
ಕೈಗೆಟುಕಿದ ಭಾವ ಬುತ್ತಿ
ಹೊಳೆದಾಟಿ ಗುಡ್ಡಗಳ ವಾರೆಯನ್ನೇರಿ ತಿರುಗಿ ನೋಡಿದಾಗ ಬಾನೆಂಬುದು ಬಿಲ್ಲಿನಾಕಾರದಲ್ಲಿಯೂ, ಚಂದ್ರಮೌಳೇಶನ ಗುಡಿಯ ಕಳಶವು ಸರಳಿನ ಹಾಗೆ ಕಾಣಿಸಿತು. ಆ ಕಳಶದ ಮೇಲೆ ಸೂರ್ಯನ ಬೆಳಕು ಬಿದ್ದಾಗ, ಅದೇ ಸಿದ್ಧಸಾಧುವಿನ ಕಂಗಳಲ್ಲಿ ಅಡಗಿದ ಬೆಳಕಿನಂತದೇ ಭ್ರಮೆ ಕಾಣಿಸಿ ಗಕ್ಕನೆ ನಿಂತುಬಿಟ್ಟ. ಇದೇನು ಭ್ರಮೆಯು..! ಹುಡುಕುತ್ತ ಹೊರಟ ಬೆಳಕಿನ ಸೋಜಿಗವೂ ಊರಲ್ಲೇ ಇರುವುದಲ್ಲ.
ಈ ಇರುವ ಸೋಜಿಗವನ್ನು ಅರಿಯುವುದು ಹೇಗೆ..? ದಕ್ಕಿತು ಎನ್ನುವುದೆಲ್ಲವೂ ಮಾಯೆಯ ಹಾಗೆ ಕಣ್ಣೆದುರು ಸುಳಿದು ಮಾಯವಾಗುವುದು. ಭಾವದೊಳಗಿಳಿದ ಚೆಲುವು, ಗುರುವಿನ ಕಂಗಳಲ್ಲಿ ಅಡಗಿದ ಬೆಳಕು, ಬೆಳಕನ್ನು ನುಂಗುವ ಕತ್ತಲು. ಜೀವ ತತ್ತರಿಸಿ ಮುದಿಯಾದರೂ ಹೆಂಡತಿಯ ಮೇಲಿನ ಮೋಹವೂ, ಕುಣಿದು- ಹಾಡಿ ಶಿವನೊಲಿಸುವ ಹಂಬಲವೂ ಎಲ್ಲವೂ… ತಿಳಿದರೂ ಅರಿವಿಗೆ ಬಾರದ ಹಾಗೆ ಘಟಿಸುತ್ತಿರುವ ಸಂಗತಿಗಳನ್ನು ಮೊದಲೇ ಅರಿಯುವುದು ಹೇಗೆ..? ಅಪ್ಪ ಹೇಳಿದ ಬಸವರಸನಲ್ಲಿ ಇವುಗಳಿಗೆಲ್ಲ ಉತ್ತರ ಸಿಕ್ಕೀತೆ! ರೌದ್ರರಸವನ್ನೇ ನುಂಗಿದ್ದ ಆ ತಾಯಿಯ ಕಂಗಳಲ್ಲಿ ಆ ನವರಸಗಳನ್ನೂ ತನ್ನೊಡಲೊಳಗೆ ಇರಿಸಿಕೊಂಡ ಶಾಂತರಸ ಯಾಕೆ ಕಾಣದಾಯ್ತು. ಏನೋ ಒಂದು ಊನ, ಮತ್ತೇನೋ ಒಂದು ಕೊರತೆ… ಗುರು ಹೇಳುತ್ತಿದ್ದ ಸದಮಲ ತತ್ವದಲ್ಲೂ ಕಿಂಚಿದೂನು.. ಈ ಊರು ತೋರುವ ಭ್ರಮೆಯೂ ಮತ್ತದೇ ಬಂಧನ. ಗಕ್ಕನೇ ತಿರುಗಿದಾಗ ಗುಡ್ಡಗಳದ್ದೇ ಸಾಲು.
“ಒಂದೊಮ್ಮೆ ಯುದ್ದಗಳ ಕಾರಣವಾಗಿ ರಣಕಲ್ಲು ಎಂದೆ ಕರೆಯುತ್ತಿದ್ದ ವಾತಾಪಿಯ ರಾಜರು ಸೇಡು ಕೇಡುಗಳ ಪಾಪ ಪರಿಹಾರಕ್ಕಾಗಿ ಕಲ್ಲುಗಳ ಪಟ್ಟವನ್ನೇರಿಸಿ ಗುಡಿಗಳ ಕಟ್ಟಿ ಪಟ್ಟದಕಲ್ಲು ಮಾಡಿದರು. ಅದೆಷ್ಟು ಜೀವಗಳು ಯುದ್ಧಗಳಿಗೆ ನಲುಗಿ ಈ ಗುಡ್ಡಗಳ ಹೊಕ್ಕು ಬಾಯಾರಿ ಸತ್ತರೋ… ಸಾವು, ಸತ್ತ ಮೇಲೆ ಏನಾಗುವುದು ಈ ದೇಹದೊಳಗಿನ ಜೀವವು. ಅಪ್ಪನಿಗೆ ಸಾವುಗಳು ಎಷ್ಟು ಎದುರಾಗಿ ಬದುಕಿ ಬಂದನೋ ಏನೋ… ಅವನು ಮನೆ ಸೇರಿದಾಗ ನಾನು ಹೀಗೆ ಗೊತ್ತುಗುರಿಯಿಲ್ಲದೆ ನಡೆದು ಬಿಡುವುದು ಸರಿಯೇ.. ದಂಡಿನವರು ಏನೆಂದುಕೊಂಡಾರು..? ದಳವಾಯಿಗಳು ಕಲಿಸಿದೆಲ್ಲ ವರಸೆಗಳು ವ್ಯರ್ಥವಾದುವಲಾ ಎಂದಾರೆ… ಚಂದ್ರಲಾ ಮೈಮುಟ್ಟಿದಾಗ ಸಾವನ್ನೂ ಮರೆಸುವ ಮೆದುತನವಿತ್ತಲ್ಲ… ಒಂದಷ್ಟು ಮುದ, ಮತ್ತಷ್ಟು ಮೋಹ, ವ್ಯಸನ, ಆಸೆ ಆಕಾಂಕ್ಷೆ, ಒಲವು ನಿಲುವುಗಳೆಲ್ಲ ಯಾಕಾಗಿ ಮನಸ್ಸನ್ನು ಸೂರೆಗೊಳ್ಳುತ್ತವೆ. ಇದೆಲ್ಲವನ್ನೂ ಅರಿತು ಅನುಭವಿಸುವ ಸುಖ ಯಾವುದು..? ಈ ಅರಿವಿನ ಪಯಣ ಮುಂದುವರೆಸಲೇ… ಹಿಂತಿರುಗಿ ಊರಿಗೆ ಹೋಗಿ ಬದುಕ ಬಂದಂತೆ ಜೀಕಲೇ…”
ಮನಸ್ಸಿನ ಹೊಯ್ದಾಟ ನಿಲ್ಲದಾಗಿತ್ತು. ಒಂದಾದ ಮೇಲೊಂದರಂತೆ ಚಕ್ರಕ್ಕೆ ಸಿಕ್ಕಿಸಿದ ನವಿಲುಗರಿಗಳ ಹಾಗೆ ತಿರುವು ಮುರುವಾಗಿ ಮತ್ತದೇ ಪ್ರಶ್ನೆಗಳು, ಮತ್ತದೆ ಹೊಯ್ದಾಟಗಳನ್ನು ತುಂಬಿಕೊಂಡು ಕಣಿವೆಯೊಂದನ್ನಿಳಿದು ಮತ್ತೊಂದು ದಿನ್ನೆಯನ್ನೇರಿ ಅಲ್ಲಿ ವಿಶಾಲ ಕಲ್ಲಬಂಡೆಯ ಮೇಲೆ ನಡೆದು ಹೊರಟಿದ್ದವನಿಗೆ ಕಡಿದಾದ ಕಂದಕ ಎದುರಾಯ್ತು. ದಾರಿ ತಪ್ಪಿದೆನೆ… ಅರಸಿಬೀದಿಯ ದಾರಿ ಎತ್ತ ಹೋಯಿತು…
ಹಿಡಿದಿದ್ದ ಬೆತ್ತವನ್ನು ಕೆಳಗಿಟ್ಟು, ತತ್ತರಾಣಿಯಿಂದ ನಾಲಗೆಯ ಆಯಾಸಕ್ಕೆ ನೀರು ಗುಟುಕರಿಸಿ ಚಪ್ಪಡಿ ಕಲ್ಲಮೇಲೆ ಕುಳಿತು… ತಾನು ಕಲ್ಪಿಸಿಕೊಂಡಿದ್ದ ಮಲಪ್ರಹರಿ ನದಿಯನ್ನ ಸಣ್ಣದೊಂದು ಕಲ್ಲಿನಿಂದ ಗೆರೆ ಎಳೆದ. ಸೂರ್ಯ ಮೂಡುವ ದಿಕ್ಕಿನೆಡೆಗಿನ ಗುಡ್ಡಗಳೆರಡನ್ನು ಬರೆದ, ತುಸು ದೂರ ಉತ್ತರಕ್ಕಿದ್ದ ಇಳಕಲಿನೊಳಗೆ ಹರಿದು, ಗುಡ್ಡಗಳ ದಾಟಿ ಅಯ್ಯಾಹೊಳೆಯಲ್ಲಿ ಮೂಡಣಕ್ಕೆ ತಿರುಗುವ ಮಲಪ್ರಹರಿಯನ್ನೂ ಬರೆದ… ಅಂಕುಡೊಂಕಾದ ನದಿಯ ಕಲ್ಪನೆಯೂ, ಗುಡ್ಡಗಳ ದಿಕ್ಕೂ ಸರಿಯಾಗಿದ್ದರೂ ತಾನು ಈ ನಕ್ಷೆಯಲ್ಲಿ ಬಂದು ನಿಂತುದೆಲ್ಲಿ ಎಂಬ ಗೊಂದಲವಾಯ್ತು. ಆ ಚಿತ್ರ ಬಿಟ್ಟ ಮತ್ತೊಂದು ಬರೆದ. ಅದರಲ್ಲಿ ಮೂರೂ ಗುಡ್ಡಗಳ ದಾಟಿದ್ದು ಬರೆದ, ಆದರೆ ಎರಡನೆಯ ಕಣಿವೆಯಿಂದಿಳಿದು ಯಾವ ದಿಕ್ಕಿಗೆ ನಡೆದೆನು, ಗುಡ್ಡದ ಯಾವ ಮಗ್ಗುಲು ಹಿಡಿದೆನೆಂಬುದು ಗೊಂದಲವಾಯ್ತು. ಬಂದ ದಾರಿಯನ್ನು ತುಳಿದು ಹಿಂದೆ ಹೋಗುವ ಮನಸ್ಸಾಗಲಿಲ್ಲ. ಬೆತ್ತವನ್ನು ಕಂಬವಾಗಿ ನಿಲ್ಲಿಸಿದಾಗ ಸೂರ್ಯನ ನೆರಳೂ ತಾನು ಬಂದ ದಾರಿಗೆ ವಿರುದ್ಧವಾಗಿ ಬಾಗಿತ್ತು.
ಪಡುವಣಕ್ಕೆ ಎರಡು ಹೆಜ್ಜೆ ಇಟ್ಟಿದ್ದ ಸೂರ್ಯನೂ ದಿಕ್ಕುತಪ್ಪಿಸಿದನಲ್ಲಾ… ಸುತ್ತಿಬಳಸಿ ನಾನೆಲ್ಲಿ ಮಹಾಕೂಟದ ಗುಡ್ಡದ ಕಡೆಗೆ ಬಂದೆನೋ.. ಚಂದ್ರಮೌಳೇಶ.. ದಾರಿ ತೋರಪ್ಪಾ.. ಕಾಲುದಾರಿಯ ಗುರುತುಗಳೂ ಮೂಡದ ಅಖಂಡ ಚಪ್ಪಡಿ ಕಲ್ಲಮೇಲೆ ನಡೆದು ಬಂದದ್ದೇ ಯರವಾಯ್ತಲಾ.. ರಣಕಲ್ಲಿಗೂ ವಾತಾಪಿಗೂ ಕಾಲದಾರಿಗೆ ಕಲ್ಲು ಜೋಡಿಸಿರುವ ಹಾಗೆ ಅರಸಿ ಬೀದಿಗಾದರೂ ಯಾಕೆ ಜೋಡಿಸಲಿಲ್ಲ ಕಲ್ಲುಗಳ. ಹೋಗಲಿ ರಥ, ಮೇಣೆಗಳ ಸಂಕದ ಹಾದಿಯೂ ತೋರದಂಥ ಈ ವಿಚಿತ್ರದ ಕಲ್ಲುಹಾಸಿನ ಮೇಲೆ ಹೇಗೆ ಬಂದೆನು… ಪುರಾಣಪುಣ್ಯಕತೆಗಳಲ್ಲಿ ಬರುವ ಮಾಯೆಯ ಕಾಟವೇ ಇದು ಎಂಬಿತ್ಯಾದಿಯಾಗಿ ಕಲ್ಪಿಸಿಕೊಂಡನು. ಹಸಿವೆಂಬುದು ಹೊಟ್ಟೆಯಿಂದ ಹೊರಟು ಮೈಯ ನರನಾಡಿಗಳಿಗೂ ಹಬ್ಬಿ ನಿತ್ರಾಣವೆಂಬುದು ಕಣ್ಣಿಗಾವರಿಸಿ ಬಿಸಿಲಿನ ಝಳ ಕ್ಷಣ ಸುಧಾರಿಸಲು ಎರಡು ಹೆಬ್ಬಂಡೆಗಳ ನಡುವಿನ ಸಣ್ಣದೊಂದು ನೆರಳಿಗೆ ಹೋಗಿ ಕುಳಿತ.
ದೂರದಲ್ಲೆಲ್ಲೋ ‘ನಮಃ ಶಿವಾಯ’ ಎಂಬ ಐದಕ್ಷರಗಳ ಸ್ಪಷ್ಟ ಉಚ್ಚಾರವು ಅಲೆಅಲೆಯಾಗಿ ಗುಡ್ಡಗಳ ನಡುವಿನ ಕಂದಕದಿಂದ ಕೇಳಿಬಂದಿತು. ಈ ಬಗೆಯಲ್ಲಿ ಎಂದೂ ಕೇಳಿರದ ಸ್ವರದ ಆಹ್ಲಾದ ವಸೂದೀಪ್ಯನ ಮನಸ್ಸು ಮುದಗೊಳಿಸಿತು. ಸ್ವರ ಬರುವ ದಿಕ್ಕಿನೆಡೆಗೆ ಚಪ್ಪಡಿ ನೆಲಹಾಸಿನ ತುದಿಯಿಂದ ಇಳಿಜಾರಿನಲ್ಲಿ ಕಾಲುದಾರಿಯೊಂದು ಕಾಣಿಸಿತು. ವಸೂದೀಪ್ಯನ ಜೀವ ಚೈತನ್ಯಗೊಂಡು ಲುಟುಪುಟನೇ ಹೆಜ್ಜೆಹಾಕಿ ಆ ಕಂದರದ ನಡುವೆ ಇಳಿದು ಒಂದು ಗುಹೆಯ ಮುಂದೆ ಬಂದು ನಿಂತ. ‘ನಮಃ ಶಿವಾಯ’ ಎಂಬ ಬಲಗೊಂಡ ಧ್ವನಿಯ ಗಡಸು ಆ ಗುಹೆಯ ಬಂಡೆಕಲ್ಲನ್ನು ಕಂಪಿಸುವಂತಿತ್ತು. ತಿಳಿನೀರು ಕಲ್ಲಪೊಟರೆಯಲ್ಲಿ ಬಿಳಲಾಗಿದ್ದ ದೊಡ್ಡಾಲದ ಬೇರಿನಲ್ಲಿ ಜುಳುಜುಳು ಹರಿಯುತ್ತ ಮತ್ತೆಲ್ಲೋ ಕಲ್ಲಮಡುವಿನಲ್ಲಿ ಮಾಯವಾಗುತ್ತಿತ್ತು. ಕಟಿಕಟಿ ಎಲುವಿನ ಗೂಡಾಗಿದ್ದ ಜೀವವೊಂದು ಅಲ್ಲಿ ಅನುಷ್ಠಾನಕ್ಕೆ ಕುಳಿತು ‘ನಮಃ ಶಿವಾಯ’ ಉಚ್ಚಾರವನ್ನು ಅತ್ಯುಗ್ರವಾಗಿ, ಘನಗಂಭೀರ ಸ್ವರದಲ್ಲಿ ಪಠಿಸುತ್ತಿತ್ತು. ಯಾವೊಂದು ನರಪಿಳ್ಳಿಯೂ ಈ ಕಂದಕವನ್ನು ಏರಿಳಿದು ಬರಲಾರದ ಈ ಭೂಮಿಯ ಸೋಜಿಗದ ನಡುವೆ ಎಲುವಿನ ಗೂಡು ಕುಳಿತಿದೆ. ಯಾರೀ ತಪಸ್ವಿ..!
ಸ್ವರಗೊಂಬ ವಿಸ್ತಾರವು ಮುಗಿಯಲೆಂದು ಕಟ್ಟೆಯ ಕೆಳಗೆ ಕುಳಿತ.
“ಯಾವ ಘನ ಉದ್ದೇಶದಿಂದ ಊರು ಬಿಟ್ಟೆಯೋ.. ಆ ದಿಕ್ಕಿಗೆ ವಿರುದ್ಧ ಬಂದಿರುವಿ.”
“ಹೌದು ತಂದೆ, ದಾರಿ ತಪ್ಪಿತು.”
“ದಾರಿ ತಪ್ಪಿದೆ. ಆದರೆ ಹುಡುಕಾಟದ ಕ್ರಮ ತಪ್ಪಿಲ್ಲ.”
“ಅಯ್ಯಾ ನಾನು ಮೆಲುವಾಗಿ ಹೆಜ್ಜೆಯಿಟ್ಟು ನಿಮ್ಮ ಗುಹೆಗೆ ಬಂದೆ. ನಾನು ಬಂದುದರ ಅರಿವಿದ್ದು ಇಷ್ಟೊತ್ತು ಕಾಯಿಸಿದಿರೆ.”
“ಮೈಮನಸ್ಸು ಜಾಗೃತವಿಲ್ಲದಿದ್ದರೆ ಯಾವ ತಪವೂ ತಪವಲ್ಲ.”
ಸುಖಾಸನದಲ್ಲಿ ಕುಳಿತಿದ್ದ ತಪಸ್ವಿ ನಿಧಾನಕ್ಕೆದ್ದು ನೀರು ಬೀಳುತ್ತಿದ್ದ ಜಾಗದೆಡೆಗೆ ಕೈಮುಗಿದು, ಜಡೆಯನ್ನು ಹಿಂದಕ್ಕೆ ಮಾಡಿ ಗಂಟು ಕಟ್ಟಿದ. ಗುಹೆಯ ಒಳಗೆ ಹೋಗಿ ಮೇಲು ಹೊದಿಕೆಯೊಂದನ್ನು ಮೈಮೇಲೆ ಹೊದ್ದುಕೊಂಡು ವಸೂದೀಪ್ಯನ ಮುಂದೆ ಬಂದು ನಿಂತ. ಸಾಕ್ಷಾತ್ ಸಿದ್ದಸಾಧುವಿನದೇ ಮುಖಹೋಲಿಕೆ. ಆದರೆ ನೆರೆತ ಕೂದಲು, ನೆರಿಗೆಯಾದ ಮೈಚರ್ಮ ದೇಹದೊಳಗಿನ ಮೂಳೆಗಳು ಗುರುವಿನ ದೇಹಪ್ರಕೃತಿಯನ್ನೇ ಬದಲಿಸಿದ್ದರೂ ಮುಖದೊಳಗಿನ ಆ ತೇಜಸ್ಸು ಕೊಂಚವೂ ಬದಲಾಗಿರಲಿಲ್ಲ.
“ಗುರುವೇ.. ನಾ ಧನ್ಯನಾದೆ.”
“ನಾಗಿಣಿಯಕ್ಕ ಸಿಕ್ಕಿದ್ದಳೇನಪಾ ಶಿಶುಮಗನೇ..!”
“ಇಲ್ಲ ಅಯ್ಯಾ ನನಗಾರೂ ಸಿಕ್ಕಿಲ್ಲ.”
“ಬಲಗೈ ರಟ್ಟೆಯ ಮೇಲೆ ಆ ಸಾತ್ವಿಕಳು ಕೊಟ್ಟ ಗುರುತಿದೆಯಲ್ಲಾ ಕಂದ.”
“ಇದು, ಅಪ್ಪ ಕಟ್ಟಿದ ಆ ಮಹಾಮಹಿಮಳ ದಾರ…”
“ಅಪ್ಪ ಎಂಬ ಆಲ ಹಿಂತಿರುಗಿ ಬಂದನೇ.. ಅವನು ಬಂದದ್ದೆ ನೀ ಬಿಡುಗಡೆಯಾದೆ. ನಾಗಿಣಿಯಕ್ಕ ಅಂದರೆನೇ ಹಾಗೆ..”
“ಆ ತಾಯಿಯನ್ನು ನೀವು ಕಂಡೀರಾ ಅಯ್ಯಾ…?”
ಅವರ ಕಣ್ಣೊಳಗಿನ ರೌದ್ರತನ… “ಆ ಕಂಗಳಲ್ಲಿ ನಾನು ಕಂಡದ್ದು ಶಾಂತ ರಸವನ್ನು, ಅದು ಯಾವ ಆಧ್ಯಾತ್ಮ ಜೀವಿಗೂ ನಿಲುಕಲಾರದ ಸ್ಥಿತಿ. ಎಷ್ಟು ಸರಳ ಮಾತುಕತೆ, ತಾಯ್ತನದ ಮಮತೆಯನ್ನು ಸಾಕ್ಷಾತ್ ಹಿಂಗುಳಾದೇವಿಯ ಕರುಣೆಯಿಂದಲೇ ಪಡೆದಾಕೆ ಆಕೆ. ಆ ಕರುಳಬಳ್ಳಿಯ ಗುರುತೊಂದು ನಿನ್ನ ರಟ್ಟೆಯ ಮೇಲೆ ಕಂಡುದೇ ಸೋಜಿಗ…ಇಗೋ ಇಲ್ಲಿ ನೋಡು ಅದೇ ಗುರುತಿನ ದಾರ ನನ್ನ ತೋಳಲ್ಲೂ ಇದೆ.”
ಬಡಕಲಾದ ಆ ಕೈಯ ರಟ್ಟೆಯಲ್ಲಿ ಬಿಗಿದಿದ್ದ ದಾರವು ಚರ್ಮಕ್ಕೆ ಅಂಟಿಕೊಂಡಿತ್ತು. ಈ ಗುರುವೆಂಬ ಗುರುವೂ ಹುಟ್ಟಿಗೆ ಕಾರಣನಾದ ಅಪ್ಪನಂತೆಯೇ ಲೋಕ ತಿರುಗಿ ಜ್ಞಾನಿಯಾದವನು. “ಗಂಗಾನದಿಯ ಆಚೆಗಿನ ಪಹಾಡಿಯೊಂದರಲ್ಲಿ ಶಿವನ ಕರುಣೆಗಾಗಿ ಅಲೆದಾಡುತ್ತಿದ್ದಾಗ ನಾಗಿಣಿಯಕ್ಕ ನನಗೆ ಸಿಕ್ಕಿದ್ದರು. ಶಿವೆಯ ಸ್ವರೂಪದಲ್ಲಿ ಸಿಕ್ಕವರು ಎಳೆಯ ಮಗುವಿನಂತೆ ನನ್ನ ಮನದ ಭ್ರಾಂತು ಬಗೆಹರಿಸಿ, ನೆತ್ತಿಯ ಕಾವಿಗೆ ಔಡಲೆಣ್ಣೆಯ ತಟ್ಟಿ, ಅರಸುತ್ತಿದ್ದ ತಿಳಿವಿನ ಮದ್ದು ಕುಡಿಸಿ, ಉಸಿರಾಡುವ ಕ್ರಮವೊಂದನ್ನು ಹೇಳಿಕೊಟ್ಟರಪ್ಪ. ಆ ಉಸಿರೇ ಶೂನ್ಯವೆಂದರು. ಅವರ ಕರುಣೆ ನಿನಗೂ ಸಿಕ್ಕಿದೆಯಲ್ಲಾ.. ವಸೂದೀಪ್ಯ ಉಂಡೆಯಾ..?”
“ಇಲ್ಲ ಅಯ್ಯಾ…”
“ಹರವಿಯಲ್ಲಿ ಚಕ್ರಾಂಕ ತೊಪ್ಪಲ ರಸವಿದೆ. ಕಲ್ಲಬಾಳೆ ಇದೆ. ತಿಂದು ದಣಿವಾರಿಸಿಕೋ.”
“ಅಯ್ಯಾ ನಿಮಗಾಗಿ, ನೀವು ತೋರಿದ ನಿಜದ ಬೆಳಕಿನ ಅರಿವಿಗಾಗಿ…”
“ಮಾತು ಕಡಿಮೆ ಮಾಡು, ಮೌನವನ್ನು ಆಸ್ವಾದಿಸು.”
ಹೂಂ ಎಂದು ತಲೆಯಾಡಿಸಿ ಸಿದ್ದಸಾಧುವಿನ ಎದುರಿಗೆ ಉದ್ದಂಡ ನಮಸ್ಕರಿಸಿ ಮುಗುಮ್ಮಾಗಿ ಕುಳಿತ. ಗುರು ಕೊಟ್ಟ ಚಕ್ರಾಂಕ ಎಲೆಯ ರಸವನ್ನು ಕುಡಿದಾಗ ಒಂದು ಬಗೆಯ ಮದ ಮೈ ಕಂಪಿಸಿತು. ನಾಲಗೆಯ ಅಳತೆಯು ಬಾಯ್ತುಂಬ ತುಂಬಿ ಮಾತೇ ಹೊರಡದಂತ ಅನುಭವವಾಯ್ತು. ಕಲ್ಲಬಾಳೆ ಹಣ್ಣೊಂದನ್ನು ಕೊಟ್ಟಾಗ ತಿನ್ನಲು ಬಾಯ್ದೆರೆಯದಷ್ಟು ನಾಲಗೆ ದಪ್ಪಾಗಿತ್ತು. ಹೇಗೋ ತುಟಿಯ ಅಂಚಿನಿಂದ ಈಟೀಟೆ ಹಣ್ಣು ತಿಂದಾದ ಮೇಲೆ ನಾಲಗೆ ಇರುವಂತೆ ಇದೆ ಎನಿಸಿತು. ಕೇಳಲು ಎಷ್ಟೊಂದು ಪ್ರಶ್ನೆಗಳಿದ್ದರೂ ಮಾತಾಡದಂತೆ ಗುರುಗಳು ಕೈಸನ್ನೆ ಮಾಡಿ ಸುಮ್ಮನಿರಿಸಿ ಗುಹೆಯ ಮುಂದಲ ಕಲ್ಲಬಂಡೆಯ ಮೇಲೆ ಸರಾಗವಾಗಿ ಹತ್ತಿ, ಸೂರ್ಯಾಸ್ತಮಾನ ನೋಡತೊಡಗಿದರು. ಅವರ ಕೈಕಾಲೊಳಗೆ ಎಂಥಾ ಜಿಗುಟಿನ ಶಕ್ತಿ ಇದೆ. ಅವರು ಹೊರಡಿಸುತ್ತಿದ್ದ ನಮಃ ಶಿವಾಯ ಸ್ವರದಲ್ಲೂ ಅದೇ ಜಿಗುಟತನವಿತ್ತಲ್ಲ..! ವಸೂದೀಪ್ಯ ಆ ಕಲ್ಲಬಂಡೆ ಹತ್ತಲು ಹರಸಾಹಸ ಪಟ್ಟು, ಕಟ್ಟಕಡೆಗೆ ಬಂಡೆಯನ್ನೇರಿ ಗುರುವಿನ ಮಗ್ಗುಲಲ್ಲಿ ನಿಲ್ಲುವಷ್ಟರಲ್ಲಾಗಲೇ ಸೂರ್ಯ ಮುಕ್ಕಾಲು ಮುಳುಗಿದ್ದ. ಅದೇ ತದೇಕಚಿತ್ತದಲ್ಲಿ ಸೂರ್ಯಮಂಡಲದ ಎಲ್ಲ ಬೆಳಕನ್ನೂ ಕಣ್ಣೊಳಗೆ ತುಂಬಿಸಿಕೊಳ್ಳುವ ನಿಶ್ಚಲತೆ ಗುರುವಿನ ಕಣ್ಣಲ್ಲಿತ್ತು. ಪುಟ್ಟಪೂರ ಮುಳುಗಿದ ಮೇಲೂ ದಿಗಂತದಲ್ಲಿ ಒಡಮೂಡುವ ಬಂಗಾರಬೆಳಕೂ ನಿಧನಿಧಾನ ಕರಗಿ ಸಿದ್ಧಸಾಧುವಿನ ಕಣ್ಣೊಳಗೇ ಅಡಗಿತು. ಅಂದು ಕಂಡ ಬೆಳಕಿಗಿಂತ ಮೃದುವಾದ ಬೆಳಕಿಂದು ಗುರುವಿನ ಕಂಗಳಲ್ಲಿ ಅಡಗಿತ್ತು.
“ಕಂಡೆಯಾ ವಸೂದೀಪ್ಯ.. ಬೆಳಕನ್ನು ಕತ್ತಲು ನುಂಗಿದ್ದ.”
“ಕಂಡೆ ಅಯ್ಯಾ… ನಿಮ್ಮ ಕಣ್ಣೊಳಗೆ.”
“ಮತ್ತೆ ಮಾತಿನೆಂಜಲು.. ಅರಿತೆನೆಂಬ ಅರಿವು ಕೇವಲ ಜ್ಞಾನ. ಅಹಂಕಾರ ಬಸಿಯಬೇಕು. ಕ್ಷಣಕ್ಷಣದ ಅರಿವು ಬಲಿಯಬೇಕಿದೆ.”
ಹಕ್ಕಿಗಳ ಉಲುವು, ಪಶುಪ್ರಾಣಿಗಳ ಚಲನವೆಲ್ಲ ಸ್ತಬ್ಧಗೊಂಡಂತೆ ಚುಕ್ಕಿಗಳ ಪಟಲವು ಒಂದೊಂದಾಗಿ ಬಿಚ್ಚುತ್ತ ಆಕಾಶ ಮಂಡಲವೆಂಬುದು ಕರಿಕಂಬಳಿಯ ಮೇಲೆ ಹೊಯ್ದ ಅಕ್ಕಿಯ ಮಂಡಲದಂತೆ ಕಾಣತೊಡಗಿತು. ಅದೆಷ್ಟೋ ಹೊತ್ತು ಅದೇ ಕಲ್ಲಬಂಡೆಯ ಮೇಲೆ ಗುರುಶಿಷ್ಯರು ಮೌನದಲ್ಲೇ ಕುಳಿತಿದ್ದರು. ದೀರ್ಘವೆನಿಸುವ ಉಸಿರಾಟದ ಸರಪಳಿಯೊಂದನ್ನು ಸಿದ್ದಸಾಧು ಅಭ್ಯಸಿಸುತ್ತಿರುವುದು ತಿಳಿದ ವಸೂದೀಪ್ಯ ತನ್ನ ಉಸಿರಾಟವನ್ನು ಹೌದೋ ಅಲ್ಲವೆಂಬಂತೆ ಹದಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ.
“ಬದುಕಿದ್ದಿಯಲ್ಲಪ್ಪಾ ಉಸಿರಾಡು ಸುಮ್ಮನೇ… ನಿಯಂತ್ರಿಸಬೇಡ.”
ಉಸಿರಿನ ಮೇಲಿದ್ದ ಗಮನ ಗುರುವಿನ ಕಡೆಗೆ ತಿರುಗಿತು. ಗುರುವೆಂಬೋ ಗುರುವು ಮೊದಲಿನಂತಿಲ್ಲ. ದೇಹ ಕೃಶವಾಗಿದ್ದರೂ ಅವರ ಧ್ವನಿ, ನೋಟ, ನಿಲುವುಗಳಲ್ಲೆಲ್ಲ ನಿಖರವಾದ ದೃಢತೆ ಬಂದಂತಿತ್ತು. ತತ್ವ ಹೇಳುವಾಗಿನ ಅವರ ಕಲ್ಪನೆ ಈಗ ಧ್ವನಿಯಷ್ಟೆ ಸ್ಪುಟವಾಗಿತ್ತು.
“ಅರಿವು ಎನ್ನುವುದನ್ನು ಸರಳಗೊಳಿಸಿಕೋ.. ಮನಸ್ಸಿನ ಹೊಯ್ದಾಟ ಬರೀ ಜ್ಞಾನಕ್ಕಾಗಿ ನಡೆಯುವುದು. ಜ್ಞಾನಕ್ಕೂ ಒಂದು ಕಟ್ಟಕಡೆ ಎನ್ನುವುದಿದೆ. ದೇಹ, ಮನಸ್ಸು, ಆಸೆ, ಆಕಾಂಕ್ಷೆ, ಸುಖ-ದುಃಖ, ಆತ್ಮ ಪರಮಾತ್ಮ ಇವೆಲ್ಲವೂ ಇನ್ನೆಲ್ಲೋ ಇದ್ದಾವೆಂದು ಬಗೆಬಗೆಯ ಸಾಧು ಸತ್ಪುರುಷರ ಕಂಡೆ. ಬಳಲಿದೆ. ಚಿತ್‍ಕಳೆ, ಚಿದ್‍ಆನಂದ, ಚಿತ್‍ಶೀಲ ಹೀಗೆ ಏನೇನೋ ವಸ್ತುವಿಷಯಗಳ ಹುಡುಕಾಟ ಬರೀ ಜ್ಞಾನದ ಮಿತಿಯಲ್ಲೇ ಇತ್ತು. ಆ ಮಿತಿಯನ್ನು ಉಸಿರಾಟದೊಳಗೆ ಅರಿವಿಗೆ ತಂದಾಕೆ ನಾಗಿಣಿಯಕ್ಕ.
“ಒಬ್ಬೊಬ್ಬ ಗುರುವೂ ಒಂದೊಂದು ಕಲಿಸಿದ. ಆ ಕಲಿಕೆಯ ಮೊತ್ತವನ್ನು ದಂಡಿನ ಹುಡುಗರಿಗೆ ಧಾರೆಯೆರೆದೆ… ಅದೂ ಸಾಕನಿಸಿ… ಅನುಷ್ಠಾನಕ್ಕೆ ಬಂದೆ.. ಈ ಅಗಾಧವಾದ ಕಲ್ಲುಬಂಡೆಯ ಕಂಡು ಉಸಿರಾಡುವ ಉಸಿರನ್ನು ನಿಯಂತ್ರಿಸಿದೆ.. ಒಳಗೆ ಹೋದ ಗಾಳಿ ಹೊರಗೆ ಬರುವಾಗ ಬಿಸಿಯಾಗಿ ಬರುವುದು, ಹಾಗೆ ಬಂದ ಬಿಸಿಯುಸಿರು ಇಲ್ಲಿ ಈ ಬಯಲಲ್ಲಿ ಕ್ಷಣ ಮಾತ್ರದಲ್ಲಿ ಗಾಳಿಗರವಾಗುವ ಸಂಗತಿ ಅರಿವಿಗೆ ಬಂತು. ಹೀಗೆ ಒಳಹೋಗಿ ದೇಹದಲ್ಲಿ ಒಂದು ಸುತ್ತು ಹಾಕಿ ಬರುವ ಶೂನ್ಯದಲ್ಲೇ ಸಕಲೆಂಟು ತತ್ವಗಳಿದ್ದಾವೆ. ಇದು ಹೇಳಿದರೆ ನಿನಗೆ ಅರ್ಥವಾಗಲಾರದು ಮಗು… ಅದನ್ನು ಅನುಭವಿಸಿಯೇ ಕಂಡುಕೋ.. ನೆನಪಿಟ್ಟುಕೋ ಕಣ್ಣರೆಪ್ಪೆಯನ್ನು ಅಲುಗಾಡಿಸಿದರೂ ಅರಿವು ಎಂಜಲಾಗುತ್ತದೆ.”
ಕತ್ತಲೊಳಗೆ ಒಬ್ಬರ ಮುಖ ಒಬ್ಬರಿಗೆ ಕಾಣುವಷ್ಟು ತಾರಾಮಂಡಲದ ಬೆಳಕು ಹರಡಿತ್ತು. ಗುರುವಿನ ಮಾತುಗಳಲ್ಲಿ ಏನೋ ಒಂದು ಹೊಳವು ಇದೆ. ಅದನ್ನು ಅರಿಯುವುದಕ್ಕಾಗಿ ಏನೋ ಒಂದು ಮಾತಾಡಲು ಬಾಯದೆರೆದವನ ಬಾಯಿ ಮುಚ್ಚಿಸುವಂತೆ ಏಕಾಂತದ ಧ್ಯಾನಸ್ಥಿತಿಯೊಂದನ್ನು ಸನ್ನೆ ಮಾಡಿದರು. ಮತ್ತದೇ ಕಠೋರ ಧ್ವನಿಯಲ್ಲಿ ನಮಃ ಶಿವಾಯ ಪಠಿಸತೊಡಗಿದರು. ಅದೆಷ್ಟೋ ಹೊತ್ತಾದ ಮೇಲೆ ದಾರಿಯ ದಣಿವು ಕಣ್ಣಿಗೆರಗಿ ಕಲ್ಲಿಗೊರಗಿ ನಿದ್ದೆಹೋದನು.
ಬಂಗಾರದೊಡಲು ಮೂಡಣದಲ್ಲಿ ಚುಮುಚುಮು ಬೆಳಕನ್ನು ಹೊತ್ತು ತರುತ್ತಿರುವಾಗ ವಸೂದೀಪ್ಯ ಕಣ್ತೆರೆದು ನೋಡಿದ, ಗುರುಗಳು ಬಿಟ್ಟ ಕಣ್ಣ ಬಿಟ್ಟಂತೆ ರಾತ್ರೆ ಕುಳಿತಿದ್ದ ಧ್ಯಾನಭಂಗಿಯಲ್ಲೇ ಕುಳಿತಿದ್ದರು… ಉಸಿರಾಟವೆಂಬುದು ದೇಹದೊಳಗೆ ಹೊಕ್ಕು ಶೂನ್ಯ ಸುತ್ತಿ ಬರುವುದು ನಿಲ್ಲಿಸಿದ್ದರಿಂದ ಸಿದ್ಧಸಾಧು ಬಯಲಲ್ಲಿ ಬಯಲಾಗಿದ್ದರು.
ತಾನು ದಾರಿ ತುಳಿದದ್ದು ಸರಿಯಾಗಿಯೇ ಇತ್ತು. ಕೊನೆಗಳಿಗೆ ಸಮೀಪಿಸಿದ್ದನ್ನು ಅರಿತುಕೊಂಡ ಸಿದ್ಧಸಾಧುವೇ ತನ್ನನ್ನು ಇಲ್ಲಿಗೆ ಕರೆಯಿಸಿಕೊಂಡ. ಹೌದು ತಾವು ಕಂಡುಂಡ ಸತ್ಯಗಳನ್ನು ಮತ್ತೊಬ್ಬ ಸಾಧಕನಿಗೆ ಹೇಳಿದಾಗ ಮಾತ್ರ ಮಹಂತರಾಗುತ್ತಾರಲ್ಲವೇ.. ನನ್ನ ಗುರು ಮಹಂತರಾದರು. ಶಿವಯೋಗದಲ್ಲೇ ಅವರ ಚೈತನ್ಯವೂ ಸ್ಥಿರವಾಯ್ತು. ನಮಃ ಶಿವಾಯ… ಅಯ್ಯಾ ಗುರುವೇ ನಿನ್ನ ಸಾಧನೆ ಈ ಕಲ್ಲ ಬಂಡೆಯಂತೆ ಕಾಲಕಾಲೇಶನಪ್ಪಾ.. ನಾ ನಿನ್ನ ಉಕ್ತಿಯ ಅರಿವಿಗಾಗಿ ತಿರುಗಲೆಬೇಕು.. ನೀ ಕಂಡ ಮಹಂತತನ ನಾನಾದರೂ ತಿರುಗಿ ತಿಳಿಯಬೇಕು. ಹೌದಯ್ಯಾ ಗುರುವೆ ನೀನಂದಂತೆ ಕಣ್ಣರೆಪ್ಪೆಯನ್ನೂ ಬಡಿಯದಂತೆ ಅರಿವನ್ನು ವಿಸ್ತಾರಗೊಳಿಸಿಕೊಳ್ಳುವೆ…
ವಸೂದೀಪ್ಯ ಗುರುವಿನ ಸುತ್ತ ಸಣ್ಣಸಣ್ಣ ಕಲ್ಲುಗಳ ಹುತ್ತವನ್ನು ಕಟ್ಟಿ, ಆ ಹುತ್ತದ ಮೇಲೆ ಅವರು ಬಳಸುವ ಪರ್ಯಾಣ, ಕರಿಕಂಬಳಿ, ಜೋಳಿಗೆಗಳನ್ನಿಟ್ಟು ಅವರು ಕುಳಿತಿದ್ದ ಅದೇ ಧ್ಯಾನಸ್ಥ ಭಂಗಿಯಲ್ಲಿ ರವಷ್ಟು ಹೊತ್ತು ಕುಳಿತ. ಕಣ್ಣರೆಪ್ಪೆಯ ಹೊಯ್ದಾಟವನ್ನು ತಟ್ಟನೇ ನಿಲ್ಲಿಸಿ ತದೇಕಚಿತ್ತದಿಂದ ಗುರುವಿನ ಹುತ್ತವನ್ನು ನೋಡುತ್ತ ಕುಳಿತಿದ್ದವ ತಟ್ಟನೇ ಮೇಲೆದ್ದು ತನ್ನ ಬರಿದಾದ ತತ್ತರಾಣಿಗೆ ನೀರು ತುಂಬಿಕೊಂಡು, ಕೈಕೋಲ ಬೆತ್ತ ಹಿಡಿದುಕೊಂಡು ಬಂದ ದಾರಿಯಲ್ಲೇ ಗುಡ್ಡವನ್ನೇರಿ ಅಯ್ಯಾಹೊಳೆಯತ್ತ ಹೊರಟ.
**** **** ****
ಗುಡ್ಡಕ್ಕೆ ಹೋದ ಮಗ ಬರಲಿಲ್ಲ ಎಂಬ ಕೊರಗಿನಲ್ಲಿ ಮಹಾಲೇಖೆ ಒಂದನ್ನು ಪಡೆದುಕೊಂಡು ಮತ್ತೊಂದನ್ನು ಕಳೆದು ಕೊಂಡೆನಲ್ಲ ಎಂದು ರಾತ್ರೆಯೆಲ್ಲ ಮಮ್ಮಲ ಮರಗುತ್ತ, ಹಾಗೆ ದಾರಿಹೋಕನಾಗಿ ಬಂದು ಕವಳಿಹಣ್ಣ ನೀಡಿ ಮಗನ ಫಲ ಕೊಟ್ಟ ಮಲ್ಲಯ್ಯನ ನೆನೆದು ದುಃಖಿಸುವುದನ್ನ ತ್ರೈಲೋಕ್ಯ ನೋಡದಾದ… ಮಕ್ಕಳ ಫಲ ಕೊಟ್ಟಂತ ಶ್ರೀಗಿರಿಯಿಂದ ಬಂದಿದ್ದ ಮಲ್ಲಯ್ಯ ಕನಸಿಗೆ ಬಂದು, “ನಾ ಕೊಟ್ಟಂಥ ಬೀಜ ನಾ ಪಡಕೊಂಡೆ” ಎಂದು ಹೇಳಿ ಹೋದ ಹಾಗೆ ಭ್ರಮೆಯಾಗಿ ಮಲಗಿದಂತವಳು ಧಡಗ್ಗನೇ ಎದ್ದು ಕೂರುವುದು, ಚಣಹೊತ್ತು ವಸೂದೀಪ್ಯ ಎಂದು ಗಗ್ಗರಿಸಿ ಅತ್ತು ಮತ್ತೆ ಮಲಗುವುದು, ಕನಸಿಗೆ ಬೆಚ್ಚಿ ಏಳುವುದು ಸದೋದಿತ ರಾತ್ರೆಯೆಲ್ಲ ನಡೆದಿತ್ತು. ಬೆಳಕಾದಾಗ ತ್ರೈಲೋಕ್ಯ ಮಹಾಲೇಖೆಯರಿಬ್ಬರೂ ಒಡಗೂಡಿ ಹೊಳೆಯದಾಟಿ ಗುಡ್ಡದ ದಾರಿ ತುಳಿದರು. ‘ಲೇಖಿ ಅವನೇನು ಎಳೆಮಗುವಲ್ಲ’ ಎಂದು ತ್ರೈಲೋಕ್ಯ ನುಡಿದಾಗ ‘ಅವನು ಎಳೆಯನಲ್ಲ, ಆದರೆ ಕ್ರೂರ ಜಂತುಗಳಿಗೆ ಆಹಾರವಾಗುವಷ್ಟು ಬಲಿತಿದ್ದಾನೋ ಹಿರಿಯಾ…’ ಎಂದು ಆ ತಾಯಿ ಬಡಬಡಿಸಿದಳು.
ವಸೂದೀಪ್ಯ ಎಂದು ಕೂಗುತ್ತ.. ಆ ಗುಡ್ಡದ ಮೂಲೆಮೂಲೆಯಲ್ಲೂ ತಡಕಾಡಿ, ಕಣಿವೆಯಿಳಿದು, ಗುಹೇ-ಗಹ್ವರಗಳಲ್ಲಿ ಇಣುಕಿ ಹಣಿಕಿ ನೋಡುತ್ತಾ… ಆಯಾಸ ಮರೆತು ಮಗನಿಗಾಗಿ ತಂದೆ ತಾಯಿಗಳು ಹುಡುಕುತ್ತಲಿದ್ದರು. ಕುರಿಗಾಹಿ, ದನಗಾಹಿಗಳ ಯಾರ ಕಣ್ಣಿಗೂ ಬೀಳದೆ ಈ ಮಗರಾಯ ಎಲ್ಲಿ ಹೋದನೋ… ಮಗನನ್ನು ಪಡೆದುಕೊಂಡಾಗ ಗಂಡ ದೂರಾದ, ಗಂಡ ಬಂದಾಗ ಮಗ ದೂರಾದನಲ್ಲ… ಯಾಕೀ ಪರಿಯ ತೊಳಲಾಟ ನನಗಪ್ಪಾ ಚಂದ್ರಮೌಳಿ ಎಂದು ಮನದಲ್ಲೇ ದೇವರನ್ನು ಬೇಡುತ್ತಾ, ಶಪಿಸುತ್ತಾ ಮಹಾಲೇಖೆ ಎಂದೂ ತುಳಿಯದ ಕಲ್ಲು ಮುಳ್ಳುಗಳ, ಗಿರಿಕಂದರಗಳ ದಾರಿಯನ್ನು ತುಳಿದು ಅಯ್ಯಾಹೊಳೆಗೆ ಬಂದಾಗ ದಿನದ ಮುಕ್ಕಾಲು ಭಾಗ ಮುಗಿದು ಸಂಜೆಯ ಮಂದಬೆಳಕು ಭೂಮಿಯನ್ನು ತಂಪಾಗಿಸುತ್ತಿತ್ತು. ತ್ರೈಲೋಕ್ಯನಿಗೆ ಆ ಸಾತ್ವಿಕ ತಾಯಿ ನಾಗಿಣಿಯಕ್ಕನ ನೆನಪಾಗಿ ಅವಳು ಉಳಿದುಕೊಂಡಿದ್ದ ಕೊಂಟೆಪ್ಪನ ಗುಡಿಯ ಕಡೆಗೆ ನಡೆದ. ಅಲ್ಲೇನಿದೆ. ಅವರು ಬಿಟ್ಟುಹೋದ ಅರೆಸುಟ್ಟಿದ್ದ ಕಟ್ಟಿಗೆಯ ತುಂಡುಗಳು, ಮೂರು ಕಲ್ಲುಗುಂಡುಗಳ ನಡುವೆ ರಾಶಿಬಿದ್ದ ಬೂದಿಯನ್ನು ಬಿಟ್ಟರೆ ಸಿದ್ಧಸಾಧುಣಿಯರ ಯಾವ ಕುರುಹು ಅಲ್ಲಿರಲಿಲ್ಲ. ಅವರಿವರನ್ನು ಕೇಳಲಾಗಿ… ಆ ಸಾಧುಣಿಯರು ಬೆಳಿಗಿಗೆದ್ದು ಬನವಸೆಯತ್ತ ಹೊರಟರೆಂದು ಹೇಳಿದರು.
ಈ ಸಾಧು ಸತ್ಪುರುಷರೆಂದರೆ ಮಾಂತ್ರಿಕರು. ಅವರು ಕೊಟ್ಟ ದಾರವನ್ನು ಮಗನ ರಟ್ಟೆಗೆ ಕಟ್ಟಿದೆಯೋ ಹಿರಿಯಾ. ವಸೂದೀಪ್ಯ ಅವರ ಬೆನ್ನುಬಿದ್ದು ನಮ್ಮನ್ನು ಕೈಬಿಟ್ಟ ಎಂದು ಮಹಾಲೇಖೆ ಮತ್ತಷ್ಟು ಗೋಳಾತೊಡಗಿದಳು. ಸಾಧುಣಿಯ ಮಾಂತ್ರಿಕ ಶಕ್ತಿಗೆ ಮಗನ ಕಳೆದುಕೊಂಡೆನೆ, ಆ ದಾರವನ್ನು ಮಗನ ತೋಳಿಗೆ ಕಟ್ಟಬಾರದಿತ್ತಲ್ಲ.. ತಪ್ಪು ಮಾಡಿದೆನು ಎಂದು ಮನದೊಳಗೆ ನೊಂದ. ಹೋಗಯ್ಯ ಹಿರಿಯಾ ನನ್ನ ಮಗ ನನಗೆ ಬೇಕು. ಹುಡುಕಿಕೊಂಡ ಬಾ ಎಂದು ಮಹಾಲೇಖೆ ಅವನ ಮುಂಗೈ ಹಿಡಿದು ಎಳೆದಳು. ಲೋಕಸಂಚರಿಸಿ ದಣಿದಿದ್ದ ತ್ರೈಲೋಕ್ಯನಿಗೆ ಮತ್ತೆ ತಿರುಗುವುದು ಸಾಕೆನಿಸಿತ್ತು. ಇಂತಿಷ್ಟೆ ಹಣೆಯ ಬರಹವನ್ನು ನೀನು ನಾನು ಅನುಭವಿಸುವುದು ಅಂತ ಸೆಟೆಗೆವ್ವ ಬರೆದಿರುವಾಗ ಎಷ್ಟು ಹಂಬಲಿಸಿದರೂ ಅಷ್ಟೆ.. ಈಗ ಕತ್ತಲಾಯ್ತು ಇಲ್ಲೇ ಈ ಗುಡಿಯ ಪೌಳಿಯಲ್ಲಿ ರಾತ್ರೆ ಕಳೆದು ಮುಂಜಾವಿಗೆ ಊರೂ ಸೇರಿದರಾಯ್ತೆಂದು ಹೆಂಡತಿಯನ್ನು ಸಮಾಧಾನಗೊಳಿಸಿದ.
ನಾಗಿಣಿಯಕ್ಕನನ್ನು ಅಪ್ಪ ಕಂಡದ್ದು ಅಯ್ಯಾಹೊಳೆಯಲ್ಲಿ ಅಲ್ಲವೇ..! ಅಲ್ಲಿಗೆ ಹೋದರೆ ಆ ತಾಯಿಯಾದರೂ ಗುರುವು ಕರುಣಿಸಿದ ದಾರಿಯನ್ನು ಮತ್ತಷ್ಟು ತಿಳಿಗೊಳಿಸಿಯಾಳು ಎಂಬ ಆಲೋಚನೆಯಲ್ಲೇ ವಸೂದೀಪ್ಯ ಕಣ್ಣರೆಪ್ಪೆಯನ್ನು ಪಿಳುಕಿಸದಂತೆ ಎಚ್ಚರಹಿಸಿ ನಡೆದು ದುರ್ಗಿಗುಡಿಗೆ ಬಂದಾಗ ಸೂರ್ಯನೆಂಬೋ ಸೂರ್ಯ ಪಡುವಣದಿ ಮುಳುಗಿ ಕತ್ತಲಾವರಿಸಿತ್ತು. ಅಲ್ಲಿದ್ದ ಸಾಧುಣಿಯರು ಬನವಸೆಯತ್ತ ಹೋದರೆಂಬುದಾಗಿ ದಾರಿಹೋಕ ವ್ಯಾಪಾರಿಯೊಬ್ಬ ಹೇಳಿದಾಗ ವಸೂದೀಪ್ಯ ಕಪ್ಪಡಿ ಸಂಗಮಕ್ಕೆ ಹೋಗಿ ಬಸವರಸನನ್ನು ಕಂಡು ಮಾತಾಡಿಸಿ ಬನವಸೆಗೆ ಹೋದರಾಯ್ತೆಂದು ನಿರ್ಧರಿಸಿ ನವಮಂಟಪದ ಕಂಬಕ್ಕೊರಗಿ ಕುಳಿತ.
ಹತ್ತನ್ನೆರಡು ಮಾರು ದೂರದಲ್ಲಿರುವ ಕೊಂಟೆಪ್ಪನ ಗುಡಿಯೊಳಗೆ ತಾಯತಂದೆಯರು ಮಗನ ಹಂಬಲಿಸಿ ಬಂದು ಮಲಗಿದ್ದರೆ, ಇಲ್ಲಿ ದುರ್ಗಿಗುಡಿಯ ನವಮಂಟಪದಲ್ಲಿ ಕಣ್ಣರೆಪ್ಪೆಯನ್ನು ಮುಚ್ಚದಂತೆ ನಿದ್ದೆ ಮಾಡುವುದು ಹೇಗೆಂದು ಆಲೋಚಿಸುತ್ತ ವಸೂದೀಪ್ಯ ಕುಳಿತಿದ್ದ. ಕಣ್ಣೆವೆಯ ಪರದೆ ಮುಚ್ಚಿಕೊಳ್ಳುವ ಕ್ಷಣಮಾತ್ರದ ಕತ್ತಲೂ ಈ ಭೂಮಿಯ ಮೇಲೆ ಇರಲೇಬಾರದು. ಎಲ್ಲವೂ ಎಲ್ಲರಿಗೂ ಗೋಚರಿಸುವ ಹಾಗೆ ಬೆಳಕೆಂಬುದು ಮಾತ್ರ ಇಲ್ಲಿ ಶಾಶ್ವತವಾಗಿ ನೆಲೆಸಬೇಕೆಂದು ವಸೂದೀಪ್ಯ ಬಯಸುತ್ತಿದ್ದರೇ.. ಅಲ್ಲಿ ಕೊಂಟೆಪ್ಪನ ಪೌಳಿಯ ಕತ್ತಲಗರ್ಭದಲ್ಲಿ ಕುಳಿತಿದ್ದ ಆ ಮುದಿಯ ಜೀವಗಳಿಗೆ ರಾತ್ರೆಯೆಂಬುದು ಅತೀ ದೀರ್ಘವಾಗುತ್ತಾ ಈ ಬೆಳಕು ಹೊತ್ತು ಬರುವ ಸೂರ್ಯ ಮುಂದೆಂದೂ ಮತ್ತೆ ಮೂಡಿ ಬರಬಾರದೆಂಬಂತೆ ಕತ್ತಲನ್ನು ಮೋಹಿಸತೊಡಗಿದ್ದವು.
ಕೋಳಿಕೂಗಿಗೆ ಎದ್ದ ಮೂರು ಜೀವಗಳು ಹತ್ತನ್ನೆರಡು ಮಾರು ದೂರದಲ್ಲಿದ್ದರೂ ಒಬ್ಬರಿಗೊಬ್ಬರು ಸಂಧಿಸುವ ಯಾವ ಅವಕಾಶಗಳೂ ದೊರೆಯದ ಕಾರಣ ಮುದಿಜೀವಗಳು ಮರಳಿ ಗೂಡಿಗೆ ಹೊರಟರೆ ರಾತ್ರೆಯಲ್ಲ ರೆಪ್ಪೆಗಳಿಗೆ ಹೆಬ್ಬೆರಳು ತೋರುಬೆರಳುಗಳನ್ನು ಕಣ್ಣಿನ ಮೇಲೆ ಕವೆಗೋಲಾಗಿ ಒತ್ತಿರಿಸಿಕೊಂಡು ಹೊಸದೊಂದು ಸಾಧನೆಯ ಮಗ್ಗುಲನ್ನು ಧ್ಯಾನಿಸುತ್ತಿದ್ದ ವಸೂದೀಪ್ಯ ಅರಸಿಬೀದಿಯ ಮಾರ್ಗವಾಗಿ ಕಪ್ಪಡಿಸಂಗಮಕ್ಕೆ ಹೊರಟ. ಇಲ್ಲಿಗೆ ಹುಟ್ಟಿನ ಕರುಳಬಳ್ಳಿಯ ಕತ್ತರಿಸಿಕೊಂಡು, ಗುರುವಿನ ಕರುಳಬಳ್ಳಿಯು ರೆಪ್ಪೆಮುಚ್ಚದಾತನ ಮನದಲ್ಲಿ ಒಡಲಗೊಂಡಿತ್ತು ನೋಡಾ…
(ಮುಂದುವರಿಯುತ್ತದೆ)
Comments 7
Shivaraj KP
Jul 14, 2025ಗುರು- ಶಿಷ್ಯನ ಅಪೂರ್ವ ಸಂಗಮ… ಕೊನೆಗಳಿಗೆಯ ಮಿಲನ. ಓದಿ, ಪರವಶನಾಗಿ ಬಿಟ್ಟೆ.
ಚನ್ನಬಸವಣ್ಣ ಕೊಟಗಿ, ಗಂಗಾವತಿ
Jul 17, 2025ಪ್ರತಿ ತಿಂಗಳು ಓದುತ್ತಿದ್ದೇನೆ… ತುಂಬಾ ಚೆನ್ನಾಗಿ ಬರುತ್ತಿದೆ. ಇದನ್ನು ಪುಸ್ತಕ ರೂಪದಲ್ಲಿ ತರಬೇಕು. ಶರಣು🙏
Ashakiran, Bangalore
Jul 21, 2025ಬಯಲು ಬಂದ ತಕ್ಷಣ ನಾನು ಓದೋದೇ ಅನಿಮಿಷ ಯೋಗಿಯ ಕತೆ, ಎಷ್ಟು ಸುಂದರವಾಗಿ, ಅದ್ಭುತವಾಗಿ ಬರೀತಾ ಇದಾರೆ. Thank you so much.
ಧವಳೇಶ ಸಾಕಲಕೊಪ್ಪ
Jul 21, 2025ಕಣ್ಣಿನ ಮುಂದೆ ಕತೆಯನ್ನು ಕಟೆಯುತ್ತಿರುವ ಕತೆಗಾರರಿಗೆ ನಮನ, ನೂರು ನಮನ🙏🙏🙏🙏🙏
ಬಸವರಾಜು ಜವಳಿ
Jul 21, 2025ಅಣ್ಣಾ, ಈ ನಾಗಿಣಿಯಕ್ಕಾ ಯಾರು? ಸಾಧಕಳೇ, ತಾಂತ್ರಿಕಳೇ, ಶರಣಳೇ? ಅವರ ಪಾತ್ರ ತುಂಬಾ ಕುತೂಹಲಕಾರಿಯಾಗಿದೆ… ಭವಿಷ್ಯ ಊಹಿಸುವ ಇವರು ಮತ್ತೆ ಮುಂದಿನ ಕತೆಯಲ್ಲಿ ಕಾಣಿಸಿಕೊಳ್ಳುವರೇ?
ಮಹಾದೇವ
Jul 24, 2025ಶರಣಾರ್ತಿಗಳು
ನಾಗಿಣಿಯಕ್ಕಾ ಬನವಸೆಯ ಇತಿಹಾಸದಲ್ಲಿ ಕಡೆಯದಾಗಿ ಕಾಣಿಸಿಕೊಳ್ಳುವ ತಾಂತ್ರಿಕಳು.
ಸರಸ್ವತಿ ಎಸ್. ಡೊಂಬಳ
Jul 24, 2025ದಕ್ಕಿತು ಎನ್ನುವುದೆಲ್ಲವೂ ಮಾಯೆಯ ಹಾಗೆ ಕಣ್ಣೆದುರು ಸುಳಿದು ಮಾಯವಾಗುವುದು…. ಈ ಮಾಯೆಯೊಳಗೇ ನಾವೆಲ್ಲ ಹುದುಗಿ ಹೋಗಿದ್ದೇವೆ.