
ಕನ್ನಡ ಕಾವ್ಯಗಳಲ್ಲಿ ಶರಣರು
ಕಲ್ಯಾಣ ಕ್ರಾಂತಿಯನಂತರ ಬಸವಾದಿ ಶರಣರು ಕಲ್ಯಾಣದಿಂದ ಚದುರಿ ಹೋದಾಗ ವಚನರಚನೆ ತಾತ್ಕಾಲಿಕವಾಗಿ ನಿಂತು ಹೋಯಿತು. ಆದರೆ ಅನೇಕ ಕವಿಗಳು ಪ್ರಮುಖ ಶರಣರ ಜೀವನ ಚರಿತ್ರೆಗಳನ್ನೂ ಅವರ ಸಂದೇಶಗಳನ್ನೂ ಕುರಿತ ಗ್ರಂಥಗಳನ್ನು (ಉದಾ: ಬಸವ ಪುರಾಣ) ರಚಿಸ ತೊಡಗಿದರು; ಕೆಲವರು ತಮಗೆ ಸಿಕ್ಕಿದ ಎಲ್ಲಾ ವಚನಗಳನ್ನು ಒಂದೆಡೆ ಸಂಗ್ರಹಿಸಿದರು (ಉದಾ: ಸಕಲ ಪುರಾತನರ ವಚನಗಳು); ಮತ್ತೆ ಕೆಲವರು ಸ್ಥಲಗಳಿಗನುಗುಣವಾದ ವಚನಗಳನ್ನು ಸಂಗ್ರಹಿಸಿದರು (ಉದಾ: ಬಸವಣ್ಣನವರ ಷಟ್‍ಸ್ಥಲ ವಚನಗಳು, ಏಕೋತ್ತರ ಶತಸ್ಥಲ); ಮತ್ತೆ ಕೆಲವರು ಅವುಗಳಿಗೆ ವ್ಯಾಖ್ಯಾನ ಬರೆದರು (ಉದಾ: ಲಿಂಗಲೀಲಾವಿಲಾಸ ಚಾರಿತ್ರ); ಮತ್ತೆ ಕೆಲವರು ವಚನಗಳನ್ನು ಪ್ರಶ್ನೋತ್ತರ ರೂಪದಲ್ಲಿ ಜೋಡಿಸಿದರು (ಶೂನ್ಯ ಸಂಪಾದನೆಗಳು). ಅವರು ಸಾರಿದ ಸಂದೇಶಗಳೆಲ್ಲ ಬಸವಾದಿ ಶರಣರ ಸಂದೇಶಗಳ ನಕಲು. ಕೆಲವು ಬಸವೋತ್ತರ ಕಾವ್ಯಗಳನ್ನು ಇಲ್ಲಿ ಉದಾಹರಿಸಬಹುದು.
1. ಕೆರೆಯ ಪದ್ಮರಸನ ದೀಕ್ಷಾಬೋಧೆ: ಪದ್ಮರಸ (ಸುಮಾರು 1165 ರಿಂದ 1200) ಬಸವಣ್ಣನವರ ಹಿರಿಯ ಸಮಕಾಲೀನನಾದ ಸಕಲೇಶ ಮಾದರಸನ ಮೊಮ್ಮಗ. ಆತ ದ್ವಾರಸಮುದ್ರದ (ಈಗಿನ ಹಾಸನ ಜಿಲ್ಲೆಯಲ್ಲಿರುವ ಹಳೇಬೀಡಿನ) ಸುತ್ತಮುತ್ತಲಿನ ಪ್ರದೇಶವನ್ನು ಆಳುತ್ತಿದ್ದ ನರಸಿಂಹ ಬಲ್ಲಾಳನ ದಂಡಾಧಿಪತಿಯಾಗಿದ್ದ. ಹಳೇಬೀಡಿನ ಹತ್ತಿರವಿರುವ ಬೇಲೂರಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿದ್ದರಿಂದ ಅವನಿಗೆ ಕೆರೆಯ ಪದ್ಮರಸನೆಂಬ ಹೆಸರು ಬಂದಿತು. ಅವನು ದೀಕ್ಷಾಬೋಧೆ ಎಂಬ ಕನ್ನಡ ಗ್ರಂಥ ಮತ್ತು ಸಾನಂದ ಚಾರಿತ್ರವೆಂಬ ಸಂಸ್ಕೃತ ಗ್ರಂಥವನ್ನು ಬರೆದಿದ್ದಾನೆ. ದೀಕ್ಷಾಬೋಧೆಯು ರಗಳೆಯ ಶೈಲಿಯಲ್ಲಿದೆ ಮತ್ತು ಅನೇಕ ಸಂಸ್ಕೃತ ಶ್ಲೋಕಗಳನ್ನು ಒಳಗೊಂಡಿದೆ. ಲಿಂಗದೀಕ್ಷೆ ಪಡೆಯುವುದು ಜೀವನದ ಶ್ರೇಷ್ಠ ಮೌಲ್ಯ ಮತ್ತು ಲಿಂಗಾಯತ ಧರ್ಮದ ಸಿದ್ಧಾಂತಗಳ ಆಚರಣೆ ಆವಶ್ಯಕವೆಂದು ಬೋಧಿಸುವುದು ಈ ಗ್ರಂಥದ ಮೂಲ ಉದ್ದೇಶ.
ಈ ಗ್ರಂಥವು ಎರಡು ಕಾರಣಗಳಿಗಾಗಿ ನಮ್ಮ ಗಮನ ಸೆಳೆಯುತ್ತದೆ. (ಅ). ಲಿಂಗಗಳ ವೈವಿಧ್ಯದ ಬಗ್ಗೆ ಅದು ಒಂದು ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ. “ಲಿಂಗಗಳು ಐದು ವಿಧ: ದೇವತೆಗಳೇ ಮಾಡಿದ ಬಾಣಲಿಂಗ; ಸ್ವಯಂಭುಲಿಂಗ (ಭೂಮಿಯಿಂದ ಸ್ವಾಭಾವಿಕವಾಗಿ ಮೇಲೆದ್ದ ಲಿಂಗ ರೂಪದ ಕಲ್ಲು), ಮಾನವರು, ರಾಕ್ಷಸರು ಮುಂತಾದವರು ರಚಿಸಿ ಸ್ಥಾಪಿಸಿದ ಲಿಂಗಗಳು; ಮಾನವರು ತೋಳು, ಮುಂಗೈ ಮಣಿಕಟ್ಟು, ಎದೆ, ಮುಂತಾದ ಕಡೆ ಧರಿಸುವ ಲಿಂಗಗಳು; ಮತ್ತು ಪಾಶುಪತರು ಪೂಜಿಸುವ ಚಲ ಲಿಂಗಗಳು”. ಈ ಎಲ್ಲಾ ಲಿಂಗಾರಾಧಕರು ತಮ್ಮನ್ನು ಲಿಂಗದಿಂದಲೂ ಪ್ರಸಾದದಿಂದಲೂ ಭಿನ್ನವೆಂದು ಪರಿಗಣಿಸುವುದರಿಂದ ಅವರಿಂದ ಪ್ರಸಾದವನ್ನು ಸ್ವೀಕರಿಸಬಾರದು ಎಂದು ಪದ್ಮರಸನು ಎಚ್ಚರಿಸುತ್ತಾನೆ (ಅಂದರೆ ಇವರಾರೂ ಲಿಂಗಾಯತರಲ್ಲ ಎಂಬುದು ಅವನ ಸೂಚನೆ).
(ಬ). ಧರ್ಮದ ಹೆಸರಿನಲ್ಲಿ ಉಪವಾಸ ಮಾಡುವುದು ಪ್ರಸಾದ ಸ್ವೀಕರಿಸಿದಂತಲ್ಲ. ಅಂದರೆ ಉಪವಾಸ ಮಾಡುವವರು ತಮ್ಮಲ್ಲಿಯೇ ಇರುವ ಶಿವ ಅಥವಾ ಲಿಂಗವನ್ನು ಉಪೇಕ್ಷಿಸುತ್ತಿದ್ದಾರೆ ಮತ್ತು ಪ್ರಸಾದದಿಂದ ವಂಚಿತರಾಗಿದ್ದಾರೆ. ಅಲ್ಲದೆ, ಉಪವಾಸ ಮುಂತಾದ ದೇಹ ದಂಡನೆಗೆ ಯಾವ ಆಧ್ಯಾತ್ಮಿಕ ಮೌಲ್ಯವೂ ಇಲ್ಲ.
ಇನ್ನುಳಿದಂತೆ ಈ ಗ್ರಂಥವು ಲಿಂಗಾಯತ ಧರ್ಮವನ್ನು ಬೋಧಿಸುವ ಮುಖ್ಯ ವಚನಗಳ ಮೇಲಿನ ವ್ಯಾಖ್ಯಾನವಾಗಿದೆ.
2. ಹರಿಹರನ ರಗಳೆಗಳು: ಡಾ. ಎಂ. ಎಂ. ಕಲಬುರ್ಗಿಯವರ ಪ್ರಕಾರ ಹರಿಹರ ಹಂಪಿಯಲ್ಲಿ 13ನೇ ಶತಮಾನದ ಆದಿ ಮತ್ತು ಮಧ್ಯ ಭಾಗಗಳಲ್ಲಿ ಜೀವಿಸಿದ್ದ. ಕೆರೆಯ ಪದ್ಮರಸ ಮೊದಲ ಬಾರಿಗೆ ಬಳಸಿದ್ದ ರಗಳೆ ಶೈಲಿಯನ್ನೇ ಹರಿಹರ ತನ್ನ ರಗಳೆಗಳನ್ನು ಬರೆಯಲು ಬಳಸಿಕೊಂಡ. ಅವನು ಬರೆದ 108 ರಗಳೆಗಳಲ್ಲಿ 60 ತಮಿಳುನಾಡಿನ ಶಿವಭಕ್ತರನ್ನು, 22 ಕರ್ನಾಟಕದ ಶಿವಶರಣಗಳನ್ನು ಮತ್ತು ಉಳಿದವು ವಿವಿಧ ವಿಷಯಗಳನ್ನು ಕುರಿತವಾಗಿವೆ. ರಾಜಾಶ್ರಯವನ್ನು ನೀಡುತ್ತಿದ್ದ ರಾಜ ರಾಣಿಯರ ಬಗ್ಗೆ ಶ್ಲಾಘನಾತ್ಮಕ ಕಾವ್ಯಗಳನ್ನು ರಚಿಸುವ ಸಂಪ್ರದಾಯವನ್ನೂ ರಾಮಾಯಣ ಮತ್ತು ಮಹಾಭಾರತದ ಕಥಾವಸ್ತುಗಳನ್ನೂ ಕೈ ಬಿಟ್ಟು ಹರಿಹರನು ಎಲ್ಲಾ ಜಾತಿಗಳ ಶಿವಶರಣರ ಚರಿತ್ರೆಗಳನ್ನು ಕುರಿತು ಬರೆದ. ಆದರೆ ಅವನ ಚರಿತ್ರೆಗಳು ಪವಾಡಗಳಿಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಧಾರ್ಮಿಕ ಅಥವಾ ದಾರ್ಶನಿಕ ಸಿದ್ಧಾಂತಗಳಿಗಾಗಲಿ, ಐತಿಹಾಸಿಕ ಅಂಶಗಳಿಗಾಗಲಿ ಕೊಡಲಿಲ್ಲ. ಕರ್ನಾಟಕದ 22 ಶಿವಶರಣರ ಬಗ್ಗೆ ಬರೆದರೂ ಅವರೆಲ್ಲರೂ ಲಿಂಗಾಯತರಲ್ಲ. ಆದರೂ ಅವುಗಳಿಂದ ಕೆಲವು ಲಿಂಗಾಯತ ಸಿದ್ಧಾಂತಗಳನ್ನು ಸಂಗ್ರಹಿಸಬಹುದು. ಅವುಗಳಲ್ಲಿ ಕೆಲವು ಈ ಮುಂದಿನಂತಿವೆ: ಹಾವಿನಹಾಳ ಕಲ್ಲಯ್ಯನ ಮಗಳು ಒಬ್ಬ ಬ್ರಾಹ್ಮಣ ತನ್ನ ಮಣ್ಣಿನ ಗಡಿಗೆಯನ್ನು ಮುಟ್ಟಿ ಮೈಲಿಗೆ ಮಾಡಿದನೆಂಬ ಕಾರಣಕ್ಕೆ ಅದನ್ನು ಒಡೆದು ಹಾಕುತ್ತಾಳೆ; ಹಾವಿನ ಹಾಳ ಕಲ್ಲಯ್ಯನ ನಾಯಿ ವೇದವೊಂದರ ಭಾಗವನ್ನು ಸರಿಯಾದ ಉಚ್ಚಾರಣೆ, ಏರಿಕೆ ಮತ್ತು ಗತಿಯೊಂದಿಗೆ ಪಠಿಸುತ್ತದೆ; ಶಿವನಿಗೆ ನೈವೇದ್ಯ ಮಾಡಲೆಂದು ನಾಯಿಯ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದ ಶ್ವಪಚಯ್ಯನೆಂಬ ಅಸ್ಪೃಶ್ಯ ಅದು ಬ್ರಾಹ್ಮಣನ ನೋಟದಿಂದ ಮೈಲಿಗೆಯಾದೀತೆಂದು ಹೆದರಿ ಅದನ್ನು ತನ್ನ ಚಪ್ಪಲಿಯಿಂದ ಮುಚ್ಚುತ್ತಾನೆ. ಈ ಮೂರು ಘಟನೆಗಳು ಬ್ರಾಹ್ಮಣ ಪಾರಮ್ಯವನ್ನು ವಿರೋಧಿಸುವ ಪ್ರಸಂಗಗಳು. ಮಾದಾರ ಚೆನ್ನಯ್ಯ ಅರ್ಪಿಸಿದ ಅಂಬಲಿಯನ್ನು ಹೊಟ್ಟೆ ತುಂಬಾ ಕುಡಿದ ಶಿವನಿಗೆ ಅನಂತರ ಚೋಳ ರಾಜ ಅರ್ಪಿಸಿದ ಭಕ್ಷ ಭೋಜ್ಯಗಳನ್ನು ಸ್ವೀಕರಿಸಲು ಹೊಟ್ಟೆಯಲ್ಲಿ ಜಾಗವೇ ಇರಲಿಲ್ಲವಂತೆ. ಇದು ಬಡವನೊಬ್ಬ ನಿಸ್ವಾರ್ಥ ಭಕ್ತಿಯಿಂದ ಅಂಬಲಿಯನ್ನು ಅರ್ಪಿಸುವುದು ರಾಜನು ಭಕ್ಷ್ಯಭೋಜ್ಯಗಳನ್ನು ಅರ್ಪಿಸುವುದಕ್ಕಿಂತ ಪರಿಣಾಮಕಾರಿಯಾದುದು ಎಂಬುದನ್ನು ಸಾರುತ್ತದೆ. ತೆಲುಗು ಜೊಮ್ಮಯ್ಯನೆಂಬ ಶಿವಭಕ್ತನು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ಮಾರಿ ಜೀವಿಸುತ್ತಾನೆ. ಆದರೆ ಅವನು ತಾನು ಕೊಂದ ಪ್ರಾಣಿಗಳು ಕೈಲಾಸಕ್ಕೆ ಹೋಗುತ್ತವೆ ಎಂದು ನಂಬುತ್ತಾನೆ. ಅವನ ಹಿಂಸಾತ್ಮಕ ಕಾಯಕವೂ ‘ನೈತಿಕ’ವೆನಿಸಿಕೊಳ್ಳುತ್ತದೆ, ಏಕೆಂದರೆ ಅವನು ಮಾಂಸವನ್ನು ಮಾರಿ ಬಂದ ಹಣದ ಒಂದು ಭಾಗವನ್ನು ದಾಸೋಹಕ್ಕೆ ಎಂದು ವಿನಿಯೋಗಿಸುತ್ತಾನೆ.
3. ರಾಘವಾಂಕನ ಸಿದ್ಧರಾಮ ಚಾರಿತ್ರ: ರಾಘವಾಂಕ ಹರಿಹರನ ತಂಗಿಯ ಮಗ. ಹರಿಹರನು ರಗಳೆಗೆ ಪ್ರಸಿದ್ಧನಾದಂತೆ ರಾಘವಂಕನು ಷಟ್ಪದಿಗೆ ಪ್ರಸಿದ್ಧ. ಅವನು ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಚಾರಿತ್ರ, ಸೋಮನಾಥ ಚಾರಿತ್ರ, ವಿರೇಶ ಚರಿತೆ, ಶರಭ ಚಾರಿತ್ರ ಮತ್ತು ಹರಿಹರಮಹತ್ವಗಳ ಕರ್ತೃ. ಕೊನೆಯ ಎರಡು ಅಲಭ್ಯ. ಹರಿಹರನು ಎಲ್ಲ ಶರಣರ ಬಗೆಗೂ – ಸಿದ್ಧರಾಮನ ಹೊರತು – ರಗಳೆಗಳನ್ನು ಬರೆದಿದ್ದಾನೆ. ಈ ಕೊರತೆಯನ್ನು ನೀಗಿಸಲೆಂಬಂತೆ ರಾಘವಾಂಕನು ಸಿದ್ಧರಾಮ ಚಾರಿತ್ರವನ್ನು ಬರೆದಿದ್ದಾನೆ. 549 ಷಟ್ಪದಿಗಳನ್ನುಳ್ಳ ಸಿದ್ಧರಾಮ ಚಾರಿತ್ರವು ಒಂಬತ್ತು ಅಧ್ಯಾಯಗಳನ್ನೊಳಗೊಂಡಿದೆ. ಅದು ಬಸವಣ್ಣನವರ ದಾರ್ಶನಿಕ ಅಥವಾ ಧಾರ್ಮಿಕ ಸಿದ್ಧಾಂತಗಳ ಮೇಲೆ ಯಾವ ಬೆಳಕನ್ನೂ ಚೆಲ್ಲುವುದಿಲ್ಲ. ಆದರೆ ಬಸವಾದಿ ಶರಣರ ಪ್ರಭಾವಕ್ಕೆ ಒಳಗಾಗುವ ಮೊದಲು ಶೈವನಾಗಿದ್ದ ಸಿದ್ಧರಾಮನ ನಂಬಿಕೆ- ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ.
ಸಿದ್ಧರಾಮ ಸೊಲ್ಲಾಪುರ ಮತ್ತು ಸುತ್ತಮುತ್ತ ಕೆರೆಕಟ್ಟೆ, ಬಾವಿ, ಗುಡಿ, ಛತ್ರ, ಅರವಟ್ಟಿಗೆಗಳನ್ನು ಕಟ್ಟಿಸುವುದರಲ್ಲಿ ನಿರತರಾಗಿದ್ದ. ಇದರಿಂದ ತೃಪ್ತನಾದ ಶಿವ ತನಗೆ ಕೈಲಾಸದಲ್ಲಿ ಗಣಪದವಿಯನ್ನು ಕೊಡುತ್ತಾನೆಂಬ ಭರವಸೆ ಅವನಿಗಿತ್ತು. ಕಲ್ಯಾಣಕ್ಕೆ ಬಂದ ಅವನಿಗೆ ಚೆನ್ನಬಸವಣ್ಣ ಲಿಂಗದೀಕ್ಷೆ ಕೊಟ್ಟು ಲಿಂಗಾಯತ ಸಿದ್ಧಾಂತಗಳನ್ನು ಬೋಧಿಸಿದ ಎಂಬುದು ಅವನ ವಚನಗಳಿಂದ ವ್ಯಕ್ತವಾಗುತ್ತದೆ. ಆದರೆ ರಾಘವಾಂಕ ಹಾಗೆಂದು ನಂಬಲು ನಮ್ಮನ್ನು ಬಿಡುವುದಿಲ್ಲ. ರಾಘವಾಂಕನ ಪ್ರಕಾರ ಸಿದ್ಧರಾಮ ಬಸವಾದಿ ಶರಣರ ಸಂಪರ್ಕಕ್ಕೆ ಬಂದಿದ್ದರೂ ಅವನು ಸ್ಥಾವರಲಿಂಗಾರಾಧಕ, ಬಹುದೇವತಾರಾಧಕ, ಗುಡಿ ಮತ್ತು ಅರ್ಚಕ ಪದ್ಧತಿಗಳ ಅನುಮೋದಕ, ಯಜ್ಞಯಾಗಾದಿ ಮತ್ತು ಕೈಲಾಸಗಳಲ್ಲಿ ನಂಬಿಕೆ ಉಳ್ಳವನಾಗಿಯೇ ಮುಂದುವರಿದ. ರಾಘವಾಂಕನ ಪ್ರಕಾರ ಕಲ್ಯಾಣದ ಕ್ರಾಂತಿಯ ನಂತರ ಸಿದ್ಧರಾಮ ಸೊಲ್ಲಾಪುರಕ್ಕೆ ಹಿಂದಿರುಗಿದ ನಂತರವೂ ಅವನ ಸ್ಥಾವರ ಲಿಂಗಾರಾಧನೆ, ಯಜ್ಞ ಯಾಗಾದಿಗಳ ಆಚರಣೆ ಮುಂದುವರಿದವು. ಕಲ್ಯಾಣದಲ್ಲಿದ್ದಾಗ ಬಸವಾದಿ ಶರಣರ ಪ್ರಭಾವದಿಂದಾಗಿ ಅವನಲ್ಲಿ ಆಗಿದ್ದ ದಾರ್ಶನಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಗಳನ್ನು ರಾಘವಾಂಕನು ಕಡೆಗಣಿಸಿ ಅವನನ್ನು ಒಬ್ಬ ವೈದಿಕ ಅಥವಾ ಆಗಮಿಕನೆಂದು ಚಿತ್ರಿಸಿರುವುದು ವಿಷಾದನೀಯ.
4. ಭೀಮಕವಿಯ ಬಸವ ಪುರಾಣ: 1250ರಲ್ಲಿ ಜೀವಿಸಿದ್ದ ಪಾಲ್ಕುರಿಕಿ (ಆಂಧ್ರಪ್ರದೇಶ) ಸೋಮನಾಥ ಬಸವಾದಿ ಶರಣರನ್ನು ಕುರಿತು ಮೊಟ್ಟ ಮೊದಲು ಬಸವ ಪುರಾಣಮು ತೆಲುಗಿನಲ್ಲಿ ರಚಿಸಿದನು. ಭೀಮಕವಿ(1369)ಯ ಬಸವ ಪುರಾಣ ಇದರ ಕನ್ನಡಾನುವಾದ. ಭಕ್ತ, ವೀರಶೈವ ಅಥವಾ ಜಂಗಮರನ್ನು ಬ್ರಾಹ್ಮಣ ವಿರೋಧಿಗಳೆಂದು ಚಿತ್ರಿಸುವ ಈ ಗ್ರಂಥವು ವೇದ ಪರವಾಗಿತ್ತು.
ಬಸವಣ್ಣನವರು ವೀರಶೈವ ಧರ್ಮವು ವೈಷ್ಣವ ಮತ್ತು ಜೈನ ಧರ್ಮಕ್ಕಿಂತಲೂ ಶ್ರೇಷ್ಠವಾದದ್ದು ಎಂದು ನಂಬಿದ್ದರು (ಸದ್ಯಕ್ಕೆ ನಾವು ಲಿಂಗಾಯತ ಮತ್ತು ವೀರಶೈವ ಧರ್ಮಗಳಿರುವ ವ್ಯತ್ಯಾಸವನ್ನು ಕಡೆಗಣಿಸೋಣ. ಈ ಬಗ್ಗೆ ತಿಳಿದುಕೊಳ್ಳಲು ಮುಂದಿನ ಬರವಣಿಗೆಯನ್ನು ನೋಡಿ). ಬಸವಣ್ಣನವರು ಸ್ಥಾವರಲಿಂಗಾರಾಧಕರಾಗಿದ್ದರು ಎಂದು ಹರಿಹರನು ಹೇಳಿದರೆ ಭೀಮಕವಿಯು ತನ್ನ ಬಸವ ಪುರಾಣದಲ್ಲಿ ಬಸವಣ್ಣನವರು ಭಕ್ತ, ಜಂಗಮ ಅಥವಾ ವೀರಶೈವರನ್ನು ಆರಾಧಿಸುತ್ತಿದ್ದರು ಎಂದೂ ಅವರು ವೇಶ್ಯೆಯ ಬಳಿ ಹೋಗಲು ಜಂಗಮರಿಗೆ ಹಣ ನೀಡುತ್ತಿದ್ದರು ಎಂದೂ ಹೇಳುತ್ತಾನೆ. ಬಸವಣ್ಣನವರು ವೇಶ್ಯೆಯರನ್ನು ಭಕ್ತೆಯರನ್ನಾಗಿ ಮಾಡಿದರು.
ಬಸವ ಪುರಾಣದ ಜಂಗಮರಿಗೆ ಜೈನರನ್ನೂ ವೈಷ್ಣವರನ್ನೂ ಹಿಂಸಿಸುವ, ಧರ್ಮದ ಹೆಸರಿನಲ್ಲಿ ತಮ್ಮನ್ನೇ ಹಿಂಸಿಸಿಕೊಳ್ಳುವ ಪ್ರವೃತ್ತಿಯಿದೆ. ಉದಾಹರಣೆಗೆ, ಬಾಹೂರ ಬೊಮ್ಮಯ್ಯ ಮತ್ತು ಅವನ ಅನುಚರರು ಶಿವನಿಗೆ ತಮ್ಮ ಕೈ, ಕಾಲು, ಕರುಳುಗಳನ್ನು ಕಡಿದು ಅರ್ಪಿಸುತ್ತಾರೆ; ಕಣ್ಣಪ್ಪ ತನ್ನ ಕಣ್ಣುಗಳನ್ನು ಕಿತ್ತು ಅರ್ಪಿಸಿದ; ಏಕಾಂತದ ರಾಮಯ್ಯ ತನ್ನ ತಲೆಯನ್ನೇ ಅರ್ಪಿಸಿದ.
ಈ ಗ್ರಂಥವು ಪ್ರಾಣಿಹಿಂಸೆಯನ್ನು ವಿರೋಧಿಸಿದರೂ, ಶಿವದೂಷಕರನ್ನು ಹಿಂಸಿಸಬೇಕೆಂದೂ ಶೈವವಿರೋಧಿ ಗ್ರಂಥಗಳನ್ನು ಸುಡಬೇಕೆಂದೂ ವಿಧಿಸುತ್ತದೆ; ಶಿವಭಕ್ತರಲ್ಲದ ಗಂಡಂದಿರನ್ನು ಶಿವಭಕ್ತೆಯರು ವಿರೋಧಿಸಬೇಕೆಂದು ಪ್ರಚೋದಿಸುತ್ತದೆ.
ಯಾವ ಕಾಯಕವನ್ನು ಬ್ರಾಹ್ಮಣರು ನಿಕೃಷ್ಟವಾಗಿ ಕಂಡಿದ್ದರೋ ಆ ಕಾಯಕಗಳಿಗೆ ಈ ಗ್ರಂಥವು ಹೆಚ್ಚಿನ ಮೌಲ್ಯ ನೀಡುತ್ತದೆ. ಅದು ಹೊಟ್ಟೆ ಹೊರೆಯಲು ಯಜ್ಞಯಾಗಾದಿಗಳನ್ನು ಆಚರಿಸುವುದಕ್ಕೂ ಚರ್ಮವನ್ನು ಹದ ಮಾಡಿ ಚಪ್ಪಲಿ ಮಾಡುವುದಕ್ಕೂ ವ್ಯತ್ಯಾಸವನ್ನು ಕಾಣುವುದಿಲ್ಲ. ಕಳ್ಳತನ ಮತ್ತು ಬೇಟೆಯಾಡುವುದನ್ನೂ ಪ್ರಾಮಾಣಿಕ ಕಾಯಕವೆಂದು ಅದು ಪರಿಗಣಿಸುತ್ತದೆ – ಅದರಿಂದ ಬಂದ ಹಣದ ಭಾಗವನ್ನು ಜಂಗಮ ದಾಸೋಹಕ್ಕೆಂದು ಬಳಸುವುದರಲ್ಲಿ ಯಾವ ದೋಷವನ್ನೂ ಕಾಣುವುದಿಲ್ಲ. (ಪ್ರಾಯಶಃ ಬಸವಣ್ಣನವರು ಜಂಗಮ ದಾಸೋಹಕ್ಕೆಂದು ಮಾಡುವ ಕಳ್ಳತನ ಮತ್ತು ಬೇಟೆಯಾಡುವುದನ್ನು – ಅವು ಹಿಂಸಾತ್ಮಕ ಮತ್ತು ಅಪ್ರಾಮಾಣಿಕವಾದುದರಿಂದ – ಅವುಗಳನ್ನು ಮೆಚ್ಚುತ್ತಿರಲಿಲ್ಲ).
5. ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸಚಾರಿತ್ರ: ಹಂಪಿಯಲ್ಲಿ 1430ರಲ್ಲಿದ್ದ ಕಲ್ಲುಮಠದ ಪ್ರಭುದೇವನು ತನ್ನ ಗ್ರಂಥದ ಶೀರ್ಷಿಕೆಯನ್ನು ಕುರಿತು ಈ ವಿವರಣೆ ನೀಡುತ್ತಾನೆ: ಪ್ರಥಮದಲ್ಲಿ ಶೂನ್ಯ ಅಥವಾ ಬಯಲು ರೂಪದ ಲಿಂಗವು ಒಂದೇ ಇತ್ತು. ಅದರಲ್ಲಿ ಯಾವ ವಸ್ತುವಾಗಲಿ ಜೀವಿಯಾಗಲಿ ಇರಲಿಲ್ಲ. ಅದಕ್ಕೆ ಸೃಷ್ಟಿಸಬೇಕೆಂಬ ಬಯಕೆ ಉಂಟಾದಾಗ ಅದರಲ್ಲಿಯೇ ಅಂತರ್ಗತವಾಗಿದ್ದ ಶಕ್ತಿಯು ಅದರ ಅವಿಭಾಜ್ಯ ಭಾಗವಾಗುತ್ತದೆ. ಶಕ್ತಿಯುತವಾದ ಲಿಂಗವು ಅಂಗ ಮತ್ತು ಲಿಂಗ ಎಂದು ಇಬ್ಭಾಗವಾಯಿತು. ಅಂಗನು ತನ್ನ ಮರೆವಿನಿಂದಾಗಿ ಎಲ್ಲ ರೀತಿಯ ಕರ್ಮಗಳನ್ನು ಮಾಡಿ ಸಂಸಾರ ಬಂಧನಕ್ಕೆ ಒಳಗಾಗಿ, ಪ್ರತಿ ಜನ್ಮದಲ್ಲಿಯೂ ಭವದುಃಖಕ್ಕೆ ಒಳಗಾಗುತ್ತಾನೆ. ಗುರುಕರುಣೆಯಿಂದ ಅವನು ತಾನು ಲಿಂಗವೆಂಬುದನ್ನು ತಿಳಿದಾಗ ಮತ್ತೆ ಲಿಂಗವಾಗಲು ನಿರ್ಧರಿಸುತ್ತಾನೆ. ಗುರುವಿನ ಬೋಧನೆಯಂತೆ ಅಷ್ಟಾವರಣ ಮತ್ತು ಷಟ್‍ಸ್ಥಲಗಳ ನಿಯಮಗಳನ್ನು ಪಾಲಿಸುವ ಮೂಲಕ ಅವನು ಮತ್ತೆ ಲಿಂಗವಾಗುತ್ತಾನೆ. ಹೀಗೆ ಪ್ರತಿಯೊಬ್ಬ ಶರಣನ ಚಾರಿತ್ರವೂ ಲಿಂಗದ ಲೀಲಾವಿಲಾಸದ ಚಾರಿತ್ರವೇ ಆಗಿದೆ. ಅಂದರೆ ಲಿಂಗವು ತನ್ನ ಲೀಲೆಯಿಂದ ಅಂಗವಾಗುವುದು, ಮತ್ತೆ ಆ ಅಂಗ ಲಿಂಗವಾಗುವುದು.
ಪ್ರಭುದೇವನು ಲಿಂಗಾಯತ ಧರ್ಮದ ಬಗೆಗಿನ 770 ವಚನಗಳನ್ನು 16 ಸ್ಥಲಗಳ ಅಡಿಯಲ್ಲಿ ಜೋಡಿಸಿರುವುದಾಗಿ ಹೇಳುತ್ತಾನೆ. ಪ್ರತಿಯೊಂದು ಸ್ಥಲವೂ ಸಂಸ್ಕೃತ ಶ್ಲೋಕ ಮತ್ತು ಅದರ ಮೇಲಿನ ಕನ್ನಡ ವ್ಯಾಖ್ಯಾನದಿಂದ ಪ್ರಾರಂಭವಾಗುತ್ತದೆ; ಅನಂತರ ವಚನಗಳು ಮತ್ತು ಅವುಗಳ ಮೇಲಿನ ವ್ಯಾಖ್ಯಾನಗಳಿಂದ ಮುಂದುವರಿಯುತ್ತದೆ.
ಈ ಗ್ರಂಥವು ಲಿಂಗಾಯತ ಧರ್ಮದ ಎಲ್ಲಾ ಪ್ರಮುಖ ಸಿದ್ಧಾಂತಗಳನ್ನು ತಿಳಿಸುವುದೂ ಅಲ್ಲದೆ ಮೂರು ಮುಖ್ಯ ಕಾರಣಗಳಿಗಾಗಿ ನಮ್ಮ ಗಮನವನ್ನು ಸೆಳೆಯುತ್ತದೆ. 1. ಗ್ರಂಥಕರ್ತೃ ಮುನ್ನುಡಿಯಲ್ಲಿಯೂ ಉಪಸಂಹಾರದಲ್ಲಿಯೂ ವೇದ ಮತ್ತು ಆಗಮಗಳು ಷಟ್‍ಸ್ಥಲ ಪಥವನ್ನು ಬೋಧಿಸುವುದಿಲ್ಲವಾದುದರಿಂದ ಅವುಗಳನ್ನು ಜಡ್ಡು, ಗೊಜಡು ಎಂದು ಪರಿಗಣಿಸಬೇಕು ಎನ್ನುತ್ತಾನೆ. ಷಟ್‍ಸ್ಥಲ ಪಥವನ್ನು ಅರಿಯಬೇಕೆಂದರೆ ನಾವು ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮುಂತಾದ ಪುರಾತನರ ಗುರುವಚನಗಳನ್ನು ಅವಲಂಬಿಸಬೇಕಾದುದು ಅನಿವಾರ್ಯ ಎನ್ನುತ್ತಾನೆ. 2. ಅಲ್ಲದೆ ಅವನು ಷಟ್‍ಸ್ಥಲ ಪಥವನ್ನು ಅರಿಯಲು ಈ ಗುರುವಚನಗಳೇ ಏಕೆ ಬೇಕು ಎಂಬುದಕ್ಕೆ ಕಾರಣವನ್ನೂ ಕೊಡುತ್ತಾನೆ. ಷಟ್‍ಸ್ಥಲ ಪಥವನ್ನು ಅನುಸರಿಸಿ ಲಿಂಗದೊಡನೆ ಬೆರೆತು, ಶಿವಸುಖವನನುಭವಿಸಿ ಶರಣರು ಪಡೆದ ತೃಪ್ತಿಯೇ ಗುರುವಚನಗಳಾಗಿ ವ್ಯಕ್ತವಾಗಿವೆ. ಆದುದರಿಂದ ಗುರುವಚನಗಳೇ ಷಟ್‍ಸ್ಥಲ ಪಥದ ಆಕರ, ಗುರು ಅಥವಾ ಮತ್ತಾರಿಂದಲೋ ಪಡೆದ, ವೇದ ಅಥವಾ ಆಗಮಗಳಿಂದ ಕಲಿತುದಲ್ಲ; 3. ಮುನ್ನುಡಿಯಲ್ಲಿಯೂ ಉಪಸಂಹಾರದಲ್ಲಿಯೂ ಗ್ರಂಥಕರ್ತೃವು ತಾನು 770 ವಚನಗಳನ್ನು ಬರೆದು ಅವುಗಳಿಗೆ ವ್ಯಾಖ್ಯಾನವನ್ನು ಬರೆದು, ಅವುಗಳನ್ನು 16 ಸ್ಥಲಗಳಲ್ಲಿ ವಿಂಗಡಿಸಿರುವುದಾಗಿ ಹೇಳುತ್ತಾನೆ. ಆದರೆ ಗ್ರಂಥದಲ್ಲಿ ಕೇವಲ 729 ವಚನಗಳೂ ಅವುಗಳ ವ್ಯಾಖ್ಯಾನಗಳೂ ಇವೆ. ಆಶ್ಚರ್ಯದ ಮಾತೆಂದರೆ ಇವಲ್ಲದೆ, 135 ಸಂಸ್ಕೃತ ಶ್ಲೋಕಗಳೂ ಇವೆ. ಆದರೆ ಅವುಗಳ ಬಗ್ಗೆ ಅವನು ಮೌನವಾಗಿದ್ದಾನೆ. ಆದುದರಿಂದ 135 ಸಂಸ್ಕೃತ ಶ್ಲೋಕಗಳನ್ನು ಯಾರು ಸೇರಿಸಿದರು, 41 ವಚನಗಳನ್ನು ತೆಗೆದುಹಾಕಿದವರಾರು ಮತ್ತು ಏಕೆ ಎಂಬುದು ನಮ್ಮ ಪ್ರಶ್ನೆ. (ಆಗಮಿಕ) ಸಂಸ್ಕೃತ ಶ್ಲೋಕಗಳು ಬೋಧಿಸುವುದನ್ನೇ ವಚನಗಳು ಬೋಧಿಸುತ್ತವೆ, ಎಂದು ಓದುಗರು ತೀರ್ಮಾನಿಸಲಿ ಎಂಬ ದುರುದ್ದೇಶ ಈ ಸಂಸ್ಕೃತ ಶ್ಲೋಕಗಳನ್ನು ಸೇರಿಸಿದವನಿಗೆ ಇರಬೇಕೆಂದೆನಿಸುತ್ತದೆ. ಆದುದರಿಂದಲೇ ಅವನು ಸಂಸ್ಕೃತ ಶ್ಲೋಕಗಳನ್ನು ಮೊದಲೇ ಉದ್ಧರಿಸಿ ಅನಂತನ ವಚನಗಳನ್ನು ಉದ್ಧರಿಸುತ್ತಾನೆ. ಕಲ್ಲುಮಠದ ಪ್ರಭುದೇವನೇ ಇದನ್ನು ಮಾಡಿದ ಎಂದು ನಂಬಲು ಅಸಾಧ್ಯ. ಏಕೆಂದರೆ ಶ್ಲೋಕಗಳ ಬಗ್ಗೆ ಅವನು ಮೌನವಾಗಿರುತ್ತಿರಲಿಲ್ಲ; ಅಲ್ಲದೆ ವೇದ ಮತ್ತು ಆಗಮಗಳನ್ನು ಜಡ್ಡು ಗೊಜಡು ಎಂದು ಕರೆಯುತ್ತಿರಲಿಲ್ಲ.
6. ಚಾಮರಸನ ಪ್ರಭುಲಿಂಗಲೀಲೆ: ಪ್ರಭುಲಿಂಗ ಲೀಲೆಯಲ್ಲಿ ಗ್ರಂಥಕರ್ತೃ ಚಾಮರಸ ತನ್ನ, ತನ್ನ ತಂದೆ ತಾಯಿಗಳ, ತನ್ನ ಊರಿನ ಬಗ್ಗೆ ಯಾವ ವಿವರಗಳನ್ನೂನೀಡುವುದಿಲ್ಲ. ಆದರೆ ಬೇರೆಯವರ ಕೃತಿಗಳ ಪ್ರಕಾರ ಅವನು ವಿಜಯನಗರದಲ್ಲಿ 1419-46ರ ವರೆಗೂ ಇದ್ದ. ಪ್ರಭುಲಿಂಗ ಲೀಲೆಯಲ್ಲಿ 1111 ಷಟ್ಪದಿಗಳಿವೆ. ಅಲ್ಲಮನು ಶಿವನ ಅವತಾರ, ಪರಿಪೂರ್ಣ ಯೋಗಿ ಮತ್ತು ಅಖಂಡ ಬ್ರಹ್ಮಚಾರಿ ಎಂದು ತೋರಿಸುವುದೇ ಈ ಕೃತಿಯ ಉದ್ದೇಶ. ಹರಿಹರನು ಅಲ್ಲಮನು ಮೊದಲು ಕೈಲಾಸದಲ್ಲಿದ್ದ ಒಬ್ಬ ಗಣನೆಂದೂ ಮಾಯೆಯಿಂದ ಆಕರ್ಷಿತನಾದ ಅವನು ಶಿವನಿಂದ ಶಪಿಸಲ್ಪಟ್ಟು ಭೂಮಿಯಲ್ಲಿ ಅವತರಿಸಿದನೆಂದೂ ಸ್ವಪ್ರಯತ್ನದಿಂದ ಒಬ್ಬ ಶ್ರೇಷ್ಠ ಶಿವಯೋಗಿ ಆದನೆಂದೂ ಚಿತ್ರಿಸಿದರೆ ಚಾಮರಸನು ಅಲ್ಲಮನನ್ನು ಒಬ್ಬ ಪರಿಪೂರ್ಣ ಯೋಗಿ ಎಂದೂ ಅವನೆಂದೂ ಮಾಯೆಗೆ ಒಳಗಾಗಲಿಲ್ಲವೆಂದೂ ಚಿತ್ರಿಸುತ್ತಾನೆ. ಅಷ್ಟೇ ಅಲ್ಲ, ಅವನ ಪ್ರಕಾರ ಶಿವನೇ ಅಲ್ಲಮನ ರೂಪ ಧರಿಸಿ ಪವಾಡಗಳ ಮೂಲಕ ಲೋಕೋದ್ಧಾರ ಮಾಡಲು ಭೂಮಿಯಲ್ಲಿ ಅವತರಿಸಿದ. ಮಾಯೆಯ ಮೇಲೆ ಆಧ್ಯಾತ್ಮ ಸಾಧಿಸಿದ ಜಯದ ಕಥೆಯೇ ಪ್ರಭುಲಿಂಗಲೀಲೆಯಾಗಿದೆ.
ಕೈಲಾಸದಲ್ಲಿರುವ ಶಿವ ತಾನು ಲೋಕೋದ್ಧಾರಕ್ಕಾಗಿ ಅಲ್ಲಮನಾಗಿ ಹುಟ್ಟುವುದಾಗಿ ಹೇಳುವುದರೊಂದಿಗೆ ಕೃತಿ ಪ್ರಾರಂಭವಾಗುತ್ತದೆ. ಅಲ್ಲಮನ ಆಧ್ಯಾತ್ಮಿಕ ಬಲವನ್ನು ಪರೀಕ್ಷಿಸಲು ಪಾರ್ವತಿಯು ತನ್ನ ತಾಮಸಿಕ ಅಂಶವಾದ ಮಾಯೆಗೆ ಮಾನವ ಸ್ತ್ರೀ ರೂಪ ಕೊಟ್ಟು ಭೂಮಿಗೆ ಕಳುಹಿಸುತ್ತಾಳೆ. ಮಾಯೆ ಒಬ್ಬ ಸಾಮಂತನ ಸ್ಫುರದ್ರೂಪಿ ಮಗಳಾಗಿ ಹುಟ್ಟುತ್ತಾಳೆ; ಅಲ್ಲಮ ಮದ್ದಳೆ ಬಾರಿಸುವ ಸ್ಫುರದ್ರೂಪಿ ಯುವಕನಾಗಿ ಹುಟ್ಟುತ್ತಾನೆ. ಅಲ್ಲಮನು ವ್ಯೋಮಕಾಯನಾದುದರಿಂದ ಮಾಯೆ ಅವನನ್ನು ಅಪ್ಪಲು ಸೋಲುತ್ತಾಳೆ.
ಶೂನ್ಯ ಸಂಪಾದನೆಯಲ್ಲಿನ ಪ್ರಸಂಗಗಳನ್ನೇ ಹೋಲುವ ಅನೇಕ ಪ್ರಸಂಗಗಳು ಪ್ರಭುಲಿಂಗಲೀಲೆಯಲ್ಲಿಯೂ ಇವೆ. ಅಲ್ಲಮನು ಬಸವಣ್ಣ, ಅನಿಮಿಷ, ಮಹಾದೇವಿ, ಗೊಗ್ಗಯ್ಯ, ಮುಕ್ತಾಯಿ, ಮರುಳು ಶಂಕರದೇವ, ಗೋರಕ್ಷ ಮತ್ತಿತರರನ್ನು ಭೇಟಿಯಾಗುತ್ತಾನೆ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಅನೇಕ ದೋಷಪೂರಿತ ವಿಚಾರ ಮತ್ತು ಆಚಾರಗಳನ್ನು ಖಂಡಿಸಿ ತನ್ನ ವಿಚಾರ-ಆಚಾರಗಳನ್ನು ಬೋಧಿಸುತ್ತಾನೆ. ಅವನ ಪ್ರಕಾರ ಕೈಲಾಸಕ್ಕೆ ಹೋಗುವುದೆಂದರೆ ನೂಲಿನ ಹಗ್ಗದ ಬದಲು ಚಿನ್ನದ ಸರಪಳಿಯಿಂದ ಕಟ್ಟಿಸಿಕೊಂಡಂತೆ. ದೇಹಕ್ಕೆ ಅತಿ ಮಹತ್ವವನ್ನೂ ಕೊಡಬಾರದು, ಅದನ್ನು ದಂಡಿಸಲೂ ಬಾರದು. ಅದರ ಸಹಜ ಬಯಕೆಗಳನ್ನು ತೀರಿಸಬೇಕು; ಆದರೆ ಅದು ನಿಯಂತ್ರಣದಲ್ಲಿರಬೇಕು. ಎಲ್ಲ ಜೀವಿಗಳಿಗೂ ದಯೆ ತೋರಿಸಬೇಕು. ಮನುಷ್ಯನೇ ಸಾಧ್ಯ, ಸಾಧಕ ಮತ್ತು ಸಾಧನ. ಕಾಮುಕತೆ, ರಸವಿದ್ಯೆಗಳಲ್ಲಿ ಅಸ್ವಸ್ಥ ಮನಸ್ಸುಗಳಷ್ಟೇ ಆಸಕ್ತಿ ತೋರಿಸುತ್ತವೆ. ಎಲ್ಲ ಜೀವಿಗಳೂ ಶಿವನ ರೂಪಗಳು. ಪ್ರಪಂಚವು ಕ್ಷಣಿಕ ಮತ್ತು ಕ್ಷುಲ್ಲಕವೇ ಹೊರತು ಮಾಯೆಯಲ್ಲ.
ಅಲ್ಲಮ ಪ್ರವಾಸದಿಂದ ಹಿಂದಿರುಗಿದಾಗ ಬಸವಣ್ಣ ಆರೋಗಣೆಯನ್ನು ಏರ್ಪಡಿಸುತ್ತಾರೆ. ಅಲ್ಲಮ ಬಂಡಿಗಟ್ಟಲೆ ಆಹಾರ ಸೇವಿಸುತ್ತಾನೆ. ಗರ್ಭಿಣಿ ಊಟ ಮಾಡಿದರೆ ಗರ್ಭಸ್ಥ ಶಿಶುವಿಗೂ ತೃಪ್ತಿಯಾಗುವಂತೆ ಅಲ್ಲಮ ಊಟ ಮಾಡಿದರೆ ಎಲ್ಲ ಜೀವಿಗಳಿಗೂ ತೃಪ್ತಿಯಾಗುತ್ತದೆ. ಅಂದರೆ, ಅವನೇ ಎಲ್ಲ ಜೀವಿಗಳ ಆತ್ಮ ಎಂಬ ಸಂದೇಶವನ್ನು ಸಾರುವುದೇ ಈ ಪ್ರಸಂಗದ ಉದ್ದೇಶ.
ಅಲ್ಲಮನು ಅನೇಕ ಪವಾಡಗಳನ್ನು ಮಾಡುವುದೂ ಅಲ್ಲದೆ ಕೆಲವರನ್ನು ತನ್ನ ಕರುಣಾಮಯ ದೃಷ್ಟಿಯಿಂದ, ಕೆಲವರನ್ನು ಮೃದುವಚನಗಳಿಂದ, ಕೆಲವರನ್ನು ಕಠಿಣ ಮಾತುಗಳಿಂದ, ಕೆಲವರನ್ನು ಹೊಗಳಿ, ಕೆಲವರನ್ನು ಆಶೀರ್ವದಿಸುವ ಮೂಲಕ ತಿದ್ದುತ್ತಾನೆ; ದೋಷಪೂರಿತ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದವರಿಗೆ ಪರಿಣಾಮಕಾರಿಯಾದ ಮಾರ್ಗದರ್ಶನ ನೀಡುತ್ತಾನೆ.
7. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ: ಲಕ್ಕಣ್ಣ ಅಮಾತ್ಯನೆಂದು ಪ್ರಸಿದ್ಧನಾಗಿದ್ದ ಲಕ್ಕಣ್ಣ ದಂಡೇಶನು ಏಕಕಾಲದಲ್ಲಿ ಒಬ್ಬ ಶ್ರೇಷ್ಠ ಅಮಾತ್ಯ, ಸಮರ್ಥ ದಂಡನಾಯಕ, ಉದ್ಧಾಮ ಕವಿ ಮತ್ತು ಉನ್ನತ ಮಟ್ಟದ ಯೋಗಿಯಾಗಿದ್ದನು (ಹೆಚ್.ದೇವಿರಪ್ಪ ತಮ್ಮ ಪೀಠಿಕೆಯಲ್ಲಿ). ಅಬ್ದುಲ್ ರಜಾಕ್ ಎಂಬ ಪರ್ಷಿಯನ್ ಪ್ರವಾಸಿಯು ಅವನನ್ನು ಮನಸಾರೆ ಪ್ರಶಂಸಿಸಿದ್ದಾನೆಂಬುದೇ ಅವನ ಬಹುಮುಖ ಪ್ರತಿಭೆಗೆ ಸಾಕ್ಷಿ. ಲಕ್ಕಣ್ಣ ದಂಡೇಶನ ಪ್ರತಿ ಪದ್ಯವೂ ‘ಅವನ ಚರಣಕ್ಕೆರಗುವೆ’ ಎಂದು ಮುಕ್ತಾಯವಾಗುತ್ತದೆ. ಅವನ ವಿನಯ ಎಷ್ಟು ಆಳವಾಗಿತ್ತು ಎಂದರೆ ಪ್ರತಿ ಶಿವಭಕ್ತನನ್ನು ಕೃತಜ್ಞತೆಯಿಂದ ಸ್ಮರಿಸುತ್ತಾನೆ – ಅವನ ಕಾಯಕ ಬುಟ್ಟಿ ಹೆಣೆಯುವುದಾಗಿರಲಿ ಅಥವಾ ಚಪ್ಪಲಿ ಮಾಡುವುದಾಗಿರಲಿ. ಒಂದು ರಾಜ್ಯದ ಪ್ರಧಾನಿಯಾಗಿದ್ದವರಲ್ಲಿ ಅಂಥ ಗುಣವಿತ್ತೆಂಬುದು ಪ್ರಶಂಸನೀಯ. ಹಿಂದಿನ ಕವಿಗಳು ರಾಜಾಶ್ರಯ ನೀಡಿದ್ದಕ್ಕೆ ಸಣ್ಣ ರಾಜರನ್ನು ಅತಿಯಾಗಿ ಹೊಗಳುತ್ತಿದ್ದರೆ ಲಕ್ಕಣ್ಣ ಅಲಕ್ಷಿತ ವ್ಯಕ್ತಿಗಳ ಶಿವಭಕ್ತಿಯನ್ನು ದೊಡ್ಡ ಗುಣವೆಂದು ಹೊಗಳುತ್ತಾನೆ.
ಲಕ್ಕಣ್ಣ ಕೋಲಾರ ಜಿಲ್ಲೆಯ ಹೊಸ ಪಟ್ಟಣದಲ್ಲಿ ಹುಟ್ಟಿದನು. ಎರಡನೇ ದೇವರಾಯ (ಸುಮಾರು 1426) ತನ್ನ ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅವುಗಳನ್ನು ಆಳಲು ನಾಲ್ಕು ಮಾಂಡಲೀಕರನ್ನು ನೇಮಿಸಿದ್ದ. ಲಕ್ಕಣ್ಣ ಆ ನಾಲ್ವರಲ್ಲಿ ಒಬ್ಬ. ಆದರೆ ವಾಸ್ತವದಲ್ಲಿ ಅವನೇ ನಾಲ್ಕು ಭಾಗಗಳನ್ನೂ ಆಳುತ್ತಿದ್ದ.
ಶಿವತತ್ತ್ವಚಿಂತಾಮಣಿಯ 54 ಅಧ್ಯಾಯಗಳಲ್ಲಿ 1221 ಷಟ್ಪದಿಗಳಿವೆ. ಶಿವಭಕ್ತಿ ಪಾರಮ್ಯವನ್ನು ಬೋಧಿಸುವುದೇ ಈ ಕೃತಿಯ ಮೂಲ ಉದ್ದೇಶ.
ಈ ಗ್ರಂಥದ ಕೆಲವು ಮುಖ್ಯ ವಿಷಯಗಳು ಈ ರೀತಿಯಾಗಿವೆ: 1. ಅದು ಶಿವನ ಇಪ್ಪತ್ತೈದು ಲೀಲೆಗಳನ್ನು ಕುರಿತು ಹೇಳುತ್ತದೆ. 2. ಬಸವಣ್ಣನವರ ಜೀವನ ಚರಿತ್ರೆಯನ್ನು ಪುರಾಣೀಕರಿಸಲಾಗಿದೆ ಮತ್ತು ಅವರಿಗೆ ಅನೇಕ ಪವಾಡಗಳನ್ನು ಆರೋಪಿಸಲಾಗಿದೆ. 3. ನಿಷ್ಠಾವಂತ ಶಿವಭಕ್ತಿಗೆ ಹೆಸರಾದ 63 ಪುರಾತನರನ್ನು ಪ್ರಸ್ತಾಪಿಸಲಾಗಿದೆ. 4. ಜೇಡರ ದಾಸಿಮಯ್ಯ, ಶಂಕರ ದಾಸಿಮಯ್ಯ, ಸಿರಿಯಾಳ, ಸಿಂಧು ಬಲ್ಲಾಳ, ಕೋಳೂರು ಕೊಡಗೂಸು, ಮುಗ್ಧ ಸಂಗಯ್ಯ, ತೆಲುಗು ಜೊಮ್ಮಯ್ಯ, ಸಿದ್ಧರಾಮಯ್ಯ ಮುಂತಾದವರ ಕಥೆಗಳನ್ನು ಸೇರಿಸಲಾಗಿದೆ. 5. ಅಲ್ಲದೆ ಸುಮಾರು 600 ಜನ ಬಸವೋತ್ತರ ಶಿವಶರಣರು (ಉದಾಹರಣೆಗೆ ನುಲಿಯ ಕಲ್ಲಪ್ಪ, ಗುಬ್ಬಿಯ ಮಲ್ಲಣ್ಣ ಇತ್ಯಾದಿ), ಅವರ ಕಾಯಕಗಳು, ಅವರ ಹುಟ್ಟೂರು (ಉದಾಹರಣೆಗೆ ಬೆಂಗಳೂರು, ನೆಲಮಂಗಲ ಇತ್ಯಾದಿ)ಗಳ ವಿವರಗಳನ್ನು ನೀಡಲಾಗಿದೆ. ಇವರಲ್ಲಿ ಕೆಲವರು ತಮಿಳುನಾಡಿಗೆ ಸೇರಿದವರು. 6. ಶಿವಭಕ್ತರ ಕಥೆಗಳೂ ಅಲ್ಲದೆ ಸ್ವರ್ಗ ಮತ್ತು ನರಕಗಳ ಪ್ರಸ್ತಾಪವೂ ಇದೆ. 7. ಲಕ್ಕಣ್ಣ ದಂಡೇಶನ ಪಾದೋದಕದ ಬಗೆಗಿನ ವಿವರವು ಗಮನಾರ್ಹವಾಗಿದೆ. ಅವನ ಪ್ರಕಾರ ಇಷ್ಟಲಿಂಗದ ಮೇಲೆ ನೀರನ್ನು ಸುರಿದ ಬಳಿಕ ಅಂಗೈಯಲ್ಲಿ ಉಳಿದ ನೀರೆ ಪಾದೋದಕ; ಆ ನೀರನ್ನು ಭಕ್ತರು ಕುಡಿಯಬೇಕು. ಅನೇಕ ವಚನಗಳಲ್ಲಿ ಗುರು ಅಥವಾ ಜಂಗಮರ ಪಾದಗಳನ್ನು ತೊಳೆದು ಪಾತ್ರೆಯಲ್ಲಿ ಶೇಖರಿಸಿದ ನೀರೆ ಪಾದೋದಕ ಎಂದೂ ಅದನ್ನು ಕುಡಿಯಬೇಕು ಎಂದೂ ಹೇಳಲಾಗಿದೆ. ಅದ್ವೈತ ಭಕ್ತಿಯ ಮೂಲಕ ಅಂಗವು ಲಿಂಗವಾಗುವ ಮಾರ್ಗದ ಬಗೆಗೂ ಅದರಿಂದ ಉಂಟಾಗುವ ಶಾಂತಿ, ಸಮಾಧಾನ ಮತ್ತು ಆನಂದದ ಬಗೆಗೂ ವಿವರ ನೀಡಲಾಗಿದೆ.
8. ಗೂಳೂರು ಸಿದ್ಧವೀರಣ್ಣ ಒಡೆಯರ ಶೂನ್ಯ ಸಂಪಾದನೆ: ಶಿವಗಣಪ್ರಸಾದಿ ಮಹಾದೇವಯ್ಯ (1416-46.) ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಮುಂತಾದವರ ವಚನಗಳನ್ನು ಮೊಟ್ಟ ಮೊದಲು ಪ್ರಶ್ನೋತ್ತರ ರೂಪದಲ್ಲಿ ಜೋಡಿಸಿ ಶೂನ್ಯ ಸಂಪಾದನೆಯನ್ನು ರಚಿಸಿದನು. ಹೀಗೆ ನೋಡಿದಾಗ ವಚನಗಳ ಈ ಜೋಡಣೆಯು ಹಿಂದಿನ ಎಲ್ಲಾ ವಚನ ಜೋಡಣೆಗಿಂತ ಭಿನ್ನವಾಗಿದ್ದಿತು. ಸಿದ್ಧಾಂತ ಶಿಖಾಮಣಿಯು ಅಗಸ್ತ್ಯ ಮತ್ತು ರೇಣುಕರ ನಡುವಿನ ಸಂಭಾಷಣೆಯ ರೂಪದಲ್ಲಿದ್ದರೂ, ಅದು ಒಮ್ಮುಖದ ಉಪದೇಶವಾಗಿತ್ತು; ಆ ಸಂಭಾಷಣೆಯಲ್ಲಿ ಇತರರಾರೂ ಭಾಗವಹಿಸುವುದಿಲ್ಲ. ಆದರೆ ಶೂನ್ಯಸಂಪಾದನೆಯಲ್ಲಿ ಅಲ್ಲಮನು ಕೇಂದ್ರ ವ್ಯಕ್ತಿ ಮತ್ತು ಬಸವಣ್ಣ, ಚೆನ್ನಬಸವಣ್ಣ, ಮುಕ್ತಾಯಿ, ನುಲಿಯ ಚಂದಯ್ಯ, ಮುಂತಾದ ಇತರರು ಭಾಗವಹಿಸುತ್ತಾರೆ. ಅವರು ತಮ್ಮ ಭಾವನೆ, ವಿಚಾರ, ಸಲಹೆ, ಸಂದೇಹ ಮತ್ತು ವಿಮರ್ಶೆಗಳನ್ನು ಯಾವ ಸಂಕೋಚವೂ ಇಲ್ಲದೆ ವ್ಯಕ್ತಪಡಿಸುತ್ತಾರೆ. ಶೂನ್ಯಸಂಪಾದನೆಯನ್ನು ಅನಂತರ ಹಲಗೆಯಾರ್ಯ (1530-85), ಗುಮ್ಮಳಾಪುರದ ಸಿದ್ಧಲಿಂಗ (1580) ಮತ್ತು ಗೂಳೂರು ಸಿದ್ಧವೀರಣ್ಣ ಒಡೆಯರು ಪರಿಷ್ಕರಿಸಿದರು.
ಶೂನ್ಯಸಂಪಾದನೆಯ ಈ ನಾಲ್ಕು ಅವತರಿಣಿಕೆಗಳಲ್ಲಿ ಸ್ಥಲಗಳ ಸಂಖ್ಯೆಯಾಗಲಿ ಅವುಗಳನ್ನು ಹೊಂದಿಸುವುದಾಗಲಿ ಮುಖ್ಯ ಸಮಸ್ಯೆಯಾಗಿರದೆ ಲಿಂಗಾಯತ ಧರ್ಮದ ಮುಖ್ಯ ಸಿದ್ಧಾಂತಗಳನ್ನು ಚರ್ಚಿಸುವುದು ಮತ್ತು ಆಗಿನ ಕಾಲದಲ್ಲಿದ್ದ ಅವುಗಳ ಬಗೆಗಿನ ಸಂದೇಹಗಳನ್ನು ನಿವಾರಿಸುವುದು ಆಗಿದೆ. ಪ್ರಾಯಶಃ ಲಿಂಗಾಯತ ಧರ್ಮದಲ್ಲಿ ಶ್ಲಾಘನಾತ್ಮಕ ಮತ್ತು ಅನುಕರಣೀಯ ಸಿದ್ಧಾಂತ ಮತ್ತು ಆಚರಣೆಗಳು ಇವೆ ಎಂದು ಸಾಧಿಸುವುದು ಈ ನಾಲ್ಕು ಆವೃತ್ತಿಗಳ ಉದ್ದೇಶವಾಗಿದೆ. ಉದಾಹರಣೆಗೆ ಅಲ್ಲಮಪ್ರಭು ಸಿದ್ಧರಾಮನಿಗೆ ಬದುಕಿರುವಾಗಲೇ ಲಿಂಗದಲ್ಲಿ ಒಂದಾಗುವುದು ಜೀವನದ ಪರಮೋದ್ದೇಶವೇ ಹೊರತು, ಮರಣೋತ್ತರ ಕೈಲಾಸಪ್ರಾಪ್ತಿಯಲ್ಲ, ಶಿವ ಅಥವಾ ಲಿಂಗವೆಂದರೆ ದೂರದ ಮತ್ತೊಂದು ಲೋಕಲ್ಲಿರುವುದಲ್ಲ, ಪ್ರತಿಯೊಬ್ಬ ಮನುಷ್ಯನಲ್ಲಿರುವ ಆತ್ಮವೇ ಲಿಂಗ; ಕೆರೆ ಕಟ್ಟೆಗಳನ್ನು ಕಟ್ಟಿಸುವುದು, ಛತ್ರಗಳನ್ನು ಸ್ಥಾಪಿಸುವುದು ಜೀವನದ ಪರಮೋದ್ದೇಶವನ್ನು ಸಾಧಿಸುವ ಮಾರ್ಗವಲ್ಲ, ಅದರ ಬದಲು ಲಿಂಗಾಯತ ಧರ್ಮವು ಬೋಧಿಸುವ ಸಿದ್ಧಾಂತಗಳನ್ನು ಆಚರಣೆಯಲ್ಲಿ ತರುವುದು; ಕರ್ಮಮಾರ್ಗವು ಹೆಚ್ಚೆಂದರೆ ಕೈಲಾಸ ಪ್ರಾಪ್ತಿಯನ್ನು ಉಂಟುಮಾಡಬಹುದು. ಆದರೆ ಅದನ್ನು ಸಾಧಿಸುವವನು ತಾನು ಶಿವನಿಂದ ಭಿನ್ನವೆಂದು ತಿಳಿಯುತ್ತಾನೆ. ಅಂದರೆ, ಅವನು ನಿಜವಾಗಿಯೂ ಮುಕ್ತನಲ್ಲ. ಅಲ್ಲದೆ, ಕೈಲಾಸ ಜೀವನವು ಭಕ್ತನ ಪುಣ್ಯವು ತೀರಿದ ಕೂಡಲೇ ಅವನು ಮತ್ತೆ ಭೂಮಿಯಲ್ಲಿ ಅವತರಿಸಬೇಕಾಗುತ್ತದೆ. ಇರುವುದೆಲ್ಲವೂ ಲಿಂಗದ ಪ್ರಸಾದವೇ ಆಗಿರುವಾಗ, ಮಾನವರು ಗುರುಲಿಂಗಜಂಗಮರಿಗೆ ನೀಡುವುದಾಗಿ ಹೇಳಿಕೊಳ್ಳುವುದು ತಪ್ಪು ಎಂದು ಅಲ್ಲಮ ಬಸವಣ್ಣನವರಿಗೆ ಬುದ್ಧಿವಾದ ಹೇಳುತ್ತಾನೆ. ಸ್ವಾರ್ಥ ಉದ್ದೇಶಗಳಿಂದ ಅಥವಾ ಯಾಂತ್ರಿಕವಾಗಿ ದಾನ ಮಾಡುವುದು ದಾಸೋಹ ಎನಿಸುವುದಿಲ್ಲ. ಅಲ್ಲಮನು 12 ವರ್ಷಗಳ ಕಾಲ ಯಾರ ಗಮನಕ್ಕೂ ಬಾರದೆ ಪ್ರಸಾದದ ಗುಂಡಿಯಲ್ಲಿಯೇ ಜೀವಿಸಿದ್ದ ಮರುಳು ಶಂಕರದೇವನ ವಿಚಾರವನ್ನು ಅಲ್ಲಿ ನೆರೆದಿದ್ದ ಭಕ್ತರಿಗೆ ತೋರಿಸಿಕೊಡುತ್ತಾನೆ. ದೇಹವೇ ಒಂದು ತೋಟ, ಅದರಲ್ಲಿರುವ ದೋಷ ಮತ್ತು ಕೊರತೆಗಳನ್ನು ನಿವಾರಿಸಬೇಕು, ಅದನ್ನು ಒಂದು ದೇವಾಲಯವನ್ನಾಗಿ ಮಾಡಬೇಕೆಂದು ಗೊಗ್ಗಯ್ಯನಿಗೆ ಬೋಧಿಸುತ್ತಾನೆ. ಇಷ್ಟಲಿಂಗ ಮತ್ತು ಸ್ಥಾವರ ಲಿಂಗ ನಮ್ಮ ಆತ್ಮದ ಸಂಕೇತ, ನಮ್ಮ ಆತ್ಮವೇ ನಿಜವಾದ ಲಿಂಗ. ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡವನಿಗೆ ಅನುಪಮ ಸುಖ ಉಂಟಾಗಿ, ಅವನು ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ. ಹಾಗೆ ಮುಕ್ತನಾದವನು ನಡೆದಾಡುವ ಲಿಂಗ (ಜಂಗಮಲಿಂಗ) ಎನಿಸಿಕೊಳ್ಳುತ್ತಾನೆ. ಅವನು ಇತರರನ್ನು ಬಂಧನಮುಕ್ತರನ್ನಾಗಿ ಮಾಡುವ ಸಲುವಾಗಿ ಆಧ್ಯಾತ್ಮಿಕ ಸಾಧನೆಯನ್ನು ಬೋಧಿಸುತ್ತಾನೆ.
ಶೂನ್ಯಸಂಪಾದನೆ ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ ಮುಂತಾದ ಕೆಳಜಾತಿಯವರಿಗೂ ಮಾತನಾಡುವ ಅವಕಾಶ ಮಾಡಿಕೊಡುತ್ತದೆ. ಈ ಗ್ರಂಥದ ಪ್ರಕಾರ ನಿಸ್ವಾರ್ಥ ದೃಷ್ಟಿಯಿಂದಲೂ ಆಸಕ್ತಿಯಿಂದಲೂ ಜಂಗಮ ದಾಸೋಹ ಮಾಡಬೇಕೆಂಬ ಉದ್ದೇಶದಿಂದಲೂ ಮಾಡಿದ ಪ್ರತಿ ಕಾಯಕವೂ ಒಂದು ರೀತಿಯ ಲಿಂಗಪೂಜೆ ಎನಿಸಿಕೊಳ್ಳುತ್ತದೆ. ಆಯ್ದಕ್ಕಿ ಮಾರಯ್ಯನ ಪ್ರಕಾರ ಗುರು ಅಥವಾ ಜಂಗಮ ಎದುರಿನಲ್ಲಿ ನಿಂತಿದ್ದರೂ ಕಾಯಕವನ್ನು ನಿಲ್ಲಿಸಬಾರದು. ನುಲಿಯ ಚಂದಯ್ಯ ಒಂದು ಹೆಜ್ಜೆ ಮುಂದು ಹೋಗಿ ಮಾನವ ರೂಪದ ಲಿಂಗವನ್ನೇ ತಾನು ಮಾಡುವ ಕಾಯಕದಲ್ಲಿ ಸಹಾಯ ಮಾಡಲು ಮತ್ತು ತಾನು ಮಾಡಿದ ಹಗ್ಗವನ್ನು ಮಾರಲು ನೇಮಿಸಿಕೊಳ್ಳುತ್ತಾನೆ. ಭಿಕ್ಷೆ ಬೇಡುವುದೇ ತಮ್ಮ ಕಾಯಕವೆಂದು ನಂಬಿದ್ದ ಜಂಗಮರಿಗೂ, ಜಂಗಮ ಕೇಳಿದುದನ್ನು ಕೊಡಬೇಕೆಂದು ಭಕ್ತರಿಗೂ ಬುದ್ಧಿವಾದ ಹೇಳುತ್ತಾನೆ.
ಎಲ್ಲಾ ಆತ್ಮಗಳು ಲಿಂಗ ಎಂಬುದು ಶೂನ್ಯಸಂಪಾದನೆಯ ಮುಖ್ಯ ಬೋಧನೆಗಳಲ್ಲೊಂದು. ಅಲ್ಲಮನು ಬಸವಣ್ಣ ಬಡಿಸಿದ ಎಲ್ಲ ಆಹಾರವನ್ನು ಸೇವಿಸಿದ ಮೇಲೆ ಅವನು ಸೇವಿಸಿದ ಆಹಾರವು ಕಪ್ಪೆಯೊಂದರ ಹೊಟ್ಟೆಯಲ್ಲಿ ಕಂಡಿತು. ಅಂದರೆ ಅಲ್ಲಮ ಲಿಂಗ, ಅವನು ಆಹಾರ ಸೇವಿಸಿದಾಗ ಪರಮಾತ್ಮನ ಇತರ ರೂಪಗಳಾದ ಎಲ್ಲ ಜಂಗಮಕ್ಕೂ (ಜೀವಿಗಳಿಗೂ) ತೃಪ್ತಿಯಾಯಿತು ಎಂಬುದು ಇದರ ಅರ್ಥ.
9. ನಿಜಗುಣ ಶಿವಯೋಗಿ: ನಿಜಗುಣ ಶಿವಯೋಗಿಯು ಚಾಮರಾಜನಗರ ಜಿಲ್ಲೆಯಲ್ಲಿರುವ ಕೊಳ್ಳೇಗಾಲವನ್ನು ರಾಜಧಾನಿ ಮಾಡಿಕೊಂಡು ಆಳಿದ ಒಬ್ಬ ರಾಜ ಅಥವಾ ಮಾಂಡಲಿಕನಿರಬಹುದು. ಅವನು ತೋಂಟದ ಸಿದ್ಧಲಿಂಗ ಶಿವಯೋಗಿಯ ಶಿಷ್ಯನೊಬ್ಬನ ಅನುಯಾಯಿ ಎಂದು ಹೇಳಿಕೊಳ್ಳುವುದರಿಂದ ಆತ 1560ರ ಆಸುಪಾಸಿನಲ್ಲಿ ಜೀವಿಸಿದ್ದಿರಬಹುದು ಎಂದು ತರ್ಕಿಸಬಹುದು. ಅವನು 1. ವಿವೇಕಚಿಂತಾಮಣಿ, 2. ಪರಮಾರ್ಥ ಪ್ರಕಾಶಿಕೆ, 3. ಅನುಭವಸಾರ, 4. ಪರಮಾರ್ಥ ಗೀತೆ, 5. ಪರಮಾನುಭವಬೋಧೆ, 6. ಕೈವಲ್ಯ ಪದ್ಧತಿ, 7. ಪುರಾತನರ ತ್ರಿವಿಧಿ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಮೊದಲಿನ ಎರಡು ಗ್ರಂಥಗಳು ಗದ್ಯದಲ್ಲಿವೆ, ಉಳಿದವು ಪದ್ಯ ಕೃತಿಗಳಾಗಿವೆ. ವಿವೇಕಚಿಂತಾಮಣಿಯು ಒಂದು ವಿಶ್ವಕೋಶದಂತಿದ್ದು ವೀರಶೈವಕ್ಕೂ ಶುದ್ಧಶೈವಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ. ಕೈವಲ್ಯ ಪದ್ಧತಿಯು ವೀರಶೈವದ ಧರ್ಮದ ಬಗೆಗೆ ಪೂರ್ಣ ಪ್ರಮಾಣದ ವಿವರಗಳನ್ನು ನೀಡಿದರೂ, ಅದನ್ನು ಅದ್ವೈತದ ಪ್ರತಿರೂಪದಂತೆ ಚಿತ್ರಿಸುತ್ತದೆ. ಅದು ಬ್ರಹ್ಮ ಮಾತ್ರ ಸತ್ಯವೆಂದೂ ದೇಹೇಂದ್ರಿಯಾದಿ ಮತ್ತು ಜಗತ್ತು ಮಾಯೆ ಎಂದೂ ಇಂದ್ರಿಯ ಸುಖ ಕ್ಷುಲ್ಲಕವೆಂದೂ ಬೋಧಿಸುತ್ತದೆ. ನಮ್ಮ ಮೂಲ ಸ್ವರೂಪ ಬ್ರಹ್ಮ ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಗುರಿಯಾಗಬೇಕು.
ಉಳಿದ ಗ್ರಂಥಗಳು ಅದ್ವೈತವನ್ನು ಪ್ರತಿಪಾದಿಸುತ್ತವೆ. ಆದರೆ ಅವುಗಳಲ್ಲಿ ವೀರಶೈವದ ಪ್ರಸ್ತಾಪವಿಲ್ಲ.
10. ಸಿಂಗಿರಾಜನ ಬಸವರಾಜ ಚಾರಿತ್ರ: ಸಿಂಗಿರಾಜ ಪುರಾಣವೆಂಬ ಮತ್ತೊಂದು ಹೆಸರುಳ್ಳ ಈ ಕೃತಿಯ ಕರ್ತೃ ಸಿಂಗಿರಾಜ. ಈ ಸಿಂಗಿರಾಜನು ಬಸವಣ್ಣನವರ ಸಮಕಾಲೀನನಾಗಿದ್ದ ದಶಗಣ ಸಿಂಗಿರಾಜನಿಂದ ಭಿನ್ನ. ಅವನ ಬಗ್ಗೆ ಯಾವ ವಿವರಗಳೂ ಲಭ್ಯವಿಲ್ಲ. ಪ್ರಾಯಶಃ ಅವನು 1440 ಮತ್ತು 1560ರ ಮಧ್ಯ ಭಾಗದಲ್ಲಿ ಜೀವಿಸಿದ್ದಿರಬಹುದು.
ಬಸವಣ್ಣನವರು ಒಬ್ಬ ಬಾಲಕನನ್ನು ಬಾವಿಗೆ ತಳ್ಳಿ ಸಾಯಿಸಿದರು ಎಂಬ ಆರೋಪದಿಂದ ಮುಕ್ತರಾಗಲು ತಮ್ಮ ಹಳ್ಳಿಯನ್ನು ತೊರೆದು ಕೂಡಲಸಂಗಮಕ್ಕೆ ಹೋದರು ಎಂಬುದು ಸಿಂಗಿರಾಜನ ಅಭಿಪ್ರಾಯ. ಕೂಡಲಸಂಗಮದಲ್ಲಿ ಬಸವಣ್ಣನವರು ತಮ್ಮ ನಿಷ್ಠಾಭಕ್ತಿಗೆ ಪ್ರಸಿದ್ಧರಾಗಿದ್ದರು. ಇದನ್ನು ಕೇಳಿದ ಕಲ್ಯಾಣದಲ್ಲಿ ಮಂತ್ರಿಯಾಗಿದ್ದ ಬಲದೇವ ತನ್ನ ಮಗಳು ಗಂಗಾಂಬಿಕೆಯನ್ನು ಬಸವಣ್ಣನವರಿಗೆ ಕೊಟ್ಟು ಮದುವೆ ಮಾಡಿಕೊಟ್ಟನು. ಬಸವಣ್ಣ ಜಂಗಮ(ಭಕ್ತ ಅಥವಾ ಲಿಂಗಾಯಿತ)ರನ್ನು ಸೇವಿಸುತ್ತಿದ್ದರಲ್ಲದೆ ವಚನಗಳನ್ನು ಬರೆಯುತ್ತಿದ್ದರು.
ಸಿಂಗಿರಾಜನು ಇತರ ಕವಿಗಳಂತೆ ಬಸವಣ್ಣನವರಿಗೆ 64 ಪವಾಡಗಳನ್ನು ಆರೋಪಿಸಿದ್ದಾನೆ. ಉದಾಹರಣೆಗೆ, ಲಿಂಗಾಯತ ವೇಷದಲ್ಲಿ ಬಂದ ಜೈನರು ನಿಜವಾದ ಲಿಂಗಾಯಿತರೇ ಆದರು; ಛದ್ಮವೇಷಧಾರಿಗಳು ಧರಿಸಿದ್ದ ಬದನೆಕಾಯಿಗಳು ನಿಜವಾದ ಲಿಂಗಗಳಾದವು, ಇತ್ಯಾದಿ.
11. ಗುಬ್ಬಿಯ ಮಲ್ಲಣಾರ್ಯ ವೀರಶೈವಾಮೃತ ಪುರಾಣ: ಗುಬ್ಬಿಯ ಮಲ್ಲಣ್ಣನ ಮೊಮ್ಮಗ ಗುಬ್ಬಿಯ ಮಲ್ಲಣಾರ್ಯ ವೀರಶೈವಾಮೃತ ಪುರಾಣದ ಕರ್ತೃ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಆತ ಸುಮಾರು 1530ರಲ್ಲಿ ಇದ್ದ. ಭಾವಚಿಂತಾರತ್ನ ಅವನ ಇನ್ನೊಂದು ಕೃತಿ.
ವೀರಶೈವ ಪುರಾಣಗಳಲ್ಲಿಯೇ ಅತ್ಯಂತ ದೊಡ್ಡದಾದ ವೀರಶೈವಾಮೃತ ಪುರಾಣದಲ್ಲಿ 7099 ಷಟ್ಪದಿಗಳೂ 817 ಸಂಸ್ಕೃತ ಶ್ಲೋಕಗಳೂ ಇದ್ದು ಅವುಗಳನ್ನು ಎಂಟು ಕಾಂಡಗಳ 136 ಸಂಧಿಗಳಲ್ಲಿ ವಿಂಗಡಿಸಲಾಗಿದೆ.
ಗ್ರಂಥದ ಆದಿಯಲ್ಲಿ ಈ ಗ್ರಂಥದ ಮೂಲವಸ್ತುವನ್ನು ಶೀಲವಂತ ದೇವನು ಹಲಗೆಯಾರ್ಯನಿಗೆ ಬೋಧಿಸಿದ, ಹಲಗೆಯಾರ್ಯ ಕೆಂಚವೀರಣ್ಣನಿಗೆ ಬೋಧಿಸಿದ, ಗುಬ್ಬಿಯ ಮಲ್ಲಣಾರ್ಯ ಅದನ್ನು ಷಟ್ಪದಿಗಳಲ್ಲಿ ಬರೆದ ಎಂಬ ಒಕ್ಕಣೆಯಿದೆ. ಹಲಗೆಯಾರ್ಯನೇ ನಿಜವಾದ ಕರ್ತೃ ಎಂದೂ ಮಲ್ಲಣಾರ್ಯ ಕೇವಲ ಒಬ್ಬ ಲಿಪಿಕಾರನಂತೆ ಕೆಲಸ ಮಾಡಿದನೆಂದೂ ತೀರ್ಮಾನಕ್ಕೆ ಬರುವುದು ತಪ್ಪು. ಅದರ ಬದಲು ಹಿಂದಿನವರು ಕೃತಜ್ಞತೆಯಿಂದ ತಮ್ಮ ಗುರುಗಳನ್ನು ನೆನೆಯುವ ಪದ್ಧತಿ ಇದು ಎಂದು ತೀರ್ಮಾನಿಸಬೇಕು.
ವೀರಶೈವಾಮೃತ ಪುರಾಣವು ಒಂದು ವಿಶ್ವಕೋಶದಂತಿದ್ದು ಅದು ಅನೇಕ ವಿಷಯಗಳನ್ನು ಒಳಗೊಂಡಿದೆ. ಶಿವನ 25 ಲೀಲೆಗಳು, ವೇದಾಂತ, ಚಾರ್ವಾಕ, ಬೌದ್ಧ, ಜೈನ, ಸಾಂಖ್ಯ, ವೈಶೇಷಿಕ ದರ್ಶನಗಳ ವಿರುದ್ಧ ಮಂಡಿಸಿರುವ ಗೌತಮನ ವಾದಗಳು, ಬಸವ ಪುರಾಣದಲ್ಲಿ ಉಧೃತವಾಗಿರುವ ಪವಾಡಗಳು, ಮಾಚಯ್ಯ, ಕಿನ್ನರಯ್ಯ ಮೊದಲಾದ ಶರಣರ ಕಥೆಗಳು, 14 ಲೋಕಗಳು, ಅವುಗಳ ವಿಸ್ತೀರ್ಣ, ಪರಸ್ಪರ ದೂರ ಇತ್ಯಾದಿ, ಮಾನವ ಶರೀರಶಾಸ್ತ್ರ, ಸತ್ಕರ್ಮ ಮತ್ತು ದುಷ್ಕರ್ಮಗಳ ಫಲಗಳು, 101 ಸ್ಥಲಗಳು, ವೀರಶೈವ ಹೇಗೆ ವೇದಾಂತ ಮತ್ತು ಶೈವ ಸಿದ್ಧಾಂತಗಳಿಗಿಂತ ಭಿನ್ನ, ಹಸ್ತಸಾಮುದ್ರಿಕೆ ಮತ್ತು ಜ್ಯೋತಿಷ್ಯ ಶಾಸ್ತ್ರ, ಶಿವಶಕ್ತಿ ಸಂಪುಟದ ಅಸಂಖ್ಯಾತ ರೂಪಾಂತರಗಳು, ಗುರು-ಶಿಷ್ಯರ ಆದರ್ಶ ಪ್ರಾಯದ ಸಂಬಂಧ, ಮುಂತಾದವುಗಳು ಈ ಗ್ರಂಥದ ವಿಷಯಗಳಾಗಿವೆ. ಮುಕ್ತಿಗೆ ಮಾರ್ಗವಾಗಿರುವ ವಿವಿಧ ಸಾಧನೆಗಳು ಪರಸ್ಪರ ಪೂರಕವೇ ಹೊರತು ವಿರುದ್ಧವಲ್ಲ ಎಂಬುದು ಗ್ರಂಥ ಕರ್ತೃವಿನ ಅಚಲ ಅಭಿಪ್ರಾಯ.
ಸಂಪ್ರದಾಯದ ಪ್ರಕಾರ ಹಿಂದೆ ಅನಾದಿಶೈವ, ಆದಿಶೈವ, ಮಹಾಶೈವ, ಅಂತರಶೈವ, ಪ್ರವರ ಶೈವ, ಅನುಶೈವ ಮತ್ತು ಅಂತ್ಯ ಶೈವಗಳಿದ್ದವೆಂದು ಹೇಳಿ ವೀರಶೈವವಿರಲಿಲ್ಲವೆಂಬುದನ್ನು ಗ್ರಂಥ ಕರ್ತೃ ಗಮನಿಸುತ್ತಾನೆ. ವೀರಶೈವರು ವಾರ, ತಿಥಿ, ನಕ್ಷತ್ರ, ಚಂದ್ರ-ಸೂರ್ಯರ ಸ್ಥಾನ ಮುಂತಾದವುಗಳಿಗೆ ಪ್ರಾಮುಖ್ಯ ನೀಡುವುದಿಲ್ಲವೆಂದೂ ತೀರ್ಥಯಾತ್ರೆಗೆ ಹೋಗುವುದಿಲ್ಲವೆಂದೂ ವೈದಿಕ ಕರ್ಮಗಳನ್ನು ಆಚರಿಸುವುದಿಲ್ಲವೆಂದೂ ವೇದಗಳು ವಿಧಿಸುವ ವರ್ಣಾಶ್ರಮ ಧರ್ಮ ಪದ್ಧತಿಯನ್ನು ಅನುಸರಿಸುವುದಿಲ್ಲವೆಂದೂ ಹೇಳುತ್ತಾನೆ; ವೀರಶೈವರು ಪಂಚಾಕ್ಷರಿಯನ್ನಲ್ಲದೆ ಇತರ ಮಂತ್ರಗಳನ್ನು ಉಚ್ಚರಿಸುವುದಿಲ್ಲ, ಭವಿಗಳೊಡನೆ ಬೆರೆಯುವುದಿಲ್ಲ ಮತ್ತು ಶಿವ ತಮಗಿಂತ ಭಿನ್ನವೆಂದು ತಿಳಿಯದೆ ತಾವೇ ಶಿವ ಅಥವಾ ಲಿಂಗವೆಂದು ನಂಬುತ್ತಾರೆ. ಸಹಗಮನ ಪದ್ಧತಿಯನ್ನೂ ಉಪವಾಸ ಮಾಡುವುದನ್ನು ವೀರಶೈವ ಧರ್ಮ ನಿಷೇಧಿಸುತ್ತದೆ.
ಈ ಕೃತಿಯು ಬಸವಣ್ಣನವರ ಜೀವನ ಚರಿತ್ರೆ, ಪಂಚಾಚಾರ, ಶಾಸ್ತ್ರೀಯ ಸಂಗೀತ, ನಾಟ್ಯ ಶಾಸ್ತ್ರಗಳನ್ನು ಕುರಿತು ಸಹ ಪ್ರಸ್ತಾಪಿಸುತ್ತದೆ.
12. ಷಡಕ್ಷರ ದೇವನ ಬಸವರಾಜ ವಿಜಯಂ: ವೃಷಭೇಂದ್ರ ವಿಜಯ ಎಂದೂ ಕರೆಯಲಾಗುವ ಈ ಕೃತಿಯ ಕರ್ತೃ ಷಡಕ್ಷರ ದೇವನು ತಾಯಿಯ ತವರೂರಾದ ದನುಗೂರಿನಲ್ಲಿ ಜನಿಸಿದರು. ಆರಾಧ್ಯ ವೀರಶೈವನಾದ ಅವನು ದನುಗೂರು ಮತ್ತು ಎಳಂದೂರು (ಚಾಮರಾಜನಗರ ಜಿಲ್ಲೆ) ಎರಡೂ ಮಠಗಳಿಗೆ ಏಕಕಾಲಕ್ಕೆ ಪೀಠಾಧಿಪತಿಯಾಗಿದ್ದ. 1777ರಲ್ಲಿ ತಾನು ಬಸವರಾಜ ವಿಜಯಂ ಬರೆದು ಮುಗಿಸಿದೆನೆಂದು ಹೇಳಿಕೊಂಡಿದ್ದಾನೆ. ರಾಜಶೇಖರವಿಳಾಸ, ಶಬರಶಂಕರವಿಳಾಸ, ಮತ್ತು ಕವಿಕರ್ಣರಸಾಯನ (ಸಂಸ್ಕೃತ) ಅವನ ಇತರ ಕೃತಿಗಳು. ಇತರ ಸಣ್ಣ ಸಣ್ಣ ಒಂಭತ್ತು ಕೃತಿಗಳನ್ನು ಅವನು ರಚಿಸಿದ್ದಾನೆ ಎಂದು ಹೇಳಲಾಗಿದೆ.
ತಾನು ರೇವಣಸಿದ್ಧನ ಮಗನಾದ ರುದ್ರಮುನಿಯ ಪೀಳಿಗೆಯವರೆಂದು ಹೇಳಿಕೊಂಡರೂ ಆತ ಕೆಲವು ಆಧುನಿಕ ಪಂಚಪೀಠದವರಂತೆ ಬಸವಣ್ಣನವರನ್ನು ದ್ವೇಷಿಸುವುದಿಲ್ಲ. ಅವನು ತನ್ನ ಕೃತಿಯಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಸಿದ್ಧಲಿಂಗ ಶಿವಯೋಗಿಗಳಿಗೆ ಮೊದಲು ನಮಿಸಿ ಅನಂತರ ರೇಣುಕ, ಪಂಡಿತರಾಧ್ಯರನ್ನು ನನೆಯುತ್ತಾನೆ.
ಬಸವರಾಜ ವಿಜಯಂ ಒಂದು ಚಂಪೂ ಕಾವ್ಯ. ಇದರಲ್ಲಿ 42 ಸಂಧಿಗಳಿದ್ದು ಮೊದಲಿನ 8 ಬಸವಣ್ಣನವರ ಜೀವನ ಚರಿತ್ರೆಗೆ ಮೀಸಲಾಗಿವೆ. ಉಳಿದ ಸಂಧಿಗಳು ತಮಿಳುನಾಡು ಮತ್ತು ಕರ್ನಾಟಕದ ಶಿವಭಕ್ತರ ಕಥೆಗಳನ್ನು ಹೇಳುತ್ತವೆ. ಈ ಕಥೆಗಳೆಲ್ಲ ಬಸವಣ್ಣನವರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿವೆ. ಇವುಗಳ ತುಂಬ ಉತ್ಪ್ರೇಕ್ಷೆ ಮತ್ತು ಪವಾಡಗಳು ಇವೆ.
ಷಡಕ್ಷರ ದೇವನ ಪ್ರಕಾರ ಬಸವಣ್ಣನವರು 16 ವ್ರತಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದರು. ಅವುಗಳಲ್ಲಿ ಕೆಲವು ಹೀಗಿವೆ: ಪ್ರತಿಯೊಬ್ಬ ಶರಣನನ್ನೂ ಶಿವನೆಂದೇ ಪರಿಗಣಿಸಬೇಕು; ಶರಣರಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು; ಅವರಿಗೆ ಮೋಸ ಮಾಡಬಾರದು; ಇಷ್ಟಲಿಂಗವೇ ಪ್ರಾಣಲಿಂಗವೆಂದು ನಂಬಬೇಕು; ಏನೇ ಕಷ್ಟ ಬಂದರೂ ಮಾತಿಗೆ ತಪ್ಪಬಾರದು; ಭಕ್ತರಿಗೆ (ಶರಣರಿಗೆ) ತಪ್ಪದೆ ದಾಸೋಹ ಮಾಡಬೇಕು; ಲಿಂಗಕ್ಕೆ ನಿಷ್ಠಭಕ್ತಿ ತೋರಿಸಬೇಕು; ಸ್ವಾರ್ಥ ಆಸೆಗಳಿಂದ ಮುಕ್ತನಾಗಬೇಕು; ಇತ್ಯಾದಿ. ಬಸವಣ್ಣನವರಿಗೆ ಬುದ್ಧಿವಾದ ಹೇಳಿದ ಶರಣರ ಕಥೆಗಳು ಇದರಲ್ಲಿವೆ.
ಶಿವಯೋಗಿಯೂ ಜಕ್ಕಣ್ಣನೂ ನೂರೊಂದು ಸ್ಥಲಗಳನ್ನು ಕುರಿತು ಮಾಡಿರುವ ವಿವೇಚನೆಗಿಂತ ಗುಬ್ಬಿಯ ಮಲ್ಲಣ್ಣನು ತನ್ನ ಗಣಭಾಷಿತರತ್ನಮಾಲೆಯಲ್ಲಿ ಮಾಡಿರುವ ವಿವೇಚನೆಯು ಹೆಚ್ಚು ವೈಚಾರಿಕವೆನಿಸುತ್ತದೆ. ಮೊದಲಿನವರಿಬ್ಬರೂ ನೂರೊಂದು ಸ್ಥಳಗಳನ್ನು ಅಂಗಸ್ಥಲ (44) ಲಿಂಗಸ್ಥಲ (57) ಎಂದು ವಿಭಜಿಸಿದರೆ, ಮಲ್ಲಣ್ಣ ಅಂಗಸ್ಥಲ (44) ಲಿಂಗಸ್ಥಲ (45) ಮತ್ತು ನಿರಂಗಲಿಂಗಸ್ಥಲ (12) ಎಂದು ವಿಭಜಿಸುತ್ತಾನೆ. ಪ್ರತಿ ಸ್ಥಲವನ್ನೂ ಅವನು ಶಿವರಹಸ್ಯ, ಶಿವಧರ್ಮ ಮುಂತಾದ ಗ್ರಂಥಗಳ ಸಂಸ್ಕೃತ ಶ್ಲೋಕಗಳಿಂದಲೂ ಅವುಗಳ ಕನ್ನಡ ವ್ಯಾಖ್ಯಾನದಿಂದಲೂ ಆರಂಭಿಸಿ, ಅನಂತರ ಬಸವಾದಿ ಶರಣರ ವಚನಗಳನ್ನು ಉದ್ಧರಿಸುತ್ತಾನೆ. ನೂರೊಂದು ಸ್ಥಲಗಳಲ್ಲಿ ಕೆಲವಕ್ಕೆ ಮಲ್ಲಣ್ಣನು ಹೊಸ ಹೆಸರನ್ನು ಕೊಟ್ಟು, ಹೊಸ ಅರ್ಥಗಳನ್ನು ಕೊಡುತ್ತಾನೆ. ಎಲ್ಲಕ್ಕಿಂತ ಮುಖ್ಯವೆಂದರೆ, ಅವನು ವಿಷಯಗಳನ್ನು ಬಹಳ ವ್ಯವಸ್ಥಿತವಾಗಿ ವಿಂಗಡಿಸುತ್ತಾನೆ. ಹೀಗಾಗಿ ಅವನ ಕೃತಿ ಹೆಚ್ಚು ಪ್ರಿಯವಾಗುತ್ತದೆ. ಉದಾಹರಣೆಗೆ, ಮಾನವನು ಭವದುಃಖಕ್ಕೆ ಈಡಾಗಿದ್ದಾನೆ, ಅದಕ್ಕೆ ಕಾರಣಗಳಿವೆ ಮತ್ತು ಬಸವಾದಿ ಶರಣರು ಭವದುಃಖ ನಿವಾರಣೆಗೆ ಸೂಕ್ತವಾದ ಮಾರ್ಗ ಸೂಚಿಸಿದ್ದಾರೆ ಎಂಬುದನ್ನು ತರ್ಕಬದ್ಧವಾಗಿ ಮಂಡಿಸಿದ್ದಾನೆ.
ವೇದ, ಪುರಾಣ, ಶಾಸ್ತ್ರ ಇತ್ಯಾದಿಗಳನ್ನು ಇಟ್ಟುಕೊಂಡವಳಿಗೆ ಸಮ ಎಂದೂ ಶಿವಧರ್ಮ ಸಾಹಿತ್ಯವು ಒಳ್ಳೆ ಮನೆತನದಿಂದ ಬಂದ ಹೆಂಡತಿಗೆ ಸಮ ಎಂದೂ ಮಲ್ಲಣ್ಣ ತೀರ್ಮಾನಿಸುತ್ತಾನೆ. ಮುಂದುವರಿದು, ಆತ ವೇದಾದಿಗಳನ್ನು ಅನುಸರಿಸಿದವರಿಗೆ ಪುನರ್ಜನ್ಮ, ಭವದುಃಖ ನಿಶ್ಚಿತವೆಂದೂ ಶೈವಸಾಹಿತ್ಯವನ್ನು ಅನುಸರಿಸಿದವರು ಭವದಿಂದ ಪಾರಾಗುತ್ತಾರೆಂದೂ ಅಭಿಪ್ರಾಯ ಪಡುತ್ತಾನೆ. ವೀರಶೈವ ಧರ್ಮದ ಸಿದ್ಧಾಂತಗಳು ವೇದ ಪುರಾಣಗಳಲ್ಲಿ ಇಲ್ಲ, ವಚನ ಮತ್ತು ಆಗಮಗಳಲ್ಲಿ ಅವು ಇವೆ ಎಂಬುದು ಅವನ ಅಭಿಪ್ರಾಯ.
Comments 11
VIJAYAKUMAR KAMMAR
Sep 8, 2023ಕನ್ನಡ ಕಾವ್ಯಗಳಲ್ಲಿ ಶರಣರು
Marvelous article. It will make the reader to read in one go.👏👏
ಮಧುಸೂದನ ನಾಯಕ್
Sep 11, 2023ಶರಣರ ಕಾಲಾನಂತರ ಬಂದ ಪ್ರತಿಯೊಂದು ಕಾವ್ಯ ಗಮನಾರ್ಹ. ಆದರೆ ಅಲ್ಲಿ ಇತಿಹಾಸದ ಎಳೆಗಳನ್ನು ಹೆಕ್ಕಿ ತೆಗೆಯುವುದು ಮಾತ್ರ ಬಹಳ ಕಷ್ಟದ ಕೆಲಸ.
Avinash L
Sep 11, 2023I am really enjoying the theme and design of your website. Great information from the great scholar.
ಗಿರೀಶ್ ಪಾಟೀಲ್
Sep 13, 2023ಹರಿಹರ, ರಾಘವಾಂಕ, ಭೀಮಕವಿಯ ಹೊರತಾಗಿ ನನಗೆ ಇಲ್ಲಿ ಉಲ್ಲೇಖಿಸಿದ ಹಲವಾರು ಕವಿಗಳ ಪರಿಚಯ ನನಗಿರಲಿಲ್ಲ. ಇತಿಹಾಸ ದಾಖಲಿಸಲು ಗೊತ್ತಿಲ್ಲದ ನಮಗೆ ಪುರಾಣದಲ್ಲಾದರೂ ಚೂರು ಇತಿಹಾಸ ಸಿಗುವುದು ಎನ್ನುತ್ತಾರೆ ಎಂ ಎಂ ಕಲಬುರ್ಗಿ ಸರ್.
ಧರ್ಮಪ್ರಕಾಶ್, ರಾಯಚೂರು
Sep 15, 2023ವಚನ ರಚನೆ ನಿಂತು, ಕಾವ್ಯಗಳ ಕಾಲ ಶುರುವಾದ ಬಳಿಕ ವಚನಕಾರರ ಪ್ರಖರ ಚಿಂತನೆಗಳನ್ನು ಮುಂದಿನ ಕವಿಗಳ್ಯಾರೂ ಗ್ರಹಿಸಲಾರದೇ ಹೋದದ್ದು ನಿಜಕ್ಕೂ ಆಶ್ಚರ್ಯಕರ! 12 ನೇ ಶತಮಾನದ ಕ್ರಾಂತಿಕಾರಿ ವಿಚಾರಗಳು ಭೂಗತವಾಗಿ ಬಿಟ್ಟದ್ದು ನಾಗರಿಕತೆಗೆ ದೊಡ್ಡ ಕಂದಕವಾಗಿ ಹೋಯಿತು.
ಯತಿರಾಜ ಪಿ
Sep 15, 2023ಕೆರೆಯ ಪದ್ಮರಸನ ದೀಕ್ಷಾಬೋಧೆಯಲ್ಲಿನ ಲಿಂಗಗಳ ವಿವರಣೆ ಬಹಳ ಕುತೂಹಲಕರವಾಗಿದೆ. ನಮ್ಮ ತಾತನವರು ಸದ್ಯೋಜಾತ ಲಿಂಗದ ಬಗ್ಗೆ ಹೇಳುತ್ತಿದ್ದರು. ಅದರ ವಿಶೇಷ ಏನೆಂದು ತಿಳಿಸುವಿರಾ?
Shivaprakash H
Sep 21, 2023ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು ಯಥಾವತ್ತಾಗಿ ಭೀಮಕವಿಯು ಕನ್ನಡಕ್ಕೆ ಇಳಿಸಿದ್ದಾನೆಯೇ ಅಥವಾ ತನ್ನ ಸೃಜನಶೀಲತೆಯಲ್ಲಿ ಹೊಸದಾಗಿಯೇ ಬಸವಣ್ಣನವರ ಇತಿಹಾಸವನ್ನು ಪುರಾಣದಲ್ಲಿ ಕಟ್ಟಿದ್ದಾನೆಯೇ? ಯಾಕೆಂದರೆ ಸೋಮನಾಥನ ಕಾವ್ಯವನ್ನು ಕನ್ನಡದಲ್ಲಿ ಓದಿದ್ದೇನೆ, ಅದರಲ್ಲಿ ಸೋಮನಾಥನು ಬಹಳ ಭಯಭಕ್ತಿಯಿಂದ ಬಸವಣ್ಣನವರ ಕತೆಯನ್ನು ಹೇಳುತ್ತಾರೆ. ಭೀಮಕವಿಯೂ ಅಭಿಮಾನದಿಂದಲೇ ಸೊಗಸಾಗಿ ಕನ್ನಡಿಸಿದ್ದಾನೆಂದು ಕೇಳಿದ್ದೇನೆ.
Nagaratna Jayadev
Sep 21, 2023ಈ ಎಲ್ಲ ಕೃತಿಗಳು ಪುರಾಣದ ರೂಪದಲ್ಲಿದ್ದರೂ ವೈಚಾರಿಕತೆಯಿಂದ ಕೂಡಿವೆ. ಆಯಾ ಕಾಲ ಘಟ್ಟದಲ್ಲಿ ಇವು ಸಂಚಲನವನ್ನೇ ಮೂಡಿಸಿದ್ದಿರಬೇಕು. ಗೊತ್ತಿಲ್ಲದ, ಓದಿರದ ಮಹತ್ತರ ವಿಷಯಗಳನ್ನು ತಿಳಿಸಿದ್ದಕ್ಕೆ ಅನಂತ ವಂದನೆಗಳು.
ಶಿವಪುತ್ರ ವೀರಾಪುರ
Sep 26, 2023ಅಮಾತ್ಯನೆಂದು ಪ್ರಸಿದ್ಧನಾಗಿದ್ದ ಶಿವತತ್ವ ಚಿಂತಾಮಣಿಯ ಕರ್ತು ಲಕ್ಕಣ್ಣ ದಂಡೇಶನ ಕುರಿತು ಓದಿ ಬಹಳ ಆಶ್ಚರ್ಯವಾಯಿತು. ಅಬ್ದುಲ್ ರಜಾಕ್, ಪರ್ಷಿಯನ್ ಪ್ರವಾಸಿ ಲಕ್ಕಣ್ಣನ ಕುರಿತು ಬರೆದಿದ್ದಾನೆಂಬುದು ನಿಜಕ್ಕೂ ಸಂತೋಷದ ವಿಚಾರ. ಇಂತಹ ಅಪರೂಪದ ಮಾಹಿತಿಗಳನ್ನು ಒದಗಿಸಿದ ಲೇಖಕರಿಗೆ ನಮಸ್ಕಾರಗಳು.
Ravikiran Patil
Sep 26, 2023ಲಿಂಗಾಯತ ಧರ್ಮದ ಕುರಿತು ಸ್ಪಷ್ಟ ಚಿತ್ರಣವನ್ನು ಒದಗಿಸದಿದ್ದರೂ, ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದನ್ನು ಸಾಬೀತು ಮಾಡಲು ಈ ಆಕರ ಗ್ರಂಥಗಳು ಐತಿಹಾಸಿಕವಾಗಿ ಮಹತ್ವಪೂರ್ಣ ಎನಿಸಿವೆ. ಎಲ್ಲವನ್ನೂ ಕ್ರೋಢೀಕರಿಸಿ ಕೊಟ್ಟ ಲೇಖನದ ಪ್ರಯತ್ನ ಶ್ಲಾಘನೀಯ. ಸಂಗ್ರಹಯೋಗ್ಯವಾದ ಈ ಬರಹಕ್ಕೆ ಲೇಖಕರಿಗೂ, ಬಯಲು ತಂಡಕ್ಕೂ ವಂದನೆಗಳು.
Shraddhananda swamiji, Vijayapura
Sep 28, 2023Most precious article thanks.