ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ನಮ್ಮ ಮೂಲ ಪ್ರಶ್ನೆಗೆ ಬರೋಣ: ಅಲ್ಲಮರ ಪ್ರಕಾರ ಜಗತ್ತು ಮಾಯೆಯಲ್ಲದಿದ್ದರೆ ಅವರು ಪದೇ ಪದೇ ಬಳಸುವ ಮಾಯೆ ಎಂಬ ಪದಕ್ಕೆ ಯಾವ ಅರ್ಥವಿದೆ? ಚಾಮರಸನು ಅಲ್ಲಮ ಮಾಯೆಯನ್ನು ಗೆದ್ದವ ಎಂದು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ?
ಅಲ್ಲಮಪ್ರಭುಗಳು ಮಾಯೆ, ಜಗತ್ತು, ಬ್ರಹ್ಮ, ಲಿಂಗ ಮುಂತಾದ ಹಳೆಯ ಪದಗಳನ್ನೇ ಬಳಸುತ್ತಿದ್ದಾರೆ, ಆದರೆ ತಮ್ಮದೇ ಆದ ಅಥವಾ ಹೊಸ ಅರ್ಥದಲ್ಲಿ. ಚಾಮರಸನನ್ನು ಬಿಟ್ಟು, ಕೇವಲ ಅಲ್ಲಮನ ವಚನಗಳನ್ನು ಪರಿಗಣಿಸುವುದಾದರೆ ಪ್ರಾಯಶಃ ಮಾಯೆ ಎಂಬ ಪದಕ್ಕೆ ನಾವು ನಾಲ್ಕು ಅರ್ಥಗಳಿರುವುದನ್ನು ಕಾಣಬಹುದು.
1. ಮಾಯೆ ಎಂದರೆ ಮರೆವು. ಇದು ಸಾಧಾರಣ ಮರೆವಲ್ಲ, ಜನ್ಮಜನ್ಮಾಂತರದ ಮರೆವು. ಮನುಷ್ಯ ತಾನು ಮೂಲತಃ ಲಿಂಗ ಎಂಬುದನ್ನೇ ಮರೆತಿದ್ದಾನೆ; ತಾನು ಲಿಂಗದಿಂದ ಪ್ರತ್ಯೇಕವಾದ ವ್ಯಕ್ತಿ ಎಂದು ತಪ್ಪು ತಿಳಿದಿದ್ದಾನೆ. ಹುಟ್ಟಿದವರಿಗೆ ಈ ರೀತಿಯ ಮರೆವು ಸಹಜ (2/311). ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ: ನನ್ನ ಆತ್ಮವೇ ಲಿಂಗ, ನನ್ನ ದೇಹವೇ ದೇವಾಲಯ (2/194-197) ಎಂಬುದನ್ನು ಮರೆತು, ನಾನು ಭೌತ ದೇಹ, ಇಂದ್ರಿಯ ಮತ್ತು ಕರಣಗಳ ಸಂಪುಟ ಎಂದು ತಪ್ಪು ತಿಳಿದಿದ್ದಾನೆ (2/14, 16, 38, ಇ). ಈ ತಪ್ಪು ತಿಳಿವಳಿಕೆ ಘೋರ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಭೌತ ದೇಹದಿಂದಾಗಿ ಮನುಷ್ಯ ದೇಹಾಭಿಮಾನಕ್ಕೆ ಒಳಗಾಗುತ್ತಾನೆ. ಇಂದ್ರಿಯಗಳಿಂದಾಗಿ ವಿಷಯಗಳಿಗೆ ಹಾತೊರೆಯುತ್ತಾನೆ. ಎಷ್ಟು ವಿಷಯಗಳನ್ನು ಸಂಗ್ರಹಿಸಿದರೂ, ಎಷ್ಟು ವಿಷಯಗಳನ್ನು ಅನುಭವಿಸಿದರೂ ಅವನಿಗೆ ತೃಪ್ತಿಯಿಲ್ಲ (2/18). ಮನಸ್ಸು, ಬುದ್ಧಿ ಮುಂತಾದ ಕರಣಗಳಿಂದಾಗಿ ಸಂಕಲ್ಪ-ವಿಕಲ್ಪಗಳಿಗೂ, ಕೋಪತಾಪಗಳಿಗೂ ಒಳಗಾಗುತ್ತಾನೆ. ಇವುಗಳನ್ನು ತೃಪ್ತಿಪಡಿಸಲು, ನಾನಾ ರೀತಿಯ ಕರ್ಮಗಳನ್ನು ಮಾಡಿ ಅವುಗಳ ಫಲಗಳನ್ನು ಅನುಭವಿಸಲು ಮತ್ತೆ ಮುಂದಿನ ಜನ್ಮ ಎತ್ತುತ್ತಾನೆ. ಮುಂದಿನ ಜನ್ಮದಲ್ಲಿಯೂ ಇದೇ ಕತೆ ಮರುಕಳಿಸುವುದರಿಂದ ಭವಚಕ್ರಕ್ಕೆ ಸಿಕ್ಕಿಕೊಳ್ಳುತ್ತಾನೆ (2/12). ಈ ಅಭಿಮಾನ ಕೇವಲ ಕೆಲವರಿಗೆ ಸೀಮಿತವಾಗಿರದೆ ಬ್ರಹ್ಮ, ವಿಷ್ಣು ಮುಂತಾದವರಿಗೂ ಅನ್ವಯಿಸುತ್ತದೆ (2/22, 23). ಹೀಗೆ ಮಾಯೆ ಎಂದರೆ ನಮಗೆ ಸಂಸಾರ ಬಂಧನವನ್ನು ಉಂಟು ಮಾಡುವ ಒಂದು ರೀತಿಯ ಮರೆವು ಅಥವಾ ಅವಿದ್ಯೆ ಎಂಬ ಅರ್ಥದಲ್ಲಾದರೆ ಅಲ್ಲಮನಿಗೂ ಶಂಕರರಿಗೂ ಸಾಮ್ಯವಿದೆ.
ಈ ಮರೆವಿನ ಮೇಲೆ ಕಟ್ಟಿದ ಮಾನವರ ಬಾಳ್ವೆ ಶೋಚನೀಯವಾಗಿದೆ. ಅವರು ಪ್ರಾಣಿಗಳಂತೆ ಹುಟ್ಟುತ್ತಾರೆ, ಸಾಯುತ್ತಾರೆಯೇ ಹೊರತು, ತನ್ನ ಆತ್ಮ ಎಲ್ಲಿಂದ ಬಂತು, ಅಲ್ಲಿಗೆ ಹೋಗುತ್ತದೆ, ಸರಿಯಾದ ಗುರಿ ಯಾವುದು ಎಂಬ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ (2/44, 45).
2. ಅಲ್ಲಮರ ಪ್ರಕಾರ ಮಾಯೆ ಮತ್ತು ಮನಸ್ಸು ಪರಸ್ಪರ ಸಂಬಂಧಿಗಳು. ಮನ ಎಂಬ ಪದಕ್ಕೆ ಕೆಲವರು ‘ಅಳೆಯುವ ಸ್ವಭಾವವುಳ್ಳದ್ದು’ ಎಂಬ ಅರ್ಥಕೊಡುತ್ತಾರೆ. ಅಂದರೆ, ಮನಸ್ಸು (ಬುದ್ಧಿ) ಯಾವುದೇ ವಸ್ತುವನ್ನು ತಿಳಿದುಕೊಂಡಾಗಲೂ ‘ಅದು ಒಂದಿರಬೇಕು, ಅನೇಕವಿರಬೇಕು, ಸ್ವಲ್ಪವಿರಬೇಕು ಬಹಳವಿರಬೇಕು’, ಎಂದು ಚಿಂತಿಸುತ್ತದೆ. ಅಂದರೆ, ಭಾಗ ಮಾಡಿ ನೋಡುವುದು, ಇಡಿಯಾಗಿ ತಿಳಿದುಕೊಳ್ಳದಿರುವುದು ಅದರ ಸ್ವಭಾವ. ಏಕೆಂದರೆ, ಅದು ಇಂದ್ರಿಯಗಳನ್ನು ಅವಲಂಬಿಸುತ್ತದೆ. ಯಾವುದೇ ಇಂದ್ರಿಯವೂ ಏನನ್ನೂ ಇಡಿಯಾಗಿ, ಪೂರ್ತಿಯಾಗಿ ನೋಡಲು ಸ್ವಭಾವತಃ ಅಶಕ್ತವಾಗಿದೆ. ಇಡಿಯಾಗಿ ಪೂರ್ತಿಯಾಗಿ ನೋಡುವ ಶಕ್ತಿ ತನ್ನಲ್ಲೆ ವಿಶ್ವವನ್ನು ಅಡಗಿಸಿಕೊಂಡಿರುವ ಪರಮಾತ್ಮನಿಗೆ ಮಾತ್ರ ಇದೆ. ಅಂದರೆ, ಸಮಗ್ರ ಜ್ಞಾನ ಮನಸ್ಸಿಗೆ ಅಸಾಧ್ಯ. ಅಪೂರ್ಣ ಜ್ಞಾನಕ್ಕೆ ಅದು ತೃಪ್ತಿಪಟ್ಟುಕೊಳ್ಳಬೇಕು. ಅಪೂರ್ಣ ಜ್ಞಾನ ಎಂದರೆ ಅವಿದ್ಯೆ. ಮಾಯಾಧೀನ ಮನಸ್ಸುಗಳಿಗೆ ಪೂರ್ಣ ಜ್ಞಾನ ಅಲಭ್ಯ.
ಅಲ್ಲಮರ ಪ್ರಕಾರ ಮಾಯಾಧೀನ ಮನಸ್ಸಿಗೆ ಮತ್ತೊಂದು ಸ್ವಭಾವವಿದೆ. ಅದು ಯಾವಾಗಲೂ ತನ್ನನ್ನು ಜ್ಞಾತೃ (subject) ಎಂದೂ ಬಾಹ್ಯ ವಸ್ತುಗಳನ್ನು ಜ್ಞೇಯ (object) ಎಂದೂ ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಅದು ತಾನು ತಿಳಿದುಕೊಳ್ಳುವ ವಸ್ತು ತಾನಲ್ಲ ಎಂಬುದು ಅದರ ಪೂರ್ವಾಗ್ರಹ. ಈ ದ್ವೈತವಿಲ್ಲದ ಯಾವ ವ್ಯಾವಹಾರಿಕ ಜ್ಞಾನವೂ ಇಲ್ಲ. ಈ ದ್ವೈತ ಸ್ವಭಾವ ಇರುವವರೆಗೆ ಅದು ಜಗತ್ತನ್ನೊಳಗೊಂಡ ಪರಮಾತ್ಮ(ಲಿಂಗ)ನನ್ನು ಅರಿಯಲಾರದು. ಒಂದು ವೇಳೆ, ಸಾಧಕ ಅನುಭಾವಿಯಾದರೆ ಆಗ ಅವನು ತಾನು, ಜಗತ್ತು ಮತ್ತು ಲಿಂಗ ಒಂದೇ ಎಂಬ ಅದ್ವಯ ಅನುಭೂತಿಯನ್ನು ಪಡೆಯುತ್ತಾನೆ; ಆಗ ಮನಸ್ಸೂ ಲಿಂಗವಾಗುತ್ತದೆ. ಆಗ ಅಲ್ಲಮನಂತಹ ಅನುಭಾವಿಗಳು ಮನವೇ ಲಿಂಗವಾದ ಬಳಿಕ ನೆನೆವುದಾರನ್ನು? ಎಂದು ಕೇಳುತ್ತಾರೆ. ಅದು ಸಹಜ. ಅನುಭಾವದಲ್ಲಿ ನಾನು (ಅಹಂ) ಅಥವಾ ಜ್ಞಾತೃ ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿರುವುದರಿಂದ ಯಾವ ಬಾಹ್ಯ ಜ್ಞೇಯದ ಅನುಭವವೂ ಆಗುವುದಿಲ್ಲ. ಅನುಭಾವದಿಂದಾಗಿ ಲಿಂಗದಿಂದ ಭಿನ್ನವಾದ ಜ್ಞಾತೃ (ನಾನು) ಇಲ್ಲವಾಗುತ್ತದೆ; ಜ್ಞಾತೃವಿನಿಂದ ಭಿನ್ನವಾದ ಲಿಂಗವೂ ಇಲ್ಲವಾಗುತ್ತದೆ. ಇದನ್ನೆ ಅಲ್ಲಮ ‘ನಾನೂ ಇಲ್ಲ, ನೀನೂ ಇಲ್ಲ’ ಎನ್ನುತ್ತಾರೆ. ಅವರ ಬೆಡಗಿನ ಮಾತಿನಲ್ಲಿ ಹೇಳುವುದಾದರೆ: ನಾನೂ ಸಾಯುತ್ತೇನೆ, ಶಿವನೂ ಸಾಯುತ್ತಾನೆ, ಗಂಗೆ, ಗೌರಿಯರು ಮುಂಡೆಯರಾಗುತ್ತಾರೆ.
ಮಾಯೆ ಎಂದರೆ ತಪ್ಪು ತಿಳುವಳಿಕೆ ಎಂದಾದರೆ ಅದು ಮಾನವನಲ್ಲಿ ಅನೇಕ ರೀತಿಯಲ್ಲಿ ಪ್ರಕಟವಾಗುತ್ತದೆ. ಸಂಪ್ರದಾಯವಾದಿಗಳು ಇಷ್ಟಲಿಂಗಕ್ಕೂ ಲಿಂಗಧಾರಣೆಗೂ ಬಹಳ ಮಹತ್ವ ಕೊಡುವುದರಿಂದ ಅದನ್ನು ಕಳೆದುಕೊಂಡರೆ, ಬೀಳಿಸಿದರೆ, ಒಡೆದರೆ ಅದು ಅಧರ್ಮವೆಂದು ಬಗೆದು ವನವಾಸ, ಆತ್ಮಹತ್ಯೆ ಮುಂತಾದ ಘೋರ ಶಿಕ್ಷೆಗೆ ಸಿದ್ಧರಾಗುತ್ತಾರೆ. ಲಿಂಗ ಕೇವಲ ಒಂದು ಕಲ್ಲಿನ ತುಂಡು ಎಂಬುದು ಅಲ್ಲಮರಿಗೆ ಗೊತ್ತು. ಅವರು ಅದಕ್ಕೆ ಕೊಡುವ ಗೌರವ ಅತ್ಯಲ್ಪ. ಒಂದು ಮೆಳೆಗೆ ಅದನ್ನು ನೇತು ಹಾಕಿದರೆ ಅದು ಭಕ್ತನಾಗುವುದಿಲ್ಲ. ಅಲ್ಲಮರ ಪ್ರಕಾರ, ಕಲ್ಲನ್ನು ನೀಡಿದ ಬೆಟ್ಟ, ಕಲ್ಲನ್ನು ಲಿಂಗವನ್ನಾಗಿ ಕೆತ್ತಿದ ಶಿಲ್ಪಿ, ಆ ಕಲ್ಲನ್ನು ಮಂತ್ರೋಕ್ತ ದೀಕ್ಷೆಯ ಮೂಲಕ ಪವಿತ್ರ ಲಿಂಗವನ್ನಾಗಿ ಮಾಡಿದ ಗುರು – ಈ ಮೂವರಿಗೆ ಹುಟ್ಟಿದ ಲಿಂಗ ಸೂಳೆಯಮಗ (2/1594). ಆದರೆ ಲಿಂಗ, ಲಿಂಗಪೂಜೆ, ಲಿಂಗಧಾರಣೆ, ಲಿಂಗಧ್ಯಾನ ಇವೆಲ್ಲ ನಿರುಪಯುಕ್ತ ಎಂಬುದು ಅಲ್ಲಮರ ಮತವಲ್ಲ. ಲಿಂಗವನ್ನು ದೇಹದ ಮೇಲೆ ಧರಿಸಬೇಕು, ಅದಕ್ಕಿಂತ ಹೆಚ್ಚಾಗಿ ಅದನ್ನು ಮನಸ್ಸಿನಲ್ಲಿ ಧರಿಸಬೇಕು. ಹೊರಗಿನ ನೀರು, ಹೊರಗಿನ ಹೂವು, ಹೊರಗಿನ ವಸ್ತುಗಳ ಅರ್ಪಣೆ ಬೇಡ, ಬದಲಿಗೆ, ನಮ್ಮ ಅವಗುಣಗಳನ್ನು ಲಿಂಗಕ್ಕೆ ಅರ್ಪಿಸಬೇಕು; ಲಿಂಗವನ್ನು ಧ್ಯೇಯವಸ್ತುವನ್ನಾಗಿ ಬಳಸಬೇಕೇ ಹೊರತು, ಪೂಜೆಯ ನಂತರ ವಸ್ತ್ರದಲ್ಲಿ ಕಟ್ಟಿಡುವುದಲ್ಲ; ಲಿಂಗವನ್ನು ಧ್ಯಾನಿಸುವ ಮೂಲಕ ಇಷ್ಟಲಿಂಗ, ಶೂನ್ಯಲಿಂಗ ಮತ್ತು ಪೂಜಕ ಒಂದೇ ಎಂಬ ಆನುಭಾವಿಕ ಅರಿವನ್ನು ಪಡೆಯಬೇಕು.
ತಾನು ಲಿಂಗವಲ್ಲ ಎಂಬ ಮರೆವಿಗೊಳಗಾದ ಮಾನವ ಲಿಂಗವನ್ನು ಹೊರಗೆ ಎಲ್ಲೆಲ್ಲೋ ಹುಡುಕುತ್ತಾನೆ. ಸ್ಥಾವರಲಿಂಗದಲ್ಲಿ ಹುಡುಕಿ ನಿರಾಶನಾದಂತೆ, ಇಷ್ಟಲಿಂಗದಲ್ಲಿಯೂ ಹುಡುಕಿ ನಿರಾಶನಾಗುತ್ತಾನೆ. ಇಷ್ಟಲಿಂಗವೂ ಸಹ ದೇವರಲ್ಲ (2/209, 210, 212, 213, 217, 219, ಇ.). ಅದು ಕೇವಲ ಅರಿವಿನ (ಲಿಂಗದ) ಕುರುಹು. ವಾಸ್ತವವಾಗಿ ನಮ್ಮ ದೇಹದಲ್ಲೇ ಶಿವ ಇದ್ದಾನೆಂದರೂ ಅವನು ಕಲುಷಿತ ದೇಹದಲ್ಲಿಲ್ಲ (2/139, 142). ನಮ್ಮ ಕಲುಷಿತ ದೇಹ ಶುದ್ಧವಾಗಬೇಕು, ಶಿವನ ವಾಸಸ್ಥಾನವಾಗಬೇಕು ಎಂದರೆ ದೇಹದಲ್ಲಿರುವ ಪಂಚಭೂತಗಳ ಪೂರ್ವಾಶ್ರಯವನ್ನು ಕಳೆಯಬೇಕು (2/136). ಆಗ ನಾವು ಪದ್ಮಗಳನ್ನು ಜಾಗೃತಗೊಳಿಸುವ ಮೂಲಕ ಅವುಗಳಲ್ಲಿರುವ ಲಿಂಗವನ್ನು ಕಾಣಬಹುದು (2/188, 189, 283). ಈ ವಿಚಾರದಲ್ಲಿ ವ್ರತಾಚರಣೆ ನಿಷ್ಪ್ರಯೋಜಕ (2/120, 182, 417, 632, 1534). ದೇಹದಂಡನೆಯಿಂದಲೂ ಲಿಂಗವನ್ನು ಕಾಣಲಾರೆವು (2/152). ಮರೆವನ್ನು ಹೋಗಲಾಡಿಸಿಕೊಳ್ಳುವ ಸೂಕ್ತ ಉಪಾಯವೆಂದರೆ ‘ನಾನು’ ಎಂಬ ಭಾವವನ್ನು ನಾಶ ಮಾಡುವ ಅನುಭಾವವನ್ನು ಸಾಧಿಸುವುದು. ಇದನ್ನು ಸಾಧಿಸಿದವನು ಕ್ರಮವಾಗಿ ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಮತ್ತು ಆಜ್ಞಾ ಚಕ್ರಗಳಲ್ಲಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗಗಳನ್ನು ಅನುಭವಿಸುತ್ತಾನೆ. ಇದರ ಪರಿಣಾಮವೆಂದರೆ ಅವನು ಸಹಸ್ರಾರದಲ್ಲಿರುವ ಅಮೃತವನ್ನು ಸವಿಯುತ್ತಾನೆ (2/255-262).
ಇದರಿಂದ ಅವನಿಗೆ ತನುಭಾವ, ಅಹಂಭಾವ ನಷ್ಟವಾಗುತ್ತದೆ. ಅಹಂಭಾವ ಇಲ್ಲವಾಗಿ ಕರ್ತೃತ್ವ ಭಾವ ಇಲ್ಲವಾಗುತ್ತದೆ (2/280). ಕರ್ತೃತ್ವ ಭಾವ ಇಲ್ಲವಾಗುವುದರಿಂದ ಅವನು ಮಾಡುವ ಕ್ರಿಯೆಗಳಲ್ಲಿ ಸ್ವಾರ್ಥ ಆಸೆಗಳು ಇಲ್ಲವಾಗಿ, ಅವನ ಕರ್ಮಗಳಿಗೆ ಫಲಗಳು ಇಲ್ಲವಾಗುತ್ತವೆ. ಕರ್ಮಫಲಗಳು ಇಲ್ಲವಾದರೆ ಪುನರ್ಜನ್ಮವಿಲ್ಲ. ಚಿತ್ರಗುಪ್ತರಿಗೆ ಕೆಲಸವಿಲ್ಲ. ಮತ್ತೊಮ್ಮೆ ಸೃಷ್ಟಿಗೂ ಸಿಲುಕುವುದಿಲ್ಲ (ಬ್ರಹ್ಮನಿಗೂ ಕೆಲಸವಿಲ್ಲದಂತಾಗುತ್ತದೆ).
ಮಾಯೆಗೆ ಒಳಗಾದ ಗೋರಕ್ಷ ದೇಹವೇ ತಾನೆಂದು ತಪ್ಪು ತಿಳಿದು, ಅದನ್ನು ವಜ್ರದಂತೆ ಕಠಿಣವನ್ನಾಗಿ ಮಾಡಿಕೊಳ್ಳುತ್ತಾನೆ. ಅವನು ತನ್ನಲ್ಲಿ ಒಂದು ಆತ್ಮವಿದೆ, ಅದೇ ಲಿಂಗ ಎಂಬ ಅರಿವು ಇಲ್ಲದ ಅಜ್ಞಾನಿ.
ಶಿವನನ್ನು ಕೂಡುವ ಎರಡು ಪ್ರಕಾರಗಳಿವೆ. ಸತ್ತ ಮೇಲೆ ಕೈಲಾಸಕ್ಕೆ ಹೋಗಿ ಶಿವನ ಸನ್ನಿಧಿಯಲ್ಲಿರುವುದು ಒಂದು ಪ್ರಕಾರ. ಪ್ರತಿಯೊಬ್ಬ ಮಾನವನಲ್ಲಿರುವ ಆತ್ಮವೂ ಲಿಂಗವೇ. ಅದನ್ನು ಜೀವಂತ ಇದ್ದಾಗಲೆ ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಪರಮ ಧ್ಯೇಯ. ಅದೊಂದು ರೀತಿಯ ಜ್ಞಾನ. ಅದನ್ನು ಅನುಭಾವದ ಮೂಲಕವೇ ಗಳಿಸಿಕೊಳ್ಳಬೇಕು. ಅದನ್ನು ಪಡೆದವನು ಮುಕ್ತ. ಅವನಿಗೆ ಯಾವ ಚಿಂತೆಯೂ ಇಲ್ಲ. ಯಾರು ಸತ್ತ ಮೇಲೆ ಶಿವ ಇರುವ ಕೈಲಾಸಕ್ಕೆ ಹೋಗಿ, ಶಿವಸನ್ನಿಧಿ ಯಲ್ಲಿರಬೇಕೆಂದು ಬಯಸುತ್ತಾರೊ ಅವರು ಮಾಯಾಧೀನರು. ಶಿವನಿಂದ ಭಿನ್ನವೆಂದು ತಿಳಿದಿರುವ ಅವರು ಮಾಯಾಧೀನರು. ಅವರು ಲಿಂಗೈಕ್ಯರಲ್ಲ, ಲಿಂಗೈಕ್ಯರಾಗಬೇಕೆಂಬ ಬಯಕೆಯೂ ಅವರಿಗಿಲ್ಲ. ಅವರು ಮುಕ್ತರಲ್ಲ. ಸನಕ, ಸಾನಂದ, ಬ್ರಹ್ಮ, ವಿಷ್ಣು, ಮುಂತಾದವರೆಲ್ಲ ಮಾಯಾಧೀನರೇ. ಮಾಯಾಧೀನರಾದ ಅವರು ಸಂಸಾರದಲ್ಲಿದ್ದಾರೆಂದರ್ಥ. ಮಾನವರಿಗೆ ಮತ್ರ್ಯಲೋಕದ ಸಂಸಾರ, ದೇವರಿಗೆ ದೇವಲೋಕದ ಸಂಸಾರ (2/503, 505-508, 510). ಶಿವನನ್ನು ಅಳಿಯದೆ ಕೂಡುವ ಮತ್ತು ಅಳಿದು ಕೂಡುವ ಯೋಗಗಳಲ್ಲಿ ಅಲ್ಲಮ ಮೊದಲನೆಯದು ಶ್ರೇಷ್ಠ ಎನ್ನುತ್ತಾರೆ (2/257).
3. ಮಾಯೆ ಎಂಬ ಪದವನ್ನು ಅಲ್ಲಮರು ಆಸೆ ಅಥವಾ ಆಕರ್ಷಣೆ ಎಂಬ ಅರ್ಥದಲ್ಲಿಯೂ ಬಳಸಿದ್ದಾರೆ. ಮಾಯೆಯಿಂದಾಗಿ ಮನುಷ್ಯನಲ್ಲಿ ಸ್ವಾರ್ಥ ಆಸೆಗಳು ಹುಟ್ಟುತ್ತವೆ. ಮನುಷ್ಯನಿಗೆ ನಾನು ಎಂಬ ಭಾವ ಬಹಳ ಮುಖ್ಯ. ಈ ಭಾವ ಆನೆಯಷ್ಟು ದೊಡ್ಡದು; ಅದನ್ನು ಮನಸ್ಸು ನಿಯಂತ್ರಿಸಬಲ್ಲುದು. ಆದರೆ ಆ ಮನಸ್ಸೇ ಮಂಗನಂತೆ ಚಂಚಲವಾಗಿದೆ. ಭೌತ ಪ್ರಪಂಚ ಸೂಳೆಯೆಂತೆ ಆಕರ್ಷಿಸುತ್ತಿರುವಾಗ ಆನೆಯಷ್ಟು ದೊಡ್ಡದಾದ ಸ್ವಾರ್ಥ ಭಾವವನ್ನು ಮಂಗನಂತಿರುವ ಮನಸ್ಸು ನಿಯಂತ್ರಿಸಲಾರದು (2/49). ಆಸೆ ಅಥವಾ ಆಕರ್ಷಣೆಗೊಳಗಾಗದವರು ತುಂಬಾ ವಿರಳ (2/150, 151).
ತಮ್ಮ ಆಸೆಗಳನ್ನು ನಿಯಂತ್ರಿಸಲಾಗದವರು ಮಾಯೆಯನ್ನು ದೂಷಿಸುತ್ತಾರೆ. ವಾಸ್ತವವಾಗಿ ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಅವುಗಳ ಬಗೆಗಿನ ಆಸೆಯೇ ಮಾಯೆ (2/72). ಮಾಯೆ ನಮ್ಮೊಳಗೇ ಇದೆ, ಹೊರಗಿಲ್ಲ. ಈ ಮಾಯೆ ಕೇವಲ ಹೊನ್ನು, ಹೆಣ್ಣುಗಳ ಬಗೆಗಿನ ಆಸೆಯಲ್ಲ, ಪ್ರಾಪಂಚಿಕ ದಾಹ ಯಾವುದಿದ್ದರೂ ಅದು ಮಾಯೆಯೇ (2/26, 29, 30, 46, 78, 99, 114, 116, ಇ). ಮಾಯಾಧೀನ ಮನುಷ್ಯ ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ಅನುಭವಿಸಲು ಸಿದ್ಧನಿದ್ದಾನೆ (2/123). ಈ ಆಸೆಗಳಿಂದ ಮುಕ್ತನಾಗಬೇಕೆಂದರೆ ಆಸೆಗಳನ್ನು ನಿಯಂತ್ರಿಸಬೇಕು; ಈ ಆಸೆಗಳನ್ನು ನಿಯಂತ್ರಿಸ ಬೇಕೆಂದರೆ ಮನುಷ್ಯ ಎಂದರೆ ದೇಹಾಭಿಮಾನ, ಆಸೆ-ಆಮಿಶ, ಕೋಪತಾಪಗಳನ್ನುಳ್ಳವನೇ ಹೊರತು ಲಿಂಗವಲ್ಲ ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಳ್ಳಬೇಕು. ಗುರುಕರುಣೆಯಿಂದ ಈ ಮರೆವನ್ನು ಹೋಗಲಾಡಿಸಿಕೊಳ್ಳಬಹುದು. ಅವನಿಗೆ ‘ನಾನು ಮಾಯೆಯ ಬಲೆಯಲ್ಲಿ ಸಿಲುಕಿದ ಮರುಳನಲ್ಲ, ನಾನು ನಿಜವಾಗಿಯೂ ಲಿಂಗ’ ಎಂಬ ಅರಿವು ಮೂಡಬೇಕು (2/11).
4. ಅಲ್ಲಮನು ಮಾಯೆ ಎಂಬ ಪದವನ್ನು ಭವ, ಜಗತ್ತು, ಸಂಸಾರ ಎಂಬರ್ಥದಲ್ಲಿ ಬಳಸುತ್ತಾನೆ. ಮಾಯಾಜನ್ಯ ಜಗತ್ತು ಅವನ ಪ್ರಕಾರ ‘ಆಡಂಬರದೊಳಗಾಡಂಬರ’ (2/24); ಮತ್ತೆ ಕೆಲವು ವೇಳೆ ‘ಊರಮಧ್ಯದ ಕಾಡು’ (2/26); ಮಾಯೆಗೆ ಒಳಗಾದ ಮನುಷ್ಯರನ್ನು ಆಕರ್ಷಿಸುವ ಸೂಳೆ (2/38, 49). ಅನೇಕ ವಚನಕಾರರ ಪ್ರಕಾರ ಪ್ರಪಂಚದ ಉಪಾದಾನ ಕಾರಣವಾದ ಮಾಯೆ (ಶಕ್ತಿ) ಅಧೋಮಾಯೆ ಮತ್ತು ಊಧ್ರ್ವಮಾಯೆ ಎಂದು ದ್ವಿವಿಧ. ಯಾವುದೂ ಮಿಥ್ಯೆಯಲ್ಲ. ಎರಡಕ್ಕೂ ಸ್ವತಂತ್ರ ಅಸ್ತಿತ್ವವಿದೆ. ವಾಸ್ತವವಾಗಿ ಇರುವುದೊಂದೇ ಶಕ್ತಿ (ಮಾಯೆ). ಶಕ್ತಿಯಿಂದಾದ ಇಂದ್ರಿಯ, ಅಂತಃಕರಣ ಮತ್ತು ದೇಹಗಳನ್ನು ಪ್ರಾಪಂಚಿಕ ಉದ್ದೇಶಕ್ಕೆ ಬಳಸಿಕೊಂಡರೆ ಅದು ಅಧೋಮಾಯೆ ಎನಿಸಿಕೊಳ್ಳುತ್ತದೆ; ಆಗ ನಮಗೆ ಕಾಣುವ ಪ್ರಪಂಚ ಸಂಸಾರ. ಅವೇ ದೇಹೇಂದ್ರಿಯಾದಿಗಳನ್ನು ಆಧ್ಯಾತ್ಮಿಕ ಉದ್ದೇಶಕ್ಕೆ ಬಳಸಿಕೊಂಡರೆ ಅದು ಊಧ್ರ್ವ ಮಾಯೆ ಎನಿಸಿಕೊಳುತ್ತದೆ. ಆಗ ನಮಗೆ ಕಾಣುವ ಜಗತ್ತು ಶಿವನ ಶರೀರ. ಇಲ್ಲಿ ಶಂಕರರ ಮಿಥ್ಯೆಗೂ ಅಲ್ಲಮನ ಸಂಸಾರಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಮನುಷ್ಯ ತನ್ನ ಬಗೆಗಿನ ಮರೆವಿನಿಂದಾಗಿ, ವಿಷಯಗಳ ಆಸೆಯಿಂದಾಗಿ ಸ್ವಾರ್ಥ ಕರ್ಮಗಳನ್ನು ಮಾಡುವ ಮೂಲಕ ತನ್ನ ಸಂಸಾರವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ವಿಶ್ವ ದೈವ ನಿರ್ಮಿತ. ಮಾನವ ನಿರ್ಮಿತ ಸಂಸಾರ ಲಿಂಗೈಕ್ಯನಿಗೆ ಇಲ್ಲವಾಗುತ್ತದೆ, ಎನ್ನುವುದು ತಪ್ಪು. ಬದಲಿಗೆ ಅದು ಶಿವನ ಶರೀರವಾಗುತ್ತದೆ. ಶರೀರ ಎಂಬ ಉಪಮೆಯನ್ನು ಬಿಟ್ಟು ದಾರ್ಶನಿಕವಾಗಿ ಮಾತಾಡಬೇಕೆಂದರೆ: ಅನುಭಾವಿಗೆ ಪ್ರಪಂಚವೂ ಕಾಣುತ್ತದೆ, ಅದರಲ್ಲಿರುವ ಶಿವನೂ ಕಾಣುತ್ತಾನೆ. ನಾನೇ ಆ ಜಗತ್ತಿನೊಳಗೊಂಡ ಶಿವ ಎಂಬ ಅನುಭೂತಿಯೂ ಅವನಿಗಿದೆ. ಶಾಂಕರ ಅದ್ವೈತದಲ್ಲಿ ದೇಹ ಮಾಯೆ; ಆದರೆ ಅಲ್ಲಮ ದೇಹವನ್ನು ದೇವಾಲಯದ ಮಟ್ಟಕ್ಕೆ ಏರಿಸುತ್ತಾರೆ.
ಮಾಯೆಯನ್ನು ಗೆದ್ದವನು ಎಂಬ ಬಿರುದನ್ನು ಅಲ್ಲಮರಿಗೆ ಅಂಟಿಸಲಾಗಿದೆ. ಚಾಮರಸನ ದೃಷ್ಟಿಯಲ್ಲಿ ಮಾಯೆ ಎಂದರೇನು? ಅವನ ಪ್ರಭುಲಿಂಗಲೀಲೆಯಲ್ಲಿ ಮಾಯೆ ಎಂಬುದು ಪಾರ್ವತಿಯ (ಶಕ್ತಿಯ) ತಾಮಸಿಕ ಅಂಶ (ವಿಮಲೆ ಎಂಬುದು ಶಕ್ತಿಯ ಸಾತ್ವಿಕ ಅಂಶ). ಮಾಯೆ ಅವನ ದೈಹಿಕ ಸಂಗವನ್ನು ಬಯಸಿ, ಅವನನ್ನು ಅಪ್ಪಿಕೊಂಡಾಗ ಕೇವಲ ಗಾಳಿಯನ್ನು ಅಪ್ಪಿಕೊಂಡಂತಾಯಿತೇ ಹೊರತು, ಒಬ್ಬ ಜೀವಂತ ಪುರುಷನನ್ನು ಅಪ್ಪಿಕೊಂಡಂತಾಗಲಿಲ್ಲ. ಹಾಗಾದರೆ ಅಲ್ಲಮರಿಗೆ ಪಂಚಭೂತಗಳಿಂದಾದ ದೇಹ (ಸ್ಥೂಲಶರೀರ) ಇರಲಿಲ್ಲವೆ? ಸ್ಥೂಲಶರೀರವಿಲ್ಲದ ಅಲ್ಲಮರನ್ನು ಅಲ್ಲಮ ಎಂದು ಗುರುತಿಸುವುದಾದರೂ ಹೇಗೆ? ಈ ಪ್ರಶ್ನೆ ಗೋರಕ್ಷನ ಪ್ರಸಂಗದಲ್ಲೂ ಕಾಡುತ್ತದೆ, ಬೇರೊಂದು ರೀತಿಯಲ್ಲಿ. ಗೋರಕ್ಷನನ್ನು ಅಲ್ಲಮ ಕತ್ತಿಯಿಂದ ಹೊಡೆದಾಗ ಗೋರಕ್ಷನಿಗೆ ನೋವಾಗಲಿಲ್ಲ, ಗಾಯವಾಗಲಿಲ್ಲ. ಏಕೆಂದರೆ ಅವನದು ವಜ್ರಕಾಯ. ಆದರೆ ಅದೇ ಗೋರಕ್ಷ ಅಲ್ಲಮನಿಗೆ ಕತ್ತಿಯಿಂದ ಹೊಡೆದಾಗ, ಗಾಳಿಯಲ್ಲಿ ಕತ್ತಿಯನ್ನು ಬೀಸಿದಂತೆ ಆಯಿತೇ ಹೊರತು, ಅಲ್ಲಮರಿಗೆ ಏನೂ ಆಗಲಿಲ್ಲ. ಏಕೆಂದರೆ ಅಲ್ಲಮ ಸ್ಥೂಲಶರೀರಿಯಾಗಿರಲಿಲ್ಲ, ಕೇವಲ ವ್ಯೋಮಕಾಯನಾಗಿದ್ದ. ಸ್ಥೂಲ ಶರೀರವಿಲ್ಲದ ಅಲ್ಲಮರಿಗೆ ಮಾಯೆ (ಲೈಂಗಿಕ ಆಸೆ) ಇರಲು ಹೇಗೆ ಸಾಧ್ಯ? ಅಲ್ಲದೆ, ಶಿವನ ಸಂಕೇತವಾದ ಅಲ್ಲಮರಿಗೆ ಲೈಂಗಿಕ ಆಸೆ ಇರಲು ಹೇಗೆ ಸಾಧ್ಯ? ಭೌತಿಕ ಶರೀರಕ್ಕಿರಬೇಕಾದ ಆಸೆರೋಷಗಳನ್ನು ಅಲ್ಲಮ ಆಧ್ಯಾತ್ಮದ ಬೆಂಕಿಯಲ್ಲಿ ಸುಟ್ಟಿದ್ದ ಎಂಬ ದಾರ್ಶನಿಕ ಸತ್ಯವನ್ನು ಚಾಮರಸ ಮತ್ತು ಶೂನ್ಯಸಂಪಾದನೆಕಾರರು ಕಾವ್ಯಾತ್ಮಕವಾಗಿ ಅಲ್ಲಮ ವ್ಯೋಮಶರೀರಿಯಾಗಿದ್ದ ಎನ್ನುತ್ತಾರೆ. ಹೀಗೆ ನೋಡಿದಾಗ ಚಾಮರಸ ಮತ್ತು ಶೂನ್ಯಸಂಪಾದನೆಕಾರರ ಅಲ್ಲಮನಿಗೂ ವಚನಗಳ ಅಲ್ಲಮನಿಗೂ ಈ ವಿಚಾರದಲ್ಲಿ ಏನೂ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಮರ ಮಾಯೆ ಸಂಸಾರಿಗೆ ಅಧೋಮಾಯೆ, ಚಾಮರಸನಿಗೆ ಮಾಯಾದೇವಿ; ಅನುಭಾವಿಗೆ ಯಾವುದು ಊಧ್ರ್ವ ಮಾಯೆ ಎಂದು ಅಲ್ಲಮನ ಪರಿಭಾವಿಸುತ್ತಾನೋ ಅದು ಚಾಮರಸನಿಗೆ ವಿಮಲೆಯಾಗುತ್ತದೆ.
—–
ಮೇಲೆ ಕಂಡ ಕಂಸಗಳೊಳಗಿನ ಅಂಕಿಗಳಲ್ಲಿ ಮೊದಲನೆಯದು ಪುಸ್ತಕ ಪ್ರಾಧಿಕಾರ 2001ರಲ್ಲಿ ಪ್ರಕಟಿಸಿದ ಸಮಗ್ರ ವಚನಸಂಪುಟದ ಸಂಪುಟ ಸಂಖ್ಯೆಗೂ ಎರಡನೆಯ ಅಂಕಿ ಆ ಸಂಪುಟದಲ್ಲಿರುವ ವಚನದ ಅನುಕ್ರಮ ಸಂಖ್ಯೆಗೂ ಅನ್ವಯಿಸುತ್ತವೆ.
Comments 11
VIJAYAKUMAR KAMMAR
Feb 13, 2022ಮಾಯೆಯ ಲೇಖನ ಉತ್ತಮವಾಗಿದೆ. Connectivity is very well explained.
One doubt I have. ಜನ್ಮ ಜನ್ಮಾಂತರ
ಶರಣರು ಪುನರ್ಜನ್ಮದಲ್ಲಿ ವಿಶ್ವಾಸವಿತ್ತಾ ಅನ್ನೋದು ಪ್ರಶ್ನೆ. Article is classic.
Convey my regards to the author please. 🙏🙏🙏🙏🙏👏👏👏👏
Ravishankar Chitradurga
Feb 14, 2022ದೇಹ ಮಾಯೆಯೆನ್ನುವ ಶಂಕರರಿಗೂ, ದೇಹ ದೇಗುಲವೆನ್ನುವ ಪ್ರಭುದೇವರಿಗೂ ಅಜಗಜಾಂತರ ಅಂತರವಿದೆ… ಮಹಾದೇವಪ್ಪ ಶರಣರಿಗೆ ವಂದನೆಗಳು.
Panchakshari HV
Feb 16, 2022ಮಾಯೆಯ ಕುರಿತಾದ ಒಳನೋಟದ ಈ ಲೇಖನ ಮನನೀಯ. ಕೃತಿ ಕರ್ತೃವಿಗೂ ಹಾಗೂ ಪ್ರಕಾಶಕರಿಗೂ ಅಭಿನಂದನೆಗಳು. ಶರಣುಶರಣಾರ್ಥಿ.
ವಿವೇಕ್ ದಾವಣಗೆರೆ
Feb 21, 2022ಮಾಯಾ ಕೋಲಾಹಲ ಹಾಗೂ ಲಕ್ಷ್ಮೀಪತಿ ಕೋಲಾರ ಅವರ ಅಲ್ಲಮನ ಬಯಲಾಟ ನಾಟಕಗಳು ನೆನಪಾದವು. ಅವುಗಳನ್ನೂ ಹಿನ್ನೆಲೆಯಲ್ಲಿಟ್ಟು ಚರ್ಚಿಸಿದರೆ ಇನ್ನೂ ಹೆಚ್ಚಿಸ ಸ್ಪಷ್ಟತೆ ದೊರೆಯುತ್ತಿತ್ತು. ಶಂಕರರ ವಿಚಾರಗಳಿಗೂ ಅಲ್ಲಮರ ಅನುಭಾವದ ಮಾತುಗಳಿಗೂ ಬಹಳ ಬಹಳ ವ್ಯತ್ಯಾಸಗಳಿವೆ.
Nagesh Bhadravathi
Feb 21, 2022ಅಲ್ಲಮಪ್ರಭುದೇವರನ್ನು ವ್ಯೋಮಶರೀರಿಯಾಗಿದ್ದರು ಎನ್ನುವ ಮಾತಿನ ಮರ್ಮ ಬಹಳ ಅರ್ಥಪೂರ್ಣವಾಗಿದೆ. ಮಾಯೆ ಗೆದ್ದ ಮಹಾಪುರುಷ ಅಲ್ಲಮರು. ಈ ಮಾಯೆ ಕೇವಲ ಮೋಹವಲ್ಲ, ಅದು ಎಲ್ಲಾ ಬಗೆಯ ಭವದ ರೂಪವಾಗಿ ಕಾಣುವಂತಹುದು. ಉತ್ತಮ ಲೇಖನ.
Mallikarjuna Bilagi
Feb 22, 2022ಮಾಯೆ ಎಂದರೆ ಭವ, ಜಗತ್ತು, ಸಂಸಾರ – ಶರಣರ ಮಾಯೆ ಮರೆವಿನ ಸಂಕೇತ. ಸುಂದರವಾದ ಲೇಖನಕ್ಕೆ ಶರಣರಿಗೆ ಧನ್ಯವಾದಗಳು.
Jayaraj Bidar
Feb 23, 2022ಅಲ್ಲಮರ ಮಾಯೆಗೂ, ಶಂಕರರ ಮಾಯೆಗೂ ಸಂಬಂಧವೇ ಇಲ್ಲವೆನ್ನುವುದು ನಿಜ. ಅಲ್ಲಮರ ಮಾಯೆಯ ಪರಿಕಲ್ಪನೆ ನನಗೆ ಸ್ಪಷ್ಟತೆ ಕೊಡಲಿಲ್ಲ. ನೀವು ಬ್ರಾಕೆಟ್ಟಿನಲ್ಲಿ ಹಾಕಿದ ವಚನಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ತೊಡಕಾಯಿತು.
Lingaraj Patil
Feb 24, 2022ಪ್ರಭುದೇವರು ಮಾಯೆಯನ್ನು ಬಳಸಿದಷ್ಟು ಬೇರಾವ ಶರಣರೂ ಆ ಶಬ್ದವನ್ನು ಹೆಚ್ಚಾಗಿ ಬಳಸಿದಂತೆ ಕಾಣುವುದಿಲ್ಲ, ಯಾಕೆ ಸರ್?
Ravikumar Pavate
Feb 27, 2022ಅಲ್ಲಮರ ಮಾಯೆ ಸಂಸಾರಿಗೆ ಅಧೋಮಾಯೆ, ಚಾಮರಸನಿಗೆ ಮಾಯಾದೇವಿ; ಅನುಭಾವಿಗೆ ಯಾವುದು ಊಧ್ರ್ವ ಮಾಯೆ ಎಂದು ಅಲ್ಲಮನ ಪರಿಭಾವಿಸುತ್ತಾನೋ ಅದು ಚಾಮರಸನಿಗೆ ವಿಮಲೆಯಾಗುತ್ತದೆ… ಅರ್ಥವತ್ತಾದ ಸುಂದರ ಗ್ರಹಿಕೆ,ವಂದನೆಗಳು ತಮಗೆ.
Shashikiran J
Feb 27, 2022This post actually made my day. I am truly enjoying the design and layout of this website.
Vijaya dandeli
Mar 11, 2022Fantastic article. Thanks again, great.