
ವೇದ ಶಾಸ್ತ್ರದವರ ಹಿರಿಯರೆನ್ನೆ…
ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
ಬಸವಣ್ಣನವರು ಕನ್ನಡ ನಾಡು ಕಂಡ ಅಪರೂಪದ ಅನುಭಾವಿ, ಸಮಾಜಸುಧಾರಕ, ಆರ್ಥಿಕ ತಜ್ಞ, ಸಕಲ ಜೀವಾತ್ಮರ ಒಳಿತು ಬಯಸಿದ ಶರಣ. ಪೂಜ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳುವಂತೆ ಬಸವಣ್ಣನವರು ‘ಗೃಹಸ್ಥ ಜಗದ್ಗುರು’. ಅವರ ಉದ್ದೇಶ ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವೂ ಆಗಿತ್ತು. ಅವರಿಗೆ ಕೇವಲ ಭಕ್ತಿಭಂಡಾರಿ ಎಂದು ಲೇಬಲ್ ಹಚ್ಚುವ ಸಾಹಿತ್ಯ ವರ್ಗವೂ ಇದೆ. ಅವರು ಭಕ್ತಿಭಂಡಾರಿಯಾಗಿದ್ದಂತೆ ಲೋಕಕಲ್ಯಾಣದ ಕಾಯಕ ಮಾಡಿದ ಅರ್ಥಸಚಿವರು ಎನ್ನುವ ಸತ್ಯವನ್ನ ಯಾರೂ ಮರೆಯಬಾರದು. ಬಸವಣ್ಣನವರದು ಬಹುಮುಖ ವ್ಯಕ್ತಿತ್ವ. ಅದಕ್ಕೆ ಅವರ ಮತ್ತು ಇತರ ಶರಣರ ವಚನಗಳು ಸಾಕ್ಷಿ ನುಡಿಯುತ್ತಿವೆ. ಅವರು ಶಿವನಿಗೆ ಮತ್ತು ಶಿವನ ಸಂತಾನಕ್ಕೆ ಕೇಡಿಲ್ಲದ ಹಾಗೆ ಆಡಿದರು, ಹಾಡಿದರು ಮತ್ತು ಬರೆದರು. ಅವರು ಆಡಿದ್ದು, ಹಾಡಿದ್ದು, ಬರೆದದ್ದು ಲೋಕಾನುಭವ, ಆತ್ಮಾನುಭವ, ಶಿವಾನುಭವದ ಮೂಲಕ. ವಿಷಾದದ ಸಂಗತಿ ಎಂದರೆ ಅವರು ವೇದೋಪನಿಷತ್ತುಗಳಿಂದ ಪ್ರಭಾವಿತರಾಗಿ ಅವುಗಳ ಸಾರವನ್ನೇ ಕನ್ನಡದಲ್ಲಿ ವಚನಗಳ ರೂಪದಲ್ಲಿ ಹಿಡಿದಿಟ್ಟಿದ್ದಾರೆ ಎನ್ನುವ ಮಹಾನುಭಾವರೂ ಇದ್ದಾರೆ. ಅದಕ್ಕಾಗಿ ಲೇಖನ ಬರೆಯುತ್ತಾರೆ. ಪುಸ್ತಕ ಪ್ರಕಟಿಸುತ್ತಾರೆ. ಪ್ರಕಟಿಸಿದ ಪುಸ್ತಕಗಳ ಪ್ರಚಾರ, ಮಾರಾಟಕ್ಕಾಗಿ ಲಕ್ಷ, ಕೋಟಿ ಹಣವನ್ನು ನೀರಿಗಿಂತ ಕಡೆಯಾಗಿ ದುರ್ವಿನಿಯೋಗ ಮಾಡುತ್ತಾರೆ. ‘ಜನಮರುಳೋ ಜಾತ್ರೆ ಮರುಳೋ’ ಎನ್ನುವ ಹಾಗೆ ಜನರೂ ಅಂತಹ ಪುಸ್ತಕಗಳನ್ನು ಕೊಳ್ಳುತ್ತಾರೆ.
ಪುಸ್ತಕಗಳಲ್ಲಿ ಎರಡು ವರ್ಗ. ಒಂದು ಕೈ ತೊಳೆದುಕೊಂಡು ಮುಟ್ಟುವ ಅಥವಾ ಓದುವ ಪುಸ್ತಕಗಳು. ಮತ್ತೊಂದು ಮುಟ್ಟಿ ಇಲ್ಲವೇ ಓದಿ ಕೈ ತೊಳೆದುಕೊಳ್ಳಬೇಕಾದ ಪುಸ್ತಕಗಳು. ತಾವೂ ಬಸವ ಪರಂಪರೆಯವರೇ ಎಂದು ಹೇಳಿಕೊಳ್ಳುವ ಕೆಲವು ಪ್ರಾಜ್ಞರು ವಚನಕಾರರ ತತ್ವ ಸಿದ್ಧಾಂತಗಳನ್ನು ತಮಗೆ ಬೇಕಾದಂತೆ ತಿರುಚಿ ವ್ಯಾಖ್ಯಾನ ಮಾಡುವರು. ಇಂಥವರು 12ನೆಯ ಶತಮಾನದಲ್ಲೂ ಇದ್ದರು, ಈಗಲೂ ಇದ್ದಾರೆ. ಅಂಥವರನ್ನೇ ಶನಿ ಸಂತಾನ ಎನ್ನುವುದು. ಅವರು ವಚನಗಳ ಅರ್ಥವನ್ನು ತಿರುಚಿ ತಮ್ಮದೇ ಸರಿ ಎನ್ನುವಂತೆ ಬಿಂಬಿಸಿ ಜನರನ್ನು ದಿಕ್ಕುತಪ್ಪಿಸುವಲ್ಲಿ ಪ್ರವೀಣರು. ಶರಣರ ವಚನಗಳನ್ನು ವೇದ, ಉಪನಿಷತ್ತುಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ, ವಿಮರ್ಶೆ ಮಾಡುವ ಅಗತ್ಯವಿಲ್ಲ. ವಚನಗಳು ಆಯಾ ಶರಣರ ಅನುಭವ, ಅನುಭಾವ ಪ್ರಧಾನವಾದವುಗಳೇ ಹೊರತು ವೇದ, ಉಪನಿಷತ್ತುಗಳ ಹಿನ್ನೆಲೆಯಲ್ಲಿ ಮೂಡಿ ಬಂದವುಗಳಲ್ಲ. ಬಹುತೇಕ ಶರಣರಿಗೆ ವೇದ, ಉಪನಿಷತ್ತುಗಳ ಪರಿಚಯವೇ ಇರಲಿಲ್ಲ. ಕಾರಣ ಅವರು ತಳಸಮುದಾಯದಿಂದ ಬಂದವರು ಮತ್ತು ಅಕ್ಷರ ವಂಚಿತರು. ಅನುಭವ ಮಂಟಪದ ಮೂಲಕ ಅನುಭಾವಿಗಳಾಗಿ ತಮ್ಮ ಅನುಭವವನ್ನು ವಚನಗಳಲ್ಲಿ ಹಿಡಿದಿಟ್ಟವರು. ಕೆಲವರು ವಚನಗಳನ್ನು ಶೈವಾಗಮಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಬೇಕು ಎನ್ನುವರು. ಆಗಮಗಳನ್ನೇ ಶರಣರು ನಂಬಿದವರಲ್ಲ. ಅವರು ವೇದ, ಶಾಸ್ತ್ರ, ಪುರಾಣ, ಆಗಮಗಳನ್ನು ತುಂಬಾ ಕಟುವಾಗಿ ತರಾಟೆ ತೆಗೆದುಕೊಂಡಿದ್ದಕ್ಕೆ ಸಾಕಷ್ಟು ವಚನಗಳು ದೊರೆಯುತ್ತವೆ. ಅಂಥ ಬಸವಣ್ಣನವರ ಒಂದು ವಚನ ನೋಡಿ:
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ಮಾನವ ಇಹ-ಪರದ ಬದುಕಿಗೆ ಬೇಕಾದ ಎಲ್ಲ ಜ್ಞಾನವೂ ವೇದ, ಶಾಸ್ತ್ರ, ತರ್ಕ, ಪುರಾಣ, ಆಗಮಗಳಲ್ಲಿ ಅಡಕವಾಗಿದೆ ಎನ್ನುವ ಪ್ರತೀತಿ ಸನಾತನ ಪರಂಪರೆಯವರದು. ಇದನ್ನು ಶರಣ ಪರಂಪರೆ ಒಪ್ಪುವುದಿಲ್ಲ. ‘ವೇದ ಶಾಸ್ತ್ರ ಆಗಮ ಪುರಾಣಂಗಳಲ್ಲಿ ಶೃತಿ ಸ್ಮೃತಿಗಳಲ್ಲಿ ನುಡಿವುದು ಪುಸಿ’ ಎನ್ನುವರು ಅಮುಗೆ ರಾಯಮ್ಮನವರು. ಶರಣರು ಪುರಾತನರ ವಚನಗಳಿಗೆ ಮಹತ್ವ ಕೊಟ್ಟವರು. ಹಾಗಾಗಿ ರಾಯಮ್ಮ ಇದೇ ವಚನದಲ್ಲಿ ‘ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಭಿನ್ನವಾಗಲು ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ’ ಎನ್ನುವರು. ಸಕಳೇಶ ಮಾದರಸರು ‘ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ, ಭೃತ್ಯಾಚಾರವೆ ಆಚಾರವಯ್ಯಾ. ಮತ್ತೆ ದೇವರಿಲ್ಲ, ಮತ್ತೆ ಆಚಾರವಿಲ್ಲ, ಮತ್ತೆ ಸುಭಾಷೆಯೆಂಬುದಿಲ್ಲ. ಮಹಂತ ಸಕಳೇಶ್ವರದೇವರನೊಲಿಸಿದ ಪುರಾತನ ಪಥವಿದು. ಅವಿತಥವಿಲ್ಲದೆ ನಂಬುವುದು’ ಎಂದಿದ್ದಾರೆ. ಹಾವಿನಹಾಳ ಕಲ್ಲಯ್ಯನವರು ‘ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ’ ಎಂದು ಕರೆಕೊಟ್ಟಿದ್ದಾರೆ.
ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ.
ಸ್ಮೃತಿಗಳು ಸಮುದ್ರದ ಪಾಲಾಗಲಿ;
ಶೃತಿಗಳು ವೈಕುಂಠವ ಸೇರಲಿ;
ಪುರಾಣಗಳು ಅಗ್ನಿಯ ಸೇರಲಿ;
ಆಗಮಗಳು ವಾಯುವ ಹೊಂದಲಿ.
ಎಮ್ಮ ನುಡಿ ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ
ಹೃದಯದೊಳು ಗ್ರಂಥಿಯಾಗಿರಲಿ.
ಇದು ಶಿವಯೊಗಿ ಸಿದ್ಧರಾಮೇಶ್ವರರ ವಚನ. ಅವರು ಇಲ್ಲಿ ಹೇಳಿರುವುದನ್ನು ಗಮನಿಸಬೇಕು. ‘ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ’ ಎಂದಿದ್ದಾರೆ. ನಮ್ಮಲ್ಲಿ ಎರಡು ಪರಂಪರೆ / ಸಂಸ್ಕೃತಿಗಳ ಅನುಯಾಯಿಗಳಿದ್ದಾರೆ. ಒಂದು ಪುರಾತರ, ಮತ್ತೊಂದು ಸನಾತನ. ಸನಾತನ ಪರಂಪರೆಯವರು ವೇದ, ಶಾಸ್ತ್ರ, ಪುರಾಣ, ಸ್ಮೃತಿ, ಶ್ರುತಿ, ಆಗಮ ಇಂಥವುಗಳನ್ನು ತಮ್ಮ ನುಡಿ, ನಡೆಗೆ ಸಾಕ್ಷಿಯಾಗಿ ನೀಡುವರು. 12ನೆಯ ಶತಮಾನದ ವಚನಕಾರರು ಸಾಕ್ಷಿಯಾಗಿ ನೀಡುವುದು ಇವುಗಳನ್ನಲ್ಲ. ಅವರು ಪುರಾತರ ಸಂಸ್ಕೃತಿಗೆ, ನಡೆ-ನುಡಿಗೆ ಒತ್ತು ಕೊಡುವರು. ಪುರಾತರ ನುಡಿ ಎಂದರೆ ಬಸವಾದಿ ಶರಣರ ಅಂತಃಸಾಕ್ಷಿಯ ವಚನಗಳು. ಅದುಕಾರಣವೇ ಚನ್ನಬಸವಣ್ಣನವರು ‘ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು’ ಎಂದರೆ ಬಸವಣ್ಣನವರು ‘ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತರಾಣೆ!’ ಎಂದಿದ್ದಾರೆ. ಪ್ರಭುದೇವರು ‘ಪುರಾತರನು ನೆನೆದು ಕೃತಾರ್ಥರಾದೆವೆಂಬರು, ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು’ ಎಂದು ಎಚ್ಚರಿಸಿದ್ದಾರೆ. ವಚನಗಳನ್ನು ಪಶ್ಚಿಮದ ಚಿಂತಕರ ಕಣ್ಣಿನಲ್ಲಿ ನೋಡುವುದು ಸಲ್ಲದು ಎನ್ನುವ ತೀರ್ಮಾನ ಇತ್ತೀಚಿನ ಕೆಲವು ಬುದ್ಧಿವಂತರ ಕೂಗು. ವಚನಗಳನ್ನು ಪಶ್ಚಿಮ ಅಥವಾ ಪೂರ್ವದ ಇಲ್ಲವೇ ಸನಾತನ ಕಣ್ಣುಗಳಿಂದ ನೋಡದೆ ಪುರಾತರ ಕಣ್ಣುಗಳಿಂದ ನೋಡುವುದು ಅವುಗಳಿಗೆ ನ್ಯಾಯ ಒದಗಿಸಿದಂತೆ.
ಇತ್ತೀಚೆಗೆ ‘ವಚನ ದರ್ಶನ’ ಎನ್ನುವ ಕೃತಿಯೊಂದು ಹೊರಬಂದು ಸದ್ದು ಮಾಡುತ್ತಿದೆ. ಇದರ ಗೌರವ ಸಂಪಾದಕರು ಒಬ್ಬ ಜಗದ್ಗುರುಗಳು. ‘ನಾಡಿನ ಹಲವಾರು ಹಳ್ಳಿಗಳಲ್ಲಿ ಶುದ್ಧ ಗಣಪತಿ ಸ್ಥಾಪಿಸುವುದರ ಮೂಲಕ ಸಾತ್ವಿಕ ಗಣೇಶೋತ್ಸವ ಆಚರಣೆಗೆ ಮಾರ್ಗದರ್ಶನ’ ಮಾಡಿದವರು ಎಂದು ಅವರ ಪರಿಚಯ ಮಾಡಿಕೊಡಲಾಗಿದೆ. ಗಣಪತಿಯ ಆರಾಧಕ ಜಗದ್ಗುರುಗಳು ವಚನ ಸಾಹಿತ್ಯಕ್ಕೆ ನಿಜಕ್ಕೂ ನ್ಯಾಯ ಒದಗಿಸಬಲ್ಲರೇ ಎಂದು ವಚನಾನುಭವಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಶರಣರು ಯಾವುದನ್ನು ನಿರಾಕರಿಸಿದರೋ ಅದನ್ನೇ ಪುರಸ್ಕರಿಸುವವರು ಶರಣರ ವಿಚಾರಗಳಿಗೆ ಗೌರವ ಕೊಡಲು ಹೇಗೆ ಸಾಧ್ಯ? ಗೌರವ ಕೊಟ್ಟಂತೆ ನಟಿಸುವ ಅವರ ಹಿಂದಿರುವ ಸಂಚನ್ನು ವಚನ ಪ್ರೇಮಿಗಳು ಅರ್ಥ ಮಾಡಿಕೊಳ್ಳಬೇಕು. ‘ವಚನ ದರ್ಶನ’ ಕೃತಿಯ ಸಂಪಾದಕೀಯ ಪ್ರಾರಂಭವಾಗುವುದೇ ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಎನ್ನುವ ಸಂಸ್ಕೃತ ಶ್ಲೋಕದಿಂದ. ವಚನ ದರ್ಶನವನ್ನು ಸಂಸ್ಕೃತ ಶ್ಲೋಕದಿಂದ ಪರಿಚಯಿಸುವ ಸಂಪಾದಕರ ಗುಪ್ತ ಪ್ರಣಾಳಿಕೆ (ಅಜೆಂಡಾ) ಏನಿರಬಹುದೆಂದು ಒಬ್ಬ ದಡ್ಡನಿಗೂ ಅರ್ಥವಾಗುತ್ತದೆ. ಅವರು ‘ವಚನ ಸಾಹಿತ್ಯ ಭಕ್ತಿ ಪಂಥವನ್ನು ಜನಸಾಮಾನ್ಯರ ಹತ್ತಿರಕ್ಕೆ ತಂದಿದೆ’ ಎನ್ನುವರು. ಅಂದರೆ ವಚನಕಾರರು ಒತ್ತು ಕೊಡುವುದು ಕೇವಲ ಭಕ್ತಿಗೆ ಎಂದಾಗುವುದು. ವಚನಕಾರರ ಭಕ್ತಿಗೆ ತಳಹದಿ ಕಾಯಕ, ದಾಸೋಹ ಮತ್ತು ಶಿವಯೋಗ. ಅವುಗಳ ಮೂಲಕ ಸಮಾನತೆ ಮತ್ತು ಸಕಲ ಜೀವಾತ್ಮರ ಒಳಿತಿಗೆ ಹಾಕಿಕೊಟ್ಟ ಹೆದ್ದಾರಿಯನ್ನು ಮರೆಯಬಾರದಲ್ಲವೇ? ವಚನಗಳಲ್ಲಿ ಭಕ್ತಿ, ಜ್ಞಾನ, ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಸಮಾನತೆ, ಜಾತ್ಯತೀತತೆ ಮುಂತಾದ ತತ್ವಗಳ ಬೃಹತ್ ಭಂಡಾರವೇ ಇದೆ.
‘ವಚನಗಳನ್ನು ಅರ್ಥೈಸಿಕೊಳ್ಳುವಾಗ ಬ್ರಿಟಿಷರು ಹಾಕಿದ್ದ ಮಾನದಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ…’ ಎಂದೆಲ್ಲ ಹರಟಿದ್ದಾರೆ. ವಚನಗಳನ್ನು ಯಾರೂ ಬ್ರಿಟಿಷರ ಮಾನದಂಡಗಳ ಹಿನ್ನೆಲೆಯಲ್ಲಿ ಅರ್ಥೈಸಿಲ್ಲ. ಸಂಪಾದಕರು ವಚನಗಳ ತಿರುಳನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ ಎನ್ನುವುದು ಸಂಪಾದಕ ಮಂಡಳಿಗೇ ಅನ್ವಯಿಸುವ ಮಾತು. ಅನಾರೋಗ್ಯಕರ ವಾತಾವರಣ ಸೃಷ್ಟಿಯ ಹಿನ್ನೆಲೆಯಲ್ಲೇ ‘ವಚನ ದರ್ಶನ’ ಕೃತಿ ಹೊರಬಂದಿದೆ ಎನ್ನುವುದಕ್ಕೆ ಅದರ ಮುಖಪುಟವೇ ಕನ್ನಡಿ. ಅಲ್ಲಿರುವ ಚಿತ್ರ ಬಸವಣ್ಣ ಅಥವಾ ಮತ್ತಾವುದೇ ಶರಣ ಶರಣೆಯರದಲ್ಲ. ಅವರ ಕೊರಳಲ್ಲಿ ರುದ್ರಾಕ್ಷಿ ಮಾಲೆಯ ಬದಲು ತುಳಸಿಮಾಲೆ ಇದೆ. ಎದೆಯ ಮೇಲಿನ ಇಷ್ಟಲಿಂಗ ಬೆಂಕಿಯಲ್ಲಿ ಅರಳಿದಂತಿದೆ. ತಲೆಯ ಮೇಲೆ ಕೂದಲುಗಳನ್ನು ಸಿಂಬೆ ಕಟ್ಟಿದಂತೆ ಕಾಣುವುದು. ಪಕ್ಕದಲ್ಲಿ ಬಿಲ್ಲು ಬಾಣ ಇದೆ. ಇದೇ ತೋರುತ್ತದೆ ಈ ಕೃತಿಯ ಹಿಂದಿರುವ ಹುನ್ನಾರವನ್ನು. ಶರಣರ ಶಿವ ಪೌರಾಣಿಕ ಶಿವನಲ್ಲ. ಆತ ಅಗಮ್ಯ, ಅಗೋಚರ, ಅಪ್ರತಿಮನಾದ ಚಿತ್ ಶಕ್ತಿ. ಶಿವನಿಗೆ ಕರಚರಣಾದಿಗಳಿಲ್ಲ. ಶರಣ ಪರಂಪರೆಗೂ ಭಾರತೀಯ ಭಕ್ತಿ ಪರಂಪರೆಗೂ ಸಂಬಂಧವಿಲ್ಲ. ಹೀಗಾಗಿ ಈ ಕೃತಿಯಲ್ಲಿ ವಚನ ಸಾಹಿತ್ಯದ ಮೂಲ ಉದ್ದೇಶವನ್ನೇ ತಿರುಚುವ ಕಾರ್ಯ ವ್ಯವಸ್ಥಿತವಾಗಿಯೇ ನಡೆದಿದೆ. ಅವರೇ ಹೇಳುವಂತೆ ವಚನಗಳನ್ನು ಮೂಲದಲ್ಲಿಯೇ ಓದಿ ಅರ್ಥೈಸಿಕೊಳ್ಳಬೇಕು. ಅದಕ್ಕಾಗಿ ಈ ‘ವಚನ ದರ್ಶನ’ ಖಂಡಿತ ಬೇಕಿಲ್ಲ. ಲಿಂಗಾಯತ ಸ್ವಾಮಿಗಳನ್ನೇ ಸಂಪಾದಕೀಯ ಇತ್ಯಾದಿಗಾಗಿ ಬಳಸಿಕೊಳ್ಳುವಲ್ಲಿ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎನ್ನುವ ಸಂಚು ಎದ್ದು ತೋರುತ್ತದೆ.
ಸಂಪಾದಕ ಮಂಡಳಿಯಲ್ಲಿರುವ ಕೆಲವರಿಗೆ ವಚನ ಸಾಹಿತ್ಯದ ಆಳ ಅಧ್ಯಯನದ ಕೊರತೆ ಇದೆ ಎನ್ನುವುದು ಅವರ ಪರಿಚಯ ಹಾಗೂ ಲೇಖನಗಳ ಅಪ್ರಬುದ್ಧ ಬರವಣಿಗೆಯಿಂದ ವೇದ್ಯವಾಗುವುದು. ‘ಶಿವಶರಣರು ಋಷಿಗಳಂತೆ ತಪಸ್ವಿಗಳು ಮತ್ತು ಅನುಭಾವಿಗಳು’ ಎಂದಿದ್ದಾರೆ. ಶರಣರು ಅಡವಿ, ಹಿಮಾಲಯ, ಗುಹೆ ಸೇರಿ ತಪಸ್ಸು ಮಾಡಿದ ಋಷಿಮುನಿಗಳಲ್ಲ. ಅವರು ‘ಕಾಯಕವೆ ಕೈಲಾಸ’ ಎಂದು ನಂಬಿದವರು. ಕಾಯಕವೆ ಅವರಿಗೆ ತಪಸ್ಸು. ಇದಕ್ಕೆ ವಚನಗಳೇ ಆಧಾರ.
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
ಆಯ್ದಕ್ಕಿ ಮಾರಯ್ಯನವರ ಈ ವಚನ ಹೇಳುವುದು ಗುರುದರ್ಶನ, ಲಿಂಗಪೂಜೆ, ಜಂಗಮ ದಾಸೋಹಗಳಿಗಿಂತ ಕಾಯಕವೇ ಮುಖ್ಯ ಎಂದು. ಕಾರಣ ಅಮರೇಶ್ವರ ಲಿಂಗ ಒಲಿಯುವುದು ಕಾಯಕಕ್ಕೇ ಹೊರತು ಕೇವಲ ಪೂಜೆ, ತಪಸ್ಸು ಇತ್ಯಾದಿಗೆ ಅಲ್ಲ. ಎಲ್ಲ ಶರಣರೂ ಶಿವಯೋಗದ ಜೊತೆಗೆ ಕಾಯಕಕ್ಕೆ ಒತ್ತು ಕೊಟ್ಟವರೇ ಹೊರತು ಋಷಿಗಳಂತೆ ತಪಸ್ಸಿಗೆ ಅಲ್ಲ ಎನ್ನುವುದು ಸಂಪಾದಕ ಮಂಡಳಿಗೆ ಅರ್ಥವಾಗಿಲ್ಲ ಎಂದರೆ ಅವರ ಕೃತಿ ‘ವಚನ ದರ್ಶನ’ ಹೇಗಾಗುತ್ತದೆ? ಮುನ್ನುಡಿ, ಸಂಪಾದಕೀಯ ಓದಿದರೆ ಈ ಕೃತಿಯ ಹಿಂದಿನ ಸಂಚು ಸ್ಪಷ್ಟವಾಗುವುದು. ಇಲ್ಲಿ 20 ಲೇಖನಗಳಿವೆ. ಬಸವಾದಿ ಶರಣರ ವಿಚಾರಗಳಿಗೆ ಮಸಿ ಬಳಿಯುವ ಕೆಲಸ ಮಾಡಿ ಸಾಕಷ್ಟು ವಾದ ವಿವಾದಗಳಿಗೆ ಕಾರಣರಾದ ಜಳಕಿ ಡಂಕಿನ್ ಹಾಗೂ ಬಾಲಗಂಗಾಧರ ಎನ್ನುವ ಪುಣ್ಯಾತ್ಮರ ಸಂತತಿ ಜೀವಂತ ಇದೆ ಎನ್ನುವುದು ಆರಂಭದ ಎರಡು ಮೂರು ಲೇಖನಗಳನ್ನು ಓದಿದಾಗ ಯಾರಿಗಾದರೂ ಅರ್ಥವಾಗುತ್ತದೆ. ಇವರೆಲ್ಲ ಬಹುತೇಕ ಸನಾತನ ಪರಂಪರೆಯವರೇ ಹೊರತು ಪುರಾತನ ಪರಂಪರೆಯವರಲ್ಲ.
ಇಂದಿನ ಬಸವಕಲ್ಯಾಣದಲ್ಲಿ 12ನೆಯ ಶತಮಾನದಲ್ಲಿ ಬಹುದೊಡ್ಡ ಚಳವಳಿ ನಡೆಯಿತು. ಅದರ ಮೂಲ ಉದ್ದೇಶ ಧಾರ್ಮಿಕ ನೆಲೆಗಟ್ಟಿನ ಮೇಲೆ ಸಮಸಮಾಜ ಕಟ್ಟುವುದಾಗಿತ್ತು. ಅದಕ್ಕಾಗಿ ಬಸವಣ್ಣನವರು ‘ಮಹಾಮನೆ’, ‘ಅನುಭವ ಮಂಟಪ’ ಎನ್ನುವ ಸಂಸ್ಥೆಗಳನ್ನು ಹುಟ್ಟುಹಾಕಿದರು. ಸರಿಯಾದ ಅಧ್ಯಯನದ ಕೊರತೆ ಇರುವವರು ಅಥವಾ ವಚನ ಚಳವಳಿಯ ಬಗ್ಗೆ ಭಯಗೊಂಡ ಮತ್ಸರಿಗರು ‘ಅನುಭವ ಮಂಟಪ, ಮಹಾಮನೆ ಇರಲೇ ಇಲ್ಲ. ವಚನಗಳು ಬರೆದದ್ದಲ್ಲ, ಸೃಷ್ಟಿಸಿದ್ದು. ಬಸವಾದಿ ಶರಣರು ಅಸಮಾನತೆಯ ವಿರುದ್ಧ ಚಳವಳಿಯನ್ನೇ ನಡೆಸಿಲ್ಲ. ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯೇ ಅಲ್ಲ. ಭಾರತದಲ್ಲಿ ಕ್ರಾಂತಿ, ಚಳವಳಿಯ ಶಬ್ದಗಳಿಗೆ ಜಾಗವೇ ಇಲ್ಲ’ ಎಂದೆಲ್ಲ ಅಂದಿನಿಂದ, ಇಂದಿನವರೆಗೆ, ಈಗಲೂ ಅರಚುತ್ತಲೇ ಇದ್ದಾರೆ. ತಮ್ಮ ಅರಚಿವಿಕೆಯನ್ನು ಸಮರ್ಥಿಸಿಕೊಳ್ಳಲು ಬೇಕಾದ ಲೇಖನ ಮತ್ತು ಪುಸ್ತಕಗಳನ್ನು ಬರೆಸುತ್ತಿದ್ದಾರೆ. ವಿವಿಧ ದೃಶ್ಯಮಾಧ್ಯಮಗಳ ಮೂಲಕ ಅಸತ್ಯವನ್ನೇ ಸತ್ಯಮಾಡಲು ಹೆಣಗುತ್ತಿದ್ದಾರೆ. ಅವರ ವಾದ, ಗೊಣಗಾಟ, ಮತ್ಸರ, ಕುಹಕತನ, ಅತೀಬುದ್ಧಿವಂತಿಕೆ ಅವರಿಗೇ ಮುಳುವಾಗುವುದರಲ್ಲಿ ಅನುಮಾನವಿಲ್ಲ. ಅವರು ಹೇಳುವಂತೆ ಅನುಭವ ಮಂಟಪ, ಮಹಾಮನೆ ಕಲ್ಪನೆಗಳಲ್ಲ. ವಚನಗಳು ಅಂದಿನ ಶರಣರ ಜೀವನಾನುಭವದ ಅಣಿಮುತ್ತುಗಳು. ಅಂಥ ವಚನಗಳು ಇದ್ದುದಕ್ಕೆ ಅವು ಅಂದಿನಿಂದ ಇಂದಿನವರೆಗೂ ಉಳಿದು ಬಂದಿರುವುದೇ ಪ್ರತ್ಯಕ್ಷ ಸಾಕ್ಷಿ. ಅಂದು ಕಲ್ಯಾಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿವರ್ತನೆಯ ತಂಗಾಳಿಯೊಂದಿಗೆ ಬಿರುಗಾಳಿ ಸಹ ಬೀಸಿದ್ದನ್ನು ವಚನಗಳೇ ಗಟ್ಟಿಯಾಗಿ ಹೇಳುತ್ತವೆ. ಅನುಭವ ಮಂಟಪದಲ್ಲಿ ಶರಣರೆಲ್ಲ ಸೇರಿ ಪರಸ್ಪರ ಚಿಂತನ ಮಂಥನ ನಡೆಸುತ್ತಿದ್ದ ಉದ್ದೇಶ ಸುಸ್ಥಿರ ಸಮಸಮಾಜ ಕಟ್ಟುವುದಾಗಿತ್ತು. ಅದಕ್ಕಾಗಿ ಬೇಕಾದ ಆದರ್ಶ ರೀತಿ-ನೀತಿ-ನಿಯಮಗಳನ್ನು ರೂಪಿಸಿ ಜಾರಿಯಲ್ಲಿ ತಂದಿದ್ದರು.
ವಚನಗಳು ಜಾತ್ಯತೀತತೆ, ಲಿಂಗಸಮಾನತೆ, ಕಾಯಕ ಸಮಾನತೆ, ಸ್ಥಾವರ ದೇವರ ನಿರಾಕರಣೆ ಇತ್ಯಾದಿ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುತ್ತ ಬಂದಿವೆ. ವಚನಕಾರರು ಹೇಳಿದ್ದು ಮಾತ್ರವಲ್ಲ ಮೊದಲು ತಾವು ನಡೆದು ನುಡಿದವರು. ‘ಭಕ್ತಿ ಸುಭಾಷೆಯ ನುಡಿಯ ನುಡಿಯುವೆ, ನುಡಿದಂತೆ ನಡೆಯುವೆ’, ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ದಯವೇ ಧರ್ಮದ ಮೂಲ’, ‘ಕಿಚ್ಚು ದೈವವಲ್ಲ’ ಎಂದೆಲ್ಲ ಪ್ರತಿಪಾದಿಸಿದವರು. ಜಾತಿಯ ವಿಷಯ ಬಂದಾಗ ಎಲ್ಲರ ಹುಟ್ಟಿನ ಗುಟ್ಟು ಒಂದೇ ಆಗಿರುವಾಗ ಕೆಲವರು ಶ್ರೇಷ್ಠ ಕುಲಜರು, ಮತ್ತೆ ಕೆಲವರು ಕನಿಷ್ಠರು ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವರು. ‘ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’, ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎನ್ನುವಂತಹ ವಚನಗಳು ವಚನಕಾರರ ಜಾತ್ಯತೀತ ನಿಲವನ್ನು ಸಾರುವಂತಿವೆ. ಬಸವಣ್ಣನವರು ಜಾತಿಗೆ ಕೊಡುವ ವಿಶಿಷ್ಟ ಅರ್ಥವನ್ನು ಮುಂದಿನ ವಚನದಲ್ಲಿ ನೋಡಬಹುದು:
ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೋ ಅವದಿರ ಕುಲವೇನೊ?
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು.
ಹುಟ್ಟಿನಿಂದಲೇ ಜಾತಿಯನ್ನು ಗುರುತಿಸುವ ಸನಾತನ ಪರಂಪರೆ ಶರಣರದಲ್ಲ. ಹಾಗಾಗಿ ಸತ್ತ ದನಗಳನ್ನು ಕೊಯ್ದು ಮೆಟ್ಟು, ಬಾರಿಕೋಲು, ಮಿಣಿ ಇತ್ಯಾದಿ ಮಾಡಿಕೊಡುವವ ಮಾದಿಗನಲ್ಲ; ಯಾವನಲ್ಲಿ ಕೊಲ್ಲುವ, ಹಿಂಸಿಸುವ ಆಲೋಚನೆ ಇರುತ್ತದೋ ಅವನೇ ಮಾದಿಗ. ಸತ್ತ ದನಗಳ ಮಾಂಸ ತಿನ್ನುವವ ಹೊಲೆಯನಲ್ಲ; ಭ್ರಷ್ಟಾಚಾರಿಗಳು, ಲಂಚಕೋರರು, ದುರಾಸೆಯ ದಳ್ಳುರಿಯಲ್ಲಿ ಬೇಯುವವರು, ನಡೆ ನುಡಿ ಬೇರೆ ಬೇರೆ ಆಗಿರುವವರು ಹೊಲೆಯರು ಎಂದು ಸ್ಪಷ್ಟಪಡಿಸಿದ್ದಾರೆ. ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವವರೇ ಶ್ರೇಷ್ಠ ಕುಲಜರು ಎಂದು ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಚನಗಳಲ್ಲಿ ಧಾರ್ಮಿಕ, ನೈತಿಕ, ಆಧ್ಯಾತ್ಮಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಪರಿಕಲ್ಪನೆಗಳು ಅಡಕವಾಗಿವೆ. ಅವುಗಳಲ್ಲಿ ಅನುಭವ, ಅನುಭಾವ, ಚಿಂತನೆ, ವೈಚಾರಿಕತೆ ಹೀಗೆ ಏನೆಲ್ಲ ಇವೆ. ಅವುಗಳ ಮೂಲಕ ಆತ್ಮವಿಮರ್ಶೆಯೊಂದಿಗೆ ಲೋಕವಿಮರ್ಶೆಯ ಕಾರ್ಯವನ್ನೂ ವಚನಕಾರರು ಮಾಡಿದ್ದಾರೆ. ಜೀವನ ಮೌಲ್ಯಗಳಿಗೆ ವಚನಕಾರರು ಒತ್ತು ಕೊಟ್ಟಿರುವುದು ಅವರ ವಚನಗಳಿಂದ ವೇದ್ಯವಾಗುವುದು. ಇದಕ್ಕೆ ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’, ‘ದಯವಿಲ್ಲದ ಧರ್ಮವದೇವುದಯ್ಯಾ’, ‘ಇವನಾರವ, ಇವನಾರವ’, ‘ಹರಿವ ಹಾವಿಗಂಜೆ, ಉರಿಯ ನಾಲಗೆಗಂಜೆ’, ‘ಛಲಬೇಕು ಶರಣಂಗೆ ಪರಧನವನೊಲ್ಲೆಂಬ’ ಇಂಥ ವಚನಗಳನ್ನು ನೋಡಬಹುದು. ಬಸವಣ್ಣನವರ ಬಹುತೇಕ ವಚನಗಳು ತಮಗೆ ತಾವೇ ಹೇಳಿಕೊಂಡಂತಿವೆ. ‘ಎನ್ನ ತಪ್ಪು ಅನಂತ ಕೋಟಿ’, ‘ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ’, ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’, ‘ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ, ಕೂಡಲಸಂಗನ ಶರಣರ ಮನ ನೊಂದಡೆ ಆನು ಬೆಂದೆನಯ್ಯ’, ‘ನಂಬಿದ ಹೆಂಡತಿಗೆ ಗಂಡನೊಬ್ಬನೆ, ಕಾಣಿರೋ; ನಂಬಬಲ್ಲ ಭಕ್ತಂಗೆ ದೇವನೊಬ್ಬನೆ, ಕಾಣಿರೋ!’, ‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ’ ಇತ್ಯಾದಿ.
ಅಕ್ಕನ ವಚನಗಳಲ್ಲಿ ಆತ್ಮಾವಲೋಕನದ ಪರಿಯೇ ಎದ್ದು ತೋರುವುದು. ‘ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ’, ‘ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ’, ‘ಎಮ್ಮೆಗೊಂದು ಚಿಂತೆ; ಸಮ್ಮಗಾರಗೊಂದು ಚಿಂತೆ’, ‘ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ!’ ಎನ್ನುವ ವಚನಗಳನ್ನು ನೋಡಬಹುದು. ಹಾಗಂತ ಅವರ ವಚನಗಳಲ್ಲಿ ಲೋಕನೀತಿ ಇಲ್ಲವೆಂದಲ್ಲ. ಮನುಷ್ಯ ಎಂಥವರ ಜೊತೆ ಒಡನಾಟ ಮಾಡಬೇಕು ಎನ್ನುವುದನ್ನು ತುಂಬಾ ಪರಿಣಾಮಕಾರಿಯಾಗಿ ಅಕ್ಕ ಹೇಳಿದ್ದಾಳೆ:
ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪೂರದ ಗಿರಿಯನುರಿಕೊಂಬಂತೆ.
ಸಂಗ ಎರಡು ವಿಧ. ಜ್ಞಾನಿಗಳು ಮತ್ತು ಅಜ್ಞಾನಿಗಳು. ಜ್ಞಾನಿಗಳ ಒಡನಾಟ ಮೊಸರನ್ನು ಕಡೆದು ಬೆಣ್ಣೆಯನ್ನು ಪಡೆಯುವಂತೆ. ಅಜ್ಞಾನಿಗಳ ಒಡನಾಟ ಕಲ್ಲಿನ ಮೇಲೆ ಕಲ್ಲು ಕುಟ್ಟಿ ಬೆಂಕಿಯ ಕಿಡಿ ಪಡೆದಂತೆ. ಕಿಡಿ ಬೆಳಕಲ್ಲ. ಕೊನೆಗೆ ಅಕ್ಕ ಹೇಳುವುದು ಜ್ಞಾನಿಗಳಿಗಿಂತ ಶರಣರ ಸಂಗ ಶ್ರೇಷ್ಠ ಎಂದು. ಶರಣರು ಎಂದರೆ ಅರಿವು, ಆಚಾರ ಒಂದಾದವರು. ನಡೆ, ನುಡಿಯಲ್ಲಿ ಅಂತರ ಇಲ್ಲದವರು. ಅಂಥವರ ಒಡನಾಟದಿಂದ ಕರ್ಪುರದ ಬೆಟ್ಟಕ್ಕೆ ಉರಿ ತಾಗಿದಂತೆ ಎಂದು ಸೊಗಸಾದ ಉಪಮೆ ನೀಡಿದ್ದಾರೆ. ಕರ್ಪುರದ ಗಿರಿಗೆ ಉರಿ ತಾಗಿದರೆ ಕರ್ಪುರವೆಲ್ಲ ಸುಟ್ಟು ತನ್ನ ಅಸ್ತಿತ್ವ ಕಳೆದುಕೊಂಡು ಪರಿಸರಕ್ಕೆ ಸುವಾಸನೆ ಬೀರುವುದು. ಅದರಂತೆ ಶರಣರ ಸಹವಾಸದಿಂದ ವ್ಯಕ್ತಿ ತನ್ನ ಅವಗುಣಗಳನ್ನು ಕಳೆದುಕೊಂಡು ಸಮಾಜಮುಖಿ ಸೇವಾಕಾರ್ಯಗಳಲ್ಲಿ ತೊಡಗುತ್ತ ಶರಣನೇ ಆಗುವನು. ಅದನ್ನೇ ವಚನಕಾರರು ‘ಜ್ಯೋತಿ ಮುಟ್ಟಿದ ಜ್ಯೋತಿಯಂತೆ’ ಎಂದಿದ್ದಾರೆ.
ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ?
ಲಿಂಗಸಂಗಿಯಾದಡೆ ಅನ್ಯಸಂಗವೇತಕ್ಕೆ?
ಈ ಕಂಡ ಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು,
ಮತ್ತೊಬ್ಬರಿಗೆ ಸನ್ನೆಮಾಡುವ ಬೋಸರಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಿಸಿ ಹೊಡೆವಡಲೇತಕ್ಕೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ,
ಇಂತಪ್ಪ ಪಾಪಿಗಳ ನುಡಿಸಿದಡೆ ಅಘೋರನರಕ ತಪ್ಪುದಯ್ಯಾ.
ಇದು ಆದಯ್ಯನವರ ವಚನ. ಇಲ್ಲಿ ಅವರು ಹೇಳುವುದನ್ನು ಗಮನಿಸಬೇಕು. ಪ್ರಾಣಲಿಂಗಸಂಗಿಯಾದವರು ಹೊರಗಿನ ಮತ್ತಾವ ಗುಡಿ ಗುಂಡಾರಗಳ ದೇವರುಗಳಿಗೂ ಹೋಗಬಾರದು. ಹಾಗೆ ಹೋದರೆ ಅಂಥವರನ್ನು ಕಂಡ ಕಂಡ ಪುರುಷರ ಹಿಂದೆ ಸುತ್ತುವ ಚಾಂಡಾಲಗಿತ್ತಿಗೆ ಹೋಲಿಸುವರು. ಯುವತಿ ಮದುವೆಯಾದ ಮೇಲೆ ತನ್ನ ಗಂಡನೊಂದಿಗೆ ಸಂಸಾರ ನಡೆಸಬೇಕು. ಅದಬಿಟ್ಟು ಮತ್ತೊಬ್ಬರಿಗೆ ಮಾತು ಕೊಡುವುದು, ಇನ್ನೊಬ್ಬರನ್ನು ಸನ್ನೆ ಮಾಡಿ ಕರೆಯುವುದು ಮಾಡಿದರೆ ಅಂಥವಳನ್ನು ಆದಯ್ಯನವರು ‘ವಂಚಕಿ’ ಎನ್ನುವರು. ಈ ಉದಾಹರಣೆ ಕೊಡುವ ಮೂಲಕ ಗುರುಕರುಣಿಸಿದ ಇಷ್ಟಲಿಂಗದ ಅನುಸಂಧಾನದ ಮೂಲಕ ಪ್ರಾಣಲಿಂಗ, ಭಾವಲಿಂಗದ ಸಮರಸ ಗೊತ್ತುಮಾಡಿಕೊಳ್ಳದೆ ಮತ್ತೆ ಸ್ಥಾವರ ದೇವಾಲಯಗಳಿಗೆ ಹೋಗಿ ದಿಂಡುರುಳುವವರನ್ನು ಪಾಪಿಗಳು ಎನ್ನುವರು. ಅಂಥ ಪಾಪಿಗಳ ಜೊತೆ ಮಾತನಾಡಿದರೆ ಅದೇ ಅಘೋರ ನರಕ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಆದರೆ ಎಷ್ಟೋ ಜನ ಸಾಹಿತಿಗಳು ವಚನಕಾರರ ವಚನಗಳ ಆಶಯವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಶರಣರು ಸನಾತನ ಪರಂಪರೆಯಿಂದ, ವೇದೋಪನಿಷತ್ತುಗಳಿಂದ ಪ್ರಭಾವಿತರಾದವರು ಎಂದು ಸಾಧಿಸಲು ಏನೆಲ್ಲ ಕಸರತ್ತು ಮಾಡುತ್ತಲೇ ಬಂದಿದ್ದಾರೆ.
‘ವಚನ ದರ್ಶನ’ದಂತಹ ಹಲವು ಕೃತಿಗಳು 12ನೆಯ ಶತಮಾನದಿಂದ ಇಂದಿನವರೆಗೂ ಬರುತ್ತಲೇ ಇವೆ. ಮುಂದೆಯೂ ಬರಬಹುದು. ಆದರೆ ಬಸವಾದಿ ಶಿವಶರಣರ ವಚನಗಳಂತಹ ಅಪ್ಪಟ ಚಿನ್ನವೇ ನಮ್ಮ ಕಣ್ಮುಂದೆ ಇರುವಾಗ ದಿಕ್ಕು ತಪ್ಪಿಸುವಂತಹ ಕೃತಿಗಳಿಗೆ ಬಸವತತ್ವಾನುಯಾಯಿಗಳು ಮರುಳಾಗಬಾರದು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವಂತೆ ವಚನಗಳು ಜ್ಞಾನದ ಭಂಡಾರವಿದ್ದಂತೆ. ಅವುಗಳಿಂದ ಅಜ್ಞಾನ ನಿವಾರಿಸಿಕೊಳ್ಳುವ ಸತ್ಸಂಕಲ್ಪ ಮಾಡಬೇಕೇ ಹೊರತು ಮತ್ತೆ ಕತ್ತಲೆಯತ್ತ ಮುಖ ಮಾಡಬಾರದು. ಈ ಕೃತಿಯಲ್ಲಿ ಸಂಪಾದಕೀಯಕ್ಕೆ ಪೂರಕ ಅಂಶಗಳನ್ನು ಒದಗಿಸುವ ಮೂರು ನಾಲ್ಕು ಲೇಖನಗಳೂ ಇವೆ. ಅದರಲ್ಲೂ ಡಾ. ರಾಜಾರಾಂ ಹೆಗಡೆಯವರ ಲೇಖನ ವಚನ ದರ್ಶನಕ್ಕೆ ವಿರುದ್ಧವಾದ ವಿಚಾರಗಳನ್ನೇ ಪ್ರತಿಪಾದಿಸುವ ಉದ್ದೇಶ ಹೊಂದಿದೆ. ಅವರ ಲೇಖನದ ಹಿಂದಿರುವ ಉದ್ದೇಶ ಸನಾತನ ಧರ್ಮವನ್ನು ಪ್ರತಿಪಾದಿಸುತ್ತ ವಚನಕಾರರನ್ನು ಆ ಪರಂಪರೆಗೆ ಸೇರಿಸಿ ತಾವೂ ಅದೇ ಪರಂಪರೆಯವರು ಎಂದು ಬಿಂಬಿಸುವುದು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೇ? ಅಂಥ ಬೆಕ್ಕಿನ ಕಾರ್ಯವೇ ಈ ಕೃತಿಯಲ್ಲಿ ನಡೆದಿದೆ. ಇಲ್ಲಿಯ ಲೇಖನಗಳ ಬಗ್ಗೆ ವಿಮರ್ಶೆ ಮಾಡುವುದು ವ್ಯರ್ಥ ಕಾಲಹರಣ. ತೌಡು ಕುಟ್ಟುವ ವ್ಯರ್ಥ ಶ್ರಮ. ಅದರ ಬದಲಾಗಿ ವಚನಗಳ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡಬೇಕು.
ಈ ಕೃತಿಯ ಪ್ರಚಾರಕ್ಕಾಗಿ ಕಾಣದ ಕೈಗಳು ಕೋಟಿಗಟ್ಟಲೆ ಹಣವನ್ನು ದುರ್ವಿನಿಯೋಗ ಮಾಡುತ್ತಲಿವೆ. ಇದು ಮಹತ್ವದ ಕೃತಿ ಎನ್ನುವಂತೆ ಜಿಲ್ಲಾ ಕೇಂದ್ರಗಳಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಪುಸ್ತಕವನ್ನು ಮತ್ತೆ ಮತ್ತೆ ಲೋಕಾರ್ಪಣೆ ಮಾಡುತ್ತಲಿದ್ದಾರೆ. ಅಷ್ಟಕ್ಕೇ ತೃಪ್ತರಾಗದೆ ರಾಜಧಾನಿ ದೆಹಲಿಯಲ್ಲೂ ಅದರ ಲೋಕಾರ್ಪಣೆ ಮಾಡಿಸಿ ಖುಷಿಪಟ್ಟಿದ್ದಾರೆ. ಇಂಥ ಕೃತಿಯ ಲೋಕಾರ್ಪಣೆಗೆ ಅವರು ಆಹ್ವಾನಿಸಿರುವ ಅತಿಥಿಗಳು ಯಾರು? ವಿಮರ್ಶಕರು, ಶರಣತತ್ವವನ್ನು ಕರಗತ ಮಾಡಿಕೊಂಡವರು, ನ್ಯಾಯನಿಷ್ಠುರರಾಗಿ ಇದ್ದದ್ದನ್ನು ಇದ್ದಂತೆ ಹೇಳುವವರನ್ನಲ್ಲ. ಆದರೂ ನಾವು ಏನೂ ತಪ್ಪು ಮಾಡಿಲ್ಲ ಎಂದು ತಮ್ಮ ತಪ್ಪು ಮುಚ್ಚಿಟ್ಟುಕೊಂಡು ತಮ್ಮ ಸಾಧನೆಯನ್ನು ಸಫಲಗೊಳಿಸಲು ಬಸವತತ್ವದ ಹಿನ್ನೆಲೆಯವರನ್ನೇ ಬಳಸಿಕೊಳ್ಳುವ ನೈಪುಣ್ಯತೆ ಮೆರೆದಿದ್ದಾರೆ. ಅವರು ಸ್ವಾಮಿಗಳಿರಬಹುದು, ಸಾಹಿತಿಗಳಿರಬಹುದು, ರಾಜಕಾರಣಿಗಳಿರಬಹುದು, ಇಲ್ಲವೇ ಇವರ ಹಿಂಬಾಲಕರಾದ ವಿಮರ್ಶಕರಿರಬಹುದು. ಅಂದರೆ ಅವರ ಉದ್ದೇಶ ಏನೆಂದು ವಚನ ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಇಷ್ಟಲಿಂಗ ದೀಕ್ಷೆ ಕೊಡಿಸುವುದು. ಹಾಗೆ ಇಷ್ಟಲಿಂಗ ದೀಕ್ಷೆ ಪಡೆದವರು ಸ್ಥಾವರಗಳನ್ನು ಪೂಜಿಸಬಾರದು. ಜಾತೀಯತೆ ಮಾಡಬಾರದು. ಸರ್ವರನ್ನೂ ಸಮಾನವಾಗಿ ಕಾಣಬೇಕು. ಸಕಲ ಜೀವಾತ್ಮರಿಗೆ ಒಳಿತು ಬಯಸಬೇಕು. ಯಜ್ಞ ಯಾಗಾದಿಗಳನ್ನು ತಿರಸ್ಕರಿಸಬೇಕು. ವೇದ, ಪುರಾಣ, ಶಾಸ್ತ್ರ, ಆಗಮ ಮುಂತಾದವುಗಳನ್ನು ನಂಬಬಾರದು. ಸ್ವರ್ಗ-ನರಕಗಳಿಗೆ ಕಿಚ್ಚಿಡಬೇಕು. ಲಂಚಕ್ಕೆ ಕೈ ಚಾಚಬಾರದು. ಪರಧನ, ಪರಸ್ತ್ರೀ, ಪರದೈವದ ಮೋಹದಿಂದ ಮುಕ್ತರಾಗಬೇಕು. ಈ ದಾರಿಯಲ್ಲಿ ಲಿಂಗಧಾರಿಗಳಿಗೆ ಮಾರ್ಗದರ್ಶನ ಮಾಡುವುದಾದರೆ ಸ್ವಾಗತಾರ್ಹ. ಬದಲಾಗಿ ಮತ್ತೆ ಸನಾತನ ವೈದಿಕ ಪರಂಪರೆಯನ್ನೇ ಲಿಂಗಧಾರಿಗಳ ಮೆದುಳಿಗೆ ಕಿಲುಬು ತುಂಬುವ ಹುನ್ನಾರ ಇದ್ದರೆ ಅವರನ್ನು ದುಷ್ಟರು, ಶನಿ ಸಂತಾನಿಗಳು, ಪಾಪಿಗಳು, ಧರ್ಮದ್ರೋಹಿಗಳು, ಬಂಡವಾಳಶಾಹಿಗಳು ಎನ್ನದೆ ಬೇರೇನು ಹೇಳಲು ಸಾಧ್ಯ? ಜನರು ಅಂಥವರ ಕಪಿಮುಷ್ಠಿಗೆ ಬಲಿಯಾಗಿ ಬಸವಾದಿ ಶಿವಶರಣರ ನೈಜ ವಚನ ದರ್ಶನಕ್ಕೆ ಅಪಚಾರ ಬಗೆಯುವ ಆತ್ಮವಂಚನೆ ಮಾಡಿಕೊಳ್ಳಬಾರದು.
‘ವಚನ ದರ್ಶನ’ ಕೃತಿಯ ಹಿಂದಿರುವವರು, ಅದರ ಸಂಪಾದಕ ಮಂಡಳಿಯವರು ಮತ್ತು ಅದರ ಲೇಖಕರಿಗೆ ತೆರೆದ ಮನಸ್ಸು, ವಿವೇಕ ಇದ್ದರೆ ಮೂಲ ವಚನ ಸಾಹಿತ್ಯವನ್ನು ತಪ್ಪದೆ ಓದಬೇಕು. ಒಂದುವೇಳೆ ಆ ಎಲ್ಲ ವಚನ ಸಾಹಿತ್ಯ ಓದಲಾಗದಿದ್ದರೂ ಚಿಂತೆ ಇಲ್ಲ; ಅವರು ತಪ್ಪದೆ ಎಸ್ ಜಿ ಸಿದ್ಧರಾಮಯ್ಯನವರು ಸಂಪಾದಿಸಿರುವ ‘ಕ್ರಾಂತಿಯ ಹೆಜ್ಜೆಗಳು’ ಮತ್ತು ನಾವು ಸಂಪಾದಿಸಿರುವ ‘ವಚನ ಸಂವಿಧಾನ’ ಕೃತಿಯನ್ನು ಓದುವ ಧಾರಾಳತನ ತೋರಿದರೆ ಖಂಡಿತ ತಮ್ಮ ತಪ್ಪಿನ ಅರಿವು ಆಗಲು ಸಾಧ್ಯ. ಈ ಎರಡೂ ಕೃತಿಗಳನ್ನು ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದಿಂದ ಪ್ರಕಟಿಸಲಾಗಿದೆ. (‘ಕ್ರಾಂತಿಯ ಹೆಜ್ಜೆಗಳು’ ಕೃತಿಯ ಬೆಲೆ ರೂ: 150. ‘ವಚನ ಸಂವಿಧಾನ’ ಕೃತಿಯ ಬೆಲೆ ರೂ: 300.)
ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ,
ಇವರು ಹಿರಿಯರುಗಳೇ?
ಯಾಗನಟ್ಟುವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ?
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ,
ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ ಸಾಧಿಸುವುದು.
Comments 15
Channaveeraswamy V
Oct 24, 2024ವಚನ ದರ್ಶನ ಪುಸ್ತಕದ ಹಿಂದಿರುವ ಹುನ್ನಾರ ಈಗಾಗಲೇ ನಮಗೆ ಗೊತ್ತಾಗಿದೆ. ಗುರುಗಳು ಇಂತಹ ಸಂದರ್ಭವನ್ನು ಸಾಂಘಿಕವಾಗಿ ಹೇಗೆ ಎದುರಿಸಬೇಕೆಂಬುದನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ.🙏
ಸೋಮಶೇಖರ ಗಲಗಲಿ
Oct 24, 2024ಗುರುಗಳ ಲೇಖನ ತುಂಬಾ ಚೆನ್ನಾಗಿದೆ.
ಶೋಭಾದೇವಿ ಅಮರಶೆಟ್ಟಿ, ಧಾರವಾಡ
Oct 24, 2024ವೇದಶಾಸ್ತ್ರದವರ ಹಿರಿಯರೆನ್ನೆ, ಪಂಡಿತಾರಾಧ್ಯ ಸ್ವಾಮೀಜಿಯವರು ವಚನದರ್ಶನ ಕೃತಿಯ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ👌👍🙏
Basava
Oct 26, 2024Fitting article
Basavaraj Kareholi, Bengaluru
Oct 26, 2024Fitting article 🙏🏻
ಯಾರೋ ಸಜ್ಜನರು ಬದುಕಿದ್ದ ಸತ್ಯಗಳನ್ನು ಬರೆದು ಆ ಸತ್ಯಗಳ ಮಾಲೀಕರಾದರು.
ಸತ್ಯವನ್ನು ಬದುಕುವವರ ಬದುಕಿನಿಂದ ತೆಗೆದು ಬರಹಗಳಲ್ಲಿ ತಲೆಕೆಳಗಾಗಿ ಮಾಡಿಸಿ ತಾವು ಬದುಕಲು ದೇಶವನ್ನು(ಪ್ರಜ್ಞೆಗಳನ್ನು)ಹಾಳು ಮಾಡಿ ನಡೆದರು.
ಬಸವಾದಿ ಶರಣರು ಪ್ರಜ್ಞೆಗಳನ್ನು ಮತ್ತೆ ಬೆಳೆಸಿದರು.
ಇಂದು ವಚನಗಳು ಅನುಭವವಾಗಿ ಕಾಣದೆ ಸಾಹಿತ್ಯವಾಗಿ ಮೆರೆದು ದರ್ಶನಕ್ಕೆ ಜನ ಹಾತೊರೆದು ನಿಂತಂತಿದೆ.
Basavaraja Ambi
Oct 26, 2024ಸನಾತನ ಧರ್ಮ ಕ್ರಮ ಸಮುಚ್ಚಯವಾದ. ಬರೀ ಜ್ಞಾನ, ಆಚಾರ ಹೇಳಲ್ಲ. ಶರಣರದು ಸಮ ಸಮುಚ್ಚಯವಾದ. ಅರಿವು ಆಚಾರ ಎರಡು ಬೇಕು. ಅರಿವು ಆಚಾರ ಉಳ್ಳಾತನೆ ಜಂಗಮ.
ಎಚ್. ಎಂ. ಸೋಮಶೇಖರಪ್ಪ
Oct 26, 2024ಸ್ವಾಮೀಜಿಯವರು ವಚನ ದರ್ಶನ ಪುಸ್ತಕವನ್ನು ಪ್ರಕಟಿಸಿರುವ ಹಿಂದಿನ ಉದ್ದೇಶವನ್ನು ತಮ್ಮ ಬರಹದಲ್ಲಿ ಹೊರತಂದಿದ್ದಾರೆ. 🙏
ಚನ್ನಪ್ಪ ಚೌಧರಿ
Oct 30, 2024ವಚನದರ್ಶನಕ್ಕೆ ಕೈಗನ್ನಡಿ. ಅದ್ಬುತ ಲೆಕನ. ಶರಣು ಶರಣಾರ್ಥಿ
ಪ್ರಶಾಂತ ಕುಮಾರ್ ದೇವನಹಳ್ಳಿ
Oct 30, 2024ವಚನಗಳು ಜಾತ್ಯತೀತತೆ, ಲಿಂಗಸಮಾನತೆ, ಕಾಯಕ ಸಮಾನತೆ, ಸ್ಥಾವರ ದೇವರ ನಿರಾಕರಣೆ ಇತ್ಯಾದಿ ವಿಚಾರಗಳನ್ನು ಇಂದು ಯಾರು ಪಾಲಿಸುತ್ತಿದ್ದಾರೆ? ಲಿಂಗಾಯತರಲ್ಲಿ ಈ ಗುಣಗಳಲ್ಲಿ ಒಂದಾದರೂ ಇದ್ದಿದ್ದರೆ ಕರ್ನಾಟಕ ದೇಶದಲ್ಲೇ ಪ್ರಗತಿಪರ ಪ್ರದೇಶವಾಗಿರುತ್ತಿತ್ತು… ನಾವೆಲ್ಲಿ ಎಡವಿದ್ದೇವೆ?
ಸೂರ್ಯಪ್ರಕಾಶ್ ಎಚ್
Oct 30, 2024ವಚನ ದರ್ಶನದ ರಾಜಕೀಯವನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿದ್ದೀರಿ. ನನಗೂ ಆರಂಭದಲ್ಲಿ ಆ ಪುಸ್ತಕದ ಹುನ್ನಾರ ಗೊತ್ತಾಗಲಿಲ್ಲ. ಆಮೇಲೆ ಗೊತ್ತಾಗಿ ತುಂಬಾ ಸಿಟ್ಟು ಬಂತು, ನೋವಾಯಿತು. ಇಂತಹ ಭಾನಗಾಡಿಗಳ ವಿರುದ್ಧ ಹೋರಾಟ ಮಾಡಲೇಬೇಕು.
ರಾಜೇಶ್ವರಿ ಸಣಕಲ್
Nov 5, 2024ಲಿಂಗಾಯತರೆಂದು ಹೇಳಿಕೊಳ್ಳುವ ವೀರಶೈವ ಸ್ವಾಮಿಗಳು ಒಳಗಿದ್ದೇ ಬಸವತತ್ವಗಳಿಗೆ ಮೋಸ ಮಾಡುವ ಅಂತರಂಗದ ವೈರಿಗಳೆಂದು ಹುತಾತ್ಮ ಕಲ್ಬುರ್ಗಿ ಸರ್ ಹೇಳಿದ್ದು ಎಚ್ಚರಿಕೆಯ ಗಂಟೆ. ನೀವು ಮಾರ್ಗ ದರ್ಶನ ಮಾಡಿ 80% ಇನ್ನೂ ಮಲಗಿರುವ ಲಿಂಗಾಯತರನ್ನು ಶರಣ ದಾರಿಗೆ ತರಬೇಕು. ಗುರುಗಳೇ, ನಾವು ನಿಮ್ಮ ಜೊತೆಗಿದ್ದೇವೆ.🙏🙏🙏
ಬಸವರಾಜ ಹಂಡಿ
Nov 5, 2024ಈ ಲೇಖನ ಬಹಳ ಅರ್ಥಪೂರ್ಣವಾಗಿ ಮತ್ತು ಸಮಯೋಚಿತವಾಗಿ ಮೂಡಿಬಂದಿದೆ. ಸಾಣೇಹಳ್ಳಿ ಶ್ರೀಗಳು ಬಹಳ ಪ್ರಸ್ತುತವಾದ ವಚನಗಳ ಆಧಾರದ ಮೇಲೆ ಈ ಲೇಖನ ಬರೆದಿದ್ದಾರೆ. ಸನಾತನಕ್ಕೆ ವಿರುದ್ಧವಾದದ್ದು ನಮ್ಮ ಲಿಂಗಾಯತ ಧರ್ಮ.
ಶರಣ ಧರ್ಮಕ್ಕೆ ಆಧಾರವಾದುದ್ದು ಪುರಾತನರು ನಡೆದು ಬಂದ ದಾರಿ. ಸನಾತನ ಅಂದರೆ ಕಲ್ಪನೆಗಳಿಂದ ತುಂಬಿದ್ದು. ಕಾಲ್ಪನಿಕವಾದದ್ದು.
ಪುರಾತನ ವಸ್ತುನಿಷ್ಠವಾದುದ್ದು. ಆರೆಸಸ್ ಬೆಂಬಲದಿಂದ ಬರೆದ ವಚನ ದರ್ಶನದ ಪ್ರತಿಯೊಂದು ತಪ್ಪನ್ನು ಶ್ರೀಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಾಣೇಹಳ್ಳಿ ಶ್ರೀಗಳಿಗೆ ಮತ್ತು ಬಯಲು ತಂಡಕ್ಕೆ ಧನ್ಯವಾದಗಳು. ಶರಣು ಶರಣಾರ್ಥಿಗಳು.
ಶಿವಶರಣಪ್ಪಾ ಜೇವರ್ಗಿ
Nov 11, 2024ನಮ್ಮದು ಪುರಾತರ ಪರಂಪರೆ, ಸನಾತನಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ… ಇದೊಂದೇ ಲಿಂಗಾಯತರ ಮಂತ್ರವಾಗಿರಲಿ. ಒಗ್ಗಟ್ಟು ತಂತಾನೇ ಸಮನಿಸುತ್ತದೆ.
ಉಷಾದೇವಿ ಆಳಂದ
Nov 11, 2024ಶರಣರನ್ನು ನಾಶಮಾಡಬೇಕೆಂಬ ಹುನ್ನಾರ ಇಂದು ನಿನ್ನೆಯದಲ್ಲಾ ಎನ್ನುವ basic knowledge ಕೂಡ ನಮ್ಮ ಲಿಂಗಾಯತ ಯುವಜನರಲ್ಲಿಲ್ಲಾ, ಈ ಲೇಖನ ಆಧಾರವಾಗಿಟ್ಟುಕೊಂಡು ಜಾಗೃತಿ ಮೂಡಿಸುವ ಕೆಲಸ ಎಲ್ಲ ಕಡೆ ನಡೆಯಬೇಕಿದೆ.
ಗಂಗಾಧರ ಸಿಂದಗಿ
Nov 12, 2024ವಚನ ದರ್ಶನ ಕೃತಿಯ ಪ್ರಚಾರಕ್ಕಾಗಿ ಕಾಣದ ಕೈಗಳು ಕೋಟಿಗಟ್ಟಲೆ ಹಣವನ್ನು ದುರ್ವಿನಿಯೋಗ ಮಾಡುತ್ತಲಿವೆ. ಇದು ಮಹತ್ವದ ಕೃತಿ ಎನ್ನುವಂತೆ ಜಿಲ್ಲಾ ಕೇಂದ್ರಗಳಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಪುಸ್ತಕವನ್ನು ಮತ್ತೆ ಮತ್ತೆ ಲೋಕಾರ್ಪಣೆ ಮಾಡುತ್ತಲಿದ್ದಾರೆ. ಅಷ್ಟಕ್ಕೇ ತೃಪ್ತರಾಗದೆ ರಾಜಧಾನಿ ದೆಹಲಿಯಲ್ಲೂ ಅದರ ಲೋಕಾರ್ಪಣೆ ಮಾಡಿಸಿ ಖುಷಿಪಟ್ಟಿದ್ದಾರೆ…. ಈ ಮಾಹಿತಿಯೇ ಗಾಬರಿ ಮತ್ತು ಕಳವಳ ಹುಟ್ಟಿಸುವಂತಿದೆ. ದುರುದ್ದೇಶದಿಂದ ಕೂಡಿದ ಈ ಪುಸ್ತಕವನ್ನು ಪ್ರತಿಯೊಬ್ಬ ಶರಣ ಅನುಯಾಯಿಗಳು ಬಹಿಷ್ಕರಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಹೋಗಬಾರದು. ಹೋದವರನ್ನು ಪ್ರಶ್ನಿಸಬೇಕು.