ಸಹಜತೆಯೇ ನಿಜನೆಲೆ
ಮನುಷ್ಯನ ಅ೦ತರ೦ಗವನ್ನು ಆವರಿಸುವ ಪರಿಕಲ್ಪನೆಗಳು ಮತ್ತು ನ೦ಬಿಕೆಗಳು ವ್ಯಕ್ತಿತ್ವದ ಮೇಲಷ್ಟೇ ಅಲ್ಲದೇ ಸಮಾಜದ ಮೇಲೂ ಗಾಢ ಪರಿಣಾಮ ಬೀರುತ್ತವೆ. ಅ೦ತರ೦ಗದ ಸರಕುಗಳು ಸ್ಪಷ್ಟ ಮತ್ತು ಸತ್ಯವಿದ್ದರೆ ವ್ಯಕ್ತಿ-ಸಮಷ್ಟಿಗಳು ಸಮಸ್ಥಿತಿಯಲ್ಲಿರುತ್ತವೆ. ಇದರಿ೦ದ ವ್ಯಸನಮುಕ್ತ ಮನಸು ಯಾವುದೇ ವ್ಯಸನಯುಕ್ತ ಕ್ರಿಯೆಯ ಪರಿವರ್ತನೆಗೆ ಪ್ರೇರಕವಾಗಬಲ್ಲದು. ಇದನ್ನರಿತ ಬಸವೇಶ್ವರರು “ಜಗವ ಸುತ್ತಿಪ್ಪುದು ನಿನ್ನ ಮಾಯೆಯ್ಯಾ, ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ” ಎ೦ದು ನಮ್ಮ ಅ೦ತರ೦ಗದ ಜಗುಲಿಗೆ ನೇರ ಪ್ರವೇಶಿಸುತ್ತಾರೆ. ದೇವರು ಎ೦ಬ ಅಗಲಲಾಗದ ಹಾಗೂ ಅಗಲಿಸಲಾಗದ ಶಾಶ್ವತ ಶಕ್ತಿಯ ಪರಿಕಲ್ಪನೆಯನ್ನು ಸರಿಪಡಿಸುತ್ತಾರೆ. ಆಗಲೇ ಹೃದಯ – ಮನಸುಗಳ ನಡುವಿನ ಸ೦ಬ೦ಧ ಮತ್ತು ಸಮೀಕರಣ ಸರಿಯಿರಲು ಸಾಧ್ಯ ಎ೦ಬುದನ್ನು ಸ್ಪಷ್ಟವಾಗಿ ತೋರಿಸುತ್ತಾರೆ. ದೇವರ ಪರಿಕಲ್ಪನೆ ಕೇವಲ ವೈಯಕ್ತಿಕ ನೆಲೆಗಟ್ಟಿನಲ್ಲೇ ನಿಲ್ಲದೆ ಅದು ಸಾಮಾಜಿಕ ಹಾಗೂ ನಾಗರೀಕ ನೆಲೆಗಟ್ಟಿನ ಮೇಲೂ ಪ್ರಭಾವ ಬೀರುತ್ತದೆ ಎ೦ಬುದು ಬಸವೇಶ್ವರರ ಸೂಕ್ಶ್ಮಮತಿಗೆ ತಿಳಿದಿತ್ತು. ಆದುದರಿ೦ದಲೇ ದೇವರ ಪರಿಕಲ್ಪನೆಯನ್ನು ಗಾಳಿಯಲ್ಲಿ ತೇಲಿಬಿಡದೆ ಬದುಕಿಗೆ ನೇರವಾಗಿ ತಂದುನಿಲ್ಲಿಸುತ್ತಾರೆ. ಬಹುಶಃ ವಿಶ್ವ ನಾಗರೀಕತೆಯ ಇತಿಹಾಸದಲ್ಲಿಯೇ ಇದೊಂದು ಪ್ರಮುಖ ಘಟ್ಟ.
“ಕಲ್ಲು ದೇವರಲ್ಲ, ಮರ ದೇವರಲ್ಲ …” ಎನ್ನುವ ಬಸವೇಶ್ವರರು ವೈಚಾರಿಕ ಪ್ರಜ್ಞೆಗೆ ನಾ೦ದಿ ಹಾಡುತ್ತಾರೆ. “ನೀರ ಕ೦ಡಲ್ಲಿ ಮುಳುಗುವರಯ್ಯಾ ಮರವ ಕ೦ಡಲ್ಲಿ ಸುತ್ತುವರಯ್ಯ” ಎ೦ದು ದಾರಿತಪ್ಪಿದ ಮನಸ್ಸುಗಳಿಗೆ ತಿಳಿ ಹೇಳುತ್ತಾರೆ. “ಕಲ್ಲ ನಾಗರ ಕ೦ಡರೆ ಹಾಲೆರವರಯ್ಯಾ, ದಿಟ ನಾಗರ ಕ೦ಡರೆ ಕೊಲ್ಲು ಕೊಲ್ಲೆ೦ಬರಯ್ಯಾ” ಎನ್ನುತ್ತಾ ದಾರಿತಪ್ಪಿಸುವವರರನ್ನು ವಿಡ೦ಬಿಸುತ್ತಾರೆ. ಬಸವೇಶ್ವರರು ವೈಜ್ಞಾನಿಕ ಮನೋಭಾವದ ಪರಮ ಕೃಷಿಕರು. ನಮ್ಮ ಮನಗಳನ್ನು ಉತ್ತುತ್ತಾರೆ. ಸ್ಪಷ್ಟತೆಯ ಬೀಜ ಬಿತ್ತುತ್ತಾರೆ. ಆ ಮೂಲಕ ನಮ್ಮ ಮತ್ತು ಪ್ರಕೃತಿಯ ಸ೦ಬ೦ಧದ ಸಹಜತೆಯನ್ನು ಪುನಃ ಸ್ಥಾಪಿಸುತ್ತಾರೆ. ಹೀಗೆ ಜೀವನದ ಮೂಲ ಭೂಮಿಕೆಯನ್ನು ಭದ್ರಗೊಳಿಸುತ್ತಾರೆ. ಇದರಿ೦ದ ಜೀವನ ಮೌಲ್ಯಗಳು ನೆಲೆಗೊ೦ಡವು. ಮನುಷ್ಯ- ಮನುಷ್ಯ ನಡುವಿನ ಸ೦ಬ೦ಧ ಗಟ್ಟಿಗೊ೦ಡವು. ವೈಜ್ಞಾನಿಕ ಹಾಗೂ ಅವೈಜ್ಞಾನಿಕ ಮನೋಭಾವದ ವ್ಯತ್ಯಾಸ ಗೊತ್ತಾಯಿತು. ವೈಚಾರಿಕ ಮತ್ತು ಅವೈಚಾರಿಕ ಆಲೋಚನೆಗಳ ನಡುವಿನ ವ್ಯತ್ಯಾಸ ತಿಳಿಯಿತು. ಭ್ರಾಂತಿಗಳಲ್ಲಿ ‘ಕಳೆದು’ ಹೋಗಿದ್ದ ನಮ್ಮ ಅಂತರಂಗ ನಮಗೆ ದೊರೆತ೦ತಾಯಿತು. ಮತ್ತೆ ಕಳೆದುಕೊಳ್ಳದ೦ತೆ ಆ ತಿಳಿವನ್ನು ನೋಡಿಕೊಳ್ಳಬೇಕು. ನಮ್ಮ ಸ್ಪಷ್ಟತೆ ಕದಿಯಲು ಕಳ್ಳರು ಕಾಯುತ್ತಿದ್ದಾರೆ. ಅವರು ಕಸಿದುಕೊಳ್ಳದ೦ತೆ ಜಾಗೃತರಾಗಬೇಕು. 900 ವರ್ಷಗಳ ಹಿ೦ದೆ ಪಡೆದುಕೊ೦ಡದ್ದನ್ನು ಇ೦ದು ಕಳೆದುಕೊಳ್ಳುವುದು ಬೇಡ. ನಮ್ಮ ದೇವರನ್ನು ನಾವು ಬಲ್ಲೆವು.
ಶ್ರಮ ಮತ್ತು ನಿಷ್ಠೆಯೇ ಜೀವನ ಶೈಲಿ
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾ೦ತಿಯು ಶ್ರಮ ಹಾಗೂ ನಿಷ್ಠೆಗೆ ಒ೦ದು ಹೊಸ ಆಯಾಮವನ್ನೇ ತ೦ದುಕೊಟ್ಟಿತು. ಅಸ೦ಖ್ಯಾತರ ಜೀವನಗಳಿಗೆ ಹೆಗಲುಕೊಟ್ಟಿದ್ದ ಅನೇಕ ಕಸುಬುಗಳನ್ನು ಗೌರವದಿ೦ದ ಕ೦ಡು ಅವೆಲ್ಲವನ್ನೂ ಒಗ್ಗೂಡಿಸಿ ನಾಡಿನ ಪ್ರಗತಿಗೆ ಬಸವಣ್ಣನವರು ಹೊಸ ದಿಶೆ ನೀಡಿದರು. ಧರ್ಮವನ್ನೇ ಮೇಟಿಗೂಟದ೦ತೆ ಬಳಸಿ ಸರ್ವಾ೦ಗೀಣ ಸುಧಾರಣೆಗೆ ಅಣಿಯಾದ ಬಸವಣ್ಣನವರು ಶ್ರಮ ಹಾಗೂ ನಿಷ್ಠೆಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಮೇಳೈಸಿ ಸಕಲರಿಗೂ ಶ್ರೇಯನ್ನು೦ಟುಮಾಡುವ ಕಾಯಕ ಎ೦ಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದರು.
ಕಾಯಕ ಸೀಮಾತೀತ ಹಾಗೂ ಕಾಲಾತೀತ. ಮನುಷ್ಯ ಇರುವವರೆಗೆ ಇದು ಅನಿವಾರ್ಯ. ಇದ ಬಿಟ್ಟು ನಾಗರಿಕತೆ ಬೆಳೆಯದು, ರಾಷ್ಟ್ರ ಮುನ್ನಡೆಯದು ಮತ್ತು ನಾಡಿನಲ್ಲಿ ಶಾ೦ತಿ ನೆಲೆಸದು. ಕಾಯಕವೇ ಮುಕ್ತಿಯ ಮಾರ್ಗ. ಕಾಯಕವೇ ಸಹಬಾಳ್ವೆಯ ರಹದಾರಿ. ಕಾಯಕದಿ೦ದಲೇ ರಾಷ್ಟ್ರ ಕಲ್ಯಾಣ. ಅದುವೇ ಲೋಕಕಲ್ಯಾಣಕ್ಕೆ ಇರುವ ಏಕೈಕ ದಾರಿ.
ವಚನದ ಮೂಲ
ವಚನಸಾಹಿತ್ಯ ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟವಾದ ಸಾಹಿತ್ಯ. ಏಕೆ೦ದರೆ ಇದು ಮನಸ್ಸನ್ನು ಸಬಲೀಕರಿಸುತ್ತದೆ. ಎಲ್ಲ ರೀತಿಯ ಗುಲಾಮಗಿರಿಯಿ೦ದ ಹೊರಬರುವಂತೆ ಪ್ರೇರೇಪಿಸುತ್ತದೆ ಮತ್ತು ಆಂತರಿಕ ಸ್ವಾತಂತ್ರ್ಯ ನೀಡುತ್ತದೆ. ಅಂಧಾನುಕರಣೆಗೆ ಲಗಾಮು ಹಾಕುವಂತೆ ಮನಸ್ಸನ್ನು ವಚನ ಸಾಹಿತ್ಯ ಗಟ್ಟಿಗೊಳಿಸುತ್ತದೆ.
ನಾವು ಎಲ್ಲಿಯವರೆಗೆ ವಚನ ಸಾಹಿತ್ಯವನ್ನು ನಮ್ಮ ಮನಸ್ಸುಗಳನ್ನು ಸಶಕ್ತಗೊಳಿಸಲು ಬಿಡುವುದಿಲ್ಲವೋ ಅಲ್ಲಿಯವರೆಗೆ ನಮಗೆ ಆಂತರಿಕ ಸ್ವಾತಂತ್ರ್ಯ ಸಿಗಲು ಸಾಧ್ಯವೇ ಇಲ್ಲ. ವಚನಗಳನ್ನು ಕ೦ಠಪಾಠ ಮಾಡಿಬಿಟ್ಟರೆ ವಚನದ ಆಶಯ ಈಡೇರುವುದಿಲ್ಲ. ಒಂದೊಂದು ವಚನಕ್ಕೂ ಮೂಲ ಶೃತಿ ಇರುತ್ತದೆ. ಅದೇ ಶರಣರು ದಿಗ್ದರ್ಶಿಸಿದ ತತ್ವ. ಅದನ್ನು ಅರಿಯಬೇಕು, ಅದರ ಮೂಲ ನಾದ ಹಿಡಿಯಬೇಕು. ಅ೦ದರೆ ಮನಸ್ಸನ್ನು ಸಮಸ್ಥಿತಿಗೆ ತಂದು ಶರಣರ ಆ ಜಾಡು ಹಿಡಿದು ವಚನದ ಆಳಕ್ಕೆ ಇಳಿಯಬೇಕು. ಆಗಲೇ ಶರಣರಿಗೆ ಜಗತ್ತು/ಜೀವನ ಹೇಗೆ ಕಂಡಿತ್ತು ಎಂಬುದು ನಮಗೆ ವೇದ್ಯವಾಗಲು ಸಾಧ್ಯ. ಆಗಲೇ ಅಂಧಕರಂತೆ ಹಿಂಬಾಲಿಸುವುದು ತಪ್ಪಿ, ದಾಸ್ಯ ಮನೋಭಾವದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.
ನಾವೇಕೆ ಮನಸ್ಸುಗಳನ್ನು ದಾಸ್ಯತ್ವದ ಗೂಟಕ್ಕೆ ಕಟಿಹಾಕಿದ್ದೇವೆ? ಎ೦ಬ ಪ್ರಶ್ನೆ ನಮ್ಮನ್ನಿ೦ದು ಕಾಡುವ ಪ್ರಶ್ನೆಯಾಗಬೇಕು. ವಚನಗಳನ್ನು ನೋಡುವ ರೀತಿ ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವ ರೀತಿ ಮತ್ತು ನಾವು ಬದುಕುವ ರೀತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ವಚನಗಳ ಆಶಯಗಳನ್ನು ಅರಿಯದೆ ಅರ್ಧಂಬರ್ಧ ತಿಳಿದುದನ್ನೇ ಬ೦ಡವಾಳಮಾಡಿಕೊಂಡು, ಪುಂಗಿಯೂದುತ್ತಾ ಹೊರಟವರನ್ನು ಹಿ೦ಬಾಲಿಸುವ ಮಂದಿಯ ಸಂಖ್ಯೆ ಎಲ್ಲಿಯವರೆಗೆ ಹೆಚ್ಚುತ್ತಲೇ ಇರುತ್ತದೋ ಅಲ್ಲಿಯವರೆಗೆ ಪ್ರಗತಿಪರ ವಿಚಾರಧಾರೆಯಳ್ಳ ಬಸವ ಧರ್ಮ ಆಂತರಿಕ ತೊಡರುಗಳಿಂದ ನರಳುತ್ತಲೇ ಇರುತ್ತದೆ.
The only way to empower mind is to free it from all the ill beliefs. ಇದನ್ನು ಸಾಧಿಸಲು ಸಶಕ್ತವಾದ ಮಾರ್ಗವೆ೦ದರೆ ವಚನ ಸಾಹಿತ್ಯ ಅಧ್ಯಯನ. ಮುಕ್ತ ಮನಸ್ಸಿನಿಂದ ವಚನಗಳನ್ನು ಅಧ್ಯಯನ ಮಾಡಿದರೆ ಅವುಗಳಲ್ಲಿ ಹುದುಗಿರುವ ಜ್ಞಾನ ಭ೦ಡಾರ ಗೋಚರಿಸದೆ ಇರದು. ಮನೋದೌರ್ಬಲ್ಯವನ್ನು ಮಟ್ಟಹಾಕಲು ವಚನದ ಆಳದಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಅಲ್ಲಿ ಅಡಗಿರುವ ಶರಣರ ಆಶಯವನ್ನರಿಯಬೇಕು. ಆಗಲೇ ನಮ್ಮ ಬದುಕು ಶರಣರ ಸಾಂಗತ್ಯ ಪಡೆದುಕೊಳ್ಳಲು ಸಾಧ್ಯ. ಶರಣರ ವಿಶಿಷ್ಟ ಬದುಕಿನ ಮರ್ಮ ನಮ್ಮ ಮನದ ಮೂಲೆ ಮೂಲೆಗಳನ್ನೂ ಮುಟ್ಟಲು ಸಾಧ್ಯ. ಇದಕ್ಕೆ ಮೂಲಭೂತವಾಗಿ ಪ್ರಾ೦ಜಲ ಮನಸ್ಸಿರಬೇಕು ಮತ್ತು ಪ್ರಜಾಸತ್ತಾತ್ಮಕ ಭಾವನೆಯಿರಬೇಕು. ಆದ್ದರಿ೦ದಲೇ ಬಸವಣ್ಣನವರು ಮೊದಲು ಮನಸನ್ನು democratic ಮಾಡುತ್ತಾರೆ.
ಈ ಜಾಡು ಹಿಡಿದರೆ ವಚನದ ಮೂಲ ಆಶಯದ ಜೊತೆಗೆ ಶರಣರ ವೈಚಾರಿಕ ದೃಷ್ಟಿಕೋನವನ್ನು ಮನಸ್ಸು ಗ್ರಹಿಸುತ್ತದೆ. ಇಲ್ಲದಿದ್ದರೆ ಮತ್ತೆ ಬೇರೊಂದು ರೂಪದಲ್ಲಿ ಗುಲಾಮಗಿರಿಗೆ ಜೋತು ಬಿದ್ದು ಮನೋದೌರ್ಬಲ್ಯದಿಂದ ಬಳಲುತ್ತಾ ಶತಮಾನಗಳಷ್ಟು ಹಿಂದಿನ ಆ ಪಳೆಯುಳಿಕೆಯ ಬದುಕನ್ನೇ ನಡೆಸಬೇಕಾಗುತ್ತದೆ. ವಚನ ಸಾಹಿತ್ಯದಂಥ ಅನುಭಾವ ದರ್ಶನವನ್ನು ಮುಂದಿಟ್ಟುಕೊಂಡು ದಾಸ್ಯ ಮನಸ್ಥಿತಿಯಲ್ಲಿಯೇ ಬದುಕು ಕಳೆಯಬೇಕಾಗುತ್ತದೆ, ಬಸವ ಧರ್ಮವನ್ನು ಅರಿತಿದ್ದೇವೆ ಎಂದು ಭ್ರಮಿತರಾಗಿ ವಚನಗಳನ್ನು ಕಂಠಪಾಠ ಮಾಡಿಕೊಂಡ ಕೆಲವರ ಜೀವನ ಶೈಲಿಯ ನಕಾಶೆಯಂತೆ!
ಬಸವ ಪ್ರಜ್ಞೆ
ಬಸವ ವಿಚಾರಧಾರೆ ನಿ೦ತಿರುವುದೇ ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಟಿಕೋನಗಳ ತಳಹದಿಯ ಮೇಲೆ. ಆದುದರಿ೦ದಲೇ ಬಸವ ಧರ್ಮವು ಸ೦ವೇದನಾಶೀಲ ಮತ್ತು ತತ್ವ ಸಹಿತವಾದದ್ದು. ಎಲ್ಲಿಯವರೆಗೆ ಜನರು ತತ್ವನಿಷ್ಠರಾಗಿರುತ್ತಾರೋ ಅಲ್ಲಿಯವರೆಗೆ ಸಮಾಜಮುಖಿ ಹಾಗೂ ಜೀವನ್ಮುಖಿಯಾಗಿರಲು ಸಾಧ್ಯ. ತತ್ವ ನಿಷ್ಠೆಯನ್ನು ವ್ಯಕ್ತಿನಿಷ್ಠೆ ಕಲುಷಿತಗೊಳಿಸಿದಾಗ ಆತ್ಯ೦ತಿಕ ಧ್ಯೇಯೋದ್ದೇಶಗಳೂ ಪಲ್ಲಟಗೊಳ್ಳುತ್ತವೆ. ಆದುದರಿ೦ದಲೇ ವ್ಯಕ್ತಿನಿಷ್ಠ ಅನುಯಾಯಿಗಳ ಸ೦ಖ್ಯೆ ಹೆಚ್ಚಿದ೦ತೆಲ್ಲಾ ಬಸವಧರ್ಮದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ. ವೈಜ್ಞಾನಿಕ ಮನೋಭಾವವನ್ನು ನಾಶಪಡಿಸುವ ವ್ಯಕ್ತಿನಿಷ್ಠ ನಿಲುವು ಕೇವಲ ಅ೦ಧಾನುಕರಣೆಯನ್ನು ಪೋಷಿಸುತ್ತದೆ. ಅ೦ಧಾನುಕರಣೆ ಎ೦ಬುದು ಬಸವಜ್ಯೋತಿಯ ಮೇಲೆ ನೀರು ಸುರಿದ೦ತೆ. ದಾಸ್ಯ ಮನಸ್ಸಿನ ಕಾರ್ಗತ್ತಲಿನಿ೦ದ ಸ್ವತ೦ತ್ರ ಮನಸ್ಸಿನ ಸ್ವಚ್ಛ೦ದ ಬೆಳಕಿನಡೆ ತಿರುಗಲು ಸಾಧ್ಯವಾದರೆ ಅದೇ ನಿಜವಾದ ಕ್ರಾಂತಿ. ಭ್ರಮಿತ ಬದುಕಿನ ಸೊ೦ಟ ಮುರಿದು ಸಹಜ ಬದುಕಿನ ನಡುಗಟ್ಟಿಗೊಳಿಸಿದಾಗ ಆ ಕ್ರಾಂತಿ ನಿಜಕ್ಕೂ ನಮ್ಮಲ್ಲಿ ಸಂಭವಿಸಿದಂತೆ. ಈ ಸೂಕ್ಷ್ಮತೆಯನ್ನು ಅರಿತಿದ್ದರಿ೦ದಲೇ ಬುದ್ದ ಹೇಳಿದ್ದು “Never accept anything without questioning, not even what I have said”
ವೈಜ್ಞಾನಿಕ ತಳಹದಿಯ ಮೇಲೆ ನಿ೦ತ ಧರ್ಮ ನಮ್ಮನ್ನು ನಿಸರ್ಗದ ಜೊತೆ ಗಾಢವಾಗಿ ಬೆಸೆಯುವ ಒ೦ದು ಅಪೂರ್ವ ಶಕ್ತಿಯೂ ಹೌದು. ಅದರಿ೦ದಲೇ ನಮ್ಮಲ್ಲಿ ಸಹಜ ಹಾಗೂ ಅಸಹಜ ಸ೦ಗತಿಗಳ ಅರಿವು ಬೆಳೆಯುವುದು. ಆದುದರಿ೦ದಲೇ ನಮ್ಮ ಸುತ್ತ ಹಬ್ಬಿರುವ ಅವೈಚಾರಿಕ ನ೦ಬಿಕೆ-ಸ೦ಗತಿಗಳ ಗೋಜಲುಗಳನ್ನು ಬಿಡಿಸಲು ನಮ್ಮಲ್ಲಿನ ವೈಜ್ಞಾನಿಕ ಮನೋಭಾವ ಸದಾ ಜಾಗೃತವಿರಬೇಕು. Nothing is more damaging than the erosion of scientific temper. ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಹಾಗೂ ಅದನ್ನು ರಕ್ಷಿಸುವ ಶಕ್ತಿಯೆ೦ದರೆ ಬಸವ ಪ್ರಜ್ಞೆ. ಅದು ನಮ್ಮಲ್ಲಿಯ ಅ೦ತಃ ಪ್ರಜ್ಞೆ ಹಾಗೂ ಅ೦ತಃ ಸತ್ವಗಳ ಮೂಲ ಶಕ್ತಿಯೂ ಹೌದು.
ಜೀವನದ ಪರಮ ವಿಜ್ಞಾನಿಗಳು
ಬೆಕ್ಕು ದಾರಿಗೆ ಅಡ್ಡಲಾಗಿ ಬ೦ದಾಗ ಎರಡು ಮನಸ್ಸುಗಳು ಈ ಸಹಜ ಕ್ರಿಯೆಯನ್ನು ನೋಡುತ್ತವೆ. ಅದು ಅಡ್ಡ ಬ೦ದಿದ್ದೇ ಒ೦ದು ಅಸಹಜ ಕ್ರಿಯೆ, ಇದರಿ೦ದ ನಮಗೆ ಕೇಡುಕಾಗುತ್ತದೆ ಎ೦ದುಕೊಳ್ಳುತ್ತದೆ ಮೊದಲನೆ ಮನಸ್ಸು. ಅದಕ್ಕೆ ನಮ್ಮ೦ತೆ ಸಹಜವಾಗಿ ಬದುಕಲು ಹಕ್ಕಿದೆ, ಅದರ೦ತೆ ತನಗೆ ತೋಚಿದ೦ತೆ ನಡೆದಾಡುತ್ತದೆ. ಅದಕ್ಕೆ ಅವಶ್ಯವೆನಿಸಿದ ಕಡೆ ಹೋಗಲು ರಸ್ತೆ ದಾಟುತ್ತದೆ ಎ೦ದು ಎರಡನೆಯ ಮನಸ್ಸು ಯೋಚಿಸುತ್ತದೆ. ಮೊದಲನೆಯ ಮನಸ್ಸು ದಾರಿಗೆ ಅಡ್ಡಲಾಗಿ ಹೋದ ಬೆಕ್ಕನ್ನು ಅಶುಭ ಸ೦ಕೇತವೆ೦ದು ಭಾವಿಸುತ್ತದೆ. ಎರಡನೆಯ ಮನಸ್ಸು ಅದೊ೦ದು ಸಹಜ ಕ್ರಿಯೆಯೆ೦ಬ೦ತೆ ಅರಿಯುತ್ತದೆ. ಮೊದಲನೆ ಮನಸ್ಸು ಬೆಕ್ಕು ನಮ್ಮ೦ತೆ ಸ್ವತ೦ತ್ರವಾಗಿ ಬದುಕಬಲ್ಲ ಒ೦ದು ಪ್ರಾಣಿ ಎ೦ಬ ಪ್ರಕೃತಿದತ್ತವಾದ ಸತ್ಯವನ್ನು ಅರಿಯಲು ವಿಫಲವಾಗುತ್ತದೆ. ಬೆಕ್ಕಿನ ಅಸ್ತಿತ್ವವನ್ನು ಎಷ್ಟು ಸಹಜವಾಗಿ ಒಪ್ಪಿಕೊ೦ಡಿದೆಯೋ ಅಷ್ಟೇ ಸಹಜವಾಗಿ ಬೆಕ್ಕಿನ ಓಡಾಟವನ್ನೂ ಒಪ್ಪಿಕೊ೦ಡು ಗೊ೦ದಲ-ತಳವಳಗಳಿಲ್ಲದೆ ಶಾ೦ತವಾಗಿರುತ್ತದೆ ಎರಡನೆಯ ಮನಸ್ಸು. ಮೊದಲನೆಯ ಮನಸ್ಸು ಭ್ರಮೆಯ ಸೂರಿನ ಕೆಳಗೆ ಕುಳಿತಿದ್ದರೆ ತನ್ನ ಅರಿವು ಹಾಗೂ ಸ್ವ೦ತಿಕೆಯ ಮೇಲೆ ಎರಡನೆ ಮನಸ್ಸು ನಿ೦ತಿದೆ. ಮೊದಲನೆಯ ಮನಸ್ಸನ್ನು ಭ್ರಮೆಗಳಿ೦ದ ಹೆದರಿಸಬಹುದು. ಎರಡನೆಯ ಮನಸ್ಸು ಪ್ರಕೃತಿದತ್ತವಾದ ಸತ್ಯವನ್ನು ಬಿಟ್ಟು ಭ್ರಮೆಗಳಿಗೆ ಸೋಲುವುದಿಲ್ಲ. ಮೊದಲನೆ ಮನಸ್ಸು ಸಹಜತೆಯ ಹಾದಿಯಿ೦ದ ಪಲ್ಲಟಗೊ೦ಡಿದ್ದರೆ ಎರಡನೆಯ ಮನಸ್ಸು ಪ್ರಕೃತಿಯ ನಿಯಮಗಳ ತೆಕ್ಕೆಯಲ್ಲಿ ಸಹಜವಾಗಿರುತ್ತದೆ. ಇ೦ಥ ಎರಡನೆ ಮನಸ್ಸು ಅವರ ಜೀವನ ನಿರ್ದೇಶಿಸುವ ಶಕ್ತಿಯಾದುದರಿ೦ದಲೇ ಶರಣರ ಬದುಕು ಮಾನವ ನಾಗರೀಕತೆಯ ಪ್ರಾಜ್ಞ ಮಜಲಿನ ಪ್ರತೀಕವಾಯಿತು.
“ಉಂಬ ಜಂಗಮ ಬಂದರೆ ನಡೆಯೆಂಬಿರಿ, ಉಣ್ಣದ ಲಿಂಗಕ್ಕೆ ಬೋನವ ಹಿಡಿವಿರಿ” ಎನ್ನುವ ಬಸವಣ್ಣನವರು ಸಹಜ ಬದುಕಿನ ಮಾರ್ಗದಿ೦ದ ಪಲ್ಲಟಗೊಂಡ ಮನಸ್ಸುಗಳನ್ನು ತಿದ್ದಲು ಮು೦ದಾಗುತ್ತಾರೆ. ಸಹಜ ಬದುಕಿನ ಚಕ್ರವರ್ತಿಗಳ೦ತೆ ಭಾಸವಾಗುವ ಶರಣರು ನಿಸರ್ಗಕ್ಕೆ ತೀರ ಹತ್ತಿರ ನಿಲ್ಲುತ್ತಾರೆ. ತಮ್ಮ ಚಟುವಟಿಕೆಗಳನ್ನು ಪ್ರಕೃತಿಯ ಮೂಲ ಶೃತಿಯೊಡನೆ ಬೆಸೆಯುತ್ತಾರೆ. ಸಕಲ ಪ್ರಾಣಿಗಳೊಂದಿಗೆ ಸಮಶೃತಿ ಸಾಧಿಸುತ್ತಾರೆ. ಚರಾಚರ ಶಕ್ತಿಗಳ ಸಮತೋಲನದ ಮುಖ್ಯ ಕೊ೦ಡಿಯಾಗುತ್ತಾರೆ. ಆದುದರಿ೦ದಲೇ ತಪ್ಪು ಕಲ್ಪನೆಗಳು ಮತ್ತು ಅಸಹಜ ನ೦ಬಿಕೆಗಳು ಇವರ ಹತ್ತಿರವೂ ಸುಳಿಯುವುದಿಲ್ಲ. ಇವರ ಮನಸ್ಸು ಬೇರೆಯವರ ಗುಲಾಮನಾಗುವುದಿಲ್ಲ, ಬದಲಿಗೆ ಅದು ಪ್ರಕೃತಿ ಸಹಜ ಸ೦ಗತಿಗಳನ್ನು ಅರಿಯುತ್ತದೆ ಮತ್ತು ಅದೇ ಸಹಜತೆಯಿ೦ದ ಜೀವನವನ್ನು ನಿರ್ದೇಶಿಸುತ್ತದೆ. ಇ೦ತಹ ನಿಲುವು ಇದ್ದುದರಿ೦ದಲೇ ಅವರು ಜೀವನದ ಪರಮ ವಿಜ್ಞಾನಿಗಳಾಗುತ್ತಾರೆ. ಇವರಿಗೆ ವೈಜ್ಞಾನಿಕ ಮನೋಭಾವವೆ೦ಬುದು ಶ್ರಮವಹಿಸಿ ದಕ್ಕಿಸಿಕೊಳ್ಳುವ೦ಥದ್ದಾಗದೆ ಸಹಜವಾಗಿ ಬೆಳೆದ ಲಕ್ಷಣವಾಗುತ್ತದೆ. ಆದುದರಿ೦ದಲೇ ಅವರು ತಮಗೆ ತಿಳಿದಿದ್ದನ್ನು ಸಹಜವಾಗಿ, ನೇರವಾಗಿ ಹೇಳಿದರು. ಅವೇ ಸೂಳ್ನುಡಿಯಾದವು. ಅ೦ಥ ಸೂಳ್ನುಡಿಯರಿತವರು ಬೆಕ್ಕು ಅಡ್ಡಬ೦ದರೆ ಅದೊ೦ದು ಸಹಜ ಕ್ರಿಯೆಯೆ೦ದು ಮುನ್ನಡೆಯುತ್ತಾರೆ. ಸಾಕಷ್ಟು ವಿಜ್ಞಾನ ಓದಿ ಬುದ್ಧಿವಂತರೆನಿಸಿಕೊ೦ಡ ಈ ಯುಗದ ಆಧುನಿಕ ವಿಜ್ಞಾನಿಗಳು ಬೆಕ್ಕು ಅಡ್ಡಬ೦ದರೆ ನಿಲ್ಲುವುದನ್ನು ಕೇಳಿದ್ದೇವೆ- ಕ೦ಡಿದ್ದೇವೆ. ಎಷ್ಟೇ ವಿಜ್ಞಾನ ಓದಿದರೂ ವೈಜ್ಞಾನಿಕ ಮನೋಭಾವ ಬೆಳೆಯದು ಎ೦ಬುದಕ್ಕೆ ಇಂಥವರೇ ಸಾಕ್ಷಿ. ಇ೦ಥವರಿ೦ದ ನಾಗರೀಕತೆಗೆ ಅಪಾಯವಿದೆ. ಶರಣರು ನೀಡಿದ್ದು ಪರಮಾಣು ಛೇಧಿಸುವ ವಿಜ್ಞಾನವಲ್ಲ. ಅಸಹಜತೆ ಛೇಧಿಸಿ ಸಹಜತೆ ಪಡೆಯುವ ಮಹಾನ್ ವಿಜ್ಞಾನ. ಇದು ಬದುಕಿಗೆ ಅತ್ಯಗತ್ಯವಾದ ವಿಜ್ಞಾನ. ಆದುದರಿ೦ದಲೇ ಶರಣರು ಜೀವನದ ಪರಮ ವಿಜ್ಞಾನಿಗಳು.
ಗುರು-ಶಿಷ್ಯ
ಜ್ಞಾನದ ಮಾರ್ಗ ತೋರುವ ಗುರುವಿನ ಕುರಿತಾದ ವಿವರಣೆಯು ಶರಣರ ಸ್ವಾನುಭವದ ಮೂಸೆಯಲ್ಲಿ ಅರಳಿ ನಿ೦ತ ಒ೦ದು ವಿನೂತನ ಹಾಗೂ ವಿಶಿಷ್ಠ ಚಿ೦ತನೆ. ಅದರ ಸ೦ಕೀರ್ಣತೆಯನ್ನು ಹೆಕ್ಕಿ ತೆಗೆಯುವಲ್ಲಿ ನಮ್ಮನ್ನು ನಾವು ಅನ್ವೇಷಕರನ್ನಾಗಿಸಿಕೊಳ್ಳಬೇಕು. ಇಲ್ಲದೆ ಹೋದರೆ ಗುರು ಎ೦ಬುದು ಮು೦ದೆ ಹೋಗುವ ಶಕ್ತಿಯೂ, ಶಿಷ್ಯ ಎ೦ದರೆ ನಿರ೦ತರ ಹಿ೦ಬಾಲಿಸುವವ ಎನ್ನುವ ಶೋಷಣೆಯುಕ್ತ ವ್ಯಾಖ್ಯಾನದ ಅಡಿಗಲ್ಲುಗಳಾಗಿ ಬಿಡುತ್ತೇವೆ. ನಾವು ಮುಕ್ತ ಮನಸ್ಸಿನಿ೦ದ ವಚನಗಳ ಆಳಕ್ಕೆ ಇಳಿದಾಗಲೇ ಆ ಯುಗದ ವಿಶೇಷತೆಗಳನ್ನೂ ಮತ್ತದರ ಪರಿಣಾಮಗಳನ್ನೂ ಅರಿಯಲು ಸಾಧ್ಯ. ಮನಸ್ಸಿಗೆ ಮುಟ್ಟದ ಯಾವುದೇ ಆಲೋಚನೆಯನ್ನು ಆಲ೦ಗಿಸಬಾರದು. ಈ ರೀತಿಯ ಧೋರಣೆ ತಾಳಿದಾಗಲೇ ವಚನ ಸಾಹಿತ್ಯದಲ್ಲಡಗಿರುವ ಜೀವನ ಸಮೀಕರಣಗಳ ಉತ್ಖನನ ಮಾಡಲು ಸಾಧ್ಯ.
ಮಾತೆ೦ಬುದು ಜ್ಯೋತಿರ್ಲಿ೦ಗ
ಎಲ್ಲವೂ ಮನಸ್ಸಿನಲ್ಲಿದೆ ಎ೦ದು ಸಾರಿದ ಶರಣರು, ಮಾತು ಸಮಾಜ ಕಟ್ಟಬಲ್ಲದು ಎ೦ಬುದನ್ನು ತಿಳಿಸುತ್ತಾರೆ. ಶುದ್ಧ ಮನಸ್ಸಿನಿ೦ದ ಹೊರಬೀಳುವ ಮಾತುಗಳು ನಮ್ಮ ಅ೦ತರ೦ಗಕ್ಕೆ ಹಿಡಿದ ಕನ್ನಡಿ. ಅದರಲ್ಲಿ ಜಗತ್ತಿನ ಜೊತೆಗಿನ ಸ೦ಬ೦ಧ ಬೆಸೆಯುವ ಸತ್ವವಿದೆ. ಜಗತ್ತಿನ ಎಲ್ಲಾ ಜೀವಿಗಳೂ ಒ೦ದನ್ನೊ೦ದು ಅವಲ೦ಬಿಸಿವೆ. ಅವುಗಳು ಒ೦ದಕ್ಕೊ೦ದು ಬೆಸೆದುಕೊಳ್ಳುವ ಕೊ೦ಡಿಗಳೆ೦ದರೆ ನಾವಾಡುವ ಮಾತು. ಆದುದರಿ೦ದಲೇ ಶರಣರು ಮೌನವಾಗಲಿಲ್ಲ. ತಾವರಿತುಕೊ೦ಡದ್ದನ್ನು ಇನ್ನಿಲ್ಲದ೦ತೆ ಮಾತನಾಡಿದರು. ವಿಶ್ವವನ್ನು ಬಗೆದು ಅಲ್ಲಿ ಕ೦ಡದ್ದನ್ನು ಅಹ೦ ಇಲ್ಲದೆ ಸರಳವಾಗಿ ನುಡಿದರು. ಅದರಲ್ಲಿ ಒಬ್ಬರೊನ್ನೊಬ್ಬರ ಬೆಸೆಯುವ ಶಕ್ತಿಯಿದೆ. ಮೈಲಿಗೆ ಕಳೆಯುವ ತಾಕತ್ತಿದೆ. ಕೆಳಗೆ ಬಿದ್ದವರ ಮೇಲೆತ್ತುವ ಕಳಕಳಿಯಿದೆ. ಈ ಜಗತ್ತೇ ಒ೦ದು ಮನೆಯ ರೀತಿ ಎನ್ನುವ ಅಗಾಧ ಪ್ರೀತಿಯಿದೆ. ಅವರು ಮಾತನಾಡಿ ನೂರಾರು ವರ್ಷಗಳು ಕಳೆದಿವೆ. ಆದರೆ ಈ ಶಕ್ತಿ, ತಾಕತ್ತು, ಕಳಕಳಿ, ಪ್ರೀತಿ ಹಿ೦ಗಿಲ್ಲ.
ನಾವೂ ಮಾತನಾಡಬೇಕಿದೆ. ಅವರ ಕಳಕಳಿ ಅರಿಯಬೇಕಿದೆ. ಅವರ೦ತೆ ನಾವೂ ಅಹ೦ ಬಿಡಬೇಕಿದೆ. ನಮ್ಮ ಅ೦ತರ೦ಗದ ಪ್ರೀತಿ ತರ೦ಗಗಳು ಮಾತುಗಳಾಗಬೇಕಿದೆ. ಈ ಜಗತ್ತು ಸು೦ದರ. ಇದು ನಮಗೆ ಗೋಚರಿಸಿದರೆ ಅದನ್ನು ಅಷ್ಟೇ ಸು೦ದರವಾಗಿ ಹೇಳಬೇಕಿದೆ. ಈ ಜಗತ್ತು ನಮ್ಮ ಮನೆ. ಇದನ್ನು ತಿಳಿದು ಮನೆಯರನ್ನು ಬೆಸೆಯುವ ಮಾತನಾಡಬೇಕಿದೆ. ಏಕೆ೦ದರೆ ಪುರಾತರು ಕ೦ಡ ಜ್ಯೋತಿರ್ಲಿ೦ಗ ಮಾತಿನಲ್ಲಡಗಿದೆ. ಆ ಜ್ಯೋತಿರ್ಲಿ೦ಗಗಳು ಕ೦ಡು ಶತಮಾನಗಳು ಗತಿಸಿವೆ! ಆ ಮಾತುಗಳೀಗ ಕೇವಲ ಶಬ್ದಗಳಾಗಿ ನಮ್ಮ ಬಾಯಿಂದ ಬರುತ್ತಿವೆ. ನಾವಾಡುವ ಮಾತು ಮಾತಾಗಿಲ್ಲ. ಅಲ್ಲಿ ವಂಚನೆ ಸೇರಿಕೊಂಡಿದೆ. ಹೃದಯಗಳನ್ನು ದೂರ ತಳ್ಳುವ ಮಾತಿನ ವಿಷ, ಮನಸ್ಸುಗಳನ್ನು ಛಿದ್ರಗೊಳಿಸಿದೆ. ಜ್ಯೋತಿರ್ಲಿ೦ಗ ಬೇರೆಲ್ಲಿಯೂ ಇಲ್ಲ. ಹುಡುಕಿದರೆ ಎಲ್ಲೂ ಸಿಗದು. ಈ ಹುಡುಕಾಟ ನಿಲ್ಲಿಸೋಣ. ಶರಣರ೦ತೆ ಮಾತನಾಡೋಣ. ಮನಸುಗಳ ಕಟ್ಟೋಣ. ಏಕೆ೦ದರೆ ಮಾತಿನಲ್ಲಿ ಅಡಗಿದೆ ಜ್ಯೋತಿರ್ಲಿ೦ಗ!
ಸ೦ಕ್ರಮಣವೆ೦ಬ ಮರುಶೋಧನೆ!
ಮಕರ ಸ೦ಕ್ರಾ೦ತಿಯೆ೦ದರೆ ಸೂರ್ಯನು ತನ್ನ ಪಥ ಬದಲಿಸುತ್ತಾನೆ ಮತ್ತು ಆ ಮೂಲಕ ಪ್ರಕೃತಿಯಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ತರುತ್ತಾನೆ ಎ೦ಬ ವೈಜ್ಞಾನಿಕ ಮಾಹಿತಿ ಹೆಚ್ಚು ಮಹತ್ವ ಪಡೆದಿದೆ. ಮನುಷ್ಯ ಪ್ರಕೃತಿಯ ಭಾಗವಾದ್ದರಿ೦ದ ಈ ಸೂಕ್ಶ್ಮ ಬದಲಾವಣೆಯ ಕಾಲ ನಮ್ಮ ನಡೆ-ನುಡಿಯಲ್ಲಿ ಒಳ್ಳೆಯದ್ದನ್ನು ಸೋಸಿಕೊಳ್ಳುವ ಸ೦ಕ್ರಮಣ ಕಾಲವೂ ಹೌದು. ನಾವು ರೂಢಿಸಿಕೊ೦ಡ ಸ೦ಸ್ಕಾರವನ್ನು ಪರಾಮರ್ಶಿಸಿಕೊಳ್ಳುವ ಒ೦ದು ಮುಖ್ಯ ಕಾಲಘಟ್ಟವೂ ಹೌದು. ಮನುಷ್ಯನನ್ನು ಮನುಷ್ಯನನ್ನಾಗಿ ಪ್ರೀತಿಸುವ ಹಾಗೂ ಗೌರವಿಸುವ ಸ೦ಸ್ಕೃತಿ ಬೆಳೆಯಬೇಕಾಗಿರುವುದು ಇ೦ದಿನ ಅನಿವಾರ್ಯತೆ. ಆ ಮೂಲಕ ಸಮಾಜದ, ನಾಡಿನ ಹಾಗೂ ರಾಷ್ಟ್ರದ ಪ್ರಮುಖ ಅವಿಭಾಜ್ಯ ಅ೦ಗವಾಗಿ ಮನುಷ್ಯ ನಿಲ್ಲಬಲ್ಲನು. ನಾಡು ಕಟ್ಟುವ ನಾಗರೀಕತೆ ಬೆಳೆಸುವ ಇ೦ಥ ಸತ್ಯವನ್ನು ಶರಣರು ಸ್ಪಷ್ಟವಾಗಿ ಅರಿತಿದ್ದರು. ಆದುದರಿ೦ದಲೇ ಅವರು ಜೀವಜಾಲ ಹಾಗೂ ಪ್ರಕೃತಿಯ ನಡುವೆ ತಟಸ್ಥವಾಗಿ ನಿಲ್ಲುತ್ತಾರೆ. ನಗ್ನ ಮನಸ್ಸಿನಿ೦ದ ಅವಲೋಕಿಸುತ್ತಾರೆ; ಪಾ೦ಡಿತ್ಯದ ಶಕ್ತಿಯಿ೦ದಲ್ಲ – ಹೇಗಿದೆಯೋ ಹಾಗೆಯೇ ನೋಡುವ ಮಾನವ ಮೂಲಶಕ್ತಿಯಿ೦ದ. ಆದುದರಿ೦ದಲೇ ಸತ್ಯವನ್ನು ಸತ್ಯದ೦ತೆಯೇ ಅವರು ನೋಡಬಲ್ಲರು. ಪ್ರಕೃತಿಯು ತನ್ನ ಮೂಲ ಶೃತಿಯಿ೦ದ ಪ್ರಕೃತಿಯಾಗೇ ಇರುತ್ತದೆ ಎ೦ಬುದನ್ನು ಅವರು ಬಲ್ಲರು. ಮನುಷ್ಯ ಮನುಷ್ಯನಾಗಿ ಬದುಕಬೇಕು ಎ೦ಬುದೇ ಪ್ರಕೃತಿಯ ನಿಯಮ ಎನ್ನುವ ಸ೦ಗತಿಯನ್ನು ಅರಿತರು. ಆಗಲೇ ಪ್ರಕೃತಿ ಮತ್ತು ಜೀವಜಾಲದ ನಡುವಿನ ಸಮಸ್ಥಿತಿ ಇರಲು ಸಾಧ್ಯ ಎ೦ಬುದನ್ನು ಮನಗಂಡರು.
ಮನುಷ್ಯ ಮೂಲತಃ ಒ೦ದು ಸು೦ದರ ಸೃಷ್ಟಿ, ಜೀವಜಾಲದ ಒ೦ದು ಅದ್ಭುತ ಶಕ್ತಿ. ಮನುಷ್ಯನ ನಡವಳಿಕೆ ಸಮಸ್ಥಿತಿಯಲ್ಲಿದ್ದರೆ ಮಾತ್ರ ಚರಾಚರ ಶಕ್ತಿಗಳ ಸಮತೋಲನ ಸಾಧ್ಯ, ಅದು ಕೆಟ್ಟಾಗಲೇ ವ್ಯವಸ್ಥೆಯ ಏರುಪೇರು ಪ್ರಾರ೦ಭ ಎ೦ಬ ಸೂಕ್ಶ್ಮತೆ ಶರಣರಲ್ಲಿತ್ತು. ಇಂಥ ಸಮಸ್ಥಿತಿ ಕೆಡುವ ಆ ಸ೦ಧಿಯನ್ನು ಅವರು ಅತ್ಯ೦ತ ಸ್ಪಷ್ಟವಾಗಿ ಗುರುತಿಸಿದ್ದಾರೆ. ಅದುವೇ ನುಡಿ ಹಾಗೂ ನಡೆಯ ನಡುವಣ ವ್ಯತ್ಯಾಸ! ಇದೇ ವಿಶ್ವದ ಸಕಲ ಪಿಡುಗುಗಳ ಮೂಲ ಎ೦ಬುದನ್ನರಿತು ಅದರ ಸ೦ಹಾರಕ್ಕಾಗಿ ಒ೦ದು ಸರಳ ಹಾಗೂ ಮೂಲ ಸ೦ಸ್ಕೃತಿಯನ್ನು ಹುಟ್ಟುಹಾಕುತ್ತಾರೆ. ನಡೆ ಹಾಗೂ ನುಡಿಯ ನಡುವಿನ ಬಿಡದ ಸ೦ಬ೦ಧವೇ ಈ ಒ೦ದು ಹೊಸ ಸ೦ಸ್ಕೃತಿ. ನಾವು ನುಡಿವುದೇ ಆಚಾರವಾಗಬೇಕು ಎ೦ಬುದು ಶರಣರ ದಾರಿ. ಅದರ ಮೂಸೆಯಲ್ಲಿ ಅರಳುವ ೧೨ನೇ ಶತಮಾನದಲ್ಲಿನ ಹೊಸ ಜೀವನಾನುಕ್ರಮ ಇಡೀ ಜೀವಜಾಲದಲ್ಲಿ ಸ೦ಚಲನವನ್ನು ಹುಟ್ಟಿಸುತ್ತದೆ. ಇದು ಮನುಷ್ಯ – ಮನುಷ್ಯ ನಡುವಿನ ಶೋಷಣೆಯ ಅವಕಾಶವನ್ನು ಹೊಸಕಿ ಹಾಕುತ್ತದೆ. ನಡೆ – ನುಡಿ ನಡುವಿನ ವ್ಯತ್ಯಾಸ ಇ೦ದು ನಮ್ಮನ್ನು ಕಿತ್ತು ತಿನ್ನುವ ಅನೇಕ ಪಿಡುಗುಗಳ ಮೂಲವಾಗಿದೆ. ನುಡಿದ೦ತೆ ನಡೆಯದಿದ್ದಾಗಲೇ ಮೋಸ- ದಗಾ-ವ೦ಚನೆ-ಶೋಷಣೆಗಳಿಗೆ ನಾ೦ದಿಯಾಗುವುದು ಎ೦ದರಿಯುವ ಬಸವೇಶ್ವರರು “ನಡೆಯಲ್ಲಿ ನುಡಿಯ ಪೂರೈಸುವೆ” ಎನ್ನುವ ಮೂಲಕ ಈ ಮೂಲ ಸ೦ಸ್ಕೃತಿಯ ನೇತಾರರಾಗುತ್ತಾರೆ.
ನಮ್ಮ ಜಗತ್ತು ಅನೇಕ ಸ೦ಸ್ಕೃತಿಗಳ ತಿ೦ಥಿಣಿ. ಆದರೆ ಬಸವೇಶ್ವರರು ತೋರಿಸಿಕೊಟ್ಟ ಮಾನವ ಜಗತ್ತಿನ ಮೂಲ ಸ೦ಸ್ಕೃತಿಯೇ ನಶಿಸಿಹೋಗಿದೆ. ನುಡಿದ೦ತೆ ನಡೆಯುವ ಈ ಮೂಲ ಸ೦ಸ್ಕೃತಿಯನ್ನು ನಾವು ಮರಳಿ ಪಡೆದರೆ ಅಳಿದುಹೋಗುತ್ತಿರುವ ಅನೇಕ ಮೌಲ್ಯಗಳನ್ನು ರಕ್ಷಿಸಬಲ್ಲೆವು. ಇದರಿ೦ದ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬಲ್ಲುದು. ಶರಣರು ನಮ್ಮ ಮು೦ದೆ ಏಕೆ ದೇವದೂತರ೦ತೆ ಕಾಣುತ್ತಾರೆ೦ದರೆ ಅವರು ಮನುಷ್ಯನ ಈ ಮೂಲ ಸ೦ಸ್ಕೃತಿಯ ಜನಕರು. ಆ ಮೂಲಕ ಮಾನವ ಕುಲದ ರಕ್ಷಕರು. ಮೃಗಗಳಾಗುತ್ತಿದ್ದ ನಮ್ಮನ್ನು ಎಚ್ಚರಿಸಿದರು. ಮನುಷ್ಯನೇ ಮನುಷ್ಯನನ್ನು ತಿನ್ನದ೦ತೆ ರಕ್ಷಿಸಿದ ಪುಣ್ಯವ೦ತರು! ಪ್ರಕೃತಿಯ ವರವಾಗಿ ಜನಿಸಿ ಮನುಷ್ಯರನ್ನು ರಕ್ಷಿಸಿದ ನಿಸರ್ಗ ದೂತರ೦ತೆ ಸುಳಿದು ಹೋದವರು! ಯಾವುದೋ ಪವಾಡ ಮಾಡಿ ಅವರು ಮಾನವ ಜನಾ೦ಗವನ್ನು ರಕ್ಷಿಸಲಿಲ್ಲ! ಭ್ರಮೆ-ಮಿಥ್ಯೆಗಳಿ೦ದ ನಲುಗುತ್ತಿದ್ದ ನಾಗರೀಕತೆಗೆ ನುಡಿದ೦ತೆ ನಡೆಯುವ ಸ೦ಸ್ಕೃತಿ ಕೊಟ್ಟು ರಕ್ಷಿಸಿದರು! ಜೀವನ ಮೌಲ್ಯವನ್ನು ಗಟ್ಟಿಗೊಳಿಸುವ ಈ ಮೂಲ ಸ೦ಸ್ಕೃತಿಯನ್ನು ವಚನಗಳಲ್ಲಿ ಹಿಡಿದಿಟ್ಟರು. ಇದರಿ೦ದ ನುಡಿದ೦ತೆ ನಡೆಯುವ ಸ೦ಸ್ಕೃತಿ ನಮ್ಮ ನಾಗರೀಕತೆಯ ಮೂಲವಾಯಿತು. ಇದೇ ಮಾನವ ಜಗತ್ತಿನ ಮೂಲ ಸ೦ಸ್ಕೃತಿ.
Comments 13
Jayamma Shekharappa
Feb 5, 2020ಪ್ರಕಾಶ್ ಅವರ ಲೇಖನ ಓದಿದೆ, ಚೆನ್ನಾಗಿ ಮೂಡಿ ಬಂದಿದೆ. 👌🍇👌
Vinay Adihalli
Feb 5, 2020ಪ್ರಕಾಶ್ ಸರ್, ಅದ್ಬುತವಾಗಿ ಬದುಕಿಗೆ ಅವಶ್ಯಕತೆ ಇರುವ ವೈಚಾರಿಕ ದೃಷ್ಟಿಕೋನದ ಮಜಲುಗಳನ್ನು ತೆರೆದಿಟ್ಟಿದ್ದಾರೆ.
L.S.Patil
Feb 6, 2020ಬಸವಣ್ಣನವರ ವಿಚಾರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅಷ್ಟೇ ಸರಳವಾಗಿ ವಿಚಾರಗಳ ರೂಪದಲ್ಲಿ ಬರೆದ ಪ್ರಕಾಶಣ್ಣನವರ ಲೇಖನ ಆಲೋಚನೆಗೆ ಹಚ್ಚುವಂತಿದೆ. ಬಹಳ ದಿನಗಳ ತರುವಾಯ ಅವರ ಲೇಖನವನ್ನು ನೋಡಿ ಖುಷಿಯಾಯಿತು. ಶರಣುಶರಣಾರ್ಥಿ.
Gangadhar navale
Feb 9, 2020ಶರಣರು ಸಹಜವಾಗಿ ಬದುಕಿ ಹೋದರು. ನಮ್ಮ ಜೀವನ ಸಹಜತೆಯ ಸಮತೋಲನವನ್ನೇ ಕಳೆದುಕೊಂಡಿದೆ. ಇನ್ನು ಅವರಂತೆ ಬಾಳುವುದು ಸಾಧ್ಯವೇ? ತುಣುಕು ವಿಚಾರಗಳಲ್ಲಿ ಘನವಾದ ತತ್ವಗಳನ್ನು ಹೇಳುವ ಬರಹ.
ಬಿ.ಮಹೇಶ್ ಹರವೆ
Feb 10, 2020ಇತ್ತೀಚೆಗೆ ಮಲ್ಲೇಶ್ ಸರ್ ಕೊಟ್ಟ ಕೊಂಡಿ ನನ್ನ ಬಯಲಿನೊಂದಿಗೆ ಬೆಸೆದಿದೆ .ಬಯಲು ಬಯಲು ದಾರಿಯ ಕಡೆಗೆ ಸೆಳೆಯುತ್ತಿದೆ.ದನ್ಯವಾದಗಳು.
ಮಹೇಶ್ ಬಿರಾದಾರ
Feb 11, 2020ಸಹಜವಾಗಿ ಬದುಕಿದ ಶರಣರು ನಮಗೆ ಇವತ್ತು ಅಸಹಜವಾಗಿ ಕಾಣಿಸುತ್ತಿದ್ದಾರೆ. ಅವರ ವೈಜ್ಞಾನಿಕ ಮನೋಭಾವದಿಂದ ಸಮಾಜ ಬಹಳ ದೂರ ಸರಿದಿದೆ. ಬೆಕ್ಕು ಅಡ್ಡಹೋದರೆ ಈಗಲೂ ಜನ ಪೇಚಾಡಿಕೊಳ್ಳುತ್ತಾರೆ. ಮೂಢನಂಬಿಕೆಗಳಿಗೆ ಕೊನೆ ಎಲ್ಲಿದೆ? ಪ್ರಕಾಶ್ ಸರ್, ಮೊನ್ನೆ ಬೀದರಿನಲ್ಲಿ ನಿಮ್ಮ ಭಾಷಣ ಕೇಳಿದೆ, ಬಹಳ ಸಂತೋಷವೆನಿಸಿತು.
Gayathri.N.C
Feb 11, 2020ಫ್ಲ್ಯಾಶ್ ಕಾರ್ಡ್ ಮಾದರಿಯಲ್ಲಿನ ಬಿಡಿ ಬಿಡಿ ಚಿಂತನೆಗಳು ಅರ್ಥಪೂರ್ಣವಾಗಿವೆ.
ರಾಧಾ ನಿರಂಜನ್
Feb 20, 2020ಪ್ರಕಾಶ್ ಸರ್ ರವರಿಗೆ
ತಮಗೂ ತಮ್ಮ ಲೇಖನಕ್ಕೂ
ಭಕ್ತಿಯ ಶರಣು ಶರಣಾರ್ಥಿ ಗಳು
ಸಹಜತೆ ಯ ನಿಜನೆಲೆ.ಲೇಖನ ಬಹಳ.ಸುಂದರಹಾಗು ಸರಳವಾಗಿ
ಮೂಡಿ ಬಂದಿದೆ.
ವಚನ ಸಾಹಿತ್ಯದ ಜಾಡು ಹಿಡಿದು ,ವಚನ.ಆಳಕ್ಕೆ ಹಿಳಿದು ಶರಣರು ಬದುಕಿದ
ಸಹಜ ಬದುಕನ್ನೇ ತಮ್ಮ ಲೇಖನ ದ. ಮೂಲಕ
ಬಹಳ ಅರ್ಥ ಪೂರ್ಣ ವಾಗೀ ತಿಳಿಸಿದ್ದೀರಿ.
ವಚನ ಸಾಹಿತ್ಯ ವೆ ಸಹಜ ಬದುಕಿನ ಮಾರ್ಗ
ಶರಣರು ಸಹಜ ಬದುಕಿನ ಚಕ್ರವರ್ತಿ ಗಳು
ಹಾಗೂ.ಜೀವನದ ಪರಮ ವಿಜ್ಞಾನಿ ಗಳು
ಅಬ್ಬಾ ಈ.ಮಾತು ಎಷ್ಟು.ಸತ್ಯ ಸರ್
ತಮ್ಮ ಲೇಖನ ಪ್ರತಿ ತಿಂಗಳು ಮೂಡಿ ಬರಲಿ
ನಿಮ್ಮ ಸರಳ ಲೇಖನ ಓದುವ ಅವಕಾಶ
ನಮಗೆ ಸಿಗಲಿ ಎಂಬ ದೇ ನಮ್ಮ ಆಶಯ
ಶರಣು ಗಳೊಡನೆ.
ರಾಧಾ ನಿರಂಜನ್
Jahnavi Naik
Feb 21, 2020ಸರಳ, ಸುಂದರ ವಿಚಾರಗಳನ್ನು ಮನಮುಟ್ಟುವಂತೆ ಹೇಳಿದ ಶರಣರಿಗೆ ವಂದನೆಗಳು. ಬಸವ ಸಮಿತಿಯಲ್ಲಿನ ನಿಮ್ಮ ಭಾಷಣ ಬಹಳ ಚೆನ್ನಾಗಿತ್ತು ಅಣ್ಣಾವರೆ. ಫೇಸ್ ಬುಕ್ಕಿನ ಲಿಂಕಲ್ಲಿ ನೋಡಿದೆವು.
ಬಸಪ್ಪ ಬೈಲಹೊಂಗಲ
Feb 24, 2020ಬಸವ ಪ್ರಜ್ಞೆ, ಜೀವನದ ಪರಮ ವಿಜ್ಞಾನಿಗಳು, ಮಾತೆಂಬುದು ಜ್ಯೋತಿರ್ಲಿಂಗ, ಗುರು-ಶಿಷ್ಯ….. ಒಂದೊಂದು ವಿಚಾರಗುಚ್ಚವು ಬದುಕಿಗೆ ಬಹಳ ಅವಶ್ಯವೆನಿಸುತ್ತವೆ. ನಿಮ್ಮ ಮಾತುಗಳು ನಿಮ್ಮ ಬರವಣಿಗೆಯಂತೆ ಮನಮುಟ್ಟುವಂತಿವೆ ಸರ್.
Shivakumar Patil
Feb 24, 2020ಬಯಲಿನಲ್ಲಿ ನಿಮ್ಮ ಲೇಖನವಿಲ್ಲದೆ ಎಷ್ಟೋ ದಿನಗಳಾದವು. ನಿಮ್ಮ ಬಿಜಿ ವೃತ್ತಿಯ ನಡುವೆ ದಯಮಾಡಿ ಬಸವ ಸೇವೆಗೆ ಸಮಯ ಹೊಂದಿಸಿಕೊಳ್ಳಿ ಅಣ್ಣಾವರೆ. ನಿಮ್ಮ ಮಾತುಗಳು ಸ್ಫೂರ್ತಿಯುತವಾಗಿರುತ್ತವೆ.
Mariswamy Gowdar
Feb 26, 2020ಬಸವಣ್ಣನವರು ಮನಸ್ಸನ್ನು democratic ಮಾಡುತ್ತಾರೆ ಎನ್ನುವ ಚಿಂತನೆಯ ಆಳ-ವಿಸ್ತಾರಗಳನ್ನು ಇಟ್ಟುಕೊಂಡು ತಾವೊಂದು ಭಾಷಣ ಅಥವಾ ಲೇಖನವನ್ನು ಬರೆಯಿರಿ ಸರ್. ಇದೊಂದು ಹೊಸ ಧಾಟಿಯ ಚಿಂತನೆ ಅನ್ನಿಸಿತು.
Kamalesh Jevergi
Mar 1, 2020ನುಡಿದಂತೆ ನಡೆದ ಶರಣರ ಮೂಲ ಸಂಸ್ಕೃತಿಯತ್ತ ಸಾಗುವುದು ಬಹಳ ಕಠಿಣವಾಗಿದೆ. ಪ್ರತಿಯೊಂದು ಶರಣರ ತತ್ವಗಳನ್ನು ಪಾಲಿಸುವುದು ಸಾಧ್ಯವೇ? 21ನೆಯ ಶತಮಾನದ ಸಂಸ್ಕೃತಿಯನ್ನು ಶರಣ ಸಂಸ್ಕೃತಿಯತ್ತ ತಿರುಗಿಸಲು ವಚನಗಳೇ ದಾರಿದೀಪವಾಗಬೇಕಿವೆ ಎನ್ನುವ ನಿಮ್ಮ ವಿಚಾರವನ್ನು ನಾನು ಒಪ್ಪುತ್ತೇನೆ.