ಮುಕ್ತಾಯಕ್ಕ- ಅಲ್ಲಮರ ಸಂವಾದ
ಅದ್ವೈತವ ನೆಲೆಗೊಳಿಸಿ | ಎರಡಳಿದೆನೆಂಬವರು ||
ಶಿಶುಕಂಡ | ಕನಸಿನಂತಿರಬೇಕಲ್ಲದೆ ||
ನುಡಿದು ಹೇಳುವನ್ನಕ್ಕರ | ಭಿನ್ನವಲ್ಲದೇನು ಹೇಳಾ? ||
ಅರಿವರತು ಮರಹು ನಷ್ಟವಾಗಿ | ಗುರುವ ತೋರಿದೆನೆಂಬರು ||
ಇದಿರಿಂಗೆ ಕರುಳಕಲೆಯನರುಹುವ | ಪರಿಯೆಂತು ಹೇಳಾ? ||
ಮನದ ಕೊನೆಯ ಮೊನೆಯ | ಮೇಲಣ ಅರಿವಿನ ಕಣ್ಣಮುಂದೆ ||
ಸ್ವಯಂಪ್ರಕಾಶ ತೋರುತ್ತಿದ್ದಡೆ | ತಾನಾಗಬಲ್ಲನೆ? ||
ನೆರೆಯರಿತು ಮರೆಯಬಲ್ಲಡೆ | ಎನ್ನ ಅಜಗಣ್ಣನಂತೆ ||
ಶಬ್ದಮುಗ್ಧನಾಗಿರಬೇಕಲ್ಲದೆ | ಶಬ್ದಸಂದಣಿಯ ||
ಮಾತು ಸಯವಲ್ಲ | ನೋಡಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-900 / ವಚನ ಸಂಖ್ಯೆ-1100)
ಮುಕ್ತಾಯಕ್ಕ ಅಲ್ಲಮಪ್ರಭುಗಳನ್ನು ಪರೀಕ್ಷಿಸುತ್ತಿದ್ದಾರೆನ್ನುವ ತರ್ಕ ಈ ವಚನದಿಂದ ಉಂಟಾಗುತ್ತದೆ. ‘ಶಿಶು ಕಂಡ ಕನಸಿನಂತೆ’ ಕನಸನ್ನು ತನ್ನ ನಗುವಿನಲ್ಲೇ ವ್ಯಕ್ತ ಪಡಿಸುವ ಮಗುವಿನಂತೆ ಲಿಂಗಾಂಗ ಸಾಮರಸ್ಯವನ್ನು ಹೇಳಬೇಕು. ಬಾಯಲ್ಲಿ ಹೇಳಿದರೆ ದ್ವೈತವಲ್ಲವೆ? ಅಜಗಣ್ಣ ಮೌನದಲ್ಲೇ ಎಲ್ಲವನ್ನೂ ತಿಳಿಸಬಲ್ಲವನಾಗಿದ್ದ. ತಾವು ಮಾತಲ್ಲಿ ಹೇಳುತ್ತಿರುವ ಅನುಭಾವ ನನಗೇಕೋ ಪರಿಪೂರ್ಣ ಅನಿಸುತ್ತಿಲ್ಲ. ಕರುಳು ಅರಿಯುವ ಹಾಗೆ ಹೇಳುವ ದಾರಿ ಯಾವುದು? ಅಂಥ ಅರಿವಿನ ದಾರಿ ತೋರಬಲ್ಲಿರಾ? ನಿಮ್ಮ ಮಾತು ಶಬ್ದ ಮಾಡುತ್ತಿದ್ದಾವೆಯೇ ಹೊರತು ನನ್ನ ಅಂತರಂಗ ತಲುಪುತ್ತಿಲ್ಲ. ಅಜಗಣ್ಣ ಶಬ್ದಮುಗ್ಧನಾಗಿ, ನಿಃಶಬ್ದ ಗಂಭೀರನಾಗಿ ಅಂತರಂಗದ ಅರಿವನ್ನೆಲ್ಲ ಧಾರೆಯೆರೆದಿದ್ದಾನೆ. ಇಂಥ ಶಬ್ದ ಮುಗ್ಧತೆ ನಿಮಗೆ ಸಾಧ್ಯವೇ ಎಂದು ಪ್ರಶ್ನಿಸುವ ಮುಕ್ತಾಯಕ್ಕಾ ಆಧ್ಯಾತ್ಮದಲ್ಲಿ ಅಲ್ಲಮಪ್ರಭುಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲಂಥವರು! ಅಲ್ಲಮರಿಗೆ ತಾವು ಆಡಿದ ಮಾತಿಗೆ ತಾವೇ ಸಾಕ್ಷಿ ನೀಡುವ ಪ್ರಸಂಗ ಎದುರಾದ ಅಪರೂಪದ ಸಂವಾದ. ‘ಸಾಗರಂ ಸಾಗರೋಪಮೇಯಂ’ ಅನ್ನುವ ಹಾಗೆ ಅಲ್ಲಮರಿಗೆ ಅಲ್ಲಮರೇ ಸಾಟಿ! ಇದಕ್ಕೆ ಅವರ ಉತ್ತರ ಎಷ್ಟು ತರ್ಕಬದ್ಧ ಮತ್ತು ಶಬ್ದಾತೀತ ಎನ್ನುವುದಕ್ಕೆ ಈ ವಚನವೇ ಸಾಕ್ಷಿ:
ಮಾತೆಂಬುದು | ಜ್ಯೋತಿರ್ಲಿಂಗ ||
ಸ್ವರವೆಂಬುದು | ಪರತತ್ವ ||
ತಾಳೋಷ್ಟ್ರ ಸಂಪುಟವೆಂಬುದು | ನಾದಬಿಂದು ಕಳಾತೀತ ||
ಗುಹೇಶ್ವರನ ಶರಣರು | ನುಡಿದು ||
ಸೂತಕಿಗಳಲ್ಲಾ | ಕೇಳಾ ಮರುಳೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-273 / ವಚನ ಸಂಖ್ಯೆ-1444)
ಪರಿಪೂರ್ಣಜ್ಞಾನವಿರುವ ಭಕ್ತ ಸರ್ವಾಂಗಲಿಂಗಮಯನಾಗಿರುತ್ತಾನೆ. ಈ ಶರೀರದಿಂದ ಬಂದಂಥ ನುಡಿಗಳು ವಿಶ್ವವ್ಯಾಪಿಯಾಗಿರುವ ನಿಃಶಬ್ದದ ಅಲೆಯಿಂದ ಉತ್ಪತ್ತಿಯಾದಂಥವು. ಲಿಂಗಾನುಭಾವದ ಹಿನ್ನೆಲೆಯಲ್ಲಿ ನುಡಿದ ವಚನಗಳೆಲ್ಲಾ ನಾದ ಬಿಂದುಗಳಿಗೆ ನಿಲುಕದವು. ಇಂಥ ಎತ್ತರವನ್ನೇರಿ ನುಡಿವ ಶರಣರು ಸೂತಕಿಗಳಲ್ಲ. ಶರಣರು ಮಾತನಾಡುವುದು ಸೂತಕವಲ್ಲ ಅಂತ ತಿಳಿ ಹೇಳುತ್ತಾರೆ. ಇದಕ್ಕೆ ಮುಕ್ತಾಯಕ್ಕ ಮರುಪ್ರಶ್ನೆ ಮಾಡುತ್ತಾರೆ:
ತನುವಿನೊಳಗೆ ತನುವಾಗಿ | ಮನದೊಳಗೆ ಮನವಾಗಿ ||
ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ | ಕೆಲಬರಿಗೆ ಅರಿಯಬಪ್ಪುದೆ? ||
ಅಂತರಂಗದೊಳಗೆ | ಅದೆ ಎಂದಡೇನು? ||
ಮನ ಮುಟ್ಟುವನ್ನಕ್ಕರ | ಕಾಣಬಾರದು ||
ಬಹಿರಂಗದಲ್ಲಿ | ಅದೆ ಅಂದಡೇನು? ||
ಪೂಜಿಸುವನ್ನಕ್ಕರ | ಕಾಣಬಾರದು ||
ಸಾಕಾರವಲ್ಲದ | ನಿರಾಕಾ[ರಲಿಂಗವು ||
ವ್ಯಾಕುಲವುಳ್ಳನ್ನಕ್ಕರ | ಸಾಧ್ಯವಾಗದು ||
ಎನ್ನ ಮನದೊಳಗೆ | ಘನವನನುಗೊಳಿಸಿ ||
ತೋರುವರಿಲ್ಲದ | ಕಾರಣ ||
ಎನ್ನ ಅಜಗಣ್ಣನಿಕ್ಕಿದ | ದಸರಿದೊಡಕಿಂಗೆ ||
ಬೆರಗಾದೆ ಕಾಣಾ | ಪ್ರಭುವೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1115)
ಆಧ್ಯಾತ್ಮಿಕ ಅನುಭೂತಿಯಲ್ಲಿ ಶಾಶ್ವತವಾಗಿ ನಿಲ್ಲಬಲ್ಲ ವಚನವಿದು. ಸಾಕಾರ, ನಿರಾಕಾರ ಎರಡೂ ತುದಿಗಳಲ್ಲಿ ಕಾಣಸಿಗದ ಸತ್ಯವನ್ನು ಮಾರ್ಮಿಕವಾಗಿ ಹೇಳುತ್ತಾರೆ. ಅದೇ ರೀತಿ ಅಂತರಂಗದಲ್ಲಿದೆ, ಬಹಿರಂಗದಲ್ಲಿದೆ ಅನ್ನುವ ತತ್ವವೇ ಗೊಂದಲಕಾರಿ. ಅಂತರಂಗ ಮತ್ತು ಬಹಿರಂಗದ ಅರಿವಿನ ವಿಸ್ತಾರ ತಿಳಿಸಲು ಅಜಗಣ್ಣನಿಲ್ಲದೇ ನನ್ನ ಮನ ರೇಷ್ಮೆ ದಾರದ ತೊಡಕಾದಂತಾಗಿದೆ ಎಂದು ಮುಕ್ತಾಯಕ್ಕ ವ್ಯಾಕುಲತೆಯಿಂದ ಹೇಳುತ್ತಾರೆ. ಇದಕ್ಕೆ ಅಷ್ಟೇ ಸಮಾಧಾನದಿಂದ ಅಲ್ಲಮಪ್ರಭು ಉತ್ತರಿಸುತ್ತಾರೆ:
ಇಲ್ಲದ ಶಂಕೆಯನು | ಉಂಟೆಂದು ಭಾವಿಸಿದಡೆ ||
ಅದು ಕಣ್ಣ ಮುಂದೆ | ರೂಪಾಗಿ ಕಾಡುತ್ತಿಪ್ಪುದು ||
ಇಲ್ಲದ ತನುವ | ಉಂಟೆಂಬನ್ನಕ್ಕರ ||
ಅದೇ ಮಾಯೆಯಾಗಿ | ಕಾಡುತ್ತಿಪ್ಪುದು ||
ನಿಃಕ್ರಿಯಾಲಿಂಗಕ್ಕೆ | ಕ್ರಿಯಾಂತಲ್ಲದೆ ಆಗದೆಂಬವರ ||
ಸಂದು ಸಂಶಯ | ಮುಂದುಗೆಡಿಸುತ್ತಿಪ್ಪುದು ಕೇಳಾ ||
ಮನವ ಮನೆಯ | ಮಾಡಿಕೊಂಡಿಪ್ಪ ||
ಲಿಂಗದ | ಅನುವನರಿಯಬಲ್ಲಡೆ ||
ಗುಹೇಶ್ವರಲಿಂಗ | ದೂರವಿಲ್ಲ ಕೇಳಾ ಮುರುಳೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-224 / ವಚನ ಸಂಖ್ಯೆ-936)
ಇಲ್ಲದ ಶಂಕೆ ಇದೆ ಎಂದರಿತರೆ ಅದೆ ರೂಪವಾಗಿ ಕಾಣುತ್ತದೆ. ಲಿಂಗದೊಳಗೆ ಐಕ್ಯವಾದ ದೇಹವು ಇದೇ ಎಂದರೆ ಅದುವೆ ಮಾಯೆಯಾಗಿ ಕಾಡುವುದು. ಹೀಗೆ ಎಲ್ಲವೂ ಇದ್ದು ಇಲ್ಲವಾಗಿದೆ ಮತ್ತು ಎಲ್ಲವೂ ಇಲ್ಲದೆಯೂ ಎಲ್ಲವೂ ಇದೆ ಎನ್ನುವ ಉಭಯ ಸಂಶಯವನ್ನಳಿಯದ ಹೊರತು ಲಿಂಗದರಿವು ಉಂಟಾಗುವುದಿಲ್ಲ. ನೀನು ಆ ಜ್ಞಾನಪ್ರಕಾಶವನ್ನು ದೂರವಿಟ್ಟು ಅಜ್ಞಾನವೆಂಬ ಕತ್ತಲೆಯನ್ನು ನೋಡುತ್ತಿದ್ದೀಯಾ ಎನ್ನುತ್ತಾರೆ. ಅಂತರಂಗದ ಅರಿವಿನ ವಿಚಾರ ಕೇಳುತ್ತಲೆ ಮುಕ್ತಾಯಕ್ಕ ಮತ್ತೆ ಪ್ರಶ್ನಿಸುತ್ತಾರೆ:
ಗುರುವಚನದಿಂದಲ್ಲದೆ | ಲಿಂಗವನರಿಯಬಾರದು ||
ಗುರುವಚನದಿಂದಲ್ಲದೆ | ಜಂಗಮವನರಿಯಬಾರದು ||
ಗುರುವಚನದಿಂದಲ್ಲದೆ | ಪ್ರಸಾದವನರಿಯಬಾರದು ||
ಗುರುವಚನದಿಂದಲ್ಲದೆ | ತನ್ನ ತಾನರಿಯಬಾರದು ||
ಹಿಂದಣ ಜನ್ಮದಲ್ಲಿ | ಲಿಂಗವ ಪೂಜಿಸಿ ||
ಇಂದು | ಜ್ಞಾನೋದಯವಾದಡೆ ||
ಗುರುವಿಲ್ಲದ ಮುನ್ನ | ಆಯಿತ್ತೆನ್ನಬಹುದೆ? ||
ತನ್ನಲ್ಲಿ ತಾನು | ಸನ್ನಿಹಿತನಾದೆಹೆನೆಂದಡೆ ||
ಗುರುವಿಲ್ಲದೆ ಆಗದು ಕೇಳಾ | ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ||
ಆರೂಢಿಯ ಕೂಟ | ಸಮನಿಸದು ಕೇಳಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1109)
ಸಾಕಾರ ನಿರಾಕಾರದ ಅರಿವು ಇದ್ದರೂ ಅಣ್ಣನ ಅಗಲಿಕೆಯ ನೋವಿನಿಂದ ಅದರ ಆಳ-ಅಂತ್ಯ ಗಮನಕ್ಕೆ ಬರುತ್ತಿಲ್ಲ. ಗುರು ಇಲ್ಲದೆ ಲಿಂಗ-ಜಂಗಮ-ಪ್ರಸಾದದ ಅರಿವು ಹೇಗಾಗುತ್ತದೆ? ಲಿಂಗವೆಂಬ ಕುರುಹನ್ನು ಹಿಡಿದುಕೊಂಡು ಲಿಂಗಾಂಗ ಸಮರಸವನ್ನು ತಿಳಿ ಹೇಳಲು ಗುರುವೆನ್ನುವ ಜ್ಞಾನಜ್ಯೋತಿ ಬೇಕು. ಅಂತರಂಗದ ಅರಿವು ಪ್ರಕಾಶಿಸಬೇಕಾದರೆ ಅಜಗಣ್ಣನ ಗುರುಕಾರುಣ್ಯ ಬೇಕೆ ಬೇಕು. ಗುರುವಿಲ್ಲದೆ ತನ್ನಿಂದ ತಾನು ತಾನಾಗುವದಿಲ್ಲ ಎನ್ನುತ್ತಾರೆ ಮುಕ್ತಾಯಕ್ಕ. ಅದಕ್ಕೆ ಅಲ್ಲಮಪ್ರಭುಗಳ ಸಲಹೆ ಹಾಗೂ ಸಾಕಾರಕ್ಕೂ ನಿರಾಕಾರಕ್ಕೂ ಅವರು ನೀಡುವ ಸಮಂಜಸ ಉತ್ತರ ನಿಬ್ಬೆರಗಾಗಿಸುತ್ತದೆ.
ಗುರುವಿಂಗೂ ಶಿಷ್ಯಂಗೂ | ಆವುದು ದೂರ? ||
ಆವುದು ಸಾರ? | ಎಂಬುದನು ಆರು ಬಲ್ಲರು? ||
ಗುರುವೆ ಶಿಷ್ಯನಾದ | ತನ್ನ ವಿನೋದಕ್ಕೆ ||
ಶಿಷ್ಯನೆ ಗುರುವಾದ | ತನ್ನ ವಿನೋದಕ್ಕೆ ||
ಕರ್ಮವೆಂಬ ಕೌಟಿಲ್ಯ | ಎಡೆವೊಕ್ಕ ಕಾರಣ ||
ಭಿನ್ನವಾಗಿ ಇದ್ದಿತ್ತೆಂದಡೆ | ಅದು ನಿಶ್ಚಯವಹುದೆ? ||
ಆದಿ ಅನಾದಿಯಿಂದತ್ತತ್ತ | ಮುನ್ನಲಾದ ||
ಪರತತ್ವಮಂ ತಿಳಿದು | ನೋಡಲು ||
ನೀನೆ ಸ್ವಯಂ | ಜ್ಯೋತಿಪ್ರಕಾಶನೆಂದರಿಯಲು ||
ನಿನಗೆ ನೀನೆ ಗುರುವಲ್ಲದೆ | ನಿನ್ನಿಂದಧಿಕವಪ್ಪ ಗುರುವುಂಟೆ? ||
ಇದು ಕಾರಣ | ಗುಹೇಶ್ವರಲಿಂಗವು ತಾನೆ ||
ಎಂಬುದನು ತನ್ನಿಂದ ತಾನೆ | ಅರಿಯಬೇಕು ನೋಡಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-244 / ವಚನ ಸಂಖ್ಯೆ-1157)
ಯಾರು ಗುರು? ಯಾರು ಶಿಷ್ಯ? ಗುರು ಶಿಷ್ಯ ಸಂಬಂಧವೇನು? ಗುರು ಶಿಷ್ಯ ಎಷ್ಟು ದೂರದಲ್ಲಿದ್ದಾರೆ/ ಎಷ್ಟು ಸಮೀಪದಲ್ಲಿದ್ದಾರೆ? ಯಾರು ತಿಳಿದಿದ್ದಾರೆ? ಅದ್ವಯ ಸಿದ್ಧಾಂತದಲ್ಲಿ ನೆಲೆ ನಿಂತವನಿಗೆ ಗುರು- ಶಿಷ್ಯರಲ್ಲಿ ಭೇದ ಕಾಣಿಸುವುದಿಲ್ಲ. ಗುರುರೂಪದಲ್ಲಿರುವ ಬಹಿರಂಗ ಜ್ಞಾನ ಮತ್ತು ಅಂತರಂಗದಲ್ಲಿ ಅಡಗಿರುವ ಅರಿವಿನ ಜ್ಯೋತಿ ಎರಡೂ ಒಂದಾದಾಗ ಮಾತ್ರ ಜ್ಞಾನಪ್ರಕಾಶ ಬೆಳಗಲು ಸಾಧ್ಯ. ನಿನಗೆ ನೀನೇ ಗುರುವಾದಾಗ ಮಾತ್ರ ಇದನ್ನು ಸಾಧಿಸಲು ಸಾಧ್ಯ. ತಾಯಿ ಕೇಳು, ನೀನೇ ಪರಮ ಸತ್ಯದ ತತ್ವ. ಗುರುವನ್ನು ಹುಡಕಬೇಡಾ. ನಿನಗೆ ನೀನೇ ಗುರು. ನಿನ್ನ ಶಕ್ತಿ ನಿನಗೆ ಅರಿವಾದರೆ ಮತ್ತು ನೀನ್ಯಾರು ಅಂತ ಅರಿವಾದರೆ ನೀನೇ ಗುರು, ನೀನೇ ಶಿಷ್ಯ. ಅಷ್ಟು ಬೇಗ ಒಪ್ಪಿಕೊಳ್ಳೋದಿಲ್ಲ ಮುಕ್ತಾಯಕ್ಕ. ಎಷ್ಟಾದರೂ ಬೌದ್ಧಿಕ ಪ್ರಖರತೆಯ ಮೇರುಶಿಖರ ಅವರು.
ತನ್ನ ತಾನರಿದವಂಗೆ | ಅರಿವೆ ಗುರು ||
ಅರಿವರತು ಮರಹು ನಷ್ಟವಾದಲ್ಲಿ | ದೃಷ್ಟನಷ್ಟವೆ ಗುರು ||
ದೃಷ್ಟನಷ್ಟವೆ ಗುರು ತಾನಾದಲ್ಲಿ | ಮುಟ್ಟಿ ತೋರಿದವರಿಲ್ಲದಡೇನು? ||
ಸಹಜವ ನೆಲೆಗೊಳಿಸುವ | ನಿರ್ಣಯ ನಿಷ್ಪತ್ತಿಯೆ ಗುರು ನೋಡಾ ||
ಗುರು ತಾನಾದಡೂ ಗುರುವಿಡಿದಿರಬೇಕು | ಎನ್ನ ಅಜಗಣ್ಣನಂತೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1113)
ದೃಷ್ಟನಷ್ಟವೇ ಗುರು ಎಂದು ಲಿಂಗಾಂಗ ಸಮರಸದ ಅನುಭವ ಬರಬೇಕಾದರೆ ಗುರು ಎನ್ನುವ ತತ್ವ ಬೇಕೆ ಬೇಕೆನ್ನುವುದು ಮುಕ್ತಾಯಕ್ಕನ ಅಚಲ ವಿಶ್ವಾಸ. ಗುರು-ಶಿಷ್ಯರ ಸಾಮರಸ್ಯವನ್ನು ಒಪ್ಪಿಕೊಂಡರೂ ಅಜಗಣ್ಣನಂತ ಗುರು ಬೇಕು ಎನ್ನುವುದು ಅವರ ವಾದ. ಕಣ್ಣಿಗೆ ಬಟ್ಟೆ ಕಟ್ಟಿ ಜ್ಯೋತಿಯನ್ನು ನೋಡು ಅಂದರೆ ಹೇಗೆ ಕಾಣುತ್ತದೆ. ಸಮರ್ಥ ಗುರು ಕಣ್ಣಿಗೆ ಕಟ್ಟಿದ ಅಜ್ಞಾನದ ಬಟ್ಟೆಯನ್ನು ಕಳಚಿದರೆ ಮಾತ್ರ ಅರಿವು ಗೋಚರಿಸುತ್ತದೆ. ನಾನೇ ಗುರುವಾಗಿದ್ದರೂ ನನ್ನಂತರಂಗದಲ್ಲಿ ಸಮರಸವಾಗಿರುವ ಶಿಷ್ಯನ ಅನುಭಾವದ ಎಚ್ಚರ ನನ್ನಲ್ಲಿರಬೇಕು. ನನ್ನ ಅರಿವನ್ನು ತನ್ನ ಅರಿವಿನೊಂದಿಗೆ ಸೇರಿಸಿದ ಅಂತರಂಗದ ಮತ್ತು ಬಹಿರಂಗದ ಗುರು ಅಜಗಣ್ಣನು ನನ್ನ ಅರಿವನ್ನು ಸಾಕಾರಗೊಳಿಸಲು ಸಾಧ್ಯವೆನ್ನುತ್ತಾರೆ. ಅದಕ್ಕೆ ಅಲ್ಲಮಪ್ರಭು ಹೇಳಿದ ಈ ವಚನದಿಂದ ಅವರ ಶಾಂತಚಿತ್ತ ಮತ್ತು ವಿಶಾಲ ವಿದ್ವತ್ತಿನ ಪರಿಚಯ ನಮಗಾಗುತ್ತದೆ.
ತೆರಹಿಲ್ಲ ಘನ ಕುರುಹಿಂಗೆ | ಬಾರದ ಮುನ್ನ ||
ತೋರಿದವರಾರು ಹೇಳಾ | ಮಹಾ ಘನ ಲಿಂಗೈಕ್ಯವನು? ||
ಆರೂಢದ ಕೂಟದಲ್ಲಿ | ನಾನಾರುವ ಸಾಕ್ಷಿಯ ಕಾಣೆನು ||
ಬೇರೆ ಮಾಡಿ ನುಡಿಯಬಹುದೆ | ಪ್ರಾಣಲಿಂಗವನು? ||
ಅರಿವು ಸ್ವಯವಾಗಿ | ಮರಹು ನಷ್ಟವಾದಲ್ಲಿ ||
ಗುಹೇಶ್ವರಾ ನಿಮ್ಮ | ಶರಣನುಪಮಾತೀತನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-191 / ವಚನ ಸಂಖ್ಯೆ-682)
ಎಲ್ಲವನ್ನೂ ಒಳಗೊಂಡಂಥ ಅಗಮ್ಯ, ಅಗೋಚರ ಪರಿಪೂರ್ಣ ಸ್ಥಿತಿಯೇ ಮಹಾಘನ. ಶರಣನಿಗೆ ಮಹಾಘನದಲ್ಲಿ ತನ್ನ ಸ್ವರೂಪವನ್ನೇ ಕಾಣುವುದರಿಂದ ಅದರೊಳಗೆ ಒಂದಾಗಿ ನಿಲ್ಲುತ್ತಾನೆ. ದೇಹ ಮತ್ತು ಮನಸ್ಸನ್ನು ಬೇರೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ತನ್ನೊಳಗೆ ಸಮಷ್ಠಿಯನ್ನು ತುಂಬಿಕೊಂಡಿರುವ ಆರೂಢ ಕೂಟವನ್ನು ದ್ವೈತ ದೃಷ್ಟಿಯಿಂದ ನೋಡುವವರಿಗೆ ಘನವು ಕಾಣುವುದಿಲ್ಲ. ಶರಣಸತಿ-ಲಿಂಗಪತಿ ಎನ್ನುವ ಭಾವ ಹೊಂದಿದ ಶರಣರಲ್ಲಿ ಪ್ರಾಣಲಿಂಗ- ಇಷ್ಟಲಿಂಗಗಳು ಒಂದು ಎನ್ನುವ ಭಾವವಿರುತ್ತದೆ. ಅದನ್ನು ಬೇರೆ ಬೇರೆ ಎನ್ನಲಾಗದು. ಶರಣರು ಅನುಪಮ ಜ್ಞಾನಿಗಳು. ಅವರಿಗೆ ಯಾವ ಹೋಲಿಕೆಯೂ ಇಲ್ಲ. ಈ ಮಾತಿಗೆ ಮುಕ್ತಾಯಕ್ಕ ಕೊಟ್ಟ ಉತ್ತರ ಅಲ್ಲಮ ಪ್ರಭುಗಳ ‘ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು’ ಎನ್ನುವ ಶಬ್ದಪುಂಜವನ್ನು ಒರೆಗೆ ಹಚ್ಚಿ ನೋಡುವಂತೆ ಕಾಣುತ್ತದೆ.
ನಡೆದು ನಡೆದು ನಡೆಯ ಕಂಡವರು | ನುಡಿದು ನುಡಿದು ಹೇಳುತ್ತಿಹರೆ? ||
ನುಡಿದು ನುಡಿದು ಹೇಳುವನ್ನಕ್ಕರ | ನಡೆದುದೆಲ್ಲಾ ಹುಸಿಯೆಂಬೆನು ||
ಮಾತಿನ ಮಥನದಿಂದಾದ ಅರಿವು | ಕರಣಮಥನದಿಂದಾದುದಲ್ಲದೆ ||
ಅನುಪಮ ಸ್ವರಭೇದವಾದ | ಪರಿ ಎಂತು ಹೇಳಾ? ||
ಇದಿರ ಗೆಲಬೇಕೆಂದು | ನುಡಿದುಕೊಂಡಡೇನು ||
ಮನಕ್ಕೆ ಮನವೆ ಸಾಕ್ಷಿಯಾಗಿ | ನಿಃಪತಿಯಲ್ಲ ನೋಡಾ? ||
ಎನ್ನ ಅಜಗಣ್ಣತಂದೆ | ಶಬುದಕ್ಕೆ ಹೇಸಿ ಮುಗುದನಾದನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1118)
ನಿಮ್ಮ ಮಾತು ನಿಮ್ಮ ನಡೆ ಬೇರೆ ಬೇರೆ ಅಂತ ಅನಿಸುತ್ತಿದೆ. ನನ್ನ ಮನದ ಕತ್ತಲೆ ಕಳೆದು ನಿಜಮಾರ್ಗ ತೋರಬೇಕು. ನಿಜ ಮಾರ್ಗದ ಅನ್ವೇಷಣೆಯಲ್ಲಿ ಶಬ್ದರೂಪದಲ್ಲಿ ಉಪದೇಶಿಸುವುದು ನನ್ನ ಮನಕ್ಕೆ ತಟ್ಟುತ್ತಿಲ್ಲ. ಯಾಕೆಂದರೆ ನನ್ನಣ್ಣ ಶಬ್ದವಿಲ್ಲದೇ ಅರಿವಿನ ಅಂತರಂಗವನ್ನು ತೆರೆಸಿದವನು. ಅದು ಲೋಕವನ್ನೂ ಮೀರಿದ ಅಲೌಕಿಕ ತತ್ವ. ಮುಕ್ತಾಯಕ್ಕನವರಿಗೆ ಎಲ್ಲರೂ ತನ್ನಣ್ಣನಂತೆ ಇರಬೇಕೆನ್ನುವ ಆಸೆ. ಅಲ್ಲಮಪ್ರಭುಗಳು ಮುಕ್ತಾಯಕ್ಕನವರ ಕಣ್ಣನ್ನು ತೆರೆಸಿ ಅವರ ಅನುಭಾವದ ನಿಲುವನ್ನು ಲೋಕಕ್ಕೆ ತೋರಿಸಬೇಕೆಂದು ಬಂದವರು. ಹಾಗಾಗಿ ಅವರ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಾ ಬರುತ್ತಾರೆ:
ತನ್ನ ತಾನರಿದಡೆ | ನುಡಿಯೆಲ್ಲ ತತ್ವ ನೋಡಾ ||
ತನ್ನ ತಾ ಮರೆದಡೆ | ನುಡಿಯೆಲ್ಲಾ ಮಾಯೆ ನೋಡಾ ||
ಅರಿದು ಮರೆದ | ಶಿವಯೋಗಿಯ ಶಬ್ದವೆಲ್ಲವು ||
ಉಪದೇಶವಲ್ಲದೆ | ಭಿನ್ನವುಂಟೆ? ||
ನಿನ್ನ ಮನದ | ಕಳವಳವ ತಿಳುಹಲೆಂದು ||
ಮಾತನಾಡಿಸಿ | ನೋಡಿದಡೆ ||
ಎನ್ನ ಮನದೊಳಗೆ | ಕಂದು ಕಲೆ ಎಂಬುದಿಲ್ಲ ನೋಡಾ ||
ನಮ್ಮ ಗುಹೇಶ್ವರಲಿಂಗಕ್ಕೆ | ನೀನು ಕರುಣದ ಶಿಶುವಾದ ||
ಕಾರಣ ಬಾಯ್ದೆಗೆದೆನಲ್ಲದೆ | ಭಿನ್ನವುಂಟೆ ಹೇಳಾ ಮರುಳೆ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-249 / ವಚನ ಸಂಖ್ಯೆ-1208)
ಅಲ್ಲಮಪ್ರಭು ಅಣ್ಣನನ್ನು ಕಳೆದುಕೊಂಡು ದುಃಖದಲ್ಲಿರುವ ಮುಕ್ತಾಯಕ್ಕನವರಿಗೆ ಸಂತೈಸುವಂತೆ ಉತ್ತರಿಸುತ್ತಾರೆ. ಲಿಂಗಾಂಗ ಸಾಮರಸ್ಯವಿಲ್ಲದಿದ್ದರೆ ಶರಣನಾಗಲು ಅವಕಾಶವಿಲ್ಲ. ತನ್ನನ್ನು ತಾನರಿತ ಶರಣನು ನುಡಿವ ಮಾತುಗಳೆಲ್ಲ ತತ್ವಗಳು. ಸಾಧಕರಲ್ಲದವರ ಮಾತು ಮಾಯೆಯೆಂಬ ಸಂಕೋಲೆಯಿಂದ ಬಂಧಿತವಾಗಿರುತ್ತವೆ. ಅರಿವಿನ ಅನುಭಾವದ ಮಾತುಗಳು ಪರವಶದಿಂದ ಬಂದವುಗಳಲ್ಲ. ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿದ್ದೀಯಾ. ನೀನು ನಮ್ಮ ಗುಹೇಶ್ವರನ ಕರುಣದ ಶಿಶು. ನಿನ್ನ ಕಳವಳ ಹೋಗಲಾಡಿಸಲು ಬಂದ ನನ್ನಲ್ಲಿ ಯಾವ ಕುಂದು ಕಲೆಗಳೂ ಇಲ್ಲವೆನ್ನುತ್ತಾರೆ. ಮುಕ್ತಾಯಕ್ಕ ಕೇಳುವ ಮುಂದಿನ ಪ್ರಶ್ನೆ 12 ನೇ ಶತಮಾನದ ಶರಣ- ಶರಣೆಯರ ಬೌದ್ಧಿಕ ನೆಲೆಯ ಎತ್ತರವನ್ನೂ ಸಹ ತಿಳಿಸುತ್ತದೆ.
ನುಡಿಯ ಹಂಗಿನ್ನೂ | ನಿಮಗೆ ಹಿಂಗದು ||
ನಡೆಯನೆಂತು | ಪರರಿಗೆ ಹೇಳುವಿರಿ? ||
ಒಡಲ ಹಂಗಿನ | ಸುಳುಹು ಬಿಡದು ||
ಎನ್ನೊಡನೆ ಮತ್ತೇತರ | ಅನುಭವವಣ್ಣಾ? ||
ತಾನಾದಲ್ಲದೆ ಇದಿರಿಂಗೆ | ಹೇಳಬಹುದೆ? ||
ಅರಿವ ತೋರಬಲ್ಲಡೆ | ತನ್ನನರುಹದೆ ಅರಿವನು ||
ಕಾಣಾ ಎನ್ನ | ಅಜಗಣ್ಣತಂದೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1121)
ನಿಮಗೆ ಮಾತಿನ ಹುಚ್ಚು ಇನ್ನೂ ಹೋದಂಗಿಲ್ಲ, ನಡೆಯನ್ನು ಹೇಗೆ ಕಲಿಸುತ್ತೀರಿ? ಅನುಭಾವವನ್ನು ಹೇಗೆ ತಿಳಿಸುತ್ತೀರಿ? ನಿಮ್ಮ ನುಡಿಯಲ್ಲಿ ಶಬ್ದಗಳ ಹಂಗು ಇದೆ. ಶಬ್ದಾಡಂಬರದ ಮಾತುಗಳಲ್ಲಿ ಅನುಭವದ ಕೊರತೆ ಕಾಣುತ್ತಿದೆ. ನನ್ನಣ್ಣ ಶಬ್ದಾಡಂಬರವಿಲ್ಲದೆ ನಿಜ ಅರಿವನ್ನು ತೋರಿದ. ಅಲ್ಲಮ ಪ್ರಭುಗಳ ವ್ಯಕ್ತಿತ್ವವೇ ನಿರಾಳ. ಶಾಂತವಾಗಿ, ಅಷ್ಟೇ ಪ್ರಬುದ್ಧವಾಗಿ ಉತ್ತರ ನೀಡುತ್ತಾರೆ.
ಅಂಗದ ಕಳೆ | ಲಿಂಗದಲ್ಲಿ ಅರತ ಬಳಿಕ ||
ಅಂಗವೆಂಬ ಶಂಕೆಯಿಲ್ಲ | ನೋಡಾ ಶರಣಂಗೆ ||
ಪ್ರಾಣದ ಕಳೆ | ಅರಿವಿನಲ್ಲಿ ಅರತ ಬಳಿಕ ||
ಶಬ್ದ ಸಂದಣಿಗೆ | ಹಂಗಿಲ್ಲ ನೋಡಾ ||
ಶರಣ ನಡೆದಡೆ ನಿರ್ಗಮನಿ | ನುಡಿದಡೆ ನಿಃಶಬ್ದ ||
ಗುಹೇಶ್ವರನ ಶರಣಂಗೆ ಕುರುಹಿಲ್ಲ | ಕೇಳಾ ಎಲೆ ಅವ್ವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-192 / ವಚನ ಸಂಖ್ಯೆ-700)
ಮೋಹ ವ್ಯಾಮೋಹಗಳೆಲ್ಲವೂ ಕರಗಿ ಲಿಂಗದಲ್ಲಿ ಲೀನವಾಗಿ ಶರಣನ ತನು ಶುದ್ಧವಾಗಿರುತ್ತದೆ. ಮಾಗಿದ ಅಂಗವು ಲಿಂಗ ಗಮನಿ ಹಾಗೆಯೇ ನಿರ್ಗಮನಿಯೂ ಕೂಡ. ಅದುವೇ ಲಿಂಗಾಂಗ ಸಾಮರಸ್ಯ. ಈ ತತ್ವ ಅಳವಟ್ಟ ಶರಣರ ಹೆಜ್ಜೆ ಗುರುತಿನ ಕುರುಹುಗಳು ಅಗೋಚರ. ಮಾಯೆಗಳೆಂಬ ತೇವಗಳೆಲ್ಲ ಸುಟ್ಟು ಹೋದ ಬಳಿಕ ಪ್ರಾಣಲಿಂಗದ ಅನುಭಾವವಾಗುತ್ತದೆ. ಆಗ ಶಬ್ದಾಡಂಬರಗಳು ಇಲ್ಲ. ಶರಣರ ನುಡಿಗಳು ನಿಃಶಬ್ದ. ಅರಿವನ್ನು ಪಡೆದ ಶರಣನಿಗೆ ಇಷ್ಟಲಿಂಗ ಪ್ರಾಣಲಿಂಗ ಒಂದೇ. ಆದ್ದರಿಂದ ಶಬ್ದಾಡಂಬರಕ್ಕೆ ಬಹು ದೂರ ಶರಣ. ಗುಹೇಶ್ವರ ಲಿಂಗವನ್ನಪ್ಪಿದ ಶರಣನಿಗೆ ಯಾವ ಆಕಾರ ಕುರುಹುಗಳಿಲ್ಲ. ಮುಕ್ತಾಯಕ್ಕ ಸುಮ್ಮನಾಗುವುದಿಲ್ಲ. ಇಲ್ಲಿ ನಡೆವ ಸಂಭಾಷಣೆ ಸಂಘರ್ಷದ ರೂಪದಲ್ಲಿದೆ ಎನಿಸಬಹುದು. ಆದರೆ ಅರಿವಿನಲ್ಲಿ ಎತ್ತರಕ್ಕೆ ಏರಿದವರಿಗೆ ಮೇಲು ಕೀಳೆಂಬ ಭಾವ ಇರುವುದಿಲ್ಲ. ಎದುರಿಗೆ ಇದ್ದವರ ಖ್ಯಾತಿ ಪ್ರಖ್ಯಾತಿ ಏನೇ ಇದ್ದರೂ ತಪ್ಪು ಅಂತ ಹೇಳುವ ಎದೆಗಾರಿಕೆ ಇರುತ್ತದೆ. ಇಲ್ಲಿಯೂ ಅಷ್ಟೇ ಮುಕ್ತಾಯಕ್ಕನ ಪ್ರಶ್ನೆಗಳು ಎಷ್ಟೇ ಕಠಿಣ ಇದ್ದರೂ ಅಲ್ಲಮಪ್ರಭುಗಳ ಉತ್ತರಗಳು ಅಷ್ಟೇ ನಿರಾಳವಾಗಿವೆ.
ಕೈಯದು ಕುರುಹು | ಬಾಯದು ಬೊಬ್ಬೆ ||
ಉಲಿಯದಿರೊ ಭಾವಾ | ಉಲಿಯದಿರೊ ಭಾವಾ ||
ವಾರಿಕಲ್ಲ ಕೊಡನಲ್ಲಿ | ಮುತ್ತು ಮಾಣಿಕವ ತುಂಬಿ ||
ಎತ್ತುವರಿಲ್ಲದೆ | ಸಖಿಯನರಸುತಿಪ್ಪೆ ||
ಮನದ ತನುವಿನಲ್ಲಿ | ಆ ತನುವಿನ ಮನದಲ್ಲಿ ||
ತನಗೆ ತಾನೆತ್ತಿಕೊಂಡಡೆ | ಮನ ಮೇರೆದಪ್ಪಿ ||
ಕರಗಿ ಉಕ್ಕಿತ್ತು | ನಮ್ಮ ಅಜಗಣ್ಣನ ಯೋಗ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1107)
ಅಯ್ಯಾ ಅರಿವನ್ನು ಶಬ್ದದಲ್ಲಿ ಹೇಳುವ ಸಾಹಸ ಮಾಡಬೇಡ. ಅಯ್ಯಾ ಮಾತನಾಡಬೇಡ. ನಿನ್ನ ಕೈ-ಬಾಯಿಯ ಮೇಲೆ ನಿನಗೆ ನಿಯಂತ್ರಣವಿಲ್ಲ. ನಿನ್ನ ಶರೀರದಲ್ಲಿನ ಜ್ಞಾನಭಂಡಾರವು ಮಂಜಿನ ಕೊಡದಲ್ಲಿ ತುಂಬಿದ ಮುತ್ತು, ರತ್ನ, ಮಾಣಿಕ್ಯಗಳಂತಿದೆ. ಯಾವಾಗ ಕರಗಿ ಹೋಗುವುದೋ ಗೊತ್ತಿಲ್ಲ. ನೀನು ಅದನ್ನು ಎತ್ತುವುದಕ್ಕಾಗಿ ಸ್ತ್ರೀಯರ ಸಹಾಯ ಕೇಳುತ್ತಿದ್ದೀಯಾ. ಆದರೆ ನನ್ನಣ್ಣ ಅಜಗಣ್ಣ ತನ್ನ ತನುವಿನಲ್ಲಿ ಮತ್ತು ತನುವಿನಲ್ಲಿರುವ ಮನದಲ್ಲಿನ ಅರಿವು ಆಚಾರಗಳಲ್ಲಿ ಶ್ರೇಷ್ಠತೆ ಹೊಂದಿದ್ದನು. ದುಃಖತಪ್ತಳಾಗಿದ್ದ ಮುಕ್ತಾಯಕ್ಕಳ ಈ ಪ್ರಶ್ನೆಗೆ ಉತ್ತರ ನೀಡುತ್ತಾರೆ ಅಲ್ಲಮಪ್ರಭುಗಳು.
ಅರಿವುಗೆಟ್ಟು | ಕುರುಹಳಿದು ||
ಭಾವಭ್ರಾಂತು | ನಿಭ್ರಾಂತವಾದವರ ಕೈಯಲ್ಲಿ ||
ಕುರುಹನರಸುವರೆ | ಹೇಳಾ? ||
ತಾನಳಿದು ತಾನುಳಿದು | ತಾನುತಾನಾದ ನಿಜಶರಣಂಗೆ ||
ಅಂತರಂಗದಲ್ಲಿ | ಒಂದು ಅರಿವುಂಟೆ? ||
ಗುಹೇಶ್ವರನ | ಶರಣರ ನಿಲುವು ||
ಕಾಯಗೊಂಡವರ ಕಣ್ಣಿಂಗೆ | ಸಂದೇಹವಾಗಿಪ್ಪುದು ||
ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು | ನೋಡಾ ಮರುಳೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-212 / ವಚನ ಸಂಖ್ಯೆ-838)
ಅರಿವು ಕೆಟ್ಟು ನಷ್ಟವಾಗಿರುವವರ, ತನ್ನ ತಾನರಿಯದವರ, ಅನುಭಾವದ ಕಾಂತಿ ಕರಗಿ ಹೋದವರಲ್ಲಿ ಯಾವುದರ ಕುರುಹನ್ನು ತಿಳಿಯಬಹುದು? ತಾನೆಂಬ ಭಾವವಳಿದು ಲಿಂಗಾಂಗ ಸಾಮರಸ್ಯ ಹೊಂದಿದ ಶರಣನಿಗೆ ತನು ಅಥವಾ ಮನವೆಂಬ ಒಂದೇ ಭಾವವಿಲ್ಲ. ಅವನು ಶರಣಸತಿ-ಲಿಂಗಪತಿಯೆಂಬ ಏಕೋಭಾವದ ನಿಜಶರಣ. ಕೇವಲ ಬಹಿರಂಗದ ತನುವ ನೋಡಿ ನಿರ್ಣಯಕ್ಕೆ ಬರುವವರು ಅಂತರಂಗದ ಅರಿವನ್ನು ಕಾಣಲಾರದ ಸಂದೇಹಿಗಳು. ನಿಸ್ಸಂದೇಹಿಗಳು ಲಿಂಗಾಂಗ ಸಾಮರಸ್ಯದ ನಿಜ ಕಾಯವನ್ನು ಕಾಣುತ್ತಾರೆ. ಅದಕ್ಕೆ ಮುಕ್ತಾಯಕ್ಕನ ದಿಟ್ಟತನದ ಮರುಪ್ರಶ್ನೆ ಎಂಥವರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.
ನುಡಿಯೆನೆಂಬಲ್ಲಿಯೆ | ನುಡಿ ಅದೆ ||
ನಡೆಯೆನೆಂಬಲ್ಲಿಯೆ | ನಡೆ ಅದೆ ||
ಭಾವಿಸೆನೆಂಬಲ್ಲಿಯೆ | ಭಾವ ಅದೆ ||
ಅರಿದು ಮರೆದೆನೆಂಬಲ್ಲಿಯೆ | ಅರಿವು ಮರವೆ ಅದೆ ||
ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ | ಅಲ್ಲಿಯೆ ಅಂಗ ಅದೆ ||
ಅನಂಗಸಂಗಿಯಾದೆನೆಂಬಲ್ಲಿಯೆ | ವಿಷಯ ಸೂತಕ ಅದೆ ||
ನಾನೆ ನಾನಾದೆನೆಂಬಲ್ಲಿಯೆ | ನೀನೆಂಬುದು ಅದೆ ||
ಅರಿದು ಮರೆದ | ಪರಿ ಎಂತು ಹೇಳಾ? ||
ಅರಿವು ನಷ್ಟವಾಗಿ | ಮರಹು ಲಯವಾಗಿಪ್ಪಡೆ ||
ಎನ್ನ ಅಜಗಣ್ಣತಂದೆಯಲ್ಲದೆ | ಮಾತ್ತಾರನೂ ಕಾಣೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1122)
ಚತುರತೆಯಿಂದ ಕೂಡಿದ ಶಬ್ದ ಜೋಡಣೆಗಳ ವಿಸ್ತಾರವನ್ನು ಇಲ್ಲಿ ಕಾಣಬಹುದು. ಅಜಗಣ್ಣ ಏಕೆ ನಿಃಶಬ್ದನಾಗಿದ್ದ ಎನ್ನುವ ಮೂಲ ತತ್ವದ ವ್ಯಾಖ್ಯಾನ ನೀಡುವಂತಿದೆ. ಅಂಗದಲ್ಲಿ ಲೀನವಾಗುವ ಲಿಂಗ, ಲಿಂಗಾಂಗ ಸಾಮರಸ್ಯವನ್ನು ಸಾರುವಲ್ಲಿ ಅಂಗವೂ ಇದೆ. ಅದರಿಂದ ಶಬ್ದಗಳೂ ಹೊರಡುತ್ತವೆ. ಅಂಗ ಸಂಗವಾದರೂ ಇರಲಿ, ಅನಂಗಸಂಗವಾದರೂ ಇರಲಿ ಅಲ್ಲಿ ವಿಷಯ ವಾಸನೆಗಳು ಕಾಣುತ್ತಿವೆ. ನಾನು, ನೀನು, ಆನು, ತಾನು ಎನ್ನುವದರಲ್ಲಿಯೇ ನಾನು ಎನ್ನುವ ಅಹಂಕಾರದ ಬೀಜ ಮೊಳಕೆಯೊಡೆದಿದೆ. ನಾನು ನೀನೆಂಬ ಹಿನ್ನೆಲೆಯಲ್ಲಿ ನಾನಿಲ್ಲ ನೀನಿಲ್ಲ ನಾನಿದ್ದೆ ನೀನಿದ್ದೆ ಎನ್ನುವ ಅರಿವಿನ ಮರೆಯ ತತ್ವವೇನು ಎಂದು ಕೇಳುತ್ತಾರೆ ಮುಕ್ತಾಯಕ್ಕ. ಅಲ್ಲಮಪ್ರಭು ಇದಕ್ಕೆ ಸಮರ್ಥವಾಗಿ ಉತ್ತರಿಸಿದ್ದಾರೆ:
ಅಂಗ ಅನಂಗವೆಂಬೆರಡೂ ಅಳಿದು | ನಿಜದಲ್ಲಿ ನಿಂದ ಲಿಂಗೈಕ್ಯನ ||
ಅಂಗದಲುಳ್ಳ ಕ್ರೀಗಳೆಲ್ಲವೂ | ಲಿಂಗಕ್ರೀಗಳು ನೋಡಾ ||
ಮನೋಲಯವಾಗಿಪ್ಪ | ಲಿಂಗೈಕ್ಯನ ||
ಅನುಭಾವವೆಲ್ಲವೂ ಜ್ಞಾನನಷ್ಟ | ಶಬ್ದ ನೋಡಾ ||
ತನ್ನಲ್ಲಿ ತಾನು | ತದ್ಗತವಾಗಿಪ್ಪ ಶಿವಯೋಗಿಗೆ ||
ಭಿನ್ನವಿಲ್ಲ ನೋಡಾ | ಗುಹೇಶ್ವರ ಸಾಕ್ಷಿಯಾಗಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-192 / ವಚನ ಸಂಖ್ಯೆ-696)
ಅಲ್ಲಮಪ್ರಭುಗಳ ಅನುಭಾವದಿಂದ ಮಂಡಿಸುವ ವಿಚಾರಗಳು ಅಭೂತಪೂರ್ವ. ಲಿಂಗಾಂಗ ಸಾಮರಸ್ಯ ಸಾಧಿಸಿ ಐಕ್ಯಸ್ಥಲದಲ್ಲಿ ನಿಂದವನು ನಿಜಶರಣ. ಇಂತಹ ಶರಣನ ಕ್ರಿಯೆಗಳೆಲ್ಲ ಲಿಂಗಕ್ರಿಯೆಗಳು. ತನು-ಮನಭಾವವೆರಡೂ ವಿಲೀನವಾಗಿ ಲಿಂಗಾಂಗ ಸಾಮರಸ್ಯ ಕಂಡುಕೊಂಡ ಶರಣನ ಅನುಭಾವವೆಲ್ಲ ಲಿಂಗಾನುಭಾವ. ಇಂಥ ಅನುಭಾವದಿಂದ ಹೊರಬರುವ ಜ್ಞಾನಪೂರ್ಣ ಶಬ್ದಗಳು ನಿಃಶಬ್ದಗಳು. ಇದರಾಚೆ ಇರುವ ಶಿವಯೋಗಿಗೆ ಹೊರಗೊಳಗೆಂಬ ಭಿನ್ನಭಾವವಿರುವುದಿಲ್ಲವೆಂಬುದು ಗುಹೇಶ್ವರನ ಸಾಕ್ಷಿಯಾಗಿ ಸತ್ಯ ಎಂದು ತಿಳಿ ಹೇಳುತ್ತಾರೆ. ಅಯ್ಯಾ ಮತ್ತೆ ಮತ್ತೆ ಮಾತುಗಳಿಂದ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡತಾ ಇದ್ದೀರಿ. ಇದಕ್ಕೆ ಪರಿಹಾರವೇನು? ಬರಿದಾದ ಬಾವಿಗೆ ಮೆಟ್ಟಿಲನ್ನು ಕಟ್ಟುವ ಪ್ರಯತ್ನವೇಕೆ ಎಂದು ಕೇಳುತ್ತಾರೆ ಮುಕ್ತಾಯಕ್ಕ.
ಸಿಡಿಲು ಹೊಯ್ದ | ಬಾವಿಗೆ ಸೋಪಾನವೇಕೋ? ||
ನೆರೆಯರಿದ ಬಳಿಕ ಮತ್ತೆ | ಮತಿ ಹುಟ್ಟಲುಂಟೆ? ||
ಸೊಡರುಳ್ಳ ಮನೆಗೆ ಮತ್ತೆ | ತಮಂಧವೆಂಬುದೇನೋ? ||
ತನ್ನಲ್ಲಿ ತಾನು | ತದ್ಗತವಾದ ಬಳಿಕ ||
ಬೊಮ್ಮ | ಪರಬೊಮ್ಮವಾದೆನೆಂಬುದಿಲ್ಲ ||
ನೋಡಾ ಎನ್ನ | ಅಜಗಣ್ಣತಂದೆಗೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-903 / ವಚನ ಸಂಖ್ಯೆ-1128)
ಸಿಡಿಲು ಬಡಿದು ನೀರು ಬತ್ತಿ ಹೋದ ಬಾವಿಗೆ ಮೆಟ್ಟಿಲು ಕಟ್ಟುವ ಸಾಹಸವನ್ನೇಕೆ ಮಾಡುತ್ತಿರುವಿರಿ? ಬೆಳಕಿನಲ್ಲಿ ಬೆಳಗುತ್ತಿರುವ ಮನೆಗೆ ಕತ್ತಲೆಯಿದೆಯೇ? ಪರಿಪೂರ್ಣ ಶರಣನಿಗೆ ತತ್ವ ಪರತತ್ವ ಎನ್ನುವ ಅವಶ್ಯಕತೆ ಇದೆಯೇ? ಪ್ರಜ್ಞೆಯಲ್ಲಿ ಮಿಂದೆದ್ದ ಶರಣ ಅಜಗಣ್ಣನಿಗೆ ಇಹ ಪರವೆಂಬ ಸ್ಥಲವಿಲ್ಲವೆಂದು ಉಪಮೆಗಳ ಮೂಲಕ ಮುಕ್ತಾಯಕ್ಕ ಉತ್ತರಿಸುತ್ತಾರೆ. ಅದಕ್ಕೆ ಅಲ್ಲಮಪ್ರಭು-
ನುಡಿಯಿಂದ | ನಡೆಗೆಟ್ಟಿತ್ತು ||
ನಡೆಯಿಂದ | ನುಡಿಗೆಟ್ಟತ್ತು ||
ಭಾವದ ಗುಸುಟು ಅದು | ತಾನೆ ನಾಚಿ ನಿಂದಿತ್ತು ||
ಗುಹೇಶ್ವರನೆಂಬ ಅರಿವು | ಸಿನೆ ಬಂಜೆಯಾಯಿತ್ತು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-191 / ವಚನ ಸಂಖ್ಯೆ-691)
ಸಂಪೂರ್ಣ ಅರಿವನ್ನು ಪಡೆದ ಶರಣನ ಮಾತುಗಳು ಮೌನವಾಗುತ್ತವೆ. ಅಹಂಕಾರ ಮದುಡಿ ಹೋಗುತ್ತದೆ. ಶ್ರದ್ಧೆಯ ಒಂದೊಂದೇ ಮೆಟ್ಟಿಲನ್ನು ಹತ್ತುವ ಶರಣ ಹಂತ ಹಂತವಾಗಿ ಶೂನ್ಯವೆಂಬ ಬಯಲು ಎನ್ನುವ ನಿರಾಳ ನಿರ್ಗುಣ ಸ್ಥಲ ತಲುಪುತ್ತಾನೆ. ಅಣ್ಣನ ಅಗಲುವಿಕೆಯಿಂದ ಮುಕ್ತಾಯಕ್ಕ ಅಂಗ ಮತ್ತು ಲಿಂಗದ ದ್ವೈತದ ಸುಳಿಯಿಂದ ಹೊರಬರದೆ ಒದ್ದಾಡುತ್ತಿದ್ದರು. ಅದಕ್ಕೆಂದೆ ಇಷ್ಟೆಲ್ಲಾ ಸಂವಾದಗಳ ಮೂಲಕ ಅವರ ಸಂದೇಹಗಳನ್ನು ಪರಿಹರಿಸುತ್ತಾರೆ. ಕೊನೆಗೆ ಅಲ್ಲಮಪ್ರಭು ಈ ವಚನದಿಂದ ಮುಕ್ತಾಯಕ್ಕನ ಮನಸ್ಸನ್ನು ಹಗುರು ಮಾಡುತ್ತಾರೆ.
ದೃಷ್ಟಕ್ಕೆ ದೃಷ್ಟ | ಮುಂದಿಲ್ಲ ಇಲ್ಲ ||
ಮಾಡಿದಡೇನಹುದೋ? | ಮಾಡದಿರ್ದಡೇನಹುದೋ? ||
ಗುಹೇಶ್ವರನೆಂಬ | ಅರುಹಿನ ಕುರುಹು ||
ಮುಂದಿಲ್ಲ ಇಲ್ಲ | ಮಾಡಿದಡೇನಹುದೋ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-187 / ವಚನ ಸಂಖ್ಯೆ-636)
ಅರಿವೇ ಗುರುವಾದಾಗ ಅರಿವಿನ ದೃಷ್ಟಿಗಿಂತ ಮತ್ತೊಂದು ದೃಷ್ಟಿಯಿಲ್ಲ. ಅಂಥ ಅರಿವಿನ ಕುರುಹಾದ ಲಿಂಗವನ್ನು ಅಂತರಂಗದಲ್ಲಿ ಕಂಡುಕೊಂಡು ಅದರ ಸತ್ಯ ಸ್ವರೂಪದ ಅನುಭಾವ ಪಡೆದ ಶರಣ ಸಾಕ್ಷಾತ್ ಲಿಂಗ ಸ್ವರೂಪಿ. ತಾನೇ ಅರಿವಾಗಿ ನಿಂತ ಶರಣನಿಗೆ ಕುರುಹು- ಕ್ರಿಯೆಗಳೆಲ್ಲವೂ ಅಂತರಂಗದರಿವು. ಅನುಪಮ ಸಾಧಕಿ ಮುಕ್ತಾಯಕ್ಕನವರ ಮನದಲ್ಲಿದ್ದ ದ್ವಂದ್ವಗಳನ್ನು ಪರಿಹರಿಸಲು ಅಲ್ಲಮಪ್ರಭು ಮಾಡಿದ ಪ್ರಯತ್ನ ಫಲ ನೀಡಿತ್ತು. ಅಣ್ಣ ಅಜಗಣ್ಣ ಐಕ್ಯಸ್ಥಲವನ್ನು ತಲುಪಿದ್ದ ನಿಃಶಬ್ದ ಶರಣನೆಂದು ಸಂಪೂರ್ಣ ಮನವರಿಕೆಯಾಯಿತು ಮುಕ್ತಾಯಕ್ಕನವರಿಗೆ. ಮನದ ಸಂದೇಹಗಳೆಲ್ಲವೂ ನಿವಾರಣೆಯಾದವು.
ಅಹುದಹುದು | ಶಿವಶರಣರ ಮಹಿಮೆ ||
ಆರಿಗೆಯೂ | ಕಾಣಬಾರದು ||
ಕಬ್ಬುನ ಉಂಡ ನೀರಿನಂತೆ | ಕಬ್ಬಿಸಿಲುಂಡ ಅರಸಿನದಂತೆ ||
ಉರಿಯೊಳಡಗಿದ | ಕರ್ಪುರದಂತೆ ||
ಬಯಲನಪ್ಪಿದ | ವಾಯುವಿನಂತೆ ||
ಇಪ್ಪ ನಿಲವ ನುಡಿದು ಹೇಳಿಹೆನೆಂಬ | ಮಾತಿಂಗೆ ಅಳವಡುವುದೆ? ||
ಅರಿವಡೆ ಮತಿಯಿಲ್ಲ | ನೆನೆವಡೆ ಮನವಿಲ್ಲ ||
ಎನ್ನ ಅಜಗಣ್ಣ | ತಂದೆಯನೊಳಕೊಂಡಿಪ್ಪ ||
ನಿಮ್ಮ ಮಹಿಮೆಗೆ ನಮೋ | ನಮೋ ಎನುತಿರ್ದೆನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-900 / ವಚನ ಸಂಖ್ಯೆ-1099)
ಬಯಲೊಳಗೆ ನಿಂದಿರುವ ಗಾಳಿಗೆ ಮೈಯೆಲ್ಲಾ ಕಾಲು. ಆದರ ಹೆಜ್ಜೆ ಗುರುತುಗಳು ಎಲ್ಲಿ ಹೊರಟು ಹೋಗುತ್ತವೆ ಎನ್ನುವ ಕುರುಹು ಗೊತ್ತಾಗುವುದಿಲ್ಲ. ಹಾಗೆ ತನ್ನ ತಾನರಿತ ಶರಣನ ಮಹಿಮೆ ಯಾರಿಗೂ ಕಾಣುವುದಿಲ್ಲ. ಅದು ಕುರುಹಿಲ್ಲದ ಘನತತ್ವ. ಇಂಥ ಮಹಾಮಹಿಮ ತತ್ವಗಳನ್ನರಿಯದೆ ತಮ್ಮೊಡನೆ ವಾದ ಮಾಡಿದೆ. ತಮ್ಮದು ‘ಸ್ವತಂತ್ರ ಮಹಿಮೆ’. ಅಜಗಣ್ಣನಂತೆ ಮಹಿಮೆ ಹೊಂದಿರುವ ಮತ್ತು ಮಹತ್ವವನ್ನು ತಿಳಿಸಿದ ತಮಗೆ ನಮೋ ನಮೋ ಎನ್ನುವೆ ಅಂತ ಮುಕ್ತಾಯಕ್ಕನವರು ಹೇಳುತ್ತಾರೆ. ಇಂಥ ಸಮಾಧಾನದ ನುಡಿಗಾಗಿ ಕಾಯುತ್ತಿದ್ದ ಅಲ್ಲಮಪ್ರಭುಗಳು ಇನ್ನೂ ಮುಂದೆ ಹೋಗಿ ಸಮಾಧಾನ ಹೇಳುತ್ತಾರೆ.
ಮುಕ್ತಿಗೆ ಮುಖವಾಗಿ | ಯುಕ್ತಿಗೆ ಹೊರಗಾಗಿ ||
ಅರಿವಿಂಗೆ ಅರಿವಾಗಿಪ್ಪ ಭೇದ | ಕಾಣಬಂದಿತ್ತು ನೋಡಾ ||
ಅರಿವರಿತು ಮರಹು | ನಷ್ಟವಾಗಿಪ್ಪುದು ||
ನಿನ್ನಲ್ಲಿ | ಸನ್ನಹಿತವಾಗಿಪ್ಪುದು ||
ಗುಹೇಶ್ವರನ ಶರಣ | ಅಜಗಣ್ಣನ ನಿಲವು ||
ಬಯಲ ಬೆರಸಿದ | ಮರೀಚಿಕೆಯಂತಾಯಿತ್ತು ||
ಬೆರಸಿ | ನೋಡಾ ಬೇರಿಲ್ಲದ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-273 / ವಚನ ಸಂಖ್ಯೆ-1448)
ಅಜಗಣ್ಣನ ಮಹಿಮೆ ನಿನಗೆ ಮೊದಲೇ ತಿಳಿದಿತ್ತು. ಆದರೆ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಈ ಮಹಿಮೆಯನ್ನು ಅರಿಯುವಲ್ಲಿ ಸ್ವಲ್ಪ ವಿಳಂಬವಾಯಿತು. ನಿನ್ನ ಅಂತರಂಗದಲ್ಲಿ ಇಳಿದು ನಿನ್ನನ್ನೇ ವಿಮರ್ಶಿಸಿ ನೋಡು. ಅಲ್ಲೇ ನಿನ್ನ ಅಜಗಣ್ಣನ ನಿಜಸ್ವರೂಪದ ಸಾಕಾರವಾಗುತ್ತದೆ. ನೀನು ಬೇರೆ ಅಣ್ಣ ಬೇರೆ ಅಂತ ತಿಳಿಯದೇ ಒಂದೇ ಎನ್ನುವ ಅರಿವು ನಿನಗಾಗುತ್ತದೆ ಎಂದು, ಮಹಾಘನ ಲಿಂಗೈಕ್ಯದ ಭೇದವನ್ನು ಬಿಡಿಸಿ ಹೇಳಿದಾಗ ಮುಕ್ತಾಯಕ್ಕ ಸಮಾಧಾನಗೊಂಡರೆಂಬುದು ಈ ವಚನದ ಮೂಲಕ ಅರಿವಾಗುತ್ತದೆ.
ಘನಮಹಿಮ ಶರಣರ | ಸಂಗದಿಂದ ||
ಘನಕ್ಕೆ ಘನ | ವೇದ್ಯವಾದ ಬಳಿಕ ||
ಅರಿಯಲಿಲ್ಲ ಮರೆಯಲಿಲ್ಲ | ಕೂಡಲಿಲ್ಲ ಅಗಲಲಿಲ್ಲ ||
ಮನ ಮೇರೆದಪ್ಪಿ | ನಿರವಯಲಾದ ಸುಖವ ||
ಶೂನ್ಯ ನಿಶೂನ್ಯವೆಂದು | ನುಡಿಯಲುಂಟೆ? ||
ಶಬ್ದಮುಗ್ಧವಾಗಿ ಎನ್ನ | ಅಜಗಣ್ಣತಂದೆಯ ||
ಬೆರಸಿದ ಬಳಿಕ | ಉರಿಯುಂಡ ಕರ್ಪೂರದಂತಾದೆನಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1110)
ನಿಮ್ಮ ಸಂಗದಿಂದ ನನಗೆ ಘನವೇನೆಂದು ಅರಿವಾಯಿತು. ನಾನು ಕಂಡು ಹೇಳಿದ ಯೋಗ ನನ್ನಲ್ಲಿಯೇ ಕಂಡು ಬಂತು ಪ್ರಭುಗಳೆ. ಕೊನೆಯದಾಗಿ ಅಲ್ಲಮ ಪ್ರಭು ಹೇಳುವುದು ಅತ್ಯಂತ ವೈಶಿಷ್ಟ್ಯಪೂರ್ಣ.
ಜ್ಯೋತಿಯೊಳಗಣ | ಕರ್ಪುರಕ್ಕೆ ||
ಅಪ್ಪುವಿನ ಕೈಯಲಿಪ್ಪ | ಉಪ್ಪಿಂಗೆ ||
ಶ್ರೀಗುರುವಿನ ಹಸ್ತದೊಳಗಿಪ್ಪ | ಶಿಷ್ಯಂಗೆ ||
ಈ ಮೂರಕ್ಕೆಯೂ | ಬೇರೆ ||
ಕ್ರಿಯಾವರ್ತನೆಯುಂಟೆ | ಗುಹೇಶ್ವರಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-62)
ಗುರುವು ಪೂರ್ಣನು, ಕರುಣಾಸಾಗರ, ಜ್ಞಾನ ನೀಡುವ ಇಚ್ಛೆಯುಳ್ಳವ. ಸಮರ್ಪಣಾಭಾವಿಯಾದ ಶಿಷ್ಯ ಗುರುವಿಗೆ ಸರ್ವಸ್ವವನ್ನೂ ಅರ್ಪಿಸಿದಾಗ ಗುರುವಿನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಒಬ್ಬ ಸಮರ್ಥ ಗುರುವಿನ ಕೈಯಲ್ಲಿರುವ ಶಿಷ್ಯ ಗುರುವೇ ಆಗುತ್ತಾನೆ. ಹೀಗೆ ಅಲ್ಲಮ ಪ್ರಭು ಮತ್ತು ಮುಕ್ತಾಯಕ್ಕರ ನಡುವೆ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂವಾದ ನಡೆಯುತ್ತದೆ. ಬದುಕಿನ ಮೂಲಭೂತ ಪ್ರಶ್ನೆಗಳಿಗೆ ಅನುಭಾವಿಗಳ ನಡುವೆ ನಡೆಯುವ ಚರ್ಚೆಗಳಲ್ಲಿ ವಾಸ್ತವಿಕ ಉತ್ತರಗಳು ಸಿಗುತ್ತವೆ. ಬೌದ್ಧಿಕ ಪ್ರಖರತೆಯ ಮುಕ್ತಾಯಕ್ಕ ಪ್ರಶ್ನೆಗಳ ಸುರಿಮಳೆಗೈದು ಅತ್ಯಂತ ಶ್ರೇಷ್ಠ ಉತ್ತರಗಳನ್ನು ಪಡೆಯುತ್ತಾರೆ. ದಿಟ್ಟತನದಿಂದ ಅಲ್ಲಮಪ್ರಭುವನ್ನೇ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಮಟ್ಟಕ್ಕೆ ಆಧ್ಯಾತ್ಮಿಕ ಸಾಧನೆ ಮಾಡಿದವರು. ಇಂಥ ತಾತ್ವಿಕ ಜಿಜ್ಞಾಸೆ ನಡೆಸಿ ಕೌತುಕ ಮೂಡಿಸಿದ ಉದಾಹರಣೆ ಬಹುಶಃ ಅಪರೂಪದಲ್ಲಿ ಅಪರೂಪ. ವಚನ ಸಾಹಿತ್ಯದ ಉತ್ಥಾನ ಕಾಲಘಟ್ಟದಲ್ಲಿ ಅದ್ಭುತ ಸಾಧನೆ ಮಾಡಿ ಐಕ್ಯಸ್ಥಲ ತಲುಪಿದ ಅಜಗಣ್ಣ, ತಮ್ಮ ಹುಟ್ಟೂರಾದ ಲಕ್ಕುಂಡಿಯಲ್ಲಿಯೇ ಲಿಂಗೈಕ್ಯರಾದರು. ಅವರ ಸಮಾಧಿಯನ್ನು ಇತ್ತೀಚೆಗೆ ಪತ್ತೆ ಹಚ್ಚಿ ಅಭಿವೃದ್ಧಿ ಪಡಿಸುವದಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ರಾಯಚೂರು ಜಿಲ್ಲೆಯ ಮಸಳಿಕಲ್ಲು ಗ್ರಾಮದ ಬಳಿಯಿರುವ ಬೆಟ್ಟದ ಮೇಲೆ ಮುಕ್ತಾಯಕ್ಕನವರ ಸಮಾಧಿ ಇದೆ. ಈಗ ಅದರ ಮೇಲೆ ದೇವಸ್ಥಾನವನ್ನು ಕಟ್ಟಲಾಗಿದೆ. ಅದರ ಪಕ್ಕದಲ್ಲಿ ಅಜಗಣ್ಣನವರು ತಪಸ್ಸು ಮಾಡಿದ ಗುಹೆಯಿದೆ. ಈಗಲೂ ಅದನ್ನು ಅಜಗಣ್ಣನ ಬೆಟ್ಟ ಅಂತಲೇ ಕರೆಯಲಾಗುತ್ತದೆ. ಈ ಸಂವಾದ ಒಂದು ಅನುಪಮ ಘಟನೆ. ಸಾಮಾನ್ಯರಂತೆ ಬದುಕಿ ಅಸಾಮಾನ್ಯ ತತ್ವಗಳನ್ನು ಜಗತ್ತಿಗೇ ನೀಡಿ ಬೆಳಕನ್ನಿತ್ತ ಶರಣರ ಬದುಕು ಎಂದೆಂದಿಗೂ ಆದರ್ಶಮಯ.
ಆಸೆಗೆ ಸತ್ತುದು | ಕೋಟಿ ||
ಆಮಿಷಕ್ಕೆ ಸತ್ತುದು | ಕೋಟಿ ||
ಹೊನ್ನು ಹೆಣ್ಣು ಮಣ್ಣಿಂಗೆ | ಸತ್ತುದು ಕೋಟಿ ||
ಗುಹೇಶ್ವರಾ ನಿಮಗಾಗಿ | ಸತ್ತವರನಾರನೂ ಕಾಣೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-91)
-ವಿಜಯಕುಮಾರ ಕಮ್ಮಾರ
Comments 8
ವಿರೂಪಾಕ್ಷ ಕನ್ನೂರು
Oct 16, 2022ಮುಕ್ತಾಯಕ್ಕ ಮತ್ತು ಅಲ್ಲಮಪ್ರಭುವಿನ ನಡುವಿನ ಸಂವಾದದ ಸಂಪೂರ್ಣ ಚಿತ್ರಣ ನೀಡಿದ್ದಕ್ಕೆ ಧನ್ಯವಾದಗಳು. ಹೆಜ್ಜೆ ಹೆಜ್ಜೆಗೂ ಆಸಕ್ತಿ ಹುಟ್ಟಿಸುವ ವಾದ ಪ್ರತಿವಾದಗಳ ವಚನಗಳನ್ನ ಓದುತ್ತಾ ಬೆರಗಾಗಿ ಹೋದೆ.
Parameshappa H
Oct 18, 2022ಮುಕ್ತಾಯಕ್ಕನವರ ಸವಾಲಿನ ವಚನಗಳು ಸೊಗಸಾಗಿವೆ, ಆದರೆ ಅವರ ಹಠಮಾರಿತನ ಅತಿಯಾಯಿತೇನೋ ಎನಿಸಿಬಿಡುತ್ತದೆ. ಪ್ರಭು ಶಾಂತ ಸಾಗರದಂತೆ ಉತ್ತರಿಸುವ ರೀತಿ ಕಂಡು ಅವರ ಪಾದಗಳಿಗೆ ಎರಗಬೇಕೆನಿಸಿತು. ಸಂವಾದದ ಪೂರ್ಣ ಪಾಠಾಂತರ ಕೊಟ್ಟಿದ್ದಕ್ಕೆ ಧನ್ಯವಾದಗಳು.
Dinesh K.P
Oct 18, 2022ಮುಕ್ತಾಯಕ್ಕನವರ ಮೇರು ವ್ಯಕ್ತಿತ್ವ ಅವರ ಪ್ರತಿಯೊಂದು ವಚನಗಳಲ್ಲೂ ವ್ಯಕ್ತವಾಗುತ್ತದೆ. ನುಡಿಯ ಹಂಗಿನ್ನೂ | ನಿಮಗೆ ಹಿಂಗದು; ನಡೆಯನೆಂತು | ಪರರಿಗೆ ಹೇಳುವಿರಿ? || ಹಾಗೂ ಕೈಯದು ಕುರುಹು | ಬಾಯದು ಬೊಬ್ಬೆ;
ಉಲಿಯದಿರೊ ಭಾವಾ | ಉಲಿಯದಿರೊ ಭಾವಾ ||- ವಚನಗಳಂತೂ ಅದ್ಭುತವಾಗಿವೆ!! ಶೂನ್ಯಸಂಪಾದನೆಯಲ್ಲಿನ ನನ್ನ ನೆಚ್ಚಿನ ಭಾಗ ಈ ವಾದ-ಸಂವಾದ.
ಉಮೇಶ್ ಹಂಗರಗಿ
Oct 21, 2022ಇಲ್ಲದ ಶಂಕೆಯನು | ಉಂಟೆಂದು ಭಾವಿಸಿದಡೆ ||
ಅದು ಕಣ್ಣ ಮುಂದೆ | ರೂಪಾಗಿ ಕಾಡುತ್ತಿಪ್ಪುದು ||- ಮುಕ್ತಾಯಕ್ಕನಂತೆ ಇಡೀ ಮಾನವ ಜನಾಂಗವೇ ಶಂಕೆಯಲ್ಲಿ ತೊಳಲಾಡುತ್ತಿದೆ, ಒಬ್ಬೊಬ್ಬರದೂ ಒಂದೊಂದು ಸಮಸ್ಯೆ. ಸಂಶಯದ ಬೇಗುದಿಯಿಂದ ಹೊರಗೆ ಬರುವ ಹಾದಿಯನ್ನು ಪ್ರಭುಗಳು ಬಹಳ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದಾರೆ. ಒಳ್ಳೆಯ ಲೇಖನ.
mAhesh Tumkur
Oct 21, 2022ಅರಳ್ದ ತಲೆಯನು ಕೈಯಲ್ಲಿ ಹಿಡಿದುಕೊಂಡು ಕಣ್ಣಲ್ಲಿ ಮುತ್ತು ಪೋಣಿಸುತ್ತಿದ್ದ ಮುಕ್ತಾಯಕ್ಕ ಸ್ವತಃ ಒಬ್ಬ ಅನುಭಾವಿ, ದುಃಖದಲ್ಲೂ ಅವಳು ಮಾತನಾಡುವ ಮಾತುಗಳು, ಹಾಕುವ ಪ್ರಶ್ನೆಗಳು, ಮುಂದುವರಿಸುವ ಸಂವಾದಗಳು ಹೃದಯಂಗಮವಾಗಿವೆ.
Vinayaka P.L
Oct 27, 2022ಅಲ್ಲಮ ಮತ್ತು ಮುಕ್ತಾಯಕ್ಕರ ವಚನ ಸಂಭಾಷಣೆ ಕುತೂಹಲಕಾರಿಯಾಗಿದೆ. ಲೇಖನವನ್ನು ಎರಡು ಮೂರು ಬಾರಿ ಓದಿ ಆ ವಚನಗಳ ಆಂತರ್ಯವನ್ನು ತಿಳಿಯಲು ಪ್ರಯತ್ನಪಟ್ಟೆ. ಶೂನ್ಯ ಸಂಪಾದನೆಯಲ್ಲಿ ಬರುವ ಅತಿ ಮಹತ್ವದ ಭಾಗ ಇದು ಎಂದು ಕೇಳಿದ್ದೆ, ಓದುವ ಅವಕಾಶ ಒದಗಿಸಿದಿರಿ, ಥ್ಯಾಂಕ್ಯೂ.
Veeranna Kamathagi
Oct 29, 2022ಸ್ವಾರಸ್ಯಕರವಾದ ಸಂಭಾಷಣೆ. “ದೃಷ್ಟನಷ್ಟವೇ ಗುರು ಎಂದು ಲಿಂಗಾಂಗ ಸಮರಸದ ಅನುಭವ ಬರಬೇಕಾದರೆ ಗುರು ಎನ್ನುವ ತತ್ವ ಬೇಕೆ ಬೇಕೆನ್ನುವುದು ಮುಕ್ತಾಯಕ್ಕನ ಅಚಲ ವಿಶ್ವಾಸ” ಇಲ್ಲಿ ದೃಷ್ಟ ನಷ್ಟ ಎಂದರೆ ಏನೆಂಬುದು ತಿಳಿಯಲಿಲ್ಲಾ… ತಿಳಿಸುವಿರಾ?
ವಿಜಯಶ್ರೀ ಬಿರಾದಾರ
Oct 29, 2022ಇಂತಹ ಅಣ್ಣ-ತಂಗಿಯರನ್ನು ಪಡೆದ ಲಿಂಗಾಯತರಾದ ನಾವೇ ಧನ್ಯ!!