
ಸಂಭ್ರಮಿಸುವೆ ಬುದ್ದನಾಗಿ
ಓಡೆದಿರುವುದು ಕನ್ನಡಕದ ಗಾಜಷ್ಟೆ
ಲೋಕ ಎಂದಿನಂತೆಯೇ ಇದೆ
ಮುರಿದಿರುವುದು ನಿನ್ನ ಮನಸ್ಸಷ್ಟೆ
ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ
ನೀ ನಡೆವ ದಾರಿ ನಿನ್ನೋಬ್ಬನದಲ್ಲ
ಎಲ್ಲರದೂ ಅಹುದು
ನಿನ್ನ ನೋವಿಗೆ ನೀನೆ ಅಧಿಪತಿ
ಯಾರೂ ಭಾಗಿಯಲ್ಲ
ಕಚಗುಳಿ ಕೊಟ್ಟು ಕಂಬನಿಗಳ ನಗಿಸು
ಇರುವಲ್ಲಿಂದ ಕದಲು
ಮೆಲ್ಲಗೆ ಮೊದಲು
ಮೊಗ್ಗು ಹೂವಾಗಿ ಬಿರಿವಂತೆ
ಮರೆಯಾಗುವ ಸೂರ್ಯನನ್ನೊಮ್ಮೆ
ಕಣ್ತುಂಬಿಕೋ
ನಾಳೆಯ ಭರವಸೆಯೊಂದಿಗೆ
ಮತ್ತೆ ಹುಟ್ಟುವನು ಕಂಡುಕೋ
ನಾವೆ, ನಾವಿಕ, ಹುಟ್ಟು ಎಲ್ಲಾ ನೆಪಗಳಷ್ಟೇ
ಗಾಳಿ ಮತ್ತು ಅಲೆಗಳಿಗಷ್ಟೆ ಸಾಧ್ಯ
ತೀರಕೆ ಒಯ್ಯಲು, ನೆನಪಿಟ್ಟಿಕೋ ಅದನು
ಕಳೆ ಬಯಕೆಗಳ
ಪಾಡು ಹಾಡಾಗಲಿ
ಬಯಲಾಗುವ ಒಲವಿಗೆ
ದುಃಖ ಗೆದ್ದವನಾಗಿ
ಭ್ರಮೆಗಳಿಂದ ಹೊರ ಬಂದು
ಬದುಕಿಗೆ ಬದ್ಧನಾಗಿ
ಸಂಭ್ರಮಿಸುವೆ ಬುದ್ಧನಾಗಿ.
Comments 1
ಆನಂದ ಪಿ
Aug 17, 2025ಬುದ್ಧನಾಗಿ ಸಂಭ್ರಮಿಸುವ ಭಾಗ್ಯ ಎಷ್ಟು ಜನರಿಗಿದೆ?