
ಶರಣರು ಕಂಡ ಆಹಾರ ಪದ್ಧತಿ
ಬಸವಾದಿ ಶರಣರು ಬದುಕಿ ಹೋದ ರೀತಿಯೇ ವಿಶಿಷ್ಟವಾದುದು. ಅವರ ವಿಚಾರಗಳು, ಜೀವನ ಶೈಲಿ ಎಲ್ಲವೂ ಸರಳ ಹಾಗೂ ಆಕರ್ಷಕವಾಗಿದ್ದವು. ಬದುಕಿನ ಎಲ್ಲಾ ಮಗ್ಗಲಿನ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಂಡ ಅವರು, ತಮ್ಮ ದೈನಂದಿನ ಬದುಕಿನಲ್ಲೂ ಶುಚಿತ್ವ ಕಾಯ್ದುಕೊಂಡರು. ಅತ್ಯಂತ ಕ್ಲಿಷ್ಟಮಯವಾದ ಸಾಮಾಜಿಕ ಧಾರ್ಮಿಕ ಅಧ್ಯಾತ್ಮಿಕ ಜೀವನವನ್ನು ಸರಳಗೊಳಿಸಿದ ಶರಣರು, ದುಡಿಮೆ ಕಾಯಕ ಆಚರಣೆ ಅನುಷ್ಠಾನ ಮುಂತಾದ ಹೊಸ ಹೊಸ ಅನ್ವೇಷಣೆಗಳ ಜೊತೆಗೆ ಆಹಾರ ಪದ್ಧತಿಯತ್ತಲೂ ವಿಶೇಷ ಗಮನ ನೀಡಿದರು.
ಶರಣರ ಒಂದೊಂದು ವಿಚಾರಗಳೂ ವಿನೂತನವಾಗಿದ್ದು, ಇಂದಿಗೂ ಅವರ ನಡೆ-ನುಡಿಗಳು ಅಧ್ಯಯನಯೋಗ್ಯವಾಗಿವೆ. ಹಂಗಿನ ಅರಮನೆಗಿಂತ ದುಡಿಮೆಯ ಗುಡಿಸಲು ಶ್ರೇಷ್ಠ ಎಂದು ನಂಬಿ ಬದುಕಿದ ಅವರಿಗೆ ಆಹಾರವು ಕೇವಲ ಪದಾರ್ಥವಾಗಿರಲಿಲ್ಲ. ಅದು ಸತ್ಯ ಶುದ್ಧ ಕಾಯಕದಿಂದ ಬಂದ ಪ್ರಸಾದವಾಗಿತ್ತು. ಆಹಾರವನ್ನು ಪ್ರಸಾದವೆಂದು ಕರೆದು, ಪದಾರ್ಥಕ್ಕೆ ಹೊಸ ಪಾವಿತ್ರ್ಯತೆ ಕಲ್ಪಿಸಿಕೊಟ್ಟರು.
ದಾನವನ್ನು ಶರಣರು ಎಂದೂ ಒಪ್ಪಲಿಲ್ಲ. ಆದರೆ ದಾಸೋಹವನ್ನು ಬೆಳೆಸಿದರು. ದಾನವು ಒಬ್ಬ ವ್ಯಕ್ತಿಯ ಅಂಕಿತಕ್ಕೆ, ದಾಕ್ಷಿಣ್ಯಕ್ಕೆ ಒಳಗಾಗುವುದು. ದಾನದಲ್ಲಿ ಕೊಟ್ಟವನು ದೊಡ್ಡವನು ಮತ್ತು ತೆಗೆದುಕೊಂಡವನು ಸಣ್ಣವನೆನಿಸಿಕೊಳ್ಳುತ್ತಾನೆ. ಇಂತಹ ಅಸಮಾನತೆಯನ್ನು ಹೋಗಲಾಡಿಸಲೆಂದೇ ಬಸವಣ್ಣನವರು ದಾಸೋಹ ಪದ್ಧತಿಯನ್ನು ಶರಣ ಸಂಕುಲಕ್ಕೆ ಪರಿಚಯಿಸಿದರು. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಅತ್ಯಂತ ಕಳಕಳಿಯಿಂದ ಕೇಳಿಕೊಂಡಿದ್ದಾರೆ.
ಪಡಿ ಮತ್ತು ಪದಾರ್ಥವು ಪ್ರಸಾದವಾಗುವ ಪವಿತ್ರ ಕ್ರಿಯೆಯು ಕಾಯಕ ಮತ್ತು ದಾಸೋಹದ ಮೂಲಕ ನೆರವೇರುತ್ತದೆ. ಕಾಯಕ (Collection of Wealth) ಮತ್ತು ದಾಸೋಹ (Distribution of Wealth) ಎರಡು ಅಪೂರ್ವ ತತ್ವಗಳು. ಕಾಯಕವು ವೃತ್ತಿ ಗೌರವ ಸಮಾನತೆ ಕಂಡುಕೊಂಡರೆ ದಾಸೋಹವು ಸಾಮಾಜಿಕ ಸಾರ್ವತ್ರಿಕ ಸಮಾನತೆಗಳನ್ನು ಎತ್ತಿ ಹಿಡಿಯುತ್ತದೆ. ದಾನವನ್ನು ಉಗ್ರವಾಗಿ ವಿರೋಧಿಸಿದ ಶರಣರು ದಾಸೋಹವನ್ನು ಅಷ್ಟೇ ಸರಳವಾಗಿ ಒಪ್ಪಿದರು. ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಅದು ಲಿಂಗಕ್ಕೆ ಅರ್ಪಿತ ಎನ್ನುವುದು ಶರಣರ ಗಟ್ಟಿ ಧ್ವನಿ.
ಪ್ರಸಾದವು ಶರಣರಿಗೆ ಕೇವಲ ಆಹಾರವಾಗಲಿಲ್ಲ. ಅದು ಬದುಕಿನ ಅವಶ್ಯಕತೆಯ ಜೊತೆಗೆ ಪ್ರಾಮಾಣಿಕ ಜೀವನದ ಸಂಕೇತವೂ ಆಗತೊಡಗಿತ್ತು .
ಬಸವಣ್ಣನವರು ಹೇಳುತ್ತಾರೆ-
ಕೊಲ್ಲೆನಯ್ಯಾ ಪ್ರಾಣಿಗಳ ಮೆಲ್ಲೆನಯ್ಯಾ ಬಾಯಿಚ್ಚೆಗೆ
ಒಲ್ಲೆನಯ್ಯ ಪರಸತಿಯರ ಸಂಗವ… ಎಂದು.
ಇಲ್ಲಿ ಮನುಷ್ಯನು ತನ್ನ ಬದುಕಿಗಾಗಿ ಏನೆಲ್ಲಾ ಕೃತ್ಯಗಳಿಗೆ ಕೈಹಾಕುತ್ತಾನೆ! ನಾಲಿಗೆಯ ಚಪಲಕ್ಕಾಗಿ ಪ್ರಾಣಿಗಳ ಹಿಂಸೆಗೆ ಮುಂದಾಗುತ್ತಾನೆ. ನಿರ್ದಾಕ್ಷಿಣ್ಯವಾಗಿ ಕೊಂದು ಅವುಗಳ ಮಾ೦ಸ ತಿನ್ನುತ್ತಾನೆ.
ಪರಸತಿಯರ ಸಂಗವ ಮಾಡುತ್ತಾನೆ. ಇವೆಲ್ಲ ಅಪರಾಧ ಎನ್ನುತ್ತಾರೆ ಬಸವಣ್ಣ. ಪ್ರಾಣಿ ಹತ್ಯೆ ಮಾಡಿ ಮಾ೦ಸ ತಿನ್ನುವವರೇ ಹೊಲೆ ಮಾದಿಗರು ಎಂದು ಟೀಕಿಸಿದ್ದಾರೆ.
ಕೊಲುವವನೆ ಮಾದಿಗ ಹೊಲಸು ತಿ೦ಬುವವನೆ ಹೊಲೆಯ
ಕುಲವೇನೋ ಆವಂದಿರ ಕುಲವೇನೋ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೆ ಕುಲಜರು.
ಒಡಲ ಕಳವಳಕ್ಕೆ, ಬಾಯ ಸವಿಗೆ
ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ,
ಬೇಡೆ ಬೇಡೆ ನಿಮ್ಮ ನ೦ಬಿದ ಸದ್ಭಕ್ತರ
ಅವರೊಕ್ಕುದನು೦ಬೆನೆ೦ದ೦ತೆ ನಡೆವೆ
ಎನ್ನೊಡೆಯ ಕೂಡಲ ಸಂಗಮದೇವನೊಲ್ಲದವರ ಹಿಡಿದೆನಾದಡೆ
ನಿಮ್ಮ ಪಾದದ ಆಣೆ.
ಸ್ವಾರ್ಥದ ಲವಲೇಶವೂ ಇಲ್ಲದ ನಡೆ ಬಸವಣ್ಣನವರದು. ಒಡಲ ಕಳವಳಕ್ಕೆ ಹಸಿವಾಗಿ ಮತ್ತು ಬಾಯ ಸವಿಯ ರುಚಿಗಾಗಿ ಆಸೆ ಪಟ್ಟು ಬಯಸಿ ಉಂಡರೆ ಅದು ಪ್ರಮಾದ. ಕಾರಣ ಶರಣರ ತೊತ್ತಿನ ಮಗನಾದ ನಾನು ಅವರನ್ನು ಬೇಡೆನು, ಕಾಡೆನು. ಅವರೊಕ್ಕುದನು೦ಬೆನೆ೦ದ೦ತೆ ನಡೆವೆ… ಕಾಯಕ ಮಾಡಿ, ಶರಣರ ಆಜ್ಞೆಯಂತೆ ಆದಾಯವನ್ನು ಸಮಷ್ಟಿಗೆ ಬಳಸುವೆ, ಇದು ಪ್ರಮಾಣವೆಂದು ತಿಳಿಸುತ್ತಾರೆ.
ಊಟ ಮಾಡುವುದು ಕೂಡ ಅತ್ಯಂತ ಮುಖ್ಯವಾದ ವಿಧಾನ. ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ಊಟಕ್ಕೆ ಕೂರುವುದಾಗಲಿ, ಗಡಿಬಿಡಿಯಿಂದ ತುತ್ತು ನುಂಗುವುದಾಗಲಿ ಸರಿಯಲ್ಲ. ಪ್ರಸಾದವು ಸತ್ಯ ಶುದ್ಧವಾಗಿರಬೇಕು, ಕಾಯಕ ಮೂಲದಿಂದ ಬಂದಿರಬೇಕು ಮತ್ತು ಪ್ರಸಾದ ಸೇವನೆಯ ಸಮಯದಲ್ಲಿ ಚಿತ್ತ ಶಾಂತರಾಗಿ ಶ್ರದ್ಧೆಯಿಂದ ಊಟ ಮಾಡಬೇಕು. ಇದನ್ನೆ ಬಸವಣ್ಣನವರು ಹೀಗೆ ಹೇಳಿದ್ದಾರೆ:
ಮೌನದಲು೦ಬುವುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು
ಕರಣವೃತ್ತಿಗಳಡಗುವವು
ಕೂಡಲ ಸಂಗನ ನೆನೆವುತ್ತ ಉಂಡಡೆ.
ಪ್ರಸಾದವು ಕೈಗೆ ಬಂದ ಮೇಲೆ ಮೌನದಲ್ಲಿ ಉಣ್ಣುವುದು, ಮನದಲ್ಲಿ ಏನಾದರೂ ಲೆಕ್ಕಾಚಾರ ಹಾಕುತ್ತಾ ಸೇವಿಸುವುದು ಸರಿಯಾದ ಆಚಾರವಲ್ಲ. ತಟ್ಟೆಯ ಪ್ರಸಾದವನ್ನು ಲಿಂಗಾರ್ಪಿತವ ಮಾಡಿದ ಬಳಿಕ ಶರಣರನ್ನು ಮತ್ತು ಅವರ ಕಾಯಕವನ್ನು ನೆನೆಯುತ್ತಾ ಊಟ ಮಾಡಬೇಕು. ಆಗ ಪ್ರಸಾದವು ತಟ್ಟೆಗೆ ಬರುವ ಮುನ್ನ ಅದರ ಹಿಂದಿನ ಪರಿಶ್ರಮ ನೆನೆದು ಮನಸ್ಸು ವಿನಮ್ರವಾಗುತ್ತದೆ. ಕೃತಜ್ಞತೆ ಮೂಡುತ್ತದೆ. ಇದರಿಂದ ಕರಣ ಇಂದ್ರಿಯ ನಿರ್ನಾಳ ಗ್ರಂಥಿಗಳು ಸರಿಯಾಗಿ ಕೆಲಸ ಮಾಡಬಲ್ಲವು.
ಇದೇ ರೀತಿ ಇನ್ನೋರ್ವ ವಚನಕಾರ್ತಿ ಅಕ್ಕಮ್ಮ ನಮ್ಮ ಊಟ ಹೇಗಿರಬೇಕೆಂದು ಸೊಗಸಾಗಿ ಹೇಳುತ್ತಾಳೆ-
ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು.
ಬೆಳ್ಳೆಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ.
ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು.
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು.
ಈ ವಚನದಲ್ಲಿ ಬೆಳ್ಳುಳ್ಳಿ, ಅತಿಯಾದ ಖಾರದಪುಡಿ, ಭಂಗಿ, ನುಗ್ಗೆಕಾಯಿ ಮತ್ತು ಈರುಳ್ಳಿ ಪದಾರ್ಥಗಳನ್ನು ತಿನ್ನುವುದರಿಂದ ಮನೋನಿಗ್ರಹ ಸಾಧಿಸುವುದು ಕಷ್ಟವಾಗುತ್ತದೆ. ಇಂದ್ರಿಯ ಚಾಪಲ್ಯ ಹೆಚ್ಚುತ್ತದೆ. ಇಂತಹ ಪದಾರ್ಥಗಳು ಕಡಿಮೆ ಇದ್ದಷ್ಟೂ ಸಾಧನೆಗೆ, ವ್ರತಾಚರಣೆಗೆ ಅನುಕೂಲ. ಇದು ಆರೋಗ್ಯ ದೃಷ್ಟಿಯಿ೦ದಲೂ ದೇಹಕ್ಕೆ ಹಿತಕರ.
ಪ್ರಸಾದವು ಕಠಿಣ ಪರಿಶ್ರಮದ ಫಲವಾಗಿರಬೇಕು. ಕೊಟ್ಟವನ ಹಮ್ಮು ಬಿಮ್ಮು ಅಂತಸ್ಥಿಕೆ ಹೊಗಳುವಿಕೆ ಇರಬಾರದು ಮತ್ತು ದಾಸೋಹದಲ್ಲಿ ವ್ಯವಹಾರ ಯಾಂತ್ರಿಕತೆಗಳು ತಲೆಹಾಕಬಾರದು.
ಇದನ್ನು ಆಯ್ದಕ್ಕಿ ಲಕ್ಕಮ್ಮ ಈ ರೀತಿ ಹೇಳಿದ್ದಾಳೆ:
ಮಾಡಿ ನೀಡಿ ಹೋದೆನೆ೦ಬಾಗ ಕೈಲಾಸವೇನು ಕೈಕೂಲಿಯೆ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ ಸಲೆ ಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೆ ಕೈಲಾಸ. – ಆಯ್ದಕ್ಕಿ ಲಕ್ಕಮ್ಮ -೭೩೬ ಸಂ -೫
ಸಂದರ್ಭ ಸಮಯವಿದ್ದಾಗಲೆಲ್ಲ ಸಮಾಜಮುಖಿ ಕೆಲಸ ಮಾಡಿದರೆ ಅಂತಹ ಭಕ್ತನ ಅಂಗಳವೇ ಕೈಲಾಸ ಎಂದು ಲಕ್ಕಮ್ಮ ಹೇಳಿದ್ದಾಳೆ.
ಇದನ್ನು ಚೆನ್ನಬಸವಣ್ಣ ತಮ್ಮ ವಚನದಲ್ಲಿ ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ:
ಗುರುವೆಂಬ ಗೂಳಿ ಮುಟ್ಟಲು ಶಿಷ್ಯನೆ೦ಬ ಮಣಿಕ ತೆನೆಯಾಯಿತ್ತು .
ಲಿಂಗವೆಂಬ ಕಿಳುಗರು, ತನುವೆ ಕೆಚ್ಚಲು, ಮನವೇ ಮೊಲೆವಾಲು.
ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಅನಾಚಾರಿಗಲ್ಲದೆ ಪ್ರಸಾದವಿಲ್ಲ. -ಚೆನ್ನಬಸವಣ್ಣ ಸ ವ ಸ೦ -೩ ಸಂ -೧೧೯೦
ಗುರುವೆಂಬ ಗೂಳಿ ಶಿಷ್ಯನೆ೦ಬ ಮಣಿಕಕ್ಕೆ ಕೂಡಿತ್ತು, ಆಗ ಹುಟ್ಟಿದ ಕಿಳುಗರುವಿಗೆ ತನುವೆ ಕೆಚ್ಚಲು ಮನವೆ ಮೊಲೆ ಹಾಲು, ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ. ಬದುಕಿನ ಸರಳತೆಯನ್ನು ಶರಣರು ಪ್ರಾಂಜಲ ಮನಸ್ಸಿನಿಂದ ಚರ್ಚಿಸಿದ್ದಾರೆ. ಅರಿವಿಲ್ಲದವರಿಗೆ, ದುಡಿಯದವರಿಗೆ ಅನಾಚಾರಿಗೆ ಪ್ರಸಾದವಿಲ್ಲ. ಇದು ಚೆನ್ನಬಸವಣ್ಣನವರ ಕಟ್ಟಾಜ್ಞೆ. ಅನಾಚಾರಿಗಳು ಇಂತಹ ಪ್ರಸಾದ ಪವಿತ್ರ ಕಾರ್ಯಕ್ಕೆ ಪಾತ್ರರಲ್ಲ.
ಕೇವಲ ಆಹಾರ ಪದ್ಧತಿಯಿಂದ ಜಾತಿ ನಿರ್ಣಯಿಸುವ ಹೇಯ ಕೃತ್ಯವನ್ನು ದೇಶದ ಮೊದಲನೆಯ ದಲಿತ ವಚನಕಾರ್ತಿ ಉರಿಲಿಂಗಿಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ ಈ ರೀತಿ ಖಂಡಿಸಿದ್ದಾಳೆ:
ಕುರಿ ಕೋಳಿ ಕಿರಿಮೀನು ತಿ೦ಬುವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆ೦ಬರು
ಅವರೆಂತು ಕೀಳು ಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರು��ಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನ್ನು ಸಗ್ಗಲೆಯ ನೀರನ್ನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ
ಉರಲಿಂಗ ಪೆದ್ದಿಗಳ ಅರಸು ಒಲ್ಲನವ್ವಾ. -ಕಾಳವ್ವೆ ಸ ವ ಸ೦ ೫-ಸಂಖ್ಯೆ -೭೩೩ ಪುಟ ೨೨೫
ಅಂದಿನ ಕಾಲದ ಉಚ್ಚ ಕುಲದವರಾದ ವಿಪ್ರರು ಕುರಿ ಕೋಳಿ ತಿನ್ನುತ್ತಿದ್ದರು. ಆದರೆ ಆಕಳು ತಿನ್ನುವ ಮಾದಿಗರಿಗೆ ಕೀಳು ಎನ್ನುತ್ತಿದ್ದರು. ಆಕಳಿನ ಕ್ಷೀರ ಮತ್ತು ಸಗ್ಗಳೆಯ ನೀರನ್ನು ಕೂಡಿಸಿ ಕುಡಿಯುವವರು ಎಂತಹ ಉಚ್ಚ ಕುಲದವರು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾಳೆ ಕಾಳವ್ವೆ.
ಆಹಾರ ಅತ್ಯಂತ ಸರಳ ಹಾಗೂ ವಂಚನೆ ರಹಿತ ದುಡಿಮೆಯಿಂದ ಕೂಡಿರಲು ದೈವವೇ ತನಗೂ ಇಟ್ಟುಕೊಳ್ಳದೆ ಪ್ರಸಾದವನ್ನು ಭಕ್ತಂಗೆ ಕರುಣಿಸುವುದು ಎಂದು ಚೆನ್ನಬಸವಣ್ಣ ಹೇಳಿದ್ದಾರೆ:
ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ
ತನು ಮನ ಧನ ವಂಚನೆಯಿಲ್ಲದೆ
ಶರಣ ಮಾಡುವಲ್ಲಿ ನೀಡುವಲ್ಲಿ
ಕೂಡಲ ಚೆನ್ನಸಂಗಯ್ಯ ನಿಮಗೆ
ಎಂದೂ ತನಗೆನ್ನದ ಕಾರಣ.
-ಚೆನ್ನಬಸವಣ್ಣ ಸಂಪುಟ ೩-ಸಂಖ್ಯೆ ೨೭೬ ಪುಟ ೮೭
ಸತ್ಯ ಶುದ್ಧವಾದ ವಂಚನೆ ರಹಿತ ಆದಾಯವು ಶರಣರ ಕಾರ್ಯಗಳಲ್ಲಿ, ನೀಡುವಲ್ಲಿ ಕೊಟ್ಟರೆ ಕೂಡಲ ಚೆನ್ನಸಂಗಯ್ಯನೂ ಸಹಾಯ ಮಾಡುವನು.
ಅಂಬಲಿಯು ಅತ್ಯಂತ ಸರಳ ಮತ್ತು ರುಚಿಕರ ಖಾದ್ಯ. ಸುಲಭ ಜೀರ್ಣವಾಗುವ, ಯಕೃತ್ತಿಗೆ (LIVER) ಹಿತವಾಗುವ ಪ್ರಸಾದವಾದ ಅಂಬಲಿಯು ಸಾಧಕರಿಗೆ ಅಮೃತವಿದ್ದಂತೆ.
ನಡೆ ಚೆನ್ನ ನುಡಿ ಚೆನ್ನ ಎಲ್ಲಿ ನೋಡಿದಡಲ್ಲಿ ಚೆನ್ನ
ಪ್ರಮಥರೊಳು ಚೆನ್ನ ಪುರಾತನರೊಳು ಚೆನ್ನ
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ.
-ಬಸವಣ್ಣ ಷ ವ ಸ೦ ೧-ಸಂಖ್ಯೆ ೭೯೫ ಪುಟ ೨೦೨
ಮಾದಾರ ಚೆನ್ನಯ್ಯ ಬಸವಣ್ಣನವರ ಹಿರಿಯ ಸಮಕಾಲೀನ ಶರಣರು. ಅವರು ಸಿದ್ಧಪಡಿಸುವ ಅ೦ಬಲಿ ಎಲ್ಲರಿಗೂ ಹಿತವಾಗುವಂತಿತ್ತು. ಅಂತಹ ಅಂಬಲಿ ರುಚಿಗೆ ಸ್ವತಃ ಸಂಗಯ್ಯನು ತನಗೆ ಬೇಕೆಂದು ಭಿನ್ನವಿಸಿದಾಗ ಅಡ್ಡಗಟ್ಟಿದ ಕೈಯನ್ನು ಚೆನ್ನಯ್ಯ ತೆಗೆದನು ಎಂದು ಬಸವಣ್ಣನವರು ಹೇಳಿದ್ದಾರೆ. ಸತ್ಯ ಶುದ್ಧ ನಡೆ ನುಡಿ ವ್ಯಕ್ತಿತ್ವ ಹೊಂದಿದ ಮಾದಾರ ಚೆನ್ನಯ್ಯನ ಅ೦ಬಲಿಯು ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರವಾಗುತ್ತದೆ. ಇಲ್ಲಿ ಜಾತಿ ನಿರ್ನಾಮಗೊಂಡು ಸಮಾನ ಮನಸ್ಸಿನ ಶುದ್ಧ ಪ್ರಸಾದವನ್ನು ಯಾರಾದರೂ ಸಮಷ್ಟಿಗೆ ಸಿದ್ಧಪಡಿಸಿದರೆ ಅದು ದೈವತ್ವಕ್ಕೆ ಪಾತ್ರವಾಗುವುದೆ೦ಬುದು ಬಸವಣ್ಣನವರ ನಿಲುವು.
ಅಲ್ಲಮರು ಕಲ್ಯಾಣದ ಶರಣ ಸಂಕುಲದಲ್ಲಿ ಒಬ್ಬ ಹಿರಿಯ ಜ್ಞಾನಿ, ಮೇಧಾವಿ. ದೊಡ್ಡ ಅನುಭಾವಿಗಳು. ಆಹಾರದ ಬಗ್ಗೆ ಅವರು ನೋಡುವ ದೃಷ್ಟಿಕೋನವೇ ಬೇರೆ. ಅವರಿಗೆ ಆಹಾರವೊಂದು ಜೀವ ನಿರ್ವಹಣೆಗೆ ಬೇಕಾದ ಸಾಮಗ್ರಿ, ಆದರೆ ಅದು ಲಿಂಗಾರ್ಪಿತವಾಗಿರಬೇಕು.
ಜೀವಕ್ಕೆ ಜೀವವೇ ಆಧಾರ
ಜೀವ ತಪ್ಪಿಸಿ ಜೀವಿಸಬಾರದು .
“ಪೃಥ್ವಿ ಬೀಜಂ ತಥಾ ಮಾ೦ಸ೦ ಅಪ್ ದ್ರವ್ಯಂ ಸುರಾಮಯಂ
ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್”
ಎಂದುದಾಗಿ ಅಹಿಂಸಾ ಪರಮೋ ಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ : ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರ.
ಶರಣ ಸಂಕುಲಕ್ಕೆ ಬೇರೆ ಬೇರೆ ಪ್ರದೇಶದಿಂದ ಜನ ಬಂದರು. ನಯನಾರರು, ಅಂಡಾಳರು, ಶೈವ ಪರ೦ಪರೆಯ ಕಾಳಾಮುಖಿಗಳು, ಕಾಪಾಲಿಕರು, ನಾಥ ಪರ೦ಪರೆಯ ಯೋಗಿಗಳು, ನಾಗಾಗಳು… ಹೀಗೆ ಬಂದ ಅನೇಕ ಪಂಥದವರ ಆಹಾರ ಪದ್ಧತಿಯು ಬೇರೆ ಬೇರೆಯಾಗಿತ್ತು.
ಮಹಾಮನೆಯಲ್ಲಿ ಅತ್ಯಂತ ಸತ್ಯ ಶುದ್ಧ ಸಸ್ಯಾಹಾರಿ ಆಹಾರವು ಕಡ್ಡಾಯವಾಗಿತ್ತು. ಆಗ ಹೊರ ದೇಶಗಳಿಂದ ಬಂದ ಶರಣರಿಗೆ ಇರುಸು ಮುರುಸು ಆಗಿರಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಮರು ಜೀವಕ್ಕೆ ಜೀವವೇ ಆಧಾರ, ಜೀವ ತಪ್ಪಿಸಿ ಜೀವಿಸಬಾರದು. ಬೀಜದಲ್ಲೂ ಸಸ್ಯದಲ್ಲೂ ಜೀವವಿದೆ. ಕಾರಣ ಅಹಿಂಸೆ ಪರಮೋ ಧರ್ಮವೆಂಬ ಶ್ರಾವಕರ ನಿಲುವನ್ನು, ಜೈನರ ವಿಚಾರ ಗಟ್ಟಿಯಾಗಿ ನಿಲ್ಲದು ಎಂಬ ಶಂಕೆಯನ್ನು ವ್ಯಕ್ತಪಡಿಸಿ, ಲಿಂಗಾರ್ಪಿತವಾದದ್ದೆಲ್ಲವೂ ಶುದ್ಧ, ಉಳಿದುದೆಲ್ಲ ಜೀವನ್��ಯ ಕಾಣಾ ಗುಹೇಶ್ವರ ಎಂದು ಸಮಜಾಯಿಸಿ ಆಹಾರ ಮತ್ತು ಪ್ರಸಾದದ ಘನತೆಯನ್ನು ಹೆಚ್ಚಿಸಿದ್ದಾರೆ.
ಒಂದು ವಚನದಲ್ಲಿ ಬಸವಣ್ಣನವರೂ ಹೀಗೆ ಹೇಳುತ್ತಾರೆ:
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾ೦ಸ
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವನಿರಲು
ಅವರ ಲಿಂಗನೆಂಬೆ ಸಂಗನೆಂಬೆ
ಕೂಡಲ ಸಂಗಮದೇವ ಅವರ ಮುಖಿಲಿಂಗಿಗಳೆ೦ಬೆನು. ಸಂಖ್ಯೆ ೭೨೦ ಪುಟ ೧೮೦
ಶರಣರು ಪರಿವರ್ತನೆಗೆ ಹಾತೊರೆದವರು. ಬದುಕಿನ ಕ್ರಮವನ್ನೇ ಪ್ರಶ್ನಿಸಿ ಭಕ್ತರನ್ನು ದೂರ ಇಡದೆ ಅವರನ್ನು ಪ್ರಮುಖ ವಾಹಿನಿಗೆ ತಂದು ಅವರನ್ನು ಸತ್ಯವಂತರನ್ನು, ಶುದ್ಧ ಸಿದ್ಧಕರನ್ನು ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು. ಬೇರೆ ಬೇರೆ ಆಹಾರ ಪದ್ಧತಿಯ ಶರಣರು ಮುಂದೆ ಕಾಲಕಳೆದಂತೆ ಸಸ್ಯಾಹಾರಿಗಳಾದರು.
ಅಂತೆಯೇ ಕಾಬೂಲದಿಂದ ಬಂದ ಪೀರ ಮಹಮ್ಮದ ಮುಂದೆ ಕಲ್ಯಾಣದ ಮುಸುರೆ ಗುಂಡಿಯಲ್ಲಿದ್ದು ಹನ್ನೆರಡು ವರ್ಷ ಕನ್ನಡ ಕಲಿತು ಶರಣರು ಉಂಡುಟ್ಟ ಪ್ರಸಾದವೂ ವ್ಯಯವಾಗದಂತೆ ನೋಡಿಕೊಂಡು ಅದರಲ್ಲಿನ ಅಲ್ಪ ಸ್ವಲ್ಪ ಆಹಾರವನ್ನೇ ತಾವು ಪ್ರಸಾದವೆಂದು ಸ್ವೀಕರಿಸಿ, ಇತರರಿಗೂ ಹಂಚಿ ಗುಪ್ತವಾಗಿ ಬದುಕಿದ್ದರು. ಮುಂದೆ ಇವರೇ ಮರುಳ ಶಂಕರದೇವನಾಗಿ ಪ್ರಸಿದ್ಧಿ ಪಡೆದರು. ಪ್ರಸಾದ ಅಪವ್ಯಯವಾಗಬಾರದು, ಸತ್ಯ ಶುದ್ಧವಾಗಿರಬೇಕು ಎಂಬುದಕ್ಕೆ ಇಂತಹ ಹಲವಾರು ಶರಣರ ನಿದರ್ಶನಗಳು ಸಿಗುತ್ತವೆ.
ಶರಣರು ಸಸ್ಯಾಹಾರಿಗಳಾಗಿದ್ದರು ಎಂದು ಆರ್ ಸಿ ಕಾರ್ ಅವರು The Monograph of Lingayata religion -RC.CARR .1906 ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲವೆಂದು ಶರಣರು ಹೇಳಿದಂತೆ ಈ ಜೀವ ಕೋಶಕ್ಕೆ ಆಹಾರವನ್ನು ಪದಾರ್ಥವಾಗಿರಿಸದೆ ಪ್ರಸಾದವೆ೦ಬ ಪವಿತ್ರ ಫಲವನ್ನು ಕಂಡುಕೊಂಡು ಶರಣರು ಮಾನವತೆಯ ಮಹಾಸಿದ್ಧಿ ಸಾಧಿಸಿದರು. ಶರಣರು ನೀಡಿದ ಉನ್ನತ ವಿಚಾರ, ಆದರ್ಶಗಳು ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಕಲ್ಯಾಣ ನಾಡಿನ ಶರಣರು ನಿತ್ಯ ಸತ್ಯ ಶೋಧಕರು. ತಾವು ಕಂಡ ತಾತ್ವಿಕ ನಿಲುವನ್ನು ಇನ್ನೊಬ್ಬರಿಗೂ ಉಣಬಡಿಸಿದವರು.
ಪ್ರಸಾದವಿದ್ದಲ್ಲಿ ಎಂಜಲವಿಲ್ಲ, ಜಾತಿಯಿಲ್ಲ, ಭೇದವಿಲ್ಲ. ಅದು ಸಮತೆ ಸಾಮರಸ್ಯ ಕಂಡುಕೊಳ್ಳುವ ಸೂತ್ರ. ಕಾಯಕ, ದಾಸೋಹ, ಪ್ರಸಾದ ಶರಣರು ಜಗತ್ತಿಗೆ ನೀಡಿದ ಉತ್ಕೃಷ್ಟ ವಿಚಾರಗಳು.
Comments 2
ವಿರೇಶ ಮ ಉಪ್ಪಲದಿನ್ನಿ
Sep 13, 2021ತುಂಬ ಮೌಲ್ಯಯುತ ಮಾಹಿತಿ ನೀಡಿದಕ್ಕೆ ಹ್ರದಯ ಪೂರ್ವ ಧನ್ಯವಾದಗಳು ಶರಣು ಶರಣಾರ್ಥಿ.
Veereeh Veeresh
Feb 20, 2023ಧನ್ಯವಾದಗಳು ಸರ್