ಲಿಂಗವಾಗುವ ಪರಿ…
ಜಗತ್ತಿನ ಹಲವಾರು ಸಾಂಸ್ಥಿಕ ಧರ್ಮಗಳ ಒಳಹೊಕ್ಕು ನೋಡಿದಾಗ ದೇವರು ಮತ್ತು ಜೀವಾತ್ಮ (ಭಕ್ತ), ಇವರಿಬ್ಬರ ಸಂಬಂಧ ಸಾಮಾನ್ಯವಾಗಿ ಕೊಡು-ಕೊಳ್ಳುವ ವ್ಯಾಪಾರೀ ಮನೋಭಾವದಿಂದ ಕೂಡಿರುವುದನ್ನು ಕಾಣುತ್ತೇವೆ. ಇದಕ್ಕೆ ಸಂಪೂರ್ಣ ವಿಭಿನ್ನವಾದ ನೆಲೆಯಲ್ಲಿ ನಮ್ಮ ಶರಣರು, ಬೇಡುವುದು ಭಕ್ತನ ರೀತಿಯಲ್ಲ, ಭಕ್ತನು ಬೇಡಬಾರದು, ನೀಡುವಿಕೆಯೇ ಪ್ರತಿಯೊಬ್ಬ ಮಾನವನ ಗುಣವಾಗಬೇಕು, ಆಗ ಮಾತ್ರ ಸಮಾಜ ಸಮೃದ್ಧವಾಗುವುದು. ನೀಡಬೇಕಾದರೆ ಮೊದಲು ದುಡಿಯಬೇಕು. ಹೀಗೆ ಸಂಪಾದನೆ ಮತ್ತು ವಿತರಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಧರ್ಮಕ್ಕೆ ಹೊಸ ಪಥವನ್ನು ಹಾಕಿದರು. ನಗೆಯ ಮಾರಿತಂದೆ ಎಂಬ ಬಸವ ಸಮಕಾಲೀನ ಶರಣರು ಹೇಳುತ್ತಾರೆ, “ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವುದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.” ಭಕ್ತನಾಗಲೀ, ವಿರಕ್ತನಾಗಲೀ ಮತ್ತೊಬ್ಬರ ಬೇಡುವುದು ಸಲ್ಲದು, ನಗುಮುಖದ ಕಾಯಕವೇ ಸರ್ವಶ್ರೇಷ್ಠ ಎಂದು ಮಾರಿತಂದೆ ಶರಣರು ತಿಳಿಸುತ್ತಾರೆ.
ವ್ಯೋಮಕಾಯಸಿದ್ಧ ಅಲ್ಲಮಪ್ರಭುದೇವರು ಹೇಳುತ್ತಾರೆ, “ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ, ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ? ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ, ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ? ಸೈದಾನವನರ್ಪಿಸಿ ಫಲವ ಬೇಡುವರಯ್ಯಾ ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲ��ೆ? ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು, ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ!” ನಾವು ನಿತ್ಯ ಪೂಜಿಸಿ ಹಲವಾರು ನಿಸರ್ಗ ನಿರ್ಮಿತ ದ್ರವ್ಯಗಳನ್ನು ದೇವರಿಗೆ ಅರ್ಪಿಸಿ ನಮಗೆ ಬೇಕಾದ ಫಲಗಳನ್ನು ಬೇಡುತ್ತೇವೆ. ಎಲ್ಲಾ ಪದಾರ್ಥಗಳೂ ಸೃಷ್ಟಿಮುಖದಿಂದ ದೊರೆತಿದ್ದು, ನಾವು ಅವುಗಳನ್ನು ದೇವರಿಗೆ ಕೊಟ್ಟು ಅದಕ್ಕೆ ಪ್ರತಿಫಲವನ್ನು ಬೇಡುತ್ತಿರುತ್ತೇವೆ. ಎಂಥಾ ಮೂರ್ಖತನ ಇದಲ್ಲವೇ? ನಾವು ದೇವರಿಗೆ ಸಮರ್ಪಿಸಬೇಕಾದದ್ದು ಭಾವಪೂರ್ಣ ಭಕ್ತಿಯನ್ನೇ ಹೊರತು ಹೊರಗಣ ವಸ್ತುಗಳನ್ನಲ್ಲ. ನಾವು ತ್ಯಜಿಸಬೇಕಾದ್ದು ನಮ್ಮಲ್ಲಿ ಮನೆಮಾಡಿರುವ ದುರ್ಗುಣಗಳನ್ನೇ ಹೊರತು ತಲೆಯ ಮೇಲಿನ ಕೂದಲನ್ನಾಗಲೀ, ಹಳೆಯ ವಸ್ತ್ರಗಳನ್ನಾಗಲೀ, ಇನ್ನಾವುದೇ ಪದಾರ್ಥಗಳನ್ನಾಗಲಿ ಅಲ್ಲ.
ಹಾಗಾದರೆ ಪ್ರವಾದಿ ಬಸವೇಶ್ವರರು ಪ್ರತಿಪಾದಿಸಿದ ಭಕ್ತಿಯ ಪಥ ಯಾವುದು? ದೇವಪೂಜೆ ಮಾಡುವುದಾದರೆ ಯಾವುದನ್ನು ಪೂಜಿಸಬೇಕು? ಅದಕ್ಕೆ ಏನನ್ನು ಅರ್ಪಿಸಬೇಕು? ಬೇಡುವುದಾದರೆ ಏನನ್ನು ಬೇಡಬೇಕು? ಮುಂತಾದ ಹಲವಾರು ಪ್ರಶ್ನೆಗಳಿಗೆ ಅವರ ವಚನಗಳ ಮೂಲಕವೇ ಉತ್ತರ ಕಂಡುಕೊಳ್ಳಬಹುದು.
ಲಿಂಗಾಯತನಾಗುವುದೆಂದರೆ ಕೇವಲ ದೇಹದ ಮೇಲೆ ಸದಾ ಲಿಂಗ ಧರಿಸುವುದೆಂತಲ್ಲ, ಅದು ಸ್ವಯಂ ದೈವತ್ವಕ್ಕೇರುವ ಒಂದು ಸುಂದರ ಆಧ್ಯಾತ್ಮಿಕ ಪಯಣ!
ಹಾಗಾದರೆ ಮಾನವನೊಬ್ಬ ದೇವನಾಗಬಲ್ಲನೇ ಎಂಬ ಪ್ರಶ್ನೆ ಸಹಜವಾಗಿ ಎದುರಾಗುವುದು. ಅದಕ್ಕೆ ಬಸವಣ್ಣನವರು ಕೇಳುತ್ತಾರೆ, “ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ!” ಲಿಂಗವ ಧರಿಸುವುದು, ಲಿಂಗವ ತ್ರಿಕಾಲ ಪೂಜಿಸುವುದು, ಇವು ನಿತ್ಯ ನಡೆದೇ ಇರುತ್ತವೆ. ಆದರೆ ಪೂಜಿಸುವಾತನ ನಡೆನುಡಿಯಲ್ಲಿ ಯಾವುದೇ ಉತ್ತಮಿಕೆ ಕಾಣದಿದ್ದರೆ ಆತನು ಮಾಡಿದ ಪೂಜೆ, ಆಚಾರಗಳಿಂದ ಏನು ತಾನೇ ಉಪಯೋಗ? ಪ್ರತಿಯೊಂದು ಕಾರ್ಯಕ್ಕೂ/ ಕಾಯಕಕ್ಕೂ ಪ್ರತಿಫಲವಿರಬೇಕಲ್ಲವೇ? ಹಾಗೆ ಪೂಜಿಸಿದ ಕಾರ್ಯಕ್ಕೆ ದೊರೆತ ಫಲಿತವಾದರೂ ಏನು? ಯಾತಕ್ಕಾಗಿ ಲಿಂಗದ ನೆನಹು, ನಿರೀಕ್ಷಣೆ, ಧ್ಯಾನಾದಿಗಳನ್ನು ನಾವು ಮಾಡಬೇಕು? ಅದಕ್ಕೆ ಬಸವಣ್ಣನವರು ಹೇಳುತ್ತಾರೆ, ನದಿಯೊಳಗೆ ನದಿ ಬೆರೆಸಿದಂತಾಗಬೇಕೆಂದು! ಅಂದರೆ ಪೂಜಿಸುವ ವಸ್ತುವಿನ ಸ್ವರೂಪವೇ ತಾನಾಗಬೇಕೆಂಬುದು ಬಸವಪ್ರಣೀತ ಲಿಂಗಧರ್ಮದ ಆಶಯ. ಅಂತಲ್ಲದೆ ಮಾಡುವ ಸಕಲ ಪೂಜಾಚರಣೆಗಳೂ ಕೇವಲ ವ್ಯರ್ಥ!
ಸಕಳೇಶ ಮಾದರಸ ಶರಣರು ಇಂಥಾ ಎಡಬಿಡಂಗಿ ಜನರನ್ನು ತಿವಿದು ಎಚ್ಚರಿಸುತ್ತಾರೆ: “ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಮೆಳೆ ಭಕ್ತನಾಗಬಲ್ಲುದೆ? ಮೇಹನಿಕ್ಕಿ ಮೆಯ್ಯನೊರಸಿದಡೆ, ಪಶುಗಳೆಲ್ಲ ಮೆಚ್ಚುವವು. ಅನ್ನವನಿಕ್ಕೆ ಹಿರಣ್ಯವ ಕೊಟ್ಟಡೆ, ಜಗವೆಲ್ಲ ಹೊಗಳುವುದು. ಒಳಗನರಿದು, ಹೊರಗೆ ಮರೆದವರ ಎನಗೆ ತೋರಿಸಾ, ಸಕಳೇಶ್ವರದೇವಾ.” ಅದಕ್ಕೆ ಪೂರಕವಾಗಿ ಅಲ್ಲಮಪ್ರಭುದೇವರೂ ಹೇಳುತ್ತಾರೆ: “ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು? ಹಸಿವು ಹೋಹುದೆ? ಅಂಗದ ಮೇಲೆ ಲಿಂಗಸ್ವಾಯತವಾದಡೇನು? ಭಕ್ತನಾಗಬಲ್ಲನೆ? ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ, ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ ಕಂಡಡೆ ನಾಚುವೆನಯ್ಯಾ_ ಗುಹೇಶ್ವರಾ.”
ನಮಗೆ ಹಸಿವಾದರೆ ಹೊಟ್ಟೆ ತುಂಬಾ ತೃಪ್ತಿಯಾಗುವಂತೆ ಊಟ ಮಾಡಬೇಕು, ಅದು ಬಿಟ್ಟು ಹೊಟ್ಟೆಯ ಮೇಲೆ ರುಚಿಯಾದ ಸ್ವಾದಿಷ್ಟಕರವಾದ ಬುತ್ತಿಯ ಗಂಟನ್ನು ಕಟ್ಟಿಕೊಂಡರೆ ಏನು ಪ್ರಯೋಜನ ಅಲ್ಲವೇ? ಹಾಗೇ ಜೀವಾತ್ಮನಿಗೆ ಪರಮಾತ್ಮನನ್ನರಿಯಬೇಕೆಂಬ ಬಯಕೆಯುಂಟಾದರೆ ಕೇವಲ ಅಂಗದ ಮೇಲೆ ಲಿಂಗವ ಧರಿಸಿದರೆ ಸಾಕೇ? ಕೇವಲ ಬಾಹ್ಯವಾದ ಅಲಂಕಾರಿಕ ಪೂಜೆಯಿಂದ ಪ್ರಯೋಜನವಾದರೂ ಏನು? ಅದನ್ನು ಅರಿತು ಅನುಭವಿಸ ಬೇಡವೇ? ಅಂಗದ ಮೇಲೆ ಕಟ್ಟಿದ (ಆಯತವಾದ) ಲಿಂಗವು ಸನ್ನಿಹಿತವಾಗಿ ನಮ್ಮ ಇಡೀ ಕಾಯವೇ ಲಿಂಗಸ್ವರೂಪವಾಗಬೇಕು. ಇಲ್ಲದಿದ್ದರೆ ಕಟ್ಟಿಕೊಂಡ ಲಿಂಗವದು ಮೆಳೆಯ ಮೇಲೆ ಇಟ್ಟ ಕಲ್ಲಿಗೆ ಸಮ. ಆ ಲಿಂಗಕ್ಕೂ ಈ ಕಾಯಕ್ಕೂ ಯಾವುದೇ ರೀತಿಯ ಸಂಬಂಧ ಏರ್ಪಡದು. ಹಾಗಾಗಿ ಲಿಂಗವನ್ನು ಕೊಟ್ಟಾತ ಗುರುವಾಗಲಿಲ್ಲ, ಕಟ್ಟಿಕೊಂಡಾತ ಭಕ್ತನಾಗಲಿಲ್ಲ. ಇಡೀ ಪ್ರಸಂಗವು ಕೇವಲ ಬೂಟಾಟಿಕೆಯ ನಾಟಕದಂತಾಗುವುದು.
ಹಾಗಾದರೆ ಜೀವಾತ್ಮನು ಲಿಂಗ ಸ್ವರೂಪವಾಗುವುದೆಂತು?
ಜೇಡರ ದಾಸಿಮಯ್ಯ ಶರಣರು ಜೀವ ಶಿವನಾಗುವ (ಲಿಂಗವಾಗುವ) ಪರಿಯನ್ನು ಅರುಹಿರುವ ಮಾರ್ಗ ಅತ್ಯದ್ಭುತ! “ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತೂರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.” ಯಾಂತ್ರಿಕವಾದ ಭಕ್ತಿ ನಿರುಪಯುಕ್ತ. ಮಾಡುವ ಭಕ್ತಿಯಿಂದ ನಮ್ಮೊಳಗೆ ಯಾವುದೇ ರೀತಿಯ ದೈವೀ ಸಂವೇದನೆಗಳುಂಟಾಗದಿದ್ದರೆ ಅಂಥಾ ಭಕ್ತಿ, ಪೂಜೆ ಕೇವಲ ವ್ಯರ್ಥ. ಅಂಥಾ ಪೂಜೆಯೆಂಬ ಕ್ರಿಯೆಯು ಕೂಡ ನರಕವೇ ಸರಿ ಎಂಬುದು ದಾಸಿಮಯ್ಯ ಶರಣರ ಅಭಿಮತ.
ಷಣ್ಮುಖಸ್ವಾಮಿ ಶರಣರು ನುಡಿಯುತ್ತಾರೆ: “ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ, ಲಿಂಗದಲ್ಲಿ ಮನವಡಗಿರ್ದ, ಲಿಂಗಾನುಭಾವಿಗಳ ಸಂಗದಲ್ಲಿರಿಸಿ ಸಲಹಯ್ಯಾ ಎನ್ನ ಅಖಂಡೇಶ್ವರಾ.” ನಮ್ಮ ನಡೆ ನುಡಿ, ನೋಟ, ಬೇಟ, ಕೂಟ, ಮನಗಳು ಲಿಂಗಸ್ವರೂಪವಾಗಬೇಕು. ಅಂದರೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲವೂ ಲಿಂಗತತ್ವದ ಮೂಲಕವೇ ನಡೆಯಬೇಕು, ತನ್ಮೂಲಕ ಹೊಂದುವ ದೈಹಿಕ ಅನುಭವವೆಲ್ಲವೂ ಮಾನಸಿಕ ಅನುಭಾವವಾದಾಗ ಜೀವನು ಶಿವನಾಗುವನು. ಇದೇ ಶರಣರು ಸಾಧಿಸಿದ ಮುಕ್ತಿಮಾರ್ಗ.
ಸಾಧಕನೊಬ್ಬ ಸಿದ್ಧಪುರುಷನಾಗಬೇಕಾದರೆ ಅನುಸರಿಸುವ ಮಾರ್ಗವೇ ಷಟಸ್ಥಲ. ಷಟಸ್ಥಲವೆಂದರೆ ಆರು ಹಂತಗಳಿಂದ ಕೂಡಿದ ಒಂದು ಸುಸಜ್ಜಿತವಾದ ಹೆದ್ದಾರಿ. ಒಬ್ಬ ವ್ಯಕ್ತಿ ತನ್ನ ಅಜ್ಞಾನ ಸ್ಥಿತಿಯಿಂದ ಪರಮಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯ ಪಥ. ಇದು ಆರು ವಿವಿಧ ಹಂತಗಳನ್ನೊಳಗೊಂಡಿದೆ. ಆ ಹಂತಗಳೇ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಮತ್ತು ಐಕ್ಯ. ಒಂದೊಂದು ಹಂತವೂ ಆ ಹಂತದಲ್ಲಿ ಸಾಧಕನು ಸಾಧಿಸಬೇಕಾದ/ಹೊಂದಬೇಕಾದ ಪ್ರಮುಖ ಗುಣಲಕ್ಷಣಗಳನ್ನು ಒಳಗೊಂಡಿರುವುದು. ಷಟಸ್ಥಲ ಮಾರ್ಗಕ್ರೀಗಳನ್ನು ಪ್ರಭುದೇವರು- “ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ. ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ” ಎಂದು ಹೇಳಿದ್ದಾರೆ. ಅಂದರೆ ನಮ್ಮಲ್ಲಿ ಯಾವಾಗ ಅರಿವು ಜಾಗೃತವಾಗಲು ಆರಂಭವಾಗುವುದೋ ಅದೇ ಭಕ್ತಸ್ಥಲ, ಪರಿಪೂರ್ಣ ಅರಿವು ಹೊಂದಿದ ಸ್ಥಿತಿಯೇ ಐಕ್ಯಸ್ಥಲ. ಹೀಗೆ ಪರಮ ಸುಜ್ಞಾನದ ಅರಿವೇ ಈಶ್ವರ ಎಂದಿದ್ದಾರೆ. ಈಶ್ವರನೆಂದರೆ ಕೊರಳಲ್ಲಿ ಹಾವು, ತಲೆಯ ಮೇಲೆ ಚಂದ್ರ, ಜಟೆಯಲ್ಲಿ ಗಂಗೆ, ವಿಷಕಂಠ ಮುಂತಾದ ಅನೇಕ ಪೌರಾಣಿಕ ಕಲ್ಪನೆಗಳು ನಮ್ಮ ತಲೆಯಲ್ಲಿ ಸುಳಿಯುತ್ತವೆ. ಆದರೆ ಶರಣರು ಅರುಹಿರುವ ಈಶ್ವರನೆಂದರೆ ಪರಮ ಸುಜ್ಞಾನದ ಅರಿವು ಮಾತ್ರ.
ಆರು ಹಂತಗಳನ್ನು ಸಾಗಿ ಪರಿಪೂರ್ಣತ್ವದ ನೆಲೆಯನ್ನು ಅನುಭವಿಸಬೇಕು. ಈ ಆರು ಹಂತಗಳನ್ನು ಕ್ರಮಿಸಲು ಸಾಧಕನು ಎಷ್ಟು ಸಮಯ ಕಾಯಬೇಕು? ಅದಕ್ಕೆ ಚೆನ್ನಬಸವಣ್ಣನವರು ಹೇಳುತ್ತಾರೆ: “ಮೆಲ್ಲಮೆಲ್ಲನ��� ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ? ಅಮೃತಸೇವನೆಯ ಮಾಡಿದರೆ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲ ಚೆನ್ನಸಂಗಮದೇವ.”
ಹಂತಹಂತವಾಗಿ ಸಾಗಿ ಷಟಸ್ಥಲದ ತುತ್ತ ತುದಿಯನ್ನು ಏರುವೆನೆಂಬ ಸಾಧಕನಿಗೆ ಚೆನ್ನಬಸವಣ್ಣನವರು ಎಚ್ಚರಿಸುತ್ತಾರೆ, ನಿಧಾನವಾಗಿ ಗುರಿಮುಟ್ಟಲು ನೀನೇನು ಸಂಜೀವಿನಿಯನ್ನು ತೆಗೆದುಕೊಂಡು ಮರಣವ ಗೆದ್ದು ಚಿರಂಜೀವಿಯಾಗಿರುವೆಯೋ? ಇಲ್ಲ, ಪ್ರತಿಯೊಂದು ಸ್ಥಲದಲ್ಲಿಯೂ ಪರಿಪೂರ್ಣತೆ ಅಳವಟ್ಟು ಆ ಸ್ಥಲದ ಐಕ್ಯವನ್ನು ಮುಟ್ಟಬೇಕು. ಇದನ್ನು ಚೆನ್ನಬಸವಣ್ಣನವರು ‘ಮಿಶ್ರಾರ್ಪಣ’ವೆಂದು ಕರೆದಿದ್ದಾರೆ. ಮಿಶ್ರಾರ್ಪಣವೆಂದರೆ ಭಕ್ತ ಸ್ಥಲದ ಸಾಧಕನು ಆರೂ ಸ್ಥಲದ ಗುಣಗಳನ್ನು ಅಳವಡಿಸಿಕೊಳ್ಳುತ್ತಾನೆ. ಹೇಗೆಂದರೆ ಭಕ್ತನ ಭಕ್ತ, ಭಕ್ತನ ಮಹೇಶ್ವರ, ಭಕ್ತನ ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ, ಭಕ್ತನ ಐಕ್ಯ. ಈ ರೀತಿಯಾಗಿ ಪ್ರತಿಯೊಂದು ಸ್ಥಲವೂ ಆರಾರು ಉಪ ಸ್ಥಲಗಳಾಗಿ ಒಟ್ಟು ಮೂವತ್ತಾರು ಅಂಗ ಸ್ಥಲಗಳಾಗುತ್ತವೆ. ತತ್ಸ್ಂಬಂಧಿ ಮೂವತ್ತಾರು ಲಿಂಗ ಸ್ಥಲಗಳಾಗುತ್ತವೆ. ಈ ಮೂಲಕ ಪರಿಪೂರ್ಣತೆ ಸಾಧಿಸುವುದೇ ಮಾನವ ಜೀವನದ ಗುರಿ.
ಯಾವ ಹಂತದಲ್ಲಿ ಯಾವ ಗುಣಗಳು ಅಳಿಯಬೇಕು/ ಅಳವಡಬೇಕು ಎಂದು ಆದಯ್ಯ ಶರಣರು ಈ ವಚನದ ಮೂಲಕ ತಿಳಿಸಿದ್ದಾರೆ-
ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣ ರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ, ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಿಹಿತನಲ್ಲ.
ಸಾಧಕನು ತನುವಿನ ಸ್ವಭಾವತಃ ಹಸಿವು ತೃಷೆ ವಿಷಯಾದಿ ಪ್ರಕೃತಿ ಗುಣಗಳನ್ನು ಮೀರಬೇಕು, ಮನವು ತನ್ನ ವಿಕಾರವನ್ನು ಕಳೆದುಕೊಳ್ಳಬೇಕು, ಸರ್ವವೂ ದೇವರ ಪ್ರಸಾದವೆಂದರಿಯಬೇಕು, ಉದ್ವೇಗ ರಹಿತನಾಗಬೇಕು, ಶಬ್ದವಳಿದು ಸುಶಬ್ದವಾಗಬೇಕು, ಎಲ್ಲಾ ಅವಗುಣಗಳನ್ನು ಮೆಟ್ಟಿ ನಿಂದವನೇ ಪರಿಪೂರ್ಣತೆಯನ್ನು ಹೊಂದಿದಾತ, ಅವನೇ ಐಕ್ಯ.
ಅಂಗದ ಮೇಲೆ ಧರಿಸಿದ ಲಿಂಗವು ಮೊದಲು ಆಯತವಾಗಿ ನಂತರ ಸ್ವಾಯತವಾಗಿ, ಕೊನೆಗೆ ಸನ್ನಿಹಿತವಾಗಿ, ಇಷ್ಟ ಪ್ರಾಣ ಭಾವ ಲಿಂಗಗಳಾಗಿ ಸಾಧಕನ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ತನುವಿನಲ್ಲಿ ನೆಲೆಗೊಂಡು ಪರಿಣಾಮಗೊಂಡು ಅನುಭಾವವಾದಲ್ಲಿ ನಿಕ್ಷೇಪವಾಗಬೇಕು. “ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವ ಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗ ಯೋಗವಾದುದು ಕಾಣಾ ಗುಹೇಶ್ವರಾ.” ಸಾಧಕನ ಪ್ರಕೃತಿ ಗುಣಗಳಳಿದು ಆತನೇ ಪರಮಾತ್ಮನೆನಿಸುವನು. ಇದೇ ಷಡಂಗಯೋಗ (ಆರು ಅಂಗಗಳಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಹಾಗೂ ಆತ್ಮ ಇವು ತಮ್ಮ ಸ್ಥೂಲ ಪ್ರಕೃತಿ ಸ್ವಭಾವವನ್ನಳಿದು ಸೂಕ್ಷ್ಮರೂಪದಲ್ಲಿ ಲಿಂಗಗುಣಗಳಾಗುವ ಪ್ರಕ್ರಿಯೆಗೆ ಷಡಂಗಯೋಗ ಎಂದಿದ್ದಾರೆ) ಇದೇ ಮಾನವ ಜೀವನದ ಪರಮಗುರಿ.
ಶರಣ ಉರಿಲಿಂಗಪೆದ್ದಿ ಹೇಳುತ್ತಾರೆ- “ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು, ಕ್ರೋಧಕ್ಕೆ ಕ್ರೋಧಿಸುವ ಮಹಾಕ್ರೋಧಿಯೆ ಲಿಂಗನಿಷ್ಠಾಪರನು, ನಿರ್ಲೋಭಕ್ಕೆ ಲೋಭಿಸುವ ಮಹಾಲೋಭಿಯೆ ಲಿಂಗಾವಧಾನಿ. ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯೆ ಲಿಂಗಾನುಭಾವಿ. ಅಷ್ಟಮದಂಗಳೊಡನೆ ಮದೋಹಂ ಎಂಬ ನಿರ್ಮದಗ್ರಾಹಿಯೆ ಲಿಂಗಾನಂದ ಸೌಖ್ಯನು. ಮತ್ಸರಕ್ಕೆ ಮತ್ಸರಿಸುವ ಮಹಾಮತ್ಸರಗ್ರಾಹಕನೆ ಲಿಂಗಸಮರಸಸಂಬಂಧವೇದ್ಯನು. ಇಂತೀ ಷಡ್ವರ್ಗಂಗಳಿಗೆ ವೈರಿಯಾಗಿರ್ಪ ಶಿವಭಕ್ತನೆ ಸದ್ಭಕ್ತನು. ಆ ಭಕ್ತದೇಹಿಕದೇವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.”
ಲಿಂಗತತ್ವ ಸಾಧಕನು ನಿರಾಶೆಯನ್ನು ಹೊಂದುವ ಮಹಾಬಯಕೆಯನ್ನು ಹೊಂದಬೇಕಂತೆ, ಕ್ರೋಧರಹಿತನಾಗುವ ಹೆಬ್ಬಯಕೆಯನ್ನು, ನಿರ್ಲೋಭವನ್ನು ಬಯಸುವ ಮಹಾಲೋಭಿಯಾಗುವ ಮಹದಾಸೆ, ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯಾಗಬೇಕು, ಅಷ್ಟಮದಂಗಳ ಮೆಟ್ಟಿನಿಲ್ಲುವ ನಿರ್ಮದನಾಗಬೇಕು, ಮತ್ಸರವನ್ನು ಮತ್ಸರಿಸುವ ಮಹಾ ಮತ್ಸರಿಯಾಗಬೇಕು, ಹೀಗೆ ಸಾಧಕನು ತನ್ನಲ್ಲಡಗಿದ ಅರಿಷಡ್ವರ್ಗಗಳ ಮೆಟ್ಟಿನಿಂತು, ಅವುಗಳ ಸ್ವಭಾವ ಪಲ್ಲಟ ಮಾಡಿ ಲೌಕಿಕದಲ್ಲಿ ಜೀವನಾಗಿ ಕಂಡರೂ ಅಲೌಕಿಕ ಸಿದ್ಧನಾಗಿ (ಶಿವಸ್ವರೂಪಿಯಾಗಿ) ತನ್ನ ಗುರಿಯನ್ನು ಮುಟ್ಟುವನು. ಇದು ಶರಣರು ಈ ಲೋಕಕ್ಕೆ ಕೊಟ್ಟ ಹೊಸಪರಿಯ ಭಕ್ತಿಮಾರ್ಗ. ಇಲ್ಲಿ ಅಂಗವೇ ಲಿಂಗವಾಗುವುದು, ಜೀವನೇ ಶಿವನಾಗುವುದು, ಅದೇ ಶಿವ- ಜೀವರೈಕ್ಯ, ಲಿಂಗಾಂಗ ಸಾಮರಸ್ಯ.
ಹೀಗೆ ಲಿಂಗಾಂಗ ಸಾಮರಸ್ಯ ಸಾಧಿಸಿದ ಸಿದ್ಧನ ಕಾಯ-ಶುದ್ಧ, ಮನ-ಸಿದ್ಧ, ಭಾವ-ಪ್ರಸಿದ್ಧ. ಲಿಂಗಾನುಭಾವಿಯ ಸರ್ವಾಂಗವೂ ಮಹಾಪ್ರಸಿದ್ಧವೆನಿಸುವುದು. ಅಂದರೆ ಭಾವಲಿಂಗೈಕ್ಯ ಸಾಧಿಸಿದ ಮಹಿಮನ ಕಾಯವು ಶುದ್ಧ ಪ್ರಸಾದವೆಂದೂ, ಆತನ ಮನವು ಸಿದ್ಧಪ್ರಸಾದವೆಂತಲೂ ಹಾಗೂ ನಿರ್ಭಾವ ಹೊಂದಿದ ಭಾವವು ಪ್ರಸಿದ್ಧ ಪ್ರಸಾದವೆಂದೂ ಕರೆಯಲ್ಪಡುವುದು. ಅಂದರೆ ಸಿದ್ಧಪುರುಷನ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ತನುಗಳು ಕ್ರಮವಾಗಿ ಶುದ್ಧ ಸಿದ್ಧ ಮತ್ತು ಪ್ರಸಿದ್ಧ ಪ್ರಸಾದವಾಗಿ ಆತನ ಸರ್ವಾಂಗವೂ ಮಹಾಪ್ರಸಾದ ಕಾಯವೆನಿಸಿವುದು. ಇದು ಪ್ರತಿಯೊಬ್ಬ ಮಾನವನೂ ಸಾಧಿಸಬೇಕಾದ ಸಿದ್ಧಿ. ಇಂಥಾ ಸಾಧನೆಯನ್ನು ಸಾಧಿಸಿದ ಸಿದ್ಧಪುರುಷನು ಹುಟ್ಟಿನಿಂದ ಯಾವುದೇ ಜಾತಿ ಧರ್ಮದವನಾಗಿದ್ದರೂ ಅವನೇ ಶರಣ. ಈ ಶರಣತ್ವದ ಸಂಪಾದನೆಯೇ ಲಿಂಗತತ್ವದ ಸಂಪಾದನೆ (ಪರಮಾತ್ಮನ ಸಂಪಾದನೆ). ಅದೇ ಪರಿಪೂರ್ಣತ್ವದ ನೆಲೆ. ಆ ಪರಿಪೂರ್ಣವೇ ಶೂನ್ಯ. ಆ ಮಹಾಶೂನ್ಯದ ಸಂಪಾದನೆಯೇ ಮಾನವಜೀವನದ ಗುರಿ ಎಂದು ಬಸವಾದಿ ಶರಣರು ಈ ಲೋಕಕ್ಕೆ ದಿಕ್ಸೂಚಿಯನ್ನು ಕೊಟ್ಟುಹೋಗಿದ್ದಾರೆ. ಆ ಗುರಿಯೆಡೆಗೆ ಕ್ರಮಿಸಲು ಸೂಚನಾಫಲಕಗಳಾಗಿ ವಚನಸಾಹಿತ್ಯವನ್ನು ಈ ಜಗತ್ತಿಗೆ ಬಿಟ್ಟುಹೋಗಿದ್ದಾರೆ. ಆ ಪಥವಿಡಿದು ಸಾಗಿ ಶೂನ್ಯವನ್ನು ಹೊಂದಬೇಕಾದ್ದು ಸಾಧಕರ ಆತ್ಯಂತಿಕ ಗುರಿಯಾಗಬೇಕು. ಅದೇ ಬಸವಾದಿ ಶರಣರಿಗೆ ಸಲ್ಲಿಸುವ ನಮನ, ಪೂಜೆ, ಅರ್ಚನೆ ಸಕಲವೂ. ಹೀಗಲ್ಲದೆ ಬರೀ ಬಾಹ್ಯದಲ್ಲಿ ಶರಣರ ಭಾವಚಿತ್ರಗಳಿಗೆ ಮಾಡುವ ಪೂಜೆ, ಅರ್ಚನೆ, ಪ್ರಾರ್ಥನೆಗಳು ಬರೀ ಡಾಂಭಿಕ ಸೋಗಲಾಡಿತನ. ಅರಿವು ಆಚಾರದಲ್ಲಿ ಪ್ರಕಟವಾಗಬೇಕು ಮತ್ತು ಆಚಾರವು ಅನುಭಾವದಲ್ಲಿ ನಿರ್ವಾಣ ಹೊಂದಬೇಕು.
Comments 2
padmalaya nagraj
Mar 12, 2019vachanagalannu machanicle readingninda vimukti golisuva reading edalla
Prasanna Hosur
Jul 13, 2020ಒಬ್ಬ ಸಾಧಕನ ಸ್ಥಿತಿ ಹಂತಹಂತವಾಗಿ ಹೇಗೆ ಅಭಿವೃದ್ಧಿಯಾಗಬೇಕು ಎಂದು ಚೆನ್ನಾಗಿ ತಿಳಿಸಿದ್ದೀರಿ ಶರಣರೇ ತಮಗೆ ತುಂಬು ಹೃದಯದ ಭಕ್ತಿ ಶರಣು ಶರಣಾರ್ಥಿಗಳು