Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತನ್ನ ಪರಿ ಬೇರೆ…
Share:
Articles February 5, 2020 ಪ್ರೊ. ಎನ್ ರೇವಣಸಿದ್ದಪ್ಪ

ತನ್ನ ಪರಿ ಬೇರೆ…

ಈಳೆ ನಿಂಬೆ ಮಾವು ಮಾದಲಕೆ
ಹುಳಿನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯಾ?
ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ.
ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿಬೇರಾಗಿಹ ಹಾಗೆ,
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.

ಇದೊಂದು ಬಹುಮುಖ್ಯ ವಚನ. ಇಲ್ಲಿ ಅಕ್ಕ ಇಡೀ ವಿಶ್ವದ ಚಿತ್ರಣ ನೀಡಿದ್ದಾಳೆ. ಈ ಸಂದರ್ಭದಲ್ಲಿ “ವಿಜ್ಞಾನಿ ಮತ್ತು ದಾರ್ಶನಿಕ ಇಬ್ಬರ ಗುರಿಯೂ ಒಂದೇ” ಎನ್ನುವ ಮಾತು ನೆನಪಾಗುತ್ತದೆ. ಸೃಷ್ಟಿಯ ರಹಸ್ಯವನ್ನು ಕಾವ್ಯಾತ್ಮಕವಾಗಿ ತೆರೆದು ತೋರಿಸಿದ ಈ ವಚನದ ಆಳದಲ್ಲಿರುವ ಮರ್ಮವನ್ನು ತೋರಿಸುವುದು ಈ ಬರಹದ ಉದ್ದೇಶ.

ಜೀವಜಾಲದ ಮುಖ್ಯ ಸಾಮ್ರಾಜ್ಯಗಳು ಸಸ್ಯಲೋಕ ಮತ್ತು ಪ್ರಾಣಿಲೋಕ. ಇವೆರಡರ ಮೂಲ ಒಂದೇ ಎನ್ನುವ ಗ್ರಹಿಕೆ ಅಕ್ಕನದು. ಸಸ್ಯಗಳು ಮಣ್ಣಿನಲ್ಲಿರುವ ನೀರು ಮತ್ತು ಖನಿಜಾಂಶಗಳನ್ನು ಹೀರಿಕೊಂಡು ತಮ್ಮ ಬೀಜದಲ್ಲಿರುವ ವಂಶವಾಹಿನಿಗಳಿಗೆ ಅನುಸಾರವಾಗಿ ಬೇರುಬಿಟ್ಟು ಮೊಳಕೆಯಾಗಿ, ಕಾಂಡ ಮತ್ತು ಎಲೆಗಳಾಗಿ ಬೆಳೆಯುತ್ತಾ ಹೋಗುತ್ತವೆ. ಎಲೆಗಳಲ್ಲಿರುವ ಹರಿತ್ತುಗಳು ಗಾಳಿಯಲ್ಲಿನ ಇಂಗಾಲದ ಡೈಆಕ್ಸೈಡ್ ಮತ್ತು ಸೂರ್ಯನ ಬೆಳಕಿನಲ್ಲಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ಆಹಾರ ಉತ್ಪತ್ತಿ ಮಾಡಿ ಆಮ್ಲಜನಕವನ್ನು ಗಾಳಿಗೆ ಬಿಡುತ್ತವೆ. ಹೀಗೆ ಉತ್ಪಾದಿಸಿದ ಆಹಾರವನ್ನು ತನ್ನ ಬೆಳವಣಿಗೆಗೆ (ರಚನೆಗೆ) ಮತ್ತು ತನ್ನತನಕ್ಕೆ ಅನುಗುಣವಾಗಿ ಫಲಪುಷ್ಪಗಳನ್ನು ಮತ್ತು ತನ್ನ ವಂಶದ ಮುಂದುವರಿಕೆಗಾಗಿ ಬೀಜಗಳನ್ನು ಕೊಡುತ್ತವೆ. ಇದಕ್ಕೆ ಮೂಲವಾಗಿ ಪರಿಸರದಿಂದ ಹಲವು ದ್ರವ್ಯಂಗಳನ್ನು ಅಂದರೆ ನೀರು, ಖನಿಜಗಳು (ರಾಸಾಯನಿಕ ಸಂಯುಕ್ತ), ವಾಯುವಿನಲ್ಲಿರುವ ರಸಾಯನಿಕಗಳು (ಇಂಗಾಲದ ಡೈ ಆಕ್ಸೈಡ್, ಸಾರಜನಕ, ತೇವಾಂಶ) ಮತ್ತು ಆಕಾಶದಿಂದ ಬರುವ ಸೂರ್ಯನ ಬೆಳಕಿನಲ್ಲಿರುವ ಶಕ್ತಿ (ಊರ್ಜ)ಗಳನ್ನು ಪಡೆದು, ತನ್ನ ವಂಶವಾಹಿನಿಗೆ ಅನುಸಾರವಾಗಿ ವಿಧವಿಧವಾಗಿ ಹುಳಿ, ಸಿಹಿ, ಒಗರು, ಕಹಿ ಮತ್ತು ವಿಧವಿಧವಾದ ಪರಿಮಳಗಳನ್ನು ತೋರುತ್ತವೆ.

ಜೀವಿಗಳೆಲ್ಲವೂ ಒಂದೇ ಮೂಲ ಜೀವಿಯಿಂದ ಆಗಿವೆ ಎಂದು ಡಾರ್ವಿನ್ 1857ರಲ್ಲಿ ಪ್ರತಿಪಾದಿಸಿದ್ದು, ಇದನ್ನು 21ನೇ ಶತಮಾನದಲ್ಲಿ ಜೀವಶಾಸ್ತ್ರವು ದೃಢೀಕರಿಸಿದೆ. ಏಕಕೋಶ ಜೀವಿಯಿಂದ ಸೃಷ್ಟಿಯ ಕ್ರಿಯೆ ಆರಂಭವಾಗಿ, ಮುಂದೆ ನಿರಂತರವಾಗಿ ಪುನರುತ್ಪತ್ತಿಯಾಗುತ್ತಾ, ಬದಲಾವಣೆಗೊಳ್ಳುತ್ತಾ, ಸಹಜ ಆಯ್ಕೆಯಿಂದ ಸಂಕೀರ್ಣ ರಚನೆಯುಳ್ಳ ಜೀವಿಗಳು ರಚನೆಗೊಂಡವು. 1953ರಲ್ಲಿ ಶೋಧನೆಯಾದ ಡಿ.ಎನ್.ಎ ಮತ್ತು ಆರ್.ಎನ್.ಎ ಜೀನುಗಳಿಂದ ಸೃಷ್ಟಿಯ ಈ ರಹಸ್ಯವನ್ನು ವೈಜ್ಞಾನಿಕವಾಗಿ ಪುಷ್ಠೀಕರಿಸಲಾಯಿತು.

ವಿಜ್ಞಾನಿಗಳ ಪ್ರಕಾರ ಏಕಕೋಶ ಜೀವಿಯು 250 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದೆಂಬ ಅಂದಾಜಿದೆ. ಅಂದು ಭೂಮಿಯ ಮೇಲಿದ್ದ ರಾಸಾಯನಿಕ ದ್ರವದಲ್ಲಿದ್ದ ಅಣುಗಳ ಸರಪಳಿಯಂತಹ ಮಾಲಿಕ್ಯೂಲ್ ಗಳು ಕ್ರಮೇಣ ಒಂದು ಪೊರೆಯನ್ನು ಮಾಡಿಕೊಂಡು ಅದರೊಳಗೆ ಡಿ.ಎನ್.ಎ ಇರುವ ನ್ಯೂಕ್ಲಿಯಸ್, ಆರ್.ಎನ್.ಎ ಎಂಜೈಮ್ ಗಳು ಮತ್ತು ಮೈಟೋಕಾಂಡ್ರಿಯಾ ಎನ್ನುವ ಶಕ್ತಿ ಉತ್ಪಾದನಾ ಕೋಶವನ್ನು ಹೊಂದುತ್ತವೆ. ತನ್ನ ಪೊರೆಯ ಹೊರಗಿನಿಂದ ದ್ರವ್ಯವನ್ನು ಒಳಕ್ಕೆ ತೆಗೆದುಕೊಂಡು ತನ್ನ ಒಳಗಿರುವ ಆರ್.ಎನ್.ಎ ಜೀನುಗಳು, ಎಂಜೈಮ್ ಗಳು ಹಾಗೂ ಮೈಟೋಕಾಂಡ್ರಿಯಾದಿಂದ ಬರುವ ಶಕ್ತಿಯಿಂದ ಇನ್ನೊಂದು ಜೀವಕೋಶವನ್ನು ತಯಾರಿಸಲು ಬೇಕಾದ ಬಿಡಿಭಾಗಗಳನ್ನು ತಾನೇ ರಚಿಸಿಕೊಂಡು ಇನ್ನೊಂದು ಜೀವಕೋಶವನ್ನು ತನ್ನೊಳಗೇ ಸೃಷ್ಟಿಸಿಕೊಳ್ಳುತ್ತದೆ. ವಿಭಜನೆಯ ಬಳಿಕ ಎರಡು ಜೀವಕೋಶಗಳಾಗುತ್ತವೆ. ಕೆಲವು ವಿಭಜನೆಗಳ ತರುವಾಯ ಮೂಲ ಜೀವಕೋಶವು ನಷ್ಟವಾಗುತ್ತದೆ. ಇತರ ಜೀವಕೋಶಗಳು ಸ್ವಯಂನಿರ್ಮಿತಿಯಂತೆ ನಿರಂತರವಾಗಿ ಮಾರ್ಪಾಟು, ಸಹಜ ಆಯ್ಕೆ, ಸಹಕಾರ ಮತ್ತು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಹುಕೋಶಗಳ, ನಂತರದಲ್ಲಿ ಹಲವು ಅಂಗಗಳುಳ್ಳ, ಮುಂದೆ ಹಲವು ಅಂಗಗಳ ಒಕ್ಕೂಟಗಳುಳ್ಳ ಜೀವಿಗಳಾಗಿ ಜೀವ ವಿಕಾಸ ಕ್ರಿಯೆ ನಿರಂತರವಾಗಿ ಸಾಗಿದೆ. ಇದರ ಪರಿಣಾಮವಾಗಿ ಭೂಮಿಯಲ್ಲಿ ಹರಡಿಕೊಂಡಿರುವ ಮಣ್ಣು, ಕಲ್ಲು, ನೀರು, ಗಾಳಿಗಳಲ್ಲೆಲ್ಲಾ ಜೀವದ ದೊಡ್ಡ ಜಾಲವೇ ಇದೆ. ಇದನ್ನೇ ಅಕ್ಕಮಹಾದೇವಿ ತಾಯಿ- “ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ, ಜಲವು ಹಲವು ದ್ರವ್ಯಂಗಳ ಕೂಡಿ, ತನ್ನ ಪರಿಬೇರಾಗಿಹ ಹಾಗೆ…” ಎಂದು ಮೇಲಿನ ವಚನದಲ್ಲಿ ಸೂಚಿಸಿದ್ದಾರೆ.

ಅಕ್ಕನ ವಚನದ ಮುಂದಿನ ಭಾಗವು ಹಲವು ಜಗತ್ತುಗಳ ಕುರಿತು ಮಾತನಾಡುತ್ತದೆ. ಏನು ಹಾಗೆಂದರೆ?

ಹಲವು ಜಗತ್ತುಗಳು ಅಂದರೆ ಪರಮಾಣುಗಳು, ಅಣುಗಳು, ಅಣುಗಳಿಂದಾದ ಸಾರ ಮತ್ತು ಸಾರವಿಲ್ಲದ ವಸ್ತುಗಳು. ಜೊತೆಗೆ ನಾಲ್ಕು ಶಕ್ತಿಗಳು ಅಂದರೆ- ಗುರುತ್ವಾಕರ್ಷಣೆ, ವಿದ್ಯುತ್ ಆಯಸ್ಕಾಂತೀಯ ಶಕ್ತಿ ಹಾಗೂ ಪ್ರಬಲವಾದ ಮತ್ತು ದುರ್ಬಲವಾದ ಎರಡು ಬಗೆಯ ನ್ಯೂಕ್ಲಿಯರ್ ಶಕ್ತಿಗಳು ಇವೆ. ಇವಲ್ಲದೆ ಆಕಾಶದಲ್ಲಿರುವ ಸೂರ್ಯ, ಸೌರವ್ಯೂಹ ನಕ್ಷತ್ರಗಳ ಗುಂಪು, ನಿಹಾರಿಕೆಗಳು, ಕಾಸ್ಮಿಕ್ ದೂಳು, ವಿಕಿರಣಗಳು, ಆಕಾಶ ಮತ್ತು ಕಾಲ. ಇವೇ ಆ ಅನೇಕ ಜಗತ್ತುಗಳು. ವಿಶ್ವದ ಆದಿಯು 1370 ಕೋಟಿ ವರ್ಷಗಳ ಹಿಂದೆ ಉಂಟಾಗಿದ್ದು, ಅಂದಿನಿಂದಲೂ ವಿಶ್ವವು ವಿಸ್ತಾರವಾಗುತ್ತಿದೆ ಎಂಬುದು ತಿಳಿದು ಬಂದಿದೆ. ಕ್ವಾಂಟಮ್ ಕ್ಷೇತ್ರದಿಂದ (ಅತಿ ಸೂಕ್ಷ್ಮವಾದ) ಭೂಮಿಯ ಮೇಲಿರುವ ಅಣುಗಳು, ಪೃಥ್ವಿ, ಖನಿಜಗಳು, ಗಾಳಿ, ನೀರು, ಅಗ್ನಿ, ಜೀವಗೋಳ (ನಾಲ್ಕು ಶಕ್ತಿಗಳು), ಆಕಾಶ (ಬಯಲು) ಆಯಾಮಗಳು ಮೂರು ಮತ್ತು ಕಾಲ, ಸೌರಮಂಡಲ, ಕಾಸ್ಮಾಸ್ ಎಂಬ ಹಲವು ಜಗತ್ತುಗಳನ್ನೊಳಗೊಂಡಿರುವ ಚನ್ನಮಲ್ಲಿಕಾರ್ಜುನನ ಪರಿ ಅಂದರೆ ನಡವಳಿಕೆಯೇ ಬೇರೆ ಅಂದರೆ ಅನಾದಿ ಸ್ಥಿತಿ ನಮಗೆ ತಿಳಿಯದು ಎಂದು ಅಕ್ಕ ಹೇಳಿದ್ದಾಳೆ. ಅಲ್ಲದೆ ಈ ಎಲ್ಲಾ ಜಗತ್ತುಗಳನ್ನೊಳಗೊಂಡಿರುವ ಪ್ರಕೃತಿಯೇ ಚನ್ನಮಲ್ಲಿಕಾರ್ಜುನ ಎನ್ನುತ್ತಾಳೆ.

ಹಲವು ಬಿಡಿಭಾಗಗಳಿಂದ ರಚನೆಯಾಗಿರುವ ಒಂದು ಒಕ್ಕೂಟವು ಬಿಡಿಭಾಗಗಳ ಗುಣಗಳಿಗಿಂತ ಬೇರೆಯಾದ ಗುಣಗಳನ್ನು ಹೊಂದಿರುತ್ತದೆ. ಉದಾಹರಣೆಗೆ ನೀರಿನಲ್ಲಿರುವ H2O- ಸಾರಜನಕ ಮತ್ತು ಆಮ್ಲಜನಕಗಳ ಸಮ್ಮಿಲನ. ಈ ಎರಡೂ ಅನಿಲಗಳು ಬೇರೆ ಬೇರೆ ಗುಣಗಳನ್ನು ಹೊಂದಿದ್ದು, ಅವೆರಡೂ ಸೇರಿದಾಗ ಉತ್ಪಾದನೆಯಾದ ನೀರು ಬೇರೆಯದೇ ಗುಣಗಳನ್ನು ಹೊಂದಿದೆ. ಅದೇ ರೀತಿ ಹಲವು ದ್ರವ್ಯಂಗಳಿಂದಾಗಿರುವ ಸಸ್ಯವು ತನ್ನತನಕ್ಕೆ ಅನುಗುಣವಾಗಿ ಫಲಪುಷ್ಪಗಳನ್ನು ಕೊಡುತ್ತದೆ. ಹಾಗೆಯೇ ಹಲವು ಜಗತ್ತುಗಳ ಒಕ್ಕೂಟವಾದ ಪ್ರಕೃತಿ ಅಂದರೆ ವಿಶ್ವದ ಪರಿಯೇ ಬೇರೆ ಆಗಿದೆ. ಪ್ರಕೃತಿಯ ಘಟಕಗಳಿಂದಲೇ ಆದ ಮನುಷ್ಯನ ಕುಲವು ತನ್ನ ಪ್ರಾಣ, ಮನಸ್ಸು, ಬುದ್ಧಿ, ಭಾವ, ಭಕ್ತಿಗಳಿಂದ ತನ್ನನ್ನೇ ತಾನು ತಿಳಿಯಲು ಮತ್ತು ಜಗತ್ತನ್ನು ಅರಿಯಲು 21ನೇ ಶತಮಾನದಲ್ಲಿ ಭೌತವಿಜ್ಞಾನ, ಭೂ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನಗಳಂತಹ ಜ್ಞಾನ ಭಂಡಾರಗಳನ್ನು ಹರಡಿಕೊಂಡು ಅಭ್ಯಸಿಸುತ್ತಿದೆ. ಆಧುನಿಕ ವಿಜ್ಞಾನದ ಯಾವ ಸುಳುಹುಗಳೂ ಇಲ್ಲದಿದ್ದ 900 ವರ್ಷಗಳ ಹಿಂದೆ ಅಕ್ಕಮಹಾದೇವಿ ವಿಜ್ಞಾನದ ಈ ಸೂಕ್ಷ್ಮ ವಿಷಯಗಳನ್ನೆಲ್ಲ ಗ್ರಹಿಸಿದ್ದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಈ ಸಂದರ್ಭದಲ್ಲಿ “ವಿಜ್ಞಾನಿ ಮತ್ತು ದಾರ್ಶನಿಕ ಇಬ್ಬರ ಗುರಿಯೂ ಒಂದೇ” ಎನ್ನುವ ಮಾತು ನೆನಪಾಗುತ್ತದೆ.

Previous post ಗುರುಪಥ
ಗುರುಪಥ
Next post ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು

Related Posts

ಗುರುವೇ ತೆತ್ತಿಗನಾದ
Share:
Articles

ಗುರುವೇ ತೆತ್ತಿಗನಾದ

April 29, 2018 ಕೆ.ಆರ್ ಮಂಗಳಾ
ಜಾಗತಿಕ ಇತಿಹಾಸದಲ್ಲಿಯೇ ಹನ್ನೆರಡನೆಯ ಶತಮಾನ ಪ್ರಬುದ್ಧ ಚಿಂತನೆಗಳು ನಡೆದ ಕಾಲಮಾನ. ಅದುವರೆಗೆ ಮನುಷ್ಯನ ಜೀವನವನ್ನೂ, ಮನಸ್ಸನ್ನೂ ಆಳುತ್ತಿದ್ದ ಕರ್ಮಠ ವ್ಯವಸ್ಥೆಗಳನ್ನು...
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
Share:
Articles

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…

June 3, 2019 ಪದ್ಮಾಲಯ ನಾಗರಾಜ್
ಆದಿಮಾವಸ್ಥೆಯ ಕಾಲದಿಂದ ಇಲ್ಲಿಯ ತನಕವೂ ಮನುಷ್ಯನಿಗೆ ವಿಶ್ವಸೃಷ್ಟಿಯ ಮೂಲಕಾರಣವು ಏನಿರಬಹುದು? ಎಂಬ ಪ್ರಶ್ನೆ ಬಹಳವಾಗಿ ಕಾಡಿದೆ. ಬಯಸದೇ ಬಂದಿರುವ ಜೀವಿಗಳ ಹುಟ್ಟು, ಮರಣ, ರೋಗ...

Comments 9

  1. Vinay Adihalli
    Feb 5, 2020 Reply

    ಈ ಲೇಖನದಿಂದ ೧೨ನೇ ಶತಮಾನದಲ್ಲಿ ಶರಣರಿಗೆ ಇದ್ದ ಸೃಷ್ಟಿಯ ವೈಚಾರಿಕ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ.
    ಇಂದು ೨೧ನೇ ಶತಮಾನದಲ್ಲಿ ವಿಜ್ಞಾನ ತಂತ್ರಜ್ಞಾನಗಳನ್ನು ಓದಿಕೊಂಡರು ಮೂಢತ್ವದ ನಂಬಿಕೆಯಲ್ಲಿರುವವರು ಅವಲೋಕಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
    ✍ ವಿನಯ್ ಆದಿಹಳ್ಳಿ

  2. Mariswamy Gowdar
    Feb 6, 2020 Reply

    ಅಕ್ಕನ ವಚನದ ಹಿಂದಿನ ವಿಜ್ಞಾನವನ್ನು ತೋರಿಸಿದ ಲೇಖಕರಿಗೆ ವಂದನೆಗಳು.

  3. Arun Naik
    Feb 11, 2020 Reply

    ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ?…… ವಚನವನ್ನು ಈಗ ನಿಮ್ಮ ಲೇಖನ ಓದಿದ ಬಳಿಕ ನೋಡಿದಾಗ ಸೃಷ್ಟಿಯ ರಹಸ್ಯವನ್ನು ಬಚ್ಚಿಟ್ಟುಕೊಂಡಂತೆ ಕಾಣುತ್ತಿದೆ, ಧನ್ಯವಾದಗಳು.

  4. Ramesh S
    Feb 13, 2020 Reply

    ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತು, ಪ್ರತಿಯೊಂದು ಜೀವಿ, ಪ್ರತಿಯೊಂದು ಪದಾರ್ಥವೂ ಅಗಣಿತ ಘಟಕಗಳ ಸಮ್ಮಿಳನ. ಅಕ್ಕ ಪ್ರಕೃತಿಯನ್ನು ವಿಜ್ಞಾನಿಯಂತೆ ಕಂಡು ದಾರ್ಶನಿಕಳಾಗಿ ಅನುಭವಿಸಿ, ಕವಿಯಂತೆ ಹೇಳಿದ್ದು ಅರ್ಥಪೂರ್ಣವಾಗಿದೆ. ವಿಭಿನ್ನವಾದ ಲೇಖನ.

  5. ಶಶಿಧರ್ ಬಳ್ಳಾರಿ
    Feb 13, 2020 Reply

    ಅಕ್ಕನ ವಚನಕ್ಕೆ ವೈಜ್ಞಾನಿಕ ನಿರೂಪಣೆ ಗಮನ ಸೆಳೆಯುತ್ತದೆ.

  6. Shashikala Beluru
    Feb 14, 2020 Reply

    ಪ್ರಕೃತಿಯಲ್ಲಿ ಪ್ರಕೃತಿಯಾಗಿ ಬೆರೆತ ಅಕ್ಕಮಹಾದೇವಿ ತಾಯಿಯ ವಚನಕ್ಕೆ ವಿಜ್ಞಾನದ ಭಾಷೆ ನೀಡಿದ ಶರಣರಿಗೆ ವಂದನೆಗಳು. ಉತ್ತಮ ಲೇಖನ.

  7. Nirmala R
    Feb 16, 2020 Reply

    ಅನುವಂಶೀಯ ಗುಣಗಳಿಂದ ಜೀವ ಜಗತ್ತು ಆರಂಭವಾಗಿದೆ, ಪ್ರಕೃತಿಯ ನಿಯಮದಲ್ಲೇ ಸೃಷ್ಟಿಯ ಬೆಡಗಿನ ರಹಸ್ಯವಿದೆ.

  8. Jahnavi Naik
    Feb 21, 2020 Reply

    ಅಕ್ಕನ ವಚನಗಳಿಗೆ ಹೀಗೆ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಸಿ ಪ್ರಕಟಿಸಿದ ಲೇಖನ ಉಪಯುಕ್ತವಾಗಿದೆ.

  9. L.S.Patil
    Feb 24, 2020 Reply

    ಶರಣರು ಅನುಭಾವಿಗಳೂ ಹೌದು, ವಿಜ್ಞಾನಿಗಳೂ ಹೌದು.

Leave a Reply to Nirmala R Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಗೇಣು ದಾರಿ
ಗೇಣು ದಾರಿ
July 10, 2023
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಗುಟುಕು ಆಸೆ…
ಗುಟುಕು ಆಸೆ…
May 8, 2024
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಮನಸ್ಸು
ಮನಸ್ಸು
September 7, 2020
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಅಂದು-ಇಂದು
ಅಂದು-ಇಂದು
December 8, 2021
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
Copyright © 2025 Bayalu