
ನಾನು ಬಿಂಬ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು.
-ಅಲ್ಲಮ
ಈ
ಕನ್ನಡಿಯಲಿ
ಕಾಣುವ ನನ ಬಿಂಬವ
ಓಡಿಸುವುದು ಹೇಗೆ…??!!
ಕಣ್ಣ ಮುಚ್ಚಿದರೆ ಕನ್ನಡಿ ದೂರ
ಕಣ್ಣ ತೆರೆದರೆ ನಾನು ಅದೂರ
ನಾನು ಬಿಂಬ ಬಿಂಬ ನಾನು
ಎರಡರಲಿ ಒಂದ ಕೊಲಲಾಗದು
ನಾನು
ಇದ್ದಂತೆ ನನ್ನ ಬಿಂಬ
ಹಿಗ್ಗದು ಕುಗ್ಗದು
ಹಿಗ್ಗಿರುವೆ ಹಾಗೇ…
ಕಂಡುದ ಹೇಳದು ಹಾಗೆ..
ನಾನು ಮಾಸಿಯೂ ಮಾಸದು ಬಿಂಬ
ನಾನು ಮಾದರೂ ಮಾದುದೇ..ಬಿಂಬ
ಏಸು ಬಿಂಬಗಳೋ….
ಎನ್ನೊಳಗಿಲ್ಲ ಒಂದೂ ಒಂದು
ಬಂದವು ಹೋದವು ಸರಳ
ನನ್ನಲ್ಲಿಯೇ ಇಲ್ಲದುದು ಇನ್ನೆಲ್ಲಿ..
ನಿನ್ನೊಳಗೆ ನಾನೋ ..
ನನ್ನೊಳಗೆ ನೀನೋ…
ಈ ತರ್ಕವೆಲ್ಲಾ ಪಕ್ಕಕ್ಕೆ ಇಡು
ಬಿಂಬಕೆ ಮತಿ ಇಲ್ಲ ಗತಿ ಇಲ್ಲ
ಎಂದೆಂದಿಗೂ ಅಹಂಗೆ
ಆಡಿ ಪೊಳ್ಳಾದೆ ನಾನು
ಆಡದೆ ದಿವ್ಯ ಅದು
ನಡೆಯಲು ಇರುವ ದಾರಿ
ಒಂದೇ ಪುರಾತನರ ನಡೆ
ಕನ್ನಡಿಯ ಕುರುಡಾಗಿಸಲಾರೆ
ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ ಇದೇನೆಂದರಿಯೆ.
-ಅಲ್ಲಮ