ವರದಿ ಕೊಡಬೇಕಿದೆ
ತನುವ ಭೇದಿಸಿ, ಮನವ ಶೋಧಿಸಿ
ವರದಿ ಕೊಡಲು ಅಟ್ಟಿದ್ದಾನೆ ಗುರು
ನನ್ನೊಳಗೆ ನನ್ನ…
ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ
ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ
ಎಲ್ಲೋ ಓದಿದ್ದನ್ನು, ಯಾರೋ ಹೇಳಿದ್ದನ್ನು
ನಕಲು ಮಾಡಿ ಒಪ್ಪಿಸುವಂತೆಯೂ ಇಲ್ಲ…
ಆಸೆಗಳ ಮೊಗೆತ, ಭಾವಗಳ ರಭಸ
ಕಲ್ಪಿತಗಳ ನೆಗೆತ, ವಿಚಾರಗಳ ಓಟ
ಏನ ಹಿಡಿಯಲಿ, ಎಲ್ಲಿ ಕೆದಕಲಿ?
ಪಾಚಿ ಇದೆ, ಸೆಳೆತ ಇದೆ
ಮರೆವಿನ ಜಾಲಗಳಿವೆ, ಅಪರಿಚಿತ ಜಾಗಗಳಿವೆ
ದಾರಿ ತಪ್ಪಿಸುವ ಕತ್ತಲಿದೆ…
ಹೊರ ಸುದ್ದಿಗಳನು ವರದಿ ಮಾಡಿ
ಅಭ್ಯಾಸವಾದವಳಿಗೆ
ಮನವ ನೋಡುವುದು,
ಅಂತರಂಗದ ಸಮಾಚಾರ ಬರೆವುದು
ಇಷ್ಟು ಸವಾಲಿನದೆಂದು ತಿಳಿದಿರಲೇ ಇಲ್ಲ…
ಕಂಗಾಲಾಗಿ ಕೂರುವಂತಿಲ್ಲ
ಗಡುವು ಮೀರುವಂತಿಲ್ಲ
ಗುರು ಕೊಟ್ಟ ಕಂದೀಲು ಹಿಡಿದು
ಒಳಗಡಿ ಇಟ್ಟಾಗಿದೆ…
ಒಂದೊಂದನೆ ಎತ್ತಿ, ಬಗೆಬಗೆದು ನೋಡಿ
ಹಿಂದು-ಮುಂದಿನ ತಂತುಗಳ ಹುಡುಕಿ
ವರದಿ ಕೊಡಬೇಕಿದೆ ಗುರುವಿಗೆ ವರದಿ ಕೊಡಬೇಕಿದೆ…
Comments 1
Vinay Bengaluru
Mar 20, 2021ಯಾವ ಗುರುವಿಗೆ ವರದಿ ಕೊಡಬೇಕು ಅಕ್ಕಾ? ಹಾಗೆ ವರದಿ ಕೇಳಿದ ಗುರು ಯಾರು?