ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಬಸವೋತ್ತರ ದಿನಗಳ ಕಲ್ಯಾಣ ಕ್ರಾಂತಿಯ ಮಹತ್ತರ ಮತ್ತು ಕೇಂದ್ರ ಬಿಂದುವಾಗಿದ್ದ ಸಿದ್ಧರಾಮ ಶಿವಯೋಗಿಗಳು, ವಚನಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರು ಒಬ್ಬ ಬಹುದೊಡ್ಡ ಶರಣ, ಕಾರಣಿಕ, ಯೋಗಿ ಮತ್ತು ಅನುಭಾವಿ. ಬಹುತೇಕರ ಗ್ರಹಿಕೆಗೆ ಅತ್ಯಂತ ಭಿನ್ನವಾಗಿ ಸಿದ್ಧರಾಮರ ವ್ಯಕ್ತಿತ್ವ ಮತ್ತು ಇತಿಹಾಸವನ್ನು ತಿಳಿಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಿದ್ಧರಾಮರು ಕಲ್ಯಾಣಕ್ಕೆ ತಡವಾಗಿ ಬಂದರೂ ವೈವಿಧ್ಯಮಯವಾದ ವಚನಗಳನ್ನು ರಚಿಸಿ ಅತ್ಯಂತ ಗಟ್ಟಿಯಾಗಿ ಶರಣ ಚಳುವಳಿಗೆ ಬಲುಬೇಗ ತಮ್ಮನ್ನು ಅರ್ಪಿಸಿಕೊಂಡರು.
ಇತ್ತೀಚಿನ ಸಂಶೋಧನೆಯ ಪ್ರಕಾರ ಸಿದ್ಧರಾಮರು ಹುಟ್ಟಿದ್ದು ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸೊನ್ನಲಿಗೆ ಗ್ರಾಮ. ಸೊನ್ನಲಿಗೆಯ ಮೊರಡಿಯ ಮುದ್ದುಗೌಡ, ತಾಯಿ ಸುಗ್ಗವ್ವೆ ಎಂಬ ಕುಡು ಒಕ್ಕಲಿಗರ ಕುಟುಂಬದಲ್ಲಿ ಜನಿಸಿದರು. ಇವರು ತಾಯಿಯ ಗರ್ಭದಲ್ಲಿದ್ದಾಗಲೇ ಹಾಲು ಮತಸ್ಥ ಕುರುಬ ಸಮಾಜಕ್ಕೆ ಸೇರಿದ ರೇವಣಸಿದ್ಧರು (ರೇಣುಕರೂ ಎಂತಲೂ ಕರೆಯುವರು -ಡಾ ಎಂ ಚಿದಾನಂದ ಮೂರ್ತಿ ಅವರ ಅಭಿಮತ) ಸುಗ್ಗಲಾದೇವಿಗೆ ಆಶೀರ್ವಾದ ಮಾಡಿ ನಿನ್ನ ಹೊಟ್ಟೆಯಲ್ಲಿ ಶಿವಯೋಗಿ ಹುಟ್ಟಿ ಬರುತ್ತಾನೆಂದು ಆಶೀರ್ವದಿಸಿದರಂತೆ. ಸಿದ್ಧರಾಮರು ಮುಂದೆ ನೊಳಂಬ ರಾಣಿ ಚಾಮಲಾದೇವಿಯ ಸೊಲ್ಲಾಪೂರದ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ ಕಟ್ಟೆ ಕಾಲುವೆ ಗುಡಿ ನಿರ್ಮಾಣ ಮಾಡುತ್ತಾ ಜನಸೇವೆಗೆ ಇಳಿದರು. ಶರೀರವನ್ನು ವ್ಯರ್ಥವಾಗಿ ಕಳೆಯಬಾರದೆಂಬುದು ಅವರ ಪ್ರಜ್ಞೆಯಾಗಿತ್ತು.
ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಸೊನ್ನಲಾಪುರ ಅಂದರೆ ಇಂದಿನ ಸೊಲ್ಲಾಪುರಕ್ಕೆ ಕರೆ ತಂದು ಅಲ್ಲಿ ರಾಣಿ ಚಾಮಲಾದೇವಿಯ ಸೈನಿಕರ ಸಹಾಯದೊಂದಿಗೆ ಸೋವಿದೇವನ ಸೈನಿಕರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು ಎಂದೆನ್ನಬಹುದು. ಇಲ್ಲಿಂದ ಬೇರೆ ಬೇರೆ ಪ್ರದೇಶಕ್ಕೆ ಶರಣರು ವಚನಗಳ ಕಟ್ಟನ್ನು ಹೊತ್ತು ಸಾಗಿದರು. ವಚನ ಚಳುವಳಿಯಲ್ಲಿ ಸಿದ್ಧರಾಮರ ಪಾತ್ರ ಬಹು ದೊಡ್ಡದು.
ಸಿದ್ಧರಾಮರು ಸಿದ್ಧ ಪರಂಪರೆಗೆ ಸೇರಿದವರು. ಕಪಿಲಸಿದ್ಧ ಮಲ್ಲಿಕಾರ್ಜುನ, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ, ಕಪಿಲಸಿದ್ಧ ಮಲ್ಲಿನಾಥ, ಎಂಬ ಅಂಕಿತಗಳಲ್ಲಿ 1992 ವಚನಗಳನ್ನು ರಚಿಸಿದ್ದಾರೆ, ಯೋಗಿನಾಥ ಎಂಬ ಅಂಕಿತದೊಂದಿಗೆ ಯೋಗಾಂಗ ತ್ರಿವಿಧಿ ರಚಿಸಿದ್ದಾರೆ. ಸಿದ್ಧರಾಮರ ಜೀವನದಲ್ಲಿ ಎರಡು ಪ್ರಮುಖ ಘಟ್ಟಗಳಿವೆ.
1 ) ಕಲ್ಯಾಣಕ್ಕೆ ಬರುವ ಮುನ್ನ ಸೊನ್ನಲಾಪುರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು.
2 ) ಅಲ್ಲಮರು ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆ ತಂದ ನಂತರ ಶರಣರ ಜೊತೆ ಬೆರೆತು ಆಧ್ಯಾತ್ಮಿಕ ಯೋಗ ಸಾಧನೆಗೆ ಮುಂದಾಗಿರುವುದು.
ಸಿದ್ಧರಾಮರ ವಚನಗಳಲ್ಲಿ ಸಾಮಾಜಿಕ ಕಳಕಳಿ, ಕಾವ್ಯ ಗುಣ, ಸ್ವಾಭಿಮಾನ, ಆತ್ಮಸ್ಥೈರ್ಯ, ಭಾವ ತೀವ್ರತೆ ಮತ್ತು ಬಸವಣ್ಣನವರ ಗಾಢ ಪ್ರಭಾವವನ್ನು ಕಾಣಬಹುದು. ಅಪಾರ ಗೌರವ ಪ್ರೀತಿ ಆದರದ ಭಾವನೆಗಳಿಂದ ಬಸವಣ್ಣನವರ ಬಗ್ಗೆ ಸಿದ್ಧರಾಮರು ಬರೆದಷ್ಟು ಇನ್ನೊಬ್ಬ ಶರಣರು ಬರೆದದ್ದನ್ನು ಕಾಣಲಾರೆವು. ಇದು ಸ್ತುತಿಯಲ್ಲ, ಸಾಮಾಜಿಕ ಚಳುವಳಿಯಲ್ಲಿನ ಋಣಭಾರವನ್ನು ಕಡಿಮೆ ಮಾಡಿಕೊಳ್ಳುವ ಪರಿಹಾರವಷ್ಟೇ ಎನ್ನುತ್ತಾರೆ ಸಿದ್ಧರಾಮರು.
ಜನಸಾಮಾನ್ಯರ ಜೊತೆ ಬೆರೆಯುವ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ, ಅವರ ಸಮಸ್ಯೆಗಳನ್ನು ಪರಿಹರಿಸುವ ಸಿದ್ಧರಾಮರ ಸಾಮಾಜಿಕ ಬದ್ಧತೆ ಶ್ಲಾಘನೀಯವಾದದ್ದು. ಹಾವು ಕಚ್ಚಿ ಒದ್ದಾಡುತ್ತಿರುವವರು, ಅನಾರೋಗ್ಯಕ್ಕೆ ತುತ್ತಾದವರು, ದಾರಿಯಲ್ಲಿ ಅನಾಥ ಶವವಾಗಿ ಬಿದ್ದವರನ್ನು ಅನೇಕ ಶರಣರು ಸಿದ್ಧರಾಮರ ಬಾಗಿಲಿಗೆ ತಂದು ಹಾಕಿ ಹೋಗುತ್ತಿದ್ದರಂತೆ. ಅಂಥವರನ್ನು ಉಪಚರಿಸುವ, ಕ್ರಿಯಾ ವಿಧಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸಿದ್ಧರಾಮರು ಮುಖ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದರು ಎಂದು ರಾಘವಾಂಕನ ‘ಸಿದ್ಧರಾಮರ ಚರಿತ್ರೆ’ಯಲ್ಲಿ ಉಲ್ಲೇಖಗೊಂಡಿದೆ.
ಸಿದ್ಧರಾಮರ ಬದುಕಲ್ಲಿ ಅಲ್ಲಮರ ಆಗಮನ
ಸೊನ್ನಲಿಗೆಯಲ್ಲಿ ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿದ್ದ ಸಿದ್ಧರಾಮರನ್ನು ಕಲ್ಯಾಣದ ಶರಣ ಸಂಕುಲಕ್ಕೆ ಕರೆದೊಯ್ಯಬೇಕೆಂದು ಅಲ್ಲಮರು ಯೋಚಿಸಿ ಅವರಲ್ಲಿಗೆ ಬಂದು ಕೆರೆ ಕಟ್ಟುವ ಒಡ್ಡ ಜನಾಂಗವನ್ನು ಕರೆದು, ಎಲ್ಲಿರುವ ನಿಮ್ಮ ಒಡ್ಡ ರಾಮನೆಂದು ಪ್ರಶ್ನಿಸಿದರಂತೆ. ಆ ಕೆಲಸಗಾರರು ಸಿದ್ಧರಾಮರ ಬಳಿ ಬಂದು ಅಲ್ಲಮರ ಬೈಗುಳ ಟೀಕೆಯ ನುಡಿಗಳನ್ನು ವರದಿ ಮಾಡುತ್ತಾರೆ.
ಅಲ್ಲಮರ ಬಗ್ಗೆ ಯಾವುದೇ ಪರಿಚಯ ಜ್ಞಾನವಿರದ ಸಿದ್ಧರಾಮರು ತಾವು ಮಾಡುವ ಘನ ಕಾರ್ಯವನ್ನು ಹೀಗೆ ಟೀಕಿಸುವ ವ್ಯಕ್ತಿ ಯಾರು ಎಂದು ಅತಿ ಕೋಪದಿಂದ ಅಲ್ಲಮರ ಜೊತೆ ವಾಗ್ಯುದ್ಧಕ್ಕೆ ನಿಲ್ಲುತ್ತಾರೆ. ಅಲ್ಲಮ- ಸಿದ್ಧರಾಮರ ಸಂವಾದ ಚರ್ಚೆ ದೀರ್ಘಕ್ಕೆ ಹೋಗಿ ಕೊನೆಗೆ ಸಿದ್ಧರಾಮರಿಗೆ ಸತ್ಯದ ಅರಿವಾಗಿ
ಎಲ್ಲವನ್ನೂ ತ್ಯಜಿಸಿ ಅಲ್ಲಮರ ಜೊತೆಗೆ ಕಲ್ಯಾಣಕ್ಕೆ ಪಯಣ ಬೆಳೆಸಿದರು. ಅನುಭವ ಮಂಟಪಕ್ಕೆ ಕಾಲಿಡುತ್ತಲೇ ಭಾವಪರವಶರಾದ ಸಿದ್ಧರಾಮರು ಈ ಹಿಂದೆ ಬಸವಣ್ಣನವರು ತಮ್ಮನ್ನು ಕಲ್ಯಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾರೆ:
ಅಂದು ಬಸವಣ್ಣ ಬಂದು ಜರಿದು ಹೋದುದ
ಮರೆದೆನೆ ಆ ನೋವ!
ಜರಿದುದೆ ಎನಗೆ ದೀಕ್ಷೆಯಾಯಿತ್ತು!
ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಬಸವಣ್ಣನೆನ್ನ ಪರಮಾರಾಧ್ಯ!
ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆ ತರುವ ಪ್ರಯತ್ನದಲ್ಲಿ ಬಸವಣ್ಣನವರು ಸೊನ್ನಲಾಪುರಕ್ಕೆ ಬಂದು ಅವರಿಗೆ ನಾನಾ ರೀತಿ ಬುದ್ಧಿವಾದ ಹೇಳುತ್ತಾರೆ. ಅದಕ್ಕೆ ಸಿದ್ಧರಾಮರು ಬಸವಣ್ಣನವರು ಬಂದು ಬೈದು ಹೋದದ್ದನ್ನು ಮರೆಯುವೆನೆ? ಅವರು ಬಂದು ಬೈದುದ್ದೇ ಎನಗೆ ದೀಕ್ಷೆಯಾಯಿತು, ಆ ದೀಕ್ಷೆಯಿಂದ ಫಲಪದಕ್ಕೆ ಅಂದರೆ ಲೌಕಿಕ ವಿಚಾರಗಳಿಗೆ ದೂರವಾದೆನು ಎಂದು ಹೇಳುತ್ತಾ ಅಲ್ಲಮರು ತಮ್ಮನ್ನು ಕಲ್ಯಾಣಕ್ಕೆ ಕರೆ ತಂದರೂ ತಮಗೆ ಬಸವಣ್ಣನವರೇ ಪರಮಾರಾಧ್ಯವೆಂದಿದ್ದಾರೆ.
ಜೋಡಿ ಬಸವಣ್ಣನ ಗುಡಿ
ಸೊನ್ನಲಾಪುರದ ಮುಖ್ಯರಸ್ತೆಯಲ್ಲಿ ಒಂದು ಗುಡಿ ಇದೆ. ಅದರ ಹೆಸರು ಜೋಡಿ ಬಸವಣ್ಣ ಗುಡಿ. ಏನಿದರ ವೈಶಿಷ್ಟ್ಯ ಎಂದರೆ, ಕಲ್ಯಾಣಕ್ಕೆ ಅಲ್ಲಮರ ಜೊತೆ ಪಯಣ ಬೆಳೆಸಿ ಬಂದ ಸಿದ್ಧರಾಮರು ಅನುಭವ ಮಂಟಪದ ಸದಸ್ಯರಾದರು. ಆಗ ಬಸವಣ್ಣನವರು ಸಂಸತ್ತಿನ ಸಚೇತಕರಾದ ಚೆನ್ನಬಸವಣ್ಣನವರಿಗೆ ಸಿದ್ಧರಾಮರಿಗೆ ಇಷ್ಟಲಿಂಗ ದೀಕ್ಷೆ ನೀಡಲು ಸೂಚಿಸುತ್ತಾರೆ. ಹಿರಿಯರಾದ ಸಿದ್ಧರಾಮರಿಗೆ ಚೆನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡಿ ದೀಕ್ಷಾಗುರುಗಳಾಗುತ್ತಾರೆ. ಇವರೆಲ್ಲರಿಂದ ಪ್ರಭಾವಿತರಾದ ಸಿದ್ಧರಾಮರು ತಮ್ಮ ಇತರ ಶಿಷ್ಯರನ್ನು ಸಹಿತ ಸೊಲ್ಲಾಪುರದಿಂದ ಕಲ್ಯಾಣಕ್ಕೆ ಕರೆ ತರಲು ಮುಂದಾಗುತ್ತಾರೆ. ತಾವು ಕಟ್ಟಿದ ಸಾಮ್ರಾಜ್ಯವನ್ನು ಬಸವಣ್ಣ, ಚೆನ್ನಬಸವಣ್ಣ ಮಡಿವಾಳ ಮಾಚಿದೇವ ಮುಂತಾದ ಶರಣರಿಗೆ ತೋರಿಸಲು, ಅವರೆಲ್ಲರನ್ನು ಸೊನ್ನಲಾಪುರಕ್ಕೆ ಕರೆ ತರುತ್ತಾರೆ. ಆಗ ಅಲ್ಲಿ ಬೃಹತ್ ಮೆರವಣಿಗೆ ಮೂಲಕ ತಾವು ಕಟ್ಟಿದ್ದ ದೇವಾಲಯಕ್ಕೆ ಕರೆದೊಯ್ಯಲು, ಒಂದು ಕುದುರೆಯನ್ನು ತರಿಸಿ ಅದರ ಮೇಲೆ ತಮ್ಮ ಗುರು ಚೆನ್ನಬಸವಣ್ಣನವರಿಗೆ ಕುಳಿತುಕೊಳ್ಳಲು ಭಿನ್ನವಿಸುತ್ತಾರೆ. ಬಸವಣ್ಣನವರು ಸಿದ್ಧರಾಮರ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಆಗ ಗಲಿಬಿಲಿಗೊಂಡ ಚೆನ್ನಬಸವಣ್ಣನವರಿಗೆ ತನ್ನ ಗುರು ಬಸವಣ್ಣನವರನ್ನು ಕಾಲ್ನಡಿಗೆಯಲ್ಲಿ ಕರೆ ತಂದು ತಮ್ಮನ್ನು ಕುದುರೆಯ ಮೇಲೆ ಕುಳ್ಳಿರಿಸುವುದು ಯಾಕೋ ಮುಜುಗರ ಉಂಟು ಮಾಡಿತು. ಅವರು ಇದಕ್ಕೆ ಸ್ವಲ್ಪ ಪ್ರತಿರೋಧವನ್ನು ಒಡ್ಡಿ ತಮ್ಮ ಗುರು ಕಲ್ಯಾಣದ ಅನುಭವ ಮಂಟಪದ ಶಿಲ್ಪಿ, ಲಿಂಗಾಯತ ಧರ್ಮದ ಸ್ಥಾಪಕ ವಿಶ್ವ ದಾರ್ಶನಿಕನನ್ನು ಕಾಲು ನಡಿಗೆಯಲ್ಲಿ ಕರೆದೊಯ್ಯುವುದು ತಮ್ಮನ್ನು ಕುದುರೆಯ ಮೇಲೆ ಒಯ್ಯುವುದನ್ನು ಸುತರಾಂ ಒಪ್ಪುವದಿಲ್ಲ. ಎಲ್ಲ ಶರಣರ ಆಗ್ರಹದ ಮೇರೆಗೆ ಬಸವಣ್ಣ ಮತ್ತು ಚೆನ್ನಬಸವಣ್ಣ ಇಬ್ಬರನ್ನು ಎರಡು ಕುದುರೆಗಳ ಮೇಲೆ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯುವರು. ಆ ಸ್ಥಳವನ್ನೇ ಜನಪದಿಗರು ‘ಜೋಡು ಬಸವಣ್ಣನವರ ಗುಡಿ’ ಎಂದು ಕರೆಯುತ್ತಾರೆ. ಇಲ್ಲಿ ಮುಖ್ಯವಾಗಿ ಸಿದ್ಧರಾಮರ ಗುರು ಭಕ್ತಿ, ಚೆನ್ನಬಸವಣ್ಣನವರ ತತ್ವ ನಿಷ್ಠೆ ಮತ್ತು ಬಸವಣ್ಣನವರ ಉದಾರತೆಯನ್ನು ಕಾಣಬಹುದು.
ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ, ಆನು ತನುಪ್ರಾಣ ಇಷ್ಟಲಿಂಗಿಯಾದೆನು.
ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ.
ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಆನು ನೀನೆಂಬ ಕನ್ನಡವಿನ್ನೇಕಯ್ಯ?
ತನ್ನ ಅರಿವಿನ ಕುರುಹೇ ಈಗ ತನ್ನ ಕರಸ್ಥಲಕ್ಕೆ ಬಂದ ಕಾರಣ ತನ್ನ ತನುಪ್ರಾಣ ಇಷ್ಠಲಿಂಗಿಯಾದನು, ಸಮಾಜದ ಸೇವೆ, ಲಿಂಗ ಪೂಜೆ ಎಂಬ ಶರಣರ ಆಶಯಗಳಿಗೆ ಬದ್ಧರಾದ ಸಿದ್ಧರಾಮರು ಸಮಷ್ಟಿ ಕಾಳಜಿಯಲ್ಲಿ ಲಿಂಗಾರ್ಚನೆ ಕಂಡ ಶ್ರೇಷ್ಠ ಸಾಧಕರು. ಪ್ರಸನ್ನ ಭಾವ ಹಾಗೂ ಜ್ಞಾನದ ಪಾದೋದಕವನ್ನುಂಡ ಬಳಿಕ, ಕಪಿಲ ಸಿದ್ಧಮಲ್ಲಿಕಾರ್ಜುನ ನಾನು ನೀನೆಂಬ ಮತ್ತೆ ಬೇರೆ ಭಾವ ಉಂಟೆ ಎಂದು ದೇವರನ್ನೇ ಪ್ರಶ್ನಿಸುತ್ತಾರೆ.
ಕಲ್ಯಾಣ ಕ್ರಾಂತಿಯ ಸಮಗ್ರ ಹೋರಾಟವನ್ನು ಬಿಂಬಿಸುವ ಅವರ ಒಂದು ವಚನ-
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆಂಟು ಅಧ್ಯಯನಕ್ಕೆ
ಶತರುದ್ರೀಯಯಾಗ ಸಮಬಾರದಯ್ಯಾ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ
ಕಪಿಲ ಸಿದ್ಧ ಮಲ್ಲಿಕಾರ್ಜುನಾ
ಶರಣರ ವಚನಗಳ ಸಾಧನೆಯ ಶಕ್ತಿ ಅಗಾಧವಾಗಿದ್ದು, ಅಂಥ ವಚನದ ಒಂದು ಪಾರಾಯಣಕ್ಕೆ ವ್ಯಾಸನ ಪುರಾಣ ಓದುವಿಕೆ ಸಮಬಾರದು. ಶತ ರುದ್ರಿಯಾಗವು ಸನಾತನಿಗಳ ಶ್ರೇಷ್ಠ ಭವ್ಯ ಯಜ್ಞ. ಅದು ವಚನಗಳ ಮೌಲ್ಯಕ್ಕೆ ಹೋಲಿಸಿದರೆ ಕಡಿಮೇನೆ. ಅದೇ ರೀತಿ ವಚನದ ಸಾವಿರ ಪಾರಾಯಣಕ್ಕೆ ಗಾಯತ್ರಿ ಲಕ್ಷ ಜಪ ಸಮಬಾರದೆನ್ನುವ ಮೂಲಕ ಸಮಗ್ರ ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸಿ ಅದಕ್ಕಿಂತ ಅರ್ಥಪೂರ್ಣವಾದ ಶರಣರ ವಚನಗಳನ್ನು, ಅವುಗಳ ಅರ್ಥವನ್ನು ವಿವರಿಸುವಲ್ಲಿ ಸಿದ್ಧರಾಮರು ಸಂತಸ ಕಂಡಿದ್ದಾರೆ.
ಸಿದ್ಧರಾಮ ಶಿವಯೋಗಿಗಳು ಬಸವಣ್ಣನವರ ಸಾಮೀಪ್ಯಕ್ಕೆ ಬಂದ ಮೇಲೆ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ತನು ಮನ ಪ್ರಾಣ ಶುದ್ಧೀಕರಿಸಿ ಬಸವಾಕ್ಷರ ಮಂತ್ರವನ್ನೇ ಬದುಕಿದರು. ಅವರಿಗೆ ಬಸವಣ್ಣನವರೇ ಸರ್ವಸ್ವ. ಅವರೇ ಗುರು ಲಿಂಗ ಜಂಗಮದ ಪ್ರತೀಕ. ಅವರ ಕೆಲ ವಚನಗಳನ್ನು ನೋಡೋಣ:
ಪಾವನವಾದೆನು ಬಸವಣ್ಣಾ,
ನಿಮ್ಮ ಪಾವನಮೂರ್ತಿಯ ಕಂಡು.
ಪರತತ್ವವನೈದಿದೆ ಬಸವಣ್ಣಾ,
ನಿಮ್ಮ ಪರಮಸೀಮೆಯ ಕಂಡು.
ಪದ ನಾಲ್ಕು ಮೀರಿದೆ ಬಸವಣ್ಣಾ,
ನಿಮ್ಮ ಪರುಷಪಾದವ ಕಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ;
ಬಸವಣ್ಣಾ, ಬಸವಣ್ಣಾ, ಬಸವಣ್ಣಾ,
ನೀನು ಗುರುವಾದೆಯಾಗಿ. (ಅಪ್ರಕಟಿತ ವಚನ)
ಇಲ್ಲಿ ಬಸವಣ್ಣನವರು ಆವಿಷ್ಕರಿಸಿದ ಲಿಂಗವೇ ಪಾವನ ಮೂರ್ತಿ. ಇದು ಜ್ಞಾನದ ಸಂಕೇತ. ಗುರು ಲಿಂಗ ಜಂಗಮದ ಹೊಸ ಸೂತ್ರ ಸಿದ್ಧಪಡಿಸಿದ ಬಸವಣ್ಣನವರ ಕ್ರಾಂತಿಯ ಕಂಡು ಬೆರಗಾದ ಸಿದ್ಧರಾಮರು, “ಪಾವನವಾದೆನು ಬಸವಣ್ಣ” ಎಂದು ಉದ್ಗರಿಸಿದ್ದಾರೆ. ಪರತತ್ವವನ್ನು ಲಿಂಗ ಮುಖೇನ ಹೇಳಿದ ಬಸವಣ್ಣನವರ ವೈಚಾರಿಕ ನಿಲುವಿನ ಸೀಮೆ ಅಗಾಧವಾದದ್ದು. ನಾಲ್ಕು ಪದ ಅಂದರೆ ಧರ್ಮ ಕಾಮ ಅರ್ಥ ಮೋಕ್ಷ, ಇವುಗಳನ್ನು ಮೀರಿದ ಅನಂತದ ಅರಿವು ಬಸವಣ್ಣ. ಇಂತಹ ಪರುಷ ಮಣಿಯಾದ ಜ್ಞಾನಿಯ ಕಂಡು, ದೈವವ ಕೂಡಿ ಬಸವಣ್ಣ ಬಸವಣ್ಣ ನೀವೆನ್ನ ಗುರುವಾದಿರಿ ಎಂದು ಹೇಳಿಕೊಂಡಿದ್ದಾರೆ.
ಬಸವನ ಮೂರ್ತಿಯೇ ಧ್ಯಾನಕೆ ಮೂಲ
ಬಸವನ ಕೀರ್ತಿಯೇ ಧ್ಯಾನಕೆ ಮೂಲ
ಬಸವ ಬಸವ ಬಸವ ಎಂಬುವದು ಭಕ್ತಿ ಕಾಣಾ
ಕಪಿಲ ಸಿದ್ದ ಮಲ್ಲಿಕಾರ್ಜುನ (ಅಪ್ರಕಟಿತ ವಚನ)
ಬಸವನ ಮೂರ್ತಿ ಎಂದರೆ ಲಿಂಗ, ಸಮಾಜ. ಅದುವೇ ಸುಂದರ ಪರಿಕಲ್ಪನೆ. ಅಂತಹ ಸಮಾಜದ ಚಿಂತನೆಯೇ ಧ್ಯಾನಕ್ಕೆ ಮೂಲ. ಬಸವನ ಕೀರ್ತಿಯೇ ಧ್ಯಾನಕ್ಕೆ ಮೂಲ. ಸಮಾಜವನ್ನು ಸಂಘಟಿಸಿ ಕಾಯಕ ದಾಸೋಹದ ಸೂತ್ರಗಳನ್ನು ಅಳವಡಿಸಿದ ಬಸವಣ್ಣನವರು ಭಕ್ತಿಯ ಪ್ರತಿರೂಪವಾಗುತ್ತಾರೆ. “ಬಸವನ ಮೂರ್ತಿಯೇ ಧ್ಯ��ನಕೆ ಮೂಲ” ಎಂಬುದನ್ನು ಲಿಂಗವೆಂದೆನ್ನದೆ ಬಸವಣ್ಣನವರ ಸ್ಥಾವರ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದು ದುರಂತವೇ ಸರಿ.
ಸಿದ್ಧರಾಮರ ಚರಿತ್ರೆಯ ಸುತ್ತ ವಿವಾದಗಳ ಹುತ್ತ
ಸಿದ್ಧರಾಮರ ಬಗೆಗಿನಷ್ಟು ವಿವಾದ ಮತ್ತೊಬ್ಬ ಶರಣರ ಬಗ್ಗೆ ಕಾಣುವುದಿಲ್ಲ. ಯಾಕೆ ಇಂತಹ ವಿವಾದಗಳು ಹುಟ್ಟಿಕೊಂಡವು ಎನ್ನುವುದು ಇನ್ನೂ ಸೋಜಿಗವಾಗಿದೆ. ಸಿದ್ಧರಾಮರ ವಚನಗಳನ್ನೇ ಬಳಸಿ ಬರೆದಿರುವ ರಾಘವಾಂಕನ ಸಿದ್ಧರಾಮ ಚರಿತ್ರೆಯಲ್ಲಿ ಸಿದ್ಧರಾಮ ಅಯೋನಿಜ ಎಂದು ಹೇಳಿದ್ದುಂಟು. ಅದೇ ರೀತಿ ಪ್ರೊ. ಡಿ ಎಲ್ ನರಸಿಂಹಾಚಾರ ಅವರು ಲೋಕ ಕಲ್ಯಾಣಕ್ಕಾಗಿ ಸಿದ್ಧರಾಮರು ಲಿಂಗ ಪ್ರತಿಷ್ಠಾನ ಮಾಡಲು ಕೈಲಾಸದಿಂದ ಬಂದ ‘ಗಣಶಿವಯೋಗಿ’ ಎಂದಿದ್ದಾರೆ. ಅಷ್ಟೇ ಅಲ್ಲ, ಸಿದ್ಧರಾಮರಿಗೆ ಇಷ್ಟಲಿಂಗ ದೀಕ್ಷೆಯೇ ಆಗಿಲ್ಲವೆಂದು ಬರೆದದ್ದು ನಂತರ ಅದಕ್ಕೆ ಆಲೂರು ವೆಂಕಟ ರಾಯರು ಸರಿಯಾದ ಉತ್ತರ ಕೊಟ್ಟಿದ್ದು ಈಗ ಇತಿಹಾಸ. ಬೆಲ್ದಾಳ ಶರಣರು, ಸಿದ್ಧರಾಮ ಶಿವಯೋಗಿಯ ಹುಟ್ಟೂರು ಸೊನ್ನಲಗಿಯ ಬಗ್ಗೆ ಬರೆದದ್ದು ಅದನ್ನು ಡಾ ಎಂ ಚಿದಾನಂದ ಮೂರ್ತಿ ನಿರಾಕರಿಸಿದ್ದು ಒಂದು ರೀತಿಯಲ್ಲಿ ದ್ವಂದ್ವ ಉಂಟು ಮಾಡುತ್ತವೆ. ಈಗಿರುವ ಸೊನ್ನಲಾಪುರವೇ ಸಿದ್ಧರಾಮರ ಜನ್ಮಸ್ಥಳವೆಂದು ವಾದಿಸುತ್ತಾರೆ. ಇನ್ನೂ ಕೆಲವರು ತರಿಕೇರಿಯ ಸೊನಾಲಪುರದಲ್ಲಿ ಸಿದ್ಧರಾಮರ ಗದ್ದಿಗೆ ಇದೆ. ಸಿದ್ಧರಾಮ ಒಬ್ಬ ಚರ ದಿಟ್ಟ ಜಂಗಮ ಯೋಗಿಯಾದ ಕಾರಣ ಸಿದ್ಧಯ್ಯನವಾಡಿ (ಬೀದರ ಜಿಲ್ಲೆ), ಸಿದ್ದಾಪೂರ (ಸಿರ್ಸಿ), ಸಿದ್ದನ ಗುರುಬೆಟ್ಟ (ಗೋಕಾಕ ತಾಲ್ಲೂಕು) ಸದ್ಯ ಸಿಂಧಿ ಕುರಬೆಟ್ಟ ಎನ್ನುತ್ತಾರೆ. ಹೀಗೆ ಅನೇಕ ಪ್ರದೇಶಗಳಲ್ಲಿ ಸಿದ್ಧರಾಮರು ತಪಸ್ಸು ಮಾಡಿದ ಪ್ರದೇಶಗಳಲ್ಲಿ ಅವರ ಹೆಸರಿನಲ್ಲಿ ಕುರುಹುಗಳಿವೆ. ಇನ್ನು ಪಿ ಎಂ ಗಿರಿರಾಜ ಎಂಬ ಸಂಶೋಧಕರು ಸಿದ್ಧರಾಮರ 848 ವಚನಗಳು ಖೋಟಾ ಎಂದು ಹೇಳಿ ವಾದ ಮಾಡಿ ತಮ್ಮ ಬಳಿ ಇರುವ ಹಸ್ತಪ್ರತಿಗಳು ಮಾತ್ರ ನಿಜ ವಚನಗಳೆಂದು ಕಳೆದ ಮೂರು ದಶಕದಿಂದ ವಾದ ಮಾಡುತ್ತ ಬಂದಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ವಚನಗಳು ನಿಜ ವಚನಗಳೆಂದು ಡಾ. ಎಸ್. ವಿದ್ಯಾಶಂಕರ ಅವರು ವಚನ ಹಸ್ತಪ್ರತಿ ಹಾಗೂ ಸಂಪಾದನೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
“ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು..” ಈ ವಚನವು ವಚನ ಸಂಪುಟದಲ್ಲಿ ಸೇರಿಲ್ಲದಿರುವುದು ದುರಂತದ ಸಂಗತಿಯಾಗಿದೆ. ಅದೇ ರೀತಿ, “ಬಸವನ ಮೂರ್ತಿಯೇ ಧ್ಯಾನಕೆ ಮೂಲ…” ಎಂಬ ಸುಂದರ ವಚನವು ಇನ್ನೂ ಸ್ವರ ವಚನವಾಗಿದೆಯೆನ್ನುವ ಕೊರಗು.
ಸಿದ್ಧರಾಮರ ಹುಟ್ಟಿನಂತೆ ಅವರ ಜಾತಿ ಬಗ್ಗೆಯೂ ವಿವಾದಗಳಿವೆ. ಅವರು ಕುಡ ಒಕ್ಕಲಿಗ, ಕುರುಬ, ಉಪ್ಪಾರ ಹಾಗೂ ಗಾಣಿಗ ಸಮಾಜಕ್ಕೆ ಸೇರಿದವರೆಂಬ ಅನೇಕ ಚರ್ಚೆಗಳು ಪ್ರಚಲಿತವಿದ್ದರೂ ಅವರು ಕುಡು ಒಕ್ಕಲಿಗರಾಗಿದ್ದರೆಂಬುದು ಅನೇಕ ತಜ್ಞರ ಅಭಿಮತ. ಶರಣರಲ್ಲಿ ಜಾತಿಯನ್ನು ಅರಸಬಾರದು.
ಸಮಾಧಿಯ ಹುಡುಕಾಟದಲ್ಲಿ…
ಸಿದ್ಧರಾಮರ ಜೀವನ ಚರಿತ್ರೆಯ ಬಗ್ಗೆ ಅಷ್ಟೇ ಅಲ್ಲ ಅವರ ಸಮಾಧಿಯ ಬಗ್ಗೆಯೂ ಗುಸು ಗುಸು ಚರ್ಚೆಗಳಿವೆ. ಸೊಲ್ಲಾಪೂರದಲ್ಲಿರುವ ಸಿದ್ಧರಾಮೇಶ್ವರ ಗದ್ದುಗೆಯೇ ಅವರ ಸಮಾಧಿ ಎಂಬುದು ನಿರ್ವಿವಾದದ ಸಂಗತಿಯಾದರೂ, ಸಿದ್ಧರಾಮರ ಗುಡಿ ಸಿದ್ದೇಶ್ವರ ದೇವಾಲಯವೆಂದು ಪ್ರತೀತಿ ಪಡೆದ ಕಾರಣ ಅಲ್ಲಿರುವ ಶಿವಾಚಾರ್ಯ ಆಡಳಿತ ಮಂಡಳಿ ಸಿದ್ಧರಾಮ ಗದ್ದುಗೆ ಕೋಟೆಯ ಒಳಗಿರುವ ಆವರಣದಲ್ಲಿ ತೋರಿಸುತ್ತಾರೆ. ಇದು ಶುದ್ಧ ಸುಳ್ಳು. ತಮ್ಮ ಕೈಯಲ್ಲಿರುವ ಸಿದ್ಧರಾಮರ ಗದ್ದುಗೆ ಬಸವ ಪ್ರಣೀತರ ಪಾಲಾಗುವುದೆನ್ನುವ ಭೀತಿ ಅಷ್ಟೇ. ಸಿದ್ದೇಶ್ವರ ದೇವಾಲಯದಲ್ಲಿರುವ ಗದ್ದುಗೆಯೇ ಸಿದ್ಧರಾಮರ ಗದ್ದುಗೆ ಎಂದು ನಿರ್ವಿವಾದವಾಗಿ ಹೇಳಬಹುದು. ಇಲ್ಲಿ ಬಹು ದೊಡ್ಡ ಜಾತ್ರೆಯಾಗುತ್ತದೆ. ಆದರೆ ವಿರಕ್ತ ಪರಂಪರೆಯ ವಾತಾವರಣವಿಲ್ಲ.
Comments 1
Dr Shashikant Pattan
Jun 5, 2018Its My article but very unfortunately my name is been deleted