Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
Share:
Articles August 11, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…

ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಆ ಲಿಂಗವಂತ ಲಿಂಗಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ ಗುಹೇಶ್ವರಾ.

‘ಲಿಂಗಾಯತ’ ಒಂದು ಸ್ವತಂತ್ರ ಧರ್ಮ. ಇದರ ಸಂಸ್ಥಾಪಕರು ವಿಶ್ವಗುರು ಬಸವಣ್ಣನವರು. ಇದು ನಾವು ಹೇಳುವ ಮಾತಲ್ಲ. 12ನೆಯ ಶತಮಾನದ ಶರಣ, ಶರಣೆಯರು, ಅನುಭಾವಿಗಳು ಹೇಳಿದ ಮಾತು. ಅದರಲ್ಲೂ ಅನುಭಾವಿ, ವಯೋವೃದ್ಧ ಅಲ್ಲಮಪ್ರಭುದೇವರು ‘ಮಹಾಮಹಿಮ ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ’ ಎಂದು ತಮ್ಮ ವಚನದಲ್ಲಿ ಮನದುಂಬಿ ಸ್ಮರಿಸಿದ್ದಾರೆ. ಅವರೇ ಮತ್ತೊಂದು ವಚನದಲ್ಲಿ ‘ಆದಿಯಲ್ಲಿ ನೀನೇ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ’ ಎಂದು ಪ್ರತಿಪಾದಿಸುತ್ತ ‘ಜಂಗಮ, ಪ್ರಸಾದ, ಪಾದೋದಕ’ದ ಬಗ್ಗೆ ಹೇಳಿ ‘ಜಂಗಮಪ್ರಾಣಿಯಾಗಿ ಸದಾಚಾರಿಯಾದೆ. ಅದು ಕಾರಣ ನೀನೆ ಸರ್ವಾಚಾರ ಸಂಪನ್ನನಾಗಿ ಪೂರ್ವಾಚಾರಿಯೂ ನೀನೆಯಾದೆ’ ಎಂದು ಬಸವಣ್ಣನವರ ಸಾಧನೆ ಹೇಳುತ್ತ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದ್ದಾರೆ. ಹಾಗಿದ್ದರೆ ‘ಬಸವಣ್ಣನವರಿಗೆ ಗುರು ಯಾರು?’ ಎನ್ನುವ ಪ್ರಶ್ನೆ ಹಲವರದು. ಈ ಪ್ರಶ್ನೆಗೆ ಬಸವಣ್ಣನವರ ಹಾಗೂ ಅವರ ಸಮಕಾಲೀನ ಶರಣರ ವಚನಗಳಲ್ಲಿ ಸ್ಪಷ್ಟ ಉತ್ತರವಿದೆ. ‘ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು, ಹಾಲೊಳಗೆ ತುಪ್ಪವುಂಟು’ ಎನ್ನುವ ವಚನದಲ್ಲಿ ‘ಅಂತರಾಮಿಯಲಿ ಶಿವನಿಹನು. ಅದೇನು ಕಾರಣ ಕತ್ತಲೆ ಕಾಣಬಾರದು. ತೋರಬಲ್ಲ ಗುರು ಸುಳಿಯನು’ ಎಂದಿದ್ದಾರೆ. ನನಗೆ ಶಿವಪಥವನ್ನು ತೋರುವ ಗುರು ಕಾಣುತ್ತಿಲ್ಲ ಎನ್ನುವ ತಮ್ಮ ಮನಸ್ಸಿನ ದುಗುಡವನ್ನು ಇಲ್ಲಿ ತೋಡಿಕೊಂಡಿದ್ದಾರೆ. ಅವರೇ ತಮ್ಮ ಮತ್ತೊಂದು ವಚನದಲ್ಲಿ ‘ಎನಗೆ ಗುರುಪಥವ ತೋರಿದವರಾರು? ಲಿಂಗಪಥವ ತೋರಿದವರಾರು? ಜಂಗಮಪಥವ ತೋರಿದವರಾರು? ಪಾದೋದಕ ಪ್ರಸಾದ ಪಥವ ತೋರಿದವರಾರು? ತೋರುವ ಮನವೆ ನೀವೆಂದರಿತೆ. ಎನಗಿನ್ನಾವ ಭವವಿಲ್ಲ’ ಎಂದಿರುವುದು ಗಮನಾರ್ಹ. ಅವರಿಗೆ ‘ಅರಿವೇ ಗುರು’, ಆ ಗುರುವನ್ನು ತೋರಿದ ಮನ ತನ್ನಲ್ಲೇ ಇದೆ ಎನ್ನುವ ನಂಬಿಕೆ ಇತ್ತು.

ಬಸವಣ್ಣನವರಿಗಿಂತ ಪೂರ್ವದಲ್ಲಿ ಅನೇಕ ಧರ್ಮಗಳು ಇದ್ದದ್ದು ಸತ್ಯ. ಆದರೆ ಬಹುತೇಕ ಧರ್ಮಗಳಲ್ಲಿ ಸರ್ವಸಮಾನತೆ ಇರಲಿಲ್ಲ. ಲಿಂಗತಾರತಮ್ಯ ಎದ್ದು ತೋರುತ್ತಿತ್ತು. ಬಹುದೇವತಾರಾಧನೆ ಮತ್ತು ಸ್ಥಾವರ ವಿಗ್ರಹಗಳ ಪೂಜೆ ವಿಜೃಂಭಿಸುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಜನರು ತಾವೇ ಶ್ರೇಷ್ಠರು. ತಾವು ಹೇಳುವುದೇ ಧರ್ಮ. ತಾವು ಲಿಂಗೋದ್ಭವರು ಎನ್ನುತ್ತ ಜನರಲ್ಲಿ ಮೌಢ್ಯ, ಕಂದಾಚಾರ ತುಂಬುವಲ್ಲಿ ಯಶಸ್ವಿಯಾಗಿದ್ದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ತರತಮ ಭಾವನೆ ಬಿತ್ತಿ ಕೆಲವು ವರ್ಗದವರು ಮಾತ್ರ ಶ್ರೇಷ್ಠರು ಎಂದು ಮೆರೆಯುತ್ತಿದ್ದರು. ಮಹಿಳೆ ಧಾರ್ಮಿಕ ಮತ್ತಿತರ ಸ್ವಾತಂತ್ರ್ಯಕ್ಕೆ ಅನರ್ಹಳು ಎನ್ನುವ ಶಾಸನವನ್ನೇ ವಿಧಿಸಿದ್ದರು. ವೇದ, ಶಾಸ್ತ್ರ, ಪುರಾಣ ಇತ್ಯಾದಿಗಳನ್ನು ಮುಂದೆ ಮಾಡಿಕೊಂಡು ಜನರಲ್ಲಿ ಅಜ್ಞಾನ, ಅಂಧಶ್ರದ್ಧೆಯ ಬೀಜ ಬಿತ್ತಿ ಹುಲುಸಾದ ಬೆಳೆ ತೆಗೆಯುವ ಮೂಲಕ ಅದನ್ನೇ ತಮ್ಮ ಐಷಾರಾಮಿ ಬದುಕಿನ ಬಂಡವಾಳ ಮಾಡಿಕೊಂಡಿದ್ದರು. ಇಂಥ ಅನೇಕ ಧಾರ್ಮಿಕ, ಸಾಮಾಜಿಕ ಅವಾಂತರ, ಅನಿಷ್ಠಗಳನ್ನು ಕಂಡ ಬಸವಣ್ಣನವರು ಅಂಥ ಧರ್ಮಗಳ ಹಿಂಬಾಲಕರಾಗುವ ಬದಲು ಒಂದು ಧರ್ಮ ಹೇಗಿರಬೇಕು ಎನ್ನುವ ಚಿಂತನೆ ಮಾಡಿದರು. ಅವರ ಚಿಂತನೆಯ ಫಲಶೃತಿಯಾಗಿ ಹೊರಹೊಮ್ಮಿದ್ದು ‘ಲಿಂಗಾಯತ’ ಎನ್ನುವ ಸ್ವತಂತ್ರ ಧರ್ಮ. ಇದು ಯಾವುದೇ ಧರ್ಮದ ಭಾಗವಲ್ಲ. ಯಾವ ಧರ್ಮದಿಂದಲೂ ಅವರು ಪ್ರಭಾವಿತರಾದವರಲ್ಲ.

ಬಸವಾದಿ ಶರಣರು ‘ಕರ್ಮ’ ಸಿದ್ಧಾಂತದ ಬದಲು ‘ಕಾಯಕ’ ಸಿದ್ಧಾಂತವನ್ನು ಪ್ರತಿಪಾದಿಸಿದರು.‘ಸ್ಥಾವರ’ ಪೂಜೆಗೆ ಬದಲು ‘ಜಂಗಮ’ದ ಪ್ರಾಮುಖ್ಯತೆಯನ್ನು ತೋರಿಸಿದರು. ಪ್ರಜ್ಞೆಯ ಪ್ರತೀಕವಾಗಿ ಹೊರಹೊಮ್ಮಿದ್ದು ಇಷ್ಟಲಿಂಗ. ಇದರಿಂದ ಹೊರಗಿನ ಗುಡಿ, ದೇವಾಲಯಗಳ ಬದಲು ದೇಹವನ್ನೇ ದೇವಾಲಯವನ್ನಾಗಿ ಮಾಡಿದರು.‘ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಬಸವಣ್ಣನವರ ಮತ್ತು ಇತರ ಶರಣರ ವಚನಗಳು ಇದಕ್ಕೆ ಸಾಕ್ಷಿ ನುಡಿಯುತ್ತವೆ. ಪ್ರಭುದೇವರು ‘ನಾ ದೇವನಲ್ಲದೆ ನೀ ದೇವನೆ’ ಎಂದು ಗುಡಿಯ ಜಡದೇವರ ಮುಂದೆ ನಿಂತೇ ಪ್ರಶ್ನೆ ಮಾಡಿದಂತಿದೆ. ಅಂಬಿಗರ ಚೌಡಯ್ಯನವರು ಕಲ್ಲು, ಮಣ್ಣು, ಮರ, ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ವರ್ಗ, ವರ್ಣ ಭೇದದ ಬದಲು ಎಲ್ಲರೂ ಸರ್ವಸಮಾನರು ಎನ್ನುವ ತತ್ವವನ್ನು ಜಾರಿಯಲ್ಲಿ ತಂದರು.‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎನ್ನುವ ಭಾವದ ಬೇರೆ ಬೇರೆ ವಚನಗಳು ಇದಕ್ಕೆ ಸಾಕ್ಷಿ ನುಡಿಯುತ್ತಿವೆ. ಆದರೆ ಬಸವಾದಿ ಶಿವಶರಣರ ಪ್ರಗತಿಪರ, ವೈಜ್ಞಾನಿಕ, ವೈಚಾರಿಕ, ತಾತ್ವಿಕ, ನೈತಿಕ, ಆಧ್ಯಾತ್ಮಿಕ ಧರ್ಮ ಜಾರಿಯಲ್ಲಿ ಬಂದರೆ ತಮ್ಮ ಬೇಳೆ ಬೇಯುವುದಿಲ್ಲ ಎನ್ನುವ ಭಯ ಅನೇಕ ಪಟ್ಟಭದ್ರರಿಗೆ ಕಾಡಿದ್ದು ಸುಳ್ಳೇನಲ್ಲ. ಹಾಗಾಗಿ ಅವರು ಬಸವಣ್ಣ ಅಂಥ ಯಾವ ಕಾರ್ಯವನ್ನೂ ಮಾಡಿಲ್ಲ, ‘ಅನುಭವ ಮಂಟಪ’ ಇರಲೇ ಇಲ್ಲ ಎಂದೆಲ್ಲ ಹರಟಿದ್ದನ್ನು ಮತ್ತೆ ಪ್ರಸ್ತಾಪ ಮಾಡಬೇಕಿಲ್ಲ.

‘ಹಾಡಿದ್ದನ್ನೇ ಹಾಡುವ ಕಿಸಬಾಯಿ ದಾಸ’ ಎನ್ನುವಂತೆ ಈಗಲೂ ಬಸವಣ್ಣನವರು ಸ್ವತಂತ್ರ ಧರ್ಮದ ಸಂಸ್ಥಾಪಕರಲ್ಲ. ಅವರು ವೀರಶೈವ ಧರ್ಮದ ಅನುಯಾಯಿಗಳಾಗಿ ಅದನ್ನು ಇನ್ನಷ್ಟು ವಿಸ್ತಾರಗೊಳಿಸಿದರು ಎನ್ನುವವರು ಇದ್ದಾರೆ. ಇದಕ್ಕೆ ಪಂಚಪೀಠಾಧೀಶರೇನೂ ಹೊರತಲ್ಲ. ಅವರು ಬಸವಣ್ಣನವರನ್ನು ಮೊದಲಿನಿಂದಲೂ ಒಪ್ಪಿದವರೇ ಅಲ್ಲ. ಬಸವಣ್ಣನವರ ಭಾವಚಿತ್ರ ಇರುವ ವೇದಿಕೆಯಲ್ಲಿ ಕೂರಲು ಸಿದ್ಧರಿರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರ ಉತ್ಸವ ನಡೆದಾಗ ಅಲ್ಲಲ್ಲೇ ಹಾಕಿರುವ ಚಪ್ಪರದಲ್ಲಿದ್ದ ಬಸವಣ್ಣನವರ ಫೋಟೋ ತೆಗೆಸಿದ ನಿದರ್ಶನಗಳೂ ಇವೆ. ಅದೇ ಜವಾಹರಲಾಲ್ ನೆಹರು ಅವರು ಸೂಟು, ಬೂಟು ಹಾಕಿಕೊಂಡು ನಿಂತಿದ್ದ ಫೋಟೊ ಇದ್ದಲ್ಲಿ ಅದನ್ನು ತೆಗೆಸುವ ಸಾಹಸ ಮಾಡಿಲ್ಲ ಎನ್ನುವುದನ್ನು ಅನೇಕರು ನಮ್ಮ ಗಮನಕ್ಕೆ ತಂದದ್ದುಂಟು. ಅವರು ತಮ್ಮದೇ ಆದ ಕೋಟೆಯನ್ನು ಕಟ್ಟಿಕೊಂಡು ತಾವೇ ಮೂಲಗುರುಗಳು. ಎಲ್ಲರೂ ತಮ್ಮ ಅನುಯಾಯಿಗಳು ಎನ್ನುವ ವಾದವನ್ನು ಮಾಡುತ್ತಲೇ ಬಂದಿದ್ದಾರೆ. 2025 ಜುಲೈ 21-22 ರಂದು ದಾವಣಗೆರೆಯಲ್ಲಿ ಪಂಚಪೀಠಾಧೀಶ್ವರರ ಶೃಂಗಸಭೆ ನಡೆದು ತುಂಬಾ ಸದ್ದು ಮಾಡಿದ್ದನ್ನು ನಾವು ವಿದೇಶದಲ್ಲಿದ್ದ ಕಾರಣ ತಿಳಿದಿರಲಿಲ್ಲ. ಅಲ್ಲಿಂದ ಬಂದಮೇಲೆ ಅವರಲ್ಲಿ ಕೆಲವರ ಆಶೀರ್ವಚನ ಕೇಳಿದಾಗ ಇವರು ಇನ್ನೂ ಯಾವ ಶತಮಾನದಲ್ಲಿದ್ದಾರೆ ಎನ್ನುವ ಪ್ರಶ್ನೆ ನಮ್ಮ ಮನದಲ್ಲಿ ಮೂಡಿ ಈ ಲೇಖನ ಬರೆಯಲು ಪ್ರೇರಣೆಯಾಗಿದೆ.

ದಾವಣಗೆರೆಯಲ್ಲಿ ನಡೆದ ಶೃಂಗಸಭೆಯಲ್ಲಿ ಅನೇಕ ರಾಜಕಾರಣಿಗಳು ಸಹ ಮಾತನಾಡಿದ್ದಾರೆ. ಅವರಲ್ಲಿ ಶ್ರೀ ವಿಜಯಾನಂದ ಕಾಶಪ್ಪನವರೂ ಒಬ್ಬರು. ಅವರು ಆವೇಶಭರಿತರಾಗಿ ಮಾತನಾಡುತ್ತ ‘ಕೂಡಲಸಂಗಮ ಕ್ಷೇತ್ರದ ಭೂಮಿಯನ್ನು ಪಾವನಗೊಳಿಸಲು
ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವವನ್ನು ಅಲ್ಲಿ ಮಾಡಿಸುವುದಾಗಿ’ ವಾಗ್ದಾನ ಮಾಡಿದ್ದಾರೆ. ಬಸವಣ್ಣನವರ ಪಾದಸ್ಪರ್ಶದಿಂದ ಪವಿತ್ರವಾಗಿದ್ದ ಆ ಕ್ಷೇತ್ರವನ್ನು ಅಪವಿತ್ರ ಮಾಡಿದವರು ಯಾರು? ಪಂಚಾಚಾರ್ಯರ ಉತ್ಸವ ಮಾಡಿದಾಕ್ಷಣ ಅದು ಪವಿತ್ರವಾಗುತ್ತದೆಯೇ? ಪವಿತ್ರ, ಅಪವಿತ್ರ ಎನ್ನುವುದು ಅಲ್ಲಿಯ ಜನರ ಮನದಲ್ಲಿ ಮೂಡಿ, ಅವರು ಬದಲಾವಣೆ ಆದರೆ ಕ್ಷೇತ್ರ ಪವಿತ್ರವಾಗುತ್ತದೆ. ಅದಕ್ಕೆ ಉತ್ಸವ ಮಾಡುವ ಬದಲು ಬಸವಾದಿ ಶಿವಶರಣರ ನೈಜ ತತ್ವಗಳನ್ನು ಜನಮನದಲ್ಲಿ ಬಿತ್ತುವ ಕಾರ್ಯವನ್ನು ಯುವಕರಾಗಿರುವ ಕಾಶಪ್ಪನವರು ಮಾಡಿದರೆ ನಿಜಕ್ಕೂ ಆ ಕ್ಷೇತ್ರಕ್ಕೆ ಮೆರಗು ಬರುತ್ತದೆ, ಪವಿತ್ರವಾಗುತ್ತದೆ. ಶ್ರೀ ಕೇದಾರ ಜಗದ್ಗುರುಗಳವರು ತಮ್ಮ ಆಶೀರ್ವಚನದಲ್ಲಿ 2017ರಲ್ಲಿ ನಡೆದ ಲಿಂಗಾಯತ ಧರ್ಮದ ಹೋರಾಟದ ಪ್ರಸ್ತಾಪ ಮಾಡಿದ್ದಾರೆ. ಅವರು ಆಗ ಮೌನವಾಗಿದ್ದು ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ವೀರಶೈವ ಧರ್ಮದ ಸಂಪ್ರದಾಯ ಮತ್ತು ಸಿದ್ಧಾಂತ ಶಿಖಾಮಣಿ ಗ್ರಂಥದ ವಿಚಾರ ತಿಳಿಸಿ ‘ಬಸವೇಶ್ವರರು 12ನೆಯ ಶತಮಾನದಲ್ಲಿ ಈ ಧರ್ಮವನ್ನು ಪ್ರಚಾರ ಮಾಡಿದ್ದಾರೆ’ ಎಂದು ಮನವರಿಕೆ ಮಾಡಿಕೊಟ್ಟರಂತೆ. ಅವರು ಅಷ್ಟಕ್ಕೇ ತೃಪ್ತರಾಗಿಲ್ಲ; ಮೋದಿಯವರ ಕಿವಿಯಲ್ಲಿ ಹೇಳಿ ಲಿಂಗಾಯತ ಧರ್ಮದ ಮಾನ್ಯತೆಯನ್ನು ‘ಸ್ಟಾಪ್’ ಮಾಡಿಸಿದರಂತೆ!

ಕೇದಾರ ಗುರುಗಳ ಮನಸ್ಸು ಎಷ್ಟೊಂದು ವಿಶಾಲವಾಗಿದೆ ಎಂದು ಅವರ ಮಾತುಗಳಿಂದಲೇ ಅರ್ಥವಾಗುತ್ತದೆ. ಇಂಥವರು ಲಿಂಗಾಯತ ಧರ್ಮೀಯರನ್ನು ಹೇಗೆ ಕಾಣುತ್ತಾರೆ ಎಂದು ವಿವರಿಸಬೇಕಿಲ್ಲ. ಅಖಿಲ ಭಾರತ ವೀರಶೈವ ಮಹಾಸಭೆಯವರು ಇತ್ತೀಚೆಗೆ ‘ವೀರಶೈವ’ ಮುಂದೆ ‘ಲಿಂಗಾಯತ’ ಎನ್ನುವುದನ್ನೂ ಸೇರಿಸಿ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದಾರೆ. ಎರಡೂ ಒಂದೇ ಆಗಿದ್ದರೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಅದರ ಪ್ರಯೋಜನ ವೀರಶೈವ ಸಮೂಹಕ್ಕೂ ಆಗುತ್ತಿತ್ತಲ್ಲವೇ? ಅವರ ವೇದಿಕೆಯಲ್ಲಿ ಬಸವಣ್ಣನವರ ಫೋಟೊ ಹಾಕುವ ವಿಶಾಲತೆ ಕೂಡ ಕಂಡುಬರುವುದಿಲ್ಲ. ಬಸವಣ್ಣನವರ ಹೆಸರನ್ನು ಮಾತ್ರ ಹೇಳುತ್ತಾರೆ. ಅದಕ್ಕೆ ಕಾರಣ ಬಸವತತ್ವದ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು. ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಸಂಕುಚಿತ ಮನೋಭಾವದಿಂದ ಎಂದು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರು. ಕೇದಾರ ಶ್ರೀಗಳು ಮುಂದುವರಿದು, ‘ಸ್ವಾಮಿಗಳು ಜಪ, ತಪ, ಪೂಜೆ ಮಾಡಬೇಕು’ ಎನ್ನುತ್ತ ‘12 ಜ್ಯೋತಿರ್ಲಿಂಗ’ಗಳ ಪ್ರಸ್ತಾಪ ಮಾಡಿದ್ದಾರೆ. ಬಸವಣ್ಣನವರು ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದಿರುವಾಗ ಬಸವ ತತ್ವಾಭಿಮಾನಿಗಳು ಜ್ಯೋತಿರ್ಲಿಂಗಗಳನ್ನು ಪೂಜೆ ಮಾಡಬೇಕು ಎನ್ನುವುದು ಅವರ ಸದಾಶಯ ಇದ್ದಂತೆ ತೋರುವುದು. ‘ವಿಶ್ವಶಾಂತಿ ಯಜ್ಞ’ದ ಪ್ರಸ್ತಾಪವನ್ನೂ ಮಾಡಿದ್ದಾರೆ. ಬಸವಣ್ಣನವರು ‘ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವನ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ’ ಎನ್ನುವ ವಚನದಲ್ಲಿ ಯಜ್ಞವಿರೋಧಿ ಮನೋಭಾವ ತೋರಿರುವುದನ್ನು ಪೂಜ್ಯರು ಗಮನಿಸಬೇಕು.

ಪಂಚಾಚಾರ್ಯರ ಬಹುತೇಕ ಕಾರ್ಯಕ್ರಮಗಳು ವೇದಘೋಷದ ಮೂಲಕ ಪ್ರಾರಂಭವಾಗುವವು. ಲಿಂಗಾಯತ ಧರ್ಮದಲ್ಲಿ ವೇದಘೋಷ ಮಾಡುವಂತೆ ಧರ್ಮಗುರು ಬಸವಣ್ಣನವರು ಹೇಳಿಲ್ಲ. ಬದಲಾಗಿ ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ’ ಎಂದಿದ್ದಾರೆ. ಬೇರೆ ಬೇರೆ ಶರಣರು ಸಹ ವೇದ, ಪುರಾಣ, ಶಾಸ್ತ್ರ, ಆಗಮ ಇತ್ಯಾದಿಗಳನ್ನು ಕಟುವಾಗಿ ಲೇವಡಿ ಮಾಡಿದ್ದಾರೆ. ಕಾರಣ ಅವು ಕೆಳವರ್ಗದವರನ್ನು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಅವರು ವೇದಮಂತ್ರಗಳನ್ನು ಕೇಳಿದರೆ ಅವರ ಕಿವಿಯಲ್ಲಿ ಕಾಯಿಸಿದ ಸೀಸ ಹೊಯ್ಯುವ, ಮಂತ್ರ ಪಠಿಸಿದರೆ ನಾಲಗೆಯನ್ನೇ ಸೀಳುವ ಕಾರ್ಯ ನಡೆದಿದ್ದರಿಂದ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ’ ಎನ್ನುವ ಮೂಲಕ ತಳಸಮುದಾಯದ ಜನರನ್ನು ಕರುಳಬಳ್ಳಿಯ ಸಂಬಂಧದಿಂದ ಅಪ್ಪಿಕೊಂಡಿದ್ದರು. ಈ ನೆಲೆಯಲ್ಲೇ ಬಹುತೇಕ ಲಿಂಗಾಯತ ಧರ್ಮದ ಸಭೆಗಳು ವಚನ ಸಂಗೀತದಿಂದ ಪ್ರಾರಂಭವಾಗುತ್ತವೆ. ಹಳೆಯ ಚಾಳಿ ಇರುವವರು ಮಾತ್ರ ವೇದಘೋಷವನ್ನೂ ಮಾಡುತ್ತಾರೆ, ವಚನಗಳನ್ನೂ ಹಾಡುತ್ತಾರೆ. ಹೀಗೆ ಎರಡು ದಡದ ಮೇಲೆ ಕಾಲಿಟ್ಟು ನಡೆಯಬಾರದಲ್ಲವೇ? ಪಂಚಾಚಾರ್ಯರನ್ನು ಭಗವಂತ ಭೂಲೋಕಕ್ಕೆ ಕಳಿಸುವಾಗ ಅಲ್ಲಿ ಒಂದು ಧರ್ಮವನ್ನು ಸ್ಥಾಪಿಸಲು ಆದೇಶ ಮಾಡಿದನಂತೆ. ಇಂಥ ಕಾಗಕ್ಕ, ಗುಬ್ಬಕ್ಕ ಕತೆಗಳಿಗೆ ಲಿಂಗಾಯತ ಧರ್ಮದಲ್ಲಿ ಅವಕಾಶವೇ ಇಲ್ಲ. ಕಾರಣ ಇದು ವಾಸ್ತವಿಕತೆಗೆ ಒತ್ತು ಕೊಡುವ ಧರ್ಮ.

ರಂಭಾಪುರಿ ಜಗದ್ಗುರುಗಳವರು ತಮ್ಮ ಸಂದೇಶದಲ್ಲಿ ‘ವೀರಶೈವ ಧರ್ಮವನ್ನು ಕಟ್ಟಿ ಬೆಳೆಸುವ ಮೂಲಕ ಶಾಂತಿ, ಸಾಮರಸ್ಯ ಕಾಪಾಡಬೇಕು, ಸಂಘರ್ಷ ನಿವಾರಣೆ ಆಗಬೇಕು’ ಎಂದಿದ್ದಾರೆ. ಸಾಮರಸ್ಯಕ್ಕೆ ಧಕ್ಕೆ ತಂದಿರುವವರು ಮತ್ತು ಸಂಘರ್ಷಕ್ಕೆ ಕಾರಣರಾದವರು ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಕೆಲವು ಮಠಾಧೀಶರು ಎಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ‘ರಾಜಕೀಯ ಕ್ಷೇತ್ರದಂತೆ ಧಾರ್ಮಿಕ ಕ್ಷೇತ್ರವೂ ಹೊಲಸಾಗಿದೆ’ ಎನ್ನುವ ವಾಸ್ತವ ಸತ್ಯವನ್ನೂ ಹೇಳಿದ್ದಾರೆ. ಅವರ ಆಶೀರ್ವಚನದುದ್ದಕ್ಕೂ ವೀರಶೈವ ಧರ್ಮ, ಪಂಚಾಚಾರ್ಯರು, ರೇಣುಕಾದಿಗಳು ಎನ್ನುವ ಪದಗಳ ಬಳಕೆ ಪ್ರಧಾನವಾಗಿದೆಯೇ ಹೊರತು ಲಿಂಗಾಯತ ಎನ್ನುವುದಾಗಲಿ, ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳಾಗಲಿ ಅಲ್ಲ. ‘ಜಾತಿಗೊಂದು ಮಠಗಳಾಗಿ ತತ್ವವನ್ನು ದೂರ ತಳ್ಳಿ ಸಮಾಜದಲ್ಲಿ, ಧರ್ಮದಲ್ಲಿ ಒಡಕನ್ನುಂಟುಮಾಡುತ್ತಿವೆ’ ಎನ್ನುವ ಭಾವನೆಯ ಅವರ ನುಡಿಮುತ್ತುಗಳು ಏನು ಹೇಳುತ್ತಿವೆ? ಪಂಚಪೀಠಗಳು ಮಾತ್ರ ಈ ಜಗತ್ತಿನಲ್ಲಿರಬೇಕು, ಬೇರೆಯವರು ಮಠಗಳನ್ನು ಮಾಡಿಕೊಳ್ಳಬಾರದು ಎಂದರ್ಥವೇ? ಪಂಚಪೀಠಗಳು ಮಾತ್ರ ಸಮಾಜದ ಸಂಘಟನೆ ಮಾಡುತ್ತಿವೆಯೇ? ಮುಂದೆ ‘ಬೆಂಗಳೂರಲ್ಲಿ ತಮ್ಮ ಶಕ್ತಿಯನ್ನು ತೋರಿಸಬೇಕು ಎನ್ನುವ’ ಕರೆಯನ್ನೂ ನೀಡಿದ್ದಾರೆ. ‘ಹುಟ್ಟಿದವರು ಸಾಯಲೇಬೇಕು. ದ್ವೇಷ, ಅಸೂಯೆ ಮುಂದುವರಿಸಿಕೊಂಡು ಹೋಗುವುದು ಬೇಡ’ ಎನ್ನುವ ಹೃದಯದ ಮಾತನ್ನೂ ಆಡಿದ್ದಾರೆ. ಬುದ್ಧಿಗಿಂತ ಹೃದಯ ಮತ್ತು ವಿವೇಕದ ಸಂದೇಶ ಮುಖ್ಯವಾಗಬೇಕಲ್ಲವೇ?

12ನೆಯ ಶತಮಾನದ ಬಸವಾದಿ ಶಿವಶರಣರ ವಿಚಾರಗಳನ್ನು ಪ್ರತಿಪಾದಿಸುವ ‘ಕೆಲವು ಮಠಾಧೀಶರು ವೀರಶೈವ, ಲಿಂಗಾಯತ ಬೇರೆ ಬೇರೆ ಮಾಡುವ ಸಂಕುಚಿತ ಕೆಲಸ ಮಾಡುತ್ತಿರುವುದು ಭಕ್ತರಿಗೆ ಗೊತ್ತು’ ಎನ್ನುವ ಮೂಲಕ ಅವರನ್ನು ಎತ್ತಿಕಟ್ಟುವ ಕಾರ್ಯವನ್ನು ಮಾಡುತ್ತಿರುವವರು ಯಾರು ಎಂದು ಅವರೇ ತಮ್ಮ ಹೃದಯ, ವಿವೇಕ ಮತ್ತು ಅಂತರಾತ್ಮವನ್ನು ಕೇಳಿಕೊಳ್ಳಬೇಕಿದೆ. ‘ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಮಾನ್ಯತೆ ಮಾಡಲು ಮುಂದಾಗಿದ್ದರಿಂದಲೇ ಕಾಂಗ್ರೆಸ್ ಸರ್ಕಾರದ ಹಲವು ಲಿಂಗಾಯತ ಜನಪ್ರತಿನಿಧಿಗಳು ಸೋತರು’ ಎಂದು ಅಪ್ಪಣೆ ಕೊಡಿಸಿದ್ದಾರೆ. ಸೋತವರು ಮುಂದೆ ಅವರಲ್ಲಿಗೆ ಹೋಗಿ ಕ್ಷಮೆಯನ್ನು ಬೇರೆ ಕೇಳಿದ್ದಾರಂತೆ! ಹಾಗೆ ಕೇಳಿದ್ದರೆ ಅದು ಅವರ ಸ್ವಾರ್ಥ ರಾಜಕೀಯ ಆಕಾಂಕ್ಷೆಯೇ ಹೊರತು ಲಿಂಗಾಯತ ಧರ್ಮದ ಕಾರಣಕ್ಕಾಗಿ ಅಲ್ಲ ಎಂದು ಅರ್ಥವಾಗುತ್ತದೆ. ‘ಧಾರ್ಮಿಕ ಆದರ್ಶಗಳನ್ನು ಭಕ್ತರು ಮುಂದುವರಿಸಿಕೊಂಡು ಹೋಗಬೇಕು. ವಿರಕ್ತ ಮಠಾಧೀಶರಲ್ಲೂ ಆ ಭಾವನೆ ಬರಬೇಕು’ ಎಂದು ಕರೆ ನೀಡಿ ‘ನಾವು ವಿರಕ್ತ ಮಠಾಧೀಶರ ಮಟ್ಟಕ್ಕೆ ಇಳಿಯಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಮಟ್ಟಕ್ಕೆ ಇಳಿಯುವುದು ಎಂದರೆ ಏನು? ಲಿಂಗಾಯತ ಸ್ವತಂತ್ರ ಧರ್ಮ, ಬಸವಣ್ಣ ಧರ್ಮಗುರು ಎಂದು ಒಪ್ಪಲಾಗುವುದಿಲ್ಲ ಎಂದಲ್ಲವೇ? ಹಾಗಿದ್ದಾಗ ವೀರಶೈವ, ಲಿಂಗಾಯತ ಹೇಗೆ ಒಂದಾಗಲು ಸಾಧ್ಯ?

ಪಂಚಪೀಠಾಧೀಶರು ಸದರಿ ಶೃಂಗಸಭೆಯಲ್ಲಿ 12 ನಿರ್ಣಯಗಳನ್ನು ಮಂಡಿಸಿದ್ದಾರೆ. ಜಾತಿ ಗಣತಿಯಲ್ಲಿ ಲಿಂಗಾಯತ-ವೀರಶೈವ ಎಂದು ಬರೆಸಬೇಕು ಎನ್ನುವುದು ಮೊದಲ ನಿರ್ಣಯವಾಗಿದೆ. ಆದರೆ ‘ಲಿಂಗಾಯತ ಮಠಾಧೀಶರ ಒಕ್ಕೂಟ’ ಈಗಾಗಲೇ ‘ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು, ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಪಂಗಡದ ಹೆಸರನ್ನು ದಾಖಲಿಸಬೇಕು’ ಎಂದು ಕರೆ ಕೊಟ್ಟಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ತಾಲ್ಲೂಕು, ಜಿಲ್ಲೆ ಮುಂತಾದ ಕಚೇರಿಗಳಲ್ಲಿ ರೇಣುಕರ ಫೋಟೋ ಹಾಕಬೇಕು ಎನ್ನುವ ನಿರ್ಣಯವೂ ಸೇರಿದೆ. ತಮಗೆ ಭಕ್ತಿ, ಗೌರವ, ಪ್ರೀತಿ ಇರುವವರ ಭಾವಚಿತ್ರಗಳನ್ನು ಹಾಕುವಲ್ಲಿ ತಪ್ಪೇನಿಲ್ಲ. ಅದಕ್ಕಾಗಿ ನಿರ್ಣಯ ಮಾಡಬೇಕಿಲ್ಲ ಅಲ್ಲವೇ? ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ‘ವೀರಶೈವ ಧರ್ಮದಲ್ಲಿ ಪಂಚಪೀಠಗಳಿಗೆ ಇರುವ ಮಹತ್ವ ಯಾವ ಮಠಗಳಿಗೂ ಇಲ್ಲ. ಪಂಚಪೀಠಾಧೀಶ್ವರರ ದರ್ಶನ ಮಾಡಿದರೆ ಸಾಕ್ಷಾತ್ ಭಗವಂತನ ದರ್ಶನ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ’ ಎಂದು ಜನರನ್ನು ದಿಕ್ಕುತಪ್ಪಿಸುವ ವಿಚಾರಗಳನ್ನೇ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿಯಲ್ಲಿ ಸದ್ಧರ್ಮಪೀಠ ಸ್ಥಾಪನೆ ಮಾಡಿದ ಮರುಳಸಿದ್ಧರ ವಿಚಾರವನ್ನೂ ಹೇಳಿದ್ದಾರೆ. ವಿಶ್ವಬಂಧು ಮರುಳಸಿದ್ಧರು ಬಸವಾದಿ ಶಿವಶರಣರ ಹಿರಿಯ ಸಮಕಾಲೀನರು. ಅವರು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಪೀಠದ ಮೂಲ ಪುರುಷರು. ಅವರು ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ಸ್ಥಾಪಿಸಿ ಅದರ ಮೇಲೆ ತಮ್ಮ ಪ್ರಿಯ ಶಿಷ್ಯ ತೆಲಗು ಬಾಳು ಸಿದ್ಧೇಶ್ವರರನ್ನು ಕೂರಿಸಿ ‘ತರಳ ಬಾಳು’ ಎಂದು ಆಶೀರ್ವದಿಸಿದ್ದಕ್ಕೆ ಐತಿಹಾಸಿಕ ದಾಖಲೆಗಳಿವೆ.

“ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ‘ವೀರಶೈವ’ ಎನ್ನುವ ಪವಿತ್ರವಾದ ಧರ್ಮವನ್ನು ಸ್ವೀಕರಿಸಿ ಅದರಂತೆ ನಡೆದು ತಮ್ಮ ಹಿಂದೆ ಬಂದಂತಹ ಎಲ್ಲ ಜನಸಮುದಾಯವನ್ನು ಸನ್ಮಾರ್ಗಕ್ಕೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಇವತ್ತಿನ ಕಾಲದಲ್ಲಿ ಈ ಧರ್ಮ ಜಾತಿ ಜಾತಿಗಳ ಹೆಸರಿನಲ್ಲಿ ಛಿದ್ರಗೊಂಡು ಹೋಗುತ್ತಿರುವುದು ನೋವನ್ನುಂಟುಮಾಡುತ್ತಿದೆ” ಎಂದು ತಮ್ಮ ವಿಚಾರ ಲಹರಿಯನ್ನು ಹರಿಬಿಟ್ಟಿದ್ದಾರೆ. ಅಂದರೆ ಅವರು ಬಸವಣ್ಣನವರನ್ನು ಲಿಂಗಾಯತ ಸ್ವತಂತ್ರ ಧರ್ಮದ ಗುರು ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬಸವಣ್ಣನವರ ‘ಇವನಾರವ…’ ವಚನವನ್ನು ಪ್ರಸ್ತಾಪಿಸಿರುವ ಪೂಜ್ಯರು ‘ಇವತ್ತು ಬಸವಣ್ಣನವರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಠಾಧೀಶರು ವೀರಶೈವರೇ ಬೇರೆ, ಲಿಂಗಾಯತರೇ ಬೇರೆ; ನಮಗೆ ಅವರಿಗೆ ಸಂಬಂಧವಿಲ್ಲ ಎನ್ನುವ ಕಂದಕವನ್ನು ಹುಟ್ಟಿಹಾಕುತ್ತಿದ್ದಾರೆ. ಅವರಿಗೆ ಶಾಸ್ತ್ರದ ಪರಿಜ್ಞಾನ, ಪರಂಪರೆಯ ತಿಳಿವು, ಆದರ್ಶ ಇಲ್ಲದ್ದಕ್ಕೆ ಇಂಥ ಘಟನೆಗಳು ನಡೆಯುತ್ತಿವೆ’ ಎಂದೆಲ್ಲ ತಮ್ಮ ದುರ್ಭಾವನೆಗಳನ್ನು ಹೊರಹಾಕಿದ್ದಾರೆ. ‘ಪಂಚಾಚಾರ್ಯರು ಸಾರಿದ ತತ್ವದ ತಳಹದಿಯ ಮೇಲೆ ಬಸವಣ್ಣನವರು ಈ ಧರ್ಮವನ್ನು ಬೆಳೆಸುವ ಬಹುದೊಡ್ಡ ಕಾರ್ಯ ಮಾಡಿದರು…’ ಎಂದು ಸುಳ್ಳನ್ನೇ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ಸಾರ್ವಜನಿಕರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಅವರ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇರಲಿಲ್ಲವಾದರೂ ಮೌನವಾಗಿದ್ದರೆ ಜನರಿಗೆ ಸತ್ಯ, ಮಿಥ್ಯಗಳ ಅರಿವಾಗುವುದು ಹೇಗೆ ಎನ್ನುವ ಸದ್ಭಾವನೆಯಿಂದ ಪ್ರತಿಕ್ರಿಯಿಸಿದ್ದೇವೆ. ನಮ್ಮ ಪ್ರತಿಕ್ರಿಯೆಗೆ ಪೂರಕವಾಗಿ ಅಲ್ಲಮ ಪ್ರಭುದೇವರ ಒಂದು ವಚನ ಸೂಕ್ತವೆನಿಸುತ್ತಿದೆ. ‘ವಚನ ಸಂದೇಶ’ ಎನ್ನುವ ನಮ್ಮ ಕೃತಿಯಲ್ಲಿ ಪ್ರಭುದೇವರ ಆ ವಚನವನ್ನು ದಾಖಲಿಸಿದ್ದನ್ನು ಯಥಾವತ್ತಾಗಿ ಇಲ್ಲಿ ಕೊಡಬಯಸಿದ್ದೇವೆ.

ಅನಾಚಾರಿಗಳ ಮಾತ ಕೇಳಲಾಗದು:
ಹಗಲ ಇರುಳ ಮಾಡಿ, ಇರುಳ ಹಗಲ ಮಾಡಿ,
ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ,
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ.

ಅಲ್ಲಮಪ್ರಭುದೇವರ ಈ ವಚನ ಕುತರ್ಕಿಗಳ, ನುಡಿ ಜಾಣರ, ಅನಾಚಾರಿಗಳ ಮತ್ತು ಪೂಜಾರಿ-ಪುರೋಹಿತರ ಬದುಕಿಗೆ ಹಿಡಿದ ಕನ್ನಡಿಯಂತಿದೆ. ಇಂಥವರು ಮಾತಿನ ಮೂಲಕವೇ ಜನರನ್ನು ಮರುಳುಮಾಡುವ ಪ್ರಾಜ್ಞರು. ಅವರಿಗೆ ಸತ್ಯಕ್ಕಿಂತ ತಾವು ಪ್ರತಿಪಾದಿಸುವ ಸುಳ್ಳೇ ಸತ್ಯ ಎನ್ನುವ ಅಹಂ ಆವರಿಸಿರುತ್ತದೆ. ಅಂಥವರೇ ಜನರನ್ನು ದಾರಿತಪ್ಪಿಸುವ ದುರ್ಬುದ್ಧಿಯವರು. ಯಾವಾಗಲೂ ಬುದ್ಧಿ ವಿವೇಕವಾಗಬೇಕು. ಆಗ ಸತ್ಯವನ್ನು ಮಾತ್ರ ಎತ್ತಿ ಹಿಡಿಯಲು ಸಾಧ್ಯ. ವಿಷಾದದ ಸಂಗತಿ ಎಂದರೆ ಪ್ರಭುದೇವರ ಕಾಲಕ್ಕಿಂತ ಇಂದು ತಮ್ಮ ಮಾತುಗಳ ಮೂಲಕ ಸಮಾಜವನ್ನು ದಿಕ್ಕುತಪ್ಪಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದನೀಯ. ನಮ್ಮಲ್ಲಿ ಒಬ್ಬ ತುಂಬಾ ಚತುರ ವ್ಯಾಪಾರಿಯಿದ್ದ. ಅವನು ತಮಾಷೆ ಮಾಡುವಲ್ಲಿ ಎತ್ತಿದ ಕೈ. ಒಮ್ಮೆ ಆತನೊಡನೆ ಮಾತನಾಡುತ್ತಿದ್ದಾಗ ಬುದ್ಧಿ ತಾವು ಹೇಳುವ ಮಾತು ಬಸವಣ್ಣನವರ 210ನೆಯ ವಚನದಲ್ಲಿ ಬಂದಿದೆ ಎಂದ. ಇವನು ವಚನಗಳನ್ನು ಎಷ್ಟು ಚನ್ನಾಗಿ ಓದಿಕೊಂಡಿದ್ದಾನಲ್ಲ! ಎಂದು ನಮಗೆ ಸಂತೋಷ ಮತ್ತು ಆಶ್ಚರ್ಯ. ನಮ್ಮ ಪಕ್ಕದಲ್ಲೇ ಇದ್ದ ಬಸವಣ್ಣನವರ ವಚನ ಪುಸ್ತಕವನ್ನು ಕೈಗೆತ್ತಿಕೊಂಡು ನೋಡಿದಾಗ ಆ ವಚನದಲ್ಲಿ ಅಂಥ ಮಾತುಗಳೇ ಇರಲಿಲ್ಲ. ಇದೇನಪ್ಪ ನೀನು ಹೇಳುವುದು ಎಂದಾಗ ಅವನು ನಗಲಾರಂಭಿಸಿದ. ಬುದ್ಧಿ ಇದುವರೆಗೂ ಯಾರೂ ನಾನು ಹೇಳುವುದು ಸುಳ್ಳು ಎಂದು ಸಾಬೀತುಪಡಿಸಿರಲಿಲ್ಲ. ವ್ಯಾಪಾರಿಯಾಗಿ ನಾನೇಕೆ ವಚನಗಳನ್ನು ಓದಲಿ! ನನಗೆ ಒಂದೇ ಒಂದು ವಚನ ಸಹ ಗೊತ್ತಿಲ್ಲ ಎಂದ. ನೋಡಿ ಹೇಗೆ ಜನರು ಸುಳ್ಳನ್ನು ಸತ್ಯ ಮಾಡುತ್ತಾರೆ? ವಿಚಾರ, ವಿಮರ್ಶೆ ಕುತರ್ಕಿಗಳಿಗೆ ಬೇಕಾಗುವುದಿಲ್ಲ. ಹಾಗಾಗಿ ಅವರು ಸುಲಭವಾಗಿ ಹಗಲನ್ನು ಇರುಳನ್ನಾಗಿ, ಇರುಳನ್ನು ಹಗಲನ್ನಾಗಿ ಮಾಡುವರು. ತಮ್ಮ ವಾದ ವೈಖರಿಯ ಮೂಲಕ ಬೆಳಕನ್ನು ಕತ್ತಲೆಯನ್ನಾಗಿ, ಕತ್ತಲೆಯನ್ನು ಬೆಳಕನ್ನಾಗಿ ಮಾಡುವರು. ಅಂಥವರ ಜೊತೆ ವಾದಕ್ಕಿಳಿಯುವುದಕ್ಕಿಂತ ಅವರಿಂದ ದೂರ ಇರುವುದೇ ಕ್ಷೇಮವೆಂದು ವಿವೇಕಿಗಳು ಭಾವಿಸುವರು. ಅದೇ ತಮಗೆ ಒಂದು ವರ ಎಂದು ಕುತರ್ಕಿಗಳು ತಿಳಿಯುವರು.

ನಮಗೆ ಒಂದು ಅಪರೂಪದ ಕತೆ ನೆನಪಾಗುವುದು. ಕಂಠಪೂರ್ತಿ ಕುಡಿದ ಇಬ್ಬರು ಕುಡುಕರು ಬೀದಿಯಲ್ಲಿ ಜಗಳವಾಡುತ್ತಿದ್ದಾರೆ. ಒಬ್ಬ ಆಕಾಶದಲ್ಲಿ ಕಾಣುವುದು ಸೂರ್ಯ ಎಂದರೆ ಮತ್ತೊಬ್ಬ ಚಂದ್ರ ಎಂದು ವಾದ ಮಾಡುತ್ತಾನೆ. ಅದೇ ಸಂದರ್ಭಕ್ಕೆ ಆ ದಾರಿಯಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ಆಕಾಶದಲ್ಲಿ ಕಾಣುವುದು ಚಂದ್ರನೋ, ಸೂರ್ಯನೋ ಹೇಳಿ ಎನ್ನುವರು. ಈ ಕುಡುಕರ ಸಹವಾಸ ನನಗೇಕೆ ಎಂದು ನಾನು ಈ ಊರಿನವನಲ್ಲ; ನನಗೆ ಗೊತ್ತಿಲ್ಲ ಎಂದು ಅಲ್ಲಿಂದ ಜಾರಿಕೊಳ್ಳುವನು. ತಮ್ಮ ಮಾತನ್ನು ಒಪ್ಪದವರು ಆಚಾರವಂತರಾಗಿದ್ದರೂ ಅವರೇ ಅನಾಚಾರಿಗಳು ಎಂದು ಸಾರುವರು. ಅವರ ಮಾತುಗಳನ್ನು ಒಪ್ಪುವವರು ಅನಾಚಾರಿಗಳಾಗಿದ್ದರೂ ಆಚಾರವಂತರಂತೆ ಬಿಂಬಿಸುವರು. ಹಾಗೆಂದಾಕ್ಷಣ ಸದಾಚಾರಿ ದುರಾಚಾರಿಯಾಗಲು, ದುರಾಚಾರಿ ಸದಾಚಾರಿಯಾಗಲು ಸಾಧ್ಯವಿಲ್ಲ. ಲಿಂಗಾಯತ ಧರ್ಮದಲ್ಲಿ ಭಕ್ತ ಮತ್ತು ಭವಿ ಎನ್ನುವ ಪದಗಳ ಬಳಕೆ ಇದೆ. ಭಕ್ತ ಎಂದರೆ ಸದಾಚಾರಿ, ಸದ್ಗುಣಿ. ಭವಿ ಎಂದರೆ ದುರಾಚಾರಿ, ದುರ್ಗುಣಿ. ಕೆಲವೊಮ್ಮೆ ಅತ್ಯಂತ ಮೇಧಾವಿಗಳೆನ್ನುವವರು ತಮ್ಮ ಸ್ವಾರ್ಥಸಾಧನೆಗಾಗಿ ಭಕ್ತರನ್ನೇ ಭವಿಗಳೆಂದು, ಭವಿಗಳನ್ನೇ ಭಕ್ತರೆಂದು ಬಿಂಬಿಸುವರು. ಅವರಿಗೆ ಸತ್ಯ, ಸದಾಚಾರ, ಸದ್ಗುಣ ಮುಖ್ಯವಾಗದೆ ತಮ್ಮ ಮಾತಿಗೆ ಎದುರಾಡಬಾರದು ಎನ್ನುವ ಸ್ವಾರ್ಥ ಮತ್ತು ಅಹಂ ಹೆಡೆಯಾಡುತ್ತಿರುತ್ತದೆ. ಹಾಗಾಗಿ ಅವರು ತಾವು ಹೇಳಿದ್ದೇ ಸತ್ಯ ಎನ್ನುವಂತೆ ನಟಿಸುವರು. ಇದರಿಂದ ಸಾಮಾಜಿಕ ಸ್ಥಿತಿ ಹದಗೆಡುವ, ವ್ಯಕ್ತಿತ್ವಕ್ಕೆ ಕಳಂಕ ತಟ್ಟುವ ಸಾಧ್ಯತೆ ಇರುತ್ತದೆ. ಅಂಥವರ ಸ್ವಭಾವದ ಅರಿವಾದಾಗ ಅವರ ಮಾತುಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುವರು ಪ್ರಭುದೇವರು. ಅನ್ನ ಬೆಂದಿದೆಯೇ ಎಂದು ಪರೀಕ್ಷಿಸಲು ಪ್ರತಿಯೊಂದು ಅಗುಳನ್ನು ಮುಟ್ಟಿ ನೋಡಬೇಕಾಗಿಲ್ಲ. ಅದರಂತೆ ಕೆಲವು ಪೂಜಾರಿ-ಪುರೋಹಿತರ, ಕುತರ್ಕಿಗಳ, ನುಡಿ ಜಾಣರ ಪರೀಕ್ಷೆ ಮಾಡಲು ಹೆಚ್ಚು ಕಾಲವೇನೂ ಬೇಕಾಗಿಲ್ಲ. ಇದರರ್ಥ ಜನರು ವಿಚಾರವಂತರು, ವಿವೇಕಿಗಳು ಆಗಬೇಕು. ಅನುಮಾನ ಬಂದಲ್ಲಿ ಪ್ರಶ್ನೆ ಮಾಡಬೇಕು ಎನ್ನುವ ಭಾವವನ್ನು ವಚನದಲ್ಲಿ ವ್ಯಕ್ತಪಡಿಸಿದ್ದಾರೆ. ಅನುಭವ ಮಂಟಪದಲ್ಲಿ ನಡೆಯುತ್ತಿದ್ದುದು ಇದೇ ಕಾರ್ಯ. ಅವರು ದೊಡ್ಡವರು; ಅಂಥವರನ್ನು ನಾವು ಪ್ರಶ್ನೆ ಮಾಡುವುದೇ ಎನ್ನುವ ಅಳುಕು ಅಲ್ಲಿರಲಿಲ್ಲ. ಅಲ್ಲಿ ಪ್ರಶ್ನೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇತ್ತು. ಹಾಗಾಗಿ ಸಾಮಾನ್ಯರೂ ಶರಣರಾಗಲು, ಅನುಭಾವಿಗಳಾಗಲು ಸಾಧ್ಯವಾಯ್ತು. ಈ ನೆಲೆಯಲ್ಲಿ ಪ್ರಭುದೇವರ ವಚನ ಎಲ್ಲರ ಅರಿವಿನ ಕಣ್ಣು ತೆರೆಸುವಂತಿದೆ.

Previous post ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
Next post ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ

Related Posts

ಅಮುಗೆ ರಾಯಮ್ಮ (ಭಾಗ-3)
Share:
Articles

ಅಮುಗೆ ರಾಯಮ್ಮ (ಭಾಗ-3)

November 10, 2022 ಡಾ. ಬಸವರಾಜ ಸಬರದ
ಜಾತ್ಯಾತೀತ ಮನೋಭಾವ ಜಾತಿಯೆಂಬುದು ಈ ದೇಶಕ್ಕಂಟಿದ ದೊಡ್ಡ ರೋಗವಾಗಿದೆ. ಶರಣರು ಹೋರಾಟ ಪ್ರಾಂರಂಭಿಸಿದ್ದೇ ಜಾತಿಯ ಮೂಲಕ. ಜಾತ್ಯಾತೀತ ಮನೋಭಾವವುಳ್ಳ ಶರಣರು ಯಾವ ಜಾತಿಯನ್ನೂ...
ವಚನಾಮೃತಂ: ಪುಸ್ತಕ ವಿಮರ್ಶೆ
Share:
Articles

ವಚನಾಮೃತಂ: ಪುಸ್ತಕ ವಿಮರ್ಶೆ

February 6, 2025 ಡಾ. ಎನ್.ಜಿ ಮಹಾದೇವಪ್ಪ
ವಚನಾಮೃತಂ: ಪುಸ್ತಕ ಪ್ರೊ. ಎಂ.ವಿ. ನಾಡಕರ್ಣಿಯವರ ವಚನಾಮೃತಂ (ಪ್ರಕಾಶಕರು: ಮಣಿಪಾಲ್ ಯುನಿವರ್ಸಲ್ ಪ್ರೆಸ್, ಮಣಿಪಾಲ್, ಮೇ 2024) ಬೆಲೆ. ರೂ. 600/- ಪ್ರೊ. ಎಂ.ವಿ....

Comments 13

  1. ಗೀತಾ ತಡಸದ್.
    Aug 14, 2025 Reply

    ತುಂಬಾ ಅರ್ಥ್ಗರ್ಭಿತವಾಗಿ ಬಂದಿದೆ ಲೇಖನ. ವಚನ ಸಹಿತ ವಿವರಣೆ. ನಾವು ಯುವಕರು ನಮ್ಮ ಮಕ್ಕಳಿಗೆ ಸರಿಯಾಗಿ ಲಿಂಗಾಯತ ಧರ್ಮ ಬಗ್ಗೆ ಹೇಳದೆ ಅಂಧಕಾರಕ್ಕೆ ತಳ್ಳುತ್ತಿದ್ದೇವೆ.

  2. ಗೀತಾ ತಡಸದ್.
    Aug 14, 2025 Reply

    ಪೂಜ್ಯರಿಗೆ ಶರಣು ಶರಣಾರ್ಥಿ 🙏🙏🙏🙏.

  3. ಬಸವರಾಜಪ್ಪ ಚಿಮಣಿ
    Aug 17, 2025 Reply

    ಪಂಚಾಚಾರ್ಯರ ಮಾತುಗಳು ಯಾವಾಗಲೂ ವೈರುಧ್ಯಗಳಿಂದಲೇ ತುಂಬಿರುತ್ತವೆ. ಅವರಿಗೂ ಲಿಂಗಾಯತರಿಗೂ ಯಾವ ಸಂಬಂಧವೂ ಇಲ್ಲವೆಂದು ಅಂತರ ಕಾಯ್ದುಕೊಳ್ಳುವುದೇ ಸರಿಯಾದ ನಡೆಯೆಂದು ಭಾವಿಸಿದ್ದೆ. ಗುರುಗಳು ಅವರಿಗೆ ತಿಳಿಹೇಳುವ ಕೆಲಸ ಮಾಡಿದ್ದು ಸೂಕ್ತ ನಡೆ🙏

  4. ಗಂಗಾಧರ ಬಿ
    Aug 18, 2025 Reply

    ಭವಿಗಳಾದ ಪಂಚಾಚಾರ್ಯರಿಗೆ ಲಿಂಗಾಯತದ ಭಕ್ತಿ ಮಾರ್ಗ ಗೊತ್ತಾಗುವುದುಂಟೆ, ಪೂಜ್ಯರೆ? ಇವರ ಕುಯುಕ್ತಿ ಇಲ್ಲದಿದ್ದರೆ ಲಿಂಗಾಯತ ಯಾವತ್ತೋ ಸ್ವತಂತ್ರ ಧರ್ಮ ಆಗುತ್ತಿತ್ತು😕

  5. ಪ್ರೊ. ಸೋಮಶೇಖರಪ್ಪ ಸಿ.ಎ
    Aug 21, 2025 Reply

    ವಂದನೆಗಳು. ಪಂಡಿತಾರಾಧ್ಯರ ಲೇಖನ ಓದಿದ್ದೇನೆ. ತುಂಬಾ ಚೆನ್ನಾಗಿ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಖುಷಿಯಾಯಿತು.

  6. ನಿಜಲಿಂಗಪ್ಪ ಗರಗ
    Aug 21, 2025 Reply

    ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾಗಿರುವ ಹಿರಿಯರಿಗೆ ನಮ್ಮ ಸ್ವಾಮೀಜಿಗಳು ನಯವಾಗಿ, ಹರಿತವಾಗಿ ಬುದ್ಧಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಮಾತುಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿದ್ದವು.

  7. Shubha
    Aug 21, 2025 Reply

    ತುಂಬಾ ಅರ್ಥಗರ್ಬಿತ ಲೇಖನ. ಸಾಂದರ್ಭಿಕವಾಗಿ ತಿಳಿಹೇಳಿದ್ದಾರೆ ಧನ್ಯವಾದಗಳು

  8. ವೀರಸ್ವಾಮಿ ಹಿರೇಮಠ
    Aug 21, 2025 Reply

    ವೀರಶೈವ-ಲಿಂಗಾಯತ ಒಟ್ಟಿಗೆ ಹೋಗುವುದೇ ಉಚಿತ. ವೀರಶೈವರನ್ನು ಪಂಚಾಚಾರ್ಯರಿಗೆ ಒಪ್ಪಿಸಿಬಿಟ್ಟರೆ ಅವರು ಶಾಶ್ವತವಾಗಿ ಬಸವಣ್ಣನವರ ಸಿದ್ಧಾಂತಗಳಿಂದ ದೂರ ಹೋಗಿಬಿಡುತ್ತಾರೆ.

  9. Dr. SHRADDHANANDA Swamiji
    Aug 25, 2025 Reply

    Bayalu pros and poetry both are good… we expect them to be printed in book form.

  10. ಚಂದ್ರಶೇಖರ ಸಕಲೇಶಪುರ
    Aug 25, 2025 Reply

    ಪುಂಗಿದಾಸರಾದ ಪಂಚಾಚಾರ್ಯರು ಲಿಂಗಾಯತ ಧರ್ಮಕ್ಕೆ ದೊಡ್ಡ ತೊಡಕು. ಅವರಿಂದ ದೂರ ಇರುವುದಕ್ಕಿಂತ ಅವರನ್ನೇ ದೂರ ಮಾಡುವುದು ಸಮಾಜಕ್ಕೆ ಹಿತಕರ.

  11. ಚನ್ನವೀರ ಬಾಗಲಕೋಟೆ
    Aug 29, 2025 Reply

    ಪಂಚಾಚಾರ್ಯರು ಲಿಂಗಾಯತದಲ್ಲಿ ನುಸುಳಿಕೊಂಡ ಪುರೋಹಿತ ವರ್ಗ. ರಾಜಕಾರಣಿಗಳು ಇವರ ಚೇಲಾಗಳಂತೆ ವರ್ತಿಸುತ್ತಿದ್ದು, ಇವರಾರಿಗೂ ಈ ಧರ್ಮವೇ ಬೇಡವಾಗಿದೆ… ಕಾವಿ ಹಾಕಿಕೊಂಡ ಇಂತಹವರನ್ನು ತೆಗಳಲೂ ಕಷ್ಟವಾಗುತ್ತಿದೆ, ಅಯ್ಯೋ ಶಿವನೇ🙆

  12. ಧವಳೇಶ್ ಸಿಂಪಿ
    Aug 31, 2025 Reply

    ಪುರಾಣಗಳಿಂದ ಹೊರಬರದ ಪಂಪೀಗಳನ್ನು ಕಟ್ಟಿಕೊಂಡರೆ ನಮ್ಮನ್ನ ಮುಳುಗಿಸಿಯೇ ಬಿಡುತ್ತಾರೆ… ಗುರುಗಳೇ ನೀವೇ ದಾರಿ ತೋರಿಸಬೇಕು.

  13. ಅಣ್ಣಪ್ಪ ಎನ್
    Sep 1, 2025 Reply

    ಪ್ರಧಾನಿಯವರಿಗೆ ಕೆಟ್ಟ ಕಿವಿಮಾತು ಹೇಳುವ ಇವರು ಗುರುಗಳೇ?????

Leave a Reply to ಅಣ್ಣಪ್ಪ ಎನ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಹುಡುಕಾಟ
ಹುಡುಕಾಟ
July 21, 2024
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
Copyright © 2025 Bayalu