Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಾಮೃತಂ: ಪುಸ್ತಕ ವಿಮರ್ಶೆ
Share:
Articles February 6, 2025 ಡಾ. ಎನ್.ಜಿ ಮಹಾದೇವಪ್ಪ

ವಚನಾಮೃತಂ: ಪುಸ್ತಕ ವಿಮರ್ಶೆ

ವಚನಾಮೃತಂ: ಪುಸ್ತಕ
ಪ್ರೊ. ಎಂ.ವಿ. ನಾಡಕರ್ಣಿಯವರ ವಚನಾಮೃತಂ
(ಪ್ರಕಾಶಕರು: ಮಣಿಪಾಲ್ ಯುನಿವರ್ಸಲ್ ಪ್ರೆಸ್, ಮಣಿಪಾಲ್, ಮೇ 2024) ಬೆಲೆ. ರೂ. 600/-

ಪ್ರೊ. ಎಂ.ವಿ. ನಾಡಕರ್ಣಿಯವರ ವಚನಾಮೃತಂ ತ್ರಿಭಾಷಾ ಗ್ರಂಥ. ಬಸವಕಾಲೀನ ಶಿವಶರಣರ ಸಾರಭೂತವಾದ 320 ವಚನಗಳನ್ನು ಇಂಗ್ಲಿಷ್ ಭಾಷೆಗೆ ಲಿಪ್ಯಂತರಿಸಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗೆ ಭಾವಾನುವಾದ ಮಾಡಿದ್ದಾರೆ. ಭಾಷಾಂತರವಾಗಿದ್ದರೆ ಪ್ರೊ. ನಾಡಕರ್ಣಿಯವರ ಭಾಷಾಂತರ ಇತರ ಭಾಷಾಂತರಗಳಿಗಿಂತ ಉತ್ತಮವಾಗಿದೆಯೇ ಇಲ್ಲವೇ ಎಂದು ಪ್ರಶ್ನಿಸಬಹುದಿತ್ತು. ಆದರೆ ಇದು ಭಾವಾನುವಾದ. ಆದುದರಿಂದ ಆ ಪ್ರಶ್ನೆ ಇಲ್ಲಿ ಏಳುವುದೇ ಇಲ್ಲ. ವಚನಗಳ ಭಾವಾನುವಾದದಲ್ಲಿ ಕೆಲವು ಸಾರಿ ಕೇವಲ ವಚನದ ಭಾವ (ಉದ್ದೇಶ ಅಥವಾ ಸಾರ)ವನ್ನು ತಿಳಿಸಲಾಗುತ್ತದೆ. ಮತ್ತೆ ಕೆಲವು ವೇಳೆ ಭಾವದ ಜೊತೆಗೆ ಒಂದೆರಡು ಮಾತುಗಳ ವ್ಯಾಖ್ಯಾನವೂ ಇರುತ್ತದೆ. ಪ್ರೊ. ನಾಡಕರ್ಣಿಯವರ ಭಾವಾನುವಾದದಲ್ಲಿ ಈ ಎರಡು ಅಂಶಗಳೂ ಹಿತವಾಗಿ ಮೇಳೈಸಿವೆ.
ಭಾವಾನುವಾದ ಮತ್ತು ವ್ಯಾಖ್ಯಾನ ಮಾಡಲು ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅಪಾರವಾದ ಜ್ಞಾನ ಬೇಕು. ಪ್ರೊಫೆಸರ್ ನಾಡಕರ್ಣಿಯವರ ಭಾವಾನುವಾದದಲ್ಲಿ ಈ ಎರಡು ಅಂಶಗಳನ್ನು ಯಥೇಚ್ಛವಾಗಿ ಕಾಣಬಹುದು. ಅವರ ವ್ಯಾಖ್ಯಾನವು ವಿದ್ವತ್ಪೂರ್ಣವಾಗಿದೆ ಎನ್ನಲು ಅವರು ಬರೆದಿರುವ ಪುಸ್ತಕಗಳ ಪಟ್ಟಿಯೇ ಸಾಕ್ಷಿ. ಉಪನಿಷತ್ತು, ವೇದ, ಭಗವದ್ಗೀತೆ, ಮತ್ತಿತರ ಸಂಸ್ಕೃತ, ಕನ್ನಡ, ಇಂಗ್ಲಿಷ್ ಧಾರ್ಮಿಕ ಸಾಹಿತ್ಯದ ಅಪಾರ ಪಾಂಡಿತ್ಯದ ಹಿನ್ನೆಲೆಯಲ್ಲಿ ಮಾಡಿರುವ ಅವರ ಭಾವಾನುವಾದ ಮತ್ತು ವ್ಯಾಖ್ಯಾನಕ್ಕೆ ಬೆಲೆ ಇದೆ ಎಂಬುದನ್ನು ಓದುಗರು ಗಮನಿಸದೆ ಇರಲಾರರು.

ಈ ಗ್ರಂಥದ ಮತ್ತೊಂದು ಆಕರ್ಷಣೆ ಮತ್ತು ಮೌಲಿಕ ಅಂಶವೆಂದರೆ ದೀರ್ಘ ಪ್ರಸ್ತಾವನೆ (Introduction). ಇದರಲ್ಲಿ ವಚನಕಾರರ ಪ್ರಮುಖ ಉದ್ದೇಶ, ಹಿಂದೂ ಧರ್ಮದೊಡನೆ ಅವುಗಳ ಹೋಲಿಕೆ ಮತ್ತು ವ್ಯತ್ಯಾಸಗಳ ಚರ್ಚೆ ಇದೆ. ಅಂಥ ಪ್ರಸ್ತಾವನೆಯು ವಚನಗಳ ಅನುವಾದ, ಭಾವಾನುವಾದ ಮತ್ತು ವ್ಯಾಖ್ಯಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ.

ಪ್ರೊ. ನಾಡಕರ್ಣಿಯವರು ವಚನಕಾರರು (ಪು. 14-15) 1. ಗುರು ಲಿಂಗ ಜಂಗಮ ಭಕ್ತಿಗೂ 2. ಅನೈತಿಕತೆ, ಆಷಾಢಭೂತಿತನದ ಖಂಡನೆ, 3. ಭವಿಗಳ ಖಂಡನೆಗೂ 4. ಕಾಯಕ, 5. ಸಮಾನತೆ, 6. ದಾಸೋಹ, 7. ಸ್ತ್ರೀಯರಿಗೆ ಗೌರವ – ಇವುಗಳಿಗೂ ಒತ್ತು ಕೊಟ್ಟಿದ್ದಾರೆ ಎಂದು ಹೇಳಿರುವುದಲ್ಲದೆ ಪ್ರತಿಯೊಂದನ್ನೂ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಬಸವಾದಿ ಶರಣರ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದಕ್ಕೆ ಇದು ಪ್ರಬಲ ಸಾಕ್ಷಿ. ಈ ಏಳು ಅಂಶಗಳ ಜೊತೆಗೆ ಶರಣರು ಪ್ರಾಣಿಬಲಿಯನ್ನೊಳಗೊಂಡ ಯಜ್ಞಯಾಗಾದಿಗಳನ್ನು ಖಂಡಿಸಿದರೆಂಬುದನ್ನೂ ಸೇರಿಸಬೇಕಾಗಿತ್ತು.

ಬಹಳಷ್ಟು ವಚನಗಳ ಭಾವಾನುವಾದ ವಚನಕಾರರ ಇಂಗಿತವನ್ನು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ, ‘ಪುಣ್ಯ ಪಾಪವೆಂಬುದು ತಮ್ಮಿಷ್ಟ ಕಂಡಿರೇ…’ (1. 240); ‘ನಡೆಯಲರಿಯದೆ ನುಡಿಯಲರಿಯದೆ…’ (1.409); ‘ಕುದುರೆ ಸತ್ತಿಗೆಯವರ ಕಂಡಡೆ…’ (1. 414); ‘ಲಿಂಗ ಎನ್ನ ಮನದಲ್ಲಿ…’ (4. 1386); ‘ಹೊನ್ನು ಮಾಯೆ ಎಂಬರು…’ (2. 72), ‘ಭಕ್ತ ಶಾಂತನಾಗಿರಬೇಕು…’ (3. 64) ಮುಂತಾದ ವಚನಗಳನ್ನು ಸೂಕ್ತ ಪದಗಳನ್ನು ಮಿತವಾಗಿ ಬಳಸಿ, ಹಿತ ಅನಿಸಿಸುವಂತೆ ಭಾವಾನುವಾದ ಮಾಡಿದ್ದಾರೆ.
ಪ್ರೊ. ನಾಡಕರ್ಣಿಯವರ ಭಾವಾನುವಾದ ಕೆಲವು ಕಡೆ ತಪ್ಪಿದೆ, ಮತ್ತೆ ಕೆಲವು ಕಡೆ ಪಾರಿಭಾಷಿಕ ಪದಗಳನ್ನು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಅಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಹುದು:

1. ‘ಜ್ಞಾನದ ಬಲದಿಂದ…’ (1.842) ಎಂದು ಪ್ರಾರಂಭವಾಗಿ ‘ಎನ್ನ ಭವದ ಕೇಡು ನೋಡಯ್ಯ’ ಎಂದು ಕೊನೆಗೊಳ್ಳುವ ಬಸವಣ್ಣನವರ ವಚನದ ಕೊನೆಯ ಸಾಲನ್ನು ಪ್ರೊ. ನಾಡಕರ್ಣಿಯವರು “destroys the burden of the mundane and my self-conceit too” ಎಂದು ಭಾಷಾಂತರಿಸಿದ್ದಾರೆ. ಭವ ಎಂದರೆ ಭವ ಬಂಧನ, ಸಂಸಾರ ಬಂಧನ ಎಂಬುದು ವಚನಕಾರರ ಮತ. ಆದುದರಿಂದ “destroys my bondage” ಎಂದಿದ್ದರೆ ಸಾಕಿತ್ತು. ಅಲ್ಲದೆ “and my self-coceit too” ಎಂಬುದು ಅನಾವಶ್ಯಕ.

2. ‘ಅಂಗ ಲಿಂಗವ ವೇಧಿಸಿ ಅಂಗ ಲಿಂಗದೊಳಗಾಯಿತ್ತು…’ ಎಂಬ ಅಕ್ಕಮಹಾದೇವಿಯ ವಚನದ (5.5) ಮೊದಲನೆಯ ಸಾಲನ್ನು “uniting with Linga my body enetered it with pleasure” ಎಂದು ಭಾಷಾಂತರಿಸಿದ್ದಾರೆ. ‘ಅಂಗ’ ಎಂಬ ಪಾರಿಭಾಷಿಕ ಶಬ್ದಕ್ಕೆ ವಚನಗಳಲ್ಲಿ ಅನೇಕ ಅರ್ಥಗಳಿವೆ: ದೇಹ, ದೇಹದ ಭಾಗ, ಅಶುದ್ಧ ಜೀವಾತ್ಮ, ಶುದ್ಧ ಜೀವಾತ್ಮ, ಇತ್ಯಾದಿ. ಶುದ್ಧ ಜೀವಾತ್ಮ ಲಿಂಗವನ್ನು ಭೇದಿಸಬಹುದೇ ಹೊರತು ದೇಹವಲ್ಲ. ಶುದ್ಧ ಜೀವಾತ್ಮ ಮತ್ತು ಲಿಂಗ ಎರಡೂ ಚಿದ್ವಸ್ತುಗಳೇ ಆದುದರಿಂದ ಅವು ಒಂದನ್ನೊಂದು ಭೇದಿಸಬಲ್ಲವು. ಅಂಗವು ಶಕ್ತಿಯ ರೂಪಾಂತರವಾದುದರಿಂದ ಅದು ಚಿದ್ವಸ್ತುವನ್ನು ಭೇದಿಸಲಾರದು. ಆದರೆ ಅದು ಚಿನ್ಮಯನಾದ ಪರಮಾತ್ಮನಲ್ಲಿ ಇರಬಹುದು, ಕಲ್ಲು ನೀರಿನಲ್ಲಿ ಇರುವಂತೆ. ಅಂಗವೆಂದರೆ ದೇಹ ಎಂಬ ತಪ್ಪು ಅರ್ಥ ಮತ್ತೆರಡು ಮೂರು ಭಾವಾನುವಾದಗಳಲ್ಲಿಯೂ ಬಂದಿದೆ.

3. ಭಾವ ಎಂಬ ಶಬ್ದವು ವಚನಗಳಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಬಳಕೆಯಾಗಿದೆ. “feeling” ಎಂಬುದು ಒಂದು ಅರ್ಥ (ಉದಾ: ದೇಹಭಾವ, ಅಂಗಭಾವ, ಲಿಂಗಭಾವ, ಇತ್ಯಾದಿ). ಅಹಂಭಾವ (‘ego’) ಎಂಬುದು ಮತ್ತೊಂದರ್ಥ. ಅಹಂ ಎಂಬುದು ಶುದ್ಧ ಅಹಂ ಮತ್ತು ಅಶುದ್ಧ ಅಹಂ ಎಂಬ ಎರಡು ಅರ್ಥಗಳಲ್ಲಿ ಪ್ರಯೋಗವಾಗಿದೆ. ಅಶುದ್ಧ ಅಹಂ ಇದ್ದರೆ ಸ್ವಾರ್ಥ ಇರುತ್ತದೆ. ಸ್ವಾರ್ಥ ಆಸೆಗಳಿರುವವರೆಗೂ ಲಿಂಗಾಂಗ ಸಾಮರಸ್ಯ ಸಾಧ್ಯವಾಗದು. ಲಿಂಗಾಂಗ ಸಾಮರಸ್ಯ ಆದವನಲ್ಲೂ ಅಹಂ ಇರುತ್ತದೆ. ಆದರೆ ಅದು ಶುದ್ಧ ಅಹಂ. ಅವನು ‘ನಾನು ಲಿಂಗವಾಗಿದ್ದೇನೆ’ ಎನ್ನುವಾಗ, ‘ದಾಸೋಹಂ’ ಎನ್ನುವಾಗ, ‘ಭಾವಲಿಂಗ’ ಎನ್ನುವಾಗ ಅವನ ಭಾವವೇ (ಅಹಮ್ಮೇ) ಲಿಂಗವಾಗಿದೆ ಎಂದರ್ಥ (ಮನವೇ ಲಿಂಗವಾಗಿದೆ ಎಂದಂತೆ). ಶುದ್ಧ ಅಹಂ ಮತ್ತು ಅಶುದ್ಧ ಅಹಂ ವಸ್ತುಗಳು. “feeling” ಮಾನಸಿಕ ಸ್ಥಿತಿ. ಆದುದರಿಂದ ಭಾವವನ್ನು “feeling” ಎಂದು ಭಾಷಾಂತರಿಸುವುದು ಸರಿಯಲ್ಲ.

4. ಭಕ್ತ ಎಂಬ ಪದವು ವಚನಗಳಲ್ಲಿ ಕೊನೆಯ ಪಕ್ಷ ಮೂರು ಅರ್ಥಗಳಲ್ಲಿ ಬಳಕೆಯಾಗಿದೆ. 1. ಲಿಂಗ ದೀಕ್ಷೆ ಪಡೆದವನು ಭಕ್ತ. ದೀಕ್ಷೆ ಪಡೆದವನು ಲಿಂಗಾಯತನಾಗುತ್ತಾನೆ. ‘ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ…’ ಎನ್ನುವ ಅನೇಕ ವಚನಗಳಿವೆ. ಭವಿ ಎಂದರೆ ಲಿಂಗಾಯತನಲ್ಲದವನು, ಭಕ್ತ ಎಂದರೆ ಲಿಂಗಾಯತ. ಶರಣನೂ ಭಕ್ತನೇ, ಐಕ್ಯನೂ ಭಕ್ತನೇ. 2. ಆಧ್ಯಾತ್ಮಿಕ ಸಾಧನೆಯ ಮೊದಲ ಹಂತದಲ್ಲಿರುವವನು ಭಕ್ತ. ಆಮೇಲಿನ ಹಂತಗಳು ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಇತ್ಯಾದಿ. ಭಕ್ತನು ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತನೂ ಆಗಬಹುದು. ಬ್ರಾಹ್ಮಣ ಭಕ್ತನಾದ ಮೇಲೆ ಸೂತಕ ಇತ್ಯಾದಿಗಳನ್ನು ಆಚರಿಸಬಾರದು (3.1403) ಎಂಬ ಚೆನ್ನಬಸವಣ್ಣನ ವಚನಕ್ಕೆ ‘ಬ್ರಾಹ್ಮಣ ಶಿವಭಕ್ತ ಅಥವಾ ವಿಷ್ಣುಭಕ್ತನಾದ ಮೇಲೆ ಸೂತಕ ಇತ್ಯಾದಿ ಮಾಡಬಾರದು’ ಎಂಬುದು ಸೂಕ್ತ ಅರ್ಥವಲ್ಲ. ಬ್ರಾಹ್ಮಣ ಲಿಂಗಾಯತನಾಗಿ ಧರ್ಮಾಂತರ ಹೊಂದಿದ ಮೇಲೆ ಜಾತಿಸೂತಕ, ಕುಲಸೂತಕ ಇತ್ಯಾದಿಗಳನ್ನು ಮಾಡಬಾರದು’ ಎಂದರ್ಥ (ಅದೇ ರೀತಿ ‘ಬಡ ಹಾರುವನೇಸು ¨ ಭಕ್ತನಾದೊಡೆಯೂ ನೇಣಿನ ಹಂಗು ಬಿಡ…’ ಎಂಬ ಬಸವಣ್ಣನವರ ವಚನದಲ್ಲಿಯೂ ‘ಭಕ್ತ’ ಎಂದರೆ ‘ಲಿಂಗಾಯತ’ ಎಂದೇ ಅರ್ಥ). ಆದುದರಿಂದ ‘ಭಕ್ತ’ ಎಂಬ ಪದವನ್ನು ‘devotee’ ಎಂದು ಭಾಷಾಂತರಿಸಿದರೆ ಅದು ‘ಲಿಂಗಾಯತ’ ಎಂಬ ಅರ್ಥಕೊಡುವುದಿಲ್ಲ.

5. ಮಜ್ಜನ ಎಂಬುದಕ್ಕೆ ಸ್ನಾನ ಎಂಬುದು ಒಂದು ಅರ್ಥವಾದರೂ ‘ಲಿಂಗವನ್ನು ತೊಳೆಯುವುದು’ ಎಂಬುದು ಮತ್ತೊಂದು ಅರ್ಥ (1.288). ಅದನ್ನು ‘mere body ritual’ ಎಂದು ಅನುವಾದಿಸಿರುವುದು ಸರಿಯಲ್ಲ. ಅದು ಮಾನವನ ಸ್ನಾನಕ್ಕೆ ಅನ್ವಯವಾಗುತ್ತದೆಯೇ ಹೊರತು ಲಿಂಗಮಜ್ಜನಕ್ಕಲ್ಲ.

6. ಅಮುಗಿ ರಾಯಮ್ಮನ ವಚನದ (5.636) ಭಾವಾನುವಾದ ಆದಮೇಲೆ ತಮ್ಮ ವ್ಯಾಖ್ಯಾನದಲ್ಲಿ ಪ್ರೊ. ನಾಡಕರ್ಣಿಯವರು ಸಮಯದ ಬಗ್ಗೆ “the word ‘samaya’ has a double meaning. It means time, and also an assembly of spiritual seekers or poets (ಪು. 259)” ಎಂದಿದ್ದಾರೆ. ಆದರೆ ‘ಸಮಯ’ ಎಂಬ ಪಾರಿಭಾಷಿಕ ಪದ ‘ಧರ್ಮ’ದ ಪರ್ಯಾಯ ಪದ. ಶಿವಸಮಯ ಎಂದರೆ ಶೈವಧರ್ಮ ಅಥವಾ ಶಿವಧರ್ಮ, ಜಿನಸಮಯ ಎಂದರೆ ಜೈನಧರ್ಮ, ಇತ್ಯಾದಿ. ಒಂದರ್ಥದಲ್ಲಿ ಆಯಾ ಸಮಯಕ್ಕೆ ತಕ್ಕಂತೆ ಕೆಲವು ವಿಶಿಷ್ಟ ಆಚಾರಗಳನ್ನು ಮಾಡಬೇಕು (ಉದಾಹರಣೆಗೆ ಬೆಳಿಗ್ಗೆ ಲಿಂಗ ಪೂಜೆ ಮಾಡಬೇಕು) ಎಂಬುದು ಸಮಯಾಚಾರ ಎನಿಸಿಕೊಳ್ಳುತ್ತದೆ. ಆದರೆ ಸಮಯಾಚಾರ ಧಾರ್ಮಿಕ ಆಚಾರವೇ ಆಗಿರಬೇಕು.

7. ‘ಲಿಂಗ ನೋಡಿದರೆ ನೋಡುವ, ಲಿಂಗ ಕೇಳಿದರೆ ಕೇಳುವ…’ ಎಂಬ ಅಲ್ಲಮರ ವಚನವನ್ನು (2.1502) ಪ್ರೊ. ನಾಡಕರ್ಣಿಯವರು “when I look at Linga it looks back at me…” (ನಾನು ಲಿಂಗವನ್ನು ನೋಡಿದರೆ ಲಿಂಗವು ಪ್ರತಿಯಾಗಿ ನನ್ನನ್ನು ನೋಡುತ್ತದೆ) ಎಂದು ಭಾವಾನುವಾದ ಮಾಡಿದ್ದಾರೆ. ಅದೇ ರೀತಿ ನಾನು ಕೇಳಿದರೆ, ನಾನು ಮೂಸಿದರೆ, ನಾನು ಮುಟ್ಟಿದರೆ, ಲಿಂಗವು ಪ್ರತಿಯಾಗಿ ನನ್ನನ್ನು ಕೇಳುತ್ತದೆ, ಮೂಸುತ್ತದೆ, ಮುಟ್ಟುತ್ತದೆ ಎಂಬ ಅರ್ಥ ಬರುವ ಭಾವಾನುವಾದ ಮಾಡಿದ್ದಾರೆ. ಆದರೆ ಈ ವಚನದಲ್ಲಿ ಅಲ್ಲಮರು ಸಾಮರಸ್ಯ (ಮೋಕ್ಷ) ಪಡೆದವನ ಸ್ಥಿತಿ ಮತ್ತು ನಡತೆಯನ್ನು ವರ್ಣಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಲಿಂಗವೇ ಆಗಿರುವ ಶರಣ ತಾನು ನೋಡುವುದಿಲ್ಲ, ತನ್ನಲ್ಲಿರುವ ಲಿಂಗ ನೋಡುತ್ತದೆ, ತಾನು ಮುಟ್ಟಿದರೆ, ಮೂಸಿದರೆ, ರುಚಿಸಿದರೆ, ತನ್ನಲ್ಲಿರುವ ಲಿಂಗ ಮುಟ್ಟುತ್ತದೆ, ಮೂಸುತ್ತದೆ, ರುಚಿಸುತ್ತದೆ, ಎಂದು ತಿಳಿಯುತ್ತಾನೆ. ಏಕೆಂದರೆ ಅವನಲ್ಲಿ ತಾನೆಂಬ ಭಾವ (ಅಂಗಭಾವ) ಹೋಗಿ ಲಿಂಗಭಾವ ನೆಲೆಸಿರುತ್ತದೆ. ಆದುದರಿಂದ ಅಂಗ ಮತ್ತು ಲಿಂಗ ಪರಸ್ಪರ ಮುಟ್ಟುತ್ತವೆ, ನೋಡುತ್ತವೆ, (ಇತ್ಯಾದಿ) ಎಂದು ಭಾವಾನುವಾದ ಮಾಡಿದರೆ ಅಲ್ಲಿ ಅಂಗ ಲಿಂಗಗಳ ದ್ವೈತವಿದೆ ಎಂಬ ತಪ್ಪು ಅರ್ಥ ಉಂಟಾಗುತ್ತದೆ. ಅಲ್ಲದೆ, ಅದು ಐಕ್ಯನ ಅದ್ವೈತಕ್ಕೆ ವಿರುದ್ಧವಾಗುತ್ತದೆ. ಶರಣ ನೋಡಿದರೆ, ಮುಟ್ಟಿದರೆ ಲಿಂಗವೇ ನೋಡಿದಂತೆ, ಮುಟ್ಟಿದಂತೆ (ಇತ್ಯಾದಿ) ಎಂಬ ಅರ್ಥ ಬರುವ ಭಾವಾನುವಾದ ಮಾಡಬೇಕಿತ್ತು.

8. ‘ಉಡುವೆ ನಾನು ಲಿಂಗಕ್ಕೆಂದು’ ಎಂದು ಪ್ರಾರಂಭವಾಗುವ ಅಕ್ಕ ಮಹಾದೇವಿಯ ವಚನವನ್ನು (5.79) ಪ್ರೊ. ನಾಡಕರ್ಣಿಯವರು ಭಾವಾನುವಾದ ಮಾಡಿದ ಮೇಲೆ ತಮ್ಮ ವ್ಯಾಖ್ಯಾನದಲ್ಲಿ “The influence of Bhagavadgita is clear here” (ಇಲ್ಲಿ ಭಗವದ್ಗೀತೆಯ ಪ್ರಭಾವ ಇರುವುದು ಸ್ಪಷ್ಟವಾಗಿದೆ) ಎನ್ನುತ್ತಾರೆ. ಇದೇ ವ್ಯಾಖ್ಯಾನವನ್ನು ಬಸವಣ್ಣನವರ (1.997) ಮತ್ತು ಅಮುಗಿದೇವಯ್ಯನ (6.326) ವಚನಗಳ ಮೇಲಿನ ವ್ಯಾಖ್ಯಾನಗಳಲ್ಲಿ ಪುನರುಚ್ಚರಿಸುತ್ತಾರೆ. ಯಾವುದೇ ವ್ಯಕ್ತಿ ಅನುಭಾವಿಯಾಗಿ ತನ್ನತನವನ್ನು ಕಳೆದುಕೊಂಡು ಪರವಸ್ತುವಿನೊಂದಿಗೆ ಸಮೀಕರಿಸಿಕೊಂಡರೆ ಅವನ ಕ್ರಿಯೆಗಳೆಲ್ಲವೂ ನಿಷ್ಕಾಮ ಕ್ರಿಯೆಗಳೇ ಆಗುತ್ತವೆ. ಆದುದರಿಂದ ಅವನು ಭಗವದ್ಗೀತೆಯ ನಿಷ್ಕಾಮ ಕರ್ಮ ಸಿದ್ಧಾಂತದಿಂದ ಪ್ರಭಾವಿತನಾಗಿ ಹಾಗೆ ಮಾಡುತ್ತಾನೆ ಎನ್ನುವುದು ಎಷ್ಟು ಸರಿ? ಭಗವದ್ಗೀತೆಗಿಂತ ಮೊದಲು ಉಪನಿಷತ್ಕಾರರು ನಿಷ್ಕಾಮ ಕರ್ಮ ಮಾಡುತ್ತಿರಲಿಲ್ಲವೇ? ಯೇಸುವಿನ ನಿಷ್ಕಾಮ ಕರ್ಮ ಭಗವದ್ಗೀತೆಯ ಪ್ರಭಾವವೇ? ಅನೇಕ ಅನಕ್ಷರಸ್ಥ ಶರಣರು (ಉದಾ: ನುಲಿಯ ಚಂದಯ್ಯ) ಭಗವದ್ಗೀತೆಯಿಂದ ಪ್ರಭಾವಿತರಾಗದೆ ನಿಷ್ಕಾಮ ಕರ್ಮ (ದಾಸೋಹ) ಮಾಡುತ್ತಿದ್ದರು ಎಂಬುದು ಗಮನಾರ್ಹ.

ಇಂಥ ಸಣ್ಣಪುಟ್ಟ ದೋಷಗಳಿದ್ದರೂ ಈ ಗ್ರಂಥವು ಒಂದು ರೀತಿಯಲ್ಲಿ ಮಹತ್ವಪೂರ್ಣ ಗ್ರಂಥವೆನಿಸಿಕೊಳ್ಳುತ್ತದೆ. ವಚನಗಳನ್ನು ಇಂಗ್ಲಿಷ್ ಭಾಷೆಗೆ ಭಾವಾನುವಾದ ಮಾಡಿರುವುದರಿಂದ ವಚನಕಾರರ ಧಾರ್ಮಿಕ, ತತ್ವಮೀಮಾಂಸೀಯ, ನೈತಿಕ ಮತ್ತು ಸಾಮಾಜಿಕ ಸಿದ್ಧಾಂತಗಳು ಅಂತರರಾಷ್ಟ್ರೀಯ ಜನತೆಗೆ ಮುಟ್ಟುತ್ತವೆ ಎಂಬುದು ಒಂದು ಮಹತ್ವದ ವಿಷಯ. ಆದರೆ ನಮ್ಮ ಉತ್ತರ ಭಾರತೀಯರಿಗೆ ಇಂಗ್ಲಿಷ್ ಅಲರ್ಜಿ. ಅಂಥವರಿಗೆ ಪ್ರೊ. ನಾಡಕರ್ಣಿಯವರ ಸಂಸ್ಕೃತ ಭಾವಾನುವಾದ ಖಂಡಿತ ಪ್ರಿಯವಾಗುತ್ತದೆ. ಆದುದರಿಂದ ಪ್ರೊ. ನಾಡಕರ್ಣಿಯವರು ಈ ಉಭಯ ಮಹತ್ವದ ಪ್ರಯತ್ನ ಮಾಡಿರುವುದು ಅನುಕರಣೀಯ, ಶ್ಲಾಘನೀಯ, ಅಭಿನಂದನೀಯ.

Previous post ಅದ್ವಿತೀಯ ಶರಣರು
ಅದ್ವಿತೀಯ ಶರಣರು
Next post ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ

Related Posts

ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
Share:
Articles

ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್

June 14, 2024 ಡಾ. ಕೆ. ಎಸ್. ಮಲ್ಲೇಶ್
ಎಳೆಯನಾಗಿದ್ದಾಗಲೇ ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸಿದ ಬಸವಣ್ಣನವರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ತನ್ನ ಹುಟ್ಟಿನ ಧರ್ಮ ಬಿಟ್ಟು, ಕೂಡಲಸಂಗಮದಲ್ಲಿ ಅಧ್ಯಯನ ಮಾಡಿ...
ಶರಣೆಯರ ಸ್ಮಾರಕಗಳು
Share:
Articles

ಶರಣೆಯರ ಸ್ಮಾರಕಗಳು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಕ್ರಾಂತಿಯ ನಂತರ ಅದು ವಿಸ್ತೃತವಾಗಿ ವ್ಯಾಪಿಸಿಕೊಂಡಿದ್ದು ಇಂದಿನ ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಚಿಮ್ಮಡ ಅಂಕಲಗಿ ಹಿರೇ...

Comments 8

  1. ಆನಂದಕುಮಾರ್ ಗರಗ
    Feb 17, 2025 Reply

    ಪ್ರೊ. ನಾಡಕರ್ಣಿಯವರ ವಚನಗಳ ಭಾಷಾಂತರ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. ಅವರ ಪುಸ್ತಕ ಪರಿಚಯ ಮಾಡಿಕೊಟ್ಟ ಡಾ.ಎನ್.ಜಿ.ಮಹಾದೇವಪ್ಪ ಅವರಿಗೆ ಧನ್ಯವಾದಗಳು.

  2. ತುರವೇಕೆರೆ ರಮೇಶ್
    Feb 20, 2025 Reply

    ಸಂಸ್ಕೃತ ಹಾಗೂ ಇಂಗ್ಲಿಷ್ ಎರಡರಲ್ಲೂ ಏಕಕಾಲಕ್ಕೆ ವಚನಗಳನ್ನ ಅನುವಾದಿಸಿ ಲೋಕಾರ್ಪಣೆ ಮಾಡಿದ ಪ್ರೊಫೆಸರಿಗೆ ಶರಣಾರ್ಥಿ🙏🏽

  3. ಸರೋಜಾ ಬಿ.ವಿ
    Feb 23, 2025 Reply

    ಸರ್, ಈ ಪುಸ್ತಕ ಎಲ್ಲಿ ದೊರೆಯುತ್ತದೆ. ವಿಳಾಸ ಕಳಿಸಿ.

  4. ಶಂಕರ್ ಗಿರಿಧರ
    Feb 26, 2025 Reply

    ಭಕ್ತ, ಭಾವ, ಮಜ್ಜನದಂತಹ ಕೆಲ ಪಾರಿಭಾಷಿಕ ಪದಗಳನ್ನು ಶರಣರ ನೆಲೆಯಲ್ಲಿ ಅರಿಯುವ ಪ್ರಯತ್ನ ಆಗಬೇಕು ವಿನಹ ಈಗಿನ ಕಾಲದ ವಿಚಾರಗಳಿಗೆ ಹೋಲಿಸಿ ಓದುವುದು ತಪ್ಪಾಗುತ್ತದೆ. ಅಂತಹ ಆತಂಕ ಎಲ್ಲಾ ಭಾಷಾಂತರಕಾರರನ್ನು ಎದುರಾಗುತ್ತದೆ ಎಂಬುದನ್ನು ನೆನಪಿಡಲೇಬೇಕಾಗುತ್ತದೆ, ಅಲ್ಲವೆ?

  5. ಆನಂದಮೂರ್ತಿ ಪಟವಾಡಿ
    Mar 1, 2025 Reply

    ಭಾಷಾಂತರ ಹಾಗೂ ಭಾವಾನುವಾದಗಳ ವ್ಯತ್ಯಾಸ ಸೂಚಿಸುವ ಒಂದು ವಚನದ ಉದಾಹರಣೆ ನೀಡಿದ್ದರೆ ಓದುಗರಿಗೆ ಇಂತಹ ಅಪರೂಪದ ಕೃತಿಗಳ ಬಗೆಗೆ ಸ್ಪಷ್ಟ ಮಾಹಿತಿ ದೊರಕುತ್ತಿತ್ತು.

  6. ಶಿವಕಿರಣ ಕಳಸಾಪುರ
    Mar 1, 2025 Reply

    ಅಹಂಕಾರವೂ ಭ್ರಮೆಯೇ ಆಗಿರುವುದರಿಂದ ‘ಎನ್ನ ಭವದ ಕೇಡು’ ಎಂಬುದನ್ನು “destroys the burden of the mundane and my self-conceit too” ಎನ್ನುವ ಅನುವಾದ ಸರಿಯಾಗೇ ಇದೆ ಎಂಬುದು ನನ್ನ ಅಭಿಪ್ರಾಯ.

  7. ಜಗದೀಶ್ ಎಸ್.ಟಿ
    Mar 19, 2025 Reply

    ಅಕ್ಕಾ, ಪುಸ್ತಕದ ಲೇಖಕರ ವಿಳಾಸ ಹಾಗೂ ಪುಸ್ತಕದ ಪ್ರತಿಗಾಗಿ ಸಂಪರ್ಕಿಸುವ ಫೋನ್ ನಂಬರ್ ಕೊಡಿ🙏

  8. ಬಸವಲಿಂಗಾ ತೊರೆದಾಳ್
    Mar 19, 2025 Reply

    ವಚನಗಳನ್ನ ಅನುವಾದ ಮಾಡಿದ ಶ್ರೀಯುತ ನಾಡಕರ್ಣಿಯವರಿಗೆ ತುಂಬು ಹೃದಯದ ಅಭಿನಂದನೆಗಳು🤝

Leave a Reply to ಶಂಕರ್ ಗಿರಿಧರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಭಾರ
ಭಾರ
October 6, 2020
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
Copyright © 2025 Bayalu