ತುದಿಗಳೆರಡು ಇಲ್ಲವಾದಾಗ…
ಭೂಮಿ- ಆಕಾಶದ ದೂರ ಅಳಿದಾಗ
ಭುವಿಯ ಸೆಳೆತವೂ ಇಲ್ಲ
ಆಗಸದ ಎಳೆತವೂ ಇಲ್ಲ.
ಹಗಲು- ರಾತ್ರಿಗಳ ಭ್ರಮಣ ಸರಿದಾಗ
ಬೆಳಗಿನ ಬಯಕೆಯೂ ಇಲ್ಲ
ಕತ್ತಲೆಯ ಭಯವೂ ಇಲ್ಲ.
ಧರ್ಮ- ಅಧರ್ಮಗಳ ವಾದಗಳು ಸೋತಾಗ
ಧರ್ಮಾಂಧತೆಯೂ ಇಲ್ಲ
ಅಧರ್ಮದ ಜಂಜಡವೂ ಇಲ್ಲ.
ಪಾಪ- ಪುಣ್ಯಗಳ ಗುಟ್ಟು ಬಿಚ್ಚಿದಾಗ
ನರಕ ಭೀತಿಯೂ ಇಲ್ಲ
ಸ್ವರ್ಗದ ಆಸೆಯೂ ಇಲ್ಲ.
ದ್ವೈತ- ಅದ್ವೈತಗಳ ಮೇಲಾಟ ನಿಂತಾಗ
ಎರಡೆಂಬ ಭಿನ್ನತೆ ಇಲ್ಲ
ಬ್ರಹ್ಮ ನಾನೆಂಬ ಧಾಷ್ಟ್ಯವೂ ಇಲ್ಲ.
ಸಾಕಾರ- ನಿರಾಕಾರಗಳ ಗೊಂದಲ ಬಿಟ್ಟಾಗ
ಮೂರ್ತಿಗಳ ಹಂಗೂ ಇಲ್ಲ
ಕಾಣದುದರ ಕಲ್ಪನೆಯೂ ಇಲ್ಲ.
ರೂಪ- ವಿರೂಪಗಳ ದಿಟ್ಟಿಸಿ ಕಂಡಾಗ
ಸೌಂದರ್ಯದ ಬಣ್ಣನೆಯೂ ಇಲ್ಲ
ಕುರೂಪದ ಹೇವರಿಕೆಯೂ ಇಲ್ಲ.
ಸೋಲು- ಗೆಲುವುಗಳ ಒಳಹೊಕ್ಕು ಬಂದಾಗ
ಬೀಳುವ ಭಯವೂ ಇಲ್ಲ
ಬೀಗುವ ಭ್ರಮೆಯೂ ಇಲ್ಲ.
ಸುಖ- ದುಃಖಗಳ ಸುಳಿಯ ತೆಗೆದಾಗ
ಹಿತದ ಮೈಮರೆವಿಕೆ ಇಲ್ಲ
ತಲ್ಲಣದ ದುಗುಡವೂ ಇಲ್ಲ.
ಜ್ಞಾನ- ಅಜ್ಞಾನದ ಜಾಡ ತಿಳಿದಾಗ
ನಾ ಬಲ್ಲೆನೆಂಬ ಕೋಡೂ ಇಲ್ಲ
ಅರಿಯೆನೆಂಬ ಅಳುಕೂ ಇಲ್ಲ.
ಶ್ರೇಷ್ಠ- ಕನಿಷ್ಠತೆಯ ಹುಸಿಯನರಿತಾಗ
ಹಿರಿದೆಂಬ ಹೊಗಳಿಕೆ ಇಲ್ಲ
ಕಿರಿದೆಂಬ ತಾತ್ಸಾರವಿಲ್ಲ.
ಇದೆ- ಇಲ್ಲಗಳ ಹೊಯ್ದಾಟ ಮರೆಯಾದಾಗ
ಇರುವುದರ ಗುಂಗೂ ಇಲ್ಲ
ಇಲ್ಲದುದರ ಗುಲ್ಲೂ ಇಲ್ಲ.
ಬೇಕು- ಬೇಡಗಳ ಆಯ್ಕೆಗಳು ಸರಿದಾಗ
ಇನ್ನೇನಿದೆ ಹಾತೊರೆವುದಕೆ?
ಬೇಡೆಂದು ಬೇಸರಿಸುವುದಕೆ?
ತಾನು- ಎದಿರು ಎನುವ ಮಾಯೆ ಹರಿದಾಗ
ನಾನೆನ್ನುವ ಅಹಮಿಕೆ ಎಲ್ಲಿದೆ?
ನೀನೆನುವ ಬೇಧವಾದರೂ ಎಲ್ಲಿ?
Comments 3
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Mar 11, 2023ನಿಜ..ಎರಡರ ಹಂಗು ತೊರೆದರೆ ಏನೂ ಉಳಿಯದು.ಸರಳವಾಗಿ ಹೇಳಿರುವ ಇರಿ.
ಸುನಂದಾ ರಾಚಣ್ಣ, ದಾವಣಗೆರೆ
Mar 12, 2023ತುದಿಗಳೆರಡು ಇಲ್ಲವಾದಾಗ ಏನು ಇವೆ, ಏನೂ ಇಲ್ಲ ಎಂದಾಗ, ಇದು ಭ್ರಮೆಯೋ, ಕಲ್ಪನೆಯೋ, ನಿಜವೋ ಸುಳ್ಳೋ ತಿಳಿಯದೇ ತಲೆಕೆರೆದುಕೊಂಡಾಗ ಸಿಕ್ಕಿದ್ದು ಬಯಲು, ಬರೀ ಬಯಲು, ಅಲ್ಲೇನು ಹುಡುಕಲಿ? ಆದಿ, ಅಂತ್ಯ ಎರಡೂ ಇಲ್ಲ, ಬದುಕು ಸಾಗುತಿದೆ, ಜೀವನ ಎಂಥ ವಿಸ್ಮಯ ಅಲ್ಲವೇ?
ಅಂಬಾರಾಯ ಬಿರಾದಾರ
Mar 14, 2023ತುದಿ ಮೊದಲಿಲ್ಲದ ಘನ ಬಯಲು
👌👍👌👍