ವಚನ – ಚಿಂತನ
ಶರಣರ ವಚನಗಳ ಅರ್ಥವ್ಯಾಪ್ತಿ ಜಗದಗಲ ಮುಗಿಲಗಲ. ಯಾವುದೇ ಒಂದು ವಚನದ ಅರ್ಥ ನಿರ್ದಿಷ್ಟವಾಗಿ ಇದೇ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ವಚನಗಳನ್ನು ಓದಿದಷ್ಟೂ ಅವುಗಳ ದೃಷ್ಟಿಕೋನ ಬದಲಾಗುತ್ತಾ, ವಿಸ್ತಾರವಾಗುತ್ತಲೇ ಹೋಗುತ್ತದೆ. ದಶಕಗಳಿಂದ ವಚನಗಳನ್ನು ಅಭ್ಯಸಿಸಿದವರ ಸ್ಪಷ್ಟ ನುಡಿಗಳಿವು. ಒಮ್ಮೊಮ್ಮೆ ಒಂದೊಂದು ವಿಶೇಷ ಅರ್ಥ ಹೊಳೆಯುತ್ತದೆ. ಮತ್ತು ಅದು ವಚನದ ಆಶಯಕ್ಕೆ ಭಂಗ ತರುವಂತಿರುವುದಿಲ್ಲ. ವಚನಗಳ ನಿಜ ಆಶಯ ಸರಿಯಾಗಿ ತಿಳಿಯಲು ವಚನಾಸಕ್ತ ಓದುಗರು, ಶರಣರು ಯಾವ ನೆಲೆಯಲ್ಲಿ ನಿಂತು ವಚನಗಳನ್ನು ಬರೆದರೋ ಅದೇ ನೆಲೆಯಲ್ಲಿ ನಿಂತು ಓದಿದಾಗ ಮಾತ್ರ ಆ ವಚನದ ಸ್ಪಷ್ಟ ಅರಿವು ಉಂಟಾಗಲು ಸಾಧ್ಯ. ಈ ನಿಟ್ಟಿನಲ್ಲಿ ಬಹುತೇಕ ನಾವೆಲ್ಲರೂ ಇನ್ನೂ ಶರಣರು ಏರಿದ ಎತ್ತರವನ್ನು ಏರಿಲ್ಲವಾದ್ದರಿಂದ ಆಯಾ ಸಂದರ್ಭಕ್ಕೆ ನಮಗೆ ತಿಳಿದಂತೆ ಅವುಗಳನ್ನು ಅರಿಯುವ ಪ್ರಯತ್ನ ಮಾಡುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ನನ್ನ ಮತಿಯ ಮಿತಿಗೆ ನಿಲುಕಿದ ಹಾಗೆ ಕೆಲವು ವಚನಗಳ ಅರ್ಥವನ್ನು ಇಲ್ಲಿ ಚಿಂತನೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ಕೊಡಮಾಡಲ್ಪಟ್ಟಿರುವ ವಚನಗಳ ಅರ್ಥ ಅಂತಿಮ ಎಂದು ಯಾರೂ ಭಾವಿಸಬಾರದು. ಓದುಗರು ತಮ್ಮ ಮತಿಯ ನೆಲೆಯಲ್ಲಿ ವಚನಾರ್ಥವನ್ನು ಮತ್ತಷ್ಟು ವಿಭಿನ್ನವಾಗಿ ಶರಣರ ಆಶಯಕ್ಕೆ ಭಂಗ ಬಾರದಂತೆ ಮತ್ತು ವಚನದ ಭಾವಕ್ಕೆ ದೋಷ ಬಾರದಂತೆ ವಿಭಿನ್ನ ದೃಷ್ಟಿಕೋನಗಳಿಂದ ಅರ್ಥೈಸಲು ಸಾಧ್ಯವಿದೆ.
1.ಭವಬಂಧನ ಭವಪಾಶವಾದ ಕಾರಣವೇನಯ್ಯಾ
ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ,
ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ,
ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 7)
ಇದು ಸಂಸಾರ ಹೇಯಸ್ಥಲದ ವಚನ, ಈ ಹಂತದಲ್ಲಿ ಸಾಧಕಜೀವಿಯಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ನಮ್ಮೊಳಗೆ ನಡೆಯುವ ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಘರ್ಷದಲ್ಲಿ ಸತ್ಯವನ್ನು ಆಯ್ದುಕೊಂಡು ಅದರಂತೆ ನಡೆಯುವ ಒಂದು ಮನೋಭೂಮಿಕೆ ಸಿದ್ಧವಾಗುವ ಹಂತ. ಭವ ಎಂದರೆ ಮರೆವು, ಅಜ್ಞಾನ. ಭವಬಂಧನ ಎಂದರೆ ಮರೆವು ಅಥವಾ ಅಜ್ಞಾನದಿಂದ ಕೂಡಿದ ಚಿಂತನೆ, ಕ್ರಿಯೆಗಳಿಂದ ನಮಗೆ ನಾವೇ ಬಂಧನಕ್ಕೊಳಪಡುವುದು. ಇಲ್ಲಿ ಯಾವ ಹೊರಗಿನ ಶತೃವೂ ನಮ್ಮನ್ನು ಬಂಧಿಸುವುದಿಲ್ಲ. ನಮ್ಮ ಅಜ್ಞಾನ, ಅಜಾಗೃತ ಮನವೇ ಆ ಕಾರ್ಯವನ್ನು ಮಾಡುತ್ತದೆ. ಭವಪಾಶವೆಂದರೆ ನಮ್ಮ ಯಾವ ಅವಯವಗಳೂ ಸ್ವತಂತ್ರವಾಗಿ ವಿಚಾರಶೀಲ ಕ್ರಿಯೆ ಮಾಡಲಾಗದಷ್ಟು ಮನೋದಾಸ್ಯಕ್ಕೆ ಒಳಗಾಗಿ ಬಲವಾದ ಹಗ್ಗದ ರೂಪದಲ್ಲಿ ನಮ್ಮನ್ನು ನಾವೇ ಸಂಪೂರ್ಣವಾಗಿ ಬಂಧಿಸಿಕೊಳ್ಳುವುದು. ಇದು ಏಕೆ ಹೀಗೆ? ನಾವು ನಮ್ಮ ಮನಸ್ಸಿಗೆ ವಿಚಾರ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಅದನ್ನು ಪರಕೀಯ ಚಿಂತನೆಯ ದಾಸ್ಯದಲ್ಲೇ ಇಟ್ಟಿದ್ದೇವೆ. ಈ ರೀತಿಯ ಭವಬಂಧನ ಮತ್ತು ಭವಪಾಶಗಳಿಗೆ ಕಾರಣವಾದರೂ ಏನು? ಈ ಹಿಂದೆ ನಾನು ಸಂಸಾರ ಸಾಗರದಲ್ಲಿ ಮುಳುಗಿದ್ದುದೇ ಕಾರಣ.
ಹಾಗಾದರೆ ಶರಣರ ಪ್ರಕಾರ ಸಂಸಾರವೆಂದರೇನು? ಆಸೆಯೇ ಮೊದಲಾಗಿ ಆಸೆ, ಆಮಿಷ, ರೋಷ, ಹರುಷ: ಆರು ಶತೃಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ; ಏಳು ವ್ಯಸನಗಳಾದ ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ; ಆರು ಭ್ರಮೆಗಳಾದ ಜಾತಿಭ್ರಮೆ, ವರ್ಣಭ್ರಮೆ, ಆಶ್ರಮಭ್ರಮೆ, ಕುಲಭ್ರಮೆ, ಗೋತ್ರಭ್ರಮೆ, ನಾಮಭ್ರಮೆ ಎಂಬ ಭ್ರಮೆಗಳು; ಅಷ್ಟಮದಗಳಾದ ಕುಲ ಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜ್ಯಮದ, ತಪೋಮದ ಮುಂತಾದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ವಿಕಾರಗಳಿಗೊಳಗಾಗುವುದೇ ಸಂಸಾರ. ಸತ್ಕ್ರಿಯೆ, ಸದಾಚಾರಗಳನ್ನು ಮಾಡದೆ, ಸಜ್ಜನರ ಸಂಗದಲ್ಲಿರದೆ ಮರೆವಿನಿಂದ ಮಾಡಿದ ಹೀನಕೃತ್ಯಗಳು ನನ್ನ ಇಂದಿನ ಈ ಸ್ಥಿತಿಗೆ ಕಾರಣವಾಗಿವೆ. ಆದರೆ ಒಮ್ಮೆ ಸುಜ್ಞಾನೋದಯವಾದ ಬಳಿಕ ಮತ್ತೆ ಹಿನ್ನಿನಂತೆ ನಾನು ಭವಬಂಧನಕ್ಕೆ ಕಾರಣವಾಗುವ ವಿಚಾರ ಮತ್ತು ಕೃತ್ಯಗಳನ್ನು ಮಾಡುವುದಿಲ್ಲ ಎಂಬ ಶಪಥವನ್ನು ಈ ವಚನದಲ್ಲಿ ಕಾಣಬಹುದು. ಇಲ್ಲಿ ನಾವು ಸ್ಪಷ್ಟವಾಗಿ ಅರಿಯಬೇಕಿರುವುದು ಬಸವಣ್ಣನವರು ಮರೆವಿನಿಂದ ಭವಬಂಧನಕ್ಕೆ ಒಳಗಾಗಿದ್ದಾರೆ ಎಂದರಿಯದೆ ಮರೆವಿನಲ್ಲಿ ಮೈಮರೆತ ಜಗತ್ತಿನ ಜನಜಂಗುಳಿಗೆ ತಿಳಿಹೇಳುವ ಅವರ ಶೈಲಿ ಇದಾಗಿತ್ತು ಎಂದರಿಯಬೇಕು.
2.ನಾನೊಂದ ನೆನೆದಡೆ ತಾನೊಂದ ನೆನೆವುದು,
ನಾನಿತ್ತಲೆಳೆದಡೆ ತಾನತ್ತಲೆಳೆವುದು.
ತಾ ಬೇರೆ ಎನ್ನನಳಲಿಸಿ ಕಾಡಿತ್ತು,
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು.
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 14)
ಈ ವಚನವು ಮಾಯೆಯ ವಿಲಾಸವನ್ನು ವಿಡಂಬಿಸುತ್ತದೆ. ಮಾಯೆ ಎಂದರೆ ನಮ್ಮ ಮನಸ್ಸನ್ನಾವರಿಸಿರುವ ಮರೆವು, ಅಜ್ಞಾನ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಯಾವುದೇ ವಿಚಾರದ ಕುರಿತಾದಂತೆ ಎರಡು ನಿಲುವುಗಳ ನಡುವೆ ಹೊಯ್ದಾಟ ಇರುವುದನ್ನು ಗಮನಿಸಿರುತ್ತೇವೆ. ಇದಕ್ಕೆ ಮಾನಸಿಕ ದ್ವಂದ್ವ ಎನ್ನುವರು. ಇಲ್ಲಿ ಮನಸ್ಸು ಎರಡಾಗಿ ವಿಭಜನೆಗೊಳ್ಳುತ್ತದೆ. ನಾವು ಯಾವುದೋ ಒಂದು ಕ್ರಿಯೆಯನ್ನು ಮಾಡಲು ಹೊರಟಾಗ ಒಂದು ಮನ ಅದನ್ನು ಮಾಡುವಂತೆ ಪ್ರೇರೇಪಿಸಿದರೆ, ಮತ್ತೊಂದು ಮನ ಅದನ್ನು ಮಾಡದಂತೆ ಪ್ರೇರೇಪಿಸುತ್ತಿರುತ್ತದೆ. ಇವೆರಡರ ನಡುವಿನ ಹಗ್ಗಜಗ್ಗಾಟ ನಮ್ಮೆಲ್ಲರ ಜೀವನದುದ್ದಕ್ಕೂ ನಿತ್ಯ ನಡೆದೇ ಇರುತ್ತದೆ. ಆ ಕ್ರಿಯೆಯ ಕುರಿತು ಅಂತಿಮವಾಗಿ ನಮ್ಮ ಯಾವ ಮನ ಗೆಲ್ಲುವುದೋ ಅದು ನಮ್ಮ ವ್ಯಕ್ತಿತ್ವಕ್ಕೆ ಹಿಡಿವ ಕನ್ನಡಿಯಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮರೆವಿನಿಂದ ಆವೃತವಾದ ಅಜ್ಞಾನದ ಮನವೇ ಮೇಲುಗೈ ಸಾಧಿಸುವ ಮೂಲಕ ಅರಿವಿನ ಮುಖದ ಮನ ಮುದುಡಿ ಮೂಲೆ ಹಿಡಿಯುತ್ತದೆ. ಗುರು ಬಸವಣ್ಣನವರು ಇದನ್ನೇ ಈ ವಚನದಲ್ಲಿ ಮನಸ್ಸಿನ ಗಟ್ಟಿತನ, ದೃಢನಿರ್ಧಾರ ಯಾವ ರೀತಿಯಾಗಿರಬೇಕೆಂಬುದನ್ನು ತಿಳಿಸಿದ್ದಾರೆ.
ನಾನು ಎಂದರೆ ಸುಮನ (ಅರಿವು) ಮತ್ತು ತಾನು ಎಂದರೆ ಕುಮನ (ಮರೆವು). ಅರಿವುಳ್ಳ ಮನ ಸದ್ವಿಚಾರ ಮತ್ತು ಸದಾಚಾರಗಳನ್ನು ಮಾಡಿ ಲೋಕೋಪಯೋಗಿಯಾಗಿ, ಸಾವಧಾನಿಯಾಗಿ, ನಿರಪೇಕ್ಷನಾಗಿ ನಿಸ್ವಾರ್ಥ ಸರಳ ಜೀವನ ನಡೆಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ತಿಳಿಹೇಳುತ್ತಿರುತ್ತದೆ. ಆದರೆ ಅದೇ ಸಮಯದಲ್ಲಿ ನಮ್ಮೊಳಗೇ ಇರುವ ಕುಮನ ಎಚ್ಚರಗೊಂಡು ಸ್ವಾರ್ಥಿಯಾಗಿ, ಲೋಭಿಯಾಗುವಂತೆ ಪ್ರೋತ್ಸಾಹಿಸುತ್ತದೆ. ಅರಿವು ಮೇಲ್ಮುಖವಾಗಿ ನಮ್ಮನ್ನು ತೇಲಿಸಲು ವಿವೇಚಿಸುತ್ತಿದ್ದರೆ ಮರೆವು ಅಧೋಮುಖವಾಗಿ ಕೆಸರೊಳಗೆ ಸಿಲುಕಿಸಲು ಪ್ರಯತ್ನಿಸುತ್ತಿರುತ್ತದೆ. ಹೀಗೆ ಅಧೋಮುಖ ಪ್ರವೃತ್ತಿಯ ಹೀನ ಮನ, ಊರ್ಧ್ವಮುಖ ನಿವೃತ್ತಿಯ ಮನದ ಮೇಲೆ ಮುಸುಕುವುದರಿಂದ ಸುಜ್ಞಾನದ ಕಣ್ಣು ಮಂಜಾಗುತ್ತದೆ, ಸತ್ಪಥದ ಹಾದಿ ಮಸುಕಾಗುತ್ತದೆ. ಕುಮನದ ಅಡಿಯಾಳಾಗಿದ್ದರಿಂದ ಯಾವ ಉನ್ನತ ಸಾಧನೆಯೂ ಇಲ್ಲದೇ ಕೆಸರಲ್ಲಿ ಸಿಕ್ಕ ಬಡಪಶುವಿನಂತಾಗುತ್ತದೆ ನಮ್ಮ ಜೀವನ ಎಂದು ಗುರುಬಸವಣ್ಣನವರು ಮರೆವಿಗೊಳಗಾದ ಲೋಕದ ಮಾನವರನ್ನು ಎಚ್ಚರಿಸುತ್ತಿದ್ದಾರೆ.
3.ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ,
ನೀವೆ ಬಲ್ಲಿರಿ ಕೂಡಲಸಂಗಮದೇವಾ!
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 15)
ಈ ವಚನ ಕೂಡ ಮಾಯೆಯ ವಿರಾಟ್ ಸ್ವರೂಪವನ್ನು ಹೇಳುತ್ತಿದೆ. ಶೈವಸಿದ್ಧಾಂತದಲ್ಲಿ ಮಾಯೆಯನ್ನು ಪ್ರಮುಖವಾಗಿ ಎರಡು ರೀತಿ ಗುರ್ತಿಸಲಾಗಿದೆ, ಅವು- ಶುದ್ಧಮಾಯೆ ಮತ್ತು ಅಶುದ್ಧಮಾಯೆ. ಶುದ್ಧಮಾಯೆಯು ಶಿವತತ್ವದ ಒಡಗೂಡಿ ಜಗದ ಸೃಷ್ಟಿಗೆ ಕಾರಣೀಭೂತವಾದರೆ, ಜೀವಾತ್ಮನು ಪ್ರವೃತ್ತಿ ಮಾರ್ಗವಿಡಿದು ಲೋಕಸಂಸಾರಿಯಾಗಿ ಅಧೋಮುಖ ಪ್ರವೃತ್ತಿಯುಳ್ಳವನಾಗುವ ಶಕ್ತಿಯ ಒಂದು ಸ್ವರೂಪವೇ ಅಶುದ್ಧಮಾಯೆ. ಈ ವಚನದಲ್ಲಿ ವ್ಯಕ್ತವಾಗಿರುವ ತಾಯಿ, ಮಗಳು, ಸತಿ (ಸ್ತ್ರೀ) ಇವೆಲ್ಲವೂ ಸೃಷ್ಟಿಯ ಶುದ್ಧರೂಪವೇ ಆಗಿರುವವು. ಈ ಪಾತ್ರಗಳಿಲ್ಲದೆ ಜಗತ್ತು ಸೃಷ್ಟಿಯಾಗುವುದೂ ಇಲ್ಲ ಹಾಗೂ ಮುಂದುವರಿಯುವುದೂ ಇಲ್ಲ. ಶುದ್ಧ ಭಾವವುಳ್ಳಲ್ಲಿ ಇವೆಲ್ಲವೂ ಶುದ್ಧಮಾಯೆ ಎನಿಸಿಕೊಂಡರೆ ಇವುಗಳಿಗೆ ವ್ಯತಿರಿಕ್ತ ಭಾವವುಂಟಾದಲ್ಲಿ, ಪರಸ್ತ್ರೀ ಮೋಹಿಸಿದಲ್ಲಿ, ಆ ಭಾವವೇ ಅಶುದ್ಧಮಾಯೆಯಾಗುತ್ತದೆ. ಮಾನವನು ಶುದ್ಧಾಂತಃಕರಣನಾಗಿ ಅಶುದ್ಧ ಮಾಯೆಯಿಂದ ಮುಕ್ತನಾಗಬಹುದು. ಆದರೆ ಶುದ್ಧಮಾಯೆಯನ್ನು ತ್ಯಜಿಸುವುದು, ನಿರಾಕರಿಸುವುದು ನಿಸರ್ಗ ವಿರೋಧವಾಗುತ್ತದೆ, ಸಿದ್ಧರಾಮೇಶ್ವರರು ಹೆಣ್ಣನ್ನು ಮಾಯೆ ಎನ್ನದೆ ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ಎಂದಿದ್ದಾರೆ. ಅದಕ್ಕೇ ಗುರುಬಸವಣ್ಣನವರು ಹೆಣ್ಣನ್ನು ಹೊರಗಿಟ್ಟು ತಾನು ಏನೋ ಸಾಧಿಸುತ್ತೇನೆ ಎಂಬ ವಿಚಾರವೇ ಅವೈಜ್ಞಾನಿಕ, ಅಪ್ರಾಕೃತಿಕ ಎಂಬ ನೆಲೆಯಲ್ಲಿ ‘ಈ ಮಾಯೆಯ ಕಳೆವಡೆ ಎನ್ನಳವಲ್ಲ’ ಎಂದಿದ್ದಾರೆ.
4.ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ.
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ,
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ!
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 23)
ಮಾನವನಾಗಿ ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಉತ್ತಮ ವಿದ್ಯೆ, ಆತ್ಮಿಕ ಒಳನೋಟ, ಒಳ್ಳೆಯ ವಸ್ತು, ಉತ್ತಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಗೌರವ, ಉತ್ತಮ ಆರೋಗ್ಯ, ಉನ್ನತ ಪದವಿ ಇವುಗಳನ್ನು ಬಯಸುವುದು ತಪ್ಪಲ್ಲ. ಇಂಥಾ ಆಸೆಗಳಿಲ್ಲದಿದ್ದರೆ ಜೀವನವೂ ನೀರಸವೇ! ಆದರೆ ಅಂಥಾ ಬಯಕೆಗಳ ಈಡೇರಿಕೆಗಾಗಿ ನಾವು ಏನು ಮಾಡಬೇಕು ಎಂದು ಈ ವಚನದಲ್ಲಿ ಗುರು ಬಸವಣ್ಣನವರು ಅತ್ಯಂತ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಬಯಸಿದ ಫಲಗಳನ್ನು ಕೇವಲ ದೂರದಿಂದ ಆಸೆಗಣ್ಣಿನಿಂದ ನೋಡುತ್ತಾ ಕುಳಿತರೆ ಎಷ್ಟು ದಿನವಾದರೂ, ಎಷ್ಟು ವರ್ಷವಾದರೂ ಅದು ನಮಗೆ ಸಾಧ್ಯವಾಗುವುದಿಲ್ಲ, ಕೈವಶವಾಗುವುದಿಲ್ಲ. ಅವುಗಳನ್ನು ಕೈವಶ ಮಾಡಿಕೊಳ್ಳಲು ನೀತಿಯುಕ್ತ ಮಾರ್ಗ ಬಿಟ್ಟು ಅನೈತಿಕ ಮಾರ್ಗ ತುಳಿಯುವಂತಿಲ್ಲ. ಆದರೆ ತನು ಮನ ಮತ್ತು ಭಾವ ಈ ಮೂರನ್ನೂ ಒಟ್ಟುಗೂಡಿಸಿ ನೈತಿಕ ಮಾರ್ಗದಿಂದ ಬಯಸಿದ್ದನ್ನು ಸಾಧಿಸಬೇಕು ಎಂಬುದು ಶರಣವಾಣಿ. ಬೇಸಿಗೆಯ ಬಿರುಬಿಸಿಲಲ್ಲಿ ನಡೆದು ಹೋಗುತ್ತಿರುವ ದಾರಿಹೋಕನಿಗೆ ಬಾಯಾರಿಕೆಯಾಗಿದೆ, ಆತ ಅಲ್ಲಿಯೇ ರಸ್ತೆಯಲ್ಲಿ ಬೆಳೆದಿದ್ದ ತೆಂಗಿನ ಮರದ ಮೇಲೆ ನೋಡುತ್ತಾನೆ, ಎಳನೀರಿನ ಗೊಂಚಲು ಕಣ್ಣಿಗೆ ಬೀಳುತ್ತದೆ. ಆದರೆ ಎಷ್ಟುಹೊತ್ತು ನೋಡಿದರೂ ಎಳನೀರು ತಾನಾಗಿಯೇ ಅವನ ಬಳಿ ಬಂದು ಬೀಳುವುದಿಲ್ಲ. ಬದಲಿಗೆ ಆತನ ಕುತ್ತಿಗೆ ನೋಯಲಾರಂಭಿಸುತ್ತದೆ. ದಾಹ ಹಿಂಗಿಸಿಕೊಳ್ಳಲು ಆತ ಮರ ಹತ್ತಬೇಕು ಎಳನೀರನ್ನು ಕಿತ್ತು ಕುಡಿಯಬೇಕು, ಇದು ಸ್ವಾಭಾವಿಕ. “ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ” ಎಂದರೆ ದೇವರು ಕೊಟ್ಟ ಕಾಲಕ್ಕೆ ಎಳನೀರು ತಾನಾಗಿಯೇ ನನ್ನ ಬಳಿ ಬರುತ್ತದೆ ಎಂಬ ಭ್ರಮೆ ಬೇಡ. ‘ನೀನು’ ಅಂದರೆ ಬಯಸುವ ವ್ಯಕ್ತಿ ಸತ್ಯ, ಶುದ್ಧ, ಪ್ರಾಮಾಣಿಕ ಪ್ರಯತ್ನದಿಂದ ಅದನ್ನು ತನ್ನದಾಗಿಸಿಕೊಳ್ಳಬೇಕು. ಶರಣರು ವಿಧಿವಾದವನ್ನು ಎಂದೂ ಒಪ್ಪುವುದಿಲ್ಲ. ಅವರು ಪ್ರಯತ್ನವಾದಿಗಳು, ಸ್ವಪ್ರಯತ್ನದಿಂದ ಸುಫಲವನ್ನು ಪಡೆದನುಭವಿಸಬೇಕು ಎಂಬುದು ಶರಣರ ನಿಲುವು.
5.ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ!
ಸರಿಯೆ, ಅಪ್ರತಿಮಹಿಮಾ, ನಿಮಗಾನು ಪ್ರತಿಯೆ
ಕೂಡಲಸಂಗಮದೇವಾ ನೀವು ಮಾಡಲಾನಾದೆನು.
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 27)
ಬಹುಶಃ ಈ ವಚನ ಅಲ್ಲಮಪ್ರಭುದೇವರು ಅನುಭವಮಂಟಪದ ಪ್ರವೇಶದ್ವಾರದಲ್ಲಿ ಬಂದು ನಿಂತಿರಲು ಸ್ವತಃ ಬಸವಣ್ಣನವರು ಬಂದು ತಮ್ಮನ್ನು ಸ್ವಾಗತಿಸಲಿಲ್ಲ ಎಂದು ಕೋಪಗೊಂಡ ಸಂದರ್ಭದಲ್ಲಿ ಬಸವಣ್ಣನವರು ಅಲ್ಲಮರನ್ನು ಕುರಿತು ಹೇಳಿರಬಹುದಾದುದಿರಬೇಕು. ನೀವು ಮಹಾನುಭಾವಿಗಳು, ನಾನು ಅಲ್ಪ. ನಾನು ನಿಮಗೆ ಸರಿಸಮಾನನೇ? ಇಲ್ಲ, ನಾನು ಇಂಥಾ ಉನ್ನತ ಮಟ್ಟಕ್ಕೇರಲು ನೀವೇ ಸೂತ್ರಧಾರಿ, ನಿಮ್ಮ ಅನುಗ್ರಹದಿಂದಲೇ ನನಗೆಲ್ಲವೂ ಸಾಧ್ಯವಾಗಿದೆ ಎಂದು ಅತ್ಯಂತ ವಿನಮ್ರವಾಗಿ ಪ್ರಭುದೇವರನ್ನು ಸಮಾಧಾನಪಡಿಸಿ ಒಳಗೆ ಕರೆದೊಯ್ಯುತ್ತಾರೆ. ಬಸವಣ್ಣನವರು ಮಹಾಮಂತ್ರಿ, ದಂಡನಾಯಕ, ಅನುಭವಮಂಟಪದ ನಿರ್ಮಾತೃ, ಆಕಾಶದೆತ್ತರ ಅವರ ಕೀರ್ತಿಶಿಖರ. ಆದರೆ ಅವರ ವಿನಮ್ರತೆ ನೋಡಿದರೆ ಅತ್ಯಂತ ಆಳ. ಈ ವಿನಮ್ರತೆಯ ಆಳ ಮತ್ತು ಸಾಧನೆಯ ಎತ್ತರಗಳೇ ಗೆಲುವಿನ ಸೋಪಾನ. ಆದರೂ ಓದುಗ ವಚನಾಸಕ್ತರಾದ ನಾವು ಅರಿಯಬೇಕಾದ ವಿಚಾರವೆಂದರೆ, ಯಾರೂ ಮತ್ತೊಬ್ಬರ ಗುಣ ಅವಗುಣಗಳನ್ನು ಸಂಗ್ರಹಿಸುವ ಗೊಡವೆಗೆ ಹೋಗಬಾರದು. ಮೊದಲು ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ತನ್ನ ಗುಣ ಅವಗುಣಗಳ ಸಂಪಾದನೆ ಮತ್ತು ಶುದ್ಧೀಕರಣ ಮೊದಲು ನಡೆಯಬೇಕು. ತಾನು ಶುದ್ಧವಾದ ಬಳಿಕವಷ್ಟೇ ಅನ್ಯರನ್ನು ಸತ್ಪಥಕ್ಕೆ ಒಯ್ಯಲು ಚಿಂತಿಸಬೇಕು. ಪ್ರತಿಯೊಬ್ಬರ ಗುಣನಡತೆಗಳು ಸಹಜವಾಗಿ ಭಿನ್ನವಾಗಿಯೇ ಇರುತ್ತವೆ, ಇದು ಪ್ರಕೃತಿ ನಿಯಮ ಕೂಡಾ! ಹಾಗೆಂದ ಮಾತ್ರಕ್ಕೆ ವ್ಯಕ್ತಿಯೊಬ್ಬನಲ್ಲಿ ಕಂಡುಬಂದ ಅವಗುಣಗಳನ್ನು ತಿಳಿಸಿ ಹೇಳಬಾರದಂತಲ್ಲ ಮತ್ತು ಆತನ ಒಳ್ಳೆಯ ಗುಣಗಳನ್ನು ಪ್ರಶಂಸಿಸಬಾರದೆಂದಲ್ಲ! ಆ ಸಂಗ್ರಹಿಸುವಿಕೆಯಲ್ಲಿ ಸಹಾಯ ಮಾಡುವ, ತಿಳಿಸಿ ಹೇಳುವ, ತಿದ್ದುವ ಸದುದ್ದೇಶವಿದ್ದರೆ, ಸದ್ಗುಣಗಳನ್ನು ಮುಕ್ತವಾಗಿ ಪ್ರಶಂಸಿಸುವ ಗುಣವಿದ್ದರೆ ಅದು ಮಾನ್ಯ. ದುರುದ್ದೇಶದಿಂದ, ಪರನಿಂದೆಗಾಗಿ, ಅಪಹಾಸ್ಯಕ್ಕಾಗಿ ಕೂಡಿದ ಅನ್ಯರ ಗುಣಸಂಗ್ರಹ ಅಮಾನ್ಯ! ಅದು ಸಲ್ಲದು.
6.ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 32)
ಈ ವಚನವು ಮನಸ್ಸಿನ ಚಂಚಲತೆಯನ್ನು ನಿರ್ದೇಶಿಸುತ್ತಿದೆ. ಮರದ ಮೇಲಿರುವ ಕೋಡಗವು ಕೊಂಬೆಯಿಂದ ಕೊಂಬೆಗೆ ಜಿಗಿದಾಡುವಂತೆ ಮಾನವನ ಮನಸ್ಸು ಬಹಳ ಚಾಪಲ್ಯ ಮತ್ತು ಚಂಚಲತೆಯಿಂದ ಕೂಡಿದೆ. ಯಾವುದೇ ಒಂದು ಕಾರ್ಯ ಸಿದ್ಧಿಸಬೇಕಾದರೆ ಅದರಲ್ಲಿ ಗಾಢ ಒಳಗೊಳ್ಳುವಿಕೆ, ಸಾವಧಾನ, ಶ್ರದ್ಧೆ, ನಿಷ್ಠೆ, ಅಚಲವಾದ ನಂಬಿಕೆ ಮತ್ತು ನಿರಂತರ ಪ್ರಯತ್ನ ಇದ್ದೇ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಹಿಡಿದ ಯಾವ ಕಾರ್ಯವೂ ಕಡೆಮುಟ್ಟುವುದಿಲ್ಲ, ನಿಷ್ಫಲದಲ್ಲಿ ಕೊನೆಗೊಳ್ಳುವವು. ‘ನಿಮ್ಮ ಚರಣಕಮಲದಲ್ಲಿ’ ಎಂದರೆ ದೇವರ ಅಥವಾ ಕೂಡಲಸಂಗಮದೇವನ ಚರಣಕಮಲ ಎಂದರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಸತ್ಯ, ಸದಾಚಾರ ಮತ್ತು ಸತ್ಪಥದ ಪುಷ್ಪ ಎಂದರ್ಥ, ಅಂಥಾ ಪುಷ್ಪದ ಮಕರಂದವನ್ನು ಮೈಮರೆತು ಹೀರುವ ಭ್ರಮರದ ರೀತಿ ಹಿಡಿದ ಕಾರ್ಯದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಅಚಲವಾದ ನಂಬಿಕೆ ಎಂಬ ಮಧುವನ್ನು ಆಸ್ವಾದಿಸುವಂತಹ ಮನಸ್ಥಿತಿಯನ್ನು ಹೊಂದಿದ್ದೆಯಾದಲ್ಲಿ ಹಿಡಿದ ಕಾರ್ಯ ಗಟ್ಟಿ ಎಂದು ಬಸವಣ್ಣನವರು ನಮ್ಮ ಕಣ್ಣು ತೆರೆಸುತ್ತಿದ್ದಾರೆ.
7.ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ.
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 57)
ಯಾವುದೇ ಜೀವಿಯ ಹುಟ್ಟು ಮತ್ತು ಸಾವು ಆ ಜೀವಿಯ ಕೈಲಿಲ್ಲ. ಹುಟ್ಟು ಮತ್ತು ಸಾವು ಸೃಷ್ಟಿಯಲ್ಲಿ ಸಹಜ ಪ್ರಕ್ರಿಯೆಗಳು, ಅವು ಯಾರ ವಶವೂ ಅಲ್ಲ, ಅಧೀನವೂ ಅಲ್ಲ. ಎಲ್ಲೋ ಹುಟ್ಟುತ್ತೇವೆ, ಎಲ್ಲೋ ಬದುಕು ಕಟ್ಟಿಕೊಳ್ಳುತ್ತೇವೆ, ಕೊನೆಗೆ ಇನ್ನೆಲ್ಲೋ ಜೀವನದ ಅಂತ್ಯವಾಗುತ್ತದೆ. ಇವಾವುವೂ ಕೂಡಾ ಪೂರ್ವನಿರ್ಧಾರಿತವಲ್ಲ. ತಂದೆ ತಾಯಿಯರ ಸಹಜ ಕೂಟದಿಂದ ಒಂದು ಹೊಸಜೀವಿ ಜನಿಸುತ್ತದೆ, ಅದಕ್ಕೆ ಪೂರ್ವ ಕರ್ಮವಾಗಲೀ ಪುಣ್ಯವಾಗಲೀ ಕಾರಣವಲ್ಲ. ಆ ಜೀವಿಗೆ ಹಿಂದೆ ಏನೂ ಇಲ್ಲ ಸಾವಿನ ನಂತರ ಮತ್ತೇನೂ ಇಲ್ಲ. ಇದೆ ಎನ್ನುವುದೆಲ್ಲಾ ಭ್ರಮೆ. ಈ ಹುಟ್ಟು ಮತ್ತು ಸಾವುಗಳ ಪ್ರಯಾಣದ ಮಧ್ಯದ ಬದುಕಿನಲ್ಲಿ ಎಲ್ಲರೊಟ್ಟಿಗೆ ಸಮರಸದ ಬದುಕು ಕಟ್ಟಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳಬೇಕು. ಸಮಾಜದ ಹಲವಾರು ರೀತಿಯ ಜಾತಿ ವರ್ಗ ವರ್ಣ, ಲಿಂಗಬೇಧಗಳಂಥಾ ವಿಘಟನೆಗೆ ಕಾರಣವಾಗದೆ ಎಲ್ಲ ಮಾನವರೂ ನನ್ನಂತೆಯೇ ಇಲ್ಲಿಗೆ ಬಂದವರು, ಎಲ್ಲರ ಮೂಲ ಆ ಚೈತನ್ಯವೇ ಹೊರತು ಬೇರೇನೂ ಅಲ್ಲ. ಎಲ್ಲರ ಮೂಲ ಒಂದೇ ಆದ್ದರಿಂದ ಎಲ್ಲರೂ ನಿಸರ್ಗದ ಮಕ್ಕಳು, ನಾವೆಲ್ಲಾ ಸಹೋದರರು ಎಂಬ ಸಂಘಟನಾತ್ಮಕ ಭಾವ ನಮ್ಮದಾಗಬೇಕು. ಆಗ ಈ ಇಳೆಯ ಬದುಕು ಕಲ್ಪಿತ ಸ್ವರ್ಗವನ್ನೂ ಮೀರಿಸೀತು.
8.ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ,
ಶಿವ ಶಿವಾ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 58)
ಭ್ರಮಾಧೀನ ನರಮಾನವರಿಂದ ಕೂಡಿದ ಈ ಜಗತ್ತು ನರವಿಂಧ್ಯ. ಇಲ್ಲಿಯ ಪ್ರಮುಖ ಸರಕು ಮತ್ತು ವ್ಯವಹಾರ ಭ್ರಮೆಯೇ ಆಗಿದೆ. ಇಂಥಾ ನರವಿಂಧ್ಯದೊಳಗೆ ಬದುಕುತ್ತಿರುವ ಸಾಧಕ ಜೀವಿ ಭ್ರಮೆಯಿಂದ ಹೊರಬಂದು ಅರಿವಿನ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಭ್ರಮೆಯಿಂದ ಮುಕ್ತವಾಗಿ ಸ್ವಚ್ಚಂದವಾಗಿ, ಸ್ವತಂತ್ರವಿಚಾರಶೀಲನಾಗಿ ಬದುಕ ಬಯಸುವ ಮಾನವನೇ ಗಿಳಿ. ಅಂಥಾ ಸಾಧಕ ಜೀವಿ ಗಿಳಿಯನ್ನು ಭಕ್ಷಿಸಲು ರಣಹದ್ದಿನ ರೀತಿ ಭ್ರಮೆಯೆಂಬ ರಕ್ಕಸ ಸದಾ ಹೊಂಚುಹಾಕುತ್ತಿರುತ್ತದೆ. ತನ್ನ ಸುತ್ತಲಿನ ಘೋರ ಪರಿಸರದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧಕಜೀವಿ ಮಾನವ ಗಿಳಿಯಂತೆ ಪಂಜರದೊಳಗೆ ಆಶ್ರಯ ಪಡೆಯಬೇಕಾಗುತ್ತದೆ. ಅದು ಭಕ್ತಿಯ ಪಂಜರ. ಅಂದರೆ ಸತ್ಯ, ಸದಾಚಾರ, ನಿರ್ವಂಚಕತ್ವ, ನಿರ್ಲಂಪಟತ್ವ, ಸರಳತೆ, ಕ್ಷಮಾಗುಣ ಮುಂತಾದ ಸದ್ಗುಣಗಳೇ ನಮಗೆ ರಕ್ಷಣೆ ಕೊಡುವ ಪಂಜರ. ಸಾಧನಾಶೀಲ ಜೀವಿ ಸದಾಕಾಲ ಇಂಥಾ ಪಂಜರದೊಳಗೆ ಬದುಕುವುದನ್ನು ಕರಗತಮಾಡಿಕೊಳ್ಳಬೇಕು.
Comments 10
Ashakiran, Bengaluru
Oct 15, 2023Vachana chinthana is very nice
Praveen Holla
Oct 15, 2023ಭ್ರಮೆಯಳಿಯದೆ ಭಕ್ತಿ ಇಲ್ಲ! ವಚನಗಳ ಸಾರವನ್ನು ಅರಿಯುವುದು, ಅಳವಡಿಸಿಕೊಳ್ಳುವುದು ನಿಜವಾದ ಬಸವತತ್ವವನ್ನು ಪಾಲಿಸಿದಂತೆ.
Prasanna Hosur
Oct 15, 2023Beautiful Articles everyone should plz read🙏🏻🔯
Madapathi.V.V
Oct 18, 2023ಅದ್ಭುತವಾದ ವಚನಗಳಿಗೆ, ಸರಿಯಾದ ವಿವರಣೆ ನೀಡಿದ್ದೀರಿ ಅಣ್ಣಾ. ನಿಮ್ಮಿಂದ ಇನ್ನೂ ಇಂಥಹಾ ವಿವರಣೆಗಳ ನಿರೀಕ್ಷಣೆ ಕೈ
ಖಂಡಿತಾ ನಾವು ಮಾಡುತ್ತೇವೆ ಅಣ್ಣಾ.
ಶರಣು ಶರಣಾರ್ಥಿ.
Srinath Rayasam
Oct 23, 2023ಎಲ್ಲ ಶರಣರ ವಚನಗಳು ಹೀಗೇ ಎಂದು ಹೇಳಲಾಗದು . ಆದರೆ ‘ಬೆಡಗಿನ ವಚನಗಳಿಗೆ’ ಈ ಗುಣಸಾಮ್ಯ ಒಪ್ಪುತ್ತದೆ ಅನ್ನಬಹುದು .
Prashanth Y.B
Oct 30, 2023ನಾನು ಎಂದರೆ ಸುಮನ (ಅರಿವು) ಮತ್ತು ತಾನು ಎಂದರೆ ಕುಮನ (ಮರೆವು)- ಒಬ್ಬ ವ್ಯಕ್ತಿಯಲ್ಲಿ ಈ ರೀತಿಯ ಎರಡು ಮನಗಳಿರುತ್ತವೆಯೇ? ಅರಿವು-ಮರೆವು ಎರಡೂ ಒಟ್ಟಿಗೆ ಹೇಗೆ ಇರಲು ಸಾಧ್ಯ? ಮರೆವು ಸರಿದಾಗ ಅರಿವು ಮೂಡುತ್ತದೆನ್ನುವುದು ನನ್ನ ತಿಳುವಳಿಕೆ. ಈ ವಿವರಣೆ ಗೊಂದಲಕಾರಿಯಾಗಿದೆ.
ಜಗದೀಶ್ ಚೌಡಿ, ರಾಯಚೂರು
Oct 30, 2023ಶರಣರು ವಿಧಿವಾದವನ್ನು ಒಪ್ಪುವುದಿಲ್ಲ, ಅವರು ಶ್ರಮಜೀವಿಗಳು, ಪ್ರಯತ್ನವಾದಿಗಳು ಎನ್ನುವ ನಿಮ್ಮ ಮಾತು ದಿಟ. ಅಂಥ ಶರಣರನ್ನು ನಾವು ಇವತ್ತು ಮರೆತು ಅವರನ್ನೂ ಪೂಜೆ, ಪ್ರಾರ್ಥನೆ ಸ್ವೀಕರಿಸುವ ದೇವರ ಜಾಗದಲ್ಲಿಟ್ಟು ಮೋಸಹೋಗುತ್ತಿದ್ದೇವೆ, ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ.
Kamala Omakarappa
Nov 2, 2023ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ!
ಸರಿಯೆ, ಅಪ್ರತಿಮಹಿಮಾ, ನಿಮಗಾನು ಪ್ರತಿಯೆ?
ಅಲ್ಲಮಪ್ರಭುದೇವರನ್ನು ಕುರಿತು ಬಸವಣ್ಣನವರು ಹೇಳಿದ್ದರೆ, ಕೂಡಲಸಂಗಮ ಅಂದರೆ ಇಲ್ಲಿ ಏನೆಂದು ತಿಳಿದುಕೊಳ್ಳಬೇಕಾಗುತ್ತದೆ?
Akshay D.M
Nov 26, 2023ಶರಣರ ಪ್ರಕಾರ ಸಂಸಾರವೆಂದರೇನು?- ಎಂದು ಕೊಟ್ಟಿರುವ ಈ ವಿವರಣೆ ಸರಿಯಾಗಿದೆ. ಹೆಂಡತಿ, ಗಂಡ, ಮಕ್ಕಳುಳ್ಳ ಕುಟುಂಬ ವ್ಯವಸ್ಥೆಯನ್ನೇ ಸಂಸಾರವೆಂದು ತಲೆಯಲ್ಲಿ ತುಂಬಿದ ಧಾರ್ಮಿಕ ವ್ಯವಸ್ಥೆಯಲ್ಲಿ ಶರಣರು ನಿಜವಾದ ಸಂಸಾರದ ಜಂಜಾಟ ಯಾವುದೆಂದು ತೋರಿಸಿಕೊಟ್ಟಿದ್ದಾರೆ.
ಗುಣಶೀಲಾ ಮೈಲಾರಿ
Nov 26, 2023ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ- ಎನ್ನುವುದು ನಮ್ಮ ಹುಟ್ಟು, ಬದುಕು, ಸಾವು ಎಲ್ಲವೂ ಪೂಋವನಿರ್ಧಾರಿತವೆನ್ನುವುದನ್ನು ಸೂಚಿಸುತ್ತದೆ. ಆದರೆ ವಚನ ವಿವರಣೆಯಲ್ಲಿ ಇದಕ್ಕೆ ವ್ಯತಿರಿಕ್ತವಾದ ವಿವರಣೆ ನೀಡಲಾಗಿದೆ. ಹೇಗೆ?