Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಲ್ಲೀ ಸಾಹೇಬರು
Share:
Articles February 16, 2026 ಪದ್ಮಾಲಯ ನಾಗರಾಜ್

ಅಲ್ಲೀ ಸಾಹೇಬರು

ಗುಡಿಕಲ್ಲು ಸೂಫಿಗಳಲ್ಲಿ ಅಲ್ಲೀ ಸಾಹೇಬರು ತಮ್ಮ ಸಾಧಕ ಬದುಕಿನಿಂದಾಗಿ ಜನ ಸಮುದಾಯಗಳನ್ನು ಪ್ರಭಾವಿಸಿದವರಲ್ಲಿ ಮುಖ್ಯವಾಗಿ ನಿಲ್ಲುತ್ತಾರೆ. ಇವರ ತಂದೆಯವರಾದ ಹುಸೇನ ಸಾಹೇಬರೇ ಇವರಿಗೆ ಗುರುಗಳು ಎಂದು ತಿಳಿದುಬರುತ್ತದೆ. ಆಂಧ್ರ ಮತ್ತು ಕರ್ನಾಟಕದಲ್ಲಿ ದೇಶ ಭಾಷಾ ಕಾಲಾತೀತವಾಗಿ ಗುಡಿಕಲ್ಲು ಸೂಫಿಗಳು, ಆರ್ಥಿಕವಾಗಿ ಹಿಂದುಳಿದ ದಲಿತ ಸಮುದಾಯಗಳಾದ ಪಿಂಜಾರ, ದರವೇಸಿ, ಕುರುಬ, ಅಗಸ, ನೇಕಾರ, ಕುಂಬಾರ, ಕಮ್ಮಾರ, ಕುಲಗಳೊಂದಿಗೆ ಬೆರೆತು ಅವರನ್ನು ಆತುಕೊಂಡವರು. ಹೀಗಾಗಿ ಆ ಸಮಾಜಗಳಲ್ಲಿ ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸಗಳನ್ನು ಗಳಿಸಿದ್ದರಲ್ಲದೆ ಇದ್ದಿದ್ದನ್ನು ಇರುವಂತೆ ನುಡಿಯುವವರಾಗಿದ್ದರಿಂದ ಆ ಜನಸಮುದಾಯಗಳ ಆದರಕ್ಕೆ ಪಾತ್ರರಾದವರು.

ಅಖಂಡ ಜೀವ ಪ್ರೇಮಕ್ಕಾಗಿ ಧರ್ಮದ ಗಡಿಗಳನ್ನು ದಾಟಿದ ಗುಡಿಕಲ್ಲು ಸೂಫಿಗಳು ಮಾನವ ಹಿತಕ್ಕಾಗಿ ತಮ್ಮ ಬದುಕುಗಳನ್ನೇ ಮುಡಿಪಾಗಿಟ್ಟವರು. ಮಾನವನಿಂದ ಮಾನವನೇ ನಿರ್ಮಿಸಿಕೊಂಡಿರುವ ಕೇಡುಗಳಿಂದ ವಿಮುಕ್ತರನ್ನಾಗಿಸಲು ಇನ್ನಿಲ್ಲದಂತೆ ಶ್ರಮಿಸಿದವರು. ಧರ್ಮಾತೀತತೆ, ಜಾತ್ಯಾತೀತತೆ ಹಾಗೂ ಅಖಂಡವಾದ ಮಹಾಪ್ರೇಮವನ್ನು ಅತ್ಯಂತ ಸರಳವಾಗಿ ಪ್ರಚಾರ ಮಾಡಿದವರಲ್ಲಿ ಈ ಸೂಫಿಗಳು ಬಹಳ ಮುಖ್ಯರಾಗುತ್ತಾರೆ.

ದೈವಿಕ ಮೂಲಭೂತ ಸಿದ್ಧಾಂತಗಳಿಂದಾಗಿ ಪರಿಣಮಿಸಿದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬಿಕ್ಕಟ್ಟುಗಳು ಈ ನೆಲದಲ್ಲಿ ಮಾನವನನ್ನು ಮಾನವ ಒಳಗೊಳ್ಳುವುದರ ಬದಲು ಮಾನವ ದ್ವೇಷಕ್ಕೆ ಎಡೆಯಾಗಿದ್ದರಿಂದಾದ ರಕ್ತಪಾತಗಳು ಸಾಮಾನ್ಯವಾದವೇನೂ ಅಲ್ಲ. ಇಂತಹ ಸಂದರ್ಭಗಳು ಎದುರಾದಾಗಲೆಲ್ಲ ಅಧಿಕಾರ ಕೇಂದ್ರಗಳಿಂದ ದೂರವಿದ್ದು ಸಾಮಾನ್ಯ ಜನರೊಟ್ಟಿಗೆ ಬೆರೆತು ಪ್ರಜಾತಾಂತ್ರಿಕ ಕಲ್ಪನೆಗಳನ್ನು ಮೂಡಿಸಿದವರಲ್ಲಿ ಸೂಫಿಗಳೊಂದಿಗೆ, ಶರಣರು, ತತ್ವಪದಕಾರರು, ಅವಧೂತರು, ದಾಸರು ಕೂಡ ಪ್ರಮುಖವಾಗಿ ನಿಲ್ಲುತ್ತಾರೆ.

ಸೂಫಿ ಎಂದರೆ, ಇಸ್ಲಾಂ ಆಗಲೀ ಅಥವಾ ಯಾವುದೇ ಧರ್ಮವಾಗಲೀ ಅಲ್ಲಾ, ಅದೊಂದು ಮೀರಾಸ! ‘ಮೀರಾಸ’ ಅಂದರೆ ತಮಗೆ ಪರಂಪರಾನುಗತವಾಗಿ ಬಂದಿರುವ ಸಾಂಸ್ಕೃತಿಕ ವಿವೇಕವೆಂದು ಸೂಫಿಗಳು ಹೇಳುತ್ತಾರೆ. ಇವರು ಮೇಲ್ನೋಟಕ್ಕೆ ಅದ್ವೈತಿಗಳಂತೆ ಕಂಡರೂ ಇವರು ಜಗತ್ತು ಮಿಥ್ಯೆ ಎಂದು ಹೇಳುವ ಶಂಕರಾದ್ವೈತಿಗಳಂತಲ್ಲ. ಅವರದು ಜೀವಾದ್ವಯ ಯೋಗ. ಸಚರಾಚರ ಜೀವವಸ್ತು ಸಮರಸೈಕ್ಯ ಯೋಗವಿದು. ಅವರ ಯೋಗಕ್ಕೆ ಇರುವ ಆಯ್ಕೆ ಎಂದರೆ ಎಲ್ಲಾ ಮಾನುಷ ಸಂರಚನೆಗಳಲ್ಲಿ ಸಾಧಕ ಮರಣಿಸದೇ ಗತ್ಯಂತರವಿಲ್ಲ ! ಇದರ ಭಾಗವಾಗಿ ‘ಸಾಯದಾ ಮುನ್ನ ಸಾಯಿ’ ಎಂಬ ಸೂಚನೆ ಅಲ್ಲೀ ಸಾಹೇಬರ ತತ್ವಪದಗಳ ಉದ್ದಕ್ಕೂ ಅನುರಣಿಸುತ್ತಾ ಹೋಗುತ್ತದೆ. ಈ ಬಗೆಯ ಪ್ರಕ್ರಿಯೆಯನ್ನು ಬೌದ್ಧ ಝೆನ್ ಪರಂಪರೆಯ ಶೂನ್ಯತಾ ಪ್ರಕ್ರಿಯೆಯಲ್ಲಿಯೂ ಕಾಣಬಹುದು. ಬೌದ್ಧರ ಶೂನ್ಯತಾ ಪರಿಕಲ್ಪನೆಯು ನೆಲಪರಂಪರೆಗಳಲ್ಲಿ ಬಯಲು ಎನಿಸಿಕೊಂಡಿರುವುದನ್ನು ನಾವು ವಿವೇಚಿಸಬಹುದು.

ಸಾಯದ ಮುಂಚೆ ಸತ್ತಹಾಗೆ ಇರುವರು.
ಆರಿಗೂ ವಶವಲ್ಲ, ನಮ್ಮ ಶರಣರಿಗಲ್ಲದೆ.
ಅದು ಹೇಗೆಂದಡೆ: ಹಗಲಿರುಳೆಂಬ ಹಂಬಲ ಹರಿದರು;
ಜಗದಾಟವ ಮರೆದರು; ಆಡದ ಲೀಲೆಯನೆ ಆಡಿದರು.
ಆರು ಕಾಣದ ಘನವನೆ ಕಂಡರು.
ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
-ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ

ಗುರು ಅಲ್ಲೀಶರ ಪ್ರಕಾರ ಮನುಷ್ಯ ನಿರ್ಮಾಣಗಳಾಗಿರುವ ಮತಗಳು ಮತ್ತವುಗಳ ನಿತ್ಯ ನೈಮಿತ್ತಿಕ ಕ್ರಿಯೆಗಳು, ಜಾತಿಗಳು, ದುಃಖಗಳು, ಗೊಂದಲಗಳು, ಹಿಂಸೆಗಳು, ತಲ್ಲಣಗಳು, ತಾರತಮ್ಯಗಳು, ಅಪೇಕ್ಷೆ – ಉಪೇಕ್ಷೆಗಳು, ವ್ಯಸನಗಳು ಉಪಕೃತಿಗಳೆಲ್ಲವೂ ಮಾನವನ ಅಹಂಕಾರದೊಡನೆ ಮಿಳಿತಗೊಂಡಿರುತ್ತವೆ. ಮಾನುಷ ಅಸ್ತಿತ್ವದ ಅಹಂಕಾರದ ಹೊರತಾಗಿ ಈ ಉಪಾದಿಗಳಿಗೆ ಯಾವುದೇ ಸ್ವತಂತ್ರ ಅಸ್ತಿತ್ವವಿಲ್ಲ. ಈ ಉಪಾದಿಗಳ ಕುರುಹನ್ನು ಅವರು ‘ಸತಿ’ ಎಂಬ ಧ್ವನಿವಾಚಕದಿಂದ ಸೂಚಿಸುತ್ತಾರೆ [ಇದೊಂದು ಮರುಗು ಪದ / ಗೂಡಾರ್ಥ]. ‘ಸತಿ’ ಎಂಬ ಶಬ್ದವನ್ನು ಇವರು ‘ಮಾನವನ ಸುಳ್ಳು ದೃಷ್ಟಿಗಳು’ ಎಂಬುದಕ್ಕೆ ಸಮಾನ ಸಂಜ್ಞೆಯಾಗಿ ಬಳಸಿರುವುದನ್ನು ಕಾಣಬಹುದು. ಎಲ್ಲಾ ಮಾನವರು ಈ ಪರಾವಲಂಬಿತ ತಿಳಿವುಗಳಲ್ಲಿ ಸಂಗ್ರಹಗೊಂಡಿರುವ ಪರಂಪರಾನುಗತ ಮಿಥ್ಯಾ ದೃಷ್ಟಿಗಳಿಂದಲೇ ಎಲ್ಲಾ ಪ್ರಾಪಂಚಿಕ ವ್ಯವಹಾರಗಳನ್ನು ಗ್ರಹಿಸುತ್ತಿರುತ್ತಾರೆ.

ಥಳುಕು ಬಳುಕಿನವಳಾ ನಂಬಲು ತರವೇ
ಇವಳನು ಹೊಂದಲಾರಿಗಾದರೂ ಸ್ಥಿರವೇ
ಒಯ್ಯಾರ ಮಾಡುತಾ ಅನುರಾಗದಿಂದಲೀ…
ಕನ್ನಡಿಯೊಳಗಣ ಚಿನ್ನದಗೊಂಬೆ
ರಂಕುಗಳಾಮಾಡುತಾ ಕೊಂಕುಗಳಾ
ನುಡಿಯುತಾ
ಪಂಕಜಾಕ್ಷಿಗೆಳತಿ
ಇಂಗಳು ಯಾರಿಗಾದರೂ
ಕಟ್ಟಿಕೊಂಡಿಹ ಗಂಡನ ಕೂಡಳು
ದಾಸರಾದವರಾ ಸನಿಹ ಸೇರಳು
ಮೋಸಮಾಡುವಳು ಮುನಿಗಳ
ಮುವ್ವರನಾದರೂ…

ಮನುಷ್ಯ ತನಗೆ ತಾನೇ ಕಲ್ಪಿಸಿಕೊಂಡಿರುವ ಮಿಥ್ಯಾದೃಷ್ಟಿಗಳ ಪರಿಣಾಮದಂತೆ ಬದುಕಿನಾಟ ತೋರಿ ಬರುತ್ತಿರುತ್ತದೆ. ‘ಕನ್ನಡಿಯೊಳಗಣ ಗೊಂಬೆಯಂತೆ’ ಗ್ರಾಹ್ಯವಾಗುತ್ತಿರುವ ಮನುಷ್ಯ ಸುಖಗಳು ಮತ್ತು ಅನುಭೋಗಿ ಪ್ರವೃತ್ತಿಗಳು ತಾನು ಅನುಭವಿಸಿದಾ ಮರುಕ್ಷಣದಲ್ಲಿಯೇ ಇಲ್ಲವಾಗುತ್ತಲೇ ಹೋಗುತ್ತಿರುತ್ತವೆ. ಆದ್ದರಿಂದ ಬದುಕು ಒಂದು ಕನಸಿನಂತೆ ಅಥವಾ ಒಂದು ಮೋಸದಂತೆ ವ್ಯಕ್ತವಾಗುತ್ತದೆ. ಇದು ಅವನ ಅರಿವಿನ ಮಾಯೆಯಿಂದಾದದ್ದು!

ಚೆಲುವೆ ಕಾಮಿನಿ ಕಳೆಗಳ ಬಾಲೆಯು |
ಇವಳ
ನಂಬಲು ನರಕವೇ ಸಿಗುವುದು |
ಮಮತೆಯಿಂದಲಿ
ನಮ್ಮನಾಡಿಸುತಾ | ಮನಸು
ಮರುಳು ಮಾಡುತಾ
ಮುಮ್ಮಾತಿಗೂ ಮುಕುತಿಗೆ
ಮೂಲವಾಗಿಹಳೂ…

ವಿಚಿತ್ರ ಸತ್ಯವೆಂದರೆ ಯಾವುದರಿಂದಾಗಿ ಸಮಸ್ಯೆ ತಲೆದೋರಿದೆಯೋ ಅದರೊಳಗೆ ಪರಿಹಾರವಿದೆ ಹಾಗೂ ಅದೇ ಮಾರ್ಗವಾಗಿದೆ. ಈ ಮನೋರೂಪಿ ಸತಿಯನ್ನು ತೊರೆಯಲು ಅದಕ್ಕೆ ಶರಣು ಹೋಗುವ ತತ್ವಪದಗಳೂ ನಮ್ಮಲ್ಲಿ ಅಸಂಖ್ಯಾತವಾಗಿ ಕಾಣಸಿಗುತ್ತವೆ. ಈ ಸತಿಯನ್ನು ತೊರೆದ ಏಕಾಂತ ಅನುಭವವನ್ನು ಅವರು ‘ಪತಿ’ ಎಂಬ ಕುರುಹಿನಿಂದ ಸೂಚಿಸುತ್ತಾರೆ. ‘ಪತಿಯನ್ನು ಕೋಟಿತಾಯ್ಗಳ ಕರುಣೆ ಮತ್ತು ಪ್ರೇಮ’ ಎಂದು ವರ್ಣಿಸಲಾಗಿದೆ. ಇವರ ‘ಪತಿ’ ಶಬ್ದವು ಕನ್ನಡದ ಪ್ರಾಣಲಿಂಗ, ಅಮನಸ್ಕ, ಬಯಲು ಎಂಬ ಅನುಭಾವಿಕ ಪರಿಭಾಷೆಗಳ ಸಂವಾದಿ ಶಬ್ದವೇ ಆಗಿದೆ. ಆದ್ದರಿಂದ ಪತಿಯು ಮಾನುಷ ನಿರ್ಮಾಣಗಳನ್ನು ಹೊರಗಟ್ಟಿದ ಖಾಲೀತನ! ಅಲ್ಲೀಶರ ಈ ಅತೀತ ಮಹಾಭಾವದಲ್ಲಿ ದೈವ, ಮತ, ಯೋಗ, ಧ್ಯಾನ ಇತ್ಯಾದಿ ಸಾಧನೆಗಳೆಲ್ಲಾ ಅಸಂಬದ್ಧವಾಗಿ ಬಿಡುತ್ತವೆ, ತನ್ನೊಳಗಣ ‘ಅರಿವನ್ನು’ ಜೀವೋನ್ನತಿಯ ಪ್ರಾಮುಖ್ಯತೆಯಿಂದ ಪರಿಶೀಲಿಸಿಕೊಳ್ಳಬೇಕೆಂದು ಒತ್ತಾಯಿಸುತ್ತವೆ.

ಕಲ್ಮದೊಳು ಕಲ್ಮಷನಿರ್ಮೂಲವಾಗೋ
ಮರ್ಮ ಕೇಳಿರಯ್ಯಾ | ಜನ್ಮಪಾವನರಾದರೆ
ಕೂಡಿ ಮಹಬರ ಸೇವಾ ಮಾಡಿರಯ್ಯಾ | ||
ಜಗದೊಳು ||
ಇಹುದು ಶೂನ್ಯವು ಉತ್ತಮಾದ ವೃತ್ತಾಂತಗಳ
ಕೇಳಿರಯ್ಯಾ | ಖಂಡಾಖಂಡವು
ಖಂಡಿತವಾಗೆರಡು ಬೆರೆತವಯ್ಯಾ ||
ಜಗದೊಳು ||
ರೂಪಸ್ವರೂಪನ ನೆರೆಯಿರುವವನಾ
ನೋಡಿರಯ್ಯಾ | ಎಂದಿಗೂ ಮುಗಿಯದಾ
ಏಕಬೆಳಗುತಿರುವಾ ಅವನೇ ಇವನಯ್ಯಾ ||
ಜಗದೊಳು ||
ಕರ್ಮಧರ್ಮಗಳೆರಡೂ ಕಲ್ಪಿತ ಕಾರುಣ್ಯಗಳು
ಕೇಳಿರಯ್ಯಾ | ನಿರ್ಮಾಣ ಪರಮಹಿಮೆ
ಎರಡುಹೊಳೆಗಳು ಕೂಡಿಹರಿದವಯ್ಯಾ ||
ಜಗದೊಳು ||
ವಿವಿಧದೈವಗಳೆರಡು ಒಂದಾಗಿಹ ವಾರ್ತೆ
ಕೇಳಿರಯ್ಯಾ | ನಿರ್ಮೂಲಮಾಡಿ ಲೋಕಗಳಾ
ತೋರುತಿದೆ ಎನುವರಯ್ಯಾ ||
ಜಗದೊಳು ||
ಹಾಲುಲವಣ ವಾರ್ತೆಮಧ್ಯದೊಳಿರುವ
ಮರ್ಮಕೇಳಿರಯ್ಯಾ |
ಅಧಿಕ ಖಬುಲಗುರುಸೇವೆ
ಮಾಡಿದೊಡೆ ದೊರೆವುದಯ್ಯಾ ||
ಜಗದೊಳು ||

ಮನುಷ್ಯನಾಳದಲ್ಲಿರುವ ಆಲೋಚನಾಕ್ರಮ ಅಥವಾ ಭಾಷೆ ಪ್ರತಿಯೊಬ್ಬರಲ್ಲೂ ತನ್ನದೇ ಆದ ಸೈದ್ಧಾಂತಿಕ ಶಠತ್ವಗಳನ್ನು ವೃದ್ಧಿಸಿಕೊಂಡು ಬರುತ್ತಿರುತ್ತದೆ. ಇದು ಮನುಷ್ಯ ಹಿತಾಸಕ್ತಿಗಳ ಸಂಘರ್ಷವಾಗಿ ಪರಿಣಮಿಸಿ ಲೋಕ ದುಃಖೋತ್ಪಾದನೆಯಾಗಿ ಮಾರ್ಪಾಡಾಗಿರುತ್ತದೆ. ಈ ಮೋಸವನ್ನು ಜೀವತತ್ವ ಅಥವಾ ನಿಸರ್ಗದ ಪ್ರಧಾನ್ಯತೆಯಲ್ಲಿ /ಪ್ರಧಾನತೆಯಲ್ಲಿ ಪರಿಶೀಲಿಸಿಕೊಳ್ಳುವುದಾದರೆ ಪರಿವರ್ತನೆ ಸಾಧ್ಯ ಎಂಬುದನ್ನು ಅಲ್ಲೀಶರ ತತ್ವಪದಗಳು ಸ್ಪಷ್ಟಪಡಿಸುತ್ತವೆ. ಆದ್ದರಿಂದ ಈ ಪರಂಪರೆಯ ಸಾಧಕ ಪ್ರಕ್ರಿಯೆ ಸಾರ್ವಕಾಲಿಕವೆಂದು ಹೇಳಬಹುದು.

ಅಲ್ಲೀಶರ ಭಾಷಾವಿಶಿಷ್ಟತೆ ಗುರು ಮಾರ್ಗದ ಸಾಧಕರಿಗೆ ಸಂಬಂಧಿಸಿದಂತೆ ಗುರುಗೀತೆಯ ಒಂದು ಮಾತು ಇಲ್ಲಿ ಪ್ರಸ್ತುತ, ಅದು ‘ಅನುಭಾವದ ಅಭಿವ್ಯಕ್ತಿ’. ಅಂದರೆ “ಸಾಧಕನು ಹಿಂದೆ ಆಗಿಹೋದ ಸಂತರ ನುಡಿಗಳಲ್ಲಿಯೇ ತನ್ನ ಅನುಭಾವವನ್ನು ಹೇಳುವುದಾದರೆ ಅದು ಹಿಂದೆ ಆಗಿಹೋದ ಸಂತರ ಉಚ್ಚಿಷ್ಠದಂತಾಗಿ ಬಿಡುತ್ತದೆ. ನಿರಾವಲಂಬಿಯಾದ ಅದನ್ನು ಯಾವುದರ ಹಂಗಿಲ್ಲದೇ ಸ್ವತಂತ್ರವಾಗಿ ನಿತ್ಯನೂತನ ನಿರಂತರವಾಗಿ ತಾನು ಅನುಸಂಧಾನ ಮಾಡಿದ್ದನ್ನು ಪರಿಪೂರ್ಣ ಸಾಧಕನು ಮಾತ್ರ ನುಡಿಯಬಲ್ಲವನಾಗುತ್ತಾನೆ.” ಈ ವಾಕ್ಯಕ್ಕೆ ಉದಾಹರಣೆಯಾಗಿ ಅಲ್ಲೀಶರ ಪರಂಪರೆಯ ತತ್ವಪದಗಳು ಮುನ್ನೆಲೆಯಲ್ಲಿ ನಿಲ್ಲುತ್ತವೆ. ಏಕೆಂದರೆ ಪೂರ್ವಪರವಾದ ಶಿಷ್ಟಭಾಷೆಯ ಪ್ರಮಾಣಗಳ ಹಂಗನ್ನು ತೊರೆದು ತಮ್ಮದೇ ಆದ ಒಂದು ಸ್ವತಂತ್ರ ಭಾಷೆಯ ಮೂಲಕ ಅವರು ತತ್ವಪದಗಳನ್ನು ಕಟ್ಟಿತೋರಿರುವ ಬಗೆ ಅನನ್ಯವಾದುದ್ದೆಂದು ಹೇಳಲೇಬೇಕಾಗುತ್ತದೆ. ಈ ಬಗೆಯ ಸಾಂಸ್ಕೃತಿಕ ಎಚ್ಚರ ಬಹಳ ಸಮಯೋಚಿತವಾದದ್ದು. ಏಕೆಂದರೆ ಭಾಷೆಯು ಹಿಂದಿನಿಂದ ತನ್ನದೇ ಆದ ಅರ್ಥಸಿದ್ದಾಂತ ಸಂಹಿತೆಗಳ ಶಠತ್ವವನ್ನು ಹೊತ್ತುಕೊಂಡೇ ಬಂದಿರುತ್ತದೆ. ಆದ್ದರಿಂದಾಗಿ ಕನ್ನಡದ ಓದು ಮತ್ತು ಬರಹಕ್ಕಿರುವ ನೀತಿ ಸಂಹಿತೆಗಳನ್ನೆಲ್ಲಾ ಮುರಿದುಕೊಂಡು ಅತ್ಯಂತ ಸಹಜವಾದ ಭಾಷೆಯಲ್ಲಿ ಅವರ ತತ್ವಪದ ಮೈದಾಳಿರುತ್ತದೆ. ಕನ್ನಡ, ತೆಲುಗು ಮತ್ತು ಉರ್ದು ಭಾಷೆಗಳು ಸಮ್ಮಿಳಿತಗೊಂಡ ಸ್ವತಂತ್ರ ಭಾಷೆ ಅವರದು. ಇಲ್ಲಿ ಬಳಸಲಾಗಿರುವ ಭಾಷೆಯನ್ನು ಪ್ರಮಾಣಗಳ ಮೂಲಕವಾಗಲಿ ಇಲ್ಲವೇ ಹೋಲಿಕೆ ವ್ಯತ್ಯಾಸ ವಿರುದ್ಧಾರ್ಥಕಗಳ ಮೂಲಕವಾಗಲಿ ನೋಡಹೋದರೆ ತತ್ವಪದದ ತಿರುಳೇ ಪ್ರಕ್ಷಿಪ್ತವಾಗಿ ಬಿಡುವ ಸಂಭವವುಂಟು. ಇಲ್ಲಿನ ಭಾಷೆಯು ಸಂಜ್ಞಾ ಪ್ರಧಾನ! ಸ್ಥಳೀಯತೆಯ ಜನ ಭಾಷೆಯಲ್ಲಿ ಹದಗೊಂಡು ಬಳಕೆಯಾಗಿರುವ ರೂಪಕಗಳೇ ಇಲ್ಲಿ ಹೆಚ್ಚಾಗಿರುತ್ತವೆ. ಗುರುಶಿಷ್ಯ ಸಾಧಕ ಪ್ರಕ್ರಿಯೆಗೆ ಪೂರಕವಾಗಿ ಪ್ರಮುಖ ಸಂಜ್ಞಾ ಸೂಚನೆಗಳು ಸಂವಹನವಾಗುವುದರ ಮಟ್ಟಿಗೆ ಮಾತ್ರ ಭಾಷೆ ಜೀವ ಪಡೆಯುತ್ತದೆ. ನಂತರ ಅಲ್ಲಿ ಭಾಷೆಗೊಂದು ಅಸ್ತಿತ್ವವಾಗಲಿ ಮುಂದಕ್ಕೆ ಏನನ್ನಾದರೂ ಹೊತ್ತುಕೊಂಡು ಹೋಗುವ ಪ್ರಮೇಯವಾಗಲಿ ಇಲ್ಲಿ ಸಾಧ್ಯವಿಲ್ಲ. ಆದ್ದರಿಂದ ಆ ಪ್ರಾಂತ್ಯದ ನಿರಕ್ಷರ ಕುಕ್ಷಿಗಳಿಗೂ ಬೇಗ ಸಂವಹನವಾಗಿ ಬಿಡಬಲ್ಲ ಸರಳ ಜನ ಭಾಷೆಯೂ ಸಹ ಇದಾಗಿದೆ. ಇಲ್ಲಿನ ಭಾಷಾ ರೂಪಕಗಳು ತಾಕ್ಷಣಿಕ ವಿವೇಕಕ್ಕಷ್ಟೆ ಮಿಂಚಾಗಿ ಹೊಳೆದು ಪ್ರವಹಿಸಿಬಿಡುತ್ತವೆ.

ಎಂದು ಹೋಗುವುದು ಎಂತು ಹೋಗುವುದು
ನಿಮ್ಮೊಳಗಣ ಮಾಯೆ |
ಮೂಲವ ತಿಳಿಯದಾ ಮುನಿಗಳಾ ಸೇವೆ ಮಾಡಿದೊಡೆ || || ಎಂತು ||
ಮುದ್ರೆ ತೋರಿ ಗುರುಗಳು ದರ ನಿಮಿತ್ತ |
ಚದರದದರೊಳು ಮಾಯೆ ಸಾಧಿಸಲೂ ನಿತ್ಯ |
ಅದರದು ಬೆದರದು
ಈ ಮಾತು ಸತ್ಯ | ಒಪ್ಪವಾಗದು ಮನಸು ಪ್ರತ್ಯಕ್ಷದಿ
ಅನಿತ್ಯ | ಎದಿರಿಗಿಟ್ಟುಕೊಂಡದನು ಮುದ್ರೆ ಸಾಧನೆ |
ಮಾಡಿದರೇನು | ನಿದುರೆ ಹೋದವನ ರುಚಿಯಂತೆ
ಮಧುರವಾಗಿಹುದು ಮಾಯೆ || ಎಂತು ||
ತನ್ನ ತಾ ತಿಳಿಯದೇ ತಲೆಕೆಳಕಾಗಿ ಬಿದ್ದರೂ |
ಅನ್ನಹಾರಗಳ ಬಿಟ್ಟು ಸೊಪ್ಪುಸೊದೆ ತಿಂದರೂ |
ಸನ್ಯಾಸಿಯಾಗಿ ಲೋಕ ಸಂಚರಿಸಿದರೂ |
ವನಿತವಯ್ಯಾರ ಗೆಲುವುದು ವಶವಲ್ಲಣ್ಣಾ
ತಾನು ಹೋಗೋವರೆಗೂ ಅದು ಹಿಂತಿರುಗದೂ
ಮಾಯೆ |
ತಾನು ನಾನೆಂದು ಇಳೆಯೊಳು ರಾಗ ತೋರುತಿಹಳು || ಎಂತು ||
ಸ್ವಂತದೀ ಸಾಧಿಸುವುದು ಸಾಧ್ಯವಲ್ಲಾ | ಅಲ್ಲಿಯ
ತನಕ ಗುರುಹೊಂದೋ ಶಿದ್ಧಿ ಹೊಂದಲಾಗದು |
ಮಂತ್ರಗಳಿಂದಲಿ ಮತ್ತೆ ಮಾಯೆ ಹೋಗದು |
ತಂತ್ರವದಲ್ಲ |
ಹೋಗುವುದೇ ಇಲ್ಲ ಅಂತರದೊಳದಿಲ್ಲ | ಅತ್ತ
ಹೋಗಲು |
ಕಾಂತಗುರು ಖಬುಲ ಗುರುಸೇವೆ ಮಾಡಿದರಲ್ಲದೇ || || ಎಂತು ||

ಕ್ಲಾಸಿಕಲ್ ಭಾಷೆಯ ಮೂಲಕ ಶಿಕ್ಷಣ ಪಡೆದವರಿಗಂತೂ ಈ ಭಾಷೆ ಅನೇಕ ಸಂದಿಗ್ದತೆಗಳಿಗೆ ಎಡೆ ಮಾಡಿ ಬಿಡಬಹುದು. ಆದರೆ ಎಲ್ಲವನ್ನೂ ಬದಿಗಿಟ್ಟು ನಿಧಾನವಾಗಿ ಈ ತತ್ವಪದಗಳ ಭಾಷೆಯೊಳಗೆ ಇಂಗುತ್ತಾ ಹೋದಂತೆಲ್ಲಾ ಅದರ ಸ್ವಾತಂತ್ರ್ಯ ಪೂರ್ಣ ಭಾಷೆ ಕೈಗೆಟಕುತ್ತಾ ಹೋಗುತ್ತದೆ.

ಕತ್ತಲ ಮನೆಯೊಳು ಮಾಣಿಕ್ಯವಿಹುದು
ತಿಳಿಯಿರಯ್ಯಾ | ಅದು ದೊರೆತ ಘನರೆಲ್ಲಾ
ದಕ್ಕಿಹೋದರು ನೋಡಿರಯ್ಯಾ | || ಕತ್ತಲು ||
ಬಾವಿಗಳೆರಡರ ಮಧ್ಯ ಗದ್ದುಗೆ ಸಿದ್ದಿಯು
ಹೊಂದಿತು ತಿಳಿಯಯ್ಯಾ | ಅದು ಮುದ್ದೆ
ಮಾಡಿ ಮೂರುಲೋಕಗಳಾ ನುಂಗಿತು ನೋಡಿರಯ್ಯಾ || ಕತ್ತಲು ||
ಸಿದ್ದಿಶವವು ಗುದ್ದಿ ಅಷ್ಠಜಗಗಳ ನಾಶಮಾಡಿತು
ತಿಳಿಯಿರಯ್ಯಾ | ಎದುರಿಸಿ ಒಂದು ಸೊಳ್ಳೆ
ವೀರಭದ್ರನ ನುಂಗಿತು ನೋಡಿರಯ್ಯಾ | || ಕತ್ತಲು ||
ಮಗುತಾಯನು ನುಂಗಿ ಕರೆದರೂ
ನುಡಿಯದು ತಿಳಿಯಿರಯ್ಯಾ | ಪಕ್ಷಿವೃಕ್ಷವ ನುಂಗಿತು
ಪರಮಾತ್ಮ ಬಯಲಾದ ನೋಡಿರಯ್ಯಾ | || ಕತ್ತಲು ||
ಇಲಿಯು ಸರ್ಪವ ನುಂಗಿ ಏಕದಿ
ಬೆಳಗುತಿದೆ ತಿಳಿಯಿರಯ್ಯಾ | ಕಂಡಿರಾಗುಡಿಕಲ್ಲು
ಖಬುಲಗುರು ಜಂಟಿಮರ್ಮವಯ್ಯಾ | || ಕತ್ತಲು ||

Previous post ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
Next post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…

Related Posts

ಒಳಗನರಿವ ಬೆಡಗು
Share:
Articles

ಒಳಗನರಿವ ಬೆಡಗು

September 10, 2022 ಡಾ. ಚಂದ್ರಶೇಖರ ನಂಗಲಿ
ಕೊಳಗದ ತೋರಿಹ ಕೆಚ್ಚಲು ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು! ತಾಳಮರದುದ್ದವೆರಡು ಕೋಡು ನೋಡಾ! ಅದನರಸ ಹೋಗಿ ಆರುದಿನ! ಅದು ಕೆಟ್ಟು ಮೂರು ದಿನ! ಅಘಟಿತಘಟಿತ ಗುಹೇಶ್ವರ!...
ನೂರನೋದಿ ನೂರಕೇಳಿ…
Share:
Articles

ನೂರನೋದಿ ನೂರಕೇಳಿ…

April 29, 2018 ಕೆ.ಆರ್ ಮಂಗಳಾ
“ನ್ಯೂ ಇಯರ್, ನ್ಯೂ ಮಿ”- ಹೊಸ ವರುಷದ ಉತ್ಸಾಹದಲ್ಲಿ ಬಹುತೇಕ ನಾವೆಲ್ಲರು ಮಾಡಿಕೊಳ್ಳುವ ಒಂದು ಸಾರ್ವಕಾಲಿಕ ಸಂಕಲ್ಪ. ಹಾಗೆ ಬದಲಾಗುವೆನೆಂಬ ಸ್ವಪ್ರತಿಜ್ಞೆ ಮಾತ್ರ ಮೊದಲ...

Comments 9

  1. Somesh Dalavayi
    Feb 22, 2026 Reply

    ಕರ್ನಟಕದ ಸೂಫಿ ಅಲ್ಲೀ ಸಾಹೇಬರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು🙏

  2. ಎಂ.ಎಸ್. ಬಾಲರಾಜ್
    Feb 22, 2026 Reply

    ಸಾಯದ ಮುನ್ನ ಸತ್ತ ಹಾಗೆ ಇರುವುದೆಂದರೆ ಹೇಗೆ? ಜೀವಂತಿಕೆ ಇಲ್ಲದ ಬದುಕನ್ನು ಶರಣರು ಹೇಳಿಯೇ ಇಲ್ಲಾ… ಒಂದಷ್ಟು ವಿವರಣೆ ಬೇಕಿತ್ತು. ಸೂಫಿಗಳ ಅದ್ವೆತದ ಪರಿ ತಿಳಿದು ಆಶ್ಚರ್ಯವಾಯಿತು🙏

  3. ಸಿದ್ಧಾರ್ಥ ಮಿಣಜಗಿ
    Feb 24, 2026 Reply

    ‘ಸೂಫಿ ಎಂದರೆ, ಇಸ್ಲಾಂ ಆಗಲೀ ಅಥವಾ ಯಾವುದೇ ಧರ್ಮವಾಗಲೀ ಅಲ್ಲಾ, ಅದೊಂದು ಮೀರಾಸ!’ ಸೂಫಿಗಳ ಕುರಿತಾದ ಇಂತಹ ಸ್ಪಷ್ಟ ವಿವರಣೆ ನನಗೆ ಇದೇ ಮೊದಲ ಸಲ ಸಿಕ್ಕಿದ್ದು. ಮೀರಾಸ ಅಂದರೆ ಪರಂಪರಾಗತವಾಗಿ ಬಂದ ವಿವೇಕ, ಅರ್ಥವಿಲ್ಲದ ಆಚರಣೆಯಲ್ಲಾ.

  4. ಸೋಮೇಶ್ವರ ನಿಪ್ಪಾಣಿ
    Feb 25, 2026 Reply

    ಭೋಗಲಾಲಸೆಯನ್ನೇ ಜೀವನದ ಗುರಿಯೆಂದು ನಾಗಾಲೋಟದಲ್ಲಿ ಓಡುತ್ತಿರುವ ಆಧುನಿಕ ಜಗತ್ತಿಗೆ ಸಂತರ, ಸೂಫಿಗಳ ಮಾತುಗಳು ಅರ್ಥವಾಗುತ್ತವೆ ಎನ್ನುವುದೇ ಅನುಮಾನ. ಸುಖದ ಸೆಳೆತಗಳನ್ನು ಅಪಾಯವೆಂದು ಸೂಚಿಸುವ ನಿಮ್ಮ ಮಾತುಗಳ ಮತಿತಾರ್ಥ ಗೊತ್ತಾಯಿತು. ಶರಣು🙏

  5. ಕರಿಬಸವ ಗು. ಹಾವೇರಿ
    Mar 1, 2026 Reply

    ಅಲ್ಲೀ ಸಾಹೇಬರ ಹೆಸರನ್ನು ಇದೇ ಮೊದಲು ಕೇಳಿದ್ದು. ಅವರ ಪದಗಳು ಸ್ವರ ವಚನಗಳನ್ನು ಓದಿದ ಹಾಗೆ ಭಾಸವಾಗುತ್ತವೆ. ಸೂಫಿ ಸಂತನಿಗೆ ನಮೋನಮಃ

  6. ಪ್ರಭುದೇವ ಮಹಗಾಂವ್
    Mar 1, 2026 Reply

    ಲೇಖನ ಬಹಳ ಚೆನ್ನಾಗಿದೆ. ಪದ್ಮಾಲಯ ನಾಗರಾಜ್ ಶರಣರು ವ್ಯಕ್ತಿ ಪರಿಚಯ ಮಾಡಿಕೊಡುವ ರೀತಿ unique ಆಗಿರುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರಾದ ವೀರದಾಸಮ್ಮ, ರಾಮಾವಧೂತರು ಮತ್ತೀಗ ಅಲ್ಲೀ ಸಾಹೇಬರು ಇವರೆಲ್ಲರ ಬದುಕುಗಳು ಭೂಮಿಯ ಮೇಲಣ ಪವಾಡದಂತೆ ಕಾಣುತ್ತವೆ.

  7. ನಾಗೇಶ್ ಚಿಂಚೋಳಿ
    Mar 3, 2026 Reply

    ‘ಅನುಭಾವದ ಅಭಿವ್ಯಕ್ತಿ’. ಅಂದರೆ “ಸಾಧಕನು ಹಿಂದೆ ಆಗಿಹೋದ ಸಂತರ ನುಡಿಗಳಲ್ಲಿಯೇ ತನ್ನ ಅನುಭಾವವನ್ನು ಹೇಳುವುದಾದರೆ ಅದು ಹಿಂದೆ ಆಗಿಹೋದ ಸಂತರ ಉಚ್ಚಿಷ್ಠದಂತಾಗಿ ಬಿಡುತ್ತದೆ. ನಿರಾವಲಂಬಿಯಾದ ಅದನ್ನು ಯಾವುದರ ಹಂಗಿಲ್ಲದೇ ಸ್ವತಂತ್ರವಾಗಿ ನಿತ್ಯನೂತನ ನಿರಂತರವಾಗಿ ತಾನು ಅನುಸಂಧಾನ ಮಾಡಿದ್ದನ್ನು ಪರಿಪೂರ್ಣ ಸಾಧಕನು ಮಾತ್ರ ನುಡಿಯಬಲ್ಲವನಾಗುತ್ತಾನೆ.” ಶರಣರ ಅನುಭಾವದ ಭಿನ್ನ ಭಿನ್ನ ಅಭಿವ್ಯಕ್ತಿಗಳಿಗೆ ಸಕಾರಣ ಸಿಕ್ಕಿತು.

  8. ಮುನಿರಾಜು ಎಂ
    Mar 7, 2026 Reply

    ಆಂಧ್ರ ಹಾಗೂ ಕರ್ನಾಟಕಗಳಲ್ಲಿರುವ ಗುಡಿಕಲ್ಲು ಸೂಫಿಗಳು ಕೋಮುಗಲಭೆಯಿಂದ ದಿನದಿನಕ್ಕೆ ದೂರಾಗುತ್ತಿರುವ ಜನರನ್ನು ಬೆಸೆಯುವ ಸಂಕೇತವಾಗಿ ನಮ್ಮನ್ನು ಕಾಪಾಡಲಿ. ಅಲ್ಲೀ ಸಾಹೇಬರು ಅಂತಹ ದೀಪವನ್ನು ಕತ್ತಲು ತುಂಬಿದ ಮನಸ್ಸುಗಳಲ್ಲಿ ಬೆಳಗಲಿ.

  9. ಜಯಪ್ರಕಾಶ್ ಬಳ್ಳಾರಿ
    Mar 8, 2026 Reply

    ಇಸ್ಲಾಂ ಧರ್ಮದ ಆಚರಣೆಗಳಿಂದ ಹೊರಬಂದ ಅನುಭಾವಿಗಳು ಈ ಸೂಫಿಗಳು. ಇವರು ಹಿಂದುಳಿದ ದಲಿತ ಸಮುದಾಯದವರನ್ನು ಆತುಕೊಂಡವರು ಎಂದು ಉಲ್ಲೇಖಿಸಿದ್ದೀರಿ. ಆ ಸಮುದಾಯದವರೂ ಇವರೊಂದಿಗೆ ಸೇರಿಕೊಂಡು ಸೂಫಿಗಳಾಗಿದ್ದಾರೆಯೇ ಎನ್ನುವುದು ತಿಳಿಯದು.

Leave a Reply to ಜಯಪ್ರಕಾಶ್ ಬಳ್ಳಾರಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಅಂದು-ಇಂದು
ಅಂದು-ಇಂದು
December 8, 2021
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಗುರುವಂದನೆ
ಗುರುವಂದನೆ
October 13, 2022
Copyright © 2026 Bayalu