ಅರಿವಿನ ಬಾಗಿಲು…
ಹುಚ್ಚು ಮನಸಿನ ಕುಣಿತ
ದಿಕ್ಕುದಿಕ್ಕಿಗೂ ಸೆಳೆತ
ಅಡಿಗಡಿಗು ಎಡತಾಕುವ
ವಿಷಯಗಳ ಡೈನಮೈಟು
ಕಾಲು ಎಚ್ಚರ ತಪ್ಪದಂತೆ
ಜಾಣ ನಡಿಗೆಯ ಹೇಳಿಕೊಡುತಾನೆ
ಹುಟ್ಟು-ಸಾವಿನ ಚಕ್ರದ ಮರ್ಮ ತೋರುತಾನೆ
ಭಾವ ಜಾಲಗಳ ಹೆಣಿಗೆ
ಚಿತ್ತ ಭ್ರಾಂತಿಯ ಮೆರವಣಿಗೆ
ಪಂಚೇಂದ್ರಿಯಗಳ ಉರವಣೆ
ಮುಗಿಯಲಾರದ ಬವಣೆ
ಉಸಿರುಸಿಕ್ಕು ಚಡಪಡಿಸುವಾಗ
ಬಲೆ ಕತ್ತರಿಸುವ ಕಲೆಯ ಕಲಿಸುತಾನೆ
ಮತ್ತೆ ಅದ ಕಟ್ಟದಾ ತಂತ್ರ ತಿಳಿಸುತಾನೆ
ಬಾಳ ಕದಳಿಯಲಿ
ಬಸವಳಿದು ಕುಸಿದಾಗ
ದಿಕ್ಕುಗಾಣದೆ ಕಂಗೆಟ್ಟು ಅಲೆವಾಗ
ಮಮ್ಮಲ ಮರುಗುತಾನೆ
ಮಮತೆಯಲಿ ಕೈಹಿಡಿದು
ಪಯಣದ ನಿಜವ ಅರುಹುತಾನೆ
ಮತ್ತೆ ದಾರಿತಪ್ಪದ ಗುಟ್ಟು ಕಲಿಸುತಾನೆ
ನಿನ್ನ ನೀತಿಳಿಯೆಂದು
ಅರಿವಿನ ಕಂದೀಲ ಕೈಗಿಕ್ಕಿ
ಅಂತರಂಗದ ಪಯಣಕೆ
ಮನವ ಸಿದ್ಧಗೊಳಿಸುತಾನೆ
ಭವದ ಬೆಂಗುಡಿಯ ಬಿಡಿಸಿ
ಭಕ್ತಿಯ ಮರ್ಮವನು ಅಂಗೈಗೆ ಇಡುತಾನೆ
ನಿಜಮುಕ್ತಿಯ ಮಾರ್ಗವನು ತೋರುತಾನೆ
ತಿದ್ದಿ ತೀಡಿ ಬೆಳೆಸುತಾನೆ
ಝುಂಕಿಸಿ ಮನವ ಚುಚ್ಚುತಾನೆ
ಕದ್ದು ನಡೆದರೆ ಗುದ್ದುತಾನೆ
ಸುಳ್ಳು ನುಡಿಯಲು ಕೆರಳುತಾನೆ
ಸೋಗು ಮುಖಗಳ ಕೆಡವುತಾನೆ
ಬೀಳದಂತೆ ಎಚ್ಚರಿಸುತಾನೆ
ಬಿದ್ದಾಗಲೆಲ್ಲಾ ಎತ್ತುತಾನೆ
ಬೈದು ಬುದ್ಧಿ ಹೇಳುತಾನೆ
ನನ್ನ ಮೋಸ ನನಗೆ ತೋರುತಾನೆ
ಕಂಗಳ ಕರುಳ ಕತ್ತರಿಸುತಾನೆ
ಮನದ ತಿರುಳ ಹುರಿಯುತಾನೆ
ಮಾತಿನ ಮೂಲಕೆ ಒಯ್ಯುತಾನೆ
ಅರಿವಿನ ನೆಲೆಯತ್ತ ನಡೆಸುತಾನೆ
ನನ್ನ ಒಳಗನು ನನಗೆ ಪರಿಚಯಿಸುತಾನೆ
ನನ್ನ ನನಗೊಪ್ಪಿಸಲು
ಗುರು ತೆರೆಯದ ಕಿಟಕಿಗಳಿಲ್ಲ…
ತೋರದ ದಾರಿಗಳಿಲ್ಲ…
ಹೇಳದ ಗುಟ್ಟುಗಳಿಲ್ಲ…
ಸತ್ಯದ ದಾರಿ ತೋರಿದ
ಎನ್ನ ಭಾಗ್ಯದ ಬಾಗಿಲು ನೀ
ಶರಣು ಗುರುವೇ ನಿನಗೆ ಶರಣು ಶರಣು.
Comments 3
ಶರಣ್ ಸ್ವಾಮಿ ಮಠಪತಿ
Oct 19, 2022ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
ಶರಣು ಶರಣಾರ್ಥಿ
ಶರಣ್ ಸ್ವಾಮಿ
Sharan swami
Oct 19, 2022ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
ಶರಣು ಶರಣಾರ್ಥಿ
ಶರಣ್ ಸ್ವಾಮಿ
ಪೆರೂರು ಜಾರು, ಉಡುಪಿ
Oct 20, 2022ಗುರು ಅರಿವಿನ ಬಾಗಿಲಾದರೆ ಓಕೆ; ಗರುವದ ಬಾಗಿಲಾದರೆ ಜೋಕೆ; ಈಗಿನ ಗುರುಗಳನ್ನು ಕಾಣುವಾಗ ಹೊರಗೆ ಒಳಗೆ ಬರಿ ಬಯಕೆ!