ಲಿಂಗಾಯತ ಸ್ವತಂತ್ರ ಧರ್ಮ
ಕೆಲವು ಲಿಂಗಾಯತರೂ ಸೇರಿದಂತೆ, ಅನೇಕರಿಗೆ ಲಿಂಗಾಯತವು ಹಿಂದೂ ಧರ್ಮದ ಪಂಥವಾದ ಶೈವ ಧರ್ಮದ ಒಂದು ಶಾಖೆ ಎಂಬ ನಂಬಿಕೆಯಿದೆ. ಆದರೆ ಕೆಲವು ಯುರೋಪಿಯನ್ ವಿದ್ವಾಂಸರು ಲಿಂಗಾಯತದಲ್ಲಿ ಕೆಲವು ಮುಖ್ಯವಾದ ಅವೈದಿಕ ಅಂಶಗಳನ್ನು ಕಂಡಾಗಿನಿಂದ ಆಧುನಿಕ ಕನ್ನಡ ವಿದ್ವಾಂಸರು ಈ ನಂಬಿಕೆಯನ್ನು ಅಲ್ಲಗಳೆಯಲು ಪ್ರಯತ್ನಿಸಿದ್ದಾರೆ. ಯುರೋಪಿಯನ್ ವಿದ್ವಾಂಸರಿಗೆ ಆಗಲೇ ಎಲ್ಲಾ ವಚನಗಳೂ ಸಿಕ್ಕಿದ್ದರೆ ಅವರೇ ಲಿಂಗಾಯತವು ಅವೈದಿಕವೆಂದೂ ಒಂದು ಸಂಪೂರ್ಣ, ಸ್ವತಂತ್ರ ಧರ್ಮವೆಂದೂ ಸಂಶಯಕ್ಕೆ ಎಡೆ ಇಲ್ಲದಂತೆ ಸಿದ್ಧಮಾಡಿ ತೋರಿಸುತ್ತಿದ್ದರೇನೋ. ಆದರೆ ಹಾಗಾಗಲಿಲ್ಲ. ಈ ಒಂದು ಸ್ಥಿತಿ 1922ರ ವರೆಗೂ ಮುಂದುವರೆಯಿತು. 1922ರಲ್ಲಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರೂ ಇತರ ವಿದ್ವಾಂಸರು ಮತ್ತು ಸಂಶೋಧಕರೂ ಸುಮಾರು 23 ಸಾವಿರ ವಚನಗಳನ್ನು ಹುಡುಕಿ, ಪ್ರಕಟಿಸಿದಾಗಿನಿಂದ ಲಿಂಗಾಯತವು ಅವೈದಿಕ, ಹಿಂದೂ ಧರ್ಮದ ಶಾಖೆ ಅಲ್ಲ, ಎಂಬ ವಿರೋಧ ಮರುಜನ್ಮ ಪಡೆಯಿತು.
ಲಿಂಗಾಯತವು ಹಿಂದೂ(ವೈದಿಕ)ಧರ್ಮದ ಭಾಗವೋ ಅಲ್ಲವೋ ಎಂಬ ಪ್ರಶ್ನೆ, ‘ಹಿಂದೂ ಎಂದರೇನು?’ ಎಂಬ ಪ್ರಶ್ನೆಗೆ ಕೊಡುವ ಉತ್ತರದ ಮೇಲೆ ನಿಂತಿದೆ. ‘ಹಿಂದೂ’ ಪದವು ವೈದಿಕರು ಬಳಸಿದ ಪದವಲ್ಲ. ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಆಗಮ – ಈ ಯಾವ ಗ್ರಂಥಗಳಲ್ಲಿಯೂ ‘ಹಿಂದೂ’ ಪದ ಬಳಕೆಯಾಗಿಲ್ಲ. ಆ ಪದವನ್ನು ಮೊದಲು ಬಳಸಿದವರು ಪ್ರಾಚೀನ ಪರ್ಷಿಯನ್ನರು; ಅದು ಧರ್ಮವಾಚಕವಾಗಿರದೆ ಸಿಂಧೂ ನದಿಯ ಪಶ್ಚಿಮ ದಡದಲ್ಲಿ ವಾಸಿಸುತ್ತಿದ್ದ ಜನರಿಗೆ ಅನ್ವಯವಾಗುತ್ತಿತ್ತು. ಸಿಂಧೂ ನದಿ ಇದ್ದ ದೇಶವನ್ನು ಇಂಡಿಯಾ ಎಂದು ಮೊದಲು ಕರೆದವರು ಪ್ರಾಚೀನ ಗ್ರೀಕರು. ಭಾರತವನ್ನು ಆಳಿದ ಮುಸ್ಲಿಂ ಅರಸರು ‘ಹಿಂದೂ’ ಪದವನ್ನು ಭಾರತದ ಎಲ್ಲಾ ನಿವಾಸಿಗಳಿಗೂ – ಅವರ ಧರ್ಮ ಯಾವುದೇ ಇರಲಿ – ಅನ್ವಯವಾಗುವಂತೆ ಬಳಸಿದರು. ಆದರೆ ಆಮೇಲೆ ಭಾರತವನ್ನು ಆಳಿದ ಯುರೋಪಿಯನ್ನರು ಹಿಂದೂ ಪದವನ್ನು ಧರ್ಮವಾಚಕವಾಗಿ ಬಳಸಿದರಲ್ಲದೆ, ಹಿಂದೂ ಧರ್ಮವನ್ನು, ಕ್ರೈಸ್ತ, ಇಸ್ಲಾಂ, ಬೌದ್ಧ ಮುಂತಾದ ಧರ್ಮಗಳಿಂದ ಪ್ರತ್ಯೇಕಿಸಿದರು.
ಲಿಂಗಾಯತರು ಹಿಂದೂಗಳೋ ಅಲ್ಲವೋ ಎಂಬ ಪ್ರಶ್ನೆ ಬಹಳ ಜಟಿಲವಾದದ್ದು. ಹಿಂದೂ ಪದದ ವ್ಯಾಖ್ಯೆಯನ್ನು ನಿರ್ಧರಿಸದ ಹೊರತು ಆ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಹಿಂದೂಧರ್ಮದ ವ್ಯಾಖ್ಯೆಯನ್ನು ಸಂದೇಹ ಅಥವಾ ವಿವಾದಗಳಿಲ್ಲದಂತೆ ನಿರ್ಧರಿಸುವುದೇ ಕಷ್ಟವಾಗಿದೆ. ಆ ಪ್ರಶ್ನೆಯನ್ನು ಜಟಿಲ ಮಾಡಿರುವವರಲ್ಲಿ ವಿದ್ವಾಂಸರು ಮತ್ತು ಸಂಶೋಧಕರು ಇರುವಂತೆ ಪಾಮರರು, ರಾಜಕಾರಣಿಗಳು, ವಿಶ್ಲೇಷಣಾತ್ಮಕ ಬುದ್ಧಿ ಇಲ್ಲದವರೂ ಇದ್ದಾರೆ. ಹಿಂದೂ ಧರ್ಮದಲ್ಲಿ ಒಂದೇ ರೀತಿಯ ನಂಬಿಕೆಗಳು ಮತ್ತು ಸಿದ್ಧಾಂತಗಳು, ಒಂದೇ ರೀತಿಯ ಆಚರಣೆಗಳು ಇಲ್ಲದಿರುವುದರಿಂದ ಅದು ಬೌದ್ಧ, ಜೈನ, ಇಸ್ಲಾಂ ಧರ್ಮಗಳಂತಹ ಒಂದು ಧರ್ಮವಲ್ಲ ಎಂದು ವಾದಿಸುವವರು ಇದ್ದಾರೆ. ಉದಾಹರಣೆಗೆ, ವೈಷ್ಣವರು ಶಿವನನ್ನು ಆರಾಧಿಸುವುದಿಲ್ಲ, ಶೈವರು ವಿಷ್ಣ್ವುವನ್ನು ಆರಾಧಿಸುವುದಿಲ್ಲ; ಸಾಂಖ್ಯರು ದೇವರನ್ನೇ ನಂಬುವುದಿಲ್ಲ; ಕೆಲವರು ದೇವತೆಗಳ ಹೆಸರಿನಲ್ಲಿ ಯಜ್ಞ ಯಾಗಾದಿಗಳನ್ನು ಮಾಡುತ್ತಾರೆ, ಮತ್ತೆ ಕೆಲವರು ಮಾಡುವುದಿಲ್ಲ; ಕೆಲವರು ಸಸ್ಯಾಹಾರಿಗಳು, ಕೆಲವರು ಮಾಂಸಾಹಾರಿಗಳು. ಇಂಥ ವೈವಿಧ್ಯ ಮತ್ತು ವೈರುಧ್ಯಗಳು ಇತರ ಧರ್ಮಗಳಲ್ಲಿ ಇಲ್ಲವಾದುದರಿಂದ ಹಿಂದೂ ಎಂಬುದು ಒಂದು ಜೀವನ ಪದ್ಧತಿಯೇ ಹೊರತು ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಂತಲ್ಲ ಎಂದು ಕೆಲವರು ವಾದಿಸುತ್ತಾರೆ. ಅದು ಒಂದು ವಿವಿಧ ಧರ್ಮಗಳ ಒಕ್ಕೂಟವೇ ಹೊರತು ಒಂದು ಸಮಗ್ರ ಏಕೈಕ ರೀತಿಯ ಧರ್ಮವಲ್ಲ. ಮತ್ತೆ ಕೆಲವರು ಹಿಂದೂಸ್ಥಾನದಲ್ಲಿ ಹುಟ್ಟಿದ ಬೌದ್ಧ, ಜೈನ, ಸಿಖ್, ಲಿಂಗಾಯತ ಮುಂತಾದ ಧರ್ಮಗಳೆಲ್ಲಾ ಹಿಂದೂ ಧರ್ಮದ ವಿವಿಧ ಶಾಖೆಗಳು ಎಂದು ವಾದಿಸುತ್ತಾರೆ. ಡಾ. ಎಸ್ ರಾಧಾಕೃಷ್ಣನ್ ತಮ್ಮ ‘2500 ಇಯರ್ಸ್ ಆಫ್ ಬುದ್ಧಿಸಂ’ ಎಂಬ ಗ್ರಂಥದಲ್ಲಿ ‘ಬುದ್ಧನು ಒಬ್ಬ ಶ್ರೇಷ್ಠ ಹಿಂದು’ (Buddha is the greatest Hindu) ಎಂದೂ ‘ಬುದ್ಧ ಹುಟ್ಟಿದ್ದು ಹಿಂದೂ ಆಗಿ, ಬೆಳೆದಿದ್ದು ಹಿಂದೂ ಆಗಿ ಸತ್ತಿದ್ದು ಹಿಂದುವಾಗಿ (Buddha was born a Hindu, grew up a Hindu and died a Hindu) ಎಂದೂ ಅಭಿಪ್ರಾಯ ಪಡುತ್ತಾರೆ. ಇಂಥ ಮಾತುಗಳು ಹಿಂದೂ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಇರುವ ವ್ಯತ್ಯಾಸವನ್ನೇ ಅಳಿಸಿ ಹಾಕುತ್ತವೆ. ರಾಧಾಕೃಷ್ಣನ್ನರ ಮಾತು ಸತ್ಯವೇ ಆಗಿದ್ದರೆ ಬೌದ್ಧಧರ್ಮವನ್ನು ಭಾರತದಲ್ಲಿ ನಿರ್ಮೂಲನೆ ಮಾಡಲು ಅಥವಾ ಭಾರತದಿಂದ ಬೌದ್ಧರನ್ನು ಓಡಿಸಲು ಕಾರಣವೇನು ಎಂಬ ಪ್ರಶ್ನೆಗೆ ಅವರು ಅಥವಾ ಅವರ ಅನುಯಾಯಿಗಳು ಉತ್ತರ ಹೇಳಬೇಕಾಗುತ್ತದೆ. ಇತ್ತೀಚೆಗೆ ರಾಜಕಾರಣಿಯೊಬ್ಬ ಭಾರತದಲ್ಲಿರುವ ಎಲ್ಲ ಧರ್ಮಗಳು ಹಿಂದೂ ಧರ್ಮಗಳ ಭಾಗಗಳೇ ಎಂದಿದ್ದಾನೆ. ಅಂದರೆ ಅವನ ಪ್ರಕಾರ ಮುಸ್ಲಿಮರು, ಕ್ರೈಸ್ತರು, ಸಹ ಹಿಂದುಗಳೇ. ಹಾಗಾದರೆ ಜನಗಣತಿಯಲ್ಲಿ ಅಥವಾ ಸ್ಕೂಲುಗಳಲ್ಲಿ ಪ್ರವೇಶ ಪಡೆಯುವಾಗ ಧರ್ಮದ ಕಾಲಮ್ಮಿನಲ್ಲಿ ರಶೀದ್ ಖಾನ್, ಆಲ್ಬರ್ಟ್ ಮುಂತಾದವರು ಹಿಂದೂಗಳೆಂದು ಬರೆಸಬೇಕೆ? ಈ ರಾಜಕಾರಣಿ ಈ ಪ್ರಶ್ನೆಗೆ ಏನೆಂದು ಉತ್ತರಿಸುತ್ತಾನೊ ಗೊತ್ತಿಲ್ಲ.
ಈ ಸಮಸ್ಯೆಯನ್ನು ಪರಿಹರಿಸಲು ಇರುವ ಏಕೈಕ, ಉತ್ತಮ ಮಾರ್ಗವೆಂದರೆ ನಮ್ಮ ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳು ಅನುಸರಿಸಿದ ಮಾರ್ಗ. ಒಂದು ದರ್ಶನ ಹಿಂದೂ ಅಥವಾ ವೈದಿಕ ಎನಿಸಿಕೊಳ್ಳಬೇಕಾದರೆ ಅದು ವೇದಕ್ಕೆ ಅನುಗುಣವಾಗಿರಬೇಕು. ಇಲ್ಲದಿದ್ದರೆ ಅದು ಅವೈದಿಕವೆನಿಸಿಕೊಳ್ಳುತ್ತದೆ. ಈ ಮಾರ್ಗವನ್ನು ಅನುಸರಿಸಿ, ವೇದ ಪ್ರಾಮಾಣ್ಯವನ್ನು ಒಪ್ಪಿಕೊಳ್ಳುವ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ ಮತ್ತು ವೇದಾಂತಗಳನ್ನು ವೈದಿಕ ದರ್ಶನಗಳೆಂದೂ ವೇದಬಾಹಿರವಾದ ಜೈನ, ಬೌದ್ಧ ಮತ್ತು ಚಾರ್ವಾಕ ದರ್ಶನಗಳನ್ನು ಅವೈದಿಕವೆಂದೂ ನಿರ್ಧರಿಸಲಾಯಿತು. ನಾವು ಸಹ ಇದೇ ಮಾದರಿ ಅನುಸರಿಸಿ ಒಂದು ಧರ್ಮವು ವೇದಾನುಸಾರವಾಗಿದೆಯೇ ಇಲ್ಲವೇ ಎಂಬ ಆಧಾರದ ಮೇಲೆ ಅದನ್ನು ವೈದಿಕ ಅಥವಾ ಅವೈದಿಕ ಎಂದು ತೀರ್ಮಾನಿಸಬಹುದು. ಅಂದರೆ ಈ ಪದ್ಧತಿಯ ಪ್ರಕಾರ ಲಿಂಗಾಯತವು ಹಿಂದೂ ಧರ್ಮದ ಭಾಗವೋ ಅಲ್ಲವೋ ಎಂಬ ಪ್ರಶ್ನೆಯನ್ನು ‘ಲಿಂಗಾಯತವು ವೈದಿಕವೋ ಅವೈದಿಕವೋ?’ ಎಂದು ಪುನರ್ ರೂಪಿಸಬಹುದು. ವೇದ ಪ್ರಾಮಾಣ್ಯವು ಹಿಂದೂ ಧರ್ಮದ ಲಕ್ಷಣವಾದರೆ ಲಿಂಗಾಯತ ಧರ್ಮದಲ್ಲಿ ಅನೇಕ ಮುಖ್ಯ ಅವೈದಿಕ ಅಂಶಗಳಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಅಂತ ಅವೈದಿಕ ಲಕ್ಷಣಗಳಲ್ಲಿ ಮುಖ್ಯವಾದ ಕೆಲವು ಈ ಕೆಳಗಿನಂತಿವೆ:
1. ವೇದ ಪ್ರಾಮಾಣ್ಯ: ಯಾವುದೇ ಮೂಲ ಧರ್ಮಗ್ರಂಥಕ್ಕೆ ಪವಿತ್ರ ಗ್ರಂಥದ ಸ್ಥಾನಮಾನವಿದೆ. ಅದು ಆಯಾ ಧರ್ಮದ ವಿಧಿ ನಿಯಮಗಳನ್ನು ತಿಳಿಸುವುದರಿಂದಲೂ ಪರಮಾತ್ಮ ಅಥವಾ ಅವನ ದೂತ ಅಥವಾ ಮಗ ಬರೆದನು ಎಂಬ ಕಾರಣದಿಂದಲೂ ಅದಕ್ಕೆ ಅವಿರೋಧವಾದ ಪಾವಿತ್ರ್ಯ ಇರುತ್ತದೆ. ಈ ಕಾರಣದಿಂದಾಗಿ ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್, ಬೌದ್ಧರಿಗೆ ತ್ರಿಪಿಟಕ ಪವಿತ್ರ ಗ್ರಂಥಗಳಾಗಿರುವಂತೆ ಹಿಂದೂಗಳಿಗೆ (ವೈದಿಕರಿಗೆ) ವೇದಗಳು ಪವಿತ್ರ ಗ್ರಂಥಗಳಾಗಿವೆ. ವೇದಗಳಿಗೆ ಅವಿರೋಧ ಪ್ರಾಮಾಣ್ಯವಿದೆ. ಐದು ಸಾರಿ ಏಕೆ ನಮಾಜು ಮಾಡಬೇಕೆಂದು ಒಬ್ಬ ಮುಸ್ಲಿಮನನ್ನು ಕೇಳಿದರೆ ಆತ ಹಾಗೆಂದು ಕುರಾನ್ನಲ್ಲಿ ಹೇಳಿದೆ ಎನ್ನುತ್ತಾನೆ. ಅದೇ ರೀತಿ ಒಂದು ವಿಶಿಷ್ಟ ಯಜ್ಞವನ್ನೇ ಏಕೆ ಮಾಡಬೇಕು, ಯಜ್ಞ ಮಾಡಲು ಬ್ರಾಹ್ಮಣರೇ ಏಕೆ ಬೇಕು? ಎಂದು ಒಬ್ಬ ಹಿಂದುವನ್ನು ಕೇಳಿದರೆ, ಆತ ಹಾಗೆಂದು ವೇದಗಳಲ್ಲಿ ಹೇಳಲಾಗಿದೆ ಎನ್ನುತ್ತಾನೆ. ಯಾವುದೇ ಒಂದು ಸಾಮಾಜಿಕ, ನೈತಿಕ ಅಥವಾ ಈಶ್ವರಶಾಸ್ತ್ರೀಯ ಗೊಂದಲ ಉಂಟಾದರೆ ಅದಕ್ಕೆ ಉತ್ತರವನ್ನು ನಾವು ವೇದಗಳಲ್ಲಿ ಅಥವಾ ಅವುಗಳ ಮತ್ತೊಂದು ರೂಪವಾದ ಶಾಸ್ತ್ರ, ಪುರಾಣ ಅಥವಾ ಆಗಮಗಳಲ್ಲಿ ಕಾಣಬಹುದು. ಅವುಗಳಿಗೆ ಅನುಗುಣವಾದ ನಮ್ಮ ನಂಬಿಕೆ, ಸಿದ್ಧಾಂತ ಅಥವಾ ಆಚರಣೆ ಮಾನ್ಯ, ಅವುಗಳಿಗೆ ವಿರುದ್ಧವಾದದ್ದು ಅಧಾರ್ಮಿಕ, ಅಮಾನ್ಯ. ಅಂದರೆ, ಅವುಗಳಿಗೆ ವೇದಗಳೇ ಅಂತಿಮ ಪ್ರಮಾಣ. ವೇದ ಪ್ರಾಮಾಣ್ಯವನ್ನು ಒಪ್ಪಿಕೊಳ್ಳುವವರು ಹಿಂದುಗಳು, ಅವುಗಳನ್ನು ಮಾನ್ಯ ಮಾಡದ ಬೌದ್ಧರು, ಜೈನರು, ಲಿಂಗಾಯತರು, ಸಿಕ್ಕರು ಹಿಂದುಗಳಲ್ಲ. 1966ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ವೇದಪ್ರಾಮಾಣ್ಯವನ್ನು ಮಾನ್ಯ ಮಾಡಿದವರೆಲ್ಲ ಹಿಂದೂಗಳೇ.
ಬಸವಣ್ಣನವರೂ ಅವರ ಅನುಯಾಯಿಗಳಾದ 12ನೇ ಶತಮಾನದ ಇತರ ವಚನಕಾರರೂ ವೇದಪ್ರಾಮಾಣ್ಯವನ್ನು ಸ್ಪಷ್ಟ ಮಾತುಗಳಲ್ಲಿ ತಿರಸ್ಕರಿಸಿದ್ದಾರೆ. ಬಸವಣ್ಣನವರು ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನೆಕ್ಕುವೆ, ಆಗಮದ ಮೂಗ ಕೊಯ್ಯುವೆ’ ಎಂದಿದ್ದಾರೆ. ಅಕ್ಕಮಹಾದೇವಿ ‘ವೇದ, ಪುರಾಣ, ಶಾಸ್ತ್ರಗಳು ಕೇವಲ ತೌಡು, ಅವುಗಳನ್ನು ಮತ್ತೆ ಮತ್ತೆ ಕುಟ್ಟಲೇಕೆ?’ ಎಂದು ಕೇಳಿದ್ದಾಳೆ. ಅದೇ ರೀತಿ ಅಲ್ಲಮಪ್ರಭು ವೇದ ಪ್ರಾಮಾಣ್ಯವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ವೇದಗಳು ನಿತ್ಯಸತ್ಯ, ದೋಷರಹಿತ ಎಂಬುದನ್ನು ಸಾಧಿಸಲು ಮತ್ತು ಅವುಗಳನ್ನು ವಿರೋಧಿಸುವುದನ್ನು ತಡೆಯಲು ಸಾಂಪ್ರದಾಯಿಕ ವೈದಿಕರು ವೇದ ಮತ್ತು ಸಂಬಂಧಿತ ಸಾಹಿತ್ಯಕ್ಕೆ ದೈವತ್ವವನ್ನು ಆರೋಪಿಸಿದ್ದರು. ಆದರೆ ಬಸವಾದಿ ಶರಣರು ವೇದ, ಶಾಸ್ತ್ರ, ದೇವರಲ್ಲ ಎಂದರು. ಮಹಾಯೋಗಿಯಾದ ಸಿದ್ಧರಾಮ ವೇದಾದಿ ಗ್ರಂಥಗಳಿಗೆ ದೈವತ್ವವನ್ನು ನಿರಾಕರಿಸಿದ. ವೇದ, ಶಾಸ್ತ್ರ, ಪುರಾಣಗಳು ನಾಚಿಕೆ ಇಲ್ಲದೆ ಅಸತ್ಯವನ್ನು ನುಡಿಯುವುದರಿಂದ, ಮಾಂಸಭಕ್ಷಣೆ ಮತ್ತು ಮದ್ಯಪಾನವನ್ನು ಅನುಮೋದಿಸುವುದರಿಂದ, ಪ್ರಾಣಿಬಲಿಯನ್ನು ಅನುಮೋದಿಸುವುದರಿಂದ, ಅವು ಕೇವಲ ಮಾತಿನ ದೊಂಬರಾಟವಾಗಿರುವುದರಿಂದ… ಅವುಗಳಿಗೆ ದೈವತ್ವವಿದೆ ಎಂಬ ಮಾತು ಅಸತ್ಯ ಎಂಬುದು ಅವರ ವಾದ. ವಾಸ್ತವವಾಗಿ ಅವುಗಳು ಬೋಧಿಸಿದ ಆಚರಣೆಯನ್ನು ಪಾಲಿಸಿದರೆ ನರಕಪ್ರಾಪ್ತಿ ಖಚಿತ. ವಚನಕಾರರ ಈ ನಿಲವನ್ನು ನೋಡಿದರೆ ಅವರು ವೇದ ಪ್ರಾಮಾಣ್ಯವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು ಎಂಬುದು ಖಚಿತವಾಗುತ್ತದೆ.
2. ಬಹುದೇವತಾರಾಧನೆ: ಕೇವಲ ವೇದಗಳ ಅಧಿಕಾರವನ್ನಷ್ಟೇ ಅಲ್ಲ, ಅವುಗಳ ಕೆಲ ಮುಖ್ಯ ಸಿದ್ಧಾಂತ ಮತ್ತು ಆಚರಣೆಗಳನ್ನೂ ವಚನಕಾರರು ಖಂಡಿಸಿದರು. ಅವುಗಳಲ್ಲಿ ಒಂದು ಬಹುದೇವತಾವಾದ. ವೇದಗಳ ಕರ್ಮಕಾಂಡವು ಹಲವಾರು ದೇವತೆಗಳ ಅಸ್ತಿತ್ವ ಮತ್ತು ಆರಾಧನೆಯನ್ನು ಬೋಧಿಸುತ್ತದೆ. ಕರ್ಮಕಾಂಡದ ಪ್ರಕಾರ 33 ಕೋಟಿ ದೇವದೇವತೆಗಳಿದ್ದಾರೆ, ಅವರಲ್ಲಿ 33 ದೇವದೇವತೆಗಳು ಮುಖ್ಯ; ಅವರನ್ನು ದೇವಲೋಕದ, ಭೂಲೋಕದ ಮತ್ತು ವಾಯುಲೋಕದ (ವಾತಾವರಣದ) ದೇವತೆಗಳೆಂದು ವಿಂಗಡಿಸಲಾಗಿದೆ. ಅವರಲ್ಲಿ ಇಂದ್ರ, ಅಗ್ನಿ, ಯಮ, ವರುಣ, ಮಿತ್ರ ಮತ್ತು ಉμÉ ಮುಖ್ಯರು. ಉಪನಿಷತ್ತುಗಳು ಬಹುದೇವತಾವಾದವನ್ನೂ ಅದಕ್ಕೆ ಸಂಬಂಧಿಸಿದ ಯಜ್ಞಯಾಗಾದಿಗಳ ಆಚರಣೆಯನ್ನೂ ಅಲ್ಲಗಳೆದವು ಎಂಬುದು ನಿಜ. ಏಕಮ್ ಸತ್, ಬಹುಧಾಃ ವಿಪ್ರಾ ವದಂತಿ (ಸತ್ಯವು ಒಂದೇ, ವಿಪ್ರರು ಅದನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ) ಎನ್ನುವ ಮೂಲಕ ಅವು ಕರ್ಮಕಾಂಡದ ಬಹುದೇವತಾವಾದವನ್ನು ಅಲ್ಲಗಳೆದರೂ ವೈದಿಕ ಧರ್ಮದ ಪ್ರಮುಖ ಕುರುಹಾದ ಯಜ್ಞಯಾಗಾದಿಗಳ ಆಚರಣೆಯನ್ನು ಉಳಿಸಿಕೊಂಡವು.
ಆದರೆ ಲಿಂಗಾಯತರು ಇಂತಹ ನಂಬಿಕೆಗಳನ್ನು ಒಪ್ಪಲಿಲ್ಲ. ಶಿವ ಅಥವಾ ಪರಶಿವ ಎಂದು ಕರೆಯಲಾಗುವ ಲಿಂಗಾಯತರ ಶಿವ ಪೌರಾಣಿಕ ಶಿವನಲ್ಲ. ಅಂಬಿಗರ ಚೌಡಯ್ಯ ಹೇಳುವಂತೆ ಶಿವ ಗಜಚರ್ಮಾಂಬರನಲ್ಲ, ರುಂಡಮಾಲಾಧರನಲ್ಲ. ಆದುದರಿಂದ ಹಿಂದೂ ಶಿವನನ್ನು ಪೂಜಿಸುವ ಲಿಂಗಾಯತರು ಖಂಡಿತವಾಗಿ ಹಿಂದೂಗಳು ಎಂಬ ವಾದವು ಹುರುಳಿಲ್ಲದ್ದು. ಯಹೋವನನ್ನು ಪೂಜಿಸುವ ಕ್ರೈಸ್ತರು ಅದೇ ದೈವವನ್ನು ಪೂಜಿಸುವ ಯಹೂದಿಗಳಿಗಿಂತ ಭಿನ್ನವಾಗಿರುವಂತೆ, ಶಿವನನ್ನು ಪೂಜಿಸುವ ಲಿಂಗಾಯತರು ಶಿವನನ್ನು ಪೂಜಿಸುವ ಪಾಶುಪತ, ಶುದ್ಧಶೈವರಿಗಿಂತ ಭಿನ್ನ. ಅಲ್ಲದೆ ಶೈವ ಧರ್ಮದ ಸಿದ್ಧಾಂತಗಳು, ಲಿಂಗಾಯತಧರ್ಮದ ಸಿದ್ಧಾಂತಗಳಿಗಿಂತ ಭಿನ್ನ.
ಆಗಮೋಕ್ತ ವೀರಶೈವ ಶಿವನನ್ನೂ ಅಲ್ಲದೆ ಪಾರ್ವತಿ, ಗಣಪತಿ, ಕುಮಾರ, ಅಷ್ಟದಿಕ್ಪಾಲಕರು ಮುಂತಾದ ಅನೇಕ ದೈವಗಳನ್ನು ಪೂಜಿಸಬೇಕೆಂದು ಬೋಧಿಸುತ್ತದೆ. ಅದನ್ನು ಅಲ್ಲಗಳೆಯವ ಲಿಂಗಾಯತರು ವೀರಶೈವರಲ್ಲ.
ಜನರು ಅನೇಕ ದೈವಗಳನ್ನು ಆರಾಧಿಸುವುದು ಸ್ವಾರ್ಥ ಉದ್ದೇಶದಿಂದ. ಯಾವುದೋ ಸ್ವಾರ್ಥ ಉದ್ದೇಶದಿಂದ ಮಾಡಿದ ಅವರ ಆರಾಧನೆ ಅವರ ಇಷ್ಟವನ್ನು ಪೂರೈಸದಿದ್ದರೆ, ಮತ್ತೊಂದು ದೈವವನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಹೀಗೆ ಸ್ವಾರ್ಥ ಉದ್ದೇಶ ಮತ್ತು ಬಹುದೇವತಾರಾಧನೆಗಳಲ್ಲಿ ಬಿಡಿಸಲಾಗದ ನಂಟು ಇದೆ. ಬಸವಣ್ಣನವರೂ ಅವರ ಅನುಯಾಯಿಗಳೂ ಬಹುದೇವತಾರಾಧನೆಯನ್ನು ಹೆಂಡತಿಯೊಬ್ಬಳ ವ್ಯಭಿಚಾರಕ್ಕೆ ಸಮವೆಂದು ಪರಿಗಣಿಸಿ, ಅದನ್ನು ಖಂಡಿಸಿದರು.
3. ಯಜ್ಞಯಾಗಾದಿಗಳ ಆಚರಣೆ: ಸ್ವಾರ್ಥ ಉದ್ದೇಶಗಳನ್ನು ಪೂರೈಸುವ ದೇವತೆಗಳನ್ನು ತೃಪ್ತಿಪಡಿಸುವುದಕ್ಕಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು ವೈದಿಕ ಬಹುತೇವತಾವಾದದ ಒಂದು ಮುಖ್ಯ ಅಂಗವಾಗಿದೆ. ಹೋತ, ಕುದುರೆ ಮುಂತಾದ ಪ್ರಾಣಿಗಳನ್ನು ಬಲಿ ಕೊಡುವ ಪದ್ಧತಿ ಈಗಿನ ಯಜ್ಞಯಾಗಾದಿಗಳಲ್ಲಿ ಇಲ್ಲದಿದ್ದರೂ ಅಂತಹ ಪದ್ಧತಿ ಪ್ರಾಚೀನ ವೈದಿಕ ಧರ್ಮದ ಅಂಗವಾಗಿತ್ತು. ಸ್ವಾರ್ಥ ಉದ್ದೇಶಗಳನ್ನು ಪೂರೈಸಿಕೊಳ್ಳಲು ಧರ್ಮದ ಹೆಸರಿನಲ್ಲಿ ಪ್ರಾಣಿಹಿಂಸೆ ಮಾಡುವ ಪದ್ಧತಿಯನ್ನು ಬಸವಣ್ಣನವರು ಖಂಡಿಸಿದರು. ಪ್ರಾಣಿಹಿಂಸೆಯನ್ನು ಮಾಡುವ ಯಾವ ಧರ್ಮವೂ ಧರ್ಮ ಎಂಬ ಹೆಸರಿಗೆ ಅರ್ಹವಲ್ಲ ಎಂಬುದು ಅವರ ನಿಲುವಾಗಿತ್ತು. ಪ್ರಾಣಿಬಲಿಯನ್ನು ಒಳಗೊಂಡ ಯಜ್ಞಯಾಗಾದಿಗಳನ್ನು ಮಾಡುವ ವೈದಿಕ ಧರ್ಮವನ್ನು ಅವರು ಮೆಚ್ಚದೆ, ದಯವೇ ಧರ್ಮದ ಮೂಲ ಎಂಬ ಆಧಾರದ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ವಾಸ್ತವವಾಗಿ, ಅವರ ಪ್ರಕಾರ ಧರ್ಮವೆಂದರೆ ಕೇವಲ ಪ್ರಾಣಿಹಿಂಸೆ ತ್ಯಜಿಸಿವುದಷ್ಟೇ ಅಲ್ಲ, ಸಮಸ್ತ ಜೀವಿಗಳಿಗೆ ಕಲ್ಯಾಣ ಮಾಡುವುದು. ಈ ವಿಷಯದಲ್ಲಿ ಅವರು ಬುದ್ಧನನ್ನು ಅನುಸರಿಸಿದರು. ಬುದ್ಧನು ‘ನಮ್ಮ ಕುಲದ ಸಂಪ್ರದಾಯದಂತೆ ಧರ್ಮದ ಹೆಸರಿನಲ್ಲಿ ಇಷ್ಟಗಳನ್ನು ಪೂರೈಸಿಕೊಳ್ಳಲು ಯಜ್ಞಯಾಗಾದಿಗಳನ್ನು ಮಾಡಲೇಬೇಕೆಂದರೆ ನನಗೆ ಅಂತಹ ಯಜ್ಞಯಾಗಾದಿಗಳು ಮೆಚ್ಚುಗೆಯಾಗುವುದಿಲ್ಲ, ಏಕೆಂದರೆ ಇತರರನ್ನು ಹಿಂಸೆಗೆ ಒಳಪಡಿಸಿ ಪಡುವ ಸುಖ ನನಗೆ ಬೇಕಿಲ್ಲ’ ಎಂದನು.
4. ಜಾತಿತಾರತಮ್ಯ: ಜಾತಿತಾರತಮ್ಯ ಮಾಡುವುದು ವೈದಿಕ ಧರ್ಮದ ಆತ್ಮವಾಗಿದೆ. ಅದು ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಪಂಚಮರು ಎಂದೂ ಶೂದ್ರರನ್ನು ಮತ್ತೆ, ಕುರುಬ, ಒಕ್ಕಲಿಗ, ನೇಕಾರ, ಗಾಣಿಗ ಮುಂತಾದವರೆಂದೂ ಸಾವಿರಾರು ತುಂಡುಗಳಾಗಿ ಮಾಡಿದೆ. ಈ ವಿಭಜಿತ ಕೋಮುಗಳ ನಡುವೆ ಸಹಭೋಜನವಾಗಲಿ ಲಗ್ನ ಸಂಬಂಧವಾಗಲಿ ಇಲ್ಲ. ಭಾರತೀಯ ಇತಿಹಾಸದಲ್ಲಿ ಜಾತಿತಾರತಮ್ಯದ ಆಧಾರದ ಮೇಲೆ ಕೋಮು ಕೋಮುಗಳ ನಡುವೆ ಅನೇಕ ಘರ್ಷಣೆಳಾಗಿರುವುದನ್ನು ನೋಡಬಹುದು. ಈ ಜಾತಿತಾರತಮ್ಯದಿಂದಾಗಿ ಹಿಂದುಗಳಲ್ಲಿ ರಾಜಕೀಯ ಅಥವಾ ಸಾಮಾಜಿಕ ಐಕ್ಯತೆ ಇರಲಿಲ್ಲವಾಗಿ ಪರದೇಶದವರಿಗೆ ಭಾರತದ ಮೇಲೆ ದಂಡೆತ್ತಿ ಬರುವುದು, ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುವುದು, ಭಾರತೀಯರನ್ನು ದಮನ ಮಾಡುವುದು, ಭಾರತವನ್ನು ಆಳುವುದು ಸುಲಭವಾಯಿತು.
ಮೂಲದಲ್ಲಿ ಜಾತಿಭೇದವು ಜಾತಿತಾರತಮ್ಯವಾಗಿರಲಿಲ್ಲ. ಅದು ವಿಚಾರ ಸಮ್ಮತವಾಗಿತ್ತು. ಸಮಾಜವನ್ನು ಬ್ರಾಹ್ಮಣರು, ಕ್ಷತ್ರಿಯರು ಮುಂತಾಗಿ ವಿಂಗಡಿಸುವಾಗ ವ್ಯಕ್ತಿಗಳ ಸ್ವಸಾಮರ್ಥ್ಯವನ್ನೂ ಪ್ರವೃತ್ತಿಯನ್ನೂ ಪರಿಗಣಿಸಲಾಗುತ್ತಿತ್ತು. ವೇದಾಧ್ಯಯನ ಮಾಡಿ ಯಜ್ಞಯಾಗಾದಿಗಳನ್ನು ಮಾಡಬೇಕೆನ್ನುವವರು ಬ್ರಾಹ್ಮಣರಾದರು; ಹೋರಾಡುವ ಮತ್ತು ಜನರನ್ನು ಆಳುವ ಪ್ರವೃತ್ತಿ ಇದ್ದವರು ಕ್ಷತ್ರಿಯರೆನಿಸಿಕೊಂಡರು; ವ್ಯವಸಾಯ ಮತ್ತು ವ್ಯಾಪಾರ ಮಾಡುವವರು ವೈಶ್ಯರಾದರು. ಒಬ್ಬನೇ ತಂದೆಯ ಕೆಲವು ಮಕ್ಕಳು ಬ್ರಾಹ್ಮಣರು, ಕೆಲವರು ಕ್ಷತ್ರಿಯರು, ಮತ್ತೆ ಕೆಲವರು ವೈಶ್ಯರು ಆದರು ಎಂಬ ಉಲ್ಲೇಖವಿದೆ. ಆದರೆ ಶೂದ್ರರಿಗೆ ಈ ಮೂರು ಜನರ ಸೇವೆಯೇ ಧರ್ಮವಾಯಿತು- ಬ್ರಾಹ್ಮಣರಿಗೆ ಮನೆಯಲ್ಲಿ ದುಡಿಯುವ ಸೇವಕರಾಗಿ, ರಾಜರಿಗೆ ರಣರಂಗದಲ್ಲಿ ಹೋರಾಡುವ ಸೈನಿಕರಾಗಿ, ವೈಶ್ಯರಿಗೆ ಹೊಲದಲ್ಲಿ ದುಡಿಯುವ ರೈತರಾಗಿ ದಾಸರಂತೆ ಕೆಲಸ ಮಾಡಬೇಕಾಯಿತು. ಅಂದರೆ ದ್ವಿಜರೆನಿಸಿಕೊಂಡ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗೆ ದಾಸರಾದ ಶೂದ್ರರಿಗೆ ಬೇರೆ ವೃತ್ತಿಯೇ ಇರಲಿಲ್ಲ.
ಸ್ವಸಾಮರ್ಥ್ಯ ಮತ್ತು ಪ್ರವೃತ್ತಿಗಳ ಆಧಾರದ ಮೇಲೆ ಮಾಡಿದ ಈ ವೃತ್ತಿಗಳ ವಿಂಗಡಣೆ ನಂತರ ವಂಶಪಾರಂಪರ್ಯವಾದಾಗ ಅನೇಕ ಅನಿಷ್ಟಗಳು ತಲೆದೋರಿದವು. ಬ್ರಾಹ್ಮಣರು ಯಜ್ಞಯಾಗಾದಿಗಳನ್ನು ಮಾಡುವುದೇ ಅತ್ಯಂತ ಪವಿತ್ರ ವೃತ್ತಿ ಎಂದು ಪರಿಗಣಿಸಿದರು. ಆದುದರಿಂದ ಅವುಗಳನ್ನು ಮಾಡುವ ತಮ್ಮನ್ನು ತಾವೇ ಸಾಮಾಜಿಕವಾಗಿ ಅತ್ಯಂತ ಶ್ರೇಷ್ಠರೆಂದು ಪರಿಗಣಿಸಿಕೊಂಡರು. ಕ್ಷತ್ರಿಯರು ಅನಂತರದವರಾದರು ಮತ್ತು ವೈಶ್ಯರು ಮೂರನೆಯವರಾದರು.
ಈ ವಿಂಗಡಣೆಯು ಕೇವಲ ಆರ್ಯರಿಗೆ ಮೀಸಲಾಗಿತ್ತು. ಆರ್ಯರಲ್ಲದ ಶೂದ್ರರಿಗೆ ದಸ್ಯು ಎಂಬ ಹಣೆಪಟ್ಟಿ ಕಟ್ಟಿ ಅವರಿಗೆ ಮೇಲ್ವರ್ಗದವರ ಸೇವೆಯೇ ಧರ್ಮವೆಂದು ಪರಿಗಣಿಸಲಾಯಿತು. ಮುಂದೆ ಮನು ತನ್ನ ಧರ್ಮಶಾಸ್ತ್ರದಲ್ಲಿ, ಪರಮಾತ್ಮನು ಶೂದ್ರರನ್ನು ಕೇವಲ ದ್ವಿಜರ ಸೇವೆಗಾಗಿ ಸೃಷ್ಟಿಸಿದ್ದಾನೆ ಎಂದೂ ಬ್ರಾಹ್ಮಣನು ಒಬ್ಬ ಶೂದ್ರನನ್ನು ಕೆಲಸದಿಂದ ತೆಗೆಯಬಹುದೇ ಹೊರತು ಅವನನ್ನು ಯಾರೂ ದಾಸ್ಯದಿಂದ ಬಿಡುಗಡೆ ಮಾಡಲಾರರು ಎಂದೂ ನಿರ್ಣಯಿಸಿದನು.
ಲಿಂಗಾಯತರನ್ನು ಹಿಂದೂಗಳೆಂದು ಕರೆಯಲಾಗದು. ಏಕೆಂದರೆ ಅವರು ಜನಿವಾರ ತೊಡುವುದಿಲ್ಲ. ಅಂದರೆ ಅವರು ಬ್ರಾಹ್ಮಣ, ಕ್ಷತ್ರಿಯ ಅಥವಾ ವೈಶ್ಯರಲ್ಲ. ಶೂದ್ರ ಅಥವಾ ಪಂಚಮರೂ ಅಲ್ಲ. ಏಕೆಂದರೆ ಶೂದ್ರರು ಮತ್ತು ಪಂಚಮರು ಸಂಸ್ಕೃತವನ್ನು ಕಲಿಯಬಾರದು, ಧರ್ಮವನ್ನು ಆಚರಿಸಬಾರದು, ತಪಸ್ಸನ್ನು ಮಾಡಬಾರದು ಎಂಬ ಮನುವಿನ ನಿಯಮಕ್ಕೆ ವಿರುದ್ಧವಾಗಿ ಲಿಂಗಾಯತರು ಬಸವಣ್ಣನವರ ಕಾಲದಿಂದಲೂ ಸಂಸ್ಕೃತದಲ್ಲಿ ಪುಸ್ತಕಗಳನ್ನು ಬರೆಯುತ್ತಾ, ಧರ್ಮವನ್ನು ಆಚರಿಸುತ್ತಾ, ಧ್ಯಾನ ಮಾಡುತ್ತಾ ಬಂದಿದ್ದಾರೆ. ಹಿಂದೂಗಳು ಬ್ರಾಹ್ಮಣ ಪುರೋಹಿತರನ್ನು ನೇಮಿಸಿಕೊಂಡಂತೆ, ಲಿಂಗಾಯತರು ಬ್ರಾಹ್ಮಣ ಪುರೋಹಿತರನ್ನು ನೇಮಿಸಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಜಂಗಮರು ಎಂಬ ತಮ್ಮ ಧರ್ಮದವರೇ ಆದ ಪುರೋಹಿತರಿದ್ದಾರೆ. ಹಿಂದೂಗಳಲ್ಲಿ ಅನೇಕರು ಮಾಂಸಾಹಾರಿಗಳು, ಲಿಂಗಾಯತರು ಸಸ್ಯಾಹಾರಿಗಳು.
ಬಸವಣ್ಣ ಮತ್ತು ಅವರ ಅನುಯಾಯಿಗಳು ಎಲ್ಲಾ ಲಿಂಗಾಯತರನ್ನು- ಅವರ ವೃತ್ತಿ ಯಾವುದೇ ಇರಲಿ – ಕುಲಜರೆಂದು ಶ್ರೇಷ್ಠರೆಂದು ಪರಿಗಣಿಸಿದರು. ಅವರ ಪ್ರಕಾರ ಒಬ್ಬ ಮನುಷ್ಯ ಶ್ರೇಷ್ಠ ಅಥವಾ ಅಧಮನಾಗುವುದು ಧಾರ್ಮಿಕತೆ ಅಥವಾ ಅಧಾರ್ಮಿಕತೆಯಿಂದಲೇ ಹೊರತು, ಜಾತಿ ಅಥವಾ ವೃತ್ತಿಯಿಂದಲ್ಲ. ಈ ಕಾರಣದಿಂದಾಗಿ ಅವರು ಚನ್ನಯ್ಯ, ಕಕ್ಕಯ್ಯ, ಕಿನ್ನರಯ್ಯ, ಮುಂತಾದ ಕೆಳಜಾತಿಯ ಶ್ರೇಷ್ಠ ಶಿವಭಕ್ತರನ್ನು ಹೊಗಳಿದರು ಮತ್ತು ಜಾತಿತಾರತಮ್ಯ ಮಾಡುವ ಮತ್ತು ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಕೊಲ್ಲುವ ಬ್ರಾಹ್ಮಣರನ್ನು ನಿಂದಿಸಿದರು.
ಲಿಂಗಾಯತರೂ ಜಾತಿತಾರತಮ್ಯ ಮಾಡುತ್ತಾರೆ ಎಂದೂ ಜಂಗಮ, ಬಣಜಿಗ, ಗಾಣಿಗ, ಕುಂಬಾರ ಮತ್ತು ಇತರ ಜಾತಿ-ಜಾತಿಗಳಲ್ಲಿ ಸಹ ಭೋಜನ ಮತ್ತು ಲಗ್ನ ಸಂಬಂಧ ಇಲ್ಲ ಎಂದೂ, ಆದುದರಿಂದ ಅವರು ಹಿಂದೂಗಳಿಗಿಂತ ಭಿನ್ನವೇನಲ್ಲ ಎಂದು ಕೆಲವರು ಆಕ್ಷೇಪಿಸಬಹುದು. ದುರದೃಷ್ಟವಶಾತ್ ಈ ಆಕ್ಷೇಪಣೆ ಸತ್ಯವಾದುದು. ಲಿಂಗಾಯತರು ಮಾಡುವ ಈ ಜಾತಿ ಭೇದ ಬಸವಣ್ಣನವರು ಬೋಧಿಸಿದ ದಾರ್ಶನಿಕ ಲಿಂಗಾಯತ ಧರ್ಮಕ್ಕೆ ವಿರೋಧವಾದುದು. ಈ ತರಹದ ಉದಾಹರಣೆಗಳು ಇತರ ಧರ್ಮಗಳಲ್ಲಿಯೂ ಸಿಗುತ್ತವೆ. ಉದಾಹರಣೆಗೆ, ಬ್ರಾಹ್ಮಣ ಕ್ರೈಸ್ತರು ಮತ್ತು ಅಸ್ಪೃಶ್ಯ ಕ್ರೈಸ್ತರು ಎಂದು ಭೇದ ಮಾಡುವ ಕ್ರೈಸ್ತರು ಯೇಸು ಬೋಧಿಸಿದ ಕ್ರೈಸ್ತ ಧರ್ಮಕ್ಕೆ ವಿರುದ್ಧವಾಗಿದ್ದಾರೆ. ಆದರೆ ಹಾಗೆ ಮಾಡುವವರು ಕ್ರೈಸ್ತರಾಗಿಯೇ ಇರುತ್ತಾರೆ. ಅದೇ ರೀತಿ ಜಾತಿಭೇದ ಮಾಡುವ ಲಿಂಗಾಯತರು, ಇತರ ಹಿಂದು ಪದ್ಧತಿಗಳನ್ನು ಅನುಸರಿಸುವ ಲಿಂಗಾಯತರು ಲಿಂಗಾಯತರಾಗಿಯೇ ಮುಂದುವರಿಯುತ್ತಾರೆ. ನಾವು ಸಿದ್ಧಾಂತಗಳನ್ನು ಪರಿಗಣಿಸಬೇಕೇ ಹೊರತು ಅವುಗಳ ಆಚರಣೆಯನ್ನಲ್ಲ. ಮನು ನಂತರದ ಹಿಂದೂ ಧರ್ಮ ಜಾತಿಭೇದವನ್ನು ನಿರಾಕರಿಸುವುದಿಲ್ಲ. ವಚನಕಾರರು ಜಾತಿಭೇದವನ್ನು ಎಂದೂ ಬೆಂಬಲಿಸಿಲ್ಲ. ಬಸವಣ್ಣ ಬೋಧಿಸಿದ ಲಿಂಗಾಯತ ಧರ್ಮದ ಎಲ್ಲ ಸಿದ್ಧಾಂತಗಳನ್ನು ಆಚರಿಸುವ ಒಬ್ಬ ವ್ಯಕ್ತಿಯೂ ಇಂದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ‘ನಿಜವಾದ ಕ್ರೈಸ್ತನು ಒಬ್ಬನೇ ಒಬ್ಬ, ಅವನು ಶಿಲುಬೆಯ ಮೇಲೆ ತೀರಿಕೊಂಡನು’ ಎಂಬ ನುಡಿಯನ್ನು ಇಲ್ಲಿ ಸ್ಮರಿಸಬಹುದು.
ಇಲ್ಲಿ 20ನೇ ಶತಮಾನದಲ್ಲಿ ನಡೆದ ಎರಡು ದುರಾದೃಷ್ಟ ಪ್ರಸಂಗಗಳನ್ನು ಪ್ರಸ್ತಾಪಿಸುವುದು ಸೂಕ್ತ.
(ಅ). 20ನೇ ಶತಮಾನದ ಆದಿ ಭಾಗದಲ್ಲಿ ದೇವಸ್ಥಾನಗಳಲ್ಲಿ ಲಿಂಗಗಳ ಅರ್ಚಕರಾಗುವ ಅಧಿಕಾರವನ್ನು ಸ್ಥಾಪಿಸುವ ಸಲುವಾಗಿ ಕೆಲವು ಲಿಂಗಾಯತರು ತಾವು ಲಿಂಗೀಬ್ರಾಹ್ಮಣರೆಂದು ಕೋರ್ಟಿನಲ್ಲಿ ವಾದಿಸಿದರು. ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಕೆಲವು ಸುಳ್ಳು ಸಂಸ್ಕೃತ ಗ್ರಂಥಗಳನ್ನು ಸೃಷ್ಟಿಸಿದರು. ಅಷ್ಟೇ ಅಲ್ಲ, ತಾವು ಲಿಂಗೀಬ್ರಾಹ್ಮಣರೆಂದೂ ವೈದಿಕ ಬ್ರಾಹ್ಮಣರಂತೆ ತಮಗೂ ದೇವಸ್ಥಾನಗಳಲ್ಲಿ ಅರ್ಚಕರಾಗುವ ಅಧಿಕಾರವಿದೆ ಎಂದೂ ವಾದಿಸಿ ಗೆದ್ದರು.
(ಬ). 1990 ಆದಿ ಭಾಗದಲ್ಲಿ ಕೆಲವು ಪಂಚಪೀಠದ ಸ್ವಾಮಿಗಳು ಆಗಿನ ರಾಷ್ಟ್ರಪತಿಗಳಿಗೆ ಒಂದು ಪತ್ರ ಬರೆದು ಅದರಲ್ಲಿ ಜಂಗಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿಕೊಂಡರು. ಇವೆರಡೂ ಪ್ರಸಂಗಗಳು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ವಿರುದ್ಧವಾದವು ಎಂಬುವುದರಲ್ಲಿ ಸಂಶಯವಿಲ್ಲ.
5. ವೃತ್ತಿ ತಾರತಮ್ಯ: ವೈದಿಕ ಸಂಪ್ರದಾಯವು ವೃತ್ತಿಯನ್ನು ಜಾತಿಯೊಂದಿಗೆ ಸಮೀಕರಿಸಿತು. ಅಂದರೆ, ಎಲ್ಲರೂ ತಮ್ಮ ಜಾತಿ ಅಥವಾ ಕುಲದವರು ಮಾಡುತ್ತಿದ್ದ ವೃತ್ತಿಗೇ ಅಂಟಿಕೊಂಡಿರಬೇಕು. ಈ ಆಧಾರದ ಮೇಲೆ ಬ್ರಾಹ್ಮಣರು ಮಾಡುತ್ತಿದ್ದ ಯಜ್ಞ ಯಾಗಾದಿಗಳು, ವೇದಾಧ್ಯಯನ ಮತ್ತು ವೇದಾಧ್ಯಾಪನ, ಅತ್ಯಂತ ಶ್ರೇಷ್ಠ ವೃತ್ತಿಗಳೆಂದು, ಅವುಗಳನ್ನು ಮಾಡುತ್ತಿದ್ದ ಬ್ರಾಹ್ಮಣರು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಜಾತಿಯವರೆಂದು ಪರಿಗಣಿಸಲಾಯಿತು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಆದೇಶ ಹೀಗಿದೆ: ಒಬ್ಬ ಬೇರೆಯವರ ಕಸುಬನ್ನು ಹೆಚ್ಚು ಕೌಶಲ್ಯದಿಂದ ಮಾಡಬಲ್ಲವನಾದರೂ ಆತ ಹಾಗೆ ಮಾಡಕೂಡದು. ಬಸವಣ್ಣ ತಮ್ಮ ಅನುಯಾಯಿಗಳಿಗೆ ಅವರವರ ವೃತ್ತಿಗಳನ್ನು ಬದಲಾಯಿಸಿಕೊಳ್ಳಲು ಹೇಳಲಿಲ್ಲ, ಅದರ ಬದಲು, ಎಲ್ಲ ವೃತ್ತಿಗಳನ್ನು ಸಮಾನವೆಂದು ಪರಿಗಣಿಸಿದರು. ಉರಿಲಿಂಗಪೆದ್ದಿಯ ಪ್ರಕಾರ, ದೊಂಬನೊಬ್ಬ ಗಣೆಯ ಮೇಲೆ ದೊಂಬರಾಟವಾಡುವುದು, ಬ್ರಾಹ್ಮಣನೊಬ್ಬ ಯಜ್ಞ ಯಾಗಾದಿಗಳನ್ನು ಮಾಡುವುದು, ಎರಡೂ ಹೊಟ್ಟೆಯ ಸಲುವಾಗಿಯೇ ಆಗಿರುವಾಗ ಒಂದು ಕನಿಷ್ಠ, ಮತ್ತೊಂದು ಶ್ರೇಷ್ಠ ಎನ್ನುವುದು ನಿರಾಧಾರಿತ ಮತ್ತು ಅವೈಚಾರಿಕ. ಮತ್ತೆ ಕೆಲವು ಶರಣರು ದಾಸೋಹ ಮಾಡುವ ಉದ್ದೇಶದಿಂದ ಮಾಡಿದ ಯಾವುದೇ ವೃತ್ತಿ ಅಥವಾ ಕಾಯಕ ಲಿಂಗಾರ್ಚನೆ ಆಗುತ್ತದೆ ಎನ್ನುವ ಮೂಲಕ ಎಲ್ಲಾ ಪ್ರಾಮಾಣಿಕ ವೃತ್ತಿಗಳನ್ನು ಭಕ್ತಿಯಿಂದ ಕಂಡರು.
6. ಲಿಂಗ ತಾರತಮ್ಯ: ವೈದಿಕ ಸಂಪ್ರದಾಯವು ಸ್ತ್ರೀಯರನ್ನು ಕಡೆಗಣಿಸಿತ್ತು. ಬ್ರಹ್ಮಸೂತ್ರವು ಶೂದ್ರರಿಗೆ ಉಪನಯನ ಸಂಸ್ಕಾರವಿಲ್ಲ ಎಂಬ ಕಾರಣಕ್ಕೆ ಅವರಿಗೆ ವೇದಾಧ್ಯಯನ ನಿರಾಕರಿಸಿತು. ವೇದಾಧ್ಯಯನ ಮೋಕ್ಷಕ್ಕೆ ಆವಶ್ಯಕವಾದದರಿಂದ ಶೂದ್ರರಿಗೆ ಆಧ್ಯಾತ್ಮಿಕ ಸಾಧನೆಯನ್ನೂ ಮೋಕ್ಷವನ್ನೂ ನಿರಾಕರಿಸಿದಂತೆಯೇ ಆಯಿತು. ಸ್ತ್ರೀಯರು ಜನಿವಾರ ತೊಡಬಾರದು ಅಥವಾ ಯಜ್ಞಯಾಗಾದಿಗಳನ್ನು ಮಾಡಬಾರದು ಎಂಬುದಕ್ಕೆ ಶಾಸ್ತ್ರಗಳ ಆಧಾರವಿಲ್ಲದಿದ್ದರೂ, ಪ್ರತಿ ತಿಂಗಳು ಮುಟ್ಟಾಗುತ್ತಾರೆಂಬ ಕಾರಣಕ್ಕೆ ಅವರನ್ನು ಎರಡಕ್ಕೂ ಅನರ್ಹರೆಂದು ಪರಿಗಣಿಸಲಾಗಿದ್ದುದು ಚಾರಿತ್ರಿಕ ಸತ್ಯ. ದುರದೃಷ್ಟವಶಾತ್, ಜೈನರೂ ಸ್ತ್ರೀಯರು ಮೋಕ್ಷಕ್ಕೆ ಅನರ್ಹರೆಂದೂ ಅವರು ಮೋಕ್ಷಕ್ಕೆ ಅರ್ಹರಾಗಬೇಕೆಂದರೆ ಮುಂದಿನ ಜನ್ಮದಲ್ಲಿ ಗಂಡಸರಾಗಿ ಹುಟ್ಟಬೇಕೆಂದೂ ಅಭಿಪ್ರಾಯ ಉಳ್ಳವರಾಗಿದ್ದರು.
ಒಬ್ಬ ಸ್ತ್ರೀಯನ್ನು ಮೋಕ್ಷಕ್ಕೂ, ವೇದಾಧ್ಯಯನಕ್ಕೂ, ಯಜ್ಞಯಾಗಾದಿಗಳನ್ನು ಆಚರಿಸುವುದಕ್ಕೂ ಅನರ್ಹಗೊಳಿಸುವ ರಜಸ್ಸೂತಕವನ್ನೇ ಬಸವಣ್ಣ ಧಿಕ್ಕರಿಸಿದರು. ರಜಸ್ಸೂತಕವನ್ನೊಳಗೊಂಡ ಪಂಚಸೂತಕಗಳನ್ನು ಆಚರಿಸಬಾರದೆಂದರು. ಸ್ತ್ರೀಯರೂ ಮೋಕ್ಷ ಪಡೆಯಲು ಅರ್ಹರಾಗುವಂತೆ ಅವರಿಗೂ ಲಿಂಗವನ್ನು ಕರುಣಿಸಿದರಲ್ಲದೆ, ರಜಸ್ವಲೆಯಾದವರಿಗೂ ಲಿಂಗಪೂಜೆಯನ್ನು ಕಡ್ಡಾಯಗೊಳಿಸಿದರು.
7. ಆಶ್ರಮ ಧರ್ಮ: ವೈದಿಕ ಸಂಪ್ರದಾಯವು ಮಾನವನ ಜೀವನವನ್ನು ನಾಲ್ಕು ಹಂತ ಅಥವಾ ಆಶ್ರಮಗಳಾಗಿ ವಿಂಗಡಿಸಿದೆ. ಅವೆಂದರೆ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಮೊದಲನೇ ಆಶ್ರಮದಲ್ಲಿ ಹುಡುಗರು ವೇದ, ಶಾಸ್ತ್ರ, ಇತ್ಯಾದಿಗಳನ್ನೂ ತಮ್ಮ ವರ್ಣಗಳ ವೃತ್ತಿಗಳನ್ನೂ ಕಲಿಯಬೇಕಾಗಿತ್ತು. ಗೃಹಸ್ಥಾಶ್ರಮದಲ್ಲಿ ಮದುವೆಯಾಗಿ ಕುಟುಂಬವನ್ನು ಸಾಕಬೇಕಾಗಿತ್ತು; ವಾನಪ್ರಸ್ಥಾಶ್ರಮದಲ್ಲಿ ತಮ್ಮ ಎಲ್ಲಾ ಹೊಣೆಗಳನ್ನು ಗಂಡು ಮಕ್ಕಳಿಗೆ ವಹಿಸಿ, ಕಾಡಿನಲ್ಲಿ ವಾಸಿಸಬೇಕಾಗಿತ್ತು; ಸನ್ಯಾಸಾಶ್ರಮದಲ್ಲಿ ವನವಾಸವನ್ನು ಮುಂದುವರಿಸುತ್ತಾ, ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಎಲ್ಲಾ ಲೌಕಿಕ ವ್ಯವಹಾರಗಳನ್ನು ತ್ಯಜಿಸಬೇಕಾಗಿತ್ತು. ವೈದಿಕ ಧರ್ಮದ ಪ್ರಕಾರ ಸನ್ಯಾಸಾಶ್ರಮ ಉಳಿದ ಎಲ್ಲಾ ಆಶ್ರಮಗಳಿಗಿಂತ ಶ್ರೇಷ್ಠವಾದದ್ದು. ಆದರೆ ಈ ಆಶ್ರಮ ಪದ್ಧತಿಯು ಕೇವಲ ದ್ವಿಜರಿಗೆ ಮಾತ್ರ ಅನ್ವಯವಾಗುತ್ತಿತ್ತು, ಶೂದ್ರರಿಗೂ ಪಂಚಮರಿಗೂ ಅಲ್ಲ ಎಂಬುದು ಗಮನಾರ್ಹ ವಿಷಯ. ಒಬ್ಬ ಶೂದ್ರ ತಪಸ್ಸು ಮಾಡುತ್ತಿದ್ದ ಎಂಬ ಕಾರಣಕ್ಕೆ ಶ್ರೀರಾಮನು ಅವನನ್ನು ಕೊಂದನಂತೆ; ಏಕೆಂದರೆ ತಪಸ್ಸು ಮಾಡುವುದು ದ್ವಿಜರ ಧರ್ಮವೇ ಹೊರತು ಶೂದ್ರ ಅಥವಾ ಪಂಚಮರ ಧರ್ಮವಲ್ಲ.
ಲಿಂಗಾಯತ ಧರ್ಮವು ಈ ಎರಡು ಸಿದ್ಧಾಂತಗಳನ್ನೂ ತಿರಸ್ಕರಿಸಿತು. ಇಲ್ಲಿ ವಿರಕ್ತ ಜೀವನ ನಡೆಸಲು ಯಾರೂ ಕಾಡಿಗೆ ಹೋಗಬೇಕಾಗಿಲ್ಲ. ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಳನ್ನು ನಿಭಾಯಿಸುತ್ತಲೇ, ಸಮಾಜದಲ್ಲಿದ್ದುಕೊಂಡೇ, ಆಧ್ಯಾತ್ಮಿಕ ಗುರಿ ಮುಟ್ಟಬಹುದು. ಸಿದ್ಧರಾಮನ ಹೊರತು ಬಸವಣ್ಣನವರ ಎಲ್ಲ ಒಡನಾಡಿಗಳು ಗೃಹಸ್ಥರೇ ಆಗಿದ್ದರು. ಹೆಣ್ಣು ಮಾಯೆಯಲ್ಲ, ಆಧ್ಯಾತ್ಮಿಕ ಜೀವನಕ್ಕೆ ಆಕೆ ಅಡ್ಡಿಯಲ್ಲ, ಎಂಬ ಸಿದ್ಧಾಂತಕ್ಕೆ ಅದು ಅನುಗುಣವಾಗಿತ್ತು. ಗಜೇಶ ಮಸಣಯ್ಯನ ಪುಣ್ಯಸ್ತ್ರೀ “ಹೆಣ್ಣ ಬಿಟ್ಟು ಲಿಂಗವನ್ನು ಒಲಿಸಬೇಕೆಂಬರು; ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?” ಎಂದು ಕೇಳುವ ಧೈರ್ಯ ಮಾಡುತ್ತಾಳೆ. ಅದೇ ರೀತಿ ಶಿವನನ್ನು ಒಲಿಸಲು ಇಂದ್ರಿಯ ಸುಖವನ್ನೂ ಪ್ರಪಂಚವನ್ನೂ ತಿರಸ್ಕರಿಸಬೇಕೆಂಬುದನ್ನು ಆಕೆ ತಿರಸ್ಕರಿಸುತ್ತಾಳೆ. ಪರಸತಿಯರನ್ನು ನೋಡಬಾರದೆಂಬುದು ಸರಿ; ಸ್ವಸತಿಯನ್ನು ಏಕೆ ತ್ಯಜಿಸಬೇಕು? ಬಸವಣ್ಣನವರ ಪ್ರಕಾರ, ಇಂದ್ರಿಯ ನಿಗ್ರಹ ಮಾಡಿದರೆ, ಮಾನಸಿಕ ಮತ್ತು ದೈಹಿಕ ದೋಷಗಳು ಉಂಟಾಗುತ್ತವೆ. ಪದೇ ಪದೇ ನಮ್ಮ ಮನಸ್ಸನ್ನು ಇಂದ್ರಿಯಗಳು ಕಾಡುತ್ತವೆ; ದಾಂಪತ್ಯ ಸುಖವನ್ನು ಅನುಭವಿಸಿದರೂ ಶ್ರೇಷ್ಠ ಶಿವಭಕ್ತರಾಗಿರಲು ಸಾಧ್ಯ ಎಂಬುದಕ್ಕೆ ಅವರು ಸಿರಿಯಾಳ ಚಂಗಳೆಯರ ಉದಾಹರಣೆಯನ್ನು ಕೊಡುತ್ತಾರೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ತನ್ನ ಪಾಲಿಗೆ ಬಂದುದೆಲ್ಲವನ್ನೂ ಲಿಂಗ ಪ್ರಸಾದ ಎಂದು ತಿಳಿದು ಅನುಭವಿಸಬೇಕು ಎಂಬುದು ಬಸವಣ್ಣನವರ ಉಪದೇಶ. ಅವರ ನಿಲವನ್ನು ಅನೈತಿಕ ಸುಖವಾದಕ್ಕೂ ಸಂಪೂರ್ಣ ಸನ್ಯಾಸಕ್ಕೂ ನಡುವಿನ ಸುವರ್ಣ ಮಾಧ್ಯಮ ಎನ್ನಲಡ್ಡಿಯಿಲ್ಲ.
ಬಸವಣ್ಣನವರ ಅನುಯಾಯಿಗಳಲ್ಲಿ ಅನೇಕರು ಶೂದ್ರರೂ ಪಂಚಮರೂ ಇದ್ದರು. ಅವರೆಲ್ಲ ಲಿಂಗಾಯತರಾಗಿ ಧರ್ಮಾಂತರಗೊಂಡಿದ್ದರಲ್ಲದೆ, ಅವರಿಗೆ ಇಷ್ಟಲಿಂಗ ಪೂಜೆಯನಂತರ ಧ್ಯಾನ ಮಾಡುವಂತೆ ಉಪದೇಶಿಸಲಾಗಿತ್ತು.
8. ಗುಡಿ ಪದ್ಧತಿ ಮತ್ತು ಅರ್ಚಕ ಪದ್ಧತಿ: ಹಿಂದೂ ಧರ್ಮದಲ್ಲಿ ಯಜ್ಞಯಾಗಾದಿಗಳ ಆಚರಣೆಯೂ ಅಲ್ಲದೆ, ಗುಡಿಯ ವಿಗ್ರಹಗಳನ್ನು ಪೂಜಿಸಲು ವಿಶಿಷ್ಟ ಜಾತಿಯ ಅರ್ಚಕರಿರಬೇಕೆಂಬ ನಿಯಮವೂ ಇದೆ. ಯಜ್ಞಯಾಗಾದಿಗಳನ್ನು ಆಚರಿಸುವ ಕ್ರಮ ಮತ್ತು ವಿಧಿಗಳು, ಅವುಗಳಿಗೆ ಸಂಬಂಧಿಸಿದ ಮಂತ್ರಗಳು ಒಬ್ಬ ರಾಜನಿಗೆ ಗೊತ್ತಿದ್ದರೂ ಅವನಿಗೆ ಅವನ್ನು ಆಚರಿಸುವ ಅಧಿಕಾರವಿಲ್ಲ, ರಾಜಪರೋಹಿತ ಮಾತ್ರ ಮಾಡಬೇಕು. ಯಜ್ಞಯಾಗಾದಿಗಳನ್ನೂ ಇತರ ವೈದಿಕ ಕರ್ಮಗಳನ್ನೂ ಮಾಡುವುದರಿಂದ ಬ್ರಾಹ್ಮಣ ಪುರೋಹಿತರಿಗೆ ಆರ್ಥಿಕ ಮತ್ತು ಇತರ ಲಾಭಗಳು ಇದ್ದುದರಿಂದ ಇತರರಿಗೆ ಅವುಗಳನ್ನು ಮಾಡಲು ಅವಕಾಶ ಕೊಡಲಿಲ್ಲ. ಹಾಗೆಯೇ ವಿಶಿಷ್ಟ ಜಾತಿಯ ಅರ್ಚಕ ಮಾತ್ರ ದೇವಸ್ಥಾನಗಳಲ್ಲಿ ವಿಗ್ರಹಗಳನ್ನು ಪೂಜಿಸಬೇಕೆಂಬ ನಿಯಮವು ಜಾರಿಯಲ್ಲಿತ್ತು. ತಾವೇ ಬರೆದ ಶಾಸ್ತ್ರಗಳ ಆಧಾರವನ್ನು ನೀಡಿ ಅವರು ತಮ್ಮ ನಿಲವನ್ನು ಸಮರ್ಥಿಸಿಕೊಂಡರು. ಬಸವಣ್ಣನವರು ಇದರಲ್ಲಿ ಎರಡು ದೋಷಗಳನ್ನು ಕಂಡರು. (ಅ). ತನ್ನ ಭಕ್ತಿಯನ್ನು ವ್ಯಕ್ತಪಡಿಸಲು ಆಶಿಸುವ ಭಕ್ತನಿಗೆ ದೈವವನ್ನು ಪೂಜಿಸುವ ಅವಕಾಶವಿಲ್ಲ. ಆದರೆ ಭಕ್ತಿಭಾವವಿಲ್ಲದೆ ಪೂಜಿಸುವ ಅಧಿಕಾರ ಅರ್ಚಕನಿಗಿದೆ. ಬಸವಣ್ಣನವರ ಭಾಷೆಯಲ್ಲಿ ಹೇಳಬೇಕೆಂದರೆ: ಇದು, ಹಸಿದವನು ತನ್ನ ಪರವಾಗಿ ಉಣ್ಣಲು ಮತ್ತೊಬ್ಬನಿಗೆ ಹೇಳಿದಂತೆ. ಅರ್ಚಕ ಮೂರ್ತಿಯನ್ನು ಪೂಜಿಸುವಾಗ ಭಕ್ತ ದೂರದಲ್ಲಿ ನಿಂತು ಅದನ್ನು ನೋಡಬೇಕು. ಬಸವಣ್ಣನವರು ಭಕ್ತಿಯನ್ನು ವ್ಯಕ್ತಪಡಿಸಬೇಕೆನ್ನುವವರು ಗುಡಿಗಳಿಗೆ ಹೋಗದೆ ಮನೆಯಲ್ಲಿಯೇ ತಮ್ಮ ತಮ್ಮ ಇಷ್ಟಲಿಂಗವನ್ನು ತಮಗೆ ಅನುಕೂಲವಾದಾಗ ಪೂಜಿಸಬಹುದೆಂದರು. ನಾವೇ ಪೂಜೆ ಮಾಡಿ ಪಡೆಯುವ ಸಮಾಧಾನ ಇತರರು ಮಾಡುವ ಪೂಜೆಯನ್ನು ನೋಡಿ ಪಡೆಯುವ ಸಮಾಧಾನಕ್ಕಿಂತ ಹೆಚ್ಚಿನದೆಂಬುದನ್ನು ಸುಲಭವಾಗಿ ಮನಗಾಣಬಹುದು. (ಬ). ಯಜ್ಞಯಾಗಾದಿಗಳನ್ನು ಆಚರಿಸುವಲ್ಲಿ ಸ್ವಾರ್ಥ ಕಾಮನೆ ಇರುವಂತೆ ದೇವಸ್ಥಾನಗಳಲ್ಲಿ ವ್ಯಕ್ತಪಡಿಸುವ ಭಕ್ತಿಯಲ್ಲಿ ದ್ವೈತ ಭಾವವಿರುತ್ತದೆ. ಅರ್ಚಕ ನಿಜ ಭಕ್ತಿಯಿಂದಲೇ ಪೂಜಿಸಿದರೂ, ಅವನಿಗೆ ತಾನು ದೈವದಿಂದ ಭಿನ್ನವೆಂಬುದು ಖಚಿತವಾಗಿ ಗೊತ್ತು; ಅದೇ ರೀತಿ ದೂರದಲ್ಲಿ ನಿಂತು ಅರ್ಚಕನ ಪೂಜೆಯನ್ನು ನೋಡುವ ಭಕ್ತನಿಗೂ ಗೊತ್ತು, ತಾನು ದೈವದಿಂದ ಭಿನ್ನ ಎಂದು. ಬಸವಾದಿ ಶರಣರ ಪ್ರಕಾರ ಭಕ್ತನೇ ದೈವ, ದೇಹವೇ ದೇಗುಲ. ಇದನ್ನು ಕಡೆಗಣಿಸಿ ದೈವ ಹೊರಗಿದೆ ಎಂದು ಪೂಜಿಸುವವನು ಲಿಂಗಾಯತನೇ ಅಲ್ಲ.
9. ತೀರ್ಥಯಾತ್ರೆ: ಲಿಂಗಾಯತರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಲಿಂಗ, ಅವರ ದೇಹವೇ ದೇಗುಲವಾಗಿರುವಾಗ, ಹೊರಗಿನ ಯಾವ ದೈವವನ್ನೂ ಪೂಜಿಸಬೇಕಾಗಿಲ್ಲ, ತೀರ್ಥಯಾತ್ರೆ ಮಾಡಬೇಕಾಗಿಲ್ಲ. ತೀರ್ಥಕ್ಷೇತ್ರಗಳಲ್ಲಿ ನದಿ ಮತ್ತು ಕೊಳಗಳು ಪವಿತ್ರವೆಂದು ಸ್ನಾನ ಮಾಡಿದವರು ಪವಿತ್ರರಾಗುತ್ತಾರೆಂದು ಹಿಂದುಗಳು ನಂಬುತ್ತಾರೆ. ಸಿದ್ಧರಾಮನು ಈ ನಂಬಿಕೆಯನ್ನು ಹೀಗೆ ವಿಡಂಬಿಸುತ್ತಾನೆ: ಗಂಗೆಯು ಸಾವಿರಾರು ವರ್ಷಗಳಿಂದ ಸಾವಿರಾರು ಗಾವುದ ದೂರ ಹರಿಯುತ್ತದೆ; ಅದರಲ್ಲಿ ಅಸಂಖ್ಯಾತ ಜಲಜೀವಿಗಳಿದ್ದಾವೆ. ಅವೆಲ್ಲವೂ ಗಂಗಾಸ್ನಾನ ಮಾಡಿ, ದೇವಲೋಕಕ್ಕೆ ಹೋಗುತ್ತವೆ ಎಂಬುದು ನಿಜವಾದರೆ, ದೇವಲೋಕವು ದೇವರುಗಳಿಗೆ ಮಾತ್ರ ಎಂಬುದು ಸುಳ್ಳು.
10. ಪಂಚಸೂತಕ: ಸಾಂಪ್ರದಾಯಿಕ ಹಿಂದೂಗಳು ಐದು ಸೂತಕಗಳನ್ನು ಬಹಳ ಶ್ರದ್ಧೆಯಿಂದ ಅನುಸರಿಸುತ್ತಾರೆ. ಅವೆಂದರೆ, ಜನನಸೂತಕ, ಕುಲಸೂತಕ, ರಜಸ್ಸೂತಕ, ಪ್ರೇತಸೂತಕ, ಎಂಜಲುಸೂತಕ. ಜನನಸೂತಕ: ಬಾಣಂತಿಯಾದವಳು ಅಶುದ್ಧಳೆಂದೂ ಆಕೆ ದೇವರ ಮೂರ್ತಿ, ಗಂಟೆ, ಪಂಚಪಾತ್ರೆ, ಜಪಸರ ಮುಂತಾದ ಪೂಜಾಸಾಮಗ್ರಿಗಳನ್ನು ಮುಟ್ಟಬಾರದೆಂಬ ಕಟ್ಟಳೆಯಿದೆ. ಇದಕ್ಕೆ ಸಂಬಂಧಿಸಿದ ಸ್ನಾನ ಇತ್ಯಾದಿ ಕರ್ಮಗಳನ್ನು ಆಚರಿಸಿದ ನಂತರವೇ ಆಕೆ ಇತರರಂತೆ ಶುದ್ಧವಾಗುತ್ತಾಳೆ. ಕುಲಸೂತಕ: ಉಚ್ಚ ಕುಲದವರು ಕೆಳಜಾತಿಯವರನ್ನು ಮುಟ್ಟಿದರೆ ಅದು ಕುಲಸೂತಕ. ಅವರು ಮೊದಲಿನಂತೆ ಶುದ್ಧವಾಗ ಬೇಕಾದರೆ ಸ್ನಾನ, ದಾನ, ಪ್ರಾಯಶ್ಚಿತ್ತಕ್ಕೆ ಸಂಬಂಧಿಸಿದ ಇತರ ಕರ್ಮಗಳನ್ನು ಮಾಡಬೇಕಾಗುತ್ತದೆ. ಅನುಲೋಮ ವಿಲೋಮ ವಿವಾಹಗಳನ್ನೂ ಕೆಳಜಾತಿಯವರೊಡನೆ ಸಹಭೋಜನವನ್ನೂ ಅವರು ಬಹಳ ಕಟ್ಟುನಿಟ್ಟಾಗಿ ತಡೆಯುತ್ತಾರೆ. ಬಸವಣ್ಣನವರು ಜಾತಿತಾರತಮ್ಯವನ್ನು ಸಾರಾಸಗಟಾಗಿ ನಿರಾಕರಿಸಿದ್ದುದರಿಂದ, ಅವರು ಎಲ್ಲ ಶೂದ್ರ ಮತ್ತು ಪಂಚಮರೊಡನೆ ಯಾವ ಸಂಕೋಚವಿಲ್ಲದೆಯೇ ಬೆರೆಯುತ್ತಿದ್ದರು. ರಜಸಸ್ಸೂತಕ: ರಜಸ್ವಲೆಯಾದವಳಿಗೆ ರಜಸ್ಸೂತಕವೆಂಬ ಅಶುದ್ಧಿ ಅಂಟಿಕೊಳ್ಳುತ್ತದೆ. ಮುಟ್ಟಾದ ದಿನದಿಂದ ಮೂರು ದಿನಗಳವರೆಗೆ ಆಕೆ ಮನೆ ಒಳಗೆ ಬರುವಂತಿಲ್ಲ, ಪೂಜಾ ಸಾಮಗ್ರಿ ಮುಟ್ಟುವಂತಿಲ್ಲ, ಅಡಿಗೆ ಮಾಡುವಂತಿಲ್ಲ, ಇತರರನ್ನು ಮುಟ್ಟುವಂತಿಲ್ಲ; ಮನೆ ಹೊರಗಿನ ಅಂಗಳದಲ್ಲಿರಬೇಕು. ಚನ್ನಬಸವಣ್ಣ ಲಿಂಗಾಯತ ಭಕ್ತಳು ಇಷ್ಟಲಿಂಗ ಧರಿಸಿರುವುದರಿಂದ ರಜಸ್ವಲೆಯಾದರೂ ಅಶುದ್ಧಳಾಗುವುದಿಲ್ಲ ಎನ್ನುತ್ತಾನೆ. ಪ್ರೇತಸೂತಕ: ಮನೆಯಲ್ಲಿ ಶವವಿದ್ದರೆ ಆ ಮನೆಯವರೆಲ್ಲ ಅಶುದ್ಧರು. ಅವರೂ ಅವರ ಹತ್ತಿರದ ಸಂಬಂಧಿಕರೂ ಶವದ ಅಂತಿಮ ಸಂಸ್ಕಾರವಾಗುವವರೆಗೂ ಊಟ ನೀರು ಸೇವಿಸುವಂತಿಲ್ಲ, ಇತರರ ಮನೆಗೆ ಹೋಗುವಂತಿಲ್ಲ. ಶವ ದಹನದ ನಂತರವೇ ಸ್ನಾನ ಮಾಡಿ ಶುದ್ಧರಾಗುತ್ತಾರೆ. ಎಂಜಲುಸೂತಕ: ವಾಸ್ತವವಾಗಿ ಎಂಜಲು ಎಂಬ ಕನ್ನಡ ಪದ ಬಾಯಿಯಲ್ಲಿನ ಲಾಲಾರಸಕ್ಕೆ ಅನ್ವಯಿಸುತ್ತದೆ. ಆದರೆ ತುಟಿಗೆ ಸೋಕಿದ ನೀರು, ಹಾಲು, ಹಣ್ಣು, ಆಹಾರ ಪದಾರ್ಥ ಎಲ್ಲವೂ ಎಂಜಲು ಎಂಬ ಹೆಸರಿಗೆ ಅರ್ಹವಾಗುತ್ತವೆ. ಎಂಜಲಾದ ಪದಾರ್ಥಗಳು ಇತರರ ಸೇವನೆಗೂ ದೇವರ ನೈವೇದ್ಯಕ್ಕೂ ಅನರ್ಹವಾಗುತ್ತವೆ. ಆದರೆ ಗುರು ಜಂಗಮರು ಮುಟ್ಟಿ ಒಂದು ತುತ್ತು ಸೇವಿಸಿ, ಉಳಿದ ಆಹಾರವನ್ನು ಹಿಂದಿರುಗಿಸಿದಾಗ ಅದು ಎಂಜಲೇ ಆದರೂ ಎಂಜಲುಸೂತಕ ಎನಿಸಿಕೊಳ್ಳುವುದಿಲ್ಲ. ಲಿಂಗಾಯತರು ಈ ಎಲ್ಲ ಸೂತಕಗಳನ್ನು ನಿರಾಕರಿಸಿದ್ದಾರೆ. ಒಬ್ಬ ಭಕ್ತ ಅಥವಾ ಭಕ್ತೆ ಇಷ್ಟಲಿಂಗಧಾರಿ ಆದರೆ ಅವನನ್ನು/ ಅವಳನ್ನು ಏನೂ ಅಪವಿತ್ರ ಮಾಡಲಾರದು ಎಂಬುದೇ ಅವರ ಸಮರ್ಥನೆ. ಪಂಚ ಸೂತಕಗಳನ್ನು ಆಚರಿಸುವ ಲಿಂಗಾಯತರನ್ನು ವಚನಕಾರರು ನಿಷ್ಠುರವಾಗಿ ಖಂಡಿಸಿದ್ದಾರೆ.
ಕುರಾನಿನ ಸಿದ್ಧಾಂತಗಳನ್ನು ತಿರಸ್ಕರಿಸುವ ಮುಸ್ಲಿಮನನ್ನು ಮುಸ್ಲಿಮನೆಂದು ಕರೆಯಲಾಗದು. ಒಬ್ಬ ಹಿಂದೂ ವೇದಗಳನ್ನು ತಿರಸ್ಕರಿಸಿದರೆ ಅವನನ್ನು ಹಿಂದೂ ಅಥವಾ ವೈದಿಕನೆಂದು ಕರೆಯಲಾಗದು. ಇದನ್ನೇ ಅನುಸರಿಸಿ ಹೇಳುವುದಾದರೆ ವೇದಗಳನ್ನು ತಿರಸ್ಕರಿಸುವ ಲಿಂಗಾಯತರು ಹಿಂದೂಗಳಲ್ಲ ಎನ್ನಬೇಕಾಗುತ್ತದೆ. ಅಲ್ಲದೆ, ವೇದಗಳನ್ನು ತಿರಸ್ಕರಿಸಿದ ಲಿಂಗಾಯತರು ವಚನಗಳೆಂಬ, ತಮ್ಮದೇ ಆದ ಧಾರ್ಮಿಕ ಸಾಹಿತ್ಯವನ್ನು ಸೃಷ್ಟಿಸಿಕೊಂಡಿದ್ದಾರೆ. ವೈದಿಕ ಈಶ್ವರಶಾಸ್ತ್ರವನ್ನೂ ಆಚರಣೆಗಳನ್ನೂ ತಿರಸ್ಕರಿಸಿದ ಅವರು ತಮ್ಮದೇ ಆದ ಈಶ್ವರಶಾಸ್ತ್ರವನ್ನೂ ಆಚರಣೆಗಳನ್ನೂ ರೂಪಿಸಿಕೊಂಡಿದ್ದಾರೆ.
11: ಧರ್ಮಾಂತರ (conversion): ಜಾತಿತಾರತಮ್ಯದೊಂದಿಗೆ ಅವಿನಾ ಸಂಬಂಧವನ್ನಿಟ್ಟುಕೊಂಡಿರುವ ಹಿಂದೂ ಧರ್ಮಕ್ಕೆ ಧರ್ಮಾಂತರ ಅಪರಿಚಿತ. ಅಂದರೆ, ಯಾರಾದರೂ ತಾನು ಹಿಂದೂ ಎಂದು ಹೇಳಿಕೊಂಡರೆ, ಅವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ್ರ ಅಥವಾ ಪಂಚಮನಾಗಿರಬೇಕು. ಈ ಐದು ಜಾತಿಗಳಲ್ಲಿ ಪರಸ್ಪರ ಸಹಭೋಜನವಾಗಲಿ ವಿವಾಹ ಸಂಬಂಧವಾಗಲಿ ಇಲ್ಲದಷ್ಟು ಅವು ಪರಸ್ಪರ ದೂರ ಇವೆ. ಅಂದರೆ ಒಂದು ಜಾತಿಯಲ್ಲಿ ಹುಟ್ಟಿದವನು ತನ್ನ ಜಾತಿಯನ್ನಾಗಲಿ, ವೃತ್ತಿಯನ್ನಾಗಲಿ ಬದಲಾಯಿಸಿಕೊಳ್ಳುವಂತಿಲ್ಲ. ಉದಾಹರಣೆಗೆ, ಒಬ್ಬ ಕುಂಬಾರನ ಕುಲದಲ್ಲಿ ಹುಟ್ಟಿದರೆ ಅವನು ಬ್ರಾಹ್ಮಣ ವೃತ್ತಿಯನ್ನು, ಅಂದರೆ ವೇದಾಧ್ಯಯನ ಅಥವಾ ಯಜ್ಞ ಯಾಗಾದಿಗಳ ಆಚರಣೆಯನ್ನು ತನ್ನ ವೃತ್ತಿಯಾಗಿ ಆರಿಸಿಕೊಳ್ಳಲಾರ. ವಾಸ್ತವವಾಗಿ, ವೈದಿಕ ಧರ್ಮ ತನ್ನ ಜಾತಿಗಳ ಶುದ್ಧತೆಯನ್ನು ರಕ್ಷಿಸಿಕೊಳ್ಳಲು ಉಪದೇಶಿಸುತ್ತದೆ. ಸ್ವತಃ ಶ್ರೀಕೃಷ್ಣನೇ ಜನರ ಸ್ವಸಾಮರ್ಥ್ಯ ಮತ್ತು ಆಯ್ಕೆಗಳ ಆಧಾರದ ಮೇಲೆ ನಾಲ್ಕು ವರ್ಣಗಳನ್ನು ಸೃಷ್ಟಿಸಿದನೆಂದೂ ಪ್ರತಿಯೊಬ್ಬರೂ ತಮ್ಮ ತಮ್ಮ ವರ್ಣಕ್ಕೆ ಅನುಗುಣವಾದ ವೃತ್ತಿಗಳನ್ನು ಮಾಡಬೇಕೆಂದು ಹೇಳಿದ್ದಾನೆ ಎಂದು ವಾದಿಸುವ ಮೂಲಕ, ವೈದಿಕ ಸಂಸ್ಕೃತಿಯು ವರ್ಣ ವರ್ಣಗಳ ನಡುವೆ ಸಹಭೋಜನವನ್ನೂ ವಿವಾಹ ಸಂಬಂಧಗಳನ್ನೂ ನಿಷೇಧಿಸಿತು. ಒಂದು ವೇಳೆ ಈ ಐದು ಜಾತಿಗಳಲ್ಲಿ ಪರಸ್ಪರ ವಿವಾಹ ಸಂಬಂಧ ಉಂಟಾದರೆ ಅವುಗಳನ್ನು ವರ್ಣಸಂಕರ ಎಂದು ಪರಿಗಣಿಸಿತಲ್ಲದೆ, ವರ್ಣಸಂಕರ ಮಹಾಪಾಪ, ಅವುಗಳನ್ನು ಮಾಡುವವರನ್ನು ನರಕಕ್ಕೆ ತಳ್ಳಲಾಗುವುದೆಂದು ವೈದಿಕರು ಬೋಧಿಸಿದರು.
ಒಬ್ಬ ಶೂದ್ರ ಬ್ರಾಹ್ಮಣನಾಗಿ ಮತಾಂತರಗೊಳ್ಳಲು ಹೇಗೆ ಅಸಾಧ್ಯವೋ ಹಾಗೆ ಹಿಂದೂ ಅಲ್ಲದವರು ಹಿಂದುಗಳಾಗಿ ಧರ್ಮಾಂತರಗೊಳ್ಳುವುದೂ ಅಸಾಧ್ಯ. ಒಬ್ಬ ಹಿಂದೂ ಹುಟ್ಟಿನಿಂದಲೇ ಹಿಂದೂವೇ ಹೊರತು ಧರ್ಮಾಂತರಗೊಂಡು ಹಿಂದೂವಾಗಲು ಸಾಧ್ಯವಿಲ್ಲ. ಈ ರೀತಿ ತಾತ್ವಿಕವಾಗಿ ಧರ್ಮಾಂತರಗೊಳ್ಳುವುದು ಅಸಾಧ್ಯವಾಗಿರುವಾಗ ಒಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಸ್ವಾಭಾವಿಕವಾಗಿಯೇ ‘ಅವನು ಯಾವ ಜಾತಿಗೆ ಸೇರುತ್ತಾನೆ?’ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಕೊಡುವುದು ಅಸಾಧ್ಯ. ಅವೈದಿಕವಾದ ಲಿಂಗಾಯತ ಧರ್ಮವು ಎಲ್ಲ ಜಾತಿಗಳಿಗೂ ತನ್ನ ಬಾಗಿಲನ್ನು ತೆರೆಯಿತು; ಅಥವಾ ತನ್ನ ಬಾಗಿಲನ್ನು ಎಲ್ಲ ಜಾತಿಗಳಿಗೂ ತೆರೆಯುವ ಮೂಲಕ ಅದು ಅವೈದಿಕವಾಯಿತು. ಲಿಂಗಾಯತರಾಗಲು ಇಷ್ಟಪಡುವ ಎಲ್ಲರೂ ಇಷ್ಟಲಿಂಗ ಧರಿಸುವ ಮೂಲಕ ಕೇವಲ ಶೂದ್ರರಷ್ಟೇ ಅಲ್ಲದೆ ವೈದಿಕ ಬ್ರಾಹ್ಮಣರೂ ಜೈನರೂ ಧರ್ಮಾಂತರಗೊಂಡರು.
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವಂ ಬಿಟ್ಟು ಕಳೆದು ಲಿಂಗಭಕ್ತರಾದರು ಕೆಲವರು.
ಅಯ್ಯಾ, ಜೈನರಾದವರು ತಮ್ಮ ಜೈನಧರ್ಮವಂ ಬಿಟ್ಟು ಲಿಂಗಭಕ್ತ್ತರಾದರು ಅನೇಕರು.
ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು ಶಿವಭಕ್ತರಾದರನೇಕರು…
ದ್ವಿಜರು ತಮ್ಮ ಜಾತಿಯನ್ನಷ್ಟೇ ಅಲ್ಲ, ತಮ್ಮ ವೃತ್ತಿಗಳನ್ನೂ ತ್ಯಜಿಸಿ ಲಿಂಗಾಯತರಾದರು ಎಂಬುದು ಗಮನಾರ್ಹವಾದ ವಿಷಯ. ಇದನ್ನು ಒತ್ತಿ ಹೇಳಬೇಕಾಗಿದೆ, ಏಕೆಂದರೆ ಒಬ್ಬ ಲಿಂಗಾಯತನಾಗಿಯೂ ವೇದಕ್ಕೆ ನಿಷ್ಠೆಯನ್ನು ತೋರಿಸಲಾಗದು.
Comments 9
Vasanthkumar D, Bangalore
Jul 12, 2023ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದು ಬಹುಪಾಲು ಲಿಂಗಾಯತರಿಗೇ ಗೊತ್ತಿಲ್ಲದ ವಿಷಯ. ಅವೈದಿಕ ಧರ್ಮದ ಲಕ್ಷಣಗಳುಳ್ಳ ಲಿಂಗಾಯತವನ್ನು ಟೆಕ್ನಿಕಲಿ ಅಹಿಂದೂ ಎಂದು ಆಧಾರ ಸಹಿತವಾಗಿ ತೋರಿಸಿದ ತಮ್ಮ ಲೇಖನ ಬಹಳ ಚೆನ್ನಾಗಿದೆ ಸರ್.
saroja Mysore
Jul 12, 2023ಇತ್ತೀಚೆಗೆ ವೇದ ವಚನ ಎನ್ನುವ ಶಬ್ದವನ್ನು ಜನ ಬಳಕೆ ಮಾಡುತ್ತಿದ್ದು, ವಚನಗಳು ವೇದದ ಮುಂದುವರಿದ ಭಾಗವೆಂದು ಪ್ರಚಾರ ಮಾಡುತ್ತಿದ್ದಾರೆ, ಹತ್ತನೆಯ ತರಗತಿ ಓದುತ್ತಿರುವ ನನ್ನ ಮಗಳು ಮೊನ್ನೆ ನನಗೆ ವೇದಗಳಲ್ಲಿರೋದೆಲ್ಲಾ ವಚನಗಳಲ್ಲಿದೆಯೇ? ಎಂದು ಪ್ರಶ್ನಿಸಿದಳು. ವೇದಗಳನ್ನು ವಚನಗಳು ಹೇಗೆ ಅಲ್ಲಗಳೆದಿವೆ ಎನ್ನುವುದು ಲೇಖನದಲ್ಲಿ ನನಗೆ ವಿವರ ಮಾಹಿತಿ ಒದಗಿಸಿತು, ಧನ್ಯವಾದಗಳು.
ಮಂಜುನಾಥ್ ಗಿರಣಿ
Jul 17, 2023ಹಿಂದೂ ಪದವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿರುವುದರಿಂದ ಧರ್ಮಎನ್ನುವುದರ ಅಂತರಾರ್ಥವೇ ಮರೆಯಾಗಿ ಬಿಟ್ಟಿದೆ. ಅನ್ಯಾಯದ ಬೇರುಗಳನ್ನು ತರ್ಕದ ಮೂಲಕ ಎನ್.ಜಿ. ಮಹಾದೇವಪ್ಪನವರು ನಿರೂಪಿಸಿದ ಲೇಖನ ಬಹಳ ಚೆನ್ನಾಗಿದೆ.
ಶಿವಶಂಕರ ಸವಣೂರು
Jul 18, 2023ಡಾ. ಎಸ್ ರಾಧಾಕೃಷ್ಣನ್ ತಮ್ಮ ‘2500 ಇಯರ್ಸ್ ಆಫ್ ಬುದ್ಧಿಸಂ’ ಎಂಬ ಗ್ರಂಥದಲ್ಲಿ ‘ಬುದ್ಧನು ಒಬ್ಬ ಶ್ರೇಷ್ಠ ಹಿಂದು’ (Buddha is the greatest Hindu) ಎಂದೂ ‘ಬುದ್ಧ ಹುಟ್ಟಿದ್ದು ಹಿಂದೂ ಆಗಿ, ಬೆಳೆದಿದ್ದು ಹಿಂದೂ ಆಗಿ ಸತ್ತಿದ್ದು ಹಿಂದುವಾಗಿ (Buddha was born a Hindu, grew up a Hindu and died a Hindu) ಎಂದೂ ಬರೆದದ್ದು ಓದಿ ಆಘಾತವಾಯಿತು. ಅವರೊಬ್ಬ ಶ್ರೇಷ್ಟ ತತ್ವಜ್ಞಾನಿ ಎಂದು ನಾನು ಭಾವಿಸಿದ್ದೆ. ಬುದ್ಧ ಧರ್ಮದ ಬಗೆಗೆ ಅವರಲ್ಲಿ ಸ್ಪಷ್ಟತೆಯೇ ಇರಲಿಲ್ಲವೆನ್ನುವುದು ಆಶ್ಚರ್ಯದ ಮಾತು. ಹಿಂದೂ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಇರುವ ವ್ಯತ್ಯಾಸವನ್ನೇ ಅಳಿಸಿ ಹಾಕುವ ಅವರ ವಿಚಾರಗಳು ಸಮಾಜದಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸುತ್ತವೆ.
Naveen H.K
Jul 18, 2023ಲಿಂಗಾಯತವು ಹೇಗೆ ಅವೈದಿಕ, ಹಾಗೆ ಅವೈದಿಕವಾಗಿರುವುದರಿಂದಲೇ ಅದು ಸ್ವತಂತ್ರ ಧರ್ಮ ಎನ್ನುವುದನ್ನು ಲಾಜಿಕಲಿ ಹೇಳಿದ ನಿಮ್ಮ ಬರಹ ಇಷ್ಟವಾಯಿತು ಸರ್. ಥ್ಯಾಂಕ್ಯೂ.
Basavaraj KAREHOLi
Jul 24, 2023ಅವೈದಿಕ ಎಂದರೆ ಶ್ರಮ ಮತ್ತು ಸತ್ಯಗಳನ್ನು ಸಹಜವಾಗಿ ಅವಿನಾಭಾವದಿಂದ ವಂಚನೆಯಿಲ್ಲದೆ ನಂಬಿ ಅವನ್ನು ಬದುಕುವ ಧೋರಣೆಯುಳ್ಳವರು. ಅಂಥ ವರ್ಗವನ್ನು ಮುರಿದು ತಿನ್ನುವ ವರ್ಗವೇ ವೈದಿಕ. ವೇದಪೂರ್ವದಲ್ಲಿ ಈ ಅವೈದಿಕರು ಬದುಕಿದ ಸತ್ಯ ಶ್ರಮಗಳಲ್ಲಿ ಉಂಟಾದ ಫಲಾನುಫಲ ಸ್ವರೂಪದ, ಅನುಭವ ಮತ್ತು ಜ್ಞಾನಕಾಂಡಗಳ ಹಣ್ಣುಗಳೇ ಲಿಂಗತತ್ವ. ಲಿಂಗತತ್ವ ಎಂದರೆ ಪ್ರಕೃತಿಯ ಮೂಲದಲ್ಲಿ ಇರುವ ಅಖಂಡ ಚೈತನ್ಯಾತ್ಮಕ ಶಕ್ತಿಯ ಅರಿವು. ಅದನ್ನು ಜನಪದರ ಅಭಿವ್ಯಕ್ತಿಗಳ ಹಿಂದಿರುವ ಮೂಲಪ್ರಜ್ಞೆಯ ಸ್ತರಗಳಲ್ಲಿ ಗ್ರಹಿಸಬಹುದು. ಈ ಪ್ರಜ್ಞೆಗಳೇ ಅವೈದಿಕ ಎಂದು ಗ್ರಹಿಸಬೇಕಾಗುತ್ತದೆ. ಈ ಲಿಂಗತತ್ತ್ವಸ್ವರೂಪದ ಜ್ಞಾನಕಾಂಡವನ್ನು ಕರ್ಮಕಾಂಡದ ಹುಳಿ ರುಚಿಯನ್ನು ಸೇರಿಸಿ ಮದ್ಯಗೊಳಿಸಿದ ಮಿಶ್ರಿತ ವ್ಯವಸ್ಥೆಯೇ ವೈದಿಕ. ವೈದಿಕವೆಂದರೆ ಅವೈದಿಕವನ್ನು ಮುರಿದು ತಿನ್ನುವ ವ್ಯವಸ್ಥೆ. ಆದ ಕಾರಣ ವೈದಿಕ, ಅವೈದಿಕ ಎನ್ನುವ ಜಿಜ್ಞಾಸುವಿನ ಹಿಂದೆ ಹೋಗಿ ಲಿಂಗತತ್ವದ ಗ್ರಹಿಕೆ ಮಾಡಿಕೊಂಡು. ವೈದಿಕದವ್ಯಾಧಿ ಯಿಂದ ಹೊರಗೆ ಬರಬೇಕು. ಶರಣರು ಮಾಡಿದ್ದೇ ಇದನ್ನು.
Parameshwarappa
Jul 24, 2023ತುಂಬ ಚೆನ್ನಾಗಿ ಲಿಂಗಾಯತ ಧರ್ಮದ ಬಗ್ಗೆ ವಿಷಯಗಳನ್ನು ಅರ್ಥಗರ್ಭಿತವಾಗಿ, ಸವಿವರವಾಗಿ ಸುಲಲಿತಾಗಿ ತಿಳಿಸಿದ್ದೀರಿ……
ಧನ್ಯವಾದಗಳು..💐🌺🙏🙏👍👌
Praveen Bengaluru
Jul 24, 2023ಲೇಖನ ಲಿಂಗಾಯತ ಧರ್ಮದ ಬಗ್ಗೆ COMPLETE INFORMATION ಕೊಡುತ್ತದೆ, ಮತ್ತು ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, THANK YOU.
Jayakumar P.S
Jul 26, 2023ಸರ್, ಲೇಖನ ತುಂಬಾ ಚೆನ್ನಾಗಿದೆ. ಆದರೆ ಶೈವಾಚರಣೆಗಳನ್ನೇ ಅನುಸರಿಸುವ ಮೆಜಾರಿಟಿ ಲಿಂಗಾಯತರು ವಚನಗಳ ಬಗ್ಗೆಯಾಗಲಿ, ಶರಣರ ಬಗ್ಗೆಯಾಗಲಿ ಎಳ್ಳಷ್ಟು ತಿಳಿದಿಲ್ಲ, ಸ್ವತಂತ್ರ ಧರ್ಮದ ಕಲ್ಪನೆಯೂ ಅವರಿಗಿಲ್ಲ. ಇಂಥ ಎಡಬಿಡಂಗಿ ಲಿಂಗಾಯತರನ್ನು ಕಟ್ಟಿಕೊಂಡು ಸ್ವತಂತ್ರಧರ್ಮಕ್ಕಾಗಿ ಹೋರಾಡುವುದಾದರೂ ಹೇಗೆ?