ಹೊತ್ತು ಹೋಗದ ಮುನ್ನ…
ಕಾಲವನ್ನು ಹೇಗೆ ಗ್ರಹಿಸುತ್ತೀರಿ?
ಕಳೆದು ಹೋದ ನಿನ್ನೆಗಳಲ್ಲೋ? ಕಾಣದ ನಾಳೆಗಳಲ್ಲೋ? ಈಗ ನಮ್ಮೆದುರೇ ಸರಿಯುತ್ತಿರುವ ಈ ಕ್ಷಣಗಳಲ್ಲೋ… ಇಲ್ಲವೇ ಗೋಡೆಯ ಗಡಿಯಾರದಲ್ಲೋ…
ವಿಶ್ವಕ್ಕೆ ಯಾಕೆ ಕಾಲದ ಕಟ್ಟಳೆ? ಟಿಕ್ ಟಿಕ್ ನ ಎಚ್ಚರಿಕೆ ಇಲ್ಲದಿದ್ದರೆ ಜೀವನ ಎಷ್ಟು ಗಮ್ಮತ್ತಾಗಿರುತ್ತಿತ್ತು! ಕಾಲ ಎನ್ನುವುದೇ ಇಲ್ಲ, ಅದೊಂದು ಕಲ್ಪನೆ ಎಂಬ ವಾದಗಳೂ ಇವೆ. ಆದರೆ ಎಲ್ಲವನ್ನೂ ನಿರ್ಣಯಿಸುವ, ಆಜ್ಞೆ ಮಾಡುವ ಸಮಯ ಅಮೂರ್ತವಾದುದು. ಆಕಾಶಕಾಯಗಳ ಸ್ಥಾನಪಲ್ಲಟ, ಚಂದ್ರನ ಹಿಗ್ಗು-ಕುಗ್ಗುಗಳು, ಭೂಮಿಯ ಪಥ ಸಂಚಲನ, ಸಾಗರದ ಉಬ್ಬರ ಇಳಿತಗಳು, ಪಕ್ಷಿಗಳ ಸಂಜ್ಞೆಗಳು, ಸಸ್ಯಲೋಕದ ಆವರ್ತನಗಳು, ಕೀಟ ರೂಪಗಳ ವ್ಯತ್ಯಯಗಳು, ಋತುಮಾನಕ್ಕೆ ತಕ್ಕಂತೆ ಬದಲಾಗುವ ಭೂ ಹೊದಿಕೆಗಳು, ಮಳೆ-ಚಳಿ-ಬಿಸಿಲುಗಳ ಏರುಪೇರುಗಳು, ಮನೆಯ ಪಡಸಾಲೆಯಲ್ಲಿ ಜಾಗ ಬದಲಿಸುವ ಬಿಸಿಲ ರೇಖೆಗಳು… ಪ್ರಕೃತಿಯ ಗಡಿಯಾರಕ್ಕೆ ಎಷ್ಟೊಂದು ರೂಪಗಳು! ಎಷ್ಟೊಂದು ರಂಗುಗಳು!!
ಭೌತಿಕ ಸಮಯ (physical time)ವು ಯಾವುದನ್ನು ಅವಲಂಬಿಸಿಲ್ಲ. ತಿರುಗುವ ಭೂಮಿಯೊಂದಿಗೆ ತನ್ನ ಪಾಡಿಗೆ ತಾನು ಚಲಿಸುತ್ತಲೇ ಇರುತ್ತದೆ. ಆದ್ದರಿಂದ ಇದನ್ನು “ವಸ್ತುನಿಷ್ಠ ಸಮಯ” (objective time) ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಜೀವಿಯ ದೇಹದೊಳಗೂ ಒಂದು ಗಡಿಯಾರವಿದೆ. ಅದನ್ನು ಜೈವಿಕ ಸಮಯ (Biological time) ಎನ್ನುವರು. ನಾವು ಒಪ್ಪಲಿ, ಬಿಡಲಿ ಕಾಲದಿಂದ ತಪ್ಪಿಸಿಕೊಳ್ಳಲಾಗದು. ಕಾಲದ ಮೊಹರನ್ನು ಹಾಕಿಕೊಂಡೇ ಭೂಮಿಯ ಮೇಲೆ ಬಂದಿದ್ದೇವೆ. ಅದು ಜೀವದ ಅನುಭವ. ಜೀವನ ಎನ್ನುವುದು ಕಾಲದೊಂದಿಗೆ ಬೆಳೆಯುತ್ತಲೇ ಹೋಗುವ ಕಥೆ. ಎಲ್ಲೋ ಒಂದೆಡೆ ವ್ಯಕ್ತಿಯ ಜೀವ ನಿಲುಗಡೆ ಹೊಂದಿದರೂ ಕಾಲ ಚಲಿಸುತ್ತಲೇ ಇರುತ್ತದೆ. ನೆನಪುಗಳಲ್ಲಿ ಜಾರುವ ಹಿರಿಯರು, ನೆಗೆಯುತ್ತಾ ಬರುವ ಚಿಣ್ಣರು… ಕಾಲದ ಹರಿಯುವಿಕೆಯಲ್ಲಿ ಈ ಹೊತ್ತಿನ ಕೊಂಡಿ ನಾವು.
ಬೃಹತ್ತಾದ ಈ ಬ್ರಹ್ಮಾಂಡದಲ್ಲಿ ಪುಟ್ಟ ಅವಧಿ ಪಡೆದು ಬಂದ ನಾನಾರು? ನನ್ನ ಪಾತ್ರವೇನು?… ಕಾಲದ ಅನಂತತೆಯಲ್ಲಿ ಜೀವದ ಹುಡುಕಾಟ ನಿರಂತರ.
ಶರಣರು ಅನೇಕ ವಚನಗಳಲ್ಲಿ ಸಮಯವನ್ನು ಕುರಿತು ಮಾತನಾಡಿದ್ದಾರೆ. ಹೊತ್ತಿನ ಬೆಲೆಯನ್ನು ಹೊತ್ತು ಇದ್ದಾಗಲೇ ತಿಳಿದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ. ಪ್ರಸಾದ ರೂಪದಲ್ಲಿ ಜೀವನವನ್ನು ಸ್ವೀಕರಿಸಿದ ಶರಣರು ಅದರ ಸಾಮರ್ಥ್ಯವನ್ನು ತಮ್ಮ ಮೂಲಕವೇ ಅನಾವರಣಗೊಳಿಸಿದ್ದಾರೆ. ಅವರ ಪ್ರಕಾರ ಇದು ಪ್ರತಿಯೊಬ್ಬರ ಅನ್ವೇಷಣೆ. ಹೀಗಾಗಿ ಇದೇ ಬದುಕಿನ ಆತ್ಯಂತಿಕ ಸತ್ಯ ಎಂದು ಅವರು ಯಾವುದನ್ನೂ ಕೈಗೆತ್ತಿಕೊಡುವುದಿಲ್ಲ. ಹೀಗೇ ಜೀವಿಸಬೇಕು, ಹೀಗೇ ಪೂಜಿಸಬೇಕು ಎಂದು ಯಾವುದೇ ವಿಧಿ ವಿಧಾನಗಳನ್ನು ಹೇರುವುದಿಲ್ಲ. ಸಹಜವಾಗಿ, ಸರಳವಾಗಿ ಬದುಕುವ ರಹಸ್ಯವನ್ನು ಅವರ ವಚನಗಳಲ್ಲಿ ಕಾಣಬಹುದು. ಲೌಕಿಕದಲ್ಲಿದ್ದುಕೊಂಡೇ ಬದುಕಿನ ಆಗುಹೋಗುಗಳಲ್ಲಿ ನೋವು- ನಲಿವುಗಳನ್ನು, ಆಸೆ ನಿರಾಸೆಗಳನ್ನು ಅನುಭವಿಸುತ್ತಲೇ, ದ್ವಂದ್ವಗಳನ್ನು ಎದುರಿಸುತ್ತಲೇ ಅವುಗಳ ಆಚೆಗೂ ಹೋಗಿ ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಕೌಶಲ್ಯವನ್ನು, ಸ್ಥೈರ್ಯವನ್ನು ಶರಣರ ಅನುಭಾವದಿಂದ ಖಂಡಿತ ಕಲಿಯಬಹುದು. ಹೀಗೆ ಅವರು ಕಂಡುಕೊಂಡ ಕಾಲ ಮತ್ತು ಜೀವನದ ಸಮೀಕರಣ ವಿಶಿಷ್ಟ ನೋಟಗಳನ್ನು ನೀಡುತ್ತದೆ.
ಹೊತ್ತು ಹೋಗಿ ಕತ್ತಲೆಯಾಗದಕಿಂದ ಮೊದಲೆ,
ಇತ್ತಣ ಮಾಯವಳದು ಅತ್ತಣ ರೂಹು ನೆಲೆಗೊಂಡು
ಹೊತ್ತಾರೆ ಬೆಯಿಗೆ[ಯೆ]ಂಬ ಮಿಥ್ಯವನಳಿದು,
ಸಂಸಾರಬಂಧನವ ಕಳೆದು ನಿರ್ಬಂಧನವಶರಾಗಿಪ್ಪ
ಸತ್ಯಸದಾಚಾರಿಗಳ ಪಾದವ ತೋರಿ ಬದುಕಿಸು.
ಗಡಗಡನುರುಳುವೆ ಎನ್ನವಸರವಂ ಕಳೆಯಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ಜೀವವು ಸಂಸಾರದ ಜಂಜಾಟಗಳಲ್ಲಿ ತಲ್ಲೀನವಾದಾಗ ಸಮಯ ಸರಿದುದು ಗೊತ್ತೇ ಆಗುವುದಿಲ್ಲ. ಕಣ್ರೆಪ್ಪೆ ಬಡಿಯುವುದರಲ್ಲೇ ದಿನ, ವರುಷಗಳು ಉರುಳುತ್ತಿರುತ್ತವೆ. ಅದಕ್ಕೆ ಹೇಮಗಲ್ಲ ಹಂಪ ಶರಣರು ಕತ್ತಲಾಗುವ ಮುನ್ನವೇ ಅಂದರೆ ನಮ್ಮ ಬದುಕಿನ ದಿನ ಮುಗಿವ ಮೊದಲೇ ಆಗಬೇಕಾದ ಮಹತ್ತರ ಕಾರ್ಯವೊಂದನ್ನು ಜ್ಞಾಪಿಸುತ್ತಾರೆ. ಸತ್ಯಕ್ಕೂ ಮತ್ತು ಜೀವಕ್ಕೂ ನಡುವೆ ಒಂದು ಪರದೆ ಇದೆ. ಅದು ನಾನು, ನನ್ನದು, ನನ್ನಿಂದಲೇ ಎನ್ನುವ ಮಾಯೆಯ ಪರದೆ. ಅದಿರುವ ತನಕ ಅತ್ತಣ ರೂಹು ಅಂದರೆ ನಿಜವಾದ ರೂಪು ಅಥವಾ ಬದುಕಿನ ಸತ್ಯ ಕಾಣುವುದಿಲ್ಲ. ಬಂಧನವೇ ಬದುಕಾದವರಿಗೆ ನೈಜ ರೂಪಿನ ಇರುವಿಕೆಯು ಸಣ್ಣ ಯೋಚನೆಯಾಗಿಯೂ ಮನದಲ್ಲಿ ಸುಳಿದಿರುವುದಿಲ್ಲ. ಅಂಥ ಮಾಯೆ ಅಳಿದಾಗಲೇ ಬೆಳಗು- ಸಂಜೆ, ನಾನು-ನೀನು ಎನ್ನುವ ದ್ವಂದ್ವಗಳು ದೂರವಾಗುತ್ತವೆ. ಮಾಯೆಯಿಂದ ಮುಕ್ತರಾದ ಸತ್ಯ ಸದಾಚಾರಿಗಳೇ ನಿತ್ಯ ಮುಕ್ತರು.
ಕಳೆದುಕೊಂಡ ಕಾಲವನ್ನು ತರುವುದೂ ಸಾಧ್ಯವಿಲ್ಲ. ಅದರ ಓಟವನ್ನು ಹಿಡಿದು ನಿಲ್ಲಿಸುವುದೂ ಆಗುವುದಿಲ್ಲ. ಹೀಗಿದ್ದರೂ ಸಮಯದ ಬಗ್ಗೆ ಅನೇಕರಿಗೆ ಅಸಡ್ಡೆ. ನಾಳೆ ಮಾಡಿದರಾಯಿತು ಎಂಬ ಉದಾಸೀನ. ಈ ಲೋಕದಲ್ಲಿ ನಾವು ಶಾಶ್ವತ ಎಂಬಂಥ ಉಡಾಫೆ. ದಿನವನ್ನು ನಾವು ಹೇಗೆ ಬೇಕಾಬಿಟ್ಟಿಯಾಗಿ ಕಳೆದು ಬಿಡುತ್ತೇವೆ ಎಂಬುದನ್ನು ಸಂಗಮೇಶ್ವರದ ಅಪ್ಪಣ್ಣ ಹೇಳುತ್ತಾರೆ: “ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು.
ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು.
ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ,
ಕಾಯದ ಕಳವಳವ ಕೈಕೊಂಬುದಯ್ಯಾ.
ಇರುಳಾದ ಬಳಿಕ ನಿದ್ರೆಗೈದು,
ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ…”
ಕೇವಲ ತಿಂದುಂಡು ಕಾಲ ಕಳೆಯುವುದೇ ಜೀವನವಲ್ಲ. ದೇಹ ಶ್ರಮವಿಲ್ಲದ ಇಂಥ ಬದುಕಿಗೆ ಏನಾದರೂ ಅರ್ಥವಿದೆಯೇ? ಇಂಥವರು “ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ” ಎನ್ನುತ್ತಾರೆ ಬಸವಣ್ಣನವರು.
ಸಮಯ ಯಾರನ್ನೂ ಕಾಯುವುದಿಲ್ಲ… ಎಂಬ ಮಾತು ಅನೇಕ ಬಾರಿ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ. ಎಷ್ಟು ಸತ್ಯದ ಮಾತಿದು. ವಿಶ್ವದ ಪ್ರತಿಯೊಂದೂ ಕಾಲಕ್ಕೆ ಅಧೀನ. ತೋರುವುದೆಲ್ಲವೂ ಬದಲಾಗುತ್ತವೆ, ಮಾಯವಾಗುತ್ತವೆ. ಪಂಚಭೂತಗಳಿಂದಾದ ಈ ಶರೀರವಾದರೂ ಅಷ್ಟೆ. ಹುಟ್ಟಿನಿಂದ ಆರಂಭವಾಗುವ ನಮ್ಮ ಸಮಯದ ಅವಧಿ ಕೂಡ ಎಷ್ಟೆಂಬುದು ಗೊತ್ತಿಲ್ಲ. ಯಾವುದೇ ಅಪಘಾತ, ಅವಘಡಗಳು ಸಂಭವಿಸದಿದ್ದರೆ, ರೋಗ ರುಜಿನಗಳು ಅಮರಿಕೊಳ್ಳದಿದ್ದರೆ ನೂರು ವರುಷ ಬಾಳಬಹುದೆಂದೇ ಇಟ್ಟುಕೊಳ್ಳಿ. ಎಲ್ಲವನ್ನೂ ನುಂಗಿ ನೊಣೆಯುವ ಕಾಲಕ್ಕೆ ಇದಾವ ಲೆಕ್ಕ? “ನೀರುಗುಳ್ಳೆಯಂತೆ ತೋರಿ ಅಡಗುವ ಅನಿತ್ಯಶರೀರದ ಭೋಗವು, ನಿತ್ಯವೆಂದು ನಚ್ಚಿ ಹೊತ್ತುಗಳೆದು ವ್ಯರ್ಥವಾಗಿ ಸತ್ತುಹೋಗದಿರಣ್ಣಾ…” ಎಂದು ಕಿವಿಮಾತು ಹೇಳುತ್ತಾರೆ ಷಣ್ಮುಖಸ್ವಾಮಿಗಳು.
ಬಡವ, ಶ್ರೀಮಂತ, ಮೇಲು- ಕೀಳು, ಶ್ರೇಷ್ಟ- ಕನಿಷ್ಟ ಎನ್ನುವ ಯಾವ ಬೇಧವೂ ಕಾಲಕ್ಕಿಲ್ಲ. ಕಾಲಕ್ಕೆ ಎಲ್ಲರೂ ಒಂದೇ. ಇದೇ ಕಾಲಧರ್ಮ. ಪ್ರತಿಯೊಬ್ಬರಿಗೂ ನಿರಂತರವಾದ ಅವಕಾಶಗಳನ್ನು ಒದಗಿಸುತ್ತಾ ತನ್ನ ಪಾಡಿಗೆ ತಾನು ಚಲಿಸುತ್ತಿರುತ್ತದೆ. ಬುದ್ಧಿವಂತಿಕೆಯಿಂದ ಬಳಸಲಿ, ಮೂರ್ಖತನದಿಂದ ವ್ಯಯಗೊಳಿಸಲಿ… ಎಲ್ಲವೂ ನಮಗೇ ಸೇರಿದ್ದು. ಷಣ್ಮುಖಸ್ವಾಮಿಗಳ ವಚನ ನೋಡಿ:
ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ !
ಗಾಳಿ ನಿಮ್ಮಿಚ್ಛೆಯಲ್ಲ ಕೇಳಿರೋ ಜಾಳಮನುಜರಿರಾ.
ಅಂಗಕ್ಕೆ ಅಳಿವು ಬರುವುದು ದೂರವಿಲ್ಲ ನೋಡಿರೋ.
“ತ್ವರಿತಂ ಜೀವಿತಂ ಯಾತಿ ತ್ವರಿತಂ ಯಾತಿ ಯೌವನಮ್ |
ತ್ವರಿತಂ ಯಾತಿ ಪ್ರಖ್ಯಾತಿಃ ತಸ್ಮಾತ್ಪೂಜಯ ಶಂಕರಮ್ ||”
ಇದನರಿದು ಬೇಗ ಬೇಗ ಲಿಂಗವ ಪೂಜಿಸಿರೊ !
ಬೇಗ ಬೇಗ ಜಂಗಮವನೊಲಿಸಿರೋ !
ಅರುವುಳ್ಳ ಕಾಲಕ್ಕೆ ಬೇಗ ಬೇಗ
ನಮ್ಮ ಅಖಂಡೇಶ್ವರಲಿಂಗವ ಕೂಡಿರೋ.
ಕೈಗೆ ಸಿಗದೆ ಓಡುತ್ತಿರುವ ಕಾಲವನ್ನು ಜೀವನ ತುಂಬಿಕೊಳ್ಳುವುದು ಹೇಗೆ? ಪ್ರತಿದಿನವೂ ಜೀವಕ್��ೆ ಕಾಲ ನೀಡುವ ಹೊಸ ಅವಕಾಶವೇ. ವರ್ತಮಾನ ಎನ್ನುವುದು ಒಂದು ಅದ್ಭುತ ಕೊಡುಗೆ. ತಪ್ಪುಗಳನ್ನು ತಿದ್ದಿಕೊಳ್ಳಲು, ಜಾಡ್ಯಗಳಿಂದ ಹೊರಬರಲು, ಎಲ್ಲವನ್ನೂ ಕೊಡವಿಕೊಂಡು ಬದಲಾಗಲು, ಬದುಕನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು, ನಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು, ಮತ್ತೊಂದು ಪ್ರಯತ್ನಕ್ಕೆ ಮುಂದಾಗಲು… ಹೇರಳ ಅವಕಾಶಗಳಿವೆ. ದೇಹ ಶಾಶ್ವತವಲ್ಲವೆಂದು ತಿಳಿದ ಬಳಿಕ ತಡ ಮಾಡದೆ ಬೇಗನೆ ಕಾರ್ಯತತ್ಪರರಾಗಬೇಕು. ಏಕೆಂದರೆ “ನಿಮಿಷದ ನಿಮಿಷಂಭೋ, ಕ್ಷಣದೊಳಗರ್ಧಂಬೋ… ಮಾಯಂ ಭೋ ಅಭ್ರಚ್ಛಾಯಂ ಭೋ…” ಎನ್ನುವಂತೆ ಕಾಲದ ಓಟದಲ್ಲಿ ಜೀವನವು ಮೋಡದ ನೆರಳಂತೆ ಬದಲಾಗುತ್ತಾ ಮರೆಯಾಗಿಬಿಡುತ್ತದೆ ಎನ್ನುತ್ತಾರೆ ಬಸವಣ್ಣನವರು.
ಈಗ ಯಾರನ್ನೇ ಕೇಳಿ, ಸಿಗುವುದು ಒಂದೇ ಉತ್ತರ, “ನೋ ಟೈಂ”. ಸಮಯವೇ ಇಲ್ಲ ಎನ್ನುವವರು, ಇನ್ನೂ ಕೊಂಚ ಸಮಯವಿದ್ದಿದ್ದರೆ ಎಂದು ಪರಿತಪಿಸುವವರು ಇಬ್ಬರೂ ಒಂದೇ. ಸಮಯದ ಸದ್ಬಳಕೆ ಇಂಥವರಿಗೇ ತಿಳಿದಿರುವುದಿಲ್ಲವಂತೆ. ಇಂಥ ಹಳಹಳಿಕೆಯ ಜನರೇ ಕೊನೆಗೆ “ಇಷ್ಟು ಬೇಗ ಇಷ್ಟು ಹೊತ್ತಾದದ್ದು ಹೇಗೆ?” ಎಂದು ಕೈ ಹೊಸಕಿಕೊಳ್ಳುತ್ತಾರೆ. ಟೈಮೇ ಇಲ್ಲ ಎನ್ನುವವರು ಯಾವುದರಲ್ಲಿ ಬಿಜಿಯಾಗಿದ್ದಾರೆ ಅಂದುಕೊಂಡಿದ್ದೀರಿ? ಮಡಿವಾಳ ಮಾಚಿದೇವರು ಹೇಳುತ್ತಾರೆ ಕೇಳಿ:
ಒಡಲ ಹೊರೆವ ಇಚ್ಫೆಯಿಂದ,
ಹಗಲೆನ್ನದೆ ಇರುಳೆನ್ನದೆ ಬೆಂದ ಬಸುರಿಂಗೆ ಕುದಿವುತ್ತಿದ್ದೇನೆ.
ನಿಮ್ಮ ನೆನೆಯಲೂ ವೇಳೆಯಿಲ್ಲ…
ಹಣ, ಸಂಪತ್ತಿನ ವ್ಯಾಮೋಹಕ್ಕೆ ಜೀವವು ಬಿದ್ದರೆ ತೀರಿತು. ಇನ್ನಷ್ಟು, ಮತ್ತಷ್ಟು ಸಂಗ್ರಹಣೆಯ ಹುಚ್ಚು ಹತ್ತಿಕೊಳ್ಳುತ್ತದೆ. ಸಮಷ್ಟಿಯತ್ತ ಚಿತ್ತ ಹರಿಯುವುದಿಲ್ಲ. ಅಂತರಂಗಕ್ಕಿಳಿಯಲು ಮನಸ್ಸು ಒಪ್ಪುವುದಿಲ್ಲ. ಹಗಲು- ರಾತ್ರಿಯ ಪರಿವೆಯೇ ಇಲ್ಲದಂತೆ ತನಗಾಗಿ, ತನ್ನವರಿಗಾಗಿ ಒಂದೇ ಸವನೆ ದುಡಿಯುತ್ತಿರುತ್ತಾರೆ. ಇಂಥವರನ್ನು ಕಂಡೇ ಬಸವಣ್ಣನವರು ಹೇಳಿದ್ದಾರೆ: ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ.
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆ[ಯ]ಲ್ಲ.
ಹಡಿಕೆಗೆ ಮಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ.
ದುರ್ಗಂಧಕ್ಕೆ ಬೆನ್ನು ಬೀಳುವ ನಾಯಿಗೆ ಹೇಗೆ ಅಮೃತ ರುಚಿಸಲಾರದೋ ಹಾಗೆ ಕಾಂಚನದ ವಾಸನೆಗೆ ಜೀವ ತೇಯುವ ಮನುಷ್ಯ ತನ್ನ ಜೀವನವನ್ನು ಅರಿಯುವಲ್ಲಿ ಹೀನಾಮಾನವಾಗಿ ಮುಗ್ಗರಿಸುತ್ತಾನೆ.
ಜಗತ್ತು ಧಾರಾಳಿಯೇ; ಅದು ನಮಗೆ ಅಗಾಧ ಸಾಮರ್ಥ್ಯ ಕೊಟ್ಟಿದೆ, ಅವಕಾಶಗಳನ್ನೂ ತಡವೋ, ಶೀಘ್ರವೋ ಒದಗಿಸುತ್ತಿರುತ್ತದೆ. ಆದರೆ ನಿಜವಾದ ಬದುಕಿನತ್ತ ನಾವು ತಿರುಗಿಯೂ ನೋಡುವುದಿಲ್ಲ. ಕೊಟ್ಟು ಪಡೆಯುವ ಲೇವಾದೇವಿಯಲ್ಲೇ ನಮ್ಮ ಶಕ್ತಿಯನ್ನು ಕಳೆದುಬಿಡುತ್ತೇವೆ. ಹೀಗೆ ನಿಜ ಜ್ಞಾನದ ಸಾಧ್ಯತೆ ಇದ್ದಾಗಲೂ ಬಾಹ್ಯ ಬದುಕೇ ನಮ್ಮನ್ನು ಆಕರ್ಷಿಸುತ್ತದೆ. ತನ್ನೊಳಗೆ ಮುಳುಗಿಸಿಕೊಳ್ಳುತ್ತದೆ. ಇವತ್ತು ಇರುವ ದೇಹ, ಸೌಂದರ್ಯ, ಸ್ನೇಹ, ಸಂಬಂಧ, ಐಶ್ವರ್ಯ ಯಾವುವೂ ಇದೇ ರೀತಿಯಲ್ಲಿ ನಾಳೆ ಇರಲಾರವು. ಇವುಗಳನ್ನೇ ನೆಚ್ಚಿಕೊಂಡು, ಇವುಗಳಿಗೆ ಆತುಕೊಳ್ಳುವ ಜೀವಕ್ಕೆ ನೋವು- ಬೇಗುದಿಗಳು ನಿರಂತರ. ನಶ್ವರತೆಯ ಅರಿವು ಮೂಡಿದರೆ ಮನಸ್ಸು ಕಳವಳಗೊಳ್ಳದು. ಬದಲಿಗೆ ನಿಶ್ಚಿಂತವಾಗುವುದು. ವ್ಯಾಕುಲತೆ ತರುವ ವ್ಯಾಮೋಹಗಳಿಂದ ಮನಸ್ಸು ಮುಕ್ತವಾದಾಗ ಅಂತರಂಗದಲ್ಲಿ ನಿರ್ಮಲ ಭಾವ ಮೂಡುವುದು. “ನೀನಿಂದು ಏನು ಯೋಚಿಸುತ್ತೀಯೋ ಅದೇ ಆಗುತ್ತಿ” ಎಂಬ ಬುದ್ಧನ ಮಾತುಗಳಲ್ಲಿ ಬದುಕನ್ನು ಬದಲಿಸಿಕೊಳ್ಳಬಲ್ಲ ಎಲ್ಲ ಸ್ವಾತಂತ್ರ್ಯವೂ, ಅವಕಾಶವೂ ನಮಗಿವೆ. ಹೀಗಿದ್ದೂ ಸುಮ್ಮನೆ ದಿನ ಕಳೆಯುವ ಸೋಮಾರಿಗಳನ್ನು ಕಂಡರೆ ಮುಕ್ತಾಯಕ್ಕನಿಗಾಗದು:
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
ನಾವು ಕಳೆಯುವ ಒಂದೊಂದು ದಿನವೂ ಶಿವಮಯವಾಗಿರಬೇಕು. ಅಂದರೆ ಶಿವನ ಜಪ ಮಾಡುತ್ತಾ ದಿನದೂಡಬೇಕು ಎಂದಲ್ಲ. ಜಪಸ್ತೋತ್ರಗಳಿಂದ ದೇವರನ್ನು ಒಲಿಸಲಾಗದು. ನಾವು ಮಾಡುವ ಪ್ರತಿ ಕೆಲಸವೂ ಪ್ರಯೋಜನಕರವಾಗಿರಬೇಕು. ದೇವರೆಂದರೆ ಸಮಸ್ತ ಲೋಕ. ನಮ್ಮ ಸುತ್ತಣ ಬದುಕನ್ನು ಮುಟ್ಟುವ ಸಮಾಜಮುಖಿ ಕಾರ್ಯಗಳ ಮೂಲಕವೇ ದೇವರನ್ನು ಮುಟ್ಟಲು ಸಾಧ್ಯ. ಅದೇ ಶಿವರಾತ್ರಿ. ಅಂಥ ಹಾದಿಯನ್���ು ತೋರಿಸುವುದೇ ಶಿವಾನುಭವ. ಅಜಗಣ್ಣ ಹಾಗೇ ಬದುಕಿದ ಗುಪ್ತ ಶರಣ. ತೋರಿಕೆಯ ಭಕ್ತಿ ಎಂಬುದೇ ಆತನಲ್ಲಿರಲಿಲ್ಲ. ಒಣ ಆಚರಣೆಗಳಲ್ಲಿ ಮುಳುಗಿ, ಪೊಳ್ಳು ಪ್ರದರ್ಶನಗಳಲ್ಲಿ ಕಾಲ ನೂಕುತ್ತಿದ್ದ ಸ್ವಾಮಿಗಳನ್ನು ಉದ್ದೇಶಿಸಿ ಸಮಯದ ಸದ್ಬಳಕೆಯ ಬಗ್ಗೆ ನಿಜ ದಾರಿ ತೋರುತ್ತಾಳೆ ಮುಕ್ತಾಯಕ್ಕ.
ಝೆನ್ ಗುರು ನಾನಸೆನ್ ರಿಗೆ ಶಿಷ್ಯನೊಬ್ಬ ಪ್ರಶ್ನಿಸಿದ, “ಸತ್ಯದ ದಾರಿ ಯಾವುದು?” ಗುರು ಉತ್ತರಿಸಿದ, “ನಿತ್ಯದ ದಾರಿಯೇ ಸತ್ಯದ ದಾರಿ” ಶಿಷ್ಯ ಉತ್ಸಾಹದಿಂದ ಕೇಳಿದ, “ಹಾಗಾದರೆ ನಾನು ಅದರ ಅಧ್ಯಯನ ಮಾಡಲೇ?” ಗುರು ಹೇಳಿದ, “ನೀನು ಅಧ್ಯಯನ ಮಾಡಿದಷ್ಟೂ ಆ ದಾರಿಯಿಂದ ದೂರ ಹೋಗುತ್ತೀಯ.” ಕಂಗಾಲಾದ ಶಿಷ್ಯನಿಗೆ ಗುರು ವಿವರಿಸಿದ, “ಸತ್ಯದ ದಾರಿ ಕಾಣುವಂಥದೂ ಅಲ್ಲ, ಅದೃಶ್ಯವಾದುದೂ ಅಲ್ಲ. ಅದಕ್ಕೆ ಯಾವ ಅಧ್ಯಯನವೂ ಬೇಡ. ನಿನ್ನನ್ನು ಆಕಾಶದಷ್ಟು ವಿಶಾಲವಾಗಿ ಬಿಚ್ಚಿಕೊ, ಆಗ ನೀನು ಆ ದಾರಿಯ ಮೇಲೇ ನಿಂತಿರುತ್ತೀಯಾ.” ಹಾಗೆ ವಿಶಾಲವಾಗಿ ಬಿಚ್ಚಿಕೊಂಡು ಆಕಾಶವೇ ಆಗುವುದು ಹೇಗೆಂಬುದನ್ನು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಇಡೀ ಜೀವನದ ದರ್ಶನವನ್ನೇ ಹಿಡಿದಿಡುವಂತಿದೆ ಈ ವಚನ:
ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
ಜೀವನಕ್ಕೆ ಒಂದು ಮಹತ್ತರವಾದ ಉದ್ದೇಶ ಇರಲೇಬೇಕು ಎಂಬುದು ಅನೇಕರ ಕನವರಿಕೆ. ಆದರೆ ಈ ಜೀವನವನ್ನು ಗಮನವಿಟ್ಟು ನೋಡಿದಲ್ಲಿ ಇಲ್ಲಿಯೇ ಅದರ ಬ್ರಹ್ಮಾಂಡತೆ ಕಾಣಬಹುದು. ಜೀವನಕ್ಕೆ ಏನಾದರೂ ಗುರಿ ಗಮ್ಯಗಳನ್ನು ಇಟ್ಟುಕೊಳ್ಳುವುದೆಂದರೆ ನಮ್ಮ ಸುತ್ತ ನಾವೇ ಗಡಿಗಳನ್ನು ಎಳೆದುಕೊಂಡಂತೆ. ಕೋಟೆ ಕಟ್ಟಿಕೊಂಡಂತೆ. ಇದರಿಂದ ಭದ್ರತೆ ಸಿಗಬಹುದೇ ಹೊರತು ಜೀವನದ ಪೂರ್ಣ ದೃಷ್ಟಿ ಸಿಗುವುದಿಲ್ಲ. ಸುತ್ತಲೂ ಬಲೆ ನೇಯ್ದುಕೊಂಡು ಬಯಲನ್ನು ನೋಡುವುದಾದರೂ ಹೇಗೆ? ಬದುಕುವುದನ್ನು ಕಲಿಯುವುದೇ ಜೀವನದ ಉದ್ದೇಶ. ನಾವೇ ಜೀವನದ ಮಹದೋದ್ದೇಶ. ಅಂದರೆ ಸತ್ಯವೇ ನಾವಾಗುವುದು! ಆ ರಹಸ್ಯ ಇಲ್ಲಿದೆ.
ಎರಡು ಆಯಾಮಗಳಲ್ಲಿ ನಮ್ಮ ಮನಸ್ಸನ್ನು ವಿಸ್ತರಿಸುತ್ತಾರೆ ಬಸವಣ್ಣನವರು. ಒಂದು ಅಂತರಂಗಕ್ಕೂ ಮತ್ತೊಂದು ಬಹಿರಂಗಕ್ಕೂ ಸಂಬಂಧಿಸಿದ್ದು. ಮೊದಲ ಎರಡು ಸಾಲು ಗಮನಿಸಿ. “ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು; ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.” ನಮ್ಮ ಜೀವಿತಾವಧಿ ಎಷ್ಟೆಂದು ತಿಳಿಯದ ಕಾರಣ ಬೇಗನೇ ಎಚ್ಚೆತ್ತುಕೊಂಡು ಲಿಂಗವನ್ನು ಪೂಜಿಸಬೇಕು. ಏನು ಹಾಗೆಂದರೆ? ಶರಣರ ಪ್ರಕಾರ ಪೂಜೆ ಮಾಡುವುದು ಯಾವುದೇ ಇಷ್ಟಕಾಮಗಳನ್ನು ಪಡೆಯುವುದಕ್ಕಾಗಿ ಅಲ್ಲ. ದೇವರನ್ನು ಒಲಿಸಿಕೊಳ್ಳಲೆಂದು ಬೆಳಗಿನ ಜಾವವೇ ಎದ್ದು ಲಿಂಗವನ್ನು ಕೈಲಿ ಹಿಡಿದುಕೊಂಡು ಕೂರುವುದಲ್ಲ. ಪೂಜೆಯ ಉದ್ದೇಶ ಪೂಜ್ಯ ವಸ್ತುವೇ ನಾವಾಗುವುದು. ಸೃಷ್ಟಿ ಮತ್ತು ಸೃಷ್ಟಿಕರ್ತನನ್ನು ಪ್ರತ್ಯೇಕಿಸಲಾಗುವುದೇ? ಅಂದರೆ ಪರಮಾತ್ಮನ ರೂಪವೇ ಆಗಿರುವ ನಮಗೆ ಆ ಸ್ವರೂಪ ಜ್ಞಾನವುಂಟಾಗಲಿಕ್ಕೆ ಪೂಜಿಸುವುದು. ನಮ್ಮೊಳಗೇ ಇರುವ ಆ ಸ್ವ ಜ್ಞಾನಕ್ಕೆ ಎಲ್ಲಿಯೂ ಪರದಾಡಬೇಕಿಲ್ಲ. ಈ ಪೂಜೆಯೂ ಅತಿ ಸರಳ. ನೀರು, ಪತ್ರೆ ಎರಡೇ ಸಾಕು. ಹೀಗೊಮ್ಮೆ ಲಿಂಗಪೂಜೆ ಶುರುಮಾಡಿದರೆ ಅದು ವ್ಯಕ್ತಿತ್ವದಲ್ಲಿ ಅಪಾರ ಬದಲಾವಣೆ ತರುತ್ತಾ ಹೋಗುತ್ತದೆ. ಸಣ್ಣತನಗಳು, ದುಷ್ಟತನಗಳು ಕರಗುತ್ತವೆ. ನಮ್ಮ ಸಾಮರ್ಥ್ಯದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ನಾನಾರೆಂಬ ಸತ್ಯದತ್ತ ಕೊಂಡೊಯ್ಯುವ ಹಾದಿಯಲ್ಲಿ ಇಷ್ಟಲಿಂಗ ಒಂದು ಸಾಧನ ಮಾತ್ರ. ಪೂಜೆ ಆರಂಭಿಕ ಕ್ರಿಯೆ ಮಾತ್ರ. ಅಂತಃಶಕ್ತಿಯ ಸುಳುಹುಗಳು ಗೋಚರಿಸಿದಂತೆ ಅಂತರಂಗದ ಅರಿವು ಗೋಚರಿಸುತ್ತದೆ. ಇದು ಜೀವದ ಒಳಪಯಣ.
ಈಗ ಕೊನೆಯ ಎರಡು ಸಾಲು ಗಮನಿಸಿ. ಹೊತ್ತು ಹೋಗದ ಮುನ್ನ ಮತ್ತೊಂದು ಮುಖ್ಯ ಕಾರ್ಯ ಇದೆ. ಅದೇ ಸಂಗಮದೇವನ “ತೊತ್ತುಗೆಲಸವ ಮಾಡು”ವುದು. ಅಂದರೆ ಇಡೀ ಸಮಾಜಕ್ಕೆ ಆಳಾಗಿ ದುಡಿಯುವುದು. ತೊತ್ತುಗೆಲಸ ಎನ್ನುವುದು ಶ್ರಮಸಂಸ್ಕೃತಿಯ ಅಗತ್ಯವನ್ನು, ಅನಿವಾರ್ಯತೆಯನ್ನು ಸೂಚಿಸುತ್ತದೆ. ಸಮಷ್ಟಿಗಾಗಿ ಶ್ರಮಿಸದ, ಬೆವರು ಹರಿಸದ ಬದುಕು ವ್ಯರ್ಥ. ಕೆಲಸ ಯಾವುದೇ ಇದ್ದರೂ ನಾನು ಸಮಷ್ಟಿಯ ಸೇವಕನೆಂಬ ಮನೋಭಾವವಿರಬೇಕು. ಆಗ ಅಲ್ಲಿ ನಮ್ರತೆ ಇರುತ್ತದೆ. ಸೇವಾ ಕೈಂಕರ್ಯದಿಂದ ಮಾಡುವ ಕೆಲಸ ಪವಿತ್ರವಾದುದು.
ಹೀಗೆ ಅರಿವು ಮತ್ತು ಸೇವೆಗಳ ಅದ್ಭುತ ಸಮನ್ವಯವನ್ನು ಮೃತ್ಯು ಮುಟ್ಟದ ಮುನ್ನವೇ ಮಾಡಬೇಕು. ಕ್ಷಣಿಕತೆಯ ಅರಿವಿನಲ್ಲೂ ಹುಟ್ಟಬಲ್ಲ ಜೀವನ ಶ್ರದ್ಧೆ ಎಂದರೆ ಇದು. ವ್ಯಷ್ಟಿ-ಸಮಷ್ಟಿಗಳ ಸಾಮರಸ್ಯವನ್ನು ಸಾಧಿಸುವುದೇ ನಿಜವಾದ ಜೀವನ. ವ್ಯಕ್ತಿಯ ಹಿತ ಸಮಾಜದ ಶ್ರೇಯಸ್ಸನ್ನು ಅವಲಂಬಿಸಿದೆ, ಸಮಾಜದ ಅಭಿವೃದ್ಧಿಗಾಗಿ ವ್ಯಕ್ತಿಯು ತನ್ನನ್ನು ತಾನು ಅರ್ಪಿಸಿಕೊಳ್ಳಬೇಕಾಗುತ್ತದೆ. ಇಂಥ ಅರ್ಥಪೂರ್ಣ ಹಾದಿ ತುಳಿಯದೆ ಮರಣಿಸಿದಲ್ಲಿ ಅದೊಂದು ನಿಷ್ಪ್ರಯೋಜಕ ಜೀವನವಾಗುತ್ತದೆ.
ಇತಿಹಾಸದ ಎಲ್ಲ ಪುಟಗಳೂ ಕಾಲದ ನೆನಪಿನ ಭಿತ್ತಿಯಲ್ಲಿ ದಾಖಲಾಗುವುದಿಲ್ಲ. ಕೆಲವಷ್ಟೇ ಪುಟಗಳನ್ನು ಮಾಸಿ ಹೋಗದ ಹಾಗೆ ಸಮಯ ಕಾಪಿಡುತ್ತದೆ. ಪೀಳಿಗೆಯಿಂದ ಪೀಳಿಗೆಗೆ ನೆನಪುಗಳ ಹಿಡಿಯಲ್ಲಿ ಅವು ಇಡಿಯಾಗಿ ಹರಿದು ಬರುತ್ತವೆ. ಹನ್ನೆರಡನೆ ಶತಮಾನದ ಶರಣರು ಹಾಗೆ ನೆನಪಿನ ಕೋಶಗಳನ್ನು ದಾಟುತ್ತಾ ಬಂದವರು. ಕಾಲದ ಅಲ್ಪತೆಯಲ್ಲೂ ದಿವ್ಯತೆ ಸಾಧಿಸುವ ಮಾರ್ಗವನ್ನು ತೋರಿದವರು. ಕಾಲ ಜೀವನದ ಮೌಲ್ಯವನ್ನೂ, ಜೀವನ ಕಾಲದ ಬೆಲೆಯನ್ನೂ ತಿಳಿಸುತ್ತವೆಂಬುದು ಸದಾ ನೆನಪಿರಲಿ. ಸಿಟ್ಟು, ದ್ವೇಷ, ಹಗೆತನಗಳನ್ನೆಲ್ಲ ತುಂಬಿಕೊಳ್ಳುವಷ್ಟು ಜೀವನ ದೊಡ್ಡದಿಲ್ಲ. ಪ್ರೀತಿ, ಕರುಣೆ, ವಿಶ್ವಾಸಗಳು ನಮ್ಮೆದೆಯಲ್ಲಿ ಜಾಗ ಪಡೆಯಲಿ, ನಾವು ಹೆಜ್ಜೆ ಇಡುವಲ್ಲೆಲ್ಲ ಅವುಗಳೇ ಹರಡಲಿ. ಈ ಹೊತ್ತು ಜಗತ್ತಿಗೆ ತುರ್ತಾಗಿ ಬೇಕಿರುವುದು ಶಾಂತಿ ಮತ್ತು ಸಾಮರಸ್ಯದ ವಾತಾವರಣ.
Comments 3
Madapathi.V.V
Jul 7, 2018ಅಕ್ಕಾ ಅವರೆ ತಮಗೆ ಅನಂತ ಶರಣು ಶರಣಾರ್ಥಿಗಳು.
ತಮ್ಮ ಒಂದು ಬರಹದಲ್ಲಿ ಹಲವಾರು ಮುಖಗಳು ಕಾಣುವುದು.. ಅಂತರಂಗ ತೃಪ್ತಿ ಮತ್ತು ಬಹಿರಂಗದ ದೈರ್ಯೆಯ ಬರಹ ನಿಮ್ಮದು. “ತೂತ್ತು ಕೆಲಸವ ಮಾಡು”.. ಅದ್ಬುತವಾದ ವಿವರಣೆ..
ಶರಣು ಶರಣಾರ್ಥಿ ಅಕ್ಕಾ ಅವರೆ
G.B.Patil
Jan 10, 2019I made comments BEFORE reading The article “Hottu hoguva Munna”
Mother provides the food one after another,if someone eats only one dish without waiting for another it is his/ her fault, The editor provided several tasty dishes in one meal.one has eat(taste) all the dishes and comment about the whole meal , Not on one dish.
Hungry person is happy, he is fully satisfied with the sumptuous meal.
Thank you AMMA
ಬಸವರಾಜ ಸೂಳಿಭಾವಿ
Mar 30, 2020ಸಾಮಾನ್ಯ ಜನರೂ ಸಹಿತ ಅರ್ಥ ಮಾಡಿಕೊಳ್ಳುವಷ್ಟು ಸ್ಪಷ್ಟವಾಗಿ ಬರೆದ ಲೇಖನ.