ಹಣತೆಯ ಹಂಗು
ನಾನೆಂಬ ಕತ್ತಲೆಗೆ
ನೀನೆಂಬ ಜ್ಯೋತಿ
ನಾನಿದ್ದಾಗ ನೀ
ಇರಲೇ ಬೇಕೆನುವ ತರ್ಕ
ನಾನು ಕರಗದೆ
ನೀನಾಗಲಾರೆ
ನೀನು ಸರಿಯದೇ
ಬೆಳಕ ಕಾಣಲಾರೆ…
ಕತ್ತಲೆಗಲ್ಲವೆ
ಬೆಳಕಿನ ಮೋಹ?
ಕೈಯ ಹಣತೆಯಲಿ
ಕುಣಿವ ದೀಪವ
ನೋಡುತಾ
ಗಾಳಿಗಾರದಂತೆ
ಜೋಪಾನವ ಮಾಡುತಾ
ನೆಲಮುಗಿಲ ಹಬ್ಬಿ
ಕಣ್ಣು ತುಂಬಿಕೊಳ್ಳಲಿ
ಈ ಮಹಾಬೆಳಗು
ಎದೆಯ ಹಣತೆಯಲಿ
ಬತ್ತಿಯ ತೀಡಿಹೆ
ತೈಲವನೆರೆದು
ಜ್ಯೋತಿಗೆ ಕಾದಿಹೆ
ದೀಪ ಹಚ್ಚುತಾ
ದೀಪವಾಗುವ ಕನಸು
ಇಂದು ನಿನ್ನೆಯದಲ್ಲಾ ಗುರುವೆ…
ಅಯ್ಯೋ ತರಳೆ
ಏನಿದು ಮರುಳೆ…
ಬೆಳಕಿನ ಹುಚ್ಚಿದು ತರವೇ?
ಬೆಳಗೂ ನೀನೇ
ಕತ್ತಲೂ ನೀನೇ
ಹುಡುಕುವೆ ಯಾಕೆ ಹೊರಗೆ?
ಸಾವು ಕತ್ತಲಲ್ಲಾ
ಬೆಳಕು ಬದುಕಲ್ಲಾ
ಕತ್ತಲು-ಬೆಳಕುಗಳೆರಡೂ
ವೈರಿಗಳಲ್ಲವೇ ಅಲ್ಲಾ
ಇರುಳ ಕಣ್ಣಿಗಿದೆ
ನಕ್ಷತ್ರದ ಮಿಂಚು
ಕಾಣಲಾರೆಯಾ ಮಗಳೇ?
ಬೆಳಕಿನ ಹುಚ್ಚಿಗೆ
ಕಿಚ್ಚನು ಹಚ್ಚು
ಒಳನೋಟದ ಕಣ್ಣಿಗೆ
ದೃಷ್ಟಿಯ ಹರಿಸು
ಹಣತೆಯೂ ನೀನೆ
ತೈಲವೂ ನೀನೇ
ಬತ್ತಿಯೂ ನೀನೇ ಅರಿಯೇ
ಬಯಲ ಬೆಳಕಿನ
ಕುಡಿಯೂ ನೀನೆ
ಹಣತೆಯ ಹಂಗು ಸರಿಯೇ?




Comments 1
Padmalaya
Oct 23, 2025Waaaw… ಸೂಪರ್ ಮೆಲ್ಲಗೆ ಕಣ್ತೆರೆಯುವ ಹಂಬಲ…