
ಸನ್ಯಾಸ ದೀಕ್ಷೆ
ತುಂಬಿದ ಅಹಂ- ಸ್ವಾರ್ಥದ ಚೀಲವನು
ಬಯಲಿಗೊಯ್ದು ಸುರಿದು
ಸ್ವತಃ ಖಾಲಿಯಾಗಿ
ಸಂಭ್ರಮಿಸುವುದು – ಸನ್ಯಾಸ
ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ
ಬೇರು ಬಿಟ್ಟು ಬಿಸಿಲು ಗಾಳಿಗೆ ತೂಗಿ
ನೆರಳು, ಫಲ ನೀಡಿ
ಜೀವ ಸಂಕುಲಕೆ ನೆರವಾಗುವುದು – ಸನ್ಯಾಸ
ಇರುವುದನ್ನೆಲ್ಲ ಕಳೆದುಕೊಂಡು
ಪಡೆದದ್ದೆಲ್ಲವ ಹಂಚಿ ಬರಡಾಗಿ
ಬರಿಗೈಗಳ ಕಂಡು
ತಾನೇ ಧನ್ಯಗೊಳ್ಳುವುದು – ಸನ್ಯಾಸ
ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು,
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು – ಸನ್ಯಾಸ
ಸೂರ್ಯನೊಂದಿಗೆ ಎದ್ದು
ಚಂದಿರನೊಟ್ಟಿಗೆ ಆಕಳಿಸಿ
ಕಾಲದೊಂದಿಗೆ ಕೂಡಿ
ಲೋಕದ ಹೊಲಸು ಗುಡಿಸುವುದು – ಸನ್ಯಾಸ
ಹಕ್ಕಿಯ ರೆಕ್ಕೆ ಸವರಿ, ಚಿಗುರುವ ಎಲೆಗೆ ನಮಿಸಿ
ಅರಳುವ ಹೂವಿಗೆ ಮುತ್ತಿಟ್ಟು
ಮಗುವಂತೆ ಮಕ್ಕಳೊಟ್ಟಿಗೆ
ಆಡಿ ದಣಿಯುವುದು – ಸನ್ಯಾಸ!
ಬಿದಿರ ಮೆಳೆಯ ನಡುವೆ ಕೂತು
ಜಗದ ಸಂತೆಯ ಮರೆತು
ಕೊಳಲ ದೇಹಕೆ ಉಸಿರ ಸುರಿದು
ಪ್ರಕೃತಿಗೆ ಕೃತಜ್ಞನಾಗುವುದು – ಸನ್ಯಾಸ!
Comments 2
Pro. Mallesh K.S, Mysuru
Jun 12, 2025ಸನ್ಯಾಸ ಕವನದ ಹೂರಣ ಚೆನ್ನಾಗಿದೆ. ಆದರೆ ಗದ್ಯ ಪದ್ಯದ ಮಿಶ್ರಣದಂತಿದೆ.
ಶೋಭಾದೇವಿ, ಧಾರವಾಡ
Jun 19, 2025ಜಬೀವುಲ್ಲಾ ಎಂ ಅಸದರವರ ಸನ್ಯಾಸ ದೀಕ್ಷೆ ಕವನ 👌👌