ಮರೆತೆ…
ಮಗುವಾಗಬೇಕು ನಿಜ
ಮರಳದು ಚೈತನ್ಯ ಮರೆತೆ
ಹೂಳಲಾಗದು ನೆಳಲು ನಿಜ
ನೆಳಲು ಹಿಂಬಾಲಿಸುವುದು ಮರೆತೆ
ನೆರಳು ಯಾವಾಗಲೂ ಇರದು ನಿಜ
ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ
ಸಮಯ ಕಳೆಯುವುದು ನಿಜ
ಕಳೆದ ಸಮಯ ಕಳೆದುದು ಮರೆತೆ
ಸಮಯಕೆ ಸಾವಿಲ್ಲ ನಿಜ
ಸಾಯುವ ಸಮಯ ಬರುವುದು ಮರೆತೆ
ಸುಖವೇನೂ ಸುಮ್ಮನೆ ಬರುವುದಿಲ್ಲ ನಿಜ
ದುಃಖವೂ ಜೊತೆಗೆ ಇರುವುದು ಮರೆತೆ
ಖಾಲೀ ಮಡಿಕೆ ಶಬ್ದ ಮಾಡುವುದು ನಿಜ
ಖಾಲಿಯಲಿ ಬಯಲು ತುಂಬುವುದು ಮರೆತೆ
ಏಕಾಂತ ಒಂಟಿತನವಲ್ಲ ನಿಜ
ಒಂಟಿತನವ ಏಕಾಂತವಾಗಿಸುವುದು ಮರೆತೆ
ಸತ್ಯದ ಮುಖವ ಕಾಣಿಸದು ಕತ್ತಲು ನಿಜ
ಕತ್ತಲೊಳಗೂ ಸತ್ಯ ಇರುವುದು ಮರೆತೆ
ಧ್ಯಾನವೇ ಸಾಧನೆಯಲ್ಲ ನಿಜ
ಸಾಧಿಸಿದುದೆಲ್ಲವೂ ಧ್ಯಾನ ಮರೆತೆ
ಬಯಲು ಓದಲು ಬಯಲಿಗಿಳಿದೆ ನಿಜ
ಬಯಲು ಬೆತ್ತಲಾಗಿಸಿ ಬಟ್ಟೆ ತೊಟ್ಟುದ ಮರೆತೆ.
ಬೇರಿಲ್ಲದೆ ಎಲೆಗಳಿರವು ನಿಜ
ಎಲೆಗಳಿರದೆ ಬೇರೂ ನಿಲ್ಲದು ಮರೆತೆ.
ಬೇರು ನೆಲದೊಳಗಿಳೀಯುವಾಗ ಎಲೆಗಳು ನಗುವವು ನಿಜ
ಎಲೆಗಳು ಒಣಗಿ ನೆಲಕುದುರುವಾಗ ಬೇರು ನಗುವುದು ಮರೆತೆ.
Comments 2
Praveen Kammar
Jul 5, 2022ಮರೆತದ್ದೇನು, ಅರಿತದ್ದೇನು? ದ್ವಂದ್ವಗಳಲ್ಲಿ ಸಿಕ್ಕಿದ್ದೇನು? ಸುಂದರ ಕವನ.
Channabasappa B
Jul 7, 2022ಮರೆಯಬೇಕಾದವುಗಳನ್ನು ಮರೆತಾಗಲೇ ಅರಿವು ಕಣ್ಣುತೆರೆಯುವುದು, ಬಯಲು ಸಾಕ್ಷಾತ್ಕಾರವಾಗುವುದು!!!