ಅಷ್ಟಾವರಣವೆಂಬ ಭಕ್ತಿ ಸಾಧನ
ಆವರಣವೆಂದರೆ ರಕ್ಷಾಕವಚ. ಅತ್ಯಂತ ಸೂಕ್ಷ್ಮವಾದ ಮತ್ತು ಅತಿ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿಡಲು ಮನೆಗಳಲ್ಲಿ, ಕಛೇರಿಗಳಲ್ಲಿ, ಬ್ಯಾಂಕು, ಇತ್ಯಾದಿ ಸ್ಥಳಗಳಲ್ಲಿ ಅನೇಕ ಪದರುಗಳುಳ್ಳ ವ್ಯವಸ್ಥೆಯನ್ನು ಮಾಡಿರುತ್ತಾರೆ. ಈ ವ್ಯವಸ್ಥೆ ರಕ್ಷಿಸಬೇಕಾದ ವಸ್ತುವನ್ನು ರಕ್ಷಿಸಿಯೇ ತೀರುತ್ತದೆಂಬ ಬಲವಾದ ನಂಬಿಕೆ ಅಲ್ಲಿ ಇರುತ್ತದೆ. ಹಾಗೆಯೇ ನಮ್ಮಲ್ಲಿ ಅಡಕವಾಗಿರುವ ಮತ್ತು ನಮ್ಮೆಲ್ಲಾ ಆಗುಹೋಗುಗಳಿಗೆ ಅತ್ಯಂತ ಪ್ರಮುಖವಾಗಿ ಕಾರಣೀಭೂತವಾಗಿರುವ ಮನಸ್ಸನ್ನು ಬಾಹ್ಯ ಅನಾರೋಗ್ಯಕರ ವಾತಾವರಣಗಳಿಂದ ಸದಾ ರಕ್ಷಿಸುವುದು, ಪೋಷಿಸುವುದು ನಮ್ಮ ಆದ್ಯ ಕರ್ತವ್ಯ. ಮನಸ್ಸಿನ ರಕ್ಷಣೆಗಾಗಿ ನಾವೂ ಹಲವಾರು ಸ್ತರಗಳ ರಕ್ಷಣಾ ವ್ಯವಸ್ಥೆಯನ್ನು ನಮ್ಮ ದೇಹೇಂದ್ರಿಯಗಳಲ್ಲಿ ಜೀವನಪೂರ್ತಿ ಅಳವಡಿಸಿಕೊಳ್ಳಬೇಕು. ಈ ಆವರಣಗಳ ಪ್ರಮುಖ ಕಾರ್ಯ ಮಗುವಿನಂಥಾ ಸ್ವಭಾವದ ಮನಸ್ಸನ್ನು ಹೊಯ್ದಾಡದಂತೆ, ನಿಶ್ಚಲವಾಗಿರುವಂತೆ, ಮೃದುವಾಗಿರುವಂತೆ ಕಾಪಿಡುವುದು. ಹನ್ನೆರಡನೇ ಶತಮಾನದ ಬಸವಾದಿ ಶರಣರು ಎಂಟು ಸ್ತರದ ಆವರಣವನ್ನು ಈ ಉದ್ದೇಶಕ್ಕಾಗಿ ತಾವು ಅಳವಡಿಸಿಕೊಂಡು ಜಗದ ಉದ್ಧಾರಕ್ಕಾಗಿ ಬೋಧಿಸಿದ್ದಾರೆ. ಇದಕ್ಕೆ ‘ಅಷ್ಟಾವರಣ’ವೆಂದು ಹೆಸರು.
ಧರ್ಮಪಿತ ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ (ಚರಲಿಂಗ) ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಮತ್ತು ಪ್ರಸಾದಗಳು ಇದ್ದವು. ಇವುಗಳನ್ನು ಧಾರ್ಮಿಕ ಚಿನ್ಹೆಗಳಾಗಿ ಉಪಯೋಗಿಸುವ ಆಚರಣೆ ಬಹಳ ಹಿಂದಿನಿಂದಲೂ ನಡೆದು ಬಂದಿದೆ, ಬಹುತೇಕ ಈ ಚಿಹ್ನೆಗಳು ಬಾಹ್ಯ ಆಚರಣೆಗೆ ಸೀಮಿತವಾಗಿದ್ದವು. ಆದರೆ ಬಸವಣ್ಣನವರು ಈ ಚಿಹ್ನೆಗಳಿಗೆ ಸಂಪೂರ್ಣ ಭಿನ್ನ ಆಯಾಮವನ್ನು ಕೊಟ್ಟು ಸೂತ್ರ ರೂಪದಲ್ಲಿ ಜೋಡಿಸಿ ಅವುಗಳಿಗೆ ಅಷ್ಟಾವರಣವೆಂದು ಕರೆದು, ಇವುಗಳನ್ನು ಬಾಹ್ಯ ಆಡಂಬರಕ್ಕಾಗಿ/ ತೋರಿಕೆಗಾಗಿ ಬಳಸದೆ ಅಂತರಂಗದ ಅರಿವನ್ನು, ಆಚಾರವನ್ನು ಶುದ್ಧಗೊಳಿಸಲು ಮತ್ತು ಸ್ವಾನುಭಾವವನ್ನು ನೆಲೆಗೊಳಿಸಿಕೊಳ್ಳಲು ನೆರವಾಗಲಿಕ್ಕೆ ಅಷ್ಟಾವರಣಗಳ ಸೂತ್ರವನ್ನು ಬಳಸಿದರು. ಗುರು ಬಸವಣ್ಣನವರು ಚರಲಿಂಗದ ಸ್ಥಾನದಲ್ಲಿ ಇಷ್ಟಲಿಂಗವನ್ನು ಅಂಗದ ಮೇಲೆ ಸಾಹಿತ್ಯವ ಮಾಡಿದರು. ಅಷ್ಟಾವರಣಗಳನ್ನು ಸದಾ ಅಂಗದ ಮೇಲೆ ಹಿಂಗದೆ ಧರಿಸುವುದರಿಂದ ಆಚಾರ ಶುದ್ಧಿಗೊಂಡು, ಲೌಕಿಕ- ದೈಹಿಕ ವ್ಯಾಧಿಗಳು, ಮಾನಸಿಕ ಕ್ಲೇಷಗಳು ನಿವೃತ್ತಿಯಾಗಿ ಭಾವ ನಿಷ್ಪತ್ತಿಯೆಡೆಗೆ ಸಾಧಕನನ್ನು ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಹನ್ನೆರಡನೇ ಶತಮಾನದ ಅನೇಕ ಶರಣರು ಅಷ್ಟಾವರಣದ ಕುರಿತು ಏನು ಹೇಳಿದ್ದಾರೆ ಎಂದು ನೋಡುವ ಒಂದು ಪುಟ್ಟ ಪ್ರಯತ್ನವಿದು.
ಧರ್ಮಪಿತ ಬಸವಣ್ಣನವರು, “ದಶವಿಧಪಾದೋದಕವೆಸಗಿದ ಕ್ರಮವೆಂತೆಂದಡೆ; ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಗಣ ವ್ರತನೇಮ ಆಚಾರ ಶೀಲ ಸಂಬಂಧದೊಳಗು ಹೊರಗು ತ್ರಿವಿಧ ಸಂಪೂರ್ಣವಾದ ಕಾರಣ ನಿತ್ಯಪಾದೋದಕವೆನಿಸಿತ್ತು ಕೂಡಲಸಂಗಮದೇವಪ್ರಭುವೆ.” ಈ ವಚನದಲ್ಲಿ ಮಾನವ ಜೀವನದ ಪರಮ ಗುರಿಯಾದ ಬಯಲ ಸಾಧನೆಗೆ ಮೇಲೆ ತಿಳಿಸಿದ ಅಷ್ಟಾವರಣವೇ ಸಾಧನವೆಂದು ತಿಳಿಸಿದ್ದಾರೆ.
ಅಷ್ಟಾವರಣಗಳಾವುವೆಂದು ಶರಣ ಹೇಮಗಲ್ಲ ಹಂಪ ತಮ್ಮ ವಚನದಲ್ಲಿ ತಿಳಿಸಿದ್ದಾರೆ- “ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಪಾದೋದಕ ಪ್ರಸಾದವೆಂಬವು ಅಷ್ಟಾವರಣವು ಪರಶಿವನಿಂದುದಯವಾದವು. ಪರಶಿವನಿಂದುತ್ಪತ್ಯವಾದ ವಸ್ತುವ ಪರಶಿವನೆಂದು ಕಾಣ್ಬುದಲ್ಲದೆ ಅನ್ಯವೆಂದು ಕಂಡಿರಿಯಾದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ” ಎಂದು ಹೇಳುವ ಮೂಲಕ “ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ” ಗಳು ನಮ್ಮನ್ನು ಸದಾಕಾಲ ಹೊರಗಿನ ಮಾಯೆಯೆಂಬ ಶತೃಗಳಿಂದ ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಈ ಆವರಣಗಳು ಸಾಕ್ಷಾತ್ ಪರಶಿವನಿಂದಲೇ ಸೃಷ್ಟಿಸಲ್ಪಟ್ಟಿವೆಯಾದ್ದರಿಂದ ಅವುಗಳನ್ನು ಪರಶಿವನೆಂದೇ ಕಾಣಬೇಕೆಂದು ತಿಳಿಸುತ್ತಾರೆ, ಅವುಗಳ ಕುರಿತು ಕಿಂಚಿತ್ ತಾತ್ಸಾರ, ಉದಾಸೀನವೂ ಸಲ್ಲದು. ಅವುಗಳ ಉದಾಸೀನವೂ ಪರಶಿವನ ಉದಾಸೀನ ಎರಡೂ ಒಂದೇ ಆಗಿರುತ್ತದೆ.
ಶರಣ ಹೇಮಗಲ್ಲ ಹಂಪ ಮುಂದುವರಿದು ತಮ್ಮ ಇನ್ನೊಂದು ವಚನದಲ್ಲಿ “ಗುರುಕೃಪೆಯಿಲ್ಲದವನ ಕರ್ಮ ಹರಿಯದು. ಲಿಂಗ ಸೋಂಕದವನ ಅಂಗ ಚಿನ್ನವಡಿಯದು. ಜಂಗಮ ದರುಶನವಿಲ್ಲದವಂಗೆ ಮೋಕ್ಷಾರ್ಥಬಟ್ಟೆ ದೊರೆಯದು. ವಿಭೂತಿಯ ಧರಿಸದವಂಗೆ ದುರಿತಲಿಖಿತಂಗಳು ತೊಡೆಯವು. ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು. ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು. ಪಾದೋದಕವ ಕೊಳದವನ ಪರಿಭವಂಗಳು ಅಳಿಯವು. ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು. ಇಂತೀ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ದೇವನಲ್ಲ ಭಕ್ತನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.” ಎಂದು ಹೇಳುವ ಮೂಲಕ ಬಯಲ ಸಾಧಕನಿಗೆ ಅಷ್ಟಾವರಣಗಳು ಶಾಲೆಗೆ ಹೋಗುವ ಮಗುವಿಗೆ ಅಕ್ಷರಾಭ್ಯಾಸವಿದ್ದಂತೆ ಅತೀ ಅಗತ್ಯ ಎಂಬುದನ್ನು ಸಾರಿ ಹೇಳಿದ್ದಾರೆ.
ಶರಣ ಕಡಕೋಳ ಮಡಿವಾಳಪ್ಪನವರು ಅಷ್ಟಾವರಣಗಳನ್ನು ಬಹಳ ಸರಳವಾಗಿ ತಮ್ಮ ವಚನದಲ್ಲಿ ವಿವರಿಸಿದ್ದಾರೆ: “ಭೂಮಿ ಜಲ ಅಗ್ನಿ ಗಾಳಿ ಆಕಾಶ ಇವು ಮೊದಲಾದ ಪಂಚಕದಿಂದುದಿಸಿದುದೆ ಬ್ರಹ್ಮಾಂಡವೆನಿಸಿತ್ತು. ಅದರ ಸೂತ್ರವಿಡಿದು ಬಂದದ್ದೇ ಪಿಂಡಾಂಡವೆನಿಸಿತ್ತು. ರವಿ ಚಂದ್ರ ಆತ್ಮದಿ ಅಂಗವೆನಿಸಿತ್ತು. ಪಿಂಡಾಂಡದಿ ತೋರುವ ಕಾಯವೇ ಗುರುವಾಗಿ, ಪ್ರಾಣವೆ ಲಿಂಗವಾಗಿ, ಜ್ಞಾನವೆ ಜಂಗಮವಾಗಿ, ಮುಂದೆ ಕಾಯದೊಳು ಕಾಂಬ ಅರುವಿನ ಬೆಳಗೆ ವಿಭೂತಿ, ಅರುವಿನ ಕರಣವೇ ಪಾದೋದಕ, ಅರುವಿನ ಆನಂದವೇ ಪ್ರಸಾದ, ಅರುವಿನ ಕೃಪೆಯೇ ರುದ್ರಾಕ್ಷಿ, ಅರುವು ತಾನೇ ಆಗಿ ಮೆರೆದುದೇ ಮಂತ್ರ ಇಂತು ಪಿಂಡಾಂಡ ಪಂಚಕ ಅಷ್ಟತನು ಒಳಗೊಂಡು ಕಾಂಬುದೊಂದೀಪರಿಯ ಅಷ್ಟಾವರಣವಾದ ಶ್ರೇಷ್ಠ ಗುರುವೆ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.”
ಇಂಥಾ ಅಷ್ಟಾವರಣಗಳನ್ನು ಮಾನವನು ತನ್ನ ದೇಹದ ಅಂಗವೆಂದೇ ಭಾವಿಸಬೇಕೆನ್ನುತ್ತಾರೆ ನಿರಾಲಂಬ ಪ್ರಭುದೇವ ಶರಣರು “ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ.ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ.” ಬಯಲ ಪದವ ಬಯಸುವ ಭಕ್ತರು ಅಷ್ಟಾವರಣಗಳನ್ನು ತಮ್ಮ ದೇಹದ ಒಂದು ಅಂಗವೆಂದೂ ಪಂಚ ಆಚಾರಗಳಾದ ಲಿಂಗಾಚಾರ ಭೃತ್ಯಾಚಾರ ಗಣಾಚಾರ ಶಿವಾಚಾರ ಮತ್ತು ಸದಾಚಾರಗಳನ್ನು ತಮ್ಮ ಪ್ರಾಣವೆಂದೂ ಭಾವಿಸತಕ್ಕದ್ದು.
ಅಷ್ಟಾವರಣ ಧಾರಣಾ ಫಲ
ಅಷ್ಟಾವರಣಗಳನ್ನು ಬಿಡದೆ ಅಂಗವಿಸುವುದರ ಸತ್ಫಲಗಳನ್ನು ಚಿನ್ಮಯಜ್ಞಾನಿ ಷಟ್ಸ್ಥಲಬ್ರಹ್ಮಿ ಶರಣ ಚನ್ನಬಸವಣ್ಣನವರು ತಮ್ಮ ಈ ವಚನದಲ್ಲಿ ತಿಳಿಸಿದ್ದಾರೆ: “ವಿಷಯಾಭಿಲಾಷೆಯಲ್ಲಿ ವಿರಾಗವು ನೆಲೆಯಾಗಿ, ಅಷ್ಟಾವರಣದ ಆಚಾರವೆ ಅಂಗವಾದಡೆ; ಮರುಳುಗೊಳಿಪ ಮಾರನ ಮಾಟವು ದೂರವಾಗುವುದಯ್ಯಾ. ಅನಾಹತ ಶಬ್ದದ ಅನುಸಂಧಾನದಿಂದ, ಅವಸ್ಥಾತ್ರಯದಲ್ಲಿ ತೋರುವ ತನು ಮೂರರ ವಾಸನೆಯು ನಾಶವಾಗುವುದಯ್ಯಾ. ಇಷ್ಟಲಿಂಗದಲ್ಲಿಟ್ಟ ದೃಷ್ಟಿ, ಬಿಂದುವಿನ ಪರಿಪರಿಯ ಬಣ್ಣವ ನೋಡಿ ನೋಡಿ ದಣಿದು, ಶಿವಕಲಾರೂಪದಲ್ಲಿ ವ್ಯಾಪಿಸಿ, ಕಂಗಳ ಎವೆ ಮಾಟವಿಲ್ಲದೆ ಲಿಂಗಲಕ್ಷ್ಯವು ಕದಲಂತಿದ್ದಡೆ ಕಾಲನ ಕಾಟವು ತೊಲಗಿ ಹೋಗುವುದಯ್ಯಾ. ಇಂತೀ ಸಾಧನತ್ರಯವು ಸಾಧ್ಯವಾದ ಶರಣಂಗೆ ಕಾಲ, ಕಾಮ, ಪುರವೈರಿಯಾದ ನಮ್ಮ ಕೂಡಲಚೆನ್ನಸಂಗಯ್ಯನು ಮನ್ನಣೆಯ ಮುಕ್ತಿಯನೀವನು.” ನಾವು ಅಂಗದ ಮೇಲೆ ಸದಾ ಅಷ್ಟಾವರಣಗಳನ್ನು ಧರಿಸುವುದರಿಂದ ಮಾರ ಎಂಬ ರಾಕ್ಷಸನ (ಮಾಯೆ) ಅಟ್ಟಹಾಸ ನಮ್ಮಿಂದ ತಂತಾನೇ ದೂರವಾಗುವುದು, ಅನಾಹತ ನಾದದ ಅನುಸಂಧಾನದಿಂದ ಜಾಗ್ರ ಸ್ವಪ್ನ ಮತ್ತು ಸುಷುಪ್ತಿ ಎಂಬ ಮೂರು ಅವಸ್ಥೆಗಳಲ್ಲಿ ವ್ಯಾಪಿಸುವ ಸ್ಥೂಲ ಸೂಕ್ಷ್ಮ ಮತ್ತು ಕಾರಣ ತನುಗಳ ವಿಷಯವಾಸನೆಗಳು ಸಂಪೂರ್ಣ ನಾಶಹೊಂದುವವು. ಅಂಗದ ಮೇಲೆ ಇಷ್ಟಲಿಂಗ ಸಾಹಿತ್ಯ ಮಾಡಿದಲ್ಲಿ ಸರ್ವಭಯ, ಭ್ರಾಂತಿ ಮುಕ್ತನಾಗುವನು. ಆಷ್ಟಾವರಣ ಧಾರಣವು ಸಾಧಕನ ಅಂಗ-ಲಿಂಗ ಸಂಬಂಧಕ್ಕೆ ಕನ್ನಡಿ ಎನ್ನುವರು ಚನ್ನಬಸವಣ್ಣನವರು.
ಅಷ್ಟಾವರಣ ಧಾರಣಾ ಅಂಗಗಳು:
ಮಾನವನ ದೇಹವು ಎಂಟು ತನುಗಳ ಸಂಯುಕ್ತದಿಂದುಂಟಾದುದು ಎಂದು ಶರಣರು ತಿಳಿಸುತ್ತಾ, ಯಾವ ತನುವಿನಲ್ಲಿ ಯಾವ ಆವರಣವನ್ನು ಹೇಗೆ ಧರಿಸಬೇಕೆಂದು ಶರಣ ಗುರುಸಿದ್ಧದೇವರು ಈ ವಚನದಲ್ಲಿ ತಿಳಿಸಿದ್ದಾರೆ. ದೇಹವು ಸ್ಥೂಲ ಸೂಕ್ಷ್ಮ ಕಾರಣ ನಿರ್ಮಲ ಆನಂದ ಚಿದ್ರೂಪ ಚಿನ್ಮಯ ಹಾಗೂ ಸರ್ವಾಂಗವೆಂಬ ಎಂಟು ತನುಗಳ ಘಟಕ. ಇವುಗಳಲ್ಲಿ ಕ್ರಮವಾಗಿ ಸಾಧಕನ ಅರಿವೇ ಗುರುವಾಗಿ ಸ್ಥೂಲತನುವಿನಲ್ಲಿಯೂ, ಸುಜ್ಞಾನವೇ ಲಿಂಗವಾಗಿ ಸೂಕ್ಷ್ಮತನುವಿನಲ್ಲಿಯೂ, ಸ್ವಾನುಭಾವವೇ ಜಂಗಮವಾಗಿ ಕಾರಣತನುವಿನಲ್ಲಿಯೂ, ಕರುಣೆಯೇ ಪಾದೋದಕ ವೆನಿಸಿಹುದು. ನಿರ್ಮಲ ತನುವೆನಿಸಿಯೂ, ಕೃಪೆಯೇ ಪ್ರಸಾದವಾಗಿ ಆನಂದತನುವೆನಿಸಿಯೂ, ಚಿತ್ಪ್ರಕಾಶವೇ ಭಸಿತವಾಗಿಹುದೇ ಚಿದ್ರೂಪ ತನು, ಚಿತ್ಕಾಂತೆಯೇ ರುದ್ರಾಕ್ಷಿಯೆನಿಸಿಹುದೇ ಚಿನ್ಮಯತನುವೆಂದೂ, ಈ ತೆರನಾಗಿ ಅಖಂಡ ಸ್ವರೂಪನಾಗಿ ಪರಶಿವ ತತ್ವವು ಆಷ್ಟಾಂಗಗಳಲ್ಲಿಯೂ ನೆಲೆಸಿರುವುದಾಗಿ ಶರಣನ ಕಾಯವೇ ಕೈಲಾಸವಾಗುವ ಅವಿರಳ ಅನುಭಾವವನ್ನು ಶರಣ ಪಡೆಯುತ್ತಾನೆ.
“ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ ಅಷ್ಟಾವರಣಸ್ವರೂಪಿನದಿಂದ ನೆರದಿರ್ಪುದು ನೋಡ. ಅದರ ವಿಚಾರವೆಂತೆಂದಡೆ:
ನಿನ್ನ ಸ್ಥೂಲತನುವಿನ ಮಧ್ಯದಲ್ಲಿ ಅರುಹೆ ಗುರುವಾಗಿ ನೆಲಸಿರ್ಪರು ನೋಡ.
ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ.
ನಿನ್ನ ಕಾರಣತನುವಿನ ಮಧ್ಯದಲ್ಲಿ ಸ್ವಾನುಭಾವ ಜಂಗಮವಾಗಿ ನೆಲಸಿರ್ಪರು ನೋಡ.
ನಿನ್ನ ನಿರ್ಮಲತನುವಿನ ಮಧ್ಯದಲ್ಲಿ ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ.
ನಿನ್ನ ಆನಂದತನುವಿನ ಮಧ್ಯದಲ್ಲಿ ಕೃಪಾ ಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ ಚಿತ್ಪ್ರಕಾಶ ಭಸಿತವಾಗಿ ನೆಲಸಿರ್ಪರು ನೋಡ.
ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ.
ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣ ಸ್ವರೂಪಿನಿಂದ ಪರಾತ್ಪರ ನಿಜವಸ್ತು (ಮಂತ್ರ) ನೆರದಿರ್ಪುದು ನೋಡ.
ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ ನಿನ್ನ ನೀ ತಿಳಿದು ನೋಡ- ಎಂದು ಗಣಸಾಕ್ಷಿಯಾಗಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಉಪಮಾದೀಕ್ಷೆ ಇಂತುಂಟೆಂದು ನಿರೂಪಂ ಕೊಡುತ್ತಿರ್ದರು ನೋಡ ಸಂಗನಬಸವೇಶ್ವರ.”
ಶರಣ ದೇಶಿಕೇಂದ್ರ ಸಂಗನಬಸವಯ್ಯನವರು ಭಕ್ತನ ಶ್ರದ್ಧೆಯೇ ಗುರು ಲಿಂಗ ಜಂಗಮ, ನಿಷ್ಠೆಯೇ ಮಂತ್ರ, ಸಾವಧಾನವೇ ಪ್ರಸಾದ, ಅನುಭಾವವೇ ರುದ್ರಾಕ್ಷಿ, ಆನಂದವೇ ಪಾದೋದಕ, ಸಮರಸವೇ ವಿಭೂತಿ ಎಂದು ಅತ್ಯಂತ ವೈಚಾರಿಕ ಮತ್ತು ಆನುಭಾವಿಕ ನೆಲೆಯಲ್ಲಿ ಅರುಹಿದ್ದಾರೆ. “ಭಕ್ತನ ಶ್ರದ್ಧೆ ಗುರುಲಿಂಗಜಂಗಮವೇ ಪ್ರಾಣವೆಂಬುದು. ಭಕ್ತನ ನಿಷ್ಠೆ ಪಂಚಾಕ್ಷರಿಯೇ ಪ್ರಾಣವೆಂಬುದು. ಭಕ್ತನ ಸಾವಧಾನವೇ ಪ್ರಸಾದವೆಂಬುದು. ಭಕ್ತನ ಅನುಭಾವ ರುದ್ರಾಕ್ಷಿಯೇ ಪ್ರಾಣವೆಂಬುದು. ಭಕ್ತನ ಆನಂದವೇ ಪಾದೋದಕವೆಂಬುದು. ಭಕ್ತನ ಸಮರಸವೇ ಶ್ರೀ ವಿಭೂತಿಯೆಂಬುದು. ಇಂತು ಅಷ್ಟಾವರಣ ಪ್ರಾಣವಾಗಿ, ನಡೆಯೇ ಪ್ರಕಾಶವಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.”
ಶರಣ ಕಡಕೋಳ ಮಡಿವಾಳಪ್ಪನವರು, “ಸದ್‍ಭಕ್ತನ ಸತ್ಕ್ರಿಯವೆ ಗುರುವೆನಿಸಿ, ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ, ಲಿಂಗನ ಪೂಜಿಸುವ ಸದಾಚಾರವೇ ಜಂಗಮವೆನಿಸಿ, ಪಾದ್ಯದಲ್ಲಿ ಪಾದೋದಕವಾಗಿ, ಜಿಹ್ವೆಯಲ್ಲಿ ಪ್ರಸಾದವಾಗಿ, ಲಲಾಟದಲ್ಲಿ ವಿಭೂತಿಧಾರಣವಾಗಿ, ಉರ, ಸಿರ, ಕಂಠದಲ್ಲಿ ಶಿವಾಕ್ಷಿ ಮಣಿಯೆನಿಸಿ, ಶ್ರೋತ್ರದಲ್ಲಿ ಮಂತ್ರವಾಗಿ ಇಂತು ಇವು ಬಾಹ್ಯ ಅಷ್ಟಾವರಣದ ಕ್ರಮವೆನಿಸಿತ್ತು. ಇನ್ನು ಅಂತರಂಗದಿ ಆತ್ಮನ ಅರುವೆ ಗುರುವೆನಿಸಿತ್ತು. ಪ್ರಾಣವೆ ಲಿಂಗವಾಗಿ ತೋರಿತ್ತು. ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮವೆನಿಸಿತ್ತು. ಜಿಹ್ವಾಗ್ರವೇ ಪಾದೋದಕವಾಗಿ, ನಾಶಿಕವೆ ಪ್ರಸಾದವಾಗಿ, ತ್ವಕ್ಕಿನಲ್ಲಿ ಶ್ರೀವಿಭೂತಿ, ನೇತ್ರದಲ್ಲಿ ಪರಾಕ್ಷಮಣಿ, ಕರ್ಣದ್ವಾರದೊಳು ಮೊಳಗುವ ಮಂತ್ರದಿಂದ ಕೂಡಿಕೊಂಡ ಈ ಪರಿಯೇ ಅಂತರಾತ್ಮ ಅಷ್ಟಾವರಣವೆನಿಸಿತು. ನೀನೊಂದು ಇದ್ದು ಇಂತು ಪರಿಯಲ್ಲಿ ಪೂಜೆ ಪೂಜಕ ಪೂಜ್ಯನೆನಿಸಿ ಮೆರೆದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.” ಅಂತರ್ ಅಷ್ಟಾವರಣ ಮತ್ತು ಬಹಿರ್ ಅಷ್ಟಾವರಣಗಳನ್ನು ಈ ವಚನದಲ್ಲಿ ತಿಳಿಸಿದ್ದಾರೆ. ಮೊದಲು ಸಾಧಕನು ಬಹಿರ್ ಅಷ್ಟಾವರಣಗಳನ್ನು ತನ್ನ ದೇಹದ ಮೇಲೆ ಧರಿಸುತ್ತಾನೆ, ಆ ಅಷ್ಟಾವರಣಗಳಿಗೆ ಅನುರೂಪವಾದ ಆಚಾರಗಳನ್ನು ಗುಣ ನಡತೆಗಳನ್ನು ಅಂತರಂಗದಲ್ಲಿ ಅಳವಡಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯುತ್ತಾನೆ, ಇವುಗಳಿಗೆ ಅಂತರ್ ಅಷ್ಟಾವರಣಗಳೆನ್ನುತ್ತಾರೆ.
ಅಷ್ಟಾವರಣ ಅಂಗದಲ್ಲಿ ಅಳವಟ್ಟ ಸಾಧಕನ ಲಕ್ಷಣ – ಪರಿಣಾಮ
“ಗುರುಭಕ್ತನಾದ ಮೇಲೆ ಅಂಗದ ಸುಖವ ಮರೆದಿರಬೇಕು. ಲಿಂಗಭಕ್ತನಾದ ಮೇಲೆ ಮನದ ಸುಖವ ಮರೆದಿರಬೇಕು. ಜಂಗಮ ಭಕ್ತನಾದಮೇಲೆ ಪ್ರಾಣದ ಸುಖವ ಮರೆದಿರಬೇಕು. ಪಾದೋದಕ ಭಕ್ತನಾದ ಮೇಲೆ ರಸನೆಯ ಸುಖವ ಮರೆದಿರಬೇಕು. ಪ್ರಸಾದ ಭಕ್ತನಾದ ಮೇಲೆ ಅನ್ಯವಾಸನೆಯ ಸುಖವ ಮರೆದಿರಬೇಕು. ವಿಭೂತಿಯ ಧರಿಸಿದ ಮೇಲೆ ಸೋಂಕಿನ ಸುಖವ ಮರೆದಿರಬೇಕು. ರುದ್ರಾಕ್ಷಿಯ ಧರಿಸಿದ ಮೇಲೆ ಸ್ತ್ರೀರೂಪಿನ ಲಕ್ಷಣ ಮರೆದಿರಬೇಕು. ಮಂತ್ರವೇದಿಯಾದ ಮೇಲೆ ಲಲನೆಯರ ವಿನಯ ನುಡಿಯ ಒಲಿದು ಕೇಳದಿರಬೇಕು. ಇಂತು ಅಷ್ಟಾವರಣವನು ಅಂಗದಲ್ಲಿ ಕಾಣಿಸಿಕೊಂಡ ಬಳಿಕ ಭಕ್ತಿ ನಿಷ್ಠೆಯ ನೆರೆದು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಚ್ಚರಿತನಾಗಿರಬೇಕು”- ಶರಣ ದೇಶಿಕೇಂದ್ರ ಸಂಗನಬಸವಯ್ಯನವರು.
“ಮದವಳಿದು ಗುರುಭಕ್ತಿಗೂಡಿ ಬಂದನಯ್ಯಾ ನಿಮ್ಮ ಶ್ರದ್ಧಾಭಕ್ತ. ಕಾಮವಳಿದು ಲಿಂಗಭಕ್ತಿಗೂಡಿ ಬಂದನಯ್ಯಾ ನಿಮ್ಮ ನಿಷ್ಠಾಭಕ್ತ. ಮತ್ಸರವಳಿದು ಜಂಗಮಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಾವಧಾನಭಕ್ತ. ಮೋಹವನಳಿದು ಪಾದೋದಕ ಪ್ರಸಾದ ಭಕ್ತಿಯಗೂಡಿ ಬಂದನಯ್ಯಾ ನಿಮ್ಮ ಅನುಭಾವಭಕ್ತ. ಕ್ರೋಧವನಳಿದು ವಿಭೂತಿ ರುದ್ರಾಕ್ಷಿ ಭಕ್ತಿಗೂಡಿ ಬಂದನಯ್ಯಾ ನಿಮ್ಮ ಆನಂದಭಕ್ತ. ಲೋಭವನಳಿದು ಪಂಚಾಕ್ಷರಿ ಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಮರಸಭಕ್ತ. ಇಂತು ಅಷ್ಟಾವರಣದ ಭಕ್ತಿ ಸಂಯುಕ್ತವಾಗಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾಗಿ ಬಂದನಯ್ಯಾ ನಿಮ್ಮ ನಿಜಭಕ್ತ”- ಶರಣ ದೇಶಿಕೇಂದ್ರ ಸಂಗನಬಸವಯ್ಯನವರು.
ಶರಣ ಷಣ್ಮುಖಸ್ವಾಮಿಯವರು ಅಷ್ಟಾವರಣ ಪಂಚಾಚಾರಗಳ ಕುರಿತು ಹೀಗೆ ಹೇಳುತ್ತಾರೆ, “ಎನ್ನ ತನುವೆ ಶ್ರೀಗುರುಸ್ಥಾನವಯ್ಯ, ಎನ್ನ ಮನವೆ ಲಿಂಗಸ್ಥಾನವಯ್ಯ, ಎನ್ನ ಆತ್ಮವೆ ಜಂಗಮಸ್ಥಾನವಯ್ಯ, ಎನ್ನ ಪ್ರಾಣವೆ ಪ್ರಸಾದಸ್ಥಾನವಯ್ಯ, ಎನ್ನ ಭಾವವೇ ಪಾದೋದಕ ಸ್ಥಾನವಯ್ಯ, ಎನ್ನ ಲಲಾಟವೇ ವಿಭೂತಿ ಸ್ಥಾನವಯ್ಯ, ಎನ್ನ ಗಳವೇ ರುದ್ರಾಕ್ಷಿ ಸ್ಥಾನವಯ್ಯ, ಎನ್ನ ಜಿಹ್ವೆಯೇ ಶಿವಮಂತ್ರಸ್ಥಾನವಯ್ಯ, ಎನ್ನ ಕಂಗಳೇ ಲಿಂಗಾಚಾರ ಸ್ಥಾನವಯ್ಯ, ಎನ್ನ ಶ್ರೋತ್ರವೇ ಶಿವಾಚಾರ ಸ್ಥಾನವಯ್ಯ, ಎನ್ನ ವಾಕ್ಯವೇ ಭೃತ್ಯಾಚಾರಸ್ಥಾನವಯ್ಯ, ಎನ್ನ ಹಸ್ತವೇ ಗಣಾಚಾರಸ್ಥಾನವಯ್ಯ, ಎನ್ನ ಚರಣವೇ ಸದಾಚಾರಸ್ಥಾನವಯ್ಯ, ಎನ್ನ ಷಡ್‍ಭೂತಂಗಳೇ ಷಟ್‍ಸ್ಥಲ ಸ್ಥಾನಂಗಳಯ್ಯ, ಎನ್ನ ಸುಜ್ಞಾನವೇ ಶಿವಾನುಭಾವ ಸ್ಥಾನವಯ್ಯ. ಇಂತೀ ಅಷ್ಟಾವರಣ ಪಂಚಾಚಾರ ಷಟ್‍ಸ್ಥಲ ಶಿವಾನುಭಾವವನೊಳಕೊಂಡ ಎನ್ನ ಚಿದಂಗವೇ ಮಹಾ ಕೈಲಾಸವಯ್ಯ ನಿಮಗೆ ಅಖಂಡೇಶ್ವರಾ.”
ಅಷ್ಟಾವರಣಗಳ ಕುರಿತು ಸರಳವಾಗಿ ಅರಿಯಲು ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ:
೧. ಗುರು: ಕಾಯಕ್ಕೆ ಅರಿವನ್ನು ಪ್ರಾಪ್ತಿ ಮಾಡುವ ಚೈತನ್ಯವೇ ಗುರು. ಪಿಂಡಾಂಡದಿ ತೋರುವ ಕಾಯವೇ ಗುರು, ಅರಿವಿನಿಂದ ಕೂಡಿದ ಸತ್ಕ್ರಿಯಾ ಸದಾಚಾರಗಳ ಸಂಗಮ, ಇದು ಸ್ಥೂಲ ತನುವನ್ನು ಶುದ್ಧೀಕರಿಸುವುದು, ಭಕ್ತನ ಶ್ರದ್ಧೆಯೇ ಗುರು, ಮದವಳಿಯುವುದು. ಶ್ರದ್ಧಾಭಕ್ತಿ ಗುರುಕೃಪೆಯಿಲ್ಲದವನ ಕರ್ಮ ಹರಿಯದು.
೨. ಲಿಂಗ: ಅಂಗದ ಮೇಲೆ ಸಾಹಿತ್ಯವಾದ ಇಷ್ಟಲಿಂಗ, ಪ್ರಾಣವೇ ಲಿಂಗ, ಪ್ರಾಣದ ಮರೆಯಲ್ಲಿ ಸೂಕ್ಷ್ಮತನುವಿನಲ್ಲಿ ವ್ಯವಹರಿಸುವ ಮನಸ್ಸು. ಸಕಲ ವಿಚಾರಗಳನ್ನು ಶುದ್ಧರೂಪದಲ್ಲಿ ಅರಿತು ಅಂಗವಿಸಿಕೊಳ್ಳುವ ಪ್ರಕ್ರಿಯೆಯೇ ಲಿಂಗ, ಭಕ್ತನ ಶ್ರದ್ಧೆಯೇ ಲಿಂಗ, ಕಾಮವಳಿಯುವುದು, ನಿಷ್ಠಾಭಕ್ತ, ಲಿಂಗ ಸೋಂಕದವನ ಅಂಗ ಭಂಗ.
೩. ಜಂಗಮ: ಜ್ಞಾನವೆ ಜಂಗಮ, ಕಾರಣತನುವಿನ ಭಾವದ ನೆಲೆಯಲ್ಲಿ ಅನುಭಾವಿಸುವ, ಸ್ಫುರಿಸುವ ಚೈತನ್ಯವೇ ಜಂಗಮ, ಭಕ್ತನ ಶ್ರದ್ಧೆಯೇ ಜಂಗಮ, ಲಿಂಗನ ಪೂಜಿಸುವ ಸದಾಚಾರವೇ ಜಂಗಮ, ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮ, ಮತ್ಸರವಳಿಯುವುದು, ಸಾವಧಾನಭಕ್ತ, ಜಂಗಮ ದರುಶನವಿಲ್ಲದವಂಗೆ ಮೋಕ್ಷಾರ್ಥ ಬಟ್ಟೆ ದೊರೆಯದು.
೪. ವಿಭೂತಿ: ಹಣೆಯ ಮೇಲೆ ಧಾರಣ ಮಾಡುವ ಭಸ್ಮ, ಸೋಂಕಿನ ಸುಖವ ಮರೆದು ಭಕ್ತನ ಸಮರಸ ಮತ್ತು ಕಾಯದೊಳು ಕಾಂಬ ಅರುವಿನ ಬೆಳಗೇ ವಿಭೂತಿ, ಕ್ರೋಧವನಳಿಯುವುದು, ಆನಂದಭಕ್ತ, ವಿಭೂತಿಯ ಧರಿಸದವಂಗೆ ದುರಿತಲಿಖಿತಂಗಳು ತೊಡೆಯವು.
೫. ರುದ್ರಾಕ್ಷಿ: ಅರಿವಿನ ಕೃಪೆಯೇ ರುದ್ರಾಕ್ಷಿ, ಶಿವಾಚಾರವನ್ನು ಅಳವಡಿಸಿಕೊಳ್ಳುವುದು, ಅನುಭಾವವೇ ರುದ್ರಾಕ್ಷಿ, ಕ್ರೋಧವನಳಿಯುವುದು, ಆನಂದಭಕ್ತ, ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು.
೬. ಮಂತ್ರ: ಅರಿವು ತಾನೇ ಆಗಿ ಮೆರೆದುದೇ ಮಂತ್ರ, ಭಕ್ತನ ನಿಷ್ಠೆಯೇ ಮಂತ್ರ, ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು, ಲೋಭವನಳಿಯುವುದು, ಸಮರಸಭಕ್ತ.
೭. ಪಾದೋದಕ: ಅರಿವಿನ ಕರಣವೇ ಪಾದೋದಕ, ಆನಂದವೇ ಪಾದೋದಕ, ಮೋಹವನಳಿಯುವುದು, ಅನುಭಾವ ಭಕ್ತ, ಪಾದೋದಕವ ಕೊಳದವನ ಪರಿಭವಂಗಳು ಅಳಿಯವು.
೮. ಪ್ರಸಾದ: ಅರಿವಿನ ಆನಂದವೇ ಪ್ರಸಾದ, ಸಾವಧಾನವೇ ಪ್ರಸಾದ, ಮೋಹವನಳಿಯುವುದು, ಅನುಭಾವಭಕ್ತ, ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು.
ಬರಿಯ ಬಾಹ್ಯದ ಆಡಂಬರದ ಅಷ್ಟಾವರಣ ಧಾರಣೆಯಿಂದ ಸಾಧಕನಲ್ಲಿ ಯಾವ ಬದಲಾವಣೆಗಳು ಗೋಚರಿಸದಿದ್ದರೆ ಅಂಥಾ ಆವರಣಗಳು ಶುಷ್ಕವೆನಿಸಿಕೊಳ್ಳುತ್ತವೆ. ಅವುಗಳಿಂದ ಯಾವ ಪ್ರಯೋಜನವೂ ಇಲ್ಲ. ಬಾಹ್ಯ ಅಷ್ಟಾವರಣಗಳಿಗೆ ತತ್-ಸಂಬಂಧವಾದ ಅಂತರ್ ಅಷ್ಟಾವರಣಗಳನ್ನು ಅರಿವಿನ ಮುಖದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಧಕನು ತನ್ನ ಇಂದ್ರಿಯ ಸ್ವಭಾವ ಗುಣಗಳಿಂದ ಮುಕ್ತನಾಗಿ ಬಯಲ ಸಾಧನೆಯಲ್ಲಿ ತೊಡಗಿ ಬಯಲ ರೂಪವೇ ತಾನಾಗುವನು.
Comments 10
VIJAYAKUMAR KAMMAR
Aug 8, 2022ಅಷ್ಟಾವರಣ ಚಂದದ ಲೇಖನ. Like it.
Dr. K.S.Mallesh
Aug 8, 2022ಡಾ. ಪಂಚಾಕ್ಷರಿ ಹಳೇಬೀಡು ಇವರ ‘ಅಷ್ಟಾವರಣವೆಂಬ ಭಕ್ತಿ ಸಾಧನ’ ಎಂಬ ಲೇಖನವನ್ನು ಬಹಳ ನಿರೀಕ್ಷೆಯಿಟ್ಟು ಓದಲು ತೊಡಗಿದೆ. ಅದಕ್ಕೆ ಕಾರಣ ಷಟ್ಸ್ಥಲ, ಪಂಚಾಚಾರ, ಅಷ್ಟಾವರಣ ಇವುಗಳ ಅರ್ಥ ಏನು, ಲಿಂಗಾಯತನಾಗಿ ಇವುಗಳನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂದು ಕೂಲಂಕುಷವಾಗಿ ತಿಳಿಯಲು ಸಂಬಂಧಪಟ್ಟ ವಚನ, ಲೇಖನ, ಗ್ರಂಥಗಳನ್ನು ಓದುವ ಪ್ರಯತ್ನ ಮಾಡುತ್ತಿರುವ ನನಗೆ ನಾನು ಇದುವರೆಗೆ ಓದಿದ ಯಾವುದರಿಂದಲೂ ಸಮಾಧಾನವಾಗಿಲ್ಲ. ಪ್ರಸ್ತುತ ಲೇಖನ ಕೆಲವು ಹೊಸ ವಚನಗಳನ್ಪು ತೋರಿಸಿತೇ ಹೊರತು ನನಗೆ ಅಷ್ಟಾವರಣಗಳ ಬಗ್ಗೆ ಸ್ಪಷ್ಟ ವಿವರಣೆ ನೀಡದೆ ನನ್ನ ಹಂಬಲವನ್ನು ತಣಿಸದೆ ನಿರಾಸೆಯನ್ನು ಇನ್ನಷ್ಟು ಹೆಚ್ಚಿಸಿತು.ವಿಜ್ಞಾನದ ವಿದ್ಯಾರ್ಥಿಯಾದ ನಾನು ಎಲ್ಲವನ್ನೂ ತಾರ್ಕಿಕ ವಿಧಾನದಲ್ಲಿ ಅರಿಯಲು ಯತ್ನಿಸುವುದೇ ಅರ್ಥಮಾಡಿಕೊಳ್ಳಲು ತೊಡಕಾಗಿರಬಹುದೆಂದು ಕೂಡ ನನಗೆ ಅನ್ನಿಸಿದೆ. ಲೇಖನದಲ್ಲಿ ಅಷ್ಟಾವರಣಗಳ ಬಗ್ಗೆ ಅಂತಿಮ ಹಂತದಲ್ಲಿ ಸ್ಥೂಲವಿವರಣೆ ನೀಡುವಲ್ಲಿ ಭಕ್ತನ ಶ್ರದ್ಧೆಯೇ ಗುರು, ಭಕ್ತನ ಶ್ರದ್ಧೆಯೇ ಲಿಂಗ, ಭಕ್ತನ ಶ್ರದ್ಧೆಯೇ ಜಂಗಮ ಹಾಗೆಯೇ ಭಕ್ತನ ನಿಷ್ಠೆಯೇ ಮಂತ್ರ ಎಂದು ಬರೆದದ್ದು ನನ್ನನ್ನು ಗೊಂದಲಕ್ಕೀಡುಮಾಡಿತು.
ಯಾವ ವಿಷಯಗಳೇ ಆಗಿರಲಿ- ಓದುಗರಿಗೆ ಅರ್ಥವಾಗುವಂತೆ ಪ್ರತಿಯೊಂದರ ಸರಳ ಅರ್ಥ ಇದು ಎಂದು ನೇರವಾಗಿ ತಿಳಿಸಿ ನಂತರ ಒಳಾರ್ಥಗಳ ಸಹಿತ ವಿವರಣಾತ್ಮಕವಾಗಿ ಬರೆದಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂದು ನನ್ನ ಅನಿಸಿಕೆ. ಉತ್ತಮ ಅನಭವವುಳ್ಳ ಡಾ. ಪಂಚಾಕ್ಷರಿ ಹಳೇಬೀಡುರವರು ನನ್ನಂತಹ ಕಲಿಕೆಯ ಓದುಗರನ್ನು ಕೂಡ ಮನಸ್ಸಿನಲ್ಲಿ ಇಟ್ಟುಕೊಂಡು ಬರೆಯಬೇಕೆಂದು ನನ್ನ ವಿನಮ್ರ ಪ್ರಾರ್ಥನೆ.
ನಾಗಲಿಂಗಸ್ವಾಮಿ ಬೈಲೂರು
Aug 10, 2022ಅಷ್ಟಾವರಣಗಳು ಮುಕ್ತಿಗೆ ಅನಿವಾರ್ಯ ಅಂತ ಬಸವಣ್ಣನವರ ಯಾವ ವಚನಗಳಲ್ಲೂ ದಾಖಲಾಗಿಲ್ಲ. ಕೇವಲ ಢಂಬಾಚಾರದ ವೇಷಗಳಾಗಿದ್ದ ಈ ಸಂಕೇತಗಳನ್ನು ಬಹುಶಃ ಬಸವಾದಿ ಶರಣರು ಪುರಸ್ಕರಿಸಿರಲಿಕ್ಕಿಲ್ಲ ಎನಿಸುತ್ತದೆ. ಹಾಗೆ ವೇಷ ಹಾಕಿಕೊಂಡು ಸದ್ಗುಣಗಳನ್ನು ಮರೆತವರಿಗೆ ಎಚ್ಚರಿಸುವ ರೂಪದಲ್ಲಿ ಅವುಗಳ ಕುರಿತಾಗಿ ವಚನಗಳು ರಚನೆಯಾದಂತೆ ಕಾಣುತ್ತದೆ. ಕ್ಷಮಿಸಿ, ಇದು ಸಂಪೂರ್ಣ ನನ್ನ ಗ್ರಹಿಕೆ.
ಆನಂದಪ್ಪ ಮಾಲೂರು
Aug 16, 2022ಅಷ್ಟಾವರಣಗಳಿಗೆ ಸಂಬಂಧಪಟ್ಟ ವಚನಗಳನ್ನು ಒಂದು ಕಡೆ ಶೇಖರಿಸಿಕೊಟ್ಟಿದ್ದು ಓದುಗರಿಗೆ ವಿಭಿನ್ನ ಅರ್ಥವ್ಯಾಖ್ಯಾನ ಊಹಿಸಿಕೊಳ್ಳಲು ಅನುವಾಗುತ್ತದೆ. ಅಷ್ಟಾವರಣಗಳನ್ನು ಧರಿಸಿದವರು ಉತ್ತಮರು, ಇಲ್ಲದವರು ಅಧಮರು ಎನ್ನುವಂತಹ ಧೋರಣೆ ಸರಿಯಲ್ಲ ಎನಿಸುತ್ತದೆ.
Devendra K
Aug 22, 2022ಅಷ್ಟಾವರಣಗಳು, ಪಂಚಾಚಾರಗಳು, ಷಟಸ್ಥಲಗಳು ಶರಣರ ವಿಶಿಷ್ಟ ಕೊಡುಗೆಗಳು. ಅಷ್ಟಾವರಣಗಳಿಗೆ ವಿಶೇಷ ಅರ್ಥವಿದೆ ಅವು ಕೇವಲ ಬಾಹ್ಯ ಸಂಕೇತಗಳಲ್ಲ.
ಬಸವರಾಜು ಎಂ.
Aug 22, 2022ಲೇಖನದ ಕೊನೆಯಲ್ಲಿ ಕೊಟ್ಟ ಅಷ್ಟಾವರಣಗಳ ಕುರಿತ ಸರಳ ವ್ಯಾಖ್ಯಾನದ ಪಟ್ಟಿಯಲ್ಲಿ ಹೇಳಲಾದ ವಿಚಾರಗಳು ಎಲ್ಲರೂ ಒಪ್ಪುವಂತಿವೆ. ಆದರೆ ಅಷ್ಟಾವರಣಗಳನ್ನು ಧರಿಸುವುದರಿಂದಲೇ ಮುಕ್ತಿ ಎನ್ನುವುದನ್ನು ಖಂಡಿತಕ್ಕೂ ಒಪ್ಪಲಾಗದು.
rajashekhara H.S
Aug 24, 2022ಕಡಕೋಳ ಮಡಿವಾಳಪ್ಪನವರ ವಚನ, “ಸದ್ಭಕ್ತನ ಸತ್ಕ್ರಿಯವೆ ಗುರುವೆನಿಸಿ, ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ…”ವನ್ನು ಆಧಾರವಾಗಿಟ್ಟು ಅಷ್ಟಾವರಣಗಳನ್ನು ಚರ್ಚಿಸಿದ್ದರೆ ಶರಣರ ನಿಜವಾದ ಆಶಯ ಗೊತ್ತಾಗುತ್ತಿತ್ತು. ಅಂತರ್ ಅಷ್ಟಾವರಣ ಮತ್ತು ಬಹಿರ್ ಅಷ್ಟಾವರಣಗಳನ್ನು ಅವರು ವಿಂಗಡಿಸಿದ ರೀತಿಯಲ್ಲೇ ಇವುಗಳ ಗುಟ್ಟು ಅಡಗಿರುವುದನ್ನು ಗಮನಿಸಬಹುದು.
vanajakshi T
Sep 9, 2022ಅಷ್ಟಾವರಣಗಳಲ್ಲಿ ಯಾವುವು ತಮ್ಮ ಪಾವಿತ್ರ್ಯತೆಯನ್ನು ಇವತ್ತು ಉಳಿಸಿಕೊಂಡಿವೆ? ಚಿತ್ರದುರ್ಗದ ಕಹಿ ಘಟನೆಯ ನಂತರ ಯಾಕೋ ಈ ಎಲ್ಲಾ ವೇಶಭೂಷಣಗಳ ಬಗೆಗೆ ಜಿಗುಪ್ಸೆ ಬಂದಿದೆ ಅಣ್ಣಾ.
ಬಸವರಾಜು ಪಂಡಿತ್
Dec 26, 2022ಅಧ್ಭುತ ವಿಚಾರ ವಿಮರ್ಶೆ…ಶರಣು ಶರಣಾರ್ಥಿಗಳು
ಶಿವಶರಣಪ್ಪ ರಾಮಗೊಂಡಪ್ಪ ಬಿರಾದಾರ
Aug 27, 2024ಉತ್ತಮ ಲೇಖನ, ಆದರೆ ಪ್ರತಿಯೊಂದನ್ನೂ ವಚನಗಳ ಮೂಲಕವೇ ಹೇಳಿದ್ದಾರೆ. ಇದು ಅಷ್ಟಾವರಣಗಳ ಬಗ್ಗೆ ಸ್ಪಷ್ಟತೆಯನ್ನು ಕಟ್ಟಿ ಕೊಡುವಲ್ಲಿ ಹಿನ್ನಡೆ. ವನಜಾಕ್ಷಿಯವರು ಹೇಳುವಂತೆ ವಸ್ತುಗಳಲ್ಲಿ ದೋಷವಿಲ್ಲ ಆದರೆ ಅದನ್ನು ಬಳಸುವವರಲ್ಲಿ ಇದೆ.