈ ಲೇಖನದ ಉದ್ದೇಶ.
ತೋರಲಿಲ್ಲದ ಸಿಂಹಾಸನದ ಮೇಲೆ
ಹೇಳಬಾರದ ಘನವು ಬಂದೆರಗಿದಡೆ,
ತೋರಿ ಮೆರೆವ ಸಂಗಮನಾಥನು ಎದ್ದು ಹೋದನು.
ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು,
ಮಾಡ ಮಾಡ ಸಯದಾನವ ಮರಳಿ ನೋಡಲಿಲ್ಲ.
ಇದನೇನ ಹೇಳುವೆ ಅನಿಯಮ ಚರಿತ್ರವನು?
ಇದೆಂತುಪಮಿಸುವೆನು ವಿಸ್ಮಯವನು?
ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ
ಹೇಳಯ್ಯಾ, ಚೆನ್ನಬಸವಣ್ಣಾ.
ಇದು ಬೆಡಗಿನ ವಚನದಂತೆ ತೋರುವುದು. ಬೆಡಗಿನ ವಚನ ಎನ್ನುತ್ತಲೇ ನಮ್ಮ ಗಮನ ಹೋಗುವುದು ಅಲ್ಲಮಪ್ರಭುದೇವರ ವಚನಗಳ ಕಡೆಗೆ. ಬಸವಣ್ಣನವರು ಹೇಳಬೇಕಾದ್ದನ್ನು ಸರಳವಾಗಿ ಹೇಳುವ ಗುಣ ಬೆಳೆಸಿಕೊಂಡವರು. ಅವರದು ಒಂದರ್ಥದಲ್ಲಿ ಬಯಲಂಗಡಿ ವ್ಯಾಪಾರ. ಹಾಗಾಗಿ ಈ ವಚನ ಬಸವಣ್ಣನವರದೇ ಎನ್ನುವ ಅನುಮಾನ ಮೂಡುವುದು ಸಹಜ. ಅನುಮಾನಕ್ಕೆ ಮತ್ತೊಂದು ಕಾರಣ ಇದು ಬಸವಣ್ಣನವರ ಹೆಚ್ಚಿನ ವಚನಗಳಲ್ಲಿ ಕಾಣಬರುವುದು. ಬಹುಶಃ ಶೂನ್ಯಸಂಪಾದನಾಕಾರರು ಅಲ್ಲಮಪ್ರಭುವಿನ ಅಪರಿಮಿತ ವ್ಯಕ್ತಿತ್ವದ ಅನಾವರಣ ಮಾಡಲು ಬಸವಣ್ಣನವರ ಹೆಸರಿನಲ್ಲಿ ಈ ವಚನವನ್ನು ಸೃಷ್ಟಿಸಿದಂತೆ ತೋರುವುದು. `ಸಿಂಹಾಸನ’ ಅಧಿಕಾರ ಕೇಂದ್ರದ ಪ್ರತೀಕ. ಶರಣರು ಅಧಿಕಾರದಾಹಿಗಳಲ್ಲದ್ದರಿಂದ ಅವರು ಅಧಿಕಾರ ಕೇಂದ್ರಿತ ಸಿಂಹಾಸನವನ್ನು ಒಪ್ಪುವ ಮಾತೇ ಇಲ್ಲ. `ಶೂನ್ಯಸಿಂಹಾಸನ’ ಎನ್ನುತ್ತಲೇ ನಮಗೆ `ಅನುಭವಮಂಟಪ’ ಸ್ಮರಣೆಗೆ ಬರುವುದು. ಅನುಭವಮಂಟಪ ಒಂದು ಸ್ಥಾವರ ಕಟ್ಟಡವಲ್ಲ. ಶರಣರು ಚಿಂತನ ಮಂಥನ ಮಾಡಲು ಸೇರಿಕೊಂಡ ಬಯಲೇ ಅನುಭವಮಂಟಪ. ಅನುಭವಮಂಟಪಕ್ಕೇ ಒಂದು ಸ್ಥಾವರ ಅಸ್ತಿತ್ವ ಇಲ್ಲವೆಂದಾದಮೇಲೆ ಅಲ್ಲಿ ಸ್ಥಾವರ ಸಿಂಹಾಸನವಿರಲು ಹೇಗೆ ಸಾಧ್ಯ? ಹಾಗಾಗಿ ಬಸವಣ್ಣನವರ ಮೇಲ್ಕಂಡ ವಚನದ ವ್ಯಾಖ್ಯಾನಕ್ಕೆ ಮುನ್ನ ಪ್ರಭುದೇವರ ಬಗೆಗಿನ ಕೆಲವು ಪವಾಡಸದೃಶ ಸಂಗತಿಗಳ ನೆನಪು ಮಾಡಿಕೊಳ್ಳುವುದು ಅಗತ್ಯ.
ಪ್ರಭು ಬಯಲೊಡಲಿಗ, ಅವರದು ವ್ಯೋಮಕಾಯ. ಅನುಪಮ ಸುಜ್ಞಾನಿ. ಅವರು ಯಾರ ಹಿಡಿತ, ಹೊಡೆತಕ್ಕೂ ಸಿಲುಕುವವರಲ್ಲ. ಇದಕ್ಕೆ ಗೋರಕ್ಷನ ಪ್ರಸಂಗವನ್ನೇ ಗಮನಿಸಬಹುದು. ಗೋರಕ್ಷನಿಗೆ ತನ್ನ ಶರೀರದ ಮೇಲೆ ಮೋಹ. ತಾನು ಯೋಗ ಸಾಧನೆಯ ಮೂಲಕ ಶರೀರವನ್ನು ಕಬ್ಬಿಣದಂತೆ ಮಾಡಿಕೊಂಡಿದ್ದೇನೆಂಬ ಭ್ರಮೆ. ತನ್ನಂತಹ ಸಾಧಕರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲವೆಂಬ ಅಹಂ. ಪ್ರಭು ಅನುಭಾವಿ ಎಂಬ ಸಂಗತಿ ತಿಳಿದು ನೀನೆಂಥ ಅನುಭಾವಿ? ನಾನೇ ನಿಜ ಅನುಭಾವಿ ಎಂದು ಬೀಗುವನು. ಬೇಕಾದರೆ ಕತ್ತಿಯಿಂದ ನನ್ನ ಶರೀರಕ್ಕೆ ಹೊಡೆ, ಆಗ ನಾನೆಂಥ ಸಾಧಕ, ಅನುಭಾವಿ ಎಂದು ವೇದ್ಯವಾಗುವುದೆಂದು ಅಲ್ಲಮನಿಗೆ ಸವಾಲು ಹಾಕುವನು. ಅಲ್ಲಮ ಕತ್ತಿಯಿಂದ ಅವನ ಶರೀರಕ್ಕೆ ಏಟು ಹಾಕಿದರೆ ಠಣ್, ಠಣ್ ಎಂದು ಕತ್ತಿ ಪುಟಿಯುವುದೇ ಹೊರತು ಅವನ ಶರೀರಕ್ಕೆ ಕಿಂಚಿತ್ ಗಾಯವೂ ಆಗುವುದಿಲ್ಲ. ಅದನ್ನು ನೋಡಿದಾಗ ಗೋರಕ್ಷನದು ಅದ್ಭುತ ಸಾಧನೆ ಎಂದು ಯಾರಾದರೂ ಹೇಳಬಹುದು. ಪ್ರಭು ಅಷ್ಟಕ್ಕೆ ಸುಮ್ಮನಾಗದೆ ಈಗ ಅದೇ ಕತ್ತಿಯಿಂದ ನನ್ನ ಶರೀರಕ್ಕೆ ಹೊಡೆ ಎನ್ನುವರು. ಮೊದಲೇ ಪ್ರಭುವಿನದು ಕೃಷವಾದ ಕಾಯ. ಅದೊಂದು ರೀತಿಯ ಎಲವಿನ ಹಂದರ. ಕತ್ತಿಯಿಂದ ಹೊಡೆದರೆ ಒಂದೇ ಏಟಿಗೆ ಪ್ರಾಣಪಕ್ಷಿ ಹಾರಿಹೋಗಬಹುದೆಂಬ ಭಯ ಗೋರಕ್ಷನಿಗೆ. ನೀನೇನೂ ಭಯಪಡಬೇಡ ಹೊಡೆ ಎಂದು ಪ್ರಭು ಒತ್ತಾಯಿಸಿದಾಗ ಬೇರೆ ದಾರಿ ಕಾಣದೆ ಕತ್ತಿಯಿಂದ ಅಲ್ಲಮನ ಶರೀರಕ್ಕೆ ಏಟು ಕೊಡುವನು. ಕತ್ತಿ ಗಾಳಿಯಲ್ಲಿ ತೇಲಿದಂತಾಗುವುದು. ಅದರಿಂದ ಅಲ್ಲಮನ ಶರೀರಕ್ಕೆ ಪೆಟ್ಟೇ ಬೀಳುವುದಿಲ್ಲ. ಅದಕ್ಕಾಗಿ ಪ್ರಭುದೇವರನ್ನು ಬಯಲೊಡಲಿಗ, ವ್ಯೋಮಮೂರುತಿ ಎನ್ನುವುದು. ಆಗ ಗೋರಕ್ಷನಿಗೆ ಹೇಳಿದಂತಿರುವ ಪ್ರಭುವಿನ ದೀರ್ಘ ವಚನ ಕೆಳಗಿನಂತಿದೆ.
ಯೋಗ ಶಿವಯೋಗಗಳ ಹೊಲಬನರಿಯದೆ
ಯೋಗಿಗಳು ಶಿವಯೋಗಿಗಳು ಎಂದರೆ,
ಶೀಳ್ನಾಯಿ ಸಿಂಹನಾಗಬಲ್ಲುದೆ?
ಯೋಗದ ಅಷ್ಟಾಂಗವನು, ಶಿವಯೋಗದ ಷಟ್‍ಸ್ಥಲವನು
ಶಿವಲಿಂಗದಲ್ಲಿ ಹುರಿಗೊಳಿಸಿದಲ್ಲದೆ
ಯೋಗ ಶಿವಯೋಗಗಳ ಹೊಲಬಿನ ನಿಲುಕಡೆಯು ನಿಲುಕದು
ಅದೆಂತೆಂದೊಡೆ:-
ಯಮ ನಿಯಮಗಳ ಗುಣಧರ್ಮಗಳನರಿತಾಚರಿಪನೆ ಭಕ್ತ
……
ಶಿವಸಿದ್ಧರಾಮ, ನಿಜಗುಣಶಿವಯೋಗಿಗಳು ಕೇಳಾ ಗೋರಕ್ಷಯ್ಯ.
ಮತ್ತೊಂದು ಪ್ರಸಂಗ: ಬಂದವರೆಲ್ಲರ ಹಸಿವನ್ನು ಹಿಂಗಿಸುವೆನೆಂಬ ಸಾತ್ವಿಕ ಗರ್ವ ಬಸವಣ್ಣನವರಿಗೆ ಬಂದಿರಬೇಕು. ವಿಚಿತ್ರ ವೇಷಧಾರಿ ಪ್ರಭು ಮಹಾಮನೆಯಲ್ಲಿ ಪ್ರಸಾದಕ್ಕೆ ಕೂರುವರು. ಬಾಣಸಿಗರು ಮಾಡಿದ ಅಡುಗೆಯನ್ನೆಲ್ಲ ನೀಡಿದರೂ ಅವರ ಹಸಿವೆ ಹಿಂಗದು. ಅದೆಷ್ಟೋ ಜನರು ಸ್ವೀಕರಿಸಬೇಕಾದ ಪ್ರಸಾದವನ್ನು ಪ್ರಭುದೇವರೊಬ್ಬರೇ ಸ್ವೀಕರಿಸಿದ್ದಾರೆ. ಇನ್ನೂ ಬೇಕು, ಇನ್ನೂ ಬೇಕು ಎನ್ನುವರು. ಆದರೆ ಮಾಡಿದ ಅಡುಗೆಯೆಲ್ಲ ಮುಗಿದಿದೆ. ಈ ರಹಸ್ಯವನ್ನರಿತ ಚೆನ್ನಬಸವಣ್ಣನವರು ಬಸವಣ್ಣನವರಿಗೆ ಹೇಳುತ್ತಾರೆ: ಬಂದವರು ಸಾಮಾನ್ಯ ಜಂಗಮರಲ್ಲ. ಅವರು ನಮ್ಮ ಗರ್ವ ಇಳಿಸಲು ಬಂದ ಶಿವನೇ ಇರಬೇಕು. ಅವರನ್ನು ಪದಾರ್ಥದಿಂದ ತೃಪ್ತಿಪಡಿಸಲು ಸಾಧ್ಯವಿಲ್ಲ. ಪದಗಳಿಂದ ಮಾತ್ರ ತೃಪ್ತಿಪಡಿಸಬಹುದು. ಆದುದರಿಂದ ನೀನೇ ಪ್ರಸಾದವಾಗಿ ಅರ್ಪಿಸಿಕೊ ಎನ್ನುವ ಸೂಚನೆ ನೀಡುವರು. ಅದರಂತೆ ಬಸವಣ್ಣನವರು ತಾವೇ ಪ್ರಸಾದವೆಂದು ಅರ್ಪಿಸಿಕೊಳ್ಳಲು ಪ್ರಭು ತೃಪ್ತಿಯಿಂದ ತೇಗುವರು. ಆಗ ಅಲ್ಲಿದ್ದ ಶರಣರು ಪ್ರಸಾದ ಸ್ವೀಕರಿಸದಿದ್ದರೂ ಹೊಟ್ಟೆತುಂಬಿದವರಂತೆ ತೇಗಿದರಂತೆ. ಇದಕ್ಕೆ ಸಾಕ್ಷಿ ನುಡಿಯುವಂತಿದೆ ಬಸವಣ್ಣನವರ ಮತ್ತೊಂದು ವಚನ:
ತೊರೆಯುದಕವ ಕೆರೆಯುಂಡು ತೃಪ್ತವಾಗಲು
ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ,
ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ.
ಬಸುರವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ,
ಸಚರಾಚರವೆಲ್ಲವು ತೃಪ್ತಿಯಾದವು ನೋಡಾ,
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ
ನಮೋ ನಮೋ ಎಂಬೆನು.
ಈ ಎರಡು ಘಟನೆಗಳ ನೆಲೆಯಲ್ಲಿ ಆರಂಭದ ವಚನವನ್ನು ವಿಶ್ಲೇಷಣೆ ಮಾಡಬೇಕೆನ್ನಿಸುವುದು. ಶರಣರ ಸಿಂಹಾಸನದ ಪರಿಯೇ ಬೇರೆ. ಅವರು ಬಾಹ್ಯ ಸಿಂಹಾಸನವನ್ನೇ ಒಪ್ಪದವರು. ಹಾಗಾಗಿ `ತೋರಲಿಲ್ಲದ ಸಿಂಹಾಸನ’ ಎನ್ನುವ ಪದ ಬಳಸಿದ್ದಾರೆ. ಅಂಥ ಸಿಂಹಾಸನದ ಮೇಲೆ `ಹೇಳಬಾರದ ಘನವು ಬಂದೆರಗಿದಡೆ’ ಎಂದರೆ ಪ್ರಭುದೇವರು ಆ ಸಿಂಹಾಸನದ ಮೇಲೆ ತಾವಾಗಿ ಬಂದು ಕುಳಿತಿದ್ದಾರೆ. ಕುಳಿತಿದ್ದಾರೆ ಎನ್ನುವುದಕ್ಕಿಂತ ಆವರಿಸಿಕೊಂಡಿದ್ದಾರೆ. ಅವರ ಗುಣ ವಿಶೇಷಣ ಗಮನಿಸಿ. `ಹೇಳಬಾರದ ಘನ’. ಅಂದರೆ ಪ್ರಭುದೇವರ ವ್ಯಕ್ತಿತ್ವವೇ ಅಂತಹ ಘನವಾದುದು. ಸಿಂಹಾಸನ ಲೌಕಿಕವಾದುದಲ್ಲ. ಪಾರಮಾರ್ಥಿಕವಾದುದು. ಅದೊಂದು ರೀತಿಯ ಬಯಲು. ಆ ಬಯಲಿಗೆ ಬಂದೆರಗುವವರು ಸಹ ಬಯಲೊಡಲಿಗರೇ ಆಗಿರಬೇಕು. ಅಂತಹ ಬಯಲೊಡಲಿಗರಾಗಿದ್ದವರು ಪ್ರಭು. ಅನುಭಾವದ ದೃಷ್ಟಿಯಿಂದ ಇದನ್ನು ಗಮನಿಸಬೇಕು. ಪ್ರಭು ಅನುಭಾವಮೂರ್ತಿ. ಅವರು ಶೂನ್ಯಪೀಠದ ಮೇಲೆ ಪವಡಿಸುತ್ತಲೇ ಸಾಕ್ಷಾತ್ ಶಿವನಿಗೇ ಬೆರಗಾಗುವುದು. ಶಿವ ತನ್ನ ಪವಾಡವನ್ನು ಭಕ್ತರಿಗೆ ತೋರಿ ಮೆರೆಯುವವ. ಈಗ ಅವನ ಪವಾಡ ಮೆರೆಯಲು ಅವಕಾಶವೇ ಇಲ್ಲವಾಯಿತು. ಹಾಗಾಗಿ ಈ ವ್ಯಕ್ತಿರೂಪದ ಶಕ್ತಿ ನನಗಿಂತ ಶ್ರೇಷ್ಠ ಎಂದು ತನ್ನ ಪೀಠವನ್ನು ಬಿಟ್ಟು ಎದ್ದು ಹೋದನು ಎನ್ನುವುದು ಆಶ್ಚರ್ಯದ ಸಂಗತಿಯೇನಲ್ಲ. ಏಕೆಂದರೆ ಶಿವನಿಗಿಂತಲೂ ಶಿವಶರಣರೇ ಶ್ರೇಷ್ಠರು.
ಶಿವನಿಗೆ ತಾನೇ ನೀಡುವವ, ಮಾಡುವವ ಎನ್ನುವ ಅಹಂಭಾವ. ಪ್ರಭುವಿನ ಪ್ರಭಾವಳಿಯನ್ನು ಕಂಡ ಶಿವನಿಗೆ ತಾನು ಏನೆಲ್ಲ ನೀಡುವವ, ಮಾಡುವವ ಎನ್ನುವ ಭಾವವೇ ಮರೆಯಾಗುವುದು. ಇದನ್ನು ವರ್ಣಿಸುವುದಾದರೂ ಎಂತು ಎನ್ನುವ ಬೆರಗು ಶಿವನಿಗೆ. ನಿಯಮಾತೀತನಾದ ಪ್ರಭುವಿನ ಚರಿತ್ರವನ್ನು ಹೇಳಲು ಪದಗಳೇ ಶಿವನಲ್ಲಿಲ್ಲ. ಅಲ್ಲಮನ ನಿಗೂಢ ವ್ಯಕ್ತಿತ್ವದ ಉಪಮೆಯನ್ನು ಯಾರೊಂದಿಗೆ ಮಾಡುವುದು? ಅದೊಂದು ವಿಸ್ಮಯ, ಬೆರಗು. ಹಾಗಾಗಿ ಅಲ್ಲಮನ ತೃಪ್ತಿಯ ವಿಧಾನ ಬಲ್ಲಡೆ ನೀನೇ ಹೇಳು ಚೆನ್ನಬಸವಣ್ಣ ಎಂದು ಬಸವಣ್ಣನವರು ಕೇಳಿದಂತಿದೆ. ಇದು ಒಂದು ಮುಖವಾದರೆ ಈ ವಚನಕ್ಕೆ ಇನ್ನೊಂದು ಮುಖವೂ ಇದ್ದಂತಿದೆ. ಶರಣರ ಅನುಭಾವಕ್ಕೆ ಆಧಾರ ಇಷ್ಟಲಿಂಗದ ಆರಾಧನೆ. `ಶರಣಸತಿ ಲಿಂಗಪತಿ’ ಎನ್ನುವ ಭಾವ. ಶರಣನಿಗೆ ಅವನ ಅಂಗೈಯೇ ಸಿಂಹಾಸನ. ಅದರ ಮೇಲೆ ಇಟ್ಟು ಪೂಜೆ ಮಾಡುವ ಇಷ್ಟಲಿಂಗವೇ ಹೇಳಬಾರದ ಘನ. ಅದರಿಂದ ಸ್ಥಾವರ ಪೂಜೆಗೆ ಅವಕಾಶವಿಲ್ಲವಾಯಿತು. ಲಿಂಗಯ್ಯನಿಗೆ ಸ್ಥಾವರ ದೇವಾಲಯಗಳಲ್ಲಿಯಂತೆ ಎಡೆ ಮಾಡುವ, ನೀಡುವ ಯಾವ ಕ್ರಿಯೆಗಳೂ ಆಗತ್ಯವಿಲ್ಲ. ಲಿಂಗಯ್ಯ ನಿತ್ಯ ತೃಪ್ತ. ಅಂತಹ ಲಿಂಗಯ್ಯನ ಪೂಜೆ ಅವರ್ಣನೀಯ ಅನುಭಾವಕ್ಕೆ ಎಡೆಮಾಡಿಕೊಡುವುದು. ಇದೇ ಅನಿಯಮ ಚರಿತ್ರ. ವಿಸ್ಮಯ. ಇದನ್ನು ಉಪಮಿಸಲು ಅಸಾಧ್ಯ. ಇಂಥ ಅನುಪಮ ಲಿಂಗಯ್ಯನ ತೃಪ್ತಿಯ ಪರಿ ಅರಿತಿದ್ದರೆ ಹೇಳು ಎಂದು ಚೆನ್ನಬಸವಣ್ಣನವರಲ್ಲಿ ಬಸವಣ್ಣನವರು ನಿವೇದಿಕೊಂಡಂತಿದೆ. ಕಾರಣ ಲಿಂಗಾಯತ ಧರ್ಮದ ಮೂಲ ಸೂತ್ರಗಳಾದ ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲಗಳ ಅರಿವನ್ನು ಹೊಂದಿದವರು ಕಿರಿಯರಾದ ಚೆನ್ನಬಸವಣ್ಣನವರು ಎನ್ನುವ ನಂಬಿಕೆ. ಅರಿವಿಗೆ ಹಿರಿದು ಕಿರಿದು ಎನ್ನುವ ತಾರತಮ್ಯವಿಲ್ಲ ಎನ್ನುವ ಸಂದೇಶ ಶರಣರದು.
ಶರಣರ ಚಳುವಳಿ ವಿಶ್ವವಿನೂತನವಾದುದು. ಇಂಥ ಶರಣರ ಚಳುವಳಿ 12ನೆಯ ಶತಮಾನದ ನಂತರ ಸ್ಥಾವರಗೊಂಡಂತೆ ಭಾಸವಾಗುವುದು. 15ನೆಯ ಶತಮಾನದಲ್ಲಿ ಉದಯಿಸಿದ ಶೂನ್ಯಸಂಪಾದನಾಕಾರರು ಆ ಚಳುವಳಿಗೆ ಮತ್ತೆ ಜಂಗಮಸ್ವರೂಪವನ್ನು ಕೊಡುವಲ್ಲಿ ಸಫಲರಾದರೆಂದೇ ಭಾವಿಸಬೇಕು. ಆದರೆ ಇಂಥ ಮಹತ್ವದ ಚಳುವಳಿ ವಿಶ್ವವ್ಯಾಪಿ ಪ್ರಚಾರ ಪಡೆಯದಿದ್ದುದೇ ವಿಷಾದನೀಯ. ಇದಕ್ಕೆಲ್ಲ ಕನ್ನಡಿಗರ ನಿರ್ಲಕ್ಷ್ಯವೇ ಕಾರಣ. ಜಗತ್ತಿನಲ್ಲಿ ನಡೆದ ಚಳುವಳಿಗಳ ಚರಿತ್ರೆಯನ್ನು ಅವಲೋಕಿಸಿದರೆ ಬಹುತೇಕ ಚಳುವಳಿಗಳು ಏಕವ್ಯಕ್ತಿ ಕೇಂದ್ರಿತವಾದವು. ಆದರೆ ಶರಣ ಚಳುವಳಿ ಬಹುವ್ಯಕ್ತಿಗಳ ಕೇಂದ್ರಿತವಾದುದು. ಅದೊಂದು ಸಂಘಟಿತ ಹೋರಾಟ. ಅದರಲ್ಲೂ ಈ ಚಳುವಳಿಯ ಕೇಂದ್ರ ವ್ಯಕ್ತಿಗಳು ಕಾಯಕಶೀಲರು ಎನ್ನುವುದು ವಿಶೇಷ. ಅವರೇನೂ ವಿಶ್ವವಿದ್ಯಾಲಯದಲ್ಲಿ ಓದಿ ಪದವಿ ಪಡೆದವರಲ್ಲ. ಬದುಕಿನ ಅನುಭವವೇ ಅವರ ಪದವಿ. ಅನುಭವಮಂಟಪವೇ ಅವರ ವಿಶ್ವವಿದ್ಯಾಲಯ. ಆ ವಿಶ್ವವಿದ್ಯಾಲಯದಲ್ಲಿ ಶರಣ ಶರಣೆಯರು ಪಡೆದದ್ದು ಲೌಕಿಕ ಪದವಿಗಳನ್ನಲ್ಲ. ಅಲೌಕಿಕ ಅನುಭಾವದ ಪದವಿಯನ್ನು. ಜನರಿಗೆ ಇಂದು ಬೇಕಾಗಿರುವುದು ವಿಶ್ವವಿದ್ಯಾಲಯದ ಪದವಿಗಳಿಗಿಂತ ಅನುಭವಮಂಟಪದ ಅಲೌಕಿಕ ಅನುಭಾವದ ಪರಮಪದವಿ. ಇಂಥ ಪದವಿಗಳಿಂದ ಮಾತ್ರ ವ್ಯಕ್ತಿ ಕಲ್ಯಾಣ, ಲೋಕಕಲ್ಯಾಣ ಸಾಧ್ಯ.
ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ.
ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!