ವಚನ ಸಾಹಿತ್ಯದ ಹಿರಿಮೆ
ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ.
ವಚನಗಳ ಸತ್ವ, ಮಹತ್ವವನ್ನು ಬಸವಣ್ಣನವರ ಈ ವಚನದಿಂದ ಅರ್ಥ ಮಾಡಿಕೊಳ್ಳಬಹುದು. `ನೀನೊಲಿದಡೆ’ ಎಂದರೆ ಯಾರು ಒಲಿಯುವುದು? ತಂದೆ-ತಾಯಿಗಳು ಒಲಿಯುವುದೇ? ವಿಶ್ವವಿದ್ಯಾಲಯದ ಮುಖ್ಯಸ್ಥರು ಒಲಿಯುವುದೇ? ಪಿ ಹೆಚ್ ಡಿ ಪ್ರಧಾನ ಮಾಡುವವರು ಒಲಿಯುವುದೇ? ಪಿಹೆಚ್‍ಡಿಗೆ ಸಹಾಯ (ಗೈಡ್) ಮಾಡಿದವರು ಒಲಿಯುವುದೇ? ಸ್ವಾಮಿಗಳು ಒಲಿಯುವುದೇ? ಇಂಥವರು ಒಲಿಯುವುದು ಮುಖ್ಯವಲ್ಲ. ದೇವರು ಒಲಿಯುವುದು ಮುಖ್ಯ. ದೇವರು ಒಲಿದರೆ ಅಸಾಧ್ಯವೂ ಸಾಧ್ಯವಾಗುತ್ತದೆ. ತಕ್ಷಣ ನೀವು ಪ್ರಶ್ನೆ ಮಾಡಬಹುದು. ದೇವರು ಒಲಿದರೆ ಕೊರಡು ಕೊನರುತ್ತದೆಯೇ? ಅಂದರೆ ಒಣಗಿದ ಕಟ್ಟಿಗೆಯ ತುಂಡು ಮತ್ತೆ ಚಿಗಿತು ಫಲ ಕೊಡಲು ಸಾಧ್ಯವೇ? ಯಾವ ದೇವರು ಒಲಿದರೂ ಒಣಗಿದ ಕಟ್ಟಿಗೆ ಚಿಗುರಲು ಸಾಧ್ಯವಿಲ್ಲ. ಎರಡನೆಯ ಸಾಲಿನಲ್ಲಿ ಗೊಡ್ಡುಬಿದ್ದ ಹಸು ಹಾಲು ಕರೆಯುವುದು ಎನ್ನುವರು. ದೇವರು ಒಲಿದ ಮಾತ್ರಕ್ಕೆ ಗೊಡ್ಡು ಬಿದ್ದ ಹಸು ಹಾಲು ಕರೆಯಲು ಸಾಧ್ಯವಿಲ್ಲ. ವಿಷ ಅಮೃತವೂ ಆಗುವುದಿಲ್ಲ. ಬಯಸಿದ ಪದಾರ್ಥಗಳೆಲ್ಲ ಎದುರಿಗೆ ಬರುತ್ತವೆ ಎನ್ನುವುದು ಸಹ ಸತ್ಯವಲ್ಲ. ಇದು ಸತ್ಯವೇ ಆಗಿದ್ದರೆ ಮನುಷ್ಯ ಕಾಯಕ ಮಾಡುವ ಅಗತ್ಯವಿರಲಿಲ್ಲ. ಅವನು ಬದುಕಿಗಾಗಿ ಹೋರಾಟ ಮಾಡಬೇಕಾಗಿರಲಿಲ್ಲ. ಏನೆಲ್ಲ ಸಾಧನೆ ಮಾಡಬೇಕೆಂದು ಶ್ರಮ ಹಾಕಬೇಕಾಗಿರಲಿಲ್ಲ. ತನ್ನ ಸಾಧನೆಗಾಗಿ ಸಮಯ, ಶ್ರಮ, ಸಂಪತ್ತನ್ನು ಹಾಕಬೇಕಾಗಿರಲಿಲ್ಲ. ಕಾಯಿಲೆ ವಾಸಿಮಾಡಿಕೊಳ್ಳಲು ಇಷ್ಟೊಂದು ಆಸ್ಪತ್ರೆಗಳ ಅವಶ್ಯಕತೆ ಇರಲಿಲ್ಲ, ಅಲ್ಲವೇ? ಸಹಜವಾಗಿ ಇಂತಹ ಪ್ರಶ್ನೆಗಳನ್ನು ಪದವೀಧರರಾದರೂ ಕೇಳಬೇಕು. ಆದರೆ ವಿದ್ಯಾವಂತರು ಸಹ ದೇವರು ಒಲಿದರೆ ಕೊರಡು ಕೊನರುವುದು, ಬರಡು ಹಯನವುದು, ವಿಷ ಅಮೃತವಹುದು, ಸಕಲ ಪಡಿಪದಾರ್ಥ ಎದುರಲಿರ್ಪವು ಎಂದು ನಂಬುವರು. ದೇವರು ಏನು ಬೇಕಾದರೂ ಪವಾಡ ಮಾಡಬಹುದು ಎಂದು ಭ್ರಮಿಸುವರು. ಹೀಗಾಗಲು ಸಾಧ್ಯವೇ ಎಂದು ಬಹುತೇಕ ಜನರು ಪ್ರಶ್ನೆಯನ್ನು ಸಹ ಮಾಡುವುದಿಲ್ಲ.
ಬಸವಣ್ಣನವರು ಸತ್ಯವನ್ನು ಮರೆಮಾಚಿದ್ದಾರೆಯೇ? ಖಂಡಿತ ಇಲ್ಲ. ವಚನದಲ್ಲಿ ಬಳಸಿರುವ ಪದಗಳನ್ನು ಯಥಾವತ್ತಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೊರಡು, ಬರಡು, ವಿಷ, ಪಡಿಪದಾರ್ಥ ಇವೆಲ್ಲವೂ ಮನುಷ್ಯನಿಗೆ ಪರ್ಯಾಯವಾಗಿ ಬಳಸಿರುವ ಪದಗಳು. ಮೂಲತಃ ಮನುಷ್ಯ ಒಣಗಿದ ಕೊರಡಿನಂತಿದ್ದ. ಅವನ ಅಜ್ಞಾನ ನಿವಾರಿಸಿ ಅರಿವು ಮೂಡಿಸಿದರೆ ಆತ ತನ್ನ ಕೊರಡುತನ ಕಳೆದುಕೊಂಡು ಪ್ರಗತಿ ಸಾಧಿಸುವನು. `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವಂತೆ ಜ್ಞಾನದಿಂದ ಮನುಷ್ಯನ ವ್ಯಕ್ತಿತ್ವ ವಿಕಾಸವಾಗುತ್ತದೆ. ಅದನ್ನೇ ಅಲ್ಲಮಪ್ರಭುದೇವರು `ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ- ಅವು ಜಗಕ್ಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಸಿರಿವಂತರಿಲ್ಲ ಕಾಣಾ ಎಲೆ ಮನವೆ’ ಎಂದಿದ್ದಾರೆ. ಈ ಲೋಕದಲ್ಲಿರುವ ಪ್ರತಿಯೊಬ್ಬರೂ ಹೊನ್ನು, ಹೆಣ್ಣು, ಮಣ್ಣನ್ನೇ ನಿಜವಾದ ಸಂಪತ್ತೆಂದು ತಿಳಿದಿದ್ದಾರೆ. ಆ ಭ್ರಮೆಯಲ್ಲೇ ಬದುಕುವರು. ಪ್ರಭುದೇವರು ಹೇಳುವಂತೆ ಇವು ಮಾನವನ ಸಂಪತ್ತುಗಳಲ್ಲ. ಅವನ ನಿಜವಾದ ಸಂಪತ್ತು ಸುಜ್ಞಾನ. ವಿಷಾದದ ಸಂಗತಿ ಎಂದರೆ ಇತ್ತೀಚಿನ ದಿನಮಾನಗಳಲ್ಲಿ ಜ್ಞಾನವನ್ನು ಸಂಪತ್ತೆಂದು ಭಾವಿಸಿರುವವರ ಸಂಖ್ಯೆ ತುಂಬಾ ವಿರಳವಾಗುತ್ತಿದೆ. ಅಕ್ಷರ ಕಲಿತು, ಪದವಿ ಪಡೆದು ಅದರ ಮೂಲಕವೇ ದೋಚುವ, ಬಾಚುವ ಕ್ರಿಯೆಯಲ್ಲಿ ತೊಡಗಿದವರೇ ಬುದ್ಧಿವಂತರು ಎನ್ನುವರು. ಅದು ಬುದ್ಧಿವಂತಿಕೆಯೇ ಹೊರತು ಜ್ಞಾನವಲ್ಲ. ಅದು ಮತ್ತೊಂದು ರೀತಿಯ ಅಜ್ಞಾನ. ಜ್ಞಾನಿ ಯಾವಾಗಲೂ ಸನ್ಮಾರ್ಗದಲ್ಲಿ ಸಾಗುವನೇ ಹೊರತು ದುರ್ಮಾರ್ಗವನ್ನು ಹಿಡಿಯುವುದಿಲ್ಲ. ದುರ್ಮಾರ್ಗಿ ಜ್ಞಾನಿಯ ಮುಖವಾಡ ಧರಿಸಿದ್ದಾನೆ ಎಂದೇ ಅರ್ಥ. ಜ್ಞಾನದ ಬಲದಿಂದ ಗೊಡ್ಡು ಹಸುವಿನಂತಿದ್ದವ ಹಾಲು ಕರೆಯುವ ಹಸುವಿನಂತಾಗುವನು. ಅವನ ತನು, ಮನ, ಭಾವದಲ್ಲಿದ್ದ ವಿಷವನ್ನು ಕಳೆದುಕೊಂಡು ಅಮೃತವನ್ನೇ ಧಾರೆಯೆರೆಯುವ ವಿವೇಕಿಯಾಗುವನು. ಆತ ಕಾಯಕಶೀಲನಾದರೆ ಬಯಸಿದ್ದನ್ನು ಪಡೆಯುವ ಸಾಮರ್ಥ್ಯ ಹೊಂದುವನು.
12ನೆಯ ಶತಮಾನದ ಶರಣರು ಜಗತ್ತಿನ ಎಲ್ಲ ಸಾಹಿತ್ಯಕ್ಕಿಂತಲೂ ಶ್ರೇಷ್ಠವೆನಿಸಿದ ವಚನ ಸಾಹಿತ್ಯವನ್ನು ಕೊಟ್ಟಿದ್ದಾರೆ. ಹಾಗಾಗಿ ಕನ್ನಡ ಭಾಷೆಯ ಸ್ಥಾನ-ಮಾನವೂ ಗಟ್ಟಿಗೊಳ್ಳುವಂತಾಗಿದೆ. ಕನ್ನಡ ತಾಯಿಭಾಷೆ. ಅದು ಸರಳವಾಗಿ ಮನಸ್ಸನ್ನು ತಟ್ಟಿ ಮುಟ್ಟಿ ನಮ್ಮನ್ನು ಚಿಂತನಾಪರರನ್ನಾಗಿಸುವಂತಹುದು. ನಮ್ಮ ಹಿರಿಯರು ಕನ್ನಡ ಭಾಷೆಯಲ್ಲಿ ಅಪಾರ ಪ್ರಾವೀಣ್ಯತೆ ಸಾಧಿಸಿದ್ದರು. ಕವಿರಾಜ ಮಾರ್ಗಕಾರ ಹೇಳುವಂತೆ ಕನ್ನಡಿಗರು ಕುರಿತೋದದೆಯೂ ಕಾವ್ಯಗಳನ್ನು ರಚಿಸುವ ಸಾಮರ್ಥ್ಯ ಹೊಂದಿದ್ದರು. ಪದ್ಯವನ್ನು ಹೇಳುವ ತಾಕತ್ತು ಪಡೆದಿದ್ದರು. ಈ ಶಕ್ತಿಯನ್ನು ತಮ್ಮ ಹಿರಿಯರಿಂದ ಪಡೆದುಕೊಂಡಿದ್ದರು. ಇವತ್ತು ಹಿರಿಯರನ್ನು ಉಪೇಕ್ಷೆ ಮಾಡುವ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದೆ. ನಾವು ಇಂದು ಬೆಳಗ್ಗೆ ಇಬ್ಬರು ಪದವೀಧರ ಮಕ್ಕಳ ಜೊತೆ ಮಾತನಾಡುವಾಗ ಅವರ ಭಾವನೆಗಳು ನಮ್ಮ ತಂದೆಗೆ ಏನು ತಿಳಿಯುತ್ತೆ ಎನ್ನುವಂತಿದ್ದವು. ನಾವು ಪದವೀಧರರು ಎನ್ನುವ ಸಾತ್ವಿಕ ಅಹಂ ಅವರಲ್ಲಿತ್ತು. ಪದವೀಧರರಾದ ಕೂಡಲೇ ಬೌದ್ಧಿಕವಾಗಿ, ನೈತಿಕವಾಗಿ, ವ್ಯಾವಹಾರಿಕವಾಗಿ, ಸಾಂಸ್ಕೃತಿಕವಾಗಿ ಬೆಳೆದಿದ್ದಾರೆ ಎಂದೇನೂ ಅಲ್ಲ. ಪದವಿ ಇಲ್ಲದೆಯೂ ಈ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಿದವರು ನಮ್ಮ ತಂದೆ ತಾಯಿಗಳು. ಅವರಿಗೆ ಓದು, ಬರಹ ಬಾರದಿದ್ದರೂ ನಿತ್ಯ ಬದುಕಿನಿಂದ ಪಾಠ ಕಲಿತವರು. ಅದರ ಸ್ಪಷ್ಟ ರೂಪವನ್ನು ವಚನ ಸಾಹಿತ್ಯದಲ್ಲಿ ಮನಗಾಣಬಹುದು. ವಚನಕಾರರು ನಮ್ಮಂತೆ ಶಾಲಾ ಕಾಲೇಜುಗಳಿಗೆ ಹೋದವರಲ್ಲ. ಸೂಳೆ ಸಂಕವ್ವೆ ಯಾವ ಕಾಲೇಜಿಗೆ ಹೋಗಿದ್ದಳು? ಶರಣರ ಸಂಪರ್ಕದಿಂದ ತನ್ನ ವೃತ್ತಿ ತ್ಯಜಿಸಿ ಶರಣೆಯಾಗಿ ವಚನಕಾರ್ತಿಯಾಗುತ್ತಾಳೆ. ಕಾಳವ್ವೆ ಅತ್ಯಂತ ತಳವರ್ಗದಿಂದ ಬಂದವಳು. ಅವಳು `ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ. ಸತ್ಯಶುದ್ಧವಲ್ಲದದು ಕಾಯಕವಲ್ಲ’ ಎನ್ನುವಳು. ಶರಣರ ನುಡಿಮುತ್ತುಗಳು ಬದುಕಿಗೆ ಹಿಡಿದ ಕನ್ನಡಿ. ಕಾಯಕ ಶ್ರದ್ಧೆಯುಳ್ಳವರು ನಿಜ ಭಕ್ತರು. ಕಾಯಕ ಸತ್ಯ ಶುದ್ಧವಾಗಿರಬೇಕು. ಮೋಸ, ವಂಚನೆ, ತಟವಟ ಇದ್ದರೆ ಅದು ಕಾಯಕವಾಗುವುದಿಲ್ಲ. ನನ್ನ ಕಾರ್ಯದ ಮೂಲಕ ನಾನೂ ಚೆನ್ನಾಗಿ ಬದುಕಬೇಕು, ಇನ್ನೊಬ್ಬರನ್ನೂ ಚೆನ್ನಾಗಿ ಬದುಕಿಸಬೇಕು. ಅಂಥ ಕಾರ್ಯಕ್ಕೆ ವಚನಕಾರರು ಕಾಯಕ ಎಂದದ್ದು. ಮತ್ತೊಬ್ಬ ಮಹಿಳೆ ಸತ್ಯಕ್ಕ. ಅವಳ ಕಾಯಕ ನಿತ್ಯ ಬೀದಿಯ ಕಸ ಗುಡಿಸುವುದು. ಅವಳು ಒಂದು ಸಂಕಲ್ಪ ಮಾಡುತ್ತಾಳೆ- ನಾನು ಕಸ ಹೊಡೆಯುವ ದಾರಿಯಲ್ಲಿ ವಸ್ತ್ರ, ಹೊನ್ನು ಇನ್ನೇನಾದರೂ ಬಿದ್ದಿದ್ದರೆ ಕೈ ಮುಟ್ಟಿ ಎತ್ತದೆ ಅದೂ ಒಂದು ಕಸವೆಂದು ಗುಡಿಸಿ ಹಾಕುವೆ ಎಂದು. ಏಕೆಂದರೆ ಕಸ ಗುಡಿಸಲು ನನಗೆ ಕೂಲಿ ಕೊಡುತ್ತಾರೆ. ಅದರಿಂದಲೇ ಸಂತೃಪ್ತ ಜೀವನ ನಡೆಸುವೆ. ಹೀಗಿರುವಾಗ ಮತ್ತೊಬ್ಬರ ವಸ್ತುವಿನ ಅಗತ್ಯವಿಲ್ಲ ಎನ್ನುವುದು ಸತ್ಯಕ್ಕನ ನಿಲುವು.
ಮತ್ತೊಬ್ಬ ಅಪರೂಪದ ವ್ಯಕ್ತಿ ಮೇದಾರ ಕೇತಯ್ಯ. ಅವರು ಕಾಡಿಗೆ ಹೋಗಿ ಬಿದಿರು ಗಳಗಳನ್ನು ಕಡಿದುಕೊಂಡು ಬಂದು ಅದರಿಂದ ಬೇಕಾದ ಸಾಮಾನುಗಳನ್ನು ತಯಾರಿಸಿ ಮಾರಿ ಜೀವನ ನಿರ್ವಹಣೆ ಮಾಡುವವರು. ಅವರೊಮ್ಮೆ ಕಾಡಿಗೆ ಹೋಗಿ ಒಂದು ಬಿದಿರು ಮೆಳೆಗೆ ಕೊಡಲಿ ಹಾಕಿದಾಗ ಅಲ್ಲಿ ಬುಳುಬುಳು ಚಿನ್ನ ಉದುರುವುದು. ಚಿನ್ನ ಕಂಡಾಗ ಎಷ್ಟು ಖುಷಿಯಾಗಬೇಕು? ದೇವರು ನನ್ನ ಸಂಕಷ್ಟ ಪರಿಹರಿಸಲೆಂದೇ ಈ ಚಿನ್ನ ಕೊಟ್ಟಿದ್ದಾನೆ ಎಂದು ಖುಷಿಯಿಂದ ಆ ಚಿನ್ನವನ್ನೆಲ್ಲ ಬಾಚಿಕೊಂಡು ಹೋಗಬೇಕಾಗಿತ್ತು. ಕೇತಯ್ಯ ಹಾಗೆ ಮಾಡದೆ ಈ ಬಿದಿರಿಗೆ ಹುಳು ಹತ್ತಿದೆ; ಹುಳು ಹತ್ತಿದ ಬಿದಿರು ಕಾಯಕಕ್ಕೆ ಯೋಗ್ಯವಾದುದಲ್ಲ ಎಂದು ಮತ್ತೊಂದು ಮೆಳೆಗೆ ಕೊಡಲಿ ಹಾಕಿದರೆ ಅಲ್ಲೂ ಅದೇ ಚಿನ್ನ! ಮೂರನೆಯ ಮೆಳೆಗೆ ಕೊಡಲಿ ಹಾಕಿದರೆ ಅದೇ ಚಿನ್ನ! ಥೂ ಇಡೀ ಕಾಡಿನ ಬಿದಿರಿಗೆ ಹುಳ ಹತ್ತಿದೆ. ಇಂಥ ಬಿದಿರು ಬೇಡ ಎನ್ನುವರು. ಕೇತಯ್ಯನವರ ಕಾಯಕ ನಿಷ್ಠೆ ಇವತ್ತು ಎಷ್ಟು ಜನರಿಗಿದೆ? ಮೋಳಿಗೆ ಮಾರಯ್ಯನವರ ಬದುಕಿನ ವಿಧಾನ ಇನ್ನೂ ರೋಚಕವಾಗಿದೆ. ಅವರ ಮೂಲ ಹೆಸರು ಮಹಾದೇವ ಭೂಪಾಲ. ಕಾಶ್ಮೀರದಿಂದ ಇಂದಿನ ಬಸವಕಲ್ಯಾಣಕ್ಕೆ ಬಂದವರು. ಕಾಶ್ಮೀರದಲ್ಲಿ ರಾಜನಾಗಿದ್ದವರು. ಶರಣರ ತಾತ್ವಿಕ ವಿಚಾರಗಳಿಗೆ ಮಾರುಹೋಗಿ ರಾಜಪದವಿ ತ್ಯಜಿಸಿ ಕಲ್ಯಾಣಕ್ಕೆ ಬರುತ್ತಾರೆ. ಮಹಾರಾಜ ಬಂದಿದ್ದಾನೆ ಎಂದು ಯಾರೂ ಅವರಿಗೆ ಕಹಳೆ ಊದಿ ಸ್ವಾಗತಿಸುವುದಿಲ್ಲ. ಕಲ್ಯಾಣದಲ್ಲಿ ಗೌರವ ಇದ್ದದ್ದು ಕಾಯಕ ಜೀವಿಗಳಿಗೆ ಮಾತ್ರ. ಮಹಾದೇವ ಭೂಪಾಲ ಏನು ಕಾಯಕ ಮಾಡಬಲ್ಲರು? ಆಶ್ಚರ್ಯದ ಸಂಗತಿ ಎಂದರೆ ಅವರು ಕಟ್ಟಿಗೆ ಕಡಿದು ಮಾರುವ ಕಾಯಕ ಸ್ವೀಕರಿಸುತ್ತಾರೆ. ಕಟ್ಟಿಗೆ ಮಾರುತ್ತಿದ್ದುದರಿಂದ ಅವರಿಗೆ `ಮೋಳಿಗೆ ಮಾರಯ್ಯ’ ಎನ್ನುವ ಹೆಸರು ಬರುತ್ತದೆ. ಅವರೊಮ್ಮೆ ಕಟ್ಟಿಗೆ ಹೊರೆ ಇಳುಹಿ ತಮ್ಮ ಗುಡಿಸಲೊಳಗೆ ಕಾಲಿಡುತ್ತಿದ್ದಂತೆಯೇ ಸತ್ತ ಹೆಗ್ಗಣದ ದುರ್ವಾಸನೆ ಅನುಭವಿಸುವರು. ಇಲ್ಲೆಲ್ಲೋ ಹೆಗ್ಗಣ ಸತ್ತಿರಬೇಕು ಎಂದು ಹೆಂಡತಿ ಮಹಾದೇವಮ್ಮನಿಗೆ ಹೇಳುತ್ತಾರೆ. ಈ ಗುಡಿಸಲಲ್ಲಿ ಹೆಗ್ಗಣ ಸಾಯಲು ಹೇಗೆ ಸಾಧ್ಯ? ನಿಮ್ಮ ಮೂಗು ಕೆಟ್ಟಿರಬೇಕು ಎನ್ನುವಳು. ಆಗ ಮಾರಯ್ಯ ಒಂದು ಕೋಲು ಹಿಡಿದು ಗುಡಿಸಲೊಳಗೆ ಬಂದಾಗ ಮೂಲೆಯಲ್ಲಿ ಚಿನ್ನದ ಜಾಳಿಗೆ ಕಾಣುವುದು. ಇದೇ ಸತ್ತ ಹೆಗ್ಗಣ ಎಂದು ಅದನ್ನು ಬೀದಿಗೆ ಬಿಸಾಕುವರು. ಅಂದರೆ ಕಾಯಕದಿಂದ ಬಂದುದು ಮಾತ್ರ ಸ್ವೀಕಾರಾರ್ಹವೇ ಹೊರತು ಅನ್ಯ ಮಾರ್ಗದಿಂದ ಬಂದುದಲ್ಲ ಎನ್ನುವ ಧೋರಣೆ ವಚನಕಾರರದಾಗಿತ್ತು. ಹೇಗೋ ಬಂದದ್ದು ಸತ್ತ ಹೆಗ್ಗಣಕ್ಕೆ ಸಮ. ಇದರಿಂದ ಶರಣರ ಕಾಯಕ ಶ್ರದ್ಧೆ, ತತ್ವನಿಷ್ಠೆ, ನೈತಿಕ ನೆಲೆಗಟ್ಟನ್ನು ಗಮನಿಸಬೇಕು. ಅವರು ಸುಮಾರು 800ಕ್ಕಿಂತ ಹೆಚ್ಚು ವಚನಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಅದರಲ್ಲಿ ನಮಗೆ ತುಂಬಾ ಪ್ರಿಯವಾದ ವಚನ-
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು,
ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
ಈ ವಚನವನ್ನು ಆಧಾರವಾಗಿಸಿಕೊಂಡೇ ನಾವು `ಮೋಳಿಗೆ ಮಾರಯ್ಯ’ ಎನ್ನುವ ನಾಟಕವನ್ನು ಬರೆದಿದ್ದೇವೆ. ಅವರು ರಾಜರಾಗಿದ್ದಾಗಿನ ಮತ್ತು ಕಲ್ಯಾಣದಲ್ಲಿ ಕಟ್ಟಿಗೆ ಕಡಿದು ಬದುಕುವ ಜೀವನಕ್ಕೆ ಹೋಲಿಕೆ ಮಾಡಿದ್ದಾರೆ. ರಾಜರಾಗಿದ್ದಾಗ ಆನೆ, ಕುದುರೆ, ಸಂಪತ್ತು ಏನೆಲ್ಲ ಭೋಗ ಭಾಗ್ಯಗಳಿದ್ದವು. ಅಷ್ಟಿದ್ದಾಗಲೂ ನಾನು ಊಟ ಮಾಡುತ್ತಿದ್ದುದು ಒಂದು ಮುಷ್ಠಿ ಅಕ್ಕಿಯ ಅನ್ನ. ಕುಡಿಯುತ್ತಿದ್ದುದು ಒಂದು ಮಿಳ್ಳೆ ಹಸುವಿನ ಹಾಲು. ಮಲಗುತ್ತಿದ್ದುದು ಅರ್ಧ ಮಂಚದಲ್ಲಿ. ಕಲ್ಯಾಣದಲ್ಲಿ ಅವರೀಗ ರಾಜರಲ್ಲ. ಹಾಗಂತ ಇಲ್ಲೇನೂ ಉಪವಾಸವಿಲ್ಲ. ಕಲ್ಯಾಣದಲ್ಲೂ ಒಂದು ಮುಷ್ಠಿ ಅಕ್ಕಿಯ ಅನ್ನ ಊಟ ಮಾಡುತ್ತಿದ್ದೇನೆ, ಒಂದು ಮಿಳ್ಳೆ ಹಸುವಿನ ಹಾಲನ್ನು ಕುಡಿಯುತ್ತಿದ್ದೇನೆ, ಅರ್ಧ ಮಂಚದಲ್ಲಿ ಮಲಗುತ್ತಿದ್ದೇನೆ. ಹೀಗೆ ಹೇಳುವ ಮೂಲಕ ಅವರು ಸಮಾಜಕ್ಕೆ ಕೊಡುವ ಸಂದೇಶ `ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ’ ಎನ್ನುವುದು. ಸಂಪತ್ತಿಗೆ ಯಾವ ಸತ್ವವೂ ಇಲ್ಲ. ಏಕೆಂದರೆ ಮಾನವ ಸತ್ತರೆ ಅವನ ಉಸಿರು ಗಾಳಿಯಲ್ಲಿ ಸೇರುವುದು. ದೇಹವನ್ನು ಮಣ್ಣಲ್ಲಿ ಹೂಳುವರು. ಅವನ ಪತ್ನಿಗೆ ಇನ್ನೂ ತಾರುಣ್ಯ ಇದ್ದರೆ ಬೇರೆಯವರ ಜೊತೆ ಸಂಸಾರ ನಡೆಸಬಹುದು. ಹೀಗಿದ್ದಾಗ ಸತ್ತವರ ಹಿಂದೆ ಬರುವುದು ಏನು? ಅವನು ಸಂಪಾದಿಸಿದ ಯಾವ ಸಂಪತ್ತೂ ಜೊತೆಯಲ್ಲಿ ಬರುವುದಿಲ್ಲ. ಆ ಸಂಪತ್ತು ಅವನ ಸಾವನ್ನೂ ದೂರ ತಳ್ಳುವುದಿಲ್ಲ. ಹಾಗಾಗಿ ಇಂಥ ಸಂಪತ್ತನ್ನು ನೆಚ್ಚಿ ಕೆಡಬೇಡ ಎನ್ನುವರು. ಇವತ್ತು ಏನೆಲ್ಲ ಅನಾಹುತ ಆಗುತ್ತಿದೆ ಎಂದರೆ ಅದಕ್ಕೆಲ್ಲ ಕಾರಣ ಸಂಪತ್ತಿನ ಮೋಹ. ಸಂಪತ್ತಿನ ಮೋಹದಿಂದ ಆದರ್ಶಗಳನ್ನೆಲ್ಲ ಗಾಳಿಗೆ ತೂರುವುದನ್ನು ನೋಡುತ್ತಿದ್ದೇವೆ. ಮನುಷ್ಯ ಸಾತ್ವಿಕ ಜೀವನ ಸಾಗಿಸಬೇಕು. ಅವಗುಣಗಳನ್ನು ದೂರ ತಳ್ಳಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.
ಹನ್ನೆರಡನೆಯ ಶತಮಾನದ ವಚನಕಾರರು ಸಂಪತ್ತಿಗೆ ಬದಲು ಸದ್ಗುಣಗಳ ಹಿಂದೆ ಹೋದವರು. ಸದಾಚಾರಿಗಳಾಗಿ ಬಾಳಿದವರು. ಸಮಾಜಮುಖಿ ಚಿಂತನೆ ಹೊಂದಿ ಅದನ್ನು ಸಾಕಾರಗೊಳಿಸಲು ಯತ್ನಿಸಿದವರು. ಇದು ನಮ್ಮ ಯುವಪೀಳಿಗೆಗೆ ಮತ್ತು ವಿದ್ಯಾವಂತರಿಗೆ ಮಾರ್ಗದರ್ಶಿಯಾಗಬೇಕಿದೆ. ಹಣ ಹಣ ಎಂದು ಹಣದ ಹಿಂದೆ ಓಡಿದರೆ ಆತ ಹೆಣವಾಗುವನು. ಮನುಷ್ಯನಿಗೆ ಬೇಕಾದ್ದು ಸಂತೋಷ, ನೆಮ್ಮದಿ, ಆನಂದ. ಇದು ಬಾಹ್ಯ ವಸ್ತು ಒಡವೆ ಸಂಪತ್ತಿನಿಂದ ಸಿಗುವುದಿಲ್ಲ. ಅದು ನಮ್ಮೊಳಗೇ ಇದೆ. ನಾನು ನೆಮ್ಮದಿಯಿಂದ ಇದ್ದೇನೆ ಅಂದುಕೊಂಡರೆ ನೆಮ್ಮದಿಯಿಂದ ಇರಲು ಸಾಧ್ಯ. ನನಗೆ ಇರುವಷ್ಟು ಸಮಸ್ಯೆ, ಸವಾಲು, ಸಂಕಷ್ಟ ಬೇರೆ ಯಾರಿಗೂ ಇಲ್ಲ ಎಂದರೆ ಅವರು ನೋವಿನಲ್ಲೇ ನರಳುವ ಪರಿಸ್ಥಿತಿ ತಂದುಕೊಳ್ಳುವರು. ನೋವಿನಿಂದ ಹೊರಬರಬೇಕೆಂದರೆ ನನ್ನಷ್ಟು ಸಂತೋಷ ಬೇರೆಯವರಿಗೆ ಇಲ್ಲ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಂಥ ಭಾವನೆ ಬೆಳೆಸಿಕೊಂಡು ಸಾರ್ಥಕ ಜೀವನ ನಡೆಸಿದವರು ವಚನಕಾರರು. ಶರಣರ ವಚನ ಸಾಹಿತ್ಯ ಸರಳವಾದದ್ದು: ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಭಾರತೀಯರು ದೇವರು, ಧರ್ಮವನ್ನು ಅಪಾರವಾಗಿ ನಂಬಿರುವ ಜನ. ಆದರೆ ಅವರು ನಂಬಿರುವ ದೇವರುಗಳಿಗೆ ಜೀವವೇ ಇಲ್ಲ. ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ ಅಥವಾ ಮತ್ತಾವುದೇ ದೇವಸ್ಥಾನಗಳಲ್ಲಿರುವ ಪ್ರತಿಮೆಗಳಿಗೆ ಜೀವ ಇದೆಯೇ? ಅವು ಮಾನವ ನಿರ್ಮಿತ ಜಡ ವಿಗ್ರಹಗಳು. ಅವು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ವಿಧಿಸುವುದಿಲ್ಲ. ಆದರೆ ಭಕ್ತರ ಭ್ರಮೆಯಲ್ಲಿ ಒಂದು ದೇವರು ತುಂಬಾ powerful, ಇನ್ನೊಂದು ದೇವರು powerless. ಯಾವ ದೇವರೂ powerful ಅಲ್ಲ. ಇದಕ್ಕೆ ಇತ್ತೀಚೆಗೆ ನಡೆದ ಒಂದು ಜೀವಂತ ಘಟನೆ ನೋಡಬಹುದು. ಸಾಣೇಹಳ್ಳಿಯಿಂದ 50 ಕಿ ಮೀ ದೂರದಲ್ಲಿ ಕೆಂಕೆರೆ ಗ್ರಾಮವಿದೆ. ಅಲ್ಲೊಂದು ಅಮ್ಮನ ದೇವಸ್ಥಾನವಿದ್ದು ಅದಕ್ಕೆ ಬಹಳ ಜನ ಭಕ್ತರು. ಭಕ್ತರೆಲ್ಲ ಅಮ್ಮನಿಗೆ ಕೊಡಿಸಿರುವ ಚಿನ್ನಾಭರಣಗಳ ಮೌಲ್ಯ ಸುಮಾರು ಎರಡೂವರೆ ಕೋಟಿ. ಒಂದು ರಾತ್ರಿ ಇದ್ದಕ್ಕಿದ್ದಂತೆ ಎಲ್ಲ ಆಭರಣಗಳೂ ಕಾಣೆಯಾದವು. ಆಭರಣಗಳನ್ನು ಕದ್ದವರು ಯಾರು ಎಂದು ಸಮಿತಿಯವರು ದೇವರ ಅಪ್ಪಣೆ ಕೇಳಲಿಲ್ಲ. ಬದಲಾಗಿ ಪೊಲೀಸ್ ಸ್ಟೇಶನ್‍ಗೆ ಹೋಗಿ ಕೇಸ್ ದಾಖಲೆ ಮಾಡಿದರು. ತನ್ನ ಆಭರಣಗಳನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಆ ದೇವಿಯು ಭಕ್ತರಿಗೆ ವರ ಅಥವಾ ಶಾಪ ಕೊಡಬಲ್ಲಳೇ? ಕೊಡುವುದೇ ಆಗಿದ್ದರೆ ಕದ್ದವರ ಕೈ ಕಾಲು ಕಳೆಯಬೇಕಿತ್ತು. ಅವರು ಅಲ್ಲೇ ಬಿದ್ದು ಒದ್ದಾಡಬೇಕಿತ್ತು. ಹಾಗಾಗದೆ ಪೊಲೀಸ್ ಸ್ಟೇಶನ್‍ಗೆ ಹೋದರೆ ಅದು ದೇವರೇ? ಬಸವಣ್ಣನವರು ದೇವರ ಸ್ವರೂಪವನ್ನು ಹೇಳುವಾಗ ‘ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ’, ‘ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ’ ಎನ್ನುವರು. ದೇವರು ಇಲ್ಲದಿರುವ ಸ್ಥಳವೇ ಇಲ್ಲ. ಆ ಚೇತನ ಎಲ್ಲೆಡೆಯೂ ಇದೆ. ದೇವರು ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ. ಸತ್ ಚಿತ್ ಆನಂದ ನಿತ್ಯ ಪರಿಪೂರ್ಣ ದೇವರ ಗುಣಗಳು. ಆದರೆ ಗುಡಿಯಲ್ಲಿರುವ ಯಾವ ದೇವರಿಗೂ ಈ ಐದು ಗುಣಗಳಲ್ಲಿ ಒಂದೂ ಇಲ್ಲ. ಅವು ಪವರ್‍ಫುಲ್, ಪವರ್‍ಲೆಸ್ ಆಗುವುದು ಅಲ್ಲಿರುವ ಪೂಜಾರಿಯ ಜಾಣ್ಮೆಯಿಂದ. ಪೂಜಾರಿ ಅದಕ್ಕೆ ಜೀವಕಳೆ ತುಂಬಿದ್ದಾನೆ ಎನ್ನುವರು. ಅವನು ಜೀವಕಳೆ ತುಂಬಿಲ್ಲ. ಭಕ್ತರನ್ನು ಮೂಢರನ್ನಾಗಿಸಿ ತನ್ನ ಜೀವನಕ್ಕೆ ಬಂಡವಾಳ ಮಾಡಿಕೊಂಡಿದ್ದಾನೆ. ಇಂಥ ದೇವರನ್ನು ಶರಣರು ವಿರೋಧ ಮಾಡಿದರು.
ಕಲ್ಲು, ಮಣ್ಣು, ಕಟ್ಟಿಗೆ, ಪಂಚಲೋಹ ಇತ್ಯಾದಿಗಳಿಂದ ಮಾಡಿದ ದೇವರು ದೇವರಲ್ಲ ಎನ್ನುವರು ಶರಣರು. ಅವರ ಪ್ರಕಾರ ತನ್ನ ತಾನಾರೆಂದು ತಿಳಿದಡೆ ತಾನೇ ದೇವ. ಅದನ್ನೇ ಬಸವಣ್ಣನವರು ‘ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ’ ಎಂದಿದ್ದಾರೆ. ಅವರು ದೇವರನ್ನು ನಿರಾಕರಿಸಲಿಲ್ಲ. ಆದರೆ ಗುಡಿಯ ಜಡ ದೇವರ ಬದಲು ದೇಹವನ್ನೇ ದೇವಾಲಯ ಮಾಡಿದರು. ಈ ದೇವಾಲಯಕ್ಕೆ ಕಾಲುಗಳೇ ಕಂಬಗಳು. ಶಿರವೇ ಹೊನ್ನ ಕಳಸ. ಜೀವಾತ್ಮನೇ ಪರಮಾತ್ಮ. ಪರಮಾತ್ಮನ ಪ್ರತೀಕವೇ ಇಷ್ಟಲಿಂಗ. `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಥಾವರ ಎಂದರೆ ಚೈತನ್ಯ ಇಲ್ಲದ್ದು. ಜಡವಾದುದು. ನಾಶವಾಗುವಂತಹುದು. ಜಂಗಮ ಎಂದರೆ ಚೈತನ್ಯವುಳ್ಳುದು, ಸದಾ ಇರುವಂತಹುದು. ಅದಕ್ಕೆ ಅರಿವು, ಆನಂದ ಮುಂತಾದ ಲಕ್ಷಣಗಳಿವೆ. ಗುಡಿಯ ದೇವರು ಸ್ಥಾವರ, ಮಾನವ ಜಂಗಮ. ದೇವರನ್ನು ಜಂಗಮಸ್ವರೂಪಿಯಾಗಿ ನೋಡಬೇಕೇ ಹೊರತು ಜಡವಾಗಿ ಅಲ್ಲ. ಹೀಗೆ ಹೇಳುವ ಮೂಲಕ ಶರಣರು ಗುಡಿ ಗುಂಡಾರಗಳನ್ನು ಗುಡಿಸಿ ಹಾಕಿ ಮನುಷ್ಯನೇ ದೇವರಾಗಬೇಕೆಂದರು. ಜಡ ದೇವರ ಜೊತೆಗೆ ಮೌಢ್ಯಗಳನ್ನು ಸಹ ಶರಣರು ವಿರೋದಿಸಿದ್ದಾರೆ. ಅವರಂತೆ ಮೌಢ್ಯಗಳನ್ನು ವಿರೋಧಿಸಿದವರು ಮತ್ತೊಬ್ಬರಿಲ್ಲ. ಆದರೆ ಎಷ್ಟೋ ಜನ ಶರಣರ ವಚನ ಸಾಹಿತ್ಯ ಓದಿದ್ದರೂ ಮೌಢ್ಯಗಳಿಂದ ಮುಕ್ತರಾಗಿಲ್ಲ. ‘ತುಮ್ಹಾರಿ ಸಿವ ಔರ್ ಕೋಯಿ ನಹಿ’ ಎನ್ನುವ ನಮ್ಮ ವಚನ ನೃತ್ಯಗಳನ್ನು ಮುಂಬೈ ನಗರದ ಬಸವ ಭಕ್ತರು ಎರಡು ಮೂರು ಕಡೆ ನೋಡಿದ್ದಾರೆ. ಇವತ್ತು ನೀವು ಬರಲೇ ಇಲ್ಲವಲ್ಲ ಎಂದರೆ ಅಯ್ಯೋ ಇವತ್ತು ಅಮಾವಾಸ್ಯೆ. ಅಮಾವಾಸ್ಯೆಯಂದು ಮನೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದರಂತೆ. ಇದೆಲ್ಲ ನಿಮ್ಮ ಭ್ರಮೆ. ಅಮವಾಸ್ಯೆ, ಹುಣ್ಣಿಮೆ ಪ್ರಾಕೃತಿಕವಾಗಿ ಬರುತ್ತವೆ, ಹೋಗುತ್ತವೆ. ಅವು ಮನುಷ್ಯನ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಮಾಡುವುದೇ ಆದರೆ ಮನೆಯಲ್ಲಿದ್ದರೂ ಮಾಡಬಹುದಲ್ಲವೇ?
ವಚನಗಳನ್ನು ಓದಿ, ಶರಣರ ವಿಚಾರಗಳನ್ನು ಹೇಳಿ-ಕೇಳಿಯೂ ಮೌಢ್ಯಗಳಿಂದ ಹೊರಬರದಿದ್ದರೆ ಏನು ಮಾಡುವುದು? ತಲೆ ಬಂಗಾರದ ಕಳಸ ಎಂದರು ಬಸವಣ್ಣ. ಈ ಸಾಲುಗಳನ್ನು ಹೇಳುತ್ತಲೇ ತಲೆಯಲ್ಲಿ ಬೇಡವಾದ ಕಸ ತುಂಬಿಕೊಂಡರೆ? ಬುದ್ಧಿಯ ಸದ್ಬಳಕೆ ಮಾಡಿಕೊಂಡರೆ ಹುಣ್ಣಿಮೆ, ಅಮಾವಾಸ್ಯೆ, ರಾಹುಕಾಲ ಮುಂತಾದವು ಯಾರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಬಸವಣ್ಣನವರು ‘ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ’ ಎಂದಿದ್ದಾರೆ. ಇಷ್ಟೆಲ್ಲ ಹೇಳಿ, ಕೇಳುವ ವಿದ್ಯಾವಂತರೇ ಮೌಢ್ಯಗಳಿಗೆ ಒಳಗಾದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಆಗ ದೇಶವನ್ನು ಸುಧಾರಣೆ ಮಾಡುವವರು ಯಾರು? ವಿಜ್ಞಾನಿಗಳಲ್ಲೂ ಮೌಢ್ಯಗಳು ಇವೆ ಎನ್ನುವುದಕ್ಕೆ ಉಪಗ್ರಹಗಳ ಉಡಾವಣೆ ಮಾಡುವಾಗ ತಿರುಪತಿ ತಿಮ್ಮಪ್ಪನಿಗೆ ಪೂಜೆ ಮಾಡಿಸುವುದು. ಇನ್ನೂ ಯಾವ ಶತಮಾನದಲ್ಲಿದ್ದೇವೆ ಎಂದು ಯೋಚಿಸಬೇಕು. ಈಗ ವಿಜ್ಞಾನ, ತಂತ್ರಜ್ಞಾನ ಯುಗ. ಅಂಗೈಯಲ್ಲೇ ವಿಶ್ವದ ಏನೆಲ್ಲವನ್ನೂ ನೋಡುವ ಅವಕಾಶವಿದೆ. ಇಷ್ಟೆಲ್ಲ ಇದ್ದೂ ಮೌಢ್ಯಗಳಿಗೆ ಒಳಗಾದರೆ ಈ ದೇಶವನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ನಾವು ವಿದ್ಯಾವಂತ ಯುವಕರಿಗೆ ಆಗಾಗ ಹೇಳುವುದು: ನಿಮ್ಮ ಹಿರಿಯರನ್ನು ಬಿಡಿ; ನೀವಾದರೂ ಬದಲಾವಣೆ ಆಗುವ ಸಂಕಲ್ಪ ಮಾಡಿ ಎಂದು. ನಮ್ಮ ಹಿರಿಯ ಗುರುಗಳು ಸಮಾಜದ ಜನರನ್ನು ಮೂರು ರೀತಿ ವರ್ಗೀಕರಣ ಮಾಡಿದ್ದಾರೆ. ತುಂಬಿದ ಚೀಲ, ತೂತಿರುವ ಚೀಲ, ಖಾಲಿ ಚೀಲ. 50 ವರ್ಷ ದಾಟಿದವರು ತುಂಬಿದ ಚೀಲ. ಅವರು ಬೇಕಾದ್ದು, ಬೇಡವಾದ್ದನ್ನೆಲ್ಲ ತುಂಬಿಕೊಂಡಿದ್ದಾರೆ. ಅಲ್ಲಿ ಮತ್ತೇನನ್ನೂ ತುಂಬಲು ಸಾಧ್ಯವಿಲ್ಲ. ಯುವಕ ಯುವತಿಯರು ತೂತಿರುವ ಚೀಲ. ಏನೇ ತುಂಬಿದರೂ ಸೋರಿ ಹೋಗುವುದು. ಅದೇ ಮಕ್ಕಳು ಈಗ ತಾನೆ ಫ್ಯಾಕ್ಟರಿಯಿಂದ ತಂದಿರುವ ಹೊಸ ಚೀಲ. ಆ ಚೀಲದಲ್ಲಿ ಬೆಳ್ಳಿ, ಬಂಗಾರ, ಪುಸ್ತಕ, ಗೊಬ್ಬರ, ದವಸ ಹೀಗೆ ಏನಾದರೂ ತುಂಬಬಹುದು. ತುಂಬಿಸಿಕೊಳ್ಳುವ ಸಾಮರ್ಥ್ಯ ಚೀಲಕ್ಕಿದೆ. ತುಂಬುವ ವ್ಯಕ್ತಿ ವಿವೇಕಿಯಾಗಿರಬೇಕು. ಏನನ್ನು ತುಂಬಿದರೆ ಚೀಲದ ಮೌಲ್ಯ ಹೆಚ್ಚುತ್ತದೆ ಎನ್ನುವ ದೂರದೃಷ್ಟಿ ಇರಬೇಕು. ಮಕ್ಕಳಲ್ಲಿ ಒಳ್ಳೆಯದನ್ನೇ ತುಂಬುತ್ತಿದ್ದರೆ ಮುಂದೆ ಅವರೇ ಸತ್ಪ್ರಜೆಗಳಾಗಲು ಸಾಧ್ಯ.
ಒಂದು ಒಳ್ಳೆ ಅವಕಾಶವನ್ನು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಒದಗಿಸಿಕೊಟ್ಟಿದೆ. ನಾವೂ ವಿಶ್ವವಿದ್ಯಾಲಯದಲ್ಲೇ ಓದಿದ್ದರೂ ಈಗ ವಿಶ್ವವಿದ್ಯಾಲಯದ ವಾತಾವರಣದಿಂದ ದೂರವಿದ್ದು ಒಂದು ಪುಟ್ಟ ಹಳ್ಳಿಯಲ್ಲಿದ್ದೇವೆ. ನಾವು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿ ಪಡೆದವರು. ಹಾಗಂತ ಅತಿ ಬುದ್ಧಿವಂತರೇನಲ್ಲ. ಶ್ರೀಮಠದ ಆಶ್ರಯದಲ್ಲಿ ಓದಿದ ನಾವು ಎಸ್ ಎಸ್ ಎಲ್ ಸಿ, ಪಿಯುಸಿ, ಪ್ರಥಮ ಮತ್ತು ದ್ವಿತೀಯ ಬಿಎ ಪರೀಕ್ಷೆಯನ್ನು ಎರಡೆರಡು ಸಲ ಬರೆದವರು. ಅಂತಹ ಸಂದರ್ಭದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಮುಖ ತೋರಿಸುವುದು ಹೇಗೆಂದು ತಪ್ಪಿಸಿಕೊಂಡು ಓಡಾಡುತ್ತಿದ್ದೆವು. ಅವರು ನಮ್ಮನ್ನು ಕರೆದು ನಮ್ಮ ಪೇಲವ ಮುಖ ನೋಡಿ ಅಯ್ಯೋ ದಡ್ಡ, ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಮಾಡುವಿಯಲ್ಲ! ಎಲ್ಲರೂ ಪಾಸಾದರೆ ಫೇಲಾಗುವವರು ಯಾರು? ಫೇಲಾಗುವುದೇ ಪಾಸಾಗುವುದಕ್ಕೆ. ಫೇಲಾದರೆ ಅನುಭವ ಬರುತ್ತದೆ. ಮತ್ತೆ ಪರೀಕ್ಷೆಗೆ ಕಟ್ಟು, ಓದು ಎಂದು ಬೆನ್ನು ತಟ್ಟಿದರು. ಅದು ತಾಯಿಯ ಹೃದಯ. ಅವರು ನಮ್ಮನ್ನು ಬೈಯಲಿಲ್ಲ, ಹೊಡೆಯಲಿಲ್ಲ, ಓದು ಸಾಕು ಎನ್ನಲಿಲ್ಲ. ಅದೇ ತಂದೆ ತಾಯಿಗಳಾಗಿದ್ದರೆ ನಿನ್ನ ಓದು ಸಾಕು, ಯಾರ ಮನೆಯಲ್ಲಾದರೂ ಸಂಬಳ ಇರು, ದನ ಕಾಯಿ ಎನ್ನುತ್ತಿದ್ದರೇನೋ? ಗುರುಗಳ ಆಶೀರ್ವಾದದ ಫಲವಾಗಿ ತತ್ವಶಾಸ್ತ್ರ ವಿಷಯದಲ್ಲಿ ಅಂತಿಮ ಬಿ ಎ ಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಪ್ರಥಮರಾಗಿ ಚಿನ್ನದ ಪದಕ ಪಡೆಯಲು ಸಾಧ್ಯವಾಯ್ತು. ಬಿ ಎ ಪದವಿ ಮುಗಿಸಿದ್ದು ಸಿರಿಗೆರೆಯಲ್ಲಿ ಕನ್ನಡ ಮಾಧ್ಯಮದಲ್ಲಿ. ಮುಂದೆ ಮೈಸೂರಲ್ಲಿ ಎಂ ಎ ತತ್ವಶಾಸ್ತ್ರಕ್ಕೆ ಸೇರಿದ್ವಿ. ಅಲ್ಲಿನ ಬಹುತೇಕ ವಿದ್ಯಾರ್ಥಿಗಳು ಆಂಗ್ಲಮಾಧ್ಯಮದಿಂದ ಬಂದವರು. ಅವರು ಮಾತನಾಡುವುದೇ ಅರ್ಥವಾಗುತ್ತಿರಲಿಲ್ಲ. ಅಲ್ಲೂ ನಾವೇ ಪ್ರಥಮ ರ್ಯಾಂಕ್ ಪಡೆಯುವ ಅವಕಾಶ ಲಭ್ಯವಾಯ್ತು.
ಇದನ್ನೆಲ್ಲ ಹೇಳಲು ಕಾರಣ ಪರೀಕ್ಷೆಯಲ್ಲಿ ಫೇಲಾದ್ವಿ, ಜೀವನದಲ್ಲಿ ಸೋತ್ವಿ ಎಂದು ಹೆದರಬೇಕಾಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಅದನ್ನೊಂದು ಸವಾಲಾಗಿ ಸ್ವೀಕಾರ ಮಾಡಿದರೆ ಮತ್ತೆ ಪುಟಿದು ಮೇಲೇಳಲು ಸಾಧ್ಯ. ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಪಡೆಯುವುದಷ್ಟೇ ಮುಖ್ಯವಲ್ಲ. ಜೀವನ ಪರೀಕ್ಷೆಯಲ್ಲೂ ರ್ಯಾಂಕ್ ಪಡೆಯಬೇಕು. ಆಗಲೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಓದಿಗೆ ವಯಸ್ಸಿನ ಅಂತರವಿಲ್ಲ. ಕನ್ನಡ ವಿಭಾಗದಲ್ಲಿ ಬಿಎ, ಎಂಎ, ಪಿಹೆಚ್‍ಡಿ ಪದವಿ ಪಡೆಯಲಿರುವ ಹಲವರು ಇಳಿವಯಸ್ಸಿನಲ್ಲಿ, ಬೇರೆ ಬೇರೆ ಉದ್ಯೋಗದಲ್ಲಿ ಇರುವುದಾಗಿ ಕೇಳಿದ್ದೇವೆ. ಅವರ ಜೀವನೋತ್ಸಾಹ ನಿತ್ಯ ಶಾಲಾ ಕಾಲೇಜುಗಳಿಗೆ ಹೋಗಿ ಓದುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ನೈತಿಕ ನೆಲೆಗಟ್ಟು ಕುಸಿಯದಂತೆ ಎಚ್ಚರವಹಿಸಬೇಕು. ಇಷ್ಟು ಮಾತು ಹೇಳಲು ಅವಕಾಶ ಕಲ್ಪಿಸಿಕೊಟ್ಟಿರುವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್ ಉಪಾಧ್ಯ ಮತ್ತು ಅವರ ಬಳಗಕ್ಕೆ ಕೃತಜ್ಞತೆ ಸಲ್ಲಿಸಿ ಮಾತುಗಳನ್ನು ಮುಕ್ತಾಯಗೊಳಿಸುತ್ತೇವೆ.
(17-8-2023ರಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ಎಂ ಎ ಪದವೀಧರ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಪ್ರಧಾನ ಮಾಡಿ ಆಡಿದ ಮಾತುಗಳ ಸಂಗ್ರಹ)
Comments 10
ಗುರುಪ್ರಸಾದ ಹೆಚ್
Sep 11, 2023ನಿಮ್ಮ ಸ್ವಾನುಭವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ ಬುದ್ಧಿವಾದ ಸೂಕ್ತವಾಗಿದೆ. ಸೋಲಿಗೆ ಆತ್ಮಹತ್ಯೆಯ ದಾರಿ ತುಳಿಯುವವರು ಈ ಲೇಖನ ಓದಲೇ ಬೇಕು.
Kirankumar Hatti
Sep 11, 2023Very informative and beautiful blog. I found it by chance, Thanks for qualitative articles.
ಹರ್ಷಾ ಕೆ.ಪಿ
Sep 13, 2023ಒಬ್ಬೊಬ್ಬ ಶರಣರ ವಿಚಾರಗಳೂ ನಾವು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಉತ್ತರದಂತಿವೆ. ಆದರೆ ಹಾಗೆ ಬದುಕಲು ನಮಗೆ ಧೈರ್ಯಬೇಕು, ಛಲ ಬೇಕು, ಬದ್ಧತೆ ಬೇಕು. ಲೇಖನ ಹೃದಯಸ್ಪರ್ಶಿಯಾಗಿದೆ.
Prabhakar B
Sep 13, 2023ಯಾವ ದೇವರು ಪ್ರಭಾವಶಾಲಿ ಅಂತ ನಮ್ಮಲ್ಲಿ ಬಹಳ ಜಿಜ್ಞಾಸೆಗಳು ನಡೆಯುತ್ತಿರುತ್ತವೆ. ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಯಾವ ದೇವರಿಗೆ ಹೋಗಲೂ ನಮ್ಮವರು ರೆಡಿ. ಇಂಥ ಮೌಢ್ಯತೆಯ ಸಾಗರದಲ್ಲಿದ್ದುಕೊಂಡು ಬಸವಣ್ಣನವರ ವಿಚಾರಗಳನ್ನು ಅರಿತುಕೊಳ್ಳುವುದು ಸಾಧ್ಯವೆ ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ ಗುರುಗಳೇ. ಮನೆಯವರು ಮಾಡುವ ವ್ರತ ನೇಮಗಳನ್ನು ನನ್ನಿಂದ ತಡೆಯಲು ಸಾಧ್ಯವೇ ಇಲ್ಲ. ಮನೆಯಲ್ಲಿ ಬಾರದ ಬದಲಾವಣೆಯನ್ನು ಸಮಾಜದಲ್ಲಿ ನಿರೀಕ್ಷಿಸುವುದು ಸಾಧ್ಯವೇ ಇಲ್ಲ.
ಶಿವಾನಂದ ಗೋಗಾವ
Sep 16, 2023ಅದ್ಭುತವಾದ ಮಾತುಗಳು ಪೂಜ್ಯರದ್ದು. ಬದುಕುವವನಿಗೆ ಬದುಕಲೆಂದೇ ಹೇಳಿದ ಮಾತುಗಳು. ಮನುಷ್ಯ ಉತ್ತಮವಾಗಿ ಬದುಕಲು ಬೇಕಾದ ಎಲ್ಲ ಅಂಶಗಳು ವಚನ ಸಾಹಿತ್ಯದಲ್ಲಿದೆ. ಅದನ್ನು ತೆರೆದು ಓದಿ, ನಮ್ಮ ಅಂತರಾಳಕ್ಕೆ ಇಳಿಸ್ಬೇಕು.
VIJAYAKUMAR KAMMAR
Sep 16, 2023ಅತ್ಯುತ್ತಮ ಚಿಂತನೆ🙏
ಡಾ. ಮೈತ್ರ ಗದಿಗೆಪ್ಪಗೌಡರ
Sep 17, 2023ಈ ಬಾರಿಯ ಲೇಖನಗಳಂತು ನಿಜಕ್ಕೂ ಅತ್ಯುತ್ತಮ ವಿಷಯ ಹೊಂದಿವೆ…ನಾನಂತು ಎರಡು ಬಾರಿ ಓದಿದೆ ನಿಮ್ಮ ಶ್ರಮ ಸಾರ್ಥಕವಾಗಿದೆ 🙏🏽
Abhishekh Solapur
Sep 18, 2023Tha best article 👌🏽
Umadevi R
Sep 26, 2023ಗುರುಗಳು ತಮ್ಮ ಸ್ವಂತ ಅನುಭವವನ್ನಿಟ್ಟುಕೊಂಡು ವಿದ್ಯಾರ್ಥಿಗಳಿಗೆ ನೀಡಿದ ಮಾತುಗಳು ಎಲ್ಲರೂ ಪಾಲಿಸುವಂತಿವೆ. ಗುರುಗಳ ಪೂರ್ವಾಶ್ರಯದ ಬಗೆಗೆ ನನಗೆ ಗೊತ್ತಿರಲಿಲ್ಲ. ನಿಜಕ್ಕೂ ಅವರ ಹಿರಿಯ ಗುರುಗಳು ಬಹಳ ದೊಡ್ಡವರು. ಅಂಥ ಗುರುವರ್ಯರನ್ನು ಪಡೆದ ಸ್ವಾಮಿಗಳು ಧನ್ಯರು. ಅವರ ಮುನ್ನೋಟದಿಂದ ತಮ್ಮಂತಹ ಪೂಜ್ಯರು ಲಿಂಗಾಯತ ಸಮುದಾಯಕ್ಕೆ ಸಿಕ್ಕಂತಾಯಿತು.
ಮಧು ಬಿ.ಎನ್.
Oct 7, 2023ಫೇಲಾಗಿ ಪಾಸಾದ ಬಗ್ಗೆ ಶರಣರ ಮಾತುಗಳು ಸ್ಪೂರ್ತಿದಾಯಕವಾಗಿವೆ