ಲಿಂಗಪೂಜೆ – ಜಂಗಮಸೇವೆ
ನುಡಿದಡೆ ಮುತ್ತಿನ ಹಾರದಂತಿರಬೇಕು,
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು,
ನುಡಿದಡೆ ಲಿಂಗಮೆಚ್ಚಿ ಅಹುದಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ಬಸವಣ್ಣನವರ ಈ ವಚನ ತುಂಬಾ ಸರಳವಾಗಿ ಕಂಡರೂ ಅಷ್ಟೇ ಸವಾಲಿನ ವಚನ. ಬಸವಣ್ಣನವರದು ಅದ್ಭುತ ಚಿಂತನೆ ಮಾತ್ರವಲ್ಲ. ಅದು ಅವರ ಬದುಕಿನ ವಿಧಾನವೂ ಆಗಿತ್ತು. ಬದುಕಿನಲ್ಲಿ ಏನೆಲ್ಲ ಸಂಕಟ, ಸಮಸ್ಯೆ, ಸವಾಲು ಎದುರಾದರೂ ಬಸವಣ್ಣನವರು ತಮ್ಮ ಬದ್ಧತೆಯನ್ನು ಬದಲಾಯಿಸಿಕೊಂಡವರಲ್ಲ. ವಚನದಲ್ಲಿ ನುಡಿದಡೆ, ನುಡಿದಡೆ ಎಂದು ನಾಲ್ಕು ಸಲ ಬಳಸುವ ಮೂಲಕ `ನುಡಿಯಬೇಡ’, `ನುಡಿಯಬೇಡ’ ಎನ್ನುವ ಅರ್ಥ ಹೊರಹೊಮ್ಮುವುದು. ಅದರ ಮೇಲೂ ನುಡಿಯುವುದು ಅನಿವಾರ್ಯವಾದರೆ ಆ ನುಡಿ ಅಂದರೆ ಮಾತು ಹೇಗಿರಬೇಕೆಂದು ಎಚ್ಚರಿಸಿದ್ದಾರೆ. ವಚನದಲ್ಲಿ ಬರುವ ಪ್ರತಿ ನಿದರ್ಶನಗಳೂ ವಿಶೇಷ ಅರ್ಥವನ್ನು ಒಳಗೊಂಡಿವೆ. ಮುತ್ತನ್ನು ಪಡೆಯಲು ಸಾಕಷ್ಟು ಪರಿಶ್ರಮ ಬೇಕು. ಕವಿಯ ಕಲ್ಪನೆಯಂತೆ ಸ್ವಾತಿಮಳೆಯ ಹನಿ ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬೀಳಬೇಕು. ನಂತರ ಅದು ಸಂಸ್ಕಾರ ಪಡೆದು ಮುತ್ತಾಗುತ್ತದೆಯಂತೆ. ಎರಡನೆಯದು ಮಾಣಿಕ್ಯದ ದೀಪ್ತಿ. ಮಾಣಿಕ್ಯ ಸ್ವಯಂ ಪ್ರಕಾಶವುಳ್ಳುದು. ಅದರಂತೆ ವ್ಯಕ್ತಿ ಆಡುವ ಮಾತು ಸ್ವಯಂಪ್ರಕಾಶಮಯವಾಗಿರಬೇಕು. ಸ್ಫಟಿಕ ಪಾರದರ್ಶಕ. ಅದು ಎಲ್ಲವನ್ನೂ ತೋರುವುದು. ಅದರಂತೆ ಮಾತು ಪಾರದರ್ಶಕವಾಗಿರಬೇಕು. ಆಡುವುದೇ ಒಂದು, ಮಾಡುವುದೇ ಮತ್ತೊಂದು ಆಗಿರಬಾರದು. ಆಡುವ ಮಾತಿನ ಪ್ರತಿ ಶಬ್ದವೂ ಮುತ್ತಿನಷ್ಟೇ ಬೆಲೆಯುಳ್ಳದ್ದು ಮತ್ತು ಆ ಮುತ್ತುಗಳ ಜೋಡಣೆ ಮೂಲಕ ಹಾರಕ್ಕೆ ಮಹತ್ವ ಬರುವಂತೆ ವಾಕ್ಯಗಳು ಇರಬೇಕು ಎನ್ನುವ ಸೂಚನೆ ಇದೆ. ಒಳಗೊಂದು, ಹೊರಗೊಂದು ಇಲ್ಲದೆ ಆಡುವ ಮಾತಿಗೆ ಲಿಂಗಯ್ಯ ಕೂಡ ಮೆಚ್ಚುವನು. ಇಷ್ಟಿದ್ದರೆ ಸಾಲದು. ನುಡಿಯೊಳಗಾಗಿ ನಡೆಯುವುದು ಸಹ ಮುಖ್ಯ. ತಾನಾಡುವ ಮಾತಿನ ಬಗ್ಗೆ ಎಚ್ಚರ ಇರಬೇಕು. ಅದು ಸಾಧ್ಯವಾಗುವುದು ಅಂತರಂಗ -ಬಹಿರಂಗ ಶುದ್ಧಿಯನ್ನು ಕಾಯ್ದುಕೊಂಡಾಗ. ನಿಷ್ಕಪಟಿಯಾಗಿದ್ದಾಗ ಮಾತ್ರ ನುಡಿ ಮುತ್ತಿನ ಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಸಲಾಕೆಯಂತಾಗಿ ಕೊನೆಗೆ ಆ ದೇವರನ್ನೂ ಒಲಿಸಲು ಸಾಧ್ಯ. ಬಸವಣ್ಣನವರ ವಿವೇಕ ವಾಣಿ ಮತ್ತೆ ಮತ್ತೆ ಎಚ್ಚರಿಸಿ ನಡೆ, ನುಡಿ ಒಂದಾಗಿರಬೇಕು ಎನ್ನುವ ಅರಿವು ಮೂಡಿಸುವುದು. ನುಡಿ ಕೃತಕವಾಗಿರದೆ ಹೃದಯದಾಳದಿಂದ ಮೂಡಿಬರಬೇಕು ಎನ್ನುವ ಸಂಕಲ್ಪವೂ ಇದೆ.
ಜನಮೆಚ್ಚುವಂತೆ ಮಾತನಾಡುವುದು ಸುಲಭ. ಆದರೆ ಜನಮೆಚ್ಚುವ ಮಾತುಗಳಿಗಿಂತ ಮನಮೆಚ್ಚುವ, ಮನದೊಡೆಯ ಮಹಾದೇವ ಮೆಚ್ಚುವ ಮಾತನಾಡಬೇಕು. ನುಡಿ ನಡೆಯಲ್ಲಿ ವ್ಯಕ್ತವಾಗಬೇಕು. ಆಗ ವ್ಯಕ್ತಿ ಮನೋಬಲ ಮೈಗೂಡಿಸಿಕೊಂಡು ಆದರ್ಶದ ದಾರಿಯಲ್ಲಿ ಸಾಗಲು ಸಾಧ್ಯ. ಬಸವಣ್ಣನವರ ತತ್ವ, ವಿಚಾರ ಮತ್ತು ಅವರ ವಚನಗಳ ಆಶಯಗಳನ್ನು ಪರಿಣಾಮಕಾರಿಯಾಗಿ ಹೇಳುವುದು ಸುಲಭ. ಆಚರಣೆಯಲ್ಲಿ ತರುವುದು ತುಂಬಾ ಕಷ್ಟ. ಇಂದಿನ ದಿನಮಾನಗಳಲ್ಲಿ ವಚನಪ್ರವೀಣರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಸವಣ್ಣನವರ ವಚನದಲ್ಲಿ ಪ್ರತಿ ಪದವೂ ಮುಖ್ಯ. ಅವು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವಂತಹವು. ಆದರೆ ನಾವು ಆತ್ಮಾವಲೋಕನ ಬಿಟ್ಟು ಜನರ ರೀತಿನೀತಿಗಳು ಹೇಗಿವೆ ಎಂದು ವಿಶ್ಲೇಷಣೆ ಮಾಡುವಲ್ಲಿ ಜಾಣ್ಮೆ ತೋರುತ್ತೇವೆ. ಬಸವಣ್ಣನವರು ಇಂಥ ಜಾಣ್ಮೆ ತೋರದೆ ಅಂತರಾವಲೋಕನಕ್ಕೆ ಒತ್ತು ಕೊಟ್ಟವರು. ಅವರು ಅಂತರಾವಲೋಕನದ ಮೂಲಕ ಜನರ ಬದುಕನ್ನು ಪರಿವರ್ತಿಸಲು ಮುಂದಾದವರು. ಅವರು ಅದನ್ನು ಮಾಡಿದ್ದು ಸಹ ಪ್ರೀತಿಯ ಮೂಲಕ. ನೀನು ತಪ್ಪು ಮಾಡುತ್ತೀ ಎನ್ನುವುದಕ್ಕಿಂತ ನಾನೇ ಅಂತಹ ತಪ್ಪು ಮಾಡಿದ್ದರೆ ಹೇಗೆ ತಿದ್ದಿಕೊಳ್ಳಬಹುದು ಎನ್ನುವ ಆಶಯ ಅವರ ಎಲ್ಲ ವಚನಗಳಲ್ಲಿ ಅಡಕವಾಗಿದೆ. ಪ್ರಚಲಿತ ವಾಸ್ತವ ಸ್ಥಿತಿ ತುಂಬಾ ಕಲುಷಿತವಾಗಿದೆ. ಇಂಥ ವಾತಾರವಣದಲ್ಲಿ ನುಡಿದಡೆ ಎನ್ನುವ ವಚನದ ಆಶಯಗಳನ್ನು ವ್ಯಕ್ತಿಗತ ಜೀವನದಲ್ಲಿ ಆಚರಣೆಗೆ ತರುವುದು ತುಂಬಾ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಸತ್ಯ ನುಡಿದ ವ್ಯಕ್ತಿಯ ಮೇಲೆ ಏಟುಗಳು ಬೀಳುವುದು ಸಹಜ. ಹಾಗಂತ ಸತ್ಯದ ದಾರಿಯಲ್ಲಿ ನಡೆಯಲು ಹಿಂಜರಿಯಬಾರದು. ಮಾತು ಮುತ್ತಿನ ಹಾರದಂತೆ ಇರಬೇಕು ಎಂದರೆ ಅದು ಸತ್ಯದಿಂದ ಕೂಡಿರಬೇಕು. ಬಸವಗುರು ತಮ್ಮ ವಚನಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ. ಆ ದಾರಿಯಲ್ಲಿ ನಡೆಯುವಾಗ ಅವರು ಸಹ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದರು. ಆದರೂ ಅವರ ಮಾತುಗಳು ಸತ್ಯದಿಂದಲೇ ಕೂಡಿದ್ದವು. ತಮ್ಮ ನಡೆ-ನುಡಿ ಸಿದ್ಧಾಂತಕ್ಕೆ ಭಂಗ ತಂದುಕೊಳ್ಳಲಿಲ್ಲ. ಈ ನೆಲೆಯಲ್ಲಿ ಅವರು ತೋರಿದ ದಾರಿಯಲ್ಲಿ ಪ್ರತಿಯೊಬ್ಬರೂ ಹೆಜ್ಜೆ ಇಡುತ್ತ ಸಾಗಬೇಕು. ಅಂಥ ಸಂದರ್ಭದಲ್ಲಿ ಸಾಕಷ್ಟು ಮುಳ್ಳು ಕಲ್ಲುಗಳನ್ನು ತುಳಿಯಬೇಕಾಗುತ್ತದೆ. ರಾಜಮಾರ್ಗವೇ ಬೇಕು ಎಂದರೆ ಸಾಧ್ಯವಿಲ್ಲ. ಮುಳ್ಳಿನ ಹಾಸಿಗೆಯಲ್ಲಿ ಹೆಜ್ಜೆ ಇಡುತ್ತಲೇ ಹೂವಿನ ಹಾಸಿಗೆಯ ಕಡೆ ಹೋಗಬೇಕು. ದಾರ್ಶನಿಕರು ಸತ್ಯ, ಅಹಿಂಸೆ ಮತ್ತು ಪ್ರೇಮವನ್ನು ಬಿಟ್ಟವರಲ್ಲ. ಅವೇ ಅವರಿಗೆ ಸರಿಯಾದ ಪಥವನ್ನು ತೋರುವ ಮಾರ್ಗಗಳಾಗಿದ್ದವು. ಅದರ ಮೂಲಕವೇ ಅವರು ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು. ಅಂಥ ಸಾಧಕರು ತೋರಿದ ಪಥದಲ್ಲಿ ಒಂದೊಂದೇ ಹೆಜ್ಜೆ ಇಡುತ್ತ ಸಾಗುವ ಸಂಕಲ್ಪ ಸ್ವೀಕರಿಸುವ ಮನಸ್ಸು ಮುಖ್ಯ.
ಇತ್ತೀಚಿನ ದಿನಮಾನಗಳಲ್ಲಿ ಸಮಾಜ ಮತ್ತು ವ್ಯಕ್ತಿ ಇವುಗಳಲ್ಲಿ ಯಾವುದು ಮುಖ್ಯ ಎನ್ನುವ ಪ್ರಶ್ನೆ ಬಂದಾಗ ವ್ಯಕ್ತಿಯೇ ಮುಖ್ಯ ಎನ್ನುವ ಪರಿಸ್ಥಿತಿ ಇದೆ. ಅದರಿಂದಾಗಿಯೇ ಅನೇಕ ದುರ್ವ್ಯವಹಾರ, ದುರಾಚಾರ, ಅಹಂಕಾರ ವಿಜೃಂಭಿಸುತ್ತಲಿವೆ. ವ್ಯಕ್ತಿ ಮತ್ತು ಸಮಾಜ ಬೇರೆ ಬೇರೆ ಅಲ್ಲ. ಅವು ಒಂದು ನಾಣ್ಯದ ಎರಡು ಮುಖ. ನಾಣ್ಯ ಚಲಾವಣೆಯಲ್ಲಿರಲು ಎರಡೂ ಮುಖಗಳು ಚನ್ನಾಗಿರಬೇಕು. ವ್ಯಕ್ತಿಯ ಶುದ್ಧಿಯೇ ಸಮಾಜದ ಶುದ್ಧಿ. ಸಮಾಜ ಶುದ್ಧಿಯೇ ವ್ಯಕ್ತಿಯ ಶುದ್ಧಿ. ಒಂದು ಮತ್ತೊಂದರ ಮೇಲೆ ಪ್ರಭಾವ ಬೀರುವಂತಹವು. ವ್ಯಕ್ತಿಯ ಪ್ರಗತಿ ಸಮಾಜದ ಪ್ರಗತಿಗೆ ಪೂರಕವಾಗಿರಬೇಕು, ಮಾರಕವಾಗಿರಬಾರದು. ಗಾಂಧೀಜಿ ಹೇಳುವಂತೆ `ವ್ಯಕ್ತಿಯ ಮೂಲಕ ಸಮಾಜದ ಹಿತವನ್ನು, ಸಮಾಜದ ಮೂಲಕ ವ್ಯಕ್ತಿಯ ಹಿತವನ್ನೂ ಸಾಧಿಸುವುದೇ ಮಾನವ ಧರ್ಮದ ಗುರಿ’. ಮನೆ, ಸಮಾಜ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ವ್ಯಕ್ತಿಯೇ ಪ್ರಧಾನವಾಗುತ್ತಿರುವುದು ಸಮಾಜದ ಪ್ರಗತಿಗೆ ಮಾರಕವಾಗುತ್ತಿದೆ. ಹೇಗೋ ಹಣ ಸಂಪಾದಿಸಿ ಮನೆ, ಸಮಾಜ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ತಾನೇ ದೊಡ್ಡವನು ಎನ್ನುವಂತೆ ಬಿಂಬಿಸಿಕೊಳ್ಳುವ ವಾತಾವರಣ ಕಾಣುತ್ತಿದ್ದೇವೆ. ಆದರೆ ಅವನು ಆ ಹಣವನ್ನು ಧರ್ಮ, ಆದರ್ಶ, ನೀತಿಯ ನೆಲೆಗಟ್ಟಿನ ಮೇಲೆ ಸಂಪಾದಿಸಿದ್ದಾನೆಯೇ ಎಂದು ಯಾರೂ ಪ್ರಶ್ನಿಸುವುದಿಲ್ಲ. ವ್ಯಕ್ತಿ ತಾನು ಬಲಿಷ್ಠನಾಗಬೇಕೆಂದು ಸಮಾಜವನ್ನು ಉಪೇಕ್ಷೆ ಮಾಡುವುದಲ್ಲ. ಹಾಗಂತ ಸಮಾಜದ ಉದ್ಧಾರ ಮಾಡುತ್ತೇನೆಂದು ಆ ವ್ಯಕ್ತಿ ದುರ್ಬಲನಾಗುವುದೂ ಅಲ್ಲ. ಎರಡೂ ಪರಸ್ಪರ ಪೂರಕವಾಗಿದ್ದಾಗ ಉತ್ತಮ ಫಲಿತಾಂಶ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮತ್ತೆ ಮತ್ತೆ ನೆನಪಾಗುವುದು ಬಸವಣ್ಣನವರ ಮತ್ತೊಂದು ವಚನ.
ದುರ್ವ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ, ಎನ್ನ.
ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ,
`ಅವಶ್ಯಮನುಭೋಕ್ತವ್ಯಂ’ ಎಂದೆನಿಸದಿರಯ್ಯಾ
ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.
ಮನುಷ್ಯ ದುರಾಚಾರಿ, ದುರ್ವ್ಯಸನಿ ಆದರೆ ತಾನೂ ಉದ್ಧಾರವಾಗುವುದಿಲ್ಲ. ಸಮಾಜವನ್ನೂ ಉದ್ಧಾರ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆತ ಮೊದಲು ಲಿಂಗವ್ಯಸನಿಯಾಗಬೇಕು. ಅಂದರೆ ವ್ಯಕ್ತಿತ್ವ ಗಟ್ಟಿಗೊಳ್ಳುವಂತಹ ನಡಾವಳಿಕೆ ಮೈಗೂಡಿಸಿಕೊಳ್ಳಬೇಕು. ಜೊತೆಗೆ ಜಂಗಮಪ್ರೇಮಿಯಾಗಬೇಕು, ಎಂದರೆ ಸಮಾಜದ ಶ್ರೇಯೋಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಇರಬೇಕು. ಕೇವಲ ಲಿಂಗವ್ಯಸನಿಯಾಗಿ ಸಮಾಜ ಪ್ರೇಮವನ್ನು ಮರೆತರೂ ಪ್ರಯೋಜನವಿಲ್ಲ. ಲಿಂಗವ್ಯಸನ ಮತ್ತು ಜಂಗಮಪ್ರೇಮದಲ್ಲಿ ವ್ಯಕ್ತಿಯ ಮತ್ತು ಸಮಾಜದ ಶ್ರೇಯೋಭಿವೃದ್ಧಿಯೂ ಇದೆ. ಇದಕ್ಕೆ ಬಸವಣ್ಣನವರ ವಚನ ಗಮನಿಸಬಹುದು.
ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ?
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.
ಗಂಡಭೇರುಂಡ ಪಕ್ಷಿ ಕರ್ನಾಟಕದ ಲಾಂಛನ. ಅದಕ್ಕೆ ಎರಡು ತಲೆಗಳಿವೆ ಎನ್ನುವ ಕಲ್ಪನೆ ಇದೆ. ಆ ಎರಡು ತಲೆಗಳ ನಡುವೆ ಒಂದು ಅಡ್ಡಪಟ್ಟಿ ಕಟ್ಟಿ ಒಂದು ತಲೆಯಲ್ಲಿ ಹಾಲನ್ನು ಮತ್ತೊಂದು ತಲೆಯಲ್ಲಿ ವಿಷವನ್ನು ಕುಡಿಸಿದಡೆ ಅದು ಬದುಕಲು ಸಾಧ್ಯವೇ ಎನ್ನುವುದು ಬಸವಣ್ಣನವರ ಪ್ರಶ್ನೆ. ಅದರ ದೇಹ ಒಂದೇ ಆಗಿರುವುದರಿಂದ ಅರ್ಧ ಪಕ್ಷಿ ಸಾಯುತ್ತದೆ, ಇನ್ನರ್ಧ ಪಕ್ಷಿ ಬದುಕುತ್ತದೆ ಎನ್ನಲು ಸಾಧ್ಯವಿಲ್ಲ. ಹಾಗೆ ಲಿಂಗಪೂಜೆ ಮೂಲಕ ವ್ಯಕ್ತಿಗತ ವಿಕಾಸ ಮಾಡಿಕೊಳ್ಳುತ್ತೇನೆ, ಸಮಾಜ ಕಟ್ಟಿಕೊಂಡು ನನಗೇನಾಗಬೇಕಾಗಿದೆ ಎಂದರೆ ಸಾಲದು. ಏಕೆಂದರೆ ನನ್ನ ಜೊತೆಗೆ ಸಮಾಜವೂ ಇದೆ. ಅದರ ನಿಂದೆ ಮಾಡಿ ಲಿಂಗಪೂಜೆ ಮಾಡುತ್ತೇವೆಂದರೆ ಅರ್ಥವಿಲ್ಲ. ವ್ಯಕ್ತಿ ಮತ್ತು ಸಮಾಜ ಎರಡೂ ಅಷ್ಟೇ ಮುಖ್ಯ. ವ್ಯಕ್ತಿಗತ ಪ್ರಗತಿ ಸಾಧಿಸಿ ಸಮಾಜವನ್ನು ನಿಂದನೆ ಮಾಡುತ್ತೇನೆ ಎಂದರೆ ನಾನು ಬೆಂದೆ ಎನ್ನುವರು ಬಸವಣ್ಣನವರು. ಅವರ ಆಶಯ ವ್ಯಕ್ತಿ ಮತ್ತು ಸಮಾಜ ಪರಸ್ಪರ ಪೂರಕವಾಗಿದ್ದು ಉಭಯ ಪ್ರಗತಿಯೂ ಸಾಧಿತವಾಗಬೇಕೆನ್ನುವುದು. ಸಮಾಜವನ್ನು ತಿದ್ದುವೆ ಎನ್ನುವುದಕ್ಕಿಂತ ನಾನು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಅದನ್ನೇ ಸಮಾಜ ಅನುಸರಿಸುತ್ತದೆ. ವ್ಯಕ್ತಿ ಮೊದಲು ಒಂದು ಮಾದರಿ ಆಗಬೇಕು. ನಾನು ಮಾದರಿ ಆಗದೆ ಕೇವಲ ಬೋಧನೆಯನ್ನೇ ಪ್ರಧಾನ ಮಾಡಿಕೊಂಡರೆ ಜನರು ಅದನ್ನು ಸತತವಾಗಿ ಕೇಳಿಕೊಂಡಿರಲು ಸಾಧ್ಯವಿಲ್ಲ. ಅವರು ಹೇಳುತ್ತಾರೆಯೇ ಹೊರತು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಹೇಳುವುದೇ ಒಂದು ಮಾಡುವುದೇ ಒಂದು. ನಮಗೆ ಮಾತ್ರ ಹಾಗಿರಬೇಕು, ಹೀಗಿರಬೇಕು ಎನ್ನುವರು. ಅವರು ಹೇಗಿದ್ದಾರೆ ಎಂದು ಆತ್ಮಶೋಧನೆ ಮಾಡಿಕೊಳ್ಳುವುದಿಲ್ಲ ಎಂದು ಉದಾಸೀನ ಮಾಡುವರು. ಹಾಗಾಗಿ ವ್ಯಕ್ತಿ ತಾನೇ ಇತರರಿಗೆ ಮಾದರಿ ಆಗುವಂತೆ ನಡೆದುಕೊಳ್ಳಬೇಕು.
ಸಮಾಜ ತಿದ್ದುವ ವ್ಯಕ್ತಿ ತಾನು ಮೊದಲು ಶುದ್ಧವಾಗಿರಬೇಕು. ಆತನೇ ಅತೀ ಕುಡುಕನಾಗಿದ್ದು ಅನ್ಯರಿಗೆ ಕುಡಿಯಬೇಡಿ ಎಂದರೆ ಯಾರು ತಾನೆ ಆ ಮಾತಿಗೆ ಮನ್ನಣೆ ಕೊಡುವರು? ವ್ಯಕ್ತಿಯನ್ನು ಬಿಟ್ಟು ಸಮಾಜ, ಸಮಾಜ ಬಿಟ್ಟು ವ್ಯಕ್ತಿ ಇರಲು ಸಾಧ್ಯವಿಲ್ಲ. ಲಿಂಗವ್ಯಸನ ಆತ್ಮಶುದ್ಧಿಯನ್ನು ಹೇಳುವುದು. ಜಂಗಮಪ್ರೇಮ ಸಮಾಜ ಶುದ್ಧಿಯನ್ನು ಹೇಳುವುದು. ವ್ಯಕ್ತಿ ಶುದ್ಧವಾಗಿರದೆ ಸಮಾಜವನ್ನು ಪ್ರೀತಿಸುತ್ತೇನೆ ಎಂದರೆ ಅದು ಬೂಟಾಟಿಕೆ ಆಗುವುದು. ಎಷ್ಟೋ ಜನ ಸಮಾಜ ಸೇವೆ ಮಾಡುತ್ತೇವೆಂದು ವಿವಿಧ ಕ್ಷೇತ್ರಗಳ ಮುಖಂಡರಾಗಲು ಸ್ಪರ್ಧೆ ಮಾಡುವರು. ಅದಕ್ಕಾಗಿ ಸ್ವಾಮಿ, ಶಾಸಕ, ಮಂತ್ರಿ ಹೀಗೆ ಇನ್ನೇನೇನೋ ಆಗುವರು. ಆದರೆ ಅಂಥಲ್ಲಿ ವ್ಯಕ್ತಿಗತ ಅಹಂಕಾರ ಹೆಡೆಯಾಡುವಂತಾದರೆ ಸೇವೆ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ಇವತ್ತಿನ ದಿನಮಾನಗಳಲ್ಲಿ ಚುನಾವಣೆಗೆ ನಿಲ್ಲುವ ಮೊದಲೇ ಆದರ್ಶಗಳನ್ನು ಗಾಳಿಗೆ ತೂರಿ ಹಣ ಸಂಗ್ರಹ ಮಾಡುವರು. ಮೌಲ್ಯಗಳನ್ನು ಗಾಳಿಗೆ ತೂರಿದ ಜನರೇ ಅಧಿಕಾರದ ಮೂಲಕ ಮೌಲ್ಯಗಳ ಪ್ರತಿಪಾದನೆ ಮಾಡಲು ಮುಂದಾಗುವರು. ಸಮಾಜ ಹೇಗಿರಬೇಕು ಎಂದು ಬೋಧನೆ ಮಾಡುವರು. ಆಗ ಸಮಾಜದ ಜನರು ಅಯ್ಯೋ ಪುಣ್ಯಾತ್ಮ ನೀನು ಹೇಗೆ ಮೇಲೆ ಬಂದಿರುವೆ? ಹೆಂಡ, ಹಣ ಇನ್ನೇನೇನೋ ಹಂಚಿರುವೆಯಲ್ಲ! ಅಂಥವರು ಆದರ್ಶಗಳನ್ನು ಗಾಳಿಗೆ ತೂರುವುದಲ್ಲದೆ ಸಮಾಜದ ಜನರೂ ಆದರ್ಶಗಳನ್ನು ಗಾಳಿಗೆ ತೂರಲು ಪ್ರೇರಕನಾಗುತ್ತಾರೆ. ಗಂಡಭೇರುಂಡ ಪಕ್ಷಿಗೆ ಒಂದು ತಲೆಯಲ್ಲಿ ಹಾಲು ಮತ್ತೊಂದು ತಲೆಯಲ್ಲಿ ವಿಷ ಉಣಿಸಿದರೆ ಆ ಪಕ್ಷಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ವ್ಯಕ್ತಿಗತ ಶುದ್ಧಿ ಇಲ್ಲದಿದ್ದರೆ ಸಮಾಜವೂ ಶುದ್ಧವಾಗದೆ ಪ್ರಗತಿಯ ಹೆಸರಿನಲ್ಲಿ ಪ್ರಮಾದಗಳೇ ಹೆಚ್ಚುತ್ತ ಸಮಾಜ ದಿಕ್ಕುತಪ್ಪಿ ದಿಂಡುರುಳುವಂತೆ ಆಗುವುದು. ಈ ದೃಷ್ಟಿಯಿಂದ ವ್ಯಕ್ತಿಗತ ಶುದ್ಧಿ ವ್ಯಕ್ತಿಗತ ಅಭಿವೃದ್ಧಿಗೂ ಸಹಕಾರಿಯಾಗಬೇಕು. ಆದರೆ ಇಂದು ಶುದ್ಧಿ ಎನ್ನುವುದನ್ನು ಹೊರಗಿಟ್ಟು ಅಭಿವೃದ್ಧಿಗೆ ಮಹತ್ವ ಕೊಡುವ ಸ್ಥಿತಿ ಇದೆ. ಮೊದಲು ನಾನು, ನನ್ನ ಮನೆ, ನನ್ನ ಮಕ್ಕಳು, ನನ್ನ ಹೊಲ, ನನ್ನ ಆದಾಯ ಎನ್ನುವ ಚೌಕಟ್ಟುಗಳನ್ನು ಹಾಕಿಕೊಳ್ಳುವರು. ಈ ಚೌಕಟ್ಟುಗಳನ್ನೇ ಮೊದಲು ತೆಗೆದುಹಾಕಬೇಕಿದೆ. ಕನಕದಾಸರು ‘ನಾನು’ ಹೋದರೆ ಹೋದೇನು ಎಂದಂತೆ ನಾನು ಎನ್ನುವ ಅಹಂಕಾರ ಕಳೆದುಕೊಳ್ಳಬೇಕು. ಆಗ ಆ ವ್ಯಕ್ತಿ ಸಮಾಜವನ್ನು ನೋಡುವ ದೃಷ್ಟಿಕೋನವೇ ಬದಲಾಗುವುದು. ಆಗ ವ್ಯಕ್ತಿಯ ಉದ್ಧಾರದ ಜೊತೆಗೆ ಸಮಾಜದ ಉದ್ಧಾರವೂ ಆಗುವುದು. ಬಸವಣ್ಣ ಮತ್ತಿತರ ಶರಣರು 12ನೆಯ ಶತಮಾನದಲ್ಲಿ ಅಲ್ಪಾವಧಿಯಲ್ಲೇ ವ್ಯಕ್ತಿಗತ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಿದ್ದು ಅಹಂಕಾರ ತ್ಯಜಿಸುವ ಮೂಲಕವೇ. `ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿಕಾಡಿತ್ತು ಶಿವನ ಡಂಗುರ’ ಎನ್ನುವರು ಬಸವಣ್ಣನವರು. ಅವರು ತಮ್ಮ ಬದುಕಿನ ಪ್ರತಿ ಹಂತದಲ್ಲೂ ಪಾರದರ್ಶಕವಾಗಿ ಬದುಕಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು. ಈ ನೆಲೆಯಲ್ಲಿ ವ್ಯಕ್ತಿಗತ ಶುದ್ಧಿ, ಸುಧಾರಣೆಯೇ ಸಾಮಾಜಿಕ ಶಕ್ತಿಯಾಗಬೇಕಾಗಿದೆ. ಹಾಗಾಗದಿರುವುದೇ ವಿಷಾದನೀಯ ಸಂಗತಿ.
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
ಇಲ್ಲಿ ವ್ಯಕ್ತಿ ಮತ್ತು ಸಮಾಜಕ್ಕೆ ಅವಿನಾಭಾವ ಸಂಬಂಧ ಇರಬೇಕು ಎಂದು ಒತ್ತಿ ಹೇಳಲಾಗಿದೆ. ವ್ಯಕ್ತಿ ನುಡಿದಂತೆ ನಡೆಯದೆ, ನಡೆದಂತೆ ನುಡಿಯದೆ ಲಿಂಗವನ್ನು ಪೂಜಿಸುವುದರಿಂದ ಯಾವ ಸತ್ಫಲವೂ ದೊರೆಯದು. ಮೊದಲು ನಡೆ-ನುಡಿ ಒಂದಾಗಿಸಿಕೊಂಡು ಲಿಂಗ ಪೂಜಿಸಬೇಕು. ಹಾಗೆ ಲಿಂಗ ಪೂಜಿಸುವ ವ್ಯಕ್ತಿ ಸಮಾಜದ ದುಃಖವೇ ತನ್ನ ದುಃಖ, ಸಮಾಜದ ಸುಖವೇ ತನ್ನ ಸುಖ ಎಂದು ಪರಿಭಾವಿಸಬೇಕು. ಜನರ ಮನಸ್ಸು ನೊಂದುಕೊಳ್ಳುವಂತಾದರೆ ನಾನೇ ಬೆಂದುಹೋಗುವೆ ಎನ್ನುವರು. ನಮ್ಮಲ್ಲಿ ಬಾಹ್ಯ ಸುಧಾರಣೆ ಸಾಕಷ್ಟು ಆಗಿದೆ. ರಸ್ತೆಗಳು ತುಂಬಾ ಸುಧಾರಣೆ ಆಗಿದ್ದು ಸಂತೋಷ. ಆದರೆ ಅದೇ ಕಾರಣಕ್ಕೆ ಬೈಕ್ ಮತ್ತಿತರ ವಾಹನಗಳನ್ನು ಮುಖ್ಯರಸ್ತೆಯಲ್ಲಿ ಓಡಿಸುವಂತೆ ನಗರದ ರಸ್ತೆಗಳಲ್ಲೂ ಓಡಿಸುವರು. ಕೆಲವರು ಮತ್ತಿನಲ್ಲೇ ಓಡಿಸಬಹುದು. ಹೀಗಾಗಿ ನಗರದ ರಸ್ತೆಗಳಲ್ಲೇ ಅಪಘಾತಗಳು ಹೆಚ್ಚಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರರ್ಥ ರಸ್ತೆಗಳು ಚನ್ನಾಗಿರಬಾರದು ಎಂದಲ್ಲ. ಮೋಜಿನ ಪ್ರಯಾಣ ಮಾಡಬೇಕೆಂದಲ್ಲ. ಮನುಷ್ಯನಿಗೆ ಕಾನೂನು ಮತ್ತು ಧರ್ಮದ ಭಯ ಇರಬೇಕು. ಸತ್ಯದ ದಾರಿಯಲ್ಲಿ ನಡೆಯಬೇಕು. ವ್ಯಕ್ತಿ ತನ್ನ ದೋಷಗಳನ್ನು ತಾನೇ ಅರಿತು ಸರಿದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ತಮ್ಮ ದೋಷಗಳನ್ನು ತಾವೇ ತಿದ್ದಿಕೊಳ್ಳುವ ಮನಸ್ಸು ಮಾಡಬೇಕು. ಬಸವಣ್ಣನವರು `ಎನ್ನ ತಪ್ಪು ಅನಂತಕೋಟಿ’ ಎನ್ನುವರು. ಹಾಗಂತ ಬಸವಣ್ಣನವರು ತಪ್ಪು ಮಾಡುತ್ತಿದ್ದರು ಎಂದಲ್ಲ. ತಪ್ಪು ಮಾಡಿದವರು ಹೇಗೆ ತಿದ್ದಿಕೊಳ್ಳಬಹುದು ಎನ್ನುವ ಮಾರ್ಗದರ್ಶನ ಮಾಡಿದ್ದಾರೆ. ಹಾಗೆ ಮಾಡುವ ಮುನ್ನ ಅವರು ತಮ್ಮ ಅಂತರಂಗ-ಬಹಿರಂಗ ಶುದ್ಧಿಯನ್ನು ಕಾಪಾಡಿಕೊಂಡಿದ್ದರು ಎನ್ನುವುದು ಗಮನಾರ್ಹ. ಇಂದು ಅದಕ್ಕೆ ತದ್ವಿರುದ್ಧ ನಡಾವಳಿಕೆ. ಹೇಳುವುದೇ ಒಂದು, ಮಾಡುವುದೇ ಮತ್ತೊಂದು. ಆದರೂ ನಾ ಹೇಳಿದೆ ಎಂದು ಹೇಳಬೇಡ ಎನ್ನುವ ಮಾತೂ ಹೇಳಿ ಆತ್ಮವಂಚನೆ ಮಾಡಿಕೊಳ್ಳುವವರು ಹೆಚ್ಚಾಗಿರುವುದು ವಿಷಾದನೀಯ. ಸತ್ಯಸಂಧರಾಗಿ ನಡೆವುದು ಮುಖ್ಯ. ಸೌಲಭ್ಯಗಳಿರುವುದು ಸರಳ- ಉತ್ತಮ ಬದುಕಿಗಾಗಿ. ಆದರೆ ಹಲವರು ಸೌಲಭ್ಯಗಳಿರುವುದೇ ವೈಭವದ ಜೀವನಕ್ಕೆ, ಸಂಪತ್ತಿನ ಪ್ರದರ್ಶನಕ್ಕೆ, ಸ್ವೇಚ್ಛಾಜೀವನಕ್ಕೆ ಎಂದು ಭಾವಿಸಿದ್ದಾರೆ. ಅದೇ ವ್ಯಕ್ತಿಗೆ ವಿಪತ್ತನ್ನು ತಂದುಕೊಡುತ್ತದೆ. ಸತ್ಯದ ದಾರಿಯಲ್ಲಿ ನಡೆದರೆ ಯಾವ ವೈಭವಕ್ಕೂ ಪಕ್ಕಾಗದೆ, ಸ್ವೇಚ್ಛಾಚಾರಿಗಳಾಗದೆ ಆದರ್ಶದ ಪಥದಲ್ಲಿ ಅಡಿಯಿಡುತ್ತೇವೆ. ಅದಕ್ಕಾಗಿಯೇ ಟಾಲ್ಸ್ಟಾಯ್- `ನಮ್ಮ ಅಧಿಕಾರ ಮತ್ತು ಸಂಪತ್ತಿನ ಬಗ್ಗೆ ನಿಜಕ್ಕೂ ನಾಚಿಕೆ ಆಗಬೇಕು’ ಎನ್ನುವರು. ಆದರೆ ಅವರೇ ಹೇಳುವಂತೆ ಎಲ್ಲರೂ ಅದರ ಬಗ್ಗೆ ಕೊಚ್ಚಿಕೊಳ್ಳುವರು. `ಬೇರೆಯವರ ಚಾರಿತ್ರ್ಯದ ಬಗ್ಗೆ ತಿಳಿದುಕೊಳ್ಳದಿದ್ದಾಗ ನಾವು ಅವರಿಗಿಂತ ಮೇಲು, ಉತ್ತಮ ಎಂದುಕೊಂಡಿರುತ್ತೇವೆ’. ಮನುಷ್ಯ ಒಳ್ಳೆ ಕೆಲಸ ಮಾಡಿದರೆ ಅದನ್ನು ಆತ್ಮಸಂತೋಷಕ್ಕೆ ಮಾಡುವನೋ? ದೇವರ ಸಲುವಾಗಿ ಮಾಡುವನೋ? ಮತ್ತೊಬ್ಬರ ಶ್ರೇಯಸ್ಸಿಗಾಗಿ ಮಾಡುವನೋ? ಅಹಂಕಾರ ಪ್ರದರ್ಶನಕ್ಕಾಗಿ ಮಾಡುವನೋ? ಮಾಡುವ ಕಾರ್ಯ ಕಾಯಕವಾದಾಗ ಅದು ಪವಿತ್ರವಾಗುವುದು. ನಮ್ಮ ಸಂಪತ್ತು, ಅಧಿಕಾರ, ಬುದ್ಧಿವಂತಿಕೆಯ ಬಗ್ಗೆ ಕೊಚ್ಚಿಕೊಳ್ಳದೆ ಮಾಡಬೇಕಾದ ಲೋಕಕಲ್ಯಾಣದ ಕಾರ್ಯ ಮಾಡಬೇಕು. ಅವು ವ್ಯಕ್ತಿಯ ಅಹಂಕಾರ ಮೆರೆಯಲು ದುರ್ಬಳಕೆ ಆಗಬಾರದು. ಅವಿವೇಕಿಗಳಂತೆ ನಡೆದುಕೊಳ್ಳದೆ ಆತ್ಮೋನ್ನತಿಯ ಕಡೆ ಸಾಗಬೇಕು.
ಮನುಷ್ಯ ಏನೇನೋ ಹುಡುಕಾಟ ನಡೆಸಿದ್ದಾನೆ. ನಿಜಕ್ಕೂ ಆತ ಹುಡುಕಾಟ ನಡೆಸಬೇಕಾದ್ದು ಸುಜ್ಞಾನದ ಬಗ್ಗೆ. ಸಹಜ ಮತ್ತು ಪ್ರಕೃತಿಯ ಜೊತೆ ಸಂತೋಷವಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಅಂಥವರು ಸಾಕಷ್ಟು ಜನರಿದ್ದಾರೆ. ಅಂಥವರಿಂದ ಸ್ಪೂರ್ತಿ ಪಡೆಯಬೇಕಿದೆ. ನಮ್ಮಿಂದಲೂ ಸ್ಪೂರ್ತಿ ಪಡೆವ ಹಾಗೆ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಮನುಷ್ಯ ಏನೇನೋ ಬೆನ್ನಹತ್ತಿ ಅಹಂಕಾರವನ್ನು ಜಾಸ್ತಿ ಮಾಡಿಕೊಳ್ಳುತ್ತಿದ್ದಾನೆ. ಜೀವನದಲ್ಲಿ, ಆಲೋಚನೆಯಲ್ಲಿ ಸಹಜತೆ, ಸರಳತೆ ಮೈಗೂಡಿಸಿಕೊಳ್ಳಬೇಕಿದೆ. ಗುರಿಗಿಂತ ದಾರಿ ಮುಖ್ಯ.
Comments 7
ಗೌರೀಶ್ ಗವೀಮಠ
Mar 15, 2022ಲಿಂಗಪೂಜೆ ಹೇಗಿರಬೇಕು, ಜಂಗಮಸೇವೆ ಎಂದರೇನು ಎಂದು ಲೇಖನದಲ್ಲಿ ತಿಳಿಸಿರುತ್ತೀರೆಂದುಕೊಂಡು ಆಸಕ್ತಿಯಿಂದ ಓದಿದೆ. ಆದರೆ ಲೇಖನ ಹೆಚ್ಚು ಜನರಲ್ ಆಗಿ ಮೂಡಿಬಂದಿದೆ. ಗೊತ್ತಿರುವ ಸಂಗತಿಗಳನ್ನೇ ಮತ್ತೆ ಮೆಲುಕು ಹಾಕಿದಂತಾಯ್ತು.
ಈಶ್ವರ್, ಹಿರೆಕೆರೂರು
Mar 15, 2022ಪೂಜ್ಯ ಸ್ವಾಮಿಗಳ ಬರವಣಿಗೆ ಸರಳ, ಸುಂದರ, ಅರ್ಥಗರ್ಭಿತ.
Basavaraj Kareholi
Mar 16, 2022ಲಿಂಗ ಎಂದರೆ ಏನು? ಭಕ್ತಿ ಎಂದರೆ ಏನು? ಜಂಗಮ ಎಂದರೆ ಏನು? ಜಂಗಮ ಸೇವೆ ಎಂದರೆ ಏನು… ಯಾವುದೂ ಇಲ್ಲಿ ಸರಿಯಾಗಿ ಕಾಣುತ್ತಿಲ್ಲ.
ಭದ್ರಪ್ಪ ಬೇವೂರು
Mar 16, 2022ಪೂಜೆಯ ಮಹತ್ವವನ್ನು, ದೀಕ್ಷಾ ಸಂಸ್ಕಾರದ ಅಗತ್ಯವನ್ನೂ ನಿಮ್ಮ ಭಾಷಣಗಳಿಂದ ತಿಳಿದುಕೊಂಡಿದ್ದೇನೆ. ಇವುಗಳ ಕಾರ್ಯಾಗಾರಗಳನ್ನು ನಿಮ್ಮಂತ ಅನುಭಾವಿ ಪೂಜ್ಯರು ಪ್ರತಿ ಜಿಲ್ಲೆಗಳಲ್ಲಿ ನಡೆಸಿಕೊಡಬೇಕೆಂಬುದು ನನ್ನ ಕೋರಿಕೆ ಮತ್ತು ಪ್ರಾರ್ಥನೆ.
ರಾಧಾ ನಿರಂಜನ, ಚಾಮರಾಜನಗರ
Mar 18, 2022ಬಯಲು ತಂಡದಲ್ಲಿ ಮೂಡಿಬರುವ ಎಲ್ಲಾ ಬರಹಗಳು ಅರ್ಥಪೂರ್ಣವಾಗಿವೆ. ಪ್ರತಿ ತಿಂಗಳು ತಪ್ಪದೆ ಓದುತ್ತಿರುವೆ. ಆದರೆ ಪ್ರತಿಕ್ರಿಯೆ ಕೊಡಲು ಆಗುತ್ತಿರಲಿಲ್ಲ, ದಯಮಾಡಿ ಕ್ಷಮೆ ಕೇಳುತ್ತಾ ಈ ಜ್ಞಾನ ದಾಸೊಹ ನಿರಂತರ ಬಯಲುವಿನಲ್ಲಿ ನಮಗೆಲ್ಲ ಸಿಗಲಿ ಎಂಬ ಆಸೆ ವ್ಯಕ್ತ ಪಡಿಸುತ್ತ, ಎಲ್ಲಾ ಬಯಲು ಬರಹಗಾರರಿಗೆ
ಭಕ್ತಿಯ ಶರಣು ಶರಣಾರ್ಥಿಗಳು 🙏🏼🙏🏼
Veerabasappa Bagaluru
Mar 20, 2022ಭೇರುಂಡನ ಪಕ್ಷಿಗೆ ದೇಹ ಒಂದೆ- ಎನ್ನುವ ಬಸವಣ್ಣನವರ ವಚನ ಬಹಳ ಮಾರ್ಮಿಕವಾಗಿದೆ. ಸರಳ. ಸುಂದರ ಬರವಣಿಗೆ. ಶರಣುಶರಣು.
Lingaraj Patil
Mar 30, 2022ಲಿಂಗ ವ್ಯಸನಿ ಹಾಗೂ ಜಂಗಮಪ್ರೇಮಿ- ಈ ಪದಗಳು ವಚನಗಳಲ್ಲಿ ಬಹಳ ಕಡೆ ಕಂಡುಬರುತ್ತವೆ. ಅವುಗಳ ವಿಚಾರವಾಗಿ ಲೇಖನ ಬೆಳಕು ಚೆಲ್ಲಿದೆ. ಆಧುನಿಕ ಜೀವನದಲ್ಲಿ ಇವುಗಳನ್ನು ಹೇಗೆ ಗ್ರಹಿಸಬಹುದೆನ್ನುವುದರತ್ತ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕಾಗಿ ಗುರುಗಳಲ್ಲಿ ನಮ್ಮ ವಿನಂತಿ.