ಗುಟುಕು ಆಸೆ…
ಕಣ್ಣ
ಮುಂದಣ ಬೆಳಕು ಹಿಂದಣ ನೆರಳು
ಕಂಡೂ ಕಾಣವು
ಈ
ಕಣ್ಣಿಗೆ ನಾಚಿಕೆಯೇ ಸದ್ದು
ಕಾಣಲು ಹವಣಿಸುವುದು
ಸದ್ದು ಕಾಣುವುದೇ..ಕೇಳಿಸಿಕೋ
ಗಗನಕ್ಕೆ ಬಯಲುಂಟೇ
ಬಯಲಿಗೆ ಗಗನ ಉಂಟೇ
ರಗುತದ ನೀರೆಲ್ಲವ ಹಿಂಡಿ ಹಿಂಡಿ
ತೆಗೆದಿದೆ ಈ ಬಿಸಿಲು
ಒಣಗಲು ಏನುಂಟು
ಮೇಲೆ ಕೆಳಗೆ ಎಂಬುದು
ನನ್ನ ಕಣ್ಣ ಗೆರೆ
ಆದಿಗೂ ಮುನ್ನ ಏನಿತ್ತು
ಅಂತ್ಯದ ಆಚೆ ಏನಿದೆ
ಇರುವೆ ಅಳೆಯಲು ಮಾನ ಆನೆ
ಮರಳ ಕಣದಷ್ಟಿರುವ ಮನಕೆ
ಬಂಡೆಯಷ್ಟು ಬಯಕೆ
ಉದ್ದಕ್ಕೂ ಇಚ್ಛೆ ನೆರಳು
ಹಸಿ ರಕ್ತ ಒಣಗಿದೆ
ರಾಗವಿಲ್ಲ ದ್ವೇಷ ಇಲ್ಲ
ಕಳ್ಳಗತ್ತಲು ಸುಳ್ಳು ಹುಡುಕುವುದು
ಈ
ಆಸೆ ಒಂದು ಗುಟುಕು
ಒಂದೊಂದೇ ಗುಟುಕು ಈ ಆಸೆ
ಬಾಯಾರದೆ ಕುಡಿದು ಬಿಟ್ಟ ನೀರು
ಈ ಕೆರೆ ನುಂಗುತಿದೆ
ಖಾಲೀ ಇರುವ ಕನ್ನಡಿ
ಎದುರು ನಿಂತು ನಾನು ತುಂಬುತಿರುವೆ.
Comments 2
Padmalaya
May 9, 2024ಜೋತಿಲಿಂಗಪ್ಪನವರ ಕಾವ್ಯದ ಓದು ಸಂಕಟದ ಸಂಗತಿ.ಬೌದ್ಧ ಮೀಮಾಂಸೆ ಒಂದು ಕಡೆ ಹೇಳುತ್ತದೆ….ನಿಸರ್ಗ ಧರ್ಮ ಭಾಷೆ ಮತ್ತು ಮಾತಿಗೆ ಸಿಗುವಂತಹದ್ದಲ್ಲ.ಆದರೆ ಭಾಷೆ ಮತ್ತು ಮಾತಿನ ಹೊರತು ಧರ್ಮ ಇರಲಾರದು. ಈ ನೆಲೆ ಯಿಂದ ಅವರ ಕಾವ್ಯವನ್ನ ಪ್ರವೇಶಿಸಿದರೆ,ಅವರ ಐಡಿಯಾಲಜಿ ಗೊತ್ತಾಗಿ ಬಿಡುತ್ತದೆ.ಐಡಿಯಾಲಜಿ ಇಲ್ಲದೆ ಕಾವ್ಯ ಅಸಾಧ್ಯ.
ವರದರಾಜ್, ಬೆಂಗಳೂರು
May 9, 2024ಗುಟುಕು ಆಸೆಗಳೇ ಜೀವನವನ್ನು ಸ್ವಾಹಾ ಮಾಡಿಬಿಡುತ್ತವೆ.