
ಪೊರೆವ ದನಿ…
ಮೈಯೆಲ್ಲಾ ಕಿವಿಯಾಗಿ
ಮನವೆಲ್ಲಾ ಕಣ್ಣಾಗಿ
ಕೇಳಿಸಿಕೊಂಡೆನಯ್ಯಾ
ನೀನಾಡಿದ ಒಂದೊಂದು ನುಡಿಯ
ಮರೆತು ಹೋಗದಂತೆ
ನಾಲಿಗೆಗೆ ಮಂತ್ರವಾಗಿಸಿದೆ
ಜಾರಿಹೋಗದಂತೆ
ಜೋಪಾನದಿ ಎದೆಗಿಳಿಸಿಕೊಂಡೆ.
ಇಲ್ಲಿದೆ ಕೊಳೆ ಅಲ್ಲಿದೆ ಹೊಲೆ
ಇದೋ ನೋಡು
ದುರ್ವಿಚಾರಗಳ ನೆಲೆ
ಅದೇಕೆ ಬಂತು
ತನ್ನೆಲ್ಲಾ ಬಳಗಸಹಿತ
ದುರ್ಗುಣಗಳ ದಂಡು
ಹುಡುಕಿ ತೆಗೆ ತೆವಲುಗಳ
ಹಿಸುಕಿ ನೋಡು
ನಂಬಿಕೆಗಳ, ಭಾವಗಳ
ಬೂಟಾಟಿಕೆಯ ನಡೆಗಳ
ತೋರುತ್ತ ಹೋದೆಯಯ್ಯಾ
ಮಿಂಚಿನ ಚಾಟಿಯಂತೆ…
ಹಗಲುರಾತ್ರಿ ಎನದೆ
ಬೇಡದ್ದು, ಮರೆತದ್ದು
ಅಗತ್ಯವೇ ಇಲ್ಲದ್ದು
ಎಲ್ಲ ಕಲಬೆರಕೆಯಾಗಿ
ಸುಳಿಯಾಗಿ ಸೆಳೆವಾಗ
ಎದೆಯುದ್ದ, ಕೊರಳುದ್ದ
ಉಕ್ಕೇರಿ ಅಪ್ಪಳಿಸುವಾಗ
ಕೊಚ್ಚಿ ಹೋಗದಂತೆ
ನಿಲುವ ಗುಟ್ಟ ಹೇಳಿಕೊಟ್ಟೆ.
ಸುತ್ತುವರಿದ ಕದಳಿಯಲಿ
ಕಳೆದುಹೋಗದಂತೆ
ಎದುರಿನ ಜಾಲಕ್ಕೆ
ಸಿಕ್ಕಿ ಬೀಳದಂತೆ
ನನ್ನದೇ ಮೋಸಕ್ಕೂ
ನಾನೊಳಗಾಗದಂತೆ
ಭವದ ಜಟಿಲತೆಗಳಿಗೆ
ಎದೆಗುಂದದಂತೆ
ಮೂರರ ಮಾಯೆಗೆ
ಮಾರುಹೋಗದಂತೆ
ಪಾರಾಗುವ ಪಟ್ಟುಗಳ
ಕಲಿಸಿ ಕಾಪಾಡಿದೆ.