ಲಿಂಗಾಯತಧರ್ಮ ಸಂಸ್ಥಾಪಕರು -2
ಬಸವಣ್ಣನವರೇ ಲಿಂಗಾಯತಧರ್ಮ ಸ್ಥಾಪಕರೆಂಬುದಕ್ಕೆ ಮೂರು ಆಧಾರಗಳಿವೆ:
1. ಅವರ ಸಮಕಾಲೀನ ವಚನಕಾರರ ಹೇಳಿಕೆಗಳು; 2. ಬಸವೋತ್ತರ ಕವಿಗಳ ಹೇಳಿಕೆಗಳು; 3. ಬಸವಣ್ಣನವರ ಸಿದ್ಧಾಂತಗಳಲ್ಲಿರುವ ನಾವೀನ್ಯ. ಯಾವ ಸಂಸ್ಕೃತ ಅಥವಾ ಕನ್ನಡ ಗ್ರಂಥವೂ ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರೆಂದು ಹೇಳುವುದಿಲ್ಲ ಎಂಬ ಡಾ.ನಂದಿಮಠ ಅವರ ಮಾತನ್ನು ಮೊದಲಿನ ಎರಡು ಗುಂಪಿನ ಹೇಳಿಕೆಗಳು ತಪ್ಪೆಂದು ತೋರಿಸಿ ಕೊಡುತ್ತವೆ.
1. ಸಮಕಾಲೀನ ವಚನಕಾರರ ಹೇಳಿಕೆಗಳು:
ಬಸವಣ್ಣನವರೇ ಲಿಂಗಾಯತ ಧರ್ಮಸಂಸ್ಥಾಪಕರೆಂಬ ವಾದವು “… ಸತ್ಯದಿಂದ ದೂರವಾದುದು. ಏಕೆಂದರೆ ಯಾವುದೇ ವೀರಶೈವ ಧರ್ಮದ ಕನ್ನಡ ಅಥವಾ ಸಂಸ್ಕೃತ ಗ್ರಂಥವು ಅವರು ಸಂಸ್ಥಾಪಕರೆಂದು ಹೇಳಿಲ್ಲ. ಅಲ್ಲದೆ ಆ ಧರ್ಮದ ಈಶ್ವರ ಶಾಸ್ತ್ರವನ್ನೂ ತತ್ವಮೀಮಾಂಸೆಯನ್ನೂ ವಿಮರ್ಶಾತ್ಮಕವಾಗಿ ನೋಡಿದರೆ ಅದು ಬಹಳ ಪುರಾತನವಾದುದೆಂಬ ಸೂಚನೆ ಸಿಕ್ಕುತ್ತದೆ” ಎಂಬುದು ಡಾ. ನಂದಿಮಠ ಅವರ ಸಿದ್ಧಾಂತ [ಡಾ. ನಂದಿಮಠ, ಎಸ್.ಸಿ Handbook of Virashÿaivism ಮೋತಿಲಾಲಬನಾರ್ಸಿದಾಸ್, 1979), ಪು.2.]. ಎರಡು ಧರ್ಮಗಳ ಈಶ್ವರಶಾಸ್ತ್ರ ಮತ್ತು ತತ್ವಮೀಮಾಂಸೆ ಪರಸ್ಪರ ಹೋಲುತ್ತವೆ ಎಂಬ ಕಾರಣಕ್ಕೆ ಆ ಎರಡು ಧರ್ಮಗಳಲ್ಲಿಯೂ ಹೋಲಿಕೆ ಇರಬೇಕು ಎಂದು ಡಾ. ನಂದಿಮಠರಂಥ ವಿದ್ವಾಂಸರು ವಾದಿಸುವುದು ನಿಜವಾಗಿಯೂ ವಿಷಾದನೀಯ. ಒಂದೇ ರೀತಿಯ ಈಶ್ವರಶಾಸ್ತ್ರ ಮತ್ತು ತತ್ವ ಮೀಮಾಂಸಗಳನ್ನುಳ್ಳ ಧರ್ಮಗಳು ಪರಸ್ಪರ ಭಿನ್ನವಾಗಿರಲೂಬಹುದು ಎಂಬುದನ್ನು ಅವರು ಗಮನಿಸಬಹುದಿತ್ತು. ಉದಾಹರಣೆಗೆ: ಯಹೂದಿಧರ್ಮ, ಕ್ರೈಸಧರ್ಮ ಮತ್ತು ಇಸ್ಲಾಂಧರ್ಮಗಳ ಈಶ್ವರ ಶಾಸ್ತ್ರ ಮತ್ತು ತತ್ವ ಮೀಮಾಂಸೆ ಹೆಚ್ಚು ಕಡಿಮೆ ಒಂದೇ ತರ ಇವೆ. ಯಹೂದಿಧರ್ಮ ಮತ್ತು ಕ್ರೈಸ್ತಧರ್ಮಗಳೆರಡೂ ಒಡಂಬಡಿಕೆಯ (Testament ಅಥವಾ Covenant) ಧರ್ಮಗಳು. ಈ ಎರಡು ಧರ್ಮಗಳು ಯಾಹ್ವೆಯೇ ಪರಮ ದೈವವೆಂದೂ ಅವನೇ ಪ್ರಪಂಚವನ್ನು ಆರು ದಿನಗಳಲ್ಲಿ ಸೃಷ್ಟಿಸಿ ಏಳನೆಯ ದಿನ ವಿಶ್ರಾಂತಿ ಪಡೆದನೆಂದೂ ಅವನೇ ಆಕಾಶ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರ, ವಿವಿಧ ಜೀವಜಂತುಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಸೃಷ್ಟಿಸಿದನೆಂದೂ ನಂಬುತ್ತವೆ. ಇಷ್ಟಾದರೂ ಕ್ರೈಸ್ತ ಧರ್ಮವು ಯಹೂದಿ ಧರ್ಮದಿಂದ ಭಿನ್ನ. ಅದೇ ರೀತಿ ಮಾಧ್ವರ ದ್ವೈತವೂ ಶೈವ ಸಿದ್ಧಾಂತಗಳ ದ್ವೈತವೂ ಪರಸ್ಪರ ಹೋಲುತ್ತವೆ. ಆದರೆ ಅವುಗಳ ಧಾರ್ಮಿಕ ಸಿದ್ಧಾಂತಗಳು ಬೇರೆ ಬೇರೆ. ಆದುದರಿಂದ ಲಿಂಗಾಯತಧರ್ಮದ ತತ್ತ್ವಮೀಮಾಂಸೆಯು ಕಾಶ್ಮೀರ ಶೈವದ ಅಥವಾ ಶೈವ ಸಿದ್ಧಾಂತದ ತತ್ವಮೀಮಾಂಸೆಯನ್ನು ಹೋಲುತ್ತದೆ ಎಂಬ ಕಾರಣಕ್ಕೆ ಲಿಂಗಾಯತ ಧರ್ಮವೆಂದರೂ ಒಂದೇ ಕಾಶ್ಮೀರ ಅಥವಾ ಶುದ್ಧ ಶೈವ ಎಂದರೂ ಒಂದೇ, ಎನ್ನಲಾಗದು. ಎರಡು ಧರ್ಮಗಳು ಭಿನ್ನವೆಂದು ಹೇಳಲು ಆ ಧರ್ಮಗಳ ಧಾರ್ಮಿಕ ಸಿದ್ಧಾಂತಗಳು ಮತ್ತು ಆಚರಣೆಗಳು ಭಿನ್ನವಾಗಿರಬೇಕು.
ಎರಡನೆಯದಾಗಿ, ಯಾವ ಧರ್ಮಗ್ರಂಥವೂ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರೆಂದು ಹೇಳುವುದಿಲ್ಲ ಎಂಬ ಡಾ.ನಂದೀಮಠರ ಹೇಳಿಕೆ ಅವಸರದಿಂದ ಮಾಡಿದ ನಿರಾಧಾರ ಹೇಳಿಕೆ. ಪ್ರಾಯಶಃ ಅವರು ಎಲ್ಲ ವಚನಗಳನ್ನು ಅಭ್ಯಾಸ ಮಾಡಲಿಲ್ಲವೆಂದು ಕಾಣುತ್ತದೆ. 12ನೇ ಶತಮಾನದಲ್ಲಿ ರಚಿತವಾದ ಅನೇಕ ವಚನಗಳು ಬಸವಣ್ಣನವರೇ ಲಿಂಗಾಯತ ಧರ್ಮ ಸಂಸ್ಥಾಪಕರೆಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತವೆ. ಅವುಗಳು ಬಸವಣ್ಣನವರನ್ನು ವರ್ಣಿಸಲು ‘ಪ್ರಥಮಾಚಾರಿ’, ‘ಪೂರ್ವಾಚಾರಿ’ ಎಂಬ ವಿಶೇಷಣಗಳನ್ನು ಬಳಸಿವೆ. ಉದಾಹರಣೆಗೆ:
ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ.
… ನಿನ್ನಿಂದ ಹುಟ್ಟಿತ್ತು ಪ್ರಸಾದ; … ನಿನ್ನಿಂದ ಹುಟ್ಟಿತ್ತು ಪಾದೋದಕ.
… ಪೂರ್ವಾಚಾರಿ[ಯೂ] ನೀನೆಯಾದೆ… (2/894)
ಈ ವಚನದ ಪ್ರಕಾರ ಗುರು, ಲಿಂಗ, ಜಂಗಮ, ಪ್ರಸಾದ ಮತ್ತು ಪಾದೋದಕಕ್ಕೆ ಸಂಬಂಧಿಸಿದ ಹೊಸ ಆಚಾರಗಳು ಬಸವಣ್ಣನವರಿಂದಾಗಿ ಪ್ರಾರಂಭವಾದವು. ಅಲ್ಲಮಪ್ರಭುವಿನ ಒಂದು ವಚನ (2/904) ಬಸವಣ್ಣನವರಿಗೆ ಪೂರ್ವಾಚಾರಿ ಎಂಬ ಅಭಿಧಾನವನ್ನು ಅನ್ವಯಿಸುತ್ತದೆ. ಅಲ್ಲಮಪ್ರಭು ಶಿವನೇ ಗುರು, ಲಿಂಗ, ಜಂಗಮ, ಪ್ರಸಾದ ಎಂದು ತಿಳಿದಿರುವ ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯುತ್ತಾನೆ (2/1543). ಬಸವಣ್ಣನವರೇ ಮೊಟ್ಟಮೊದಲ ಬಾರಿಗೆ ತಮ್ಮ ಅನುಯಾಯಿಗಳಿಗೆ ಗುರುಲಿಂಗಾದಿಗಳ ಬಗ್ಗೆ ತಿಳಿಸಿಕೊಟ್ಟಿದ್ದರಿಂದ ಅವರೇ ಪೂರ್ವಾಚಾರಿ ಎಂಬ ಬಿರುದಿಗೆ ಅರ್ಹರು (2/1173).
ಅದೇ ರೀತಿ ಬಸವಣ್ಣನವರ ಸೋದರಳಿಯನೂ ನಿಷ್ಠಾವಂತ ಅನುಯಾಯಿಯೂ ನಂಬಿಕಸ್ಥನೂ ಆಗಿದ್ದ ಚೆನ್ನಬಸವಣ್ಣನವರು ಬಸವಣ್ಣನವರನ್ನು ಒಬ್ಬ ಬಿಲ್ಲುಗಾರನೆಂದೂ ಅವರ ಹೊಸ ಧರ್ಮವನ್ನು ಬಾಣವೆಂದೂ ವರ್ಣಿಸಿದ್ದಾನೆ (3/655). ಗುರು, ಲಿಂಗ, ಜಂಗಮ, ಪ್ರಸಾದ ಅವರ ಉದರದಲ್ಲಿ ಹುಟ್ಟಿದವು, ಅಂದರೆ ಅವರೇ ಆ ತತ್ವಗಳ ಜನಕ ಎನ್ನುತ್ತಾನೆ (3/5). ಬಸವಣ್ಣನವರು ಮೊಟ್ಟಮೊದಲ ಬಾರಿಗೆ ಮಾನವ ಕೇವಲ ಮಾಂಸಪಿಂಡವಲ್ಲ, ಅದು ಮಂತ್ರಪಿಂಡವೆಂದೂ ಭೌತ ದೇಹವಲ್ಲ, ಪ್ರಸಾದ ಕಾಯವೆಂದೂ ಮಾನವನು ಕೇವಲ ಉಸಿರಾಡುವ ಪ್ರಾಣಿ ಅಲ್ಲ, ನಡೆದಾಡುವ ಲಿಂಗವೆಂದೂ ಬೋಧಿಸಿದರೆಂದು ಹೇಳುತ್ತಾನೆ (3/24). ಅವನೇ ತನ್ನ ಮತ್ತೊಂದು ವಚನದಲ್ಲಿ ಷಟ್ಸ್ಥಲ ಸಿದ್ಧಾಂತವು ಅವರಿಗಿಂತ ಮೊದಲು ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ (3/14) ಅವರೇ ಪ್ರಥಮಚಾರ್ಯ (3/180) ಪೂರ್ವಾಚಾರ್ಯರೆಂದು (3/721) ಘೋಷಿಸುತ್ತಾನೆ. ಮತ್ತೂ ಒಂದು ವಚನದಲ್ಲಿ ಆತ ಪೂರ್ವಾಚಾರಿ ಪದವನ್ನು ಬಳಸುತ್ತಾನೆ (3/1676). ಮತ್ತೊಂದು ವಚನದಲ್ಲಿ ಹರ ತಾನೇ ಗುರು, ಲಿಂಗ, ಜಂಗಮ, ಮಂತ್ರ, ಪ್ರಸಾದ, ಎಂದು ತೋರಿಸಲು ಬಸವಣ್ಣನವರ ರೂಪದಲ್ಲಿ ಭೂಮಿಗೆ ಬಂದ ಎನ್ನುತ್ತಾನೆ (3/22).
ಸಿದ್ಧರಾಮನೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮೊದಲು ಹರ ಬಸವಣ್ಣನವನಾದ, ಬಸವಣ್ಣನವರು ಅನಂತರ ಗುರು, ಲಿಂಗ, ಜಂಗಮ, ಪ್ರಸಾದದ ರೂಪ ತಾಳಿದರು ಎನ್ನುತ್ತಾನೆ (4/1309). ತನ್ನ ಬಸವಸ್ತೋತ್ರದ ತ್ರಿವಿಧಿಯಲ್ಲಿ ಅವನು ಬಸವಣ್ಣನವರಿಗೆ ಆದಿಗುರು, ಅನಾದಿಗುರು ಎಂದು ಬಿರುದನ್ನು ಇತ್ತಿದ್ದಾನೆ [ಹಿರೇಮಠ,ಆರ್.ಸಿ ಮತ್ತು ಸುಂಕಾಪುರ, ಎಂ.ಎಸ್. (ಸಂ): ಶ್ರೀ ಸಿದ್ಧರಾಮೇಶ್ವರ ವಚನಗಳು (ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, 1976), 8, 9, 10 ನೆಯ ಪದ್ಯಗಳು]. ಘಟ್ಟಿವಾಳಯ್ಯ ತನ್ನ ವಚನವೊಂದನ್ನು ‘ಆದಿಯಲ್ಲಿ ಬಸವಣ್ಣನವರಿಗೆ ಗುರುಲಿಂಗವಿಲ್ಲದ ಕಾರಣ…’ (7/407) ಎಂದು ಪ್ರಾರಂಭಿಸುತ್ತಾನೆ. ಇದನ್ನು ‘ಅವರಿಗೆ ಮೊದಲು ಲಿಂಗವಿರಲಿಲ್ಲ’ ಎಂದಾದರೂ ಅರ್ಥೈಸಬಹುದು ‘ಗುರುವೇ ಇರಲಿಲ್ಲ’ ಎಂದಾದರೂ ಅರ್ಥೈಸಬಹುದು. ಹೇಗೆ ಅರ್ಥಮಾಡಿದರೂ ಅವರೇ ಪ್ರಥಮಾಚಾರ್ಯರ ಸ್ಥಾನದಲ್ಲಿ ನಿಲ್ಲುತ್ತಾರೆ. ಲಿಂಗ, ಜಂಗಮ, ಪ್ರಸಾದ, ಇವುಗಳ ನಿಜವಾದ ಅರ್ಥವನ್ನು ಮೊಟ್ಟಮೊದಲ ಬಾರಿಗೆ ತಿಳಿಸಿದವರೆಂದರೆ ಬಸವಣ್ಣನವರು ಎಂದು ಮಡಿವಾಳ ಮಾಚಯ್ಯ ಹೇಳುತ್ತಾನೆ (8/671). ಅದೇ ರೀತಿ, ಹಾವಿನಹಾಳ ಕಲ್ಲಯ್ಯನು ಬಸವಣ್ಣನವರನ್ನು ಪೂರ್ವಾಚಾರಿ ಎಂದು ಕರೆದಿದ್ದಾನೆ (9/1157).
2. ಬಸವೋತ್ತರ ಕಾಲದ ಕವಿಗಳ ಹೇಳಿಕೆಗಳು
ಬಸವಣ್ಣನವರನ್ನು ಶ್ಲಾಘಿಸುವ ಸಲುವಾಗಿ ರಚಿಸಿದ ಕೃತಿಗಳೆಲ್ಲವೂ ಬಸವೋತ್ತರ ಕಾಲಕ್ಕೆ ಸೇರಿದವು. ಸುಮಾರು 1225ರಲ್ಲಿ ಜೀವಿಸಿದ್ದ ಪಾಲ್ಕುರಕಿ ಸೋಮನಾಥ ತನ್ನ ಗಣಸಹಸ್ರದ ಪ್ರಾರ್ಥನಾ ಪದ್ಯದಲ್ಲಿ ಬಸವಣ್ಣನವರನ್ನು ‘ಗುರು ಬಸವಲಿಂಗ’ ಎಂದು ವರ್ಣಿಸುವುದಲ್ಲದೆ ಪ್ರಥಮಾಚಾರ್ಯನೆಂದು ಕರೆದು ಅವರಿಗೆ ವಂದಿಸುತ್ತಾನೆ. (ಎಸ್.ಎಸ್. ಬಸವನಾಳ, ಪೂರ್ವೋಕ್ತ, ಪು. 20). ಮಗ್ಗೆಯ ಮಾಯಿದೇವ (ಸು. 1430) ತನ್ನ ಶಿವಾಧವಶತಕದಲ್ಲಿ ಬಸವಣ್ಣ ವೀರಶೈವ ನಿರ್ಣಯ ಪರಮಾವತಾರವೆನ್ನುತ್ತಾನೆ (ಅದರಲ್ಲೆ, ಪು.20). ಚಾಮರಸನು ತನ್ನ ಪ್ರಭುಲಿಂಗಲೀಲೆಯ ಪ್ರಾರ್ಥನಾ ಪದ್ಯದಲ್ಲಿ ಬಸವಣ್ಣನವರನ್ನು ರಾಯಪೂರ್ವಾಚಾರಿ ಎಂದು ಕರೆದಿದ್ದಾನೆ (ಅದರಲ್ಲೆ, ಪು.20). ಗುಬ್ಬಿಯ ಮಲ್ಲಣಾರ್ಯ (ಸು.1530) ತನ್ನ ವೀರಶೈವಾಮೃತ ಪುರಾಣದಲ್ಲಿ ಷಟಸ್ಥಲವನ್ನು ನಿರ್ಣಯಿಸಿದವರು ಬಸವಣ್ಣನವರಲ್ಲದೆ ಮತ್ತಾರು? ಎಂದು ಪ್ರಶ್ನಿಸಿದ್ದಾನೆ (ಅದರಲ್ಲೆ, ಪು.20). ಸೌಂದರ ನಂಬಿ ಎಂಬ ಕೃತಿಯನ್ನು ರಚಿಸಿದ ಬೊಮ್ಮರಸನು (ಸು. 1450) ಧರೆಯ ಮೇಲೆ ಲಿಂಗಾಯತ ಧರ್ಮವನ್ನು ಬಸವಣ್ಣನವರೇ ಸ್ಥಾಪಿಸಿದರು ಎಂದು ನಿರ್ಣಯಿಸುತ್ತಾನೆ. 17ನೇ ಶತಮಾನದ ಮರಿತೋಂಟದಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದವರು ಬಸವಣ್ಣನವರೇ ಎಂದು ತೀರ್ಮಾನಿಸಿದ್ದಾರೆ (ಅದರಲ್ಲೆ, ಪು.21).
3. ಬಸವಣ್ಣನವರ ಸಿದ್ಧಾಂತಗಳಲ್ಲಿದ ನಾವೀನ್ಯ
ಈ ಮೇಲಿನ ಸಾಕ್ಷ್ಯಗಳಲ್ಲದೆ ಬಸವಣ್ಣನವರ ಸಿದ್ಧಾಂತಗಳಲ್ಲಿರುವ ನವೀನತೆಯನ್ನೂ ಸಾಕ್ಷ್ಯವೆಂದು ಪರಿಗಣಿಸಬಹುದು. ಆ ಸಿದ್ಧಾಂತಗಳು ನವೀನವೆಂದು ತೀರ್ಮಾನವಾದರೆ ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರೆಂದು ಒಪ್ಪಿಕೊಳ್ಳಬೇಕು. ಅವರ ಸಿದ್ಧಾಂತಗಳನ್ನು ತತ್ವಮೀಮಾಂಸೀಯ, ಧಾರ್ಮಿಕ ಮತ್ತು ಸಮಾಜ ದಾರ್ಶನಿಕ ಎಂದು ಮೂರು ಭಾಗ ಮಾಡಬಹುದು.
1. ತತ್ವ ಮೀಮಾಂಸೀಯ ಸಿದ್ಧಾಂತಗಳು: ಹೊಸ ಈಶ್ವರ ಶಾಸ್ತ್ರ ಮತ್ತು ಹೊಸ ಧರ್ಮದ ಮೇಲೆ ನಿಂತಿರುವ ಒಂದು ಹೊಸ ಸಮಾಜ ಕಟ್ಟಬೇಕೆಂಬುದು ಬಸವಣ್ಣನವರ ಆಸೆಯಾಗಿತ್ತು. ಆ ಸಲುವಾಗಿ ಅವರು ಮೊದಲು ಭಯವನ್ನೂ ಅಜ್ಞಾನವನ್ನೂ ಅವಲಂಬಿಸಿದ್ದ ಬಹುದೇವತಾರಾಧನೆಯಿಂದ ಜನರನ್ನು ಮುಕ್ತ ಮಾಡಬೇಕಾಗಿತ್ತು. ಅಂಬಲಿ, ಕೋಳಿ ಮುಂತಾದ ಆಹಾರವನ್ನು ಭಕ್ತರಿಂದ ಬೇಡುವ ದೈವಗಳು, ಪಾಳು ಬಿದ್ದ ಸ್ಥಳಗಳು, ದೊಡ್ಡ ಆಲದ ಮರದಲ್ಲಿರುವ ದೈವಗಳು, ನಾಲ್ಕು ರಸ್ತೆಗಳು ಕೂಡುವ ಜಾಗಗಳಲ್ಲಿರುವ ಆ ದೈವಗಳಿಗೆ ಹುಟ್ಟು ಸಾವುಗಳುಂಟು ಎಂಬ ಕಲ್ಪನೆಯು, ದಾರ್ಶನಿಕವಾಗಿ ನೋಡಿದರೆ ಹಾಸ್ಯಾಸ್ಪದವೆಂಬಂತೆ ಕಾಣುತ್ತದೆ ಎಂಬುದನ್ನು ಬಸವಣ್ಣನವರು ಜನರಿಗೆ ಮನದಟ್ಟು ಮಾಡಿಕೊಟ್ಟರು. ಅಂತಹ ಕಲ್ಪನೆ ತಪ್ಪು ಧರ್ಮಕ್ಕೆ ಎಡೆ ಮಾಡಿಕೊಡುತ್ತದೆ. ನಿರ್ಜೀವ ವಸ್ತುಗಳು, ವೈದಿಕ ದೈವಗಳು (ಅಗ್ನಿ, ಯಮ ಇ.) ಮುಂತಾದವುಗಳನ್ನು ಪೂಜಿಸದಿದ್ದರೆ ಯಾವ ಅನಾಹುತವೂ ಆಗುವುದಿಲ್ಲ ಎಂದೂ ಕೇವಲ ಲಿಂಗ ಒಂದನ್ನೇ ಪೂಜಿಸಿದರೆ ಐಹಿಕ ಮತ್ತು ಪಾರಮಾರ್ಥಿಕ ಲಾಭ ಉಂಟು ಎಂದೂ ತಿಳಿಹೇಳಿದರು. ಕೇವಲ ಕೈಲಾಸಕ್ಕೆ ಸೀಮಿತವಾಗಿದ್ದ ಶಿವನನ್ನು ಸಹ ಅವರು ವಿಡಂಬಿಸಿದರು.
ಬಸವಣ್ಣನವರು ಪ್ರತಿಯೊಬ್ಬರ ಆತ್ಮ (ಪ್ರಾಣ)ವೂ ಲಿಂಗ (ಶಿವ) ಎಂದರು. ಆದರೆ, ವೇದಾಂತಿಗಳು ಶೂದ್ರರು ಜನಿವಾರ ತೊಡುವುದಿಲ್ಲವರಾದ್ದರಿಂದ ಅವರು ವೇದಾಧ್ಯಯನಕ್ಕೆ ಅನರ್ಹರೆಂದೂ ವೇದಾಧ್ಯಯನವಿಲ್ಲದ ಅವರು ಮೋಕ್ಷಕ್ಕೆ ಅನರ್ಹರೆಂದೂ ವಾದಿಸಿ ಮೋಕ್ಷಕ್ಕೆ ದ್ವಿಜರು ಮಾತ್ರ ಅರ್ಹರೆಂದು ಪರಿಗಣಿಸಿದರು. ಬಸವಣ್ಣನವರು ಪ್ರತಿಯೊಬ್ಬ ಲಿಂಗಧಾರಿಯೂ ಕುಲಜನೆಂದೂ ಉಳಿದ ಲಿಂಗಧಾರಿಗಳಿಗೆ ಸಮನೆಂದೂ ಹೇಳಿದರಲ್ಲದೆ ಎಲ್ಲರೂ ಮೋಕ್ಷಕ್ಕೆ ಅರ್ಹರೆಂದರು. ಅವರು ಮೋಕ್ಷವೆಂದರೆ ಸತ್ತನಂತರ ಕೈಲಾಸ ಪದವಿ ಪಡೆಯುವುದು ಎಂಬ ಹಳೆಯ ಸಿದ್ಧಾಂತವನ್ನು ತಿರಸ್ಕರಿಸಿ, ಮೋಕ್ಷವೆಂದರೆ ಬದುಕಿದ್ದಾಗಲೇ ಶಿವಸಾಮರಸ್ಯ ಪಡೆಯುವುದು ಎಂದರು. ಶಿವೈಕ್ಯವನ್ನು ಪಡೆದವರು ಶಿವನನ್ನು ಎಲ್ಲೆಲ್ಲಿಯೂ ಯಾವಾಗಲೂ ಕಾಣುತ್ತಾರೆ.
2. ಧಾರ್ಮಿಕ ಸಿದ್ಧಾಂತಗಳು: 2.1. ಧರ್ಮವೆಂದರೆ ಭಕ್ತನು ತನ್ನ ದೇಹದ ಭಾಗಗಳನ್ನು ಕಡಿದು ಶಿವನಿಗೆ ಅರ್ಪಿಸುವುದು ಎಂಬ ಶೈವಧರ್ಮವನ್ನು ಮತ್ತು ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿ ಕೊಡುವುದೇ ಧರ್ಮ ಎಂಬ ವೈದಿಕ ಧರ್ಮವನ್ನು ತಿರಸ್ಕರಿಸಿದ ಬಸವಣ್ಣ ಧರ್ಮಕ್ಕೆ ದಯವೇ ಮೂಲ ಎಂದರು (1/247, 805). ಧರ್ಮವೆಂದರೆ ವೈದಿಕ ಮಂತ್ರಗಳನ್ನು ಉಚ್ಚರಿಸುವುದು, ಪ್ರಾಣಿಬಲಿಕೊಡುವುದು, ಅಥವಾ ಪೂಜೆಯಲ್ಲಿ ವಿವಿಧ ರೀತಿಯ ಹೂವು, ವಿವಿಧ ರೀತಿಯ ನೈವೇದ್ಯ, ಹಲವಾರು ಪೂಜಾ ಸಾಮಗ್ರಿ ಬಳಸುವುದು ಅಥವಾ ಬಹಳ ಹೊತ್ತು ಪೂಜಿಸುವುದು ಎಂಬ ಅರ್ಥವನ್ನು ನಿರಾಕರಿಸಿದ ಅವರು ಧರ್ಮವೆಂದರೆ ನೆರೆಹೊರೆಯವರಿಗೆ ಕರುಣೆ ತೋರಿಸುವುದು ಎಂಬ ಹೊಸ ವ್ಯಾಖ್ಯೆ ನೀಡಿದರು. ಪ್ರತಿಯೊಂದು ಜೀವಿಯು ನಡೆದಾಡುವ (ಜಂಗಮ) ಲಿಂಗ ಮತ್ತು ಅವೆಲ್ಲವೂ ಸರ್ವಸಮಾವೇಶಿಯಾದ ಲಿಂಗ ಎಂಬ ತಮ್ಮ ಮೂಲ ಸಿದ್ಧಾಂತಕ್ಕನುಗುಣವಾಗಿ ಬಸವಣ್ಣನವರು ಕರುಣೆ ತೋರಿಸುವುದೇ ಸರ್ವಸಮಾವೇಶಿಯಾದ ಲಿಂಗವನ್ನು ಪೂಜಿಸಿದಂತೆ ಎಂದರು.
2.2. ಎಲ್ಲಾ ವೈದಿಕ ಪಂಥಗಳಲ್ಲೂ ಗುರು ಬ್ರಾಹ್ಮಣನಾಗಿರಬೇಕು ಎಂಬುದು ಸಾಂಪ್ರದಾಯಿಕ ವಿಧಿ. ಆದರೆ ಬಸವಣ್ಣನವರು ಬ್ರಾಹ್ಮಣಪಾರಮ್ಯವನ್ನು ತಿರಸ್ಕರಿಸಿದರಲ್ಲದೆ ಶ್ರೇಷ್ಠ ಶಿವಭಕ್ತರಾದ ಚನ್ನಯ್ಯ, ಕಕ್ಕಯ್ಯ, ಮುಂತಾದ ಕೆಳಜಾತಿಯವರನ್ನೇ ಗುರುಗಳೆಂದು ಸ್ವೀಕರಿಸಿದರು. ಚೆನ್ನಬಸವಣ್ಣ (3/881) ಮತ್ತು ತೋಂಟದ ಸಿದ್ಧಲಿಂಗ ಶಿವಯೋಗಿ (11/536) ಬ್ರಾಹ್ಮಣರಾದ ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದವರೆಲ್ಲರೂ ವೀರಶೈವ ಗುರುಗಳಿಂದ ಮತ್ತೊಮ್ಮೆ ಲಿಂಗದೀಕ್ಷೆ ಪಡೆಯಲು ಹೇಳಿದರು. ಇದರಿಂದ ವೀರಶೈವ ಧರ್ಮದಲ್ಲಿ ಬ್ರಾಹ್ಮಣ ಗುರುಗಳಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ (ಶುದ್ಧಶೈವರಲ್ಲಿ ಬ್ರಾಹ್ಮಣ ಗುರುಗಳು ಲಿಂಗದೀಕ್ಷೆಯನ್ನು ಕೊಡುವ ಪದ್ಧತಿ ಇತ್ತು. ಇದನ್ನು ಚೆನ್ನಬಸವಣ್ಣ ಮತ್ತಿತರರು ತಿರಸ್ಕರಿಸಲು ಕಾರಣವೇನೆಂದರೆ: ಬ್ರಾಹ್ಮಣ ಗುರುಗಳು ದೀಕ್ಷೆ ಕೊಡುವಾಗ ದೀಕ್ಷಿತರಿಗೆ ಜಾತಿಭೇದ ಮಾಡಬಾರದೆಂದು ಬೋಧಿಸುತ್ತಿರಲಿಲ್ಲ).
2.3.1. ಕಂತೆರಹಿತವಾದ ಲಿಂಗವನ್ನು ಕರಸ್ಥಲದಲ್ಲಿಟ್ಟು ಅಥವಾ ವೇದಿಕೆಯ ಮೇಲಿಟ್ಟು ಪೂಜಿಸುವ ಪದ್ಧತಿ ಬಸವ ಪೂರ್ವ ಕಾಲದಲ್ಲಿತ್ತು. ಅದನ್ನು ಅನುಸರಿಸುತ್ತಿದ್ದ ಕಾಳಾಮುಖ, ಪಾಶುಪತ ಮತ್ತು ಶುದ್ಧಶೈವರು ದ್ವೈತಿಗಳಾಗಿದ್ದರು. ಅಂದರೆ, ಆ ಲಿಂಗವು ತಮ್ಮ ಆತ್ಮದ ಕುರುಹು ಎಂದೂ ಆತ್ಮವೇ ಲಿಂಗವೆಂದೂ ಅವರು ನಂಬದೆ, ಆತ್ಮ ಶಿವನಿಗಿಂತ ಭಿನ್ನವೆಂದೂ ಲಿಂಗವು ಕೈಲಾಸದಲ್ಲಿರುವ ಶಿವನ ಕುರುಹೆಂದೂ ನಂಬಿದ್ದರು. ಅಲ್ಲದೆ ಆ ಪೂಜೆಯ ನಂತರ ಅವರು ಲಿಂಗವನ್ನು ಮೈಮೇಲೆ ಧರಿಸದೆ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಬಸವಣ್ಣನವರು ಯಾವಾಗಲೂ ಲಿಂಗವನ್ನು ಧರಿಸಬೇಕೆಂದು ವಿಧಿಸಿದರು. ಇಷ್ಟಲಿಂಗವು ಆತ್ಮದ (ಪ್ರಾಣದ) ಕುರುಹು, ಆತ್ಮವು ಲಿಂಗ (ಪ್ರಾಣ) ಎಂದು ನಂಬಿದ್ದ ಅವರು ಜೀವ, ಶಿವ ಮತ್ತು ಜಗತ್ತುಗಳ ಏಕತ್ವವನ್ನು ಬೋಧಿಸಿದರು.
2.3.2: ಪಾರಮೇಶ್ವರ ಆಗಮದಲ್ಲಿ (ಪಟಲ, 8, ಶ್ಲೋ. 69-72) ಹೀಗೆ ಹೇಳಲಾಗಿದೆ:
ಎಲ್ಲ ಪ್ರಾಣಿಗಳಲ್ಲಿ ಮಾನವನೇ ಮೇಲು; ಎಲ್ಲ ಮಾನವರಲ್ಲಿ ಬ್ರಾಹ್ಮಣರು ಮೇಲು; ಬ್ರಾಹ್ಮಣರಲ್ಲಿ ವೇದಪಾರಂಗತರು ಮೇಲು; ವೇದಪಾರಂಗತರಲ್ಲಿ ಯಜ್ಞಯಾಗಾದಿಗಳನ್ನು ಮಾಡುವವರು ಮೇಲು; ಯಜ್ಞಯಾಗಾದಿಗಳನ್ನು ಮಾಡುವವರಲ್ಲಿ ವೇದಾಂತಿಗಳು ಮೇಲು; ವೇದಾಂತಿಗಳಲ್ಲಿ ಪಾಶುಪತರು ಮೇಲು; ಪಾಶುಪತರಲ್ಲಿ ಲಿಂಗಧಾರಿಗಳು ಮೇಲು; …
ಇದರಿಂದ ವ್ಯಕ್ತವಾಗುವುದೇನೆಂದರೆ ಯಜ್ಞಯಾಗಾದಿಗಳನ್ನು ಮಾಡುವ ಬ್ರಾಹ್ಮಣರು ಮಾತ್ರ ಲಿಂಗಧಾರಿಗಳು ಎಂಬುದು ವ್ಯಕ್ತವಾಗುತ್ತದೆ. ಬಸವಣ್ಣನವರ ಕಾಲದಲ್ಲಿ ಅನೇಕ ಬ್ರಾಹ್ಮಣರು ಲಿಂಗಾಯತರಾದುದು ನಿಜ. ಆದರೆ ಒಮ್ಮೆ ಲಿಂಗಾಯತರಾದ ಮೇಲೆ ಅವರು ಬ್ರಾಹ್ಮಣರಾಗಿ ಉಳಿಯುವುದಿಲ್ಲ. ಯಜ್ಞಯಾಗಾದಿಗಳನ್ನು ಮಾಡುವ ಬ್ರಾಹ್ಮಣರು ಲಿಂಗಧಾರಿಗಳಾದರೂ ಬಸವಣ್ಣ ಮತ್ತು ಚೆನ್ನಬಸವಣ್ಣನವರ ದೃಷ್ಟಿಯಲ್ಲಿ ಅವರು ಭವಿಶೈವರು, ಶೈವಕರ್ಮಿಗಳು (1/966; 3/848, 851, 854, 865, 866, 1170).
2.4. ಶುದ್ಧಶೈವರಲ್ಲಿ ಜಂಗಮರು ಇದ್ದರು. ಆದರೆ ಅವರು ಯಾವ ಕಾಯಕವನ್ನೂ ಮಾಡಬಾರದು, ಭಿಕ್ಷೆಯನ್ನೇ ಅವಲಂಬಿಸಬೇಕೆಂದು ನಿಯಮವಿತ್ತು. ಆದರೆ ಈ ಜಂಗಮರು ತಾವು ಶಿವನ ಅವತಾರವೆಂದು ಹೇಳಿಕೊಂಡು ಮುಗ್ಧ ಭಕ್ತರಿಂದ ಮಕ್ಕಳ ಮಾಂಸ, ಅವರ ಸುಂದರಿಯರಾದ ಹೆಂಡತಿಯರನ್ನು ಕೇಳುತ್ತಿದ್ದರು. ಬಸವಣ್ಣನವರು ಅಂತಹ ಬೇಡಿಕೆಗಳನ್ನು ಪೂರೈಸಿದ ದೇವರ ದಾಸಿಮಯ್ಯ, ಸಿರಿಯಾಳ-ಚಂಗಳೆ, ಸಿಂಧು ಬಲ್ಲಾಳರನ್ನು ಶ್ಲಾಘಿಸುತ್ತಾರೆಯೇ ಹೊರತು ಆ ಬೇಡಿಕೆಗಳನ್ನು ಮುಂದಿಟ್ಟ ಜಂಗಮರನ್ನಲ್ಲ. ಅಲ್ಲದೆ ಅವರು ಜಂಗಮ ಎಂಬ ಪದಕ್ಕೆ ಹೊಸ ಅರ್ಥಗಳನ್ನು ಕೊಟ್ಟರು. ಅವುಗಳಲ್ಲಿ ಮೂರು ಹೀಗಿವೆ: ಯಾವುದೇ ಜೀವಿಯು ಚಲಿಸುವ ಲಿಂಗವಾದುದರಿಂದ ಅದು ಜಂಗಮಲಿಂಗ; ಯಾವುದೇ ಮಾನವ ಮುಕ್ತನಾಗಿದ್ದರೆ ಅವನು ಜಂಗಮಲಿಂಗ; ಯಾರೇ ಸಮಾಜವನ್ನು ನೈತಿಕವಾಗಿ ಮತ್ತು ಧಾರ್ಮಿಕವಾಗಿ ತಿದ್ದುವ ಕಾಯಕ ಮಾಡಿದರೆ ಅವನು ಜಂಗಮ. ಆದರೆ ಜಂಗಮರು ಬೇಡಬಾರದು. ಭಕ್ತರು ಬೇಡಿಸಿಕೊಳ್ಳಬಾರದು. ಜಂಗಮರು ಬೇಡುವ ಮೊದಲೇ ಭಕ್ತರು ಅವರಿಗೆ ದಾಸೋಹ ಮಾಡಬೇಕು.
2.5. ಪ್ರಸಾದ: ದೇವಸ್ಥಾನಗಳಲ್ಲಿ ಅರ್ಚಕರು ಭಕ್ತರಿಗೆ ನೀಡುವ ಹಣ್ಣು, ಸಿಹಿ ಪದಾರ್ಥ, ಪುಳಿಯೋಗರೆ ಮುಂತಾದ ಸಣ್ಣ ಪ್ರಮಾಣದ ಆಹಾರ ವಸ್ತುಗಳು ಎಂಬುದು ಪ್ರಸಾದಕ್ಕಿರುವ ಸಾಂಪ್ರದಾಯಿಕ ಅರ್ಥ. ಅರ್ಚಕರಲ್ಲದವರೂ ಕೆಳಜಾತಿಯರೂ ತಮ್ಮ ಪ್ರಸಾದವನ್ನು ತಾವೇ ಮಾಡಿಕೊಳ್ಳುವಂತಿಲ್ಲ. ಇದನ್ನು ಗಮನಿಸಿದ ಬಸವಣ್ಣನವರು ಪ್ರಸಾದ ಪರಿಕಲ್ಪನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದರು. ಜಾತಿ ಮತ್ತು ಲಿಂಗ ಭೇದವಿಲ್ಲದೆ ಎಲ್ಲರಿಗೂ ಲಿಂಗ ಪ್ರದಾನ ಮಾಡಿದ ಅವರು ಇಷ್ಟಲಿಂಗಕ್ಕೆ ಅರ್ಪಿಸಿದ ಎಲ್ಲವೂ ಪ್ರಸಾದವಾಗುತ್ತದೆ ಎಂದರು. ಇದಕ್ಕಾಗಿ ಯಾರೂ ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ, ಅರ್ಚಕರಿಗೆ ಕಾಯಬೇಕಾಗಿಲ್ಲ. ಕೇವಲ ಆಹಾರ ಪದಾರ್ಥಗಳನ್ನಷ್ಟೇ ಅಲ್ಲ, ಎಲ್ಲ ವಸ್ತುಗಳನ್ನೂ ಎಲ್ಲ ವಿಷಯಗಳನ್ನೂ (ರೂಪ, ರಸ ಇತ್ಯಾದಿ) ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳನ್ನೂ ಅಂತಃಕರಣಗಳನ್ನೂ ಲಿಂಗಪ್ರಸಾದವೆಂದೇ ತಿಳಿಯಬೇಕೆಂದು ಅವರು ಬೋಧಿಸಿದರು. ಪ್ರಪಂಚದ ಯಾವ ವಸ್ತುವೇ ಆಗಲಿ, ನಮ್ಮ ದೇಹೇಂದ್ರಿಯಗಳೇ ಆಗಲಿ ಯಾವುವೂ ನಮ್ಮದಲ್ಲ, ಎಲ್ಲವೂ ಶಿವನ ಪ್ರಸಾದ ಎಂದು ತಿಳಿಯುವುದು ಮೋಕ್ಷಕ್ಕೆ ಅಡ್ಡಿಯಾಗುವ ಸ್ವಾರ್ಥಭಾವಗಳನ್ನು ನಿವಾರಿಸುವ ಉತ್ತಮ ವಿಧಾನವೆಂಬುದು ಅವರ ತಿಳಿವಳಿಕೆ ಆಗಿತ್ತು.
ಈ ಕಾರಣಗಳಿಂದಲೇ ಗುರು, ಲಿಂಗ, ಜಂಗಮ ಮತ್ತು ಪ್ರಸಾದಗಳ ಸಂಕುಚಿತಾರ್ಥಗಳನ್ನು ಕಳೆಯಲು ಮತ್ತು ಮಾನವ ಕಲ್ಯಾಣಕ್ಕೆ ಬೇಕಾದ ಹೊಸ ಕಲ್ಪನೆಗಳನ್ನು ರೂಪಿಸಲು ಬಸವಣ್ಣನವರು ಭೂಮಿಗೆ ಅವತರಿಸಿದರು ಎಂದು ಅಲ್ಲಮ ಮತ್ತು ಚೆನ್ನಬಸವಣ್ಣ ಇಬ್ಬರೂ ಹೇಳುತ್ತಾರೆ. [ಹಿರೇಮಠ, ಆರ್.ಸಿ. ಮತ್ತು ಸುಂಕಾಪುರ, ಎಮ್.ಎಸ್.(ಸಂ): ಅಲ್ಲಮಪ್ರಭುದೇವರ ವಚನಗಳು (ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, 1976), ವ. 928; 3/7, 8].
3 ಸಮಾಜ ದರ್ಶನ: 3.1. ಎಲ್ಲ ವರ್ಗದ ಜನರನ್ನು ಆಕರ್ಷಿಸಿದ ಬಸವಣ್ಣನವರು ಅವರಿಗೆ ಜಾತಿತಾರತಮ್ಯ ಮತ್ತು ಕಾಯಕ ತಾರತಮ್ಯವನ್ನು ನಿರಾಕರಿಸುವ ಲಿಂಗಾಯತ ಧರ್ಮ ಬೋಧಿಸಿದರು. ಲಿಂಗ ಧರಿಸಿದವರೆಲ್ಲರೂ ಕುಲಜರು-ಸಮಾನರು, ಲಿಂಗಧಾರಿಗಳಲ್ಲದ ಎಲ್ಲರೂ ಹೊಲೆಯರು ಎಂದರು (1/605, 606).
3.2. ವೈದಿಕ ಸಂಪ್ರದಾಯವು ಬ್ರಾಹ್ಮಣರ ವೃತ್ತಿಯಾದ ಯಜ್ಞ ಯಾಗಾದಿಗಳನ್ನು ಉಳಿದೆಲ್ಲ ವೃತ್ತಿಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಿತು. ಆದರೆ ಬಸವಾದಿ ಶರಣರು ಬ್ರಾಹ್ಮಣರ ವೃತ್ತಿಗೂ ದೊಂಬರ ವೃತ್ತಿಗೂ ಹೊಟ್ಟೆ ತುಂಬಿಸಿಕೊಳ್ಳುವ ಒಂದೇ ಉದ್ದೇಶ ಇರುವುದರಿಂದ ಒಂದು ಶ್ರೇಷ್ಠ, ಮತ್ತೊಂದು ಕನಿಷ್ಠ ಎಂದೇಕೆ ಪರಿಗಣಿಸಬೇಕು ಎಂದು ಪ್ರಶ್ನಿಸಿದ್ದಾರೆ.
3.3. ಹೆಂಗಸರು ಪ್ರತಿ ತಿಂಗಳು ರಜಸ್ವಲೆಯಾಗುತ್ತಾರೆಂಬ ಕಾರಣಕ್ಕೆ ಅವರಿಗೆ ವೈದಿಕ ಯಜ್ಞಗಾದಿಗಳ ಆಚರಣೆಯನ್ನೂ ಜನಿವಾರಧಾರಣೆಯನ್ನು ವೈದಿಕ ಸಂಪ್ರದಾಯ ತಿರಸ್ಕರಿಸಿತು. ಬಸವಣ್ಣನವರು ಲಿಂಗಧಾರಿಯಾದ ಹೆಣ್ಣುಮಕ್ಕಳು, ಲಿಂಗಧಾರಿಯಾದ ಗಂಡಸಿನಷ್ಟೇ ಪವಿತ್ರ ಎಂದೂ, ರಜಸ್ಸೂತಕ ಆಕೆಯನ್ನು ಮಲಿನಗೊಳಿಸುವುದಿಲ್ಲ ಎಂದೂ ರಜಸ್ಸೂತಕದ ದಿನಗಳಲ್ಲೂ ಆಕೆ ಲಿಂಗಪೂಜೆಯನ್ನು ಮಾಡಿಕೊಳ್ಳಬೇಕೆಂದೂ ವಿಧಿಸಿದರು.
3.4. ಪ್ರತಿಯೊಬ್ಬ ವ್ಯಕ್ತಿಯೂ ಲಿಂಗದ ಪ್ರತಿರೂಪವಾದುದರಿಂದ ಸಶಕ್ತರು ಹೆಚ್ಚು ದುಡಿದು ಇಲ್ಲದವರಿಗೆ ದಾಸೋಹ ಮಾಡಬೇಕು. ಕೇವಲ ಲಿಂಗಪೂಜೆ ಮಾಡಿ ದಾಸೋಹ ಮಾಡದಿರುವುದು ಅಪೂರ್ಣ ಧರ್ಮ.
4. ಸನ್ಯಾಸ ಮತ್ತು ಇಂದ್ರಿಯ ಸುಖಗಳ ಸಮತೋಲನ: ವೈದಿಕ ಸಂಪ್ರದಾಯದ ಪ್ರಕಾರ ವಯಸ್ಸಾದ ಗಂಡಸರು ಸಮಾಜದಿಂದ ದೂರ ಹೋಗಿ ಕಾಡಿನಲ್ಲಿ ಆಧ್ಯಾತ್ಮಿಕ ಜೀವನ ನಡೆಸಬೇಕು (ಸನ್ಯಾಸಾಶ್ರಮ). ಬಸವಾದಿ ಶರಣರು ಆಧ್ಯಾತ್ಮಿಕ ಗುರಿ ಮುಟ್ಟಲು ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಳನ್ನು ತ್ಯಜಿಸುವುದು ಅನಾವಶ್ಯಕ ಎಂದರು. ಬಸವಣ್ಣನವರು ಇಂದ್ರಿಯನಿಗ್ರಹ ಮಾಡಿದರೆ ದೈಹಿಕ ಮತ್ತು ಮಾನಸಿಕ ದೋಷಗಳು ಉಂಟಾಗುವುದರಿಂದ ಇಂದ್ರಿಯ ಸುಖ ತ್ಯಜಿಸಬಾರದೆಂದು ಉಪದೇಶಿಸಿದರು. ಸಿರಿಯಾಳ ಚಂಗಳೆಯರು ದಾಂಪತ್ಯ ಸುಖವನ್ನು ಅನುಭವಿಸಿದರೂ ಶ್ರೇಷ್ಠ ಶಿವಭಕ್ತರಾಗಿದ್ದರು (1/639). ನಮ್ಮ ಪಾಲಿಗೆ ಬಂದುದನ್ನೆಲ್ಲ ಶಿವನ ಪ್ರಸಾದವೆಂದು ಸುಖಿಸಿದರೆ ಏನೂ ತಪ್ಪಿಲ್ಲ (1/775).
ಬಸವಣ್ಣನವರ ಸಿದ್ಧಾಂತಗಳಲ್ಲಿ ಕೆಲವು ಮೊದಲೇ ಇದ್ದವು, ಅವರು ಕೇವಲ ಅವುಗಳನ್ನು ಸುಧಾರಿಸಿದಷ್ಟೇ, ಎಂದು ಕೆಲವರು ಆಕ್ಷೇಪಿಸಬಹುದು. ಹೌದು, ಈ ಆಕ್ಷೇಪಣೆ ಸತ್ಯ. ಅವರು ಇತರ ಧರ್ಮಗಳ ಸ್ಥಾಪಕರಂತೆ ಹಳೆಯ ನಂಬಿಕೆಗಳನ್ನೂ ಆಚರಣೆಗಳನ್ನೂ ಹೊಸ ಸಂದರ್ಭಗಳಿಗೆ ಹೊಂದಿಕೆಯಾಗುವಂತೆ ಕ್ರಾಂತಿಕಾರಿಗೊಳಿಸಿದರು. ಉದಾಹರಣೆಗೆ, ಲಿಂಗಾರಾಧನೆ ಮೊದಲೇ ಇತ್ತು. ಆದರೆ, ಅದಕ್ಕೆ ಸಂಬಂಧಿಸಿದ ಈ ಕೆಳಗಿನ ಕ್ರಾಂತಿಕಾರಕ ಬದಲಾವಣೆಗಳನ್ನು ನಾವು ಗಮನಿಸಬಹುದು.
1. ಮೊದಲು ಇಷ್ಟಲಿಂಗವನ್ನು ಯಾರು ಬೇಕಾದರೂ ಪಡೆಯಬಹುದಿತ್ತು. ಯೋಗಿಯಾಗಬೇಕೆನ್ನುವವನು ಸೂಕ್ತ ಯೋಗಗುರುವಿನಿಂದ ದೀಕ್ಷೆ ಪಡೆದು ಯೋಗ ಸಾಧನೆಯಲ್ಲಿ ತೊಡಗುವಂತೆ, ಲಿಂಗವನ್ನು ಪಡೆಯಬೇಕೆನ್ನುವವನು ಸೂಕ್ತ ಗುರುವಿನಿಂದ ಲಿಂಗದೀಕ್ಷೆ ಪಡೆಯುತ್ತಿದ್ದ. ಹಿಂದೆ ಉದಾಹರಿಸಿದ ಶ್ಲೋಕಗಳನ್ನು ನೆನಪಿಸಿಕೊಂಡರೆ ಪಾಶುಪತ ಮತ್ತು ಕಾಳಾಮುಖ ಬ್ರಾಹ್ಮಣರು ಲಿಂಗ ದೀಕ್ಷಿತರಾಗಿದ್ದರೆಂಬುದು ಖಚಿತವಾಗುತ್ತದೆ. ಆದರೆ ಪಾಶುಪತ ಅಥವಾ ಕಾಳಾಮುಖರಿಗೆ ಲಿಂಗದೀಕ್ಷೆ ಆವಶ್ಯಕವಾಗಿತ್ತು ಎಂಬುದು ಇದರ ಅರ್ಥವಲ್ಲ. ಲಿಂಗಾರಾಧಕರಲ್ಲದ ಪಾಶುಪತರೂ ಇದ್ದರು, ಪಾಶುಪತರಲ್ಲದ ಲಿಂಗಾರಾಧಕರೂ ಇದ್ದರು. ಆದರೆ ಬಸವಣ್ಣನವರು ಲಿಂಗಧಾರಣೆ ಮತ್ತು ಲಿಂಗಾರಾಧನೆ ತಮ್ಮ ಹೊಸ ಧರ್ಮದ ಆವಶ್ಯಕ ಲಕ್ಷಣ ಎಂದು ನಿರ್ಧರಿಸಿದರು. ಅಂದರೆ, ಲಿಂಗಾಯತರಾಗಬೇಕೆಂದರೆ ಲಿಂಗಧಾರಿಗಳಾಗಬೇಕು, ಲಿಂಗಧಾರಿಗಳಾದರೆ ಲಿಂಗಾಯತರಾಗಬೇಕು. ಇದನ್ನು ನಾವು ಗಮನಿಸಿದರೆ ಹಳೆಯ ಪದ್ಧತಿಗೆ ಹೊಸ ದಿಕ್ಕು ಕೊಟ್ಟ ಬಸವಧರ್ಮಕ್ಕೆ ಹೊಸ ಹೆಸರಿನ ಆವಶ್ಯಕತೆ ಇದ್ದುದು ಅರ್ಥವಾಗುತ್ತದೆ.
2. ಬಸವಣ್ಣನವರು ಹಳೆಯ ನಂಬಿಕೆ ಮತ್ತು ಪದ್ಧತಿಗಳನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿ, ಒಂದು ಹೊಸ ಧರ್ಮವನ್ನು ರಚಿಸಿದರು. ಜೊತೆಗೆ ಕೆಲವು ಸಿದ್ಧಾಂತ ಮತ್ತು ಆಚರಣೆಗಳನ್ನೂ ಸೇರಿಸಿದರು.
ಯಾವ ಹೊಸ ಧರ್ಮವೂ ಶೇಕಡ ನೂರರಷ್ಟು ಹೊಸದಲ್ಲ, ಹಳೆಯದನ್ನೇ ಸುಧಾರಿಸಿದ ಧರ್ಮ ಎಂಬುದನ್ನು ನಾವು ಗಮನಿಸಬೇಕು. ಉದಾಹರಣೆಗೆ ಯೇಸು ಯಹೂದಿ ಧರ್ಮವನ್ನು ಸುಧಾರಿಸಿ ಕ್ರೈಸ್ತ ಧರ್ಮವನ್ನು ಸ್ಥಾಪಿಸಿದರು. ಲಿಂಗಾಯತ ಧರ್ಮದ ಸ್ಥಾಪನೆಯನ್ನು ಒಂದು ಹೊಸ ಕಾರಿನ ರಚನೆಗೆ ಹೋಲಿಸಬಹುದು. ಕಾರಿನ ವಿವಿಧ ಭಾಗಗಳನ್ನು ಬೇರೆ ಯಾರೋ ತಯಾರಿಸಿರುತ್ತಾರೆ. ಆದರೆ ಆ ವಿವಿಧ ಭಾಗಗಳು ಸಂಯೋಜಿತ ಕಾರಿನ ಭಾಗಗಳಲ್ಲದಿದ್ದರೆ ಅವುಗಳಿಗೆ ಏನೂ ಮೌಲ್ಯವಿಲ್ಲ. ಆದರೆ ಅವುಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ಜೋಡಿಸಿ ಕಾರನ್ನು ತಯಾರಿಸಿದ ಕೂಡಲೇ ಅವುಗಳಿಗೆ ಪ್ರಾಮುಖ್ಯ ಬರುತ್ತದೆ. ಶರಣರು ಹೇಳಿದ ಗುರು-ಲಿಂಗ-ಜಂಗಮ ಆ ಮೊದಲೇ ಇದ್ದ ಗುರುಲಿಂಗಜಂಗಮಪ್ರಸಾದ ತತ್ವಗಳ ಸಹವರ್ತಿಯಲ್ಲ. ಸ್ವತಂತ್ರವಾಗಿ ಅವುಗಳಿಗೆ ಹೊಸ ವ್ಯಾಖ್ಯಾನಗಳನ್ನೇ ಕೊಟ್ಟರು.
ಅವರು ರೂಢಿಗೆ ತಂದ ಅವೈದಿಕ ಮತ್ತು ಅನಾಗಮಿಕ ಆಚರಣೆಗಳು ಪ್ರಖರವಾಗಿದ್ದವು, ಎಲ್ಲರ ಕೈಗೂ ಎಟುಕುವಂತಿದ್ದವು. ಈ ಅವೈದಿಕ ಮತ್ತು ಅನಾಗಮಿಕ ನಿಲುವುಗಳ ಕಾರಣದಿಂದಲೇ ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು, ಅವರ ಸಂಗಡಿಗರನ್ನು ಕೊಲ್ಲಲಾಯಿತು ಮತ್ತು ಕಲ್ಯಾಣದಿಂದ ಓಡಿಸಲಾಯಿತು.
Comments 4
ಹೊನ್ನಪ್ಪ ಸಿಗಂದೂರು
May 15, 2024ಬಸವಣ್ಣನವರೇ ಲಿಂಗಾಯತ ಧರ್ಮವನ್ನು ಹುಟ್ಟುಹಾಕಿದವರೆಂದು ಇತಿಹಾಸದ ದಾಖಲೆಗಳು ಸಾರಿಸಾರಿ ಹೇಳುತ್ತಿದ್ದರೂ ವೀರಶೈವ ವಾದಿಗಳ ಕಣ್ಣಿಗೆ ಇವಾವೂ ಕಾಣದೇ ಇರುವುದು ಎಂಥ ವಿಪರ್ಯಾಸ!
ಅಭಿಷೇಕ್. ಎಂ.
May 15, 2024ಡಾ.ನಂದೀಮಠರು ವೀರಶೈವ ವಿಚಾರಗಳಲ್ಲಿ ಸಿಕ್ಕಹಾಕಿಕೊಂಡಿದ್ದರಿಂದ ವಚನಗಳನ್ನು, ಶರಣರನ್ನು, ಬಸವಣ್ಣನವರನ್ನು ಆಧುನಿಕ ದೃಷ್ಟಿಯಿಂದ ನೋಡಲು ವಿಫಲರಾದರು. ಅವರ ಅರೆಬರೆ ಸಂಶೋಧನೆಯ ಮಾತುಗಳು ಲಿಂಗಾಯತಕ್ಕೆ ದೊಡ್ಡ ಅಪಾಯ ತಂದೊಡ್ಡಿವೆ.
Vijay G.T
May 17, 2024ಸಮಕಾಲೀನ ಶರಣರ ವಚನಗಳೇ ಸಾಕು ಬಸವಣ್ಣ ಲಿಂಗಾಯತದ ಧರ್ಮಗುರು ಎನ್ನಲು. ಹಗಲಿನ ಸೂರ್ಯನಂತೇ ಸ್ಪಷ್ಟವಾಗಿರುವ ಈ ಸಾಕ್ಷಿಗಿಂತ ಬೇರೆ ಸಾಕ್ಷಿ ಬೇಕೆ?
Chinmay T.S
May 25, 2024ದಾಖಲೆಗಳ ಸಮೇತ ವಾದ ಮೂಡಿಸುತ್ತಿರುವುದು ಸರಿಯಾಗಿ ಇದೆ. ವೀರಶೈವವಾದಿಗಳ ಸಮಸ್ಯೆ ಬಸವಣ್ಣನವರಲ್ಲ. ಬದಲಿಗೆ ಅವರು ರೂಡಿಸಿಕೊಂಡು ಬಂದ ಆಚರಣೆಗಳು. ಆ ಆಚರಣೆಗಳೆಲ್ಲಾ ಬಸವ ವಿರೋಧಿ ಕ್ರಮಗಳಾಗಿವೆ.