ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ತೀರಾ ಇತ್ತೀಚೆಗೆ ‘ಮಂಗಳಾ’ ಎನ್ನುವ ಕೂಸೊಂದು ನನ್ನ ಕೈಕಾಲುಗಳನ್ನು ಬಿಗಿದು ಬಲಾತ್ಕಾರವಾಗಿ ‘ಬಯಲು ಬ್ಲಾಗಿ’ನಲ್ಲಿ ಕೂಡಿ ಹಾಕಿ ‘ಶರಣಪಥ’ದ ಕುರಿತು ಮಾತನಾಡಬೇಕೆಂದು ನನ್ನನ್ನು ಒತ್ತಾಯಿಸುತ್ತಿದೆ. ಕೂಸು ಕಟ್ಟಿದೆಯಾದ್ದರಿಂದ ನನಗೆ ಬಿಗಿದಿರುವ ಕಟ್ಟುಗಳು ಅಷ್ಟೇನೂ ಬಿಗಿಯಾಗಿಲ್ಲ. ಆದ್ದರಿಂದ ಸುಲಭವಾಗಿ ನಾನು ಈ ಇಕ್ಕಟ್ಟಿನಿಂದ ತಪ್ಪಿಸಿಕೊಂಡು ಬಿಡುವ ಸಂಭವವಂತೂ ಉಂಟು. ಆದರೆ ನಾನು ಹಾಗೆ ಮಾಡುತ್ತಿಲ್ಲ. ಬದಲಾಗಿ, ವಚನಗಳ ಕುರಿತು ಕೇಳಿಸಿಕೊಳ್ಳುವವರ ಕಷ್ಟ ಮತ್ತು ಹೇಳುವವರ ಸವಾಲುಗಳ ಮಧ್ಯೆ ಸೋರಿ ಹೋಗುತ್ತಿರುವ ಸರಿಯಾದ ಸಂವಹನದ ಕುರಿತಾಗಿ ನಾನಂತೂ ವಿಹ್ವಲನಾಗಿ ತೊಳಲಾಡುತ್ತಿದ್ದೇನೆ.
ಏಕೆಂದರೆ, ವಚನಗಳಲ್ಲಡಗಿರುವ ನೈಜ ತತ್ವವು ಮನುಷ್ಯ ವಿವೇಕದ ಸಮಪಾತಳಿಯಿಂದ ನಡಿಗೆಗೆ ಆವರಿಸಿಕೊಳ್ಳದಿರುವ ಕೇಡಿನಲ್ಲಿ ನಾವಿಂದು ನಾಚಿಕೆಗೆಟ್ಟು ಮಾತನಾಡಬೇಕಿರುವ ಮೋಸಕ್ಕೊಳಗಾಗಿದ್ದೇವೆ. ಈ ನನ್ನ ತೊಳಲಾಟ ನಿಮ್ಮಲ್ಲಿ ಅಂತಃಸ್ಪುರಣೆಯಾಗಬೇಕೆಂದರೆ, ಸಾವಿರಾರು ವರ್ಷಗಳಿಂದ ಸತ್ಯವನ್ನು ನುಡಿವ ನಾಲಿಗೆಗಳಿಗೂ ಕೇಳಿಸಿಕೊಳ್ಳುವ ಕಿವಿಗಳಿಗೂ ಉದ್ದೇಶಪೂರ್ವಕವಾಗಿ ಹೊಲಿಗೆ ಹಾಕುತ್ತಲೇ, ಮಾತಿಗಿರುವ ಓಜಸ್ಸನ್ನು ಕೊಂದು ಹಾಕಿರುವ ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಭಾಷಾ ರಾಜಕಾರಣದ ಪರಿಜ್ಞಾನ ಬೇಕೇ ಬೇಕಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ವಚನಗಳು ಕೇವಲ ತುಟಿಗಳಲ್ಲಾಡುವಿಕೆಯ ಅಮಲಾಗಿಯೋ… ಇಲ್ಲವೇ ಮಾತಿನ ಚಮತ್ಕಾರವಾಗಿಯೋ… ಇಲ್ಲವೇ ವಿದ್ವತ್ ಪ್ರದರ್ಶನವಾಗಿಯೋ… ಇಲ್ಲವೇ ಕ್ರಿಯಾಸಂಬಂಧವಿಲ್ಲದ ಟೊಳ್ಳು ಜಂಭವಾಗಿಯೋ ಆಗಿಬಿಡುವ ಅಪಾಯ ನನ್ನಲ್ಲಿ ಹಿಂಜರಿಕೆಯನ್ನುಂಟು ಮಾಡುತ್ತಿದೆ. ಬರೀ ಮಾತು ಮತ್ತು ಭಾವನಾತ್ಮಕ ತೆವಲಿನ ಹಂತಕ್ಕೆ ವಚನಗಳನ್ನು ಸೀಮಿತಗೊಳಿಸಿಬಿಟ್ಟರೆ ನಿಜ ಬದುಕಿನ ರೀತಿ ನೀತಿಗಳ ಮೇಲೆ ವಚನಗಳ ಪ್ರಭಾವವೇನೂ ಉಳಿಯಲಾರದು. ಈ ವಿಷಮಸ್ಥಿತಿ ವಚನಗಳ ಸಾರವನ್ನು ಕೊನೆಯಿರದ ಶಾಬ್ದಿಕ ಗೊಂದಲಕ್ಕೊ ಇಲ್ಲವೆ ಅಸಂಬದ್ಧವಾದ ಊಹೆಗಳಿಗೋ ತಳ್ಳಿಬಿಡುತ್ತದೆ. ಇದು ಖಂಡಿತವಾಗಿಯೂ ಕಾರ್ಗತ್ತಲ ಹಾದಿಯಲ್ಲಿ ಬೆಳಕಿನ ಭ್ರಮೆಯನ್ನು ಕಲ್ಪಿಸಿಕೊಂಡು ಎಡವಿ ಬಿದ್ದಂತಾಗುತ್ತದೆ.
ಎಲ್ಲ ಕಾಲಕ್ಕೂ ಧರ್ಮಾಧಿಕಾರ, ದೈವಾಧಿಕಾರ ಹಾಗೂ ರಾಜ್ಯಾಧಿಕಾರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಶಕ್ತಿಗಳು ಈ ನೆಲದಲ್ಲಿ ನಿರಂತರವಾಗಿ ಪ್ರಜಾಸ್ವಾಮ್ಯ ಹಾಗೂ ಪ್ರಜಾತಂತ್ರದ ಮಹತ್ವವನ್ನು ಗಾಯಗೊಳಿಸುತ್ತಲೇ ಬಂದಿವೆ. ಜೀವವಿರೋಧಿಯಾದ ಈ ರಾಜಕಾರಣದ ಮೇಲೆ ಸತ್ವಪೂರ್ಣವಾದ, ನೇರವಾಗಿ ಪರಿಣಾಮ ಬೀರಿದ ಒಂದು ಆದರ್ಶ ಪರ್ಯಾಯ ರಾಜಕಾರಣವನ್ನಾಗಿ ಶರಣಪಥವನ್ನು ನಾವಿಂದು ಗ್ರಹಿಸಬೇಕಾಗಿದೆ. ಆಧುನಿಕ ಜಗತ್ತಿನ ಅವಕಾಶಗಳಲ್ಲಿ ಜೀವಿಸುತ್ತಿರುವ ನಾವು ಸಂಪೂರ್ಣವಾಗಿ ‘ಅನುಭಾವ’ದ ಚೌಕಟ್ಟಿನಲ್ಲಿಟ್ಟು ನೋಡುವ ಗೀಳಿಗೆ ಬಿದ್ದರೆ ವಚನಗಳಿಗೆ ಯಾವ ನ್ಯಾಯವನ್ನು ಒದಗಿಸಲಾಗದು. ಇಂತಹದ್ದು ಕೇವಲ ಸೋಗಿನ ಅನುಭಾವವಷ್ಟೇ ಆಗಿಬಿಡುತ್ತದೆ. ಶರಣಪಥವು ಅನುಭಾವಕ್ಕೂ ಮೀರಿ ವಿಶಾಲವಾದ ಶ್ರೇಷ್ಠ ಸಮಾಜವಾದವಾಗಿದೆ ಮತ್ತು ಮಾನವಜೀವಿ ಅನುಸರಿಸಲೇ ಬೇಕಾದ ಉತ್ಕೃಷ್ಟವಾದ ಈ ಮಣ್ಣಿನ ನಡಿಗೆಯಾಗಿದೆ. ಈ ಕಾರಣದಿಂದ ಶರಣಪಥದ ವಿಶಿಷ್ಠವೂ ವಿಶಾಲವೂ ಆದ ಅದರ ಮಹತ್ತರ ಆಕಾಂಕ್ಷೆಗಳನ್ನು ನಾವು ಚಿಂತನೆಗೆ ಹಚ್ಚಬಹುದು. ಇದರಲ್ಲಿ ಬಹಳ ಪ್ರಮುಖವಾದುದೆಂದರೆ, ಮಾನವನ ಮನಸ್ಸನ್ನು ಬದಲಾಯಿಸುವುದು; ಅಥವಾ ಅವನ ಮನಸ್ಸಿನಲ್ಲಿರುವ ಅನಗತ್ಯ ಕೊಳೆಯನ್ನು ತೊಡೆದುಹಾಕಿ ಪರಿಶುಭ್ರಗೊಳಿಸುವುದು; ಅಂದರೆ ಮನುಷ್ಯ ಸ್ವಭಾವವನ್ನು (Heritage habit pattern) ಬದಲಾಯಿಸುವುದರ ಮೂಲಕ ಸಮಸಮಾಜವನ್ನು, ಸರ್ವರೂ ನಿರಾತಂಕವಾಗಿ ಬಾಳುವ ಸಮಾಜವನ್ನು ಪುನರ್ ರೂಪಿಸುವುದು! ಸರ್ವ ಶುದ್ಧಾಂಗವಾದ ಸಮತಾ ಸಮಾಜದ ಕಟ್ಟುವಿಕೆಯು ಸಮಾಜದ ಪ್ರಮುಖ ಅಂಗವಾದ ವ್ಯಕ್ತಿಯ ಸ್ವಭಾವದ ಬದಲಾವಣೆಯನ್ನು ಕಡ್ಡಾಯವಾಗಿ ಅಪೇಕ್ಷಿಸುತ್ತದೆ. ಇದನ್ನು ಅಂದೇ ತಿಳಿದಿದ್ದ ಶರಣರ ವಿವೇಕ ವೈಜ್ಞಾನಿಕವಾದದ್ದು. ಇದನ್ನೇ ಅವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎಂದು ಪ್ರತಿಪಾದಿಸಿದರು. ಈ ಮಹತ್ವಾಕಾಂಕ್ಷೆಯನ್ನು ಸಾಧಿಸಿಕೊಳ್ಳುವ ಸಲುವಾಗಿ ತಮಗಾಗಿ ತಾವೇ ‘ಗುರುಪಥ’ವನ್ನು ಕಟ್ಟಿ ಲೋಕವನ್ನು ಬೆಳಗಿಸಿದರು. ಶರಣರಲ್ಲಿ ಗುರು ಪಥವೇ ಪರಮ ನಾಯಕ!!!
ಹಾಗೆಂದ ಮಾತ್ರಕ್ಕೆ ಗುರುಪಥವು ಸರ್ವಾಧಿಕಾರದ ಸಂವಿಧಾನವೇನೂ ಅಲ್ಲ. ನಮಗೆ ನಮ್ಮನ್ನು ತಿಳಿಯುವಂತೆ ಮಾಡಿ ಲೋಕ ಸಂಕಟಗಳ ಭ್ರಮೆಗಳಿಂದ ನಮ್ಮನ್ನು ದಾಟಿಸುವಂತಹದ್ದು. ಆದ್ದರಿಂದ ಆ ಪಥದ ಸತ್ಯ ಸ್ಪರ್ಶವೇ ದಯೆಯಿಂದ ತುಂಬಿ ಹೋಗಿರುತ್ತದೆ… “ಗುರುಪಥವು ಜಗತ್ತಿನ ಒಳಿತಿಗಾಗಿ ಅಥವಾ ಹುಳು ಹಿಡಿದಿರುವ ಸಮಾಜವನ್ನು ಸ್ವಾಸ್ಥ್ಯಗೊಳಿಸುವುದಕ್ಕಾಗಿ ನಾವು ನಿರ್ವಹಿಸಲೇ ಬೇಕಾದ ಸರಿಯಾದ responsibilityಗಳ ಹಾದಿಗೆ ನಮ್ಮನ್ನು ಅಟ್ಟುತ್ತದೆ. ವ್ಯಕ್ತಿಯಾಗಿ ಮಾನವ ಕ್ಷಣಿಕ; ವ್ಯಕ್ತಿಗಳನ್ನೊಳಗೊಂಡ ಸಮಾಜ ದೀರ್ಘಕಾಲಿಕ; ಸದಾ ಬದಲಾಗುತ್ತಲೇ ಇರುವ ಜೀವಪ್ರಧಾನ ಪ್ರಕೃತಿ ನಿರಂತರ… ವಸ್ತುಜನ್ಯ ವಿಶ್ವಾತ್ಮಕ ಜಗತ್ತು ಆಗಂತುಕ… ಆದ್ದರಿಂದ ತಾನು ಮತ್ತು ತನ್ನೆದುರಿಗಿರುವ ಲೋಕದ ಕುರಿತಾಗಿ ಎಲ್ಲರಲ್ಲೂ ಇರಬೇಕಾಗಿರುವ ‘ಸತ್ಪ್ರಜ್ಞೆ’ಯನ್ನು ಅನಾವರಣಗೊಳಿಸಿ ಮಾನವನನ್ನು ವಿಮೋಚನೆಯೆಡೆಗೆ ಕೊಂಡೊಯ್ಯುವ ಪಥ ಗುರುಪಥ”- ಶರಣರು ಮಂಡಿಸಿದ ಸದಾ ಚಲನಶೀಲವೂ ನಿತ್ಯಕ್ರಾಂತಿಯೂ ಆಗಿರುವ ಈ ವಿಮೋಚನಾ ಮಾರ್ಗವು ಸರ್ವಜೀವಿಗಳನ್ನು ದಯೆಯಿಂದ ಕಾಣುವ ಸ್ವತಂತ್ರ ಮಾರ್ಗವಾಗಿದೆ. ವೈದಿಕ ಸಿದ್ಧಾಂತವು ವಿಮೋಚನೆಯನ್ನು ವಯಕ್ತಿಕ ಹಂತಕ್ಕೆ ಸೀಮಿತಗೊಳಿಸಿ, ಎಲ್ಲಾ ಜೀವಿಗಳ ಹುಟ್ಟಿಗೂ ಕರ್ಮಕ್ಕೂ ಅವುಗಳ ಪಾಪವೇ ಹೊಣೆಯೆಂದು ಆಪಾದಿಸಿ, ಲೌಕಿಕ ಮಹತ್ವದಿಂದ ತಪ್ಪಿಸಿಕೊಂಡು ಬಿಡುತ್ತದೆ. ವಿಮೋಚನೆಯನ್ನದು ಪಾರಲೌಕಿಕವೆಂದು ಹೇಳಿಬಿಡುತ್ತದೆ. ಆದರೆ ಗುರುಪಥವು ವ್ಯಕ್ತಿ ವಿಮೋಚನೆಯಿಂದ ಮೊದಲ್ಗೊಂಡು ಸಮುದಾಯಕ್ಕೂ… ಸಮುದಾಯದಿಂದ ಸರ್ವ ಜೀವಸಂಕುಲದ ವಿಮೋಚನೆಯನ್ನಾಗಿ ವಿಸ್ತರಿಸಿಕೊಂಡು ಅನಂತ ಬೆಡಗಿನೆಡೆಗೆ ಸಾಗುತ್ತದೆ. ಶರಣರಿಗೆ ವಿಮೋಚನೆ ಶುದ್ಧ ಲೌಕಿಕದಿಂದಲೇ ಅಂಕುರಿಸುವಂತಹದ್ದು. ಆದ್ದರಿಂದ-
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.
‘ಶಿವಪಥವನರಿವಡೆ ಗುರುಪಥವೇ ಮೊದಲು’ –ಎನ್ನುವಾಗ ಬಸವಣ್ಣನವರು ಶಿವನಲ್ಲಿಗೆ ಗುರುಪಥವೇ ಒಯ್ಯುತ್ತದೆ ಎನ್ನುತ್ತಿದ್ದಾರೆ. ಹಾಗಾದರೆ ಗುರುಪಥದ ಸ್ವರೂಪ ಎಂತಹದ್ದು? ಶಿವನಲ್ಲಿಗೆ ಕರೆದೊಯ್ವುದು ಹೇಗೆ? ಶಿವ ಎಂದರೆ ಯಾರು? ಈ ಪ್ರಶ್ನೆಗಳು ವಚನಗಳ ಸಂದರ್ಭದಲ್ಲಿ ಅತ್ಯಂತ ಮಹತ್ವವಾದವುಗಳಾಗಿವೆ. ಈ ಲೇಖನದ ಸಾರವನ್ನು ಈ ಪ್ರಶ್ನೆಗಳನ್ನಿಟ್ಟುಕೊಂಡೇ ಚರ್ಚೆ ಮಾಡೋಣ…
‘ಗುರುಪಥ’ದ ವಿಷಯ ಬಂದರೆ ಎರಡು ವೈರುಧ್ಯಗಳು ನಮ್ಮನ್ನು ಬೆನ್ನಾಡುತ್ತವೆ. ನಮ್ಮ ಇತಿಹಾಸಗಳಲ್ಲಿ ಎರಡು ಭಿನ್ನ ಭಿನ್ನ ಸಂಸ್ಕೃತಿಗಳು ಒಂದನ್ನೊಂದು ಮುಖಾಮುಖಿಯಾಗುತ್ತಲೇ ಕಾಲಾಂತರದುದ್ದಕ್ಕೂ ತಮ್ಮ ಉಳಿವಿಗಾಗಿ ಹೋರಾಟ ಮಾಡಿಕೊಂಡು ಬಂದಿವೆ. ಅವುಗಳಲ್ಲಿ ಒಂದನೆಯದು ‘ಶಿಷ್ಠ ಸಂಸ್ಕೃತಿ’ ಮತ್ತೊಂದು ‘ದೇಸಿ ಸಂಸ್ಕೃತಿ’; ಶಿಷ್ಠ ಸಂಸ್ಕೃತಿಗೆ ಲಿಖಿತ ರೂಪದಲ್ಲಿರುವ ಅದರ ಶಾಸ್ತ್ರ ಗ್ರಂಥಗಳು ಆಧಾರವಾಗಿದ್ದಂತೆ, ದೇಸಿ ಸಂಸ್ಕೃತಿಗೆ ಯಾವುದೇ ಲಿಖಿತ ಆಧಾರ ಗ್ರಂಥಗಳಿಲ್ಲ. ಏಕೆಂದರೆ ಈ ನೆಲದ ಶ್ರಮಿಕ ವರ್ಗಗಳಿಗೆ ಅಕ್ಷರಭಾಗ್ಯ ದಕ್ಕದಂತೆ ನೋಡಿಕೊಂಡಿದ್ದು ಸಹ ಇಲ್ಲಿನ ಕ್ಷುದ್ರ ರಾಜಕಾರಣಕ್ಕೆ ಉದಾಹರಣೆಯಾಗಿದೆ. ಆದ್ದರಿಂದ ಮೌಖಿಕ ಎನಿಸಿಕೊಂಡಿರುವ ದೇಸಿ ಮಾರ್ಗಗಳು ಪರಂಪರೆಯಿಂದ ಪರಂಪರೆಗೆ ಹರಿದು ಬಂದಿರುವ ಜ್ಞಾನವನ್ನೇ ನೆಚ್ಚಿಕೊಳ್ಳಬೇಕಾದುದು ಸಹಜ. ಹೀಗೆ ನೋಡಿದಾಗ ಖಂಡಿತವಾಗಿಯೂ ‘ಶಿವಪಥ ಹಾಗೂ ಗುರುಪಥ’ ಮೌಖಿಕ ಸಂಸ್ಕೃತಿಯೇ ಆಗಿವೆ. ವಚನಗಳ ಮೂಲಕ ಶರಣರು ತಮ್ಮ ಅನುಭವಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ ಪ್ರಯತ್ನ ಮೊಟ್ಟ ಮೊದಲಿನದು ಎಂದು ಹೇಳಲೇ ಬೇಕು. ಕನ್ನಡದಲ್ಲಂತೂ ಈ ನೆಲದ ಶ್ರಮಿಕ ಜನರ ಲಿಖಿತಾನುಭವಗಳಾಗಿ ಶರಣರ ವಚನಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಕನ್ನಡ ನೆಲದ ಆತ್ಮಗೌರವವಾಗಿ ಅವು ಚಿರಂತನ. ಆದ್ದರಿಂದ ಬಹಳ ಜನ ವಿದ್ವಾಂಸರು ವಚನಕಾರರನ್ನು “ವೈದಿಕ ಧರ್ಮದ ಮೇಲೆ ಬಂಡಾಯವೆದ್ದ ಅವೈದಿಕ ಚಳುವಳಿಕಾರರು” ಎಂದೇ ಗುರ್ತಿಸುತ್ತಾರೆ.
ಬಹಳ ಖೇದದ ಸಂಗತಿಯೆಂದರೆ, ಶಿಷ್ಠ ಪರಂಪರೆಗಳು ಮೌಖಿಕ ಪರಂಪರೆಗಳ ನಿಜತತ್ವಗಳನ್ನು confuse ಮಾಡುವುದರ ಮೂಲಕ ಅವುಗಳಿಗಿರುವ ಔನ್ನತ್ಯಪೂರ್ಣವಾದ ಸಾಧನಾ ಪ್ರಕ್ರಿಯೆಗಳನ್ನು ಭ್ರಷ್ಟಗೊಳಿಸುತ್ತಾ ಬಂದಿರುವ ರಾಜಕಾರಣ ನಮ್ಮಲ್ಲಿ ಎಂದೆಂದಿಗೂ ಜೀವಂತವಾಗಿದೆ. ಈ ರಾಜಕಾರಣದ ಫಲವಾಗಿಯೇ ‘ಶಿವ’ ಎಂದ ತಕ್ಷಣ ತ್ರಿಶೂಲ ಢಮರುಗ ಧಾರಿಯಾದ ಶಿವನ ಚಿತ್ರಣ ನಮ್ಮ ಮುಂದೆ ನಿಂತುಬಿಡುತ್ತದೆ. ಆಗ ನಮಗಿರುವ ಆಯ್ಕೆಯೆಂದರೆ ಆ ಶಿವನನ್ನು ಷೋಡಶೋಪಚಾರಗಳಿಂದ ಪೂಜಿಸ ತೊಡಗುವುದು. ಹಾಗೆಯೇ ‘ಲಿಂಗ’ವೆಂದ ತಕ್ಷಣ ‘ಶಿಲಾಲಿಂಗವೇ’ ನಮ್ಮ ನೆನಪಿನಲ್ಲಿ ಉಳಿದು ಹೋಗಿರುತ್ತದೆ. ಶಿವಪದವಿಯೊಂದಿಗೆ ಐಕ್ಯವಾಗುವಿಕೆ ಎಂದ ಕೂಡಲೇ ಶಿಷ್ಠ ಪರಂಪರೆಯ ಯೋಗ ಮಾರ್ಗ ಅಥವಾ ಜ್ಞಾನಮಾರ್ಗ ಇಲ್ಲವೆ ಅದ್ವೈತಕ್ಕೊ ನಮ್ಮ ತಿಳಿವು ಜಾರಿ ಹೋಗುತ್ತದೆ. ಆದರೆ ‘ಶರಣ ಪಥ ಹಾಗೂ ಶಿವಪಥ’ ಶಿಷ್ಠ ಪರಂಪರೆಗಳಿಗಿಂತಲೂ ಹೊರತಾದ ಸ್ವಯಂ ಪರಿಪೂರ್ಣವಾದ ಮಾರ್ಗ ಎಂಬ ಪ್ರಜ್ಞೆ ನಮ್ಮಲ್ಲಿ ಸಾಧ್ಯವಾಗಲಾರದು. ಏಕೆಂದರೆ ನಮ್ಮ ಓದು ಮತ್ತು ಕಲಿಕೆಯ ವಿಧಾನವೇ ಶಿಷ್ಠಕ್ಕೆ ಸೇರಿದ ಓದು ಮತ್ತು ಕಲಿಕೆಯಾದ್ದರಿಂದ ಒಂದು ಆಘಾತಕಾರಿಯಾದ ಸಾಂಸ್ಕೃತಿಕ ವಿಕಲ್ಪ ನಮ್ಮನ್ನು ಆವರಿಸಿಕೊಂಡು ಅದೇ ನಮ್ಮನ್ನು ಆಳುತ್ತಿದೆ ಎಂದು ಹೇಳದೆ ಬೇರೆ ಗತ್ಯಂತರವಿಲ್ಲ.
ಹಾಗಾದರೆ ಮುಖ್ಯ ವಿಷಯಕ್ಕೆ ಬರೋಣ- ಗುರುಪಥ ಮತ್ತದರ ಸಾಧನಾ ಪ್ರಕ್ರಿಯೆಗಳು ಏನಾಗಿದ್ದವು? ಶಿವನಲ್ಲಿಗೆ ಕರೆದೊಯ್ಯುವುದು ಎಂದರೆ ಹೇಗೆ? ಶಿವ ಅಂದರೆ ಯಾರು?
ವಚನಗಳನ್ನು ಹೃದಯಸ್ಪರ್ಶಿಯಾಗಿ ಓದಿಕೊಳ್ಳುವ ಧೋರಣೆ ನಮ್ಮಲ್ಲಿ ಪ್ರಾಮಾಣಿಕವಾಗಿ ಇರುವುದಾದರೆ, ಈ ಪ್ರಶ್ನೆಗಳಿಗೆ ವಚನಗಳಲ್ಲಿಯೇ ಸ್ಪಷ್ಟ ಉತ್ತರವಿದೆ. ಇದಕ್ಕಾಗಿ ಯಾರಲ್ಲೂ ಕೈಚಾಚಬೇಕಿಲ್ಲ. ಅಥವಾ ಯಾರೋ ಹೇಳುವ ವಾಚಕ ಸಿದ್ಧಾಂತಗಳೊಂದಿಗೆ ವಚನಗಳನ್ನಿಟ್ಟು ಭ್ರಮಿಸುವ ಬುದ್ಧಿಗೇಡಿತನವನ್ನು ತಲುಪುವ ಅಗತ್ಯವಂತೂ ಇಲ್ಲ. ಸತ್ಯವು ಶರಣರು ನಡೆದ ನಡೆಯ ಪದತಲದಲ್ಲಿದೆಯೇ ಹೊರತು ಅದು ನಮ್ಮ ಬುದ್ಧಿಮತ್ತೆಯಲ್ಲಿರುವ ಶಾಬ್ದಿಕ ಜಂಗುಳಿಯಲ್ಲಿಲ್ಲ. ಈ ನೆಲೆಗಟ್ಟಿನಿಂದ ಶರಣ ಪಥವನ್ನು ಮನದುಂಬಿಸಿಕೊಳ್ಳಬೇಕು.
ಬಸವಣ್ಣನವರ ‘ಕೂಡಲಸಂಗಮದೇವಾ’ ಎಂಬ ಅಂಕಿತವನ್ನು ಶರಣರ ಷಟಸ್ಥಲಗಳಲ್ಲಿನ ಆರನೇ ಸ್ಥಲವಾದ ‘ಐಕ್ಯ’ಸ್ಥಲಕ್ಕೆ ಅನ್ವಯಿಸಿಕೊಂಡು ಓದಿದರೆ, ‘ಸಂಗಮ’ ಮತ್ತು ‘ಐಕ್ಯ’ ಎಂಬೆರಡು ಪದ ನಿಷ್ಪತ್ತಿಗಳೂ ‘ಒಂದಾಗು’ ಎಂಬ ವಿವರಣೆಯನ್ನು ಕೊಡುತ್ತವೆ. ಅಂದರೆ ಶರಣಪಥದ ಅಂತಿಮಗಮ್ಯ ಐಕ್ಯವೇ ಆಗಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಈ ಅಂತಿಮ ಗುರಿಯಾದ ‘ಐಕ್ಯ’ವನ್ನು ವಚನಗಳು ‘ಮಹಾಸಿದ್ಧಿ’ ಎಂದೇ ಹೊಗಳುತ್ತವೆ. ಈ ಹಂತ ಶರಣರಿಗೆ ಬದುಕಿನ ಅಭೂತಪೂರ್ವ ಮಹಾಪ್ರಸಾದ ಸಿದ್ಧಿಯೂ ಹೌದು! ಈ ಐಕ್ಯವನ್ನು ಆಗುಮಾಡುವ ಅಥವಾ ನಿಜಗೊಳಿಸುವ ಬಹುಮುಖ್ಯ ಸಾಧನಗಳು ಲಿಂಗ, ಅಂಗ, ಸಮರಸ. ಈ ಮೂರನ್ನು ಸಾಧ್ಯಗೊಳಿಸುವ ಚಾಲಕಶಕ್ತಿ ಜಂಗಮ. ಹಾಗಾದರೆ ಸಾಧನಗಳು ಅಂದರೇನು? ಉದಾಹರಣೆಗೆ ಒಬ್ಬ ಶಿಲ್ಪಿ ಒಂದು ಕಲ್ಲಿನಲ್ಲಿ ಸುಂದರವಾದ ಶಿಲ್ಪ ಕೆತ್ತಬೇಕೆಂದರೆ ಅವನಿಗೆ ಉಳಿ ಮತ್ತು ಸುತ್ತಿಗೆ ಮುಖ್ಯವಾಗಿ ಬೇಕಾಗುತ್ತವೆ. ಕೇವಲ ಈ ಪರಿಕರಗಳಿದ್ದ ಮಾತ್ರಕ್ಕೆ ಅವನು ಶಿಲ್ಪವನ್ನು ಕಡೆಯಲಾರ. ಅವನಲ್ಲಿ ಕಗ್ಗಲ್ಲನ್ನು ಶಿಲ್ಪವಾಗಿಸುವ ಪರಿಶ್ರಮ ಮತ್ತು ದೃಢ ಮನೋಬಲ ಇರಬೇಕಾಗುತ್ತದೆ. ಆದ್ದರಿಂದ ಇವೆಲ್ಲ ಶಿಲ್ಪ ಕೆತ್ತುವಲ್ಲಿ ಸಾಧನಗಳೇ ಆಗಿವೆ. ಹಾಗೆಯೇ ಶರಣರಿಗೆ ಐಕ್ಯವೆಂಬ ಪ್ರಸಾದ ಸಿದ್ಧಿಗೆ ಲಿಂಗ ಅಂಗ ಸಮರಸವೆಂಬುವು ಬಹುಮುಖ್ಯ ಸಾಧನಗಳಾಗಿವೆ. ಸಾಧನಗಳು ಮತ್ತು ಪರಿಶ್ರಮದಿಂದ ಲಿಂಗಾಂಗ ಸಮರಸವನ್ನು ಕ್ರಿಯಾಶೀಲವಾಗಿಸಿದಾಗ ಮಾತ್ರ ಸಿದ್ಧಿಯು ನಿಜವಾಗುತ್ತದೆ.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇನಾದುವು
ಕೂಡಲಸಂಗಮದೇವಾ
ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ.
(ಶ್ವಾನ ಜ್ಞಾನ- ಬೊಗಳೆ ಬಿಡುವುದು; ಅಥವಾ ವಾಚಕದ ಹಂತಕ್ಕೆ ಸ್ಥಾಪಿಸಿ ಬಿಡುವಂತಹದ್ದು. ಗಜ ಜ್ಞಾನ- ಅಹಂಕಾರವನ್ನು ಸ್ಥಾಪಿಸುವ ಮಾತುಗಳು. ಕುಕ್ಕುಟ ಜ್ಞಾನ- ಎಂದರೆ ತಾರತಮ್ಯದಿಂದ ಕೂಡಿದ ಮಾತುಗಳು)
ಲಿಂಗಾಂಗಗಳು ಒಂದಕ್ಕೊಂದು ಕ್ರಿಯಾತ್ಮಕ ಎಂದು ಹೇಳಿದರೆ ಸಾಲದು, ಇವುಗಳನ್ನು ಸರಿಯಾದ ಕ್ರಮದಲ್ಲಿ ನಿಷ್ಕರ್ಶೆ ಮಾಡಬೇಕು. ಲಿಂಗವೇ ಶಿವ ಎಂಬುದಂತೂ ಸರಿ! ಶಿವನ ಅಂಗವೆಂದರೆ ತತ್ಸಂಬಂಧವಾದ ಕ್ರಿಯೆಯೆನಿಸಿಕೊಳ್ಳುತ್ತದೆ. ಹಾಗಾಗಿ ಲಿಂಗಾಂಗ ತತ್ವದ ತಿರುಳು ಏನಾಗಿತ್ತು ಎಂಬುದನ್ನು ನಾವು ದೃಢಪಡಿಸಿಕೊಳ್ಳಲೇಬೇಕು. ಲಿಂಗ ಮತ್ತು ಅಂಗವನ್ನು ಒಂದಾಗಿಸಿದರೆ ಅದೇ ಸಮರಸ ಎಂದು ಹೇಳುವ ವಚನಗಳು ನಮಗೆ ಸಾಕಷ್ಟು ಸಿಗುತ್ತವೆ. ಹಾಗೆಯೇ ಸಮರಸವೇ ಐಕ್ಯವೆಂದು ಪ್ರತಿಪಾದಿಸುವ ವಚನಗಳೂ ವಿಫುಲವಾಗಿ ಕಾಣಸಿಗುತ್ತವೆ. ಇವುಗಳ ಜಾಡು ಹಿಡಿದಾಗ ವಚನಗಳ ರೀತ್ಯಾ ಲಿಂಗಾಂಗವು ಅಪ್ರತಿಮ ಸ್ವರೂಪದ ಅನುಸರಿಸಲು ಯೋಗ್ಯವಾದ ತತ್ವವಾಗಿತ್ತೇ ವಿನಃ ಅದೊಂದು ಪ್ರತಿಮೆಯಾಗಿರಲಿಲ್ಲ. ಶರಣರ ಕೈಯಲ್ಲಿರುವ ಪ್ರತಿಮಾ ಲಿಂಗವು ತಾವು ನಂಬಿರುವ ಸತ್ಯಕ್ಕೆ ಕ್ರಿಯಾಧೀನವಾಗಿರಬೇಕಾದ ಕುರುಹು. ಶಿವಾಚಾರದಿಂದ ವಿಮುಖನಾಗದಿರಲು ನಿರಂತರವಾಗಿ ಎಚ್ಚರದಲ್ಲೇ ಇರಬೇಕಿರುವುದರ ಸಂಕೇತ ಅವರ ಕರಸ್ಥಲದ ಲಿಂಗ! ಈ ಕುರುಹೂ ಸಹ ದೈವಿಕವಾಗಿ ಬಿಡುವ ಅಥವಾ ವಿಗ್ರಹಾನುಗ್ರಹದ ವಂಚನೆಗೊಳಗಾಗಿ ಬಿಡುತ್ತದೆಯೆಂಬ ಅಪಾಯ ಶರಣರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೇ ಅವರು ಸ್ಥಾವರ ಲಿಂಗಪೂಜೆಯನ್ನು ನಿರಾಕರಿಸುತ್ತಾರೆ. ಲಿಂಗಾಂಗಗಳ ಕ್ರಿಯಾಧೀನದಲ್ಲಿರುವುದೇ ಅವರ ನೈಜ ಪೂಜೆ; ನಿತ್ಯ ಪೂಜೆ… ನಿತ್ಯ ಭಕ್ತಿ.
ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.
ಲಿಂಗ ಜಪ, ಲಿಂಗ ತಪ, ಲಿಂಗವನ್ನು ಅಂಗೈಯಲ್ಲಿ ಹಿಡಿದು ತದೇಕ ದೃಷ್ಟಿಯಿಂದ ನಿರ್ಭಾವುಕವಾಗಿ ಪರಿಭಾವಿಸುವ ಧ್ಯಾನ ಕೂಡ ಕ್ರಿಯಾಚಾರವಲ್ಲ. ಈ ಬಗೆಯ ಎಲ್ಲಾ ಭ್ರಮಿತ ರಚನೆಗಳನ್ನು ವಚನಗಳು ಅತ್ಯಂತ ನಿಕೃಷ್ಟತೆಯಿಂದ ನಿರಾಕರಿಸುತ್ತವೆ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಮೀನಜ, ರೋಮಜ ಮಹಾಮುನಿಗಳ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ನವಕೋಟಿ ಬ್ರಹ್ಮರಿಗೆ
ಪ್ರಳಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಅನಂತಕೋಟಿರುದ್ರರಿಗೆ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಎನ್ನನೇಳೇಳು ಭವಕ್ಕೆ ತಂದಲ್ಲಿ,
ಆನುಭಯಲಿಂಗಜಂಗಮದ ಮೊರೆಹೊಕ್ಕು
ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ.
ಆದ್ದರಿಂದ ಲಿಂಗಾಂಗಗಳ ಕ್ರಿಯಾಸಂಬಂಧ ವಿದ್ರೋಹಿತನದ್ದು. ಹೇಗೆಂದರೆ ಶರಣ ಸಮಾಜದಲ್ಲಿ ಈ ಸಂಬಂಧದ ಸ್ಪಷ್ಟ ತಿಳುವಳಿಕೆ ಇದ್ದೇ ಇದೆ. ಗುರುಪಥದ ಮರ್ಮ ತಿಳಿಯದೇ ಇರುವ ವಿಚಾರಲೋಲುಪರಿಗೆ ಇದು ಕಬ್ಬಿಣದ ಕಡಲೆಯಂತಿರುತ್ತದೆ. ಆದ್ದರಿಂದ ಗುರುವಿನ ಮಹತ್ವ ತಿಳಿಯದಾ ಭವಿಗಳಿಗೆ ಲಿಂಗಾಂಗ ಸಂಬಂಧ ಕ್ರಿಯೆಯ ಬಗ್ಗೆ ಸವಾಲು ಹಾಕುತ್ತಾನೆ ಅಲ್ಲಮ.
ತಾನು ಮಿಂದು ಕಾಲ ತೊಳೆದ ಬಳಿಕ
ಲಿಂಗಕ್ಕೆ ಮಜ್ಜನಕ್ಕೆರೆವರು.
ತಾನು ಲಿಂಗವೊ ಲಿಂಗ ಲಿಂಗವೊ?
ಏನು ಲಿಂಗವು? ಬಲ್ಲಡೆ ನೀವು ಹೇಳಿರೆ.
ಲಿಂಗಸಂಬಂಧವನರಿಯದೇ ಕೆಟ್ಟರು ಗುಹೇಶ್ವರಾ.
ಅಲ್ಲಮಗುರುವಿನ ಈ ಕಗ್ಗಂಟನ್ನು ಬಸವಣ್ಣನವರು ಅತ್ಯಂತ ಸರಳವಾಗಿ ಬಿಡಿಸಿ ಲೋಕಕ್ಕೆ ಹೇಳಿಬಿಡುತ್ತಾರೆ. ಅಷ್ಟೇ ಅಲ್ಲ ಶರಣರಿಗೆ ಮಾತ್ರ ಲಿಂಗಾಂಗ ಸಂಬಂಧವನ್ನು ಸೀಮಿತಗೊಳಿಸದೇ ಆ ಕಗ್ಗಂಟಿನ ವಿವರಣೆಯನ್ನು ಇಡೀ ಜಗತ್ತಿಗೆ ಹಂಚಬೇಕೆಂಬ ಹಂಬಲ ಅವರದು. ಅದರಿಂದಲಲ್ಲವೇ ಆತ ಜಗಜ್ಯೋತಿ ಎನಿಸಿಕೊಂಡಿದ್ದು!!
ಇಷ್ಟಲಿಂಗವೊಂದು ಪ್ರಾಣಲಿಂಗ[ವೊಂದು, ಭಾವಲಿಂಗ]ವೊಂದೆಂಬ
ಮಿಟ್ಟಿಯ ಭಂಡರ, ಅವರ ಮಾತ ಕೇಳಲಾಗದು.
ಅಂಗಳದೊಳಗೊಬ್ಬ ಗಂಡ, ಮನೆಯೊಳಗೊಬ್ಬ ಗಂಡ,
ಹಿತ್ತಿಲೊಳಗೊಬ್ಬ ಗಂಡನೆಂಬ ಸತಿಯರ
ಲೋಕದ ಮಾನವರು ಮೆಟ್ಟಿ ಮೂಗಕೊಯ್ಯದೆ ಮಾಣ್ಬರೆ, ಅಯ್ಯಾ ?
ಲಿಂಗತ್ರಯವೆಂದು ತೋರಿದವರಾರೊ ?
`ಲಿಂಗಮೇಕಂ ಪರಂ ನಾಸ್ತಿ’, ಎಂದು ಸದ್ಗುರುಸ್ವಾಮಿ ಅರುಹಿದನಾಗಿ.
ಷಟ್ತ್ರಿಂಶತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು
ಕರಸ್ಥಲದಲ್ಲಿ, ಮನಸ್ಥಲದಲ್ಲಿ, [ಭಾವಸ್ಥಲದಲ್ಲಿ] ವೇದ್ಯವಾದ ಬಳಿಕ
ಸರ್ವಾಂಗಲಿಂಗ, ಕೂಡಲಸಂಗಯ್ಯಾ ನಿಮ್ಮ ಶರಣಂಗೆ.
ಬಸವಣ್ಣನವರು ಲಿಂಗಗಳು ಹಲವಿವೆ ಎಂಬ ಕಲ್ಪನೆಯನ್ನು ನಿರಾಕರಿಸುತ್ತಲೇ ಲಿಂಗತತ್ವವನ್ನು ‘ಅದ್ವಯ’ (ಎರಡಿಲ್ಲದ್ದು) ಎನ್ನುತ್ತಿದ್ದಾರೆ. ಈ ವಚನದಲ್ಲಿ ಷಟ್ತ್ರಿಂಶತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು… ವೇದ್ಯವಾಗಬೇಕು ಎಂಬ ವಾಕ್ಯವು ಗಮನೀಯವಾದದ್ದು; ಮನನೀಯವಾದದ್ದು. ಇಲ್ಲಿ ಅವರು ಅನಂತವಾದ ಕಾಯಸಿದ್ಧಾಂತವನ್ನು ಮಹಾಬೆಳಗು ಎಂದು ಹೇಳಿ ಅದು ವೇದ್ಯವಾಗಬೇಕೆನ್ನುತ್ತಿದ್ದಾರೆ. ಷಟ್ತ್ರಿಂಶತತ್ವವು ಲಿಂಗಾಚಾರವನ್ನು/ಶಿವಾಚಾರವನ್ನು ಆರು ತತ್ವಗಳನ್ನಾಗಿಯೂ, ಆರನ್ನು ಮೂರು ತತ್ವಕ್ಕಿಳಿಸಿ ನುಡಿವ ‘ಕಾಯ’ ತತ್ವವನ್ನಾಗಿಸಿ ವಿವರಿಸಿ ಕೊಡುವ ವಚನಗಳಲ್ಲಿ ಈ ತತ್ವ ಹರಡಿಕೊಂಡಿದೆ.
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ
ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು.
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು…
ಲಿಂಗ, ಅಂಗ, ಜಂಗಮ ಎಂಬ ಕಾಯಸಿದ್ಧಾಂತವನ್ನು ಆರು ಇನ್ನಿತರ ಕಾಯಸಿದ್ಧಾಂತಗಳನ್ನಾಗಿ ವಿಸ್ತರಿಸಿಕೊಂಡು ತಾನು ಮತ್ತು ಲೋಕದ ಕುರಿತಾಗಿ ಸರಿಯಾಗಿ ವಿವೇಚಿಸಿಕೊಳ್ಳುವ ವಿಧಾನವು ಕೂಡ ಇದಾಗಿದೆ.
ಲಿಂಗ ಮತ್ತು ಅಂಗ ಎರಡೂ ಬೇರೆ ಬೇರೆ ಅಲ್ಲ, ಅವು ಒಂದೇ ಆಗಿವೆ ಎಂಬುದನ್ನು ಪ್ರತಿಪಾದಿಸುವ ಈ ತತ್ವ ಮೇಲ್ನೋಟಕ್ಕೆ ‘ಅದ್ವಯ’ವೆಂಬಂತೆ ಕಂಡರೂ, ಅವು ಅತಿ ಮುಖ್ಯವಾದ ಆರು ವಿಭಿನ್ನ ಸಾಧ್ಯತೆಗಳನ್ನಾಗಿ ವಿಸ್ತರಿಸಿ ವ್ಯಕ್ತಿ ಮತ್ತು ಸಮಾಜದಲ್ಲಿ ಸಮತಾ ಸತ್ಯವನ್ನು ಕಟ್ಟುವ ಕ್ರಿಯಾಚಾರಗಳಾಗಿವೆ. ಅವು ಹೀಗಿವೆ-
- ನಡೆಯ ಅಂಗದಲ್ಲಿ ನುಡಿಯ ಲಿಂಗ ಕ್ರಿಯೆ
- ಅಂತರಂಗದ ಅಂಗದಲ್ಲಿ ಬಹಿರ್ ಲೋಕದ ಲಿಂಗ ಕ್ರಿಯೆ
- ಕಾಯದ ಅಂಗದಲ್ಲಿ ಮನಸ್ಸೆಂಬ ಲಿಂಗ ಕ್ರಿಯೆ
- ಶರಣನೆಂಬ ಅಂಗದಲ್ಲಿ ಶರಣ ಸಂಗದ ಲಿಂಗ ಕ್ರಿಯೆ
- ಮನಸ್ಸಿನ ಅಂಗದಲ್ಲಿ ಪ್ರಜ್ಞೆಯ (ಶಿವ) ಲಿಂಗ ಕ್ರಿಯೆ
- ಬಯಲ ಅಂಗದಲ್ಲಿ ಜಂಗಮಲಿಂಗ ಕ್ರಿಯೆ
- ನಡೆಯ ಅಂಗದಲ್ಲಿ ನುಡಿಯ ಲಿಂಗ ಕ್ರಿಯೆ
ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.
ಅವರ ನಡೆಯೊಂದು ನುಡಿಯೊಂದಾದಡೆ
ಶಿವಾಚಾರಕ್ಕವರು ಸಲ್ಲರಯ್ಯಾ !
ಬಲ್ಲನು, ಸಾತ್ವಿಕರಲ್ಲದವರನೊಲ್ಲನು.
ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು.
ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು.
ವ್ಯಕ್ತಿ ಮತ್ತು ನೈತಿಕತೆ ಶರಣ ಧರ್ಮದ ಅತಿ ಮುಖ್ಯವಾದ ಜೀವಾಳ. ಒಬ್ಬ ವ್ಯಕ್ತಿಯಲ್ಲಿ ನಡೆ ನುಡಿಗಳ ಮಧ್ಯೆ ಅಂತರವಿಲ್ಲದೆ ಸಮತ್ವ ಸಾಧನೆಯಾದರೆ ವ್ಯಕ್ತಿಗಳನ್ನು ನೋಡಿ ಪ್ರಭಾವಿತವಾಗುವ ಸಮಾಜವೂ ನಡೆ ನುಡಿಗಳ ಅಂತರವನ್ನು ಕಡಿಮೆಗೊಳಿಸಿಕೊಳ್ಳುತ್ತಾ ಹೋಗುತ್ತದೆ. ನಡೆ-ನುಡಿಗಿರುವ ತಾಯ್ಗರುಳ ಸಂಬಂಧ ಕಡಿದು ಹೋದಲ್ಲಿ ಒಳಗೆ ಭ್ರಷ್ಠ ಹೊರಗೆ ಶಿಷ್ಠ ಎಂಬ ವ್ಯತಿರೇಕವುಂಟಾದರೆ ದಗಾಕೋರತನ, ಆತ್ಮವಂಚನೆ, ಸ್ವಾರ್ಥ, ನಯವಂಚನೆ, ಆಪಾದನೆಯಂತಹ ಕೊಳಕುಗಳು ಮೈದಾಳುತ್ತವೆ. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’- ಎಂಬ ವಚನಗಳ ಕ್ರಿಯಾಚಾರದಲ್ಲಿ ಸ್ವಾಸ್ಥ್ಯ ವ್ಯಕ್ತಿಗಳನ್ನು ರೂಪಿಸಿದರೆ ಸ್ವಾಸ್ಥ್ಯ ಸಮಾಜ ತಂತಾನೇ ಪುನರ್ರೂಪಿತವಾಗುತ್ತದೆ ಎಂಬ ಗುರಿ ಇದೆ.
ನಡೆನುಡಿಗಳೊಂದಿಗಿನ ಸಂಬಂಧ ಸರಿಯಾಗಿರಬೇಕಾಗಿರುವುದು ಮನುಷ್ಯ ಜೀವಿಗೆ ಮಾತ್ರ, ಇನ್ನುಳಿದ ಲಕ್ಷಾಂತರ ಸಂಖ್ಯೆಯಲ್ಲಿರುವ ಜೀವ ಸಂಕುಲಕ್ಕೆ ನಡೆನುಡಿಗಳ ಸಮತೋಲನ ಅಗತ್ಯವೇನು ಇಲ್ಲ. ಕಾರಣವೇನೆಂದರೆ, ಮನುಷ್ಯನ ಮಿದುಳಿನಲ್ಲಿ ಅತ್ಯಂತ ಅಪಾಯಕಾರಿಯಾದ ಬುದ್ಧಿಮತ್ತೆಯ ಸಂರಚನೆಗಳು ಸದಾ ಕ್ರಿಯಾಶೀಲವಾಗಿರುತ್ತವೆ. ಅವನಿರುವ ಪ್ರಾಕೃತ ಜಗತ್ತಿಗೂ ಇವುಗಳಿಂದ ಅಗಣಿತವಾದ ಅಪಾಯವಿದ್ಧೇ ಇದೆ. ಬುದ್ಧಿಮತ್ತೆಯನ್ನು ಅವನಿರುವ ಪ್ರಪಂಚದ ವಸ್ತುಸ್ಥಿತಿಗನುಗುಣವಾಗಿ ಮಿತಿಗೊಳಿಸಿ, ಅವನನ್ನು moral ethics ಮೇಲೆ ಹಿಡಿತದಲ್ಲಿಡುವುದೇ ನಡೆನುಡಿಗಳಿಗಿರುವ ಮಹತ್ವ. ಪ್ರತಿಕ್ಷಣ ಮನುಷ್ಯನೊಬ್ಬನಿಗೆ ತಾನಿರುವ ಜಗತ್ತಿನೊಂದಿಗೆ ಸದಾ ಎಚ್ಚರದಿಂದಿರುವ ವಿವೇಕವನ್ನು ಇದು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ತಾನು ಬದುಕಿರುವ ಕ್ಷಣಗಳ ಮೌಲ್ಯವನ್ನು ವ್ಯರ್ಥ ಮಾಡದೆ ಸದುಪಯೋಗಕ್ಕೊಳಪಡಿಸುತ್ತದೆ.
- ಅಂತರಂಗದ ಅಂಗದಲ್ಲಿ ಬಹಿರ್ ಲೋಕದಾ ಲಿಂಗಕ್ರಿಯೆ
ಶರಣರಿಗೆ ನೈಜ ಸಂಬಂಧವೆಂದರೆ ಶರಣರ ಸಂಗ. ಅಶಾಂತಿಯಿಂದ ನರಳುತ್ತಿರುವ ಸಮಾಜಕ್ಕೆ ಮದ್ದಾಗಬಲ್ಲ ಶಕ್ತಿಯುಳ್ಳದ್ದು ಶರಣರ ಸಂಗ. ಸಮತೆಯ ಯೋಜನೆ ಅತ್ಯಂತ ಪರಿಪೂರ್ಣವೆಂದು ತಿಳಿದು ನಡೆದುಕೊಳ್ಳುವ ಆದರ್ಶ ಸಮಾಜ ಅದು. ಸಮತೆಯ ವಸ್ತುಸ್ಥಿತಿಯನ್ನು ಸರಿಯಾಗಿ ಅರಿತವರಾದ್ದರಿಂದ ನಿಷ್ಕಳಂಕವಾದ ನಿಜೈಕ್ಯಗಳನ್ನು ಪಡೆದವರಾದ್ದರಿಂದ ಅವರಲ್ಲಿ ನಿತ್ಯನೂತನವಾದ ಲೋಕಾನುಭವವಿದೆ. ಅಂತರಂಗ ಬಹಿರಂಗಗಳಲ್ಲಿರುವ ಕೊಳೆಯನ್ನು ಶುದ್ಧೀಕರಿಸಲು ಅಥವಾ ಕೊಳೆಯ ವಸ್ತುಸ್ಥಿತಿಯನ್ನು ತಿಳಿಸಲು ಶರಣರ ಸಂಗವೇ ಅಂತಿಮ. ಜಂಗಮರನ್ನು ಪ್ರಶ್ನಿಸುವುದರ ಮೂಲಕ ಎಲ್ಲಾ ಅನುಮಾನಗಳು ನಿವಾರಣೆಯಾಗುತ್ತವೆ.
- ಕಾಯದ ಅಂಗದಲ್ಲಿ ಮನಸ್ಸೆಂಬ ಲಿಂಗಕ್ರಿಯೆ
ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ.
‘ಮಾಯೆಯೆಂದರೆ ಬೇರೆ ಲೋಕದೊಳಗಿಲ್ಲ ಮನದ ಮುಂದಣ ಆಸೆಯೇ ಮಾಯೆ’ ಎನ್ನುತ್ತಾರೆ ಅಲ್ಲಮ. ಮನದಲ್ಲಿ ಮಾಯೆಯನ್ನಿಟ್ಟವರು ಯಾರು? ಮನದ ಮುಂದಣ ಆಸೆಯೆಂದರೆ ಯಾವುದು? ಅದರ ಲಕ್ಷಣವೇನು ಎಂದು ಪರಿಶೀಲಿಸಿದಾಗ, ಮನಸ್ಸೆಂಬುದು ಅನುಕರಣಾ ವ್ಯಾಧಿಗೆ ಸಿಲುಕಿ ಕಲಿತ ಜೀವನಾನುಭವಗಳ ಸಂಗ್ರಹ ಎಂದು ತಿಳಿಯುತ್ತದೆ. ವ್ಯಕ್ತಿಗಳ ಜೀವನಾನುಭವದ ಸಂಗ್ರಹ ಅವನ ಸಮಾಜವನ್ನು ಎತ್ತ ಸಾಗಿಸುತ್ತಿದೆಯೆಂದರೆ, ಇಡೀ ಲೋಕವನ್ನು ಮನುಷ್ಯ ತಾರತಮ್ಯಗಳ ದೃಷ್ಟಿಯಿಂದಲೇ ನೋಡಿಕೊಂಡು ಹೋಗುವಂತೆ ಮಾಡಿದೆ. ಇವನು ಅಜ್ಞಾನಿ, ಅವನು ಜ್ಞಾನಿ; ಇವನು ಸಬಲ, ಅವನು ದುರ್ಬಲ; ಇವನು ಶ್ರೀಮಂತ, ಅವನು ಬಡವ; ಇವನು ಯೋಗ್ಯ, ಅವನು ಅಯೋಗ್ಯ; ಅವಳು ಸುಂದರಿ, ಇವಳು ಕುರೂಪಿ… ಹೀಗೆ ಪಟ್ಟಿ ಮಾಡುತ್ತಲೇ ಹೋದರೆ ನಮಗೆ ಸಾವಿರಾರು ವೈರುಧ್ಯಗಳು ಸಿಗುತ್ತಾ ಹೋಗುತ್ತವೆ. ಇವುಗಳಲ್ಲಿ ಉತ್ಕೃಷ್ಟವಾದುದು ಅಪೇಕ್ಷಿತ, ಮತ್ತೊಂದು ತಿರಸ್ಕೃತ! ಇದು ಮಾನವ ಘನತೆಯನ್ನು ಸದಾ ಉಲ್ಲಂಘಿಸುತ್ತಲೇ ಇರುತ್ತದೆ. ಇವುಗಳನ್ನೆಲ್ಲಾ ಯಾರು ಸೃಷ್ಟಿ ಮಾಡಿದರು ಎಂದರೆ ಮನುಷ್ಯನೇ ಸೃಷ್ಟಿಸಿದ್ದಾನೆಂಬುದು ಸರಿಯಾದ ಉತ್ತರ. ಏಕೆಂದರೆ ನಿಸರ್ಗದಲ್ಲಿ ಬಾಳುತ್ತಿರುವ ಯಾವ ಜೀವಿಗಳಲ್ಲೂ ಈ ಭೀಕರ ಅಸಮಾನತೆಯ ರೋಗವಿಲ್ಲ. ವಿಚಿತ್ರವಾದ ಸಂಗತಿಯೆಂದರೆ ಹೊರಗಿನ ಮನುಷ್ಯ ಪ್ರಪಂಚವನ್ನು ಈ ಅಳತೆಗೋಲುಗಳಿಂದಲೇ ಅಳೆದು ಸಮಾಜವನ್ನು ವಿಚ್ಛಿದ್ರಗೊಳಿಸುತ್ತಿದ್ದಾರೆ. ಮನಸ್ಸಿನಲ್ಲಿ ಸಂಕಲ್ಪಗೊಂಡು ಹುಟ್ಟಿದ ಈ ಭೇದಪೂರ್ವಕ ಸಂರಚನೆಗಳಿಗೆ ನಮ್ಮ ಶರೀರವನ್ನು ನಾವು ದಾಸರಾಗಿಸಿದ್ದೇವೆ. ಎಂತಹ ವಿಡಂಬನೆ… ಮನೋದೇಹ ಸಂಯುಕ್ತವಾದ ಈ ಜೀವಶರೀರದಲ್ಲೇ ಸಮಾನತೆಯಿಲ್ಲ!
ಮನಸ್ಸಿಲ್ಲದಿದ್ದರೆ ದೇಹವಿಲ್ಲ; ದೇಹವಿಲ್ಲದಿದ್ದರೆ ಮನಸ್ಸಿಲ್ಲ. ನೈಸರ್ಗಿಕವಾಗಿರುವ ಈ ಮನಸ್ಸಿನೊಂದಿಗಿನ ದೇಹ ಸಂಬಂಧ ಪವಿತ್ರವಾದದ್ದು, ಅನೂಹ್ಯವಾದದ್ದು. ನಾವು ಪಡೆದಿರುವ ಜ್ಞಾನದ ಮೋಸ ಕಂಡುಹಿಡಿಯುವುದು ಅಸಾಧ್ಯವಾದುದೇನೂ ಅಲ್ಲ. ಅಧಿಕಾರ ಮತ್ತು ತನ್ನ ಶ್ರೇಷ್ಠತೆಯನ್ನು ಸಮಾಜದಲ್ಲಿ ಸ್ಥಾಪಿಸಿ ಅಮಿತ ಸುಖ ಪಡೆಯಬೇಕೆಂಬುದೇ ಜ್ಞಾನದ ಗುರಿ. ಈ ಮನಸ್ಸು ಏನನ್ನೂ ತಿಳಿಯದ ಮುಗ್ಧ ಶುದ್ಧ ಶಿವಸ್ವರೂಪಿ ಕಾಯದ ಮೇಲೆ ಇಲ್ಲದ ಹೊರೆಗಳನ್ನಿಟ್ಟು ದಬ್ಬಾಳಿಕೆ ಮಾಡುತ್ತಿದೆ. ಆದ್ದರಿಂದ ವ್ಯಕ್ತಿ ಸದಾ ಅತೃಪ್ತತೆಯಿಂದ ಜೀವನವನ್ನು ನರಳಿಸುತ್ತಿರುತ್ತಾನೆ. ಆದ್ದರಿಂದ ಶರಣರು ಮನುಷ್ಯ ಜ್ಞಾನವನ್ನು ಅಜ್ಞಾನದ ಕೇಡು ಎಂದು ಎಚ್ಚರಿಸುತ್ತಾರೆ. ಕಾಯ ಮತ್ತು ಮನದ ಅನ್ಯೋನ್ಯವಾದ ಜೈವಿಕ ಸಂಬಂಧವನ್ನು ಮುನ್ನೆಲೆಗೆ ತರುತ್ತಾರೆ.
ಮನದ ಕೇಡನ್ನು ಬಸವಣ್ಣನವರು ಹೀಗೆ ಹೇಳುತ್ತಾರೆ:
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ !
ಕೂಡಲಸಂಗಮದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನೈದದು, ನೋಡಾ.
ಇಲ್ಲಿ ದೇಹ ಮನಸ್ಸುಗಳನ್ನು ಸಮಕ್ರಿಯೆಯನ್ನಾಗಿಸುವುದೇ ನಿರ್ಮಲಲಿಂಗ! ಲೋಕ ಸ್ವಭಾವದ ತಾರತಮ್ಯಗಳಲ್ಲಿ ಕಳೆದು ಹೋಗದೇ ಸಾವಧಾನಿಯಾಗಿರುವುದೇ ಸಮರಸ, ಸಮರಸವೇ ಕೂಡಲಸಂಗಯ್ಯನ ಠಾವು!
ಅಯ್ಯ! ದರಿದ್ರನಲ್ಲ ಧನಿಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಅಹಂಕಾರಿಯಲ್ಲ ನಿರಹಂಕಾರಿಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಕುಮನದವನಲ್ಲ ಸುಮನದವನಲ್ಲ ನೋಡ!
ನಿರವಯಶೂನ್ಯಲಿಂಗಮೂರ್ತಿ
ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಸಕಲನಲ್ಲ ನಿಃಕಲನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಅರ್ಪಿತನಲ್ಲ ಅನರ್ಪಿತನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಆಹ್ವಾನನಲ್ಲ ವಿಸರ್ಜನನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡ!
ಚೆನ್ನಬಸವಣ್ಣ.
- ಶರಣನೆಂಬ ಅಂಗದಲ್ಲಿ ಶರಣ ಸಂಗದ ಲಿಂಗಕ್ರಿಯೆ
ಇಂತಹ ಮಹೋನ್ನತ ಸಾಧನಾ ಪಥದಲ್ಲಿದ್ದರೂ ಬದುಕಿನ ಅಸ್ಥಿರತೆ ಮತ್ತು ಈ ವಿಶ್ವದ ರಹಸ್ಯದ ಗುಟ್ಟು ತಿಳಿಯಲಾಗದು. ಆದ್ದರಿಂದ ಗುರುಪಥದ ಸಮರಸ ಸಾಧನೆಯಲ್ಲಿ ಯಾವ ಕ್ಷಣದಲ್ಲಾದರೂ ಅನುಮಾನಗಳು, ಅನಿರ್ಧಾರಗಳು ಸಾಧಕನನ್ನು ಕಾಡಿ ಬಿಡುವ ಸಂಭವವುಂಟು. ಈ ಜ್ಞಾನಕ್ರಿಯಾ ಮಾರ್ಗದಲ್ಲಿ ನಾನೇಕೆ ನಡೆಯಬೇಕು? ನಡೆದರೂ ಸಾಯುತ್ತೇನೆ, ನಡೆಯದಿದ್ದರೂ ಸಾಯುತ್ತೇನೆ ಎಂಬ ಅಂಶ ಅವನನ್ನು ಈ ಪಥದ ನಡೆಯಿಂದ ಹಿಂತೆಗೆಯುವಂತೆ ಮಾಡುವ ಸಂಭವವುಂಟು. ದೀರ್ಘಕಾಲಿಕವಾದ ಈ ಸಮಾಜದಲ್ಲಿ ನನ್ನ ಪಾತ್ರ ಅತಿ ಮುಖ್ಯದ್ದು ಎಂಬುದನ್ನು ತಿಳಿದು ತನ್ನ ಗುರುವನ್ನು ಅನುಸರಿಸಲು, ಈ ಸತ್ಯವನ್ನು ಒಪ್ಪಿಕೊಳ್ಳಲು ಹಾಗೂ ಅಂತರಂಗ ಬಹಿರಂಗದಲ್ಲಿ ಸಮರಸದ ಹೋರಾಟವನ್ನು ಜೀವಂತವಿಡಲು ಶರಣಸಂಗವೇ ಪ್ರೇರಕ. ಇಲ್ಲದಿದ್ದರೆ ಪಥವಾಗಲಿ, ಗತಿಯಾಗಲಿ, ಶರಣನಾಗಲಿ, ಶಿವನಾಗಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ಶರಣ ಸಂಗದಿಂದ ಶರಣನಿಗೂ… ಶರಣನಿಂದ ಶರಣ ಸಂಗಕ್ಕೂ ಇರುವ ಅಂತಃಸಂಬಂಧವೇ ಅನುಭಾವ! ಶರಣಸಂಗ, ಶರಣ ಇವೆರಡರ ಸಮರಸೈಕ್ಯವೇ ಅನುಪಮ ಸುಖ; ಸಮರಸವೇ ಮಹಾಪ್ರಸಾದ!!!
- ಮನಸ್ಸೆಂಬ ಅಂಗದಲ್ಲಿ ಪ್ರಜ್ಞೆಯ ಲಿಂಗಕ್ರಿಯೆ
ಹರಿವ ನದಿಗೆ ಮೈಯೆಲ್ಲಕಾಲು. ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ. ಬೀಸುವ ಗಾಳಿಗೆ
ಮೈಯೆಲ್ಲಮುಖ (ಕೈ?) ಗುಹೇಶ್ವರಾ ನಿಮ್ಮ ಶರಣಂಗೆ,
ಸರ್ವಾಂಗವೆಲ್ಲ ಲಿಂಗ !
ಕಾಯಸಿದ್ಧಾಂತವೆಂಬುದು ನಡೆ ನುಡಿಗಳಲ್ಲಿ ಸಾಮರಸ್ಯ; ಅಂತರಂಗ ಬಹಿರಂಗದಲ್ಲಿ ಸಾಮರಸ್ಯ. ಜ್ಞಾನ ಕ್ರಿಯೆಗಳಲ್ಲಿ ಸಮರಸ; ಮನ ಕಾಯದಲ್ಲಿ ಸಮರಸ; ಶರಣ ಮತ್ತು ಶರಣ ಸಂಗದಲ್ಲಿ ಸಮರಸವನ್ನು ಆಗು ಮಾಡುವ ಆಚಾರವೇ ಲಿಂಗಾಂಗ ಸಮರಸ ಸಿದ್ಧಾಂತ! ಸಮರಸವೇ ಪ್ರಜ್ಞೆ… ಸಮರಸವೇ ಶಿವೈಕ್ಯ… ಸಮರಸವೇ ಅನುಭಾವ… ಸಮರಸವೇ ಚಿದ್ಬೆಳಗು… ಸಮರಸವೇ ಮಹಾಘನಲಿಂಗದ ಬೆಳಗು… ಸಮರಸವೇ ಐಕ್ಯ!!!
ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ,
ಎನ್ನ ಮನದಲ್ಲಿ ತನ್ನ ನಿಲವ ತೋರಿದ,
ಎನ್ನ ಅರಿವಿನಲ್ಲಿ ನಿಮ್ಮ ತೋರಿದ,
ಇಂತೀ ತ್ರಿವಿಧಸ್ವಾಯತವನು
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನ ಕರುಣದಿಂದ
ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ.
(ಪರುಷ- ಕಬ್ಬಿಣವನ್ನು ಚಿನ್ನವಾಗಿಸುವ ಲೋಹ, ಪಾದರಸ; ಮಡಿವಾಳ- ಕೊಳೆಯನ್ನು ತೊಳೆದು ಪರಿಶುಭ್ರಗೊಳಿಸುವವ)
- ಬಯಲ ಅಂಗದಲ್ಲಿ ಜಂಗಮಲಿಂಗಕ್ರಿಯೆ
ಪರಿಪೂರ್ಣವಾದ ಹಂತವಿದು. ಏಕೆಂದರೆ ದೋಣಿಯ ಸಹಾಯದಿಂದ ನದಿಯನ್ನು ದಾಟಿ ದಡ ಸೇರಿದ ನಂತರ ದೋಣಿಯನ್ನಾಗಲಿ, ಹರಿಗೋಲನ್ನಾಗಲಿ ತಲೆಯ ಮೇಲೆ ಹೊತ್ತುಕೊಂಡು ಹೋಗಲಾಗದು. ಆದ್ದರಿಂದ ಗುರು, ಲಿಂಗ, ಅಂಗವೆಂಬ ಸಾಧನಗಳು ‘ಭವ’ವನ್ನು ದಾಟಿಸಿದವಾದ್ದರಿಂದ ಇವುಗಳ ಕೆಲಸ ಮುಗಿಯಿತು. ಅವುಗಳ ಅಗತ್ಯವೇನೂ ಇಲ್ಲ. ಏಕೆಂದರೆ ಯಾವುದೂ ಶಾಶ್ವತವಲ್ಲ; ಯಾವುದೂ ಅಂತಿಮಸತ್ಯವಲ್ಲ; ಯಾವುದೂ ಸದಾಬದ್ಧವಲ್ಲ. ನಿಸರ್ಗದ ಬದಲಾಗುವಿಕೆಯಲ್ಲಿ ಎಲ್ಲವೂ ಬದಲಾವಣೆಗೆ ಅಧೀನವಾಗಿರಲೇ ಬೇಕು ಎಂಬ ಸತ್ಯವನ್ನು ಅರಿತವ ಜಂಗಮ. ಈ ಲೋಕದಲ್ಲಿ ನನ್ನದು ಎನ್ನುವುದು ಯಾವುದೂ ಇಲ್ಲ. ಸಂಬಂಧದಿಂದಾಗಿ ಲೋಕಸಮಸ್ತ ಜೀವಿಗಳು ನನ್ನವರೇ ಎಂಬ ವಿವೇಕವನ್ನು ತಲುಪಿ, ತನ್ನದೆನ್ನುವ ಎಲ್ಲವನ್ನೂ ಲೋಕಕ್ಕೆ ದಾಸೋಹ ಮಾಡಿ, ಇದುವರೆಗೂ ಶರಣಪಥದಲ್ಲಿ ತಾನು ನಡೆದ ಹೆಜ್ಜೆ ಗುರುತುಗಳನ್ನು ಅಳಿಸಿಕೊಂಡು ಹೋಗುತ್ತಾ ಲೋಕದಲ್ಲಿ ತನ್ನದೆನ್ನುವ ಏನನ್ನೂ ಉಳಿಸಿ ಹೋಗದ ಅನಿಕೇತನ ಪ್ರಜ್ಞೆಯದು.
ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮ ಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ.
(ಸ್ವಾಯತ- ಜ್ಞಾನ ಕ್ರಿಯೆಗಳ ಅಳವಡಿಕೆ)
ಶಿವಶಿವಾ ‘ಮೂರ್ತಿಗೆ’ ಸತ್ಯಶುದ್ಧ ಉಂಟೆಂಬಿರಿ.
ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ.
ಸತ್ಯಶುದ್ಧ ದೇವರಿಗೆ ಉಪಚಾರವುಂಟು,
ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷ್ಠಾನವುಂಟು,
ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ
ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು.
ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ
ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ.
ಇವರೆಲ್ಲರು ಬ್ರಹ್ಮನ ಮಕ್ಕಳು.
ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ
ಕೂಡಲಸಂಗಮದೇವಾ.
ಆವ ಸಹಜಾಸಹಜವೂ ಇಲ್ಲದ ಲಿಂಗೈಕ್ಯ ಜಂಗಮ. ಯಾವ ಭ್ರಾಂತಿಗಳೂ ಇಲ್ಲದವನು, ದ್ವಂದ್ವಗಳಿಲ್ಲದವನು, ಆಶೆಗಳಿಂದ ಮುಕ್ತನಾದವನು, ಅಹಂಕಾರವಿಲ್ಲದವನು, ಅತಿಶಾಂತನು, ಸರಿಯಾದುದನ್ನೇ ಮಾಡುವವನು, ಅನಿರೀಕ್ಷಿತವಾದ ಈ ಬದುಕಿನಲ್ಲಿ ಯಾವ ಕ್ಷಣಕ್ಕೆ ಏನೆಲ್ಲಾ ಬರುವುದೋ ಅದಕ್ಕೆಲ್ಲಾ ಸದಾ ಸಿದ್ಧನಾಗಿಯೇ ಇರುವವನು, ಭವದ ಕೇಡುಗಳನ್ನು ಶೂನ್ಯಗೊಳಿಸಿಕೊಂಡು ಆಗಂತುಕನಾದವನು; ಅನುಭಾವಿಯಾದವನು, ಕ್ಷಣಕ್ಷಣದ ಆಗುವಿಕೆಯ ಅನಂತತೆಯ ಬೆಡಗಿನಲ್ಲಿ ಬೆಡಗಾದವನು!
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಅಬ್ಬಾ…!! ಲಿಂಗಾಚಾರವು ಎಷ್ಟೊಂದು ಹಳತು? ಶರಣರು ಇಂದಿಗೂ ಇರುವುದಾದರೆ ಅದು ಎಷ್ಟೊಂದು ನಿತ್ಯ ವಿನೂತನ! ನಡೆಕೊಂಡರೆ ಎಷ್ಟೊಂದು ಚಿರಂತನ!
ಇದು ಶರಣರ ಕಾಯಸಿದ್ಧಾಂತ. ಕಾಯ ಅಂದರೆ ಕೇವಲ ಶರೀರವಲ್ಲ. ಕಾಯಕವೆಂದರೆ ಕೇವಲ ಶ್ರಮದ ಕೆಲಸ ಮಾಡುವುದಲ್ಲ. ಮನುಷ್ಯ ಕಾಯವನ್ನು ಸಮುದಾಯ ಕಾಯವನ್ನಾಗಿಸಿ, ಸಮುದಾಯ ಕಾಯವನ್ನು ವಿಶ್ವ ಕಾಯವನ್ನಾಗಿಸಿದ ಕಾಯಸಿದ್ಧಾಂತ ಅತ್ಯಂತ ವಿಸ್ತಾರವಾದದ್ದು. ಆ ವಿಸ್ತಾರವಾದ ಕಾಯ ಸಿದ್ಧಾಂತವನ್ನು ಶರಣರು ಆರು ರೀತಿಯಲ್ಲಿ ವಿವರಿಸಿ ಹಾಗೆ ನಡೆಕೊಂಡರು.
ಕಾಯವನ್ನು ಕೇವಲ ದೇಹಮಾತ್ರಕ್ಕೆ ಸಂಕುಚಿತವಾಗಿಸದೇ ದೇಹವನ್ನು ವಿಶ್ವಕಾಯವೆಂದು ತೋರಿ, ಕಾಯದ ಪಾವಿತ್ರ್ಯತೆಯನ್ನು ಕಾಪಾಡುವುದೇ ನಿನ್ನ ‘ನಿಜ ಧರ್ಮ’ವೆಂದು ಅರುಹಿ; ಅನಂತವಾದ ವಿಶ್ವಕಾಯದಲ್ಲಿ ನೀನೊಂದು ಅವಕಾಶವಾಗಿಲ್ಲಿ ಬಂದಿರುವೆ, ನಿನಗೆ ಆ ಧರ್ಮವನ್ನು ನಿರಂತರವಾಗಿಡುವ ಜವಾಬ್ದಾರಿಗಳಿವೆ, ಅವುಗಳನ್ನು ನೀನು ನಿಭಾಯಿಸಿ, ಲೋಕ ಸಮಸ್ತವನ್ನೂ ಸುಕ್ಷೇಮವಾಗಿಟ್ಟು; ನೀನೂ ಅನುಪಮಸುಖಿಯಾಗಿರಬೇಕೆಂದು ತೋರಿದ ‘ಶರಣಧರ್ಮ’ ಈ ವಿಶ್ವದಲ್ಲೇ ಅತ್ಯಪರೂಪದ್ದು. ಕಾಯವನ್ನು ಕಾಯಕಕ್ಕೆ ವಿಸ್ತರಿಸಿ, ಅದನ್ನು ಸ್ವತಃ ನಡೆದು ತೋರಿದವರು ಅಲ್ಲಮ ಬಸವಾದಿಗಳು. ಆದುದರಿಂದಲೇ ಪ್ರಥಮ ಗಣಾಚಾರಿಗಳೆನಿಸಿಕೊಂಡವರು.
ನಿತ್ಯನರಕ ಕೂಪವಾದ ಈ ಭುವಿಗೆ ಕೈಲಾಸವನ್ನು ಎಳೆತಂದು ಕಟ್ಟಿ ಭುವಿಯನ್ನು ಕಾಯಕದ ಕೈಲಾಸವಾಗಿಸಿ, ಮನುಷ್ಯನನ್ನು, ಮಾನವ ಘನತೆಯನ್ನು ಶಿವತತ್ವಕ್ಕೆ ಸಮಗೊಳಿಸಿದ ರೋಮಾಂಚನವದು!!! ಆದ್ದರಿಂದ ಲಿಂಗಾಚಾರದಲ್ಲಿ ಮಾನವ ಘನತೆಯೇ ಅಂತಿಮ! ಮಾನವ ಘನತೆ ಅಂತಃ ಚಿಲುಮೆಯಾಗಿ ಚಿಮ್ಮುವುದಾದರೆ ಈ ಲೋಕದಲ್ಲಿ ಎಂದಿಗೂ ಯಾರಿಗೂ ಯಾವ ಕೊರತೆಯೂ ಇಲ್ಲ. ಶಿವನು ಇಲ್ಲೇ ಈಗಲೇ ಇರುತ್ತಾನೆ:
ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ.
ಕೊನೆಯದಾಗಿ, ಪ್ರಿಯ ಓದುಗಾ… ಗುರುಪಥದಲ್ಲಿರುವ ಕೆಲವು ಗೌಪ್ಯ ಅಂಶಗಳನ್ನು ನಿನಗಾಗಿ ಇಲ್ಲಿ ತೆರೆದಿಟ್ಟಿದ್ದೇನೆ. ಏಕೆಂದರೆ ನೀನು ಪರಿವರ್ತನೆಯ ಮಹತ್ವವನ್ನರಿತು ಪರಿವರ್ತನೆಗೆ ಒಂದು ಸಣ್ಣ ಕಿಂಡಿಯನ್ನಾದರೂ ಮಾಡಿಕೊಳ್ಳುತ್ತೀಯಾ ಎಂಬ ನಂಬುಗೆಯಿಂದ ಈ ಲೇಖನ ಬರೆಯಲು ನನ್ನನ್ನು ಪ್ರೇರೇಪಿಸಿದೆ. ಪರಿವರ್ತನೆಗಲ್ಲದಿದ್ದರೆ ವಚನಾಮೃತವನ್ನು ನಿನ್ನ ತೆವಲಿಗೆ ಬಳಸಿಕೊಳ್ಳಬೇಡ. ಏಕೆಂದರೆ ಇಲ್ಲಿಯ ವಚನಮಾರ್ಗವು ಈಗಾಗಲೇ ಭ್ರಷ್ಠವಾಗಿರುವುದು ಸಾಕು!
ಮಾತುಮಾತಿಗೂ ಅನುಮಾನಗ್ರಸ್ತನಾಗದೇ ಸಂಯಮಬುದ್ಧಿಯಿಂದ ಇದನ್ನು ಓದಿಕೋ. ಈ ಲೇಖನ ತರ್ಕವಲ್ಲ, ದೂಷಣೆಯಲ್ಲ, ಸಿದ್ಧಾಂತವಲ್ಲ ಎಂಬುದರಲ್ಲಿ ಅನುಮಾನಗಳೇನೂ ಇಲ್ಲ. ಸುಳ್ಳನ್ನು ಇದು ಸುಳ್ಳು ಎಂದು ನಿರಾಕರಿಸುವುದಕ್ಕೂ ನಿಜವನ್ನು ಇದು ನಿಜವೆಂದು ನಂಬಿ ಆ ಹಾದಿಯಲ್ಲಿ ನಡೆಯುವುದಕ್ಕೂ ನಿನಗೆ ಪೂರ್ಣ ಹಕ್ಕಿದೆ. ನೀನು ಓದಿಕೊಂಡಿರುವ ತಿಕ್ಕಲುತನದ ಓದುಗಳಿಂದಾಗಿ ವ್ಯತಿರೇಕಾರ್ಥಗಳಿಗೆ, ಅನನ್ವಯವಾದ (ಅನ್ವಯಿಸದ) ಹೋಲಿಕೆಗಳಿಗೆ ಆಸ್ಪದ ನೀಡದೆ ನಿನ್ನ ಬದುಕಿನ ಅಸಂಪೂರ್ಣತೆಗಳೊಂದಿಗೆ, ಅನುಮಾನಗಳೊಂದಿಗೆ, ಸಂಕಟಗಳೊಂದಿಗೆ, ಅವಮಾನಗಳೊಂದಿಗೆ, ಅಸಹಾಯಕತೆಗಳೊಂದಿಗೆ ಪ್ರೀತಿಯಿಂದ ಓದಿಕೋ. ಸತ್ಯವೆಂಬ ಜ್ಞಾನವು ನಿನ್ನಲ್ಲಿ ಪ್ರಕಾಶಿಸಲಿ. ನಮಸ್ಕಾರ!
Comments 28
Pro. Mahesh .N, Canada
Aug 3, 2019ನಿನ್ನೆ ರಾತ್ರಿಯಿಂದ ಮೂರು ಸಲ ಲೇಖನ ಓದಿದೆ. ನಾವು ಮರೆತು ಹೋದ ಯಾವುದೋ ಲೋಕಕ್ಕೆ ಕೈ ಹಿಡಿದು ಒಯ್ಯುವಂತಿದೆ. ಮತ್ತೆ ಕೈ ಬಿಟ್ಟು ನಡುನಡುವೆ ತಪ್ಪಿಸಿಕೊಂಡರೆ ಅದು ನಮ್ಮ ಹಣೆಬರಹ. ಪದ್ಮಾಲಯ ಅವರದು ಅನುಭಾವಿ ನುಡಿಗಳು, ಅವರನ್ನು ನನಗೆ ಪರಿಚಯಿಸಿದರು ಬಯಲು ಬ್ಲಾಗ್ ಗೆ ಅನಂತ ನಮಸ್ಕಾರಗಳು.
jayakumar.k.s
Aug 3, 2019Padmalaya nagaraj sir
pl forget all ur knowledge and go through guru patha as a fresh and beleive the guru ,linga ,jangama an then u see the its effect padodaka and result of anubhava.
then read ur this article and u find whatever u r telling here is the result of using ur knowledge of other experience u had
ಪ್ರದೀಪ್ ಜೋಗಿಮಟ್ಟಿ
Aug 4, 2019ಲೇಖನದ ಎರಡನೆಯ ಪ್ಯಾರಾ ವಚನಗಳ ಕುರಿತಾದ ನಮ್ಮ ಗ್ರಹಿಕೆಗಳನ್ನು ಪುನರ್ ಪರಿಶೀಲಿಸುವಂತೆ ಪ್ರೇರೇಪಿಸುತ್ತದೆ. ಗುರು, ಲಿಂಗ, ಜಂಗಮದಂತಹ ಪಾರಿಭಾಷಿಕ ಶಬ್ದಗಳು ಅನುಭಾವಿಕ ನೆಲೆಯಲ್ಲಿ ತಿಳಿಯುವಂತಹವು, ವಚನಗಳಲ್ಲಿ ಅವುಗಳ ಅರ್ಥವೂ ಹಲವಾರು ಪದರುಗಳಲ್ಲಿ ಮಿಳಿತವಾದಂತೆ ಭಾಸವಾಗುತ್ತದೆ. ನಿಮ್ಮ ವಿಚಾರಗಳು ಮನನಯೋಗ್ಯವಾಗಿವೆ.
ಗಿರೀಶ್ ದೊಡ್ಡಮನಿ
Aug 5, 2019ಪದ್ಮಾಲಯ ನಾಗರಾಜ ಶರಣರಿಗೆ ಅನಂತ ಅನಂತ ನಮನಗಳು. ನೀವು ಉಲ್ಲೇಖ ಮಾಡಿರುವ ಒಂದೊಂದು ಮಾತೂ ದಿಕ್ಕು ತೋರುವಂತಿವೆ. ಈ ಬಯಲು ಲೇಖನವನ್ನು ಪ್ರಿಂಟ್ ತೆಗೆದು ನನ್ನ ಟೇಬಲ್ಲಿನ ಮೇಲೆ ಇಟ್ಟುಕೊಂಡಿದ್ದೇನೆ. ನಿಮ್ಮ ವಚನ ಕಳಕಳಿಗೆ, ನಮ್ಮ ಮೇಲೆ ಕೃಪೆ ತೋರಿ ತಿಳಿಸಿದ ವಿಷಯಗಳಿಗೆ ನಾನು ಕೃತಜ್ಞನಾಗಿದ್ದೇನೆ. ಲೇಖನ ಬರೆಸಲು ಕಾರಣರಾದ ಮಂಗಳಾ ಅಕ್ಕಾ ಅವರಿಗೂ ನನ್ನ ಶರಣುಗಳು.
-ಗಿರೀಶ್ ದೊಡ್ಡಮನಿ, ದೆಹಲಿ
ಭಾರತಿ ಕೆಂಪಯ್ಯಾ
Aug 5, 2019ಶರಣು.
ಲೇಖಕರೇ ತಿಳಿಸಿರುವಂತೆ ಅನುಮಾನಿಸದೇ ಸಂಯಮದಿಂದ ಓದಿದಾಗ ಮಾತ್ರ ಲೇಖನದ ಮಥಿತಾರ್ಥ ಎಳ್ಳು ಮೊನೆಯಷ್ಟು ಅರ್ಥೈಸಿಕೊಳ್ಳಬಹುದು.
ಮನಸ್ಸನ್ನು ಖಾಲಿ ಮಾಡಿಕೊಂಡು ಪ್ರತಿಯೊಂದು ವಾಕ್ಯವನ್ನು ತಿಳಿಯಲು ಕೇವಲ ನಾಲ್ಕೈದು ಸಾರಿ ಓದಿದೆ. ಒಂದೊಂದು ಸಾರಿಯೂ ಬೇರೆ ಬೇರೆ ರೀತಿಯಲ್ಲಿ ತನ್ನ ಗೂಢಾರ್ಥವನ್ನು ಬಿಡಿಸುತ್ತಾ ಹೋಯಿತು.
ಲೇಖಕರ ನುಡಿಯಂತೆ ಶರಣರ ಸಂಗದೊಡನೆ ಓದಬೇಕೆಂಬ ಭಾವ ಮೂಡಿತು. ಅದಕ್ಕಾಗಿ ಲೇಖಕರನ್ನು ಇಕ್ಕಟ್ಟಿಗೆ ಸಿಗಿಸಿದ ಕೂಸಿನೊಂದಿಗೆ ಓದು ಮುಂದುವರೆಯಿತು. ಇದರ ಪ್ರತಿಫಲವಾಗಿ ಅನಿಸಿಕೆಗಳು ಹೀಗೆ ಬಿತ್ತರಿಸಿದವು.
1. ಸತ್ಯವನ್ನು ಮರೆಮಾಚಿದವರ ಕೈಯನ್ನು ಹಿಡಿದು ಹೋಗುವವರಿಗೆ ಮುಂದಿನ ಹೊಲಬು ಕಾಣುವುದು ಅಸಾಧ್ಯ.
2. ಅನುಭಾವಿಕ ನೆಲೆಯಲ್ಲಿಯ ವಚನಗಳನ್ನು ಜ್ಞಾನಕ್ರೀಯೆಗಳ ಮುಖೇನ ಅರಿತು ಆಚರಿಸಿದಾಗಲೇ ಅನುಭೂತಿ ಸಾಧ್ಯ.
3. ವಚನಗಳಲ್ಲಿ ಹಂತ ಹಂತವಾಗಿ ಸಮರಸವಾಗುವ ಮಾರ್ಗವನ್ನು ಭಕ್ತನಿಂದ ಹಿಡಿದು ಐಕ್ಯದವರೆಗೆ ವಚನಕಾರರು ಅವರೇ ಅನುಭವಿಸಿದ ಅನುಭವದ ನುಡಿಗಳನ್ನು ವಚನಗಳ ಮುಖೇನ ನೀಡಿ ಇದೇ ಅಂತಿಮವೆಂದು ತಿಳಿಯದೇ ಈ ನಕ್ಷೆಯನ್ನು ತಿಳಿಸಿದ್ದಾರೆ. ಅದನ್ನೇ ಲೇಖಕರು ಸರಳ ಸುಂದರವಾಗಿ ಅರ್ಥವಾಗುವಂತೆ ನಡೆನುಡಿ, ಅಂತರಂಗ ಬಹಿರಂಗದ ಶುದ್ಧತೆ, ಅಂತಃಕರಣವೆನಿಸುವ ಮನಕ್ಕೆ ಅಡಿಯಾಗದೆ ಮನವನ್ನು ನಿಯಂತ್ರಿಸುವಿಕೆ, ಶರಣರ ಸತ್ಸಂಗ, ಎಚ್ಚರಿಕೆಯ ಹೆಜ್ಜೆ, ಆವಾಗಳೂ ಜಾಗರವಿದ್ದು ಈ ಮಾನವ ಜೀವನವನ್ನು ಸಾರ್ಥಕಪಡಿಸಿಕೊಳ್ಳುವಿಕೆಯ ಮನದಿಂಗಿತವನ್ನು ಅಭಿವ್ಯಕ್ತಿಸಿರುವುದು ಅತ್ಯಂತ ಶ್ಲಾಘನೀಯ.
ಓಮ್ಮೆ ಓದಿದ ವಚನದ ಅರ್ಥ ಮತ್ತೊಮ್ಮೆ ಓದಿದಾಗ ಹಿಗ್ಗುತ್ತಾ ಹೋಗುವಂತೆ ಲೇಖನವೂ ವಿಸ್ತಾರವಾಗುತ್ತಾ ಹೋಗುತ್ತದೆ.
ಸತ್ಯ ಅದರಕ್ಕೆ ಕಹಿ ಉದರಕ್ಕೆ ಸಿಹಿ. ಅನುಭವವನ್ನು ಹೇಳಲಾಗದು. ಅನುಭವಿಸಬೇಕು.
ಲೇಖಕರಿಂದ ಇನ್ನೂ ಅನುಭಾವಿಕ ನೆಲೆಯ ನುಡಿಮುತ್ತುಗಳು ಪ್ರಸಾದವಾಗಿ ದೊರೆಯುತ್ತದೆಂಬ ಅಭಿಲಾಷೆಯೊಂದಿಗೆ ಶರಣುಗಳು
ಸೋಮಶೇಖರ, ಹಾಸನ
Aug 7, 2019ಆರು ಹಂತಗಳಲ್ಲಿ ಲಿಂಗ ಕ್ರಿಯೆಯನ್ನು ನಮ್ಮೊಳಗೆ ಪ್ರತಿಷ್ಠಾಪಿಸುವ ಮಾರ್ಗ ಲೇಖನದಲ್ಲಿ ವಿಶದವಾಗಿ ಹೇಳಲಾಗಿದೆ. ಇವು ವಚನಗಳಲ್ಲಿ ಅಡಗಿದ ಕ್ರಮವನ್ನು ನಾಗರಾಜ್ ಅವರು ಎತ್ತಿ ತೋರಿಸಿದ್ದಾರೆ….. ಹೊಸ ದೃಷ್ಟಿಕೋನದ ವಿಭಿನ್ನ ಲೇಖನ ನನ್ನನ್ನು ವಿಚಾರಕ್ಕೆ ಹೆಚ್ಚಿದೆ.
Dr. Nandeesh Hiregowdar
Aug 7, 2019ವಚನಗಳಲ್ಲಡಗಿರುವ ನೈಜ ತತ್ವವು ಮನುಷ್ಯ ವಿವೇಕದ ಸಮಪಾತಳಿಯಿಂದ ನಡಿಗೆಗೆ ಆವರಿಸಿಕೊಳ್ಳದಿರುವ ಕೇಡಿನಲ್ಲಿ ನಾವಿಂದು ನಾಚಿಕೆಗೆಟ್ಟು ಮಾತನಾಡಬೇಕಿರುವ ಮೋಸಕ್ಕೊಳಗಾಗಿದ್ದೇವೆ_ ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದಂತೀವೆ ಈ ಮಾತುಗಳು. ಮಾತಿನಲ್ಲಿ ತಮ್ಮ ಅನುಭಾವ ಸೋರಿಹೋಗಬಾರದೆಂದು ಶರಣರು ಜಾಗ್ರತೆ ತೋರಿದರೂ. ಆದರೆ ನಾವು?
ನಾಗರಾಜ್ ಅವರ ಪ್ರತಿ ವಾಕ್ಯ ಮಾರ್ಗದರ್ಶಕದಂತಿವೆ.
ಜ್ಞಾನೇಶ್ ಕಮತಗಿ
Aug 7, 2019ವಚನಗಳನ್ನು ಶಿಷ್ಠ ಹಾಗೂ ದೇಸಿ ಎರಡೂ ಪರಂಪರೆಗಳಿಗೆ ಸೇರಿಸಬಹುದೇ? ನೀವು ಹೇಳಿದಂತೆ ನಾವೆಲ್ಲ ಸಾಂಸ್ಕೃತಿಕ ವಿಕಲ್ಪಕ್ಕೆ ಬಲಿಯಾಗಿದ್ದರೆ ನಮ್ಮ ಸಾಂಪ್ರದಾಯಿಕ ವಚನಗಳ ಓದು ದಾರಿ ತಪ್ಪಿಸುತ್ತಿದೆ ಅಂದರೆ ಹಾಗಾಯಿತು. ನಿಜವಾದ ಗುರುಪಥವನ್ನು ವಚನಗಳಿಂದ ಹೆಕ್ಕಿ ತೆಗೆಯೋದು ಹೇಗೆ ಶರಣರೇ?
ಸುಧೀರ್ ನಾಯಕ್
Aug 7, 2019ನನ್ನ ಶರಣ ಸಂಗಾತಿಗಳೇ, ಓದಿ, ಮತ್ತೆ ಓದಿ, ಇನ್ನೊಮ್ಮೆ ಓದಿ, ಎಷ್ಟು ಅದ್ಭುತ ವಿಚಾರಗಳಿವೆ ಇಲ್ಲಿ!!!
ಷಣ್ಮುಖಪ್ಪ ಬಾಳಿ
Aug 9, 2019ಇದು ಶರಣರ ಗುರುಪಥವೇ? ಎಷ್ಟು ಅದ್ಭುತವಾಗಿದೆ. ನಮಗೆ apply ಮಾಡಿಕೊಂಡು ತೋರಿಸಿದ ನಿಮ್ಮ ವಿದ್ವತ್ ಪೂರ್ಣ ಲೇಖನ ಹಲವಾರು ವಿಷಯಗಳನ್ನು ಅರ್ಥ ಮಾಡಿಸಿತು. ಭಾರತಿ ತಾಯಿಯವರ ಅಭಿಪ್ರಾಯ ಓದಿ ಮತ್ತೊಮ್ಮೆ ಓದಿದೆ. ನಿಮ್ಮ ಪಾದಗಳಿಗೆ ಶರಣು.
mahadev hadapad natuvara
Aug 10, 2019ಸಾಂಸ್ಕೃತಿಕ ವಿಕಲ್ಪವೆನ್ನುವುದು ಎಲ್ಲಾ ಬಗೆಯ ಜ್ಙಾನ ಮಾರ್ಗಗಳಲ್ಲೂ ಇದೆ. ಹಾಗೆಯೇ ಶರಣ ಧರ್ಮದಲ್ಲೂ ಇದೆಯೇನೋ ಅನಿಸುತ್ತಿದೆ. ಶಿಶುನಾಳ ಶರೀಫರು ಅಲ್ಲಮನ ಬಗ್ಗೆ ಹಾಡುತ್ತಾ ಇದೇ ಬಗೆಯಲ್ಲಿ ಕಂಡರಿಸಿದ್ದಾರೆ. ನಮ್ಮ ತತ್ವಪರಂಪರೆಯಲ್ಲಿ ವಚನಗಳನ್ನೇ ಹಾಡುವ ಹಲವು ಭಜನಾ ಸಂಘಗಳಲ್ಲೂ, ಅನುಭಾವಿಕ ಮಾತುಕತೆಗಳಲ್ಲೂ ಇದೇ ಬಗೆಯಲ್ಲಿ ವಚನಗಳ ಅರಿವನ್ನು ಕಂಡುಕೊಂಡಿದ್ದರೇನೋ ಅನಿಸುತ್ತದೆ. ಯಾಕಂದರೆ ನನ್ನ ದೊಡ್ಡಪ್ಪ ಬಹಳ ಸೊಗಸಾಗಿ ಭಜನಾಪದ ಹಾಡುತ್ತಿದ್ದರು. ಅವರನ್ನು ಮಾತಾಡಿಸಲು ಬರುತ್ತಿದ್ದ ಅವರ ಗೆಳೆಯರ ಮಾತುಗಳನ್ನ ನಾನು ಹತ್ತಿರದಿಂದ ಕೇಳಿಸಿಕೊಂಡಿದ್ದೇನೆ. ಅವರು ತರ್ಕಿಸುತ್ತಿದ್ದ ಅನುಭಾವದ ನೆಲೆಗಳು, ವಾದಗಳು, ಮಾತುಕತೆಗಳು ಇಂದು ನಿಮ್ಮ ಲೇಖನ ಓದುವಾಗ ನೆನಪಿಗೆ ಬಂದವು. ದಾಖಲಾಗದ ಮೌಖಿಕ ಜ್ಙಾನವೊಂದರ ಕೊಂಡಿಯನ್ನು ನಾವು ಕಳೆದುಕೊಂಡಿದ್ಧೇವೆ ಅನಿಸುತ್ತಿದೆ. ಅರಿವೇ ಗುರು ಎಂಬ ಸರಳವಾದ ಒಂದು ಮಾತನ್ನ ಇಷ್ಟು ವಿಸ್ತಾರವಾಗಿ ಬರೆದಿದ್ಧೀರಿ ಸರ್.. ಈ ವಿಸ್ತಾರದ ಅಗತ್ಯ ಇಂದಿಗೆ ಬಹಳ ಮುಖ್ಯವಾಗಿದೆ. ವಚನಗಳನ್ನು ಓದುವ ಮೊದಲು ಇಂದು ವಚನ ಪರಭಾಷಾಕೋಶವನ್ನು ಓದಿಕೊಳ್ಳುವುದು ಮುಖ್ಯವಲ್ಲವೇ..! ಆ ಪರಿಭಾಷಾಕೋಶದ ಒಂದೊಂದು ಶಬ್ದವು ಒಂದೊಂದು ಲೇಖನವಾಗಬೇಕಿದೆ. ತುಂಬ ಸೊಗಸಾದ ಲೇಖನವಿದು ಸರ್
Jyothi Hulyal
Aug 13, 2019ಘನವಾದ ಲೇಖನ ನಿಧಾನವಾದ ಓದನ್ನು ಬೇಡುತ್ತದೆ. ಅರ್ಥಮಾಡಿಕೊಂಡು ಓದಿದರೆ ವಚನಗಳ ಹಿಂದಿನ ಮರ್ಮ ತಿಳಿಯುತ್ತದೆ. ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಲೇಖನವಿದು. ಲೇಖಕರಿಗೆ ಮತ್ತು ಬಯಲು ಬ್ಲಾಗ್ ಗೆ ವಂದನೆ.
ಜಯರಾಜ್ ಮೈಸೂರು
Aug 13, 2019ಗುರುವಿನ ವಿಷಯವಾಗಿ ವಾಟ್ಸಾಪ್ ಗ್ರೂಪುಗಳಲ್ಲಿ ಚರ್ಚೆಗಳಾಗಿವೆ, ಜಗಳಗಳಾಗಿವೆ. ಇದರಿಂದ ಗೊಂದಲಗಳು ಹೆಚ್ಚಾಗಿವೆ. ನನಗೂ ತುಂಬಾ ಸಂಶಯಗಳಿದ್ದವು. ಗುರುಪಥ ತೋರುವ ಮೂಲಕ ನನ್ನ ಹಲವಾರು ಗೊಂದಲ ದೂರಾಗಿವೆ. ಗುರುಪಥ ಗೊತ್ತಾಯ್ತು, ಗುರು ಎಲ್ಲಿ? ಶರಣರ ವಚನಗಳೇ ನಮ್ಮ ಗುರುಗಳೆಂದು ತಿಳಿಯಬೇಕೇ?
ಗಂಗಾಧರ ನಾವಲೆ
Aug 15, 2019ದೇಸಿ ಪರಂಪರೆಯ ಗುರು ಪಥವನ್ನು ಶಿಷ್ಠಪರಂಪರೆ ಕಬಳಿಸಿ ಹಾಕಿತೇ? ಅಥವಾ ಅದಕ್ಕೂ ತನ್ನ ಆಚಾರಗಳನ್ನು ಬೆರೆಸಿ ಗುರು-ಶಿಷ್ಯ ಸಂಬಂಧವನ್ನೇ ಹಾಳುಗೆಡವಿತೆ? ಇತಿಹಾಸದ ಎಲ್ಲ ಕುಕೃತ್ಯಗಳು ಕಾಣದಂತೆ ನಮ್ಮ ಕಾಲ ವಿಕಲ್ಪಕ್ಕೆ ಜಾರಿಕೊಂಡಿದೆ. ಅನ್ಯಾಯ, ಅಕ್ರಮಗಳನ್ನು ಗುರುತಿಸಲಾಗದಷ್ಟು ವಿಭ್ರಮೆಗೆ ಒಳಗಾಗಿದ್ದೇವೆ. ಅಂಥ ಕಾರ್ಗತ್ತಲಲ್ಲಿ ಬೆಳಕಿನ ರೇಖೆಯಂತೆ ಕಾಣಿಸುತ್ತಿದೆ ಶ್ರೀಯುತ ನಾಗರಾಜ್ ಅವರ ಬರಹ.
Dr. J S Patil
Aug 16, 2019ಲೇಖಕರು ಲಿಂಗತತ್ವದ ಕುರಿತು ಸುಧೀರ್ಘವಾಗಿ ವಿವರಿಸಿದ್ದಾರೆ. ಭಾರತೀಯ ಸನಾತನ ವ್ಯವಸ್ಥೆಯೊಳಗಿನ ಮೂತಭೂತ ಹುಳುಕುಗಳಿಗೆ ಪ್ರತಿಕ್ರೀಯೆಯಾಗಿ ಹುಟ್ಟಿದ್ದು ಶರಣರ ವಚನ ಚಳುವಳಿ. ಅದೊಂದು ಕೇವಲ ಅನುಭಾವ ಸಾಹಿತ್ಯವೆಂದು ಗುರುತಿಸುವುದು ಆತ್ಮವಂಚಕ ನಡೆ ಎನ್ನುವ ಲೇಖಕರ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತವಿದೆ.
ಶಿವಲಿಂಗಪ್ಪ ರಾಯಚೂರು
Aug 17, 2019ಶಿವಯೋಗದ ಗುರಿಯೇ ಲಿಂಗಾಂಗ ಸಮರಸವೇ? ನೀವು ಹೇಳಿದ ಆರು ಕ್ರಿಯಾಚಾರಗಳಲ್ಲಿ ಶರಣರ ಷಟಸ್ಥಲ ಅಡಗಿರಬಹುದೇ? ಎರಡು ಮೂರು ಸಲ ಓದಿದೆ, ಆದರೂ ಸರಿಯಾಗಿ ಗೊತ್ತಾಗಲಿಲ್ಲ…. ನೀವೇ ಆ ಕುರಿತು ತಿಳಿಸಿಕೊಡಬೇಕು ಶರಣರೇ. ನಿಮ್ಮ ಭಾಷೆ ಮತ್ತು ಚಿಂತನೆಗಳು ಅನುಭಾವದಿಂದ ಬಂದಂತೆ ತೋರುತ್ತದೆ. ಶಿವಯೋಗ ರಹಸ್ಯ ಕುರಿತು ಪುಸ್ತಕ ಬರೆದರೆ ಉಪಕಾರವಾಗುತ್ತದೆ.
Pro Mallikarjuna
Aug 18, 2019ಶರಣರ ಶಿವ ಯಾರು? ಎಂಬ ಪ್ರಶ್ನೆ ನಿಮ್ಮ ಲೇಖನ ಓದಿದಾಗ ಮತ್ತೊಮ್ಮೆ ಪ್ರಶ್ನೆಯಾಗಿ ಬೆನ್ನು ಹತ್ತಿತು. ನಿರಾಕಾರ, ಸರ್ವಾಂತರ್ಯಾಮಿಯಾದ ದೇವರೇ ಶರಣರ ಶಿವ ಎಂದು ನನ್ನ ಸ್ಪಷ್ಟ ತಿಳುವಳಿಕೆಯಾಗಿತ್ತು. ನಿಮ್ಮ ಲೇಖನ ಬೇರೇನೋ ಹೇಳುವಂತಿದೆ. ಅದನ್ನು ಸರಿಯಾಗಿ ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದಯವಿಟ್ಟು ನನ್ನಂತವನಿಗೆ ಅರ್ಥವಾಗುವಂತೆ ಹೇಳುವಿರಾ ಸರ್?
ಜ್ಯೋತಿರ್ಲಿಂಗಪ್ಪ
Aug 20, 2019ಈ ಲಿಂಗಾಂಗ… ಲೇಖನ, ಪದ್ಮಾಲಯ ನಾಗರಾಜ್ ಅವರು ಗುರುಪಥ ಮಾರ್ಗದಲ್ಲಿ ನೋಡಿರುವುದು ಅತ್ಯಂತ ಆಸಕ್ತಿದಾಯಕ ಮತ್ತು ಶರಣರ ಭಿನ್ನ ನೋಟ…. ತುಂಬಾ ಮೆಚ್ಚುಗೆ.
ಗುರುಪ್ರಸಾದ್ ಚಿಟಗುಪ್ಪ
Aug 21, 2019ನಿಮ್ಮ ಲೇಖನವನ್ನು ಓದುತ್ತಿದ್ದರೆ ನೀವು ಹೇಳುವುದೆಲ್ಲ ನಿಜ ಎನಿಸುತ್ತದೆ. ಆದರೆ ನನಗೊಂದು ಪ್ರಶ್ನೆ ಕಾಡುತ್ತಿದೆ. ಲಿಂಗ ಜಪ, ಲಿಂಗ ತಪ, ಲಿಂಗವನ್ನು ಅಂಗೈಯಲ್ಲಿ ಹಿಡಿದು ತದೇಕ ದೃಷ್ಟಿಯಿಂದ ನಿರ್ಭಾವುಕವಾಗಿ ಪರಿಭಾವಿಸುವ ಧ್ಯಾನ ಕೂಡ ಕ್ರಿಯಾಚಾರವಲ್ಲ ಎಂದಿದ್ದೀರಿ…… ಹಾಗಾದರೆ ಲಿಂಗ ಪೂಜೆ ಯಾಕೆ ಮಾಡಬೇಕು? ಬಸವಣ್ಣನವರು ಯಾಕೆ ಲಿಂಗವನ್ನು ಎಲ್ಲರಿಗೂ ಕೊಟ್ಟರು? ಲಿಂಗಕ್ಕೂ ಸಾಧನೆಗೂ ಸಂಬಂಧವಿಲ್ಲವೇ?
Shobhadevi Kamalapura
Aug 22, 2019ಲಿಂಗಾಂಗ…. ಮಹಾಪ್ರಸಾದ- ತುಂಬಾ ತುಂಬಾ ಚೆನ್ನಾಗಿ ಬರೆದಿದ್ದಾರೆ ನಾಗರಾಜ್ ಅವರು. ನನಗೆ ಒಮ್ಮೆಲೆ ಎಲ್ಲವನ್ನೂ ಅರ್ಥೈಸಿಕೊಳ್ಳುವುದು ಕಷ್ಟ! ಈ ನೆಲದ ಶ್ರಮಿಕ ಜನರ ಲಿಖಿತಾನುಭವಗಳಾಗಿ ಶರಣರ ವಚನಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತವೆ…. ಹೀಗೆ ಒಂದೊಂದು ಮಾತುಗಳೂ ತುಂಬಾ ಚೆನ್ನಾಗಿವೆ.
Gowrish S
Aug 22, 2019“ಶರಣರು ಮಂಡಿಸಿದ ಸದಾ ಚಲನಶೀಲವೂ ನಿತ್ಯಕ್ರಾಂತಿಯೂ ಆಗಿರುವ ವಿಮೋಚನಾ ಮಾರ್ಗವು ಸರ್ವಜೀವಿಗಳನ್ನು ದಯೆಯಿಂದ ಕಾಣುವ ಸ್ವತಂತ್ರ ಮಾರ್ಗ” ಎನ್ನುವ ಪದ್ಮಾಲಯ ನಾಗರಾಜ್ ಅವರ ಮಾತು ನೂರಕ್ಕೆ ನೂರು ಪಾಲು ಸತ್ಯ. ಇದನ್ನು ಕಾಣದ ಲಿಂಗಾಯತರು ಕರ್ಮಗಳ ಕೂಪಕ್ಕೆ ಶರಣರ ತತ್ವಗಳನ್ನು ಒತ್ತೆ ಇಟ್ಟಿದ್ದಾರೆ. ನಾನು ಓದಿದ ಉತ್ಕೃಷ್ಟ ಲೇಖನ ಇದು.
ರವೀಂದ್ರ ಪ್ರಸಾದ್, ಚಿತ್ರದುರ್ಗ
Aug 23, 2019ಲಿಂಗಾಂಗಗಳ ಕ್ರಿಯಾಧೀನದಲ್ಲಿರುವುದೇ ನಿಜವಾದ ಪೂಜೆ, ನಿತ್ಯ ಪೂಜೆ, ನಿತ್ಯ ಭಕ್ತಿ ಎಂದು ಹೇಳಿದ ಮಾತು ನನಗೆ ಬಹಳ ಪ್ರೀಯವೆನಿಸಿತು. ಕ್ರಿಯಾಧೀನವಾಗುವ ಆರು ಹಾದಿಗಲನ್ನು ತೋರಿಸಿದ್ದೀರಿ. ಇವು ಷಟಸ್ಥಲಗಳೇ? ಷಟಸ್ಥಲಗಳನ್ನು ಹೀಗೆ ಸರಳವಾಗಿ ಹೇಳಲು ಸಾಧ್ಯವಾದರೆ ವಚನಗಳ ಜೊತೆ ಕಮ್ಯೂನಿಕೇಷನ್ ಸಾಧ್ಯವಾಗುತ್ತದೆ. ಹಾಗೆ ಷಟಸ್ಥಲಗಳನ್ನು ಬಿಡಿಸಿ ನಮ್ಮ ಭಾಷೆಯಲ್ಲಿ ವಿವರಿಸಲು ಸಾಧ್ಯವೇ?
Nandeesh Harihara
Aug 24, 2019ಕಾಣಬಾರದ ಲಿಂಗವು… ಲೇಖನ ಓದಿದಾಗಿನಿಂದ ಮತ್ತೆ ನಿಮ್ಮ ಲೇಖನ ಓದಬೇಕೆನಿಸಿತ್ತು. ನಿಮ್ಮ ವಿಚಾರಗಳು ಪ್ರಬುದ್ಧವಾಗಿವೆ. ವಿಷಯ ಅರ್ಥ ಮಾಡಿಕೊಳ್ಳಲು ಕಠಿಣವೆನಿಸಿದರೂ ಬಹಳ ಹಿಡಿಸಿತು. ಮನಸ್ಸನ್ನು ಕೆದುಕುವಂತಿತ್ತು.
D P Prakash
Aug 25, 2019ಶರಣರು ಪ್ರಬಲವಾಗಿ ಪ್ರತಿಪಾದಿಸಿದ ನಡೆ-ನುಡಿ ಸ೦ಸ್ಕೃತಿಯು ವ್ಯಷ್ಟಿ ಪ್ರಜ್ಞೆಯ ಜೊತೆಗೆ ಸಮಷ್ಟಿ ಪ್ರಜ್ಞೆಯನ್ನೂ ಬಳಸಿ ನಿ೦ತ ಬಹು ಮುಖ್ಯ ತತ್ವ. ಇದು ಸಮಸ್ತ ನಾಗರೀಕತೆಯನ್ನು ಹೊಸ ಆಯಾಮದೆಡೆ ಕೊ೦ಡೊಯ್ಯಬಲ್ಲ ಅ೦ತಃಶಕ್ತಿ ಹಾಗೂ ಮನುಷ್ಯನಿಗಿರಬೇಕಾದ ಮೂಲ ಸ೦ಸ್ಕೃತಿ. ಈ ತತ್ವವು ಶರಣರ ಕಾಯ ಸಿದ್ಧಾ೦ತದಲ್ಲಿ ಅರಳಿನಿ೦ತದ್ದನ್ನು ನೋಡುವ ನೋಟವೇ ನವ ನವೀನವಾದದ್ದು. ಶರಣರ ತತ್ವ ಪ್ರತಿಪಾದನೆಯನ್ನು ಅನೇಕ ದಶಕಗಳಿ೦ದ ಹಿರಿಯರು ಸಾ೦ಪ್ರದಾಯಕವಾಗಿ ನೋಡುವ ಹಾಗೂ ಅದನ್ನೇ ಅಕ್ಷರಶಃ ಅನುಸರಿಸುವ ಯುವಜನಾ೦ಗದ ಧೋರಣೆ ಒ೦ದು ರೀತಿಯಲ್ಲಿ ವಚನಸಾಹಿತ್ಯದಲ್ಲಿ ಅ೦ತರ್ಗತವಾಗಿರುವ ಚಲನಶೀಲತ್ವಕ್ಕೆ ತಡವಿಕೊ೦ಡ ತೊಡಕು ಎ೦ದೇ ಹೇಳಬಹುದು.
ನಡೆ-ನುಡಿ ಸ೦ಸ್ಕೃತಿಯನ್ನು ಶರಣರ ವಚನಗಳಿ೦ದ ಬಗೆದು ಅದರ ವಿಸ್ತಾರವನ್ನು ಅಚ್ಚುಕಟ್ಟಾದ ಕಾಯ ಸಿದ್ಧಾ೦ತದ ಚೌಕಟ್ಟಿನೊಳಗೆ ಪದ್ಮಾಲಯ ನಾಗರಾಜ್ ರವರು ಸುರವಿಕೊ೦ಡ ಬಗೆಯೇ ಬಹು ವಿಶಿಷ್ಟವಾದುದು. ಅಷ್ಟೇ ಅಲ್ಲ ಅದನ್ನು ಅತ್ಯ೦ತ ಪರಿಣಾಮಕಾರಿಯಾಗಿ ವಿಷದಪಡಿಸಿದ ರೀತಿಯಿ೦ದಲೇ ಅವರು ವಚನ ಸಾಹಿತ್ಯವನ್ನು ನೋಡುವ ವಿಶಿಷ್ಟ ದೃಷ್ಟಿಕೋನ ಎ೦ಥದ್ದೆ೦ದು ಅರಿಯ ಬಹುದಾಗಿದೆ. ಕಾಯ ಸಿದ್ಧಾ೦ತ ಒ೦ದು ಕ್ರಾ೦ತಿಕಾರಿ ಸಿದ್ಧಾ೦ತವಾಗಿದೆ. ಮನುಷ್ಯನ ಎಲ್ಲಾ ಭ್ರಮಿತ ಆಲಯಗಳಿ೦ದ ಮುಕ್ತಿ ಪಡೆಯುವ ಆತ್ಮ ಪ್ರಜ್ಞೆ ಆತ್ಯ೦ತಿಕ ಸತ್ಯದಲ್ಲಿ ನಿಲುಗಡೆ ಪಡೆಯುವ ಹ೦ತ ಹ೦ತದ ಕ್ರಮಿಕೆಯನ್ನು ಲೇಖಕರು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ಇದು ವಚನ ಸಾಹಿತ್ಯವನ್ನು ಇ೦ದಿನ ಜಗತ್ತಿನ ಸ೦ಕೀರ್ಣತೆಗಳಿಗೆ ಹೇಗೆ ಒಗ್ಗಿಸಿಕೊ೦ಡು ನೋಡಬೇಕು ಎ೦ಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಶರಣ ಸಾಹಿತ್ಯ ಸಾಹಿತ್ಯಿಕ ಅಭೀಪ್ಸೆಗಳನ್ನು ಪೂರೈಸಿಕೊಳ್ಳಲು ಎರವಾಗುವ ಸಾಧನವಲ್ಲ. ಅದು ಸಾರ್ವಕಾಲಿಕವಾಗಿ ಹಾಗೂ ಸಾರ್ವತ್ರಿಕವಾಗಿ ಮನುಷ್ಯ ನಾಗರೀಕತೆಯನ್ನು ಏಳ್ಗೆಯೆಡೆ ಕೊ೦ಡೊಯ್ಯಲು ಸದಾ ಸನ್ನದ್ಧ ಹೆಗಲು ಶಕ್ತಿ! ಅದನ್ನು ದಕ್ಕಿಸಿಕೊಳ್ಳಬೇಕೆ೦ದರೆ ಅದರ ಆ೦ತರ್ಯವನ್ನು ಪ್ರವೇಶಿಸುವ ತುಮುಲ-ಹಪಹಪಿಕೆ ನಮಲ್ಲಿರಬೇಕು ಅಷ್ಟೆ. ಅ೦ಥವರಿಗೆ ಈ ಲೇಖನ ಕೈ ಹಿಡಿದು ಮುನ್ನಡೆಸುವ ಹಾಗೂ ಸ್ಫೂರ್ತಿ ನೀಡುವ ಶಕ್ತಿ! ಇದರಲ್ಲಿ ಎರಡು ಮಾತಿಲ್ಲ.
ಸುನಂದಾ ಬೋರಗಿ
Aug 26, 2019ಲೇಖನ ಓದಿದ ತಕ್ಷಣ ದಿಗ್ಭ್ರಾಂತಿ ಆಯಿತು. ನಾನೆಲ್ಲಿ ಇದ್ದೇನೆ, ಜಗತ್ತೆಲ್ಲಿದೆ ಅಂತ ಗಾಬರಿ ಎನಿಸಿತು. ಒಂದು ರೀತಿಯ ಹಳಹಳಿಕೆ, ಸಂಕಟ, ಖುಷಿ….. ವಚನಗಳಲ್ಲಿ ಇಂಥ ಆಳದ ಕಲ್ಪನೆ ಗೊತ್ತೇ ಇರಲಿಲ್ಲ. ಇನ್ನು ಕನಿಷ್ಟ 2-3 ಸಲ ಓದಬೇಕು, ಅರ್ಥ ಮಾಡಿಕೊಳ್ಳಲು. ಅಗಾಧ ಜ್ಞಾನವುಳ್ಳ ಪದ್ಮಾಲಯ ನಾಗರಾಜ್ ಅವರಿಗೆ ಅನಂತ ಕೋಟಿ ನಮಸ್ಕಾರಗಳು.
Jayadev Jawali
Aug 28, 2019ನೀವು ಹೇಳಿದಂತೆ ನಾವು ಸಾಂಸ್ಕೃತಿಕ ವಿಕಲ್ಪಕ್ಕೆ ಒಳಗಾಗಿದ್ದೇವೆ ಎನ್ನುವುದು ನಿಜ. ಇಂಥ ಪರಿಸ್ಥಿತಿಯಲ್ಲಿ ದೇಸಿ ಮಾರ್ಗವನ್ನು ಉಳಿಸಿಕೊಳ್ಳುವುದು ಹೇಗೆ? ವಚನಗಳಿಗೆ ನ್ಯಾಯ ಕೊಡುವುದು ಹೇಗೆ? ಭ್ರಷ್ಟತೆಯಿಂದ ಹೊರಗೆ ಬರುವುದಕ್ಕೆ ದಾರಿ ಎಲ್ಲಿದೆ?
ಡಾ. ವೀರಣ್ಣ ರಾಜೂರ, ಧಾರವಾಡ
Aug 28, 2019ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ ಮತ್ತು ಲಿಂಗಾಂಗ ಸಮರಸ ಎಂಬ ಮಹಾಪ್ರಸಾದ… ಎರಡೂ ಲೇಖನಗಳು ಗಂಭೀರ ಚಿಂತನೆಯಿಂದ ಕೂಡಿವೆ. ವಚನಕಾರರ ಆಶಯವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. ಮೊದಲ ಲೇಖನದಲ್ಲಿ ‘ಕಾಯಕವೇ ಕೈಲಾಸ’ ಎಂದು ಬಸವಣ್ಣನವರು ಹೇಳಿದ್ದಾರೆಂಬುದು ತಪ್ಪಾಗಿದೆ. ಅದನ್ನು ಹೇಳಿದವನು ಆಯ್ದಕ್ಕಿ ಮಾರಯ್ಯ. ಉಳಿದಂತೆ ಚೆನ್ನಾಗಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Sep 6, 2019ಲಿಂಗಾಂಗ ಸಮರಸ … ಲೇಖನ ಓದಿದ್ದೇವೆ. ತುಂಬಾ ನಿಧಾನವಾಗಿ ಅರ್ಥೈಸಿಕೊಂಡು ಓದಬೇಕಾದ ಲೇಖನ. ಹಲವು ವಿಚಾರಗಳು ಇದರಲ್ಲಿ ಅಡಕವಾಗಿವೆ. ಚಿಂತನೆಗೆ ಹಚ್ಚುತ್ತವೆ. ಅಂತರಂಗದಲ್ಲಿ ಮತ್ತೆ ಮತ್ತೆ ಮಥನ ಮಾಡಬೇಕು. ವಚನಗಳ ಸತ್ವ ಇರುವುದೇ ಇಲ್ಲಿ. ಅಭಿನಂದನೆ.
– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು