ಈ ಕ್ಷಣದ ಸತ್ಯ
ಧಗಧಗಿಸಿ ಮೇಲೇರುತಿಹ
ಕೆನ್ನಾಲಿಗೆಯ ಈ ಬೆಂಕಿ
ಅಡಗಿತ್ತು ಎಲ್ಲಿ?
ಮರದ ಬೊಡ್ಡೆಯಲೋ?
ಒಣಗಿದ ಸೌದೆಯಲೋ,
ಮದ್ದಗೀರಿದ ಕಡ್ಡಿಯಲ್ಲೋ,
ಊದುತಿಹ ಗಾಳಿಯಲ್ಲೋ?
ಎಲ್ಲಿಂದ ಬಂತು
ಕಣ್ಣ ಕೋರೈಸುವ ಈ ಬೆಳಕು,
ಚಕಮಕದ ಹೊಳಪು,
ಈ ಝಳದ ಧಗೆಯು?
ಆ ಬೊಡ್ಡೆ, ಆ ಒಣಗಿದೆಲೆ,
ಆ ಕಿಡಿಯ ಬೆಸುಗೆಯಲಿ
ಇತ್ತೇ ಇಂಥ ಮೋಹಕದ ಚಳಕ?
ಗಾಳಿಯಲಿ ಕೈ ಬೀಸಿ
ಬಾಚಿಕೊಳಬಹುದೇ ಶಾಖವನು
ಮುಂದಣ ಚಳಿಗೂ ಆದೀತೆಂದು?
ಗಾಜಿನ ಸೀಸೆಯೊಳಗೆ
ತುಂಬಿಕೊಳಬಹುದೇ ಬೆಳಕ
ನಾಳಿನಿರುಳಿಗೆ ಇರಲೆಂದು?
ನಿನ್ನೆಯ ಭೂತವನು
ಬೆನ್ನೇರಿಸಿಕೊಂಡ ಮನಕೆ
ಸದಾ ನಾಳೆಯದೇ ಚಿಂತೆ…
ಈ ಕ್ಷಣಕಾದರೋ
ಹಿಂದು-ಮುಂದುಗಳಿಲ್ಲ
ದಂದುಗದ ಹಂಗಿಲ್ಲ
ಇಲ್ಲೇ, ಈಗಲೇ
ಉರಿದುರಿದು ತೋರಿ,
ತೋರುತ್ತಲೇ ಮರೆಯಾಗಿ
ಕಣ್ಣ ಮುಂದಲೇ ಕರಗುತಿಹ
ಆ ಬೆಂಕಿಗೂ,
ನನ್ನೊಡಲ ಪ್ರಾಣಕ್ಕೂ
ಇಹುದೇ ಏನಾದರೂ ಅಂತರ?
Comments 1
Andanappa
Mar 23, 2022ಬೆಂಕಿಗೂ ಪ್ರಾಣಕ್ಕೂ ಮೂಲಸಂಬಂಧ ಯಾವುದು? ಇದೇ ನಿರಂತರ ಹುಡುಕುವಿಕೆ.