ಎಲ್ಲಿದ್ದೇನೆ ನಾನು?
ನರನಾಡಿಗಳಲ್ಲೋ
ರಕ್ತ ಮಾಂಸಗಳಲ್ಲೋ
ಮಿದುಳಿನಲೋ ಹೃದಯದಲೋ,
ಚರ್ಮದ ಹೊದಿಕೆಯಲೋ
ಎಲ್ಲಿದ್ದೇನೆ ನಾನು?
ಬಾಡುವ ದೇಹದಲೋ
ಬದಲಾಗೋ ವಿಚಾರಗಳಲೋ
ಬೆಂಬಿಡದ ಭಾವಗಳಲ್ಲೋ
ಬೇರೂರಿದ ನಂಬಿಕೆಗಳಲ್ಲೋ
ಎಲ್ಲಿದ್ದೇನೆ ನಾನು?
ಈ ಹೊತ್ತು ಎಂಬುದೇ
ಕೈಗೆಟುಕದಿರುವಾಗ
ಸರಿವ ಕ್ಷಣಗಳಲ್ಲೋ
ಬರುವ ಗಳಿಗೆಗಳಲ್ಲೋ
ಎಲ್ಲಿದ್ದೇನೆ ನಾನು?
ಕಟ್ಟಿದ್ದು ಮರೆಯುತ್ತಾ
ಕೆಡವಿದ್ದು ತುಳಿಯುತ್ತಾ
ಕಟ್ಟುತ್ತಾ ಕೆಡವುತ್ತಾ
ಆಡುವಾಟವೇ ಇಲ್ಲವಾಗಿರಲು
ಎಲ್ಲಿದ್ದೇನೆ ನಾನು?
ಎಲ್ಲಿಂದ ಬಂದದ್ದು
ಎಲ್ಲಿಗೆ ಹೊರಟದ್ದು
ಯಾರು ಯಾರಿಗೆ ಸಾಕ್ಷಿ
ನಿಲಲೊಲ್ಲದ ನಡಿಗೆಯಲಿ
ಎಲ್ಲಿದ್ದೇನೆ ನಾನು?
ಹೆತ್ತವರು ಹೇಳಲಿಲ್ಲ
ನೆರೆದವರು ತಿಳಿಸಲಿಲ್ಲ
ಪುಸ್ತಕದಿ ಬರೆದಿಲ್ಲ
ಪಾಠದಲಿ ಓದಲಿಲ್ಲ
ಎಲ್ಲಿದ್ದೇನೆ ನಾನು?
ಕಣ್ತೆರೆದು ಹುಡುಕಿದರೂ
ಕಣ್ಮುಚ್ಚಿ ಕುಳಿತರೂ
ಹಗಲಲ್ಲಿ ಕಾಣಲಿಲ್ಲ
ರಾತ್ರಿಯಲಿ ಜೊತೆಗಿಲ್ಲ
ಎಲ್ಲಿದ್ದೇನೆ ನಾನು?
ಭವದೊಳಗೆ ಮುಳುಗಿ
ಕದಳಿಯಲಿ ಕಳೆದು
ಗುರು ಕೃಪೆಗೆ ಬಾಯಾರಿ
ಬಯಲ ಬಡಬಡಿಸುವ ಜೀವ
ಎಲ್ಲಿರುವೆ ನೀನು?
Comments 4
ಸುನಂದಾ ರಾಚಣ್ಣ, ದಾವಣಗೆರೆ
Feb 11, 2023ಮನದಾಳದ ಭಾವಗಳನ್ನೆಲ್ಲಾ ದಾಟಿ ಗುರಿಯತ್ತ ಸಾಗಿರುವೆ… ಸರಿವ ಕ್ಷಣಗಳ, ಬರುವ ಗಳಿಗೆಗಳ ಕಟ್ಟುತ್ತಾ ಕೆಡವುತ್ತಾ ಮುಂದೆ ಸಾಗಿ, ಗುರು ಪಾದಕ್ಕೆ ಅರ್ಪಿತಳಾಗಿರುವೆ… ಎಲ್ಲಿಂದ ಬಂದು ಅದೆಲ್ಲಿಗೆ ಹೋಗುವ ಹಂಬಲ? ಬಯಲಾಗುವ ತುಡಿತ… ಹೇಗೆ ಬರೆದೆ? ಒಂದೊಂದು ಹಂತ ದಾಟಿ ಗುರುಗೆ, ಗುರಿಗೆ ಹತ್ತಿರಾಗುತಿರುವೆ… ಈ ಪಯಣ ನನ್ನ ಕಲ್ಪನೆಗೂ ಮೀರಿದ್ದು ಮಗಳೇ!!!
✍🏼 ಸುನಂದಾ ಕಪ್ಪರದ
VEERESH
Feb 11, 2023ಅದ್ಭುತ ಬರಹ ಮೇಡಂ👌🏻👌🏻👌🏻
Venkatesh
Feb 11, 2023🙏
ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
Feb 13, 2023“ಪ್ರತಿ ಪದವೂ ನಮ್ಮೊಳಗಿನ. ನಮ್ಮನ್ನು ಹುಡುಕುವಂತೆ ಮಾಡುತ್ತದೆ ,ಎಲ್ಲಿದ್ದೇನೆ ನಾನು ಕವನ. 👌👌👍👍