Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
Share:
Articles October 2, 2018 ಸರೋಜಿನಿ ಭದ್ರಾಪುರ

ಶರಣರ ದೃಷ್ಟಿಯಲ್ಲಿ ವ್ರತಾಚರಣೆ

ವ್ರತ ಹೋದಾಗಳೇ ಇಷ್ಟಲಿಂಗದ
ಕಳೆ ನಷ್ಟವವ್ವಾ
ಅವರು ಲಿಂಗವಿದ್ದ ಭವಿಗಳು!
ಅದು ಹೇಗೆಂದಡೆ; ಪ್ರಾಣವಿಲ್ಲದ ದೇಹದಂತೆ
ಉರಿಲಿಂಗಪೆದ್ದಿಗಳರಸ ಬಲ್ಲ
ನೊಲ್ಲನವ್ವ.

ಇದು ಶರಣ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಶರಣೆ ಕಾಳವ್ವೆಯವರು ವ್ರತದ ಬಗ್ಗೆ ಅಭಿಮಾನದಿಂದ ಬರೆದ ವಚನ. ಈ ವಚನದಲ್ಲಿಆಕೆ ವ್ರತಸ್ಥನು ಇಷ್ಟಲಿಂಗದ ಸಾಕ್ಷಿಯಾಗಿ ನಡೆದುಕೊಳ್ಳಬೇಕು ವ್ರತಕ್ಕೂ, ಪರಮಾತ್ಮನಿಗೂ ಇರುವುದು ನಿಕಟವಾದ ಸಂಬಂಧ. ವ್ರತ ತಪ್ಪಿ ನಡೆದರೆ ಅದು ಪ್ರಾಣವಿಲ್ಲದ ದೇಹವಿದ್ದಂತೆ ಎಂದು ಹೇಳಿದ್ದಾಳೆ. “ವ್ರತವೆಂಬುದು ನಾಯಕ ರತ್ನ. ವ್ರತವೆಂಬುದು ಸುಪ್ಪಾಣಿಯ ಮುತ್ತು. ವ್ರತವೆಂಬುದು ಸುಯಿದಾನ…” ಇದೇ ರೀತಿಯಾಗಿ ಅನೇಕ ವಚನಗಳಲ್ಲಿ ವ್ರತದ ಮಹತಿಯನ್ನು ಒತ್ತಿ ಒತ್ತಿ ಹೇಳಿದ್ದಾರೆ ಕಾಳವ್ವೆ ತಾಯಿ.

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ವೈಚಾರಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಉತ್ಕೃಷ್ಟವಾದವು. ವರ್ತಮಾನದಲ್ಲಿ ಸಮಾಜವು ಎದುರಿಸುತ್ತಿರುವ ಅನೇಕ ಗೊಂದಲಗಳಿಗೆ ಇಲ್ಲಿ ಸಮರ್ಪಕ ಉತ್ತರವಿದೆ. ಅವುಗಳಲ್ಲಿ ವ್ರತದ ವಿಚಾರವೂ ಒಂದು.

ವ್ರತಗಳೆಂದರೇನು? ಹೆಣ್ಣುಮಕ್ಕಳು ಹಬ್ಬ ಹರಿದಿನಗಳಲ್ಲಿ, ನಿರ್ದಿಷ್ಟ ಋತುಮಾಸಗಳಲ್ಲಿ ವ್ರತಗಳನ್ನು ಆಚರಿಸುವುದು ಇಂದಿಗೂ ಸಾಮಾನ್ಯ. ಆದರೆ ಅವುಗಳಲ್ಲಿ ಬಹುಪಾಲು ಮೂಢನಂಬಿಕೆಗಳಿಗೆ ಹಾಲೆರೆಯುವಂತಿರುತ್ತವೆ. ಆದರೆ ಶರಣರು ವ್ರತಗಳ ವಿಚಾರದಲ್ಲಿ ಎಷ್ಟು ವೈಚಾರಿಕ ಪ್ರಜ್ಞೆಯುಳ್ಳವರಾಗಿದ್ದರೆಂದರೆ ಈಗಿನ ಆಧುನಿಕ ಮನಸ್ಸುಗಳೂ ನಾಚಬೇಕು ಅವರ ವೈಚಾರಿಕ ಮನಸ್ಥಿತಿಗೆ.

ಶರಣರ ಪ್ರಕಾರ, ನೈತಿಕವಾದ, ಸತ್ಯಶುದ್ಧವಾದ ಬದುಕೇ ವ್ರತ. ನುಡಿದಂತೆ ನಡೆಯುವದೇ ವ್ರತ. ವ್ರತವೆಂದರೆ ಶೀಲ. ಯಾವುದಾದರೂ ಒಂದು ವ್ರತವನ್ನು ಆಚರಿಸುವದೆಂದರೆ ಅದರ ಮೇಲಿನ ಆಶೆಯನ್ನು ತ್ಯಜಿಸಿದರೆ ಆತ್ಮಶುದ್ದವಾಗುತ್ತ ಹೋಗುತ್ತದೆ. ಶರಣರು “ತಾವು ವ್ರತಿಗಳೆಂದು ಹೇಳದಿಹುದೇ ವ್ರತ.” ” ಗುರು ಲಿಂಗ ಜoಗಮವ ದೂಷಿಸದಿಹುದೇ ವ್ರತ.” ” ಸಹಪಂಕ್ತಿಯಲ್ಲಿ ವಿಶೇಷವ ಕೊಳದಿಪ್ಪುದೆ ವ್ರತ.” ಎಂಬಲ್ಲಿ ವ್ರತದ ವಿಶೇಷಗಳನ್ನು ವರ್ಣಿಸಿದ್ದಾರೆ.

ಅಕ್ಕಮ್ಮ ಕೆಳಜಾತಿಯಿಂದ ಬಂದ ದಿಟ್ಟ ಶರಣೆ. ವ್ರತದ ಬಗ್ಗೆ ಅವಳ ನಿಷ್ಠೆ ವಿಶೇಷವಾಗಿತ್ತು:
“ವ್ರತವೆಂದರೇನು ಮನೋವಿಕಾರಿಸುವದಕ್ಕೆ ಕಟ್ಟಿದ ಗೊತ್ತು; ತನ್ನ ಸ್ವಕಾರ್ಯದಿಂದ ಮಾಡುವ ‘ಭಕ್ತನ ವ್ರತವೇ ವ್ರತ’ ಎಂದಿದ್ದಾಳೆ. ಶರಣೆ ಕಾಲಕಣ್ಣಿಯ ಕಾಮವ್ವೆಯು “ವ್ರತಭ್ರಷ್ಟರ ನಿಟ್ಟೋರಿಸುವೆ, ತುರತುರನೆ ತೂರುವೆ” ಎಂಬ ವಚನದಲ್ಲಿ ತತ್ವ ನಿಷ್ಠೆಯಿಲ್ಲದ ವ್ರತಭ್ರಷ್ಟರನ್ನು ನಿಷ್ಠುರವಾಗಿ ಖಂಡಿಸಿರುತ್ತಾಳೆ.

ಮಹಾಮಾನವತಾವಾದಿ ಬಸವಣ್ಣನವರ ಸಪ್ತಸೂತ್ರಗಳನ್ನೊಳಗೊಂಡ ಈ ವಚನದಲ್ಲಿ ಒಂದೊಂದು ಸೂತ್ರವು ಒಂದೊಂದು ವ್ರತದಂತೆ ಗೋಚರವಾಗುತ್ತವೆ.

ಕಳಬೇಡ! ಕೊಲಬೇಡ!
ಹುಸಿಯ ನುಡಿಯಲು ಬೇಡ!
ಮುನಿಯಬೇಡ! ಅನ್ಯರಿಗೆ ಅಸಹ್ಯ ಪಡಬೇಡ!
ಇದಿರು ಹಳಿಯಲು ಬೇಡ! ತನ್ನ ಬಣ್ಣಿಸಬೇಡ!
ಇದೇ ಅಂತರಂಗ ಶುದ್ಧಿ,
ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಶುದ್ಧ ಜೀವನದ ಇಂಥ ಸಪ್ತಸೂತ್ರಗಳೇ ನಾವು ಹಿಡಿದುಕೊಳ್ಳಬೇಕಾದ ವ್ರತಗಳು ಎಂದು ಮನದಟ್ಟುವಂತೆ ಹೇಳಿರುತ್ತಾರೆ.

ಕಸಗೂಡಿಸುವ ಕಾಯಕದ ಶರಣೆ ಸತ್ಯಕ್ಕ ಆತ್ಮಗೌರವದ ಪ್ರತೀಕವಾಗಿದ್ದವರು. “ಅಳಿಮನದಿ, ಪರ ದ್ರವ್ಯಕ್ಕೆ ಆಶೆ ಪಡದೇ, ಲಂಚದ ಆಮಿಷಕ್ಕೆ ಬಲಿ ಬೀಳಲಾರೆ” ಎಂದು ಹೇಳುವ ಮೂಲಕ ಅದನ್ನೇ ತನ್ನ ವ್ರತವಾಗಿ ಸ್ವೀಕರಿಸಿದ್ದಳು. ಶರಣೆ ರೇಚವ್ವೆ-“ಬಂಜೆ ಆವಿಂಗೆ ಕ್ಷೀರವುಂಟೇ? ವ್ರತಹೀನರ ಬೆರೆಯಲುಂಟೇ?” ಎನ್ನುವ ಮೂಲಕ ವ್ರತಾಚಾರದ ಬಗ್ಗೆ ತನ್ನ ನಿಷ್ಠೆಯನ್ನು ವ್ಯಕ್ತಪಡಿಸುತ್ತಾರೆ.

ಶರಣೆ ಸೂಳೆ ಸಂಕವ್ವೆಯು
“ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ” ಎಂದು ಹೇಳುವಲ್ಲಿ ಈಗ ತಾನು ಪರಮಾತ್ಮನನ್ನು ಒತ್ತೆ ಹಿಡಿದಿದ್ದು, ಮತ್ತೊಬ್ಬರನ್ನು ಒತ್ತೆ ಹಿಡಿಯಲಾರೆ ಎಂದು ತಾನು ಹಿಡಿದ ವ್ರತದ ಬಗ್ಗೆ ಖಡಾಖಂಡಿತವಾಗಿ ಹೇಳಿರುತ್ತಾರೆ.

ಶರಣೆ ಅಕ್ಕಮ್ಮ ತನ್ನ ಅನೇಕ ವಚನಗಳಲ್ಲಿ ವ್ರತದ ಮಹತ್ವ ಸಾರಿದ್ದಾರೆ:
“ತನು ವ್ರತ, ಮನ ವ್ರತ, ಮಹಾಜ್ಞಾನ ವ್ರತ.” ತ್ರಿಕರಣದಲ್ಲಿ ಶುದ್ಧವಾಗಿರಬೇಕೆಂದು ಹೇಳಿದ್ದಾಳೆ. ಅತ್ತಿತ್ತ ಹರಿ ದಾಡುವ ಮನಸ್ಸನ್ನು ವ್ರತವೆಂಬ ಹಗ್ಗದಿಂದ ಬಂಧಿಸಿ ಅರಿಷಡ್ವರ್ಗಗಳನ್ನು ತೊರೆದು ಭಕ್ತನು ತನ್ನಂಗವನ್ನು, ಮನಸ್ಸನ್ನು ವ್ರತಸ್ಥವನ್ನಾಗಿ ಮಾಡುಕೊಳ್ಳಬೇಕೆಂದು ಮಾರ್ಗ ತೋರಿಸುತ್ತಾರೆ.

ಬಸವಣ್ಣನವರ ಮತ್ತೊಂದು ವಚನ ಎಂಥ ವ್ರತಗಳನ್ನು ಕೈಗೊಳ್ಳಬೇಕೆಂಬುದನ್ನು ಹೇಳುತ್ತದೆ- “ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ! ಛಲಬೇಕು ಶರಣಂಗೆ ಪರಸತಿಯನೊಲ್ಲೆ !”  ಇದು ಕೂಡ ಒಂದು ಪವಿತ್ರವಾದ ವ್ರತವೇ.

“ವ್ರತ ಶುದ್ಧವಾಗಿ ನಡೆವಾತನೇ ಎನಗೆ ಅಧೀನದರಸು” ಎಂದು ಶರಣ  ಏಲೇಶ್ವರ ಕೇತಯ್ಯನವರು ಹೇಳಿದ್ದಾರೆ. ಮಾನವನು ವ್ರತ ಶುದ್ಧನಾಗಿರಬೇಕು. ವ್ರತವನ್ನು ಇಂದ್ರಿಯನಿಗ್ರಹ ಹಾಗೂ ಆಧ್ಯಾತ್ಮಿಕ ಪ್ರಗತಿಗಾಗಿ ಆಚರಿಸಬೇಕು. ನಿಜವಾದ ವ್ರತಸ್ಥನೆಂದರೆ ಅನುಗ್ರಹ ಹಾಗೂ ಅನುಭಾವದಿಂದ ಕೂಡಿದವನಾಗಿರಬೇಕು. ಶರಣರು, “ಪರಧನವನೊಲ್ಲದಿಪ್ಪುದೇ ವ್ರತ, ಪರ ಸ್ತ್ರೀಯರ ಕೂಡದಿಪ್ಪುದೇ ಶೀಲ” ಎಂದು ಹೇಳಿರುತ್ತಾರೆ. ಶರಣ ಎಳೆಗಾರ ಕಾಮಣ್ಣನವರು ತಮ್ಮ ವಚನದಲ್ಲಿ ಎಲೆಗೂ ವ್ರತಕ್ಕೂ ಹೋಲಿಕೆ ಮಾಡಿ ವ್ರತಭ್ರಷ್ಟರೆಂದರೆ ಎಲ್ಲೂ ಸಲ್ಲದವರು ಎಂದು ಹೇಳಿದ್ದಾರೆ: ” ಎಲೆ ಮಿಗಿಲು ಆರು ತಿಂಗಳಿರುವುದು, ವ್ರತ ಹೊಗಲು ಆ ಕ್ಷಣ, ಭ್ರಷ್ಟನೆಂದು ಕೂಡರು. ಎಲೆ ಹಲದಾದಡೆ ಶಿವಂಗರ್ಪಿತ, ವ್ರತ ನಷ್ಟವಾಗಲಾಕ್ಷಣ ಮರಣವಯ್ಯಾ ಆತುರೇಶ್ವರ ಲಿಂಗವೇ.”

ಶರಣೆ ಮುಕ್ತಾಯಕ್ಕನು ತನ್ನ ವಚನದಲ್ಲಿ ” ಹಿಡಿದ ವ್ರತ ಬಿಡದಿರಲು ಅದೇ ಮಹಾಜ್ಞಾನದಾಚರಣೆ”ಯೆಂದು ವ್ರತದ ಮಹತ್ವವನ್ನು ಹೇಳಿರುತ್ತಾರೆ. ಶರಣೆ ಮಸಣಮ್ಮ ‘ಕಾಗೆ ನಾಯ ತಿಂದವರಿಲ್ಲ; ವ್ರತಭ್ರಷ್ಟನ ಕೂಡಿದವರಿಲ್ಲ…” ಎಂಬ ವಚನದಲ್ಲಿ ಕೊಟ್ಟ ಕಾಗೆ, ನಾಯಿಗಳ ಈ ದೃಷ್ಟಾಂತ ವ್ರತಹೀನ, ವ್ರತಭ್ರಷ್ಟರನ್ನು ಉದ್ದೇಶಿಸಿ ಮಾತನಾಡುತ್ತದೆ.

ಶರಣೆ ಗಂಗಮ್ಮ” ಆವ ವ್ರತವಾದಡು ಒಂದೇ ವ್ರತವಯ್ಯಾ. ಆಯ ತಪ್ಪಿದಡೆ ಸಾವಿಲ್ಲ, ವ್ರತ ತಪ್ಪಿದಡೆ ಕೂಡಲಿಲ್ಲ ಕಾಕ ಪಿಕದಂತೆ, ಕೂಡಲು ನಾಯಕ ನರಕ ಗಂಗೇಶ್ವರ ಲಿಂಗದಲ್ಲಿ.” ಕೋಗಿಲೆ ಮತ್ತು ಕಾಗೆಯ ಉದಾಹರಣೆಯ ಮೂಲಕ ಧರ್ಮದ ತಳಹದಿಯ ಮೇಲೆ ಸತ್ಯ, ಶುದ್ಧ, ನಡೆ ನುಡಿಯುವ ವ್ರತವು ಪ್ರಾಣಕ್ಕಿಂತ ಮಿಗಿಲಾದದ್ದು ಎಂದು ವ್ರತದ ಮಹಿಮೆಯನ್ನು ಹೇಳುತ್ತಾರೆ ಗಂಗಮ್ಮ. ಶರಣ ಮಾದಾರ ಚೆನ್ನಯ್ಯನವರು ಕೂಡ ಇದನ್ನೇ “ನುಡಿದಂತೆ ನಡೆ, ನಡೆದಂತೆ ನುಡಿ” ಎಂದು ಮಾರ್ಮಿಕವಾಗಿ ತಿಳಿಸುತ್ತಾರೆ.

ಆದರೆ ಈಗ ವ್ರತಗಳ ಅರ್ಥವೇ  ಬದಲಾಗಿದೆ. ಜನರು ತಮ್ಮ ಆಶೆಗಳನ್ನು ಈಡೇರಿಸಿಕೊಳ್ಳಲು ಅನೇಕ ದೇವರುಗಳಿಗೆ ಹರಕೆಯ ವ್ರತಗಳನ್ನು ಮಾಡುತ್ತಾರೆ. ಗಂಡನ ಆಯುಷ್ಯ ವರ್ಧನೆಗಾಗಿ, ತಮಗೆ ಮುತ್ತೈದೆ ಸಾವು ಬರಲೆಂದು ವಟಸಾವಿತ್ರಿ ಪೂಜೆ, ಅಶ್ವತ ವೃಕ್ಷದ ಪ್ರದಕ್ಷಣೆ ಹಾಕುವ ವ್ರತವನ್ನು ಆಚರಿಸುತ್ತಾರೆ.  ಇದರಿಂದಆಯುಷ್ಯವನ್ನು ವರ್ಧಿಸಲು ಸಾಧ್ಯವೇ? ಮಕ್ಕಳಾಗದಿದ್ದರೆ, ಸರ್ಪ ದೋಷವೆಂದು  ನಾಗರಪ್ರತಿಷ್ಠೆ ಮಾಡಿ ನಾಗರಪೂಜೆ ಪೂಜೆಯ ವ್ರತ ಮಾಡುತ್ತಾರೆ. ಅದೇ ಜೀವಂತ ಹಾವು ಬಂದರೆ ಅದನ್ನು ಹೊಡೆದು ಸಾಯಿಸುತ್ತಾರೆ. ಇದರಿಂದ ಪಾಪ ತಟ್ಟುವದಿಲ್ಲವೇ!

ವೈಜ್ಞಾನಿಕವಾಗಿ ನಾವು ಇಷ್ಟೊಂದು ಮುಂದುವರೆದಿದ್ದರೂ ಇಂತಹ ಮೂಢನಂಬಿಕೆಯ ವ್ರತದಿಂದ ಮಕ್ಕಳನ್ನು ಪಡೆಯುವದು ಸಾಧ್ಯವೇ? ಅದರಲ್ಲೂ ಗಂಡು ಸಂತಾನ ಬೇಕೆಂದರೆ ಸಂತಾನಲಕ್ಷ್ಮಿಯ ವ್ರತ ಮಾಡುತ್ತಾರೆ. ಅಕಾಲ ಮರಣ ತಪ್ಪಿಸಲು ಮೃತ್ಯುಂಜಯ ಜಪದವ್ರತ ಮಾಡುತ್ತಾರೆ. ಅದಕ್ಕೆ ಬಸವಣ್ಣನವರು “ಬಾರದು ಬಪ್ಪದು, ಬಪ್ಪುದು ತಪ್ಪದು” ಎಂದು ಹೇಳಿರುತ್ತಾರೆ. ಮನೆಗೆ ಆಗುವ ಕೆಡಕುಗಳನ್ನು ತಪ್ಪಿಸಲು ಸಂಕಷ್ಟಿ ವ್ರತ ಬೇರೆ. ಏನಾದರೂ ತೊಂದರೆಯಾದರೆ ಶನಿಕಾಟ ವೆಂದು ಭಾವಿಸಿ, ಬೆಳಿಗ್ಗೆ ತಣ್ಣೀ ರು ಸ್ನಾನ ಮಾಡಿ, ಮೌನವ್ರತ ದಿಂದ ಹನುಮಪ್ಪನ ಗುಡಿಗೆ ಹೋಗಿ ಅಲ್ಲಿ ಕರಿ ಎಳ್ಳಿನ ತುಪ್ಪದ ದೀಪ ಹಚ್ಚುವದರಿಂದ ಕಾಟ ತಪ್ಪುತ್ತದೆಂದು ಭಾವಿಸುತ್ತಾರೆ. ನಿಜವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೋಡದೆ ಹೀಗೆ ಅರ್ಥರಹಿತ ವ್ರತಗಲ ಹಿಂದೆ ಬೀಳುತ್ತಾರೆ.

ದುಡ್ಡು ಗಳಿಸಲು ಮನೆಯಲ್ಲಿಐಷಾರಾಮಿಯಾಗಿ ಕುಳಿತು ಧನಲಕ್ಷ್ಮಿಯ ಪೂಜೆ ಮಾಡಿದರೆ ಸಂಪತ್ತು ಗಳಿಸಲು ಸಾಧ್ಯವೇ? ಅದಕ್ಕೆ ಶುದ್ಧ ಮನಸ್ಸಿನಿಂದ ಶ್ರಮ ಪಟ್ಟು ಕಾಯಕ ಮಾಡಬೇಕು. ಆಗ ಲಕ್ಷ್ಮೀಯು ತಾನಾಗಿಯೇ ಒಲಿಯುವಳು. ಆಯ್ದಕ್ಕಿ ಲಕ್ಕಮ್ಮನವರ ವಚನ ನೋಡಿ-

ಚಿತ್ತ ಶುದ್ಧದಲ್ಲಿ ಕಾಯಕವ
ಮಾಡುವಲ್ಲಿ ಸದ್ಭಕ್ತoಗೆ ಎತ್ತ
ನೋಡಿದದತ್ತತ್ತ ಲಕ್ಷ್ಮಿ ತಾನಾಗಿಪ್ಪಳು.
ಕಾಯಕದ ಮಹತ್ವವನ್ನು ಸಾರುವ ಲಕ್ಕಮ್ಮನವರ ವ್ರತವಿದು.

ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಜನ ಕಂಡ ಕಂಡ ಕ್ಷೇತ್ರಗಳಿಗೆ ಹೋಗಿ ಜಪ, ತಪ, ಉಪವಾಸ ವ್ರತಗಳನ್ನು ಮಾಡುತ್ತಾರೆ.  ಅದನ್ನು ಕಂಡು ಶರಣ  ಷಣ್ಮುಖ ಶಿವಯೋಗಿಗಳು ತಮ್ಮ ವಚನದಲ್ಲಿ “ಕಾಯವ ದಂಡಿಸಿ ಕಂಡ ಕಂಡ ಕ್ಷೇತ್ರಗಳಿಗೆ ಹೋಗಿ ತೊಳಲಿ ಬಳಲಿದಡಿಲ್ಲ, ಜಪ, ತಪ, ಹೋಮ, ನೇಮ ನಿತ್ಯಗಳ ಮಾಡಿದರಿಲ್ಲ… ಫಲವೇನಯ್ಯ” ಎoದು ಹೇಳಿದ್ದಾರೆ. ಬಾಹ್ಯಾಡಂಬರದ ವ್ರತಾಚಾರಣೆಗಳಿಗಾಗಿ ದೇಹವನ್ನು ದಂಡಿಸಿ, ದಿನಕ್ಕೊಂದು ಕ್ಷೇತ್ರ, ದಿನಕ್ಕೊಂದು ವ್ರತ ಮಾಡುತ್ತ ಕಂಡ ಕಂಡ ಮರಗಳನ್ನು ಸುತ್ತುವದು, ಹರಿಯುವ, ಪಾಚಿಗಟ್ಟಿದ ನೀರಿನಲ್ಲಿ ಮುಳಿಗೆದ್ದು, ಅದನ್ನೇ ತೀರ್ಥವೆಂದು ಕುಡಿಯುವುದು ಎಂಥ ಬುದ್ಧಿಗೇಡಿತನ! ಇಂತಹ ಮೂಢ ನಂಬಿಕೆಗಳನ್ನು ಬಿಟ್ಟು ಒಳಗಣ್ಣುಗಳಿಂದ, ಅಂತರಂಗ ಶುದ್ಧಿಯಿಂದ ನಮ್ಮೊಳಗನ್ನು ನಾವೇ ಹುಡುಕಿದರೆ ದೈವ ಸಾಕ್ಷಾತ್ಕಾರದ ದಾರಿ ತಾನಾಗಿಯೇ ಸಿಗುತ್ತದೆ.

ವ್ರತಗಳನ್ನು ಮಾಡುವುದು ಮನಸ್ಸಿನ ನೆಮ್ಮದಿಗಾಗಿ. ಅದಕ್ಕೆ ದೇಹದಂಡನೆಯಾಗಲೀ,  ಮಾನಸಿಕ ಹಿಂಸೆಯಾಗಲೀ, ಆರ್ಥಿಕ ಸಮಸ್ಯೆಯಾಗಲೀ, ಬೇರೆ ಜನರಿಗೆ ತೊಂದರೆ ಕೊಡುವುದಾಗಲಿ ಆಗಿರಬಾರದು. ಮೂಢ ನಂಬಿಕೆಯಿಂದ ಕೂಡಿದವುಗಳಾಗಿರದೆ ಅರ್ಥಪೂರ್ಣವಾಗಿರಬೇಕು. ಅಂದಾಗಲೇ ಮಾಡುವ ವ್ರತಕ್ಕೆ ಒಂದು ಘನತೆ ಇರುತ್ತದೆ.

Previous post ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
Next post ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?

Related Posts

ಬಸವ ಸ್ಮರಣೆ ಇಂದಿಗೂ ಏಕೆ?
Share:
Articles

ಬಸವ ಸ್ಮರಣೆ ಇಂದಿಗೂ ಏಕೆ?

May 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
`ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು...
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
Share:
Articles

ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ

December 3, 2018 ಡಿ.ಪಿ. ಪ್ರಕಾಶ್
ಬೋಧನೆ ಮತ್ತು ಅದನ್ನು ಜಾರಿಗೆ ತರುವ ಕ್ರಿಯೆ ಇವೆರಡನ್ನೂ ನಡೆ- ನುಡಿಗಳ ಸಂಬಂಧದಲ್ಲಿ ಬೆಸೆದು ತಮ್ಮ ಜೀವನವನ್ನೇ ಮನುಕುಲೋದ್ಧಾರದ ಸಿದ್ಧಾಂತಗಳನ್ನಾಗಿ ಬದುಕಿ ತೋರಿಸಿದ ಭಾರತದ...

Comments 7

  1. sharada A.M
    Oct 2, 2018 Reply

    ವ್ರತಗಳನ್ನು ಮಾಡುವವರು ಮೊದಲು ಜಾಣರಾಗಬೇಕು. ಸರಿ ತಪ್ಪು ಯೋಚಿಸಬೇಕು, ಸುಮ್ಮನೆ ಮಂತ್ರ ಹೇಳುವುದು ವ್ರತವಲ್ಲ, ಕಠಿಣ ನೇಮಗಳು ದೇವರಿಗೆ ಸೇರೋದಿಲ್ಲ. ಶರಣರೇ ನಮಗಿಂತ ಸಾವಿರ ಪಾಳು ಬುದ್ಧಿವಂತು.

  2. Dr. Panchakshari hv
    Oct 3, 2018 Reply

    ನಿಜ ಶರಣನ ವ್ರತಗಳು ಯಾವುವು ಎಂದು ಸರಳ ಸುಂದರವಾಗಿ ತಿಳಿಸುದ್ದೀರಿ.

    ಕಳಬೇಡ! ಕೊಲಬೇಡ!
    ಹುಸಿಯ ನುಡಿಯಲು ಬೇಡ!
    ಮುನಿಯಬೇಡ! ಅನ್ಯರಿಗೆ ಅಸಹ್ಯ ಪಡಬೇಡ!
    ಇದಿರು ಹಳಿಯಲು ಬೇಡ! ತನ್ನ ಬಣ್ಣಿಸಬೇಡ!
    ಇದೇ ಅಂತರಂಗ ಶುದ್ಧಿ,
    ಇದೇ ಬಹಿರಂಗ ಶುದ್ಧಿ,
    ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. ಪರಿಪೂರ್ಣ ವ್ರತಾಚರಣೆಗಳನ್ನು ಬಸವಣ್ಣನವರು ಮೇಲಿನ ವಚನದಲ್ಲಿ ಅರ್ಥಗರ್ಭಿತವಾಗಿ ಅಡಗಿಸಿದ್ದಾರೆ.

    ಶರಣುಶರಣಾರ್ಥಿ.

  3. Mariswamy Gowdar
    Oct 3, 2018 Reply

    thought provoking article on vratas

  4. akkamma katagere
    Oct 5, 2018 Reply

    ಚಿತ್ತ ಶುದ್ಧದಲ್ಲಿ ಕಾಯಕವ
    ಮಾಡುವಲ್ಲಿ ಸದ್ಭಕ್ತoಗೆ ಎತ್ತ
    ನೋಡಿದದತ್ತತ್ತ ಲಕ್ಷ್ಮಿ ತಾನಾಗಿಪ್ಪಳು.
    ಕಾಯಕದ ಮಹತ್ವವನ್ನು ಸಾರುವ ಲಕ್ಕಮ್ಮನವರ ವ್ರತವಿದು.
    ತುಂಬಾ ಅರ್ಥಗರ್ಭಿತವಾದ ಲೇಖನ, ಚೆನ್ನಾಗಿದೆ ಮೇಡಂ

  5. Karibasappa hanchinamani
    Oct 10, 2018 Reply

    ಇವತ್ತು ನಾವು ಮಾಡುವ ವ್ರತಗಳೆಲ್ಲವೂ ಎಷ್ಟು ಅರ್ಥಹೀನ ಎನಿಸಿತು

  6. Shubha
    Oct 13, 2018 Reply

    Different one , but it is reflecting the present society.

  7. Gayathri.N.C
    Oct 13, 2018 Reply

    ಛಲಬೇಕು ಶರಣಂಗೆ ಎಂಬ ವಚನವು ಶರಣರ ವ್ರತದಂತಿದೆ ಎಂಬ ಮಾತು ನಿಜ,ನಿಜ,ನಿಜ. ಶರಣರು ನೀತಿ-ನಿಯಮಗಳ ವ್ರತಧಾರಿಗಳು.

Leave a Reply to sharada A.M Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ನಾನು… ನನ್ನದು
ನಾನು… ನನ್ನದು
July 4, 2021
Copyright © 2025 Bayalu