Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದೇಹ ದೇವಾಲಯ
Share:
Articles June 12, 2025 ಡಾ. ಬಸವರಾಜ ಸಬರದ

ದೇಹ ದೇವಾಲಯ

ಶರಣರ ದೇವರ ಪರಿಕಲ್ಪನೆ ಹೇಗೆ ಹೊಸದೊ, ಅದೇ ರೀತಿ ಅವರ ದೇವಾಲಯ ಕಲ್ಪನೆಯೂ ಹೊಸತಾಗಿದೆ. ಹೊರಗಿನ ಮೂರ್ತಿ ದೇವರುಗಳನ್ನು ನಿರಾಕರಿಸಿದ ಮೇಲೆ ಅವರಿಗೆ ದೇವಾಲಯಗಳ ಅಗತ್ಯವೇ ಕಂಡುಬರಲಿಲ್ಲ. ದೇವಾಲಯಗಳ ಪ್ರವೇಶದ ಹೋರಾಟಕ್ಕಿಂತ ದೇವಾಲಯಗಳ ನಿರಾಕರಣೆಯ ಚಳುವಳಿಯನ್ನವರು ಪ್ರಾರಂಭಿಸಿದರು. ದೇಹವೇ ದೇಗುಲವೆಂದರು. ದೊಡ್ಡ ದೊಡ್ಡ ಶ್ರೀಮಂತರು, ರಾಜ-ಮಹಾರಾಜರು ದೇವಾಲಯಗಳನ್ನು ನಿರ್ಮಿಸುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ಹೀಗೆ ನಿರ್ಮಾಣಗೊಂಡ ದೇವಾಲಯಗಳ ಕೇಂದ್ರವಾದವರು ಪೂಜಾರಿಗಳು-ಪುರೋಹಿತರು. ದೇವಾಲಯಗಳಲ್ಲಿ ಪುರೋಹಿತರು ಪ್ರಬಲರಾದಾಗ ದೇವರ ಹೆಸರಿನಲ್ಲಿ ಶೋಷಣೆಗಳು ಪ್ರಾರಂಭವಾದವು. ದೇವದಾಸಿಯಂತಹ ಅನಿಷ್ಠ ಪದ್ಧತಿ ದೇವಾಲಯಗಳ ಮೂಲಕವೇ ಪ್ರಾರಂಭವಾಯಿತು. ಶ್ರೀಮಂತರು, ಪುರೋಹಿತರು ಇದರ ಫಲಾನುಭವಿಗಳಾದರು. ಇಂತಹ ಅನೇಕ ಅನಿಷ್ಠ ಪದ್ಧತಿಗಳನ್ನು ಹುಟ್ಟು ಹಾಕಿದ ದೇವಾಲಯಗಳು ಮೂಢನಂಬಿಕೆಗಳ ಕೇಂದ್ರಗಳಾದವು.

ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಶೂದ್ರರಿಗೆ, ಮಹಿಳೆಯರಿಗೆ, ಅಸ್ಪೃಶ್ಯರಿಗೆ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ. ಹೀಗಾಗಿ ದೇವಾಲಯವೆಂಬುದು ವರ್ಗ-ವರ್ಣ-ಲಿಂಗ ಅಸಮಾನತೆಯನ್ನು ಹುಟ್ಟುಹಾಕಿದ ಪ್ರಮುಖ ಶೋಷಣಾ ಕೇಂದ್ರವಾಯಿತು. ಕೆಳಜಾತಿಯವರಿಗೆ-ಕೆಳವರ್ಗದವರಿಗೆ-ಮಹಿಳೆಯರಿಗೆ ಪ್ರವೇಶ ನೀಡದ ದೇವಾಲಯಗಳು ದೇವರ ಹೆಸರಿನಲ್ಲಿ ಸುಲಿಗೆ ನಡೆಸಿದ್ದವು. ಶರಣರು ದೇವಾಲಯಗಳನ್ನು ನಿರಾಕರಿಸಿದರು.

ಉಳ್ಳವರು ಶಿವಾಲಯವ ಮಾಡಿಹರು
ನಾನೇನು ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
-ಬಸವಣ್ಣ (ಸ.ವ.ಸಂ.1, ವ:821,1993)

ಬಸವಣ್ಣನವರ ಈ ವಚನದಲ್ಲಿ ಸ್ಥಾವರ ದೇವಾಲಯಗಳ ನಿರ್ಮಾಣವನ್ನು ಕೈಬಿಟ್ಟು, ದೇಹವನ್ನೇ ದೇಗುಲವನ್ನಾಗಿ ಮಾಡಿಕೊಳ್ಳುವ ಹೊಸ ವಿಚಾರವಿದೆ. ದೇಹವೇ ದೇಗುಲವಾದಾಗ, ಮನುಷ್ಯನ ಕಾಲುಗಳೇ ಕಂಬಗಳಾಗುತ್ತವೆ. ಶಿರವೇ ಬಂಗಾರದ ಕಳಶವಾಗುತ್ತದೆ. ದೇಹವೇ ದೇಗುಲವಾದಾಗ ಅದು ಚಲನಶೀಲವಾದ್ದರಿಂದ ಜಂಗಮವಾಗುತ್ತದೆ, ಕಟ್ಟಡದ ಕಲ್ಲಿನ ದೇವಾಲಯ ಸ್ಥಾವರ. ಇದನ್ನೇ ಬಸವಣ್ಣ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲವೆನ್ನುತ್ತಾರೆ. ಶೋಷಣೆಯ ಕೇಂದ್ರಗಳಾಗಿದ್ದ ದೇವಾಲಯಗಳನ್ನು ನಿರಾಕರಿಸಿದ ಬಸವಣ್ಣನವರು ದೇಹವೇ ದೇಗುಲವೆನ್ನುವ ಮೂಲಕ, ದೇಹದ ಬಗೆಗಿದ್ದ ಕೀಳರಿಮೆಗಳು, ತಪ್ಪು ಭಾವನೆಗಳು ಹೊರಟು ಹೋದವು. ಈ ದೇಹವು ನಶ್ವರ, ಇದು ಮೂಳೆಮಾಂಸದ ತಡಿಕೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದ ಪುರೋಹಿತಶಾಹಿಯ ಮುಖಕ್ಕೆ ಹೊಡೆದಂತೆ, ಇದು ಮೂಳೆಮಾಂಸದ ತಡಿಕೆಯಲ್ಲ, ಪ್ರಸಾದ ಕಾಯ ಎಂದು ಸೂಚಿಸುತ್ತಾರೆ. ದೇವಾಲಯದ ನಿರಾಕರಣೆಯ ಮೂಲಕ ಅನೇಕ ಸಮಸ್ಯೆಗಳನ್ನು ಶರಣರು ಬಗೆಹರಿಸಿದರು. ದೇವಾಲಯ ಶ್ರೇಷ್ಠ, ಈ ದೇಹ ಕನಿಷ್ಠವೆಂಬ ಭಾವನೆ ಇದರಿಂದ ಹೊರಟುಹೋಯಿತು. ದೇಹ ನಶ್ವರವೆಂಬ ಆತಂಕ ದೂರವಾಯಿತು. ತನ್ನ ತಾನರಿವ ಸಾಧನ ಈ ದೇಹವೆಂದು ತಿಳಿದಾಗ ಅದರ ಬಗೆಗೆ ಸ್ವಾಭಿಮಾನ ಹುಟ್ಟಿಕೊಂಡಿತು. ಪೂಜಾರಿ-ಪುರೋಹಿತರಿಂದ ನಡೆಯುತ್ತಿದ್ದ ಶೋಷಣೆಯಿಂದ ತಪ್ಪಿಸಿಕೊಂಡಂತಾಯಿತು. ಪುಣ್ಯಕ್ಷೇತ್ರಗಳಿಗೆ ತಿರುಗುವ, ಹುಚ್ಚರಂತೆ ಅಲೆಯುವ ಸ್ಥಿತಿ ತಪ್ಪಿತು. ದೇವರ ಹೆಸರಿನಲ್ಲಿ ಕೆಲಸಬಿಟ್ಟು ದೇವಾಲಯಗಳನ್ನು ಸುತ್ತುವ ಸಮಯ ಉಳಿಯಿತು. ಹೀಗೆ ಸ್ಥಾವರ ದೇವಾಲಯಗಳಿಂದ ಹೊರಬಂದ ಜನತೆಗೆ ಅನೇಕ ಲಾಭಗಳಾದವು. ಚಾತುರ್ವರ್ಣ ವ್ಯವಸ್ಥೆ ಉಳಿಯಲು, ಪುರೋಹಿತಶಾಹಿ ಬೆಳೆಯಲು, ಬಡವರ ಶೋಷಣೆ ಹೆಚ್ಚಿಸಲು ದೇವಾಲಯಗಳು ಮುಖ್ಯಕಾರಣವಾಗಿದ್ದವು. ಇಂತಹ ಸ್ಥಾವರ ದೇವಾಲಯಗಳನ್ನು ನಿರಾಕರಿಸುವುದರ ಮೂಲಕ ಶರಣರು ಕ್ರಾಂತಿಕಾರಕ ನಿರ್ಣಯಗಳನ್ನು ಕೈಕೊಂಡರು.

ಶರಣರು ಯಾವಾಗ ದೇವಾಲಯವನ್ನು ಅದರೊಳಗಿರುವ ಸ್ಥಾವರಲಿಂಗವನ್ನು ನಿರಾಕರಿಸಿದರೋ, ಆಗ ಅವರು ಪರ್ಯಾಯ ವ್ಯವಸ್ಥೆ ಮಾಡಿದರು. ದೇಹ ದೇಗುಲವಾದಾಗ, ಸ್ಥಾವರಲಿಂಗದ ಜಾಗದಲ್ಲಿ ಇಷ್ಟಲಿಂಗ ವರ್ಗಾವಣೆಗೊಂಡಿತು. ದೇವಾಲಯವಿಲ್ಲ, ದೇವರಿಲ್ಲ ಎಂದು ಈ ಹಿಂದೆಯೇ ಚಾರ್ವಾಕರು ಹೇಳಿದ್ದರು. ದೇವರು ತಮ್ಮ ಬಳಿಯಿದ್ದಾನೆಂದು ಪುರೋಹಿತರು ದೇವರ ಹೆಸರು ಹೇಳಿ ವ್ಯಾಪಾರ ಪ್ರಾರಂಭಿಸಿದ್ದರು. ಏಕಕಾಲಕ್ಕೇ ಶರಣರು ಚಾರ್ವಾಕರಿಗೆ ಮತ್ತು ಪುರೋಹಿತರನ್ನು ದೂರವಿಟ್ಟರು. ದೇವರನ್ನು ಕಾಣಲು ಪೂಜಾರಿ-ಪುರೋಹಿತನೆಂಬ ದಲ್ಲಾಳಿಯೇಕೆ? ಎಂದು ನೇರವಾಗಿ ಪ್ರಶ್ನಿಸಿದರು.
ಸ್ಥಾವರಲಿಂಗವನ್ನು ಶತಮಾನಗಳಿಂದ ಪೂಜೆಸುತ್ತಾ ಬಂದಿದ್ದ ಜನತೆಗೆ ದೇವರೇ ಇಲ್ಲವೆಂದು ಹೆದರಿಸಲಿಲ್ಲ, ಬದಲಾಗಿ ಪರ್ಯಾಯ ಮಾರ್ಗವನ್ನು ಹುಡುಕಿದರು. ಸ್ಥಾವರಲಿಂಗ, ಪೂಜೆಯ ಬದಲು ತನ್ನತಾನರಿಯುವ ಇಷ್ಟಲಿಂಗ ಸಾಧನ ಕೊಟ್ಟರು. ದೇಹ ದೇವಾಲಯವಾದಾಗ, ಸ್ಥಾವರಲಿಂಗದ ಪೂಜೆ ನಿಂತುಹೋಗಿ ಇಷ್ಟಲಿಂಗದ ನಿಜಪೂಜೆ ಪ್ರಾರಂಭವಾಯಿತು. ಆಗ ಸಹಜವಾಗಿಯೇ ಪೂಜಾರಿಗಳು-ಪುರೋಹಿತರು ವಚನಚಳವಳಿಯ ವಿರುದ್ಧ ಕೆಲಸ ಮಾಡಿದರು. ಪುರೋಹಿತಶಾಹಿ ವ್ಯವಸ್ಥೆ ಪೂಜೆಯನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿತ್ತು. ಶರಣರು ಬಂದು ಕಾಯಕವನ್ನೇ ಪೂಜೆಯನ್ನಾಗಿ ಪರಿವರ್ತಿಸಿದರು.

ಈ ದೇಶ ವ್ಯವಸ್ಥೆಯಲ್ಲಿ ಎಷ್ಟೊಂದು ಅಸಮಾನತೆ ಇತ್ತೆಂದರೆ ಜಾತಿ ಅಸಮಾನತೆ-ವರ್ಗ ಅಸಮಾನತೆ-ಲಿಂಗ ಅಸಮಾನತೆಯ ಜತೆಗೆ ಅಂಗ ಅಸಮಾನತೆಯೂ ಇತ್ತು. ಒಂದೇ ದೇಹದ ಅಂಗಾಂಗಗಳಲ್ಲಿ ಪುರೋಹಿತಶಾಹಿ ವ್ಯವಸ್ಥೆ ಅಸಮಾನತೆಯನ್ನು ಹುಟ್ಟು ಹಾಕಿತ್ತು. ಒಂದೇ ದೇಹದಲ್ಲಿ ಬಲಗೈ ಶ್ರೇಷ್ಠ-ಎಡಗೈ ಕನಿಷ್ಠ, ಬಲಗಾಲು ಶ್ರೇಷ್ಠ-ಎಡಗಾಲು ಕನಿಷ್ಠ ಎಂಬಂತಹ ಮೌಢ್ಯತೆ ಜನತೆಯಲ್ಲಿ ಮನೆಮಾಡಿಕೊಂಡಿತ್ತು. ಪೂಜೆ ಮಾಡಲು, ಪ್ರಸಾದ ಪಡೆಯಲು ಬಲಗೈಯನ್ನೇ ಬಳಸಬೇಕೆಂಬ ನಿಯಮವಿತ್ತು. ಇಂತಹ ನಿಯಮವನ್ನು ಕಿತ್ತೊಗೆದ ಶರಣರು ಎಡಗೈಯಲ್ಲಿ ಲಿಂಗಕೊಟ್ಟರು. ಇದು ಪೂಜಾವಿಧಾನದಲ್ಲಿ ಶರಣರು ಮಾಡಿದ ಕ್ರಾಂತಿಕಾರಕ ಬದಲಾವಣೆಯೆನ್ನಬಹುದಾಗಿದೆ. ಹೀಗೆ ಇಷ್ಟಲಿಂಗ ಕೊಡುವ ಮೂಲಕ ಬಹುದೇವೋಪಾಸನೆಯನ್ನು ತಪ್ಪಿಸಿದರು. ಎಡಗೈಯಲ್ಲಿ ಲಿಂಗವನ್ನು ಕೊಡುವ ಮೂಲಕ ಮೌಢ್ಯತೆಯನ್ನು ಮುರಿದು ಹಾಕಿದರು, ಕೊರಳಲ್ಲಿಯೇ ಇಷ್ಟಲಿಂಗ ಬಂದದ್ದರಿಂದ ಪೂಜಾರಿ-ಪುರೋಹಿತರು ದೂರ ಸರಿದರು. ಇಷ್ಟಲಿಂಗದ ಮೂಲಕ ಶರಣರು ಹೀಗೆ ಕ್ರಾಂತಿಯನ್ನೇ ಹುಟ್ಟುಹಾಕಿದರು. ಯಾವುದೇ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಇಷ್ಟಲಿಂಗ ಪಡೆಯುವ ಅಧಿಕಾರ ಹೊಂದಿದ್ದನು. ಇಷ್ಟಲಿಂಗ ಕಟ್ಟಿಕೊಂಡೂ, ಬಹುದೇವೋಪಾಸನೆ ಮಾಡಿದ, ಸ್ಥಾವರಲಿಂಗಕ್ಕೆ ಪೂಜೆಮಾಡಿದ ಭಕ್ತರನ್ನು ಶರಣರು ನೇರವಾಗಿ ವಿಡಂಬಿಸಿದರು.

ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆ ಅಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ
ಮೆಟ್ಟಿದ್ದ ಎಡದ ಪಾದರಕ್ಷೆಯ ತೆಗೆದುಕೊಂಡು
ಲಟಲಟನೆ ಹೊಡೆಯೆಂದಾತ ಅಂಬಿಗರ ಚೌಡಯ್ಯ.
-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:93, 1993)

ಅಂಬಿಗರ ಚೌಡಯ್ಯನವರ ಈ ವಚನ ಕೇಳುಗರ ಕಿವಿಗೆ ಕರ್ಕಶವೆನಿಸಿದರೂ ಅದು ಆ ಕಾಲಘಟ್ಟದ ಅನಿವಾರ್ಯತೆಯಾಗಿತ್ತು. ಚೌಡಯ್ಯನಂತಹ ಶರಣರು ಹೀಗೆ ಶರಣರ ತತ್ವಗಳಿಗೆ ಬದ್ಧರಾಗದೇ ಹೋಗಿದ್ದರೆ, ಶೈವರಿಗೂ-ಶರಣರಿಗೂ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ.

“ಹಿಡಿದ ಇಷ್ಟಲಿಂಗವ ಬಿಟ್ಟು ಗುಡಿಯಲಿಂಗಕ್ಕೆ ಶರಣೆಂಬ
ಲೊಟ್ಟೆಗುಡಿಹಿಗಳನೇನೆಂಬೆನಯ್ಯ ಕಲಿದೇವರದೇವಾ”
-ಮಡಿವಾಳ ಮಾಚಿದೇವ (ಸ.ವ.ಸಂ.8, ವ:781, 1993)

ಎನ್ನುವ ಮಾಚಿದೇವರು ಗುಡಿಗೆ ಹೋಗುವ ಭಕ್ತರನ್ನು ಅಪ್ರಮಾಣಿಕರು ಎಂದು ವಿಡಂಬಿಸಿದ್ದಾರೆ. ದೇಹದೊಳಗೇ ದೇವಾಲಯವಿರುವಾಗ ಬೇರೆ ದೇವಾಲಯವೇಕಯ್ಯಾ ಎಂದು ಅಲ್ಲಮಪ್ರಭು ಕೇಳುತ್ತಾರೆ. ಹೀಗೆ ದೇಹವೇ ದೇವಾಲಯವಾದಾಗ, ಒಳಗಿನ ಪೂಜೆ ಹೇಗೆ ನಡೆಯುತ್ತದೆಂಬುದನ್ನು ಉರಿಲಿಂಗಪೆದ್ದಿ ಕುತೂಹಲಕಾರಿಯಾಗಿ ಹೇಳಿದ್ದಾರೆ. ಇದು ಶರಣರ ನಿಜಪೂಜೆ.

ಎನ್ನಂಗದಲ್ಲಿ ನಿನಗೆ ಮಜ್ಜನ
ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ
ಎನ್ನ ತುರುಬಿನಲ್ಲಿ ನಿನಗೆ ಕುಸುಮ ಪೂಜೆ
ಎನ್ನ ನೇತ್ರದಲ್ಲಿ ನಿನಗೆ ವಿಚಿತ್ರ ವಿನೋದ
ಎನ್ನ ಶ್ರೋತ್ರದಲ್ಲಿ ನಿನಗೆ ಪಂಚವಾದ್ಯ ಕೇಳಿಕೆ
ಎನ್ನ ನಾಶಿಕದಲ್ಲಿ ನಿನಗೆ ಸುಗಂಧ ಪರಿಮಳ
ಎನ್ನ ಜಿಹ್ವೆಯಲ್ಲಿ ಷಡ್ರಸಾನ್ನ ನೈವೇದ್ಯ
ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಲಂಕಾರ ಪೂಜೆ
ಎನ್ನ ಸಚ್ಚಿದಾನಂದ ಸೆಜ್ಜೆಗೃಹದಲ್ಲಿ
ನೀನು ಸ್ಪರ್ಷಗೈದು ನೆರೆದಿಪ್ಪೆಯಾಗಿ ನೀನಾನೆಂದೆರಡಳಿದು
ತಾನು ತಾನಾದ ಘಟವನೇನೆಂಬೆನು
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.
-ಉರಿಲಿಂಗಪೆದ್ದಿ (ಸ.ವ.ಸಂ6, ವ:1330, 1993)

ಈ ವಚನದಲ್ಲಿ ದೇಹ ದೇವಾಲಯವಾದಾಗ ಎಂತಹ ಬದಲಾವಣೆಯಾಗುತ್ತದೆಂಬುದನ್ನು ತಿಳಿಸಲಾಗಿದೆ.
ಬೇರೆ ಬೇರೆ ದೇವಾಲಯಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಹೋಗುವವರನ್ನು ಕಂಡು ಅಂಬಿಗರ ಚೌಡಯ್ಯ ತಮ್ಮ ಇನ್ನೊಂದು ವಚನದಲ್ಲಿ ಕಟುವಾಗಿ ವಿಡಂಬಿಸಿದ್ದಾರೆ.

ಕಾಶಿಯಾತ್ರೆಗೆ ಹೋದೆವೆಂಬ
ಹೇಸಿಮೂಳರ ಮಾತ ಕೇಳಲಾಗದು
ಕೇದಾರಕ್ಕೆ ಹೋದೆವೆಂಬ
ಹೇಸಿಹೀನರ ನುಡಿಯನಾಲಿಸಲಾಗದು
ಸೇತುಬಂಧ ರಾಮೇಶ್ವರಕ್ಕೆ ಹೋದೆವೆಂಬ
ಸರ್ವಹೀನರ ಮುಖವ ನೋಡಲಾಗದು
ಪರ್ವತಗಳಿಗೆ ಹೋದೆವೆಂಬ
ಪಂಚಮಹಾಪಾತಕರ ಮುಖವ ನೋಡಲಾಗದು…
-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:101, 1993)

ದೇಹವೆಂಬ ದೇವಾಲಯ ಬಿಟ್ಟು ಅನ್ಯ ದೇವಾಲಯಕ್ಕೆ ಹೋಗಬಾರದೆಂದು ಶರಣಧರ್ಮ ಹೇಳಿದರೂ ಆ ಕಾಲದಲ್ಲಿಯೂ ಜನ ಕೇಳುತ್ತಿರಲಿಲ್ಲ. ಬಹುದೇವೋಪಾಸನೆಯ ನೆಲೆಬೀಡಾದ ಕರ್ನಾಟಕದಲ್ಲಿ ಬದಲಾವಣೆ ಅಷ್ಟು ಸುಲಭವಾಗಿರಲಿಲ್ಲ. ಮತ್ತೆ ಮತ್ತೆ ಹೀಗೆ ದೇವಾಲಯಗಳಿಗೆ- ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತರನ್ನು ನೋಡಿ ಚೌಡಯ್ಯನಂತಹ ಬದ್ಧತೆಯುಳ್ಳ ಶರಣರಿಗೆ ಸಹಿಸಲಿಕ್ಕಾಗಲಿಲ್ಲ. ಅಂತಯೇ ಆತ ಇಂತವರನ್ನು ಹೇಸಿಮೂಳರು, ಹೇಸಿಹೀನರು, ಸರ್ವಹೀನರು, ಪಂಚ ಮಹಾಪಾತರೆಂದು ಕರೆದಿದ್ದಾರೆ. ಕಾಯವೇ-ಕಾಶಿಯಾಗಿರುವಾಗ, ಒಡಲೇ-ಕೇದಾರವಾಗಿರುವಾಗ, ಹಸ್ತವೇ-ರಾಮೇಶ್ವರವಾಗಿರುವಾಗ, ಶಿರವೇ-ಶ್ರೀಶೈಲ ಪರ್ವತವಾಗಿರುವಾಗ ಮತ್ತೇಕೆ ಪುಣ್ಯಕ್ಷೇತ್ರಗಳಿಗೆ ಹೋಗುವುದು? ಹೋಗಿ ಹಣವನ್ನೇಕೆ ವ್ಯಯ ಮಾಡುವುದು? ಎಂದು ಕೇಳಿದ್ದಾರೆ. ಇಂತವರನ್ನೆಲ್ಲಾ ಕತ್ತೆಮೂಳರು-ನೀಚಮೂಳರು ಎಂದು ಚೌಡಯ್ಯ ವಿಡಂಬಿಸಿದ್ದಾರೆ.

ನಿಜವಾದ ಶರಣನಿಗೆ ತನುವೇ ಬ್ರಹ್ಮ, ಜ್ಮಾನವೇ ಆತ್ಮವೆಂದು ಸಿದ್ಧರಾಮ ವಚನವೊಂದರಲ್ಲಿ ಹೇಳಿದ್ದಾರೆ. ತನುವಿನಲ್ಲಿರುವ, ಮನದಲ್ಲಿ ಮನೆಮಾಡಿಕೊಂಡಿರುವ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳೆಂಬ ವೈರಿಗಳನ್ನು ಹೊರಗೆ ಹಾಕಿದಾಗ ಮಾತ್ರ ದೇಹ-ದೇವಾಲಯವಾಗುತ್ತದೆಂದು ಶರಣರು ಸ್ಪಷ್ಟಪಡಿಸಿದರು, ಇಂತಹ ವಿಷಯಂಗಳ ಒಳಗಿಟ್ಟುಕೊಂಡು ಪೋಷಿಸಿದರೆ ದೇಹವು ಮೂಳೆಮಾಂಸದ ತಡಿಕೆಯಾಗುತ್ತದೆ. ಅವುಗಳನ್ನೆಲ್ಲಾ ಹೊರಗೆ ಹಾಕಿ ಸದ್ಗುಣಗಳನ್ನು ಬೆಳೆಸಿಕೊಂಡಾಗ ಈ ದೇಹವೇ ದೇವಾಲಯವಾಗುತ್ತದೆ.

ದೇವಾಲಯಗಳು ಮುಗ್ಧ ಭಕ್ತರ ಶೋಷಣೆಯ ಕೇಂದ್ರಗಳಾಗಿದ್ದಂತಹ ಸಂದರ್ಭದಲ್ಲಿ ಶರಣರು ಅವರಿಗಾಗಿ ಪರ್ಯಾಯ ದೇವಾಲಯಗಳನ್ನು ಕಟ್ಟಿಸದೆ; ಇದ್ದ ದೇವಾಲಯಗಳಿಗೆ ಪ್ರವೇಶ ಕೊಡಿಸಲು ಹೋಗದೆ; ಪ್ರತಿಯೊಬ್ಬರೂ ತಮ್ಮ ತಮ್ಮ ದೇಹಗಳನ್ನೇ ದೇವಾಲಯಗಳನ್ನಾಗಿ ಮಾಡಿಕೊಳ್ಳುವ ಮಾರ್ಗ ತೋರಿಸಿದರು. ಭಾರತದಂತಹ ಧರ್ಮಗಳ ಬೀಡಾದ ದೇಶದಲ್ಲಿ, ದೇವಾಲಯಗಳ ಕೇಂದ್ರವಾಗಿರುವ ನಾಡಿದಲ್ಲಿ ಹೀಗೆ ಏಕಾಏಕಿ ದೇವಾಲಯಗಳನ್ನು ನಿಷೇಧಿಸಿದ್ದು ಶರಣರ ಬಹುದೊಡ್ಡ ಕ್ರಾಂತಿಯಾದಾರೂ, ಜನರು ಅವರ ಮಾತುಗಳನ್ನು ಕೇಳಲಿಲ್ಲವೆಂಬುದು ಅಷ್ಟೇ ಸತ್ಯ. ಇಂದು ಓಣಿಗೊಂದು ದೇವಾಲಯ, ಊರಿಗೊಬ್ಬ ಜಗದ್ಗುರು ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಶರಣರ ದೇವಾಲಯದ ಪರಿಕಲ್ಪನೆ ಮತ್ತೆ ಪ್ರಸ್ತುತವೆನಿಸುತ್ತದೆ.

ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ?
ಎರಡಕ್ಕೆ ಹೇಳಲಿಲ್ಲಯ್ಯಾ
ಗುಹೇಶ್ವರಾ ನೀನು ಕಲ್ಲಾದಡೆ ಏನೆಪ್ಪೆನು?
-ಅಲ್ಲಮಪ್ರಭು (ಸ.ವ.ಸಂ2, ವ:213)

“ದೇಹವೇ ದೇಗುಲ” ವೆಂದು ಬಸವಣ್ಣ ಹೇಳಿದರೆ, “ದೇಹದೊಳಗೆ ದೇವಾಲಯವಿದೆ” ಎಂದು ಅಲ್ಲಮಪ್ರಭು ಹೇಳಿದ್ದಾರೆ. ಹೀಗೆ ದೇಹದೊಳಗೆ ದೇವಾಲಯವಿದ್ದಾಗ ಮತ್ತೆ ಬೇರೆ ದೇವಾಲಯವೇಕೆ ಬೇಕೆಂದು ಪ್ರಶ್ನಿಸಿದ್ದಾರೆ. ಪ್ರಭು ಇಲ್ಲಿ ಸ್ವತಃ ಗುಹೇಶ್ವರನನ್ನೇ ಪ್ರಶ್ನಿಸುತ್ತಿದ್ದಾರೆ. “ಗುಹೇಶ್ವರಾ ನೀನೇ ಕಲ್ಲಾದರೆ ಹೇಗೆ?” ಈ ಪ್ರಶ್ನೆಯಲ್ಲಿ ಅನೇಕ ಅರ್ಥಗಳಿವೆ. ಅಂದರೆ ದೇವರು ಸ್ಥಾವರವಲ್ಲ, ಗುಹೇಶ್ವರ ಸ್ಥಾವರನಲ್ಲ, ನಿಜವಾದ ಗುಹೇಶ್ವರ ದೇಹವೆಂಬ ದೇವಾಲಯದಲ್ಲಿದ್ದಾನೆ. ನಿತ್ಯವೂ ಸಂಚರಿಸುವ ಜಂಗಮನಾಗಿದ್ದಾನೆ. ಹೀಗೆ ಅಲ್ಲಮ ಕೂಡಾ ದೇಹವೇ ದೇಗುಲವಾಗಿದೆಯೇ ಹೊರತು, ಲಿಂಗಾಯತರಿಗೆ ಬೇರೆ ದೇವಾಲಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಕ್ಷೇತ್ರ ತೀರ್ಥಕ್ಕೆ ಹೋಗಲೇಕಯ್ಯ?
ಅಂಗದ ಮೇಲಣ ಲಿಂಗ ಕಲ್ಲತಾಗಿದರೆ
ಆವುದ ಘನವೆಂಬೆನಾವುದ ಕಿರಿದೆಂಬೆ!
ತಾಳ ಸಂಪುಟಕ್ಕೆ ಬಾರದ ಘನವನರಿಯದೆ ಕೆಟ್ಟರು
ಜಂಗಮದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರಮುಟ್ಟಿ ಪಾವನ
ಹತ್ತಿರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯಾ! ಕೂಡಲಚೆನ್ನಸಂಗಯ್ಯಾ.
-ಚೆನ್ನಬಸವಣ್ಣ (ಸ.ವ.ಸಂ.3, ವ:78)

ಅಂಗದ ಮೇಲೆ ಲಿಂಗವಿದ್ದ ಬಳಿಕ ಕ್ಷೇತ್ರತೀರ್ಥದ ಅಗತ್ಯವಿಲ್ಲ. ತನ್ನಲ್ಲಿದ್ದ ಲಿಂಗವ ಹುಸಿಮಾಡಿ ದೂರದಲ್ಲಿರುವ ಸ್ಥಾವರಲಿಂಗಕ್ಕೆ ನಮಸ್ಕರಿಸುವವರನ್ನು ವ್ರತಗೇಡಿಗಳೆನ್ನುತ್ತಾರೆ ಚೆನ್ನಬಸವಣ್ಣ.

ದೇಹವೆಂಬ ದೇವಾಲಯದಲ್ಲಿ
ದೇವಾಲಯದವರ ಮೂವರು ಮಂದಿಯ ಕಾಣದೆ
ಕಂಗೆಟ್ಟಿದ್ದೇವೆ ಗುರುವೆ.
ದೇಗುಲದೊಡೆಯರ ಕರೆತಂದು ದೇವಾಲಯದಂತುವ ತೋರಾ
ಕಪಿಲಸಿದ್ಧ ಮಲ್ಲಿನಾಥಯ್ಯಾ.
-ಸಿದ್ಧರಾಮ (ಸ.ವ.ಸಂ.4, ವ:492)

ಸಿದ್ಧರಾಮರೂ ದೇಹವೇ ದೇಗುಲವೆಂದು ಒಪ್ಪಿಕೊಳ್ಳುತ್ತಲೇ ಆ ದೇವಾಲಯದಲ್ಲಿ ಗುರು-ಲಿಂಗ-ಜಂಗಮರೆಂಬ ಮೂರು ಮಂದಿ ಇದ್ದಾರೆನ್ನುತ್ತಾರೆ. ಗುರು-ಲಿಂಗ-ಜಂಗಮ ಮೂರ್ತರೂಪಗಳಾದರೆ ಅರಿವು-ಆಚಾರ-ಅನುಭಾವ ಈ ಮೂರೂ ಅಮೂರ್ತಗಳಾಗಿವೆ. ಈ ಮೂರು ಅಮೂರ್ತಗಳು ದೇಹವೆಂಬ ದೇವಾಲಯದಲ್ಲಿವೆ. ಇವುಗಳನ್ನು ಕಾಣಬೇಕಾದರೆ ಸಾಧನೆ ಬಹುಮುಖ್ಯವಾಗುತ್ತದೆ.

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು
ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು
ನೆನಹಿನ ವ್ಯಾಪ್ತಿ ಬಿಡದು
ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು
ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ
ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ”
-ಅಕ್ಕಮಹಾದೇವಿ (ಸ.ವ.ಸಂ.5, ವ:241)

ದೇಹವು ದೇವಾಲಯವಾಗಬೇಕಾದರೆ ನಿರಂತರ ಸಾಧನೆ ಮಾಡಬೇಕಾಗುತ್ತದೆ. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ತುಂಬಿಕೊಂಡವರ ದೇಹಗಳು ಎಂದಿಗೂ ದೇವಾಲಯಗಳಾಗುವದಿಲ್ಲವೆಂದು ಅಕ್ಕಮಹಾದೇವಿ ಹೇಳಿದ್ದಾರೆ. ದೇಹವೆಂದಾಕ್ಷಣ, ನಾಚಿಕೆ, ಅಹಂಕಾರ, ಹಮ್ಮುಬಿಮ್ಮು, ಇವೆಲ್ಲ ಇದ್ದದ್ದೆ. ಆದರೆ ಇವುಗಳನ್ನು ಬಿಡದ ಹೊರತು ದೇಹವು ದೇವಾಲಯವಾಗುವದಿಲ್ಲ. ದೇಹವು ದೇವಾಲಯವಾಗಬೇಕಾದರೆ ಸೈದ್ಧಾಂತಿಕ ಬದ್ಧತೆ ಬೇಕು. ಮನಸ್ಸು-ಭಾವನೆ ಶುದ್ಧವಿದ್ದಾಗ ತನು ಶುದ್ಧವಾಗುತ್ತದೆ. ನಡೆ-ನುಡಿ ಒಂದಾದಾಗ ದೇಹ ಶುದ್ಧವಾಗುತ್ತದೆ. ಹೀಗೆ ದೇಹಶುದ್ಧವಾದವರು ಸಿಗುವುದು ತುಂಬ ವಿರಳವೆಂದು ಅಕ್ಕ ಮತ್ತೊಂದು ವಚನದಲ್ಲಿ ಹೇಳಿದ್ದಾರೆ.

ತನುವಿಂಗೆ ಕ್ರೀ, ಆತ್ಮಂಗೆ ವ್ರತ
ಆ ವ್ರತಕ್ಕೆ ನಿಶ್ಚಯ ಕರಿಗೊಂಡು
ಬಾಹ್ಯದ ಕ್ರೀ, ಅರಿವಿನ ಆಚರಣೆ
ಭಾಷೆ ಓಸರಿಸದೆ ನಿಂದಾತನೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು”
-ಅಕ್ಕಮ್ಮ (ಸ.ವ.ಸಂ.5, ವ:493)

ಅಕ್ಕಮ್ಮ ಕ್ರಿಯೆಗೆ ಮತ್ತು ವ್ರತಕ್ಕೆ ಮಹತ್ವ ನೀಡಿದ್ದಾರೆ. ತನು ಮಾಡುವ ಕ್ರಿಯೆ ಬಹಳ ಮಹತ್ವದ್ದಾಗಿದೆ. ತನು ಒಳ್ಳೆಯ ಕ್ರಿಯೆಯಲ್ಲಿ ತೊಡಗಬೇಕಾದರೆ, ನೈತಿಕ ವ್ರತಬದ್ಧತೆ ಇರಬೇಕಾಗುತ್ತದೆ. ಹಾಗೆ ವ್ರತಬದ್ಧತೆ ಬಂದಾಗ, ತನುವಿನ ಕ್ರಿಯೆ ಸತ್ಕ್ರಿಯೆಯಾಗುತ್ತದೆ. ಆಗ ಆಚಾರವೇ ಪ್ರಾಣಲಿಂಗವಾಗುತ್ತದೆ. ನಡೆ-ನಡಿ ಒಂದಾಗುತ್ತದೆ. ದೇಹ ದೇವಾಲಯವಾಗುತ್ತದೆ. ಅಕ್ಕಮ್ಮ ತನ್ನ ವಚನಗಳಲ್ಲಿ ವ್ರತದ ಬಗೆಗೆ ವಿವರವಾಗಿ ಹೇಳಿದ್ದಾರೆ. ವ್ರತ ಎಂದರೆ ಇಲ್ಲಿ ಸಾಂಪ್ರದಾಯಿಕ ಮಡಿ-ಮೈಲಿಗೆಗಳಲ್ಲ, ವ್ರತವೆಂದರೆ ಶರಣಸಿದ್ಧಾಂತಗಳ ಬದ್ಧತೆ. ಇಂತಹ ಬದ್ಧತೆಯನ್ನೇ ಅಕ್ಕಮ್ಮ ವ್ರತವೆನ್ನುತ್ತಾರೆ.

ತನುವ ಕರಗಿಸಿ, ಹರಿವ ಮನವ ನಿಲಿಸಿ
ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ
ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣನ
ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?
-ಹಡಪದ ಲಿಂಗಮ್ಮ (ಸ.ವ.ಸಂ.5, ವ:253)

ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ಈ ವಚನದಲ್ಲಿ ದೇಹ ದೇಗುಲವಾಗಬೇಕಾದರೆ ಏನು ಮಾಡಬೇಕಾಗುತ್ತದೆಂಬುದನ್ನು ಸೂಚಿಸಿದ್ದಾರೆ. ಮೊದಲು ತನುವನ್ನು ಕರಗಿಸಬೇಕು. ತನುವನ್ನು ಕರಗಿಸುವದೆಂದರೆ ಡಯಟ್ ಮಾಡಿ ತೆಳ್ಳಗಾಗಿಸುವದಲ್ಲ. ತನು ಕರಗಬೇಕಾದರೆ ನಿತ್ಯ ಕಾಯಕ ಮಾಡಬೇಕು. ಕಾಯಕದಿಂದ ತನು ಕರಗುತ್ತದೆ, ದಾಸೋಹದಿಂದ ಮನಸ್ಸು ದೊಡ್ಡದಾಗುತ್ತದೆ. ಆಗ ದೇಹದಲ್ಲಿ ಅಂಗಗುಣವಳಿದು ಲಿಂಗಗುಣವಳವಡುತ್ತದೆ. ಆಗ ಭಾವವಳಿದು ಬಯಕೆ ಸವೆದು ಭಕ್ತನಾದವ ಶರಣನಾಗುತ್ತಾನೆ. ಇಂತಹ ಶರಣರ ಮಹಾತ್ಮೆಯನ್ನು ಈ ಜಗದ ಜನಸಾಮಾನ್ಯರೆತ್ತಬಲ್ಲರೆಂದು ಲಿಂಗಮ್ಮ ಕೇಳುತ್ತಾರೆ. ಅಂದರೆ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಳ್ಳುವುದು ಅಷ್ಟು ಸುಲಭವಾದದ್ದಲ್ಲ. ಶರಣರು ಮಾತ್ರ ತಮ್ಮ ಸಾಧನೆಯಿಂದ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡಿದ್ದಾರೆಂದು ಲಿಂಗಮ್ಮ ಹೇಳುತ್ತಾರೆ.

ಲಿಂಗಮ್ಮ ಇನ್ನೊಂದು ವಚನದಲ್ಲಿ “ತನುವೆಂಬ ರಾಜ್ಯಕ್ಕೆ ಮನವೆಂಬ ಅರಸ” ಎಂದು ಹೇಳಿದ್ದಾರೆ. ಈ ಅರಸನಿಗೆ ನೋಟ-ಬೇಟವೆಂಬರಡು ಕಣ್ಣುಗಳಿವೆ. ಅಷ್ಟಮದಗಳು ದೇಹದ ತುಂಬ ತುಂಬಿಕೊಂಡಿದೆ. ಷಡ್‍ವೈರಿಗಳು ಅಟ್ಟಹಾಸ ಮಾಡುತ್ತಲಿವೆ. ಇಂತಹ ದೇಹ ಎಂದಿಗೂ ದೇವಾಲಯವಾಗುವದಿಲ್ಲವಾದ್ದರಿಂದ ದೇಹವನ್ನು ದೇವಾಲಯನ್ನಾಗಿಸಿಕೊಳ್ಳುವುದು ಸುಲಭದ ಮಾರ್ಗವಲ್ಲವೆಂದು ಶರಣರು ತಿಳಿಸಿದ್ದಾರೆ. ದೇಹದಲ್ಲಿರುವ ಮಲ-ಮೂತ್ರಗಳು ಸಹಜವಾದಂತವುಗಳು, ಅವು ನಿತ್ಯ ಹೊರಹೋಗಿ ದೇಹ ಸ್ವಚ್ಛವಾಗುತ್ತದೆ. ಆದರೆ ಅಷ್ಟಮದ-ಷಡ್‍ವೈರಿಗಳೆಂಬ ಮಲತ್ರಯಗಳು ಕೆಟ್ಟವುಗಳು. ಇಂತಹ ಕೆಟ್ಟ ಮಲಮೂತ್ರಗಳನ್ನು ಕಳೆದುಕೊಳ್ಳದ ಹೊರತು ದೇಹ ಶುದ್ಧವಾಗಲಾರದು, ಶುದ್ಧವಾಗದ ದೇಹವು ದೇವಾಲಯವಾಗಲಾರದು.

ಶರಣರು ‘ದೇಹವೇ ದೇಗುಲ’ ವೆಂದು ಹೇಳುವದರ ಜತೆಗೆ, ಆ ದೇಹವನ್ನು ಹೇಗೆ ದೇವಾಲಯವನ್ನಾಗಿ ಮಾಡಿಕೊಳ್ಳಬೇಕೆಂಬುದರ ಬಗೆಗೆ ವಿವರವಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಅಷ್ಟಾವರಣ-ಷಟ್‍ಸ್ಥಲ-ಪಂಚಾಚಾರದಂತಹ ಸಿದ್ಧಾಂತಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿದ್ಧಾಂತಗಳನ್ನು ಕ್ರಿಯಾರೂಪಕ್ಕೆ ತಂದಾಗ ದೇಹವು ದೇವಾಲಯವಾಗುತ್ತದೆ. ಕಾಯಕ-ದಾಸೋಹ-ಸಮಾನತೆಯಂತಹ ಸಾಮಾಜಿಕ ಸಿದ್ಧಾಂತಗಳನ್ನು ಒಪ್ಪಿಕೊಂಡರೆ ಜೀವ ಶಿವನಾಗುತ್ತಾನೆ. ಹೀಗೆ ಲಿಂಗಾಯತರ ದೇವಾಲಯದ ಪರಿಕಲ್ಪನೆ ತುಂಬ ವಿಶಿಷ್ಟವಾದುದಾಗಿದೆ. ಹೊರಗಿನ ದೇವಾಲಯಗಳಿಗೆ ಪುಣ್ಯಕ್ಷೇತ್ರಗಳಿಗೆ ಹೋಗುವದು ಸುಲಭ. ಆದರೆ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳುವದು ಕಷ್ಟ. ಇದು ಶರಣರಿಗೆ ಮಾತ್ರ ಸಾಧ್ಯ.

Previous post ಮೊಟ್ಟೆ- ಗೂಡು
ಮೊಟ್ಟೆ- ಗೂಡು
Next post ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)

Related Posts

ಸತ್ಯದ ಬೆನ್ನು ಹತ್ತಿ…
Share:
Articles

ಸತ್ಯದ ಬೆನ್ನು ಹತ್ತಿ…

April 29, 2018 Bayalu
ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಕಾಲ ಪ್ರಖರವಾದ ಬೆಂಕಿಯು ಬೂದಿಯೊಳಗೆ ಮುಚ್ಚಿದ್ದರೂ, ಬೂದಿಯನ್ನು ಸರಿಸಿದಾಗ ಮತ್ತೆ ಅಗ್ನಿಯು ಪ್ರಜ್ವಲಿಸುವುದು....
ಕರ್ತಾರನ ಕಮ್ಮಟ  ಭಾಗ-6
Share:
Articles

ಕರ್ತಾರನ ಕಮ್ಮಟ ಭಾಗ-6

December 22, 2019 ಮಹಾದೇವ ಹಡಪದ
ಯಾರ ಮುಖದಲ್ಲೂ ನಗುವಿಲ್ಲ, ಚಲುವಿಲ್ಲ, ಒಲವಿಲ್ಲವಾಗಿ ಯಾವ ಶರಣರ ವಿಧೇಯತೆಯೂ ಅಲ್ಲಿಲ್ಲವಾಗಿ ಬರೀ ಈಟಿ, ಗುರಾಣಿ, ಝಳಪಿಸುವ ಸುಳ್ಳಿಗತ್ತಿ, ಕಠಾರಿ, ಕಿರುಗತ್ತಿ, ಮೊನಚಾದ ಅಲಗು...

Comments 8

  1. ಶೋಭಾದೇವಿ, ಧಾರವಾಡ
    Jun 19, 2025 Reply

    ದೇಹ ದೇವಾಲಯ ತುಂಬಾ ಚೆನ್ನಾಗಿದೆ ಸರ್.

  2. ಚಂದ್ರಯ್ಯ ಮಠಪತಿ
    Jun 22, 2025 Reply

    ಈ ಲಿಂಗಾಯತರಿಗೆ ತಮ್ಮ ಸಂಸ್ಕೃತಿಯಲ್ಲದ ದೇವಸ್ಥಾನಗಳ ಮೇಲೆ ಯಾಕಿಷ್ಟು ಹುಚ್ಚು? ಇನ್ನು ಯಾವ ಮಾತುಗಳಲ್ಲಿ ಅವರಿಗೆ ಅರ್ಥಮಾಡಿಸಬೇಕು?

  3. ಮಹಾಂತೇಶ ನರಗುಂದ
    Jun 22, 2025 Reply

    ದೇವಾಲಯಗಳು ಅಂದಿಗೂ…. ಇಂದಿಗೂ…. ಎಂದೆಂದಿಗೂ… ಶೋಷಣೆಯ ಜಾಗಗಳೇ, ಅನುಮಾನವೇ ಇಲ್ಲ. ದೇಹ ದೇವಾಲಯದ ಮಹಾ ವಾಕ್ಯವನ್ನು ಅರಿತುಕೊಳ್ಳುವ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ಈ ಲೇಖನ 🙏

  4. ನಾಗಪ್ಪ ಕುಂದವಾಡ
    Jun 25, 2025 Reply

    ದೇವಾಲಯ ಸುತ್ತುವವರು ಎಲ್ಲೆಲ್ಲೊ ಇಲ್ಲಾ. ಇಲ್ಲೇ ನಮ್ಮ ಮನೆಯಲ್ಲೇ ಇದ್ದಾರೆ, ಇವರಿಗೆ ತಿಳಿ ಹೇಳುವುದು ಹೇಗೆ ಸರ್? ನಿಮ್ಮ ಲೇಖನ ಇಂಥವರ ಕಣ್ಣು ತೆರೆಸಲೆಂದು ಕೊಟ್ಟರೆ, ಓದಲೂ ತಯಾರಿಲ್ಲ.

  5. ಸರಸ್ವತಿ ಕಟ್ಟಿ
    Jul 1, 2025 Reply

    “ಅಂಗೈ ಮೇಲೆ ಲಿಂಗಪ್ಪ ಇರೋವಾಗ ಚಿಂತಿ ಯಾಕ?” ಅಂತ ನಮ್ಮ ಮುತ್ತಜ್ಜಿ ಯಾವಾಗಲೂ ಹೇಳೋರು. ಅವರೆಂದೂ ಗುಡಿ ಗುಂಡಾರ ಅಂತ ತಿರುಗಿದವರೇ ಅಲ್ಲಾ.

  6. ಪಂಚಾಕ್ಷರಿ ಬ್ರಹ್ಮಗಿರಿ
    Jul 4, 2025 Reply

    ದೇವಾಲಯಗಳು ಹೆಚ್ಚುತ್ತಿರುವ ದೇಶದಲ್ಲಿ ಶರಣರಿಗೆ ಜಾಗವಿದೆಯೇ? ಅದರಲ್ಲೂ ಲಿಂಗಾಯತರೇ ಗುಡಿಗುಂಡಾರಗಳಿಗೆ ಮುಗಿ ಬೀಳುವಾಗ ಯಾರಿಗೆ ಏನು ಹೇಳೋಕಾಗುತ್ತೆ ಸರ್?

  7. ಮಹೇಶ್
    Jul 4, 2025 Reply

    ದೇಹವೆಂಬ ದೇವಾಲಯ ಬಿಟ್ಟು ಅನ್ಯ ದೇವಾಲಯಕ್ಕೆ ಹೋಗಬಾರದೆಂದು ಶರಣಧರ್ಮ ಹೇಳಿದರೂ ಆ ಕಾಲದಲ್ಲಿಯೂ ಜನ ಕೇಳುತ್ತಿರಲಿಲ್ಲ. ಬಹುದೇವೋಪಾಸನೆಯ ನೆಲೆಬೀಡಾದ ಕರ್ನಾಟಕದಲ್ಲಿ ಬದಲಾವಣೆ ಅಷ್ಟು ಸುಲಭವಾಗಿರಲಿಲ್ಲ.- ಈ ಮಾತು ಇವತ್ತೂ ಅಕ್ಷರಶ ಸತ್ಯ. ಎಷ್ಟೇ ಕಠಿಣ ಮಾತುಗಳಲ್ಲಿ ಖಂಡಿಸಿದರೂ ದೇವಾಲಯಗಳನ್ನು ಬಿಡುವುದಿಲ್ಲ.

  8. ವಸಂತ ಕುಮಾರ
    Jul 9, 2025 Reply

    ಸುಂದರ ಜಗತ್ತೇ ಶಿವನ ಮಂದಿರ….

Leave a Reply to ಮಹೇಶ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ತಮ್ಮೊಳಗಿರ್ದ ಮಹಾಘನವನರಿಯರು
ತಮ್ಮೊಳಗಿರ್ದ ಮಹಾಘನವನರಿಯರು
May 8, 2024
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
Copyright © 2025 Bayalu