Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೊಂದು ನೀರ್ಗುಳ್ಳೆ
Share:
Poems September 6, 2023 ಕೆ.ಆರ್ ಮಂಗಳಾ

ನಾನೊಂದು ನೀರ್ಗುಳ್ಳೆ

ಕಾಲದ ಊದುಗೊಳವೆಯಲಿ
ನಿರಂತರವಾಗಿ ಉಕ್ಕುತಿವೆ
ಅನಂತಾನಂತ ನೀರ್ಗುಳ್ಳೆ
ಎಲ್ಲಕೂ ಒಂದೇ ಹುಟ್ಟು
ಒಂದೇ ಬಗೆಯ ಸಂಯೋಜನೆ

ನಾ ಬೇರೆ ನೀ ಬೇರೆ
ಅಂವ ಬೇರೆ ಇಂವ ಬೇರೆ
ನಾ ಮೇಲು ನೀ ಕೆಳಗೆ
ಅಕಿ ಹೆಚ್ಚು ಇಕಿ ಕಡಿಮೆ
ಗುಳ್ಳೆಯ ತೆಳು ಗೆರೆಯ ಆಚೀಚೆ
ಜಗದುದ್ದಗಲಕ್ಕೂ ತಾರತಮ್ಯ

ನೋಡುನೋಡುತ್ತಲೇ
ಇಲ್ಲೇ ಇದ್ದದ್ದು, ಅತ್ತ ಸರಿದದ್ದು
ಈಗ ಚಿಮ್ಮಿದ್ದು, ಮೇಲೆ ಹಾರಿದ್ದು
ಇಲ್ಲವಾಗುವ ನೀರ್ಗುಳ್ಳೆಗಳಲ್ಲಿ
ಯಾವುದಕೆ ಪೈಪೋಟಿ?
ಹಿರಿದಾದರೇನು, ಕಿರಿದಾದರೇನು
ಬಣ್ಣ ಯಾವುದಾದರೇನು
ಅಮರತ್ವವುಂಟೆ ಗುಳ್ಳೆಗೆ?

ಮುಟ್ಟಿದರೆ ಫಟ್ಟೆನುವ ಗುಳ್ಳೆ
ತನ್ನಲ್ಲಿ ತಾನೇ ಊದೆಬ್ಬಿಸುವ
ಮೋಹ, ಮದ, ಮತ್ಸರ
ದ್ವೇಷ, ದುರ್ಗುಣಗಳ
ಒಂದಲ್ಲಾ ಎರಡಲ್ಲಾ
ನೂರಾರು ಬುರುಜುಗಳು
ಗುಳ್ಳೆಯೊಳಗಣ ಗುಳ್ಳೆಗಳ
ಈ ಮೆಳ್ಳಗಣ್ಣಿನ ನೋಟಕೆ
ಕಂಡೀತೇ ಲೋಕ ಸತ್ಯ?

ನಿನ್ನೊಳು ನೀನಿರು ಎನುವ
ಗುರು ಸೂತ್ರವ ಹಿಡಿದು
ಈ ಪರಕಾಯ ಪೊರೆಗಳ
ಹಂಗು ಕಳಚಲೇ ಬೇಕು…
ಕೊರಗಲಿಕೆ, ಬೇಯಲಿಕೆ
ಸಮಯವೆಲ್ಲಿದೆ ಎನುವ
ನಶ್ವರತೆಯ ಸತ್ಯವನು
ಕಣ್ಬಿಟ್ಟು ನೋಡಲೇ ಬೇಕು.

ಇಬ್ಬನಿಯ ಹನಿ ಎನ್ನಿ
ಮಿನುಗಿ ಮರೆಯಾಗೋ ಮಿಂಚೆನ್ನಿ,
ಭ್ರಮೆಯೆನ್ನಿ, ಕನಸೆನ್ನಿ,
ಮೋಡದ ನೆರಳೆನ್ನಿ,
ಅಲೆಯೆನ್ನಿ, ಇಂಚರವೆನ್ನಿ,
ಬೀಸಿ ಹೋಗುವ ಗಾಳಿಯೆನ್ನಿ,
ಹಬೆ ಎನ್ನಿ, ಬಾಷ್ಪವೆನ್ನಿ…
ಏನಾದರೂ ಅನ್ನಿ ಈ ಗುಳ್ಳೆಗೆ

ಅನಂತ ಕಾಲದಲಿ, ಅನಂತ ವಸ್ತುವಿನಲಿ
ಅನಂತ ಜಾಗದಲಿ
ಅನಂತಾನಂತ ಗುಳ್ಳೆಗಳಲಿ
ಕ್ಷಣ ಮಾತ್ರವೇ ಇರುವ,
ಯಾವಾಗ ಬೇಕಾದರೂ ಸಿಡಿವ
ನೀರ ನಿರ್ಮಿತಿ ಮಾತ್ರವೇ
ನಾನೆನುವ ನಿಜವು ಮರೆಯದಿರಲಿ.

Previous post ಹಾಯ್ಕು
ಹಾಯ್ಕು
Next post ವಚನ – ಚಿಂತನ
ವಚನ – ಚಿಂತನ

Related Posts

ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
ಕಾಯದೊಳಗಣ ಬಯಲು
Share:
Poems

ಕಾಯದೊಳಗಣ ಬಯಲು

November 7, 2020 ಜ್ಯೋತಿಲಿಂಗಪ್ಪ
ಈ ಬಯಲು ಗುರುತಿಸಲಾರೆ ನನ್ನ ಕಣ್ಣ ಎದುರು ನಾನು ಬಯಸುವ ರೂಹು ಇಲ್ಲ ಕಣ್ಣು ಹೇಳಿದುದು ಸುಳ್ಳೇ ನೀ ಬಿಟ್ಟ ಉಸಿರಲೊಂದು ದನಿ ಇದೆ ನಾ ಕೇಳಲಾರೆ ಉಸಿರು ಒಳಗಣ ದನಿ ಉಸಿರು ನುಂಗಿತು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಭಾರ
ಭಾರ
October 6, 2020
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ನೋಟದ ಕೂಟ…
ನೋಟದ ಕೂಟ…
May 10, 2023
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಮನಸ್ಸು
ಮನಸ್ಸು
September 7, 2020
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
Copyright © 2025 Bayalu