Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
Share:
Articles April 6, 2023 Bayalu

ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?

ಹಿಂದಿನ ಲೇಖನದಲ್ಲಿ 1871ರ ಮೈಸೂರು ಜನಗಣತಿಯು ಹೇಗೆ ಲಿಂಗಾಯತರ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಚರ್ಚಿಸಲಾಯಿತು. 1871ರ ಜನಗಣತಿಯಲ್ಲಿ ಜೈನರ ಜೊತೆಗೆ ಪ್ರತ್ಯೇಕ ಸಾಮಾಜಿಕ ಹಾಗು ಧಾರ್ಮಿಕ ಸ್ಥಾನವನ್ನು ಹೊಂದಿ, ಬ್ರಾಹ್ಮಣ್ಯ-ಪುರಸೃತ ಚಾರ್ತುವರ್ಣ ಪರಿಧಿಯ ಹೊರಗೆ ಇದ್ದುದ್ದರ ಬಗ್ಗೆ ಕಳೆದ ಲೇಖನದಲ್ಲಿ ವಿವರಿಸಲಾಯಿತು. ಪ್ರಸ್ತುತ ಲೇಖನದಲ್ಲಿ 1881ರ ಮೈಸೂರು ಜನಗಣತಿಯು ಹೇಗೆ ಲಿಂಗಾಯತರನ್ನು ಪ್ರತ್ಯೇಕ ಸ್ಥಾನದಿಂದ ಹೊರತುಪಡಿಸಿ ಬ್ರಾಹ್ಮಣೀಕೃತ ಚಾರ್ತುವರ್ಣದೊಳಗೆ ಅದರಲ್ಲೂ ಕೆಳ ಮಟ್ಟದ ಶೂದ್ರ ಸ್ಥಾನಕ್ಕೆ ದೂಡಲಾಯಿತು ಎಂದು ಚರ್ಚಿಸಲಾಗಿದೆ. ಈ ಸ್ಥಾನ-ಮಾನದಿಂದ ಲಿಂಗಾಯತರಲ್ಲಿ ಉಂಟಾದ ಅಲ್ಲೋಲ-ಕಲ್ಲೋಲವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

1881ರ ಮೈಸೂರು ಜನಗಣತಿಯಲ್ಲಿ ಲಿಂಗಾಯತರನ್ನು ಶೂದ್ರರ ಪಟ್ಟಿಗೆ ಸೇರಿಸಲಾಯಿತು. ಹತ್ತು ವರ್ಷಗಳ ಹಿಂದೆ ಪ್ರತ್ಯೇಕವಾಗಿ ನಮೂದಿಸಲ್ಪಟ್ಟ ಲಿಂಗಾಯತರನ್ನು ಈಗ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರಿಂದ ಅಂಗೀಕೃತವಾದ ಚಾರ್ತುವರ್ಣದ ಕೊನೆಯ ವರ್ಗಕ್ಕೆ ನೂಕಲಾಯಿತು (1). ಈ ಜನಗಣತಿ ಅಂದಿನ ಪ್ರಥಮ ಮೈಸೂರು ದಿವಾನರಾಗಿದ್ದ ಸಿ. ರಂಗಾಚಾರ್ಲುರವರ (ತಮಿಳು ಮೂಲದ ಶ್ರೀ ವೈಷ್ಣವ ಬ್ರಾಹ್ಮಣರು) ನೇತೃತ್ವದಲ್ಲಿ ನಡೆಯಿತು. ಇದರ ವರದಿಯನ್ನು ಅವರೇ ಬರೆಯಬೇಕಿತ್ತು. ಆದರೆ ಜನಗಣತಿ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವ ಮೊದಲೆ ರಂಗಾಚಾರ್ಲು ನಿಧನರಾದರು. ನಂತರ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ನಿಭಾಯಿಸಿದ ಲೇವಿಸ್ ರೈಸ್ ಈಗಾಗಲೇ ಪೂರ್ಣಗೊಂಡ ಜನಗಣತಿ ಪ್ರಕ್ರಿಯೆ, ಜನಸಂಖ್ಯೆಯ ವಿಂಗಡಣಾ ಕ್ರಮ ಮತ್ತು ವಿಧಿ-ವಿಧಾನಗಳನ್ನು ಹೆಚ್ಚು ಬದಲಾಯಿಸದೆ ವರದಿಯನ್ನು ಸಿದ್ಧಪಡಿಸಿದರು.

ಜಾತಿವಾರು ವರ್ಗೀಕರಣದ ಭಾಗದಲ್ಲಿ ದಿವಾನರಿಗೂ ಮತ್ತು ಇತರ ಉನ್ನತಾಧಿಕಾರಿಗಳಿಗು ನಡೆದ ಔಪಚಾರಿಕ ಪತ್ರ ವ್ಯವಹಾರವನ್ನು ರೈಸ್ ಜನಗಣತಿಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಲಿಂಗಾಯತರ ಸಾಮಾಜಿಕ ಸ್ಥಳಾಂತರದ ಬಗ್ಗೆ ಈ ಪತ್ರ ವ್ಯವಹಾರದಲ್ಲಿ ಯಾವುದೇ ಮಾಹಿತಿಗಳಿಲ್ಲ. ರಂಗಾಚಾರ್ಲುರವರು ಸಿದ್ಧಪಡಿಸಿದ ಜನಗಣತಿ ವಿವರಗಳನ್ನು ಹೆಚ್ಚು ಬದಲಾಯಿಸದೆ, ಅದನ್ನು ರೈಸ್ರವರು ಇದ್ದಂತೆ ಪ್ರಕಟಿಸಿರುವ ಅಂಶ ಗಮನೀಯ. ಸಮಯದ ಅಭಾವದಿಂದಲೋ ಅಥವಾ ವಿಷಯ- ಅಜ್ಞಾನದಿಂದಲೋ ರೈಸ್ ಜನಗಣತಿಯ ವರದಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಅತ್ಯಂತ ಮುಖ್ಯವಾದ ಸಾಮಾಜಿಕ ಅಂಶದ ಬಗ್ಗೆ ರೈಸರವರು ಹೆಚ್ಚು ಚಿಂತಿಸಿರುವ ಹಾಗೆ ಕಾಣುವುದಿಲ್ಲ. ರಂಗಾಚಾರ್ಲುರವರ ವಿಚಾರಗಳೇ ಇಲ್ಲಿ ಅಂತಿಮವಾಗಿವೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.

ಹಾಗಾದರೆ ರಂಗಾಚಾರ್ಲುರವರು ಜನಗಣತಿಯಲ್ಲಿ ಯಾವ ರೀತಿಯ ಚಾರ್ತುವರ್ಣದ ವರ್ಗೀಕರಣ/ವಿಂಗಡಣೆಯನ್ನು ಅನುಮೋದಿಸಿದರು? ಇದಕ್ಕಾಗಿ ಅವರು ಅನುಸರಿಸಿದ ಮಾನದಂಡಗಳೇನು? ಏಕೆಂದರೆ ಜನಗಣತಿಯಲ್ಲಿ ಕಾಣುವ ಸಾಮಾಜಿಕ ವರ್ಗೀಕರಣದಲ್ಲಿ ಲಿಂಗಾಯತರನ್ನು ಶೂದ್ರ ವರ್ಗಕ್ಕೆ ಸೇರಿಸಲಾಯಿತು. ಇನ್ನಿತರ ಅನೇಕ ಹಿಂದು ಜಾತಿಗಳನ್ನು ಕೂಡ ಚಾರ್ತುವರ್ಣದಡಿಯಲ್ಲಿ ನಮೂದಿಸಲಾಗಿದೆ. ಚಾರ್ತುವರ್ಣದ ಚೌಕಟ್ಟಿಗೆ ಅನುಗುಣವಾಗಿ ಲಿಂಗಾಯತರನ್ನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶೂದ್ರ ಸಮುದಾಯವೆಂದು ಈ ಜನಗಣತಿಯಲ್ಲಿ ಗುರುತಿಸಲಾಯಿತು. ಅಷ್ಟೇ ಅಲ್ಲ. ಲಿಂಗಾಯತರನ್ನೊಳಗೊಂಡ ಇತರ ಶೂದ್ರ ವರ್ಗಗಳನ್ನು ‘ಇತರ ಮೇಲಸ್ತರ ಜಾತಿಗಳು’ ಎಂಬ ವರ್ಗದ ಕೆಳಗೆ ವರ್ಗೀಕರಿಸಲಾಗಿದೆ. ಅಂದರೆ ಲಿಂಗಾಯತರು ಶೂದ್ರರಷ್ಟೇ ಅಲ್ಲದೆ ಇತರ ಅನೇಕ ಮೇಲ್ಜಾತಿಗಳಿಗಿಂತ ಕೆಳಗಿನ ಸ್ಥಾನವನ್ನು ಹೊಂದಿದವರು ಎಂದು ಇದರಿಂದ ತಿಳಿಯುತ್ತದೆ. ಅನೇಕ ವಿಷಯಗಳಲ್ಲಿ ಈ ವರದಿಯು ಹಿಂದಿನ (ಅಂದರೆ 1871) ಜನಗಣತಿಯ ಜೊತೆಗೆ ಹೋಲಿಕೆಯನ್ನು ಮಾಡುತ್ತದೆ. ಆದರೆ ಸಾಮಾಜಿಕ ಮತ್ತು ಧಾರ್ಮಿಕ ವರ್ಗೀಕರಣ ಮತ್ತು ವಿಂಗಡಣೆಯ ವಿಷಯದಲ್ಲಿ ಹೋಲಿಕೆಗಳನ್ನು ಮಾಡುವುದಿಲ್ಲ. ಹೋಲಿಕೆಗಳನ್ನು ಮಾಡಿದ್ದರೆ ಪ್ರಾಯಶಃ ಲಿಂಗಾಯತರನ್ನು ಶೂದ್ರ ವರ್ಗಕ್ಕೆ ಯಾಕೆ ಸೇರಿಸಲಾಯಿತು ಎಂಬುದರ ಬಗ್ಗೆ ಸುಳುವುಗಳು ಸಿಗುತ್ತಿದ್ದವೇನೋ!?

ಲಿಂಗಾಯತರ ಶೂದ್ರ ಸ್ಥಾನ-ಮಾನವು ವಿದ್ಯಾವಂತರಾದ, ಪೌರೋಹಿತ್ಯ ಮತ್ತು ಸಂಸ್ಕೃತ ಹಿನ್ನೆಲೆಯುಳ್ಳ ಮೈಸೂರಿನ ಕೆಲವೇ ಕೆಲವು ಲಿಂಗಾಯತ ವಿದ್ವಾಂಸರಿಗೆ (ಅಂದು ಇವರು ತಮ್ಮನ್ನು ವೀರಶೈವ/ವೀರಮಾಹೇಶ್ವರರೆಂದು ಕರೆದುಕೊಳ್ಳುತ್ತಿದ್ದರು) ತೀವ್ರ ಅಸಮಾಧಾನವನ್ನುಂಟು ಮಾಡಿತು (2). ಶೂದ್ರರೆಂದು ನಮೂದಿಸಲ್ಪಟ್ಟ ಆರಾಧ್ಯ (ಜನಗಣತಿಯಲ್ಲಿ ಲಿಂಗಾಯತ ಬ್ರಾಹ್ಮಣರೆಂದು ನಮೂದಿಸಲಾಗಿದೆ) ಮತ್ತು ಅಯ್ಯನವರು (ಲಿಂಗಾಯತ ಪುರೋಹಿತರು ಅಥವಾ ಶಾಲಾ ಮಾಸ್ತರರು) ಇದರಿಂದ ತೀವ್ರ ಮುಜುಗರಕ್ಕೆ ಒಳಗಾದರು. ಈ ಲಿಂಗಾಯತರ ಮುಜುಗರಕ್ಕೆ ಇತರ ಕಾರಣಗಳು ಇದ್ದವು:

1) ಬ್ರಾಹ್ಮಣರನ್ನು ತಮಗಿಂತ ಮೇಲುಸ್ತರದಲ್ಲಿ ನಮೂದಿಸಿದ್ದು,
2) ಪಾರಂಪರಿಕವಾಗಿ ಕೆಳ ಸ್ತರದವರೆಂದು ಪರಿಗಣಿಸಲ್ಪಟ್ಟ ಬೇಡ, ಹಜಾಮ, ಅಗಸ, ಮತ್ತು ಗೊಲ್ಲ ಜಾತಿಗಳ ಸಾಲಿನಲ್ಲಿ ಲಿಂಗಾಯತರನ್ನು ಗುರುತಿಸಿದ್ದು,
3) ಮತ್ತು ಈ ಜನಗಣತಿಯ ಪಟ್ಟಿಯಲ್ಲಿ ಬ್ರಾಹ್ಮಣ, ಕ್ಷತ್ರೀಯ ವರ್ಗದ ನಂತರ superior (ಮೇಲ್ಸ್ತರ) ಜಾತಿಗಳು ಎಂಬ ವರ್ಗೀಕರಣದಲ್ಲಿಯು ಕೂಡ ಲಿಂಗಾಯತರಿಗೆ ಸ್ಥಾನವಿಲ್ಲದೆ ಹೋದದ್ದು,
4) ಹಿಂದಿನ ಜನಗಣತಿಯಲ್ಲಿ ಲಿಂಗಾಯತರ ಜೊತೆಗೆ ‘ಇತರ ಕ್ರಮಗಳು’ ಅಡಿಯಲ್ಲಿ ಇದ್ದ ಜೈನರನ್ನು ಈಗ (1881) ಲಿಂಗಾಯತರಿಗಿಂತ ಹೆಚ್ಚಿನ ಮೇಲ್ತರಗತಿಯ ಸ್ಥಾನಕ್ಕೆ ಇರಿಸಲ್ಪಟ್ಟಿದ್ದು.

ತಮ್ಮ ಮೇಲೆ ಹೇರಲ್ಪಟ್ಟ ಶೂದ್ರ ಹಣೆ ಪಟ್ಟಿ ಅಪಮಾನಕರವೆಂದು ತಿಳಿದು, ತಾವು ಉತ್ತಮ ಮತ್ತು ಮೇಲ್ಜಾತಿಗೆ ಸೇರಿದವರೆಂದು, ಬ್ರಾಹ್ಮಣರಿಗಿಂತ ತಾವೇನು ಕಡಿಮೆ ಇಲ್ಲವೆಂದು ಜನಗಣತಿಯ ವಿರುದ್ಧ ಈ ಲಿಂಗಾಯತ ವಿದ್ವಾಂಸರು ಸೆಟೆದು ನಿಂತರು. ಪ್ರಾಯಶಃ ಇವರು 1871 ರ ಜನಗಣತಿಯನ್ನು ಗಮನಿಸಿದ ಹಾಗೆ ಕಾಣುವುದಿಲ್ಲ. ಏಕೆಂದರೆ ಇವರ ಯಾವುದೇ ಲೇಖನದಲ್ಲಿ 1871ರ ಜನಗಣತಿಯ ಬಗ್ಗೆ ಉಲ್ಲೇಖಿಸಿರುವುದು ಎಲ್ಲೂ ಕಾಣುವುದಿಲ್ಲ. ಅವರು ಈ ಜನಗಣತಿಯನ್ನು ಒಮ್ಮೆ ಪರಿಶೀಲಿಸಿದ್ದರೆ ಮುಂದಿನ ಚಿತ್ರಣ ಬೇರೆಯಾಗುತ್ತಿತ್ತೇನೊ? ಈ ಲಿಂಗಾಯತ ವಿದ್ವಾಂಸರ ಕೋಪ- ತಾಪದ ಬಗ್ಗೆ 1891 ರ ಜನಗಣತಿಯ ರಿಪೋರ್ಟ್ ಅನ್ನು ಬರೆದಿರುವ ವಿ.ಎನ್. ನರಸಿಂಹ ಅಯ್ಯಂಗಾರರು ಅನೇಕ ಸುಳುವುಗಳನ್ನು ನಮ್ಮೆದುರು ಇಟ್ಟಿದ್ದಾರೆ.

ಅವರ ವರದಿಯ ಪ್ರಕಾರ ಲಿಂಗಾಯತರ ಅಸಮಾಧಾನದ ಹೊಗೆ ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ ಜನಗಣತಿ ಪ್ರಕ್ರಿಯೆಯನ್ನು ಕೆಲ ಕಾಲ ಸ್ಥಗಿತಗೊಳಿಸುವ ಪರಿಸ್ಥಿತಿ ಉಂಟಾಯಿತು(3). ಆದರೆ ನರಸಿಂಹ ಅಯ್ಯಂಗಾರರು ತಮ್ಮ ವರದಿಯಲ್ಲಿ ಭಾವಿಸಿರುವ ಹಾಗೆ 1881 ರವರೆಗೆ ಲಿಂಗಾಯತರನ್ನು ಶೂದ್ರರನ್ನಾಗಿ ಪರಿಗಣಿಸಲಾಗುತ್ತಿತ್ತು ಎಂದು ಹೇಳಿರುವುದು 1871ರ ಜನಗಣತಿಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. 1871ರ ಜನಗಣತಿಯ ಬಗ್ಗೆ ಅವರು ಮೌನ ತಾಳುತ್ತಾರೆ. ಲಿಂಗಾಯತರ ದೃಷ್ಟಿಯಲ್ಲಿ ತಾವು ಬಯಸಿದಂತೆ ಜನಗಣತಿಯಲ್ಲಿ ತಮ್ಮ ಸಮುದಾಯ ಮತ್ತು ಧರ್ಮದ ಬಗ್ಗೆ ವಿವರಣೆಗಳು ಇರಬೇಕೆಂದು ಒತ್ತಡ ಹೇರಿದ್ದು ಸಾಮಾಜಿಕ ಸ್ಥಾನ-ಮಾನಗಳನ್ನು ಉನ್ನತಕ್ಕೇರಿಸಿಕೊಳ್ಳುವ ಉದ್ದೇಶವುಳ್ಳದ್ದಾಗಿತ್ತೆ ಹೊರತು ದೂರದೃಷ್ಟಿಯುಳ್ಳ ಯೋಜನೆಯಾಗಿರಲಿಲ್ಲ.

ನಂತರದ ದಿನಗಳಲ್ಲಿ ಈ ಲಿಂಗಾಯತ ವಿದ್ವಾಂಸರು ಮೈಸೂರು ಮಹಾರಾಜರ ಮನವೊಲಿಸಿ ತಮ್ಮನ್ನು ‘ವೀರಶೈವ ಬ್ರಾಹ್ಮಣ’ರೆಂದು ಪರಿಗಣಿಸಿ, ಅದೇ ರೀತಿ ಜನಗಣತಿಯಲ್ಲಿ ನಮೂದಿಸಲು ಒತ್ತಾಯಿಸಿದರು. ಕೆಲವೊಮ್ಮೆ ತಮ್ಮನ್ನು ವೀರಶೈವ ಲಿಂಗಿಬ್ರಾಹ್ಮಣರೆಂದು ಕರೆದುಕೊಂಡರು. ಕರ್ನಾಟಕದ ಗಾಂಧಿ ಎಂದು ಕರೆಯಲ್ಪಡುವ ಹರ್ಡೇಕರ್ ಮಂಜಪ್ಪನವರು ಈ ವಿಷಯದ ಬಗ್ಗೆ ಬೇಸರದಿಂದ ಆಡಿರುವ ಮಾತುಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು-

* ಕಳೆದ 40-50 ವರುಷಗಳಿಂದ ವೀರಶೈವ ಮತಸಂಬಂಧವಾಗಿ ಅನೇಕ ಭಿನ್ನಾಭಿಪ್ರಾಯಗಳುಂಟಾಗುತ್ತಾ ಬಂದಿವೆ. ವರ್ಣವಾದಿಗಳು ವೀರಶೈವರಿಗೆ ಶೂದ್ರರೆಂದು ಹೇಳುತ್ತಿರುವುದರಿಂದ ಈ ಹೆಸರನ್ನು ತಪ್ಪಿಸಿಕೊಂಡು ಬ್ರಾಹ್ಮಣರೆಂದು ಹೇಳಿಸಿಕೊಳ್ಳಲು ಮೊದಲು ಪ್ರಯತ್ನಿಸಿದರು. ಲಿಂಗಾಯತ ಎಂಬ ಹೆಸರನ್ನು ಬಳಕೆಯಲ್ಲಿ ಕಡಿಮೆಮಾಡಿ, ವೀರಶೈವ ಎಂಬ ಹೆಸರನ್ನು ಹೆಚ್ಚು ಮಾಡಿದುದೂ ಇದೇ ಕಾಲದಲ್ಲಿ. ವೀರಶೈವ ಲಿಂಗಿಬ್ರಾಹ್ಮಣ ಎಂಬ ವಿಚಿತ್ರ ಹೆಸರುಂಟಾದುದೂ ಇದೇ ಸಮಯದಲ್ಲಿ.
* ಬಸವೇಶ್ವರನು ವೀರಶೈವ ಮತಸ್ಥಾಪಕನಲ್ಲ; ಪಂಚಾಚಾರ್ಯರೇ ವೀರಶೈವ ಮತಸ್ಥಾಪಕರೆಂತಲೂ, ಬಸವೇಶನು ಈ ಮತದ ಉದ್ಧಾರಕನೆಂತಲೂ ಮೊದಲನೆಯ ವೀರಶೈವ ಮಹಾಸಭೆಯು ತೀರ್ಮಾನ ಮಾಡಿದುದರ ಕಾರಣವಾದರೂ ಬ್ರಾಹ್ಮಣ್ಯದ ಅಪೇಕ್ಷೆಯೇ (ಮಂಜಪ್ಪ, 1966: 489)(4).

ಮಂಜಪ್ಪನವರ ಈ ಮಾತುಗಳು ಅಂದಿನ ಲಿಂಗಾಯತರ ಮನೋಧೋರಣೆಯನ್ನು ವರ್ಣಿಸುತ್ತವೆ. ಆಸ್ಥಾನ ಪಂಡಿತರಾಗಿದ್ದ ಪಿ.ಆರ್.ಕರಿಬಸವಶಾಸ್ತ್ರಿಯವರು ತಮ್ಮ ಸಮುದಾಯದ ಮೇಲುಸ್ತರದ ಲಿಂಗಾಯತರನ್ನು ‘ವೀರಶೈವ ಬ್ರಾಹ್ಮಣ’ರೆಂದು ಪರಿಗಣಿಸಬೇಕೆಂದು ಮೈಸೂರು ಮಹಾರಾಜರ ಮನವೊಲಿಸುವಲ್ಲಿ ವಹಿಸಿದ ಪಾತ್ರ ಹಿರಿದು. ಮಹಾರಾಜರು ಇವರ ಒತ್ತಾಯಕ್ಕೆ ಮಣಿದು ಲಿಂಗಾಯತರು ತಮ್ಮನ್ನು ‘ವೀರಶೈವ ಬ್ರಾಹ್ಮಣ’ ರೆಂದು ಜನಗಣತಿಯಲ್ಲಿ ಬರೆಸಬಹುದೆಂದು ಮತ್ತು “ಅವರಲ್ಲಿ ಸೆನ್ಸಸ್ಗೆ ದಾಖಲಾಗುವ ಪ್ರತಿ ಒಬ್ಬನೂ ತಾನು ಸೇರಿರುವ ರೂಢವಾದ ಮತ್ತು ಸರಿಯಾದ ಒಳಭೇದದ ಹೆಸರನ್ನು ತಿಳಿಸಬೇಕು, ಎಂಬದಾಗಿ ಆರ್ಡರ್ ಕೊಡಲು ಈ ಕಷ್ಟವು ನಿವಾರಣೆಯಾಯಿತು” (1896, 32)(5).

ಇದೇ ಸಂದರ್ಭದಲ್ಲಿ (ಅಂದರೆ 1890ರ ದಶಕದಲ್ಲಿ) ಬೆಂಗಳೂರಿನ ಗಂಜಾಂಮಠದ ನಂಜುಂಡಸ್ವಾಮಿಗಳ ಪಾತ್ರವು ಮಹತ್ವದಾಗಿತ್ತು. ಜನಗಣತಿಯಲ್ಲಿ ಆಗಿರುವ ‘ಲೋಪ-ದೋಷ’ಗಳನ್ನು ಸರಿಪಡಿಸುವಲ್ಲಿ ಇವರ ಕೊಡುಗೆಯು ವ್ಯಕ್ತಿಗಳ ಜೊತೆಗೆ ಸಂಸ್ಥೆಗಳು ಹಾಗು ಮಠಗಳು ಕೂಡ ಲಿಂಗಾಯತರ ಗುರುತಿನ ಬಗ್ಗೆ ಮಹತ್ತರ ಪಾತ್ರವನ್ನು ವಹಿಸಿದವು ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ. ಈ ಅಂಶವನ್ನು ನರಸಿಂಹ ಅಯ್ಯಂಗಾರ್ (1891) ಮತ್ತು ಲಿಂಗಾಯತ ಮಠಗಳ ಪಾತ್ರ, ಪ್ರಭಾವವನ್ನು ಐತಿಹಾಸಿಕ ದೃಷ್ಟಿಯಿಂದ ಅಧ್ಯಯನ ಮಾಡಿರುವ ಬಿ.ಸಿ.ವೀರಪ್ಪನವರ (2001) ವಾದಗಳಲ್ಲಿ ನೋಡಬಹುದು. ಸೆನ್ಸಸ್ನಲ್ಲಿ “ವೀರಶೈವಮತವನ್ನು ಅಪಮಾನಕರವಾದ ತರಗತಿಯಲ್ಲಿ ಸೇರಿಸಿರುವ ವಿಷಯದಲ್ಲಿ ಉಂಟಾಗಿರುವ ಕೊರತೆಗಳನ್ನು ನೀಗಿಸುವ ದೆಸೆಯಲ್ಲಿ ಮೈಸೂರು ಮಹಾರಾಜರಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಿನ್ನತೆಗಳನ್ನು ಅರ್ಪಿಸಬೇಕೆಂಬ ಜಾಗೃತಿ ಪತ್ರಗಳನ್ನು ನಂಜುಂಡಸ್ವಾಮಿಗಳು ಬೆಂಗಳೂರು ಮತ್ತು ಮೈಸೂರಿನ ಲಿಂಗಾಯತ ಪ್ರಜೆಗಳಿಗೆ ಹಂಚಿದರು”(6).

ಲಿಂಗಾಯತ ಮುಖಂಡರ ಈ ಕ್ಷೋಭೆಗೆ ಕೇವಲ ‘ಶೂದ್ರ ಪಟ್ಟಿ’ ಮಾತ್ರ ಕಾರಣವಾಗಿರಲಿಲ್ಲ. ಜನಗಣತಿಯಲ್ಲಿ ಅವರ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಇದ್ದ ವಿವರಣೆಗಳು ಕೂಡ ಕಾರಣವಾಗಿದ್ದವು. ಇದರ ಬಗ್ಗೆ ಹೆಚ್ಚು ತಿಳಿಯಲು 1881 ರ ಜನಗಣತಿಯಲ್ಲಿ ಲಿಂಗಾಯತರ ಬಗ್ಗೆ ಯಾವ ವಿವರಗಳನ್ನು ಕೊಡಲಾಗಿದೆ ಎಂದು ಅವಲೋಕಿಸಬಹುದು. ಲಿಂಗಾಯತ ಮತವು ಆರಾಧ್ಯ ಬ್ರಾಹ್ಮಣನಾದ ಬಸವನಿಂದ ಸ್ಥಾಪಿಸಲ್ಪಟ್ಟದೆಂದು, ವೇದ, ಬ್ರಾಹ್ಮಣ್ಯದ ಯಜ್ಞೋಪವೀತ ಮತ್ತು ಬ್ರಾಹ್ಮಣರನ್ನು ಅವನು ತಿರಸ್ಕರಿಸಿದನೆಂದು ಈ ರಿಪೋರ್ರ್ಟ್ ನಲ್ಲಿ ದಾಖಲಿಸಲಾಗಿದೆ. ಇದರ ಜೊತೆಗೆ ಅವನು ಮತ್ತು ಅವನ ಅನುಯಾಯಿಗಳು ಜಾತೀಯತೆ, ತೀರ್ಥ ಯಾತ್ರೆ ಮತ್ತು ತಪಸ್ಸುಗಳ ವಿರುದ್ಧ ಜನಮಾನಸವನ್ನು ಜಾಗೃತಿಗೊಳಿಸಿದರು ಎಂದು ಬಣ್ಣಿಸಲಾಗಿದೆ. ತಾವು ನಂಬಿರುವ ವಿಚಾರಗಳಿಗೆ ಲಿಂಗಾಯತರು ಕಟ್ಟಾವಾದಿಗಳು ಎಂದು ಇಲ್ಲಿ ಬಿಂಬಿಸಲಾಗಿದೆ. ಅನೇಕ ಬ್ರಿಟೀಷ್ ವಿದ್ವಾಂಸರು ಹಿಂದೆ ಬಸವಣ್ಣ ಕೈಗೊಂಡ ಕಲ್ಯಾಣ ಕ್ರಾಂತಿ ಮತ್ತು ಅವನ ಸಮಾಜ ಸುಧಾರಣೆ ಚಳುವಳಿಯನ್ನು ಪ್ರಶಂಸಿಸಿದ್ದರು. ಆದರೆ ಬ್ರಿಟೀಷರ ಈ ವಿಚಾರಗಳು ಲಿಂಗಾಯತರಲ್ಲೆ ಇದ್ದ ಅನೇಕ ಸಂಸ್ಕೃತ ಪಂಡಿತರಿಗೆ ಇಷ್ಟವಾಗಲಿಲ್ಲ. ಸಂಸ್ಕೃತ, ಆಗಮ, ಉಪನಿಷತ್ತುಗಳನ್ನು ಪುರಸ್ಕರಿಸುತ್ತಿದ್ದ ಈ ಲಿಂಗಾಯತ ವಿದ್ವಾಂಸರು (ಅದರಲ್ಲಿ ಪ್ರಮುಖವಾಗಿ ಪಿ.ಆರ್. ಕರಿಬಸವಶಾಸ್ತ್ರಿ , ತುಮಕೂರಿನ ಕಾನೂನು ಪಂಡಿತರಾದ ಮಹದೇವಯ್ಯ ಮತ್ತು ಮೈಸೂರ್ ಸ್ಟಾರ್ ಪತ್ರಿಕೆಯ ಯಜಮಾನ್ ವೀರಸಂಗಪ್ಪ) ತಾವು ಬ್ರಾಹ್ಮಣರಿಗಿಂತ ಕಡಿಮೆ ಇಲ್ಲವೆಂದು ಸಾಬೀತುಗೊಳಿಸುವುದಕ್ಕೆ ಅನೇಕ ಪ್ರಯತ್ನಗಳನ್ನು ಮಾಡಿದರು. ಬಸವಣ್ಣ ಮತ್ತು ಅವನ ಅನುಯಾಯಿಗಳ ಬಗ್ಗೆ ಇರುವ ವಿಚಾರಗಳು ತಮ್ಮ ಸೆನ್ಸಸ್ ಪ್ರಯತ್ನಗಳಿಗೆ ಅಡ್ಡವಾಗಿದ್ದನ್ನು ಗಮನಿಸಿ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದರು. ಲಿಂಗಾಯತರಲ್ಲಿಯೂ ಬ್ರಾಹ್ಮಣ್ಯವಿದೆಯೆಂದು ತೋರಿಸಿಕೊಳ್ಳುವ ಕಾತರತೆ ಬೆಳೆದು, ಜನಗಣತಿಯ ಸಂದರ್ಭದಲ್ಲಿ (ಅಂದರೆ 1890ರ ದಶಕದಲ್ಲಿ) ತಮ್ಮ ಬ್ರಾಹ್ಮಣ್ಯದ ಹಿರಿಮೆಯನ್ನು ಸ್ಥಾಪಿಸುವ ಹಠವನ್ನು ಇವರು ಪ್ರದರ್ಶಿಸಿದರು. ತಮ್ಮ ವೀರಶೈವ ಗುರುತನ್ನು ಉಳಿಸಿಕೊಂಡು (ಅದರ ಜೊತೆಗಿರುವ ಸಂಸ್ಕೃತಿ, ಪರಂಪರೆ, ಸಾಹಿತ್ಯ ಹಾಗು ಇತಿಹಾಸಗಳನ್ನೊಳಗೊಂಡು) ಬ್ರಾಹ್ಮಣ್ಯವನ್ನು ಪ್ರದರ್ಶಿಸಬೇಕಾದುದರಿಂದ ಜನಗಣತಿಯಲ್ಲಿ ತಮ್ಮನ್ನು ‘ವೀರಶೈವ ಬ್ರಾಹ್ಮಣ’ ರೆಂದು ಬರೆಸಿಕೊಳ್ಳುವ ಯೋಜನೆಯನ್ನು ಮುಂದಿಟ್ಟರು. ಆಗಿನ ಪ್ರಸಿದ್ಧ ಪತ್ರಿಕೆಯಾದ ‘ವೀರಶೈವ ಮತ ಪ್ರಕಾಶಿಕೆ’ಯಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ಮೊದಲು ತಾವು ಬ್ರಾಹ್ಮಣರಿಗೆ ಸಮವೆಂದು ಹೇಳಿದರು; ಆದರೆ ಆಗ ಅದನ್ನು ಯಾರೂ ಅಂಗಿಕರಿಸದೇ ಇದ್ದಾಗ (ವಿಶೇಷವಾಗಿ ಬ್ರಾಹ್ಮಣರು ಮತ್ತು ಇತರ ಪಂಡಿತರು) ತಮ್ಮನ್ನು ‘ವೀರಶೈವ ಬ್ರಾಹ್ಮಣ’ ಎಂದು ಕರೆದುಕೊಳ್ಳುವ ಪರ್ಯಾಯ ಯೋಜನೆಯನ್ನು ಅವರು ಮುಂದಿಟ್ಟಿರುವ ಅಂಶವು ಪ್ರಕಾಶಿಕೆಯ ಪ್ರಕಟಣೆಗಳ ಮೂಲಕ ತಿಳಿಯುತ್ತದೆ. ಅಚಲವಾದ ಒಂದು ನಿರ್ಣಯಕ್ಕೆ ಈ ಲಿಂಗಾಯತರು ಬದ್ಧರಾಗಿರಲಿಲ್ಲವೆಂದು ಈ ಪ್ರಕಾಶಿಕೆಯು ಟೀಕಿಸುತ್ತದೆ. ಅಂದರೆ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ವಿಚಾರಗಳನ್ನು ಬದಲಾಯಿಸುವ ಜಾಯಮಾನದಿಂದ ಕೂಡಿದ ಹೆಜ್ಜೆಯಾಗಿತ್ತಿದು.

ಕೊನೆಯ ಮಾತುಗಳು…

ಜನಗಣತಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಕೆಲವು ಲಿಂಗಾಯತರು ತಮ್ಮ ಸಮುದಾಯವನ್ನು ಸಂಪೂರ್ಣವಾಗಿ ಪ್ರತಿನಿಧಿಸಿದರು ಎಂದು ಭಾವಿಸುವುದು ಸಮಸ್ಯಾತ್ಮಕ. ಸಮುದಾಯದ ಗುರುತಿಗೆ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಜನಗಣತಿ ಕಂಟಕವಾಗಿ ಕಂಡಿದ್ದು ಕೆಲವೇ ಕೆಲವು ಲಿಂಗಾಯತ ವಿದ್ವಾಂಸರಿಗೆ ಮಾತ್ರ. ಲಿಂಗಾಯತರ ಬಾಹ್ಯ ಮತ್ತು ಆಂತರಿಕ ಅಂಶಗಳು ಅವರ ವಿಚಾರಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಿಲ್ಲ. ಯಜಮಾನ್ ವೀರಸಂಗಪ್ಪನವರು ಮಾಡಿದ ಪ್ರಯತ್ನಗಳಿಗೆ ಕೆಲ ಲಿಂಗಾಯತರಿಂದಲೇ ಟೀಕೆ ಟಿಪ್ಪಣಿಗಳು ಹರಿದು ಬಂದವು. 1896ರಲ್ಲಿ ಪ್ರಕಟಗೊಂಡ ಒಂದು ಸಣ್ಣಪುಸ್ತಕ (ಮೈಸೂರು ಸೆನ್ಸ್ಸ್ ಮತ್ತು ವೈ. ವೀರಸಂಗಪ್ಪನವರು) ದಲ್ಲಿ ವೀರಸಂಗಪ್ಪನವರು ಜನಗಣತಿಯನ್ನು ವಿರೋಧಿಸುವ ಹೆಸರಿನಲಿ ಚಂದಾ ಸಂಗ್ರಹಿಸಿತ್ತಿರುವುದರ ಬಗ್ಗೆ ತೀರ್ವ ಅಸಮಾಧಾನವನ್ನು ವ್ಯಕ್ತಪಡಿಸಲಾಗಿದೆ(7). ಸೆನ್ಸಸ್ನಲ್ಲಿ ಲಿಂಗಾಯತರನ್ನು ಶೂದ್ರರೆಂದು ಕರೆದ ಮಾತ್ರಕ್ಕೆ ಲಿಂಗಾಯತ ಮತಕ್ಕೆ ಆಗುವ ಕೊರತೆಯೇನು ಎಂದು ವೀರಸಂಗಪ್ಪನವರನ್ನು ಪ್ರಶ್ನಿಸಲಾಗಿದೆ. “ಪ್ರಬಲರ ಮೇಲೆ [ಪ್ರಾಯಶಃ ಬ್ರಿಟೀಷ್ ಸರ್ಕಾರ ಮತ್ತು ಅವರ ಸೆನ್ಸಸ್ ಯೋಜನೆ] ನಾವು ಪ್ರತಿಭಟಿಸತಕ್ಕದ್ದು ಯೋಗ್ಯವಲ್ಲ ಎಂದು ಅನೇಕ ಲಿಂಗಾಯತರು ಉದಾಸೀನತೆಯನ್ನು ತೋರಿಸಿದ ಸನ್ನಿವೇಶದಲ್ಲಿ ವೀರಸಂಗಪ್ಪನವರೊಬ್ಬರೆ ಲಿಂಗಾಯತೆರೆಲ್ಲರೂ ಬ್ರಾಹ್ಮಣರಾಗಿದ್ದಾರೆ ಎಂದು ನಿರೂಪಿಸಲು ಅರ್ಜಿಕೊಡಲು ಹಣ ಸಂಗ್ರಹಿಸಿದ್ದನ್ನು” ಇಲ್ಲಿ ಮೂದಲಿಸಲಾಗಿದೆ. ಇದರ ಜೊತೆಗೆ ಕೋರ್ಟಿನಲ್ಲಿ ಜನಗಣತಿ ಮತ್ತು ನರಸಿಂಹಯ್ಯಂಗಾರರ (ಲಿಂಗಾಯತರ ಬಗ್ಗೆ ವ್ಯತಿರಿಕ್ತವಾಗಿ ತಮ್ಮ ಜನಗಣತಿ ವರದಿಯಲ್ಲಿ ಬರೆದುದರಿಂದ (1891: 288) ವಿರುದ್ಧ ದೂರು ದಾಖಲು ಮಾಡಬೇಕೆಂದು ಯಜಮಾನ್ ವೀರಸಂಗಪ್ಪನವರು ಲಿಂಗಾಯತರಿಂದ ಹಣ ಸಂಗ್ರಹ ಮಾಡಿದ್ದನ್ನು ಇಲ್ಲಿ ಕುಚೇಷ್ಟೆಯ ಪರಮಾವಧಿ ಎಂದು ಟೀಕಿಸಲಾಗಿದೆ. ಈ ಟೀಕೆಗಳನ್ನು ಪ್ರಾಯಶಃ ಪಿ.ಆರ್. ಕರಿಬಸವಶಾಸ್ತ್ರಿಯವರು ಮಾಡಿರಬಹುದಾದ ಸಾಧ್ಯತೆಗಳೇ ಹೆಚ್ಚು. ಏಕೆಂದರೆ 1893ರ ನಂತರ ಪಿ.ಆರ್. ಕರಿಬಸವಶಾಸ್ತ್ರಿ ಮತ್ತು ಯಜಮಾನ್ ವೀರಸಂಗಪ್ಪರ ನಡುವೆ ತಾತ್ವಿಕ ಮತ್ತು ಬೌದ್ಧಿಕ ಭಿನ್ನಾಭಿಪ್ರಾಯಗಳು ತಲೆದೋರಿದ್ದವು(8). ಈ ವಿಷಯದ ಬಗ್ಗೆ ಬಿ. ನಂಜುಂಡಸ್ವಾಮಿಯವರ ಲೇಖನದಲ್ಲಿ (‘ಮೈಸೂರು ಸ್ಟಾರ್’ ಪತ್ರಿಕೆ ಹಾಗೂ ವೀರಸಂಗಪ್ಪನವರು) ಅನೇಕ ಮಾಹಿತಿಗಳು ಕಾಣಸಿಗುತ್ತವೆ. ಈ ಲೇಖನವು ಇತಿಹಾಸ ದರ್ಶನ (ಸಂಪುಟ 9)ದಲ್ಲಿ ಪ್ರಕಟವಾಗಿದೆ. ಸಂಪಾದಕರು: ಸೂರ್ಯನಾಥ್ ಕಾಮತ್ ಮತ್ತು ದೇವರ ಕೊಂಡಾರೆಡ್ಡಿ, ಪ್ರಕಟಣೆ: ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು. ಪು: 255-259.

### ###

1 ಈ ಜನಗಣತಿಯ ವರದಿಯನ್ನು 1884ರಲ್ಲಿ ಪ್ರಕಟಿಸಲಾಯಿತು. ಈ ವರದಿಯನ್ನು ಬರೆದವರು ಲೇವಿಸ್ ರೈಸ್.
2 ಹಿಂದುಗಳ ಚಾತುವರ್ಣದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ‘other Superior Miscellaneous castes’ ನಂತರ ಮತ್ತು ಅದರ ಕೆಳಗೆ ಲಿಂಗಾಯತರನ್ನು ಶೂದ್ರರೆಂದು ನಮೂದಿಸಲಾಯಿತು. ಲಿಂಗಾಯತರಲ್ಲಿ ನಮೂದಿಸಲಾದ ಉಪ-ಜಾತಿಗಳು ಯಾವುವೆಂದರೆ ಆರಾಧ್ಯ, ಅಯ್ಯ, ಶಿವಾಚಾರ ಗೌಡ, ಶಿವಾಚಾರ ಬಣಜಿಗ ಮತ್ತು ಇತರ ವ್ಯಾಪಾರ ವರ್ಗಗಳು, ಶಿವಾಚಾರ ಗೌಳಿಗ ಮತ್ತು ಇತರ ಶಿವಾಚಾರರು.
3 ಸೆನ್ಸ್ಸ್ ರಿಪೋರ್ಟ್ (ಸಿಆರ್-17, ಮೈಸೂರು, 1891), ಮೈಸೂರು ಪ್ರಾದೇಶಿಕ ಪತ್ರಗಾರ.
4 ವೀರಶೈವರ ಹಿನ್ನಲೆಯನ್ನು ಟೀಕಿಸುವ ಮಂಜಪ್ಪನವರು ಮುಂದಿನ ದಿನಗಳಲ್ಲಿ ಉಂಟಾದ ‘ಲಿಂಗಾಯತರು ಹಿಂದುಗಳಲ್ಲ’ ಎಂಬ ವಾದವನ್ನು ಕಟುವಾಗಿ ಖಂಡಿಸುತ್ತಾರೆ. ಹಿಂದು ಮಹಾಸಭಾದ ಸಾವರ್ಕರ್ ಕರಿನೆರಳಿನ ಪ್ರಭಾವಕ್ಕೆ ಒಳಗಾಗಿದ್ದ ಮಂಜಪ್ಪನವರು ಈ ರೀತಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನೋಡಿ, “ಲಿಂಗಾಯತರು ಹಿಂದುಗಳಲ್ಲವೇ?” ರಾಷ್ಟ್ರಧರ್ಮದ್ರಷ್ಟಾರ ಹರ್ಡೇಕರ್ ಮಂಜಪ್ಪ (ಮಂಜಪ್ಪನವರ ಸಮಗ್ರ ಕೃತಿಗಳ ಸಂಗ್ರಹ, ವರ್ಗೀಕರಣ ಮತ್ತು ವಿಮರ್ಶೆ, ಸಂಪಾದಕ ಮತ್ತು ಸಂಕಲನ ಗ.ಸ. ಹಾಲಪ್ಪ, ಹರ್ಡೇಕರ್ ಮಂಜಪ್ಪ ಸ್ಮಾರಕ ಗ್ರಂಥಮಾಲೆ, 1966. (ಪು. 1061-1064).
5 ಇದನ್ನು ಮೈಸೂರು ಸೆನ್ಸಸ್ ಮತ್ತು ವೈ. ವೀರಸಂಗಪ್ಪನವರು ಎಂಬ ಲೇಖನದಲ್ಲಿ 1891 ಜನಗಣತಿಯ ಸೂಪರಿಂಟೆಂಡಂಟ್ ಆಗಿದ್ದ ವಿ.ಎನ್. ನರಸಿಂಹ ಅಯ್ಯಂಗಾರರು ಲಿಂಗಾಯತರ ವಿವಾದದ ಬಗ್ಗೆ ಬರೆದಿರುವ ರಿಪೋರ್ಟನ ಕನ್ನಡ ತರ್ಜಮೆಯನ್ನು ಪ್ರಕಟಿಸಲಾಗಿದೆ. 1911ರಲ್ಲಿ ಸೆನ್ಸಸ್ ವಿಷಯವಾಗಿ ಸರ್ಕಾರದಿಂದ ಕೊಟ್ಟಿರುವ ಅಪ್ಪಣೆಯ ಪ್ರತಿಯಲ್ಲೂ ಇದೇ ರೀತಿಯ ಆದೇಶವನ್ನು ನೋಡಬಹುದು.
6 ಈ ಜಾಗೃತಿ ಪತ್ತವನ್ನು ಬಿ.ಸಿ. ವೀರಪ್ಪ.ನವರ ಗ್ರಂಥದಲ್ಲಿ ನೋಡಬಹುದು. ನೋಡಿ ಬಿ.ಸಿ. ವೀರಪ್ಪ, ಬೆಂಗಳೂರು ನಗರದ ವೀರಶೈವ ಮಠಗಳು ಒಂದು ಸಾಂಸ್ಕೃತಿಕ ಅಧ್ಯಯನ, ಪ್ರಕಟಣೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು: ಬೆಂಗಳೂರು, 2001.
7 ಈ ಪುಸ್ತಕದ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಿಲ್ಲ. ಇದು ನನಗೆ ಸಿಕ್ಕಿದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಗ್ರಂಥಾಲಯದಲ್ಲಿ. ಈ ಪುಸ್ತಕವನ್ನು ಪ್ರಕಟಿಸಿದವರು ಮೈಸೂರಿನ ಹೆಚ್. ಗಂಗಾಧರಶೆಟ್ಟರು ಎಂಬ ಮಾಹಿತಿ ಮಾತ್ರ ಇದೆ. ಇದು ಪ್ರಕಟವಾದ ದಿನಾಂಕ 23-8-96 ಎಂದು ಇದೆ.
8 1899ರಲ್ಲಿ ವೀರಸಂಗಪ್ಪನವರು ನಿಧನರಾದಾಗ ಸೆನ್ಸಸ್ ವಿವಾದವನ್ನು ಮುಂದುವರೆಸಿದವರಲ್ಲಿ ಪಿ.ಆರ್. ಕರಿಬಸವಶಾಸ್ತ್ರಿ ಮತ್ತು ತುಮಕೂರಿನ ಮಹಾದೇವಯ್ಯನವರು ಪ್ರಮುಖರು. ನಂತರದ ದಿನಗಳಲ್ಲಿ ಕರಿಬಸವಶಾಸ್ತ್ರಿಯವರ ಶಿಷ್ಯಂದಿರು ಜನಗಣತಿ ವಿವಾದಕ್ಕೆ ಕೈ ಜೋಡಿಸಿದರು. ಈ ಕಾಲದಲ್ಲಿ ಪ್ರಕಟವಾದ ವಚನ ಸಂಕಲನಗಳು (ಅಂದರೆ 1880 ರಿಂದ 1920 ದಶಕಗಳವರೆಗೆ) ಲಿಂಗಾಯತರ ಅನಿಶ್ಚಿತ, ದುರ್ಬಲ ಬ್ರಾಹ್ಮಣ್ಯ- ವಿಚಾರಧಾರೆಯ ಕಮಟು ವಾಸನೆಯನ್ನು ಹೊರ ಸೂಸುತ್ತವೆ.

Previous post ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
Next post ನಾನೆಂಬುದ ಅಳಿದು…
ನಾನೆಂಬುದ ಅಳಿದು…

Related Posts

ಯೋಗಿಯಾದರೆ ಸಿದ್ಧರಾಮನಂತಾಗಬೇಕು
Share:
Articles

ಯೋಗಿಯಾದರೆ ಸಿದ್ಧರಾಮನಂತಾಗಬೇಕು

April 29, 2018 ಡಾ. ಶಶಿಕಾಂತ ಪಟ್ಟಣ
ಬಸವೋತ್ತರ ದಿನಗಳ ಕಲ್ಯಾಣ ಕ್ರಾಂತಿಯ ಮಹತ್ತರ ಮತ್ತು ಕೇಂದ್ರ ಬಿಂದುವಾಗಿದ್ದ ಸಿದ್ಧರಾಮ ಶಿವಯೋಗಿಗಳು, ವಚನಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರು ಒಬ್ಬ...
ನಾನು ಕಂಡ ಡಾ.ಕಲಬುರ್ಗಿ
Share:
Articles

ನಾನು ಕಂಡ ಡಾ.ಕಲಬುರ್ಗಿ

September 7, 2021 ಸನತ್ ಕುಮಾರ ಬೆಳಗಲಿ
ಕರ್ನಾಟಕ ಕಂಡ ಹೆಸರಾಂತ ಸತ್ಯಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಕಳೆದ ಆಗಸ್ಟ್ ೩೦ ಕ್ಕೆ ಆರು ವರ್ಷಗಳಾದವು. ೨೦೧೫ ನೇ ಇಸವಿ ಇದೇ ದಿನ ಬೆಳಗಿನ...

Comments 12

  1. Gangadhar S
    Apr 10, 2023 Reply

    ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದು ಸೂರ್ಯ, ಚಂದ್ರರಷ್ಟೇ ನಿಜವಾದರೂ ಇತಿಹಾಸದುದ್ದಕ್ಕೂ ಈ ಧರ್ಮದ ಅನುಯಾಯಿಗಳ ಮೂರ್ಖತನ ಎಂತೆಂತಹ ಪ್ರಮಾದಗಳನ್ನು ಸೃಷ್ಟಿಸಿದೆ ಎನ್ನುವ ಸತ್ಯ ಲೇಖನದಿಂದ ಸ್ಪಷ್ಟವಾಯಿತು…

  2. ಜಯರಾಜ್ ತಲಗಟಗಿ
    Apr 11, 2023 Reply

    ರಂಗಾಚಾರ್ಲುರವರು ಜನಗಣತಿಯಲ್ಲಿ ಯಾವ ಆಧಾರದ ಮೇಲೆ ಲಿಂಗಾಯತರನ್ನು ಶೂದ್ರ ವರ್ಗಕ್ಕೆ ಸೇರಿಸಿದರೆನ್ನುವುದು ನಿಜಕ್ಕೂ ಕುತೂಹಲಕಾರಿ ಅಂಶ. ಎಲ್ಲಾ ವೃತ್ತಿಗಳವರು ಲಿಂಗಾಯತದಲ್ಲಿ ಇದ್ದರೂ ಕೇವಲ ಕೃಷಿ ಆಧಾರದ ಮೇಲೆ ಅವರನ್ನು ಶೂದ್ರರನ್ನಾಗಿ ವಿಂಗಡಿಸಿದ್ದು ಹೇಗೆ ಎನ್ನುವುದು ಆಶ್ಚರ್ಯದ ಸಂಗತಿ.

  3. ಸಂತೋಷ್ ಗಲಗಲಿ
    Apr 13, 2023 Reply

    ಸ್ವತಂತ್ರ ಧರ್ಮವಾಗಿದ್ದರೂ ಲಿಂಗಾಯತರಿಗೆ ಅದನ್ನು ಹೇಳಿಕೊಳ್ಳಲಾಗದ ಹಣೆಬರಹ. ಹಿಂದಿನ ಹಿರಿಯರ ಸ್ವಾರ್ಥದ ತಪ್ಪು ನಡೆಗಳಿಗೆ ಇವತ್ತಿನ ಸಮಾಜ ಬೆಲೆ ತೆರುತ್ತಲಿದೆ.

  4. Manjunatha B
    Apr 13, 2023 Reply

    I could not refrain from commenting, well written sir!!

  5. ಶಿವಶಂಕರ ಬಾಗೂರು
    Apr 16, 2023 Reply

    ಯಾರು ಯಾರದೋ ಅಭಿಮಾನಕ್ಕಾಗಿ, ಸ್ವಹಿತಾಸಕ್ತಿಗಾಗಿ ವಿಶ್ವ ಧರ್ಮವೊಂದು ಜಾತಿಯ ಕಾಲಂನಲ್ಲಿ ತೂರಿಕೊಂಡಿದ್ದು ಓದಿ ನೋವಾಯಿತು… ಲೇಖನದ ಐತಿಹಾಸಿಕ ಸತ್ಯ ತಿಳಿದುಕೊಳ್ಳಲೇ ಬೇಕಾದದ್ದು.

  6. VIJAYAKUMAR KAMMAR
    Apr 16, 2023 Reply

    It was a blunder pounded on Lingayats. True story, well narrated by Dr. Boratti Sir.
    👏👏

  7. ಬಸವರಾಜು ಪಿ. ಎ
    Apr 20, 2023 Reply

    ಮೈಸೂರಿನ ಮಹಾರಾಜರ ಕಾಲದ ಜನಗಣತಿಯ ಮಾಹಿತಿಯನ್ನು ತೆಗೆದುಕೊಂಡು ನೀವು ವಿಶ್ಲೇಷಿಸಿದ ರೀತಿ ಬಹಳ ಚೆನ್ನಾಗಿದೆ ಸರ್.

  8. Mahanthesh Kannavi
    Apr 20, 2023 Reply

    ಹರ್ಡೇಕರ್ ಮಂಜಪ್ಪನವರಿಗೆ ಬಸವ ಧರ್ಮದ ಬಗೆಗೆ ಸರಿಯಾದ ತಿಳುವಳಿಕೆ ಇರಲಿಲ್ಲವೆನ್ನುವುದ ತಿಳಿದು ತುಂಬಾ ನೋವಾಯಿತು…

  9. Vishu Yalagi
    Apr 23, 2023 Reply

    1881, 91ರ ಸಂದರ್ಭಗಳಲ್ಲಿ ನಮ್ಮ ಸಾಕ್ಷರ ಪ್ರಮಾಣವು ಕಡಿಮೆ ಇದ್ದು, ಜನಗಣತಿಯಲ್ಲಿ ಏನೇನಾಗುತ್ತಿದೆ ಎಂಬ ಅರಿವು ಸಾಮಾನ್ಯರನ್ನು ತಲುಪಿಯೇ ಇರಲಿಕ್ಕಿಲ್ಲ. ಕಲಿತವರು ಶ್ರೇಷ್ಠತೆಯ ಕೊಚ್ಚೆಯೊಳಗೆ ಕಚ್ಚಾಡುತ್ತಿದ್ದರು. ಬೋರಟ್ಟಿಯವರ ಲೇಖನದ ವಿಶ್ಲೇಷಣೆ ಕಣ್ಣತೆರೆಸುವಂತಿದೆ.

  10. Jagadeesh Haliyal
    Apr 27, 2023 Reply

    I truly enjoy reading your blog and I look forward to the new updates. Thank you sir.

  11. Indudhar D
    May 9, 2023 Reply

    This is a very well written article. Thank you sir.

  12. Sharan Kumar
    Jan 21, 2025 Reply

    ಮೊದಲು ಲಿಂಗಾಯತರ ಧರ್ಮ ಗುರು ಆಗಿರುವ ಬಸವಣ್ಣನವರ ಬಗ್ಗೆ ಬರೆಯುವಾಗ ಗೌರವ ಕೊಟ್ಟು ಬರೆಯುವುದನ್ನು ಕಲಿಯಿರಿ,ಎಲ್ಲರ ಬಗ್ಗೆ ಬರೆಯುವಾಗ ಬಹುವಚನದಲ್ಲಿ ಬರೆದು ಬಸವಣ್ಣನವರ ಬಗ್ಗೆ ಬರೆಯುವಾಗ ಮಾತ್ರ ಯಾವುದೇ ಗೌರವ ನೀಡದೆ ಏಕವಚನದಲ್ಲಿ ಕರೆಯುವ ಇವರ ಉದ್ದೇಶ ಏನು?? ಇದಕ್ಕೆ ಏನು ಕಾರಣ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮರೆತೆ…
ಮರೆತೆ…
July 4, 2022
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ತುತ್ತೂರಿ…
ತುತ್ತೂರಿ…
June 10, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ದಾರಿ ಬಿಡಿ…
ದಾರಿ ಬಿಡಿ…
December 6, 2020
ಗುಟುಕು ಆಸೆ…
ಗುಟುಕು ಆಸೆ…
May 8, 2024
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
Copyright © 2025 Bayalu