Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೈಸೂರು ಜನಗಣತಿ (ಭಾಗ-3)
Share:
Articles May 10, 2023 Bayalu

ಮೈಸೂರು ಜನಗಣತಿ (ಭಾಗ-3)

(ಮೈಸೂರು ಜನಗಣತಿ ಇತಿಹಾಸ: 1901-1921ರ ನಡುವೆ ಲಿಂಗಾಯತರು)

ವಸಾಹತುಶಾಹಿ ಜನಗಣತಿ ಮತ್ತು ಲಿಂಗಾಯತರು ಎಂಬ ಲೇಖನ ಸರಣಿಯಲ್ಲಿ ಪ್ರಸ್ತುತ ಲೇಖನ ಮೂರನೆಯದು. ಹಿಂದಿನ ಲೇಖನಗಳಲ್ಲಿ 1881 ಹಾಗು 1891ರ ಜನಗಣತಿಯಲ್ಲಿ ಮೈಸೂರಿನ ಕೆಲವು ಲಿಂಗಾಯತ ವಿದ್ವಾಂಸರು ಲಿಂಗಾಯತರ ಸಾಮಾಜಿಕ ಹಾಗು ಧಾರ್ಮಿಕ ಗುರುತನ್ನು ಸ್ಥಾಪಿಸಲು ಹೇಗೆ ಹೆಣಗಾಡಿದರು ಎಂದು ಚರ್ಚಿಸಲಾಗಿದೆ. ಹೀಗೆ ಮಾಡುವಾಗ ಈ ಲಿಂಗಾಯತರು ತಮ್ಮೊಳಗಿನ ಬ್ರಾಹ್ಮಣ್ಯವನ್ನು ಪ್ರಚರಿಸಲು ಮಾಡಿದ ಸಾಹಸವನ್ನು ಈಗಾಗಲೇ ನೋಡಿದ್ದೇವೆ. ಇವರ ವ್ಯರ್ಥ ಸಾಹಸದಿಂದುಂಟಾದ ಪರಿಣಾಮವನ್ನು ಚರ್ಚಿಸುವುದೇ ಪ್ರಸ್ತುತ ಲೇಖನದ ಉದ್ದೇಶ.

1891ರ ಜನಗಣತಿಯ ಸಂದರ್ಭದಲ್ಲಿ ಉಂಟಾದ ಜನಗಣತಿಯ ವಿವಾದದ ಫಲಸ್ವರೂಪವಾಗಿ 1901 ರ ಜನಗಣತಿಯಲ್ಲಿ ಅದರ ಅಧಿಕಾರಿಯಾದ ಆನಂದ್ ರಾವ್ರವರಿಗೆ ಲಿಂಗಾಯತರ ಬಗ್ಗೆ ಯಾವ ಮಾಹಿತಿ, ವಿವರಣೆಗಳು ಸೇರ್ಪಡೆಯಾಗಬೇಕು ಮತ್ತು ಅವರನ್ನು ಯಾವ ಜಾತಿ ಯಾ ಧರ್ಮದ ಹೆಸರಿನಿಂದ ನಮೂದಿಸಬೇಕು ಎಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಯಿತು. ಇದರ ಸಲುವಾಗಿ ಇಬ್ಬರು ನುರಿತ ಮತ್ತು ಅನುಭವಿ ಲಿಂಗಾಯತ ವಿದ್ವಾಂಸರನ್ನು ಸಂಪರ್ಕಿಸಬೇಕೆಂದು ಅವರಿಗೆ ಸಲಹೆ ನೀಡಲಾಯಿತು. ಬಾಂಬೆ ಪ್ರಾಂತ್ಯದ ಲಿಂಗಾಯತರ ಯಾದಿಯನ್ನು ಸಿದ್ಧಪಡಿಸಲೂ ಕೆಲವು ಲಿಂಗಾಯತ ವಿದ್ವಾಂಸರನ್ನು (ವಾರದ ಮಲ್ಲಪ್ಪ, ಚೆನ್ನಮಲ್ಲಪ್ಪ ಟೆಂಗಿನಕಾಯಿ ಮತ್ತು ಯಜಮಾನ್ ವೀರಸಂಗಪ್ಪ) ನೇಮಿಸಿಕೊಂಡಿದ್ದ ಬಗ್ಗೆ ಎಂ.ಚಿದಾನಂದಮೂರ್ತಿಯವರು ಬರೆದಿದ್ದಾರೆ. ಲಿಂಗಾಯತರ ಜನಗಣತಿಯ ವಿಷಯ ಎಷ್ಟೊಂದು ಗಂಭೀರ ಸ್ವರೂಪ ಪಡೆಯಿತೆಂದರೆ ಇದರ ಬಗ್ಗೆ ಅನೇಕ ವಾರ್ತಾ ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿದವು. ಉದಾಹರಣೆಗೆ ದಿ ಮದ್ರಾಸ್ ಮೇಲ್ ಎಂಬ ಆಂಗ್ಲ ಭಾಷೆಯ ಪತ್ರಿಕೆಯಲ್ಲಿ (ಜುಲೈ, 28, 1903) ಮೈಸೂರು ಜನಗಣತಿಯ ವಿವಾದದ ಬಗ್ಗೆ ವರದಿ ಮಾಡಲಾಯಿತು.

1901ರ ಜನಗಣತಿ ವರದಿಯನ್ನು ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ. ‘ಶೂದ್ರ’ ಹಣೆಪಟ್ಟಿಯ ಜೊತೆಗೆ ಮತ್ತೊಂದು ವಿಷಯ ಲಿಂಗಾಯತರನ್ನು ವಿಚಲಿತಗೊಳಿಸಿತು. ಇದು ಮತಸ್ಥಾಪಕರು ಯಾರು ಎಂಬ ವಿಷಯಕ್ಕೆ ಸಂಬಂಧಿಸಿತ್ತು. ನಂತರದ ಜನಗಣತಿಗಳನ್ನು (1901 ಮತ್ತು 1911ರ ಜನಗಣತಿಗಳು) ನೋಡಿದರೆ ಲಿಂಗಾಯತ ಮತ ಸ್ಥಾಪಕರಾರು ಎಂಬ ಪ್ರಶ್ನೆ ಮತ್ತು ಲಿಂಗಾಯತರ ಸಾಮಾಜಿಕ ಶ್ರೇಣಿಯ ಸ್ವರೂಪವೇನು ಎಂಬುದನ್ನು ಕೆಲವೇ ಕೆಲವು ಲಿಂಗಾಯತ ವಿದ್ವಾಂಸರ ದೃಷ್ಟಿಯಿಂದ ಬಗೆಹರಿಸಿದ ಹಾಗೆ ಕಾಣಿಸುತ್ತದೆ. ಈ ರೀತಿಯಲ್ಲಿ ಜನಗಣತಿಯ ವರದಿಯನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದವರಲ್ಲಿ ಮೈಸೂರಿನ ಪಿ.ಆರ್. ಕರಿಬಸವಶಾಸ್ತ್ರಿ ಹಾಗೂ ತುಮಕೂರಿನ ಮಹದೇವಯ್ಯ ಪ್ರಮುಖರು. 1901ರ ಜನಗಣತಿಯ ವರದಿಯನ್ನು ಅಂತಿಮಗೊಳಿಸುವ ಮೊದಲು ಮೈಸೂರು ಸರ್ಕಾರ ಲಿಂಗಾಯತರ ಬಗ್ಗೆ ಇವರ ಸಲಹೆಯನ್ನು ಕೇಳಿತ್ತು. ಇವರ ಸಲಹೆ ಮತ್ತು ಸೂಚನೆಗಳಂತೆ ಜನಗಣತಿಯ ವರದಿಯಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಲಾಯಿತು. ಇವೆಲ್ಲದರ ಪರಿಣಾಮವಾಗಿ 1901 ಮತ್ತು 1911 ಜನಗಣತಿಯಲ್ಲಿ ಜಾತಿ ಹಾಗು ಮತಗಳ ಪಾರಿಭಾಷಿಕ ಅರ್ಥಗಳನ್ನು ವಿವರಿಸುವ ಭಾಗದಲ್ಲಿ ಕೆಲವೊಂದು ಅಂಶಗಳು ಸ್ಪಷ್ಟವಾಗುತ್ತವೆ: 1) ಲಿಂಗಾಯತವು ಒಂದು ಮತವಾಗಿದ್ದು ಅದರಡಿಯಲ್ಲಿ ಅನೇಕ ಜಾತಿಗಳಿವೆ ಎಂಬ ಅಂಶ ಮತ್ತು 2) ಬಸವಣ್ಣ ಲಿಂಗಾಯತ ಮತದ ಸ್ಥಾಪಕನಲ್ಲ ಎಂಬ ನಂಬಿಕೆ. ಹಿಂದಿನ ಜನಗಣತಿ (1901)ಯಲ್ಲಿ ಲಿಂಗಾಯತರ ಬಗ್ಗೆ ಇದ್ದ ಈ ವಿವರಗಳನ್ನು 1911 ರ ಜನಗಣತಿಯಲ್ಲಿ ಪ್ರತಿಧ್ವನಿಸಲಾಗಿದೆ. ಹಾಗಾಗಿ ಇವೆರಡು ಜನಗಣತಿಗಳಲ್ಲಿ ಕಾಣುವ ಸಾಮಾನ್ಯ ಅಂಶವೇನೆಂದರೆ ಲಿಂಗಾಯತ ಮತ ಸ್ಥಾಪಕನಾಗಿ ಬಸವಣ್ಣ ಕಣ್ಮರೆಯಾದ. ಮತದ ಪ್ರಾಚೀನತೆಯು 12ನೇ ಶತಮಾನದ ಹಿಂದಿನಿಂದಲೂ ಇದೆಯೆಂದು ಪ್ರಚಾರ ಮಾಡಲಾಯಿತು. ಇತಿಹಾಸವನ್ನು ಬದಿಗಿಟ್ಟು ಪುರಾಣದ ಮೇಲೆ ಲಿಂಗಾಯತರ ಗುರುತನ್ನು ಸ್ಥಾಪಿಸುವ ಪ್ರಯತ್ನವಾಗಿತ್ತು ಇದು. 1901ರ ಜನಗಣತಿಯ ವರದಿಯಲ್ಲಿ ಲಿಂಗಾಯತ ಮತದ ಹುಟ್ಟಿನ ಬಗ್ಗೆ ಈ ರೀತಿ ಬರೆಯಲಾಗಿದೆ-

…ಈಚೆಗೆ ಕಂಡು ಹಿಡಿದಿರುವ ವಿಷಯಗಳ ಆಧಾರದ ಮೇಲೆ ಅದು ಶ್ರೀ ಶಂಕರಾಚಾರ್ಯರು ಹುಟ್ಟುವುದಕ್ಕೆ ಬಹುಕಾಲ ಮುಂಚೆಯೇ ಇತ್ತೆಂತಲೂ ಬುದ್ಧನ ಕಾಲದಲ್ಲೂ ಕೂಡ ಇತ್ತೆಂತಲೂ ಈ ಮತದ ಪರವಾಗಿ ಸ್ಥಾಪಿಸುತ್ತಾರೆ. ಲಿಂಗಾಯತರಲ್ಲಿ ಶಾಸ್ತ್ರಾನುಸಾರವಾಗಿ ನಡೆಯತಕ್ಕವರು, ತಮ್ಮ ಮತವು ಕೆಲವು ಆಚಾರ್ಯರಿಂದ ಸ್ಥಾಪಿಸಲ್ಪಟ್ಟಿತೆಂತಲೂ ಆ ಆಚಾರ್ಯರಲ್ಲಿ ಅತ್ಯಂತ ಕೀರ್ತಿವಂತರಾದ ರೇಣುಕ, ದಾರುಕ, ಗಜಕರ್ಣ, ಘಂಟಾಕರ್ಣ, ವಿಶ್ವಕರ್ಣರೆಂಬ ಲಿಂಗಾಯತದ್ವಿಜರ ಗೋತ್ರಕರ್ತರು ಸಂಸ್ಕಾರದೊಡನೆ ಸೇರಿಕೊಂಡಿದ್ದ ಕರ್ಮವನ್ನು ಬಿಟ್ಟು ಜ್ಞಾನದ ಆಧಾರದ ಮೇಲೆ ತನ್ನ ನಿಜವಾದ ಮತವನ್ನು ಲೋಕದಲ್ಲಿ ಸ್ಥಾಪಿಸುವಂತೆ ಅಥವಾ ಅದನ್ನು ಪುನಃ ನಿರ್ಮಲಸ್ಥಿತಿಗೆ ತರುವಂತೆ ಶಿವನಿಂದ ನೆಟ್ಟಗೆ ಅಪ್ಪಣೆಯನ್ನು ಪಡೆದಿದ್ದರೆಂತಲೂ ಊಹಿಸುತ್ತಾರೆ. (ಈ ಅಂಶವನ್ನು ‘1901 ಇಸವಿಯ ಮೈಸೂರು ಸೀಮೆಯ ಸೆನ್ಸಸ್ ರಿಪೋರ್ಟಿನ ಭಾಷಾಂತರದ ಭಾಗವು’ ಎಂಬ ಲೇಖನದಲ್ಲಿ ಕಾಣಬಹುದು).

ಬಸವಣ್ಣನ ಭಕ್ತಿ ಮಾರ್ಗಕ್ಕೆ ತದ್ವಿರುದ್ಧವಾಗಿ ಜ್ಞಾನಮಾರ್ಗವನ್ನು ಎತ್ತಿ ಹಿಡಿದಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದು ಮುಂದುವರೆದು ಲಿಂಗಾಯತರಿಗೆ ಆರ್ಯರ ರಕ್ತ ಸಂಬಂಧವಿರುದರ ಬಗ್ಗೆ ಈ ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಮತ್ತಷ್ಟು ಮುಂದೆ ಹೋಗಿ ತಮ್ಮ ಬ್ರಾಹ್ಮಣ್ಯವನ್ನು ಬಲಶಾಲಿಯಾಗಿ ರೂಪಿಸಲು ಮತ್ತು ಸಮರ್ಥಿಸಿಕೊಳ್ಳಲು ಗೋತ್ರಗಳನ್ನು ಸಹ ಕಲ್ಪಿಸಿಕೊಳ್ಳಲಾಯಿತು. ಈ ಕಲ್ಪನೆ ಆಗ ಅನೇಕ ಬ್ರಾಹ್ಮಣರು “ಲಿಂಗಾಯತರಲ್ಲಿ ಗೋತ್ರವೇ ಇಲ್ಲ ಹಾಗಾಗಿ ಅವರು ಬ್ರಾಹ್ಮಣರಲ್ಲ” ಎಂದು ವ್ಯಕ್ತಪಡಿಸಿದ ಅನುಮಾನಗಳಿಗೆ ಪ್ರತಿಕ್ರಿಯೆಯಾಗಿತ್ತು. ಇದರ ಜೊತೆಗೆ ತಾವು ಕಲ್ಪಿಸಿಕೊಂಡ ಶ್ರೇಣಿಕೃತ ಲಿಂಗಾಯತ ಸಮುದಾಯದಲ್ಲಿ ಯಾರು ಗೋತ್ರದ ಚೌಕಟ್ಟಿನಲ್ಲಿ ಬರುವುದಿಲ್ಲ ಮತ್ತು ಯಾರು ಬರುತ್ತಾರೆ ಎಂದು ಗಡಿರೇಖೆಗಳನ್ನು ಎಳೆಯಲಾಯಿತು. ಗೋತ್ರದ ಕಲ್ಪನೆ ಮತ್ತು ಶ್ರೇಣೀಕರಣ ಜೊತೆ, ಜೊತೆಯಾಗಿ ಹೇಗೆ ನಿರೂಪಿಸಲಾಗಿದೆ ಎಂದು ಮತ್ತೊಂದು ಉಲ್ಲೇಖದ ಮೂಲಕ ಹೀಗೆ ಗಮನಿಸಬಹುದು-

ಈ ಮತಸ್ಥರಲ್ಲಿ ಐದು ಗೋತ್ರಗಳುಂಟು. ಕೆಲವರು ಐದನೇ ಗೋತ್ರಕರ್ತನನ್ನು ಎಣಿಕೆಯಿಂದ ಬಿಟ್ಟು ಆತನನ್ನು ಉಳಿದ ನಾಲ್ವರು ಗೋತ್ರಕರ್ತರಿಗೆ ಆಚಾರ್ಯನನ್ನಾಗಿ ಭಾವಿಸುತ್ತಾರೆ. ನಿಜವಾಗಿಯೂ ವೀರಶೈವರಲ್ಲಿ ಗೋತ್ರವುಳ್ಳವರು ಉತ್ತಮ ಜಾತಿಯವರೇ. ಕೀಳುಜಾತಿಯವರಿಗೆ ಗೋತ್ರವಿಲ್ಲ. ಒಬ್ಬ ವೀರಶೈವನ ಜಾತಿಯನ್ನು ಕಂಡುಹಿಡಿಯುವುದಕ್ಕೆ ಮುಖ್ಯವಾದ ಗುರುತೇನೆಂದರೆ— ಅವನು ತನ್ನ ಮಂಡಲಿಯಲ್ಲಿ ಹೊಂದಿರುವ ಸ್ಥಾನವೇ. ಗುರುಗಳಾಗತಕ್ಕವರು ಉತ್ತಮಜಾತಿಯವರು ಮಾತ್ರವೇ. ಇವರು ಮಿಕ್ಕ ವೀರಶೈವ ಜಾತಿಗಳಿಗೆ ಯಾವಾಗಲೂ ಗುರುಗಳಾಗುತ್ತಾರೆಯೇ ಹೊರತು ಶಿಷ್ಯರಾಗುವುದಿಲ್ಲ. ಅಂತಹ ಗುರುಕುಲದವರು ಯಾರೆಂದರೆ–ಬಡಗಲವರು, ಬಳ್ಳಾರಿಯವರು, ಸ್ಥಳದವರು, ಆರಾಧ್ಯರು, ಶೀಲವಂತರು, ಮೇಲ್ಪಾವಡದವರು, ಧೂಳಪಾವಡದವರು, ಪಂಚಾಚಾರದವರು, ಇನ್ನೂ ಕೆಲವರು ಇವರೇ ಪಂಚಾಚಾರ್ಯರೆಂಬ ಮೂಲಗುರುಗಳ ಅಂದರೆ ಗೋತ್ರಕರ್ತರ ವಂಶೀಯರಾದ ಪಂಚಮರ, ಈ ತರಗತಿಯವರು ಈ ಮತದ ಸಮಸ್ತ ಜಾತಿಯವರಿಗೂ ಗುರುಗಳಾಗಿರುತ್ತಾರೆ. (1901 ಇಸವಿಯ ಮೈಸೂರು ಸೀಮೆಯ ಸೆನ್ಸಸ್ ರಿಪೋರ್ಟಿನ ಭಾಷಾಂತರದ ಭಾಗ)

ಲಿಂಗಾಯತರಲ್ಲಿ ಸದಾ ಕಾಲ ಶ್ರೇಣೀಕೃತ ಸಮಾಜವನ್ನು ಸ್ಥಾಪಿಸಲು ಇಂತಹ ನಂಬಿಕೆಗಳನ್ನು ಹರಿಬಿಡಲಾಯಿತು. 1911 ಮತ್ತು 1921 ಜನಗಣತಿಯ ಸಂದರ್ಭದಲ್ಲಿಯೂ ಅಲ್ಲಲ್ಲಿ ಅನೇಕ ಲಿಂಗಾಯತರು ತಮ್ಮ ಧರ್ಮ ವೀರಶೈವವೆಂದು, ಜಾತಿ ವೀರಶೈವ ಬ್ರಾಹ್ಮಣವೆಂದು ನಮೂದಿಸಲು ಅನೇಕ ಅಹವಾಲುಗಳನ್ನು ಸರ್ಕಾರಕ್ಕೆ ನೀಡಿದರು. 1911ರ ಜನಗಣತಿಯ ಸಂದರ್ಭದಲ್ಲಿ ಮೈಸೂರು ಮಹಾರಾಜರು ಲಿಂಗಾಯತರು ಜನಗಣತಿಯಲ್ಲಿ ತಾವು ಯಾವ ರೀತಿಯಲ್ಲಿ ನಮೂದಿಸಲ್ಪಡಬೇಕೆಂದು ಇಚ್ಛಿಸುತ್ತಾರೋ ಹಾಗೆ ನಮೂದಿಸಬೇಕೆಂದು ಆದೇಶಿಸಿದರು. ಇವೆಲ್ಲದರ ಪರಿಣಾಮವಾಗಿ ಜನಗಣತಿ-ವಿವಾದವು ಎಷ್ಟೊಂದು ತೀವ್ರತೆಯನ್ನು ಹೊಂದಿತು ಎಂದರೆ 1901ರ ನಂತರ ವರ್ಣಾಶ್ರಮ-ವರ್ಗೀಕರಣವನ್ನು ಕೈಬಿಡಲಾಯಿತು. 1901ರ ಜನಗಣತಿಯಲ್ಲಿ ಲಿಂಗಾಯತರು ಅಥವಾ ಇತರ ಸಮುದಾಯದವರನ್ನು ವಿಶಾಲ ಹಿಂದು ಸಮುದಾಯಕ್ಕೆ ಸೇರಿದ ಪಂಗಡಗಳೆಂದು ನಮೂದಿಸಲಾಯಿತು. ಇಂತಹ ದಾಖಲೆಗಳು ಲಿಂಗಾಯತರನ್ನು ಸದಾ ಕಾಲ ಬ್ರಾಹ್ಮಣೀಕೃತ ಹಿಂದು ಧರ್ಮಕ್ಕೆ ಬಂಧಿಸುವಂತಹ ಕಾರ್ಯನಿರ್ವಹಿಸಿದವು.

ಈ ಲಿಂಗಾಯತ ವಿದ್ವಾಂಸರ ಅಸಮಾಧಾನ ಮುಂದಿನ ದಶಕಗಳಲ್ಲೂ ಮುಂದುವರೆಯಿತು. ಸರ್ಕಾರಿ ಕೋರ್ಟ್ಗಳ ಒಂದೆರಡು ಪ್ರಸಂಗಗಳಲ್ಲಿ ಲಿಂಗಾಯತರನ್ನು ಶೂದ್ರರೆಂದು ತೀರ್ಮಾನಗಳನ್ನು ಕೊಡಲಾಗಿತ್ತು. ಇವು ಗಾಯದ ಮೇಲೆ ಬರೆ ಎಳೆದ ಹಾಗೆ ಪರಿಣಮಿಸಿತು. ಹಾಗಾಗಿ ಆರನೇ ವೀರಶೈವ ಮಹಾಸಭೆಯ ರಿಪೋರ್ಟ್ ನಲ್ಲಿ (1912) ಇಂತಹ ವ್ಯತಿರಿಕ್ತ ತೀರ್ಮಾನಗಳ ಬಗ್ಗೆ ಒಂದು ಠರಾವನ್ನು ಹೊರಡಿಸಿ ಸರ್ಕಾರಕ್ಕೆ ಲಿಂಗಾಯತರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂದು ಸಭೆಯ ಅಧ್ಯಕ್ಷರನ್ನು ಆಗ್ರಹಿಸಲಾಯಿತು. ಈ ಠರಾವಿಗೆ ಕೊಟ್ಟ ಕಾರಣವೇನೆಂದರೆ,
ಲಿಂಗಾಯತರು ಶೂದ್ರರಂತೆ ಸೇವಾವೃತ್ತಿ ಮಾಡದಿರುವದರಿಂದಲೂ ಇತರರಲ್ಲಿ ಅನ್ನೋದಕ ವ್ಯವಹಾರ ಮಾಡದಿರುವದರಿಂದಲೂ ಅಭಕ್ಷಭಕ್ಷಣ, ಅಪೇಯಪಾನ ಮಾಡದಿರುವುದರಿಂದಲೂ ಶ್ರೇಷ್ಠ ವರ್ಣದವರಾಗಿ ವಂದ್ಯರೆನಿಸಿಕೊಂಡಿರುವುದರಿಂದಲೂ, ಇವರ ಗುರುಗಳು ಯಾರಿಗೂ ಅಧೀನರಾಗಿರದೆ ಅಡ್ಡ ಪಲ್ಲಕ್ಕಿ, ಶ್ವೇತಛತ್ರ, ಸಂಚದೀವಟಿಗೆ ಮೊದಲಾದ ಶ್ರೇಷ್ಠ ಬಿರುದಾವಳಿಗಳುಳ್ಳವರಾಗಿರುವರಿಂದಲೂ ಇವರು ಉತ್ತಮ ವರ್ಗದವರೆಂದು ಸಿದ್ಧವಾಗುತ್ತದೆ.

ಶುದ್ಧಿ-ಅಶುದ್ಧಿ ಸಿದ್ಧಾಂತದ ಆಧಾರದ ಮೇಲೆ ಈ ಹೇಳಿಕೆಗಳನ್ನು ನೀಡಿರುವುದು ಸಾಮಾಜಿಕ ಪ್ರತ್ಯೇಕತೆಯನ್ನು ಈ ಲಿಂಗಾಯತರು ಎತ್ತಿ ಹಿಡಿದರು ಎಂಬ ಅಂಶ ಬೆಳಕಿಗೆ ಬರುತ್ತದೆ. ಹಾಗಾದರೆ 1881ರ ಜನಗಣತಿಯಲ್ಲಿ ಲಿಂಗಾಯತರನ್ನು ಶೂದ್ರರ ಪಟ್ಟಿಗೆ ಸೇರಿಸಲು ಕಾರಣವೇನು? ಈ ಹತ್ತು ವರ್ಷಗಳಲ್ಲಿ ಲಿಂಗಾಯತರ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಜನಗಣತಿಯಲ್ಲಿ ನಿಲುವನ್ನು ಬದಲಾಯಿಸಲು ಕಾರಣಗಳೇನು? ಕೆಲವು ಲಿಂಗಾಯತರ ಪ್ರಕಾರ ಇದಕ್ಕೆಲ್ಲಾ ಕಾರಣ ಬ್ರಾಹ್ಮಣ ವಿದ್ವಾಂಸರು ಜನಗಣತಿಯ ಅಧಿಕಾರಿಗಳನ್ನು ಪ್ರಭಾವಿಸಿದ ಕಾರಣದಿಂದ. ‘ವೀರಶೈವ ಮತ ಪ್ರಕಾಶಿಕೆ’ ಎಂಬ ಪತ್ರಿಕೆಯಲ್ಲಿ (ಸಂಪುಟ 1, ಸಂಖ್ಯೆ 11, 1892) ಈ ವಿಷಯದ ಬಗ್ಗೆ ಬರೆದಿರುವ ಮಾಹಿತಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ, “ಹ್ಯಾಗಾದರೂ ಆಗಲಿ ಲಿಂಗಧಾರಿಗಳಲ್ಲಿ ಯಾರನ್ನಾದರೂ ವೀರಶೈವ ಬ್ರಾಹಣರೆಂದು ಹೇಳಬಾರದೆಂಬ ದ್ವೇಷವು ಪರಮತಸ್ಥರಾದ ಬ್ರಾಹ್ಮಣರಿಗೆಲ್ಲಾ ಪ್ರಬಲವಾಗಿರುವಲ್ಲಿ ಅವರ ಭೋದನೆಗೆ ಒಳಪಟ್ಟ ಅಧಿಕಾರಿಗಳು 1881ನೇ ವರ್ಷದ ಸೆನ್ಸಸ್ ಗೋಷ್ಯಾರಿ ಪಟ್ಟಿಯಲ್ಲಿ ಆರಾಧ್ಯರು, ಜಂಗಮರು, ಮೊದಲಾದ ಲಿಂಗಧಾರಿಗಳೆಲ್ಲರನ್ನೂ ಶೂದ್ರ ಪಟ್ಟಿಯಲ್ಲಿ ಸೇರಿಸಿದರು”(ಪು. 8). ಈ ವಿಷಯವನ್ನು ಮತ್ತಷ್ಟು ವಿಸ್ತರಿಸುತ್ತಾ ಬ್ರಾಹ್ಮಣರ ಅಧಿಕಾರ ಪ್ರಾಬಲ್ಯದ ಬಗ್ಗೆ ಹೀಗೆ ಆಪಾದಿಸಲಾಗಿದೆ, “ಕೆಲವರು ನಮ್ಮ ಮತವನ್ನು ಶೂದ್ರ ಪಟ್ಟಿಯಿಂದ ತೆಗೆದು, ಬ್ರಾಹ್ಮಣ ಪಟ್ಟಿಯಲ್ಲಿ ಸೇರಿಸಬೇಕೆಂದು ಮೈಸೂರು ಸರ್ಕಾರದವರಿಗೆ ಅರ್ಜಿಯನ್ನು ಕೊಟ್ಟರು. ಅದಕ್ಕೆ ಸರ್ಕಾರದವರು ಉತ್ತರವನ್ನು ಕೊಡದೆ 1891ನೇ ವರ್ಷದ ಸೆನ್ಸಸ್ಸಿನಲ್ಲಿ ಮತ, ಮತಭೇದ, ಜಾತಿ, ಜಾತಿಭೇದ ಮೊದಲಾದ ಹೆಡ್ಡಿಂಗುಗಳನ್ನು ಕಲ್ಪಿಸಿದರು. ಅನ್ಯಮತಸ್ಥರಾದ ಇನ್ಯೂಮರೇಟರುಗಳು ಲಿಂಗಧಾರಿಗಳೊಳಗೆ ವೀರಶೈವ ಮತ, ಬ್ರಾಹ್ಮಣ ಜಾತಿ, ಎಂದು ಯಾರು ಹೇಳಿದರೂ ಬರೆದುಕೊಳ್ಳದೆ, ಒಂದು ವೇಳೆ ಎದುರಿಗೆ ಬರೆದುಕೊಂಡಾಗ್ಯೂ ಆಮೇಲೆ ಅದನ್ನು ಅಳಿಸಿ ಲಿಂಗಾಯತ ಎಂಬುದಾಗಿಯೇ ಬರೆದು ಕಳುಹಿಸಿದರು” (ಪು. 9). ಬ್ರಾಹ್ಮಣ ಇನ್ಯೂಮರೇಟರುಗಳು ಪಕ್ಷಾತೀತವಾಗಿ ವರ್ತಿಸದೆ ಜಾತಿಯತೆಯನ್ನು ಮೆರೆದರು ಎಂದು ಈ ಹೇಳಿಕೆಗಳ ಒಕ್ಕಣೆ. ಲಿಂಗಾಯತರ ಈ ಆಪಾದನೆಯ ಸಾಧ್ಯ-ಅಸಾಧ್ಯಗಳ ಬಗ್ಗೆ ಮತ್ತಷ್ಟು ಸಂಶೋಧನೆಯ ಅವಶ್ಯಕತೆ ಇದೆ.

ಬ್ರಾಹ್ಮಣತ್ವವನ್ನು ಸಾಧಿಸಲು ಹೊರಾಟ ಲಿಂಗಾಯತರ ಛಲವನ್ನು ಸಂಸ್ಕೃತೀಕರಣದ ಪ್ರಯತ್ನ ಎಂದು ಕರೆಯಬಹುದೆ? ಪ್ರಾಯಶಃ ಹಾಗೆ ವಾದಿಸಲು ಸಾಧ್ಯವಿಲ್ಲ. ಏಕೆಂದರೆ ಬ್ರಾಹ್ಮಣರು ಮತ್ತು ಬ್ರಿಟೀಷ್ ಸರ್ಕಾರಗಳು ಲಿಂಗಾಯತರನ್ನು ಸಾಮಾಜಿಕವಾಗಿ ಅಥವಾ ಧಾರ್ಮಿಕವಾಗಿ ಬ್ರಾಹ್ಮಣರೆಂದು ಗೌರವಿಸಲು ನಿರಾಕರಿಸಿದಾಗ, ಲಿಂಗಾಯತರು ಬ್ರಾಹ್ಮಣ ವಿರೋಧಿ ನೆಲೆಯಿಂದ ಬ್ರಾಹ್ಮಣರಂತೆ ತಾವು ಕೂಡ ಶ್ರೇಷ್ಟರು, ತಮ್ಮಲ್ಲು ಬ್ರಾಹ್ಮಣ್ಯವಿದೆ ಎಂದು ಸಾಧಿಸಲು ಪ್ರಯತ್ನಿಸಿದರು. ಇದಕ್ಕಾಗಿ ಬ್ರಾಹ್ಮಣ ಪರಿಕಲ್ಪನೆಯನ್ನೇ ಪುನರ್ ವ್ಯಾಖ್ಯಾನಿಸುವ ಪ್ರಯತ್ನಗಳನ್ನು ಮೈಸೂರ್ ಸ್ಟಾರ್ ಕರೆಸ್ಪಾಂಡೆನ್ಸ್ನಲ್ಲಿ ನೋಡಬಹುದು. ನಿಜವಾದ ಬ್ರಾಹ್ಮಣರು ಯಾರು ಮತ್ತು ಯಾರು ಅಲ್ಲ ಎಂಬ ಚರ್ಚೆಯು ಇದರಲ್ಲಿ ಕಾಣಸಿಗುತ್ತವೆ. ಜೊತೆಗೆ ಚಾತುರ್ವರ್ಣದ ರೂಪು-ರೇಷೆಗಳನ್ನೇ ಅವರು ತಮ್ಮ ದೃಷ್ಟಿಯಿಂದ ಪುನರ್-ವ್ಯಾಖ್ಯಾನಿಸುತ್ತಾರೆ. ಈ ವಾದ-ವಿವಾದಗಳು ಒಮ್ಮೆ ಶಾಸ್ತ್ರಗಳ ಆಧಾರದ ಮೇಲೆ; ಕೆಲವೊಮ್ಮೆ ಜಾತಿಯಾಧಾರದ ಮೇಲೆ; ಮಗದೊಮ್ಮೆ ಸಂಪ್ರದಾಯದ ಆಧಾರದ ಮೇಲೆ ನಿಂತಿತ್ತು. ಆಧುನೀಕರಣಕ್ಕೆ ತಮ್ಮನ್ನು ತಾವು ಒಳಗಾಗಿಸಿಕೊಂಡಿದ್ದ ಲಿಂಗಾಯತರು ಸಂಪ್ರದಾಯ/ಶಾಸ್ತ್ರವನ್ನು ಆಧುನಿಕತೆಯ ನವೀನ ಪರಿಭಾಷಾನುಗುಣವಾಗಿ ಬಳಸಿಕೊಂಡಿರುವ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ಜನಗಣತಿ ಈ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘರ್ಷಕ್ಕೆ ಇಂಬು ನೀಡಿತು ಎಂದು ಸ್ಪಷ್ಟವಾಗಿ ಇಲ್ಲಿ ಗೋಚರಿಸುತ್ತದೆ.

ಇವೆಲ್ಲದರ ಪರಿಣಾಮವಾಗಿ ಪುರಾತನ ಶೈವ ಪುರಾಣ, ಕಾವ್ಯ ಮತ್ತು ಶಾಸ್ತ್ರಗಳನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಪ್ರಕಟಿಸುವ ಕೆಲಸವು ಹೆಚ್ಚಾಗಿ ನಡೆಯಿತು. ಸಂಸ್ಕೃತ ಮತ್ತು ಕನ್ನಡ ಗ್ರಂಥಗಳಾದ ಶತಕಗಳು, ವೀರಶೈವ ಲಿಂಗ ಪೂಜಾವಿಧಿ, ತ್ರಿಶಷ್ಟಿ ಪುರಾತನ ಚರಿತ್ರೆ, ಬಸವೇಶ ವಿಜಯ, ಪ್ರಭುಲಿಂಗಲೀಲೆ, ಮುಂತಾದವುಗಳನ್ನು ರೂಪಾಂತರಿಸುವ ಅಥವಾ ಭಾಷಾಂತರಿಸುವ ಕಾರ್ಯವು ಈ ಸಮಯದಲ್ಲಿ ಬಿರುಸಿನಿಂದ ಸಾಗಿತು. ಈ ಚಟುವಟಿಕೆಯಲ್ಲಿ ಸಕ್ರಿಯರಾದವರು ವಾರದ ಮಲ್ಲಪ್ಪ, ಪಿ.ಆರ್. ಕರಿಬಸವಶಾಸ್ತ್ರಿ, ವೇದಮೂರ್ತಿ ನಂಜುಂಡಶಾಸ್ತ್ರಿ ಮತ್ತು ಎನ್.ಆರ್. ಕರಿಬಸವಶಾಸ್ತ್ರಿಗಳು. ಜೊತೆಗೆ ಭಾಷಾಂತರ ಅಥವಾ ಶುದ್ಧೀಕರಿಸಲ್ಪಟ್ಟ ಪುರಾತನ ಶೈವ ಗ್ರಂಥಗಳನ್ನು ಪ್ರಕಟಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶದಿಂದ ತಮ್ಮದೇ ಆದ ಪ್ರಿಂಟಿಂಗ್ ಪ್ರೆಸ್ ಗಳನ್ನು ಶುರು ಮಾಡಿದರು. ಇವೆಲ್ಲದರ ಮೂಲ ಉದ್ದೇಶವು ಲಿಂಗಾಯತರಲ್ಲಿ ವೀರಶೈವ ಸಾಹಿತ್ಯ ಮತ್ತು ಧರ್ಮದ ಬಗ್ಗೆ ಅರಿವು ಮತ್ತು ಗೌರವಗಳನ್ನು ಮೂಡಿಸುವುದು ಮತ್ತು ಲಿಂಗಾಯತರಿಗೆ ತಮ್ಮದೆ ಆದ ಪುರಾತನ ಗ್ರಾಂಥಿಕ ಪರಂಪರೆ ಇದೆಯೆಂದು ಸಾಬೀತುಪಡಿಸುವುದು. ಈ ಗ್ರಂಥಗಳು ಶಿವಶರಣ ಮತ್ತು ಪಂಚಾಚಾರ್ಯರ ಜೀವನ ಚರಿತ್ರೆ, ಭಕ್ತಿ ದೀಕ್ಷೆ, ವಿವಾಹ ವಿಧಿ, ಶಿವಪೂಜಾ ವಿಧಿ, ಗುರುಭಕ್ತಿ, ವ್ಯವಸಾಯ, ಇತ್ಯಾದಿಗಳ ಬಗ್ಗೆ ಇದ್ದವು. ಹೀಗೆ ಹೊಸದಾಗಿ ಕಣ್ತೆರೆದ ಅರಿವಿನ ಬಗ್ಗೆ ಶೌಟೆನ್ ಎಂಬ ಪಾಶ್ಚಾತ್ಯ ವಿದ್ವಾಂಸನು ಸಹ ನಮ್ಮ ಗಮನ ಸೆಳೆದಿದ್ದಾನೆ (1999). ಅವನ ಪ್ರಕಾರ ಲಿಂಗಾಯತರನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವಲ್ಲಿ 1904ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಪಾತ್ರವು ಬಹಳ ಮಹತ್ವದ್ದು. ಆದರೆ ಈ ಕಾಲದಲ್ಲಿ ಸಂಸ್ಕೃತಕ್ಕೆ ಹೆಚ್ಚು ಪ್ರಾಶಸ್ತ್ಯವಿದ್ದು, ಬಸವನ ವಿಚಾರಗಳಿಗೆ ಅಥವಾ 12ನೇ ಶತಮಾನದ ಕ್ರಾಂತಿಗೆ ಅಷ್ಟೊಂದು ಗೌರವ ಇರಲಿಲ್ಲ ಎಂದು ಗುರುತಿಸಿದ್ದಾನೆ. ಉದಾಹರಣೆಗೆ, ಪ್ರಥಮ ಅಖಿಲ ಭಾರತ ವೀರಶೈವ ಮಹಾಸಭೆಯ ವಾರ್ಷಿಕ ಕಾರ್ಯಕ್ರಮದಲ್ಲಿ (1904) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಲಿಂಗಪ್ಪ ಜಾಯಪ್ಪ ದೇಸಾಯಿಯವರು ಲಿಂಗಾಯತ ಮತವು ಬಸವನಿಗಿಂತಲೂ ಹಿಂದಿನದೆಂದು ಭಾಷಣ ಮಾಡಿದರು. ನಾಲ್ಕನೇ ಅಖಿಲ ಭಾರತ ವೀರಶೈವ ಮಹಾಸಭೆಯ (1909) ಸಮಾವೇಶ ಅಧ್ಯಕ್ಷರಾಗಿದ್ದ ರಾವ್ ಬಹದ್ದೂರ್ ಬಸಪ್ಪ ಮಲ್ಲಪ್ಪ ವಾರದರು ಸಹ ಲಿಂಗಾಯತ ಧರ್ಮವು ರೇಣುಕ, ದಾರುಕ, ಗಜಕರ್ಣ, ಘಂಟಕರ್ಣ ಮತ್ತು ವಿಶ್ವಕರ್ಮರ ಪರಂಪರೆಯ ಮೂಲದಿಂದ ಹುಟ್ಟಿಕೊಂಡಿದ್ದು ಎಂದು ಘೋಷಿಸಿದರು.

Previous post ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
Next post ಈ  ದಾರಿ…
ಈ ದಾರಿ…

Related Posts

ಹಿರಿಯರ ಹಾದಿ…
Share:
Articles

ಹಿರಿಯರ ಹಾದಿ…

July 4, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾತನ್ನು ಯೋಗ ಎನ್ನುವರು. ಅದು ಪ್ರವಚನ ಯೋಗ. ಕೇಳುಗರು ಸಹ ಮನಸ್ಸಿಟ್ಟು ಕೇಳಬೇಕು. ಅದು ಶ್ರವಣ ಯೋಗ. ಅದನ್ನು ಪ್ರಸಾದವಾಣಿ ಎನ್ನುವರು. ಮಠ ಸಾತ್ವಿಕತೆಯ, ಧರ್ಮದ, ಸುಜ್ಞಾನದ...
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
Share:
Articles

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ

April 29, 2018 ಕೆ.ಆರ್ ಮಂಗಳಾ
ವಚನಗಳ ಅಂತರಾಳದಲ್ಲಿ ಕಾಣುವುದು ಸಾರ್ವತ್ರಿಕ ಸತ್ಯದ ಮುಖಗಳು. ಓದುಗರ ಪ್ರಜ್ಞೆಯ ಆಳಕ್ಕಿಳಿದು ಕೆಣಕುವ ಶಕ್ತಿ ಶರಣರ ಮಾತುಗಳಿಗಿದೆ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ...

Comments 12

  1. Nagendra Kudari
    May 13, 2023 Reply

    ಮೈಸೂರು ಜನಗಣತಿಯ ಅತ್ಯಮೂಲ್ಯ ಮಾಹಿತಿಯನ್ನು ಹೀಗೆ ಸಂಕ್ಷಿಪ್ತವಾಗಿ ಕಂತುಗಳಲ್ಲಿ ನೀಡುತ್ತಿರುವುದಕ್ಕೆ ಧನ್ಯವಾದಗಳು.

  2. Vijay Hukkeri
    May 13, 2023 Reply

    This website is… how do I say it? Relevant!! Finally I have found something that helped me. Cheers!

  3. ಗುಣಶೇಖರ, ತಂಗಡಗಿ
    May 16, 2023 Reply

    ಸಮಾನತೆಯನ್ನು ಉಸಿರಾಡುವ ಲಿಂಗಾಯತ ಧರ್ಮಕ್ಕೆ ಶ್ರೇಣೀಕೃತದ ಕಾಯಿಲೆ ಬಡಿದದ್ದು ಹೇಗೆ ಎನ್ನುವ ಸೂಕ್ಷ್ಮ ಅಂಶಗಳನ್ನು ಒಳಗೊಂಡ ಉತ್ತಮ ಲೇಖನ.

  4. Ravikumar G
    May 29, 2023 Reply

    ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ನೀಡಿದ್ದೀರಿ ಸರ್, ವಂದನೆಗಳು.

  5. L.S. Patil
    May 29, 2023 Reply

    Fascinating website! Beautiful, wonderful… I will bookmark your blog and take the feeds also.

  6. Mahantesh Raichur
    May 29, 2023 Reply

    ತಾನು ಶ್ರೇಷ್ಠನೆಂಬ ಅಹಂಕಾರವು ಒಂದು ಧರ್ಮದ ಮೂಲಭೂತ ತಳಹದಿಯನ್ನೇ ಅಳ್ಳಾಡಿಸಬಲ್ಲುದು. ಎನಗಿಂತ ಕಿರಿಯರಿಲ್ಲ ಎಂದ ಬಸವಣ್ಣನವರೆಲ್ಲಿ? ಬ್ರಾಹ್ಮಣ್ಯದ ಶ್ರೇಷ್ಠತೆಗಾಗಿ ಅಂದು ಹಪಹಪಿಸಿದ ಈ ಮಹಾನುಭಾವರೆಲ್ಲಿ? ಜನಗಣತಿಯಲ್ಲಿ ಜಾರಿ ಬಿದ್ದ ಅವತ್ತಿನ ನಡೆ ನಾವೆಲ್ಲಾ ನಾಚಿಕೆಪಡುವಂತದ್ದಾಗಿದೆ.

  7. ಚಂದ್ರಶೇಖರ್ ಜವಳಿ
    May 29, 2023 Reply

    ಶೌಟೆನ್ ಎಂಬ ಪಾಶ್ಚಾತ್ಯ ವಿದ್ವಾಂಸರು ಅವತ್ತು ಸಂಭವಿಸಿದ ವೀರಶೈವೀಕರಣದ ಹೆಜ್ಜೆಗಳನ್ನು ಗುರುತಿಸಿದ ರೀತಿ ಅನನ್ಯವಾಗಿದೆ (1999). ಅವರ ಪ್ರಕಾರ ಲಿಂಗಾಯತರನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವಲ್ಲಿ 1904ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಪಾತ್ರವು ಬಹಳ ಮಹತ್ವದ್ದು. ಆದರೆ ಈ ಕಾಲದಲ್ಲಿ ಸಂಸ್ಕೃತಕ್ಕೆ ಹೆಚ್ಚು ಪ್ರಾಶಸ್ತ್ಯವಿದ್ದು, ಬಸವನ ವಿಚಾರಗಳಿಗೆ ಅಥವಾ 12ನೇ ಶತಮಾನದ ಕ್ರಾಂತಿಗೆ ಅಷ್ಟೊಂದು ಗೌರವ ಇರಲಿಲ್ಲ… ಲೇಖನ ಹಲವಾರು ಸೂಕ್ಷ್ಮ ವಿಚಾರಗಳನ್ನು ತೆರೆದು ತೋರಿಸಿದೆ.

  8. Prabhudev G
    May 29, 2023 Reply

    ಬಸವಣ್ಣನ ಭಕ್ತಿ ಮಾರ್ಗಕ್ಕೆ ತದ್ವಿರುದ್ಧವಾಗಿ ಜ್ಞಾನಮಾರ್ಗವನ್ನು ಎತ್ತಿ ಹಿಡಿದಿರುವುದು, ಲಿಂಗಾಯತರಿಗೆ ಆರ್ಯರ ರಕ್ತ ಸಂಬಂಧವಿರುವುದರ ಆಧಾರ ರಹಿತ ಹೇಳಿಕೆಗಳು- ಲಿಂಗಾಯತರ ವೀರಶೈವೀಕರಣಕ್ಕೆ ಮುಖ್ಯ ಕಾರಣಗಳಾಗಿರಬಹುದು. ಲೇಖನದ ವಿಶ್ಲೇಷಣೆಗಳು ಬಹಳ ಚೆನ್ನಾಗಿವೆ.

  9. ಸತೀಶ್ ಧಾರವಾಡ
    May 29, 2023 Reply

    ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮದ ಹೆಸರೇ ಇಲ್ಲದಿರುವ ಇವತ್ತಿನ ತಬ್ಬಲಿಯ ಸ್ಥಿತಿಗೆ ಕಾರಣವನ್ನು ಈ ಲೇಖನ ಮಾಲೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

  10. Paramashivaiah Pavagad
    May 29, 2023 Reply

    ನಾವಿಂದು ಎಂತಹ ಸಂಕಟದ ಸ್ಥಿತಿಯಲ್ಲಿದ್ದೇವೆ! ಲಿಂಗಾಯತ ಹೆಸರೇ ಇಲ್ಲದ ಜನಗಣತಿಯಲ್ಲಿ ಪಾಲ್ಗೊಳ್ಳಬೇಕು? ಬಹಿಷ್ಕಾರ ಮಾಡಬೇಕೆ? ಸರ್, ನಿಮ್ಮ ಸಲಹೆ ಏನು, ದಯವಿಟ್ಟು ತಿಳಿಸಿ.

  11. ರಾಮಚಂದ್ರ ಬುರುಳಿ
    May 30, 2023 Reply

    ಸಮಾಜದಲ್ಲಿ ತಾವು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆನ್ನುವ ಭಯದಲ್ಲಿ ಇಂತಹ ಎಡವಟ್ಟುಗಳನ್ನು ಆ ಹಿರಿಯರು ಮಾಡಿರಬಹುದೇ?

  12. ಭೀಮನಗೊಂಡ ಪರಗೊಂಡ
    Jun 2, 2023 Reply

    ಸೂಪರ್ ಲೇಖನ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಲಿಂಗಾಚಾರ
ಲಿಂಗಾಚಾರ
May 6, 2021
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
Copyright © 2025 Bayalu