
…ಬಯಲನೆ ಬಿತ್ತಿ
ಅಲ್ಲಿ
ನೇತಾಡುವ
ಪಟಗಳೆಲ್ಲಾ ನಿನ್ನೆಯವು
ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ
ಕಣ್ಣೊಳಗಣ ರೂಹು ಕಣ್ಣ ಕೊಲ್ಲದು
ಕಂಗಳ ಮರೆಯ ಕತ್ತಲಿಗೆ
ಕಂಗಳೇ ಪ್ರಮಾಣ
ಪದದ ಅರ್ಥ ಬಿಟ್ಟು
ಕೊಡದ ಗುಟ್ಟು
ನಿಂದರೆ ನೆಳಲಿಲ್ಲ
ನಡೆದರೆ ಹೆಜ್ಜೆಯಿಲ್ಲ
ಊರಿಂದ ಹೋದವರು
ದೂರದ ಸುದ್ದಿ ಹೇಳರು
ಮರವೇ ಬಿದ್ದು ಒಣಗಿತು
ನೆಳಲು
ಇನ್ನೇನು ಇಲ್ಲ
ನೆಲಕ್ಕೆ ಬಿದ್ದ ಹಣ್ಣು
ಮಣ್ಣಾಗುವುದ ಕಾಯುತ್ತಾ ಇದೆ ಬೀಜ.
Comments 1
ಡಾ.ಉಮೇಶ ಸೊರಬ
Aug 13, 2025ಜ್ಯೋತಿಲಿಂಗಪ್ಪ ಶಿವನಕೆರೆ ಅವರ ” ಬಯಲನೆ ಬಿತ್ತಿ ” , ಕಾಲದ ಪರಿಧಿಯಾಚೆ ನಿಂತ ಜಾಗೃತ ಮನಸ್ಸೊಂದು ‘ ಬಯಲು ‘ ಜಿಜ್ಞಾಸೆ ಗೆ ಆತುಕೊಂಡು ಮನುಷ್ಯ ಸಂಬಂಧಗಳ ಅರ್ಥವನ್ನು ವ್ಯಾಖ್ಯಾನಿಸುವ ಅಪರೂಪದ ಕವಿತೆಯಾಗಿ ಮೂಡಿಬಂದಿದೆ.ಕವಿಯ ಅರಿವು ಮತ್ತು ಅನುಭವಗಳು ಕವಿತೆಯ ಆಶಯವನ್ನು ವಿಶೇಷ ರೂಪಕಗಳ ಮೂಲಕ ಹೃದ್ಯಗೊಳಿಸುವ ಕುಶಲಕಾರ್ಯ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.’ ಪದದ ಅರ್ಥವನ್ನು ಬಿಟ್ಟುಕೊಡದ ಗುಟ್ಟ’ ನು ಬಯಲುಮಾಡ ಹೊರಡುವ ಸಹೃದಯರಿಗೆ ಈ ಕವಿತೆ ಒಂದು ಕೌತುಕದ ಸವಾಲೇ ಆಗಿದೆ…..
ಕವಿಗೆ ಅಭಿನಂದನೆಗಳು