ಅಂದು-ಇಂದು
ಅಂದು-
ಹೇಗೋ ಎಂತೋ
ಸುರುಸುರುಳಿಯಾಗಿ
ಬಗೆಬಗೆಯಲಿ ಪರಿಪರಿಯಲಿ
ಸುತ್ತಿಕೊಂಡಿದ್ದು-
ಮೆತ್ತಿಕೊಂಡಿದ್ದು
ಬೆಳೆಯುತ್ತಾ-ಬಲಿಯುತ್ತಾ
ನಂಟಾಗಿ- ಗಂಟಾಗಿ
ಯಮಯಾತನೆಯ ಹೊರೆಯಾಗಿ
ಮುಡಿಯೇರಿ ಭವಭಾರ
ಉಸಿರ ಹಿಸುಕಿತ್ತು.
ಇಂದು-
ಹೊರೆಗಳನು ಇಳುಹುತ್ತಾ
ಗಂಟುಗಳ ಬಿಡಿಸುತ್ತಾ
ಪೊರೆಗಳನು ಕಳಚುತ್ತಾ
ಹಗುರಾಗಿ ನವಿರಾಗಿ
ಸಾಗುತಿದೆ ನಡಿಗೆ
ಕಾಲದೊಂದಿಗೆ ಚಲನೆ…
ಗುರು ಸಿಕ್ಕು ಬೆಳಕಾಗಿ
ಗಮ್ಯತೆಯ ಅರಿವಾಗಿ
ಕೇಳುವ- ಕೆದಕುವ
ಸಂಚಿ ಬರಿದಾಗಿತ್ತು…
ನಿನ್ನೆ ಕಳೆದ ಮೇಲೆ
ನಾಳೆ ಎಂಬುದೂ ಇಲ್ಲ…
ಮಾತು ಮರೆತಾ ‘ನಾನು’
ಮಾತಿಲ್ಲದಾ ನೀನು
ಸಂಧಿಸುವ ಆ ಗಳಿಗೆ
ಬರಬಾರದೇ ಇಂದೇ?