Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನುಭವ ಮಂಟಪ
Share:
Articles April 11, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಅನುಭವ ಮಂಟಪ

ನಾರಾಯಣ ತನ್ನ ಲೋಕದಲ್ಲಿ ಮಾಡಿದ ಮಂಟಪದಂತಲ್ಲ,
ಇಂದ್ರ ನಿಜವನದಲ್ಲಿ ಮಾಡಿದ ಮಂಟಪದಂತಲ್ಲ,
ವೀರಭದ್ರ ಭೀಮಾದ್ರಿಯಲ್ಲಿ ರಚಿಸಿದ ಪೂಜಾಮಂಟಪದಂತಲ್ಲ.
ಇಲ್ಲಿರ್ಪ ಮಂಟಪದ ಉದಯವ ನೋಡಿದಡೆ
ಇದರ ವಿಸ್ತಾರ ಅರಿದಯ್ಯಾ ಕೂಡಲಚೆನ್ನಸಂಗಮದೇವಾ.

ಹಲವರು ಹೇಳುವಂತೆ 12ನೆಯ ಶತಮಾನದ ಬಸವಕಲ್ಯಾಣ ಒಂದು ‘ಬೆಡಗು’ ಮತ್ತು ‘ಬೆರಗು’. ಬಸವಾದಿ ಶಿವಶರಣರ ಇತಿಹಾಸ ಮತ್ತು ಅವರ ವಚನ ಸಾಹಿತ್ಯದ ನೈಜ ಪರಿಕಲ್ಪನೆ ಇಲ್ಲದಿದ್ದಾಗ ಬುದ್ಧಿವಂತರಿಗೆ ಏನೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಬಸವಣ್ಣ ಎನ್ನುವ ವ್ಯಕ್ತಿರೂಪದ ಶಕ್ತಿ ಇದ್ದದ್ದು ನಿಜವೇ? ಅವರು ‘ಅನುಭವ ಮಂಟಪ’, ‘ಮಹಾಮನೆ’ಯನ್ನು ಸ್ಥಾಪಿಸಿದ್ದರೇ? ಹೌದಾದರೆ ಅವು ಯಾವ ಸ್ಥಳದಲ್ಲಿದ್ದವು? ಅದಕ್ಕೆ ಆಧಾರ ಏನು ಎಂದು ಕೇಳುವ ಬುದ್ಧಿವಂತರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಬುದ್ಧಿ ಬೇರೆ, ವಿವೇಕ ಬೇರೆ. ಬುದ್ಧಿ ನರಿಬುದ್ಧಿಯೂ ಆಗಬಹುದು, ಸುಬುದ್ಧಿಯೂ ಆಗಬಹುದು.
ಬುದ್ಧಿ ಸುಬುದ್ಧಿಯಾಗುವುದಕ್ಕಿಂತ ನರಿಬುದ್ಧಿಯಾಗುವುದೇ ಹೆಚ್ಚು. ಛಿದ್ರಾನ್ವೇಷಣೆಯೇ ಬುದ್ಧಿಯ ಸ್ವಭಾವ. ವಿವೇಕ ಹಾಗಲ್ಲ; ಅದು ಸತ್ಯಶೋಧನೆಗೆ ಮುಂದಾಗುವುದು. ‘ಕತ್ತಲ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕನ್ನು ಹಿಡಿದು ತಂದ’ ಎಂದರೆ ಬುದ್ಧಿ ಒಪ್ಪಬಹುದು. ವಿವೇಕ ಒಪ್ಪುವುದಿಲ್ಲ. ವಿವೇಕ ವಿವಾದಕ್ಕೆ ಮುಂದಾಗದೆ ಸಂವಾದಕ್ಕೆ ಅವಕಾಶ ಕಲ್ಪಿಸುವುದು. ಕತ್ತಲ ಕೋಣೆ, ಕರಿಯ ಬೆಕ್ಕು, ಅದು ಅಲ್ಲಿ ಇಲ್ಲವೇ ಇಲ್ಲ; ಇಂತಾದಾಗ ಅದನ್ನು ಹಿಡಿದು ತರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ವಿವೇಕದ್ದು. ಬಸವಾದಿ ಶಿವಶರಣರು ವಿವೇಕಿಗಳಾಗಿದ್ದರೇ ಹೊರತು ಕೇವಲ ಬುದ್ಧಿವಂತರಾಗಿರಲಿಲ್ಲ. ಅವರು ವಿವೇಕದ ಮೂಲಕ ತಮ್ಮ ‘ಅನುಭವ’ವನ್ನು `ಅನುಭಾವ’ವನ್ನಾಗಿ ಮಾರ್ಪಡಿಸಿಕೊಂಡದ್ದು ವಚನ ಸಾಹಿತ್ಯದಿಂದಲೇ ವೇದ್ಯವಾಗುತ್ತದೆ.

ಅನುಭವ ಲೌಕಿಕವಾಗಿ ಮತ್ತು ಪಾರಮಾರ್ಥಿಕವಾಗಿಯೂ ಬೇಕು. ಎರಡೂ ಇದ್ದಾಗಲೇ ಅದು ‘ಅನುಭಾವ’ ಎನಿಸಿಕೊಳ್ಳುವುದು. ಈ ಅರ್ಥದಲ್ಲಿ ಶರಣರು ತಮ್ಮ ಅನುಭವ ಹಂಚಿಕೊಳ್ಳುವ ತಾಣಕ್ಕೆ ‘ಅನುಭಾವ ಮಂಟಪ’ ಎನ್ನದೆ ‘ಮಹಾಮನೆ’ ಅಥವಾ ‘ಅನುಭವ ಮಂಟಪ’ ಎಂದದ್ದು ವಚನಗಳಿಂದ ತಿಳಿದುಬರುತ್ತದೆ. ಅನುಭವ ಹಂಚಿಕೊಳ್ಳಲಿಕ್ಕೆ ಒಂದು ಮಂಟಪ ಅಥವಾ ಕಟ್ಟಡ ಇರಲೇಬೇಕು ಎಂದೇನಿಲ್ಲ. ಬಯಲಿನಲ್ಲಿ ಅಥವಾ ಒಂದು ಮರದಡಿಯಲ್ಲಿ ಹತ್ತಾರು ಜನರು ಕೂತು ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಸಂವಾದ ಮಾಡಬಹುದು. ಹಾಗೆ ಸಂವಾದ ಮಾಡಿದ ತಾಣವೇ ‘ಮಹಾಮನೆ’. ಅದೇ ಮುಂದೆ ‘ಅನುಭವ ಮಂಟಪ’ ಎಂದಾಗಿದೆ.

ನಾವು ಸಿರಿಗೆರೆಯಲ್ಲಿ ‘ಬಿಎ’ ಓದುತ್ತಿದ್ದಾಗ ‘ಕನ್ನಡ’ ಮತ್ತು ‘ತತ್ವಶಾಸ್ತ್ರ’ವನ್ನು ಪ್ರಧಾನ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ವಿ. ನಮಗೆ ತತ್ವಶಾಸ್ತ್ರದ ಬೋಧನೆ ಮಾಡುತ್ತಿದ್ದವರಲ್ಲಿ ಶ್ರೀ ಟಿ ಎಸ್ ಪಾಟೀಲರೂ ಒಬ್ಬರು. ಅವರು ಬಸವಾದಿ ಶಿವಶರಣರ ವಚನಗಳಿಂದ ತುಂಬಾ ಪ್ರಭಾವಿತರಾಗಿದ್ದು ಅವರ ನಡೆ-ನುಡಿ, ಆಚಾರ-ವಿಚಾರಗಳಿಂದ ತಿಳಿದುಬರುತ್ತಿತ್ತು. “12ನೆಯ ಶತಮಾನದಲ್ಲಿ `ಅನುಭವ ಮಂಟಪ’ ಎನ್ನುವ ಸಂಸ್ಥೆ ಇತ್ತೇ? ಇದ್ದರೆ ಇಂದು ಅದರ ಕುರುಹುಗಳಿವೆಯೇ? ಅದು ಎಲ್ಲಿತ್ತು?’’ ಎಂದೆಲ್ಲ ಪ್ರಶ್ನೆ ಮಾಡಿದ್ವಿ. ಅದಕ್ಕೆ ತಕ್ಷಣ ಪಾಟೀಲರು ಹೇಳಿದ್ದು: ನೀಲಮ್ಮನವರ ಒಂದು ಸುದೀರ್ಘ ವಚನದ ಕೆಲವು ಸಾಲುಗಳನ್ನು. ಈಗಲೂ ಆ ಸಾಲುಗಳು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಕರ್ನಾಟಕ ಸರ್ಕಾರ ‘ಕನ್ನಡ ಪುಸ್ತಕ ಪ್ರಾಧಿಕಾರ’ದಿಂದ ಪ್ರಕಟಿಸಿರುವ `ಸಮಗ್ರ ವಚನ ಸಂಪುಟ-5’ರಲ್ಲಿ ನೀಲಮ್ಮನ ಆ ವಚನ (44) ಇದೆ.

ಆದಿಯಾಧಾರವಿಲ್ಲದಂದು… ಪ್ರಣವದ
ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು, ಪರಮಪ್ರಸಾದವನೊಂದು
ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ
ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ
ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು…

ಇಲ್ಲಿ ನೀಲಮ್ಮನವರು ‘ಅನುಭವಮಂಟಪ’ ಎಂದೇ ಸ್ಪಷ್ಟವಾಗಿ ದಾಖಲಿಸಿದ್ದನ್ನು ಪಾಟೀಲರು ನಮ್ಮ ಗಮನಕ್ಕೆ ತಂದಿದ್ದರು. ಮುಂದುವರಿದು ಕಲ್ಯಾಣ ಕ್ರಾಂತಿಯನಂತರ ಕಲ್ಯಾಣದ ಸ್ಥಿತಿ ಹೇಗಾಯ್ತು ಎನ್ನುವುದನ್ನು ನಾಗಲಾಂಬಿಕೆಯ ವಚನದ ಮೂಲಕ ಪಾಟೀಲರು ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳುತ್ತೇವೆ. ಶಿವಶರಣೆಯರ ವಚನ ಸಂಪುಟ 5ರಲ್ಲಿ ನಾಗಲಾಂಬಿಕೆಯ ವಚನ (9) ಇದೆ.

ಬಸವಣ್ಣ ನೀವು ಮತ್ರ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ!
ಅಯ್ಯಾ, ಸ್ವರ್ಗ ಮತ್ರ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರುತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ!

ಈ ವಚನವನ್ನು ಕೇಳುತ್ತಿದ್ದರೆ ಅಥವಾ ಓದುತ್ತಿದ್ದರೆ ‘ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ’ ಎನ್ನುವಲ್ಲಿ ಅದೆಂತಹ ನೋವು, ಯಾತನೆಯನ್ನು ಆ ತಾಯಿ ಅನುಭವಿಸಿರಬಹುದು ಎಂದು ಕಲ್ಪಿಸಿಕೊಳ್ಳಬಹುದು. ಈ ಲೇಖನದ ಆರಂಭದಲ್ಲೇ ಹೇಳಿರುವ ಚನ್ನಬಸವಣ್ಣನವರ ವಚನದಲ್ಲಿ ‘ಇಲ್ಲಿರ್ದ ಮಂಟಪದ ಉದಯವ ನೋಡಿದಡೆ ಇದರ ವಿಸ್ತಾರ ಅರಿದಯ್ಯಾ’ ಎಂದಿದ್ದಾರೆ. ‘ಮಂಟಪ’ ಎಂದರೆ ‘ಅನುಭವ ಮಂಟಪ’ ಎಂದೇ ಅರ್ಥ. ಅದರ ವಿಸ್ತಾರವನ್ನು ಅರಿಯಲಾಗದು ಎನ್ನುತ್ತಾರೆ. ಅಂದರೆ ಶರಣರು ಎಲ್ಲೆಲ್ಲಿ ಕೂತು ಸದ್ವಿಚಾರಗಳ ಸಂವಾದ ಮಾಡುತ್ತಿದ್ದರೋ ಅದನ್ನು ‘ಮಂಟಪ’ ಎಂದೇ ಕರೆಯಬಹುದು. ‘ಮಂಟಪ’ ಎನ್ನುವ ಶಬ್ದ ಬಹುತೇಕ ಶರಣರ ವಚನಗಳಲ್ಲಿ ಕಂಡುಬರುತ್ತದೆ. ಅದರಂತೆ ‘ಮಹಾಮನೆ’ ಎನ್ನುವ ಶಬ್ದ `ಸಮಗ್ರ ವಚನ ಸಂಪುಟ’ಗಳಲ್ಲಿ 37 ಕಡೆಗಳಲ್ಲಿ 16 ವಚನಕಾರರ 34 ವಚನಗಳಲ್ಲಿ ಕಂಡುಬರುತ್ತದೆ. ಬಸವಣ್ಣನವರೇ ‘ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ’ ಎನ್ನುವರು. ಅಂದರೆ ಬಸವಣ್ಣನವರ ವಾಸದ ಮನೆ ‘ಮಹಾಮನೆ’ ಎಂದಲ್ಲ. ಅವರು ಗೋಷ್ಠಿ ನಡೆಸುತ್ತಿದ್ದ ಸ್ಥಳವೇ ಮಹಾಮನೆ. ಅದನ್ನೇ ಮುಂದೆ ಅನುಭವ ಮಂಟಪ ಎಂತಲೂ ಕರೆದಿದ್ದಾರೆ. ಪ್ರಭುದೇವರು ‘ಮತ್ರ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ’ ಎನ್ನುವ ವಚನದಲ್ಲಿ ಬಸವಣ್ಣನವರ ಸಾಧನೆಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಶಿವಯೋಗಿ ಸಿದ್ಧರಾಮೇಶ್ವರರು ‘ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು’ ಎಂದಿದ್ದಾರೆ. ಹೀಗೆ ಮಹಾಮನೆಯೇ ಅನುಭವ ಮಂಟಪ ಆಗಿತ್ತು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ವಚನಗಳಲ್ಲೇ ದೊರೆಯುತ್ತವೆ.

ಕೆಲವೆಡೆ ‘ಮಹಾಮನೆಯ ಮಂಟಪ’ ಎಂತಲೂ ಕರೆದಿದ್ದಾರೆ. ಬಸವಣ್ಣನವರೇ ‘ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ. ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆ’ ಎಂದಿದ್ದಾರೆ. ‘ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು. ಸಂಗನಬಸವಣ್ಣನ ಕರುಣದ ಶಿಶುವೆಂಬುದ ಮೂರು ಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು’ ಎಂದು ಚೆನ್ನಬಸವಣ್ಣನವರು ದಾಖಲಿಸಿದ್ದಾರೆ. ಅಲ್ಲಮಪ್ರಭುದೇವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದರೂ ‘ಗುಹೇಶ್ವರನ ಸಾಕ್ಷಿಯಾಗಿ ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ’ ಎನ್ನುವ ವಿನಯ ತೋರಿದ್ದಾರೆ. ಸಿದ್ಧರಾಮೇಶ್ವರರು ತಮ್ಮ ಮತ್ತೊಂದು ವಚನದಲ್ಲಿ-

ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ
ಕಟ್ಟಿದಡೆ ಮತ್ರ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು.
ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು
ನಿಜಲಿಂಗ ಫಲವ ಪಡೆದರು. ಆ ಗೃಹವ
ನೋಡಬೇಕೆಂದು ನಾನು ಹಲವು ಕಾಲ ತಪಸಿದ್ದೆನು.
ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಸಂಗನಬಸವಣ್ಣನ
ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು.

-ಎಂದು ಬಸವಣ್ಣ ಕಟ್ಟಿದ ಮಹಾಮನೆ ಅರ್ಥಾತ್ ಅನುಭವ ಮಂಟಪ ಕಲ್ಯಾಣದಲ್ಲಿತ್ತೆಂದು ಸ್ಪಷ್ಟಪಡಿಸಿದ್ದಾರೆ.

ಕಲ್ಯಾಣದಲ್ಲಿ ಮಹಾಮನೆ ಇಲ್ಲದಿದ್ದರೆ ದೇಶ ವಿದೇಶಗಳ ಸಾಧಕರು ಕಲ್ಯಾಣಕ್ಕೆ ಬರಲು ಹೇಗೆ ಸಾಧ್ಯ? ಮಹಾರಾಷ್ಟ್ರದಿಂದ ಉರಿಲಿಂಗದೇವ, ಉರಿಲಿಂಗಪೆದ್ದಿ, ಕಾಳವ್ವೆ, ಅಮುಗಿದೇವ ಮತ್ತು ಶಿವಯೋಗಿ ಸಿದ್ಧರಾಮ ಬಂದಿದ್ದಾರೆ. ತೆಲಗು ಸೀಮೆಯಿಂದ ಮೈದುನ ರಾಮಯ್ಯ, ಕದಿರೆಯ ರೆಮ್ಮವ್ವೆ, ಬಹುರೂಪಿ ಚೌಡಯ್ಯ, ಸಕಳೇಶ ಮಾದರಸ ಮುಂತಾದವರು ಬಂದಿದ್ದಾರೆ. ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಪಿಟ್ಟವ್ವೆ, ಮೆರೆಮಿಂಡದೇವ ಬಂದಿದ್ದಾರೆ. ಮಲೆಯಾಳ ಪ್ರಾಂತದಿಂದ ಗೊಗ್ಗವ್ವೆ ಬಂದಿದ್ದಾರೆ. ಬನಾರಸದಿಂದ ಶಿವಲೆಂಕ ಮಂಚಣ್ಣ, ಗುಜರಾತಿನಿಂದ ಆದಯ್ಯ, ಸೊಡ್ಡಳ ಬಾಚರಸ, ಕಾಶ್ಮೀರದಿಂದ ಮೋಳಿಗೆಯ ಮಾರಯ್ಯ-ಮಹಾದೇವಿ ದಂಪತಿಗಳು, ಬೊಂತಾದೇವಿ, ನಿಜಲಿಂಗ ಚಿಕ್ಕಯ್ಯ, ಅಪಘಾನಿಸ್ಥಾನದಿಂದ ಮರುಳಶಂಕರ ದೇವ ಬಂದಿದ್ದು ಗಮನಾರ್ಹ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಅಸಂಖ್ಯಾತ ಶರಣ ಶರಣೆಯರು ಕಲ್ಯಾಣಕ್ಕೆ ಬಂದಿದ್ದರು. ಅವರೆಲ್ಲರೂ ಕಲ್ಯಾಣಕ್ಕೆ ಬಂದದ್ದು ವ್ಯಾಪಾರ ಮಾಡಲು, ಉದ್ಯೋಗ ಪಡೆಯಲು, ರಾಜಕೀಯ ಮಾಡಲು ಅಲ್ಲ. ಅವರೆಲ್ಲರೂ ಬಸವಣ್ಣನವರ ಮಹಾಮನೆ ಅರ್ಥಾತ್ ಅನುಭವ ಮಂಟಪದ ಆದರ್ಶಗಳಿಗೆ ಮನಸೋತು ಬಂದವರು. ತಮ್ಮ ಆತ್ಮಸಾಕ್ಷಾತ್ಕಾರದ ದಾರಿಯನ್ನು ಕಂಡುಕೊಂಡವರು. ಕಾಯಕ ದೀಕ್ಷೆ ಸ್ವೀಕರಿಸಿದವರು. ಸಮಾನತೆಯ ತತ್ವವನ್ನು ಎತ್ತಿಹಿಡಿದವರು. ಕಲ್ಯಾಣದಲ್ಲಿ ಅನುಭವ ಮಂಟಪ ಇಲ್ಲದಿದ್ದರೆ ಬೇರೆ ಬೇರೆ ಪ್ರದೇಶಗಳಿಂದ ಧರ್ಮಾಸಕ್ತರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬರಲು ಖಂಡಿತ ಸಾಧ್ಯವಿರಲಿಲ್ಲ.

ಕಲ್ಯಾಣದಲ್ಲಿ ‘ಅನುಭವ ಮಂಟಪ’ ಇರಲೇ ಇಲ್ಲ ಎಂದು ಹೇಳುತ್ತ ಬಂದಿರುವವರು ಹಲವು ಬುದ್ಧಿವಂತರು. ಈಗ ಅವರ ಗುಂಪಿಗೆ ಹೊಸದಾಗಿ ವೀಣಾ ಬನ್ನಂಜೆಯವರೂ ಸೇರಿದ್ದಾರೆ. ಅವರು 8-3-2025ರಂದು ‘ಅನುಭವ ಮಂಟಪ’ ಕುರಿತು ಉಪನ್ಯಾಸ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲಿದೆ. ಅವರ ಅಭಿಪ್ರಾಯಗಳಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಮುಖ್ಯಸ್ಥ ಡಾ. ಎಸ್ ಎಂ ಜಾಮದಾರ್ ಅವರು ತುಂಬಾ ಸಂಯಮದಿಂದಲೇ ಆಧಾರ ಸಮೇತ ‘ವಚನ ಟಿವಿ’ಯ ಸಂದರ್ಶನದಲ್ಲಿ ಖಚಿತ ಉತ್ತರ ನೀಡಿದ್ದಾರೆ. ವೀಣಾ ಅವರು ಏನು ಮಾತನಾಡಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಜಾಮದಾರ್ ಅವರ ವಿಡಿಯೋ ಕೇಳಿದನಂತರ ವೀಣಾ ಅವರ ವಿಡಿಯೊ ತರಿಸಿಕೊಂಡು ಕೇಳಿದ್ವಿ. ಅವರು ‘ವಚನಗಳಲ್ಲಿ ಎಲ್ಲಿಯೂ ಅನುಭವ ಮಂಟಪ ಇತ್ತು… ಎಂದು ಸಿಗುವುದಿಲ್ಲ’ ಎಂದಿದ್ದಾರೆ. ಅಷ್ಟಕ್ಕೇ ತೃಪ್ತರಾಗದೆ ‘ಇವತ್ತಿನ ಸಂಸತ್ತು ಎನ್ನುವ ಭಾರತೀಯ ಸಂಸತ್ತಿನ ಪರಂಪರೆ ಬಂದದ್ದೇ ವಚನ ಚಳವಳಿಯ ಆ ಅನುಭವ ಮಂಟಪದ ಪರಿಕಲ್ಪನೆಯಿಂದ. ಅದು ಹೌದು ಎನ್ನುವ ಒಂದು ಅಚ್ಚನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳು ಈಗಿನ ಸಂಸತ್ ಭವನದಲ್ಲ್ಲೂ ಗುರುತಿಸಿ ಛಾಪಿಸಿದ್ದಾರೆ’ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ‘ಸ್ವಲ್ಪ ಕಷ್ಟವಾದರೂ ನನ್ನ ಮಾತು ಇಷ್ಟವಾಗದಿದ್ದರೂ ಸತ್ಯವನ್ನು ಸತ್ಯವಾಗಿ ಹೇಳಬೇಕು ಎನ್ನುವ ಮನೋಧರ್ಮ ನನ್ನದಾದ್ದರಿಂದ ಅದು ಕೇವಲ ವಚನ ಕಾಲದಲ್ಲಿ ನಡೆಯಿತು ಎನ್ನುವ ಮಾತಿಗೆ ಯಾವುದೇ ವಚನಗಳ ಆಧಾರ ಸಿಗುವುದಿಲ್ಲ’ ಎಂದೆಲ್ಲ ಕಲ್ಪನಾ ಕುದುರೆಯನ್ನು ಓಡಿಸಿದ್ದಾರೆ. ಅವರ ಕಲ್ಪನೆ ಎಷ್ಟೊಂದು ಮತ್ಸರ ಮನೋಭಾವದಿಂದ ಕೂಡಿದೆ ಎನ್ನುವುದು ನಮ್ಮ ಈ ಲೇಖನವನ್ನು ಆರಂಭದಿಂದ ಓದಿದರೆ ಅರ್ಥವಾಗುವುದು. ಹರಿಹರನ ರಗಳೆ, ಬಸವಪುರಾಣ ಇತ್ಯಾದಿ ಕೃತಿಗಳಲ್ಲೂ ಅನುಭವ ಮಂಟಪದ ಪ್ರಸ್ತಾಪವಿಲ್ಲ ಎಂದು ಅವುಗಳ ಸಮಗ್ರ ಅಧ್ಯಯನ ಮಾಡದೆ ತಮಗೆ ತೋಚಿದ್ದನ್ನು ವೀಣಾ ಅವರು ಮಾತನಾಡಿದ್ದಾರೆ. ‘ವಚನ ಟಿವಿ’ ಸಂದರ್ಶನದ ಜಾಮದಾರ ಅವರ ವಿಡಿಯೊ ಕೇಳಿದರೆ ಅಥವಾ ಶ್ರೀ ಉತ್ತಂಗಿ ಚೆನ್ನಪ್ಪನವರ ‘ಅನುಭವ ಮಂಟಪದ ಐತಿಹಾಸಿಕತೆ’ ಎನ್ನುವ ಕೃತಿಯನ್ನು ಓದಿದರೆ ತಮ್ಮ ಅಭಿಪ್ರಾಯ ಎಷ್ಟೊಂದು ಅಸಂಬದ್ಧ ಮತ್ತು ಬಾಲಿಷ ಎನ್ನುವುದು ವೀಣಾ ಅವರಿಗೇ ಅರ್ಥವಾಗಬಹುದು. ಹೀಗೆ ಅರ್ಥವಾಗಬೇಕೆಂದರೂ ತೆರೆದ ಮನಸ್ಸು, ಸತ್ಯವನ್ನು ಒಪ್ಪುವ ವಿವೇಕ ಬಹಳ ಮುಖ್ಯ. ವಾದಕ್ಕಾಗಿ ವಾದ ಮಾಡಿದರೆ ಸತ್ಯ ಗೋಚರವಾಗುವುದಿಲ್ಲ.

14 ರಿಂದ 16ನೆಯ ಶತಮಾನದ ಕಾಲಘಟ್ಟದಲ್ಲಿ… ಶಿವಗಣಪ್ರಸಾದಿ ಮಹಾದೇವಯ್ಯ ಅಥವಾ ಗೂಳೂರು ಸಿದ್ಧವೀರಣ್ಣೊಡೆಯರು ಮೊದಲಾದ ಶೂನ್ಯ ಸಂಪಾದನಾಕಾರರು… ಬಹಳ ಸುಂದರವಾಗಿ ಕಟ್ಟಿಕೊಟ್ಟ ಒಂದು ಪ್ರಪಂಚ ಅನುಭವ ಮಂಟಪ ಎಂದು ತಮ್ಮ ಬುದ್ಧಿಯ ಪ್ರಖರತೆಯನ್ನು ತೋರಿಸಿದ್ದಾರೆ. ಮುಂದುವರಿದು ‘ಹೀಗೆ ಹೇಳಿ ತಪರಾಕಿ ಹೊಡೆಸಿಕೊಂಡವರು ಬೇಕಾದಷ್ಟು ಜನ ಪೂರ್ವಜರು ಆಗಿಹೋಗಿದ್ದಾರೆ. ನಾನೇ ಇದನ್ನು ಹೇಳಿದ ಮೊದಲಿಗಳಲ್ಲ’ ಎಂದಿದ್ದಾರೆ. ಹೌದು ಇವರೇ ಮೊದಲಿಗರಲ್ಲ, ಇವರೇ ಕೊನೆಯವರೂ ಅಲ್ಲ. ಇಂಥ ಸನಾತನ ಪರಂಪರೆಯ ಸಂತಾನ ಮತ್ತೆ ಮತ್ತೆ ಹುಟ್ಟಿಬರುತ್ತದೆ ಎನ್ನುವ ಸತ್ಯ ನಮಗೂ ಗೊತ್ತು.

ಕಲಬುರ್ಗಿಯಲ್ಲಿ ವಕೀಲರಾಗಿದ್ದ ಶ್ರೀ ಕಪಟರಾಳ ಕೃಷ್ಣರಾಯರು 1944 ರಲ್ಲೇ ಅನುಭವ ಮಂಟಪ ಕೇವಲ ಒಂದು ಕಾಲ್ಪನಿಕ ಸಂಸ್ಥೆಯೆಂದು ಸಮರ್ಥಿಸಿ ಬರೆದ ಲೇಖನಕ್ಕೆ ಶ್ರೀ ಉತ್ತಂಗಿ ಚೆನ್ನಪ್ಪನವರು ದೀರ್ಘವಾದ ಉತ್ತರ ಕೊಟ್ಟನಂತರ ಅವರು ಮೌನಧರಿಸಿದ್ದರು. ಅವರ ಸನಾತನ ಸಂತಾನ ಮಾತ್ರ ಆಗಾಗ ಕಿತಾಪತಿ ಮಾಡುತ್ತಲೇ ಬಂದಿದೆ. ಆ ಸಂತಾನದ ಮುಂದುವರಿದ ಮೇಧಾವಿಗಳಲ್ಲಿ ಈಗ ವೀಣಾ ಸೇರ್ಪಡೆಯಾಗಿದ್ದಾರೆ. ಅದಕ್ಕಾಗಿ ಅವರು ಶ್ರೀಕೃಷ್ಣ, ಜನಕ ಮಹಾರಾಜ ಮತ್ತಿತರ ಪೌರಾಣಿಕ ವ್ಯಕ್ತಿಗಳನ್ನು ಎಳೆದು ತರುತ್ತಾರೆ. ಶರಣರು ಪೌರಾಣಿಕ ವ್ಯಕ್ತಿಗಳಲ್ಲ; ಇತಿಹಾಸ ಪುರಷರು. ಅವರು ವೇದ, ಶಾಸ್ತ್ರ, ಪುರಾಣ, ಆಗಮ ಇತ್ಯಾದಿಗಳ ಪ್ರಮಾಣವನ್ನು ಒಪ್ಪಿದವರಲ್ಲ. ಇದನ್ನು ವೀಣಾ ಅವರು ಅರ್ಥ ಮಾಡಿಕೊಳ್ಳಬೇಕಿದೆ. ‘ಶ್ರೀಕೃಷ್ಣ ಆ ಕಾಲಕ್ಕೂ ಈ ಕಾಲಕ್ಕೂ ಎಷ್ಟು ದೊಡ್ಡವನಿದ್ದ ಅಂದರೆ ಯಾರೂ ಪ್ರಶ್ನೆ ಮಾಡ್ಲಿಕ್ಕೆ ಆಗದು’ ಎನ್ನುವ ನಿರ್ಣಯ ನೀಡಿದ್ದಾರೆ. ಆದರೆ ಶ್ರೀಕೃಷ್ಣ ಐತಿಹಾಸಿಕ ವ್ಯಕ್ತಿಯೇ ಎಂದು ಅವರು ಚಿಂತನೆ ಮಾಡಲು ಸಾಧ್ಯವೇ? ಶರಣರದು ಸನಾತನ ಅಥವಾ ಪೂರ್ವ ಪರಂಪರೆ ಅಲ್ಲ. ಅವರದು ಪುರಾತನ ಪರಂಪರೆ. ಇದಕ್ಕೆ ವಚನಗಳೇ ಸಾಕ್ಷಿ ನುಡಿಯುತ್ತವೆ. ಇದನ್ನು ವೀಣಾ ಅವರು ಅರ್ಥ ಮಾಡಿಕೊಳ್ಳದಷ್ಟು ದಡ್ಡರೇನಲ್ಲ.

ವೀಣಾ ಅವರು ತಮ್ಮ ಮಾತುಗಳನ್ನು ಮುಂದುವರಿಸಿ ಪ್ಲೇಟೋನ ಅಕಾಡೆಮಿಯ ಉದಾಹರಣೆ ಕೊಡುತ್ತಾರೆ. ಪ್ಲೇಟೋ ಅವರ ಅಕಾಡಮಿಯಲ್ಲಿದ್ದವರು ತುಂಬಾ ಮೇಧಾವಿಗಳು, ವಿದ್ವತ್ತುಳ್ಳವರು. ಅಲ್ಲಿ ಜನಸಾಮಾನ್ಯರು ಇರಲಿಲ್ಲ. ಆದರೆ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ದನ ಕಾಯುವ, ಮೀನು ಹಿಡಿಯುವ, ಚಪ್ಪಲಿ ಹೊಲಿಯುವ, ಬಟ್ಟೆ ಮಡಿ ಮಾಡುವ, ಸೂಳೆಗಾರಿಕೆ ಮಾಡುತ್ತಿದ್ದ, ಬೀದಿಯ ಕಸ ಗುಡಿಸುತ್ತಿದ್ದ, ಕುರಿ ಕಾಯುತ್ತಿದ್ದ, ಮಡಕೆ ಮಾಡುತ್ತಿದ್ದ ಹಲವು ಕಾಯಕದ ಅತ್ಯಂತ ತಳಸಮುದಾಯದ ಅವಿದ್ಯಾವಂತ ಜನರು ಇದ್ದರು. ಅವರು ವಿದ್ಯೆ ಮತ್ತು ಸಾಮಾಜಿಕ ಸ್ಥಾನ-ಮಾನಗಳಿಂದ ವಂಚಿತರಾಗಿದ್ದವರು. ಅಂಥವರು ಸಹ ಅನುಭವ ಮಂಟಪದ ಸದಸ್ಯರಾಗಿ ತಮ್ಮ ಅನುಭವ ಮತ್ತು ಅನುಭಾವದ ಮೂಲಕ ಶರಣತ್ವ ಪಡೆದವರು. ಲಿಂಗಾಂಗ ಸಮರಸ ಸುಖ ಅನುಭವಿಸಿದವರು. ಸಮಾನತೆ ಎತ್ತಿಹಿಡಿದವರು. ಜಾತ್ಯತೀತ ಮನೋಭಾವ ಬೆಳೆಸಿಕೊಂಡವರು. ಹೆಣ್ಣು-ಗಂಡು ಎನ್ನುವ ತರತಮ ಭಾವನೆಯಿಂದ ಹೊರಬಂದು ಸಮಾನತೆ ಸಾಧಿಸಿದವರು. ಕಾಯಕವೇ ಕೈಲಾಸ ಎಂದು ನಂಬಿ ಕಾಯಕ ಮತ್ತು ದಾಸೋಹ ತತ್ವವನ್ನು ತಮ್ಮ ಬದುಕಿನಲ್ಲಿ ಜಾರಿಗೆ ತಂದವರು. ಏಕದೇವ ನಿಷ್ಠೆಯುಳ್ಳವರಾಗಿ ಇಷ್ಟಲಿಂಗ ಧರಿಸಿ ಅದನ್ನೇ ಪೂಜೆ ಮಾಡುತ್ತ ಬಂದವರು. ಹೀಗಿರುವಾಗ ಪ್ಲೇಟೋನ ಅಕಾಡಮಿಯನ್ನು ಅನುಭವ ಮಂಟಪಕ್ಕೆ ಹೋಲಿಸುವುದು ಖಂಡಿತ ಒಪ್ಪುವ ಮಾತಲ್ಲ. ವೀಣಾ ಅವರು ಮತ್ತೆ ಅಕ್ಬರನ ‘ದಿನ್ ಇಲಾಹಿ’ ಕೇಂದ್ರದ ಉಲ್ಲೇಖ ಮಾಡ್ತಾರೆ. ‘ಇಮಾಮ್‍ಸಾಬಿಗೂ ಗೋಕುಲಾಷ್ಠಮಿಗೂ ಎಲ್ಲಿಂದೆಲ್ಲಿಯ ಸಂಬಂಧ?’ ಅವರ ಮೂಲ ಉದ್ದೇಶ 12ನೆಯ ಶತಮಾನಕ್ಕಿಂತ ಮೊದಲೇ ಪೂರ್ವಪರಂಪರೆಯಲ್ಲಿ ಅನುಭವ ಮಂಟಪದ ವಿಚಾರಗಳು ಇದ್ದವು ಎಂದು ಸಾಬೀತು ಪಡಿಸುವ ಹುನ್ನಾರ. ಅನುಭವ ಮಂಟಪಕ್ಕೂ ಮತ್ತು ಇವರು ಹೇಳುವ ಪೂರ್ವಪರಂಪರೆಯ ವಿಚಾರಗಳಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.

‘ವಚನಕಾರರಲ್ಲಿ ಮಾತ್ರ ಅಕ್ಕನಂತಹ ಹೆಣ್ಣುಮಕ್ಕಳು ಪಾಲ್ಗೊಂಡಿದ್ದು, ನೀಲಾಂಬಿಕೆ, ಗಂಗಾಂಬಿಕೆ ಇದ್ದದ್ದು ಖಂಡಿತ ಅಲ್ಲ; ಗಾರ್ಗಿ, ಮೈತ್ರೇಯಿ ಕೂಡ ಇದೇ ಚರ್ಚೆಯಲ್ಲಿ ಪಾಲ್ಗೊಳ್ತಾರೆ’ ಎಂದೆಲ್ಲ ಪ್ರಸ್ತಾಪ ಮಾಡಿದ್ದಾರೆ. ವೀಣಾ ಅವರಿಗೆ ಗೊತ್ತಿರಬೇಕು; ಅನುಭವ ಮಂಟಪದಲ್ಲಿ ಪಾಲ್ಗೊಂಡ ಬಹುತೇಕ ಹೆಣ್ಣುಮಕ್ಕಳು ತಳಸಮುದಾಯದವರು ಮತ್ತು ಅಕ್ಷರ ಜ್ಞಾನದಿಂದ ವಂಚಿತರಾದವರು. ಒಂದು ಹೊತ್ತಿನ ತುತ್ತಿನ ಚೀಲ ತುಂಬಿಕೊಳ್ಳಲು ಸಹ ಸಾಕಷ್ಟು ಕಷ್ಟಪಡುತ್ತಿದ್ದವರು. ಕಾಳವ್ವೆ, ಸತ್ಯಕ್ಕ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕದಿರ ರೆಮ್ಮವ್ವೆ, ಕೊಟ್ಟಣದ ಸೋಮವ್ವೆ, ಗೊಗ್ಗವ್ವೆ, ಸೂಳೆ ಸಂಕವ್ವೆ, ಮುಕ್ತಾಯಕ್ಕ, ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಗಂಗಮ್ಮ, ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಇವರೆಲ್ಲ ಓದು ಬರಹ ಬಾರದ, ಸಮಾಜದಲ್ಲಿ ಸರ್ವರ ಉಪೇಕ್ಷೆಗೆ ಒಳಗಾದ ತಳಸಮುದಾಯದ ಮಹಿಳೆಯರು. ಅವರು ಅನುಭವ ಮಂಟಪದ ಸಹವಾಸದಿಂದ ವಚನಗಳನ್ನು ರಚನೆ ಮಾಡುವ ಮಟ್ಟಕ್ಕೆ ಬೆಳೆದದ್ದು ಸಾಮಾನ್ಯ ಸಂಗತಿಯಲ್ಲ. ಹಾಗಂತ ಅವರು ಓದು-ಬರಹ-ಚಿಂತನೆ-ಸಂವಾದವನ್ನೇ ತಮ್ಮ ಬದುಕಿನ ಬಂಡವಾಳ ಮಾಡಿಕೊಂಡವರಲ್ಲ. ನಿತ್ಯ ಕಾಯಕ ಮಾಡುವ ಶ್ರಮಜೀವಿಗಳು. ಇಂಥವರು ತಲೆ ಎತ್ತಿ ಬಾಳುವಂತಾದುದು ಅನುಭವ ಮಂಟಪ ಇದ್ದುದರಿಂದಲೇ ಎನ್ನುವುದು ನೂರಕ್ಕೆ ನೂರು ಸತ್ಯ. ಇಂಥವರಿಗೆ ಮೈತ್ರೇಯಿ, ಗಾರ್ಗೇಯಿ ಮುಂತಾದವರನ್ನು ಹೋಲಿಸಲಾಗದು. ವೀಣಾ ಹೇಳುವಂತೆ ‘ಋಷಿ ಪರಂಪರೆಯಲ್ಲಿ ಮಹಿಳೆಯರಿಗೆ ಅದ್ಭುತ ಸ್ವಾತಂತ್ರ್ಯವನ್ನು ಕೊಟ್ಟಿದ್ದರು’ ಎನ್ನುವುದಕ್ಕೆ ದಾಖಲೆ ಇರಬಹುದು. ಆದರೆ ಅಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನುವ ಸತ್ಯವನ್ನು ಯಾರೂ ಮರೆಯಬಾರದು. 12ನೆಯ ಶತಮಾನದಲ್ಲಿ ನೂರಾರು ಜನ ಮಹಿಳೆಯರು ಸ್ವಾತಂತ್ರ್ಯ ಪಡೆದಿದ್ದರು. ಅವರಲ್ಲಿ ಈಗ ಸಿಕ್ಕಿರುವ ದಾಖಲೆಯಂತೆ 35 ಜನ ಮಹಿಳೆಯರು ಅನುಭಾವಪೂರ್ಣವಾದ ವಚನಗಳನ್ನು ರಚಿಸಿರುವುದು ಗಮನಾರ್ಹ.

‘ದೊಡ್ಡದು ಒಂದುಕಡೆ ನಮ್ಮ ಪೂರ್ವಪರಂಪರೆಯಲ್ಲಿದ್ದರೆ ಬಾಗಿ ನಮಿಸುವುದರಿಂದ ಏನು ತಪ್ಪು? ನಾವು ಎಲ್ಲರೂ ನಿರ್ವಾತದಲ್ಲಿ ಹುಟ್ಟಿಲ್ಲ. ಎಲ್ಲ ದೊಡ್ಡದು ಕೂಡ ಬಹಳ ಪೂರ್ವ ಪರಂಪರೆಯ ಘನವಾದ ಸತ್ಯವನ್ನು ತೆಗೆದುಕೊಂಡೇ ಮತ್ತೆ ಮತ್ತೆ ದೊಡ್ಡದಾಗುತ್ತದೆ. ಅಂಥದೊಂದು ದೊಡ್ಡದಾದ ಅನುಭವ ಮಂಟಪ ಒಂದು ವೇಳೆ ಶೂನ್ಯ ಸಂಪಾದನೆಕಾರರು ಸೃಷ್ಟಿಸಿಕೊಟ್ಟದ್ದು ಮತ್ತು ಸೃಷ್ಟಿಸಿಕೊಡುವ ಹಿಂದೆ ಅವರಿಗೆ ಒಂದು ಒಳ್ಳೆಯ ಈ ಪೂರ್ವಪರಂಪರೆಯ ಕಲ್ಪನೆ ಇತ್ತು. ಆದ್ದರಿಂದ ಅವರು ಇಂಥದ್ದನ್ನು ಕಟ್ಟಿಕೊಟ್ಟರು ಎನ್ನುವುದಕ್ಕೆ ಬೇಕಾದಷ್ಟು ದಾಖಲೆಗಳನ್ನು ಕೊಡಬಹುದು’ ಎಂದು ತಮ್ಮ ವಾದವನ್ನೇ ಸಮರ್ಥಿಸುವ ವ್ಯರ್ಥಪ್ರಯತ್ನವನ್ನು ವೀಣಾ ಅವರು ಮಾಡುತ್ತಾರೆ. ಬಸವಾದಿ ಶರಣರು ಸಹ ಪುರಾತನ ಪರಂಪರೆಗೆ ಸಾಕಷ್ಟು ಗೌರವ ಕೊಟ್ಟಿದ್ದು ವಚನಗಳಿಂದಲೇ ತಿಳಿದುಬರುತ್ತದೆ. ಬಸವಣ್ಣನವರಂತೂ ಪುರಾತನ ಪರಂಪರೆಯ ಚೆನ್ನಯ್ಯ, ಕಕ್ಕಯ್ಯ ಮತ್ತಿತರ ಮಹಾನುಭಾವರಿಂದ ತಮ್ಮ ಭಕ್ತಿಯ ಪಾತ್ರೆಯನ್ನು ತುಂಬಿಸಿಕೊಂಡದ್ದನ್ನು ಗೌರವದಿಂದ ಸ್ಮರಿಸಿಕೊಂಡಿದ್ದಾರೆ. ‘ಆದ್ಯರ ವಚನ ಪರುಷ ಕಂಡಯ್ಯಾ’, ‘ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು’ ಎಂದು ತಮ್ಮ ಅನೇಕ ವಚನಗಳಲ್ಲಿ ಆದ್ಯರನ್ನು ನೆನಪಿಸಿಕೊಂಡಿದ್ದಾರೆ. ಆದರೆ ವೀಣಾ ಅವರು ಹೇಳುವಂತೆ ಅನುಭವ ಮಂಟಪದ ಕಲ್ಪನೆ ಪೂರ್ವ ಪರಂಪರೆಯಲ್ಲಿದ್ದದ್ದು ಖಂಡಿತ ಅಲ್ಲ. ಅದು ಬಸವಣ್ಣನವರ ಅದ್ಭುತ ಕೊಡುಗೆ. ಅದರಿಂದಾಗಿ ಅಲ್ಪ ಕಾಲದಲ್ಲೇ ಕಲ್ಯಾಣಕ್ಕೆ ನಾಡಿನ ಬೇರೆ ಬೇರೆ ಭಾಗಗಳಿಂದ ಅಸಂಖ್ಯಾತ ಧರ್ಮಾಸಕ್ತರು ಬರಲು ಸಾಧ್ಯವಾದದ್ದು. ವಚನಕಾರರು ‘ಅನುಭವ ಮಂಟಪ’ಕ್ಕೆ ಸದ್ಭಾವಕೂಟ, ಜ್ಞಾನಕೂಟ, ವಿಚಾರಮಂಟಪ, ಪ್ರಕಾಶ ಮಂಟಪ, ಚಚ್ಚಗೋಷ್ಠಿ, ಶರಣರ ಸದ್ಗೋಷ್ಠಿ, ಸಜ್ಜನ ಸದ್ಭಕ್ತರ ಸದ್ಗೋಷ್ಠಿ, ಮಹಾಮನೆ ಎಂದೆಲ್ಲ ಬಳಸಿದ್ದಾರೆ. ಹಾಗಾಗಿ ಅನುಭವ ಮಂಟಪ ಇತ್ತೆನ್ನುವುದು ನಿರ್ವಿವಾದ. ಇದು ವಚನಗಳ ಆಧಾರದಿಂದಲೇ ಸಾಬೀತಾಗುತ್ತದೆ. ಅದು ಎಲ್ಲಿತ್ತು, ಹೇಗಿತ್ತು ಎಂದು ಪರಿಶೀಲಿಸಬೇಕಾದರೆ ಕಲ್ಯಾಣದಲ್ಲಿ ಉತ್ಕನನ ಕಾರ್ಯ ನಡೆಯಬೇಕು. ಹಾಗಂತ ಅನುಭವಮಂಟಪ ಒಂದು ಕಟ್ಟಡವೇ ಆಗಿರಬೇಕಿಲ್ಲ ಎನ್ನುವುದನ್ನೂ ಮರೆಯಬಾರದು. ವೀಣಾ ಅವರು ಒಂದೆಡೆ ಅಲ್ಲಮಪ್ರಭು ಮತ್ತು ಶ್ರೀಕೃಷ್ಣನ ಹೋಲಿಕೆ ಮಾಡಿರುವುದು ತೀರಾ ಅಪ್ರಬುದ್ಧ ಮತ್ತು ಅಸಂಬದ್ಧ ಕಲ್ಪನೆ. ಐತಿಹಾಸಿಕ ಅಲ್ಲಮನೆತ್ತ? ಪೌರಾಣಿಕ ಶ್ರೀಕೃಷ್ಣನೆತ್ತ? ಅನುಭಾವಿ, ವಿರಕ್ತ ಅಲ್ಲಮನೆತ್ತ? ಸೀರೆಯನ್ನು ಕದ್ದು ತರುಣಿಯರನ್ನು ಗೋಳಾಡಿಸುವ ಶ್ರೀಕೃಷ್ಣನೆತ್ತ?

ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮವ ಕಂಡೆ.
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.

ಮೇಲ್ಕಂಡ ಅಕ್ಕನ ವಚನವನ್ನು ವೀಣಾ ಅವರಂಥವರು ಗಮನಿಸಬೇಕು. ವೀಣಾ ತಮ್ಮ ಅಭಿಪ್ರಾಯಗಳ ಸಮರ್ಥನೆಗಾಗಿ ಅಲ್ಲಮನ ಒಂದು ವಚನವನ್ನು ಹೇಳಿದ್ದಾರೆ. ಆ ವಚನದ ಆಶಯ ಅವರ ಮಾತುಗಳಿಗೆ ಹೇಗೆ ತದ್ವಿರುದ್ಧವಾಗಿದೆ ಎಂದು ಅವರೇ ಮತ್ತೊಮ್ಮೆ ಅವಲೋಕನ ಮಾಡಲಿ. ಅದಕ್ಕಾಗಿಯೇ ಆ ವಚನವನ್ನು ಮತ್ತೆ ಇಲ್ಲಿ ದಾಖಲಿಸ ಬಯಸಿದ್ದೇವೆ.

ಅಕ್ಷರ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
ಗುರು ಹಿರಿಯರು ತೋರಿದ ಉಪದೇಶದಿಂದ;
ವಾಗದ್ವೈತವನೆ ಕಲಿತು ವಾದಿಪರಲ್ಲದೆ
ಆಗು-ಹೋಗೆಂಬುದನರಿಯರು.
ಭಕ್ತಿಯನರಿಯರು ಯುಕ್ತಿಯನರಿಯರು, (ಮುಕ್ತಿಯನರಿಯರು)
ಮತ್ತೂ ವಾದಕೆಳಸುವರು.
ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ.

Previous post ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
Next post ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?

Related Posts

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
Share:
Articles

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…

June 3, 2019 ಪದ್ಮಾಲಯ ನಾಗರಾಜ್
ಆದಿಮಾವಸ್ಥೆಯ ಕಾಲದಿಂದ ಇಲ್ಲಿಯ ತನಕವೂ ಮನುಷ್ಯನಿಗೆ ವಿಶ್ವಸೃಷ್ಟಿಯ ಮೂಲಕಾರಣವು ಏನಿರಬಹುದು? ಎಂಬ ಪ್ರಶ್ನೆ ಬಹಳವಾಗಿ ಕಾಡಿದೆ. ಬಯಸದೇ ಬಂದಿರುವ ಜೀವಿಗಳ ಹುಟ್ಟು, ಮರಣ, ರೋಗ...
ಮಿಂಚೊಂದು ಬಂತು ಹೀಗೆ…
Share:
Articles

ಮಿಂಚೊಂದು ಬಂತು ಹೀಗೆ…

August 6, 2022 Bayalu
-ವಿವೇಕಾನಂದ ಹೆಚ್.ಕೆ ಒಬ್ಬ ವ್ಯಕ್ತಿಯ ಚಿಂತನೆಗಳು ಒಂದು ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿ, ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡು, ಒಂದು ಅನುಭವ ಮಂಟಪ ಎಂಬ ಸಂಸತ್ತಿನ...

Comments 13

  1. Panchakshari H v
    Apr 11, 2025 Reply

    ಸಂದರ್ಭೋಚಿತ ಸರಿಯಾದ ಮಾರುತ್ತರ ಕೊಟ್ಟಿದ್ದೀರಿ ಸ್ವಾಮೀಜಿ. ಅಭಿನಂದನೆಗಳು

  2. H V Jaya
    Apr 17, 2025 Reply

    ಹನ್ನೆರಡನೆ ಶತಮಾನದಲ್ಲಿ ಗುರು ಬಸವಣ್ಣನವರು ಕಟ್ಡಿದ ಅನುಭವ ಮಂಟಪದ ಬಗ್ಗೆ ತುಂಬಾ ಸವಿಸ್ತಾರವಾಗಿ ತಿಳಿಸಿರುವ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ಅನಂತಾನಂತ ಶರಣಾರ್ಥಿಗಳು ಈ ವಿಚಾರಗಳನ್ನು ಸರಿಯಾಗಿ ತಿಳಿಸಬೇಕಾದ ಸಂಧರ್ಭದಲ್ಲಿ ತಿಳಿಸಿರುವುದು, ಅನುಭವ ಮಂಟಪವೇ ಇರಲಿಲವೆಂದು ವಾದಿಸುವವರಿಗೆ.ಅನುಭವ ಮಂಟಪದ ಬಗ್ಗೆ ತಿಳಿಸಿದ ಸ್ವಾಮೀಜಿಯವರಿಗೆ ಧನ್ಯವಾದಗಳು

  3. VIJAYASHREE B C
    Apr 17, 2025 Reply

    ಅನುಭವ ಮಂಟಪದ ಇರುವಿಕೆಯ ಕುರಿತು ವಚನಾಧಾರಗಳ ಮೇಲೆ ತಿಳಿಸಿ ಹೇಳಿರುವುದಕ್ಕೆ ಸ್ವಾಮೀಜಿ ಅವರಿಗೆ ಅನಂತ ಶರಣು ಶರಣಾರ್ಥಿಗಳು. ಇದರಿಂದ ನನಗೂ ಕೆಲ ವಿಚಾರಗಳು ತಿಳಿದವು.

  4. Somashekharappa
    Apr 17, 2025 Reply

    Takkadada pratikriye Gurujiyavarinda.

    Kelavu pseudointellectuals thhaave uttamaru haagu uttama panditya iruvavaru yendu thilidukondiruva amalinalli uchhuchhagi mathanaaduthaare.
    Asamadana, Asuyye avarolagiruvudannu bimbisuthaare.
    Anthvarige thakkadada Jaaga thoorisuvudu nammagalellaru maadabekada kaarya. Namma javabdaari idagabeku..

  5. Rajesh M.
    Apr 20, 2025 Reply

    Admiring the commitment you put into your website and detailed information you offer. Excellent read!

  6. ಕರೀಗೌಡ ಚಿಲಕವಾಡಿ
    Apr 28, 2025 Reply

    ಅನುಭವ ಮಂಟಪ = ಅನುಭಾವ ಮಂಟಪ = ಮಹಾಮನೆ= ಸದ್ಭಾವ ಕೂಟ= ಜ್ಞಾನ ಕೂಟ= ಚರ್ಚಾ ಕೂಟ…. ವಚನಗಳಲ್ಲಿ ಬರುವ ಈ ಬೆಳಕನ್ನು ವೀಣಾ ಬನ್ನಂಜೆ ತಾಯಿ ಗಮನಿಸಲಿ, ತಪ್ಪುಗಳನ್ನು ತಿದ್ದಿಕೊಳ್ಳುವ ವಿವೇಕ ಮೂಡಲಿ👏🏾👏🏾

  7. ನಾರಾಯಣ ಕೆ
    Apr 28, 2025 Reply

    ಕುಹಕಿಗಳೇ ಇರಲಿ, ಅಜ್ಞಾನಿಯೇ ಆಗಿರಲಿ, ಅವರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟಿದ್ದಾರೆ ಪೂಜ್ಯ ಗುರುಗಳು🙏

  8. ಜೆ.ಪಿ. ಗುರೇಶ್
    May 1, 2025 Reply

    ಕಪಟರಾಳ ಕೃಷ್ಣರಾಯರು 1944 ರಲ್ಲೇ ಅನುಭವ ಮಂಟಪ ಕೇವಲ ಒಂದು ಕಾಲ್ಪನಿಕ ಸಂಸ್ಥೆಯೆಂದು ಸಮರ್ಥಿಸಿ ಬರೆದ ಲೇಖನಕ್ಕೆ ಶ್ರೀ ಉತ್ತಂಗಿ ಚೆನ್ನಪ್ಪನವರು ದೀರ್ಘವಾದ ಉತ್ತರ ಕೊಟ್ಟನಂತರ ಸುಮ್ಮನಾದರು ಎನ್ನುವುದನ್ನು ಗಮನಿಸಿದರೆ ಈ ಪರಂಪರೆಯ ಮುಂದುವರಿದ ಭಾಗ ವೀಣಾ ಬನ್ನಂಜೆ ಎಂದು ನೀವು ಗುರುತಿಸಿರುವುದು ಸರಿಯಾಗಿಯೇ ಇದೆ ಗುರುಗಳೇ. ಇಂತಹ ಅಪಾಯಕಾರಿ ಜನರಿಗೆ ಪರಿಣಾಮಕಾರಿ ಉತ್ತರ ಕೊಟ್ಟಿದ್ದೀರಿ👏🏾👏🏾

  9. ವಿನೋದ್ ಕೊರಟಗೆರೆ
    May 1, 2025 Reply

    ಅನುಭವ ಮಂಟಪವೆಂದರೆ ಈಗಲೂ ಬೆಚ್ಚಿ ಬೀಳುತ್ತಾರೆಂದರೆ… ಅದೆಂಥ powerful ಜನವೇದಿಕೆ ಆಗಿದ್ದಿರಬಹುದು!

  10. ಹರಿಕುಮಾರ್ ಟಿ
    May 1, 2025 Reply

    ತಂದೆ ಮಗಳಿಗೆ ಬುದ್ದಿ ಹೇಳುವಂತೆ ಬರೆದಿದ್ದೀರಿ. ತಾನೇ ಸರ್ವವನ್ನೂ ತಿಳಿದವಳೆಂದು ವರ್ತಿಸುವ ಆ ತಾಯಿಗೆ ದೇವರು ಸದ್ಬುದ್ಧಿಯನ್ನು ಕೊಡಲಿ.

  11. ದಯಾಶಂಕರ
    May 9, 2025 Reply

    ವಚನಗಳನ್ನ ಅಧ್ಯಯನ ಮಾಡದೇ ಹೀಗೆ ಬಾಯಿಗೆ ಬಂದ ಹಾಗೆ ಇತಿಹಾಸ ತಿರುಚುವ ಪ್ರಯತ್ನಗಳಿಗೆ ಸರಿಯಾಗಿ ಬುದ್ಧಿ ಹೇಳಿದ್ದೀರಿ🙏

  12. ಗೀತಾ ಶಿರೋಳ್
    May 28, 2025 Reply

    ಅನುಭವ ಮಂಟಪ ಬಸವಾದಿ ಶರಣರು ಕೂಡಿ ಕಟ್ಟಿದ ಸಂಸತ್ತು. ಅದನ್ನು ಇತಿಹಾಸದಿಂದ ಅಳಿಸಿ ಹಾಕಲು ಇಂತಹ ಕುತಂತ್ರಗಳಿಂದ ಯಾವ ಕಾಲಕ್ಕೂ ಸಾಧ್ಯವಿಲ್ಲ.

  13. ಕಲಾವತಿ ರಾಜಣ್ಣ
    May 28, 2025 Reply

    ಆಕಾಶಕ್ಕೆ ಮುಖ ಮಾಡಿ ಉಗಿದರೆ ಏನಾಗುತ್ತದೆ? ತಮ್ಮ ಮುಖ ಒರಿಸಿಕೊಂಡು, ಇನ್ನಾದರೂ ದುರ್ಬುದ್ದಿ ಬಿಡಲಿ🙏

Leave a Reply to Panchakshari H v Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಮನಸ್ಸು
ಮನಸ್ಸು
September 7, 2020
ಹುಡುಕಾಟ
ಹುಡುಕಾಟ
July 21, 2024
Copyright © 2025 Bayalu