
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ಆಧುನಿಕ ಕವಿಚರಿತ್ರೆಕಾರರು ಹರಿಹರ, ರಾಘವಾಂಕರು ಶೈವರೋ ವೀರಶೈವರೋ ಎಂದು ನಿರ್ಧರಿಸಲು ಹಿಂಜರಿಯುತ್ತಾರೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ರಾಘವಾಂಕ ಮಹಾದೇವ ಭಟ್ಟ ಮತ್ತು ರುದ್ರಾಣಿಯರ ಏಕೈಕ ಪುತ್ರ (ರುದ್ರಾಣಿ ಹರಿಹರನ ತಂಗಿ). ಮಹಾದೇವ ಹೆಸರಿನ ಜೊತೆಯಲ್ಲಿರುವ ‘ಭಟ್ಟ’ ಪ್ರತ್ಯಯವು ಮಹಾದೇವ ಭಟ್ಟನು ಬ್ರಾಹ್ಮಣನೆಂಬುದನ್ನು ಸಾರುತ್ತದೆ. ಹರಿಹರ ಶೈವ ಬ್ರಾಹ್ಮಣನಾದರೆ ನಟ್ಟುವ ಜಾತಿಯ ಅಲ್ಲಮ ಪ್ರಭು, ಬೇಡರ ಜಾತಿಯ ಕಣ್ಣಪ್ಪ ಮತ್ತು ತೆಲುಗು ಜೊಮ್ಮಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ ಮುಂತಾದ ಶೂದ್ರ ಮತ್ತು ಅಂತ್ಯಜರನ್ನು – ಅದರಲ್ಲೂ ವೇದಗಳನ್ನು ಅವರು ನಿಂದಿಸುವಾಗ – ಮನಸಾರೆ ಹೊಗಳಲು ಸಾಧ್ಯವೆ? ರಾಘವಾಂಕ ಕುಡಿಯರ ಸಿದ್ಧರಾಮನನ್ನು ಹೊಗಳಿ ‘ಸಿದ್ಧರಾಮ ಚಾರಿತ್ರ’ ಬರೆಯಲು ಸಾಧ್ಯವೆ? ಒಂದು ವೇಳೆ ಅವರು ವೀರಶೈವರಾದರೆ ಅವರ ಕಾವ್ಯಗಳಲ್ಲಿ ವಚನಕಾರರ ಸಿದ್ಧಾಂತಗಳಿಗೆ ಏಕೆ ಪ್ರಾಶಸ್ತ್ಯ ನೀಡಿಲ್ಲ? ಎಂಬ ಪ್ರಶ್ನೆಗಳು ಅವರನ್ನು ಸಹಜವಾಗೇ ಕಾಡುತ್ತವೆ. ಶಿವಭಕ್ತರಲ್ಲಿ ಜಾತಿತಾರತಮ್ಯ ಇರಲಿಲ್ಲ, ಅವರು ಮಹಾನ್ ಶಿವಭಕ್ತರು ಎಂಬ ಕಾರಣಕ್ಕಾಗಿ ಅವರನ್ನು ಹೊಗಳಿದರು ಎಂದು ಊಹಿಸೋಣ. ಈ ಊಹೆ ನಿಜವಾದರೆ, ಉಳಿದ ಶೈವ ಬ್ರಾಹ್ಮಣರೇಕೆ ಶೂದ್ರ ಮತ್ತು ಅಂತ್ಯಜರನ್ನು ಕಡೆಗಣಿಸುತ್ತಾರೆ? ಎಂಬ ಪ್ರಶ್ನೆಗಳು ಏಳುತ್ತವೆ. ಈ ಸಮಸ್ಯೆಯನ್ನು ಪರಿಹರಿಸಬೇಕಾದರೆ ನಾವು ಹರಿಹರ ಮತ್ತು ರಾಘವಾಂಕರಂಥ ವೀರಶೈವರನ್ನು ಶೈವರಿಂದಷ್ಟೇ ಅಲ್ಲ, ಬಸವಣ್ಣ, ಚೆನ್ನಬಸವಣ್ಣನವರಂತಹ ಲಿಂಗಾಯತರಿಂದಲೂ ಪ್ರತ್ಯೇಕಿಸಬೇಕಾಗುತ್ತದೆ. ಅವರ ವೀರಶೈವವು ಲಿಂಗಾಯತದಿಂದ ಭಿನ್ನ ಎಂದು ತೋರಿಸುವುದಕ್ಕೆ ರಾಘವಾಂಕ ತನ್ನ ‘ಸಿದ್ಧರಾಮ ಚಾರಿತ್ರ’ದಲ್ಲಿ ಚಿತ್ರಿಸಿರುವ ಸಿದ್ಧರಾಮನು ವಚನಕಾರ ಸಿದ್ಧರಾಮನಿಂದ ಹೇಗೆ ದೂರ ಹೋಗಿದ್ದಾನೆ ಎಂಬುದನ್ನು ಪರಿಶೀಲಿಸಿದರೆ ಸಾಕು.
ಆದುದರಿಂದ, ನಾವು ಸಿದ್ಧರಾಮನು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಶೈವಧರ್ಮವನ್ನು, ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಲಿಂಗಾಯತ ಧರ್ಮವನ್ನು ಮತ್ತು ಹರಿಹರ-ರಾಘವಾಂಕರು ವೇದಾಗಮ ಪ್ರಣೀತ ವೀರಶೈವಧರ್ಮವನ್ನು ಅನುಸರಿಸುತ್ತಿದ್ದರು ಎಂಬ ಊಹೆಯ ಆಧಾರದ ಮೇಲೆ ನಮ್ಮ ಪರಿಶೀಲನೆಯನ್ನು ಪ್ರಾರಂಭಿಸೋಣ.
1. ವಚನಕಾರರು ಶಿವನನ್ನು ಪೌರಾಣಿಕ ಶಿವನಂತೆ, ಅಂದರೆ ಕೈಲಾಸದಲ್ಲಿರುವ, ನಂದಿವಾಹನ, ಗೌರೀವಲ್ಲಭ, ಗಜಚರ್ಮಾಂಬರಧಾರಿ, ಢಮರುಧಾರಿ ಶಿವನಂತೆ ಚಿತ್ರಿಸಿಲ್ಲ. ಅವರು ಶಿವ ಎಂಬ ಪದವನ್ನು ಅಲ್ಲಲ್ಲಿ ಬಳಸಿದರೂ ಹೆಚ್ಚಾಗಿ ಬಳಸುವ ಪದ ‘ಲಿಂಗ’. ಅವರಿಗೆ ಲಿಂಗ ಎಂದರೆ ಚೈತನ್ಯಸ್ವರೂಪನಾದ, ಸೃಷ್ಟಿಸ್ಥಿತಿಲಯ ಮಾಡುವ, ಯಾವುದೇ ನಿರ್ದಿಷ್ಟ ಆಕಾರವಿಲ್ಲದ, ಲಿಂಗ. ಆದರೆ ರಾಘವಾಂಕನ ಸಿದ್ಧರಾಮನಿಗೆ ಶಿವ ಎಂದರೆ ಪಾರ್ವತಿ ಎಂಬ ಹೆಂಡತಿ, ಗಣಪತಿ, ಕುಮಾರ, ವೀರಭದ್ರ ಎಂಬ ಮಕ್ಕಳನ್ನುಳ್ಳವನು; ಗಜಚರ್ಮಾಂಬರಧಾರಿ, ನಂದಿವಾಹನ; ಯಾವಾಗಲೂ ಕೈಲಾಸದಲ್ಲಿರುವವನು; ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವನಿಗೆ ಶಿವ ಎಂದರೆ ತ್ರಿಮೂರ್ತಿಗಳಲ್ಲೊಬ್ಬನಾದ ಪೌರಾಣಿಕ ಶಿವ. ಶಿವನು ಸೃಷ್ಟಿ ಸ್ಥಿತಿ ಮುಂತಾದ ಕಾರ್ಯಗಳನ್ನು ಮಾಡುತ್ತಾನೆಂದು ಅವನು ನಂಬಿದ್ದ ಎಂಬುದಕ್ಕೆ ಸಿದ್ಧರಾಮ ಚಾರಿತ್ರದಲ್ಲಿ ಪುರಾವೆ ಸಿಕ್ಕುವುದಿಲ್ಲ. ಸಿದ್ಧರಾಮನು ಕಲ್ಯಾಣಕ್ಕೆ ಬಂದು ಬಸವಾದಿ ವಚನಕಾರರ ಪ್ರಭಾವಕ್ಕೆ ಒಳಗಾದಮೇಲೆ ಅವನೇ “ಶ್ರೀಶೈಲದ ಮಹಿಮೆಯದು ಶ್ರೀಶೈಲದಲ್ಲಿ, ನಿಮ್ಮ ಮಹಿಮೆ ಮೂಲೋಕವೆಲ್ಲ ಇಂಬುಗೊಂಡಿತ್ತು ನೋಡಾ” ಎಂದು ಹೇಳುವ ಮೂಲಕ ಶಿವನ ವ್ಯಾಪ್ತಿಯನ್ನು ವಿಸ್ತರಿಸಿದ್ದಾನೆ. ಅಲ್ಲದೆ, ಶಿವನನ್ನು “ಅಣುವಿನೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ ನೀವು; . . . ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ?” ಎಂದು ಕೇಳಿ, ಶಿವ ಸರ್ವವ್ಯಾಪಿ ಎಂಬುದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಾನೆ.
2. ರಾಘವಾಂಕನ ಸಿದ್ಧರಾಮ ನಿಷ್ಠಾವಂತ ಸ್ಥಾವರಲಿಂಗಾರಾಧಕ. ಅವನು ಇಷ್ಟಲಿಂಗವನ್ನು ಪಡೆದಿದ್ದನೊ ಇಲ್ಲವೊ ಎಂಬುದು ಸಿದ್ಧರಾಮ ಚಾರಿತ್ರದಲ್ಲಿ ಸ್ಪಷ್ಟವಾಗುವುದಿಲ್ಲ (ಪ್ರಾಯಶಃ ಇದೇ ಕಾರಣಕ್ಕೆ ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಸಿದ್ಧರಾಮನಿಗೆ ಲಿಂಗದೀಕ್ಷೆಯಾಗಿರಲಿಲ್ಲ ಎಂಬ ಆತುರದ ತೀರ್ಮಾನಕ್ಕೆ ಬಂದಿರಬಹುದು). ಆದರೆ ಬಸವಾದಿ ಶರಣರು ಸ್ಥಾವರ ಲಿಂಗಾರಾಧನೆಯ ವಿರೋಧಿಗಳು. ರಾಘವಾಂಕನ ಸಿದ್ಧರಾಮನು ಸ್ಥಾವರಲಿಂಗಾರಾಧನೆಯನ್ನು ಎಲ್ಲೂ ಖಂಡಿಸುವುದಿಲ್ಲವಷ್ಟೇ ಅಲ್ಲ, ಅದನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾನೆ. ಅವನ ಸಿದ್ಧರಾಮ ಶಿವಾಲಯವನ್ನು ಕಟ್ಟಿಸಿ, ಅರ್ಚಕರಿಂದ ಮಲ್ಲಿಕಾರ್ಜುನ ಲಿಂಗವನ್ನು ಸ್ಥಾಪಿಸಿ, ಅವರಿಂದ ಪೂಜೆ ಮಾಡಿಸುತ್ತಾನೆ. ಆದರೆ ಕಲ್ಯಾಣಕ್ಕೆ ಬಂದನಂತರ ಅವನು ಇಷ್ಟಲಿಂಗಧಾರಿಯಾಗುತ್ತಾನೆ. ಪರುಷ ಸೋಂಕಿದ ಕಬ್ಬಿಣ ಚಿನ್ನವಾಗುವಂತೆ, ಜ್ಯೋತಿ ಬಂದ ಮೇಲೆ ಕತ್ತಲೆ ಹೋಗುವಂತೆ, ತಾನು ಇಷ್ಟಲಿಂಗಧಾರಿಯಾದ ಮೇಲೆ ತನ್ನ ಭವ ಹಾಳಾಯಿತು- ಎಂದು ಹೇಳಿಕೊಂಡಿದ್ದಾನೆ. ಅದೇ ರೀತಿ, ‘ಅಂಗಲಿಂಗಸಂಬಂಧಿಯಾದ ಬಳಿಕ…’, ‘ಪ್ರಸಾದಕಾಯವಾದ ಬಳಿಕ…’, ‘ಲಿಂಗವಾದ ಬಳಿಕ ಪೂಜಿಸಲಿಲ್ಲ…’, ‘ಭಾವಲಿಂಗದಿಂದ ಇಷ್ಟಲಿಂಗವ ಪೂಜಿಸಹೋದಡೆ…’ ಎಂಬ ವಚನಸಾಲುಗಳು ಅವನು ಇಷ್ಟಲಿಂಗಧಾರಿಯಾದ ಎಂಬುದನ್ನು ಖಚಿತಪಡಿಸುತ್ತವೆ. ವೀರಶೈವರು (‘ಲಿಂಗಾಯತರು’ ಅಲ್ಲ) ಇಷ್ಟಲಿಂಗದ ಜೊತೆಗೆ ಸ್ಥಾವರಲಿಂಗವನ್ನೂ ಪೂಜಿಸುತ್ತಾರೆ. ಆದರೆ ಕಲ್ಯಾಣಕ್ಕೆ ಬಂದು ಲಿಂಗಾಯತನಾದ ಸಿದ್ಧರಾಮ ‘ನಾ ಧರಿಸಿಕೊಂಬುವೆ ಲಿಂಗವ, ನೀ ಕರೆಸಿಕೊಂಬುವನಾಗು ಮತ್ತೋರ್ವನ ನಿನ್ನ ಪೂಜೆಗೆ’ ಎಂದು ಮಲ್ಲಿಕಾರ್ಜುನ ಲಿಂಗಕ್ಕೆ ಹೇಳುವ ಮೂಲಕ ತಾನು ಇನ್ನು ಮೇಲೆ ಸ್ಥಾವರಲಿಂಗ ಪೂಜೆ ಮಾಡುವುದಿಲ್ಲ ಎಂದು ಘೋಷಿಸುತ್ತಾನೆ. ಅಲ್ಲದೆ ತನಗೆ ಲಿಂಗದೀಕ್ಷೆ ಕೊಟ್ಟುದಕ್ಕಾಗಿ ಅವನು ಚೆನ್ನಬಸವಣ್ಣನನ್ನು ಕೃತಜ್ಞತಾಪೂರ್ವಕವಾಗಿ ವಂದಿಸುತ್ತಾನೆ.
3. ಬಸವಾದಿ ಶರಣರು ಬಹುದೇವತಾರಾಧನೆಯ ವಿರೋಧಿಗಳು ಹಾಗೂ ಲಿಂಗೈಕಾರಾಧನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಆದರೆ ರಾಘವಾಂಕನ ಸಿದ್ಧರಾಮ ಒಂದೇ ದೇವಸ್ಥಾನದ ಪ್ರಾಕಾರದಲ್ಲಿ ಅನೇಕ ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದ. ಅವನ ಅಣ್ಣ, ಬೊಮ್ಮಣ್ಣ, ಕೇದಾರ ಮತ್ತಿತರ ಕ್ಷೇತ್ರಗಳನ್ನು ಸಂದರ್ಶಿಸಲು ಹೊರಟು, ಕಣ್ಣಿನ ಬೇನೆಯಿಂದಾಗಿ ಹಿಂದಿರುಗುತ್ತಾನೆ. ಆಗ ಸಿದ್ಧರಾಮ ತಾನು ಕಟ್ಟಿಸಿದ ದೇವಾಲಾಯದ ಆವರಣದಲ್ಲೆ ಎಲ್ಲ ದೇವತೆಗಳೂ ಇರುವಾಗ ಅವರನ್ನು ಸಂದರ್ಶಿಸಲು ಬೇರೆ ಊರಿಗೆ ಹೋಗುವ ಅಗತ್ಯವಿಲ್ಲ ಎಂದು ಬೊಮ್ಮಣ್ಣನ ತೀರ್ಥಯಾತ್ರೆಯನ್ನು ನಿಲ್ಲಿಸುತ್ತಾನೆ. ಅಂದರೆ, ವಿವಿಧ ದೇವತೆಗಳನ್ನು ಸಂದರ್ಶಿಸಲು ಬೇರೆ ಬೇರೆ ಕಡೆ ಹೋಗುವುದು ಅನಾವಶ್ಯಕ ಎಂಬುದು ಅವನ ಇಂಗಿತವೇ ಹೊರತು, ವಿವಿಧ ದೇವತೆಗಳ ಪೂಜೆ ಅನಾವಶ್ಯಕ ಅಥವಾ ಅವೈಚಾರಿಕ ಎಂಬುದಲ್ಲ. ಅಲ್ಲದೆ, ಅವನಿಗೆ ಗಣಪತಿ, ವೀರಭದ್ರ ಮುಂತಾದವರಲ್ಲಿ ನಂಬಿಕೆಯಿತ್ತು. ಆದರೆ ಬಸವಾದಿ ಶರಣರ ಸಂಪರ್ಕಕ್ಕೆ ಬಂದಮೇಲೆ ಅವನಿಗೆ ಲಿಂಗದ ಹೊರತು ಮತ್ತಾರೂ ದೈವವಲ್ಲ. ಉಳಿದ ಯಾವ ದೇವದೇವತೆಗಳೂ ಪೂಜಾರ್ಹರಲ್ಲ ಎಂದು ತೀರ್ಮಾನಿಸುತ್ತಾನೆ. ಉದಾಹರಣೆಗೆ ಈ ಕೆಳಗಿನ ಅವನ ವಚನವನ್ನು ನೋಡಿ-
ಇಂದ್ರ ನೋಡುವಡೆ ಭಗದೇಹಿ;
ಚಂದ್ರ ನೋಡುವಡೆ ಗುರುಪತ್ನೀಗಮನಿ;
ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ;
ಬ್ರಹ್ಮ ನೋಡುವಡೆ ಸ್ವಪುತ್ರೀಪತಿ;
ಮುನಿಗಣ ನೋಡುವಡೆ ಕುಲಹೀನರು;
ಗಣಪತಿ… ವೀರಭದ್ರ… ಷಣ್ಮುಖ…
ಇವರೆಲ್ಲರೂ ಎಮ್ಮ ಪೂಜೆಗೆ ಬಾರರು…
4. ಬಸವಾದಿ ಶರಣರು ಗುಡಿ ಮತ್ತು ಅರ್ಚಕ ಪದ್ಧತಿಯ ವಿರೋಧಿಗಳು. ಅವರು ತಮ್ಮ ದೇಹವೇ ದೇಗುಲ, ಕಾಯವೇ ಕೈಲಾಸ ಎಂದರಲ್ಲದೆ, ನಮ್ಮಲ್ಲಿಯೇ ಲಿಂಗವಿರುವಾಗ ಅದನ್ನು ಕಡೆಗಣಿಸಿ ಗುಡಿಯಲ್ಲಿರುವ ಸ್ಥಾವರಲಿಂಗಕ್ಕೆ ಭಕ್ತಿ ತೋರಿಸುವುದು, ತಾವು ಪೂಜೆ ಮಾಡದೆ ಅರ್ಚಕರಿಂದ ಪೂಜೆ ಮಾಡಿಸುವುದು, ತೀರ್ಥಯಾತ್ರೆ ಹೋಗುವುದು ಇವೆಲ್ಲವೂ ನಿಷ್ಪ್ರಯೋಜಕ ಎಂಬ ಕಾರಣಕ್ಕೆ ಅವುಗಳನ್ನು ಖಂಡಿಸಿದರು. ಆದರೆ ರಾಘವಾಂಕನ ಸಿದ್ಧರಾಮ ಕೆರೆ ಕಟ್ಟೆಗಳನ್ನು ಕಟ್ಟಿಸಿದಂತೆ ದೇವಾಲಯಗಳನ್ನೂ ಕಟ್ಟಿಸಿದ. ಮಲ್ಲಿಕಾರ್ಜುನಲಿಂಗವನ್ನು ಪೂಜಿಸಲು ಅರ್ಚಕರನ್ನು ನೇಮಿಸಿದ. ಪೂಜೆಗಾಗಿ ಹೂದೋಟಗಳನ್ನು ನಿರ್ಮಿಸಿದ. ಆದರೆ ಕಲ್ಯಾಣಕ್ಕೆ ಬಂದು ಬಸವಾದಿ ಶರಣರ ಪ್ರಭಾವಕ್ಕೊಳಗಾದ ಮೇಲೆ ಇವೆಲ್ಲ ವ್ಯರ್ಥ ಪ್ರಯತ್ನಗಳೆನಿಸಿದವು. ಆಗ ಅವನು ‘ಕೆರೆಯ ಕಟ್ಟಿಸುವವನೇ ಕರ್ಮಿ… ಶಿವಾಲಯವ ಕಟ್ಟಿಸುವವನೇ ದ್ರೋಹಿ…’ ಎಂದು ತನ್ನ ಹಳೆಯ ಪದ್ಧತಿಯನ್ನು ಹಳಿಯುತ್ತಾನೆ.
5. ಬಸವಾದಿ ಶರಣರು ಯಜ್ಞಹೋಮಾದಿಗಳ ವಿರೋಧಿಗಳು – ಅವು ಬಹುದೇವಾತಾರಾಧನೆಯನ್ನು ಒಳಗೊಳ್ಳುತ್ತವೆ ಎಂಬ ಕಾರಣಕ್ಕೂ ಹೌದು, ಅರ್ಪಣಾವಿಧಾನ (ಬೆಂಕಿಯಲ್ಲಿ ತುಪ್ಪ ಸುರಿಯುವುದು, ಇತ್ಯಾದಿ) ಅವೈಚಾರಿಕ ಅಥವಾ ನಿಷ್ಪ್ರಯೋಜಕ ಎಂಬ ಕಾರಣಕ್ಕಾಗಿಯೂ ಹೌದು. ಇದಕ್ಕೆ ವಿರುದ್ಧವಾಗಿ ರಾಘವಾಂಕನ ಸಿದ್ಧರಾಮ ನಿತ್ಯವೂ ಮಲ್ಲಿಕಾರ್ಜುನಲಿಂಗಕ್ಕೆ ಯಜ್ಞಹೋಮಾದಿಗಳನ್ನು ಮಾಡಿಸುತ್ತಿದ್ದ. ಒಂದು ಸಾರಿ ಅವನು ಸಾವಿರ ಕೊಡಗಳ ತುಪ್ಪದಿಂದ ಲಿಂಗಕ್ಕೆ ಅಭಿಷೇಕ ಮಾಡಿಸಿದುದಕ್ಕೆ ರಾಘವಾಂಕ ಸಿದ್ಧರಾಮನನ್ನು ಹೊಗಳಿದ್ದಾನೆ.
6. ಬಸವಣ್ಣ, ಚೆನ್ನಬಸವಣ್ಣ ಮೊದಲಿಗೆ ಕೈಲಾಸವನ್ನು ನಂಬಿದ್ದಿರಬಹುದು. ಆದರೆ ಅನಂತರ ಆ ನಂಬಿಕೆಯನ್ನು ಕೈಬಿಟ್ಟಂತೆ ಕಾಣುತ್ತದೆ. ಕೈಲಾಸ ಎಂಬುದು ಒಂದು ಹಾಳು ಬೆಟ್ಟವೇ ಹೊರತು ಅದೇ ಒಂದು ಪ್ರತ್ಯೇಕ ಲೋಕವಲ್ಲ, ಅಲ್ಲಿರುವ ಶಿವ ವಿವೇಚನೆಯಿಲ್ಲದೆ ಭಕ್ತರಿಗೆ ವರ ಕೊಟ್ಟು ತನಗೂ ಲೋಕಕ್ಕೂ ಹಾನಿಯನ್ನು ತಂದುಕೊಳ್ಳುವ ದಡ್ದ ಎಂದೂ ಹೀಯಾಳಿಸುತ್ತಾರೆ. ಆದರೆ ರಾಘವಾಂಕನ ಸಿದ್ಧರಾಮ ನಿತ್ಯವೂ ಕೈಲಾಸಕ್ಕೆ ಹೋಗಿಬರುತ್ತಾನೆ. ಸಿದ್ಧರಾಮನು ಮಾನವ ರೂಪದ ಶಿವನನ್ನು ಆರಾಧಿಸುವುದರಲ್ಲಿ ರಾಘವಾಂಕನಿಗೆ ಯಾವ ದೋಷವೂ ಕಾಣುವುದಿಲ್ಲ.
ರಾಘವಾಂಕನ ಸಿದ್ಧರಾಮನಿಗೆ ಸತ್ತನಂತರ ಕೈಲಾಸದಲ್ಲಿ ಗಣಪದವಿ ಪಡೆಯುವುದು ಜೀವನದ ಉದ್ದೇಶವಾಗಿತ್ತು. ಆದರೆ, ಬಸವಾದಿ ಶರಣರಿಗೆ ಜೀವವಿದ್ದಾಗಲೆ ಲಿಂಗದೊಂದಿಗೆ ಸಾಮರಸ್ಯ ಸಾಧಿಸುವುದು ಜೀವನದ ಉದ್ದೇಶವಾಗಿತ್ತು. ಅದನ್ನು ಸಾಧಿಸಿದವನು ಲಿಂಗೈಕ್ಯ – ತನಗೂ ಲಿಂಗಕ್ಕೂ ಭೇದವಿಲ್ಲ ಎಂಬುದನ್ನು ಅರಿತವನು. ಅವನು ಜೀವನ್ಮುಕ್ತ. ಅವರಿಂದ ಜೀವನ್ಮುಕ್ತಿ ಸಿದ್ಧಾಂತವನ್ನೂ ಷಟ್ಸ್ಥಲಯೋಗವನ್ನೂ ಕಲಿತ ಸಿದ್ಧರಾಮನು ವಿದೇಹಮುಕ್ತಿ ಸಿದ್ಧಾಂತವನ್ನು ಕೈಬಿಟ್ಟು, ಒಣಗಿದ ಮರ ಭೂಮಿಯಲ್ಲೆ ಲೀನವಾಗುವಂತೆ, ಅರಿವು ಪಡೆದ ಯೋಗಿಯ ‘ಲಯವಿಲ್ಲೆ, ಸ್ವರ್ಗಕ್ಕೆ ಹೋದಹೆನೆಂಬುದು ಗೊಡ್ಡು ಹುಸಿ’ ಎನ್ನುತ್ತಾನೆ.
7. ಕಲ್ಯಾಣಕ್ಕೆ ಬಂದ ಮೇಲೆ ಸಿದ್ಧರಾಮನಲ್ಲಿ ಆದ ಬಹುದೊಡ್ಡ ಪರಿಣಾಮವೆಂದರೆ ಅವನ ವೇದವಿರೋಧ. ಸೊಲ್ಲಾಪುರದ (ರಾಘವಾಂಕನ) ಸಿದ್ಧರಾಮ ದೈವ, ಮುಕ್ತಿ, ಸಾಧನೆಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ವೇದಾಗಮಗಳಿಗೆ ಅನುಸಾರವಾಗಿ ರೂಪಿಸಿಕೊಂಡಿದ್ದ. ಅವನು ವೇದಾಗಮಗಳಿಗೆ ಪ್ರಶ್ನಾತೀತ ಅಧಿಕಾರ ಕೊಡುತ್ತಿದ್ದ. ಆದರೆ ವೇದ, ಆಗಮ, ಪುರಾಣ, ಇತ್ಯಾದಿಗಳ ಬಗ್ಗೆ ವಚನಕಾರ ಸಿದ್ಧರಾಮನಿಗಿದ್ದ ತುಚ್ಛ ಭಾವನೆ ಮತ್ತು ಆದ್ಯರ ವಚನಗಳ ಬಗ್ಗೆ ಇದ್ದ ಅತೀವ ಗೌರವ ಈ ಕೆಳಗಿನ ವಚನದಲ್ಲಿ ವ್ಯಕ್ತವಾಗುತ್ತದೆ-
ನಮ್ಮ ನಡಾವಳಿಗೆ ನಮ್ಮ ಪುರಾತನರ ನುಡಿಯೆ ಇಷ್ಟವಯ್ಯಾ.
ಸ್ಮೃತಿಗಳು ಸಮುದ್ರದ ಪಾಲಾಗಲಿ.
ಶ್ರುತಿಗಳು ವೈಕುಂಠವ ಸೇರಲಿ.
ಪುರಾಣಗಳು ಅಗ್ನಿಯ ಸೇರಲಿ.
ಆಗಮಗಳು ವಾಯುವ ಹೊಂದಲಿ.
ಎಮ್ಮ ನುಡಿ ಕಪಿಲಸಿದ್ಧ ಮಲ್ಲಿಕಾರ್ಜುನ ಮಹಾಲಿಂಗದ
ಹೃದಯದೊಳು ಗ್ರಂಥಿಯಾಗಿರಲಿ.
ಕಲ್ಯಾಣೋತ್ತರ ಸಿದ್ಧರಾಮನಿಗೂ ರಾಘವಾಂಕನ ಸಿದ್ಧರಾಮನಿಗೂ ಈ ಮೇಲಿನ ಅಂಶಗಳಲ್ಲಿ ಸ್ಪಷ್ಟ ವ್ಯತ್ಯಾಸವಿರುವುದನ್ನು ಯಾರೂ ಅಲ್ಲಗಳೆಯಲಾರರು. ಇದಕ್ಕೆ ಕೆಲವರು, ಇದೇನೂ ಆಕ್ಷೇಪಣೀಯ ವಿಚಾರವಲ್ಲ, ಏಕೆಂದರೆ, ರಾಘವಾಂಕ ಚಿತ್ರಿಸಿರುವುದು ಕಲ್ಯಾಣಪೂರ್ವದ ಸಿದ್ಧರಾಮನನ್ನು ಎಂದು ವಾದಿಸಬಹುದು. ಈ ವಾದ ಸತ್ಯವಾದರೆ ಕಲ್ಯಾಣಕ್ಕೆ ಹೋಗುವ ಮೊದಲು ಸಿದ್ಧರಾಮ ವೇದಾಗಮಪ್ರಣೀತ ಶೈವ ಧರ್ಮವನ್ನು ಪಾಲಿಸುತ್ತಿದ್ದ ಎಂಬುದೂ ಸತ್ಯವೇ. ಆದರೆ ಈ ವಾದ ನಿರಾಧಾರವಾದುದು. ಹಾಗೆಂದು ತೋರಿಸಲು ನಾವು ರಾಘವಾಂಕ ಸಿದ್ಧರಾಮಚಾರಿತ್ರದ ಒಂಬತ್ತನೆಯ ಸಂಧಿಯಲ್ಲಿ ವಿವರಿಸಿರುವ ಒಂದು ಘಟನೆಯ ಕಡೆ ಗಮನ ಹರಿಸಬೇಕಾಗುತ್ತದೆ. ಬಸವಾದಿ ಶರಣರು ಕಲ್ಯಾಣವನ್ನು ಬಿಟ್ಟುಹೋದಂತೆ ಸಿದ್ಧರಾಮನೂ ಕಲ್ಯಾಣವನ್ನು ತ್ಯಜಿಸಿ, ಸೊಲ್ಲಾಪುರಕ್ಕೆ ಹಿಂದಿರುಗುತ್ತಾನೆ. ಅವನೊಬ್ಬ ಶ್ರೇಷ್ಠ ಯೋಗಿ ಎಂಬುದರಲ್ಲಿ ಅನುಮಾನವಿಲ್ಲದ ಬಿಜ್ಜಳನ ತಮ್ಮ ಕರ್ಣದೇವ ಪಟ್ಟಕ್ಕೆ ಬರುವ ಸಂದರ್ಭದಲ್ಲಿ ತನ್ನನ್ನು ಆಶೀರ್ವದಿಸಲು ಸಿದ್ಧರಾಮನನ್ನು ಕರೆಯಕಳುಹಿಸುತ್ತಾನೆ. ಆದುದರಿಂದ, ಸೊಲ್ಲಾಪುರಕ್ಕೆ ಹಿಂದಿರುಗಿದ ಸಿದ್ಧರಾಮ ಮೊದಲಿನ ಸಿದ್ಧರಾಮನಾಗಿರದೆ ಶರಣರ ಪ್ರಭಾವಕ್ಕೊಳಗಾಗಿ ಪರಿವರ್ತಿತನಾಗಿದ್ದ ಸಿದ್ಧರಾಮನಾಗಿದ್ದ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ರಾಘವಾಂಕ ಸೊಲ್ಲಾಪುರಕ್ಕೆ ಹಿಂದಿರುಗಿದ ಸಿದ್ಧರಾಮ ಕಲ್ಯಾಣದಲ್ಲಿದ್ದುದನ್ನೂ ಚಿತ್ರಿಸುತ್ತಾನೆ, ಸಾವಿರ ಕೊಡ ತುಪ್ಪದ ಅಭಿಷೇಕ ಮಾಡಿದುದನ್ನೂ ಚಿತ್ರಿಸುತ್ತಾನೆ. ಆದರೆ ಅವನ ಮೇಲೆ ಆದ ಶರಣರ ಪ್ರಭಾವವನ್ನು ಚಿತ್ರಿಸುವುದಿಲ್ಲ.
ರಾಘವಾಂಕ ಹೀಗೇಕೆ ಮಾಡಿದ? ಕಲ್ಯಾಣದಲ್ಲಿದ್ದಾಗ ಸಿದ್ಧರಾಮ ಶರಣರ ದಾರ್ಶನಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಒಳಗಾಗಲಿಲ್ಲ ಎಂಬುದು ರಾಘವಾಂಕನ ನಿಲುವೆ?
ಇದಕ್ಕೆ ಉತ್ತರ ಹೇಳಬೇಕಾದರೆ, ನಾನು ಈ ಮೊದಲೇ ಸೂಚಿಸಿದಂತೆ, ಕಲ್ಯಾಣೋತ್ತರ ಸಿದ್ಧರಾಮನನ್ನು ಅವನ ಮೊದಲಿನ ಶೈವ ಧರ್ಮದಿಂದಲೂ ಹರಿಹರ-ರಾಘವಾಂಕರ ವೀರಶೈವ ಧರ್ಮದಿಂದಲೂ ಪ್ರತ್ಯೇಕಿಸಬೇಕಾಗುತ್ತದೆ. ಮಹಾದೇವ ಭಟ್ಟನ ಮಗನಾದ ರಾಘವಾಂಕ ಬ್ರಾಹ್ಮಣ. ಆದರೆ ಇಂದು ಕೆಲವರು ತಮ್ಮನ್ನು ಕರೆದುಕೊಳ್ಳುವಂತೆ, ಲಿಂಗೀ ಬ್ರಾಹ್ಮಣ (ಅಂದು ಲಿಂಗೀ ಬ್ರಾಹ್ಮಣ, ದ್ವಿಜಲಿಂಗಿ, ವೀರಶೈವ, ಲಿಂಗಾಯತ ಮುಂತಾದ ಹೆಸರುಗಳಿರಲಿಲ್ಲ). ಪ್ರಾಯಶಃ ಅವನು ಲಿಂಗಧಾರಿಯಾದ ಪಾಶುಪತ ಅಥವಾ ಕಾಳಾಮುಖ ಪಂಥದವನಿರಬೇಕು. ಕ್ರಿ.ಶ. 979 ರ ಹೂಲಿ ಶಾಸನದಲ್ಲಿ ದತ್ತಿ ಪಡೆದ ಕಾಳಾಮುಖ ಗುರುವನ್ನು ‘ಅಷ್ಟಾವರಣ ಸಂಪನ್ನರುಂ ರುಗ್ಯಜುರ್ ಸಾಮ…’ ಎಂದು ವರ್ಣಿಸಲಾಗಿದೆ. ರಾಘವಾಂಕ ಆ ಪಂಥಕ್ಕೆ ಸೇರಿದವನಾದುದರಿಂದ ಕಲ್ಯಾಣದಲ್ಲಿ ಸಿದ್ಧರಾಮನ ಮೇಲೆ ಆದ ಬಸವಾದಿ ಶರಣರ ಅವೈದಿಕ ಪ್ರಭಾವವು ಅವನಿಗೆ ಪಥ್ಯವಾಗಲಿಲ್ಲವೆಂದು ಕಾಣುತ್ತದೆ. ಅವನು ಸಿದ್ಧರಾಮನಲ್ಲಿ ಪಾಶುಪತ-ಕಾಳಾಮುಖ ಸನ್ಯಾಸಿಯನ್ನು ನೋಡಲಿಚ್ಛಿಸಿದನೇ ಹೊರತು, ಕ್ರಾಂತಿಕಾರಿ ಬಸವಾದಿ ಶರಣರ ಪೈಕಿ ಒಬ್ಬನನ್ನಲ್ಲ. ಹೀಗಾಗಿ, ಕಲ್ಯಾಣಕ್ಕೆ ಬಂದ ಸಿದ್ಧರಾಮನಲ್ಲಿ ವೇದಾಗಮ ವಿರೋಧ, ಲಿಂಗೈಕಾರಾಧನೆ, ಜೀವನ್ಮುಕ್ತಿ ಸಿದ್ಧಾಂತ, ಮುಂತಾದವುಗಳನ್ನು ಕಾಣುವ ಬದಲು, ರಾಘವಾಂಕ ಅವನ ಮೇಲೆ ಸ್ಥಾವರಲಿಂಗಪೂಜೆ, ಯಜ್ಞಯಾಗ, ಬಹುದೇವತಾರಾಧನೆ, ಮುಂತಾದ ವೈದಿಕ-ಆಗಮಿಕ ಪದ್ಧತಿಗಳನ್ನು ಯಥೇಚ್ಛವಾಗಿ ಆರೋಪಿಸಿದ.
ಹೀಗೆ, ರಾಘವಾಂಕ ಸಿದ್ಧರಾಮನನ್ನು ಲಿಂಗಾಯತನನ್ನಾಗಿ ಪರಿವರ್ತನೆಯಾಗಲು ಬಿಡದೆ, ಕೊನೆಯವರೆಗೂ ಶೈವನನ್ನಾಗಿಯೇ ಉಳಿಸಿಕೊಂಡಿದ್ದಾನೆ. ಇಂದಿನ ಅನೇಕ ವೀರಶೈವರು (‘ಲಿಂಗಾಯತರು’ ಅಲ್ಲ) ಜಾತಿ ತಾರತಮ್ಯವನ್ನು ಬಹಳ ಜತನದಿಂದ ಕಾಪಾಡಿಕೊಳ್ಳಲು ಬೋಧಿಸುವಂತೆ ಮತ್ತು ಕುರುಬರು, ನೇಕಾರರು, ಕ್ಷೌರಿಕರು ಮುಂತಾದ ಶೂದ್ರರಿಗೆ (ಮತ್ತು ಅಂತ್ಯಜರಿಗೆ) ಲಿಂಗದೀಕ್ಷೆ ಕೊಡಿಸಿದ್ದಕ್ಕೆ ಬಸವೇಶ್ವರರನ್ನು ನಿಂದಿಸುವಂತೆ ರಾಘವಾಂಕನೂ ಕಟ್ಟಾ (ಇಂದಿನ ಭಾಷೆಯಲ್ಲಿ) ವೀರಶೈವನೇ ಹೊರತು ಲಿಂಗಾಯತನಲ್ಲ.
ರಾಘವಾಂಕ ಸಿದ್ಧರಾಮನ ವಚನಗಳನ್ನು ಓದಲಿಲ್ಲ, ಅದಕ್ಕೇ ಅವನಿಗೆ ವಚನಕಾರ ಸಿದ್ಧರಾಮ ಕಾಣಲಿಲ್ಲ ಎಂದು ಕೆಲವರು ವಾದಿಸಬಹುದು. ಈ ವಾದಕ್ಕೆ ಯಾವುದೇ ಆಧಾರವಿಲ್ಲ. ಸಿದ್ಧರಾಮ ಆಗಿನ ಕಾಲದಲ್ಲಿ ಒಬ್ಬ ಗಣ್ಯ ಲಿಂಗಾಯತ ವಚನಕಾರ ಎಂದು ಪ್ರಸಿದ್ಧನಾಗಿದ್ದನೇ ಹೊರತು, ಒಬ್ಬ ಗಣ್ಯ ಶಿವಭಕ್ತ ಎಂದಲ್ಲ; ಮತ್ತು ಇದು ರಾಘವಾಂಕನಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಸಿದ್ಧರಾಮ ಅಷ್ಟೇನೂ ಪ್ರಸಿದ್ಧನಲ್ಲದ ವ್ಯಕ್ತಿಯಲ್ಲದಿದ್ದರೆ, ಅವನು ರಾಘವಾಂಕನ ಕಾವ್ಯದಲ್ಲಿ ಕಥಾನಾಯಕನ ಸ್ಥಾನ ಪಡೆಯುತ್ತಿರಲಿಲ್ಲ. ಅಲ್ಲದೆ, ರಾಘವಾಂಕ ತನ್ನ ಸಿದ್ಧರಾಮಚಾರಿತ್ರದಲ್ಲಿ ಅನೇಕ ಸಾರಿ ‘ಸಿದ್ಧರಾಮ ವಚನವೊಂದನ್ನು ಹಾಡಿದನು’ ಎಂಬ ಮಾತು ಬರುತ್ತದೆ. ಅಂದರೆ ಸಿದ್ಧರಾಮ ವಚನ ಬರೆದಿದ್ದುದು ರಾಘವಾಂಕನಿಗೆ ಗೊತ್ತಿತ್ತು. ಒಂದು ವೇಳೆ ಸಿದ್ಧರಾಮ ವಚನಕಾರನೆಂಬುದು ರಾಘವಾಂಕನಿಗೆ ಗೊತ್ತಿರಲಿಲ್ಲ ಅಥವಾ ಸಿದ್ಧರಾಮನ ವಚನಗಳು ರಾಘವಾಂಕನಿಗೆ ಸಿಕ್ಕಲಿಲ್ಲ ಎಂದೇ ಊಹಿಸೋಣ. ಹಾಗಿದ್ದರೆ ಸಿದ್ಧರಾಮನ ಸಿದ್ಧಾಂತಗಳ ಬಗ್ಗೆ ರಾಘವಾಂಕ ಬರೆಯಲೇ ಬಾರದಿತ್ತು. ಸಿದ್ಧರಾಮನಂತಹ ಶ್ರೇಷ್ಠ ಯೋಗಿಯ ಬಗ್ಗೆ ತಪ್ಪು ಬರೆಯುವುದಕ್ಕಿಂತ ಬರೆಯದಿರುವುದೇ ಮೇಲಲ್ಲವೇ?
ಲಿಂಗಾಯತ, ವೀರಶೈವಗಳಲ್ಲಿ ಭೇದ ಮಾಡುವುದು ಕೃತ್ರಿಮ, ಅವೈಚಾರಿಕ, ಆದುದರಿಂದ ಅನಾವವಶ್ಯಕ ಎಂದು ಕೆಲವರು ಆಕ್ಷೇಪಿಸಬಹುದು. ವೀರಶೈವ-ಲಿಂಗಾಯತಗಳ ನಡುವೆ ನಿಜವಾಗಿಯೂ ಇರುವ ಭೇದವನ್ನು ನಾವು ಗುರುತಿಸದೇ ಇದ್ದರೆ ನಮಗೆ ಮೇಲಿನ ಸಮಸ್ಯೆಗಳಂಥ ಅನೇಕ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುವುದೇ ಇಲ್ಲ.
ಸಂದರ್ಭಸೂಚಿ
1. ಆರ್. ಎಸ್. ರಾಮರಾವ್ (ಗದ್ಯಾನುವಾದಕರು): ರಾಘವಾಂಕ ವಿರಚಿತ ಸಿದ್ಧರಾಮ ಚಾರಿತ್ರ (ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1999).
2. ಡಾ. ವಿದ್ಯಾಶಂಕರ, ಎಸ್. (ಸಂ): ಸಮಗ್ರವಚನಸಂಪುಟ, ಸಂಪುಟ 4, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001), ವ. 1892.
Comments 8
Dinesh P
Dec 9, 2020ರಾಘವಾಂಕನ ಸಿದ್ಧರಾಮ ಚರಿತ್ರೆಯನ್ನು ಓದಿದವರಿಗೆ ಅಲ್ಲಿ ಶರಣನಾದ ಸಿದ್ಧರಾಮೇಶ್ವರರ ಬಗೆಗೆ ಯಾವ ಸುಳಿವೂ ಸಿಗುವುದಿಲ್ಲ. ನೀವು ಹೇಳಿದ ಮಾತುಗಳು ಅಕ್ಷರಶಃ ಸತ್ಯವಾಗಿವೆ ಸರ್.
Praveen Solapur
Dec 16, 2020ನಾನು ಸೊಲ್ಲಾಪುರದವನೇ. ಸಿದ್ದರಾಮೇಶ್ವರರ ದೇವಸ್ಥಾನದಲ್ಲಿ ಶರಣ ಸಿದ್ದರಾಮೇಶ್ವರರೇ ಇಲ್ಲ. ಚಾಮರಸನ ಸಿದ್ದೇಶ್ವರರಿದ್ದಾರೆ!!
Mahesh Reddy
Dec 16, 2020ಶರಣರ ಚರಿತ್ರೆಗೆ ಇಂತಹ ಪುರಾಣಗಳು ಅಪಚಾರ ಬಗೆದಿವೆ ಎಂಬುದು ನನ್ನ ಅಭಿಪ್ರಾಯ. ಜನರನ್ನು ದಿಕ್ಕು ತಪ್ಪಿಸುವ ಇಂತಹ ಕಾವ್ಯಗಳಿಂದ ಚರಿತ್ರೆಗೆ ಏನೂ ಪ್ರಯೋಜನವಿಲ್ಲ. ಸಂಶೋಧನಾತ್ಮಕ ಲೇಖನ ಸರ್.
Kamalesh Jevergi
Jan 4, 2021ಶರಣ ಸಿದ್ದರಾಮನನ್ನು ಅರಿಯಲು ಬೇರೆಯದೇ ಕಣ್ಣು ಬೇಕು. ಇವತ್ತಿಗೂ ಅದನ್ನು ಗುರುತಿಸುವುದು ಯಾರಿಗೂ ಬೇಕಾಗಿಲ್ಲ.
Basappa Kalguti
Jan 4, 2021ನಿಜ ಸರ್, ಇವತ್ತಿನ ಸಾಹಿತಿಗಳಿಗೂ ವಚನಕಾರ ಸಿದ್ದರಾಮನಿಗಿಂತ ರಾಘವಾಂಕನ ಸಿದ್ದರಾಮನೇ ಪ್ರೀಯ. ಕಲ್ಯಾಣಕ್ಕೆ ಬಂದು ಬದಲಾದ ಸಿದ್ಧರಾಮನನ್ನು ಗುರುತಿಸುವುದು ಅವರಿಗೂ ಬೇಡವಾಗಿದೆ.
Pro Mallikarjuna
Jan 4, 2021ಶರಣ, ವಚನಕಾರ ಸಿದ್ದರಾಮನನ್ನು ಮರೆಮಾಚುವಲ್ಲಿ ದೊಡ್ಡ ರಾಜಕೀಯವೇ ಅಡಗಿದೆ. ಶರಣರ ಮಹತ್ವವನ್ನು ಇತಿಹಾಸದಿಂದ ಸರಿಸುವ ಪ್ರಯತ್ನಗಳನ್ನು ಮಾಡುತ್ತಿರುವ ವಿದ್ವಾಂಸರು ತಮ್ಮ ಕುತ್ಸಿತ ಬುದ್ಧಿಯನ್ನು ಈಗಲೂ ಮುಂದುವರಿಸಿದ್ದಾರೆ. ರಾಘವಾಂಕ ಬೇಕೆಂದೇ ಅದನ್ನು ಕಡೆಗಣಿಸಿದ್ದಾನೆಂದೂ ನನಗೂ ಅನಿಸುತ್ತಿರುತ್ತದೆ.
Raveesh gubbi
Jan 4, 2021An interesting discussion is worth comment. I do believe that you ought to write more on this issue.
Chinmayi
May 15, 2021Well reserched article.