Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವಂದನೆ
Share:
Articles October 13, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಗುರುವಂದನೆ

ಕರ್ನಾಟಕದ ಮಠ-ಪೀಠಗಳ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ-ಮಾನ ಗಳಿಸಿದ ಮಹಾನ್ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇಂದು ಅವರನ್ನು ಬಹುವಾಗಿ ಮೆಚ್ಚಿಕೊಂಡು ನಮ್ಮ ಗುರುಗಳು ಹಾಗೆ, ಹೀಗೆ ಎಂದು ಸ್ತುತಿಸುವುದು ಹೊಸದೇನಲ್ಲ. ಆದರೆ ಅವರು ತಮ್ಮ ಬದುಕಿನ ಅವಧಿಯಲ್ಲಿ ಸಾಕಷ್ಟು ನೋವುಂಡವರು. ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸಿದವರು. ಅವೇ ಅವರನ್ನು ಗಟ್ಟಿಗೊಳಿಸಿ ಸಮಾಜಮುಖಿ ಸೇವಾಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದವು. ಅವರು ಆಗಾಗ ಹೇಳುತ್ತಿದ್ದುದು ನಾವು ತುಂಬಾ ಹೇಡಿಗಳು ಮತ್ತು ಹೆದರುಪುಕ್ಕರು. ನಾವು ಧೈರ್ಯಶಾಲಿಗಳಾಗಿ, ಕಠೋರವಾಗಿ ವರ್ತಿಸಲು ಕಾರಣವಾದದ್ದು ನಮಗೆದುರಾದ ಸಮಸ್ಯೆ, ಸವಾಲು ಮತ್ತು ನೋವುಗಳು ಎನ್ನುತ್ತಿದ್ದರು. ಸಮಸ್ಯೆ, ಸವಾಲು, ಸಂಕಟಗಳಿಗೆ ಕಾರಣರಾದ ವ್ಯಕ್ತಿಗಳನ್ನು ತುಳಿಯಬೇಕು ಎನ್ನುವ ಭಾವನೆ ಎಂದೂ ಅವರಲ್ಲಿ ಬರಲಿಲ್ಲ. ಬದಲಾಗಿ ಅಂಥವರನ್ನೂ ತಿದ್ದಿ ಮನುಷ್ಯರನ್ನಾಗಿ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟವರು. ಅವರ ಮನದಲ್ಲಿ ಪ್ರೀತಿಗೆ ಸ್ಥಾನವಿತ್ತೇ ಹೊರತು, ದ್ವೇಷ, ಅಸೂಯೆ, ಮತ್ಸರ, ಹಠಮಾರಿತನ ಇಂಥ ಯಾವ ಅವಗುಣಗಳಿಗೂ ಅಲ್ಲ. ಅವರು ಎಂದೂ ಯಾರನ್ನೂ ಸಣ್ಣವರೆಂದು ಉದಾಸೀನ ಮಾಡಲಿಲ್ಲ, ಯಾರನ್ನೂ ದೊಡ್ಡವರೆಂದು ಗೌರವಿಸಲಿಲ್ಲ. ಸಣ್ಣವರಲ್ಲಿರಬಹುದಾದ ದೊಡ್ಡತನವನ್ನು, ದೊಡ್ಡವರಲ್ಲಿರಬಹುದಾದ ಸಣ್ಣತನಗಳನ್ನು ಗುರುತಿಸುತ್ತಿದ್ದರು. ವ್ಯಕ್ತಿಗಳ ಪರಿವರ್ತನೆಗೆ ಯಾವ ರೀತಿ ಉಪಾಯ ಮಾಡುತ್ತಿದ್ದರೆಂಬುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು. ಒಬ್ಬ ಹುಡುಗ ದಾರಿ ಬಿಟ್ಟಿದ್ದು ಗೊತ್ತಾದರೆ ನಿಮ್ಮಜ್ಜ, ನಿಮ್ಮಪ್ಪ, ನಿಮ್ಮವ್ವ ಅಂಥವರಲ್ಲ. ಅಂಥ ವಂಶದಲ್ಲಿ ನಿನ್ನಂಥವನು ಹೇಗೆ ಹುಟ್ಟಿದೆ ಎನ್ನುತ್ತ ಆತನ ಮನಪರಿವರ್ತನೆ ಮಾಡುತ್ತಿದ್ದರು. ಒಂದು ವೇಳೆ ಮಗನ ಬದಲಾಗಿ ತಂದೆಯೇ ದಾರಿತಪ್ಪಿದ್ದರೆ ಆತನನ್ನು ಕರೆಸಿ ನಿನ್ನಂಥ ಕೆಟ್ಟ ಹುಳಕ್ಕೆ ಬಂಗಾರದಂಥ ಮಗ ಹುಟ್ಟಿದ್ದಾನಲ್ಲ! ಅವನಿಗಾದರೂ ನೀನು ಬದಲಾಗಬೇಕಲ್ಲವೇ ಎನ್ನುತ್ತ ಅವರ ಮನಪರಿವರ್ತನೆಗೆ ಮುಂದಾಗುತ್ತಿದ್ದರು. ಅವರು ಯಾರನ್ನೂ ತುಳಿಯುವ ಕಾರ್ಯ ಮಾಡುತ್ತಿರಲಿಲ್ಲ. ಅವರ ಬುದ್ಧಿ, ಭಾವ, ಮನದಲ್ಲಿ ಪ್ರೀತಿಗೆ ಸ್ಥಾನವಿತ್ತೇ ಹೊರತು ಹಾಲಾಹಲಕ್ಕಲ್ಲ.
ನಾವು ಅನೇಕ ಸಂದರ್ಭಗಳಲ್ಲಿ ನಮ್ಮ ಬದುಕಿನ ಸಿಂಹಾಲೋಕನ ಮಾಡಿಕೊಂಡದ್ದುಂಟು. ನಾವು ಸಿರಿಗೆರೆಗೆ ಹೋಗಿದ್ದು ಓದಲು, ಸ್ವಾಮಿಯಾಗಲು ಅಲ್ಲ; ಒಂದು ಜವಾನ ಕೆಲಸ ಬಯಸಿ. ಎಸ್ ಎಸ್ ಎಲ್ ಸಿ ಫೇಲಾಗಿ ಇನ್ನುಮುಂದೆ ಓದಲು ಸಾಧ್ಯವಾಗದು ಎನ್ನುವ ಸಂದರ್ಭ. ನಮ್ಮ ಪೂರ್ವಾಶ್ರಮದ ತಂದೆ ನಾಗಯ್ಯನವರಿಗೂ ಮತ್ತು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೂ ಅತ್ಯಂತ ಮಧುರವಾದ ಗುರು-ಶಿಷ್ಯ ಸಂಬಂಧ ಇತ್ತು. ಆ ಕಾರಣದಿಂದ ನಾಗಯ್ಯನವರು ಒಂದು ಪತ್ರ ಕೊಟ್ಟು ನಮ್ಮನ್ನು ಸಿರಿಗೆರೆಗೆ ಕಳಿಸಿದರು. ಅದುವರೆಗೂ ನಾವು ಸಿರಿಗೆರೆಯ ಮುಖವನ್ನೇ ನೋಡಿದವರಲ್ಲ. ಅದೆಲ್ಲಿದೆ ಎನ್ನುವ ಕಲ್ಪನೆಯೂ ಇಲ್ಲ. ನಾವು ದೂರದ ಆಗಿನ ಧಾರವಾಡ, ಈಗಿನ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಅಣೂರಿನಲ್ಲಿದ್ದವರು. ರಾಣೇಬೆನ್ನೂರಲ್ಲಿ ರೈಲು ಹತ್ತಿ ಸಾಸಲಿಗೆ ಇಳಿದು ಸಿರಿಗೆರೆಗೆ ಬಂದೆವು. ಆಗ ಗುರುಗಳು ಇವನೊಬ್ಬ ಅಪರಿಚಿತ ಹುಡುಗನೆಂದು ನಮ್ಮನ್ನು ಉಪೇಕ್ಷೆ ಮಾಡಲಿಲ್ಲ. ಬದಲಾಗಿ ಯಾವೂರು? ಯಾರ ಮಗ ಎಂದೆಲ್ಲ ವಿಚಾರಿಸಿದರು. ನಾಗಯ್ಯನ ಮಗನೇನು ಎಂದು ಎಲ್ಲ ಬಲ್ಲವರಂತೆ ಕೇಳಿದರು. ಒಬ್ಬ ವ್ಯಕ್ತಿಯನ್ನು ಒಮ್ಮೆ ಪರಿಚಯ ಮಾಡಿಕೊಂಡರೆ ಅವರ ಇತಿಹಾಸವನ್ನೇ ಹೇಳುವ ಸ್ವಭಾವ ಅವರದು. ಏನು ಕೆಲಸ ಮಾಡುತ್ತೀ ಎಂದರು. ನೀವು ಕೊಟ್ಟ ಕೆಲಸ ಮಾಡ್ತೇನ್ರಿ ಎಂದೆವು. ಆಗ ನಮಗೆ ಉತ್ತರ ಕರ್ನಾಟಕದ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಪರಿಚಯವೇ ಇರಲಿಲ್ಲ. ಈಗ ಆ ಭಾಷೆ ನಮ್ಮಿಂದ ದೂರವಾಗಿದೆ. ಆಗ ಗುರುಗಳು ಹೇಳಿದ್ದು: ನಮ್ಮಲ್ಲಿ ಶೌಚಾಲಯ ಸ್ವಚ್ಛ ಮಾಡುವುದರಿಂದ ಶಿವಪೂಜೆಗೆ ಇಡುವವರೆಗೆ ಕೆಲಸ ಇದೆ. ಅದರಲ್ಲಿ ಯಾವುದನ್ನು ಮಾಡುವೆ ಎಂದರು. ನೀವು ಏನು ಹೇಳಿದರೂ ಮಾಡ್ತೇನೆ ಎಂದಾಗ ಆ ಬರಲು ತಗೊಂಡು ಚರಂಡಿ ತೊಳಿ ಎಂದರು. ವಾಸ್ತವವಾಗಿ ನಮಗೆ ಚರಂಡಿ ತೊಳೆಯಲು ಮನಸ್ಸಿಲ್ಲದಿದ್ದರೂ ಚರಂಡಿ ತೊಳೆಯಬೇಕಾಯ್ತು. ಆಗಲೇ ಅವರು ತೀರ್ಮಾನ ಮಾಡಿಕೊಂಡಿರಬೇಕು: ಈ ಹುಡುಗ ನಮ್ಮಲ್ಲಿರಲು ಯೋಗ್ಯನೆಂದು.
ಕೆಲವು ತಿಂಗಳು ವಿದ್ಯಾಸಂಸ್ಥೆಯ ಆಡಳಿತ ಕಚೇರಿಯಲ್ಲಿ ಜವಾನ ಮಾಡಬಹುದಾಗಿದ್ದ ಎಲ್ಲ ಕೆಲಸಕಾರ್ಯಗಳನ್ನು ಮಾಡಿದೆವು. ನಮ್ಮ ನಂತರ ಬಂದವರಿಗೆಲ್ಲ ನೌಕರಿ ಆದೇಶ ಪತ್ರ ಕೊಟ್ಟು ಕಳಿಸುತ್ತಿದ್ದರು. ನಮಗೆ ಮಾತ್ರ ಇಲ್ಲ. ಮನಸ್ಸಿನಲ್ಲಿ ತುಂಬಾ ಬೇಸರ. ಇವರೆಂಥ ಗುರುಗಳು? ಎಲ್ಲರಿಗೂ ನೌಕರಿ ಆದೇಶ ಪತ್ರ ಕೊಟ್ಟು ಕಳಿಸುತ್ತಿದ್ದಾರೆ. ನಮ್ಮನ್ನೇಕೆ ಉಪೇಕ್ಷೆ ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಜೂನ್ ಬರುತ್ತಲೇ ನೀನು ಪಿಯುಸಿಗೆ ಸೇರು ಎಂದರು. ಓದುವ ಬಯಕೆ ಇದ್ದರೂ ಆರ್ಥಿಕವಾಗಿ ಪುಸ್ತಕ ಕೊಳ್ಳಲು, ಕಾಲೇಜ್ ಫೀ ಕಟ್ಟಲು, ಬಟ್ಟೆ ಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ನಮ್ಮ ಮನೆಯವರ ಕೈಲಿ ಓದಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ವಿ. ಆಗ ಗುರುಗಳು `ಏ ದಡ್ಡ ಅವರೇಕೆ ಓದಿಸಬೇಕು? ನಾವೇ ಓದಿಸ್ತೇವೆ’ ಎಂದರು. ಇದು ತಾಯಿಯ ಅಂತಃಕರಣ, ತಾಯಿಯ ಪ್ರೀತಿ. ಕಾಲೇಜಿಗೆ ಸೇರಿಸಿ ಬಟ್ಟೆ, ಪುಸ್ತಕ ಮತ್ತಿತರ ಸೌಲಭ್ಯಗಳನ್ನು ಕೊಡಿಸಿದರು. ಆದರೆ ಪಿಯುಸಿಯಲ್ಲೂ ಫೇಲಾದ್ವಿ. ಮಕ್ಕಳು ಫೇಲಾದರೆ ತಂದೆ ತಾಯಿಗಳು ಹೇಗೆ ಬಯ್ಯುತ್ತಾರೆ, ಏನು ಮಾಡುತ್ತಾರೆ ಎಂದು ಬಿಚ್ಚಿ ಹೇಳಬೇಕಿಲ್ಲ. ಸಾಕು ನೀನು ಕಡಿದು ಕಟ್ಟೆ ಹಾಕಿದ್ದು, ಯಾರ ಮನೆಯಲ್ಲಾದರೂ ಸಂಬಳ ಇರು, ದನಕಾಯಲು ಹೋಗು ಎಂದು ಹೇಳುತ್ತಿದ್ದರೇನೋ. ನಾವು ಗುರುಗಳಿಗೆ ಮುಖ ತೋರಿಸಲು ಹೆದರಿ ತಪ್ಪಿಸಿಕೊಂಡು ಓಡಾಡುತ್ತಿದ್ದೆವು. ಗುರುಗಳು ಕರೆಸಿ ನಮ್ಮ ಪೇಲವವಾದ ಮುಖ ನೋಡಿ, ‘ಅಯ್ಯೋ ದಡ್ಡ ಆಕಾಶನೇ ತಲೆಮೇಲೆ ಕಳಚಿ ಬಿದ್ದಂತೆ ಮಾಡುತ್ತೀಯಲ್ಲಾ! ಎಲ್ಲರೂ ಪಾಸಾದರೆ ಫೇಲಾಗುವವರು ಯಾರು? ಫೇಲಾಗುವುದೇ ಪಾಸಾಗಲು. ಫೇಲಾದರೆ ಏನಾಯ್ತು? ಅನುಭವ ಬರುತ್ತದೆ. ಮತ್ತೆ ಕಟ್ಟು ಓದು’ ಎಂದರು. ಅವರ ಪ್ರೀತಿಯ ಮಾತುಗಳು ನಾವು ಸಂಪೂರ್ಣವಾಗಿ ಅವರಿಗೆ ಶರಣಾಗುವಂತೆ ಮಾಡಿದವು. ನಿಜಾರ್ಥದಲ್ಲಿ ಅವತ್ತಿನಿಂದ ಅವರೇ ನಮ್ಮ ತಂದೆ, ತಾಯಿ, ಬಂಧು, ಬಳಗ ಎಲ್ಲವೂ ಆದರು. ನಮ್ಮನ್ನೇ ನಾವು ಅವರಿಗೆ ಸಂಪೂರ್ಣ ಅರ್ಪಣೆ ಮಾಡಿಕೊಂಡ್ವಿ. ಹಾಗೆ ಅರ್ಪಣೆ ಮಾಡಿಕೊಂಡು ಕಾವಿ ಧರಿಸಿ 45 ವರ್ಷಗಳ ಕಾಲ ಅವರ ಆಶಯದಂತೆ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ಸೇವಾಕಾರ್ಯಗಳನ್ನು ನಿಸ್ಪೃಹತೆಯಿಂದ ಮಾಡಿಕೊಂಡು ಬಂದಿದ್ದೇವೆ. ಅದರ ಫಲ ಏನಾಗಿದೆ ಎಂದು ಈಗ ನಾವು ಹೇಳುವ ಅಗತ್ಯವಿಲ್ಲ; ಕಾಲವೇ ಅದಕ್ಕೆ ಉತ್ತರ ಕೊಡುವುದು.
ಪೂಜ್ಯರು ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಗುಣವನ್ನು ಗುರುತಿಸುವಂತಹ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡವರು. ಆರಂಭದಲ್ಲೇ ಹೇಳಿದಂತೆ ಅವರು ಯಾರನ್ನೂ ದ್ವೇಷಿಸುವ, ಹಿಂಸಿಸುವ, ಅವಕಾಶಗಳನ್ನು ಕಸಿದುಕೊಳ್ಳುವ ಮನಸ್ಸುಳ್ಳವರಾಗಿರಲಿಲ್ಲ. ಒಬ್ಬ ಏನಾದರೂ ಸಾಧನೆ ಮಾಡುತ್ತಾನೆ ಎಂದರೆ ಮತ್ಸರ ಪಡುವ ಬುದ್ಧಿ ಅವರಿಗೆ ಇರಲಿಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದರೂ ಭೇಷ್ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಒಬ್ಬ ಜವಾನನನ್ನೂ ಪ್ರೀತಿಸುತ್ತಿದ್ದರು. ಅವನ ಓದಿಗೆ ಅವಕಾಶ ಮಾಡಿ ಗುಮಾಸ್ತ, ಶಿಕ್ಷಕನಾಗಿ ಭಡ್ತಿ ಪಡೆಯುವ ಅವಕಾಶ ಕಲ್ಪಿಸುತ್ತಿದ್ದರು. ಸಂಗೀತ ಮತ್ತು ರಂಗ ಕಲಾವಿದರ ಬಗ್ಗೆ ಅವರಿಗೆ ಅಪಾರ ಪ್ರೀತಿ. ಒಬ್ಬ ವಿದ್ಯಾರ್ಥಿ, ಜವಾನ, ಶಿಕ್ಷಕ ಯಾರೇ ಆಗಿರಲಿ; ಅವರು ನಾಟಕದಲ್ಲಿ ಚನ್ನಾಗಿ ಪಾತ್ರ ನಿರ್ವಹಿಸಿದ್ದು ಕಂಡುಬಂದರೆ ಅವರ ಬೆನ್ನು ತಟ್ಟುತ್ತಿದ್ದರು. ‘ಮರಣವೇ ಮಹಾನವಮಿ’ ನಾಟಕದಲ್ಲಿ ಮೂಗಣ್ಣ ಎನ್ನುವವರು ‘ಮಹಂತ’ನ ಪಾತ್ರ ಮಾಡುತ್ತಿದ್ದರು. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದ್ದಾಗ ಶಿಕ್ಷಕ ಮೌನೇಶ್ವರಾಚಾರ್ ಆ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರ ಮೆಚ್ಚಿ ಅಪ್ಪಿಕೊಂಡದ್ದು, ತಾಯ್ತನದ ಪ್ರೀತಿ ತೋರಿಸಿದ್ದು ಮರೆಯದ ಕ್ಷಣ. ನೀವು ನಮ್ಮ ನಿಜವಾದ ಮಕ್ಕಳು ಎಂದು ಭಾವುಕರಾಗಿ ಹೇಳಿದ್ದರು. ಮಕ್ಕಳು ಎನ್ನುವ ಭಾವ ಬಹುದೊಡ್ಡದು. ಅವರು ಯಾರನ್ನೂ ತಮ್ಮ ಮಕ್ಕಳಲ್ಲ ಎನ್ನುವಂತೆ ನೋಡಿದವರಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬ ಸ್ತ್ರೀ-ಪುರುಷರೂ ತಮ್ಮ ಮಗು ಎನ್ನುವ ಭಾವನೆ ತಳೆದಿದ್ದರು. ವಿಶ್ವಬಂಧು ಮರುಳಸಿದ್ಧರು ಸದ್ಧರ್ಮ ಪೀಠದ ಸಂಸ್ಥಾಪಕರು. ಅವರು ತೆಲಗುಬಾಳು ಸಿದ್ದೇಶ್ವರರನ್ನು ಸದ್ಧರ್ಮ ಪೀಠದ ಮೇಲೆ ಕೂರಿಸಿ ‘ತರಳ ಬಾಳು’ ಎಂದು ಹಾರೈಸಿದರು. ಅದೇ ಪರಂಪರೆಯಲ್ಲಿ 20ನೆಯ ತರಳಬಾಳು ಜಗದ್ಗುರುಗಳವರಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಲೋಕದ ತರಳರೆಲ್ಲರನ್ನೂ ಆದರ್ಶವಾಗಿ ಬಾಳಬೇಕು ಎಂದು ಹಾರೈಸುತ್ತಿದ್ದರು. ನಮ್ಮ ಗುರುಗಳಂತೆ ನಾವಾಗಲಿ ಇತರ ಗುರುವರ್ಗದವರಾಗಲಿ ನೋವು ಅನುಭವಿಸಿಲ್ಲ. ಅವರು ಎಷ್ಟೇ ನೋವು ಅನುಭವಿಸಿದರೂ ಸಮಾಜಕ್ಕೆ ನಲಿವನ್ನೇ ನೀಡಿದರು. ತಮಗೆ ವಿಷವನ್ನಿಕ್ಕಿದವರಿಗೂ ಅಮೃತವನ್ನೇ ಉಣಿಸಿದರು. ಅಂತಹ ಮಹಾನ್ ಚೇತನವನ್ನು ಇನ್ನೊಬ್ಬರಲ್ಲಿ ಕಾಣುವುದು ಕಷ್ಟಸಾಧ್ಯ. ಅವರ ಬದುಕಿನಷ್ಟೇ ಸುಂದರವಾಗಿದ್ದು ಅವರ ಬರಹ ಮತ್ತು ಮಾತು.
ಸುಮಾರು 23-24ರ ತಾರುಣ್ಯದಲ್ಲೇ ಕಾವಿಧರಿಸಿದವರು ಪೂಜ್ಯರು. ಆಗ ಅನೇಕ ಸ್ವಾಮಿಗಳ ಗುಣಾವಗುಣಗಳನ್ನು ಬಹುಹತ್ತಿರದಿಂದ ನೋಡಿದವರು. ಅವುಗಳನ್ನೇ ತಮ್ಮ ದಿನಚರಿಯಲ್ಲಿ (‘ಆತ್ಮನಿವೇದನೆ’ ಕೃತಿ) ಈ ನಾಡಿನಲ್ಲಿ ಎಂತೆಂಥ ಸ್ವಾಮಿಗಳಿದ್ದಾರೆ ಎನ್ನುವುದನ್ನು ನಿರ್ಭಿಡೆಯಿಂದ ದಾಖಲಿಸಿದ್ದಾರೆ. ನಾವು ಇಂಥ ಸ್ವಾಮಿಗಳ ಪಟ್ಟಿಯಲ್ಲಿ ಸೇರಬಾರದು ಎನ್ನುವ ಎಚ್ಚರ ಆಗಲೇ ಅವರ ಅಂತರಂಗದಲ್ಲಿ ಮೂಡಿರಬೇಕು. ಹಾಗಾಗಿ ಅವರು ಮಹಿಳೆಯರನ್ನು ಸಹ ಮಕ್ಕಳಂತೆ ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದರು. ವಚನಗೀತೆಗಳನ್ನು ಹಾಡುವ ಅಕ್ಕನ ಬಳಗದ ಸದಸ್ಯೆಯರನ್ನು ಪೂಜ್ಯರು ಯಾವಾಗಲೂ ತಮ್ಮ ಕಾರ್ಯಕ್ರಮಗಳಿಗೆ ಜೊತೆಯಲ್ಲೇ ಕರೆದುಕೊಂಡು ಹೋಗುವ ಪದ್ಧತಿ ಇತ್ತು. ಕಾರಣ ಅವರಿಗಾಗಿ ಪ್ರತ್ಯೇಕ ಕಾರು ಮಾಡಿದರೆ ಸಂಘಟಕರಿಗೆ ಆರ್ಥಿಕ ಭಾರವಾಗುತ್ತದೆ ಎನ್ನುವ ದೂರದೃಷ್ಟಿ. ಹಣಕಾಸಿನ ಬಗ್ಗೆ ಅವರು ಯಾವಾಗಲೂ ಸಕಾರಾತ್ಮಕವಾಗಿಯೇ ಚಿಂತನೆ ಮಾಡುತ್ತಿದ್ದರು. ಅನಾವಶ್ಯಕವಾಗಿ ಹಣ ದುಂದುವೆಚ್ಚವಾಗಬಾರದು ಎನ್ನುವ ಎಚ್ಚರ ಅವರಲ್ಲಿತ್ತು. ಆಗ ಅನೇಕ ಜನರು ಈ ಸ್ವಾಮಿಗಳು ತಮ್ಮ ಪಕ್ಕದಲ್ಲೇ ಹೆಣ್ಣುಹುಡುಗಿಯರನ್ನು ಕೂರಿಸಿಕೊಂಡು ಹೋಗಬಹುದೇ ಎಂದು ಲೇವಡಿ ಮಾಡುತ್ತಿದ್ದುದುಂಟು. ಅಂಥ ಮಾತುಗಳಿಗೆ ಗುರುಗಳು ಮಾನ್ಯತೆ ನೀಡುತ್ತಿರಲಿಲ್ಲ. ನಮ್ಮ ಮಕ್ಕಳನ್ನು ಜೊತೆಗೆ ಕೂರಿಸಿಕೊಂಡಾಗ ಯಾರೇ ಲೇವಡಿ ಮಾಡಿದರೂ ಅದಕ್ಕೇಕೆ ಮಾನ್ಯತೆ ನೀಡಬೇಕು ಎನ್ನುವ ಭಾವನೆ ಬೆಳೆಸಿಕೊಂಡಿದ್ದರು. ಅಂಥ ಧೀಮಂತ ಗುರುವನ್ನು ಕರ್ನಾಟಕದಲ್ಲಿ ಮತ್ತೊಬ್ಬರಿಗೆ ಹೋಲಿಸುವುದು ಸಾಧ್ಯವಾಗದ ಮಾತು. ಅವರು ಹಿಮಾಲಯ ಇದ್ದಂತೆ. ಹಿಮಾಲಯಕ್ಕೆ ಹಿಮಾಲಯವೇ ಸಮ. ಹಿಮಾಲಯ ಪರ್ವತವನ್ನು ಬೇರೆ ಪರ್ವತಗಳಿಗೆ ಹೋಲಿಸಲು ಸಾಧ್ಯವಿಲ್ಲ. ಅವರು ಸಾಮಾನ್ಯರ ಜೊತೆ ಸಾಮಾನ್ಯರಂತೆ, ವಿದ್ಯಾವಂತರ ಜೊತೆ ವಿದ್ಯಾವಂತರಂತೆ, ಸಾಹಿತಿಗಳ ಜೊತೆ ಸಾಹಿತಿಗಳಂತೆ, ಬಂಡಾಯದವರ ಜೊತೆ ಬಂಡಾಯಗಾರರಂತೆ ಇರುತ್ತಿದ್ದರು. ಅವರ ವಿರುದ್ಧ ಯಾರಾದರೂ ತಿರುಗಿಬಿದ್ದರೆ ಇವರು ಸಹ ತಿರುಗಿ ಬಿದ್ದು ಅವರನ್ನು ಪರಿವರ್ತನೆ ಮಾಡುತ್ತಿದ್ದರು. ಅವರು ಎಲ್ಲ ರೀತಿಯ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ನಡೆಸಿಕೊಂಡು ಹೋದವರು. ಅವರ ರೀತಿ ಆನೆ ನಡೆದದ್ದೇ ದಾರಿ ಎನ್ನುವಂತಿತ್ತು. ಆನೆ ಹೋದ ಕಾಡಿನ ದಾರಿಯಲ್ಲಿ ಯಾರಾದರೂ ಸುಲಭವಾಗಿ ಹೋಗಬಹುದು. ಹಾಗೆ ನಮ್ಮ ಗುರುಗಳು ಆನೆಯೋಪಾದಿಯಲ್ಲಿ ಕಾಡಿನಲ್ಲೂ ಹಾದಿಯನ್ನು ಮಾಡಿದವರು. ಅವರ ದಾರಿಯಲ್ಲಿ ಈಗ ನಾವು ನಡೆಯುತ್ತಿದ್ದೇವಷ್ಟೆ.
ಪೂಜ್ಯರ ಮಾತುಗಳಂತೆ ಬರವಣಿಗೆಯೂ ಬಹುತೀಕ್ಷ್ಣವಾದದ್ದು. ಮೂಢಾಚರಣೆಗಳನ್ನು ನೇರವಾಗಿಯೇ ಖಂಡಿಸುತ್ತಿದ್ದರು. ಸ್ಥಾವರ ದೇವಾಲಯಗಳ ಪೂಜಾರಿ ಪುರೋಹಿತರಿಗೆ ಮತ್ತು ಅವುಗಳಿಗೆ ದಾಸರಾಗುವ ಭಕ್ತರಿಗೆ ನೀರಿಳಿಸುತ್ತಿದ್ದರು. ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥನ ಕತೆಯನ್ನು ಬಿಚ್ಚಿಟ್ಟು ಜಾಗೃತಿ ಮೂಡಿಸಿದ ಹಾಗೆ ಮತ್ತೊಬ್ಬರು ಬಿಚ್ಚಿಡಲು ಸಾಧ್ಯವಿಲ್ಲ. ಅವರು 1940 ಮೇ 10ರ ಬಸವ ಜಯಂತಿಯಂದು ಸಿರಿಗೆರೆ ಮಠದ ಪಟ್ಟಾಧ್ಯಕ್ಷರಾದಾಗ ನೀಡಿದ ಆಶೀರ್ವಚನ ಅತ್ಯಂತ ನೇರ ಮತ್ತು ಜನಪರವಾಗಿದೆ. ಅವರು ವೀರಶೈವ ಮತ್ತು ಲಿಂಗಾಯತ ಎನ್ನುವುದನ್ನು ಬೇರೆ ಬೇರೆಯಾಗಿ ಆರಂಭದಲ್ಲಿ ನೋಡುತ್ತಿರಲಿಲ್ಲ. ಹಾಗಾಗಿ ಅವರ ಆರಂಭದ ಬರವಣಿಗೆಯಲ್ಲಿ ವೀರಶೈವ ಎನ್ನುವ ಪದಬಳಕೆ ಮಾಡಿದ್ದಾರೆ. ‘ವೀರಶೈವ ಸಮಾಜದ ಭದ್ರತೆಯು ಗುರುಪೀಠಗಳನ್ನೇ ಅವಲಂಬಿಸಿದೆ. ಗುರುವರ್ಗದವರಿಂದಲೇ ಸಮಾಜವು ಭಿನ್ನ ಭಿನ್ನವಾಗಿರುವುದು. ಇವರು ನಿಸ್ವಾರ್ಥದಿಂದ ಸಾಹಸಪಟ್ಟರೆ ಸಮಾಜ ಸಂಘಟನೆಯು ಶಕ್ಯವಿದೆ. ಪರಸ್ಪರ ಸಂಕೋಚವನ್ನು ಬಿಟ್ಟು ಸೌಹಾರ್ದವನ್ನು ಬೆಳೆಸಬೇಕು. ಈಗಿನ ಕಾಲದಲ್ಲಿ ಮಹತ್ವಾಕಾಂಕ್ಷೆಯು ಯಾರಿಗೂ ಶೋಭಾಯಮಾನವಲ್ಲ. ಯಾವುದರಲ್ಲಿ ಸಮಾಜದ ಕಲ್ಯಾಣವಿದೆಯೋ ಅದನ್ನೇ ಎಲ್ಲರೂ ಆದರಿಸಬೇಕು’. ಸಂಘಟನೆ ಮಾಡಬೇಕಾದವರೂ ಗುರುವರ್ಗದವರೇ, ಸಂಘಟನೆಯನ್ನು ವಿಘಟನೆ ಮಾಡುವವರೂ ಗುರುವರ್ಗದವರೇ ಎಂದು ಹೇಳಿದ್ದಾರೆ. ಅಂದರೆ ಗುರುಗಳಲ್ಲಿ ಸ್ವಾರ್ಥ, ನಾನು ಎನ್ನುವ ಅಹಂ ಇರಬಾರದು. ಆಗ ಸಮಾಜದ ಸಂಘಟನೆ ಸಾಧ್ಯವಾಗುವುದು. ‘ಒಂದೇ ಪೀಠದಿಂದ ಹೋರಾಟವಾದುದರಿಂದ ಈ ಮಠಗಳ ಏಕೀಕರಣವು ಯಾವ ರೀತಿಯೂ ಆಕ್ಷೇಪಣೀಯವಲ್ಲ. ಇವುಗಳ ಏಕೀಕರಣದಿಂದ ಸಾಧು ವೀರಶೈವರ ಉತ್ಕರ್ಷೆಯು ಹೆಚ್ಚುತ್ತದೆ’. ಮಠಗಳು ಪ್ರತ್ಯೇಕವಾದರೆ ಸಾಮಾಜಿಕ ಸೇವಾಕಾರ್ಯಗಳಿಗೆ ಪೆಟ್ಟು ಬೀಳುವುದು ಎನ್ನುವ ಪೂಜ್ಯರ ಅಭಿಪ್ರಾಯ ನೂರಕ್ಕೆ ನೂರು ಸತ್ಯ. ಈ ನೆಲೆಯಲ್ಲೇ ಅವರು ಮೂಲ ಮತ್ತು ಶಾಖಾಮಠಗಳ ಏಕೀಕರಣಕ್ಕೆ ಕಂಕಣ ತೊಟ್ಟು ಅದರಲ್ಲಿ ಯಶಸ್ವಿಯಾದರು. `ಏಕಾಭಿಪ್ರಾಯವಿರುವಾಗ ಯಾವುದೇ ಸಮಾಜ ಕಾರ್ಯವು ಸುಲಲಿತವಾಗಿ ನಡೆಯಲು ಅನುಕೂಲವಿರುತ್ತದೆ. ಸಮಾಜದ ಭದ್ರತೆಗೆ ಈ ಮಠಗಳ ಏಕೀಕರಣವು ಅತ್ಯಾವಶ್ಯಕವಾದುದು. ಈ ಎಲ್ಲಾ ಅಂಶಗಳನ್ನು ನೀವು ಗಾಢವಾಗಿಯೇ ಆಲೋಚಿಸಿ. ಇದಕ್ಕಾಗಿ ನಿಮ್ಮ ಶಕ್ತಿಮೀರಿ ಪ್ರಯತ್ನಿಸಿ ಸಫಲರಾಗಿ ಇಂದು ಇಡೀ ಸಮಾಜಕ್ಕೆ ಸಂತೋಷವನ್ನುಂಟುಮಾಡಿದ್ದೀರಿ. ನೀವು ನೆಟ್ಟಿರುವ ಈ ಬೀಜವು ಮೊಳೆತು ಸಸಿಯಾಗಿ ಫಲಕಾರಿಯಾಗಲು ನಮ್ಮಿಂದ ಸಾಧ್ಯವಿರುವ ಸಹಾಯವನ್ನು ಮಾಡಲು ಸದಾಸಿದ್ಧರಾಗಿದ್ದೇವೆ’ ಎಂದು ಶಿಷ್ಯಸಮೂಹಕ್ಕೆ ಹೇಳಿದ್ದಾರೆ. `ಉಭಯ ಮಠಗಳ ಏಕೀಕರಣವಾಗಿರುವುದರಿಂದ ಉಭಯ ಮಠಗಳ ಶಿಷ್ಯರು ಅಂದರೆ ಇಡೀ ಸಾಧು ವೀರಶೈವರೇ ಒಂದು ಆಡಳಿತ ಕ್ರಮಕ್ಕೆ ಒಳಪಟ್ಟಂತಾಗುತ್ತದೆ. ಸಾಮಾನ್ಯವಾಗಿ ಆಯಾಯ ಪ್ರಾಂತ್ಯದವರ ಅಭಿಪ್ರಾಯ ಮತ್ತು ಸಹಾನುಭೂತಿಗಳು ಆಯಾಯ ಮಠಾಧಿಪತಿಗಳ ಆಡಳಿತ ಕ್ರಮಗಳನ್ನು ಅನುಸರಿಸಿಯೇ ಇರುತ್ತಿದ್ದವು. ಮಠಾಧಿಪತಿಗಳಲ್ಲಾದರೂ ಪರಸ್ಪರ ಸೌಜನ್ಯವಿರದೆ ಈರ್ಷಾಸೂಯೆಗಳೇ ಹೆಚ್ಚಾಗಿದ್ದು ಯಾವುದೊಂದು ಸುಧಾರಣೆಯೂ ಸುರಳಿತವಾಗಲು ತುಂಬಾ ಅಡಚಣೆಯಾಗುತ್ತಿತ್ತು. ಈಗ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇಲ್ಲದಂತಾಗಿದೆ’ (‘ಸಂಕಲ್ಪ’ ಕೃತಿಯಿಂದ) ಎಂದು ಪಟ್ಟಾಭಿಷೇಕವಾದ ಸಂದರ್ಭದ ಆಶೀರ್ವಚನದಲ್ಲೇ ತಿಳಿಸಿದ್ದು ಗಮನಾರ್ಹ.
‘ಸಂಕಲ್ಪ’ ಕೃತಿ ಪೂಜ್ಯರು ಬೇರೆ ಬೇರೆ ಸಂದರ್ಭಗಳಲ್ಲಿ ನೀಡಿದ ಆಶೀರ್ವಚನಗಳ ಸಂಗ್ರಹ. ಆ ಪುಸ್ತಕದ ಬೆನ್ನುಪುಟದಲ್ಲಿರುವ ಕೆಲವು ಸಾಲುಗಳು ಚಿಂತನಾರ್ಹವಾಗಿವೆ. ‘ಧರ್ಮವು ಶಾಂತಿಯ ಸಾಧನವು. ಆದರೆ ಇಂದು ನಮ್ಮ ನಾಡಿನ ಅಶಾಂತಿಗೆ ಧರ್ಮವೇ ಕಾರಣವಾಗಿರುವುದು’. ಇದು ವಾಸ್ತವ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಇವತ್ತು ಧರ್ಮದ ಹೆಸರಿನಲ್ಲೇ ಏನೇನು ಅನಾಹುತಗಳು ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತು. ಇದನ್ನು ಗುರುಗಳು ಅಂದೇ ಗುರುತಿಸಿದ್ದಾರೆ. `ಆಯಾಯ ಜಾತಿಯವರು ಪೂಜಿಸುವ ದೇವರುಗಳು ಆಯಾಯ ಜಾತಿಯವರದೇ ಆಗಿವೆ. ಒಂದು ಜಾತಿಯ ಜನರು ಮತ್ತೊಂದು ಜಾತಿಯ ದೇವರನ್ನು ದೇವರೆಂದು ತಿಳಿಯುತ್ತಿಲ್ಲ. ತತ್ಫಲವಾಗಿ ದೇವರೂ ಜಾತೀಯ ಬಂಧನಕ್ಕೆ ಒಳಗಾಗಿದ್ದಾನೆ’. ಮನುಷ್ಯರಲ್ಲಿ ಜಾತಿಯನ್ನು ಮಾಡಿಕೊಂಡದ್ದಲ್ಲದೇ ದೇವರಿಗೂ ಜಾತಿಯ ಅಂಟನ್ನು ಅಂಟಿಸಿರುವ ನೋವನ್ನು ವ್ಯಕ್ತಪಡಿಸಿದ್ದಾರೆ. ಅದರ ಮೂಲಕ ಜಾತ್ಯತೀತ ಸಮಾಜ ಕಟ್ಟುವ ಸಂಕಲ್ಪ ಮಾಡಿದರು. `ದೇವರನ್ನು ನಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಊಳಿಗದಾಳನ್ನಾಗಿ ಮಾಡಿಕೊಂಡಿದ್ದೇವೆ. ಧರ್ಮ ಮತ್ತು ದೇವರ ಬಗ್ಗೆ ಇಂದಿನ ನಮ್ಮ ನಡವಳಿಕೆಗಳು ಬೇಕಿದ್ದನ್ನು ನೀಡುವ ಕಲ್ಪತರುವಿನ ಕೆಳಗೆ ಕ್ಷುದ್ರ ಬೇಡಿಕೆಗಳನ್ನಿಡುವ ತಿರುಕನೋಪಾದಿಯಲ್ಲಿವೆ’. ಈ ಮಾತುಗಳನ್ನು ವಿವರಿಸುವ, ವಿಶ್ಲೇಷಣೆ ಮಾಡುವ ಅಗತ್ಯವೇ ಇಲ್ಲ. ಅವು ಎಲ್ಲರ ಮನವನ್ನು ತಟ್ಟುವಂತಿವೆ. ‘ಒಂದು ರೀತಿಯಿಂದ ನೋಡಿದರೆ ವೀರಶೈವರಲ್ಲಿ ಎಷ್ಟು ಮಠಗಳಿವೆಯೋ ಅಷ್ಟೇ ಪಾರ್ಟಿಗಳಿವೆ’ ಎನ್ನುವ ಅವರ ಮಾತುಗಳನ್ನು ಭಕ್ತರು ಮತ್ತು ಮಠಾಧೀಶರು ಅರ್ಥ ಮಾಡಿಕೊಳ್ಳಬೇಕಿದೆ. `ಉಣ್ಣುವವನು ಉಣ್ಣುತ್ತಲೇ ಇದ್ದಾನೆ. ದುಡಿಯುವವನು ದುಡಿಯುತ್ತಲೇ ಇದ್ದಾನೆ. ಉಣ್ಣುವ ವರ್ಗವೇ ಒಂದಾದರೆ ದುಡಿಯುವ ವರ್ಗವೇ ಒಂದಾಗಿದೆ. ಉಣ್ಣುವವನು ದುಡಿಯುವಂತಿಲ್ಲ. ದುಡಿಯುವವನು ಉಣ್ಣುವಂತಿಲ್ಲ’. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಸಮಸಮಾಜವನ್ನು ನಿರ್ಮಾಣ ಮಾಡಲು ಇಂಥ ಮಾತುಗಳನ್ನು ಬರೆದಂತಿದೆ. `ಜನರ ದೊಡ್ಡಸ್ತಿಕೆಯು ಅವರು ಕಟ್ಟಿಸಿದ ಉಪ್ಪರಿಗೆಯ ಮನೆಗಳಲ್ಲಿಲ್ಲ. ಅವರ ಮನದ ಘನತೆಯಲ್ಲಿದೆ’ ಎನ್ನುವ ಅಭಿಪ್ರಾಯ ಚಿಂತನಾರ್ಹವಾಗಿದೆ. ಒಬ್ಬರು ಎಷ್ಟು ಹಣ ಸಂಪಾದನೆ ಮಾಡಿದ್ದಾರೆ, ಎಂಥ ಮನೆ ಕಟ್ಟಿಸಿದ್ದಾರೆ ಎನ್ನುವ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ಅಳೆಯಬಾರದು. ಬದಲಾಗಿ ಅವರ ಮನಸ್ಸು ಎಷ್ಟು ವಿಶಾಲವಾಗಿದೆ, ಘನವಾಗಿದೆ ಎನ್ನುವ ಆಧಾರದ ಮೇಲೆ ಅಳೆಯಬೇಕು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಬಸವಣ್ಣನವರು ಸಹ `ಮನೆ ನೋಡಾ ಬಡವರು, ಮನ ನೋಡಾ ಘನ’ ಎಂದಿದ್ದಾರೆ. ಒಬ್ಬ ವ್ಯಕ್ತಿ ಮನೆಯಿಂದ ಶ್ರೀಮಂತನಾದರೆ ಸಾಲದು, ಮನಸ್ಸಿನಿಂದ ಶ್ರೀಮಂತನಾಗಬೇಕು ಎನ್ನುವ ಅಭಿಪ್ರಾಯ ಅವರದು.
ನಮ್ಮ ಗುರುಗಳು ಮಠದಿಂದ ಶ್ರೀಮಂತರಾಗುವುದಕ್ಕಿಂತ ತಮ್ಮ ಮನಸ್ಸಿನಿಂದ ಶ್ರೀಮಂತರಾಗಿದ್ದವರು. ಅದು ಕಾರಣವಾಗಿಯೇ ಅವರು ಎಲ್ಲರ ಜೊತೆಗೆ ಬೆರೆಯುತ್ತಿದ್ದರು. ಅಲ್ಲಿ ಬಡವ, ಶ್ರೀಮಂತ ಎನ್ನುವ ತಾರತಮ್ಯ ಇರಲಿಲ್ಲ. ಸಾಮೂಹಿಕ ಪ್ರಸಾದಕ್ಕೆ ಒತ್ತು ಕೊಡುತ್ತಿದ್ದರು. ಎಲ್ಲರನ್ನೂ ತಮ್ಮ ಮಕ್ಕಳೆಂದು ಭಾವಿಸುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯನ್ನೂ ಕೊಡುತ್ತಿದ್ದರು. ಶಿಕ್ಷೆಯ ಉದ್ದೇಶ ತಪ್ಪನ್ನು ತಿದ್ದುವುದಕ್ಕಾಗಿಯೇ ಹೊರತು ತುಳಿಯಲು ಅಲ್ಲ. ಅಂತಹ ಅಪರೂಪದ ಗುರುಗಳು ದೈಹಿಕವಾಗಿ ಬದುಕಿದ್ದರೆ ಇಲ್ಲಿಗೆ 108 ವರ್ಷಗಳಾಗುತ್ತಿದ್ದವು. ಅವರು ವರ್ತಮಾನದಲ್ಲಿ ನಿಂತು ನೂರು ವರ್ಷಗಳಾಚೆಗಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಅದರಿಂದಾಗಿ ಅವರ ಮೆದುಳು ಸವೆಯುತ್ತ ದೇಹ ಹಣ್ಣಾಯ್ತು. ಪರಿಣಾಮವಾಗಿ ದೈಹಿಕ, ಮಾನಸಿಕ ಅನಾರೋಗ್ಯಕ್ಕೆ ತುತ್ತಾದರು. ಬಹುಕಾಲ ಬಾಳಬೇಕಾಗಿದ್ದವರು ತಮ್ಮ 78ನೆಯ ವಯಸ್ಸಿನಲ್ಲೇ (1992 ಸೆಪ್ಟೆಂಬರ್ 24) ಶಿವನ ಪಾದ ಸೇರಿದರು. ತಮ್ಮ 60ನೆಯ ವಯಸ್ಸಿನಲ್ಲೇ ತ್ಯಾಗಪತ್ರ ಸಲ್ಲಿಸಿ ಮಠ ಮತ್ತು ಸಮಾಜವನ್ನು ಮುನ್ನಡೆಸಿಕೊಂಡು ಹೋಗುವಂಥವರಿಗೆ ಸನ್ಯಾಸ ದೀಕ್ಷೆಯನ್ನು ಕರುಣಿಸಿ ತಮ್ಮ ಜವಾಬ್ದಾರಿಯನ್ನು ಹಂಚಿದರು. ಅವರ ಆಶಯಗಳನ್ನು ಪಾಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದೇವೆ.

Previous post ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
Next post ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು

Related Posts

ಬಸವತತ್ವ ಸಮ್ಮೇಳನ
Share:
Articles

ಬಸವತತ್ವ ಸಮ್ಮೇಳನ

June 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅನುಭಾವಿ ಅಲ್ಲಮಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು’ ಎಂದು ಅವರ ಗುರುತ್ವವನ್ನು ಗೌರವಿಸಿದ್ದಾರೆ. ಬಸವಣ್ಣನವರು ಎಲ್ಲರಿಗೂ...
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
Share:
Articles

ಧರ್ಮದ ಹೋರಾಟ ಗುಣಾತ್ಮಕವಾಗಿರಲಿ

April 29, 2018 ಡಾ. ಶಶಿಕಾಂತ ಪಟ್ಟಣ
ಲಿಂಗಾಯತ ಧರ್ಮದ ಮಾನ್ಯತೆಯ ವಿಷಯ ಈಗ ನಿತ್ಯ ದೃಶ್ಯ ಮಾಧ್ಯಮಗಳ ಆಹಾರ. ಅಲ್ಲಿ ನಡೆಯುತ್ತಿರುವ ಜಗಳ, ರಂಪಾಟ, ವಿಭಿನ್ನ ಹೇಳಿಕೆಗಳು ವಿಷಯವನ್ನು ಮತ್ತಷ್ಟು ಗೋಜಲು ಮಾಡುತ್ತಿವೆ....

Comments 10

  1. Manjunath Gokak
    Oct 16, 2022 Reply

    You’re so interesting! I don’t believe I have read through something like this before. Many thanks.

  2. ಜಯಪ್ರಕಾಶ್ ಶಿವಮೊಗ್ಗ
    Oct 18, 2022 Reply

    ಮಠದಲ್ಲಿನ ನಿಮ್ಮ ಆರಂಭಿಕ ದಿನಗಳನ್ನು ಓದಿ ಕಣ್ಣುಗಳು ತುಂಬಿಬಂದವು. ನಾನೂ ಮಠ, ಆಶ್ರಮಗಳ ವ್ಯವಸ್ಥೆಯಲ್ಲೇ ಬೆಳೆದುಬಂದವನು. ಒಳ್ಳೆಯ ವಾತಾವರಣ ಸಿಕ್ಕರೆ ತಮ್ಮಂಥ ದಿಟ್ಟ ಸ್ವಾಮಿಗಳು ತಯಾರಾಗುತ್ತಾರೆ, ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತಾರೆ. ಶರಣಾರ್ಥಿಗಳು ಗುರುಗಳೇ.

  3. Vijatjkumar Kopplu
    Oct 18, 2022 Reply

    ಶಾಲಾ ಓದಿನಲ್ಲಿ ಹಿಂದೆ ಬಿದ್ದಿದ್ದರೂ ತಮ್ಮ ಗುರುಗಳು ನಿಮ್ಮನ್ನು ಪೋಷಿಸಿ ಬೆಳೆಸಿದ ರೀತಿ ಅನನ್ಯವಾದುದು, ಯೋಗ್ಯ ಗುರು ಸಿಗುವುದು ಹೇಗೆ ಪುಣ್ಯವೋ ಯೋಗ್ಯ ಶಿಷ್ಯ ಸಿಗುವುದು ಕೂಡಾ ಮಹಾಪುಣ್ಯವೇ.

  4. Devika Huliyal
    Oct 20, 2022 Reply

    ಎಂತಹ ಮಾತೃಹೃದಯಿ ಗುರುಗಳನ್ನು ನೀವು ಪಡೆದಿದ್ದೀರಿ!! ನಿಜಕ್ಕೂ ನೀವೇ ಭಾಗ್ಯಶಾಲಿಗಳು. ನಿಮ್ಮ ಉತ್ತರಾಧಿಕಾರಿಗೂ ನೀವು ನಿಮ್ಮ ಗುರುವಿನಂತಹ ಗುರುವೇ ಆಗುತ್ತೀರಿ!!!

  5. ಗಂಗಾಧರಮೂರ್ತಿ ಮಾವಳ್ಳಿ
    Oct 21, 2022 Reply

    ವಿಶ್ವಬಂಧು ಮರುಳಸಿದ್ಧರು ಸದ್ಧರ್ಮ ಪೀಠದ ಸಂಸ್ಥಾಪಕರು. ಅವರು ತೆಲಗುಬಾಳು ಸಿದ್ದೇಶ್ವರರನ್ನು ಸದ್ಧರ್ಮ ಪೀಠದ ಮೇಲೆ ಕೂರಿಸಿ ‘ತರಳ ಬಾಳು’ ಎಂದು ಹಾರೈಸಿದರು. ಅದೇ ಪರಂಪರೆಯಲ್ಲಿ 20ನೆಯ ತರಳಬಾಳು ಜಗದ್ಗುರುಗಳವರಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಲೋಕದ ತರಳರೆಲ್ಲರನ್ನೂ ಆದರ್ಶವಾಗಿ ಬಾಳಬೇಕು ಎಂದು ಹಾರೈಸುತ್ತಿದ್ದರು… ಲೇಖನವನ್ನು ಓದುತ್ತಾ ತನ್ಮಯನಾಗಿ ಹೋದೆ. ಹಿಂದಿನ ಸ್ವಾಮಿಗಳೆಲ್ಲಾ ಎಷ್ಟು ತ್ಯಾಗಿಗಳು, ನಿಸ್ವಾರ್ಥಿಗಳು ಆಗಿದ್ದರು!

  6. ಶಾರದಾ ಬೆಳಗಾವಿ
    Oct 23, 2022 Reply

    ಅಪರೂಪದ ಗುರುವಿಗೆ ಅಪರೂಪದ ಶಿಷ್ಯ! ನಿಮ್ಮಿಬ್ಬರನ್ನೂ ಪಡೆದ ಮಠ ಧನ್ಯ, ಭಕ್ತರು ಪುಣ್ಯಾತ್ಮರು!!!

  7. prakash R
    Oct 23, 2022 Reply

    ಗುರುವಿನ ಕುರಿತಾದ ಅಭಿಮಾನ ಸಾಲುಸಾಲುಗಳಲ್ಲು ಅಭಿವ್ಯಕ್ತವಾಗಿದೆ. ನಿಮ್ಮ ಆರಂಭಿಕ ದಿನಗಳ ಪಯಣ ಓದಿ ಸೋಜಿಗವಾಯಿತು, ತಮ್ಮ ಮೇಲಿನ ಭಕ್ತಿ, ಪ್ರೀತಿ, ವಿಶ‍್ವಾಸಗಳು ಮತ್ತಷ್ಟು ಅಧಿಕಗೊಂಡವು.

  8. ಯತೀಶ್ ಗಿರಿಯಣ್ಣ
    Oct 27, 2022 Reply

    ಮಠಗಳ ಬಗೆಗೆ ನಂಬಿಕೆಯೇ ಕುಸಿಯುತ್ತಿರುವ ಈ ದಿನಗಳಲ್ಲಿ ಹಿರಿಯ ಶ್ರೀಗಳ ಕಳಕಳಿ ಮತ್ತು ನಿಮ್ಮ ಶ್ರದ್ಧೆ ಮತ್ತು ನಿಷ್ಠೆಗಳು ತೀರಾ ಅಪರೂಪವೆನಿಸುತ್ತಿವೆ. ಆಗಿನ ಸಂದರ್ಭದಲ್ಲಿ ಮಠಗಳ ಜರೂರತ್ತು ಸಮಾಜಕ್ಕಿತ್ತು, ಈಗ ಅಂತಹ ಅವಶ್ಯಕತೆ ಇದೆಯೇ ಎನ್ನುವುದು ನನ್ನ ಪ್ರಶ್ನೆ, ದಯವಿಟ್ಟು ಗುರುಗಳು ಬೇಸರಿಸಿಕೊಳ್ಳದೆ, ಕೋಪ ಮಾಡಿಕೊಳ್ಳದೆ ನನ್ನ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವರೆಂದು ಕೇಳಿಕೊಳ್ಳುವೆ.

  9. venkatesh K
    Oct 29, 2022 Reply

    ನೌಕರಿಗಾಗಿ ಹೋದವರಲ್ಲಿ ಗುರುವಿನ ರೂಪವನ್ನು, ಅರಿವಿನ ಚೇತನವನ್ನು ಗುರುತಿಸಿದ ಹಿರಿಯ ಗುರುಗಳಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು!!

  10. Mahesh D
    Nov 5, 2022 Reply

    ತರಳುಬಾಳು ಮಠವನ್ನು ಸಂಸ್ಥಾಪಿಸಿದ್ದು ಮರುಳಸಿದ್ದರು ಎಂಬುದು ತಿಳಿದು ಆಶ್ಚರ್ಯವಾಯಿತು. ಮೂಲಸಂಸ್ಥಾಪಕರ ಕುರಿತು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬೇಕೆಂದು ಗುರುಗಳಲ್ಲಿ ನನ್ನ ವಿನಂತಿ.

Leave a Reply to ಯತೀಶ್ ಗಿರಿಯಣ್ಣ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಗಣಾಚಾರ
ಗಣಾಚಾರ
August 8, 2021
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
Copyright © 2025 Bayalu