Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
Share:
Articles December 9, 2025 ಪದ್ಮಾಲಯ ನಾಗರಾಜ್

ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು

ಆಧುನಿಕ ಭಾರತಕ್ಕೆ ಅತ್ಯುನ್ನತವಾದ ವಿಚಾರಗಳನ್ನು ಕೊಟ್ಟ ಬಾಬಾ ಸಾಹೇಬರು ಒಂದು ಕಡೆ “ನನ್ನ ತತ್ವಗಳ ಬೇರು ಧರ್ಮದಲ್ಲಿದೆಯೇ ಹೊರತು ರಾಜ್ಯಶಾಸ್ತ್ರದಲಿಲ್ಲ, ನಾನು ಅದನ್ನೆಲ್ಲಾ ಬುದ್ಧನ ಬೋಧನೆಗಳಿಂದ ಪಡೆದಿದ್ದೇನೆ” ಎನ್ನುತ್ತಾರೆ. ಹಾಗಾದರೆ ಧರ್ಮಕ್ಕಿರುವ ನೈಜ ವಿವರಣೆ ಏನು? ಈ ಪ್ರಶ್ನೆ ಬಹಳ ಮುಖ್ಯವಾದುದು. ನಾನು ಕಂಡಂತೆ ಕೆಲವರು ಬೌದ್ಧಧರ್ಮಕ್ಕೆ ಮತಾಂತರ ಹೊಂದಿಯೋ ಇಲ್ಲವೆ ಹೊಂದದೆಯೋ ವೈದಿಕಶಾಹಿಯನ್ನು ವಿರೋಧಿಸುವಷ್ಟರಲ್ಲಿಯೇ ಕ್ರಾಂತಿ ತಂದುಬಿಡಬಹುದೆಂದು ಭಾವಿಸಿರುತ್ತಾರೆ. ಮತ್ತೆ ಕೆಲವರು ಮತಾಂತರದ ಪ್ರಶ್ನೆಯನ್ನು ಅತ್ಯಂತ ನಾಜೂಕಾಗಿ ಬದಿಗಿರಿಸಿ ವಿಹಾರಸ್ಥಾಪನೆ, ಪ್ರಾರ್ಥನೆಗಳನ್ನು ಹೇಳುವುದು ಮತ್ತು ವಿಪಶ್ಯನಕ್ಕೆ ಹೋಗಿ ಬಂದ ಮಾತ್ರಕ್ಕೆ ಅದು ಬುದ್ಧನೆಡೆಗೆ ನಡಿಗೆ ಎಂದೇ ನಂಬಿಬಿಟ್ಟಿರುತ್ತಾರೆ. ಈ ಎರಡೂ ಅಂಶಗಳಲ್ಲಿ ಒಂದನೆಯದು ‘ಧರ್ಮ’ವನ್ನು ರಿಲೀಜಿಯನ್ ಎಂಬ ಕಾರ್ಗತ್ತಲಿಗಟ್ಟಿದರೆ, ಎರಡನೆಯದು ಬಾಬಾ ಸಾಹೇಬರ ಚಿಂತನೆಗಳನ್ನು ಕೇವಲ ವೈಯಕ್ತಿಕ ನೆಲೆಯಿಂದಾದ ವಿಮರ್ಶಾತ್ಮಕ ವಿಚಾರಣಾತ್ಮಕ ತಾತ್ತ್ವಿಕತೆಯಾಗಿ ನಮ್ಮ ಜ್ಞಾನ ಅಥವಾ ಆದರ್ಶಕ್ಕಾಗಿ ಮಾತ್ರ ಬಳಸಲ್ಪಡುವ ಸಿದ್ಧಾಂತವೆಂದು ನಂಬಿಕೊಂಡಿರುತ್ತದೆ. ಅಂಬೇಡ್ಕರರ ಬೌದ್ಧ ಚಿಂತನೆಗಳು ಇಲ್ಲೇ ಉಸಿರುಗಟ್ಟಿ ಬದುಕಲಾರದೆ ಹೋದವೆನ್ನಬಹುದು. ಏಕೆಂದರೆ ಧರ್ಮವು ಮಾನವ ಜನಾಂಗದ ಸರ್ವತೋಮುಖ ಏಳಿಗೆಯ ಹಾದಿಗಡ್ಡಬಿದ್ದಿರುವ ಕೊಳಕನ್ನು ಶುದ್ಧೀಕರಿಸುವ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ. ಆದ್ದರಿಂದ ಇದು ಕಟ್ಟಬೇಕಿರುವ ಸತ್ಯವೇ ಹೊರತು ಧರ್ಮವೆನ್ನುವುದೊಂದು ಹಿತಾಸಕ್ತಿಗಳ ಸಂಘರ್ಷದಲ್ಲಿ ಕೊನೆಯಾಗುವ ಮತೀಯತೆಯೂ ಅಲ್ಲ ಹಾಗೂ ಸೆಲಿಬ್ರೇಷನ್ ಸಹ ಅಲ್ಲ. ಬಾಬಾ ಸಾಹೇಬರಾಗಲಿ ಬುದ್ಧನಾಗಲಿ ಸೆಲಿಬ್ರಿಟಿಗಳಲ್ಲ ಎಂಬುದನ್ನು ನಾವು ಸದಾ ನೆನಪಿಡಬೇಕು.

ಧರ್ಮವೆಂಬುದನ್ನು ಪ್ರತಿಕ್ರಿಯೆಗಷ್ಟೇ ಮಿತಿಗೊಳಿಸಿ ಅದಕ್ಕಿರುವ ಜೀವಂತ ಪ್ರಕ್ರಿಯೆಯನ್ನು ಉಪೇಕ್ಷಿಸಿ ಬಿಡುವ ಇಂತಹ ಬೆಳವಣಿಗೆಗಳು ಧರ್ಮಕ್ಕಿರುವ ಔನ್ಯತ್ಯವನ್ನು ಅಮುಖ್ಯಗೊಳಿಸಿ ಬಿಡುವ ರಾಜಕಾರಣಕ್ಕೆ ಒಳಗಾಗುತ್ತವೆ. ವೈದಿಕ ಸಾಹಿತ್ಯವು ಧರ್ಮ ಎಂಬ ಶಬ್ದಕ್ಕೆ ಅನೇಕ ವಿಪರೀತಾರ್ಥಗಳನ್ನು ಹಚ್ಚುವುದರ ಮೂಲಕ ಈ ನೆಲದ ನೈಜ ಧರ್ಮವನ್ನು ವಿರೂಪಗೊಳಿಸಿತು. ನೈಜಧರ್ಮಕ್ಕಿರುವ ವಿವೇಕವನ್ನು ಹೊರತೆಗೆಯುವುದಕ್ಕಾಗಿಯೇ ಬಾಬಾ ಸಾಹೇಬರು ಸಂಸ್ಕೃತ ಭಾಷೆಯನ್ನು ಕಲಿತು ಬರೆಯಬೇಕಾಗಿತ್ತು. ಅವರ ಭಾಷಣಗಳು ಮತ್ತು ಬರಹಗಳು ಸಂಪುಟ –3ರಲ್ಲಿನ ‘ಹಿಂದೂಧರ್ಮದ ತಾತ್ವಿಕ ಸ್ವರೂಪ’; ಹಾಗೂ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’; ‘ಸಮತಾವಾದದ ಪೂರ್ವಭಾವಿ ಅವಶ್ಯಕತೆಗಳು’; ‘ಬುದ್ಧ ಮತ್ತು ಕಾರ್ಲ್‍ಮಾರ್ಕ್ಸ್’ ಧರ್ಮದ ದೃಷ್ಟಿಯಿಂದ ಬಹಳ ಮುಖ್ಯವಾದ ಲೇಖನಗಳು. ಅವರ ಈ ಲೇಖನಗಳು ಧರ್ಮವನ್ನು ಎರಡು ರೀತಿಯಲ್ಲಿ ವಿವರಿಸಿಕೊಡುತ್ತವೆ:

ಮೊದಲನೆಯದು : ಯಾವಯಾವ ನಿಯಮ ಮತ್ತು ಆಚರಣೆಗಳಿಗೆ ಅಧೀನವಾಗಿ ಭಾರತೀಯ ಮಾನವ ಸಮಾಜ ವ್ಯವಹರಿಸುತ್ತಿದೆಯೋ ಅದೆಲ್ಲವೂ ಹಿಂದೂಧರ್ಮವೇ ಆಗಿದೆ. ಅವರವರ ಗ್ರಹಿಕೆಗಳೊಳಗೆ ನಿರ್ಣಯಗಳಿಗೆ ಅನುಸಾರವಾಗಿ ಪ್ರತಿವ್ಯಕ್ತಿಯನ್ನು ಜೀವನ ಪರ್ಯಂತ ಅದರದೇ ಆದ ನಿಯಮಗಳಲ್ಲಿ ಬಂಧಿಸಲ್ಪಡಲು ಶಕ್ತವಾಗಿರುವ ರಾಜಕೀಯವಾಗಿ ಬಾಬಾ ಸಾಹೇಬರು ಹಿಂದೂಧರ್ಮವನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಇಲ್ಲಿ ಧರ್ಮವೆನ್ನುವುದು ಕೆಲವೇ ಕೆಲವು ಸಂಖ್ಯೆಯಲ್ಲಿರುವ ವೈದಿಕರು ರೂಪಿಸಿದ ಸ್ವಭಾವ ಸಿದ್ಧಾಂತಗಳಿಗೆ ಅಡಿಯಾಳುಗಳಾಗಿ ಇಲ್ಲಿನ ಬಹುಜನರು ನಡೆದುಕೊಳ್ಳುವುದು ಎಂದಾಗುತ್ತದೆ. ಹಿಂದೂಧರ್ಮವೆಂಬುದು ಕೇವಲ ದೇವಾಲಯಗಳು ಮತ್ತದರ ಆಚರಣೆಗಳು ಹಾಗೂ ಅದರ ಸಾಹಿತ್ಯದಲ್ಲಷ್ಟೆ ಇರುವುದಲ್ಲ. ಅದು ಇಲ್ಲಿನ ಸಾಮಾಜಿಕತೆಯನ್ನು ಮನುಷ್ಯ ಸ್ವಭಾವಗಳ ಮೂಲಕ ನಿರ್ಧರಿಸುತ್ತಿರುತ್ತದೆ. ಆದ್ದರಿಂದ ಅದರ ಮತೀಯತೆ ಏನಿದ್ದರೂ ಮಾನಸಿಕವಾದದ್ದು ಮತ್ತು ಉದ್ದೇಶಪೂರ್ವಕವಾಗಿ ಸ್ವಭಾವಗಳಲ್ಲಿ ವೃದ್ಧಿಸಿರುವ ಕಠಿಣವಾದ ಬರಹವಾಗಿದೆ. ತಲತಲಾಂತರಗಳಿಂದ ರೂಪಿಸಲ್ಪಟ್ಟಿರುವ ಮೋಸವಾಗಿದೆ. ಈ ಸಮಾಜದ ಮನುಷ್ಯರು ಒಬ್ಬರನ್ನೊಬ್ಬರು ಒಳಗೊಳ್ಳದಂತೆ ಕಾಯ್ದುಕೊಂಡಿರುವ ಕಣ್ಗಾವಲದು. ಸಾಮಾನ್ಯ ಮನುಷ್ಯರ ಸ್ವಭಾವಗಳಲ್ಲಿ ಬಿತ್ತಿ ತೆಗೆದಿರುವ ಬೆಳೆ. ಅದು ಜಗತ್ತಿಗೆ ಸಂಬಂಧವಿಲ್ಲದಾ ಕಲ್ಪನೆಗಳಲ್ಲಿ, ನಂಬುಗೆಗಳಲ್ಲಿ, ದೈವಗಳಲ್ಲಿ, ಪಂಥೀಯ ಶಠತ್ವಗಳಲ್ಲಿ, ಬಗೆಬಗೆಯ ಭಾವೋನ್ಮಾದಗಳಲ್ಲಿ, ಚಿತ್ರವಿಚಿತ್ರಬೇಧಗಳಲ್ಲಿ, ಪ್ರಲೋಭನೆಗಳಲ್ಲಿ, ಯಾತನೆಗಳಲ್ಲಿ, ಹಿಂಸೆಗಳಲ್ಲಿ, ಅಸಹನೆಗಳಲ್ಲಿ, ಶ್ರೇಷ್ಠತೆಯ ವ್ಯಸನಗಳಲ್ಲಿ, ಶುದ್ಧಾಶುದ್ಧತೆಯ ಅಪಕಲ್ಪನೆಗಳಲ್ಲಿ, ಪ್ರತ್ಯೇಕತೆಗಳಲ್ಲಿ, ಸ್ವಾರ್ಥಗಳಲ್ಲಿ, ವ್ಯಷ್ಠಿ ಪ್ರಧಾನ ಆದ್ಯತೆಗಳಲ್ಲಿ, ಕ್ಷುದ್ರರಾಜಕಾರಣಗಳಲ್ಲಿ, ಸ್ವಹಿತಾಸಕ್ತಿಗಳಲ್ಲಿ, ಅಧಿಕಾರ ಮತ್ತು ಸುಖಲೋಲುಪತೆಗಳಲ್ಲಿ, ವೈಚಾರಿಕ ಲಂಪಟತನಗಳಲ್ಲಿ, ಎಲ್ಲವನ್ನೂ ವಿಧಿಯ ಆಟವೆಂದು ಲಾಕ್ಷಣೀಕರಿಸಿ ಅನುಭಾವ ಅಥವಾ ಆಧ್ಯಾತ್ಮದ ಬಣ್ಣ ಬಳಿದುಬಿಡುವ ಹತಾಶೆಯ ತತ್ವಜ್ಞಾನಗಳಲ್ಲಿದೆ.

ಇದರಿಂದಾಗಿಯೇ ಬಾಬಾ ಸಾಹೇಬರು ಕಾರ್ಲಮಾರ್ಕ್ಸ್ ಹೇಳಿದ ‘ಧರ್ಮವೆಂಬುದು ಅಫೀಮು’ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ‘ಧರ್ಮದಲ್ಲೇನಿದೆ ಎಂದು ಉಪೇಕ್ಷಿಸುವುದು ವಿದ್ಯುತ್ ತಂತಿಯನ್ನು ಉಪೇಕ್ಷಿಸಿದಂತೆ’ ಎಂದು ಎಚ್ಚರಿಸಿದರು.
ತಥಾಗತ ಬುದ್ಧರು ಮೇಲ್ಕಾಣಿಸಿದ ಅಂಶಗಳೇ ಜಗತ್ತಿನ ಪ್ರಮುಖ ದುಃಖೋತ್ಪನ್ನಗಳು ಹಾಗೂ ಈ ಸ್ವಭಾವಗಳೇ ಪ್ರಜಾತಂತ್ರಕ್ಕಿರುವ ಅಡ್ಡಿಯೆಂದು ತಿಳಿದು ಇದಕ್ಕೆ ‘ಪುದ್ಗಲ ಧಮ್ಮ’ವೆಂದು ಕರೆದು ಇದು ಎಚ್ಚರವಿಲ್ಲದವರನ್ನು ತುಳಿದು ಹಾಕುವ ಪಾಪವೆಂದು ಲೋಕಕ್ಕೆ ಸಾರಿದರು. ಲೋಕದುಃಖದ ಸರಿಯಾದ ವಿವರಣೆಯನ್ನು ತನ್ನ ‘ಪ್ರತೀತ್ಯಾಸಮುತ್ಪಾದ’ ತತ್ವದ ಮೂಲಕ ಮನುಷ್ಯನಿಂದಾಗಿ ಮನುಷ್ಯನೇ ಉತ್ಪಾದಿಸಿಕೊಂಡಿರುವ ಎಲ್ಲಾ ಹೊಲಸಿನ ಬೇರುಗಳನ್ನು ಅಗೆದು ತೋರಿದರು. ಮಾನವ ಸ್ವಭಾವಗಳು ಹುಟ್ಟುವ ಕಾರಣ, ವಿಧಾನ, ಅವುಗಳ ರುಚಿ, ಅವುಗಳ ಅಪಾಯ ಮತ್ತವುಗಳನ್ನು ತ್ಯಜಿಸುವ ವಿಧಾನವನ್ನು ತನ್ನ ‘ಅನುತ್ಪಾದಿತ ಧರ್ಮಕ್ರಾಂತಿ’ಯ ಮೂಲಕ ಲೋಕಕ್ಕೆ ತೋರಿಸಿಕೊಟ್ಟರು. ಅಂದರೆ ಯಾವುದೇ ಸ್ವಭಾವಜನ್ಯ ಕೇಡುಗಳು ಉತ್ಪಾದನೆಯಾಗದಂತೆ ನಿಸರ್ಗ ಪ್ರಜ್ಞೆಯಲ್ಲಿ ಬಾಳುವುದೇ ಅನುತ್ಪಾದ ಧರ್ಮ! ಅದು ಲೋಕಾರ್ಥ ಪರ ವಸ್ತುಸ್ಥಿತಿಯ ವಿವೇಕ! ಅವನ ಧಮ್ಮ, ರೋಗಗ್ರಸ್ತ ಸಾಮಾಜಿಕ ಸ್ಥಿತಿಯಿಂದ ಸ್ವಾಸ್ಥ್ಯ ಸಮಾಜದ ಪುನರ್ರಚನೆಯೆಡೆಗೆ ಚಲಿಸುವ ಯಾನವಾಗಿದೆ. ಮನುಷ್ಯನನ್ನು ಈ ಸ್ವಭಾವಗಳಿಂದ ಮುಕ್ತಗೊಳಿಸಿ ಹೃದಯವಂತನನ್ನಾಗಿಸುವುದರಲ್ಲಿ ಅವನ ಧಮ್ಮದ ಹೆಗ್ಗಳಿಕೆ ಇದೆ.

ಲೋಕಾರ್ಥ ಪರನಾದೊಡೆ
ಲೋಕಗುರುವೆನಬಹುದು| ಯಾವ
ಜಾತಿಯವನಾದರೂ ಹೆಚ್ಚಾದ ಗುರುವವನೇ!
ತನ್ನ ತಾನರಿಯದವ ತಾನಾರಿಗೆ ಗುರು?
ತನ್ನಂತ ಅಜ್ಞಾನ ಪಶುಗಳಿಗಲ್ಲದೆ?
• (ಕೈವಾರ ನಾರೇಯಣಪ್ಪ)

ಎರಡನೆಯದು: ಬಾಬಾಸಾಹೇಬರ ಇಡೀ ತತ್ವಸಿದ್ಧಾಂತಗಳೆಲ್ಲವೂ ಸಹೋದರತೆ – ಸಮಾನತೆ – ಸ್ವಾತಂತ್ರ್ಯ ಈ ಮೂರನ್ನು ಒಳಗೊಂಡ ಸಮುದಾಯವನ್ನು ಪುನರ್ರಚಿಸುವದರಲ್ಲಿದೆ ಎಂಬುದನ್ನು ಅಂಬೇಡ್ಕರ್ ವಾದಿಗಳೆಲ್ಲರೂ ಒಪ್ಪುತ್ತಾರೆ. ಆದರೆ ಅತ್ಯಂತಿಕವಾದ ಈ ಮೂರು ತತ್ವಗಳನ್ನು ವೈಫಲ್ಯಗೊಳಿಸುತ್ತಿರುವ ಭ್ರಷ್ಠತೆ ಎಲ್ಲಿ ಕ್ರಿಯಾಶೀಲವಾಗಿದೆ ಎಂಬುದನ್ನು ವಿವೇಚಿಸುವಾಗ ಕೆಲವರು ಎದುರಿಗಿರುವ ಶತೃವಿನ ಮೇಲಷ್ಟೇ ಆರೋಪಿಸಿ ಸಮಾಜದಲ್ಲಿ ತಮಗಿರುವ ಅಂತಃಸಂಬಂಧದ ಜವಾಬ್ದಾರಿಯಿಂದ ಪಲಾಯನವಾಗಿ ಬಿಡುತ್ತಾರೆ. ಪರಂಪರಾನುಗತವಾಗಿ ಅಸಮಾನತೆ ಮತ್ತು ಅಸಹನೆಗಳನ್ನು ಒಪ್ಪಿಕೊಂಡು ಬಂದಿರುವ ಹೊರಗಿನ ಸಮಾಜದ ಜನರೊಳಗೂ ಇರುವಂತೆ ನಮ್ಮೊಳಗಿನ ಸ್ವಭಾವಗಳಲ್ಲೂ ಆ ಭ್ರಷ್ಟತೆ ಕ್ರಿಯಾಶೀಲವಾಗಿದೆಯೆಂಬ ಸತ್ಯವನ್ನು ಒಪ್ಪಿಕೊಳ್ಳಲು ನಮಗೆ ಧೈರ್ಯಬೇಕಾಗಿದೆ. ಈ ಕಾರಣಗಳಿಂದಾಗಿಯೇ ಬಾಬಾಸಾಹೇಬರು ಎರಡು ಬಗೆಯ ಚಳುವಳಿಗಳನ್ನು ನಮ್ಮ ಮುಂದಿಡುತ್ತಾರೆ. ಒಂದು, ಸಮಾಜದೊಳಗೆ ನ್ಯಾಯಕ್ಕಾಗಿ ಮಾಡಬೇಕಾದ ಹೋರಾಟ! ಮತ್ತೊಂದು ವೈಯಕ್ತಿಕವಾಗಿ ಸತ್ಯವನ್ನು ಒಪ್ಪಿಕೊಳ್ಳಲು ಅಂತರಂಗಿಕವಾಗಿ ಮಾಡಬೇಕಾದ ಹೋರಾಟ! ಇವೆರಡರಲ್ಲಿ ವ್ಯಕ್ತಿ ಪರಿವರ್ತನೆಗೆ ಬುದ್ಧ ಧರ್ಮಕ್ಕಿಂತ ಮತ್ತೊಂದು ಉತ್ತಮಸಾಧನ ಯಾವುದೂ ಇಲ್ಲ ಎಂಬುದು ಅವರಲ್ಲಿದ್ದ ಅಪಾರ ನಂಬಿಕೆ. ಎಲ್ಲಿ ವ್ಯಕ್ತಿ ಪರಿವರ್ತನೆ ಸಾಧ್ಯವಿಲ್ಲವೋ ಅಲ್ಲಿಯ ತನಕ ಸಾಮಾಜಿಕ ಪರಿವರ್ತನೆ ಬರೀ ಭ್ರಮೆಯಷ್ಟೇ! ಎಲ್ಲಿ ಪರಿವರ್ತನೆ ಮತ್ತು ಸ್ವವಿಮರ್ಶೆಗೆ ಅವಕಾಶವೇ ಇರುವುದಿಲ್ಲವೋ ಅಲ್ಲಿ ಬುದ್ಧತ್ವವೆಂಬುದು ಕೇವಲ ಹುಸಿ ತೋರಿಕೆ ಮಾತ್ರವಾಗಿರುತ್ತದೆ ಎಂಬುದು ಅವರ ತತ್ವದ ಸಾರ! ಹಾಗಾಗಿ ಧರ್ಮವೆಂಬುದು ಪರಿವರ್ತನಾ ಪ್ರಕ್ರಿಯೆ ಸಾಧ್ಯವಿರುವಲ್ಲಿ ಮಾತ್ರ ಜೀವಂತವಾಗಿರಬಲ್ಲದು.

ಬುದ್ಧತ್ವವನ್ನು ಪ್ರಕ್ರಿಯೆಯಾಗಿಟ್ಟುಕೊಂಡು ಜೀವಿಸುತ್ತಿರುವ ಒಂದು ಸಮೂಹದ ಮಾದರಿ ನಮ್ಮಲ್ಲಿ ಎಲ್ಲಿದೆ? ಎಂಬ ಪ್ರಶ್ನೆ ಮಾನವೀಯತೆಯನ್ನು ನೆಚ್ಚಿಕೊಂಡಿರುವವರನ್ನು ತಬ್ಬಿಬ್ಬುಗೊಳಿಸಿಬಿಡುತ್ತದೆ. ಬಾಬಾಸಾಹೇಬರ ಮತ್ತು ಬುದ್ಧನ ಪ್ರತಿಮೆಗಳನ್ನು ಹಿಂದೂಧರ್ಮದ ‘ಆರಾಧನಾ’ ಹಂತಕ್ಕೆ ತಂದು ನಿಲ್ಲಿಸಿರುವ ಬೆಳವಣಿಗೆಯಂತೂ ಅವರು ಯಾವ ಕೇಡಿನ ವಿರುದ್ಧ ಹೋರಾಡಿದ್ದರೋ ಅವರನ್ನು ಆ ಕೇಡಿಗೆ ತಂದು ಕಟ್ಟಿ ಹಾಕಿರುವುದಂತೂ ಗಾಬರಿಗೊಳಿಸಿಬಿಡುತ್ತದೆ. ಹಾಗೆ ನೋಡಿದರೆ ಬುದ್ಧನ ಈ ನೆಲದಲ್ಲಿ ಬೌದ್ಧ ಮೀಮಾಂಸೆಯನ್ನು ಹಸಿರಾಗಿಟ್ಟುಕೊಳ್ಳಲು ಹೋರಾಡಿದ ಅದೆಷ್ಟೊ ಶ್ರಮಣಪರಂಪರೆಗಳು ನಮ್ಮಲ್ಲಿ ವಿಸ್ಮಯವನ್ನು ಮೂಡಿಸಬಲ್ಲವು. ವೈದಿಕಶಾಹಿಯ ಕಡುಬಿಸಿಲಿಗೆ ಮೈಯ್ಯೊಡ್ಡಿ ನಿಂತ ಈ ಪರಂಪರೆಗಳು ಅರಳೀಮರದ ತಂಪನ್ನು ಪಸರಿಸಿದ ಆತ್ಮಗೌರವವಾಗಿ ಹೊಸ ಚಿಂತನೆಗಳತ್ತ ಭರವಸೆಯನ್ನಿತ್ತು ನಾವು ನಡೆಯಬೇಕಿರುವ ಹಾದಿಯತ್ತ ಬೆರಳು ಮಾಡುತ್ತವೆ. ಅವುಗಳಲ್ಲಿ ಝೆನ್, ತಾವೋ, ಬಸವಾದಿ ಶರಣರು, ಸೂಫಿಗಳು, ತತ್ವಪದಕಾರರು, ಆರೂಢರು, ಅವಧೂತರು, ಸಿದ್ಧರು, ಗುಡ್ಡರು ಹಾಗು ತೀರಾ ಇತ್ತೀಚಿನವರೆಗೂ ಬಾಳುತ್ತಿರುವ ಅಚಲ ತತ್ವಪದಕಾರರು ಬಹಳ ಮುಖ್ಯರಾಗುತ್ತಾರೆ.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 19ನೇ ಶತಮಾನದಲ್ಲಿ ಬಾಳಿದ ‘ಈರದಾಸಮ್ಮ’ ಎಂಬ ತತ್ವಪದಕಾರಳ ಬದುಕಿಗೆ ಅಳವಡಿಸಿಕೊಂಡ ಬೌದ್ಧ ಮೀಮಾಂಸೆ ನನ್ನನ್ನು ಬೆಚ್ಚಿಬೀಳಿಸುತ್ತದೆ. ಈರದಾಸಮ್ಮ ಗೌಡರ ಅವಿಭಕ್ತ ಕುಟುಂಬದ ಹೆಣ್ಣುಮಗಳು. ಅಪ್ಪ ಅವಳನ್ನು ನಿರಾತಂಕ ವಾತಾವರಣದಲ್ಲಿ ಸಾಕಿ ಬೆಳಸಿ ವಯಸ್ಸಿಗೆ ಬಂದನಂತರ ಇನ್ನೊಬ್ಬರಿಗೆ ಕೊಟ್ಟು ಮದುವೆ ಮಾಡಿದ. ಗಂಡನ ಅಧಿಕಾರಿಶಾಹಿ ಮನೋಭಾವ ಅವಳನ್ನು ಅಧೀರಳನ್ನಾಗಿಸಿತ್ತು. ಹೆಣ್ಣು ಕೇವಲ ಭೋಗದ ವಸ್ತು ಮಾತ್ರ ಹಾಗೂ ಅವಳು ಗಂಡನಿಗೆ ವಿಧೇಯಳಾಗಿರಬೇಕೆಂಬ ಗಂಡನ ಮನೋಭಾವನೆಯೊಂದಿಗೆ ಹೊಂದಿಕೊಳ್ಳಲಾಗದೇ ತನ್ನ ತವರೂರಿಗೆ ವಾಪಸ್ಸು ಬಂದುಬಿಡುತ್ತಾಳೆ. ಇನ್ನೊಬ್ಬನ ಕೈಗಿತ್ತ ಮೇಲೆ ನಮ್ಮ ಜವಾಬ್ದಾರಿ ಮುಗಿಯಿತೆಂದೂ, ನೀನು ಸತ್ತರೂ ಬದುಕಿದರೂ ಗಂಡನ ಮನೆಯಲ್ಲಿಯೇ ಇರಬೇಕೆಂಬ ಶಾಸನ ತನ್ನ ತವರಿನಲ್ಲಿ ಹೊರಡುತ್ತದೆ. ದಿಕ್ಕುಗಾಣದೇ ಆಕೆ ಒಂದಿಷ್ಟು ಎಲೆ ಅಡಿಕೆ ಕಡ್ಡಿಪುಡಿಯನ್ನು ಗೂಡೆಯಲ್ಲಿಟ್ಟುಕೊಂಡು ಹಳ್ಳಿಹಳ್ಳಿಗಳ ಬೀದಿ ಹಾದಿ ಸುತ್ತಿ ವ್ಯಾಪಾರ ಮಾಡುತ್ತಾ ಹೊತ್ತುಮುಳುಗಿದ ಊರಲ್ಲಿ ಯಾವುದಾದರೂ ಅನುಕೂಲಸ್ಥರ ಮನೆಯಲ್ಲಿ ಮಲಗಿ, ಬೆಳಗಾದ ನಂತರ ಮತ್ತೊಂದೂರಿಗೆ ಅಲೆಯುವುದು ಆಕೆಯ ಅನಿವಾರ್ಯ ಕಾಯಕವಾಗಿಬಿಡುತ್ತದೆ. ಪ್ರತಿರಾತ್ರಿಯೂ ಇನ್ನೊಬ್ಬರ ಮನೆಗೆ ಭಾರವಾಗುತ್ತಿರುವ ಆಕೆಯ ಬದುಕಿನ ಕುರಿತು ಆಕೆಗೇ ಅಸಹನೆ ಪ್ರಾರಂಭವಾಗುತ್ತದೆ. ಯಾವ ಮನುಷ್ಯರಿಗೂ ಹೊರೆಯಾಗದೇ ಅತ್ಯಂತ ಸಹಜವಾಗಿಯೂ ಸಮಾಜದ ಎಲ್ಲಾ ಜಾತಿಯ ಜನರಲ್ಲೂ ಆಪ್ತ ಸಂಬಂಧವನ್ನಿಟ್ಟುಕೊಂಡಿದ್ದ ‘ರಾಮವಧೂತ’ರೆಂಬ ಸಾಧುಗಳ ಬದುಕು ಆಕೆಯನ್ನು ಪ್ರಭಾವಿಸಿ ಅವರ ಮಠದಲ್ಲಿ ತನಗೊಂದಿಷ್ಟು ಜಾಗಕೊಟ್ಟರೆ ಸಾಕೆಂದುಕೊಂಡು ಅವಲತ್ತುಕೊಳ್ಳುತ್ತಾಳೆ. ಅವರಂತೂ ಅನೇಕ ವರ್ಷಗಳು ಇದಕ್ಕೆ ಒಪ್ಪುವುದೇ ಇಲ್ಲ. ಒಂದು ದಿನ ಈ ಬಂಡಬದುಕು ಸಾಕುಮಾಡೆಂದು ಅವರಲ್ಲಿ ಹಠಮಾಡುತ್ತಾ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ನಿಗದಿಗೊಳಿಸಿದ ಸಮಯಕ್ಕೆ ಆಕೆ ಮಠಕ್ಕೆ ಬರುವಾಗ ಸುಮಾರು ಹತ್ತುಹದಿನೈದು ವರ್ಷಗಳ ತನ್ನ ಅಲೆಮಾರಿ ಬದುಕಿನಲ್ಲಿ ಅಲ್ಲಿಲ್ಲಿ ಕೂಡಿಸಿಟ್ಟಿದ್ದ ಪಾತ್ರೆ ಪಗಡೆ ದವಸಧಾನ್ಯ ಒಂದಿಷ್ಟು ಹಣ ಬಟ್ಟೆ ಬರೆಗಳನ್ನು ಎಂಟು ಬಂಡಿಗಳಲ್ಲಿ ತುಂಬಿಸಿಕೊಂಡು ಮಠದ ಪ್ರಾಂಗಣದಲ್ಲಿ ನಿಲ್ಲಿಸುತ್ತಾಳೆ.

“ಅಲೆಲೆ… ಸಾಧುಬದುಕಿಗೆ ಈ ಪಾತ್ರೆ ಪಗಡೆ ಉಸಾಬರಿಯುಂಟೆ ಈರಮ್ಮ? ಸಾಧುಗಳು ಏನೂ ಇಲ್ಲದ ಪರದೇಸಿಗಳು, ನೀನು ನನ್ನೊಂದಿಗಿದ್ದು ಸಹಜವಾಗಿ ಜೀವಿಸಬೇಕೆಂದರೆ ಇವನ್ನೆಲ್ಲಾ ಯಾರಿಗಾದರೂ ನಿರ್ಗತಿಕರಿಗೆ ಕೊಟ್ಟು ಬರಿದಾಗಿ ಬಾ…” ಎನ್ನುತ್ತಾರೆ. ಆಕೆ ಅವುಗಳನ್ನೆಲ್ಲಾ ಹಂಚಲು ಎರಡು ದಿನ ಸಮಯ ತೆಗೆದುಕೊಂಡು ಖಾಲಿಯಾಗಿ ಮಠ ಪ್ರವೇಶಿಸಲು ಅಣಿಯಾಗುತ್ತಿದ್ದಾಗ ‘ಅಲ್ಲೆ ನಿಲ್ಲು ಈರಮ್ಮ.. ನೀನು ಒಳಗೆ ಬರಬೇಕೆಂದರೆ ಇನ್ನೊಂದು ಕೆಲ್ಸಮಾಡಬೇಕು. ಈ ಊರಲ್ಲಿರುವ ಸಬ್ಬಂಡಾರು ಜಾತಿ ಮನೆಗಳಲ್ಲಿ ಯಾರನ್ನೂ ಬಿಡದಂತೆ ಅನ್ನ ಭಿಕ್ಷೆ ತೆಗೆದುಕೊಂಡು ಬಾ’ ಎನ್ನುತ್ತಾರೆ. ಆಕೆ ಆ ದಿನ ಹೊಲೆಮಾದಿಗರಿಂದ ಮೊದಲ್ಗೊಂಡು ಬ್ರಾಹ್ಮಣರ ತನಕ ಎಲ್ಲರಲ್ಲೂ ಒಂದೊಂದು ಹಿಡಿ ಅನ್ನ ತರುತ್ತಾಳೆ. ಭಿಕ್ಷೆಯ ಅನ್ನವನ್ನು ಅಂದು ಮಠದಲ್ಲಿರುವವರೆಲ್ಲಾ ಕೂಡಿ ಉಣ್ಣುತ್ತಾರೆ. ಆಕೆಗಂತೂ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಅಂದು ಆಕೆ ತನ್ನ ಮೊದಲನೆ ತತ್ವಪದವನ್ನು ಬರೆಯುತ್ತಾಳೆ:

ಒಳ್ಳೆಗಂಡಾದೊರೆತಾನಲ್ಲೇ ವಯ್ಯಾರಿ
ಕಳ್ಳತನಾ ಕಡಿದಾನಲ್ಲೆ ಈ ಕೈವಾರಿ ||1||
ಭೇದವಿಲ್ಲದೇ ಬೆರೆತನಲ್ಲೆ ಎಲೆ ನಾರಿ
ಆದಿಕಾಲದವನೇ ಇವನು ಅವತಾರಿ
ಜಗದ ಭ್ರಾಂತಿ ಮುಗಿದಾನವನಿವ ಜನನಾರಿ
ಮೂರ್ಖಬುದ್ಧಿಯ ಅರಿದನಮ್ಮ ಸುಕುಮಾರಿ

ಆಕೆಯ ಕಳ್ಳತನ ಯಾವುದು? ಸಂಗ್ರಹಣೆ ಮತ್ತು ಜಾತಿ! ಬಾಬಾ ಸಾಹೇಬರ ಪ್ರಕಾರವೂ ಎಲ್ಲಿ ಸಂಗ್ರಹಣಾ ವ್ಯಸನವಿರುತ್ತದೆಯೋ ಅಲ್ಲಿ ಜಾತಿಯೆಂಬುದು ಅನಂತ ಬೇಧಗಳನ್ನು ಸೃಜಿಸಿಕೊಳ್ಳುತ್ತಾ ಸಂಕೀರ್ಣವಾಗತೊಡಗುತ್ತದೆ. ಎಲ್ಲಿ ಜಾತಿ ಇರುತ್ತದೆಯೋ ಅಲ್ಲಿ ನಿರಂತರ ಶೋಷಣೆ ಆಗುತ್ತಲೇ ಇರುತ್ತದೆ. ಜಾತಿ ನಿರಂತರವಾಗಿ ಎರಡು ಜೀವವಿರೋಧಗಳೊಡನೆ ವ್ಯವಹರಿಸುವ ಕ್ರೌರ್ಯವಾಗಿರುತ್ತದೆ. ಒಂದೋ ಹುಟ್ಟುದತ್ತವಾಗಿ ಆರೋಪಿಸಲ್ಪಟ್ಟಿರುವ ಜಾತಿ ಕಳಂಕ ಕೀಳುಜಾತಿಯವನಲ್ಲೂ ಇರಬಹುದಾದ ಮಾನವ ಘನತೆಯನ್ನೂ ಅಪಾತ್ರಕ್ಕೊಳಗಾಗಿಸುತ್ತಾ ಇರುತ್ತದೆಂಬುದನ್ನು ಯಾರೂ ಅಲ್ಲಗೆಳೆಯಲಾಗದು. ಆದರೆ ಇಂದು ಜಾತಿ ಇಷ್ಟಕ್ಕೇ ಸೀಮಿತವಾಗಿಲ್ಲ. ಅದು ಪ್ರತಿಯೊಬ್ಬರಲ್ಲೂ ನಾನು ಯಾರಿಗಿಂತ ಉನ್ನತವಾಗಿದ್ದೇನೆಂಬ ಹೆಮ್ಮೆ; ತನಗಿಂತ ಉನ್ನತವಾಗಿರುವವರನ್ನು ತಲುಪಲಾಗಲಿಲ್ಲವೆಂಬ ನಿರಾಶೆಯ ಆಟವೇ ಇಂದು ಮಾನವ ಬದುಕುಗಳನ್ನು ನಿರ್ಧರಿಸುತ್ತಿದೆ. ಮನುಷ್ಯ ಮನುಷ್ಯರು ಒಳಗೊಳ್ಳದಿರಲು ಈ ಊಳಿಗದ ಸ್ವಯಂಹತ್ಯೆ ಸಾಕಲ್ಲವೇ? ಇದೇ ಈ ನೆಲದ ಎಲ್ಲಾ ಭ್ರಷ್ಠತೆಗಳ ಮೂಲ.

ತತ್ವಪದಕಾರ್ತಿ ಈರದಾಸಮ್ಮ ಧೈರ್ಯದಿಂದ ಅದನ್ನು ‘ಕಳ್ಳತನ’ ಎನ್ನುತ್ತಾಳೆ. ಶೋಷಣೆ ಎಂಬುದು ಮೇಲ್ಜಾತಿಗಳವರಿಂದ ಕೀಳುಜಾತಿಯವರಿಗಷ್ಟೇ ಬರುವಂತಹದಲ್ಲ. ದಲಿತರಿಂದ ದಲಿತರಿಗೂ ಆಗುವಂತಹದ್ದು. ಜಾತಿ ಎಂಬುದು ಅತ್ಯಂತ ಕಠಿಣವಾದ ಹಿಂದೂ ಧರ್ಮದ ಟೂಲ್. ಅದರಿಂದಾಗಿಯೇ ಬಾಬಾ ಸಾಹೇಬರು ‘ಜಾತಿಯು ಎರಡೂ ಬದಿಯ ಅಲುಗಿನ ಕತ್ತಿ’– ಎಂದರು. ಅದು ಇದಿರನ್ನೂ ತನ್ನನ್ನೂ ಕತ್ತರಿಸಿಕೊಳ್ಳುತ್ತಾ ಮನುಷ್ಯ ಸಮಾಜವನ್ನು ವಿಘಟಿಸುತ್ತಿರುತ್ತದೆ. ಆದ್ದರಿಂದ ಸಂಗ್ರಹಣೆ, ಶೋಷಣೆ, ಜಾತಿ ಈ ಮೂರೂ ಪದಗಳೂ ಬೇರೆ ಬೇರೆ ಅಲ್ಲ. ಒಂದಿದ್ದರೆ ಇನ್ನೆಲ್ಲವೂ ಜನ್ಮಿಸಿ ಅಸ್ತಿತ್ವಕ್ಕೆ ಬರುತ್ತಿರುತ್ತವೆ.

ಕೊನೆಯದಾಗಿ ಮಾನವೀಯತೆಯ ಮೇಲೆ ನಂಬಿಕೆ ಇಟ್ಟಿರುವ ನನ್ನ ಬಂಧುಗಳಲ್ಲಿ ಒಂದು ವಿನಂತಿ, ನೆಲಪರಂಪರೆಗಳಲ್ಲಿರುವ ಇಂತಹ ಬೌದ್ಧ ಪ್ರಕ್ರಿಯೆಗಳ ಘನತೆಯನ್ನು ಮುನ್ನೆಲೆಗೆ ತರಬೇಕೆ? ಅವುಗಳನ್ನು ಹೇಸಿಗೆ ಹುಟ್ಟಿಸುವ ಕಡು ಮೌಢ್ಯಗಳೆಂದು ನಿರಾಕರಿಸಬೇಕೆ? ಇಲ್ಲವೇ ಬಾಬಾಸಾಹೇಬರ ಕನಸಿನ ಸಹೋದರತೆ – ಸಮಾನತೆ – ಸ್ವಾತಂತ್ರ್ಯಗಳನ್ನು ಕಟ್ಟಿಕೊಳ್ಳಲು ನಮ್ಮ ಆಧುನಿಕ ಜ್ಞಾನಕ್ಕೆ ತಾಕತ್ತಿದೆ ಎನ್ನುವುದಾದರೆ ಅದನ್ನು ಎಲ್ಲಿಂದ ಪ್ರಾರಂಭಿಸಬೇಕು? ಇಲ್ಲವೆ ಅವರ ಚಿಂತನೆಗಳನ್ನು ಅನುಕೂಲಾರ್ಥ ಪರವಾಗಿ ಬಳಸಿಕೊಂಡು ನಿರುಪದ್ರವಿಗೊಳಿಸಿದ ಪಕ್ಷದಲ್ಲಿ ಬಾಬಾಸಾಹೇಬರ ದಯಾಭಿಕ್ಷೆಯಲ್ಲಿ ಜೀವಿಸುತ್ತಿರುವ ನನ್ನಂತಹವರಿಗೆ ಋಣಬಾಧ್ಯತೆ ಬೆನ್ನಾಡುವುದಿಲ್ಲವೆ?

Previous post ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
Next post ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು

Related Posts

ಸಹಜತೆಯೇ ನಿಜನೆಲೆ
Share:
Articles

ಸಹಜತೆಯೇ ನಿಜನೆಲೆ

February 5, 2020 ಡಿ.ಪಿ. ಪ್ರಕಾಶ್
ಮನುಷ್ಯನ ಅ೦ತರ೦ಗವನ್ನು ಆವರಿಸುವ ಪರಿಕಲ್ಪನೆಗಳು ಮತ್ತು ನ೦ಬಿಕೆಗಳು ವ್ಯಕ್ತಿತ್ವದ ಮೇಲಷ್ಟೇ ಅಲ್ಲದೇ ಸಮಾಜದ ಮೇಲೂ ಗಾಢ ಪರಿಣಾಮ ಬೀರುತ್ತವೆ. ಅ೦ತರ೦ಗದ ಸರಕುಗಳು ಸ್ಪಷ್ಟ ಮತ್ತು...
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
Share:
Articles

ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

February 6, 2025 ಮಹಾದೇವ ಹಡಪದ
ಇಲ್ಲಿಯವರೆಗೆ: ಇತ್ತ ನಾಟ್ಯದವಳ ಮೋಹಿಗೆ ಬಿದ್ದ ಮಗ ವಸೂದೀಪ್ಯನ ಬಗೆಗೆ ಅವ್ವ ಮಹಾಲೇಖೆಗೆ ಚಿಂತೆ ಕಾಡತೊಡಗಿತು. ಮಾವ ಮತ್ತು ಅಬ್ಬೆಗೆ ತನ್ನ ಪ್ರೇಮದ ವಿಷಯ ಗೊತ್ತಾದುದಕೆ...

Comments 14

  1. Murthy Bengaluru
    Dec 14, 2025 Reply

    ಧರ್ಮಕ್ಕೆ ನಾಗರಾಜ್ ಅವರು ಕೊಡುವ ವ್ಯಾಖ್ಯಾನ- “ಮಾನವ ಜನಾಂಗದ ಸರ್ವತೋಮುಖ ಏಳಿಗೆಯ ಹಾದಿಗಡ್ಡಬಿದ್ದಿರುವ ಕೊಳಕನ್ನು ಶುದ್ಧೀಕರಿಸುವ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ.” ಇದು ಅಂತರಂಗ- ಬಹಿರಂಗಗಳ ಶುದ್ಧೀಕರಣ ಎಂದು ನಾನು ಅರ್ಥಮಾಡಿಕೊಂಡೆ. ಈ ಶುದ್ಧೀಕರಣ ಸಾಧಿಸಲಿಕ್ಕೇ ಬುದ್ಧನ ಹಾಗೆ ಬಸವಾದಿ ಶರಣರೂ ಶ್ರಮಿಸಿದ್ದಾರೆ. ಅತ್ಯುತ್ತಮ ವಿಚಾರ ಪ್ರಚೋದಕ ಲೇಖನ.

  2. ಬಸವ ಗೌಡ ಕಬ್ಬೂರು
    Dec 15, 2025 Reply

    ಬಹಳ ದಿನಗಳ ನಂತರ ಬಯಲು ವೇದಿಕೆಯಲ್ಲಿ ನಿಮ್ಮ ಲೇಖನ ಕಂಡು ಖುಷಿಯಾಯಿತು. ಈಗ ತಾನೆ ಓದಿದೆ. ನಿಮ್ಮ ಚಿಂತನೆಗಳು ಮನಸ್ಸನ್ನು ಆಕ್ರಮಿಸಿ ಬಿಟ್ಟವು. ಬಾಬಾ ಸಾಹೇಬರು ಎಂದರೆ ನನಗೆ ಪಂಚಪ್ರಾಣ. ಅವರ ಕನಸು ನಿಮ್ಮಂತ ಮಾರ್ಗದರ್ಶನದಿಂದ ಈಡೇರಬೇಕು.

  3. ಕಿರಣ್ ಕುಮಾರ್
    Dec 15, 2025 Reply

    ಸ್ವವಿಮರ್ಶೆಯನ್ನು ಮರೆಸಿರುವ ವರ್ತಮಾನದ ಅಂಧಕಾರದಲ್ಲಿ ನಿಜವಾದ ಬುದ್ಧನೂ ಕಾಣಿಸುವುದಿಲ್ಲಾ, ಬಸವಣ್ಣನೂ ಕಾಣಿಸುವುದಿಲ್ಲಾ.

  4. ಸಿದ್ದಣ್ಣ ಧನ್ನೂರು
    Dec 15, 2025 Reply

    ಲೇಖನ ಬಹಳ ಚೆನ್ನಾಗಿದೆ. ಅಂಬೇಡ್ಕರ್ ಅವರ ಹೃದಯವೇ ನಮ್ಮನ್ನು ಎಚ್ಚರಿಸುವ ಹಾಗೆ ಭಾಸವಾಯಿತು. ಶರಣಾರ್ಥಿಗಳು.

  5. Shambhu Hosamani
    Dec 16, 2025 Reply

    ಲೇಖನದುದ್ದಕ್ಕೂ ಶ್ರೀಯುತ ಪದ್ಮಾಲಯ ಅವರು ಎತ್ತಿದ ಪ್ರಶ್ನೆಗಳು ಇಡೀ ಸಮಾಜವನ್ನು ಪ್ರಶ್ನಿಸಿದಂತಿದೆ. ಉದಾಹರಣೆಗೆ: ಬುದ್ಧತ್ವವನ್ನು ಪ್ರಕ್ರಿಯೆಯಾಗಿಟ್ಟುಕೊಂಡು ಜೀವಿಸುತ್ತಿರುವ ಒಂದು ಸಮೂಹದ ಮಾದರಿ ನಮ್ಮಲ್ಲಿ ಎಲ್ಲಿದೆ?
    ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಬಲವನ್ನು ಸಮಾಜ ಉಳಿಸಿಕೊಂಡಿದೆಯೇ?

  6. Girish Kavali
    Dec 17, 2025 Reply

    ಪದ್ಮಾಲಯ ನಾಗರಾಜ್ ಶರಣರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಲ್ಲರೂ ತಪ್ಪದೆ ಓದಲೇ ಬೇಕು.🫡

  7. Ashore Desai
    Dec 17, 2025 Reply

    ಬಯಲುನಲ್ಲಿ ಬಂದ ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದೇನೆ ಸರ್. ಹೊಸ ಚಿಂತನೆಗಳಿಂದ ಕೂಡಿದ ನಿಮ್ಮ ವಿಚಾರಗಳು ಯೋಚನೆಗೆ ಹಚ್ಚುತ್ತವೆ. ಧನ್ಯವಾದಗಳು.

  8. ನಂಜಪ್ಪ ತಾತಾ, ನಂಜನಗೂಡು
    Dec 21, 2025 Reply

    ಮನುಷ್ಯನಿಗೆ ಅತಿಸಂಗ್ರಹಣೆಯ ಭೂತ ಹಿಡಿದಿದೆ. ಯಾವಾಗಲೂ ‘ನಂದು’, ‘ನಂದು’ ಅನ್ನೋ ಭೂತವನ್ನ ಮನುಷ್ಯ ತಲೇಲಿ ಹೊತ್ತಿರ್ತಾನೆ. ತಲೇಲಿ ಕಸಕಡ್ಡಿಗಳನ್ನ ಹೊತ್ತು ಕಸದ ತೊಟ್ಟಿಯಂತೆ ಓಡಾಡ್ತಾ ಇರ್ತಾನೆ. ಶುದ್ಧಿಕರಣ ಆಗದೇ ಶುದ್ಧ ಸಮಾಜ ಕಟ್ಟೋಕೆ ಸಾಧ್ಯವೇ ಇಲ್ಲಾ. “ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತೈಸಿಕೊಳ್ಳಿ” ಅಂತ ಬಸವಣ್ಣನವರು ಹೇಳಲಿಲ್ಲವೇ? ಆದರೆ ಹೊಲೆಯರೆಲ್ಲಾ ಹರಳಯ್ಯಾ ಆಗಲಿಲ್ಲಾ; ಬ್ರಾಹ್ಮಣರೆಲ್ಲಾ ಬಸವಣ್ಣ ಆಗಲಿಲ್ಲಾ. ಒಳಗಿನ ದೃಷ್ಟಿಯೇ ಬತ್ತಿ ಹೋಗಿದೆ, ಏನು ಮಾಡೋದು?

  9. ಡಿ. ಉಮಾಪತಿ, ಬೆಂಗಳೂರು
    Dec 23, 2025 Reply

    ನಾಗರಾಜರ ಲೇಖನ ಬಹಳ ಚೆನ್ನಾಗಿದೆ ಎಂದರೆ ಸವಕಲು ಪದ ಬಳಸಿದಂತೆ ಆಗುತ್ತದೆ.

  10. ಮಹಾದೇವ ಗೌಡ
    Dec 24, 2025 Reply

    ಶೋಷಣೆ ಮತ್ತು ಸಂಗ್ರಹಣೆಗಳು ಹೇಗೆ ಜಾತಿಯೊಂದಿಗೆ ನಿಕಟ ಸಂಬಂಧ ಹೊಂದಿವೆ ಎನ್ನುವ ಮಹಾ ಸತ್ಯವನ್ನು ಈ ಲೇಖನದೊಂದಿಗೆ ಕಂಡುಕೊಂಡೆ🫡

  11. P. Sudeep
    Dec 26, 2025 Reply

    ಬುದ್ಧನ ದಾರಿಯಲ್ಲಿ ನಡೆದ ಅಂಬೇಡ್ಕರ್, ಈರದಾಸಮ್ಮ ಆ ಪರಂಪರೆಯನ್ನು ಜೀವಂತವಾಗಿಟ್ಟಿವೆ.

  12. ಬಸವಪ್ರಭು ಪಾಟೇಲ್
    Dec 29, 2025 Reply

    ಈರದಾಸಮ್ಮಳ ಕತೆ ಶರಣೆಯೊಬ್ಬರ ಕತೆಯಂತಿದೆ. ಆಕೆಯ ಬದುಕು, ಆಕೆಯ ಪರಿವರ್ತನೆಯಾದ ವ್ಯಕ್ತಿತ್ವ ಬಹಳ ಅದ್ಭುತವಾಗಿದೆ. ಆ ತಾಯಿಯ ಪಾದಗಳಿಗೆ, ಇಂತಹ ವಿಚಾರಪೂರ್ಣ ಮಾಹಿತಿಗಾಗಿ ಲೇಖಕರಿಗೆ ಶರಣು🙏🙏

  13. ಬಸವಪ್ರಭು ಪಾಟೇಲ್
    Dec 29, 2025 Reply

    ಈರದಾಸಮ್ಮಳ ಕತೆ ಶರಣೆಯೊಬ್ಬರ ಕತೆಯಂತಿದೆ. ಆಕೆಯ ಬದುಕು, ಆಕೆಯ ಪರಿವರ್ತನೆಯಾದ ವ್ಯಕ್ತಿತ್ವ ಬಹಳ ಅದ್ಭುತವಾಗಿದೆ. ಆ ತಾಯಿಯ ಪಾದಗಳಿಗೆ, ಇಂತಹ ವಿಚಾರಪೂರ್ಣ ಮಾಹಿತಿಗಾಗಿ ಲೇಖಕರಿಗೆ ಶರಣು🙏🙏

  14. ಬಸವರಾಜ ಹಂಡಿ
    Jan 2, 2026 Reply

    ಇದು ಅತ್ಯಂತ ಆಳವಾದ, ಪ್ರಾಮಾಣಿಕ ಮತ್ತು ಧೈರ್ಯಶಾಲಿ ಲೇಖನ. ಬೌದ್ಧ ಮೀಮಾಂಸೆಯನ್ನು ಕೇವಲ ಮತಾಂತರ, ಆಚರಣೆ ಅಥವಾ ವೈಯಕ್ತಿಕ ಸಾಧನೆಗೆ ಸೀಮಿತಗೊಳಿಸದೆ, ಮಾನವ ಸ್ವಭಾವ–ಸಮಾಜ–ರಾಜಕಾರಣಗಳ ಮೂಲಭೂತ ಶುದ್ಧೀಕರಣದ ಜೀವಂತ ಪರಿವರ್ತನಾ ಪ್ರಕ್ರಿಯೆಯಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಮತ್ತು ಬುದ್ಧರ ಧರ್ಮವನ್ನು ಆರಾಧನೆಯ ವಸ್ತುವಾಗಿಸುವ contemporary ಅಪಾಯವನ್ನು ಬಯಲು ಮಾಡಿ, ಧರ್ಮವೆಂದರೆ ವ್ಯಕ್ತಿಯೊಳಗಿನ ಹಾಗೂ ಸಮಾಜದೊಳಗಿನ ಶೋಷಕ ಸ್ವಭಾವಗಳ ವಿರುದ್ಧ ನಡೆಯುವ ನಿರಂತರ ಹೋರಾಟವೆಂಬ ಸಾರವನ್ನು ಸ್ಪಷ್ಟಪಡಿಸಿದ್ದಾರೆ.
    ವೈದಿಕ ಧರ್ಮದ ಮೂಲಕ ಜಾತಿ, ಸಂಗ್ರಹಣೆ ಮತ್ತು ಶೋಷಣೆ ಹೇಗೆ ಮಾನವ ಸ್ವಭಾವಗಳಲ್ಲಿ ನೆಲೆಸಿವೆ ಎಂಬ ವಿಶ್ಲೇಷಣೆ ತೀಕ್ಷ್ಣವೂ ಸಮಯೋಚಿತವೂ ಆಗಿದೆ. ಜೊತೆಗೆ, ಈರದಾಸಮ್ಮನ ಬದುಕಿನ ಮೂಲಕ ಬೌದ್ಧ ಮೀಮಾಂಸೆಯ ನೆಲಪರಂಪರೆಯನ್ನು ಜೀವಂತವಾಗಿ ತೋರಿಸಿರುವುದು ಈ ಲೇಖನದ ದೊಡ್ಡ ಬಲ. ಒಟ್ಟಿನಲ್ಲಿ, ಇದು ಬುದ್ಧತ್ವವನ್ನು ಆಚರಣೆ ಅಲ್ಲ, ಪ್ರಕ್ರಿಯೆ ಎಂದು ಗ್ರಹಿಸಲು ಒತ್ತಾಯಿಸುವ, ಮಾನವೀಯತೆ ಮತ್ತು ಜವಾಬ್ದಾರಿಯನ್ನು ಓದುಗರ ಮುಂದೆ ಇಡುವ ಮಹತ್ವದ ಚಿಂತನಾ ಬರಹ.

Leave a Reply to ಡಿ. ಉಮಾಪತಿ, ಬೆಂಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ವೀರ
ವೀರ
April 29, 2018
Copyright © 2026 Bayalu