Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವೋತ್ತರ ಶರಣರ ಸ್ತ್ರೀಧೋರಣೆ
Share:
Articles April 29, 2018 ಡಾ. ಎನ್.ಜಿ ಮಹಾದೇವಪ್ಪ

ಬಸವೋತ್ತರ ಶರಣರ ಸ್ತ್ರೀಧೋರಣೆ

(ಭಾಗ-2)

ಬಸವಣ್ಣನವರು ಪ್ರಾರಂಭಿಸಿದ ಕ್ರಾಂತಿ ಪೂರ್ಣವಾಗದೆ, ರಾಜಕೀಯ ಮತ್ತು ಧರ್ಮೋ-ಸಾಮಾಜಿಕ ಕಾರಣಗಳಿಂದಾಗಿ ಅವರ ಸಂಗಡಿಗರೆಲ್ಲಾ ದಿಕ್ಕಾಪಾಲಾಗಿ ಓಡಿಹೋದಾಗ, ವಚನ ರಚನೆಯ ಕೆಲಸವೂ ಕೆಲ ಕಾಲ ನಿಂತುಹೋಯಿತು. ಸುಮಾರು ಇನ್ನೂರು-ಮುನ್ನೂರು ವರ್ಷಗಳ ಕಾಲ, ಅಂದರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬರುವವರೆಗೆ, ಯಾರೂ ವಚನ ರಚನೆಯಲ್ಲಿ ತೊಡಗಿದಂತೆ ಕಾಣುವುದಿಲ್ಲ.
ಎರಡನೆಯ ಘಟ್ಟದ ವಚನರಚನೆ ಪ್ರಾರಂಭವಾದುದು ಸಿದ್ಧಲಿಂಗ ಶಿವಯೋಗಿಗಳಿಂದಾಗಿಯೆ ಎಂದು ಭಾವಿಸಿದರೆ, ಆಗ ಹನ್ನೆರಡನೆಯ ಶತಮಾನದ ಶರಣರು ರಚಿಸಿದ ವಚನಗಳಿಗೂ ಬಸವೋತ್ತರ ಶರಣರು ರಚಿಸಿದ ವಚನಗಳಿಗೂ ಇರುವ ವ್ಯತ್ಯಾಸವೊಂದು ಎದ್ದು ಕಾಣುತ್ತದೆ. ಅದೆಂದರೆ, ಸಿದ್ಧಲಿಂಗರೂ ಅವರ ವಿರಕ್ತ ಪರಂಪರೆಯಲ್ಲೇ ಬಂದ ವಚನಕಾರರೂ ಸ್ತ್ರೀಯ ಬಗೆಗೆ ತೋರಿಸುವ ತುಚ್ಛ ಭಾವನೆ. ಆಧ್ಯಾತ್ಮಿಕ ಜೀವನಕ್ಕೆ ದಾಂಪತ್ಯ ಸುಖ ಪೂರಕ, ಸ್ತ್ರೀಯು ಆಧ್ಯಾತ್ಮಿಕ ಸಾಧನೆಯಲ್ಲಿ ಪುರುಷರಿಗೆ ಸಮಾನ ಎಂಬ ಭಾವನೆ ಹೋಗಿ, ಅದರ ಜಾಗದಲ್ಲಿ ಆಕೆ ಮಾಯೆ, ಪುರುಷನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವವಳು, ಆದುದರಿಂದ ಆಕೆ ತುಚ್ಛ ಮತ್ತು ವರ್ಜ್ಯ, ಎಂಬ ಧೋರಣೆ ಬೆಳೆಯತೊಡಗಿತು.

ಬಸವಣ್ಣನವರು ಪ್ರಾರಂಭಿಸಿದ ಕ್ರಾಂತಿ ಪೂರ್ಣವಾಗದೆ, ರಾಜಕೀಯ ಮತ್ತು ಧರ್ಮೋ-ಸಾಮಾಜಿಕ ಕಾರಣಗಳಿಂದಾಗಿ ಅವರ ಸಂಗಡಿಗರೆಲ್ಲಾ ದಿಕ್ಕಾಪಾಲಾಗಿ ಓಡಿಹೋದಾಗ, ವಚನರಚನೆಯ ಕೆಲಸವೂ ಕೆಲ ಕಾಲ ನಿಂತುಹೋಯಿತು. ಸುಮಾರು ಇನ್ನೂರು-ಮುನ್ನೂರು ವರ್ಷಗಳ ಕಾಲ, ಅಂದರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬರುವವರೆಗೆ, ಯಾರೂ ವಚನರಚನೆಯಲ್ಲಿ ತೊಡಗಿದಂತೆ ಕಾಣುವುದಿಲ್ಲ.

ಎರಡನೆಯ ಘಟ್ಟದ ವಚನರಚನೆ ಪ್ರಾರಂಭವಾದುದು ಸಿದ್ಧಲಿಂಗ ಶಿವಯೋಗಿಗಳಿಂದಾಗಿಯೆ ಎಂದು ಭಾವಿಸಿದರೆ, ಆಗ ಹನ್ನೆರಡನೆಯ ಶತಮಾನದ ಶರಣರು ರಚಿಸಿದ ವಚನಗಳಿಗೂ ಬಸವೋತ್ತರ ಶರಣರು ರಚಿಸಿದ ವಚನಗಳಿಗೂ ಇರುವ ವ್ಯತ್ಯಾಸವೊಂದು ಎದ್ದು ಕಾಣುತ್ತದೆ. ಅದೆಂದರೆ, ಸಿದ್ಧಲಿಂಗರೂ ಅವರ ವಿರಕ್ತ ಪರಂಪರೆಯಲ್ಲೇ ಬಂದ ವಚನಕಾರರೂ ಸ್ತ್ರೀಯ ಬಗೆಗೆ ತೋರಿಸುವ ತುಚ್ಛ ಭಾವನೆ. ಆಧ್ಯಾತ್ಮಿಕ ಜೀವನಕ್ಕೆ ದಾಂಪತ್ಯ ಸುಖ ಪೂರಕ, ಸ್ತ್ರೀಯು ಆಧ್ಯಾತ್ಮಿಕ ಸಾಧನೆಯಲ್ಲಿ ಪುರುಷರಿಗೆ ಸಮಾನ ಎಂಬ ಭಾವನೆ ಹೋಗಿ, ಅದರ ಜಾಗದಲ್ಲಿ ಆಕೆ ಮಾಯೆ, ಪುರುಷನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವವಳು, ಆದುದರಿಂದ ಆಕೆ ತುಚ್ಛ ಮತ್ತು ವರ್ಜ್ಯ, ಎಂಬ ಧೋರಣೆ ಬೆಳೆಯತೊಡಗಿತು.

ಘನಲಿಂಗಿದೇವ (ಕ್ರಿ.ಶ.ಸು. 1600) ಎಂಬ ವಚನಕಾರರು ತೋಂಟದ ಸಿದ್ಧಲಿಂಗ ಯತಿಗಳ ವಿರಕ್ತ ಪರಂಪರೆಗೆ ಸೇರಿದವರು. ಅವರು ಸಹ ಸ್ತ್ರೀಯರ ಬಗೆಗೆ ಅಶ್ಲೀಲ ಪದಗಳನ್ನು ಯಥೇಚ್ಛವಾಗಿ ಬಳಸಿದ್ದಾರೆ. ಅವರ ಸ್ತ್ರೀ ಧೋರಣೆಯನ್ನು ಈ ಕೆಳಗಿನ ಕೆಲವು ವಚನ ಭಾಗಗಳು ತೋರಿಸುತ್ತವೆ:
ಅಂಗದ ಮೇಲೆ ಲಿಂಗವುಳ್ಳ ಪಟ್ಟದರಾಣಿ ಅರಸುವೆಣ್ಣು
ಅನಾದಿ ನಾಯಕಿ ಜಾರೆ ಪತಿವ್ರತೆ ಪುಂಡುವೆಣ್ಣು
ಕೆಂಪಿ ಕರಿಕಿ ದಾಸಿ ವೇಶಿ ಮೊಂಡಿ ಮೂಕೊರತಿ ಕುಂಟಿ ಕುರುಡಿ
ಇವರೆಲ್ಲರ ಭಕ್ತಿಯಿಂ ಸಮಾನಂಗಂಡು
ಇವರೆಲ್ಲರಂ ಗುರುವಿನ ರಾಣೀವಾಸಕ್ಕೆ ಸರಿಯೆಂದು ನಿರ್ಧರಿಸಿ
ಊರ್ವಶಿ ರಂಭೆ ತಿಲೋತ್ತಮೆಯರಿಗೆ ಸರಿಯಾದ
ಶಂಖಿನಿ ಪದ್ಮಿನಿಗೆಣೆಯಾದ
ರತಿಯ ಲಾವಣ್ಯಕ್ಕೆ ಸರಿಮಿಗಿಲೆನಿಪ ಚೆಲುವೆಣ್ಣುಗಳ ಗೋಮಾಂಸಸುರೆಗೆ ಸರಿಯೆಂದು
ಭಾವಿಸಿದೆನಯ್ಯ ನೀ ಸಾಕ್ಷಿಯಾಗಿ . . . (11/702)

ಹೆಣ್ಣೆಂಬ ರಕ್ಕಸಿ ಲಲ್ಲೆವಾತಿಂದ
ಗಂಡನ ಮನವನೊಳಗುಮಾಡಿಕೊಂಡು
ಸಂಸಾರ ಸುಖಕ್ಕೆ ಸರಿಯಿಲ್ಲವೆನಿಸಿ,
ಸಿರಿವಂತರಿಗಾಳುಮಾಡಿ,
ಇರುಳು ಹಗಲೆನ್ನದೆ, ತಿರುಗಿಸುತ್ತಿಪ್ಪಳು . . . (11/732)

ತೋಂಟದ ಸಿದ್ಧಲಿಂಗರೂ, ಅವರ ಪರಂಪರೆಯಲ್ಲಿ ಬಂದ ವಿರಕ್ತ ವಚನಕಾರರೂ ಒಂದು ರೀತಿಯ ಸನ್ಯಾಸಿಗಳಾದುದರಿಂದ, ಅವರು ಹೊನ್ನು, ಹೆಣ್ಣು, ಮಣ್ಣುಗಳನ್ನು – ಅದರಲ್ಲೂ ಹೆಣ್ಣನ್ನು – ಮಾಯೆ, ವರ್ಜ್ಯ ಎಂದು ಪರಿಗಣಿಸುವುದರಲ್ಲೇನೂ ಆಶ್ಚರ್ಯವಿಲ್ಲ. ಆ ಮಾಯೆಯನ್ನು ಗೆಲ್ಲುವುದನ್ನೇ ತಮ್ಮ ಆಧ್ಯಾತ್ಮಿಕ ಸಾಧನೆಯ ಒಂದು ಮುಖ್ಯ ಅಂಗವನ್ನಾಗಿ ಮಾಡಿಕೊಂಡಿರುವ ಅಂಥವರು-

ಹೊನ್ನ ಬಿಟ್ಟಲ್ಲಿಯೇ ಸಂಚಿತ ಕರ್ಮ ನಾಸ್ತಿಯಾಯಿತು . . .
ಹೆಣ್ಣ ಬಿಟ್ಟಲ್ಲಿಯೇ ಪ್ರಾರಬ್ಧ ಕರ್ಮ ನಾಸ್ತಿಯಾಯಿತು . . .
ಮಣ್ಣ ಬಿಟ್ಟಲ್ಲಿಯೇ ಆಗಾಮಿ ಕರ್ಮ ನಾಸ್ತಿಯಾಯಿತು . . . (11/758)
ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಈ ತ್ರಿವಿಧಮಲಗಳನ್ನು – ಅದರಲ್ಲೂ ಹೆಣ್ಣೆಂಬ ಮಲವನ್ನು – ಗೆಲ್ಲಲು ಅವರು ದೇಹದಂಡನೆ, ತಪಸ್ಸು ಮುಂತಾದ ಸಾಧನೆಯಲ್ಲಿ ತೊಡಗುತ್ತಾರೆ. ಆದರೆ ಸಿದ್ಧ ಪುರುಷರಾದ ಅಲ್ಲಮರಿಗೆ ದೇಹದಂಡನೆಯಿಂದ ಆಧ್ಯಾತ್ಮಿಕ ಸಿದ್ಧಿಯಾಗುವುದಿಲ್ಲವೆಂದು ಚೆನ್ನಾಗಿ ಗೊತ್ತು. ಅದಕ್ಕೇ ಅವರು-

ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೋ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ –
ವಿಷಯವನತಿಗಳೆದಲ್ಲಿ ಫಲವೇನೋ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು, ಗುಹೇಶ್ವರಾ (2/152)
ಎಂದು ತಮ್ಮ ಕಾಲದ ಸಾಧಕರನ್ನು ಎಚ್ಚರಿಸುತ್ತಾರೆ. ಅದೇ ರೀತಿ, ಅವರ ಕಾಲದ ಶರಣೆಯೊಬ್ಬರು-
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಎಂದು ಕೇಳುವ ಧೈರ್ಯ ಮಾಡುತ್ತಾಳೆ. ಇದಕ್ಕೆ ವಿರುದ್ಧವಾಗಿ ಕಾಡಸಿದ್ಧೇಶ್ವರರೆಂಬ ವಚನಕಾರರು ಈ ಬಗೆಗೆ ಹೀಗನ್ನುತ್ತಾರೆ:

ಹೊನ್ನೊಂದು ಬಿಳುಪಿನ ಮಲ, ಹೆಣ್ಣೊಂದು ಕೆಂಪಿನ ಮಲ,
ಮಣ್ಣೊಂದು ಕಪ್ಪಿನ ಮಲ;
ಇಂತೀ ತ್ರಿವಿಧ ಮಲವ ತಿಂದು
ಸಂಸಾರ ವಿಷಯರಸವೆಂಬ ಕಾಳಕೂಟ ನೀರ ಕುಡಿದು,
ಮುಂದೆ ನಾವು ಶಿವಪಥವ ಸಾಧಿಸಿ ಮುಕ್ತಿಯ ಹಡೆಯಬೇಕೆಂಬ
ಯುಕ್ತಿಗೇಡಿಗಳು ಈ ಹೀಂಗೆ ಪ್ರಪಂಚವ ಮಾಡಿ, ಇದರೊಳಗೇ ಮೋಕ್ಷವೆಂದು
ಇದನ್ನು ಬಿಟ್ಟರೆ ಮೋಕ್ಷವಿಲ್ಲೆಂದು ಯುಕ್ತಿ ಹೇಳುವ
ಯುಕ್ತಿಗೇಡಿಗಳ ಈ ಮಾತ ಸಾದೃಶ್ಯಕ್ಕೆ ತಂದು,
ಆಚಾರ ಹೇಳುವ ಅನಾಚಾರಿಗಳ
ನಾಲಿಗೆಯ ಸೀಳಿ, ಹೊರತೆಗೆಯಬೇಕು. (10/23).

ಈ ವಿರಕ್ತರ ವಚನಗಳನ್ನೂ ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನೂ ತೌಲನಿಕವಾಗಿ ಅಭ್ಯಸಿಸಿದರೆ, ಎರಡು ಅಂಶಗಳು ವ್ಯಕ್ತವಾಗುತ್ತವೆ. ಮೊದಲನೆಯದಾಗಿ, ಹನ್ನೆರಡನೆಯ ಶತಮಾನದ ವಚನಕಾರರೇನೂ ಸ್ತ್ರೀಲೋಲುಪರಾಗಿಯೂ ಆಧ್ಯಾತ್ಮಿಕ ಜೀವನ ನಡೆಸಬಹುದು ಎಂದು ಹೇಳಲಿಲ್ಲ. ಅವರು ಕೌಟುಂಬಿಕ, ಸಾಮಾಜಿಕ ಕರ್ತವ್ಯಗಳನ್ನು ಮಾ���ುತ್ತಲೇ ಆಧ್ಯಾತ್ಮಿಕ ಸಾಧನೆ ಮಾಡಬೇಕು ಎಂದರೇ ಹೊರತು, ಆಧ್ಯಾತ್ಮಿಕ ಸಾಧನೆಗೆ ದಾಂಪತ್ಯ, ಕೌಟುಂಬಿಕ, ಸಾಮಾಜಿಕ ಕರ್ತವ್ಯಗಳನ್ನು ಬಲಿಕೊಡಬೇಕೆಂದೇನೂ ಹೇಳಲಿಲ್ಲ. ಅವರು ಪರಸ್ತ್ರೀ, ಪರಪುರುಷ ಸಂಗವನ್ನು ತ್ಯಜಿಸಬೇಕೆಂದು ಹೇಳಿದರೆ ವಿನಾ ದಾಂಪತ್ಯ ಸುಖವನ್ನು ತ್ಯಜಿಸಬೇಕೆಂದು ಹೇಳಲಿಲ್ಲ. ಆದರೆ ವಿರಕ್ತರು ಸತಿ, ಸುತ ಎಂದು ಸಂಸಾರದಲ್ಲಿ ನಿರತರಾದವರಿಗೆ ಮೋಕ್ಷವಿಲ್ಲ ಎಂದು ತೀರ್ಮಾನಿಸುತ್ತಾರೆ.

ಎರಡನೆಯದಾಗಿ, ಬಸವಕಾಲೀನ ಶರಣರಿಗೆ ಸ್ತ್ರೀಯ ಬಗೆಗಿನ ಆಸೆ ಮಾಯೆಯೆ ವಿನಾ ಸ್ತ್ರೀಯೆ ಮಾಯೆಯಲ್ಲ. ಆದರೆ ಬಸವೋತ್ತರ ವಿರಕ್ತರಿಗೆ ಸ್ತ್ರೀಯೇ ಮಾಯೆ. ಆಸೆ ಮನಸ್ಸಿನಲ್ಲಿದ್ದರೆ, ಸ್ತ್ರೀಯು ಮನಸ್ಸಿನ ಹೊರಗಿರುವವಳು. ಹೀಗೆ ಪರಿಗಣಿಸಿದಾಗ ವಿರಕ್ತರು ಆಸೆಯಿಂದ ದೂರವಿರಬೇಕು ಎನ್ನದೆ, ಸ್ತ್ರೀಯರಿಂದಲೇ ದೂರವಿರಬೇಕು ಎಂದು ಉಪದೇಶಿಸುತ್ತಾರೆ.

ಹಾಗಾದರೆ ವಿರಕ್ತ ವಚನಕಾರರು ಸ್ತ್ರೀಯರಿಂದ ದೂರವಿರಬೇಕೆಂದು ಉಪದೇಶಿಸುವುದು ತಪ್ಪೆ? ಎಂದು ಕೆಲವರು ಕೇಳಬಹುದು. ಅವರ ಉಪದೇಶ ಖಂಡಿತ ತಪ್ಪಲ್ಲ. ಯಾರು ಯಾವಾಗಲೂ ವಿಷಯಾಸಕ್ತನಾಗಿರುತ್ತಾನೋ ಅಥವಾ ಯಾವಾಗಲೂ ಕೌಟುಂಬಿಕ ಅಥವಾ ಸಾಮಾಜಿಕ ವ್ಯವಹಾರದಲ್ಲೇ ಮುಳುಗಿರುತ್ತಾನೋ ಅವನಿಗೆ ಮೋಕ್ಷವಿಲ್ಲ ಎಂದು ಅವರು ಹೇಳುವುದೂ ಸರಿಯೆ. ಏಕೆಂದರೆ ವ್ಯಾವಹಾರಿಕ ಜೀವನದಲ್ಲೆ ಹೆಚ್ಚು ಆಸಕ್ತನಾಗಿರುವವನಿಗೆ ಆಧ್ಯಾತ್ಮಿಕ ಸಾಧನೆಗೆ ಸಮಯವನ್ನು ಮೀಸಲಾಗಿಡುವುದು ಸಾಧ್ಯವಾಗುವುದಿಲ್ಲ.

ವಿರಕ್ತರು ಯತಿಗಳಾದುದರಿಂದ, ಅವರು ಸ್ತ್ರೀಯರಿಂದ ದೂರವಿರುವುದೂ ಸರಿಯೇ. ಇತರ ವಿರಕ್ತರೂ ಸ್ತ್ರೀಯರಿಂದ ದೂರವಿರಲಿ ಎಂಬ ಉದ್ದೇಶದಿಂದ ಸ್ತ್ರೀಯರನ್ನು ಕಟು ಶಬ್ದಗಳಿಂದ ದೂಷಿಸುವುದು, ಸ್ತ್ರೀ ದೇಹದ ಬಗ್ಗೆ ಜುಗುಪ್ಸೆ ಬರಲಿ ಎಂಬ ಉದ್ದೇಶದಿಂದ ಅದನ್ನು ಮೂತ್ರ, ರಕ್ತ, ಎಲುಬುಗಳ ಸಮೂಹ ಎಂದು ವರ್ಣಿಸುವುದೂ (10/556, 11/142, ಇತ್ಯಾದಿ) ತಪ್ಪೇನಲ್ಲ. ಆದರೆ,

ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ;
ನಿರಾಳ ಬ್ರಹ್ಮಾಂಶಿಕವು. ಅದೆಂತೆಂದಡೆ:
ಪಾಪದ ದೆಸೆಯಿಂದ ಹೆಣ್ಣಾಗಿ ಜನಿಸುವುದು,
ಪುಣ್ಯದ ದೆಸೆಯಿಂದ ಪುರುಷನಾಗಿ ಜನಿಸುವುದು . . . (10/35)

ಎಂದು ಕಾಡಸಿದ್ಧೇಶ್ವರರು ಹೇಳುವುದು ಸರಿಯಲ್ಲ. ಅವರು ಬಾದರಾಯಣ ಮತ್ತು ಜೈನರಂತೆ, ಸ್ತ್ರೀ ಮೋಕ್ಷಕ್ಕೆ ಅನರ್ಹಳು ಎಂದು ವಾದಿಸುತ್ತಾರೆ.
ಆದರೆ, ಕೌಟುಂಬಿಕ ಕರ್ತವ್ಯಗಳಲ್ಲೆ ಮುಳುಗಿರುವವನಿಗೆ ಏಕೆ ಆಧ್ಯಾತ್ಮಿಕ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅವರು ಹೀಗೆ ಸಮರ್ಥಿಸಿಕೊಳ್ಳುತ್ತಾರೆ:
ಮನೆ ಎನ್ನದು, ಧನವೆನ್ನದು, ತನುವೆನ್ನದು,
ಮಾತಾಪಿತರು, ಸತಿಸುತರು ಎನ್ನವರು,
ಸ್ನೇಹಿತರು ಬಾಂಧವರು ಎನ್ನವರು ಎಂದರೆ
ಭಕ್ತಿ ಭಿನ್ನವಾಯಿತ್ತು.
. . . ಇಂತಪ್ಪ ಪಂಚಮಹಾಪಾತಕರಿಗೆ ಮುಕ್ತಿಯೆಂಬುದು
ಎಂದೆಂದಿಗೂ ಇಲ್ಲ . . . (10/24)

ಮೇಲಿನ ವಚನದ ಪರಿಶೀಲನೆಯಿಂದ ಸತಿಸುತಮಾತಾಪಿತ ಎನ್ನುವವರಿಗೆ ಮೋಕ್ಷ ಏಕಿಲ್ಲವೆಂದರೆ ಅವರದು ಭಿನ್ನಭಕ್ತಿಯಾದುದರಿಂದ. ಎಲ್ಲ ಸೇಶ್ವರವಾದೀಯ ಧರ್ಮಗಳೂ ಮೋಕ್ಷಕ್ಕೆ ಸಂಪೂರ್ಣ ಭಕ್ತಿ ಆವಶ್ಯಕ ಎಂದು ಹೇಳುತ್ತವೆ. ಸಂಸಾರದಲ್ಲಿ ನಿರತನಾದವನು ತನ್ನ ಆಸಕ್ತಿಯನ್ನು ಸತಿಸುತಮಾತಾಪಿತಬಂಧು, ಮುಂತಾದವರಲ್ಲಿ ಹಂಚಬೇಕಾಗುತ್ತದೆ. ಉಳಿದ ಸಮಯವನ್ನೆಲ್ಲ ಅವನು ದೈವಭಕ್ತಿಗೇ ಮೀಸಲಾಗಿಡುತ್ತಾನೆಂದು ಊಹಿಸಿಕೊಂಡರೂ ಅದು ಸಂಪೂರ್ಣ ಭಕ್ತಿಯಲ್ಲ, ಭಿನ್ನ ಭಕ್ತಿ ಎಂಬುದು ಸ್ಪಷ್ಟ. ಸತಿಸುತ ಮುಂತಾದವರಿಗೆ ತೋರಿಸುವ ಆಸಕ್ತಿಯನ್ನೂ ಅವನು ದೈವಕ್ಕೇ ತೋರಿಸಿದ್ದರೆ ಆಗ ಅದು ಸಂಪೂರ್ಣಭಕ್ತಿಯೆನಿಸಿಕೊಳ್ಳುತ್ತಿತ್ತು. ಹೀಗೆ ಅಂಥವರ ಭಕ್ತಿ ಸಂಪೂರ್ಣವಲ್ಲದ್ದರಿಂದ (ಭಿನ್ನಭಕ್ತಿಯಾದುದರಿಂದ) ಅವರಿಗೆ ಮೋಕ್ಷವಿಲ್ಲ ಎಂಬುದು ವಿರಕ್ತರ ವಾದ.

* * *

ಹೀಗೆ ನೋಡಿದಾಗ ನಮಗೆ ದಾಂಪತ್ಯ ಸುಖ ಭೋಗಿಸಿದರೂ ಮೋಕ್ಷ ಸಾಧ್ಯ ಎಂಬ ಬಸವಾದಿ ಶರಣರ ಮಾತು ಸತ್ಯವೋ ಅಥವಾ ದಾಂಪತ್ಯ ಸುಖ ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿ ಎಂಬ ವಿರಕ್ತ ವಚನಕಾರರ ಮಾತು ಸತ್ಯವೋ? ಎಂಬುದು ಸಮಸ್ಯೆಯೇ ಆಗುವುದಿಲ್ಲ. ಏಕೆಂದರೆ, ಈ ಎರಡು ಪ್ರಶ್ನೆಗಳು ಪರಸ್ಪರ ವಿರುದ್ಧವೇನಲ್ಲ. ಕೆಲವರು ದಾಂಪತ್ಯ ಸುಖವನ್ನು ಭೋಗಿಸಿಯೂ ಯಶಸ್ವೀ ಆಧ್ಯಾತ್ಮಿಕ ಜೀವನ ನಡೆಸಿದ್ದಾರೆ (ಉದಾ: ಬಸವಣ್ಣ, ಮೋಳಿಗೆಯ ಮಾರಯ್ಯ, ಇತ್ಯಾದಿ ಅನೇಕ ಶರಣರು). ಮತ್ತೆ ಕೆಲವರು ಬ್ರಹ್ಮಚಾರಿಗಳಾಗಿ ಆಧ್ಯಾತ್ಮಿಕ ಪ್ರಗತಿ ಸಾಧಿಸಿದ್ದಾರೆ.

ಆದರೆ ಇದಕ್ಕಿಂತ ಹೆಚ್ಚು ಮುಖ್ಯವಾದ ಪ್ರಶ್ನೆ ಇದು: ಮಠಾಧೀಶರೂ, ಇತರ ವಿರಕ್ತರೂ ತಾವು ಬ್ರಹ್ಮಚಾರಿಗಳಾಗೇ ಇರಲಿ, ಸ್ತ್ರೀಯರಿಂದ ದೂರವಿರಲು ತೀರ್ಮಾನಿಸಲಿ. ಆದರೆ ಸ್ತ್ರೀಯರಿಂದ ದೂರವಿದ್ದರೆ ಮಾತ್ರ ಮೋಕ್ಷ ಸಾಧ್ಯ ಎಂದೇಕೆ ಅವರು ಬೋಧಿಸಬೇಕು? ಒಂದು ವೇಳೆ ಅವರ ಸಿದ್ಧಾಂತ ತಪ್ಪಲ್ಲದಿದ್ದರೆ, ದಾಂಪತ್ಯ ಸುಖ ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿಯಲ್ಲ, ಪೂರಕ ಎಂಬ ಬಸವಾದಿ ಶರಣರ ವಾದ ಹೇಗೆ ಸರಿ? ಅಥವಾ ಕಾಡಸಿದ್ಧೇಶ್ವರರು ಹೇಳುವಂತೆ, ಬಸವಾದಿಗಳದು ಭಿನ್ನಭಕ್ತಿಯಾಗಿದ್ದರೂ ಅವರಿಗೆ ಆಧ್ಯಾತ್ಮಿಕ ಪ್ರಗತಿ ನಿಜವಾಗಿಯೂ ಸಿದ್ಧಿಸಿತ್ತೆ? ಸಿದ್ಧಿಸಿದ್ದರೆ ಅದು ಹೇಗೆ ಸಾಧ್ಯ?
ಉತ್ತರ:
1. ನಾವು ಯಾವುದೇ ಸುಖವನ್ನು ಎರಡು ರೀತಿಯಲ್ಲಿ ಅನುಭವಿಸಲು ಸಾಧ್ಯವಿದೆ. ಸ್ವಾರ್ಥ ಅಥವಾ ವಿಷಯಾಸಕ್ತಿಯಿಂದ ಭೋಗಿಸುವುದು ಒಂದು ರೀತಿಯದು. ಉದಾಹರಣೆಗೆ ನಮಗೆ ಹಸಿವು ಅಥವಾ ನೀರಡಿಕೆ ಉಂಟಾದಾಗ ಯಾರನ್ನೂ ಲೆಕ್ಕಿಸದೆ ಅಥವಾ ಇತರರಿಗೆ ಸಿಗದಂತೆ ಅದನ್ನು ಪೂರೈಸಿಕೊಳ್ಳುವುದು ಸ್ವಾರ್ಥ ಭೋಗ. ಇದನ್ನೆ ವಚನಪರಿಭಾಷೆಯಲ್ಲಿ ಅಂಗಭೋಗ ಎನ್ನಲಾಗಿದೆ. ಒಂದು ವೇಳೆ ನಾವು ಬೇರೆಯವರೊಡನೆ ಹಂಚಿಕೊಂಡ ನಂತರ ಭೋಗಿಸಿದರೂ ಅದೂ ಅಂಗಭೋಗವೇ. ಕೆಲವರು ತಮ್ಮ ಹಸಿವನ್ನು ತೀರಿಸಿಕೊಳ್ಳುವ ಮೊದಲು ಸ್ನಾನ, ಲಿಂಗಪೂಜೆ, ನೈವೇದ್ಯ ಮುಂತಾದ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾರೆ. ಇದೂ ಅಂಗಭೋಗವೇ. ಏಕೆಂದರೆ ಅವರು ಹಸಿವು, ನೀರಡಿಕೆ ಮುಂತಾದವುಗಳನ್ನು ತೀರಿಸಿಕೊಳ್ಳುವ ಪ್ರಥಮ ಉದ್ದೇಶದಿಂದ ಪೂಜೆ ಮುಂತಾದವುಗಳನ್ನು ಮಾಡುತ್ತಾರೆಯೆ ಹೊರತು, ಯಾವ ಆಧ್ಯಾತ್ಮಿಕ ಉದ್ದೇಶದಿಂದಲೂ ಅಲ್ಲ. ಇಂಥವರನ್ನು ನೋಡಿಯೇ ಬಸವಣ್ಣನವರು-

ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯ;
ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ;
ಹಸಿವು ತೃಷೆ ವಿಷಯಕ್ಕೆ ಬಳಲುವರಯ್ಯಾ . . . (1/766)
ಎಂದಿರುವುದು. ಹಾಗೆ ಹಸಿವು ನೀಗಿಸಿಕೊಳ್ಳುವುದೇ ಮುಖ್ಯವಾಗಿರುವವನಿಗೆ ನಿಜವಾದ ಅರ್ಥದಲ್ಲಿ ಪ್ರಸಾದವಿಲ್ಲ. ಯಾರು ಎಲ್ಲವನ್ನೂ – ಗಾಳಿ, ನೀರು, ವಾಸನೆ, ಶಬ್ದ, ರೂಪಗಳನ್ನು – ಲಿಂಗಕ್ಕೆ ಅರ್ಪಿಸಿ ಪ್ರಸಾದವನ್ನಾಗಿ ಮಾಡಿಕೊಂಡು ಭೋಗಿಸುತ್ತಾನೋ ಅವನಿಗಷ್ಟೇ ಪ್ರಸಾದ.
ಇನ್ನೊಂದು ರೀತಿಯ ಭೋಗವೆಂದರೆ ನಿಃಸ್ವಾರ್ಥ ಅಥವಾ ಪ್ರಸಾದ ದೃಷ್ಟಿಯಿಂದ ಭೋಗಿಸುವುದು. ಈ ದೃಷ್ಟಿಯಿಂದ ಭೋಗಿಸುವ ಭಕ್ತನು ನನಗೆ

ಇಂಥದು ಬೇಕು, ಇಂಥದು ಬೇಡ, ಎನ್ನುವುದಿಲ್ಲ.
ಕಾಯದ ಕಳವಳಕ್ಕಂಜಿ ಕಾಯಯ್ಯಾ ಎನ್ನೆನು;
ಜೀವನೋಪಾಯಕ್ಕಂಜಿ ಈಯಯ್ಯಾ ಎನ್ನೆನು;
. . . ಉರಿಬರಲಿ, ಸಿರಿಬರಲಿ, ಬೇಕು, ಬೇಡೆನ್ನೆನಯ್ಯಾ . . . (1/695)

ಬಸವಣ್ಣನವರ ಈ ವಚನದ ಪ್ರಕಾರ, ಇಂಥದು ಬೇಕು ಎನ್ನುವುದು ಸ್ವಾರ್ಥ; ಇಂಥದು ಬೇಡ ಎನ್ನುವುದೂ ಸ್ವಾರ್ಥವೇ. ಇದನ್ನೆ ಪರಿಭಾಷೆಯಲ್ಲಿ ವೈರಾಗ್ಯ ಎನ್ನುತ್ತಾರೆ. ಬಸವಣ್ಣ ವಿಷಯಾಸಕ್ತಿ ಮತ್ತು ವೈರಾಗ್ಯ ಎಂಬ ಎರಡು ವಿಪರೀತಗಳನ್ನೂ ದೂರವಿಡಬಯಸುತ್ತಾರೆ.
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ;
ಆವ ಪದಾರ್ಥವಾದಡೇನು? ತಾನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೊಗಿಸುವುದೇ ಆಚಾರ . . . (1/774)
ಇಂಥ ವಿಶಾಲವಾದ ಪಾರಮಾರ್ಥಿಕ ದೃಷ್ಟಿಯುಳ್ಳ ಭಕ್ತನು ಭೋಗಿಸುವ ಭೋಗವು ಅಂಗಭೋಗವಾಗದೆ, ಲಿಂಗಭೋಗವಾಗುತ್ತದೆ. ಅಂದರೆ, ಅವನು ಉರಿಬರಲಿ, ಸಿರಿಬರಲಿ, ಎಲ್ಲವೂ ಶಿವನ ಪ್ರಸಾದ ಎಂದು ಭೋಗಿಸುತ್ತಾನೆಯೆ ಹೊರತು, ಯಾವುದನ್ನೂ ಬಿಡುವುದಿಲ್ಲ.
ಆದರೆ ಅಯಾಚಿತವಾಗಿ ಬಂದ ಲಂಚವನ್ನು, ದಾಂಪತ್ಯೇತರ ಸುಖವನ್ನು ಶಿವನ ಪ್ರಸಾದವೆಂದು ಭೋಗಿಸಲು ಬರುವುದಿಲ್ಲ. ಏಕೆಂದರೆ ಅದು ಅನೈತಿಕ; ಅನೈತಿಕವಾದುದು ಎಂದೂ ಪ್ರಸಾದವಾಗುವುದಿಲ್ಲ. ಅದು ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿಯಾಗುತ್ತದೆ.

2. ಅಲ್ಲಮಪ್ರಭುವಿನ ಈ ವಚನವನ್ನು ಪರಿಶೀಲಿಸಿ:
. . . ಸತಿ-ಪತಿಯೆಂಬ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ
ಸತಿ ಪತಿಯುಂಟೆ? ಪತಿಗೆ ಸತಿಯುಂಟೆ?
ಹಾಲುಂಡು ಮೇಲುಂಬರೆ, ಗುಹೇಶ್ವರಾ? (2/148)
ಸಾಧಕನು ಶರಣನಾದ ಮೇಲೆ – ಅಂದರೆ ತಾನೇ ಲಿಂಗದ ಸತಿ ಎಂದು ತಿಳಿದ ಮೇಲೆ – ಅವನಿಗೆ ತನ್ನ ಸತಿ ಸತಿಯಲ್ಲ, ಅಂತಹ ಸಾಧಕಳಿಗೆ ತನ್ನ ಪತಿ ಪತಿಯಲ್ಲ. ಊಟವಾದ ನಂತರ ಹಾಲು ಕುಡಿದ ಮೇಲೆ ಹೇಗೆ ಮತ್ತೇನನ್ನೂ ತಿನ್ನುವುದಿಲ್ಲವೋ ಹಾಗೆ ಲಿಂಗಸುಖವೇ ಅತ್ಯಂತ ಶ್ರೇಷ್ಠವೆಂದು ಪರಿಗಣಿಸುವ ಶರಣ (ಅಥವಾ ಶರಣೆ) ದಾಂಪತ್ಯಸುಖವನ್ನು (ಅಂಗಸುಖವನ್ನು) ಕೀಳೆಂದು ಪರಿಭಾವಿಸುತ್ತಾನೆ, ಎಂಬುದು ಅಲ್ಲಮರ ಅಭಿಪ್ರಾಯ. ಆದರೆ ಲಿಂಗಸುಖ ಪ್ರಾಪ್ತಿಯಾಗುವವರೆಗೂ ಅಂಗಸುಖವನ್ನು ಬಿಡಬೇಕು ಎಂದು ಅಲ್ಲಮರು ಹೇಳುತ್ತಿಲ್ಲವೆಂಬುದನ್ನು ನಾವು ಗಮನಿಸಬೇಕು.

3. ಆದರೆ ಕೇದಾರ ಗುರು ಎಂಬ ಮತ್ತೊಬ್ಬ ವಚನಕಾರರು ಇನ್ನೂ ಒಂದು ಹೆಜ್ಜೆ ಮುಂದು ಹೋಗುತ್ತಾರೆ:
ನಿಜವನರಿತ ಬಳಿಕ ಸಂಸಾರ ಬಿಡಲೇಕೊ?
ನಿಜವನರಿತ ಬಳಿಕ ಅಂಗೀಕರಿಸಿದ ಹೆಣ್ಣ ಬಿಟ್ಟರೆ,
ಅಘೋರ ನರ���ದಲ್ಲಿಕ್ಕುವ ಕೇದಾರ ಗುರು.

ಲಿಂಗಸುಖ ಪ್ರಾಪ್ತಿಯಾದ ನಂತರವೂ (ನಿಜವನರಿತ ಬಳಿಕವೂ) ದಾಂಪತ್ಯಸುಖವನ್ನು ಬಿಡುವುದು ಪಾಪ ಎಂಬುದು ಕೇದಾರಗುರುವಿನ ಅಭಿಪ್ರಾಯ.
ಹೀಗೆ, ದಾಂಪತ್ಯಸುಖವನ್ನು ಪ್ರಸಾದದೃಷ್ಟಿಯಿಂದ ನೋಡಿದರೆ, ದಾಂಪತ್ಯಸುಖ ಎಂದೂ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವುದಿಲ್ಲ. ಆದರೆ ದಾಂಪತ್ಯಸುಖವನ್ನು ತಪ್ಪಾಗಿ ಅರ್ಥೈಸುವ ವಿರಕ್ತರು ಸ್ವಸ್ತ್ರೀ ಸಂಗ ಸಹಾ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿ ಎನ್ನುತ್ತಾರೆ.

(ಮುಗಿಯಿತು)

Previous post ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
Next post ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ

Related Posts

ಪ್ರಭುವಿನ ಗುರು ಅನಿಮಿಷ -2
Share:
Articles

ಪ್ರಭುವಿನ ಗುರು ಅನಿಮಿಷ -2

September 14, 2024 ಮಹಾದೇವ ಹಡಪದ
ಇಲ್ಲಿಯವರೆಗೆ- (ದಂಡಿನ ಮ್ಯಾಳದ ಹುಡುಗರಿಗೆ ಯುದ್ಧ ಕೌಶಲ್ಯದ ತರಬೇತುದಾರನಾಗಿದ್ದ ತ್ರೈಲೋಕ್ಯ ಮತ್ತು ಮಹಾಲೇಖೆ ದಂಪತಿಗೆ ಸಾಧುವಿನ ಭವಿಷ್ಯವಾಣಿಯಿಂದ ಮಗು ಹುಟ್ಟುವ ಪುಣ್ಯ ಕಾಲ...
ಯುವಕರ ಹೆಗ್ಗುರುತು: ಚನ್ನಬಸವಣ್ಣ
Share:
Articles

ಯುವಕರ ಹೆಗ್ಗುರುತು: ಚನ್ನಬಸವಣ್ಣ

November 10, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಬಸವಣ್ಣ, ಅಲ್ಲಮ, ಅಕ್ಕ, ಸಿದ್ಧರಾಮೇಶ್ವರ, ಸತ್ಯಕ್ಕ, ಕಾಳವ್ವೆ, ಉರಿಲಿಂಗಪೆದ್ದಿ ಇಂಥವರೆಲ್ಲ ಲೋಕಕ್ಕೆ ಬೆಳಕು ನೀಡುವಂತಹ ಪುಣ್ಯದ ಕಾರ್ಯಗಳನ್ನು ಮಾಡಿದವರು. ಇವರ ಸಾಲಿನಲ್ಲಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
WHO AM I?
WHO AM I?
June 17, 2020
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
Copyright © 2025 Bayalu