Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯಾಲಪದದ ಸೊಗಡು
Share:
Articles December 13, 2024 ಪದ್ಮಾಲಯ ನಾಗರಾಜ್

ಯಾಲಪದದ ಸೊಗಡು

ನಮ್ಮ ದೇಶದಲ್ಲಿ ಪಾಂಥಿಕ ವೈರತ್ವದಿಂದಾಗಿ ಆದಷ್ಟು ಜೀವಹಾನಿ ಮತ್ತು ರಕ್ತಪಾತಗಳು ಸಾಮ್ರಾಜ್ಯಗಳ ವಿಸ್ತರಣೆಗೂ ನಡೆದಿಲ್ಲ ಎಂಬುದನ್ನು ಈ ದೇಶದ ಸಾಂಸ್ಕೃತಿಕ ಚರಿತ್ರೆ ಓದಿದ ಯಾರಾದರೂ ತಿರಸ್ಕರಿಸಲಾರರು. ಅದರ ಫಲವಾಗಿ ಪಾಂಥಿಕ ಸಂಘರ್ಷಕ್ಕೆ ದೈವತ್ವದ ಬಣ್ಣ ಹಚ್ಚಿ ರಕ್ತಪಾತವನ್ನು ದೈವಲೀಲೆಯೆಂದು ನಂಬುವವರು ನಾವು. ಅಷ್ಟೇಕೆ ಪವಿತ್ರ ಗ್ರಂಥಗಳೆಂದು ನಾವು ಒಪ್ಪಿಕೊಂಡಿರುವ ರಾಮಾಯಣ- ಮಹಾಭಾರತಗಳೂ ವೈಷ್ಣವ ಪಂಥ ಮತ್ತು ಶೈವ ಪಂಥಗಳ ಮಧ್ಯೆ ನಡೆದ ಭಯಾನಕ ಜಗಳಗಳೆಂದು ನಮಗಿನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇವೆಲ್ಲಾ ಜಗಳಗಳನ್ನು ಧರ್ಮಕ್ಕಾಗಿ ನಡೆಯುವ ಜಗಳಗಳೆಂದು ದೈವೀಕರಿಸಿ ಹೇಳಿ, ಅದರೊಳಗಿನ ಹಿಂಸೆ ಮತ್ತು ದುಷ್ಟತನದ ರಾಜಕಾರಣಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಡಲಾಯಿತು.

ಈ ನೆಲದಲ್ಲಿಯೇ ಹುಟ್ಟಿದ ಬೌದ್ಧರನ್ನು ಇಲ್ಲಿಂದ ಓಡಿಸಿದ್ದ ಚರಿತ್ರೆ ಕೂಡ ನಮ್ಮ ಮುಂದಿದೆ. ಕ್ರಿ.ಪೂ. ಒಂದನೆಯ ಶತಮಾನದಲ್ಲಿಯೇ ಅಕ್ಷರಸ್ತ ರಾಜಕಾರಣಗಳು ಬೌದ್ಧರನ್ನು ದುಷ್ಟರೆಂದು ಚಿತ್ರಿಸಿದವು. ಆನಂತರ ಕಾಲಾಂತರದಲ್ಲಿ ಅದೆಷ್ಟೋ ಅವೈದಿಕ ಪಂಥಗಳಿಗೆ ಇದೇ ಗತಿ ಬಂತು. ಈ ನೆಲದಲ್ಲಿಯೇ ಹುಟ್ಟಿದ ಮನುಷ್ಯ ಪರವಾದ ಧರ್ಮಗಳ ಸಮಾಧಿಯ ಮೇಲೆ ದೈವದತ್ತವಾದ ಗುಡಿಗೋಪುರಗಳು ಕಟ್ಟಲ್ಪಟ್ಟವು. ಹನ್ನೆರಡನೇ ಶತಮಾನದ ಶರಣರು ನಡೆದುಕೊಂಡ ದಾರಿಗೂ ಇದೇ ಗತಿ ಬಂತು. ಹನ್ನೆರಡನೇ ಶತಮಾನದಲ್ಲಿಯೇ ಅನೇಕ ಮೌಖಿಕ ಪರಂಪರೆಗಳು ಮೇಲಿನ ಎಲ್ಲಾ ಯುದ್ಧ ಮತ್ತು ಹಿಂಸೆಗಳನ್ನು ಗಮನದಲ್ಲಿಟ್ಟುಕೊಂಡು ರಹಸ್ಯ ಮಾರ್ಗಗಳಾಗಿ ಬದಲಾದವು. ಅಂತಹ ರಹಸ್ಯ ಮಾರ್ಗಗಳಲ್ಲಿ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಮತ್ತು ಇಂದಿಗೂ ಜೀವಂತವಿರುವ ತತ್ವಪದಕಾರರನ್ನು ಹೆಸರಿಸಬಹುದು. ಶರಣ ಸಾಹಿತ್ಯವು ಕೂಡ ಒಂದು ಗೋಪ್ಯ ಭಾಷೆ. ಗೋಪ್ಯ ಭಾಷೆ ಅಂದರೆ ಹೊರಗಿನವರಿಗೆ ಅವರು ಕೆಲವೊಮ್ಮೆ ಆಸ್ತಿಕರಂತೆ ಇಲ್ಲವೇ ನಾಸ್ತಿಕರಂತೆ ಕಾಣಿಸುತ್ತಾರೆ. ಆದರೆ ಅವರೊಳಗೊಂದು ಹೊರಗಿನವರಿಗೆ ತಿಳಿಯದಂತಹ ಜೀವಂತ ಮಾರ್ಗವಿರುತ್ತದೆ, ಎಚ್ಚರವಿರುತ್ತದೆ. ಆ ಎಚ್ಚರದಲ್ಲಿ ಬಹುಮುಖ್ಯವಾಗಿ ಅವರು ನಾಸ್ತಿಕರಾಗಲಿ, ಆಸ್ತಿಕರಾಗಲಿ ಆಗಿರುವುದಿಲ್ಲ. ಅವರು ಮಧ್ಯಮಮಾರ್ಗಿಗಳಾಗಿರುತ್ತಾರೆ. ಅದನ್ನು ಬಯಲ ಮಾರ್ಗವೆಂದು ಗುರುತಿಸಿಕೊಳ್ಳುತ್ತಾರೆ. ಬಯಲ ಮಾರ್ಗಿಗಳು ಸದಾ ವಾಸ್ತವತೆಯ ಬೆಳಕಿನಲ್ಲಿ ಜೀವಿಸುವಂತವರು. ಶರಣರಿಗಾಗಲಿ, ತತ್ವಪದಕಾರರಿಗಾಗಲಿ ನಾಸ್ತಿಕ ಮತ್ತು ಆಸ್ತಿಕ ಎಂಬೆರೆಡು ತುದಿಗಳು ‘ಅಹಂ’ ಕಾರಣವೇ ಆಗಿರುತ್ತವೆ. ಎರಡೂ ತುದಿಗಳನ್ನು ನಿರಾಕರಿಸುವ ಪರಮ ಪದ ಬಯಲಾಗಿದೆ. ಬಯಲು ಒಂದು ಪರಮ ಪದ. ಪ್ರಶ್ನಿಸದೇ ಮತ್ತು ತರ್ಕಿಸದೆ ಅದು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಶರಣರ ವಚನಗಳನ್ನು ಮತ್ತು ತತ್ವಪದಗಳನ್ನು ಪ್ರಶ್ನಿಸುವ ಮತ್ತು ತರ್ಕಕ್ಕೀಡಾಗಿಸುವ ವಿವೇಕದ ನುಡಿಗಳನ್ನಾಗಿ ನಾವು ಸ್ವೀಕರಿಸಬೇಕಾಗಿದೆ. ಯಾವೊಬ್ಬ ಆಸ್ತಿಕನಿಗಾಗಲಿ, ನಾಸ್ತಿಕನಿಗಾಗಲಿ ಇವು ದಕ್ಕದೇ ಇರುವುದಕ್ಕೆ ಇದೇ ಮುಖ್ಯ ಕಾರಣ.

ಬಹುಮುಖ್ಯವಾಗಿ, ವೈದಿಕ ಮತ್ತು ಅವೈದಿಕ ಪಂಥಗಳ ನಡುವಿನ ಸಂಘರ್ಷಕ್ಕೆ ಇರುವ ಬಹಳ ದೊಡ್ಡ ಕಾರಣವೆಂದರೆ, ವೈದಿಕರು ಸಾಮಾನ್ಯ ಮನುಷ್ಯರಲ್ಲಿ ಧಾರ್ಮಿಕ ಶಠತ್ವವನ್ನ ತುಂಬಿಸಿ, ಅದನ್ನು ನಂಬಿಕೊಳ್ಳುವ ಭಾವನಾಜೀವಿಯನ್ನಾಗಿ ಮಾರ್ಪಡಿಸುತ್ತಾರೆ. ಅವೈದಿಕ ಪಂಥಗಳು ಈ ಭಾವೋದ್ರೇಕಿತ ಮನಸ್ತತ್ವವೇ ಮನುಷ್ಯನ ಬಹುಪಾಲು ಅಹಂಕಾರಕ್ಕೆ ಕಾರಣವೆಂದು ತಿಳಿದು, ಆ ಭಾವನೆ ಮತ್ತು ಅನುಚಿತವಾದ ನಂಬಿಕೆಗಳ ಮೇಲೆ ನಿಂತಿರುವ ಅಹಂಕಾರವನ್ನು ತೆಗೆದುಹಾಕಿ, ಇಡೀ ಮಾನವಕೋಟಿ ಸಾಮರಸ್ಯದಿಂದ ಬದುಕಬೇಕೆಂದು ಬಯಸುತ್ತವೆ.

ಈ ಒಂದು ಹಿನ್ನೆಲೆಯಲ್ಲಿ ನಾವು ಅನೇಕ ತತ್ವಪದಗಳನ್ನು ಮತ್ತು ವಚನಗಳನ್ನು ತೆಗೆದುಕೊಳ್ಳಬಹುದು. ಕೋಲಾರ ಜಿಲ್ಲೆಯ ಭಾಗದಲ್ಲಿ ಇರುವಂತಹ ‘ಯಾಲಪದ’ ಎಂಬ ತತ್ವಪದದ ದಾಟಿ ಬಹಳ ಪ್ರಸಿದ್ಧವಾದುದು. ಗುರು ಮತ್ತು ಶಿಷ್ಯರ ಮಧ್ಯೆ ಪ್ರಶ್ನಿಸುವ ಮತ್ತು ಚರ್ಚಿಸುವ ಅತ್ಯಂತ ದೀರ್ಘವಾದ ಯಾಲಪದಗಳು ಇಂದಿಗೂ ಸಿಗುತ್ತವೆ. ಯಾಲಪದದಲ್ಲಿರುವ ಪರಿಭಾಷೆ, ಗುರುಮಾರ್ಗದ ಹೊರಗಿನವರಿಗೆ ಅವರವರು ಊಹಿಸಿದಂತೆ ಕಂಡರೆ, ಗುರುಮಾರ್ಗದಲ್ಲಿರುವವರಿಗೆ ಅವರ ಗೋಪ್ಯ ಭಾಷೆ ಬಹಳ ಸ್ಪಷ್ಟವಾಗಿ ವೇದ್ಯವಾಗುತ್ತದೆ. ಸದಾ ದೇಶ, ಕಾಲ, ಭಾಷೆಗಳಿಗೂ ಅತೀತವಾಗಿ ನಮ್ಮನ್ನು ಆವರಿಸಿಕೊಂಡಿರುವ ಧಾರ್ಮಿಕ ರಾಜಕಾರಣವನ್ನು ಹತ್ತಿಕ್ಕಲು ಈ ಮಣ್ಣಿನ ಅವೈದಿಕ ಧಾರೆಗಳು ಕಾಪಿಟ್ಟುಕೊಂಡ ಪರ್ಯಾಯ ಸಾಂಸ್ಕೃತಿಕ ರಾಜಕಾರಣ ಪರಿಭಾಷೆಗಳೆಂದು ಇವನ್ನು ತಿಳಿದಾಗ ಖಂಡಿತ ನಮಗೆ ರೋಮಾಂಚನವಾಗುತ್ತದೆ. ವಚನಗಳು ಅಥವಾ ತತ್ವಪದಗಳೇ ಆಗಿರಲಿ, ನಮ್ಮ ಕಣ್ಣ ಮುಂದಿರುವ ಪರ್ಯಾಯ ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಗಳಾಗಿವೆ ಎಂಬುದನ್ನು ನಾವು ಇನ್ನಾದರೂ ಅರ್ಥೈಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಾಮರಸ್ಯ ಜೀವನ, ಮಾನವತಾವಾದ ಮತ್ತು ಸಮಾನತೆಯನ್ನು ಆಸೆಪಡುವವರು ಪ್ರತಿ ಕಾಲಕ್ಕೂ ತಮ್ಮದೇ ಆದ ಒಂದು ಪರ್ಯಾಯ ಸಾಂಸ್ಕೃತಿಕ ಪರಿಭಾಷೆಯನ್ನು ಕಟ್ಟಿಕೊಳ್ಳದೇ ಹೋದಲ್ಲಿ ಮಾನವತಾವಾದವು ಒಂದು ಹತಾಶೆಯ ಭಾಷೆಯಾಗುತ್ತದೆ ಎಂಬುದನ್ನು ನಾವು ಎಚ್ಚರದಿಂದ ಕಾಯ್ದುಕೊಳ್ಳಬೇಕಾಗಿದೆ.

ಯಾಲಪದ ಬಯಲು ಸೀಮೆಯ ಮಣ್ಣಿನ ಬಹು ಆಕರ್ಷಿತ ಹಾಡಿನ ಮಟ್ಟು. ಬಯಲು ಸೀಮೆಯನ್ನು ಹೊರತುಪಡಿಸಿ ಕರ್ನಾಟಕದ ಯಾವ ಭಾಗದಲ್ಲಿಯೂ ಯಾಲಪದ ಮಾದರಿಯ ತತ್ವಪದಗಳು ಕಾಣಸಿಗುವುದಿಲ್ಲ. ಯಾಲಪದವು ಸಂದರ್ಭೋಚಿತ ವಿಷಯ ಪ್ರಸ್ತಾಪ ಕಥನವನ್ನು ಬಹು ವಿಸ್ತಾರವಾಗಿ ಅದರದೇ ಆದ ರಾಗ ರಂಜನೆಯಲ್ಲಿ ಅಭಿವ್ಯಕ್ತಿಸುತ್ತಾ ಸಾಗುತ್ತದೆ. ಪ್ರಸಂಗ ಮತ್ತು ರಾಗಗಳೆರಡೂ ಅಲ್ಲಿ ಸರಳವಾಗಿ ಮೇಳೈಸಿರುವುದರಿಂದ ಕೇಳುಗರ ಹೃದಯವನ್ನು ಮುಟ್ಟಿ ವಿಚಾರಕ್ಕೆ ಹಚ್ಚುತ್ತವೆ.

ಯಾಲಪದದ ಮೂಲ ಬಯಲಾಟದಲ್ಲಿ ಸಿಗುತ್ತದೆ. ಬಯಲಾಟಗಳು ಸಾಮಾನ್ಯವಾಗಿ ಆಯಾ ಸ್ಥಳೀಯ ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿರುತ್ತವೆ. ಬಯಲು ಸೀಮೆಯ ಬೈಲಾಟಗಳಲ್ಲಿ ‘ಸಾರಂಗಧರ’ ಕೇಳಿಕೆಯ ಮುಟ್ಟುಗಳಲ್ಲಿ ಯಾಲಪದ ಮಾದರಿಯ ಹಾಡುಗಳಿವೆ. ಸಂಪ್ರದಾಯಿಕ ಸಂಗೀತಕ್ಕಿಂತಲೂ ಇದರ ಹಾಡಿಕೆ ಭಿನ್ನವಾದದ್ದು ಮತ್ತು ಅಸಂಪ್ರದಾಯಕವಾದದ್ದು. ಈ ಮಾದರಿಯ ತತ್ವಪದಗಳು ಕೈವಾರ ನಾರೇಣಪ್ಪನವರ ಸಾಹಿತ್ಯದಲ್ಲೂ ಸಿಗುತ್ತದೆ. ಕನ್ನಡದ ತ್ರಿಪದಿಗಳಲ್ಲಿರುವ ಗರತಿ ಹಾಡುಗಳ ರಾಗಕ್ಕೆ ಯಾಲಪದ ಹಾಡು ತುಂಬಾ ಹತ್ತಿರವಾಗಿರುತ್ತದೆ.
ಕೋಲಾರಜಿಲ್ಲೆಯ ತಾವರೆಕೆರೆ ಎಂಬ ಹಳ್ಳಿಯಲ್ಲಿದ್ದ ಅಮನಸ್ಕಯೋಗಿಯಾಗಿದ್ದ ರಾಮಾವಧೂತರು ಮತ್ತು ಅವರ ಶಿಷ್ಯೆ ವೀರದಾಸಮ್ಮ ರಚಿಸಿದ 250ಕ್ಕಿಂತಲೂ ಹೆಚ್ಚು ತತ್ವಪದಗಳಿವೆ. ಕೋಲಾರದ ತೆಲುಗು ಮತ್ತು ಕನ್ನಡ ಭಾಷೆಯಲ್ಲಿರುವುದು ಈ ತತ್ವಪದಗಳ ವಿಶೇಷ. ತನ್ನವರೆಂದು ಹೇಳಿಕೊಳ್ಳಲು ಯಾರೂ ಇಲ್ಲದಾ ವೀರದಾಸಮ್ಮನವರಿಗೆ ರಾಮಾವಧೂತರ ಲೋಕ ತಲ್ಲಣಗಳಿಗೆ ಅಂಟಿಕೊಳ್ಳದಾ ಬದುಕಿನ ಮಾದರಿ ಅಂತಃಪ್ರೇರಣೆಯನ್ನು ಒದಗಿಸಿತ್ತು. ಅವರ ಮಾರ್ಗದರ್ಶನದಲ್ಲಿ ಯೋಗ ಸಾಧನೆ ಮತ್ತು ತತ್ವಪದ ಕಟ್ಟುವಿಕೆ ವೀರದಾಸಮ್ಮನವರಿಗೆ ಒಮ್ಮೆಗೆ ಒಲಿದಿತ್ತು. ತತ್ವಪದ ಕಟ್ಟಿ ಹಾಡುವುದೆಂದರೆ ಆಕೆಗೆ ತನ್ನ ಉಸಿರಿನಷ್ಟೇ ಸಹಜ ಸುಂದರಾ! ನುಡಿ ನಡೆಗಳು ಒಂದಾಗಿ ಸಂಗಮಿಸಿದ್ದ ಬೆಡಗದು.

ಗುರು ಶಿಷ್ಯೆಯರಿಬ್ಬರೂ ಒಟ್ಟಿಗೆ ಸೇರಿ ಪ್ರಶ್ನೋತ್ತರ ಮಾದರಿಯ ಯಾಲಪದಗಳನ್ನು ಕಟ್ಟಿರುವ ರೀತಿ ಅವರ ಒಳನೋಟದ ಯೋಗ ಮತ್ತು ತತ್ವಪದ ಸಂಸ್ಕೃತಿಗೆ ದೊಡ್ಡ ಕೊಡುಗೆ. ಗುರುವನ್ನು ಸ್ಮರಿಸಿ ವಿನಯದಿಂದ ಪ್ರಶ್ನೆ ಕೇಳುವುದರಿಂದ ಯಾಲಪದ ಪ್ರಾರಂಭವಾಗುತ್ತದೆ. ಈ ಹಾಡಿನಲ್ಲಿ ವೀರದಾಸಮ್ಮನವರ ಪ್ರಶ್ನೆಗಳಿಗೆ ರಾಮಾವಧೂತರು ಪ್ರತಿಸಾರಿಯು ವೇದ ವೇದಾಂತಿಕವಾದ ಯೌಗಿಕ ಉತ್ತರಗಳನ್ನು ನೀಡಿದರೆ ಅವು ತನಗೆ ಬೇಡವೆಂದು ತಿರಸ್ಕರಿಸಿ, ನಿಸರ್ಗ ತತ್ವ ನೆಲೆಯಲ್ಲಿನ ಅನುಭವದ ಯೋಗದಲ್ಲಿ ಉತ್ತರಿಸಬೇಕೆಂದು ಒತ್ತಾಯಿಸುವುದು ಅವರ ಯಾಲಪದಗಳ ವಿಶಿಷ್ಟತೆಯಾಗಿದೆ. ರಾಮಾವಧೂತರು ವೀರದಾಸಮ್ಮ ದಾರಿತಪ್ಪಿ ಹೋಗಿದ್ದಾಳೆಯೇ ಎಂದು ಪರೀಕ್ಷಿಸುವ ಮಾದರಿಯಾಗಿಯೂ ಈ ತತ್ವಪದದ ಪ್ರಶ್ನೋತ್ತರಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.

ಒಂದೇ ಹಾಡನ್ನು ಇಬ್ಬರೂ ಕೂಡಿ ಕಟ್ಟಿರುವ ಈ ಯಾಲಪದವು ನಿಸರ್ಗ ತತ್ವದ ಅನುಭೂತಿಯನ್ನು ನಮ್ಮ ಮುಂದಿಡುತ್ತದೆ. ಇಬ್ಬರಲ್ಲೂ ಇರುವ ಸಹಜಯೋಗ ಸಮನ್ವಯಕ್ಕೆ ಈ ಹಾಡು ಬಹಳ ದೊಡ್ಡ ಉದಾಹರಣೆಯಾಗಿದೆ. ಆದ್ದರಿಂದ ಇಲ್ಲಿ ಪ್ರಸ್ತುತವೆನಿಸಿದೆ. ಈ ಹಾಡಿನಲ್ಲಿರುವ ಪಾರಿಭಾಷಿಕ ಶಬ್ದಗಳ ಇಕ್ಕಟ್ಟು ಕೂಡ ಇಲ್ಲಿ ಗಮನಾರ್ಹವಾದದ್ದು. ಆದ್ದರಿಂದ ಇಲ್ಲಿ ಸ್ವಲ್ಪ ಸರಳ ವಿವರಣೆಯೂ ಬೇಕಾಗಬಹುದು. ನಾನು ಗುರು ಪರಂಪರೆಯ ಸಾಧಕರಲ್ಲಿ ಒಡನಾಡಿ ತಿಳಿದುಕೊಂಡಿರುವ ಅನುಭವದ ಮಟ್ಟಿಗೆ ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ, ತಪ್ಪಿದ್ದರೆ ಕ್ಷಮೆ ಇರಲಿ.

ವೀರದಾಸಮ್ಮ :
ಶ್ರೀ ಗುರುವನು ಸೇರೋ ಮಾರ್ಗ
ಚೂಟಿಯಾಗಿ ಬೋಧಿಸೇ ಸಹಜ |
ಯೋಗಿಗಳಿಗೆ ವಂದಿಸಿ ಬೇಡುವೇ
ಓ ರಾಮಯೋಗಿ…
ರಾಗ ರಚನೆಗಳಡಗುವ ಯೋಗ ಅರುಹಯ್ಯಾ || 1 ||
[ಸಹಜಯೋಗಿಗಳಾದ ತಮಗೆ ವಂದಿಸಿ ಪ್ರಾರ್ಥಿಸುತ್ತೇನೆ. ಗುರುವನ್ನು ಸೇರುವ ಮಾರ್ಗ ತೋರಿಸಿ, ಓ ರಾಮಯೋಗಿಯೇ ಭ್ರಾಂತಿಯಿಂದ (ವ್ಯಾಮೋಹ ಮತ್ತು ಆಸೆಯಿಂದ) ಸೃಷ್ಟಿಸಲ್ಪಟ್ಟ ಮನುಷ್ಯ ಸಂರಚನೆಗಳು ಇಲ್ಲವಾಗುವ ಯೋಗ ತಿಳಿಸಯ್ಯ]

ರಾಮಾವಧೂತ :
ಹೇಳೇ ಸಖಿಯೇ ನಿನಗೂ ಬೇರೆ |
ಭೂಮಿಯಲ್ಲಿ ಎಲ್ಲಿ ನಿಮ್ಮೂರು
ಭಾಮೆ ನಿನಕಂಡ ಘನನಾರಾತನೂ |
ಓ ಕೋಮಲಾಂಗಿ….
ಯಾವ ಕಾರ್ಯದಿ ಇಲ್ಲಿ ಬಂದಿಹೆಯೋ || 2 ||
[ಗುರುಗಳು ವೀರದಾಸಮ್ಮ ಯಾವ ಭ್ರಾಂತಿಗಳಿಗಾದರೂ ಅಂಟಿಕೊಂಡಿದ್ದಾಳಾ? ಎಂದು ಪರೀಕ್ಷಿಸುತ್ತಿದ್ದಾರೆ. ಕುಟುಂಬ ಅನ್ನೋ ನಿರ್ಮಾಣಕ್ಕೆ…. ಜಾತಿ, ಕುಲ, ಅಪ್ಪ, ಅಮ್ಮ ಅನ್ನೋ ಭ್ರಾಂತಿಗಳು ಅಂಟಿಕೊಂಡಿರುವಂತೆ, ಈ ಊರು ಅನ್ನೋ ನಿರ್ಮಾಣವು ಜಾತಿಗೆ ಹೊರತಾಗಿರುವುದಿಲ್ಲ. ಈ ಎಲ್ಲಾ ನಿರ್ಮಾಣಗಳನ್ನು ದಾಟಿಕೊಂಡಿದ್ದೀಯಾ? ಎಂದು ಮಾರ್ಮಿಕವಾಗಿ ಕೇಳುತ್ತಿದ್ದಾರೆ.]

ವೀರದಾಸಮ್ಮ :
ತಂದೆ ತಾಯಿಗಳೆಷ್ಟೋ ಮಂದಿ |
ಹೇಳಲಾದೀತೇ ಊರ ಹೆಸರು
ಸುಳ್ಳು ಲೋಕಗಳಲ್ಲಿ ಬಿದ್ದು ಬಂದೇನೋ |
ಓ ರಾಮಯೋಗಿ….
ಮರಳಿ ಬಾರದ ಯೋಗವಾವುದು || 3 ||
[ಹಸಿವಾದಾಗ ಊಟ ಕೊಟ್ಟವರು, ನಿದ್ದೆ ಬಂದಾಗ ಆಶ್ರಯ ಕೊಟ್ಟವರು ಹೀಗೆ ಹೇಳುತ್ತಾ ಹೋದರೆ ತಂದೆ ತಾಯಿಗಳಿಗೆ ಲೆಕ್ಕವಿಲ್ಲ. ಈ ಭುವಿಯ ಮೇಲೆ ಯಾವುದು ನನ್ನೂರು ಅಂತ ಹೇಳಲಿ? ಯಾವುದೂ ಶಾಶ್ವತವಲ್ಲವಲ್ಲ! ನನ್ನ ಮನದಾಳದಲ್ಲಿರುವ ಅದೆಷ್ಟೋ ಪರಿತಾಪದ ಸುಳ್ಳುಲೋಕಗಳ ಹಾದಿ ಬೀದಿಯಲ್ಲಿ ಬೆಂದು ಬಂದೆ, ಮತ್ತೆ ನನಗಿದು ಬೇಡ ಇವುಗಳಲ್ಲಿ ಪುನರ್ಭವಿಸದಾ ಯೋಗ ತಿಳಿಸಯ್ಯ]

ರಾಮಾವಧೂತ :
ಆತ್ಮ ರಾಮನ ಹೊಂದೂತ ಕೋರಿ |
ಆನಂದ ನಾದಾದಿ ಕೂಡಿಬಿಡದೆ |
ಸೇರೇ ಮಂತ್ರ ಯೋಗಾದಿ |
ಓ ಮಾನಿನಿ ಕೇಳೆ….
ಕಾಣಬಹುದು ಕಣ್ಮಲಿ ಬ್ರಹ್ಮವಾ || 4 ||
[ಗುರು ತನ್ನ ಶಿಷ್ಯಳನ್ನು ಯೋಗ ಮತ್ತು ದೈವಾದಿಗಳ ಭ್ರಾಂತಿಯೇನಾದರೂ ಇದ್ದೀತೆ? ಎಂದು ಪರೀಕ್ಷಿಸುತ್ತಿದ್ದಾರೆ. ಮಂತ್ರ ಲಯ ಹಠಯೋಗದಾ ಭ್ರಾಂತಿಯೇನಾದರೂ ಇದ್ದೀತೆ? ಅನಂತ ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನನ್ನು ಕಾಣುವ ಭ್ರಮೆಯೇನಾದರೂ ಇರಬಹುದೇ? ಅಂತ ಹೇಳಿ ಮಂತ್ರಯೋಗದೆಡೆಗೆ ಆಶೆ ತೋರುತ್ತಿದ್ದಾರೆ.]

ವೀರದಾಸಮ್ಮ :
ಮನವ ನಿಲಿಸುವ ಮಾರ್ಗವದೆಂತೂ |
ಮದವಣಿಗಿಸುವಾ ಮರ್ಮವು ಏನೋ|
ಕನಿಕರದಿ ನನಗೆ ಪೇಳಯ್ಯ |
ಓ ರಾಮಯೋಗಿ….
ತನುವು ನಿನ್ನದೆಂತೂ ಬಗೆದೇನೂ ||5||
[ಬ್ರಹ್ಮವೂ ಮನವೇ; ಮಂತ್ರವೂ ಮನವೇ; ಯೋಗವೂ ಮನವೇ; ಮನದ ಸಂಚಯದ ಸಹ್ಯಬೇಕಿಲ್ಲ. ಆದ್ದರಿಂದ ನನ್ನಲ್ಲಿರುವ ಅಹಂಕಾರವನ್ನು ಒಣಗಿಸುವ, ಅಜ್ಞಾನ ಅಳಿಯುವ ಯೋಗವನ್ನು ಕನಿಕರದಿಂದ ತಿಳಿಸಯ್ಯಾ]

ರಾಮಾವದೂತ :
ಪಂಚಶಿಖೆಗಳ ಬೆಟ್ಟಾವ ತಲುಪಿ |
ಪಂಚಮೂರ್ತಿಯ ಪದವೀಯ ದಾಟಿ |
ಪಂಚಶಕ್ತಿಗಳ ಹಿಡಿದೂ ನುಂಗೇಲೆ
ಓ ಪಂಚಾಕ್ಷರಿ….
ಮಿಂಚಿದಂತಾ ಮೋಕ್ಷ ದೊರಕೀತೆ || 6 ||
[ಗುರುಪರಂಪರೆಯ ರಹಸ್ಯ ತಂತ್ರಗಳಲ್ಲಿ ಪಂಚಾಕ್ಷರಿ ಸಾಧನೆ ಬಹುಮುಖ್ಯವಾದುದು. ಪಂಚಾಕ್ಷರಿ ಎಂದರೆ ಐದು ಬಗೆಯ ಮನೋ ಚಂಚಲತೆಗಳ ಹೆಗ್ಗುರುತು. ಪಂಚಾಕ್ಷರಿಯನ್ನು ಸಾಧಕರು ಹಂಸಪದಾರ್ಥ, ಸಕ್ಕರೆ ಗೊಂಬೆ, ಮಾಯೆ ಎಂತಲೂ ಬಗೆಬಗೆಯಾಗಿ ಗುರ್ತಿಸುತ್ತಾರೆ. ಪಂಚಾಕ್ಷರಿ ಐದು ಬಗೆಯ ಚಿತ್ತಗಳನ್ನು ಪ್ರತಿನಿಧಿಸುತ್ತದೆ. 1. ಹಿಂದೆ ತಾನು ಅನುಭವಿಸಿದ ನೆನಪಿನ ಚಿತ್ತ; 2. ದ್ರೋಹಕ್ಕೆ ದ್ರೋಹ; ದ್ವೇಷಕ್ಕೆ ದ್ವೇಷ ಬಗೆಯುವ ಚಿತ್ತ; 3. ಮನೋವ್ಯಾಪಾರಗಳಲ್ಲಿ ಕಾಲ ಕಳೆಯುವ ಚಿತ್ತ; 4. ತೀವ್ರವಾದ ಸುಖಕ್ಕೆ ಅಂಟಿಕೊಳ್ಳುವುದು; 5. ಮೇಲಿನ ನಾಲ್ಕು ಚಿತ್ತಗಳ ಪ್ರಭಾವಕ್ಕೆ ಸಿಲುಕಿ ನಿತ್ಯಾನಿತ್ಯ ವಿವೇಕವನ್ನು ಕಳೆದುಕೊಂಡ ಚಿತ್ತ. ರಾಮವದೂತರು ಇಲ್ಲಿ ಈ ಐದು ಚಿತ್ತಗಳನ್ನು ಪಂಚಶಿಖೆಗಳ ಬೆಟ್ಟ ಎಂದು ಹೇಳಿ ಈ ಐದು ಚಿತ್ತಗಳನ್ನು ನುಂಗಬೇಕು ಎಂದು ಹೇಳಿದ್ದಾರೆ.]

ವೀರದಾಸಮ್ಮ :
ತನುವು ಮನವು ಧನವೂ ನಿನಗೆ |
ವಿನಯದಿಂದ ಬಿಟ್ಟು ಬಂದೆ |
ಹುಟ್ಟದಂತ ಮೋಕ್ಷ ನೀಡಯ್ಯಾ |
ಓ ರಾಮಯೋಗಿ….
ವಿನುತಿಗೈಯ್ವೆ ವಿನಯ ತಿಳಿಸಯ್ಯ ||7||
[ಸರ್ವವೂ ನಿನ್ನ ಪಾದಗಳಿಗೆ ಸಮರ್ಪಿಸಿ ಬಂದೆ, ಮರಳಿ ಹುಟ್ಟದೆ ಅಂದರೆ ಜನನ ಮರಣ ಚಕ್ರದ ಚಲನೆಯಲ್ಲಿಲ್ಲದಾ ಬಿಡುಗಡೆಯನ್ನು ಹೇಳಯ್ಯಾ]

ರಾಮವಧೂತ :
ನಾದ ಬಿಂದು ಕಳೆಗಳ ಹೊಂದು |
ವೇದಾಂತ ಶಾಸ್ತ್ರಗಳನೂ ಹೊಂದು ಎಂದು |
ಸಾದುವರ್ಯರು ಹೇಳುತ್ತಿರುವಾರೆ |
ಓ ಬೋಧಾ ಗಮನೆ….
ಭೇದ ಬಿಟ್ಟು ಅದನು ಕೂಡಿಕೋ ಬಾರದೆ ||8||
[ಇಲ್ಲಿಯೂ ಮತ್ತೊಮ್ಮೆ ವೇದಾಂತ ಶಾಸ್ತ್ರಗಳು ಹೇಳುವ ತರ್ಕಶಾಸ್ತ್ರದಿಂದ ಬ್ರಹ್ಮಾನುಭವವಾಗುವ ಯೋಗದಾ ಬಗ್ಗೆ ವೀರದಾಸಮ್ಮನಿಗೆ ವ್ಯಾಮೋಹವೇನಾದರೂ ಇದೆಯಾ ಎಂದು ಪರೀಕ್ಷಿಸುತ್ತಿದ್ದಾರೆ.]

ವೀರದಾಸಮ್ಮ :
ನಾದ ಬಿಂದು ಕಳೆಗಳು ಮೂರು |
ಯೋನಿಗಾಧಾರ ಸ್ಥಾನವಾಯ್ತು
ಭೇದ ಬಿಟ್ಟು ನನಗೆ ತಿಳಿಸಯ್ಯಾ |
ಓ ಅಮಲಯೋಗಿ….
ಅಮಲನಾದದಿ ನನ್ನ ಕೂರಿಸಯ್ಯಾ ||9||
[ನಾದ ಬಿಂದು ಕಳೆ ಇವು ವೇದಾಂತದ ಪರಿಭಾಷೆಗಳು. ಈ ಮೂರನ್ನು ಕೂಡಿ ಅಕ್ಷರ ಪರಬ್ರಹ್ಮ ಎಂದು ಹೇಳಲಾಗುತ್ತದೆ. ನಾದ ಎಂದರೆ ಮಾತು ಅಥವಾ ಶಬ್ದ; ಬಿಂದು ಎಂದರೆ ಮನೋದೃಷ್ಠಿ; ಮಾತು ಮತ್ತು ಮನೋದೃಷ್ಠಿಯ ಸಂಬಂಧದಿಂದ ಉಂಟಾಗುವ ವಿಷಯ ರಸವು ಕಳೆ ಎನಿಸಿಕೊಳ್ಳುತ್ತದೆ. ಇದನ್ನೇ ವೇದಾಂತವು ಶಾಶ್ವತ ಬ್ರಹ್ಮವೆನ್ನುತ್ತದೆ. ಬ್ರಹ್ಮವು ಮಾತು ಮತ್ತು ದೃಷ್ಟಿಗಳು ಸಂಗಮಿಸಿ ಕಲ್ಪಿತ ಸಂಬಂಧದಿಂದ ಉಂಟಾದ ಆಕರ್ಷಣೀಯ ವಿಷಯ ರಸವಾಯಿತು. ವಿಷಯ ರಸ ಹುಟ್ಟೇ ಅಲ್ಲವೇ? ಆದ್ದರಿಂದ ನಾದ ಬಿಂದು ಕಳೆಗಳ ಸಂಬಂಧ ಹುಟ್ಟನ್ನೂ, ಭವವನ್ನೂ, ವಿಷಯವನ್ನೂ ಸೂಚಿಸುತ್ತದೆಯಾದ್ದರಿಂದ ನಮ್ಮಿಬ್ಬರಲ್ಲೂ ಯಾವುದೇ ಭೇದವೆಣಿಸದೇ ವಿಷಯ ರಹಿತವಾದ ಅಮಲನಾದದೊಳಗೆ ನನ್ನನ್ನು ಕೂಡಿಸಯ್ಯ]

ರಾಮವಧೂತ :
ಶಕ್ತಿ ಚೇತನ ಜಗದ ಬೆರಗು|
ಶಕ್ತಿಯಿಂದಲೇ ಜಗವು ಅಣಗುವುದು |
ಓ ಮುಕ್ತಿ ಪ್ರಿಯಾಮಣಿ |
ಶಕ್ತಿ ಕಂಡಾ ಆತನೇ ಮುಕ್ತನು || 10 ||
[ಶಕ್ತಿ ಚೈತನ್ಯವೊಂದೇ ಈ ಪದಾರ್ಥ ಜಗತ್ತಿನ ಬೆರಗು. ಅದೇ ಶಕ್ತಿಯಿಂದ ಜಗದ ಹುಟ್ಟನ್ನು ನೀಗಿಸಿಕೊಳ್ಳಬಹುದು. ಓ ಮುಕ್ತಿ ಪ್ರಿಯಾಮಣಿ, ಶಕ್ತಿಯ ಲೀಲೆಯನ್ನು ತಿಳಿದರೆ ಅವನೇ ಮುಕ್ತನು]

ವೀರದಾಸಮ್ಮ :
ಶಕ್ತಿಯನ್ನೊಳು ಯಾರು ಅರುಹಿ|
ಮುಕ್ತಿನಾರೋ ಯುಕ್ತಿ ಪೇಳಿ |
ಭಕ್ತಳನ್ನು ನೋಡಿ ಕರುಣಿಸೋ |
ಓ ರಾಮಯೋಗಿ
ಯುಕ್ತಿಯಿಲ್ಲದೇ ಮುಕ್ತಿ ಇಲ್ಲಾವೋ || 11 ||
[ನನ್ನಲ್ಲಿ ತುಂಬಿರುವ ಶಕ್ತಿ ಯಾರು? ಮುಕ್ತಿ ಯಾರಿಗೋ ಎನ್ನುವ ಉಪಾಯವನ್ನಾದರೂ ಹೇಳಿ ಭಕ್ತಳನ್ನು ಕನಿಕರಿಸಯ್ಯ! ಉಪಾಯವಿಲ್ಲದೆ ಬಿಡುಗಡೆ ಸಾಧ್ಯವಿಲ್ಲ]

ರಾಮಾವಧೂತ :
ಮನಸೇ ಶಕ್ತಿ ಮನಸೇ
ಭಕ್ತಿ ಮನಸೇ ಯುಕ್ತಿ ಮನಸೇ ರಕ್ತಿ |
ಮನಸು ನಿಲಿಸುವಾತನೇ ಮುಕ್ತಾನು
ಓ ವಿನಯ ಕೇಳೆ….
ಮನಸನರಿವಾ ಅರಿವು ನೀನೇನೆ
[ಮನಸ್ಸಿಗಿಂತಲೂ ಶಕ್ತಿಯುತವಾದದ್ದು ಯಾವುದು ಇಲ್ಲ; ಅದೇ ಹುಟ್ಟುತ್ತದೆ, ಅದೇ ಹುಟ್ಟಿಸುತ್ತದೆ. ಬಂಧನವೂ ಅದರಿಂದಲೇ, ಬಿಡುಗಡೆಯೂ ಅದರಿಂದಲೇ; ಭಕ್ತಿ ಸಾಧ್ಯವಾಗುವುದು ಅದಕ್ಕೆ ಮಾತ್ರ; ಅಲ್ಲೇ ಉಪಾಯವೂ ಇದೆ. ಅಂತಹ ಮನಸ್ಸನ್ನು ಅರಿವಿನಿಂದ (ಪ್ರಜ್ಞೆ)ಯಿಂದ ನಿಲ್ಲಿಸಿದಾತನೇ ಮುಕ್ತನು. ಆ ಮನಸ್ಸಿನ ಲೀಲಾ ವಿಲಾಸ ವಿಕೃತಿಯನ್ನು ಅರಿಯುವ ಅರಿವು ನೀನೆ! ಆದ್ದರಿಂದ ದಾಟುವ ಉಪಾಯವೂ ನಿನ್ನ ಅರಿವಿನಿಂದಲೇ. ಆದ್ದರಿಂದ ಅರಿವು ನೀನೆ! ಬೇರೆ ಅಲ್ಲ.]

ವೀರದಾಸಮ್ಮ:
ಅರಿವೇ ನಾನಾಗಿ ಬೆಳಗೂತಲಿದ್ದೆ |
ಮರೆವು ಬಂದು ಅರಿವು
ಮರೆವುಗಳಾಚೆ ಏನಿಹುದೋ
ಓ ರಾಮಯೋಗಿ….
ಮರಳಿ ಬರದ ಪದವಿ ಹೇಳಯ್ಯ
[ಅರಿವು ಅರಿತಷ್ಟು ಸಮಯ ಇರುತ್ತೆ ವಿಷಯಾಂತರವಾದಾಗ ಮರೆವು ಆವರಿಸುತ್ತೆ. ಇವೆರಡರ ಆಚೆ ಏನಿಹುದು?]

ರಾಮಾವಧೂತ :
ಕೇಳೆ ಸುಗುಣಾಮಣಿ ನಿನ್ನ ಬುದ್ಧಿ
ಬಹು ವಿಧದಿ ಪೇಳ್ದರೂ ಬರದು
ನಿಂತು ಬೆಳಗುವ ಅರಿವು ನೀನೇನೆ
ಓ ಲಲನಾ ಕೇಳೆ….
ಅರಿವಿಗಾಚೆ ತಿಳಿಯೋದೇನಿಲ್ಲ
[ನಿನಗೆ ಎಷ್ಟು ಹೇಳಿದರೂ ಪ್ರಜ್ಞೆ ಬರದು, ಬಹಿರಂತರ್ಗತವಾಗಿ ಅಖಂಡ ವಿಶ್ವದಲ್ಲಿ ಬೆಳಗುತಿರುವ ಅರಿವು ನೀನೆ; ಇದು ಗೊತ್ತಾದರೆ ಸಕಲ ಲೋಕವೆಲ್ಲ ನೀನಾಗಿ ತೋರುವೆ. ಅಂತಹ ಅರಿವಿನಿಂದಾಚೆ ತಿಳಿದುಕೊಳ್ಳೋದೇನಿಲ್ಲ.]

ರಾಮಾವಧೂತ :
ರಾಮಬಯಲಿಗ ರಾಮಾವಧೂತನ |
ಬಯಲ ಸಂದಾನುಭವ ಸಂವಾದ |
ಭುವಿಯೊಳು ನರರು ಬಜಿಸಿರಲು |
ಓ ಬಾಮೆ ಕೇಳೆ….
ಕ್ಷೇಮವಾದ ಬಯಲೇ ಆಗುವುದು.
ನಾನು ನೀನು ನೀನೆ ನಾನು |
ತಾನೇ ತಾನಾಗಿ ಧ್ಯಾನವ ಕಂಡಾ
ಮಾನವತಿ ಇವಳು ಚನ್ನಾಗಿ ಬಲ್ಲಾಳು
ಓ ಮಾನಿನಿ ಕೇಳೈ….
ಬಯಲೊಳು ಎಲ್ಲವೂ ಬರಿದೇ ಆಗಿತ್ತು.

Previous post ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
Next post ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…

Related Posts

ಲಿಂಗಾಯತ ಧರ್ಮ ಸಂಸ್ಥಾಪಕರು
Share:
Articles

ಲಿಂಗಾಯತ ಧರ್ಮ ಸಂಸ್ಥಾಪಕರು

April 6, 2024 ಡಾ. ಎನ್.ಜಿ ಮಹಾದೇವಪ್ಪ
[ಸೂಚನೆ: ಕಂಸಗಳಲ್ಲಿರುವ ಸಂಖ್ಯೆಗಳಲ್ಲಿ ಮೊದಲನೆಯದು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದ ಸಂಖ್ಯೆಗೂ, ಎರಡನೆಯ ಸಂಖ್ಯೆ ಆ...
ಭಕ್ತನಾಗುವುದೆಂದರೆ…
Share:
Articles

ಭಕ್ತನಾಗುವುದೆಂದರೆ…

January 10, 2021 Boralingayya N
ರಿಚರ್ಡ್ ಫೈನ್ಮಾನ್ ತನ್ನ ‘ದಿ ವ್ಯಾಲ್ಯೂ ಆಫ್ ಸೈನ್ಸ’ ಎಂಬ ಲೇಖನದಲ್ಲಿ ಒಂದು ಒಳ್ಳೆಯ ಪದ್ಯವನ್ನು ಕೂಡ ಓದುಗರೊಡನೆ ಹಂಚಿಕೊಂಡಿದ್ದಾನೆ. ಕಡಲೆದುರಿಗೆ ನಿಂತವನ ಕಣ್ಣಿಗೆ...

Comments 14

  1. Pro. K.S.Mallesh, Mysuru
    Dec 14, 2024 Reply

    ನಮ್ಮ ತಂದೆ ಯಾಲಪದ ಎಂದರೆ ಹೀಗೆ ಹಾಡಬೇಕು ಎಂದು
    “ಶ್ರೀಗಿರಿ ಸುಕ್ಷೇತ್ರಕಿಂದು
    ಪೋಗಿ ಯಾತ್ರೆಯ ಮಾಡಿ ಬಂದೆ
    ಶ್ರೀ ಗಿರಿಯು ಶರೀರದೊಳಗುಂಟು
    ಓಂ ಶ್ರೀಗುರುಸಿದ್ಧ
    ಯೋಗಿಜನರಿಗೆ ಮರ್ಮವು ಬೇರುಂಟು”
    ಎಂದು ಹಾಡುತ್ತಿದ್ದುದು ನೆನಪಿಗೆ ಬಂತು. ಲೇಖನ ಓದಿದಾಗ
    ಅವರ ನೆನಪು ಬಂತು. ಲೇಖನ ಚಿಕ್ಕದಾದರೂ ಹೊಸ ವಿಚಾರಗಳನ್ನು ತಿಳಿಸಿದೆ. ಪದ್ಮಾಲಯ (ಹೆಸರನ್ನು ಹೇಳಲು ಎಷ್ಟು ಚಂದ ) ಅವರಿಗೂ ನಿಮಗೂ ವಂದನೆಗಳು.

  2. ಚನ್ನಬಸವ ಹುಕ್ಕೇರಿ
    Dec 18, 2024 Reply

    ಇತಿಹಾಸದ ಅಗೋಚರ ಪುಟಗಳ ರಹಸ್ಯಗಳು ಎಲ್ಲೆಲ್ಲಿ ಅಡಗಿ ಕುಳಿತಿರಬಹುದು! ರಾಮಾಯಣ, ಮಹಾಭಾರತಗಳು ಮಹಾಕಾವ್ಯಗಳೆಂದು ಇಡೀ ದೇಶವೇ ಭಕ್ತಿಯಿಂದ ನೋಡುತ್ತದೆ. ಬುದ್ಧನ ಮಾತುಗಳನ್ನು ಮೆಚ್ಚುಗೆ ಮತ್ತು ಆಶ್ಚರ್ಯದಿಂದ ನೋಡುವ ಜನರು ಆತ ದೇವರನ್ನು ಒಪ್ಪದ ಕಾರಣ, ಅವನ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಈ ಕಡೆ ಸುಲಭವಾಗಿ ಕಾಣುವ ವಚನಗಳನ್ನೂ ನಾವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆಯಾ ಎನ್ನುವ ಅನುಮಾನ ನನಗೆ ಪದ್ಮಾಲಯ ಶರಣರ ಲೇಖನಗಳನ್ನು ಓದುವಾಗಲೆಲ್ಲಾ ಕಾಡುತ್ತದೆ.

  3. Sureshkumar Bengaluru
    Dec 18, 2024 Reply

    Admiring the time and energy you put into your blog and detailed information you present. Excellent read!

  4. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Dec 23, 2024 Reply

    ಅತ್ಯಂತ ಸರಳವಾಗಿ ಪ್ರವೇಶ ಮಾಡಿಸಿ, ಅತ್ಯಂತ ಗಹನವಾದ ವಿಚಾರಗಳಿಗೆ ಒಳಗು ಮಾಡುವ ಮೋಡಿ ಪದ್ಮಾಲಯ ರವರದು.,ಅಲ್ಲಾ….

  5. ದಾನಮ್ಮಾ ಗೌರಿಬಿದನೂರು
    Dec 25, 2024 Reply

    ನಮ್ಮ ಚರಿತ್ರೆಯನ್ನು ನೆನಪಿಸುತ್ತಾ, ಜೀವನದ ಒಳಗನ್ನು ತೋರಿಸುವ ಮಹತ್ತರವಾದ ಲೇಖನ ಇದು. ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಸಿಕೊಟ್ಟ ಲೇಖಕರಿಗೆ ಅನಂತ ಶರಣುಗಳು.

  6. ಕೆ.ವಿ. ರಂಗಣ್ಣ
    Dec 25, 2024 Reply

    ಗುರು- ಶಿಷ್ಯೆಯರ ಜಂಟಿ ಹಾಡು ಸೇರಿಗೆ ಸವ್ವಾಸೇರು ಎನ್ನುವಂತಿದೆ… ರಾಗ ಹಾಕಿ ಹಾಡಲು ನಾನೂ ಪ್ರಯತ್ನಿಸಿ, ಯಶಸ್ವಿಯಾದೆ.🙂

  7. Mohankumar Hubli
    Jan 2, 2025 Reply

    ಬಯಲಾಟಗಳಲ್ಲಿ ಪ್ರಶ್ನೋತ್ತರ ಮಾದರಿಯ ಜಾನಪದ ಗೀತೆಗಳನ್ನು ಕೇಳಿದ್ದೇನೆ. ಅವುಗಳಲ್ಲಿ ನೀತಿಯ ಅಂಶಗಳಿರುತ್ತವೆ, ಆದರೆ ಹೀಗೆ ಗಂಭೀರವಾದ ಧಾರ್ಮಿಕ ವಿಚಾರಗಳಿರುವ ಸವಾಲು- ಜವಾಬು ಮಾದರಿಯ ಬಗೆಗೆ ಗೊತ್ತಿರಲಿಲ್ಲ. It’s really very interesting.

  8. ಕರಿಬಸವ ಗು. ಹಾವೇರಿ
    Jan 6, 2025 Reply

    ನಾಸ್ತಿಕರಿಗಾಗಲಿ, ಆಸ್ತಿಕರಿಗಾಗಲಿ ವಚನಗಳು ದಕ್ಕುವುದಿಲ್ಲ ಎನ್ನುವ ನಿಮ್ಮ ವಿಚಾರ ಓದಿ, ನನಗೆ ದಿಗಿಲಾಯಿತು. ಶರಣರು ದೇವರನ್ನು ಲಿಂಗ ರೂಪದಲ್ಲಿ ಪೂಜಿಸಿದ, ಪ್ರಾರ್ಥಿಸಿದ, ಧ್ಯಾನಿಸಿದ ಆಸ್ತಿಕರಲ್ಲವೇ?

  9. ಪರಮೇಶ್ವರ ಬಾಳೆಕಾಯಿ
    Jan 6, 2025 Reply

    ರಾಮಾವಧೂತರ ಮತ್ತು ವೀರದಾಸಮ್ಮನ ಜಂಟಿ ಗೀತೆಯಾದ ಈ ಯಾಲಪದ ಕನ್ನಡದಲ್ಲೇ ಇದ್ದರೂ, ಲೇಖಕರು ಪ್ರತಿ ಪ್ಯಾರಾ ಕೆಳಗೆ ಎರಡೆರಡು ಸಾಲಿನ ವ್ಯಾಖ್ಯಾನ ಬರೆಯದೇ ಇದ್ದಿದ್ದರೆ ಅದರ ಅಂತರಂಗ ಗೊತ್ತಾಗುತ್ತಿರಲಿಲ್ಲ. ಹೊಸ ಮಾಹಿತಿ ಒದಗಿಸಿದ ಲೇಖಕರಿಗೆ ಶರಣು👏🏾

  10. ಚಂದ್ರಶೇಖರ ಅಂಗಡಿ
    Jan 6, 2025 Reply

    ನಾಸ್ತಿಕರು ಕೂಡ ವಚನಗಳನ್ನು ಗೌರವಿಸುತ್ತಾರೆ. ಇನ್ನು ಲಿಂಗದೇವರನ್ನು ಎದೆಯ ಮೇಲೆ ಹೊತ್ತುಕೊಂಡೇ ಇರುವ ಲಿಂಗಾಯತರು ನೂರಕ್ಕೆ ನೂರರಷ್ಟು ಆಸ್ತಿಕರೇ ಎನ್ನುವುದು ನನ್ನ ಅಭಿಮತ. ಇಲ್ಲಿ ಲೇಖಕರಾದ ನಾಗರಾಜ್ ಅವರು ಶರಣರು ಮಧ್ಯಮ ಮಾರ್ಗಿಗಳು ಎಂದಿದ್ದಾರೆ. ಅದ್ಹೇಗೆ ಎಂಬುದು ನನ್ನ ಪ್ರಶ್ನೆ.

  11. ಸದಾನಂದ ಬೈಲೂರು
    Jan 8, 2025 Reply

    ತತ್ವಪದಕಾರರಲ್ಲಿ ಗುರು- ಶಿಷ್ಯೆಯರ ಇಂತಹ ಜೋಡಿ ನನಗೆ ಅತ್ಯಂತ ಆಶ್ಚರ್ಯ ಮೂಡಿಸಿತು. ಅವರಿಬ್ಬರು ಇಲ್ಲಿ ಜೊತೆಯಾಗಿ, ಉತ್ತರ-ಪ್ರತ್ಯುತ್ತರವಾಗಿ ಹೇಳುವ ಮಾತುಗಳಲ್ಲಿರುವ ಸ್ಪಷ್ಟತೆ, ಪ್ರಬುದ್ಧತೆ ನಿಜಕ್ಕೂ ಎಂತವರೂ ಅಚ್ಚರಿ ಪಡುವಂತಿದೆ. ಮುಕ್ತಳಾಗಲು ಹಾತೊರೆಯುವ ವೀರದಾಸಮ್ಮನವರ ಬಯಕೆಯ ತೀವ್ರತೆ ಅವರ ಪ್ರತಿ ಸಾಲಿನಲ್ಲೂ ಕಾಣುತ್ತದೆ. ಸುಂದರವಾದ, ಅರ್ಥಪೂರ್ಣ ಲೇಖನ ಒದಗಿಸಿದ ನನ್ನ ನೆಚ್ಚಿನ ಓದು ತಾಣ ಬಯಲುಗೆ ಮತ್ತು ಅನುಭಾವಿ ಬರಹಗಾರರಾದ ಪದ್ಮಾಲಯ ನಾಗರಾಜ್ ಅವರಿಗೆ ಶರಣು ಶರಣು🫡🫡

  12. ನಯನಾ ಗೌಡಪ್ಪ
    Jan 12, 2025 Reply

    ಅಕ್ಕಮಹಾದೇವಿ ಅಲ್ಲಮಪ್ರಭುವಿನ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಸಂದರ್ಭ ನೆನಪಿಗೆ ಬಂತು. ವೀರದಾಸಮ್ಮನಂತಹ ಶಿಷ್ಯಳನ್ನು ಪಡೆದ ರಾಮದಾಸ್ ಭಾಗ್ಯವಂತರೇ ಸರಿ🙏🙏🙏

  13. ಶಿವರುದ್ರ ಗವಳಗಿ
    Jan 12, 2025 Reply

    ನಾಲ್ಕು ಸಾಲಿನ ಹಾಡುಗಳಲ್ಲಿ ಹುದುಗಿದ ಆಧ್ಯಾತ್ಮಿಕ ಜ್ಞಾನ, ತಿಳಿವಳಿಕೆ ಆಶ್ಚರ್ಯಪಡುವಂತಿದೆ. ವೇದವೇದಾಂತಕ್ಕೆ ಚಾಟಿ ಏಟು ನೀಡುವ ಯಾಲಪದದ ಮರ್ಮ ಮತಿಗೆ ಅತೀತವಾಗಿದೆ.

  14. ಸತೀಶ್ ಕುಮಾರ್ ಜಂಬಗಿ
    Jan 12, 2025 Reply

    ನಾನು ಚಿಕ್ಕವನಾಗಿದ್ದಾಗ ನಮ್ಮ
    ಹಳ್ಳಿಗಳಲ್ಲಿ ಕೇಳುತ್ತಿದ್ದ ಭಜನೆಗಳು, ಕಂಸಾಳೆಗಳು, ತತ್ವಪದಗಳು, ದಾಸರ ಹಾಡುಗಳು, ವಚನಗಳು, ಗಮಕಗಳು ಈಗ ಮರೆಯಾಗಿ ಹೋಗಿವೆ. ಯಾಲಪದ ಗಾಯನ ಪ್ರಕಾರ ಇದೇ ಮೊದಲಿಗೆ ನಾನು ಕೇಳಿದ್ದು. ಇಂತಹ ಸಾಹಿತ್ಯ ಯಾವ ಪುಸ್ತಕದಲ್ಲಾದರೂ ಸಂಗ್ರಹವಾಗಿದ್ದರೆ ತಿಳಿಸುವಿರಾ. ಜಾನಪದ ಸಾಹಿತ್ಯದ ಆಸಕ್ತಿಯಿರುವ ನನಗೆ ಇದನ್ನು ಓದಬೇಕೆನಿಸಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಸನಾತನ ಧರ್ಮ
ಸನಾತನ ಧರ್ಮ
October 10, 2023
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
Copyright © 2025 Bayalu