
ಕಲಿಸು ಗುರುವೆ…
ಬಳಲಿ ಬಂದೆನು ಗುರುವೆ
ನಿನ್ನ ಬಳಿಗೆ
ಬಳಲಿಕೆಯ ಪರಿಹರಿಸು
ಎದೆಯ ದನಿಯೆ
ಇಲ್ಲಸಲ್ಲದ ಹೊರೆಯ
ಹೊತ್ತು ಏಗಿದೆ ಹೆಗಲು
ಜೀತದಲೆ ಜೀಕುತ್ತಾ
ದಿನವ ದೂಡಿರುವೆ
ನಾನು ನನ್ನದು ಎಂಬ
ಗಂಟುನಂಟುಗಳಲ್ಲಿ
ರೆಕ್ಕೆಗಳ ಹೊಲೆದಿರುವೆ
ಆಗಸವ ಮರೆತು…
ಹಗಲ ಮೋಡಗಳು
ಬೆಳಕು ನುಂಗಿರುವಾಗ
ಕವಲು ದಾರಿಗಳಲ್ಲಿ
ಎಡವುತಿರುವೆ
ಮಂಜುಗಣ್ಣಿನಲಿ
ಜಾರಿ ಬಿದ್ದಿರುವೆ
ಮಬ್ಬುಗತ್ತಲಿಗೊಂದು
ಕೈದೀಪ ಹಚ್ಚು…
ಅರಿವು ಮರೆವಿನ ಸಮರ
ಬೆಳಕು ಕತ್ತಲಿನಾಟ
ಕಣ್ಣು ಸೋಲುತಲಿಹವು
ತ್ರಾಣ ಕುಂದಿ
ಎಷ್ಟು ದೂರದ ಪಯಣ
ದಾರಿಯುದ್ದಕೂ ಕದನ
ಪ್ರಾಣ ಹಾರುವ ಮುನ್ನ
ಕಾದಿ ಗೆಲುವುದ ಕಲಿಸು
Comments 1
Shraddhananda Swamiji
Jul 15, 2025“Before leaving this world let me learn to win the battle of life this is my humble prayer to you my teacher” This is simple translation of last line of your wonderful brilliant poem.