
ಸಾವಿನ ಸುತ್ತ…
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ?
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ?
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ.
ಇದು ಬಸವಣ್ಣನವರ ವಚನ. ದೇವರು ಹುಟ್ಟಿಸಿದಲ್ಲಿ ಹುಟ್ಟಿ, ಅವನು ಸಾಯಿಸಿದಲ್ಲಿ ಸಾಯುವುದು ಅನಿವಾರ್ಯ. ಅವನು ಇರಿಸಿದಂತೆ ಇರಬೇಕಲ್ಲದೆ ನಾವು ಬಯಸಿದಂತೆ ಇರಲಾಗುವುದಿಲ್ಲ. ದೇವರೇ ಇದೆಂತಹ ಸ್ಥಿತಿ ತಂದೆ ಎಂದು ಗೋಳಾಡದೆ ನಿನ್ನ ಕೃಪೆ ಇದ್ದಂತಾಗಲಿ. ನನ್ನ ಅಳಿವು, ಉಳಿವು ನಿನ್ನದೇ ಎನ್ನುವ ಸರ್ವಾರ್ಪಣಾ ಮನೋಭಾವ ತಳೆಯಬೇಕು ಎನ್ನುವ ಭಾವ ಬಸವಣ್ಣನವರದು. ಹುಟ್ಟು, ಸಾವು ಮನುಷ್ಯನ ಕೈಯಲ್ಲಿ ಇಲ್ಲದಿದ್ದರೂ ಅವುಗಳ ನಡುವಿನ ಬದುಕು ಆತನ ಕೈಯಲ್ಲೇ ಇರುತ್ತದೆ. ವ್ಯಕ್ತಿಯ ಬದುಕಿನ ವಿಧಾನ ಹೇಗಿರುತ್ತದೆ ಎನ್ನುವುದು ಮುಖ್ಯ. ತಾಯಿಯ ಗರ್ಭದಿಂದ ಭೂತಾಯಿ ಗರ್ಭಕ್ಕೆ ಬಂದಮೇಲೆ ಯಾರೂ ದೈಹಿಕವಾಗಿ ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಒಂದಿಲ್ಲೊಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಹಾಗೆ ಹೋಗುವ ಮುನ್ನ ಇಲ್ಲಿ ಬಿಟ್ಟು ಹೋಗಬೇಕಾದ್ದು ಏನು ಎಂದು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಮನುಷ್ಯ ನಾಯಿ-ನರಿಗಳ ಹಾಗೆ ಹುಟ್ಟಿ, ಹಂದಿ-ಹದ್ದುಗಳ ಹಾಗೆ ಬದುಕಿ, ಸಗಣಿಯ ಹುಳದಂತೆ ಸತ್ತರೆ ಆ ಬದುಕಿಗೆ ಯಾವ ಬೆಲೆಯೂ ಇರುವುದಿಲ್ಲ. ಅದರ ಬದಲು ಈ ಲೋಕಕ್ಕೆ ಬಂದಮೇಲೆ ನಾಲ್ಕು ಜನರಿಗಾದರೂ ಉಪಕಾರ ಮಾಡುವ ಕೆಲಸ ಕಾರ್ಯಗಳನ್ನು ಮಾಡಬೇಕು. ಯಾರಿಗೂ ಉಪದ್ರವ ನೀಡಬಾರದು. ಬದುಕಿನ ಶ್ರೇಷ್ಠತೆ ಇರುವುದು ವ್ಯಕ್ತಿ ತನ್ನ ನೋವುಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇನ್ನೊಬ್ಬರ ನೋವುಗಳನ್ನು ಹೇಗೆ ನಿವಾರಣೆ ಮಾಡಬಹುದು ಎನ್ನುವುದರಲ್ಲಿದೆ. ಇತರರ ನೋವು ನಿವಾರಣೆಯ ಕೆಲಸದಲ್ಲಿ ಮನುಷ್ಯ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಅದನ್ನೇ ಬಸವಣ್ಣನವರು `ನಿಮ್ಮ ದುಃಖವೆನ್ನ ದುಃಖ, ನಿಮ್ಮ ಸುಖವೆನ್ನ ಸುಖ… ಕೂಡಲಸಂಗನ ಶರಣರ ಮನ ನೊಂದಡೆ ಆನು ಬೆಂದೆನಯ್ಯಾ’ ಎನ್ನುವರು.
ಈ ಭೂಮಿಗೆ ಬಂದ ಮೇಲೆ ಸಂಕಷ್ಟಗಳು, ಸವಾಲುಗಳು, ನೋವುಗಳು, ವಿಪತ್ತುಗಳು ಇದ್ದದ್ದೇ. ಅವಿಲ್ಲದವರು ಯಾರೂ ಇಲ್ಲ. ಅವೇ ಆ ವ್ಯಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಹೋಗಬೇಕು. ಬಂದದ್ದು ಬರಲಿ, ಶಿವನ ದಯೆ ಇರಲಿ ಎಂದು ಹೋರಾಟದ ಮನೋಭಾವ ಮೈಗೂಡಿಸಿಕೊಂಡಾಗ ವ್ಯಕ್ತಿ ಇನ್ನಷ್ಟು ಶಕ್ತಿಯನ್ನು ಪಡೆದುಕೊಂಡು ಸಮಾಜದಲ್ಲಿ ಅದ್ಭುತ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಕೆಲವರು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದಾಗ ಅವರ ತಂದೆ ತಾಯಿಗಳಿಗೆ ಎಲ್ಲಿಲ್ಲದ ಸಂಕಟ, ನೋವು. ಮಕ್ಕಳನ್ನು ಕಳೆದುಕೊಂಡಾಗ ಅವರಿಗೆ ದುಃಖವಾಗುವಂತೆ ತಂದೆ-ತಾಯಿಗಳನ್ನು ಕಳೆದುಕೊಂಡಾಗ ಅಥವಾ ಗಂಡನನ್ನು ಹೆಂಡತಿ ಇಲ್ಲವೇ ಹೆಂಡತಿಯನ್ನು ಗಂಡ ಕಳೆದುಕೊಂಡಾಗ ಅವರೂ ದುಃಖ ಅನುಭವಿಸುವರು. ಒಂದನ್ನು ಗಮನಿಸಬೇಕು: ಮನುಷ್ಯನಿಗೆ ದೇವರು ಕರುಣಿಸಿರುವ ಬಹುದೊಡ್ಡ ವರ ಎಂದರೆ ಮರವು. ಮರವು ಇಲ್ಲದಿದ್ದರೆ ಎಂಥ ಅನಾಹುತವಾಗುತ್ತಿತ್ತು? ತಮಗೆ ಬೇಕಾದವರು ಸತ್ತಾಗ ಎಲ್ಲರೂ ಅಂದುಕೊಳ್ಳುವುದೇನು? ಅವರೇ ಹೋದಮೇಲೆ ನಾವ್ಯಾಕೆ ಬದುಕಬೇಕು? ಈ ಬದುಕಿಗೆ ಏನಾದರೂ ಅರ್ಥ ಇದೆಯೇ? ದೇವರು ಅವರ ಬದಲು ನನ್ನನ್ನೇ ತೆಗೆದುಕೊಂಡು ಹೋಗಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಕಣ್ಣೀರು ಸುರಿಸುವರು. ಬಟ್ಟೆ ಹರಿದುಕೊಳ್ಳುವರು. ಕೂದಲು ಕಿತ್ತುಕೊಳ್ಳುವರು. ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪುವರು. ಅದು ಎಲ್ಲಿಯವರೆಗೆ? ಒಂದು ಹಂತದವರೆಗೆ. ಮತ್ತೆ ಕಾಮನೆಗಳ ಕಾಟ ಇದ್ದದ್ದೇ. ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಆಸೆ, ರೋಷ, ಮತ್ಸರ…
ಆಸೆ, ರೋಷ, ದ್ವೇಷ, ಮತ್ಸರಗಳಿಗಿಂತ ಹೆಚ್ಚಾಗಿ ನನ್ನಿಂದ ಏನು ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಯೋಚಿಸಬೇಕು. ಹಿರಿಯರು ಯಾವಾಗಲೂ ಹೇಳುವ ಮಾತು: ಪರೋಪಕಾರ ಮಾಡಬೇಕು, ಸಾಧ್ಯವಾಗದಿದ್ದರೆ ಪರಪೀಡನೆಯಿಂದ ದೂರ ಇರಬೇಕು ಎಂದು. ಎಲ್ಲರೂ ಒಳ್ಳೆಯ ಕಾರ್ಯ ಮಾಡಲು ಸಾಧ್ಯವಾಗದಿದ್ದರೂ ಕಿಡಿಗೇಡಿತನ ಮಾಡದಿರಲು ಸಾಧ್ಯವಿದೆ. ವ್ಯಕ್ತಿ ತನ್ನಷ್ಟಕ್ಕೆ ತಾನು ಒಳ್ಳೆಯವನಾಗಿ ಬಾಳುವುದು ಸಹ ಮತ್ತೊಂದರ್ಥದಲ್ಲಿ ಪರೋಪಕಾರವೇ. ಕೆಲವರು ಪರಪೀಡನೆಯಲ್ಲೇ ಖುಷಿ ಪಡುವ ಕುತ್ಸಿತ ಮನೋಭಾವನೆಯುಳ್ಳವರಾಗಿರುತ್ತಾರೆ. ಇದು ಜೀವನ ಅಲ್ಲ. ಸಾವಿಗೆ ಇಂಥದೇ ವಯಸ್ಸು ಎನ್ನುವುದೇನಿಲ್ಲ. ಅಯ್ಯೋ ಪಾಪ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾವು ಬರಬಾರದಾಗಿತ್ತು ಎಂದು ಹೇಳುವುದುಂಟು. ವಯೋವೃದ್ಧರಾಗಿ ಸತ್ತಾಗಲೂ ದುಃಖ ಸಹಜ. ಆಗ ಅಳಬಾರದಿತ್ತಲ್ಲವೇ? ಅಜ್ಜಿ ಅಥವಾ ಅಜ್ಜ ಮನೆಯ ಮುಂದೆ ಸುಮ್ಮನೇ ಕುಳಿತಿದ್ದರೂ ಸಾಕಿತ್ತು. ಅವರು ಇನ್ನಷ್ಟು ಕಾಲ ಬದುಕಬೇಕಿತ್ತು ಎಂದು ಗೋಳಾಡಿ ಅಳುವರು. ಕೆಲವು ಸಲ ತಾಯಿಯ ಹೊಟ್ಟೆಯಲ್ಲಿರುವಾಗಲೇ ಮಗು ಸತ್ತು ಹುಟ್ಟುವುದು. ಮತ್ತೆ ಕೆಲವು ಸಂದರ್ಭದಲ್ಲಿ ಹುಟ್ಟಿ ವಾರೊಪ್ಪತ್ತಿನಲ್ಲೇ ಸಾಯುವುದು. ಆ ಮಗು ಏನು ಪಾಪ ಮಾಡಿತ್ತು? ಸಾವು ಬಂತೆಂದು ಬದುಕಿದವರು ತಮ್ಮ ಜೀವನವನ್ನು ನರಕ ಮಾಡಿಕೊಳ್ಳಬಾರದು. ಸಾವು ವ್ಯಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಮುನ್ನಡೆಸಬೇಕು. ನಾವು ಅನೇಕ ಸಂದರ್ಭಗಳಲ್ಲಿ ಕೇಳುವ ಪ್ರಶ್ನೆ: ಈ ಲೋಕದಲ್ಲಿ ಹುಟ್ಟಿದವರೆಲ್ಲ ಸಾಯದೆ ಬದುಕಿದ್ದರೆ ಏನಾಗುತ್ತಿತ್ತು? ಈಗಾಗಲೇ ನಮ್ಮ ದೇಶದ ಜನಸಂಖ್ಯೆ 136 ಕೋಟಿ ಎನ್ನುವರು. ಅದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ.
ಒಬ್ಬ ಯುವಕನಿಗೆ ತಾನು ಸಾಯದಿರುವ ವರ ಪಡೆದುಕೊಳ್ಳಬೇಕು ಅನ್ನಿಸಿ ದೇವರನ್ನು ಕುರಿತು ತಪಸ್ಸು ಮಾಡಿದ. ಬೋಳೇಶಂಕರ ಶಿವ ಪ್ರತ್ಯಕ್ಷವಾಗಿ ಏನು ಬೇಕು ಎಂದ. ನನಗೆ ಸಾಯದಿರುವ ವರವನ್ನು ಕರುಣಿಸು ಎಂದ. ಪಕ್ಕದಲ್ಲೇ ಇರುವ ನದಿಯ ನೀರನ್ನು ಕುಡಿದರೆ ಸಾವೇ ಬರುವುದಿಲ್ಲ ಎಂದ. ಆತನಿಗೆ ಖುಷಿಯಾಗಿ ನದಿಯ ನೀರನ್ನು ಕುಡಿಯಲು ಮುಂದಾಗುತ್ತಿದ್ದಂತೆ ಅಲ್ಲಿರುವ ಅನೇಕ ಜಲಚರ ಜೀವಿಗಳು ಕುಡಿಯಬೇಡ, ಕುಡಿಯಬೇಡ ಎಂದು ಕೂಗುವವು. ಯಾಕೆ ಕುಡಿಯಬಾರದು? ನಾವು ಈ ನೀರನ್ನು ಕುಡಿದದ್ದರಿಂದ ನಮಗೆ ಸಾವಿಲ್ಲ. ಆದರೆ ಕಣ್ಣು ಕಾಣುವುದಿಲ್ಲ. ಹಲ್ಲು ಬಿದ್ದು ಹೋಗಿವೆ. ಚರ್ಮ ಸುಕ್ಕುಗಟ್ಟಿದೆ. ಸ್ವತಂತ್ರವಾಗಿ ಏನನ್ನೂ ಮಾಡಿಕೊಳ್ಳಲು ಆಗುತ್ತಿಲ್ಲ. ಇಂಥ ಬದುಕು ಬೇಕೇ? ಶಿವನೇ ನಮ್ಮನ್ನು ಕರೆದುಕೊ ಎಂದರೂ ಶಿವ ಕರೆದುಕೊಳ್ಳುತ್ತಿಲ್ಲ ಎಂದು ಪ್ರತಿಯೊಂದೂ ಜಲಚರಗಳು ತಮ್ಮ ಸಂಕಟ ಹೇಳಿಕೊಂಡವು. ಆಗ ಆತ ಈ ಜೀವಿಗಳು ಹೇಳುವುದರಲ್ಲಿ ಅರ್ಥವಿದೆ. ನನಗೆ ಸಾವು ಮತ್ತು ಮುಪ್ಪು ಎರಡೂ ಬರಬಾರದು ಎಂದು ಮತ್ತೆ ದೇವರಲ್ಲಿ ಪ್ರಾರ್ಥಿಸಿದ. ಹಾಗಿದ್ದರೆ ಅಲ್ಲೊಂದು ತೋಟವಿದೆ. ಅಲ್ಲಿನ ಹಣ್ಣುಗಳನ್ನು ತಿಂದರೆ ಸಾವು ಮತ್ತು ಮುಪ್ಪಿನ ಭಯವಿಲ್ಲ ಎಂದಾಗ ಆತ ಖುಷಿಯಿಂದ ಆ ತೋಟಕ್ಕೆ ಓಡೋಡಿ ಬರುವನು. ತೋಟ ಕಂಡಾಗ ಅವನಿಗಾದ ಖುಷಿ ಅಷ್ಟಿಷ್ಟಲ್ಲ. ತೋಟದಲ್ಲಿ ವೈವಿಧ್ಯಮಯವಾದ ಹಣ್ಣುಗಳು ಬೇಕಾದಷ್ಟು ಇವೆ. ಅಲ್ಲಿದ್ದ ಜನರು ಹಣ್ಣುಗಳನ್ನು ತಿನ್ನದೆ ಪರಸ್ಪರರು ಕಲ್ಲು, ಕೋಲು, ಆಯುಧಗಳಿಂದ ಹೊಡೆದಾಡುತ್ತಿದ್ದಾರೆ. ಅವರ ಮೈ ಕೈಗಳೆಲ್ಲ ರಕ್ತಮಯ. ಕೈ-ಕಾಲು ಮುರಿದಿವೆ.
ಹಣ್ಣುಗಳನ್ನು ತಿಂದು ಸುಖವಾಗಿರದೆ ಅಜ್ಞಾನಿಗಳ ಹಾಗೆ ಬಡಿದಾಡುತ್ತಿರುವುದೇಕೆ ಎಂದು ಅವರನ್ನು ಪ್ರಶ್ನಿಸಿದ. ಅದಕ್ಕೊಬ್ಬ ಹೇಳಿದ್ದು: ಇವನು ನಮ್ಮಪ್ಪ. ನನಗೆ ಅಧಿಕಾರ ಕೊಟ್ಟಿಲ್ಲ. ಅಧಿಕಾರ ಕೇಳಿದರೆ ನಮ್ಮಪ್ಪನೇ ನನಗೆ ಕೊಟ್ಟಿಲ್ಲ. ನಾನು ನಿನಗೆ ಹೇಗೆ ಕೊಡಲಿ ಎನ್ನುತ್ತಾನೆ. ಅಲ್ಲಿರುವವರೆಲ್ಲರೂ ಹಣ್ಣು ತಿಂದಿರುವುದರಿಂದ ಅವರಿಗೆ ಸಾವಿಲ್ಲ, ಮುಪ್ಪೂ ಇಲ್ಲ. ಯಾರು ಯಾರಿಗೆ ಅಧಿಕಾರ ಕೊಡುವುದು? ಆಗ ಯುವಕನಿಗೆ ಜ್ಞಾನೋದಯವಾಗಿ ಸಾವು, ತಾರುಣ್ಯ, ಮುಪ್ಪು ಇವೆಲ್ಲ ಸಹಜವಾಗಿ ಬಂದೇ ಬರುತ್ತವೆ. ಭಗವಂತ ನಿನ್ನಿಚ್ಛೆಯಂತೆ ನಡೆಯುವೆ. ನಾನೀ ಹಣ್ಣು ತಿಂದು ಇವರಂತೆ ಹೊಡೆದಾಡಲಾರೆ ಎಂದು ವಾಪಾಸ್ ಹೋದನಂತೆ. ಇದೊಂದು ಸಾಂಕೇತಿಕ ಕತೆ. ಇದು ಹೇಳುವ ಸಂದೇಶ: ಸಾವಿಗಾಗಿ ಹೆದರುವ ಅಗತ್ಯವಿಲ್ಲ. ಅದು ಬಂದಾಗ ಖುಷಿಯಿಂದಲೇ ಸ್ವಾಗತಿಸಬೇಕು. ಆದರೆ ಕೆಲವರು ಅದು ಬರುವ ಮೊದಲೇ ತಾವಾಗಿ ಸಾವಿನ ಮನೆಯ ಕದ ತಟ್ಟುವರು. ತಮಗೆ ಏನೋ ಸಂಕಟ ಬಂದಾಗ, ದುರಭ್ಯಾಸಗಳನ್ನು ಕಲಿತು ಬರಿಗೈ ಆದಾಗ, ಸಾಲಗಾರರಾಗಿ ಎಲ್ಲ ಜನರಿಂದ ಛೀ ಥೂ ಅನಿಸಿಕೊಂಡಾಗ ಈ ಬದುಕೇ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುವರು. ಬದಲಾಗಿ ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಇರುವಷ್ಟು ಕಾಲ ಸತ್ಕಾರ್ಯಗಳನ್ನು ಮಾಡುತ್ತಿದ್ದರೆ ಸಾವನ್ನು ಸಂತೋಷದಿಂದ ಸ್ವಾಗತಿಸಬಹುದು. ಅಯ್ಯೋ ಸಾವು, ಮುಪ್ಪು, ರೋಗ ಬರಬಾರದು ಎಂದು ಆ ದೇವರನ್ನು ಪ್ರಾರ್ಥಿಸುವ ಅಗತ್ಯ ಸಲ್ಲದು. ಈ ನೆಲೆಯಲ್ಲಿ ಲದ್ದೆಯ ಸೋಮಣ್ಣನವರ ವಚನ ಕಣ್ಣು ತೆರೆಸುವಂತಿದೆ.
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರುಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ. ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.
ಎಷ್ಟೋ ಜನರು ಸಾಮಾಜಿಕ ಒಲವುಳ್ಳವರಾಗಿ ಸ್ವಂತ ಕಾಲಮೇಲೆ ನಿಂತು ಆದರ್ಶ ಪಥದಲ್ಲೇ ನಡೆಯುತ್ತಿರುತ್ತಾರೆ. ಹಲವು ಆದರ್ಶಗಳ ಮತ್ತು ಸಾಧನೆಗಳ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ `ತಾನೊಂದು ಬಗೆದರೆ ದೈವ ಬೇರೊಂದು ಬಗೆಯಿತು’ ಎನ್ನುವಂತೆ ಆಗಬಹುದು. ಮನುಷ್ಯ ಕಟ್ಟಿದ ಕನಸುಗಳೆಲ್ಲ ನನಸಾಗದಿದ್ದರೂ ಕನಸುಗಳನ್ನು ಕಾಣುತ್ತಿರಬೇಕು. ಬಹುತೇಕ ಜನರು ಕನಸು ಕಾಣುವುದು ರಾತ್ರಿ ಮಲಗಿದಾಗ. ಮನುಷ್ಯ ಮಲಗಿದಾಗ ಕಾಣುವ ಕನಸಿಗಿಂತ ಎಚ್ಚರದಿಂದ ಇರುವಾಗಲೇ ಆದರ್ಶ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡುವತ್ತ ಗಮನ ಹರಿಸಬೇಕು. ನಮ್ಮ ನಾಡಿನಲ್ಲಿ ಅನೇಕ ಮಹಾನುಭಾವರು ಎಚ್ಚರ ಇದ್ದಾಗಲೇ ಕನಸುಗಳನ್ನು ಕಟ್ಟುವರು. ಅವರ ಕನಸು ಕೇವಲ ಸ್ವಾರ್ಥದ ಕನಸಾಗಿರದೆ ಆತ್ಮಕಲ್ಯಾಣ, ಜನಕಲ್ಯಾಣ, ಲೋಕಕಲ್ಯಾಣದ ಕನಸಾಗಿರುತ್ತದೆ. ಅಂಥ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಆ ವ್ಯಕ್ತಿಗಳು ದೈಹಿಕವಾಗಿ ಸತ್ತರೂ ತಮ್ಮ ಸಾಧನೆಗಳ ಮೂಲಕ ಬದುಕಿರುತ್ತಾರೆ. ನಮ್ಮ ಹಿರಿಯ ಗುರುಗಳು `ಸತ್ತು ಬದುಕುವುದೇ ನಿಜವಾದ ಜೀವನ’ ಎನ್ನುತ್ತಿದ್ದರು. ಈ ಮಾತನ್ನು ಕೇಳಿದಾಗ ಕೆಲವರಿಗಾದರೂ ಆಶ್ಚರ್ಯವಾಗಬಹುದು; ಸತ್ತು ಬದುಕಲು ಹೇಗೆ ಸಾಧ್ಯ ಎಂದು. ಸತ್ತರೆ ಮಣ್ಣಲ್ಲಿ ಹೂಳಬಹುದು ಇಲ್ಲವೇ ಬೆಂಕಿಯಲ್ಲಿ ಸುಡಬಹುದು. ಬದುಕುವುದು ಹೇಗೆ? ಬದುಕುವುದು ದೇಹದ ಮೂಲಕ ಅಲ್ಲ. ದೇಹದಲ್ಲಿ ಚೈತನ್ಯ ಇದ್ದಾಗ ಮಾಡುವ ಸತ್ಕಾರ್ಯಗಳ ಮೂಲಕ. ಬುದ್ಧ, ಬಸವ, ಗಾಂಧಿ, ನಮ್ಮ ಹಿರಿಯ ಗುರುಗಳು ಇಂಥ ಹಲವರು ದೈಹಿಕವಾಗಿ ನಮ್ಮ ಕಣ್ಮುಂದೆ ಇಲ್ಲದಿದ್ದರೂ ಅವರು ಮಾಡಿರುವ ಸಾಧನೆಗಳ ಕಾರಣದಿಂದ ಸತ್ತರೂ ಬದುಕಿದ್ದಾರೆ. ಅಂಥವರಿಗೆ ಸಾವಿಲ್ಲ.
ವ್ಯಕ್ತಿ ಇರುವಷ್ಟು ಕಾಲ ಉತ್ತಮ ಕಾರ್ಯಗಳ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಸಂಕಲ್ಪ ಮಾಡಬೇಕು. ಪ್ರಸ್ತುತ ದಿನಮಾನಗಳಲ್ಲಿ ವ್ಯಕ್ತಿಗತ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಕಷ್ಟಕರವಾಗಿರುವಾಗ ಸಾಮಾಜಿಕ ಆರೋಗ್ಯ ಕಾಪಾಡುವುದು ದೂರವೇ ಉಳಿಯಿತು. ವ್ಯಕ್ತಿಗತ ಆರೋಗ್ಯ ಕೂಡ ಆದರ್ಶಗಳನ್ನೇ ಅವಲಂಬಿಸಿರುತ್ತದೆ. ಅದರಿಂದಲೇ ವ್ಯಕ್ತಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಈ ನೆಮ್ಮದಿಯನ್ನು ಹಣ ಕೊಟ್ಟು ಕೊಳ್ಳಲು ಬರುವುದಿಲ್ಲ. ಬಾಹ್ಯ ಸಂಪತ್ತು ನೆಮ್ಮದಿ ಕೊಡುತ್ತದೆ ಎನ್ನುವುದು ಸಹ ಒಂದು ಭ್ರಮೆ. ನಿಜವಾದ ನೆಮ್ಮದಿ ಇರುವುದು ವ್ಯಕ್ತಿಯ ಅಂತರಂಗದ ಅರಳುವಿಕೆ, ಸದ್ಭಾವನೆ, ಸತ್ಕಾರ್ಯಗಳಲ್ಲಿ. ಅದನ್ನೇ ಬಸವಣ್ಣನವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎನ್ನುವರು. ಈ ಶುದ್ಧಿಗಾಗಿ ಕೇವಲ ಧ್ಯಾನ, ಮೌನ, ಪ್ರಾರ್ಥನೆ ಮಾಡಿದರೆ ಸಾಲದು. ಸತ್ಚಿಂತನೆ, ಸತ್ಕಾರ್ಯ ಮಾಡುತ್ತ ಪರೋಪಕಾರ ಮಾಡುವ ಸದ್ಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಆಗ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಿ ದೇವರ ಒಲುಮೆ ಸಾಧ್ಯವಾಗುವುದು. ಈ ಹಿನ್ನೆಲೆಯಲ್ಲೇ ಅನೇಕ ಜನರು ಇರುವಷ್ಟು ಕಾಲ ತಂದೆ ತಾಯಿಗಳಿಗೆ ಗೌರವ ತರುವ ಮಕ್ಕಳಾಗಿ, ಸಮಾಜದಲ್ಲಿ ಗೌರವಯುತ ಜೀವನ ಸಾಗಿಸಿದ್ದನ್ನು ಗಮನಿಸಬಹುದು. ಕೆಲವರು ಆಸ್ಪತ್ರೆಯಲ್ಲಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗಲೇ ನಮಗೆ ಫೋನ್ ಮಾಡಿ ತಮ್ಮ ದರ್ಶನ ಪಡೆಯಬೇಕು ಎನ್ನುವರು. ಇನ್ನೇನು ನಾಳೆ ನಾಡಿದ್ದು ಬರುತ್ತಾರೆ ಎನ್ನುವಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗುವುದುಂಟು. ಅವನ ಆಸೆ ಪೂರೈಸಲಿಲ್ಲ ಎಂದು ತಂದೆ ತಾಯಿ ಗೋಳಾಡಿ ಅಳುವುದುಂಟು. ಗುರುಗಳನ್ನು ಪ್ರತ್ಯಕ್ಷವಾಗಿಯೇ ಕಾಣಬೇಕೆಂದೇನೂ ಇಲ್ಲ. ಮನಸ್ಸಿನಲ್ಲೇ ಕಾಣಬಹುದು. ಮನುಷ್ಯ ಮನಸ್ಸು ಮಾಡಿದರೆ ಈ ಕ್ಷಣವೇ ಬಸವಣ್ಣ, ಅಕ್ಕ, ಅಲ್ಲಮ, ಹಿರಿಯ ಗುರುಗಳ ದರ್ಶನ ಪಡೆಯಬಹುದು. ಅದಕ್ಕಾಗಿ ಅವರನ್ನು ಅಂತರಂಗದಲ್ಲಿ ಆಹ್ವಾನ ಮಾಡಿಕೊಂಡು ಅವರ ಆದರ್ಶಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ತಳೆಯಬೇಕು. ಅದರಿಂದ ಶಕ್ತಿಯನ್ನು ಪಡೆದುಕೊಂಡು ಸಬಲರಾಗಿ ಸತ್ಕಾರ್ಯಗಳನ್ನು ಮಾಡಬಹುದು.
ಮೊನ್ನೆ ನಮಗೆ ತುಂಬಾ ಬೇಕಾದ ಹಿರಿಯರ ಧರ್ಮಪತ್ನಿಗೆ ಕ್ಯಾನ್ಸರ್ ಎಂದು ತಿಳಿಯಿತು. ಅಯ್ಯೋ ಪಾಪ! ಈ ವಯಸ್ಸಿನಲ್ಲಿ ಕ್ಯಾನ್ಸರ್ ಆಗಬಾರದಿತ್ತು ಎಂದು ಅನುಕಂಪ ವ್ಯಕ್ತಪಡಿಸಿದ್ವಿ. ತಕ್ಷಣ ನಮ್ಮ ಪಕ್ಕದಲ್ಲಿದ್ದವರು ‘ಇಂಥ ಅನುಕಂಪದ ಮಾತುಗಳು ತಮ್ಮ ಬಾಯಿಂದ ಬರಬಾರದು ಬುದ್ಧಿ’ ಎಂದರು. ಯಾಕೆ ಎಂದಾಗ ‘ತಮ್ಮಂಥವರು ಯಾವಾಗಲೂ ಆಶಾದಾಯಕ ಮಾತುಗಳನ್ನು ಆಡಬೇಕೇ ಹೊರತು ನಿರಾಶಾದಾಯಕ ಮಾತುಗಳನ್ನು ಆಡಬಾರದು. ಕ್ಯಾನ್ಸರ್ ದೊಡ್ಡ ಕಾಯಿಲೆ ಅಲ್ಲ. ಅದನ್ನು ವಾಸಿ ಮಾಡಬಹುದು. ಆತ್ಮಸ್ಥೈರ್ಯ ಇದ್ದರೆ ನಾಲ್ಕನೆಯ ಸ್ಟೇಜ್ನಲ್ಲಿದ್ದಾಗಲೂ ಅದನ್ನು ಗೆಲ್ಲಬಹುದು. ಎಷ್ಟೋ ಜನರು ರೋಗದ ಹೆಸರು ಕೇಳುತ್ತಲೇ ಹೆದರಿ ಹೃದಯಾಘಾತಕ್ಕೆ ತುತ್ತಾಗುವರು. ಅಂಥ ಸಂದರ್ಭದಲ್ಲಿ ತಮ್ಮಂಥವರು ಆಡುವ ಒಳ್ಳೆಯ ಮಾತುಗಳೇ ನಿಜವಾದ ಔಷಧಿಯಾಗಿ ಕೆಲಸ ಮಾಡುವವು. ಆಗ ವೈದ್ಯರು ಕೊಡುವ ಚಿಕಿತ್ಸೆ ಬೇಗ ಸತ್ಫಲ ನೀಡುವುದು. ಹಾಗಾಗಿ ತಮ್ಮಂಥವರು ಮನೋಬಲ ಹೆಚ್ಚಿಸುವ, ಆತ್ಮಸ್ಥೈರ್ಯ ನೀಡುವ ಮಾತುಗಳನ್ನೇ ಆಡಬೇಕು’ ಎಂದರು. ಅವರ ಮಾತುಗಳಲ್ಲಿ ಸತ್ಯ ಇದೆ ಎನ್ನಿಸಿತು. ಚಿಕಿತ್ಸೆ ಫಲಕಾರಿ ಆಗುತ್ತೋ ಇಲ್ಲವೋ ಎನ್ನುವುದಕ್ಕಿಂತ ಅವರಿಗೆ ಒಳ್ಳೆಯ ಮಾತುಗಳನ್ನು ಹೇಳುವುದರಿಂದ ಗುರುಗಳ ಆಶೀರ್ವಾದ ಇದೆ. ಅವರ ಆಶೀರ್ವಾದದಿಂದ ನಾನು ಬದುಕುತ್ತೇನೆ ಎಂದು ತಮ್ಮಲ್ಲೇ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುವುದು. ಅಂಥ ಕೆಲವು ದೃಷ್ಟಾಂತಗಳು ನಮ್ಮ ಕಣ್ಮುಂದೆ ಇವೆ. ಒಬ್ಬರು ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಯಿಂದಲೇ ನಮಗೆ ಪೋನ್ ಮಾಡಿದರು. ಆಗ ನಾವು ಆಶಾದಾಯಕ ಮಾತುಗಳನ್ನು ಹೇಳಿದ್ವಿ. ಕ್ಯಾನ್ಸರ್ ಬಂತೆಂದು ನೀವು ಗಾಬರಿಪಡಬೇಕಾಗಿಲ್ಲ. ಸಾವು ಕ್ಯಾನ್ಸರ್ ಕೈಲಿಲ್ಲ. ಅದು ನಿಮ್ಮ ದೃಢವಾದ ಸಂಕಲ್ಪದಲ್ಲಿದೆ ಎಂದು ನಮ್ಮ ಹಿರಿಯ ಗುರುಗಳ ನಿದರ್ಶನ ನೀಡಿದ್ದೆವು. ಅವರೀಗ ಗುಣಮುಖರಾಗಿ ತಮ್ಮ ಕೆಲಸ ಕಾರ್ಯಗಳನ್ನು ಉತ್ಸಾಹದಿಂದಲೇ ಮಾಡುತ್ತಿದ್ದಾರೆ.
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ (ಹಿರಿಯ ಗುರುಗಳು) 1984ರಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥತೆ ಶುರುವಾಯಿತು. ದಾವಣಗೆರೆಯ ಪ್ರಸಿದ್ಧ ವೈದ್ಯರೆಲ್ಲರೂ ಗುರುಗಳ ಆರೋಗ್ಯ ಪರಿಶೀಲಿಸಿ ಹೇಳಿದ್ದು: ಇವರ ಮೆದುಳು ಸಂಪೂರ್ಣ ಸವೆದಿದೆ. ಒಬ್ಬ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಮಾಡುವ ಯೋಚನೆ, ಯೋಜನೆಗಳಿಗಿಂತ ನೂರಾರು ವರ್ಷ ಮುಂದೆ ಯೋಚಿಸಿರುವುದರಿಂದ ಮೆದುಳಿನ ಶಕ್ತಿ ನಾಶವಾಗಿದೆ. ಅವರು ಇನ್ನುಮುಂದೆ ಹುಚ್ಚರಂತೆ ಇರಬಹುದೇ ಹೊರತು ಎಚ್ಚರದಿಂದ ಇರಲು ಸಾಧ್ಯವಿಲ್ಲ. ಹೆಚ್ಚೆಂದರೆ ವಾರೊಪ್ಪತ್ತು ಬದುಕಬಹುದು ಎನ್ನುವ ಅಭಿಪ್ರಾಯ ಅವರದಾಗಿತ್ತು. ಆಗ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸೇರಿಸಲಾಯ್ತು. ಅಲ್ಲಿಯ ವೈದ್ಯರು ಮೂರು ದಿನ ಎಲ್ಲ ಔಷಧೋಪಚಾರ ನಿಲ್ಲಿಸಿ ನಂತರ ಬೇರೆ ರೀತಿಯ ಚಿಕಿತ್ಸೆ ಪ್ರಾರಂಭಿಸಿದರು. ಗುರುಗಳ ದೇಹದಲ್ಲಿ ಚೇತರಿಕೆ ಕಂಡರೂ ಬುದ್ಧಿಯಲ್ಲಿ ಬದಲಾವಣೆ ಆಗಲಿಲ್ಲ. ಡಾ. ನಾರಾಯಣರೆಡ್ಡಿ ಎನ್ನುವವರು ಹೇಳಿದ್ದು: ಇವರ ಹೃದಯ ಸುಸ್ಥಿತಿಯಲ್ಲಿದೆ. ಅವರು ತಮ್ಮ ಸಂಕಲ್ಪದಿಂದ ಸಾವನ್ನು ಬರಮಾಡಿಕೊಳ್ಳಬಹುದೇ ಹೊರತು ಕಾಯಿಲೆ ಅವರನ್ನು ಸಾಯಿಸುವುದಿಲ್ಲ. ನಮ್ಮ ಔಷಧೋಪಚಾರವೂ ಅವರನ್ನು ಬದುಕಿಸುವುದಿಲ್ಲ ಎನ್ನುತ್ತಿದ್ದರು. ಗುರುಗಳು ದೈಹಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ಹುಚ್ಚರಾಗಿಯೇ ಇದ್ದರು. ನಾಲ್ಕಾರು ವರ್ಷ ಏನು ಮಾಡುತ್ತಾರೆ, ಮಾತನಾಡುತ್ತಾರೆ, ಹೇಳುತ್ತಾರೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಕ್ರಮೇಣ ಅವರ ಮೆದುಳಿನ ಶಕ್ತಿ ವೃದ್ಧಿಯಾಗಿ `ದಿಟ್ಟಹೆಜ್ಜೆ ಧೀರಕ್ರಮ’ ಎನ್ನುವ ತಮ್ಮ ಆತ್ಮಚರಿತ್ರೆಯನ್ನು ತಾವೇ ಹೇಳಿ ಬರೆಸಿದರು. ಇದನ್ನು ನಂಬಲು ಸಾಧ್ಯವೇ ಎಂದರೆ ಸಾಧ್ಯ. ಇದರಿಂದ ನಾವು ಕಲಿತ ಪಾಠ ಮನುಷ್ಯ ತನ್ನ ಸಂಕಲ್ಪ ಶಕ್ತಿಯಿಂದ ರೋಗವನ್ನು ತಡೆಗಟ್ಟಬಹುದು, ಸಾವನ್ನು ಮುಂದೆ ತಳ್ಳಬಹುದು ಎಂದು.
ಹಿರಿಯರು ಆಡುವ ಒಳ್ಳೆಯ ಮಾತುಗಳು ಸ್ಪೂರ್ತಿಯನ್ನು ನೀಡಿ ಚೈತನ್ಯವನ್ನು ತುಂಬುತ್ತವೆ. ಅದೇ ಅವರ ಬದುಕಿಗೆ ಭರವಸೆ ತುಂಬುವುದು. ಕೆಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಚಿಕ್ಕಜಾಜೂರಿನ ಕಾಟಿಹಳ್ಳಿ ಶಿವಣ್ಣ ಒಂದು ದಿನ ನಮ್ಮಲ್ಲಿಗೆ ಬಂದು ಬುದ್ಧಿ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಮರಳಿ ಬರುವಂತೆ ಆಶೀರ್ವಾದ ಮಾಡಬೇಕು ಎಂದರು. ಯಾಕಪ್ಪ ಹೀಗೆ ಮಾತನಾಡ್ತಿಯಾ? ಏನಾಗಿದೆ ಎಂದಾಗ ಬುದ್ಧಿ ನನಗೆ ಕ್ಯಾನ್ಸರ್ ಆಗಿದೆ. ಮಗನ ಮದುವೆಗಾಗಿ ಆಸ್ಪತ್ರೆಗೆ ಹೋಗಿರಲಿಲ್ಲ. ಈಗ ಮದುವೆ ಮುಗಿದಿದೆ. ನನ್ನ ಜವಾಬ್ದಾರಿ ಇನ್ನೇನೂ ಇಲ್ಲ. ಈಗ ಚಿಕಿತ್ಸೆ ಪಡೆಯಲು ನಿರ್ಧರಿಸಿ ಬೆಂಗಳೂರಿಗೆ ಹೊರಟಿದ್ದೇನೆ. ತಮ್ಮ ಆಶೀರ್ವಾದದಿಂದ ಮತ್ತೆ ಬದುಕಿ ಬರುತ್ತೇನೆ ಎಂದರು. ಅವರು ಚಿಕಿತ್ಸೆ ಪಡೆಯುವಾಗ ತಲೆಯ ಕೂದಲೆಲ್ಲ ಉದುರಿ ಬೋಳುದಲೆ ಆಗಿತ್ತು. ಮೂತ್ರ ಹೊರಹಾಕಲು ಬೇರೊಂದು ವ್ಯವಸ್ಥೆ ಮಾಡಿದ್ದರು. ಈಗ ಆತ ನವಯುವಕನಂತೆ ಓಡಾಡುತ್ತಿದ್ದಾನೆ. ಉತ್ಸಾಹದಿಂದ ಇದ್ದಾನೆ. ಮುಖದಲ್ಲಿ ಕಾಂತಿ ಬಂದಿದೆ. ಹಾಗಾಗಿ ರೋಗ ಬಂತೆಂದು ಯಾರೂ ಹೆದರಬೇಕಾಗಿಲ್ಲ. ಬಂದದ್ದು ಬರಲಿ, ಶಿವನ ದಯೆ ಇರಲಿ ಎನ್ನುವ ಭಾವನೆ ಬೆಳೆಸಿಕೊಂಡು ಜೀವನೋತ್ಸಾಹ ಬತ್ತದಂತೆ ನೋಡಿಕೊಳ್ಳಬೇಕು. ಕೆಲವರು ಸಣ್ಣಪುಟ್ಟ ಕಾರಣಕ್ಕಾಗಿ ಜೀವನೋತ್ಸಾಹ ಕಳೆದುಕೊಳ್ಳುವರು. ನಿರಾಶಾವಾದಿಗಳಾಗಿ ಇನ್ನೇನೂ ಜೀವನದಲ್ಲಿಲ್ಲ ಎಂದುಕೊಳ್ಳುವರು. ಅಂಥ ಭಾವನೆಯೇ ಅವರ ಬದುಕನ್ನು ನಾಶ ಮಾಡುವುದು. ಮನುಷ್ಯ ಎಂದೂ ನಿರಾಶಾವಾದಿಯಾಗಬಾರದು. ನನಗಿಂತ ನೋವಿನಲ್ಲಿರುವವರು ಎಷ್ಟೊಂದು ಜನರಿದ್ದಾರೆ? ಅವರ ಮುಂದೆ ನನ್ನ ನೋವೇನು ಮಹಾ ಎಂದುಕೊಳ್ಳಬೇಕು. ಆಗ ಬದುಕು ನೆಮ್ಮದಿಯಿಂದ ಕೂಡಿರಲು ಸಾಧ್ಯ.
ಸುಖ-ದುಃಖ ಹೆಣ್ಣು-ಗಂಡು ಇಬ್ಬರಿಗೂ ಇದ್ದದ್ದೇ. ಹೆಣ್ಣುಮಕ್ಕಳಿಗೆ ಭೂಮಿತೂಕದ ಶಕ್ತಿ ಇದೆ ಎನ್ನುವರು. ಹಾಗಾಗಿಯೇ ಅವರನ್ನು ಭೂತಾಯಿಗೆ ಹೋಲಿಸುವರು. ತನ್ನೆಲ್ಲ ನೋವುಗಳನ್ನು ನುಂಗಿಕೊಂಡು ಆ ತಾಯಿ ಮತ್ತೊಬ್ಬರಿಗೆ ಸಂತೋಷ ಕೊಡುವಳು. ಎಷ್ಟೋ ಜನ ತಾಯಂದಿರು ಗಂಡ, ಮಕ್ಕಳನ್ನು ಕಳೆದುಕೊಂಡು ಬಂಧು ಬಳಗದಿಂದ ದೂರ ಆಗಿದ್ದರೂ ಮನೋಸ್ಥೈರ್ಯ ಕಳೆದುಕೊಂಡಿರುವುದಿಲ್ಲ. ಒಬ್ಬರಿಗೆ ನಾಲ್ಕು ಜನರು ವೈರಿಗಳಿದ್ದರೆ ನಲವತ್ತು ಜನ ಸ್ನೇಹಿತರು, ಸಹಕಾರ ನೀಡುವವರು ಇದ್ದೇ ಇರ್ತಾರೆ. ನಾಲ್ಕು ಜನರು ವಿರೋಧ ಮಾಡುತ್ತಾರೆಂದು 40 ಜನ ನಿಮ್ಮ ಹಿಂದೆ ಇರುವುದನ್ನು ಮರೆಯಬಾರದು. ಎಲ್ಲರೂ ವಿರೋಧಿಗಳು ಎಂದು ತಟಸ್ಥವಾಗಿದ್ದರೆ ನಿಮ್ಮನ್ನೇ ನಂಬಿದವರ ಗತಿ ಏನು? ಹಾಗಾಗಿ ಮನುಷ್ಯ ಒಳ್ಳೆಯ ಭಾವನೆಗಳನ್ನು ತನ್ನಲ್ಲಿ ಬೆಳೆಸಿಕೊಂಡು ಅವುಗಳನ್ನು ಸಮಾಜದಲ್ಲಿ ಬಿತ್ತುತ್ತಾ ಹೋದರೆ ಉತ್ತಮ ಬೆಳೆ ಪಡೆಯಲು ಸಾಧ್ಯ. ಮನುಷ್ಯ ಯಾವಾಗ ಈ ಲೋಕ ಬಿಟ್ಟು ಹೋಗುತ್ತಾನೆ ಎನ್ನುವುದು ಮುಖ್ಯವಲ್ಲ; ಆತ ಹೋಗುವ ಮುನ್ನ ಎಷ್ಟು ಜನರ ಮನಸ್ಸಿನಲ್ಲಿ ಸ್ಮರಣೆಯ ಬೀಜಗಳನ್ನು ಬಿತ್ತಿ ಹೋಗಿದ್ದಾನೆ ಎನ್ನುವುದು ಮುಖ್ಯ. ಆಗ ಆ ವ್ಯಕ್ತಿ ಸತ್ತರೂ ಬದುಕಿದ ಹಾಗೆ. ಕೆಲವೊಮ್ಮೆ ವ್ಯಕ್ತಿ ಚಿಕ್ಕ ವಯಸ್ಸಿನಲ್ಲೇ ಹೊರಟು ಹೋಗುವರು. ಬಾಲಕ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕು ಸತ್ತ. ಅವನೇನು ಪಾಪ ಮಾಡಿದ್ದ? ಅಪ್ಪ ವೀರಾಧಿವೀರ ಅರ್ಜುನ, ಮಾವ ಶ್ರೀಕೃಷ್ಣ, ದೊಡ್ಡಪ್ಪ ಧರ್ಮರಾಯ. ಇಂಥ ಘಟಾನುಘಟಿಗಳಿದ್ದೂ ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಎಂದು ಡಿವಿಜಿ ಈ ಹಿನ್ನೆಲೆಯಲ್ಲೇ ಹೇಳಿರಬೇಕು. ಶಬರಿಮಲೆಗೋ, ಧರ್ಮಸ್ಥಳಕ್ಕೋ, ತಿರುಪತಿಗೋ, ಮತ್ತಾವುದೋ ತೀರ್ಥಕ್ಷೇತ್ರಗಳಿಗೋ ಹೋಗುವಾಗ ಅಥವಾ ವಾಪಾಸ್ ಬರುವಾಗ ಅಪಘಾತಕ್ಕೆ ತುತ್ತಾಗಿ ಇಹಲೋಕ ತ್ಯಜಿಸುವರು. ಇನ್ನೇನು ಸತ್ತೇಬಿಟ್ಟ ಎನ್ನುವಾಗಲೇ ಮತ್ತೆ ಬದುಕಿ ಬರುವರು. ಇದನ್ನು ಕೆಲವರು ವಿಧಿಯಾಟ ಎನ್ನುವರು.
‘ಕಡೆಗೀಲಿಲ್ಲದ ಬಂಡಿ ಹೊಡೆಗೆಡೆವುದ ಮಾಬುದೇ? ಕಡೆಗೀಲು ಬಂಡಿಗಾಧಾರ’ ಎಂದು ದಾಸಿಮಯ್ಯನವರು ಹೇಳಿದ್ದಾರೆ. ಅದಕ್ಕಾಗಿ ಶರಣರ ನುಡಿಮುತ್ತುಗಳನ್ನು ಬದುಕಿನ ಬಂಡಿಯ ಕೀಲುಗಳನ್ನಾಗಿ ಮಾಡಿಕೊಂಡಾಗ ಬದುಕು ಹರ್ಷದಾಯಕ ಮತ್ತು ಆದರ್ಶಮಯವಾಗುವುದು. ಜೀವನದಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಂಡು ದಿಟ್ಟತನದಿಂದ ಸವಾಲುಗಳನ್ನು ಎದುರಿಸುವ ಗಟ್ಟಿತನ ಬರುವುದು. ಈ ನೆಲೆಯಲ್ಲಿ ಶರಣರ ವಚನಗಳ ಬೆಳಕಿನಲ್ಲಿ ಸಾಧ್ಯವಾದಷ್ಟು ಸಾರ್ಥಕ ಕಾರ್ಯಗಳನ್ನು ಮಾಡುತ್ತಿರಬೇಕು. ಆಗ ಬದುಕು ಮತ್ತು ಸಾವು ಎರಡೂ ಸಾರ್ಥಕವಾಗುವವು.
ನಿಮ್ಮ ನಿಲವಿಂಗೆ ನೀವು ನಾಚಬೇಡವೆ?
ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆ ನುಡಿ ಏಕೆ?
ಅಲ್ಲ ಎನಿಸಿಕೊಂಬುದರಿಂದ
ಆ ಕ್ಷಣವೆ ಸಾವುದು ಲೇಸು
ಕಾಣಾ ಚೆನ್ನಮಲ್ಲಿಕಾರ್ಜುನಾ.
Comments 11
Shubha
Jan 13, 2023Very inspiring article
Jyothi M.S
Jan 16, 2023ಸಾವು ಎಂಥವರ ಮನಸ್ಸನ್ನೂ ದುರ್ಬಲವಾಗಿಸುವ ಜೀವನದ ವಾಸ್ತವ. ಅದನ್ನು ದಿಟ್ಟವಾಗಿ ತೆಗೆದುಕೊಳ್ಳದೆ ಬೇರೆ ವಿಧಿಯೇ ಇಲ್ಲ. ಬಡತನ, ಕಷ್ಟಗಳಿಗಿಂತ ಕಾಯಿಲೆಗಳು ಸಾವನ್ನು ಹೆಚ್ಚು ನೆನಪಿಸುತ್ತವೆ, ಜೀವನದ ಸತ್ಯ ಬಹುಶಃ ಸಾವಲ್ಲದೆ ಬೇರಾವುದೂ ಇರಲಾರದು.
ಚನ್ನಪ್ಪ ಕಮತಗಿ
Jan 25, 2023ಸಾಯದಿರುವ, ಯೌವನಿಗರಾಗಿಯೇ ಉಳಿವ ವರ ಯಾರ್ಯಾರಿಗೂ ಬೇಡ. ಈಗಿರುವ ಆಯುಷ್ಯವೇ ಸಾಕೆನಿಸುತ್ತದೆ ಗುರುಗಳೇ… ಇರುವಷ್ಟು ದಿವಸ ಆರೋಗ್ಯದಿಂದ ನೆಮ್ಮದಿಯಾಗಿ ಬಾಳುವಂತಾದರೆ ಸಾಕು.
ಶಿವಶಂಕರ ಜೋಡಿಮಠ
Jan 25, 2023ದೊಡ್ಡವರು ಹೇಳುವ ಮಾತುಗಳು ಸ್ಫೂರ್ತಿದಾಯಕವಾಗಿದ್ದರೆ ಕಿರಿಯರು ಮನಸ್ಸು ಕೊಟ್ಟು ಕೇಳುತ್ತಾರೆ, ಅವರ ಮಾತುಗಳು ಪ್ರವಚನದಂತೆ ಬುದ್ಧಿವಾದ ಹೇಳತೊಡಗಿದರೆ ಅವು ಖಂಡಿತವಾಗಿಯೂ ತಲೆಗೆ ಹೋಗುವುದಿಲ್ಲ. ನಮ್ಮ ತಂದೆಯವರು ನನ್ನನೊಮ್ಮೆ ನಮ್ಮೂರ ಮಠದ ಸ್ವಾಮಿಗಳ ಹತ್ತಿರ ಕರೆದುಕೊಂಡು ಹೋದರು. ನಾನು ಪಿಯೂಸಿ ಫೇಲಾಗಿದ್ದ ಸಮಯ ಅದು. ಅವರ ಮಾತುಗಳು ಮತ್ತೆ ನನ್ನನ್ನು ಓದಲು ಪ್ರೇರೇಪಿಸಿದ್ದನ್ನು ನಾನು ಯಾವಾಗಲೂ ನೆನೆಯುತ್ತೇನೆ.
ಸವಿತಾ ಹಿರಿಯೂರು
Jan 25, 2023ಕ್ಯಾನ್ಸರ್ ಮಾರಕ ರೋಗವಾಗಿದ್ದರೂ ಆತ್ಮವಿಶ್ವಾಸದ ಬಲದಿಂದ ಅದನ್ನು ಗೆಲ್ಲಬಹುದೆನ್ನುವುದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಔಷಧಿ ಉಪಚಾರದಲ್ಲೂ ಹಿಂದಿನ ಪರಿಸ್ಥಿತಿ ಬದಲಾಗಿದೆ, ಕ್ಯಾನ್ಸರ್ ರೋಗಿಗಳಿಗೆ ಧೈರ್ಯತುಂಬಿದ ನಿಮ್ಮ ಮಾರ್ಗದರ್ಶನ ಇತರರಿಗೂ ಸಿಗುವಂತಾಗಲಿ.
Raghuveer JE
Jan 25, 2023ಕಾಯಿಲೆಗಳು ಹಿಂದಿನ ಜನ್ಮದ ಕರ್ಮದಫಲ ಎಂದು ಮಾತಾಡಿಕೊಳ್ಳುವುದರಿಂದ ಕಾಯಿಲೆ ಬಿದ್ದವರು ಮತ್ತಷ್ಟು ಒಳಗೊಳಗೇ ಕುಸಿಯುತ್ತಾರೆ. ಇಂತಹ ಭಯಾನಕ ಜನರಿಂದ ದೂರವಿರುವುದೇ ಒಳಿತು.
Shanmukhappa Goravi
Jan 25, 2023ಜೀವನದಲ್ಲಿ ಎಲ್ಲಾ ಇದ್ದೂ ಖಿನ್ನತೆಗೆ ಒಳಗಾಗುವವರು ಹೆಚ್ಚುತ್ತಿದ್ದಾರೆ ಗುರುಗಳೇ, ಇಂಥವರಿಗೆ ನಿಮ್ಮ ಅನುಭವಾಮೃತದ ಹಿತನುಡಿಗಳು ಬೇಕೇ ಬೇಕು. ಖಿನ್ನತೆಯ ಕಾಯಿಲೆಗೆ ಆತ್ಮಸ್ಥೈರ್ಯ ತುಂಬುವುದು ಸುಲಭವಲ್ಲಾ. ಪ್ರತಿಯೊಂದು ಮನೆಯಲ್ಲೂ ಡಿಪ್ರೆಶನ್ನಿಂದ ನರಳುವವರು ಇದ್ದಾರೆ. ಅವರನ್ನು ಯಾವ ಔಷಧಿಯೂ ಗುಣಪಡಿಸುವುದು ಸುಲಭವಾಗಿಲ್ಲಾ. ಜೊತೆಗೆ ಏನೇನೋ ಚಟಗಳ ದಾಸರಾದರಂತೂ ಅವರನ್ನು ರಕ್ಷಿಸಲಿಕ್ಕೆ ನಿಮ್ಹಾನ್ಸ ಅಂತ ಮಾನಸಿಕ ಕೇಂದ್ರಗಳೇ ಗತಿ.
Ganesh ganiger
Jan 30, 2023Very good article, it lifts the mood and promotes us to think positively
ಧನಂಜಯ ಧಾರವಾಡ
Jan 30, 2023ಸಾವು ಹುಟ್ಟಿದ ಮನುಷ್ಯನಿಗೆ ಕಟ್ಟಿಟ್ಟ ಬುತ್ತಿ, ಕಾಯಿಲೆ ಅಥವಾ ಅಪಘಾತ ಅಥವಾ ಆಯುಸ್ಸು ಮುಗಿದು ಇಲ್ಲಿಂದ ಹೋಗುವ ದಿನ ಬಂದೇ ಬರುತ್ತದೆ, ಅಲ್ಲಿ ತನಕ ಎಲ್ಲ ಎದುರಿಸುವ ನಗು ನಗುತ್ತಾ… ಅದೇ ನಿಜವಾದ ಬದುಕು….
m. p. ಮಲ್ಲಿಕಾರ್ಜುನ
Jan 30, 2023ಶರಣರ ನುಡಿಗಳು ಜೀವನ ನಡೆಸಲು ಬೇಕಾದ ಧೈರ್ಯ ಕೊಡುತ್ತವೆ… ಸರಿಯಾದ ದಾರಿಯಲ್ಲಿ ಹೋಗಲು ಬೆಳಕು ಕೊಡುತ್ತವೆ. ಉತ್ಕೃಷ್ಟ ಬರಹ.
ಶಿವಕುಮಾರ ಬಂಡೋಳಿ
Feb 10, 2023ಸಾವು ಹೇಳಿ ಕೇಳಿ ಬರುವಂಥದ್ದಲ್ಲ.ಯಾವಾಗ ಬಂದರೂ ಸ್ವೀಕರಿಸಲು ನಾವು ಸಿದ್ಧರಿರಬೇಕು.ಸಾವೆಂಬ ಬಸ್ಸಿನಲ್ಲಿ ಹೊರಡಲು ಸೀಟನ್ನು ಕಾಯ್ದಿರಿಸಬೇಕು.ದೇವರನ್ನೇ ನಂಬದ ಭಗತ್ ಸಿಂಗ್ ಸಾವಿಗೆ ಕಿಂಚಿತ್ತೂ ಹೆದರಲಿಲ್ಲ.ವರ್ಷದ ಹಿಂದೆ ನಾನು ಕೊರೊನಾಪೀಡಿತನಾಗಿ ಸಾವಿನ ಬಾಗಿಲಿಗೆ ಹೋಗಿದ್ದೆ.ನನಗೆ ಆಪ್ತರಾದ ಹಿರಿಯರೊಬ್ಬರು ನನಗೆ ಫೋನ್ ಮಾಡಿ ಧೈರ್ಯ ಕಳೆದುಕೊಳ್ಳದಿರಲು ತಿಳಿಸಿದರು.ಆಗ ನನಗನಿಸಿದ್ದು-ಧೈರ್ಯ ಇದ್ದರೇನು ಇರದಿದ್ದರೇನು ಶಿವನ ಕರೆಗೆ ‘ಓ’ಗೊಡಲೇಬೇಕಾದುದು ಅನಿವಾರ್ಯ.ಜಗತ್ತಿಗೆ ನಾವು ಅನಿವಾರ್ಯವಲ್ಲವಾದ್ದ ಯಾವುದೇ ಕ್ಷಣದ ಸಾವಿಗೆ ನಾವು ಸಿದ್ಧರಿರಬೇಕು.ಸಾವು ಕೆಟ್ಟದ್ದಲ್ಲ.”ಮರಣವೇ ಮಹಾನವಮಿ”.ಯಾವುದೇ ಕ್ಷಣದಲ್ಲಿ ಬಂದೆರಗಬಹುದಾದ ಸಾವು ಬರುವ ಮುಂಚೆ ನಾಳೆಯೇ ಸಾಯುತ್ತೇನೆ ಎಂದು ತಿಳಿದು ಸಾರ್ಥಕ ಜೀವನ ಸಾಗಿಸಬೇಕು.ಹಿರಿಯರು ಹೇಳಿದಂತೆ ಹುಟ್ಟಿದ ಮಗುವಿನ ಮೊದಲ ಹೆಜ್ಜೆ ಸಾವಿನ ಕಡೆಗೆ ಇರುತ್ತದೆ.ಈ ಕುರಿತು ಬರೆದ ಶ್ರೀಗಳ ಚಿಂತನೆ ಮನನೀಯ.